ನನಗೆ ನೆನಪಿರುವ ಮಟ್ಟಿಗೆ, ಬುದ್ಧಿ ಕಣ್ದೆರೆದ ಕಾಲದಿಂದಲೂ ನಮ್ಮ ಮನೆಯಲ್ಲಿ ‘ಬೇಟೆ’ ಒಂದು ಸಸಂಭ್ರಮ ವಿಷಯವಾಗಿತ್ತು. ಕೋವಿಗಳು, ಬೇಟೆಯ ನಾಯಿಗಳು, ಬೇಟೆಗಾರರು ನನ್ನ ಪ್ರಜ್ಞೆಯ ಬಹುಭಾಗವನ್ನು ಆಕ್ರಮಿಸಿದ್ದುವು. ಸಾಮಾನ್ಯವಾಗಿ ಅನುದ್ವಿಗ್ನಕರವೂ ಪ್ರಶಾಂತವೂ ಆಗಿರುತ್ತಿದ್ದ ಬದುಕಿನಲ್ಲಿ ಬೇಟೆಯೊಂದೇ ಕುತೂಹಲಕರವೂ ಉನ್ಮೇಷನಶಾಲಿಯೂ ಆಗಿರುತ್ತಿತ್ತು. ಚಿಕ್ಕವರಾಗಿದ್ದ ನಮ್ಮನ್ನು ಕಾಡಿಗೆ ಕರೆದುಕೊಂಡು ಹೋಗದಿದ್ದರೂ ‘ದೊಡ್ಡಬೇಟೆ’ಗೆಂದು ಜನರೆಲ್ಲ ನೆರೆದು ನಾಯಿಗಳೊಡನೆ ಗುಡ್ಡವೇರಿ ಕಣ್ಮರೆಯಾದಾಗ, ನನ್ನ ಕಲ್ಪನೆ ಕೆರಳಿ, ಕಾಡಿನಲ್ಲಿ ನಡೆಯಬಹುದಾದ ವ್ಯಾಪಾರಗಳನ್ನೆಲ್ಲ ಊಹಿಸಿಕೊಂಡು, ಸಂಜೆ ಅವರೆಲ್ಲ ಹಿಂತಿರುಗುವ ತನಕ ಜೀವ ಸೂಜಿಮೊನೆಯೆರಿದಂತೆ ತುಡಿದುಕೊಳ್ಳುತ್ತಿತ್ತು. ಎದುರಿಗೆ ಉಪ್ಪರಿಗೆಯ ಮೇಲೆ ಕುಳಿತು, ಅಡಕೆಯ ತೋಟದಾಚೆ ಹಸುರು ಮರಗಳ ಮುದ್ದೆಯ ಮಹಾದುರ್ಗ ಭಿತ್ತಿಯಂತೆ ದಟ್ಟವಾಗಿ ಕಡಿದಾಗಿ ದುರ್ಭೇದ್ಯವಾಗಿ ನಡು ಬಾನಿವರೆಗೂ ಮೇಲೇರಿರುತ್ತಿದ್ದ ಅರಣ್ಯಶ್ರೀಯನ್ನು ನೋಡುತ್ತಾ ಕುಳಿತಿರುತ್ತಿದ್ದೆ. ಕಾಡಿನಿಂದ ಕೋವಿಯ ಈಡಿನ ಸದ್ದು ಕೇಳಿಸಿದಾಗ ಮೈಮೇಲೆ ಕುದಿನೀರು ಹೊಯ್ದಂತಾಗಿ ಚೇತನವೆಲ್ಲ ಊಹೆಯ ಅಲಗಿನ ಮೇಲೆ ನಿಮಿರಿ ನೃತ್ಯವಾಡುತ್ತಿತ್ತು. ಏನಾದರೂ ಬೇಟೆಯಾಗಲಿ ಎಂದು ಶುಭಶಕುನಕ್ಕಾಗಿ ಸಿದ್ದೆಯಡಿ ಮುಚ್ಚಿ ಹಾಕಿರುತ್ತಿದ್ದ ‘ಸಿದ್ದೆಗುಮ್ಮ’ (ಹಸರು ಜಿರಲೆ ಅಥವಾ ಕುದುರೆಹುಳ)ನ ಕಡೆ ನೋಡುತ್ತಿತ್ತು ಕಾತರದ ಮನಸ್ಸು. ಎರಡೋ ಮೂರೋ ಈಡುಗಳು ಒಂದಾದಮೇಲೊಂದರಂತೆ ಕೇಳಿಸಿದಾಗ ಹಂದಿಯೊ ಮಿಗವೊ ಕಡವೊ ಯಾವುದೋ ದೊಡ್ಡಪ್ರಾಣಿ ಬಿತ್ತು ಎಂದು ಊಹಿಸಿ, ಹುಡುಗರೆಲ್ಲ ಅದನ್ನು ದೂರದಿದ ಬಂದಾಗ ಹಂದಿಯನ್ನೇ ತಡೆದಿರಬೇಕು ಎಂದು ಹೇಳಿಕೊಳ್ಳುತ್ತಿದ್ದಂತೆ ಢಾಂಢಾಂ ಎಂದು ಈಡು ಕೇಳಿಸಿದರೆ “ಖಂಡಿತ ಪುಟ್ಟಣ್ಣನೇ ಈಡು ಹೊಡೆದಿರಬೇಕು” ಎಂದು ಒಬ್ಬ ಹೇಳಿದರೆ ಇನ್ನೊಬ್ಬ “ಅವನ ಹತ್ತಿರ ಇವೊತ್ತು ತೋಟಾಕೋವಿ ಇರಲಿಲ್ಲವೋ. ಐಯ್ಯಪ್ಪ ಚಿಕ್ಕಪ್ಪಯ್ಯನೇ ಹೊಡೆದಿರಬೇಕು” ಎಂದು ಇನ್ನೊಬ್ಬ ಸಾಧಿಸುತ್ತಿದ್ದ. ಆ ವಿಚಾರವಾಗಿಯೆ, ಪಂತ ಕಟ್ಟುವುದೂ ಬೇರೆ ಸಾಗಿರುತ್ತಿತ್ತು! ಸಾಯಂಕಾಲ ಅವರೆಲ್ಲ ಹಿಂತಿರುಗಿದಾಗ, ಕದನವೊಂದರಿಂದ ಹಿಂತಿರುಗಿದ ಸೈನಿಕರನ್ನು ಎದುರುಗೊಳ್ಳುವ ನಾಗರಿಕರಂತೆ, ಅತ್ಯಂತ ಸಂಭ್ರಮದಿಂದ ಅವರನ್ನು ಎದುರುಕೊಂಡು, ಏನು ಬೇಟೆಯಾಯಿತು? ಎಲ್ಲಿಗೆ? ಯಾರು ಹೊಡೆದರು? ಹೇಗೆ ಬಿತ್ತು? ಇತ್ಯಾದಿ ಪ್ರಶ್ನೆಗಳ ಸುರಿಮಳೆಯನ್ನೇ ಕರೆಯುತ್ತಿದ್ದೆವು. ಮತ್ತು ಷಿಕಾರಿಯಾದ ಪ್ರಾಣಿ-ಹಂದಿ, ಕಾಡು ಕುರಿ, ಮಿಗ, ದೊಡ್ಡು, ಕಡ, ಯಾವುದೆ ಆಗಿರಲಿ-ಕೆರೆಯ ಹತ್ತಿರ ಹಸಿಗೆಗಾಗಿ ಹೊತ್ತು ಕೊಂಡು ಹೋದರು ಎಂಬ ವಾರ್ತೆ ಕಿವಿಗೆ ಬಿದ್ದೊಡನೆ ಅಲ್ಲಿಗೆ ದೌಡಾಯಿಸಿ ಅದರ ಸುತ್ತಲೂ ನಿಂತ ವೀರರಸಾನುಭವ ಮಾಡುವಂತೆ ವೀಕ್ಷಿಸುತ್ತಿದ್ದೆವು. ನಾವೂ ಮುಂದೆ ದೊಡ್ಡವರಾದಾಗ ಹೀಗೆಯೆ ಬೇಟೆಯಾಡುತ್ತೇವೆ; ಆಗ ಹೀಗೆ ಮಾಡಬೇಕು, ಹಾಗೆ ಮಾಡಬೇಕು; ದೊಡ್ಡ ಜಂತುವಿಗೆ ಒಂದೇ ಏಟಿಗೆ ಒಟ್ಟುಗೆ ಎರಡು ಈಡು ಹೊಡೆದು ಹೆಜ್ಜೆ ಹಾಕದಂತೆ ಮಲಗಿಸಿಬಿಡಬೇಕು;-ಎಂದೆಲ್ಲ ಕನಸು ಕಟ್ಟಿ ಅದರ ವಿಚಾರ ಹರಟೆ ಹೊಡೆದದ್ದೇ ಹೊಡೆದದ್ದು!

ಆದರೆ ನಾವು ದೊಡ್ಡವರಾಗುವತನಕ ತೆಪ್ಪಗಿರುವುದಕ್ಕೆ ಮನಸ್ಸು ಒಪ್ಪಬೇಕಲ್ಲ. ಮುಂದೆ ದೊಡ್ಡವರಾದ ಮೇಲೆ ನಾವು ಉಪಯೋಗಿಸಬೇಕಾಗುವ ಮದ್ದುಗುಂಡನ್ನು ಈಗಲೆ ಏಕೆ ಶೇಖರಿಸಬಾರದು ಎಂಬ ಮುಂಜಾಗ್ರತೆ ನಮ್ಮಲ್ಲಿ ಎಚ್ಚರವಾಗಿ, ಒಂದು ದಿನ ಕಾರ್ಯರಂಗಕ್ಕೂ ಇಳಿಯುವ ಧೈರ್ಯಮಾಡಿತು. ಆದರೆ ಆ ರಹಸ್ಯವನ್ನು ಇತರರಾರಿಗೂ ಹೇಳದೆ ನಾವಿಬ್ಬರೇ-ನಾನು ಮತ್ತು ಮಾನಪ್ಪ-(ಅವನು ನನ್ನ ಸಮವಯಸ್ಕನಾಗಿದ್ದರೂ ಅವನನ್ನು ಆಗಿನ ರೂಢಿಯಂತೆ ನಮ್ಮ ಸಂಬಂಧ ಸ್ಪಷ್ಟಗೊಳ್ಳುವ ರೀತಿಯಲ್ಲಿ ‘ಮಾನಪ್ಪ ಚಿಕ್ಕಪ್ಪಯ್ಯ’ ಎಂದೇ ಕರೆಯುತ್ತಿದ್ದೆ.) ಕೈಕೊಂಡೆವು.

ಬೇಟೆಗಾರರು ಬಗಲಿಗೇರಿಸಿಕೊಳ್ಳುತ್ತಿದ್ದ ಕೋವಿ ಚೀಲಗಳನ್ನು ಕಾಡಿನಿಂದ ಹಿಂತಿರುಗಿದ ಮೇಳೆ ಜಗಲಿಯಲ್ಲಿ ದೊಡ್ಡಿನ ಕೋಡಿಗೋ ಕಡವಿನ ಕೋಡಿಗೋ ಸಿಕ್ಕಿಸುತ್ತಿದ್ದುದು ವಾಡಿಕೆ. ತೋಟ ಕೋವಿಯವರೂ ಕೂಡ ತಾವು ಕಾಡಿಗೆ ಹಾಕಿಕೊಂಡು ಹೋಗುತ್ತಿದ್ದ ಅಂಗಿಯನ್ನು ಅಲ್ಲಿಯೆ ಎಲ್ಲಿಯಾದರೂ ಸಿಕ್ಕಿಹಾಕುತ್ತಿದ್ದರು. ಆ ಅಂಗಿಯ ಜೇಬುಗಳಲ್ಲಿಯೆ ತೋಟಾಗಳೂ ಇರುತ್ತಿದ್ದುವು. ಎಲ್ಲರೂ ಮಧ್ಯಾಹ್ನದ ಊಟ ಮುಗಿಸಿ, ತಮ್ಮ ತಮ್ಮ ಕೋಣೆಗಳಲ್ಲಿಯೊ ಅಥವಾ ಉಪ್ಪರಿಗೆಯಲ್ಲಿಯೊ ಮಲಗಿ ಹಗಲುನಿದ್ದೆ ಮಾಡುತ್ತಿದ್ದ ಸಮಯವನ್ನೆ ಹೊಂಚಿ ನಾವು ಕೇಪು, ಕೋವಿಯ ಮಸಿ, ರವೆ, ಗುಂಡು, ಬಾರುಮಾಡಿದ್ದು ಸುಂದರವಾಗಿ ಕಾಣುತ್ತಿದ್ದ ವಿದೇಶಿ ತೋಟಾಗಳು ಇವನ್ನೆಲ್ಲ ಎಗರಿಸಲು ತೊಡಗಿದೆವು. ಅದನ್ನೆಲ್ಲ ಎಲ್ಲಿ ಹುದುಗಿಸಿಡುವುದು ಎಂಬುದೂ ಒಂದು ಸಮಸ್ಯೆಯಾಗಲು ಮಾನಪ್ಪ ತನ್ನ ಪೆಟ್ಟಿಗೆಯಲ್ಲಿ ಬಟ್ಟೆಯಡಿ ಮುಚ್ಚಿಡುವುದಾಗಿ ಧೈರ್ಯ ಹೇಳಿ ಹಾಗೆಯೆ ಮಾಡಿದನು.

ರಾಷ್ಟ್ರಗಳಾಗಲಿ ವ್ಯಕ್ತಿಗಳಾಗಲಿ ಮದ್ದುಗುಂಡನ್ನು ಮುಂಜಾಗ್ರತೆಗಾಗಿ ಶೇಖರಿಸಲು ಶುರುಮಾಡಿದ ಮೇಲೆ ಎಷ್ಟುದಿನ ತಾನೆ ಅದನ್ನು ಪ್ರಯೋಗಿಸಿ ನೋಡದೆ ಸುಮ್ಮನಿರುವುದಕ್ಕಾದೀತು? ಏನಾದರೂ ಒಂದು ನೆವ ಹೂಡಿ, ಮತ್ತೇನಾದರೂ ಒಂದು ಕಿತಾಪತಿ ಮಾಡಿ, ಕಾಲು ಮೆಟ್ಟಿಯಾದರೂ ಜಗಳ ಕೆಣಕಿ ಅಥವಾ ತೋಳದಂತೆ ಕುರಿಮರಿಯ ಮೇಲೆ ಆಪಾದನೆ ಹೊರಿಸಿ, ಅಕ್ಕಪಕ್ಕದ ದೇಶಗಳೊಡನೆ ಯುದ್ಧಹೂಡಿ, ಶೇಖರಿಸಿದ ಮದ್ದುಗುಂಡು ನಿಷ್‌ಪ್ರಯೋಜಕವಾಗದಂತೆ ನೋಡಿಕೊಳ್ಳುವುದು ಇತಿಹಾಸ ಸುಧಾರಣಾ ವಿಷಯ ತಾನೆ? ಹಾಗೆಯೆ ಆಯಿತು ನಮಗೂ!

ಸುಮ್ಮನೆ ಕೋವಿಮಸಿಯನ್ನು ಶೇಖರಿಸಿದ್ದರಿಂದ ಏನು ಬಂತು? ಅದನ್ನು ಏತಕ್ಕೆ ಪ್ರಯೋಗಿಸಿ ನೋಡಬಾರದು? ಎಂಬ ಮನಸ್ಸಾಯಿತು.

ಮದುವೆ ಮೊದಲಾದ ವಿಶೇಷ ಉತ್ಸವಗಳ ಸಂದರ್ಭಗಳಲ್ಲಿ ಕದಿನಿ ಹಾರಿಸುವುದನ್ನು ನೋಡಿದ್ದು ನಾವು, ಕದಿನಿಮಸಿಯನ್ನು ಉಪಯೋಗಿಸಿ, ಹಾರಿಸಿ, ಮಹಾಶಬ್ದವನ್ನುಂಟುಂಆಡಿ ಬೆಟ್ಟಗುಡ್ಡ ಕಾಡುಗಳಲ್ಲಿ ಮರುದನಿಸುವಂತೆ ಮಾಡುತ್ತಿದ್ದುದನ್ನು ಅನುಕರಿಸಲು ನಿಶ್ಚಯಿಸಿದೆವು. ಕಬ್ಬಿಣದ ಕದಿನಿಗಳನ್ನು ಅಣಕಿಸುವಂತೆ ವಾಟೆಯ ಕೊಳವಿಗಳನ್ನು ಗೆಣ್ಣಿಟ್ಟು ಚೋಟುದ್ದಕ್ಕೆ ಕತ್ತರಿಸಿದೆವು. ಗೆಣ್ಣಿನ ಮೇಲೆ ಅದರ ಬುಡದಲ್ಲಿ ದಬ್ಬಳ ಕಾಯಿಸಿ ಚುಚ್ಚಿ ಸಣ್ಣ ತೂತು ಮಾಡಿದೆವು, ಕದಿನಿಗೆ ‘ಕಿವಿ’ ಇರುವ ತೆರದಲ್ಲಿ. ಕೋವಿಮಸಿ ಬೆಂಕಿಪೆಟ್ಟಿಗೆ ಸಹಿತವಾಗಿ, ಮಧ್ಯಾಹ್ನ ಊಟವಾದ ಮೇಲೆ ಎಲ್ಲರೂ ಮಲಗಿ ಜೋಂಪಿಸುತ್ತಿದ್ದ ಸುಸಮಯದಲ್ಲಿ ಮನೆಯ ಹಿಂದುಗಡೆ ತುಸುದೂರದಲ್ಲಿದ್ದ ಕರೆಹಟ್ಟಿಯ ಪಕ್ಕದ ಗೊಬ್ಬರ ಗುಂಡಿಯ ದಂಡೆಗೆ ಹೋದೆವು. ಅಲ್ಲೊಂದು ಒಣಗಿ ನಿಂತಿದ್ದ ಗಂಧದ ಮರವಿತ್ತು. ಅರದ ಬುಡವನ್ನು ನಮ್ಮ ಸಾಹಸದ ಕಣವನ್ನಾಗಿ ಆರಿಸಿಕೊಂಡೆವು.

ರಣಬಿಸಿಲಿನ ಹಗಲು. ಮನೆಯ ಎದುರಿನ ಕಾಡಿಡಿದ ಮಲೆಸಾಲು ಮುದ್ದೆ ಮುದ್ದೆಯೆ ಹೆಪ್ಪುಗಟ್ಟಿದ ಹಸುರುನಿದ್ದೆಯ ಗಗನಗಾಮಿ ಪಾರ್ವತ ಭಿತ್ತಿಯಾಗಿದ್ದು. ಎಲ್ಲಿಯೂ ಯಾವ ಸದ್ದೂ ಕೇಳಿಸದೆ ನಿಃಶಬ್ದವಾಗಿತ್ತು. ಹಕ್ಕಿಪಕ್ಷಿಗಳೂ ಕೂಡ ಬಿಸಿಲ ಬೇಗೆಗೆ ಮೌನವಾಂತು ಮರದ ಹಸುರಿನಲ್ಲಿ ಹುದಗಿ ತೂಕಡಿಸುತ್ತಿದ್ದುವು. ನಾಯಿ, ಕೋಳಿ, ದನಕರು ಎಲ್ಲ ಬಿರುಬೇಸಗೆಯ ಹಗಲು ರೌಸಿಗೆ ಮಲಗಿ ವಿಶ್ರಮಿಸಿ ತೂಕಡಿಸುತ್ತಿದ್ದ ಕಾಲವದು.

ವಾಟೆಯ ಕೊಳವಿಗೆ ಕೋವಿಮಸಿಯನ್ನು ಹಾಕಿ ಇಡಿದೆವು. ಚೆನ್ನಾಗಿ ಇಡಿಯದಿದ್ದರೆ ಸರಿಯಾಗಿ ಹಾರಿ ಸದ್ದು ಮಾಡುವುದಿಲ್ಲ ಎಂದು ನನ್ನ ತಿಳುವಳಿಕೆ.

“ಹಳೇ ಪೈಕದ ಬುರುಡ, ಕದಿನಿಗೆ ಮಸಿ ತುಂಬುವಾಗ ದಪ್ಪ ಜಗದ ಮೇಲೆ ಸುತ್ತಿಗೆಯಿಂದ ಬಡಿದು ಬಡಿದೂ ಗಿತ್ಗರಿದು ತುಂಬುತ್ತಿದ್ದನೋ ನಾನು ನೋಡೀನಿ!” ಎಂದು ನಾನು ಹೇಳಿದಾಗ ಮಾನಪ್ಪ ವಾಟೆಯ ಕೊಳವಿಗೆ ಹಾಕಿದ್ದ ಕೋವಿಮಸಿಯ ಮೇಲೆ, ಕೊಳವೆಯ ತೂತಿಗೆ ಸರಿಯಾಗಿ ಹಿಡಿಸುವ ಗಾತ್ರದ ಕೋಲಿನಿಂದ ಬಲವಾಗಿ ಬಡಿದು ಇಡಿಯಲು, ಆ ಹಸಿಯ ವಾಟೆಯ ಕೊಳವೆ ಹಿಸಿದುಕೊಂಡಿತು!

ಅಯ್ಯೋ ದೇವರೆ ಎಂದುಕೊಂಡು ಮತ್ತೊಂದು ಕೊಳವೆಯನ್ನು ತಯಾರಿಸಿದೆವು. ಅದಕ್ಕೆ ಮಸಿ ತುಂಬುವಾಗ ತುಂಬ ಎಚ್ಚರಿಕೆ ವಹಿಸಿ ಒಡೆಯದಂತೆ ‘ಗಿತ್ಗರ್ದು’ ತುಂಬಿದೆವು. ಅದರ ‘ಕಿವಿ’ಗೂ ಹೊರಗಡೆಯಿಂದ ಕೋವಿಮಸಿ ಮೆತ್ತಿದೆವು, ಬೆಂಕಿಕಡ್ಡಿ ಇಟ್ಟಾಗ ತಟ್ಟನೆ ಹೊತ್ತಲಿಕ್ಕೆ.

ಅಂತೂ ವಾಟೆಕೊಳಪೆಯ ‘ಕದಿನಿ’ ಹಾರಿಸುವುದಕ್ಕೆ ಸಿದ್ಧವಾಯಿತು!

ಕೆಳಗುರುಳದಂತೆ ಅದನ್ನು ಮರಳುಗುಡ್ಡೆಯ ಆಪುಕೊಟ್ಟು ನೆಟ್ಟಗೆ ನಿಲ್ಲಿಸಿದೆವು!

ಇನ್ನು ಬೆಂಕಿಕಡ್ಡಿ ಗೀರಿ ಹೊತ್ತಿಸುವುದೊಂದೇ ಬಾಕಿ!

ಯಾರು ಹೊತ್ತಿಸಬೇಕು? ‘ನೀ ಹೊತ್ತಿಸು, ನೀ ಹೊತ್ತಿಸು’ ಒಬ್ಬರನ್ನೊಬ್ಬರು ಹುರಿದುಂಬಿಸಿದೆವು. ಏಕೆಂದರೆ, ಇಬ್ಬರಿಗೂ ಹೆದರಿಕೆ!

ನಾನು ಹಿಂಜರಿದು ಕುಳಿತದ್ದನ್ನು ನೋಡಿ ಮಾನಪ್ಪನೆ ಬೆಂಕಿ ಹೊತ್ತಿಸಲು ಮುಂದಾದನು. ವಾಟೆಕದಿನಿಗೆ ತುಸುದೂರವೆ ಎಚ್ಚರಿಕೆಯಿಂದ ಕುಳಿತು ಕಡ್ಡೀಗೀರಿ ಕದಿನಿಯ ಕಿವಿಗೆ ಆನಿಸಿದನು. ಆದರೆ ಕದಿನಿ ಹಾರಲೆ ಇಲ್ಲ. ಕಡ್ಡಿ ಆರಿತು. ಮತ್ತೊಂದನ್ನು ಗೀರಿ ಕದಿನಿಯ ಕಿವಿಯ ಕೋವಿಮಸಿಗೆ ಜ್ವಾಲೆ ತಗಲುವಂತೆ ಹಿಡಿದನು. ಹಾರಲೆ ಇಲ್ಲ! ಮತ್ತೂ ಒಂದನ್ನು ಹೊತ್ತಿಸಿ ನೋಡಿದನು. ಹಾರಲಿಲ್ಲ! ಬಹುಶಃ ಬರಿಯ ಜ್ವಾಲೆ ತಾಗಿದರೆ ಮದ್ದು ಹಾಕುವುದಿಲ್ಲವೊ ಏನೋ, ಕೆಂಡವೂ ತಗುಲಬೇಕೊ ಏನೋ.

ಕದಿನಿ ಹಾರುವುದನ್ನೇ ನಿರೀಕ್ಷಿಸುತ್ತಿದ್ದ ನನಗೆ ಇಸ್ಸಿ ಎನಿಸಿತು. “ಇಲ್ಲಿ ಕೊಡೋ ನಾ ಹೊತ್ತಿಸ್ತೀನಿ” ಎಂದೆ. ಕದಿನಿಯ ಸಮೀಪವೆ ಕುಳಿತು, ಕಡ್ಡಿಗೀರಿ, ಕದಿನಿಕಿವಿಗೆ ಮೆತ್ತಿದ್ದ ಕೋವಿ ಮಸಿಗೆ ಚೆನ್ನಾಗಿ ತಾಗುವಂತೆ ಆನಿಸಿ ಒತ್ತಿ ಹಿಡಿದೆ! ಈ ಸಾರಿಯೂ ಹಾರುವುದಿಲ್ಲ ಎಂಬ ಧೈರ್ಯದಿಂದಲೊ ಏನೋ, ಜ್ವಾಲೆ ಉರಿದು ಆರಿ ಕೆಂಡವಾಗುವವರೆಗೂ ತಗುಲಿಸಿ ಹಿಡಿದೇ ಇದ್ದೆ! ಅತ್ಯಂತ ಅನಿರೀಕ್ಷಿತವಾಗಿ ಎವೆಯಿಕ್ಕುವುದರಲ್ಲಿಯೆ, ಢಮಾರ್ ಎಂದು ಸದ್ದಾಗಿ ವಾಟೆ ಕೊಳವಿ ಒಡೆದು ಹಾರಿ ದಿಕ್ಕಾಪಾಲಾಯಿತು. ಏನಾಯಿತು ಎಂದು ಅರಿಯಲೂ ಆರದ ನನ್ನ ಪ್ರಜ್ಞೆಗೆ ದಿಕ್ಕುಗೆಟ್ಟಂತಾಗಿ ಥಟ್ಟನೆ ಹೆದರಿ ಹಿಂದಕ್ಕೊರಗಿದೆ.

‘ಅಯ್ಯೋ ಪುಟ್ಟೂ!’ ಎಂದು ಕೂಗಿದ ಮಾನಪ್ಪ! ನೋಡಿದರೆ, ನನ್ನ ಎಡ ಅಂಗೈ ಪೂರಾ ಕಪ್ಪಾಗಿತ್ತು! ಸಿಡಿದ ಮದ್ದಿನ ರಭಸವು ನನ್ನ ಮುಖದ ಮುಂದೆ ರಕ್ಷಣೆಗಾಗಿ ನಾನು ಗುರಾಣಿಯಾಗಿ ಹಿಡಿದುಕೊಂಡಿದ್ದ ಎಡ ಅಂಗೈಗೆ ಬಡಿದು, ಅಂಗೈ ಸುಟ್ಟು ಕರ್ರಗಾಗಿತ್ತು! ನಾನು ಅಂಗೈಯನ್ನು ಮುಖದ ಮುಂದೆ ಗುರಾಣಿಯಂತೆ ಹಿಡಿದುಕೊಳ್ಳದೆ ಇದ್ದಿದ್ದರೆ ನನ್ನ ಮುಖ, ಮೂಗು, ಕಣ್ಣುಗಳೆಲ್ಲ ಸುಟ್ಟು ಸೀದು ಹೋಗಿ, ಇಂದು ಈ ‘ನೆನಪಿನ ದೋಣಿ’ಯಲ್ಲಿ ನಾನು ಈಗ ಬರೆಯುತ್ತಿರುವ ಇದು ಎಂದಿಗೂ ಅಸ್ತಿತ್ವಕ್ಕೇ ಬರುತ್ತಿರಲಿಲ್ಲ.

ವಿಸ್ಮಯ, ಬೆರಗು, ಕಂಗೇಡು ಎಲ್ಲ ಮುಗಿಯುವುದರೊಳಗೇ ನನ್ನ ಅಂಗೈ ಉರಿ ಉರಿಯಾಗಿ, ಗಾಯಕ್ಕೆ ಜೀರಿಗೆ ಮೆಣಸಿನಕಾಯಿ ಮೆತ್ತಿದಂತಾಯಿತು. ಗಟ್ಟಿಯಾಗಿ ಅಳುವ ಹಾಗೆಯೂ ಇಲ್ಲ; ಯಾರನ್ನಾಗಲಿ ದೊಡ್ಡವರನ್ನು ಕರೆಯುವಂತೆಯೂ ಇಲ್ಲ. ಎಲ್ಲವನ್ನೂ ಮುಚ್ಚುಮರೆಯಿಂದ ಕಳ್ಳತನದಲ್ಲಿ ಮಾಡಿದ್ದೆವಾದ್ದರಿಂದ. ಆದರೆ ಗಂಟಲೊಳಗೇ ‘ಅಯ್ಯೋ! ಅಯ್ಯೋ! ಉರಿ! ಉರಿ! ಎಂದು ನಾನು ಅಳತೊಡಗಿದೆ ಮಾನಪ್ಪ ನನ್ನನ್ನು ಅವನ ತಾಯಿತಂದೆ ಮಲಗುವ ಕೋಣೆಗೆ, ಈಗ ಅಲ್ಲಿ ಯಾರೂ ಇಲ್ಲವೆಂದು ನಿಶ್ಚಯಿಸಿಕೊಂಡು, ಕರೆದುಕೊಂಡು ಹೋಗಿ, ಸುಟ್ಟು ಸೀದು ಕರ್ರಗಾಗಿದ್ದ ಅಂಗೈಗೆ ನಾಗಂದಿಗೆಯಿಂದ ಹರಳೆಣ್ಣೆ ಕುಡಿಕೆ ತೆಗೆದು ಎಣ್ಣೆ ಬಳಿದನು. ಮದ್ದಿನ ಮಸಿಯೊಡನೆ ಸೇರಿದ ಎಣ್ಣೆ ಒಳಗೆ ಹೋಗಲು ಉರಿ ಮತ್ತೂ ಹೆಚ್ಚಿತು. ಜೋರಾಗಿ ಅಳತೊಡಗಿದೆ. “ಅಳಬೇಡ’ ಗೊತ್ತಾದರೆ ನಮ್ಮ ಚರ್ಮ ಸುಲೀತಾರೆ!” ಎಂದು ಸಂತೈಸುತ್ತಾ ನನ್ನನ್ನು ಮನೆಗೆ ತುಸುವೆ ದೂರವಾಗಿ ವಿವಿಕ್ರವಾಗಿದ್ದ ಬಚ್ಚಲು ಮನೆಗೆ ಕರೆದೊಯ್ದನು. ಅಲ್ಲಿಂದ ನನ್ನ ಅಳು ಯಾರಿಗೂ ಕೇಳಿಸುವುದಿಲ್ಲ ಎಂದು ಅವನ ಭರವಸೆ. ಆದರೆ ಉರಿ ಹೆಚ್ಚಿದಂತೆಲ್ಲ ನನ್ನ ಅಳು ರೋದನಕ್ಕೇರಿತು.

ಜಗಲಿಯ ಕೆಸರು ಹಲಗೆಯಮೇಲೆ ಹಗಲು ನಿದ್ದೆ ಮುಗಿಸಿ ಕುಳಿತಿದ್ದ ಅಪ್ಪಯ್ಯ, ದೊಡ್ಡ ಚಿಕ್ಕಪ್ಪಯ್ಯ ಇವರಿಗೆಲ್ಲ ನನ್ನ ರೋದನ ಕೇಳಿಸಿ, ಏನೊ ಅನಾಹುತ ಮಾಡಿಕೊಂಡರು ಎಂದು ಬಚ್ಚಲಿಗೆ ಓಡಿಬಂದರು!

ಮಾನಪ್ಪನ ಸಮಯಸ್ಫೂರ್ತಿ! ನಿಜವಿಷಯ ತಿಳಿದರೆ ನಾವು ಕದ್ದಿದ್ದ ಮದ್ದು ಗುಂಡು ರವೆ ತೋಟಾ ಎಲ್ಲ ಬಯಲಿಗೆ ಬಂದು, ತನಗೆ (ಏಕೆಂದರೆ ನನಗೆ ಆಗಲೆ ಸಿಡಿಮದ್ದಿನ ಶಿಕ್ಷೆ ಆಗಿದ್ದುದರಿಂದ ನನ್ನ ಮೇಲೆ ಸಹಾನುಭೂತಿ ತೋರಿಸಿ, ತಪ್ಪನ್ನೆಲ್ಲ ತನಗಿಂತಲೂ ತುಸು ಹಿರಿಯನಾಗಿದ್ದ ಅವನೊಬ್ಬನ ಮೇಲೆ ಹೊರಿಸುವುದರಲ್ಲಿ ಅವನಿಗೆ ಸಂದೇಹವಿರಲಿಲ್ಲ!) ಮೈಮುರಿಯುವಂತೆ ಏಟು ಬೀಳುತ್ತದೆಂದೂ, ಅಲ್ಲದೆ ಮುಂದೆ ನಾವು ದೊಡ್ಡವರಾದ ಮೇಲೆ ಬೇಟೆಯಾಡಲು ಮದ್ದು ಗುಂಡಿನ ದಾಸ್ತಾನಿಗೆ ಖೋತಾ ಬೀಳುತ್ತದೆಂಬ ಮುಂಜಾಗ್ರತೆಯಿಂದಲೂ “ಏನೋಯ್ತೋ? ಯಾಕೆ ಅಳ್ತಾನೊ ಪುಟ್ಟು?” ಎಂಬ ಪ್ರಶ್ನೆಗಳಿಗೆ “ಹಲಸಿನ ಬಿತ್ತ ಸುಡ್ತಿದ್ದೆವು. ಪುಟ್ಟು ಮುಂದಕ್ಕೆ ಮುಗ್ಗರಿಸಿ ಕೆಂಡದ ಮೇಲೆ ಕೈಯಿಟ್ಟುಬಿಟ್ಟ!” ಎಂದು ನಿರ್ವಿಕಾರವಾಗಿ, ಸತ್ಯವನ್ನೇ ಹೇಳುವಷ್ಟರಮಟ್ಟಿನ ಅನುದ್ವಿಗ್ನ ಧ್ವನಿಯಿಂದ, ಉತ್ತರಿಸಿದ!

ಅವರು ಯಾರಿಗೂ ಪರಿಶೀಲಿಸುವುದಕ್ಕಾಗಲಿ ಪರೀಕ್ಷಿಸುವುದಕ್ಕಾಗಿ ಯಾವ ಸಂದೇಹದ ಕಾರಣವೂ ಇರಲಿಲ್ಲವಾದ್ದರಿಂದ ಮಾನಪ್ಪನ ಸುಳ್ಳು ಗೆದ್ದಿತು!

ಸದ್ಯಕ್ಕೆ!

ನನ್ನನ್ನು ಮನೆಯೊಳಗೆ ಕರೆದೊಯ್ದು ಹರಳೆಣ್ಣೆಯನ್ನೆಲ್ಲ ಬಟ್ಟೆಯಿಂದ ಒರಸಿ ತೆಗೆದು ಜೇನುತುಪ್ಪ ಹಚ್ಚಿದರು. ಉರಿ ಶಮನವಾಯಿತು, ತಕ್ಕಮಟ್ಟಿಗೆ….

ಆದರೆ ಬೇಸಗೆಯ ರಜಾ ಮುಗಿದು ನಾವೆಲ್ಲ ತೀರ್ಥಹಳ್ಳಿಗೆ ಓದುವುದಕ್ಕೆ ಹೋದ ಮೇಲೆ ಒಂದು ದಿನ ನಮ್ಮನ್ನೆಲ್ಲ ವಿಚಾರಿಸಿಕೊಂಡು ಹೋಗಲು ಮನೆಯಿಂದ ಬಂದರು ಐಯ್ಯಪ್ಪ ಚಿಕ್ಕಪ್ಪಯ್ಯ, ಮಾನಪ್ಪನ ಸ್ವಂತ ಅಣ್ಣ.

ಅವರು ಬಂದಾಗಲೆಲ್ಲ ಹುಡುಗರ ಟ್ರಂಕು ಪೆಟ್ಟಿಗೆ ಜೇಬು ಮೊದಲಾದುವುಗಳನ್ನು ಅಜಮಾಯಿಸಿ ಮಾಡುವುದು ಅವರ ಪದ್ಧತಿ. ಬಹುಶಃ ಹುಡುಗರು ನಶ್ಯ ಬೀಡಿ ಇತ್ಯಾದಿ ಕೆಟ್ಟ ಚಾಳಿಗಳಿಗೆ ಇಳಿದಿದ್ದರೆ ಕಂಡು ಹಿಡಿದು ಶಿಕ್ಷಿಸಿ ಅವರನ್ನು ಉದ್ಧಾರ ಮಾಡುವ ಉದ್ದೇಶದಿಂದಿರಬೇಕು! ಅಥವಾ….?

ಒಮ್ಮೆ ನಮ್ಮ ಮನೇಮೇಷ್ಟರು ತಮ್ಮ ದಪ್ಪವಾದ ಇಂಗ್ಲಿಷ್ ನಿಘಂಟಿನಲ್ಲಿ ಅವರು ಆಗಾಗ ಕಣ್ದಣಿಯೆ ನೋಡಿಗೀಡಿ ಮಾಡಿ ಇಟ್ಟುಕೊಂಡಿದ್ದ ಒಂದು ಪೂರ್ಣನಗ್ನಸ್ತ್ರೀಯ ಬಣ್ಣದ ಚಿತ್ರ ಕಣ್ಮರೆಯಾಯಿತಂತೆ! ನಮ್ಮನ್ನೆಲ್ಲ ವಿಚಾರಿಸಿದರು. ನಾವು ಯಾರೂ ಅದರ ತಂಟೆಗೂ ಹೋಗಿರಲಿಲ್ಲ. ಅಂಥಾದ್ದರಲೆಲ್ಲ ಆಸಕ್ತಿ ಹುಟ್ಟುವ ವಯಸ್ಸೂ ನಮಗೆ ಆಗಿರಲಿಲ್ಲ, ಒಬ್ಬರೊ ಇಬ್ಬರನ್ನೊ ಬಿಟ್ಟರೆ! ಸರಿ, ನಮ್ಮ ಮೇಷ್ಟರಿಗೆ ವಿರಹ ಕೆರಳಿದಂತಾಗಿ ಕೋಪಾಗ್ನಿ ಹೊತ್ತಿಕೊಂಡಿತು! ಜೊತೆಗೆ, ಆ ಚಿತ್ರ ಇತರ ದೊಡ್ಡವರ ಕಣ್ಣಿಗೆ ಬಿದ್ದು ತಮಗೆಲ್ಲಿ ಅವಮಾನವಾಗುತ್ತದೆಯೊ ಎಂಬ ಭೀತಿ ಬೇರೆ! ನಮ್ಮನ್ನೆಲ್ಲ ಕೋಣೆಯಲ್ಲಿ ಜಮಾಯಿಸಿ, ಬಲವಾದ ನೆಕ್ಕಿಯದೊ ಯಾತರದೊ ಕೋಲುಗಳನ್ನು ಮುರಿದು ತಂದರು. “ಹೇಳುತ್ತೀರೊ ಇಲ್ಲವೊ ಯಾರು ತೆಗೆದುಕೊಂಡವರು? ಎಲ್ಲಿ ಮುಚ್ಚಿಟ್ಟಿದ್ದೀರಿ? ಹಿಡಿಯಿರಿ ಕೈಯ!” ಎಂದೂ ಒಬ್ಬೊಬ್ಬರಿಗೂ ಅಂಗೈ ಊದಿಕೊಳ್ಳುವಂತೆ ತಮ್ಮ ಶಕ್ತಿಯನ್ನೆಲ್ಲ ಉಪಯೋಗಿಸಿ, ಎರಡು ಕೈಗಳಿಗೂ ಸರದಿಯಂತೆ, ಹೊಡೆಯತೊಡಗಿದರು. ಅತ್ತೆವು, ಕೂಗಿದೆವು, ‘ದಮ್ಮಯ್ಯ ನಮಗೆ ಗೊತ್ತಿಲ್ಲ’ ಎಂದೆವು, ನಿಮ್ಮ …. ತಿಂತೀವಿ! ಎಂದು ಏನೇನೊ ಆಡಬಾರದ್ದನ್ನೆಲ್ಲ ಆಡಿದೆವು. ಆದರೆ ಅವರ ರೋಷ ಕುಗ್ಗಲೆ ಇಲ್ಲ.

ನಾನೂ ಕೈಯೊಡ್ಡಿದೆ. ಒಂದೇಟು ಬಿದ್ದುದೆ ನನಗೆ ಸಿಡಿಲೆರಗಿದಂತಾಯ್ತು! ಎರಡನೆ ಏಟಿಗೆ ಅವರನ್ನು ಹಳ್ಳಿಯ ಬೈಗಳಿಂದ ಬೈಯುತ್ತಾ ಅಡುಗೆ ಮನೆಯಲ್ಲಿದ್ದ ಕೆರೆಕೇರಿ ಅಮ್ಮನ ಬಳಿಗೆ ಓಡಿ ಮರೆಹೊಕ್ಕೆ, ನನಗೆ ಧೈರ್ಯ, ಕಿಲಿಸ್ತರಾಗಿದ್ದ ಅವರು ಅಡಿಗೆಮನೆಗೆ ಪ್ರವೇಶಿಸುವುದು ನಿಷಿದ್ಧ ಎಂದು, ವಾಲಿ ಮತಂಗವನಕ್ಕೆ ಪ್ರವೇಶಿಸುವುದಿಲ್ಲ ಎಂದು ಸುಗ್ರೀವ ಪ್ರಾಣಭಯದಿಂದ ಅಲ್ಲಿಗೆ ಓಡಿದಂತೆ!

ಅಮ್ಮನೂ ಮೇಷ್ಟರಿಗೆ ‘ದನಕ್ಕೆ ಹೊಡೆದಂತೆ ಮಕ್ಕಳಿಗೆ ಹೊಡೆಯೋಕೆ ನೀವೇನು ಮನುಷ್ಯರಲ್ಲೇನು? ಎಂದು ಭರ್ತ್ಯನೆಮಾಡಿ, ಅವರ ಕೈತಡೆದು, ನಮ್ಮನ್ನು ಪಾರು ಮಾಡಿದರು….

ಹುಡುಗರಲ್ಲಿ ಯಾರಾದರೂ ಈ ನಗ್ನಚಿತ್ರವನ್ನು ಅಡಗಿಸಿಟ್ಟು ಕೊಂಡಿರಬಹುದೆ ಎಂದು ಪರೀಕ್ಷಿಸುವುದಕ್ಕಾಗಿಯೆ (ಬಹುಶಃ ಮೇಷ್ಟರು ದೂರುಕೊಟ್ಟಿದ್ದರೆಂದು ತೋರುತ್ತದೆ) ಅಯ್ಯಪ್ಪ ಚಿಕ್ಕಪ್ಪಯ್ಯ ನಮ್ಮ ಟ್ರಂಕು ಪೆಟ್ಟಿಗೆ ಬಟ್ಟೆ ಬರೆ ಎಲ್ಲವನ್ನೂ ಎತ್ತಿ ನೋಡಿದರೆಂದು ತೋರುತ್ತದೆ. ಆದರೆ, ಗ್ರಹಚಾರ! ಮಾನಪ್ಪನ ಗ್ರಹಚಾರ, ಮುಖ್ಯವಾಗಿ! ಅವನ ಟ್ರಂಕಿನಲ್ಲಿ ನಗ್ನಚಿತ್ರಕ್ಕೆ ಬದಲಾಗಿ ಮುಚ್ಚಿಟ್ಟಿದ್ದ ಮದ್ದು ಗುಂಡು ತೋಟಾಗಳು ಕಣ್ಣಿಗೆ ಬಿದ್ದುವು! ಆ ಪಿತೂರಿಯಲ್ಲಿ ಸಮಪಾಲು ವಹಿಸಿದ್ದ ನಾನೂ ಏನೂ ಗೊತ್ತಿಲ್ಲದವನಂತೆ ವರ್ತಿಸಿದೆ.

ಐಯ್ಯಪ್ಪ ಚಿಕ್ಕಪ್ಪಯ್ಯ ಅವರ ತಮ್ಮನನ್ನು ನಡುಮನೆಗೆ ಕರೆದು, ಆಗಿನ ಶಿಕ್ಷಾಪದ್ಧತಿಯಂತೆ ‘ಹಿಡಿ ಕೈಯ್ಯ!’ ಎಂದು ಕೈ ಹಿಡಿಸಿ, ಅಂಗೈಗೆ ಬಲವಾಗಿ ಹೊಡೆಯತೊಡಗಿದರು. ಮೂರನೆಯ ಏಟಿಗೇ ಮಾನಪ್ಪ ಮೂರ್ಛೆಹೋಗಿ ದಢಾರನೆ ಬಿದ್ದುಬಿಟ್ಟ! ಭೀತಿಯಿಂದಲೋ ಏನೋ ಮುಖ ವಿಕಾರವಾಗಿ ಬಾಯಲ್ಲಿ ನೊರೆ ಕಾರಿತು! ‘ಅಯ್ಯೋ! ತೆಗೆದೆಯೇನೋ ಹುಡುಗನ್ನ?; ಎಂದು ಕೂಗಿ ಅಮ್ಮ ನೀರು ತಂದರು. ತಲೆಗೆ ಮುಖಕ್ಕೆ ಹಾಕಿ ಗಾಳಿ ಬೀಸಿದರು. ಮೂರ್ಛೆ ತಿಳಿದ ಮೇಲೆ ಮತ್ತೆ ಹೊಡೆಯುತ್ತಾರೆ ಎಂದುಕೊಂಡಿದ್ದ ನಮಗೆಲ್ಲ ಭಯ ನಿವಾರಣೆಯಾಯಿತು. ಐಯ್ಯಪ್ಪ ಚಿಕ್ಕಪ್ಪಯ್ಯ ತಪ್ಪು ಮಾಡಿದವರಂತೆ ಹೊರಗೆ ನುಸುಳಿ ಹೋದಾಗ.

ಅವನ ಪಿಟಾರಿಯಲ್ಲಿದ್ದ ಮದ್ದುಗುಂಡಿನ ದಾಸ್ತಾನನ್ನೆಲ್ಲ ಅಯ್ಯಪ್ಪಗೌಡರು ಬಕ್ಕಣಿಕ್ಕೆ ಇಳಿಬಿಟ್ಟುಕೊಂಡರು. ಅವರೂ ಷಿಕಾರಿಯ ಗೀಳಿನವರಷ್ಟೆ!

ಆದರೆ, ನಗ್ನಚಿತ್ರ?-(ನಾವು ಅದನ್ನು ಮೇಷ್ಟರ ಸೂಳೆಯ ಚಿತ್ರ ಎಂದು ತಿಳಿದಿದ್ದೆವು. ಆದರೆ ಹಾಗೇನೂ ಇರಲಿಲ್ಲವೆಂದು ತೋರುತ್ತದೆ! ಅವರಿಗಿನ್ನೂ ಮದುವೆಯಾಗಿರಲಿಲ್ಲ. ಆದ್ದರಿಂದ ಪ್ರಾಯದ ಷೋಕಿಗೆ ಅದನ್ನು ನೋಡಿಯೆ ತೃಪ್ತಿಪಟ್ಟುಕೊಳ್ಳುತ್ತಿದ್ದಿರಬೇಕು!)

ವಾಟಗಾರು ವೆಂಕಟಪ್ಪಗೌಡರು ನಮ್ಮಲ್ಲಿಗೆ ಬಂದು ಹುಡುಗರ ಪುಸ್ತಕಗಳನ್ನು ಸುಮ್ಮನೆ ಕೈ ಆಡಿಸಿ ನೋಡುತ್ತಿದ್ದಾಗ, ಮೇಷ್ಟರ ನಿಘಂಟಿನಲ್ಲಿಟ್ಟಿದ್ದ ಆ ಚಿತ್ರವನ್ನು ತಮ್ಮ ಜೇಬಿಗೆ ಸೇರಿಸಿಕೊಂಡು  ಹೋಗಿದ್ದರಂತೆ. ನಮಗೆಲ್ಲ ಒದಗಿಸ ಭಯಂಕರ ಶಿಕ್ಷಾಪ್ರಸಂಗ ಅವರ ಕಿವಿಗೆ ಬಿದ್ದಮೇಲೆ ಆ ಕಾರ್ಡಿನಾಕಾರದ ಬಣ್ಣದ ನಗ್ನಸ್ತ್ರೀ ಚಿತ್ರವನ್ನು, ಕಣ್ಮಿಟುಕಿಸಿ ಲೇವಡಿಮಾಡಿ, ಮೇಷ್ಟರಿಗೆ ವಾಪಾಸು ಕೊಟ್ಟರಂತೆ!