ತೀರ್ಥಹಳ್ಳಿ, ಎ.ವಿ. ಸ್ಕೂಲಿನ ವ್ಯಕ್ತಿಗಳಲ್ಲಿ ಉಪಾಧ್ಯಾಯ ವರ್ಗದವರಿಗಿಂತಲೂ ಹೆಚ್ಚಾಗಿ ನಮ್ಮನ್ನೆಲ್ಲ ವಿಶೇಷವಾಗಿ ಆಕರ್ಷಿಸಿದವನೆಂದರೆ ಇಸ್ಕೋಲ್ ಜವಾನ ‘ಆರೆಕೊಪ್ಪ’, ‘ಅರೆ ಕೊಪ್ಪ’ ಎಂದು ಹುಡುಗರೆಲ್ಲ ಕರೆಯುತ್ತಿದ್ದರು; ಆದರೆ ಉಪಾಧ್ಯಾಯರು ಅವನನ್ನು ಅವನನ್ನು ‘ಆರೋಕ್ಯಂ’ ಎಂದು ಕೂಗುತ್ತಿದ್ದರು. ಬಹುಶಃ ಅವನ ತಂದೆ ತಾಯಿ ತಮಿಳುನಾಡಿನ ಕಡೆಯಿಂದ ಬಂದ ಕ್ರೈಸ್ತಮತಾವಲಂಬಿಗಳಾಗಿದ್ದರೆಂದು ತೋರುತ್ತದೆ. ಆದರೆ ಆಗ ನಮಗಿನ್ನೂ ಮತಪ್ರಜ್ಞೆಯೆ ಇರಲಿಲ್ಲವಾದ್ದರಿಂದ ಅವನ ಜಾತಿ ಮತ್ತು ಊರು, ಭಾಷೆ ಇದೊಂದೂ ನಮ್ಮ ಗಮನಕ್ಕೆ ಬರುತ್ತಿರಲಿಲ್ಲ. ಕನ್ನಡವಲ್ಲದೆ ಅವನು ಬೇರೆಯ ಭಾಷೆಯನ್ನೂ ಆಡುತ್ತಿದ್ದನೊ ಇಲ್ಲವೊ ಅದೂ ನನಗೆ ತಿಳಿಯದು. ಅವನ ಚಿಕ್ಕಪ್ಪನೊಬ್ಬ ಸ್ಕೂಲಿನ ಸಮೀಪದಲ್ಲಿದ್ದ ‘ಬಂಗಲೆ’ (ಟಿ.ಬಿ)ಯ ಮೇಟಿಯಾಗಿದ್ದ. ಅವನೊಡನೆ ‘ಅರೆಕೊಪ್ಪ’ ಇರುತ್ತಿದ್ದ| ಬಹುಶಃ ತನ್ನ ಮನೆಯವರೊಡನೆ ಬೇರೆ ಭಾಷೆ ಆಡುತ್ತಿದ್ದನೋ ಏನೊ?

ಆಗ ಅವನಿಗೆ ಬಹುಶಃ ಇಪ್ಪತ್ತರ ಆಚೆಈಚೆಯ ವಯಸ್ಸಿದ್ದಿರಬಹುದು. ದೃಢಕಾಯನಾಗಿದ್ದು ನಮ್ಮ ತಂಟೆ, ಚೇಷ್ಟೆ ಹೋರಾಟ ಹೊಡೆದಾಟಗಳೆಲ್ಲೆಲ್ಲ ನಮ್ಮ ಪಕ್ಷವಹಿಸುತ್ತಿದ್ದ ಅವನು ನಮಗೆ ‘‘ವೀರಪುರುಷ’ನಾಗಿದ್ದ.

ಸ್ಕೂಲಿನ ಎದುರಿಗೇ ದೇವಂಗಿಯವರು ತಮ್ಮ ಹುಡುಗರನ್ನು ಓದಿಸಲು ಮನೆ ಮಾಡಿದ್ದರು. ಬಾಡಿಗೆ ಮನೆಯಲ್ಲ. ಅವರದೇ ಸ್ವಂತ ಕಟ್ಟಿಸಿದ್ದ ಮನೆ. ನನ್ನ ಓರಗೆಯವರಾಗಿ ಅದೇ ಸ್ಕೂಲಿನಲ್ಲಿ ಓದುತ್ತಿದ್ದರು ದೇವಂಗಿಯ ಡಿ.ಆರ್. ವೆಂಕಟಯ್ಯ ಮತ್ತು ಡಿ.ಎನ್. ಹಿರಿಯಣ್ಣ. ‘ಅರೆಕೊಪ್ಪ’ನಿಗೆ ಅವರಲ್ಲಿ ಭಕ್ತಿಸದೃಶ ಗೌರವ. ಬಹುಶಃ ಅವರಿಂದ ಆಗಾಗ ಉಪಕೃತನಾಗುತ್ತಿದ್ದಿರಲೂಬಹುದು!

ನಾವು ಬಂಧುಗಳಾಗಿಯೂ ಸ್ನೇಹಿತರಾಗಿಯೂ ಆಟಪಾಟಗಳಲ್ಲಿ ಸೇರುತ್ತಿದ್ದೆವು. ಗೋಲಿಯಾಟವೇ ಹೆಚ್ಚು ಪ್ರಿಯವಾಗಿದ್ದ ಸಮಯ. ಕೊಂಡ ಗೋಲಿಗಳಲ್ಲಿ ಕೆಲವು ಬಹುಬೇಗನೆ ಹುಟ್ಟುಹಿಟ್ಟಾಗಿ ಹಾಳಾಗುತ್ತಿದ್ದುವು. ಕೆಲವು ಮಾತ್ರ ಗಟ್ಟಿಯಾಗಿ ಸಿಮೆಂಟಿನುಂಡೆಯಂತೆ ಭದ್ರವಾಗಿರುತ್ತಿದ್ದುವು. ಅವುಗಳನ್ನು ‘ಕಲ್ಲಿನ ಗೋಲಿ’ಗಳೆಂದೂ ಉಳಿದುವುಗಳನ್ನು ‘ಹಿಟ್ಟಿನ ಗೋಲಿ’ಗಳೆಂದೂ ಕರೆಯುತ್ತಿದ್ದೆವು. ನಮಗೆ ‘ಕಲ್ಲಿನ ಗೋಲಿ’ಗಳನ್ನು ಸಂಗ್ರಹಿಸುವ ಗೀಳು. ಕೊಳ್ಳುವಾಗಲೆ ‘ಕಲ್ಲಿನ ಗೋಲಿ’ಗಳನ್ನೆ ಕೊಳ್ಳಬಹುದಾಗಿತ್ತಲ್ಲಾ ಅಂದರೆ, ಇದು ಕಲ್ಲಿನದು ಇದು ಹಿಟ್ಟಿನದು ಎಂದು ಗುರುತಿಸಲಾಗದಂತೆ ಅವುಗಳಿಗೆ ಬಣ್ಣ ಬಳಿದಿರುತ್ತಿದ್ದರು. ಅವುಗಳನ್ನು ಉಪಯೋಗಿಸುವುದಕ್ಕೆ ಶುರುಮಾಡಿದ ಮೇಲೆಯೆ ಗೊತ್ತಾಗುತ್ತಿತ್ತು, ಯಾವುದು ಹಿಟ್ಟಿನದು ಯಾವುದು ಕಲ್ಲಿನದು ಎಂದು. ಆದ್ದರಿಂದ ಯಾವಯಾವ ಹುಡುಗರ ಕೈಲಿ ಕಲ್ಲಿನ ಗೋಲಿಗಳಿವೆ ಎಂದು ಗೊತ್ತಾಗುತ್ತಿತ್ತೋ ಅವರನ್ನು ಗೋಲಿಯಾಟಕ್ಕೆ ಆಹ್ವಾನಿಸುತ್ತಿದ್ದೆವು. ಸಾಮಾನ್ಯವಾಗಿ ಕ್ಲಾಸು ಪ್ರಾರಂಭವಾಗುವುದಕ್ಕೆ ಮೊದಲು ಅಥವಾ ಕ್ಲಾಸು ಬಿಟ್ಟಮೇಲೆ ಸ್ಕೂಲಿನ ಬಳಿಯೆ ಆಟಕ್ಕೆ ತೊಡಗುತ್ತಿದ್ದೆವು. ಸರಿ, ಆಟ ಪ್ರಾರಂಭವಾಗಿ ಅರ್ಥ ಮುಂದುವರಿಯುವಷ್ಟರಲ್ಲಿ ಪೂವ್ವಸಂಕೇತದಂತೆ ಆರೆಕೊಪ್ಪ ಹಾಜರಾಗುತ್ತಿದ್ದ “ಯಾಕ್ರೊ ಸ್ಕೂಲ್ ಹತ್ರ ಗೋಲಿಯಾಡೋದು? ಹೆಡ್‌ಮಾಸ್ಟರ್ ಹೇಳಿದ್ದಾರೆ, ಕೊಡ್ರೊ ಇಲ್ಲಿ ಗೋಲೀನ!” ಎಂದು ಗದರಿಸುತ್ತಿದ್ದಂತೆ ನಾವು-ನಾನು, ವೆಂಕಟಯ್ಯ, ಹಿರಿಯಣ್ಣ, ರಾಮರಾವ್, ದೊರೆಸ್ವಾಮಿ ಮೊದಲಾದ ಗೆಳೆಯರ ಗುಂಪಿನವರು-ನಮ್ಮ ಗೋಲಿಗಳನ್ನೆಲ್ಲಾ ಅವನ ಕೈಗೆ ಕೊಟ್ಟುಬಿಡುತ್ತಿದ್ದೆವು. ನಾವು ಹೆದರಿ ಕೊಟ್ಟದನ್ನು ಕಂಡು ಇತರರೂ ತಮ್ಮ ತಮ್ಮ ಗೋಲಿಗಳನ್ನೆಲ್ಲಾ ಮನಸ್ಸಿಲ್ಲದ ಮನಸ್ಸಿನಿಂದ ಅವನ ಕೈಗೆ ಕೊಡುತ್ತಿದ್ದರು. ಅವನು ಬಹಳ ಸಿಟ್ಟುಗೊಂಡಂತೆ ನಟಿಸಿ ಗೋಲಿಗಳನ್ನೆಲ್ಲ ತುಂಬ ಎತ್ತರವಾಗಿದ್ದ ಸ್ಕೂಲಿನ ತಾರಸಿಗೆ ಎಸೆದುಬಿಟ್ಟು “ಇನ್ನು ಮೇಲೆ ಇಲ್ಲಿ ಗೋಲಿಯಾಡೀರಿ, ಹುಷಾರ್!” ಎಂದು ಸ್ಕೂಲಿನೊಳಕ್ಕೆ ಹೋಗಿಬಿಡುತ್ತಿದ್ದ. ನಾವೆಲ್ಲರೂ ಪೆಚ್ಚುಮೋರೆ ಹಾಕಿಕೊಂಡು-(ನಮ್ಮ ಗುಂಪಿನವರದು ಬರಿಯ ನಟನೆ)-ಮನೆಗೆ ಹೋಗುತ್ತಿದ್ದೆವು. ಹುಡುಗರೆಲ್ಲ ಹೋದಮೇಲೆ ಅರೆಕೊಪ್ಪ ಸ್ಕೂಲಿನ ಉದ್ದ ಏಣಿಹಾಕಿಕೊಂಡು ತಾರಸಿಗೆ ಹತ್ತಿ ಆ ಗೋಲಿಗಳನ್ನೆಲ್ಲ ಒಟ್ಟು ಮಾಡಿ ತೆಗೆದು ಇಳಿಯುತ್ತಿದ್ದಂತೆ ಎದುರುಮನೆಯಲ್ಲಿಯೆ ಇದ್ದು ನೋಡುತ್ತಿದ್ದ ನಾವು ಎಂದರೆ ನಮ್ಮ ಗುಂಪಿನವರು, ನಸುಗತ್ತಲೆಯ ಮರೆಯಲ್ಲಿ ಸ್ಕೂಲಿನ ಬಳಿಗೆ ಓಡುತ್ತಿದ್ದೆವು. ಆಮೇಲೆ ಆರೆಕೊಪ್ಪ ದರೋಡೆ ಹಂಚುವಂತೆ ಆ ಕಲ್ಲಿನ ಗೋಲಿಗಳನ್ನೆಲ್ಲ ನಮಗೆ ತನ್ನ ಪಕ್ಷಪಾತಕ್ಕನುಗುಣವಾಗಿ ಹಂಚಿಕೊಡುತ್ತಿದ್ದ!

ಇದಕ್ಕಿಂತಲೂ ಸ್ವಾರಸ್ಯವಾಗಿಯೂ ರೌಚಕವಾಗಿಯೂ ಇರುವ ಇನ್ನೊಂದು ಘಟನೆ ‘ಆರೆಕೊಪ್ಪ’ನ ನೆನಪಿನೊಡನೆ ಸಂಗತವಾಗಿದೆ-ಹೆಮ್ಮಲಗನ ಘಟನೆ:

ಅಂದು ಭಾನುವಾರ. ಬಟ್ಟೆ ಒಗೆಯಲು ಹೊಳೆಗೆ ಹೋಗುತ್ತೇವೆ ಎಂದು ಹೊರಟೆವು-ಸುಬ್ಬಣ್ಣ, ಮಾನಪ್ಪ, ತಿಮ್ಮು, ನಾನು ಧರ್ಮು ಇತ್ಯಾದಿ. ಈ ನಾವು ಹೋಗುತ್ತಿದ್ದ ಹೊಳೆ ಕುಶಾವತಿಯಾಗಿರಲಿಲ್ಲ, ತುಂಗೆ! ಕುಶಾವತಿ ನಮ್ಮ ಭಾಗಕ್ಕೆ ಆಗಲೆ ‘ಹಳ್ಳ’ ಅಥವಾ ಹೆಚ್ಚು ಎಂದರೆ ‘ದೊಡ್ಡ ಹಳ್ಳ’ವಾಗಿ ಬಿಟ್ಟಿತ್ತು. ಅಷ್ಟರಮಟ್ಟಿಗೆ ಮುಂದುವರಿದಿತ್ತು ನಮ್ಮ ಈಜುವ ಪ್ರವೀಣತೆ!

ಸಾಬೂನು ಕೊಳ್ಳಲು ನಮಗೆ ಕೊಟ್ಟಿದ್ದ ಆರುಕಾಸಿನಲ್ಲಿಯೆ ಸೋಸಲು ಗಾಳಗಳನ್ನೂ ಒಂಡೆರಡು ಕಾಸಿಗೆ ಕೊಂಡುಕೊಂಡು ಹೋದೆವು. ಒಂದು ಗಾಳಕ್ಕೆ ಬಗನಿ ಜವಿಯ ನೇಣುಕಟ್ಟಿದೆವು. ಬಂಡೆಬಂಡೆಗಳು ಹಿಂಡು ಹಿಂಡು ಮಲಗಿದ್ದ ಹೊಳೆಯಂಚಿನ ನೀರಿನಲ್ಲಿ ಬಟ್ಟೆ ಬಿಚ್ಚಿ ಕೌಪೀನಧಾರಿಗಳಾಗಿ ನೀರಿಗಿಳಿದೆವು. ನಮ್ಮ ಸುತ್ತಮುತ್ತ, ಬಳಿಯೆ, ಹೆಂಗಸರೂ ಗಂಡಸರೂ ಬಟ್ಟೆ ಒಗೆಯುತ್ತಿದ್ದರು. ಆದರೆ ನಮಗೆ ನಾಚಿಕೆ ಮರ್ಯಾದೆ ಯಾವ ಪರಿವೆಯೂ ಇರದಿದ್ದ ಕಾಲವದು!

ಗಾಳಕ್ಕೆ ಎರೆಹಾಕಲೆಂದು ಒಂದು ಪಂಚೆಯನ್ನೆ ಬಲೆಮಾಡಿ ಗೋರಿ ಒಂದೆರಡು ಸಣ್ಣ ಮಿಡಿ ಮೀನುಗಳನ್ನು ಹಾಕಿದೆವು. ಆ ಮೀನನ್ನು ಗಾಳಕ್ಕೆ ಚುಚ್ಚಿ, ನಾವು ಬಟ್ಟೆ ಒಗೆಯುತ್ತಿದ್ದ ಹಾಸುಬಂಡೆಯ ಸಂದಿಯ ನೀಡಿಗೆ ಇಳಿಬಿಟ್ಟೆವು. ಗಾಳದ ನೇಣಿನ ಈ ತುದಿಗೆ ಕಟ್ಟಿದ್ದ ಕೋಲನ್ನು ಒಂದು ಕತ್ತಿನ ಮೇಲಿಟ್ಟು, ಬಟ್ಟೆಗೆ ಸಾಬೂನು ಹಚ್ಚುವ ಶಾಸ್ತ್ರಕ್ಕೆ ಕೈಹಾಕಿದೆವು.

ಅಷ್ಟರಲ್ಲಿ ಅರೆಕೊಪ್ಪನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಲೆಂದು ನಾವಿದ್ದಲ್ಲಿಗೆ ಬಂದನು. ನಮ್ಮೊಡನೆ ಲೋಕಾಭಿರಾಮವಾಗಿ ಏನೇನೊ ಗಳಹುತ್ತಾ ಅವನೂ ನೀರಿಗಿಳಿದು ತನ್ನ ಕೆಲಸಕ್ಕೆ ಶುರುಮಾಡಿದನು.

ಗಾಳದ ಕೋಲು ಅಲ್ಲಾಡಿತು! ಬಂಡೆಯಿಂದ ನೀರಿಗೆ ಬಿತ್ತು! ಬೇಗಬೇಗನೆ ಕೋಲನ್ನು ಹಿಡಿದು, ನೇಣಿಗೆ ಕೈಹಾಕಿ, ಎರೆಕಚ್ಚಿದ್ದ ಮೀನನ್ನು ಎಳೆದೆವು. ನೇಣು ತುಂಡಾಯಿತು. ನೋಡಿದರೆ, ನೇಣಿನ ತುದಿಯ ಗಾಳವೆ ಗೈರು ಹಾಜರು! ಕೈಯಲ್ಲಿದ್ದ ಮತ್ತೊಂದು ಗಾಳವನ್ನು ನೇಣಿಗೆ ಕಟ್ಟಿ, ಪುಡಿ ಮೀನೊಂದನ್ನು ಎರೆಸಿಕ್ಕಿಸಿ, ಮತ್ತೆ ಅದೇ ಜಾಗಕ್ಕೆ ನೀರಿನಲ್ಲಿ ಇಳಿಬಿಟ್ಟೆವು. ಬಿಡುವುದೆ ತಡ, ಮತ್ತೆ ಮೀನು ಕಚ್ಚಿ ಎಳೆಯತೊಡಗಿತು. ಈ ಸಾರಿ ಸಿಕ್ಕಿತು ಎಂದುಕೊಂಡು ನೇಣನ್ನು ಬಲವಾಗಿ, ಹಿಡಿದೆಳೆಯಲು, ಮೊದಲಿನಂತೆಯೆ ನೇಣು ತುಂಡಾಗಿ, ಗಾಳ ಮಂಗಮಾಯವಾಗಿತ್ತು! ಎರೆ ಕಚ್ಚುವ ಮೀನು ಸ್ವಲ್ಪ ದೊಡ್ಡದಾಗಿರಬೇಕು, ಇಲ್ಲವೆ ಆಮೆ ಇರಬೇಕು ಎಂದು ತೀರ್ಮಾನಿಸಿದೆವು. ಏನಾದರಾಗಲಿ ಎಂದು ಮತ್ತೊಂದು ಬಲವಾದ ದಾರಕ್ಕೆ ಕೈಲಿದ್ದ ಮತ್ತೊಂದು ಗಾಳವನ್ನು ಕಟ್ಟಿ, ಎರೆಚುಚ್ಚಿ ಹಾಕಿದರೆ! ಮತ್ತೆ ಅದೇ ಗತಿಯಾಯ್ತು!

ತಿಮ್ಮು ಓಬಯ್ಯ ಸುಬ್ಬಣ್ಣ ಮೂವರನ್ನು ಓಡಿಸಿದೆವು ಮನೆಗೆ, ಕೆರೆಕೇರಿ ಅಮ್ಮಗೆ ಹೇಳಿ ಮೂರು ಕಾಸು ಈಸಿಕೊಂಡು ಪೇಟೆಗೆ ಹೋಗಿ ದೊಡ್ಡದಾದ ಒಂದೇ ಗಾಳವನ್ನು ಅದಕ್ಕೆ ತಕ್ಕ ದಪ್ಪದ ಬಲವಾದ ದಾರವನ್ನೂ ತರಲು ಆಜ್ಞಾಪಿಸಿ. ಓಡುತ್ತಾ ಹೋಗಿ ಏದುತ್ತಾ ಹಿಂತಿರುಗಿದರು: ಭಾರಿ ದೊಡ್ಡ ಗಾಳವೂ ಬಲವಾದ ಹಗ್ಗವೂ ಅವರ ಕೈಲಿತ್ತು. ಆರೆಕೊಪ್ಪನ ಕೈಯಲ್ಲಿಯೆ ಗಾಳವನ್ನು ಭದ್ರವಾಗಿ ಆ ದಪ್ಪ ನೇಣಿಗೆ ಬಿಗಿಸಿ, ತಕ್ಕಮಟ್ಟಿನ ದೊಡ್ಡದೊಂದು ಸೋಸಲನ್ನು ಪಂಚೆಬಲೆ ಬೀಸಿ ಹಿಡಿದು, ಗಾಳಕ್ಕೆ ಸಿಕ್ಕಿಸಿ, ಮತ್ತೆ ಮೊದಲಿಗೆ ಜಾಗಕ್ಕೇ ಇಳಿಬಿಟ್ಟೆವು, ಈ ಸರಿ ಲೌಡಿಮಗನದು ಎಲ್ಲಿಗೆ ಹೋಗುತ್ತದೆ, ನೋಡಿಯೆ ಬಿಡುತ್ತೇವೆ ಎಂದು!

ನೇಣನ್ನು ನಾನೆ ಹಿಡಿದಿದ್ದೆ. ಗಾಳವನ್ನು ಇಳಿಬಿಟ್ಟೊಡನೆಯೆ ಹಿಂದಿನಂತೆಯೆ ಈ ಸಾರಿಯೂ ಸ್ವಲ್ಪವೂ ವಿಳಂಬಮಾಡದೆ ಆ ಜಲಜಂತು ಎರೆಯನ್ನು ಕಚ್ಚಿ ನೇಣನ್ನು ಎಳೆಯತೊಡಗಿತು. ನಾನು ನೇಣನ್ನು ಬಲವಾಗಿ ಹಿಡಿದೆಳೆದರೂ ನನ್ನ ಕೈಯಿಂದಾಗಲಿಲ್ಲ, ಅದರ ಎಳೆದಾಟವನ್ನು ತಡೆಯಲು. ನಾನು ನೇಣನ್ನು ಬಿಡಬೇಕು, ಇಲ್ಲವೆ ನೀರಿಗೆ ಬೀಳಬೇಕು! ಪಕ್ಕದಲ್ಲಿ ಬಟ್ಟೆ ಒಗೆಯುತ್ತಿದ್ದ ಸುಬ್ಬಣ್ಣಗೆ ಕೂಗಿದೆ “ಬಾರೋ! ಬೇಗ ಬಾರೋ! ಎಂಥದೋ ಹಿಡಿದು ಎಳೀತದೆ! ನನ್ನೊಬ್ಬನ ಕೈಯಿಂದಾಗೋದಿಲ್ಲ!” ಅವನೂ ಬಂದು ನನ್ನ ಜೊತೆಗೆ ನೇಣನ್ನು ಹಿಡಿದು ನಿಂತ. ಇಬ್ಬರೂ ಎಳೆದರೂ ನೇನು ನಮ್ಮಕಡೆ ಬರುವ ಬದಲು ನೀರಿನ ಕಡೆಯೇ ಜಗ್ಗತೊಡಗಿತು. ನಮಗಂತೂ ದಿಗ್ಭ್ರಮೆ, ಭೀತಿ! ಇದೆಂಥ ಮೀನು? ಕಡೆಗೆ ಮೊಸಳೆಗಿಸಳೆಯೋ? ನಮ್ಮಿಬ್ಬರಿಂದಲೂ ನೇಣನ್ನು ಎಳೆಯಲಾಗದಿರಲು ಆರೆಕೊಪ್ಪನನ್ನು ಕೂಗಿಕರೆದೆವು. ಅವನು ತುಸು ಅನುಮಾನಪಟ್ಟುಕೊಂಡೇ ಓಡಿಬಂದು ನೇನಿಗೆ ಕೈಹಾಕಿ, ತನ್ನೆರಡೂ ಕೈಗಳಿಂದ ಭದ್ರಮುಷ್ಟಿ ಹಿಡಿದು ಕಾಲನ್ನು ಕಲ್ಲಿಗೆ ಆಪುಕೊಟ್ಟುಕೊಂಡು ಜಗ್ಗಿಸಿ ಎಳೆಯತೊಡಗಿದನು.

ಮೊದಮೊದಲು ಅವನ ಬಲಕ್ಕೂ ಶರಣಾಗದ ಅದು ಒಂದೆರಡು ನಿಮಿಷಗಳಲ್ಲಿಯೆ ನಮ್ಮತ್ತ ಮೆಲ್ಲಮೆಲ್ಲನೆ ಬರತೊಡಗಿತು. ಅವನೂ ಎಳೆದ! ಎಳೆದ! ಎಳೆದ! ಬಂತು! ಬಂತು! ಬಂತು! ನಾವೆಲ್ಲ ಗುಂಪುಕಟ್ಟಿ ಅವನ ಹಿಂದೆ ಹಾಸುಬಂಡೆಯ ಮೇಲೆ ನಿಂತು ನೀರಿನ ಕಡೆ ಒಂದೇಸಮನೆ ನೋಡುತ್ತಿದ್ದೆವು. ಏನು ಬರುತ್ತದೆ ಎಂದು!

ನೋಡುತ್ತಿದ್ದಂತೆಯೆ ನೇಣಿನ ತುದಿ ನೀರಿನ ಮಟ್ಟಕ್ಕೆ ಸಮೀಪಿಸಿತು. ಏನದು? ಏನದು? ದೊಡ್ಡ ಬಾಯಿ ಕಾಣಿಸಿತು! ನಮಗೆಲ್ಲ ಆನಂದವೋ ಆನಂದ! ಆರೆಕೊಪ್ಪನಿಗೂ ಬೆರಗು! ಎಳೆಯೋ ಎಳೆಯೋ ಎಳೆಯೋ ಎಂದು ಒಟ್ಟಿಗೆ ಕೂಗಿ ಹುರಿದುಂಬಿಸಿದೆವು. ಅವನೂ ಎಳೆದ ಎಳೆದಾ ಎಳೆದಾ ಎಳೆದೇ ಎಳೆದ! ನೀರಿನ ಮೇಲಕ್ಕೇ ಬಂತು ಮೀನಿನ ತಲೆ, ಮೈ, ಆದರೆ ಮುಗಿಯಲೆ ಒಲ್ಲದು! ಎಳೆದಷ್ಟು ಬರುತ್ತಿದೆ! ಎರಡು ಅಡಿ ಎತ್ತರಕ್ಕೆ ನೀರಿನ ಮೇಲಕ್ಕೆ ಎಳೆದ ಆರೆಕೊಪ್ಪನಿಗೆ ಅದರ ಗಾತ್ರ ರೂಪಗಳನ್ನು ಕಂಡು ದಿಗಿಲಾಗತೊಡಗಿತು ಅವನಾಗಲಿ ನಾವಾಗಲಿ, ಅಂತಹ ಮೀನನ್ನು ನೋಡಿರಲಿಲ್ಲ. ‘ಹಾವೇನೋ’ ಎಂದು ದೂರದಲ್ಲಿ ಬಟ್ಟೆ ಒಗೆಯುತ್ತಿದ್ದು ಇದನ್ನೆಲ್ಲ ನೋಡುತ್ತಿದ್ದ ಒಬ್ಬ ಅಪರಿಚಿತ ವ್ಯಕ್ತಿ ಕೂಗಿದನು. ಆರೆಕೊಪ್ಪ ಅಯ್ಯಯ್ಯೋ ಎನ್ನುತ್ತಲೇ ತನ್ನೆರಡು ಕೈಗಳನ್ನೂ ತನ್ನ ತಲೆಯ ಮೇಲಿನಮಟ್ಟದವರೆಗೂ ಎತ್ತಿ, ತನಗಿಂತಲೂ ಉದ್ದವಾಗಿದ್ದ ಆ ಪ್ರಾಣಿಯನ್ನು, ಹೆದರಿ ಕೂಗಿಕೊಂಡೇ ನೇಣುಸಹಿತ ದಡದ ಹಾಸುಬಂಡೆಗೆ ಬಲವಾಗಿ ಎಸೆದ. ಸುಮಾರು ಮೂರುನಾಲ್ಕು ಅಡಿಗಳುದ್ದದ, ಒಂದು ಅಡಿಯಷ್ಟಾದರೂ ಸುತ್ತಳತೆಯ ದಪ್ಪದ ಆ ವಿಚಿತ್ರ ಜಲಜಂತು ದಡದ ಬಂಡೆಯ ಮೇಲೆ ಹಾವು ಹೊರಳುವಂತೆ ಅಂಕುಡೊಂಕಾಗಿ ಹೊರಳುತ್ತಾ ನೀರಿನ ಕಡೆ ಧಾವಿಸಲು ಪ್ರಯತ್ನಿಸತೊಡಗಿತು. ನಾವೆಲ್ಲ ದಪ್ಪದಪ್ಪ ಬಂಡೆಗಲ್ಲುಗಳನ್ನು ಎತ್ತಿ ತಂದು ಅದರ ತಲೆಯ ಮೇಲೂ ಮೈಯ ಮೇಲೂ ಹಾಕಿದೆವು. ನಮ್ಮ ಕಲ್ಲುಗಳು ಅದರ ಮೈಗೆ ತಾಗಿ ರಬ್ಬರು ಚೆಂಡುಗಳಂತೆ ಪುಟನೆಗೆದು ಬಿದ್ದುವು! ಆದರೆ ಅದಕ್ಕೇನೂ ಪೆಟ್ಟಾದಂತೆ ತೋರಲಿಲ್ಲ. ಕಡೆಗೆ ಆರೆಕೊಪ್ಪನೆ ಒಂದು ದೊಡ್ಡ ಬಡಿಗೆಯನ್ನು ಆ ಬಳಿಯ ಮರದಿಂದ ಮುರಿದು ತಂದು ತಲೆಗೂ ಮೈಗೂ ಬಡಿದು ಬಡಿದು ಅದನ್ನು ನಿಶ್ಚಲಗೊಳಿಸಿದನು, ಅಷ್ಟೆ. ಆದರೆ ಅದು ಸಾಯಲೆ ಇಲ್ಲ.

ಅದು ಹಾವೂ ಅಲ್ಲ, ಮೀನೂ ಅಲ್ಲ, ನಮಗೆ ಗೊತ್ತಿರದ ಯಾವುದೊ ಜಾತಿಯ ಹಾವು ಮೀನಿರಬೇಕು ಎಂದು ನಿಶ್ಚಯಿಸಿದೆವು. ಅದನ್ನು ಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ನಮ್ಮಲ್ಲಿ ಒಬ್ಬರು ಮನೆಗೆ ಹೋಗಿ ದೊಡ್ಡದೊಂದು ಗೋಣಿಚೀಲ ತಂದರು. ಅದರೊಳಗೆ ಆರೆಕೊಪ್ಪನ ನೆರವಿನಿಂದ ಅದನ್ನು ಮುದುರಿಸಿ ತೂರಿಸಿದೆವು. ಹೊತ್ತು ನಡೆದೆವು ಮನೆಗೆ, ಮಹಾ ಬೇಟೆಯಾಡಿದ ಹೆಮ್ಮೆಯಿಂದುಬ್ಬಿ!

ದೊಡ್ಡ ಗಾಳ ಕೊಂಡುತರಲು ಕೇರೆಕೇರಿ ಅಮ್ಮನ ಹತ್ತಿರ ದುಡ್ಡು ಈಸಿಕೊಂಡು ಬರಲು ಸುಬ್ಬಣ್ಣ ಇತರರು ಮನೆಗೆ ಹೋದಾಗಲೆ ಗುಲ್ಲುಸುದ್ದಿ ಸುತ್ತಮುತ್ತ ಹಬ್ಬಿ ಜನ ಕುತೂಹಲಭರಿತರಾಗಿದ್ದರು. ಮೂಟೆಯಲ್ಲಿ, ಇನ್ನೂ ಸಾಯದೆಯೆ ಆಗಾಗ ನಿಗುರಿ, ಹೊತ್ತಿದ್ದವರನ್ನು ತಲ್ಲಣಗೊಳಿಸುತ್ತಿದ್ದ, ಮೀನನ್ನು ಸುತ್ತಿ ಹೊತ್ತು ತಂದುದನ್ನು ನೋಡಿ, ಪಕ್ಕದ ಕಿರುಗುಡಿಸಲಿನ ಮತ್ತು ಸೆಟ್ಟಿಗಿತ್ತಿ, ಮನೆಯ ಪಕ್ಕದೊಂದು ಕೊಟಡಿಯಲ್ಲಿಯೆ ಸಂಸಾರ ಮಾಡಿದ್ದ ಮೋಸಸ್ ಮೇಷ್ಟರು ಮತ್ತು ಅವರ ಹೆಂಡತಿ ಎಲ್ಲ ಬೆರಗಾಗಿ ನೆರೆದರು. ಕೇರೆಕೇರಿ ಅಮ್ಮನೂ ಮಕ್ಕಳು ಎಂಥ ಸಾಹಸ ಮಾಡಿ ಎಷ್ಟು ದೊಡ್ಡ ಮೀನನ್ನು ತಂದರಲ್ಲಾ ಎಂದು ಹೆಮ್ಮೆಯಿಂದ ಮನೆಯ ತೆಣೆಗೆ ಬಂದು ನಿಂತು ನಿರೀಕ್ಷಿಸುತ್ತಿದ್ದರು. ನಾವು ವಿಜಯಗರ್ವದಿಂದ ಮೂಟೆಯನ್ನು ಇಳಿಸಿ, ಚೀಲದ ಒಂದು ತುದಿಯನ್ನು ಹಿಡಿದು ಎತ್ತಿ ಮೀನನ್ನು ಹೊರಗೆ ಬೀಳಿಸಿದೆವು.

ಕೆರೆಕೇರಿ ಅಮ್ಮ ಚೀತ್ಕರಿಸಿ ಹೌವ್ವನೆ ಹಾರಿ ಹಿಂದಕ್ಕೋಡಿ ದೂರ ನಿಂತು ಬೆರಗು ಭಯಗಳಿಂದ ನೋಡುತ್ತಾ “ಅಯ್ಯಯ್ಯೋ! ಇದನ್ಯಾಕೆ ತಂದಿರೊ? ಇದು ‘ಹೆಮ್ಮಲಗ’ ಕಣ್ರೋ! ಎಂದು ಕೂಗಿದರು.” ಆದರೆ ಸೆಟ್ಟಿ ಮತ್ತು ಸೆಟ್ಟಿಗಿತ್ತಿ “ಇದು ಹೆಮ್ಮಲಗ ಹೌದು. ಬಹಳ ಪಸಂದಾಗಿರುತ್ತದೆ ಪಲ್ಯ ಮಾಡಿದರೆ!” ಎಂದರು. ಅಮ್ಮ ‘ಹಾಂಗಾದ್ರೆ ನೀವೆ ತಗೊಂಡು ಹೋಗಿ. ನಮ್ಮಿಂದಾಗದಿಲ್ಲ. ಅಸಹ್ಯ!’ ಎಂದುಬಿಟ್ಟರು. ಆದರೆ ಬೇಟೆಯಾಡಿ ತಂದ ನಮಗೆ ನಿರಾಶೆಯೋ ನಿರಾಶೆ! ಸೆಟ್ಟಿಗೆ ಕೊಡಬೇಕಾಯಿತಲ್ಲಾ ಎಂದು ಹೊಟ್ಟೆ ಕಿಚ್ಚು! ಆದರೆ, ಏನು ಮಾಡುವುದಕ್ಕೂ ತೋರದೆ, ಆ ಮೀನು ನಿಂಗಿರುವ ನಮ್ಮ ಗಾಳಗಳನ್ನೆಲ್ಲಾ ಅದರ ಹೊಟ್ಟೆಯಿಂದ ತೆಗೆದು ನಮಗೆ ಒಪ್ಪಿಸಬೇಕು ಎಂದು ಕರಾರಿನ ಮೇಲೆ ಅದನ್ನು ಸೆಟ್ಟಿಗೆ ಬಿಟ್ಟುಕೊಟ್ಟೆವು.

ಎಷ್ಟೋ ದಿನಗಳ ತನಕ ಆ ಹೆಮ್ಮಲಗನ ಮೈಯನ್ನು ಮುಟ್ಟಿದ ನಮ್ಮ ಕೈಗಳನ್ನು ಬಿಸಿನೀರು, ಸೀಗೆ, ಸಾಬೂನು ಎಲ್ಲವನ್ನೂ ಉಪಯೋಗಿಸಿ ಎಷ್ಟು ಕಲ್ಲುಮಣ್ಣುಗಳಿಗೆ ತಿಕ್ಕಿದರೂ ಅದರ ಅಸಹ್ಯವಾಸನೆಯೂ ಲೋಳೆ ಲೋಳೆಯಾಗಿದ್ದ ಒಂದು ತರಹದ ಜಿಗುಟಿನ ಅಂಟೂ ಹೋಗಲೊಲ್ಲದೆ ಹೋದುವು. ಊಟಮಾಡುವಾಗಲೂ ಜುಗುಪ್ಸೆಯಿಂದ ವಾಕರಿಕೆ ಬರುವಂತಾಗುತ್ತಿತ್ತು. ಸ್ಕೂಲಿಗೆ ಹೋದಾಗಲೂ ನಮ್ಮ ಪಕ್ಕದ ಹುಡುಗರು ನಾವು ಕುಳಿತಿದ್ದ ಬೆಂಚನ್ನು ಬಿಟ್ಟು ಪಕ್ಕದ ಬೆಂಚಿನಲ್ಲಿ ಕಿಕ್ಕಿರಿಯುತ್ತಿದ್ದರು. ಮೇಷ್ಟರು “ಯಾಕ್ರೋ ಒಂದೇ ಬೆಂಚಿನ ಮೇಲೆ ಅಷ್ಟೊಂದು ಜನ ಕೂರ್ತೀರಿ? ಇಬ್ಬರು ಮೂವರಾದರೂ ಬನ್ರೋ ಪಕ್ಕದ ಬೆಂಚಿಗೆ!” ಎಂದು ಗದರಿಸಿ ಬೆತ್ತ ಆಡಿಸಿದಾಗ ಆ ಹುಡುಗರು “ಸಾರ್, ಅವರ ಹತ್ರ ಕೆಟ್ಟವಾಸ್ನೆ!” ಎಂದು ಮೂಗು ಮುಚ್ಚಿಕೊಂಡರು. ನಿಜಾಂಶವನ್ನು ಪರೀಕ್ಷಿಸಲೆಂದು ಮೇಷ್ಟರು (ಪಾಪ! ಹಾರುವರು!) ನಮ್ಮ ಬಳಿಸಾರಿ ಮೈಕೈ ಮೂಸಿ, ‘ಥೂ ಥೂ ಥೂ ಶೂದ್ರ ಮುಂಡೇವು’ ಎಂದು ದೂರ ಓಡಿ, ಬೆತ್ತದಿಂದಲೆ ನಮ್ಮನ್ನು ನೂಕಿ, ‘ತೊಳೆದುಕೊಂಡು ಬನ್ನಿ’ ಎಂದು ಮನೆಗೆ ಕಳಿಸಿದರು. ನಮಗೋ ಖುಷಿಯೋ ಖುಷಿ! ಸುಲಭದಲ್ಲಿ ರಜಾ ಸಿಕ್ಕಿತಲ್ಲಾ ಎಂದು! ಆದರೆ ಜವಾನ ಆರೆಕೊಪ್ಪ ಹೊರಗೆ ಬಂದು ನಮ್ಮನ್ನು ತಡೆದು ‘ಯಾಕ್ರೋ ಹೊರಗೆ ಹೋಗ್ತೀರಿ? ಮೀನಿನ ವಾಸನೆ ಆ ಹಾರುವಯ್ಯಗೆ ಅಸಗ್ಯವಾದರೆ ಅವನೇ ಮೂಗಿಗೆ ಬಟ್ಟೆ ಕಟ್ಟಿಕೊಳ್ಳಲಿ! ನೀವು ಮನೆಗೆ ಹೋಗಿ ತೊಳಕೊಂಡು ಬಂದರೆ ಆ ವಾಸನೆ ಹೋಗ್ತದೇನು? ವಾಸನೆ ಇದೆ ಅಂಥಾ ಕ್ಲಾಸಿಗೆ ನಿಮ್ಮನ್ನು ಸೇರಿಸದಿರುವುದಕ್ಕೆ ಅವನಿಗೇನು ಅಧಿಕಾರ? ನಿಮ್ಮನ್ನು ಮೂಸಿ ನೋಡುವುದಕ್ಕೋ ಪಾಠ ಹೇಳುವುದಕ್ಕೊ ಅವನನ್ನು ಸರ್ಕಾರ ಸಂಬಳಕೊಟ್ಟು ನೇಮಿಸಿರುವುದು?’ ಎಂದು ಧೈರ್ಯ ಹೇಳಿದನು. ನಾವು ಸ್ವಲ್ಪ ಹೊತ್ತು ಬಿಟ್ಟು ‘ತೊಳಕೊಂಡು ಬಂದೆವು’ ಎಂದು ಸುಳ್ಳು ಹೇಳಿ ಒಳಗೆ ಹೋಗಿ ಕೂತೆವು!

ಅರೆಕೊಪ್ಪ ಸ್ವಲ್ಪಮಟ್ಟಿಗೆ ಸ್ವತಂತ್ರಾಭಿಮಾನಾಪನ್ನನಾಗಿ ತಾನು ಜವಾನ ಎಂಬುದನ್ನು ಮರೆತು ವರ್ತಿಸುತ್ತಿದ್ದನೆಂದು ತೋರುತ್ತದೆ. ಆದ್ದರಿಂದಲೆ ಎಷ್ಟೋ ಮೇಷ್ಟರುಗಳನ್ನು ಮೈಮೇಲೆ ಹಾಕಿಕೊಂಡಿರಬೇಕು. ಅದರಿಂದಾಗಿ ತೊಂದರೆಗೂ ಒಳಗಾಗಿರಬೇಕು. ಸುಮಾರು ಮೂವತ್ತೈದು ವರ್ಷಗಳ ತರುವಾಯ ನಾನು ಮೈಸೂರು ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ ಆಗಿ ತೀರ್ಥಹಳ್ಳಿಯ ಯಾವುದೋ ಒಂದು ಭಾಷಣ ಕಾರ್ಯಕ್ರಮಕ್ಕೆ ಅಲ್ಲಿಗೆ ಹೋಗಿದ್ದಾಗ ನನ್ನ ಮಿತ್ರರೊಬ್ಬರು ಅವನನ್ನು ಬಳಿಗೆ ಕರೆತಂದು ‘ಇವನು ಯಾರು ಗೊತ್ತಾಯ್ತೆ? ನಮ್ಮ ಸ್ಕೂಲು ಜವಾನ ಆಗಿದ್ದನಲ್ಲಾ ಆ ಆರೆಕೊಪ್ಪ! ಈಗ ಶಿವಮೊಗ್ಗದಲ್ಲಿ ಅಟೆಂಡರ್ ಆಗಿದ್ದಾರೆ. ಅವನು ಮತ್ತೆ ಇಲ್ಲಿಗೆ ಬರಬೇಕು ಅಂತಾ ಬಹಳ ಪ್ರಯತ್ನಿಸುತ್ತಿದ್ದಾನೆ. ಮೇಲಿ ಅಧಿಕಾರಿಗಳಿಗೆ ನೀವು ಒಂದು ಮಾತು ಹೇಳಿದರೆ ನಡೆಯುತ್ತದೆ ಎಂದು ಅವನ ಆಶೆ’ ಎಂದರು.

ವ್ಯಕ್ತಿಯನ್ನು ದೃಷ್ಟಿಸಿ ನೋಡಿದೆ. ಅದೇ ‘ಆರೆಕೊಪ್ಪ!’ ಅದೇ ನಗೆ! ಅಂದಿನ ಹಾಗೆಯೆ ನಕ್ಕು ಹಲ್ಲು ಬಿಡುತ್ತಿದ್ದಾನೆ! ವಯಸ್ಸು ದೇಹದ ಮೇಲೆ ತುಸು ಪರಿಣಾಮ ಮಾಡಿದ್ದರೂ ಈಗಲೂ ಗೋಲಿ ಕಸಿದು ತಾರಸಿಯ ಮೇಳೆ ಎಸೆಯುವ ಮನೋಧರ್ಮದಿಂದ ಹೆಚ್ಚೇನೂ ದೂರವಾಗಿಲ್ಲ ಎಂಬಂತೆ ಅಂದಿನ ಭಂಗಿಯಲ್ಲಿಯೆ ನಿಂತಿದ್ದಾನೆ!

“ಮತ್ತೆ ಇಲ್ಲಿಗೆ ಬಂದರೆ ನಿನಗೆ ಅಟೆಂಡರ್ ಕೆಲಸ ಸಿಗುತ್ತದೆಯೆ?” ಎಂದು ಹೇಳಿದೆ.

“ಇಲ್ಲ” ಎಂದು ತುಸು ತಲೆತಗ್ಗಿಸಿದ.

“ಮತ್ತೆ? ಕಡಿಮೆ ಸಂಬಳದ ಜವಾನಗಿರಿಗೇ ಬರ್ತೀಯಾ?”

“ಜವಾನಿಕೇನೇ ಸಾಕು ಈ ಊರಿನಲ್ಲಿ!”

ನನಗೆ ಆಶ್ಚರ್ಯವಾಯಿತು ಮತ್ತೆ ಮೆಚ್ಚಿಗೆಯೂ ಆಯಿತು. ನಾವೆಲ್ಲ ಹೆಚ್ಚಿಗೆ ಸಂಬಳಕ್ಕೆ ಬಡ್ತಿ ಪಡೆಯುವುದಕ್ಕಾಗಿ ಏನೆಲ್ಲ ಪಾಡುಪಡುತ್ತಿರುವ ಈ ಕಾಲದಲ್ಲಿ ಇಲ್ಲೊಬ್ಬ ಇದಾನಲ್ಲಾ ನಮ್ಮನ್ನು ಮೂದಲಿಸುವಂತೆ! ಅಲ್ಲದೆ ಹಳ್ಳಿಯಿಂದ ಪೇಟೆಗೆ ಸಣ್ಣ ಊರಿನಿಂದ ದೊಡ್ಡ ಊರಿಗೆ ತೀರ್ಥಹಳ್ಳಿಯಿಂದ ಶಿವಮೊಗ್ಗೆಗೆ, ಶಿವಮೊಗ್ಗೆಯಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಹೊಸದೆಹಲಿಗೆ ಏರಿ ಹಾರಬೇಕೆಂದು ಅಧಿಕಾರಲಾಲಸೆಯ ಮತ್ತು ಸ್ಥಾನಮಾರ್ಗದ ಮೇಲಾಟದ ಈ ಕಾಲದಲ್ಲಿ ಶಿವಮೊಗ್ಗೆಯಿಂದ ತೀರ್ಥಹಳ್ಳಿಗೆ ಇಳಿಯಲು ಹಾತೊರೆಯುತ್ತಿದ್ದಾನಲ್ಲಾ ಈ ಅರೆಕೊಪ್ಪ?