ಆ ವರ್ಷ ನನ್ನನ್ನು ಕನ್ನಡ ಲೋವರ್ ಸೆಕೆಂಡರಿ ಪರೀಕ್ಷೆಗೆ ಮಾತ್ರ ಕಟ್ಟಿಸಿದರು. ಸೆಲೆಕ್ಷನ್ ಪರೀಕ್ಷೆಯಲ್ಲಿ ಇಂಗ್ಲಿಷ್ ಚೆನ್ನಾಗಿ ಮಾಡಿಲ್ಲ ಎಂಬ ಕಾರಣವನ್ನೊಡ್ಡಿ. ಆದರೆ ನನಗಿಂತಲೂ ಉತ್ತಮರಲ್ಲದಿದ್ದು, ಆ ವರ್ಷದ ಪರೀಕ್ಷೆಯಲ್ಲಿ ಕನ್ನಡ ಇಂಗ್ಲಿಷ್ ಎರಡರಲ್ಲಿಯೂ ಢುಮ್‌ಕಿ ಹೊಡೆದ ಅನೇಕರನ್ನು ಪೂರ್ತಿ ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು.

ಆಗಿನ ಕಾಲದಲ್ಲಿ ಆ ಕಾಡುಮೂಲೆಯ ಊರುಗಳಲ್ಲಿ ಲೊ.ಸೆ. ಪರೀಕ್ಷೆ ಎಂದರೆ ಮಹಾ ಅನರ್ಘ್ಯ ಪದವಿಯಾಗಿತ್ತು. ಅದರಲ್ಲಿಯೂ ಬ್ರಾಹ್ಮಣರಲ್ಲದ ಶೂದ್ರ ವರ್ಗದವರು ಆ ಪರೀಕ್ಷೆಗೆ ಕೂರುವುದೆಂದರೆ (ತೇರ್ಗಡೆಯ ಮಾತಿರಲಿ!) ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪಟ್ಟ ದಯಪಾಲಿಸಿದಷ್ಟೆ ಮಹತ್ವದಾಗಿತ್ತು! ಸಾಮಾನ್ಯವಾಗಿ ಉಪಾಧ್ಯಾಯ ವರ್ಗವೆಲ್ಲ ಜನಿವಾರದವರೇ ಆಗಿರುತ್ತಿದ್ದುದರಿಂದ ಈ ಆಯ್ಕೆಯ ಪರೀಕ್ಷೆಯಲ್ಲಿ ಶೂದ್ರರ ಮಕ್ಕಳು ಸಾಧ್ಯವಾದಷ್ಟೂ ಮೇಲೇರದಂತೆ ನೋಡಿ ಕೊಳ್ಳುತ್ತಿದ್ದರು.

ಆಂಗ್ಲೇಯ ರೀತಿಯ ಸ್ಕೂಲುಗಳು ಪ್ರಾರಂಭವಾದಾಗ ಬ್ರಾಹ್ಮಣರು ಆ ಸ್ಕೂಲುಗಳೆಲ್ಲ ತಮಗೆ ಮಾತ್ರ ಮೀಸಲೆಂಬ ಮನೋಭಾವದಿಂದ ವರ್ತಿಸಿದ್ದರು. ಮನುವಿನಂತೆಯೆ ಇಂಗ್ಲಿಷರೂ ಅವರ ಸನಾತನ ಧರ್ಮ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದು ಭಾವಿಸಿದ್ದಂತೆ ತೋರುತ್ತಿತ್ತು. ಬ್ರಾಹ್ಮಣರ ಸನಾತನ ಧರ್ಮಕ್ಕೆ ಹಾನಿಯಾಗುವಂತೆ ವರ್ತಿಸಿ ಹಾಳಾಗಿ ಹೋಗಲು ಇಚ್ಛಿಸುತ್ತಾರೆಯೆ ಬ್ರಿಟಿಷರು? ಆ ಧೈರ್ಯವೆಲ್ಲಿಂದ ಬಂದೀತು ಅವರಿಗೆ? ವಿಜಯನಗರ ಮೊದಲಾದ ಹಿಂದೂ ರಾಜ್ಯಗಳ ದೊರೆಗಳಂತೆ ಇಂಗ್ಲೀಷರು ಬ್ರಾಹ್ಮಣ ಶಾಪಕ್ಕೆ ಹೆದರಲಿಲ್ಲವಾದ್ದರಿಂದ ಶೂದ್ರರ ಮಕ್ಕಳೂ ಶಾಲೆಗೆ ಪ್ರವೇಶಿಸುವಂತಾಯ್ತು. ಆದರೆ? ಬ್ರಾಹ್ಮಣರು ತಮ್ಮ ಮಕ್ಕಳ ಮಡಿಯನ್ನು ಕೆಡಿಸಿಕೊಳ್ಳಲು ಸಿದ್ಧರಿರಲಿಲ್ಲ. ಆದ್ದರಿಂದ ಬ್ರಾಹ್ಮಣ ಉಪಾಧ್ಯಾಯರು ಜನಿವಾರದ ಹುಡುಗರನ್ನೆಲ್ಲ ಬೆಂಚಿನ ಮೇಲೆ ಕೂರುವಂತೆ ಮಾಡಿ, ಒಕ್ಕಲಿಗರೆ ಮೊದಲಾದ ಶೂದ್ರರ ಹುಡುಗರನ್ನು ತುಸು ದೂರ ನೆಲದ ಮೇಲೆ ಕೂರುವಂತೆ ಮಾಡುತ್ತಿದ್ದರು. ಅಂತೂ ಕೆಲಕಾಲ ಹೀಗೆ ಬ್ರಾಹ್ಮಣ ರಕ್ಷಣೆ ಮಾಡಿಕೊಂಡರು. ಆದರೆ ಕಲಿಕಾಲ ಸಾಗುತ್ತಿತ್ತಲ್ಲಾ? ಕ್ರೈಸ್ತ ವಿದ್ಯಾಧಿಕಾರಿಗಳಿಗೆ ಇದು ಗೊತ್ತಾಗಿ ಆಕ್ಷೇಪಿಸಿದರು. ಆಗ ಬೆಂಚುಗಳಿಗೇ ಬ್ರಾಹ್ಮಣ ದೀಕ್ಷೆ ಕೊಟ್ಟುಬಿಟ್ಟರು. ಕೆಲವು ಬೆಂಚುಗಳು ಬ್ರಾಹ್ಮಣ ಬೆಂಚುಗಳಾಗಿ, ಮತ್ತೆ ಕೆಲವು ಶೂದ್ರ ಬೆಂಚುಗಳಾದವು. ಅಂತೂ ಎಲ್ಲರನ್ನೂ ಬೆಂಚಿನ ಮೇಲೆಯೇ ಕೂರಿಸಿಕೊಂಡರು. ಆದರೆ, ಪಾಪ, ಬ್ರಾಹ್ಮಣರ ಗ್ರಹಚಾರಕ್ಕೆ ಒಕ್ಕಲಿಗರು ಕ್ರೈಸ್ತರು ಮುಸಲ್ಮಾನರು ಓದಲು ಬರುತ್ತಿದ್ದ ಕಾಲ ತುಸು ಮುಂಬರಿದು ಹೊಲೆಯರು ಮೊದಲಾದ ಅಸ್ಪೃಶ್ಯರ ಮಕ್ಕಳೂ ಶಾಲೆಗೆ ಬಂದು ಸೇರತೊಡಗಿದರು. ಈಗೇನು ಮಾಡುವುದು? ಅವರನ್ನೆಲ್ಲಾ ನಿರ್ದಕ್ಷಿಣ್ಯವಾಗಿ ಹೊರಗಣ ತಣೆಯ ಮೇಲೆಯೆ ಕೂರಿಸಿದರು. ಬ್ರಾಹ್ಮಣರಾದ ತಮಗೆ ಆಕ್ಷೇಪಣೆ ಬರದಂತೆ, ಗೌಡರ ಮಕ್ಕಳು ಹೊಲೆಯರೊಡನೆ ಕೂರಲು ಒಪ್ಪುವುದಿಲ್ಲ, ಅದಕ್ಕಾಗಿ ಆಹೆ ಮಾಡಬೇಕಾಗಿದೆ ಎಂದರು. ಗೌಡರುಗಳಲ್ಲಿ ಕೆಲವು ಶ್ರೀಮಂತ ಮತ್ತು ಪ್ರತಿಷ್ಠಿತ ಮನೆಗಳವರು ಬ್ರಾಹ್ಮಣರ ಪಕ್ಷವೇ ನಿಂತು ತಮ್ಮ ಜೀತದವರಾದ ಹೊಲೆಯವರನ್ನು ತಾವು ದೂರ ಅಂಗಳದಲ್ಲಿಯೆ ನಿಲ್ಲಿಸುವುದರಿಂದ ಅವರ ಕೊಳಕು ಹುಡುಗರನ್ನು ತಮ್ಮ ಮಕ್ಕಳ ಮೈಗೆ ಮೈಮುಟ್ಟುವಂತೆ ಕೂರಿಸಲಾಗದು ಎಂದರು. ಶಕ್ತರ ಸಂಖ್ಯೆ ಅಧಿಕವಾಗಿದ್ದುದರಿಂದ ಅಧಿಕಾರಿಗಳು ಶಾಲೆಗಳನ್ನು ಸುಗಮವಾಗಿ ನಡೆಸುವ ಹೊಣೆಗೆ ತಲೆಬಾಗಿ ಆ ವಿಚಾರದಲ್ಲಿ ನಿಷ್ಠುರ ವರ್ತನೆಗೆ ಹೋಗಲಿಲ್ಲ. ಜೊತೆಗೆ ಅಧಿಕಾರಿಗಳಲ್ಲಿಯೂ ಕೆಲವರು ‘ಧರ್ಮಗ್ಲಾನಿ’ಗೆ ಅವಕಾಶ ಕೊಡಲು ಒಪ್ಪದಿದ್ದುದೂ ಒಂದು ಮುಚ್ಚುಕಾರಣವಗಿತ್ತು!

ಆದರೆ ನನಗೆ (ಮತ್ತು  ನನ್ನಂತಹ ಹಳ್ಳಿಯ ಹುಡುಗರಿಗೆ) ಈ ತಳತಂತ್ರದ ಪ್ರಜ್ಞೆ ಲವಲೇಶವೂ ಇರಲಿಲ್ಲ. ಹೊಸರೀತಿಯ ಆಂಗ್ಲೇಯ ವಿದ್ಯೆಯಿಂದ ಜೀವನೋಪಾಯ ಮಾರ್ಗವಾಗುತ್ತದೆಂದಾಗಲಿ, ಅಧಿಕಾರವರ್ಗಕ್ಕೆ ಸೇರಿ ಧನವನ್ನೂ ಗೌರವವನ್ನೂ ಪ್ರತಿಷ್ಠೆಯನ್ನೂ ಸಂಪಾದಿಸಿ ಸುಗಮ ಜೀವನ ನಡೆಸಬಹುದೆಂದಾಗಲಿ ಕನಸಿನಲ್ಲಿಯೂ ಊಹಿಸಲೂ ಬುದ್ಧಿಯಿರಲಿಲ್ಲ. ಯಾವುದೋ ಒಂದು ಮಬ್ಬುಮಬ್ಬಾದ ಅಸ್ಪಷ್ಟವಾದ ದಿವ್ಯ ಆಕಾಂಕ್ಷೆ ಆಗಾಗ್ಗೆ ಹೃದಯಸಂಚಾರಿಯಾಗುತ್ತಿತ್ತು. ಮನಸ್ಸು ದೇವರ ವಿಚಾರವಾಗಿಯೂ ಜೀವನ ವಿಚಾರವಾಗಿಯೂ ಬದುಕಿನ ಗುರಿಯ ವಿಚಾರವಾಗಿಯೂ ಆಗಾಗ್ಗೆ ಚಿಂತಿಸುತ್ತಿತ್ತು. ಆ ಚಿಂತನೆ ಮತ್ತು ಆ ರೀತಿಯ ಅಂತರ್ಮುಖತೆ ತಂದೆಯ ಮರಣಾನಂತರ ನನ್ನ ಅಂತರಾಳದಿಂದ ಆಟದ ಮಧ್ಯೆ, ಊಟದ ಮಧ್ಯೆ, ಗೆಳೆಯರೊಡನೆಯ ಅಮೋದ ಪ್ರಮೋದಗಳ ಮಧ್ಯೆ, ವಿಶೇಷವಾಗಿ ಕಾಡುಮಲೆಗಳಲ್ಲಿ ಒಬ್ಬನೆ ಅಲೆಯುತ್ತಿದ್ದಾಗ, ಇಣುಕಿ ಬಂದು ಬದುಕಿನ ರಹಸ್ಯಮಯತೆಯನ್ನು ಅನುಭವಕ್ಕೆ ತರುತ್ತಿತ್ತು. ಟೌನ್‌ಹಾಲಿನ ಕ್ಷುದ್ರ ಲೈಬ್ರರಿಯಲ್ಲಿ ಗ್ರಂಥಪಾಲಕನಾಗಿದ್ದ ಸ್ನೇಹಿತ ತಿಮ್ಮಪ್ಪ ಸೆಟ್ಟಿಯಿಂದ ಯಾವುದಾದರೂ ಪುಸ್ತಕವನ್ನು ಪಡೆದು ಓದುತ್ತಿದ್ದಾಗ, ದೊಡ್ಡ ಜೀವಗಳ ಜೀವನ ಚರಿತ್ರೆಯ ಎದುರು ನನ್ನ ಚೇತನ ನಿಂತಾಗ ನಾನೂ ಅವರಂತಾಗಬೇಕೆಂದು ಒಂದು ‘ಮಹತ್ವಾಕಾಂಕ್ಷೆ’ಯ ದುರ್ಬಲಸ್ಥಿತಿ ತಲೆಹಾಕುತ್ತಿದ್ದುದೂ ಉಂಟು. ಅದರಲ್ಲಿಯೂ ಮತಸ್ಥಾಪಕರ ಮತ್ತು ಧಾರ್ಮಿಕ ಸಂತರ ಜೀವನ ಚರಿತ್ರೆಗಳನ್ನು ಓದಿದಾಗ, ಅವರು ದೇವರನ್ನು ಕಂಡಂತೆ ತಾನೂ ಕಾಣಬಾರದೇಕೆ ಎಂದು ನನ್ನ ಚೇತನ ಉಬ್ಬುತ್ತಿದ್ದುದೂ ಉಂಟು. ಹಿಂದೂ ಕ್ರೈಸ್ತ ಮುಸಲ್ಮಾನ ಬೌದ್ಧಾದಿ ಧರ್ಮಗಳನ್ನೆಲ್ಲ ಸಮನ್ವಯಿಸಿ, ಎಲ್ಲದರ ಪರವಾಗಿಯೂ ವಾದಿಸಬಲ್ಲೆ ಎಂದು ಜಂಭ ಕೊಚ್ಚುತ್ತಿದ್ದುದೂ ನನ್ನ ನೆನಪಿಗೆ ಬರುತ್ತದೆ! ಅದಕ್ಕೇನು ಆಧಾರಗಳಿದ್ದುವೋ ನಾನು ಅರಿಯೆ! ಅಂತೂ ಹಾಗೆ ‘ಕೊಚ್ಚು’ತಿದ್ದುದುಂಟು.

ಆದ್ದರಿಂದ ನನ್ನನ್ನು ಲೊ.ಸೆ.ಯ ಕನ್ನಡ ವಿಭಾಗಕ್ಕೆ ಮಾತ್ರ ಕಟ್ಟಿಸುತ್ತಾರೆಂದು ಗೊತ್ತಾದಾಗ ನನಗೇನೂ ಆಗಲಿಲ್ಲ! ಒಂದು ವರ್ಷ ನಷ್ಟವಾಗುತ್ತಲ್ಲಾ ಎಂಬ ಭಾವನೆಗೆ ಎಡೆಯೇ ಇರಲಿಲ್ಲ. ನೋವೂ ಆಗಲಿಲ್ಲ, ಅವಮಾನವೂ ಆಗಲಿಲ್ಲ. ನನಗಿಂತಲೂ ಕೀಳುಗಳನ್ನು ಪೂರ್ತಿ ಲೋ.ಸೆ. ಕಟ್ಟಿಸುತ್ತಾರಲ್ಲಾ ಎಂದು ಹೊಟ್ಟೆಕಿಚ್ಚು ಸುಳಿಯಲಿಲ್ಲ. ಉಪಾಧ್ಯಾಯರ ನಿರ್ಣಯವನ್ನು ಪ್ರಸ್ನಿಸುವ ಇಚ್ಛೆಗಂತೂ ಒಂದಿನಿತೂ ಪ್ರವೇಶಕೊಡದೆ ‘ಬುದ್ಧಿರಾಹಿತ್ಯ’ ಭದ್ರವಾಗಿತ್ತು ನನ್ನ ‘ಮುಗ್ಧತೆಯಲ್ಲಿ.’