ಇನ್ನೊಂದು ಅರ್ಥಗರ್ಭಿತವಾದ ಸಂದರ್ಭವನ್ನೂ ಕುರಿತು ಇಲ್ಲಿಯೆ ಹೇಳಿಬಿಡುತ್ತೇನೆ. ಕಾಲಕ್ರಮದಲ್ಲಿ, ಅದು ನಡೆದದ್ದು ನಾನು ಮಾಧ್ಯಮಿಕ ತರಗತಿಗಳಿಗೆ ಪ್ರವೇಶಿಸಿದಾಗ ಎಂದು ತೋರುತ್ತದೆ. ಅದು ಸಂಸ್ಕೃತಕ್ಕೆ ಸಂಬಂಧಪಟ್ಟದು.

ಬೇಸಗೆಯ ರಜ ಮುಗಿದು ಸ್ಕೂಲು ಪ್ರಾರಂಭವಾದ ಮೊದಲ ದಿನಗಳಲ್ಲಿ ಒಂದು ದಿನ ನಮ್ಮ ಕ್ಲಾಸಿನ ಹುಡುಗರನ್ನೆಲ್ಲ ಒಂದೆಡೆ ಒಟ್ಟುಕೂಡಿಸಿದರು. ಬಹುಶಃ ಪ್ರಾಥಮಿಕ ಪೂರೈಸಿ ಮಾಧ್ಯಮಿಕಕ್ಕೆ ಬಂದಿದ್ದೆವೆಂದು ತೋರುತ್ತದೆ. ತೇರ್ಗಡೆ ಹೊಂದಿದ ಉತ್ಸಾಹದಲ್ಲಿ ದೀರ್ಘಕಾಲದ ರಜದಿಂದ ಹಿಂತಿರುಗಿದ್ದ ಹುಡುಗರೆಲ್ಲ ಗಟ್ಟಿಯಾಗಿ ಸಂಭಾಷಿಸುತ್ತಾ ಗುಲ್ಲೋಗುಲ್ಲು ಮಾಡುತ್ತಿದ್ದರು. ಮೇಷ್ಟರು ಪ್ರವೇಶಿಸಿ ಮೇಜಿಗೆ ಬೆತ್ತ ಬಡಿದು ‘ಸದ್ದೂ!’ ಎಂದು ಕೂಗಿದೊಡನೆಯೆ ಗಲಾಟೆ ತಟಕ್ಕನೆ ನಿಂತು ಹೊಯ್ದ ಮಳೆ ಹೊಳವಾದಂತಾಯ್ತು. “ನಿಮ್ಮಲ್ಲಿ ಯಾರು ಸಂಸ್ಕೃತ ತೆಗೆದುಕೊಳ್ಳುವವರು? ಯಾರು ಕನ್ನಡ ತೆಗೆದುಕೊಳ್ಳುವವರು? ಸಂಸ್ಕೃತ ತೆಗೆದುಕೊಳ್ಳಲು ಇಚ್ಛಿಸುವರೆಲ್ಲ ಎದ್ದು ನಿಲ್ಲಿ!” ಎಂದರು. ಅನೇಕರು ಎದ್ದುನಿಂತರು. ನಾನೂ ಎದ್ದು ನಿಂತೆ. ಅಷ್ಟೊಂದು ಮಂದಿ ಎದ್ದು ನಿಲ್ಲುವಾಗ ನಾನೇಕೆ ಕೂತಿರಬೇಕು? ನಾನೇನು ಕಡಿಮೆ? “ಸಂಸ್ಕೃತದ ವಿದ್ಯಾರ್ಥಿಗಳೆಲ್ಲ ಮತ್ತೊಂದು ಕೊಠಡಿಗೆ ಹೋಗಿ” ಎಂದರು ಮೇಷ್ಟರು. ತುಂಬ ಹೆಮ್ಮೆಯಿಂದ ನಾನೂ ಇತರರೊಡನೆ ಹೋಗಿ ಬೇರೆ ಕೊಠಡಿಯಲ್ಲಿ ಕುಳಿತೆ. ನನ್ನ ಕೆಲವು ಬ್ರಾಹ್ಮಣೇತರ ಮಿತ್ರರು, ಕನ್ನಡ ತರಗತಿಯಲ್ಲಿಯೆ ಉಳಿದವರು “ಸಂಸ್ಕೃತ ಕಷ್ಟ ಕಣೋ. ಅದು ಬ್ರಾಹ್ಮಣರಿಗೆ ಮಾತ್ರ” ಎಂದು ಬುದ್ಧಿವಾದ ಹೇಳಿದರು. ಬ್ರಹ್ಮಣ ಸಹಪಾಠಿಗಳು “ನಿನ್ಯಾಕೆ ಬಂದೆಯೊ ನಮ್ಮ ಜೊತೆಗೆ? ಶೂದ್ರರಿಗೆ ಯಾಕೊ ಸಂಸ್ಕೃತ? ನೀನೇನು ಮಂತ್ರಗಿಂತ್ರ ಹೇಳಿ ಪೌರೋಹಿತ್ಯ ಮಾಡ್ತಿಯೇನೊ? ಸಂಸ್ಕೃತ ನಿನಗೆ ಉಚ್ಛಾರ ಮಾಡೋಕೆ ಆಗೋದಿಲ್ಲ. ನೀನು ಅದನ್ನು ಕಲ್ತು ಬರೆದು ಪಾಸುಮಾಡುವುದು ಹೌದೇನೊ?” ಎಂದು ಅರೆಅಣಕದ ಎಚ್ಚರಿಕೆಯ ಮಾತನಾಡಿದರು. “ಓಹೋ ಅದೇನು ಮಹಾ! ಬ್ರಾಹ್ಮಣರಿಗೆ ಮಾತ್ರ ಮೀಸಲೇನೊ?” ಎಂದು ನಾನು ಉಡಾಫೆ ಮಾಡಿ, ಸಂಸ್ಕೃತದ ಕ್ಲಾಸಿನಲ್ಲಿಯೆ ಕುಳಿತೆ. ರಿಜಿಸ್ಟರಿನಲ್ಲಿ ಹುಡುಗರ ಹೆಸರನ್ನೆಲ್ಲ ಬರೆದುಕೊಳ್ಳುತ್ತಿದ್ದ ಮೂರುನಾಮದ ಪಂಡಿತರು ನನ್ನ ಸರದಿ ಬರಲು, ನಾನು ಹೇಳಿದ ನನ್ನ ಹೆಸರನ್ನು ಕೇಳಿ ಬೆರಗಾಗಿ, ಮೆಟ್ಟಬಾರದ್ದನ್ನು ಮೆಟ್ಟಿದವರಂತೆ, ಜುಗುಪ್ಸೆ ವಿಸ್ಮಯ ಅಸಮಾಧಾನಗಳ ಭಂಗಿಯಿಂದ ತಲೆಯೆತ್ತಿ ನನ್ನ ಕಡೆ ದುರದುರನೆ ಸ್ವಲ್ಪಹೊತ್ತು ನೋಡಿ, ಏನನ್ನೋ ನಿಶ್ಚಯಿಸಿ, ಮತ್ತೆ ತಲೆತಗ್ಗಿಸಿ ಹುಡುಗರ ಹೆಸರು ಬರೆದುಕೊಳ್ಳುವ ತಮ್ಮ ಕರ್ತವ್ಯದಲ್ಲಿ ನಿರತರಾದರು.

ಸಂಸ್ಕೃತದ ವಿಷಯದಲ್ಲಿ ಗೌರವ ವಿಶ್ವಾಸಗಳು ಹುಟ್ಟುವಂತೆ ಅವರು ಮಾತಾಡಲಿಲ್ಲ. ಕಷ್ಟವಾದರೂ ಹೆದರಬೇಡಿ ಎಂದು ಧೈರ್ಯ ಹೇಳಲಿಲ್ಲ. ಕಡೆಗೆ ಸಂಸ್ಕೃತದ ಅಕ್ಷರಗಳನ್ನಾದರೂ ಬೋರ್ಡಿನ ಮೇಲೆ ಬರೆದು ತಿಳಿಯಹೇಳಲಿಲ್ಲ. “ನಾಳೆ ಬರುವಾಗ ನೀವೆಲ್ಲ ಅಮರಕೋಶದ ನಾಂದಿಶ್ಲೋಕಗಳನ್ನೆಲ್ಲ ಬಾಯಿಪಾಠ ಮಾಡಿಕೊಂಡು ಬರಬೇಕು” ಎಂದರು, “ಯಸ್ಯಜ್ಞಾನ ದಯಾಸಿಂಧೋ” ಇತ್ಯಾದಿ, ನೀರಿಳಿಯದ ಗಂಟಲಲ್ಲಿ ಕಡಬು ತುರುಕುವಂತೆ!

ಅದನ್ನೆಲ್ಲ ನಾನು ಮನಸ್ಸಿಗೆ ಹಾಕಿಕೊಳ್ಳಲೆ ಇಲ್ಲ. ನನ್ನಂತೆ ಹಲವರೂ. ಮರುದಿನ ಸಂಸ್ಕೃತದ ಕ್ಲಾಸಿಗೆ ಹೋಗುವಾಗ ಪಂಡಿತರ ಉದ್ದೇಶ ನೆರವೇರಿತು. ಆ ಶ್ಲೋಕಗಳನ್ನು ಬಾಯಿಪಾಠ ಮಾಡುವುದಿರಲಿ, ಅರ್ಥವೆ ಆಗದ ಅವುಗಳನ್ನು ಉಚ್ಛಾರಮಾಡುವುದೂ ಅಸಾಧ್ಯವಾಯಿತು ನಮ್ಮಲ್ಲಿ ಕೆಲವರಿಗೆ. ‘ಶೂದ್ರ ಮಕ್ಕಳಿಗೆ ಬಾಯಿ ತಿರುಗುವುದೇ ಇಲ್ಲ! ಇವು ಸಂಸ್ಕೃತ ಕಲಿಯುತ್ತವಂತೆ! ನಿಲ್ಲೊ ಬೆಂಚಿನ ಮೇಲೆ!’ ಹೀಗೆ ಎರಡು ಮೂರು ದಿನ ಏಟು ತಿಂದು ಬೆಂಚಿನ ಮೇಲೆ ಹತ್ತಿ ನಿಂತು ನೋವಿಗೂ ಅವಮಾನಕ್ಕೂ ಹೇಸಿ ರೋಸಿ, ‘ಹಾಳು ಸಂಸ್ಕೃತ ಹಾಳಾಗ!’ ಎಂದು ಬೈದು ಮತ್ತೆ ಕನ್ನಡದ ತರಗತಿಗೇ ಸೇರಿದೆವು, ತಾಯಿಯ ಮಡಿಲಿಗೆ ಓಡುವಂತೆ!