ಆಗ ಲೋ.ಸೆ. ಪರೀಕ್ಷೆ ಪಬ್ಲಿಕ್ ಪರೀಕ್ಷೆ! ಮೈಸೂರು ಸಂಸ್ಥಾನ ಸರ್ವತ್ರ! ಜಿಲ್ಲೆಯ ಕೇಂದ್ರಗಳಲ್ಲಿ ಮಾತ್ರ! ತೀರ್ಥಹಳ್ಳಿಯ ಎ.ವಿ. ಸ್ಕೂಲಿನಲ್ಲಿ ಓದಿದ ನಾವು ಅಲ್ಲಿಗೆ ಮೂವತ್ತಾರು ಮೈಲಿ ದೂರದಲ್ಲಿರುವ ಶಿವಮೊಗ್ಗಕ್ಕೆ ಹೋಗಬೇಕಿತ್ತು ಪರೀಕ್ಷೆಗೆ, ಕೂರಲು. ಕಾಡು ಕೊರಕಲಿನ ದಾರಿಯಲ್ಲದಾ ದಾರಿಯಲ್ಲಿ!

ಕುಪ್ಪಳಿಯಿಂದ ಶಿವಮೊಗ್ಗಕ್ಕೆ ನಾಲ್ವತ್ತೈದು ಮೈಲಿ. ಎರಡು ದಿನಗಳ ಗಾಡಿ ಪಯಣ. ಈಗ ಅದರ ಅರ್ಧಕ್ಕಿಂತಲೂ ಕಡಮೆ ಕಾಲದಲ್ಲಿ ನಮ್ಮ ಮಕ್ಕಳು ಲಂಡನ್ನಿಗೆ ಪ್ರಯಾಣ ಮಾಡುತ್ತಾರೆ. ಈಗ ಶಿವಮೊಗ್ಗದಿಂದ ತೀರ್ಥಹಳ್ಳಿ, ತೀರ್ಥಹಳ್ಳಿಯಿಂದ ಕೊಪ್ಪ ಎಲ್ಲ ಕಡೆಯೂ ಸೊಗಸಾದ ಟಾರು ರಸ್ತೆಗಳಾಗಿವೆ. ಕಾರಿನಲ್ಲಿ ಕುಳಿತು ಆ ಕಾಡುಗಳ ನಡುವೆ ಪ್ರಯಾಣ ಮಾಡುವುದೆ ಒಂದು ಸೊಗಸಾದ ಉದ್ಯಾನ ಯಾತ್ರೆಯಾಗುತ್ತದೆ. ಹೆಚ್ಚು ಎಂದರೆ ಒಂದು ಅಥವಾ ಒಂದೂಕಾಲು ಘಂಟೆ. ಆಗಿನ ರಸ್ತೆಗಳೂ ವರ್ಣಿಸಲಸಾಧ್ಯ. ಕೆಮ್ಮಣ್ಣು ಕಡಿದು ಮಾಡಿದ್ದ ಕಾಡುದಾರಿಗಳು ಬೇಸಗೆಯಲ್ಲಿ ಭಯಂಕರ ಧೂಳು. ಮಳೆಗಾಲದಲ್ಲಿ ಕೆಸರು. ಚಕ್ರಗಳು ಹೂತು, ಎತ್ತುಗಳಿಗೆ ಎಷ್ಟು ಬಡಿದರೂ ಗಾಡಿ ನಿಶ್ಚಲ! ಗಾಡಿ ಹೊಡೆಯುವವನ ಜೊತೆಗೆ ಗಾಡಿಯಲ್ಲಿ ಕುಳಿತವರೂ ಇಳಿದು ಚಕ್ರಕ್ಕೆ ಕೈ ಕೊಡಬೇಕಾಗುತ್ತಿತ್ತು, ಬಟ್ಟೆ ಬರೆ ಕೆಸರಾಗುವುದನ್ನು ಲೆಕ್ಕಿಸದೆ, ಜೊತೆಗೆ ರಾತ್ರಿಪಯಣ; ಹಗಲು ಎತ್ತುಗಳಿಗೆ ಬಿಸಿಲಿನಲ್ಲಿ ದಣಿವಾಗಿ ಸೋಲುತ್ತವೆ ಎಂದು. ಕತ್ತಲಾದ ಮೇಲೆ ಗಾಡಿ ಕಟ್ಟಿ ಇರುಳೆಲ್ಲ ಪಯಣಮಾಡಿ, ಬೆಳಿಗ್ಗೆ ಗಾಡಿ ಬಿಟ್ಟು, ಮರಗಳ ನೆರಳಲ್ಲಿ ಹೊಳೆಯ ಮರಳಲ್ಲಿ ಅಡುಗೆ ಊಟ ಮುಗಿಸಿ, ಮಿಶ್ರಮಿಸಿ, ಮತ್ತೆ  ಕತ್ತಲಾದ ಮೇಲೆ ಗಾಡಿ ಕಟ್ಟುವುದು!

ಕುಪ್ಪಳಿ ಮನೆಯಿಂದ ಲೋ.ಸೆ. ಕಟ್ಟಿದ್ದು ನಾನೊಬ್ಬನೆ. ದೇವಂಗಿ ಮನೆಯಿಂದ (ಆಗ ಅದು ಅವಿಭಕ್ತ ಕುಟುಂಬ. ಉಂಟೂರು, ಇಂಗ್ಲಾದಿ ಆಗಿರಲಿಲ್ಲ.) ವೆಂಕಟಯ್ಯ, ಹಿರಿಯಣ್ಣ, ಸೀತಮ್ಮ, (ಗೌಡರುಗಳ ಗಂಡು ಮಕ್ಕಳ ಓದೇ ಅಪೂರ್ವವಾಗಿದ್ದ ಆ ಕಾಲದಲ್ಲಿ ಸೀತಮ್ಮ ಲೋ.ಸೆ. ಪರೀಕ್ಷೆಗೆ ಕೂತಿದ್ದು ಅಲ್ಲಿಯವರಿಗೆಲ್ಲ ಎಂತಹ ಮಹತ್ವ ಘಟನೆಯಾಗಿರಬೇಕು? ಎಂತಹ ಹೆಮ್ಮೆಯ ವಿಷಯವಾಗಿರಬೇಕು? ಊಹಿಸಿಕೊಳ್ಳಿ. ಆಗ ಕೆಲವರು ಲೋ.ಸೆ. ಪಾಸಾದವರನ್ನು ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆಂದರೆ!! ಲೋ.ಸೆ. ಸರ್ಟಿಫಿಕೇಟಿಗೆ ಬೆಳ್ಳಿಯ ಚೌಕಟ್ಟು ಹಾಕಿಸಿ ಪ್ರೇಕ್ಷಣೀಯ ಸ್ಥಳಗಳಲ್ಲಿ ತೂಗುಹಾಕಿದ್ದಾರೆಂದರೆ!!)

ಕುಪ್ಪಳಿಯಿಂದ ನಮ್ಮ ಕಮಾನುಗಾಡಿ, ದೇವಂಗಿಯಿಂದ ಅವರ ಕಮಾನುಗಾಡಿ. ಮನೆಯ ಅಮ್ಮಂದಿರಿಗೂ ಸಂಭ್ರಮ. ನನ್ನ ಅಮ್ಮ ಆ ಸಂಭ್ರಮವನ್ನು ಹೇಗೆ ವ್ಯಕ್ತಪಡಿಸಿದರೆಂಬುದು ನನಗೆ ನೆನಪಿಲ್ಲವಲ್ಲಾ ಎಂದು ಸಂಕಟವಾಗುತ್ತದೆ. ಪಯಣದ ಅಡಿಗೆ ಊಟಕ್ಕೆ ಮತ್ತು ಶಿವಮೊಗ್ಗದಲ್ಲಿ ನಿಲ್ಲಬೇಕಾದ ಮೂರುನಾಲ್ಕು ದಿನಗಳಿಗೆ ಸಾಕಾಗುವಷ್ಟು ಸಾಮಾನು ಸರಂಜಾಮು ಪಾತ್ರೆ ಪರಟೆ ಎಲ್ಲ ತುಂಬಿದೆವು. ನಮ್ಮೆಲ್ಲರ ಅಧಿನೇತೃಗಳಾಗಿದ್ದವರು ಐಯ್ಯಪ್ಪ ಚಿಕ್ಕಪ್ಪಯ್ಯ. ಗಾಡಿ ಹೊಡೆಯುವವರಲ್ಲದೆ ಅಡುಗೆ ಮಾಡಲೂ ಇತರ ಸೆವಾಕಾರ್ಯಗಳಿಗೂ ಇಬ್ಬರು ಆಳುಗಳು, ಬಹುಶಃ ಗಾಡಿ ಮನೆಯಿಂದ ಹೊರಟಾಗ ತಂಗಿ ತಮ್ಮಂದಿರಲ್ಲದೆ ನಾಯಿಗಳೂ ಸಂಭ್ರಮದಿಂದ ಬಾಲ ಅಲ್ಲಾಡಿಸಿ ನಲಿದಾಡಿರಬೇಕು! ಷಿಕಾರಿಗೇ ಹೊರಟರೆಂದು! ಏಕೆಂದರೆ ಐಯ್ಯಪ್ಪಗೌಡರು ಎಲ್ಲಿಗೆ ಹೊರಟರೂ ಷಿಕಾರಿಗೇ ಹೊರಡುತ್ತಾರೆಂದು ಅವುಗಳ ಭಾವನೆ! ಅವರು ಹೆಗಲಿಗೆ ಕೋವಿ ಏರಿಸಿ ಹೊರಟರೆ, ಅವೂ ದಳಪತಿಯ ಹಿಂದೆ ಸೈನಿಕರು ಹೊರಟಂತೆ, ಸುತ್ತಮುತ್ತ ಸಶಬ್ದವಾಗಿ ನುಗ್ಗಿ ಹೊರಡುತ್ತಿದ್ದುದು ರೂಢಿ.

ನಮ್ಮ ಕಮಾನುಗಾಡಿ ದೇವಂಗಿಯ ಕಮಾನುಗಾಡಿಯನ್ನು ಕೂಡಿಕೊಂಡು ಬೆಕಿರುವಾಗಲೆ ಹೊರಟಿತು. ಏಕೆಂದರೆ ತೀರ್ಥಹಳ್ಳಿಯ ತುಂಗಾನದಿಯನ್ನು ಉಕ್ಕಡದ ಹತ್ತಿರದ ಗಾಡಿಕಂಡಿಯಲ್ಲಿ ದಾಟಿಸಬೇಕಾಗಿತ್ತು. ಆಗ ಸೇತುವೆ ಇರಲಿಲ್ಲ. ಮಳೆಗಾಲದಲ್ಲಿ ರಾಮತೀರ್ಥದ ಬಳಿಯ ದೋಣಿಗಂಡಿಯಲ್ಲಿ ಜೋಡು ದೋಣಿಗಳಿಂದ ಮಾಡಿದ ತೆಪ್ಪದ ಮೇಲೆ ಗಾಡಿ ಗಾಟುತ್ತಿದ್ದರು; ಗಾಡಿಗಳು ರಾಮತೀರ್ಥದ ಸ್ಥಳಕ್ಕಿಂತಲೂ ಮೇಲೆ ದೂರದಲ್ಲಿ ಉಕ್ಕಡದ ಹತ್ತಿರ ದಾಟಬಹುದಾಗಿತ್ತು. ನೀರು ಮೊಳಕಾಲೆತ್ತರ, ಸೊಂಟೆತ್ತರ ಮಾತ್ರ ಇರುತ್ತಿತ್ತು. ಆದರೆ ಬೆಳಕಿರುವಾಗಲೆ ಎಚ್ಚರಿಕೆಯಿಂದ ನೀರೊಳಗಿನ ಗಾಡಿದಾರಿಯ ಅಂದಾಜಿನಲ್ಲಿಯೆ ಎತ್ತುಗಳು ಹೊಡೆದು ದಾಟಬೇಕಿತ್ತು. ಕತ್ತಲಲ್ಲಿ ಎಲ್ಲಿಯಾದರೂ ಎಡಕ್ಕಾಗಲಿ ಬಲಕ್ಕಾಗಲಿ ಚಕ್ರ ಹೊರಳಿದರೆ ಅಪಾಯ ಸಂಭವವಾದ್ದರಿಂದ ಬೆಳಕಿರುವಾಗಲೆ ದಾಟಿಸುವ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ಅದರಲ್ಲಿಯೂ ನಮ್ಮ ಗಾಡಿಗಳು ಅಡಕೆ ಮೂಟೆ ಗಾಡಿಗಳಾಗಿರಲಿಲ್ಲವಷ್ಟೆ? ಒಳಗೆ ಮನೆತನಗಳ ಬೆಲೆಯುಳ್ಳ ಮಕ್ಕಳು ಕೂತಿದ್ದರಲ್ಲವೆ?

ನಮಗೆ ಪರೀಕ್ಷೆಗಿಂತಲೂ ಗಾಡಿಪಯಣವೆ ಸಂಭ್ರಮದ ವಿಷಯವಾಗಿತ್ತು. ಬೆಳ್ದಿಂಗಳ ರಾತ್ರಿಯಲ್ಲಿ, ನಿಬಿಡಾರಣ್ಯಗಳ ಮಧ್ಯೆ, ನೀರವ ನಿರ್ಜನವಾದ ರಸ್ತೆಯಲ್ಲಿ, ಗಾಡಿ ಚಕ್ರಗಳ ಸದ್ದಿನೊಡನೆ ಗಾಡಿಯೆತ್ತುಗಳ ಕೊರಳ ಗಗ್ಗರದ ಸರಗಳ ಟಿಂಟಿಣಿಯ ಶ್ರುತಿರೂಪದ ಹಿನ್ನೆಲೆಯಲ್ಲಿ ನಾವು ನಾಲ್ಕಾರು ಬಾಲಕಗೆಳೆಯರು, ಹಿಂದೆಂದೂ ಹಾಗೆ ಊರುಬಿಟ್ಟು ದೂರ ಹೋಗದಿದ್ದವರು, ಒಬ್ಬರನ್ನು ಒಬ್ಬರು ಮೀರಿಸುವ ಪ್ರಯತ್ನದಲ್ಲಿ ಗಟ್ಟಿಯಾಗಿ ಹರಟುತ್ತಾ, ಭೂತ ಭವಿಷ್ಯಗಳನ್ನೆಲ್ಲ ಮರೆತ ತತ್ಕಾಲದ ವರ್ತಮಾನ ಮಾತ್ರದ ಸಂತೋಷದಲ್ಲಿ ಮಗ್ನರಾಗಿದ್ದೆವು. ಆದರೆ ಇರುಳು ಮುಂಬರಿದಂತೆ, ಕಣ್ಣು ಭಾರವಾದ ಹಾಗೆಲ್ಲ, ಮಾತು ಹಿಂಜರಿಯತೊಡಗಿ, ಕ್ರಮೇಣ ಗಾಡಿಯೊಳಗೆ ನಿಃಶಬ್ದವಾಯಿತು. ರಸ್ತೆಯ ಅಂಚಿನಿಂದಲೆ ಆಕಾಶಮುಟ್ಟುವಂತೆ ಬೆಳೆದುನಿಂತಿದ್ದ ಮರಳಿನಿಂದ ದಟ್ಟವಾದ ಆ ಕಗ್ಗಾಡಿಗೆ ಒಂದು ಭವ್ಯ ಭೀಷಣೆಯ ಭಂಗಿ ಒದಗಿತ್ತು. ಕಾಡೇನೂ ನಮಗೆ ಹೊಸದಲ್ಲದಿದ್ದರೂ ಅದಕ್ಕೊಂಡು ಬದ್ಧಭ್ರುಕುಟಿಯ ಭಂಗಿ ಬಂದು ಹೆದರಿಸುವಂತಿತ್ತು. ಸಾಲದಿದ್ದುದಕ್ಕೆ ಬೇರೆ, ಶಿವಮೊಗ್ಗೆಗೆ ಅಡಕೆ ಮೂಟೆಗಳನ್ನು ಸಾಗಿಸುವ ಗಾಡಿ ಹೊಡೆಯುವವರು ಹೇಳುತ್ತಿದ್ದ ಕಥೆಗಳೂ ಮನಸ್ಸಿಗೆ ಬಂದು ಅವ್ಯಕ್ತಭೀತಿ ಸಂಚಾರವಾಗುತ್ತಿತ್ತು: ದಡ್ಡಗಾಡಿನ ನಡುವೆ ಕಳ್ಳಕಾಕರು ತಲೆಯೊಡೆಯುತ್ತಾರೆ! ಹುಲಿ ದಾರಿಗೆ ಅಡ್ಡನಿಂತು ಗಾಡಿಯೆತ್ತುಗಳ ಮೇಲೆ ಬೀಳುತ್ತದೆ! ಇತ್ಯಾದಿ ಇತ್ಯಾದಿ. ಆದರೆ ಆ ಹೆದರಿಕೆಯನ್ನು ನೂಕಿಬಿಡುತ್ತಿತ್ತು ಒಂದು ಮೊಂಡು ಧೈರ್ಯ: ಎರಡು ಗಾಡಿಗಳಿವೆ. ದೊಡ್ಡವರೆ ನಾಲ್ಕು ಜನರಿದ್ದಾರೆ! ಜೊತೆಗೆ ಹುಲಿ ಹಂದಿಗಳಿಗೂ ಹೆದರದೆ ಬೇಟೆಯಾಡುವ ಐಯ್ಯಪ್ಪ ಚಿಕ್ಕಪ್ಪಯ್ಯ ಇದ್ದಾರೆ! ಸುಮ್ಮನೆ ಬಿಟ್ಟಾರೆ  ಕಳ್ಳರನ್ನ. ಅಲ್ಲದೆ ನಮ್ಮ ಗಾಡಿಯೆತ್ತುಗಳೇನು ಸಾಮಾನ್ಯವೆ? ಅವು ಓಡಲು ತೊಡಗಿದರೆ ನಿಲ್ಲಿಸಲು ಯಾರಿಗೆ ಸಾಧ್ಯ. ಅದರಲ್ಲಿಯೂ ನಮ್ಮ ಎತ್ತು ‘ಮುರ್ಗಿ’ಯ ಕೋಡುಗಳು ಎಷ್ಟು ಚೂಪು, ತಿವಿದರೆ ಹೊಟ್ಟೆ ಬಗೆದು ಹೋಗುತ್ತದೆ! ಹೀಗೆ ಬಾಲಿಶವಾದ ಭಯವನ್ನು ಅದಕ್ಕಿಂತಲೂ ಬಾಲಿಶವಾದ ಧೈರ್ಯವನ್ನೂ ಅನುಭವಿಸುತ್ತಿದ್ದ ನಮ್ಮನ್ನು ನಿದ್ದೆ ತಾಯಿ ತನ್ನ ರಕ್ಷೆಯ ಮಡಿಲಿಗೆ ಹಾಕಿಕೊಂಡಳು.

ಬೆಳಗಾಗುವಾಗ ಗಾಡಿಗಳು ತೂದೂರು ಕಟ್ಟೆಗೆ ಬಂದಿದ್ದುವು. ತೂದೂರು ತುಂಗಾ ನದಿಯ ದಡದಲ್ಲಿದೆ. ಆಗ ಊರೆಂದರೆ ಹುಲ್ಲಿನ ಮನೆಗಳಷ್ಟೆ! ಆ ಮನೆಗಳ ನಡುವೆ ಹೊಳೆಗೆ ಇಳಿಯುತ್ತಿದ್ದ ದಾರಿಯಲ್ಲಿ ಗಾಡಿಗಳು ನಡೆದು ಸುವಿಸ್ತಾರವಾಗಿ ಹಬ್ಬಿದ ಮಳಲ ರಾಶಿಯ ಬೇಸಗೆಯ ಹೊಳೆಯ ದಡದ ಅಂಚಿನಲ್ಲಿ ಹುಲುಸಾಗಿ ಬೆಳೆದಿದ್ದ ಹೊಂಗೆಯ ಹೆಮ್ಮರಗಳ ನೆರಳಿನಲ್ಲಿ ಬೀಡುಬಿಟ್ಟುವು.

ಹೊಳೆ, ಮಳಲು, ಹೊಂಗೆಯ ತೋಪು ನಮಗೇನು ಹೊಸದಲ್ಲವಾಗಿದ್ದರೂ ಕುಪ್ಪಳಿ-ತೀರ್ಥಳ್ಳಿಯ ಹತ್ತು-ಹನ್ನೆರಡು ಮೈಲಿಯ ವಲಯದಿಂದ ಅದುವರೆಗೂ ಹೊರಗೇ ಹೋಗದಿದ್ದ ನಮಗೆ ಆ ‘ದೂರದ ಪರ ಊರಿನ’ ಸನ್ನಿವೇಶದಲ್ಲಿ ಅದು ನೂತನಾನುಭವವಾಗಿತ್ತು. ಗಾಡಿ ಬಿಟ್ಟಮೇಲೆ ಅಡುಗೆಯವರೂ ಆಳುಗಳೂ ಕಾಫಿತಿಂಡಿ ಮಾಡುತ್ತಿದ್ದಾಗಲೆ ನಾವು ಸುಮಾರು ಒಂದು ಕಾಲು ಫರ್ಲಾಂಗು ದೂರದಲ್ಲಿದ್ದ ಹೊಳೆ ಅಂಚಿನ ನೀರಿಗೆ ನುಣ್ಮಳಲ ಮೇಲೆ ನೆಗೆದೋಡಿ ಹೋಗಿ ಮುಖ ತೊಳೆಯುವ ಶಾಸ್ತ್ರ ಮಾಡಿದೆವು. ಮುಂದಿನ ದಿನ ಶಿವಮೊಗ್ಗದಲ್ಲಿ ನಮಗೆ ‘ಪಬ್ಲಿಕ್’ ಪರೀಕ್ಷೆ ಇರುವ ವಿಷಯ ನಮ್ಮ ಪ್ರಜ್ಞೆಯಲ್ಲಿದ್ದರೆ ತಾನೆ? ಆ ಪರೀಕ್ಷೆ ಇನ್ನೂ ಇಪ್ಪತ್ತನಾಲ್ಕು ಮೈಲಿಯ ಮ್ತು ಇಪ್ಪತ್ತಾರು ಘಂಟೆಯ ಸುದೂರದಲ್ಲಿದ್ದು ನಾವಿನ್ನೂ ಅದರ ಗುರುತ್ವಾಕರ್ಷಣೆಗೆ ಒಳಗಾಗದ ಲಘು ಹೃದಯಿಗಳಾಗಿಯೆ ನಲಿದೆವು!

ನಾವು ಗಾಡಿ ಬಿಟ್ಟ ಸ್ಥಳ ಅನೇಕರು ಗಾಡಿ ಬಿಡುವ ಮಾಮೂಲು ಸ್ಥಳವೆ ಆಗಿದ್ದು, ಒಲೆಗಳಿಗಾಗಿ ಯಾರುಯಾರೊ ಇಟ್ಟಿದ್ದ ಮೂರು ಮೂರು ಕರಿಯ ಕಲ್ಲುಗುಂಡುಗಳಿದ್ದು, ಅವುಗಳ ಮೇಲೆಯೆ ಪಾತ್ರೆಗಳನ್ನಿಟ್ಟು ಅಡುಗೆ ಮಾಡಿದ್ದರು. ಎತ್ತುಗಳಿಗೆ ಹುರುಳಿ ಬೇಯಿಸಲು ಚಿಮಿಣಿ ಎಣ್ಣೆ ಡಬ್ಬಗಳನ್ನಿಟ್ಟು ಬೆಂಕಿಹಾಕಿದ್ದರು. ಐಯ್ಯಪ್ಪ ಚಿಕ್ಕಪ್ಪಯ್ಯ ಪರೀಕ್ಷೆಗೆ ಓದಬೇಕಾದ ಪಾಠಗಳನ್ನು ಓದಿಕೊಳ್ಳಲು ಹೇಳಿದರೂ ನಾವು ಯಾರೂ ಆ ದೂರದ ಅಪಾಯವನ್ನು ಮನಸ್ಸಿಗೆ ಹಾಕಿಕೊಳ್ಳಲೆ ಇಲ್ಲ. ‘ಅಷ್ಟು ದೂರ ಇರುವ ಅಪಾಯಕ್ಕೆ ಇವರು ಇಷ್ಟು ಬೇಗನೆ ಏಕೆ ಸುಮ್ಮನೆ ದಿಗಿಲುಪಡುತ್ತಾರೆ?’ ಎಂಬುದು ನಮ್ಮ ಮನಸ್ಸು. ಆದ್ದರಿಂದ ಹೊಳೆಗೆ ಹೋಗಿ, ಮೀಯುವ ನೆವದಿಂದ ತೆಳ್ಳೆನೀರಿನಲ್ಲಿಯೆ ಚೆನ್ನಾಗಿ ಈಜಾಡಿ ಬಂದೆವು. ಊಟಕ್ಕೆ ಎಲೆಗಳನ್ನು ಮಳಲಮೇಲೆಯೆ ಹರಡಿಕುಳಿತೆವು. ಹಾಗೆ ಬಯಲಿನಲ್ಲಿ ಉಣ್ಣುವ ಅಸಂಪ್ರದಾಯವೇ ನಮಗೊಂದು ಖುಷಿಯಾಗಿತ್ತು, ಮೂರು ಹೊತ್ತೂ ಮನೆಯೊಳಗೇ ಸಂಪ್ರದಯದ ಶಿಸ್ತಿಗೆ ಒಳಪಟ್ಟೇ ಉಂಡಿದ್ದವರಿಗೆ. ಸಾಯಂಕಾಲವಾಗುತ್ತಿದ್ದಂತೆಯೆ ಪಾತ್ರೆ ಪರಟೆ ಸಾಮಾನುಗಳನ್ನೆಲ್ಲ ತೊಳೆದು ಮಾಡಿ ತುಂಬಿಕೊಂಡು ಶಿವಮೊಗ್ಗೆಗೆ ಗಾಡಿ ಕಟ್ಟಿದರು.

ಹಳ್ಳಿಮುಕ್ಕರಾಗಿದ್ದ ನಮಗೆ ಶಿವಮೊಗ್ಗೆ ದೊಡ್ಡ ಷಹರು! ಗಾಡಿಗಳು ನಗರದ ಸುದೀರ್ಘವೆಂದು ತೋರಿದ ರಸ್ತೆಗಳಲ್ಲಿ ಚರಿಸಿ ಸೇತುವೆಯ ಬಳಿ ಹೊಳೆಯ ದಂಡೆಯ ಮೇಲಿದ್ದ ಕೋರ್ಪಾಲಿಸ್ ಛತ್ರದಲ್ಲಿ ನೊಗ ಕಳಚಿದುವು. ಆ ಛತ್ರ ಆ ಹೆಸರಿನ ಯಾವನೊ ವಿದೇಶೀಯ ಕಟ್ಟಿಸಿದ್ದಂತೆ. ಅದರ ಎರಡು ಕೊಟಡಿಗಳನ್ನು ನಮಗೆ ಬಿಟ್ಟುಕೊಡಲಾಗಿತ್ತು. ನಮ್ಮಂತೆಯೆ ಎಷ್ಟೋ ತರತರಹದ ಜನರು ಅಲ್ಲಿ ತಂಗಿದ್ದರು. ಆ ಜನ ಮತ್ತು ಉಡುಗೆತೊಡುಗೆಯ ವೈವಿಧ್ಯಕ್ಕೆ ನಮ್ಮ ಕಣ್ಣು ಬೆರಗುಗೊಂಡಿದ್ದುವು.

ಊಟಗೀಟ ಎಲ್ಲ ಪೂರೈಸಿ ನಾವೆಲ್ಲರೂ ಪರೀಕ್ಷೆಗೆ ಸಿದ್ಧರಾದೆವು. ನಾವೆಲ್ಲ ಅಂದರೆ-ವೆಂಕಟಯ್ಯ, ಹಿರಿಯಣ್ಣ, ಸೀತಮ್ಮ, ಕೂಡಿಗೆ ಗುರಪ್ಪ ಮತ್ತು ನಾನು ಎಂದು ನೆನಪು. ಐಯ್ಯಪ್ಪ ಚಿಕ್ಕಪ್ಪಯ್ಯ-ಉಳಿದೆಮಗೆ ಸಂಪೂರ್ಣ ಅಪರಿಚಿತವಾಗಿತ್ತು ಆ ಊರು-ನಮ್ಮನ್ನೆಲ್ಲ ಪರೀಕ್ಷಾ ಸ್ಥಾನವಾಗಿದ್ದ ಹೈಸ್ಕೂಲು ಕಟ್ಟಡಕ್ಕೆ ಕರೆದೊಯ್ದರು. ನಮ್ಮ ಹಾಲ್‌ಟಿಕೆಟುಗಳನ್ನು ನೋಡಿ ನಮ್ಮ ಸೀಟುಗಳ ನಂಬರಿದ್ದ ಹಾಲ್‌ಗೆ ಕರೆದೊಯ್ದು ನಾವು ಮಾಡಬೇಕಾದುದನ್ನೆಲ್ಲ ವಿವರಿಸಿದರು. ಯುದ್ಧಕ್ಕೆ ಸಜ್ಜುಗೊಂಡು ಕುಳಿತೆವು. ತೀರ್ಥಹಳ್ಳಿಲ್ಲಿ ನಡೆಯುತ್ತಿದ್ದ ಚಿಕ್ಕಪರೀಕ್ಷೆಗಳ ಪರಿಚಯವಿದ್ದುದರಿಂದ ನಮಗೆ ದೊಡ್ಡ ಪರೀಕ್ಷೆಯ ವಿಚಾರದಲ್ಲಿ ಹೇಳಿಕೊಳ್ಳುವಂತಹ ವಿಶೇಷ ಉದ್ವೇಗದ ಭಾವನೆ ಇರಲಿಲ್ಲ. ಅದರಲ್ಲಿಯೂ ನಮಗೆ ಅಥವಾ ನನಗೆ ಪರೀಕ್ಷೆಯಲ್ಲಿ ಪಾಸಾಗುವ ಅಥವಾ ಫೈಲಾಗುವ ವಿಚಾರದಲ್ಲಿ ಪೂರ್ವಾಸಕ್ತಿಯೇನೂ ಇರಲಿಲ್ಲವೆಂದು ತೋರುತ್ತದೆ, ಈ ದೂರಕ್ಕೆ. ಒಂದು ಫುಟ್‌ಬಾಲ್ ಆಟದಲ್ಲಿ ಭಾಗವಹಿಸಿದ್ದರೆ ಹೇಗೋ ಹಾಗೆ ಇದ್ದಂತೆ ತೋರುತ್ತದೆ ನನ್ನ ಮನಸ್ಸು.

ಮೂರು ನಾಲ್ಕು ದಿವಸಗಳು ಪರೀಕ್ಷೆ ನಡೆಯಿತು. ಆಮೇಲೆ ನಮ್ಮನ್ನು ಊರು ನೋಡಲು ಕರೆದುಕೊಂಡು ಹೋದರು. ಮೊದಲು ರೈಲ್ವೇ ಸ್ಷೇಷನ್ನಿಗೆ ಹೋದೆವು. ಆಗ ಶಿವಮೊಗ್ಗೆಯ ಊರಾಗಲಿ ಅಥವಾ ಅದರ ರೈಲ್ವೆ ಸ್ಟೇಷನ್ನಾಗಲಿ ಅಸಾಧಾರಣವಾಗಿರಲಿಲ್ಲ. ಅಲ್ಲದೆ ಶಿವಮೊಗ್ಗವೆ ತುತ್ತತುದಿಯ ನಿಲ್ದಾಣವೂ ಆಗಿತ್ತು. ಈಗ ಅದನ್ನು ಹಳೇ ಸ್ಟೇಷನ್ ಎನ್ನುತ್ತಾರೆ. ಅಧೃಏ ಣಂಘೇ ಅಧ ಆಣೂಬೌ ಆದ್ಭುತವಾಗಿತ್ತು. ಪಠ್ಯಪುಸ್ತಕದಲ್ಲಿ ‘ಹೊಗಯ ಗಾಡಿ’ಯು ನೋಡು ಹೋಗುತ್ತಿದೆ ಬೇಗ ಎಂಬ ಪದ್ಯವಿದ್ದು ಅದಕ್ಕೊಂದು ಹೊಗೆ ಉಗುಳುತ್ತಾ ಗಾಡಿಗಳ ಸಾಲನ್ನು ಎಳೆಯುತ್ತಿರುವ ಒಂದು ಎಂಜಿನ್ನಿನ ಚಿತ್ರವಿತ್ತು. ಅದೇ ರೈಲಿನ ವಿಷಯದಲ್ಲಿ ನಮ್ಮ ಜ್ಞಾನಸರ್ವಸ್ವವಾಗಿತ್ತು. ಆದರೆ ಇಲ್ಲಿ ಸಾಕ್ಷಾತ್ ರೈಲನ್ನೇ ನೋಡಿ ನಮ್ಮ ಬೆರಗು ಮೇರೆಮೀರಿತ್ತು. ಆಗಿನ್ನೂ ಮೋಟಾರುಕಾರುಗಳೂ ಅತ್ತಕಡೆ ಬಂದಿರಲಿಲ್ಲ. ರೈಲು ನಮ್ಮ ಬದುಕಿನಲ್ಲಿನಾವು ಕಂಡ ಮೊತ್ತ ಮೊದಲ ಪಾಶ್ಚಾತ್ಯ ವಿಜ್ಞಾನದ ಮಹಿಮೆಗೆ ತೆರೆದ ಬೆಳಕಂಡಿಯಾಗಿತ್ತು.

ನನಗೆ ನೆನಪಿರುವ ಮತ್ತೊಂದು ‘ಖಂಡೇರಾಯರ ಆನಂದ ಭವನ!’ ಹೋಟೆಲ್‌ ಎಂದು ಯಾರೂ ಭಾವಿಸದಿರಿ. ಅದೊಂಧು ಮನರಂಜನೆಯ ಸ್ಥಾನವಾಗಿದ್ದು ಆಗಿನ ಅಲ್ಲಿಯ ಪ್ರಸಿದ್ಧ ವರ್ತಕರೊಬ್ಬರ ಮನೆಯೊಳಗಣ ಅಂಗಣದಂತಿತ್ತು. ಅದು ಅತ್ಯಂತ ಸ್ಥೂಲಗ್ರಾಮೀಣಾಭಿರುಚಿಯ ವರ್ಣಮಯತೆಯಿಂದ ಕೂಡಿದ್ದರೂ ಸಂಪೂರ್ಣ ಗ್ರಾಮೀಣರಾಗಿದ್ದ ನಮಗಂತೂ ಇಂದ್ರನಾಸ್ಥಾನವೆಂಬಂತೆ ಶೋಭಿಸಿತ್ತು! ಅಂಗಳದ ನಡುವೆ ಕಾರಂಜಿ. ಅದರ ಕುಳ್ಳುಗೋಡೆಗಳಿಗೆ ಬಣ್ಣ ಹಚ್ಚಿತ್ತು. ಅದರಲ್ಲಿ ಬಣ್ಣದ ಮೀನುಗಳೂ ಇದ್ದುವೇನೊ? ಗೋಡೆಗಳಿಗೆ ಜೇಡಿಮಣ್ಣಿನಿಂದ ಮಾಡಿ ಬಣ್ಣ ಬಳಿದಿದ್ದ ನಾನಾ ಪ್ರಾಣಿಗಳ ಮಂಡೆಗಳು. ಅಲ್ಲಲ್ಲಿ ತರತರದ ಬಣ್ಣ ಹಾಕಿದ ಕುಂಡಗಳಲ್ಲಿ ಹೂವಿನ ಹಸುರಿನ ಗಿಡಗಳು. ನಾವಂತೂ ಆ ಅಲ್ಪದಲ್ಲಿ ಭೂಮವನ್ನೇ ಸಂದರ್ಶಿಸಿದಂತೆ ಮಾರುಹೋಗಿದ್ದೆವು. ಆ ವರ್ತಕರು ಅದನ್ನು ಸ್ವಂತ ಸಂತೋಷಕ್ಕಾಗಿ ರಚಿಸಿಕೊಂಡಿದ್ದರೂ ತಮ್ಮ ಅಂಗಡಿಯ ಪ್ರಕಟಣೆಯ ಉದ್ದೇಶದಿಂದ ಅನ್ನು ಸಾರ್ವಜನಿಕರಿಗೆ ದಿನದ ಕ್ಲುಪ್ತ ಕಾಲದಲ್ಲಿ ತೆರೆಯುತ್ತಿದ್ದರಂತೆ. ಹಳ್ಳಿಗಳಿಂದ ಅಡಕೆ ಬತ್ತ ಇವುಗಳನ್ನು ತುಂಬಿಕೊಂಡು ಮಂಡಿಗಳಿಗೆ ಹಾಕಲು ಬಂದವರೆಲ್ಲ ‘ಖಂಡೇರಾಯರ ಆನಂದಭವನ’ ನೋಡಿಕಕೊಂಡು ಹೋಗಿ ತಮ್ಮತಮ್ಮ ಊರುಗಳಲ್ಲಿ ಅದನ್ನು ಬಣ್ಣಿಸುತ್ತಿದ್ದರು. ಅದನ್ನು ನೋಡಲು ಬಂದವರು ಅವರ ಅಂಗಡಿಯಲ್ಲಿಯೆ ಬಟ್ಟೆ ದಿನಸಿ ಎಲ್ಲವನ್ನು ಕೊಂಡುಕೊಳ್ಳುತ್ತಿದ್ದರು. ಹೀಗೆ ಖಂಡೇರಾಯರಿಗೆ ಕೀರ್ತಿಯೂ ಲಾಭವೂ ಎರಡೂ ಲಭಿಸಿ ಪರಾರ್ಥ ಸ್ವಾರ್ಥ ಎರಡಕ್ಕೂ ‘ಸಾಧನವಾಗಿತ್ತು’ ಆನಂದಭವನ!’

ಪರೀಕ್ಷೆಗಾಗಿ ನಾವು ಶಿವಮೊಗ್ಗಕ್ಕೆ ಕೈಕೊಂಡ ಗಾಡಿಪ್ರಯಾಣಕ್ಕಿಂತಲೂ ಅದನ್ನು ಮುಗಿಸಿ ಮನೆಗೆ ಹಿಂತಿರುಗಿದ ಮರುಪಯಣವೇ ತುಂಬ ಸ್ವಾರಸ್ಯವಾಗಿತ್ತು. ಪೇಟೆಯಲ್ಲಿ ತಿರುಗಾಡಿ ನಮ್ಮಲ್ಲಿದ್ದ ಅತಿಮಿತಿ ವಿತ್ತದಿಂದ ಏನೇನೋ ಸಣ್ಣಪುಟ್ಟ ಸಾಮಾನು ಕೊಳ್ಳುತ್ತಿದ್ದಾಗ ನಮ್ಮ ದೃಷ್ಟಿ ಒಂದು ವಿಶೇಷ ವಸ್ತುವಿನ ಮೇಲೆ ಬಿತ್ತು. ಗಾಂಧೀಸಿಗರೇಟು!

ಗಾಂಧೀಜಿಯ ಹೆಸರು ಹಳ್ಳಿಯ ಹುಡುಗರ ಕಿವಿಗೂ ಬೀಳುವಷ್ಟು ಅಗಲೆ ಹಬ್ಬಿತ್ತು. ಸ್ವದೇಶಿ ಎಂಬ ಮಾತೂ ಅರ್ಥಕ್ಕಿಂತಲೂ ಹೆಚ್ಚಾಗಿ ಭಾವಗೋಚರವಾಗುವಷ್ಟು ಪರಿಚಿತವಾಗಿ ಇತ್ತು. ಅದುವರೆಗೆ ನಾವು ಯಾರೂ ಸಿಗರೇಟು ಸೇದಿರಲಿಲ್ಲ; ಬೀಡಿ ಸೇದುವ ಚಟವೂ ಯಾರಿಗೂ ಇರಲಿಲ್ಲ. ಇತರರು ಸೇದುವ ಷೋಕಿಯನ್ನು ಕಂಡಿದ್ದೆವುಇ. ಕರುಬಿದ್ದುದೂ ಉಂಟು, ಬಹುಶಃ ಆದರೆ ಸ್ವದೇಶಿವಸ್ತುಗಳನ್ನು  ಉಪಯೋಗಿಸುವ ನಮ್ಮ ದೇಶಭಕ್ತಿ ಮೊತ್ತಮೊದಲು ಆ ಸಿಗರೇಟಿನ ಮೇಲೆ ಎರಗಬೇಕೆ? ಗಾಂಧೀ’ ಎಂಬ ವಿಶೇಷಣ ಇರದಿದ್ದರೆ ನಾವು ಅತ್ತ ಕಣ್ಣು ಹಾಕುತ್ತಿರಲಿಲ್ಲ. ಆದರೆ ದೇಶಸೇವೆಗೆ ಅಂಥ ಸುಲಭ ಅವಕಾಶ ಸಿಕ್ಕಿರುವಾಗ ಅದನ್ನು ಬಿಟ್ಟರೆ ನಾವು ದೇಶದ್ರೋಹಿಗಳಾಗುವುದಿಲ್ಲವೇ? ಸರಿ, ಒಬ್ಬೊಬ್ಬರು ಒಂದೊಂದೊ ಎರಡೆರಡೊ ಪ್ಯಾಕೆಟ್ಟುಗಳನ್ನು ಕೊಂಡೆವು. ಒಂದೊಂದು ಪ್ಯಾಕೆಟ್ಟಿನಲ್ಲಿ ಹತ್ತು ಸಿಗರೇಟುಗಳಿದ್ದರೂ ಬೆಲೆ ಮೂರೇ ಕಾಸು, ಎಷ್ಟು ಅಲ್ಪ ಖರ್ಚಿನಲ್ಲಿ ಗಾಂಧೀ ಸೇವೆ ಮಾಡುವ ಸದವಕಾಶ ದೊರಕಿತೆಂದರೆ ನಮಗೆಲ್ಲ ಹೆಮ್ಮೆಯೋ ಹೆಮ್ಮೆ. ನಮ್ಮ ರಾಷ್ಟ್ರಭಕ್ತಿಗಾಗಿ, ನಮ್ಮ ಮನೆಯಲ್ಲಿ ನಮ್ಮ ಉಪ್ಪರಿಗೆಯ ಶಾಲೆಯಲ್ಲಿ ವ್ಯಾಸರಾಯ ಐಗಳು ಸೇದಿ ಬಿಸುಟ ಬೀಡಿ ತುಂಡುಗಳಿಗೆ ಬಚ್ಚಲು ಒಲೆಯಲ್ಲಿ ಪ್ರಾಣದಾನ ಮಾಡಿ ಸೇದಿದಾಗ, ಕೆಮ್ಮಿಕೆಮ್ಮಿ ಸಿಕ್ಕಿಬಿದ್ದು, ಬೈಸಿಕೊಂಡು ಏಟು ತಿಂದಿದ್ದೆವು. ಈ ಶಿವಮೊಗ್ಗೆಯಲ್ಲಿ ಬೀಡಿಯ ತುಂಡುಗಳಲ್ಲ, ಇಡಿಯ ಬೀಡಿಗಳೂ ಅಲ್ಲ, ಬಹದ್ದೂರು ಸಿಗರೇಟುಗಳನ್ನೆ ಯಾರ ಬೆದರಿಕೆಯೂ ಇಲ್ಲದೆ ಸೇದಬಹುದಾದ ಸ್ವಾತಂತ್ರ್ಯ ಸಿದ್ದಿಯಾದ ನಮಗೆ, ಮಾಡಬಾರದ್ದು ಮಾಡಿ ಪಡುವ ಸುಖದಿಂದೊದಗುವ, ಖುಷಿಯೋ ಖುಷಿ! ಹಿರಿಯರಿಗೆ ನಾಮಹಾಕಿ ಪಡೆದ ಛಲದ ಸ್ವಾತಂತ್ರ್ಯದ ಪ್ರಥಮ ಫಲ!

ಬೈಗಾಗುತ್ತಿರಲು ಮರುಪಯಣಕ್ಕೆ ಗಾಡಿ ಕಟ್ಟಿದರು. ಅಂದು ಬೆಳ್ದಿಂಗಳ ರಾತ್ರಿ, ಊರುಬಿಟ್ಟು ಗಾಡಿಗಳು ನಿಬಿಡ ನಿರ್ಜನಾರಣ್ಯಗಳನ್ನು ಪ್ರವೇಶಿಸಿದುವು. ತಿಂಗಳ ಬೆಳಕು ಇರುಳನ್ನೂ ಹಗಲಾಗಿಸುವಷ್ಟರ ಮಟ್ಟಿಗಿತ್ತು. ನಾವು ಗಾಡಿಯಿಂದಿಳಿದು ಸ್ವಲ್ಪದೂರ ನಡೆದುಕೊಂಡು ಬರುತ್ತೇವೆ ಎಂದೆವು. ಹುಡುಗರ ಖುಷಿಗೆ ಅಡ್ಡಬರಲಿಲ್ಲ. ಐಯ್ಯಪ್ಪ ಚಿಕ್ಕಪ್ಪಯ್ಯ , ಸೀತಮ್ಮ, ಐಯಪ್ಪಗೌಡರು, ಆಳುಗಳೊಡನೆ ಗಾಡಿಗಳು ಮುಂದುವರಿದುವು. ಅವು ಮರೆಯಾಗುತ್ತಲೆ ನಾವು ಜೇಬುಗಳಿಂದ ಸಿಗರೇಟು ಪ್ಯಾಕುಗಳನ್ನು ತೆಗೆದೆವು. ವೆಂಕಟಯ್ಯ , ಹಿರಿಯಣ್ಣ, ಗುರಪ್ಪ, ನಾನು, ಡಿಸೋಜ (ಗುರಪ್ಪ ಕೂಡಿಗೆ ಮಣೆಗಾರೆರ ಮಗ, ಆತನೂ ನಮ್ಮನ್ನು ಕೂಡಿಕೊಂಡಿದ್ದ, ದಾರಿಯಲ್ಲಿ ಹೋಗುವಾಗಲೆ. ಡಿಸೋಜ ಹಲಸಿನಹಳ್ಳಿ ಬಾಬುನಾಯಕರ ಮಗ. ಕ್ಯಾಥೊಲಿಕ್‌ ಆಗಿ ಮತಾಂತರಗೊಂಡವರು. ಆತನೂ ತೀರ್ಥಹಳ್ಳಿಗೆ ಹೋಗುವವನಾಗಿದ್ದು, ಅಲ್ಲಿ ನಮ್ಮ ಸಹಪಾಠಿಯಾಗಿದ್ದರಿಂದ ನಮ್ಮ ಮರುಪಯಣದಲ್ಲಿ ಸಂಗಾತಿಯಾಗಿ ಕೂಡಿಕೊಂಡಿದ್ದ.)

ನಮ್ಮೆಲ್ಲರಿಗೂ ಅದು ಹೊಸ ಅನುಭವ. ನಶ್ಯಸೇದುವ ಅಭ್ಯಾಸ ನಮಗೇನೂ ಹೊಸತಾಗಿರಲಿಲ್ಲ. ಸೊಂಟಕ್ಕೆ ಉಡಿದಾರದಲ್ಲಿ ಜೋಡಿಸಿ ಕಟ್ಟಿದ್ದ ತಾಯಿತಿಯ ತಾಮ್ರ ಸುರುಳಿಯನ್ನು ಗುಟ್ಟಾಗಿ ತೆಗೆದೆಸೆದು (ಅದರ ಪವಿತ್ರತೆಯನ್ನು ಒಂದಿನಿತೂ ಲೆಕ್ಕಿಸದೆ!) ತಾಯಿತಿಯ ಅಂಡೆಗೆ ನಶ್ಯ ತುಂಬಿ ಇಟ್ಟು ಕೊಂಡು ಕದ್ದು ಸೇಯುತ್ತಿದ್ದ ನನಗೆ ಎಷ್ಟು ನಶ್ಯ ಮೂಗಿಗೇರಿಸಿದ್ದರೂ ಸೀನು ಬರುತ್ತಿರಲಿಲ್ಲ. ಆದರೆ ಸಿಗರೇಟು ಹೊಸ ಪರಿಚಯ. ಕಾಡಿನ ನಡುವೆ ಅದರ ನಿಃಶಬ್ದತೆಯನ್ನು ಭೇದಿಸುತ್ತಾ ಶುರುವಾಯಿತು ಕೆಮ್ಮಿನ ಫಿರಂಗಿ ದಾಳಿ!

ಸಿಗರೇಟಿನ ಹೊಗೆ ಶ್ವಾಸಕೋಶಕ್ಕೆ ಹೋಗಿ ನಾವು ನಾಲ್ಕಾರು ಹುಡುಗರೂ ಒಮ್ಮೆಗೆ ಕೆಮ್ಮತೊಡಗಿದುದು ಆ ಕಾಡಿನ ನೀರವತೆಯಲ್ಲಿ ತುಸು ಮುಂದೆ ಹೋಗುತ್ತಿದ್ದ ಗಾಡಿಯಲ್ಲಿದ್ದವರಿಗೆ ಅದೃಷ್ವವಶಾತ್ ಕೇಳಿಸಲಿಲ್ಲವೆಂದು ತೋರುತ್ತದೆ. ಬಹುಶಃ ಗಾಡಿಗಳು ಆ ರಸ್ತೆಯಲ್ಲದ ರಸ್ತೆ ಕೊರಕಲಿನಲ್ಲಿ ಜಟಕಾ ಹೊಡೆದು ಮಾಡುತ್ತಿದ್ದ ಸದ್ದು ನಮ್ಮ ಸಾಹಸಕ್ಕೆ ರಕ್ಷಾಯವನಿಕೆಯಾಯಿತೆಂದು ತೋರುತ್ತದೆ.

ಕೆಮ್ಮಿ ಕೆಮ್ಮಿ ಎದೆ ಹಿಡಿದುಕೊಂಡು ತೊಂದರೆಟ್ಟರೂ ಯಾರೂ ಹಿಂಜರಿಯಲಿಲ್ಲ. ಹಿಂಜರಿಯುವುದು ಹೇಡಿತನವೆಂದೇ ನಮ್ಮ ಭಾವನೆ. ‘ಥೂ! ಕೈಲಾಗದವನೆ!’ ಎಂದನ್ನಿಸಿಕೊಳ್ಳಬಾರದು ಎಂಬ ಪೌಉಷದ ಹಟದಿಂದ ಸೇದಿದೆವು, ಸ್ಪರ್ಧೆಯಲ್ಲಿ ಸೋಲಬಾರದೆಂಬಂತೆ. ಅಲ್ಲದೆ ಅಷ್ಟು ಹಣ ಖರ್ಚುಮಾಡಿಕೊಂಡು ಕೊಂಡದ್ದನ್ನು ವ್ಯರ್ಥವಾಗಿ ಎಸೆದುಬಿಡುವುದೇ? ಉಪಯೋಗಿಸಿಯೇ ಪೂರೈಸಿಬಿಡಬೇಕೆಂದು ಮುಂದುವರಿಸಿದೆವು. ಸ್ವಲ್ಪ ಅಭ್ಯಾಸವಾದ ಮೇಲೆ ಶ್ವಾಸಕೋಶಕ್ಕೆ ಹೋಗದಂತೆ ಹೊಗೆ ಬಿಡುವುದನ್ನು ಕಲಿತೆವು. ಅಷ್ಟೇ ಅಲ್ಲ, ಒಂದು ಸಿಗರೇಟು ಮುಗಿದರೆ ಮತ್ತೊಂದನ್ನು ಹೊತ್ತಿಸಿದೆವು! ಹೀಗೆ ಕೆಮ್ಮುತ್ತಾ ಸೇಯುತ್ತಾ ಹರಟುತ್ತಾ ಒಬ್ಬರನ್ನೊಬ್ಬರು ಮೂದಲಿಸುತ್ತಾ ಹುರಿ ದುಂಬಿಸುತ್ತಾ ಎರಡು ಮೂರು ಮೈಲಿ ಎಲ್ಲಕ್ಕು ಬೇಗೆ ವ್ಯಾಪಿಸಿದಂತಾಯಿತು. ಯಾರಾದರೂ ಒಬ್ಬರು ಹಾದಿ ಹಾಕಿಕೊಟ್ಟಿದ್ದರೆ ಹಾಳು ಸಿಗರೇಟನ್ನು ಬಿಸಾಡಬಹುದಿತ್ತಲ್ಲಾ ಎಂದು ಒಬ್ಬೊಬ್ಬರಿಗೂ ಅನ್ನಿಸತೊಡಗಿದ್ದರೂ ಗುಟ್ಟು ಬಿಟ್ಟುಕೊಟ್ಟು ಸೋಲೊಪ್ಪಿಕೊಳ್ಳಲು ಮನಸ್ಸು ಯಾರಿಗೂ ಇದ್ದಂತೆ ತೋರಲಿಲ್ಲ. ಕಡೆಗೆ, ನಮ್ಮಲ್ಲೊಬ್ಬ ಗೊದಗೊದನೆ ವಾಂತಿ ಮಾಡಿಕೊಂಡುಬಿಟ್ಟ! ಕಣ್ಣಿಂದ ನೀರು ಸುರಿಯಿತು! ಬಾಯಿ ತೊದಲಿತು! ರಸ್ತೆಯ ಮೋರಿಯ ಮೇಲೆ ತಲೆ ಹಿಡಿದುಕೊಂಡು ಬಾಗಿ ಕುಳಿತುಬಿಟ್ಟ!

ಎಲ್ಲರಿಗೂ ಅದೇ ಬೇಕಾಗಿತ್ತು. ಅಷ್ಟೇ ಸಾಕಾಯಿತು. ತುಂಬ ಸಹಾನುಭೂತಿಯಿಂದ ಅವನ ಬಳಿ ಸಾರಿ ವಿಚಾರಿಸಿದೆವು. ಅವನು ನೀರು ಬೇಕು ಎಂದರೆ ಅಲ್ಲಿ ನೀರು ಎಲ್ಲಿಂದ ತರುವುದು? ಬೇಸಗೆಯಾದ್ದರಿಂದ ದಡ್ಡ ಹಳ್ಳಗಳಲ್ಲಿ ಹೊರತು ನೀರಿರುವುದಿಲ್ಲ. ಅತ್ತ ಇತ್ತ ಕಾಡಿನ ಅಂಚಿನಲ್ಲಿ ಓಡಿಯಾಡಿದೆವು. ಕಡೆಗೆ ಗಾಡಿಯಲ್ಲಿ ನೀರು ಇದೆ; ಎಲ್ಲರೂ ಬೇಗ ಬೇಗ ನಡೆದು ಗಾಡಿ ಹಿಡಿಯೋಣ ಎಂಬ ಒಬ್ಬನ ಸಲಹೆಗೆ ಸುಲಭವಾಗಿ ಸರ್ವರ ಸಮ್ಮತಿ ದೊರೆಯಿತು. ಸಿಗರೇಟು ಪ್ಯಾಕುಗಳನ್ನು ಏನು ಮಾಡುವುದು? ಐಯ್ಯಪ್ಪ ಚಿಕ್ಕಪ್ಪಯ್ಯಗೆ ಗೊತ್ತಾದರೆ? ಪ್ಯಾಕುಗಳನ್ನು ಹೊರ ತೆಗೆದು ಸಿಗರೇಟುಗಳನ್ನೆಲ್ಲ ಮುರಿದು ಹಿಸುಗಿ ದಾರಿಯ ಪಕ್ಕದ ಮುಟ್ಟುಗಳಿಗೆ ಎಸೆದೆವು!

ಗಾಡಿಗಳನ್ನು ಸಮೀಪಿಸಿ, ನೀರು ಕೇಳಿ, ಕುಡಿದೆವು. ಅಲ್ಲದೆ ಸಿಗರೇಟು ಸೇದಿದ ವಾಸನೆ ಗೊತ್ತಾಗಬಾರದೆಂದು ಬಾಯಿ ಮುಕ್ಕಳಿಸಿದೆವು. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ನಾವು ಯಾರೂ ಅಯ್ಯಪ್ಪ ಚಿಕ್ಕಪ್ಪಯ್ಯ ಕುಳಿತಿದ್ದ ಗಾಡಿಗೆ ಹತ್ತಲಿಲ್ಲ. ಸ್ನೇಹಿತರೆಲ್ಲ ಒಂದೇ ಗಾಡಿಯಲ್ಲಿ ಕುಳಿತುಕೊಂಡು ಸಂತೋಷವಾಗಿ ಹರಟುತ್ತಬರುತ್ತೇವೆ ಎಂದು ಹೇಳಿ ಆ ಗಾಡಿಯಲ್ಲಿದ್ದ ಇತರರನ್ನು ಐಯಪ್ಪ ಚಿಕ್ಕಪ್ಪಯ್ಯ ಇದ್ದ ಗಾಡಿಗೇ ಹೋಗುವಂತೆ ಮಾಡಿ, ಗಾಡಿ ಹತ್ತಿದೆವು. ಎಷ್ಟು ಸೋತಿದ್ದೆವು ಎಂದರೆ ತುಸು ಹೊತ್ತಿನಲ್ಲಿಯೇ ಗಾಡಿಯೊಳಗೆ ಸಂಪೂರ್ಣ ನಿಃಶಬ್ದತೆ ನೆಲೆಸಿತು, ಬಹುಶಃ ಗೊರಕೆ ವಿನಾ!

ಮುಂದಿನ ನಮ್ಮ ಪ್ರಯಾಣ ಹೆಚ್ಚೇನೂ ವಿಶೇಷವಿಲ್ಲದೆ ಮನೆ ಸೇರುತ್ತಿತ್ತೆಂದು ತೋರುತ್ತದೆ. ಆದರೆ ಬೆಳಗಾಗುವ ಹೊತ್ತಿಗೆ ಗಾಡಿಗಳು ತೂದೂರು ಕಟ್ಟೆಯ ಹೊಳೆಯ ಮಳಲಿಗೆ ಸೇರಿ ಬೀಡು ಬಿಟ್ಟಾಗ ನಮ್ಮಲ್ಲಿ ಯಾರಿಗೋ-ಬಹುಶಃ ದೇವಂಗಿ ವೆಂಕಟಯ್ಯ ಇಲ್ಲವೆ ಹಿರಿಯಣ್ಣನಿಗೆ ಇರಬಹುದು-ಬೇಗ ಮನೆ ಸೇರುವ ಒಂದು ದಾರಿ ಹೊಳೆಯಿತು.

ಗಾಡಿಗಳು ಹಗಲೆಲ್ಲ ತೂದೂರಿನ ಹೊಳೆಮಳಲ ಬೀಡಿನಲ್ಲಿ ಉಳಿದು ಬೈಗಾದ ಮೇಲೆ ಅಲ್ಲಿಂದ ಹೊರಟು, ಇರುಳೆಲ್ಲ ಪಯಣಗೈದು ಮರುದಿನ ಪ್ರಾತಃಕಾಲ ಮನೆ ಸೇರುತ್ತಿದ್ದುವು. ನಾವು ಹೊಳೆದಾಟಿ ಕಾಲುದಾರಿಯಲ್ಲಿ ಕಾಡುಗಳ ನಡುವೆ ನಡೆದು ಬಿಟ್ಟರೆ ಅಂದೆ ಮಧ್ಯಾಹ್ನದ ಹೊತ್ತಿಗೆ ಮನೆ ಸೇರಬಹುದು ಎಂದು ಗೊತ್ತಾಯಿತು. ಹೋಗುವ ದಾರಿಯಲ್ಲಿ ‘ಸೋಮಾರಸಂತೆ ಶಂಕರಭಟ್ಟರ ಮನೆ’ ಸಿಗುತ್ತದೆಂದೂ ಸಾಧ್ಯವಾದರೆ ಅಲ್ಲಿ ಊಟ ಕತ್ತರಿಸಬಹುದೆಂದೂ ಗೊತ್ತಾಯಿತು. ನಮಗೂ ಗಾಡಿಯಲ್ಲಿ ಕೂತೂ ಕೂತೂ ಕಾಲು ಮರಗಟ್ಟಿದಂತಾಗಿತ್ತು. ಸರಿ,  ಹುಡುಗರಷ್ಟೂ ಹೊರಟೆಬಿಟ್ಟೆವು , ಮೊಳಕಾಲೆತ್ತರ ನೀರಿದ್ದ ದಾಟುದಾಣದಲ್ಲಿ ಕಲ್ಲಿಂದ ಕಲ್ಲಿಗೆ ಕುಪ್ಪಳಿಸಿ ನೆಗೆಯುತ್ತಾ ಹೊಳೆ ಹಾದು ಆಚೆಯ ದಡ ಸೇರಿ, ದಟ್ಟ ಕಾಡಿನ ಕಾಲುದಾರಿಯಲ್ಲಿ ಮುಂಬರಿದೆವು.

ಶಂಕರಭಟ್ಟರು ಕುಪ್ಪಳಿಯ ಹತ್ತಿರ ಇರುವ ತಟ್ಟಾಪುರ ರಾಮಭಟ್ಟರ ಅಣ್ಣಂದಿರಂತೆ, ಕುಪ್ಪಳಿ ಮತ್ತು ದೇವಂಗಿ ರಾಮಣ್ಣಗೌಡರಿಬ್ಬರಿಗೂ ಬೇಕಾದವರು. ಅಡಕೆ ವ್ಯಾಪಾರ ಇತ್ಯಾದಿ ಲೇವಾದೇವಿಯಲ್ಲಿ ಅವರ ಸಂಬಂಧ ಹೆಚ್ಚಿನದು. ಶಂಕರಭಟ್ಟರ ಮನೆ ಕುಪ್ಪಳಿ ದೇವಂಗಿಯಂತಹ ಒಂದು ಮನೆಯ ಹಳ್ಳಿ: ಚೌಕಿ, ಅಂಗಳ, ಜಗಲಿ ಎಲ್ಲವೂ ಒಂದೇ ನಮೂನೆ. ನಮ್ಮ ಗುಂಪು ತುಸು ಸಂಕೋಚದಿಂದಲೆ ಅವರ ಮನೆ ಹೆಬ್ಬಾಗಿಲ ಬಳಿ ಸುಳಿದಾಗ ನಮ್ಮನ್ನು ವಿಶ್ವಾಸದಿಂದಲೆ ಒಳಗೆ ಕರೆದು ಚೌಕಿಯಲ್ಲಿದ್ದ ಬೆಂಚುಗಳ ಮೇಲೆ ಕೂರಿಸಿ, ಮಾತಾಡಿಸಿ, ಕಾಫಿ ಕೊಟ್ಟರು. ಅವರಿಗೆ ವಿಶೇಷವಾಗಿ ದೇವಂಗಿ ರಾಮಣ್ಣಗೌಡರಂತಹ ದೊಡ್ಡ ಮನುಷ್ಯರ ಮಕ್ಕಳು ಬಂದಿದ್ದಾರಲ್ಲಾ ಎಂದು ದಾಕ್ಷಿಣ್ಯದ ವಿಶ್ವಾಸ ಆದ್ದರಿಂದ, ಆಗಲೇ ಊಟದ ಹೊತ್ತೂ ಬಳಿ ಸಾರುತ್ತಿದ್ದುದರಿಂದ, ನಮ್ಮನ್ನೆಲ್ಲ ಊಟಮಾಡಿಕೊಂಡೇ ಹೋಗಲು ಹೇಳಿದರು. ದೇವಂಗಿಯ ದೂರವನ್ನು ಹೇಳಿ, ನಾವು ಅಲ್ಲಿಗೆ ತಲುಪುವ ವೇಳೆಗೆ ಬಹಳ ಹೊತ್ತಾಗುತ್ತದೆ ಎಂದೂ ಬುದ್ಧಿವಾದ ಹೇಳಿದರು. ಒಪ್ಪಿದೆವು.

ನಮ್ಮ ಶ್ರೀಮಂತಿಕೆ ದೊಡ್ಡ ಮನುಷ್ಯತನ ಏನಿದ್ದರೂ ನಾವು ಶೂದ್ರರಾದುದರಿಂದ ನಮ್ಮನ್ನು ಬ್ರಾಹ್ಮಣರು ಕೂರುವ ಜಗಲಿಗೆ ಹೇಗೆತಾನೆ ಕರೆದಾರು? ಚೌಕಿಯ ಕೆಳ ಜಗಲಿಯಲ್ಲಿಯೆ, ಹೊಲೆ ಮಾದಿಗ ಮೊದಲಾದ ಅಸ್ಪೃಶ್ಯರು ಪ್ರವೇಶಿಸದ, ಆದರೆ ಒಕ್ಕಲಿಗ ಮೊದಲಾದ ಜಾತಿಯವರು ಪ್ರವೇಶಿಸಬಹುದಾದ ವಲಯದಲ್ಲಿಯೆ ನಾವು ಕುಳಿತು ನಮ್ಮ ನಮ್ಮಲ್ಲಿಯೆ ಹರಟೆ ಹೊಡೆದೆವು. ಅವರ ಮನೆಯಲ್ಲಿ ನಮ್ಮ ವಯಸ್ಸಿನ ಹುಡುಗರಾರೂ ಇರಲಿಲ್ಲವೋ? ಅಥವಾ ಇದ್ದರೂ ಶೂದ್ರ ಸಂಪರ್ಕ ನಿಷಿದ್ಧವಾದುದರಿಂದ ಬರಲಿಲ್ಲವೋ ಅಂತೂ ಯಾವ ಮಾಣಿಯೂ ನಮ್ಮೊಡನೆ ಬೆರೆತು ಮಾತಾಡಿದಂತೆ ನನಗೆ ನೆನಪಿಲ್ಲ.

ಹಾರುವರ ಮನೆಯ ಊಟಕ್ಕೆ ಕಾದುಕಾದು ಶೂದ್ರನ ಗೋಣು ಉದ್ದವಾಯ್ತಂತೆ! ಎಂಬರ್ಥ ಬರುವ ಒಂದು ಗಾದೆ ಇರುವಂತೆ ನೆನಪು. ನಮಗೂ ಹಾಗೆ ಆಯಿತು. ಬ್ರಾಹ್ಮಣರ ಸ್ನಾನ ಪೂಜೆ ಊಟ ಎಲ್ಲ ಮುಗಿದಮೇಲೆ ತಾನೆ ಶೂದ್ರರಿಗೆ ಅವರ ಪ್ರಸಾದ ದೊರೆಯಬಲ್ಲುದು? ಅದಕ್ಕೆ ಮುಂಚೆ ಊಟ ಹಾಕಿದರೆ ಶೂದ್ರನ ಎಂಜಲನ್ನು ತಿಂದಂತಾಗುವುದಿಲ್ಲವೆ? ಈಗ ಊಟಕ್ಕೆ ಏಳಿಸುತ್ತಾರೆ, ಆಗ ಊಟಕ್ಕೆ ಏಳಿಸುತ್ತಾರೆ ಎಂದು ಕಾದುಕಾದು ಸಾಕಾಯ್ತು. ಆಕಳಿಸಿಯೂ ಆಯ್ತು. ಮಧ್ಯೆ ಮಧ್ಯೆ ನಮ್ಮನಮ್ಮ ನಡುವೆ ಅನುದಾರವಾದ ಟೀಕೆ ಟಿಪ್ಪಣಿಗಳೂ ನಡೆದುವು ಅತಿಥೇಯರ ಮೇಲೆ!

ಅಂತೂ ಕಡೆಗೆ ಕೈಕಾಲು ತೊಳೆದುಕೊಳ್ಳಲು ಹೇಳಿದರು. ಕೆಳಜಗಲಿಯಲ್ಲಿಯೆ ಎಲೆಹಾಕಿದರು. ಅವರ ಮನೆಯಲ್ಲಿ ಅಂದು ಏನಾದರೂ ವಿಶೇಷವೋ? ಅಥವಾ ಶ್ರೀಮಂತ ಬ್ರಾಹ್ಮಣರ ಮನೆಯಲ್ಲಿ ನಿತ್ಯವೂ ಹಾಗೆಯೋ ತಿಳಿಯದು. ಹೋಳಿಗೆ, ಪಾಯಸ, ಚಿತ್ರನ್ನ ಇತ್ಯಾದಿ ಭಕ್ಷ್ಯಭೋಜ್ಯಗಳ ಔತಣವೆ ನಮಗೆ ದೊರೆಯಿತು. ಗಡದ್ದಾಗಿ ಉಂಡೆವು. ನಮಗೋಸ್ಕರ ಇಷ್ಟನ್ನೆಲ್ಲ ತಯಾರಿಸಿದರೇನೋ? ಎಂದು ನಮ್ಮಲ್ಲಿ ಕೆಲವು ಮುಗ್ಧರು ಬೆಪ್ಪು ಬೆಪ್ಪಾಗಿ ಮಾತಾಡಿಕೊಮಡಿದ್ದೇನೋ ಉಂಟು!

ಈ ಮಧ್ಯೆ ಒಂದು ಪ್ರಮಾದ ಜರುಗಿತು!

ಸಾಕ್ಷಾತ್ ಶಂಕರಭಟ್ಟರೇ (ವಯಸ್ಸಾದ ಗಂಭೀರ ಸಾತ್ವಿಕ ವ್ಯಕ್ತಿ) ನಾವು ಊಟಮಾಡುತ್ತಿದ್ದಲ್ಲಿಗೇ ಬಂದುಬಿಟ್ಟರು. ನಮಗೆ ಏನೋ ಸಂಕೋಚ. ಮಾತು ನಿಲ್ಲಿಸಿಬಿಟ್ಟೆವು. ಅವರು ಪಿತೃಸದೃಶವಾದ ಹಿರಿಯರ ವಿಶ್ವಾಸದಿಂದ ‘ಸಂಕೋಚಪಟ್ಟು ಕೊಳ್ಳಬೇಡಿ, ಚೆನ್ನಾಗಿ ಊಟಮಾಡಿ, ಏನು ಬೇಕೊ ಕೇಳಿ. ನಿಮ್ಮ ತಂದೆ ನಮಗೇನು ಅನ್ಯರಲ್ಲ’ ಎಂದೆಲ್ಲ ಮಾತನಾಡಿಸುತ್ತಾ ನಮ್ಮ ಪಂಕ್ತಿಯ ಮುಂದೆ ನಡೆದಾಡುತ್ತಾ ಇವರು ಯಾರು? ಇವರು ಯಾರು?’ ಎಂದೆಲ್ಲ ಕೇಳುತ್ತ ಬಂದರು. ‘ಇವರು ದೇವಂಗಿ ರಾಮಣ್ಣಗೌಡರ ಮಕ್ಕಳು’ ‘ಇವರು ದೇವಂಗಿ ನಾಗಪ್ಪಗೌಡರ ಮಕ್ಕಳು’ ‘ಇವರು ಕುಪ್ಪಳಿ ವೆಂಕಟಯ್ಯಗೌಡರ ಮಕ್ಕಳು’ ಎಂದೆಲ್ಲ ಹೇಳುತ್ತಾ ಬಂದೆವು. ಭಟ್ಟರು ಕೇಳುತ್ತಾ ಕೇಳುತ್ತಾ ಕ್ರಮೇಣ ಉಣ್ಣುತ್ತಾ ಕುಳಿತಿದ್ದ ಡಿಸೋಜನ ಎಲೆಯ ಮುಂದೆ ನಿಂತರು!

ನಮಗೆಲ್ಲ ಜೀವ ಹಾರಿತು!

‘ಇವರು?’ ಎಂದು ಕೇಳಿಯೆಬಿಟ್ಟರು!

ಡಿಸೋಜ ಕಿಲಸ್ತರವನು. ಆಗಿನ ಕಾಲದಲ್ಲಿ ಕಿಲಸ್ತರು ಹೊಲೆಯರಿಗಿಂತಲೂ ಅತ್ತತ್ತ ಎಂಬ ಭಾವನೆ ಹಿಂದೂಗಳಿಗೆಲ್ಲ, ಸಾಬರೆಂತೊ ಅಂತೆ. ಹೊಲೆಯರಾದರೂ ಹಿಂದೂಗಳು ನಮ್ಮವರು. ಕಿಲಸ್ತರು, ಸಾಬರು ಎಲ್ಲ ಮ್ಲೇಚ್ಛರು! ಹೆಸರಾಂತ ಗೌಡರುಗಳ ಮನೆತನದ ಮಕ್ಕಳು ಕಿಲಸ್ತರ ಹುಡುಗನನ್ನು ಸಹಪಂಕ್ತಿ ಭೋಜನಕ್ಕೆ ಕರೆಯುವುದು ಎಂದರೇನು ಅದೂ ಬ್ರಾಹ್ಮಣರ ಮನೆಯಲ್ಲಿ! ಅವನನ್ನೂ ನಮ್ಮ ನಡುವೆ ಕೂಡಿಕೊಂಡು ಹರಟುತ್ತ ನೆಂಟರೊಡನೆ ವ್ಯವಹರಿಸುವಂತೆ ಊಟಮಾಡುವುದೆಂದರೇನು? ಅದೂ ನಿಷ್ಠಾವಂತರಾದ ಸಂಪ್ರದಾಯ ಬ್ರಾಹ್ಮಣೋತ್ತಮರ ಮನೆಯಲ್ಲಿ! ಈ ವಿಚಾರ ನಮ್ಮ ಮನೆಗಳಿಗೆ ತಿಳಿದರೆ ಗತಿಯೇನು? ಜಾತಿಯಿಂದಲೇ ಹೊರಗೆ ಹಾಕಿದರೆ? ನಮ್ಮ ಬೆನ್ನು ಸುಲಿಯುತ್ತಾರೆ! ಶುದ್ಧಿಗಾಗಿ ಏನೇನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆಯೋ? ಅದು ಇರಲಿ! ವಿಷಯ ತಿಳಿದರೆ ಶಂಕರಭಟ್ಟರೇ ಏನೆನ್ನಬಹುದು? ಒದ್ದು ಓಡಿಸು ಅಂದರೆ? ಅರ್ಧ ಊಟದಲ್ಲಿಯೆ? ಈ ಭೀತಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಬರಿಯ ಕಲ್ಪನಾಂಶವಾಗಿತ್ತೆಂದು ಹೇಳಬಹುದೇನೊ? ಆದರೆ ಅಂದು ಅದನ್ನೆಲ್ಲ ನಂಬಿದ ನಮಗೆ ನಿಜಾಂಶವಾಗಿಯೆ ಇತ್ತು. ಪಾರಾಗುವುದೆಂತು ಎಂದು ಎಲ್ಲರೂ ಯೋಚಿಸುತ್ತಾ ದಿಕ್ಕುಕೆಟ್ಟವರಂತೆ ಮೂಕರಾಗಿ ನಮ್ಮನಮ್ಮಲ್ಲಿಯೆ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡೆವು. ಭಟ್ಟರು ಉತ್ತರ ನಿರೀಕ್ಷಣೆಗಾಗಿ ಡಿಸೋಜನ ಎಲೆಯ ಮುಂದೆ ಪ್ರಶ್ನೆಚಿಹ್ನೆಯಾಗಿ ನಿಂತಿದ್ದರು!

ಇದ್ದಕ್ಕಿದ್ದ ಹಾಗೆ, ಇನ್ನು ಯಾರು ಏನು ನಿಜ ಹೇಳಿ, ಏನು ಅನಾಹುತಮಾಡಿರುತ್ತಾರೊ ಎಂದು ತಟಕ್ಕನೆ, ನಮಗೆ ಸ್ವಲ್ಪ ಹೆಚ್ಚು ಕಡಮೆ ಮುಂದಾಳಿನಂತೆಯೆ ಇದ್ದು ನಾವೆಲ್ಲ ಗೌರವಿಸುತ್ತಿದ್ದ, ದೇವಂಗಿ ವೆಂಕಟಯ್ಯ ‘ಅವರೂ ಬಿದರಳ್ಳಿ ಸುಬ್ಬೇಗೌಡರ ಮಕ್ಕಳು’ ಎಂದುಬಿಟ್ಟ!

ಇನ್ನೇನು, ಅನಿವಾರ್ಯಕ್ಕೆ ಸಿಕ್ಕಿ, ತಾನು ಯಾರ ಮಗ ಎಂದು ಹೇಳಿಬಿಡಬೇಕು ಎಂದು ಹವಣಿಸುತ್ತಿದ್ದ ಡಿಸೋಜ ವೆಂಕಟಯ್ಯನವರ (ಅವನು ಅವರನ್ನು ಯಾವಾಗಲೂ ತುಂಬ ಗೌರವದಿಂದ ಬಹುವಚನದಲ್ಲಿಯೆ ಸಂಭೋಧಿಸುತ್ತಿದ್ದ. ಅವನ ತಂದೆ ಹಲಸಿನ ಹಳ್ಳಿ ಬಾಬುನಾಯ್ಕರು ದೇವಂಗಿ ರಾಮಣ್ಣ ಗೌಡರಲ್ಲಿ ತುಂಬ ಗೌರವವಿಟ್ಟುಕೊಂಡಿದ್ದರಾದ್ದರಿಂದ). ಉತ್ತರ ಕೇಳಿ ತಬ್ಬಿಬ್ಬಾದ! ಇದ್ದಕ್ಕಿದ್ದ ಹಾಗೆ, ಹಲಸಿನಹಳ್ಳಿ ಬಾಬುನಾಯ್ಕರ ಮಗನಾಗಿದ್ದ ತಾನು ಬಿದರಳ್ಳಿ ಸುಬ್ಬೇಗೌಡರ ಮಗನಾಗಿ ಜನ್ಮಾಂತರ ತಾಳಿ ಹುಟ್ಟಿಬಿಟ್ಟಿದ್ದ!!

ಬೇರೆ ಸಮಯವಾಗಿದ್ದರೆ ಎಲ್ಲರೂ ಕಿಸಕ್ಕನೆ ನಗದಿರಲಾಗುತ್ತಿರಲಿಲ್ಲ. ಆದರೆ ಸನ್ನಿವೇಶದ ವಿಷಮತೆಯರಿತಿದ್ದ ನಾವೆಲ್ಲ ಆದಷ್ಟು ಪ್ರಯತ್ನಪೂರ್ವಕವಾಗಿ ನಗೆಯನ್ನು ಹಿಂದಕ್ಕೊತ್ತಿ ಗಂಭೀರವಾಗಿ ಉಣತೊಡಗಿದ್ದೆವು! ಜೊತೆಗೆ ವೆಂಕಟಯ್ಯನ ಕ್ರೂರ ದೃಷ್ಟಿ ನಮ್ಮೆಲ್ಲರನ್ನೂ ಹೆದರಿಸಿ ಅಂಕೆಯಲ್ಲಿಟ್ಟಿತ್ತು!

ತರುವಾಯ ಹೆಚ್ಚು ಮಾತಿಗೂ ಹರಟೆಗೂ ಹೋಗದೆ ಊಟ ಪೂರೈಸಿ, ಅತಿಥೇಯರಿಗೆ ಹೇಳಿ ಬೀಳುಕೊಂಡೆವು.

ಮನೆಯಿಂದ ಹೊರಟವರು ನಿಃಶಬ್ದವಾಗಿ ಕಾಡುದಾರಿಯಲ್ಲಿ ಒಂದೆರಡು ಫರ್ಲಾಂಗು ನಡೆದು, ನಮ್ಮ ಸದ್ದು ಅವರ ಮನೆಗೆ ಇನ್ನು ಕೇಳಿಸದು ಎಂದು ತಿಳಿದೊಡನೆ, ಎಲ್ಲರೂ ಬಿದ್ದು ಬಿದ್ದು ನಗತೊಡಗಿದೆವು. ಆ ಅಟ್ಟಹಾಸವನ್ನು ಏನೆಂದು ಹೇಳಬೇಕು? ಹೊಟ್ಟೆ ಹುಣ್ಣಾಗುವಂತೆ ಅಳ್ಳೆಹಿಡಿದುಕೊಂಡು ನಕ್ಕೆವು. ಕೆಲವರ ಕಣ್ಣಲ್ಲಿ ನೀರು ಧಾರಾಕಾರ! ಡಿಸೋಜನ ಕಡೆ ತಿರುಗಿ ಒಬ್ಬೊಬ್ಬರೂ “ಏನೂ ಬಿದರಳ್ಳಿ ಸುಬ್ಬೇಗೌಡರ ಮಕ್ಕಳೇ?” ಎಂದು ಸಂಬೋಧಿಸಿ ಕೇಕೆ ಹಾಕುತ್ತಾ ಮುನ್ನಡೆದೆವು ಮತ್ತೆ ಮತ್ತೆ!