ಮೊದಲನೆಯ ಮಹಾಯುದ್ಧದ ಭಯಂಕರತೆ ಆಟಗುಳಿಗಳಾಗಿದ್ದ ತೀರ್ಥಹಳ್ಳಿಯ ಶಾಲಾಬಾಲಕರಿಗೆ ವಾರ್ತಾರೂಪದ ವಿನೋದದ ವಿಷಯವಾಗಿತ್ತಷ್ಟೆ! ಆದರೆ ಆ ಯುದ್ಧ ಮುಗಿಯುವ ಹೊತ್ತಿಗೆ ಅದರ ಪರಿಣಾಮವಾಗಿಯೊ ಏನೊ ಅದರ ರಭಸದ ಕ್ಲೇಶ ಮಲೆನಾಡಿನ ಮೂಲೆಗೂ ತಟ್ಟಿತು. ಪದಾರ್ಥಗಳ ಬೆಲೆ ಏರಿ ಸೀಮೆಎಣ್ಣೆ ಮುಂತಾದುವುಗಳಿಗೆ ಕ್ಯೂನಿಂತು ರೇಷನ್ ಪಡೆಯುವುದೊಂದೇ ನಮ್ಮಂತಹ ಹುಡುಗರಿಗೆ ಗೊತ್ತಾಗುತ್ತಿದ್ದ ತೊಂದರೆ. ಏಕೆಂದರೆ ಅನೇಕವೇಳೆ ಆಟದ ಹೊತ್ತನ್ನೆಲ್ಲ ಕ್ಯೂ ನಿಂತು ನಮ್ಮ ಪಾಲಿನ ಪದಾರ್ಥ ತರುವುದರಲ್ಲಿಯೆ ಕಳೆಯಬೇಕಾಗುತ್ತದಲ್ಲಾ ಎಂದು.

ಒಂದು ಸಂಜೆ ಆಟದ ಮೈದಾನದಲ್ಲಿ ಚೆಂಡಾಟ ಮುಗಿಸಿ ಹುಡುಗರೆಲ್ಲ ಗುಂಪು ಕುಳಿತು ಹರಟೆ ಹೊಡೆಯುತ್ತಿದ್ದಾಗ ಒಬ್ಬ (ಅವನು ಡಾಕ್ಟರ ಮಗನಿರಬಹುದು) ಹೇಳಿದ “ಅಲ್ಲೋ ಇಲ್ಲಿ ಕೇಳು. ಜರ್ಮನಿಯಿಂದ ಒಂದು ಕಾಯಿಲೆ ಬಂದಿದೆಯಂತೆ. ಅವರೇ ಇಂಗ್ಲೀಷರ ಮೇಲೆ ಕಳಿಸಿದ್ದಂತೋ! ಬೀಸುಬಡಿಗೆ ಜ್ವರ ಅಂತಾರೆ. ಬೀಸಿ ಬಡಿಗೆ ಹೊಡೆದರೆ ಹೆಂಗೆ ಸಾಯ್ತಾರೊ ಹಂಗೆ ಸಾಯ್ತಾರಂತೆ ಅದು ಬಂದ್ರೆ ಜನ! ಆದರೆ ದೊಡ್ಡೋರಿಗೇ ಅಂತ ಕಣೋ ಅದು ಹೆಚ್ಚಾಗಿ ಬಡಿಯೋದು; ನಮ್ಮ ಹಾಂಗಿರುವ ಹುಡುಗರಿಗೆ ಬೆಳಿಗ್ಗೆ ಜ್ವರ ಬಂದು, ಒಂದು ದಿನ ಇದ್ದು, ಬಿಟ್ಟು ಹೋಗ್ತದಂತೆ”. ಮಕ್ಕಳೆಂದರೆ ಎಲ್ಲರಿಗೂ ಅಕ್ಕರೆ ತಾನೆ!

ಅದರ ನಿಜಾಂಶ ಏನೇ ಇರಲಿ, ನಮಗಂತೂ ಹಾಗೇ ಆಯ್ತು. ನಮ್ಮ ಗುಂಪಿನ ಹುಡುಗರಿಗೆ ಆ ‘ಇನ್‌ಫ್ಲೂಯನ್ ಜಾ’ ಎಂದು ತರುವಾಯ ಕುಪ್ರಸಿದ್ಧ ಹೆಸರು ಪಡೆದ ಆ ಜ್ವರ ಸ್ವಲ್ಪ ಬಂದು, ಹೆಚ್ಚು ತೊಂದರೆ ಕೊಡದೆ, ಬಿಟ್ಟೆ ಹೋಯಿತು. ಆದರೆ ನಾಡಿಗಾದ ಗತಿಯೆ ಬೇರೆ!

ಆ ಮಹಾರೋಗದ ದೆಸೆಯಿಂದ ಮನೆಮನೆಗಳೇ ನಾಶವಾದುವು. ಇಡೀ ಸಂಸಾರಗಳೇ ಸತ್ತುಹೋದುವು!

ಶಾಲೆಗಳಿಗೆಲ್ಲ ರಜಾ ಘೋಷಿಸಿದರು. ನಾವು ಪೇಟೆಯಿಂದ ಮನೆ, ಕುಪ್ಪಳಿಗೆ, ಹೋದೆವು. ಪ್ಲೇಗು, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳ ಹೆಸರನ್ನು ಮಾತ್ರ ಕೇಳಿದ್ದರು ಅತ್ತ ಕಡೆಯ ಜನರು. ಆ ರೋಗದಲ್ಲಿ ದೊಡ್ಡ ದೊಡ್ಡ ನಗರಗಳಿಗೇ ಮೀಸಲು, ನಮ್ಮತ್ತಕಡೆ ಅವು ತಲೆಹಾಕುವುದೇ ಇಲ್ಲ ಎಂಬುದು ನಮ್ಮ ನಂಬುಗೆಯಾಗಿತ್ತು. ಆದರೆ ಈ ಹೊಸರೀತಿಯ ಸಾಂಕ್ರಾಮಿಕದಿಂದ ಜನ ಕಂಗೆಟ್ಟು ಹೋದರು.

ಕುಪ್ಪಳಿಯ ಮನೆ ಒಂದು ರೀತಿಯ ಆಸ್ಪತ್ರೆಯಂತೆ ತೋರುತ್ತಿತ್ತು. ನಾವು ತೀರ್ಥಗಳ್ಳಿಯ ಆಸ್ಪತ್ರೆಯಲ್ಲಿ ಮಾತ್ರ ನೋಡಿದ್ದ ಭೂತಾಕಾರದ ಶೀಸೆಗಳ ಪಂಕ್ತಿಯಲ್ಲಿ ಬಣ್ಣಬಣ್ಣದ ನಿರೌಷಧಿಗಳು ನಮ್ಮ ಭಯಭರಿತ ಗೌರವಕ್ಕೆ ಪಾತ್ರವಾಗಿ ರಂಜಿಸುತ್ತಿದ್ದವು. ಹಳ್ಳಿಗಳು ಏಳು ಎಂಟು ಮೈಲಿಗಳಿಗಿಂಲೂ ತೀರ್ಥಹಳ್ಳಿಗೆ ದೂರವಾಗಿದ್ದು, ಆ ದೂರದಿಂದ ರೋಗಿಗಳು ದಿನವೂ ಆಸ್ಪತ್ರೆಗೆ ಬರುವುದು ಸಾಧ್ಯವಿರಲಿಲ್ಲವಾದ್ದರಿಂದ (ಅದರಲ್ಲಿಯೂ ಮಾರ್ಗಗಳೆ ಇಲ್ಲದೆ ಆ ಕಾಡು ಮಲೆಗಳ ದುರ್ಗಮ ದಾರಿಯಲ್ಲಿ) ಹಳ್ಳಿಗಳ ಪ್ರತಿಷ್ಠಿತ ಮನೆಗಳಿಗೆ ಔಷಧಿಗಳನ್ನು ಹಂಡೆಗಟ್ಟಲೆ ಸರಬರಾಜು ಮಾಡಿದ್ದರು. ಆ ಮನೆಗಳಲ್ಲಿದ್ದ ತುಸು ವಿದ್ಯಾವಂತರಾದ ಸೇವಾಮನೋಧರ್ಮದ ಯುವಕರು ಆ ಔಷಧಿಗಳನ್ನೂ ತಮ್ಮ ಮನೆಗಳಲ್ಲಿಯೆ ತಯಾರಿಸಿದ ಅನ್ನ ಗಂಜಿ ಮುಂತಾದ ಪಥ್ಯಗಳನ್ನೂ ಹೊತ್ತುಕೊಂಡು ಹೋಗಿ, ಡಾಕ್ಟರು ತಿಳಿಸಿದ ಕ್ರಮದಲ್ಲಿ ರೋಗಿಗಳಿಗೆ ನೀಡುತ್ತಿದ್ದರು.

ಮೈಸೂರಿನ ಹಾರ್ಡ್ವಿಕ್ ಕಾಲೇಜಿನಲ್ಲಿ (ಅದು ಬರಿಯ ಸ್ಕೂಲ್ ಆಗಿದ್ದರೂ ಅದನ್ನು ಅವರೆಲ್ಲ ಕಾಲೇಜ್ ಎಂದೇಕೆ ಕರೆಯುತ್ತಿದ್ದರೊ? ಅದರಲ್ಲಿ ಹಾಸ್ಟೆಲ್ಲೂ ಇದ್ದು ಅಲ್ಲಿಯೆ ಊಟ ಬಟ್ಟೆ ಪಡೆಯುತ್ತಿದ್ದರಂತೆ.) ಪ್ರಾಥಮಿಕ ನಾಲ್ಕನೆಯ ಕ್ಲಾಸಿನವರೆಗೆ ಓದಿ ಬಂದಿದ್ದ ಐಯಪ್ಪಗೌಡರೆ ಆ ಆಸುಪಾಸಿಗೆ ಆಧುನಿಕ ವಿದ್ಯಾವಂತರಾಗಿದ್ದು ಈ ಔಷಧಿ ಹಂಚುವ ಡಾಕ್ಟರ್ ಕಮ್ ಕಾಂಪೌಡರ್ ಕೆಲಸದ  ಮುಂದಾಳಾಗಿದ್ದರು. ಅವರಿಗೆ ಲೆಫ್ಟಿನಂಟ್ ಆಗಿ ಪುಟ್ಟಣ್ಣ ಕೆಲಸ ಮಾಡುತ್ತಿದ್ದ. ಕುಪ್ಪಳಿಯ ಪಟೇಲ್ ರಾಮೇಗೌಡರು ಮೇಲ್ವಿಚಾರಕರಾಗಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಮ್ಮ ಜೀತದಾಳುಗಳಾಗಿದ್ದ ಬೇಲರ ಕೇರಿ, ಒಕ್ಕಲುಗಳಾಗಿದ್ದ ಹಳೆಪೈಕದ ಮತ್ತು ಮರಾಠಿಗಳ ಮನೆಗಳು, ಕೆಳಕುಪ್ಪಳಿಯ ಕಿಲಸ್ತರ ಒಕ್ಕಲು ಮನೆಗಳು, ಬೆಕ್ಕನೂರು, ಕರ್ಕಿಬೈಲು, ಹೊಸಮನೆ, ಅಲೆಮನೆ ತಟ್ಟಾಪುರ ಮುಂತಾದ ಸಮೀಪದ ಹಳ್ಳಿಗಳು ಇವರ ಸೇವಾ ವಲಯಗಳಾಗಿದ್ದುವು. ಬೆಳಿಗ್ಗೆ ಮತ್ತು ಸಂಜೆ ಔಷಧಿ ಮತ್ತು ಪಥ್ಯಗಳನ್ನು ಹೊತ್ತೂ ಹೊರಿಸಿಕೊಂಡೂ ಹೋಗಿ, ಮನೆಮನೆಗಳಲ್ಲಿ, ಗುಡಿಸಲು ಗುಡಿಸಲುಗಳಲ್ಲಿ ರೋಗಿಗಳನ್ನು ವಿಚಾರಿಸಿ, ಯಾರು ಯಾರಿಗೆ ಯಾವಯಾವ ಔಷಧಿ ಕೊಡಬೇಕೊ ಅವುಗಳನ್ನು ಕೊಟ್ಟು, ಪಥ್ಯಗಳನ್ನು ಹಂಚಿ ಬರುತ್ತಿದ್ದರು. ಕೊನೆಕೊನೆಗೆ ಹೆಣಗಳನ್ನು ಹೊತ್ತು ಅವರವರ ಜಾತಿಯ ರೂಢಿಯಂತೆ ಸುಡುವವರನ್ನು ಸುಟ್ಟು, ಹೂಳುವವರನ್ನು ಹೂಳಿಯೂ ಬರಬೇಕಾಯಿತು. ಕೆಲವೆಡೆ ಒಂದು ಸಂಸಾರದಲ್ಲಿ ಒಬ್ಬರೂ ಉಳಿಯದಂತೆ ಖಾಲಿಯಾದದ್ದೂ ಉಂಟು. ಕೆಲ ಮನೆತನಗಳಲ್ಲಿ ದುಡಿಯುವವರೆಲ್ಲ ಸತ್ತು ಮಕ್ಕಳು ಮುದುಕರು ಮಾತ್ರ ಉಳಿದು, ಅವರ ತರುವಾಯದ ರಕ್ಷಣೆಯ ಮತ್ತು ಆರೈಕೆಯ ಹೊಣೆಗೂ ಇವರು ಭಾಜನರಾಗಬೇಕಗಿ ಬಂದಿತಂತೆ.