ಇನ್ನೊಂದು ಘಟನೆ ನೆನಪಿಗೆ ಬರುತ್ತದೆ. ಕಾಲಾನುಕ್ರಮದಲ್ಲಿ ದೃಷ್ಟಿಯಿಂದ ಅದು ತುಸು ಹಿಂದಕ್ಕೆ ಹೋಗಬೇಕೆಂದು ತೋರುತ್ತದೆ. ಆ ಘಟನೆ ನನ್ನ ಬದುಕಿನ ಮೇಲೆ ಒಂದು ಆಧ್ಯಾತ್ಮಿಕ ಪರಿಣಾಮ ಉಂಟುಮಾಡಿತೆಂದು ನಾನು ನಂಬುತ್ತೇನೆ. ನನ್ನ ತಾಯಿ ತಾನೆಂದೂ ನನಗೆ ದೇವರು ಧರ್ಮ ಭಕ್ತಿ ಇತ್ಯಾದಿಗಳ ವಿಚಾರವಾಗಿ ಬೋಧಿಸಿದ್ದು ನನಗೆ ನೆನಪಿಲ್ಲ. ದೇವರು ಭಕ್ತಿ ಮೊದಲಾದ ದೈವಿಕಭಾವನೆಗಳು ಅವರಲ್ಲಿ ಏನಿದ್ದರೂ ಭಾವುಕವಾಗಿದ್ದುವೆ ಹೊರತು ಬೌದ್ಧಿಕವಾಗಿರಲಿಲ್ಲ. ಏನಾದರೂ ಅಲ್ಪ ಪ್ರಮಾಣದಲ್ಲಿ ಬೌದ್ಧಿಕಾಂಶವಿದ್ದರೂ ಅದನ್ನು ವಾಗ್ರೂಪದಲ್ಲಿ ಅಭಿವ್ಯಕ್ತಪಡಿಸುವ ಭಾಷಾ ಸಾಮರ್ಥ್ಯವಾಗಲಿ ಭಾಷಾಜ್ಞಾನವಾಗಲಿ ಅವರಲ್ಲಿರಲಿಲ್ಲ. ಆದರೆ ತಮ್ಮ ವರ್ತನೆಯಿಂದಲೆ ಅವರು ನನ್ನ ಬಾಲಕಪ್ರಜ್ಞೆಗೆ ಭಗವದ್ ವಿಷಯಕವಾದ ಶ್ರದ್ಧೆ ಮತ್ತು ಪೂಜ್ಯಬುದ್ಧಿಗಳನ್ನು ದಯಪಾಲಿಸಿದರು. ಸಾಂಪ್ರದಾಯಿಕವಾದ ಕೆಲವು ಆಚಾರ ಮತ್ತು ನಂಬಿಕೆಗಳಲ್ಲಿ ನನಗೆ ಚಿಕ್ಕಂದಿನಿಂದಲೂ ತಾತ್ಸಾರ, ತಿರಸ್ಕಾರ, ಬಹುಶಃ ಕ್ರೈಸ್ತ ಉಪಾಧ್ಯಾಯರಿಂದ ಪಡೆದಿದ್ದಿರಬಹುದು. ಅದಕ್ಕಿಂತಲೂ ಹೆಚ್ಚಾಗಿ ಜನ್ಮಾಂತರ ಸಂಸ್ಕಾರದಿಂದಲೂ ಬಂದಿತ್ತು ಎಂದು ನನ್ನ ನಂಬಿಕೆ: ಭಟ್ಟರಿಂದ ಬೂದಿ ತರಿಸುವುದು, ಮಠಗಳಿಂದ ಮಂತ್ರದ ತಾಯಿತಿ ತರಿಸಿ ಕಟ್ಟುವುದು, ಕೋಳಿ ಸುಳಿದು ಬಿಡುವುದು, ಆ ದೇವರಿಗೆ ಈ ದೇವರಿಗೆ ಹೇಳಿಕೊಂಡು ಬೆಳ್ಳಿನಾಣ್ಯ ಕಟ್ಟುವುದು, ಚಿನ್ನದ ಅದನ್ನು  ಇದು ಮಾಡಿಸುತ್ತೇನೆ, ಬೆಳ್ಳಿಯ ತ್ರಿಶೂಲ ಮಾಡಿಸಿ ಹಾಕುತ್ತೇನೆ ಎಂದೆಲ್ಲ ಭಗವಂತನಿಗೆ ಲಂಚಕಟ್ಟುವುದು ಇಂಥವುಗಳ ವಿಚಾರದಲ್ಲಿ ನನಗೆ ಸಂಪೂರ್ಣ ಅಸಡ್ಡೆ. ಆದರೆ ನಿಜವಾದ, ಹೃತ್ಪೂರ್ವಕವಾದ, ನಿರಾಡಂಬರವಾದ, ಪ್ರದರ್ಶನಕ್ಕಲ್ಲದ ಭಕ್ತಿಯ ಆವಿರ್ಭಾವಗಳನ್ನು ಕಂಡಾಗ ನಾನು ಸಂಪೂರ್ಣ ಶರಣಾಗುತ್ತಿದ್ದೆ. ನನ್ನಲ್ಲಿಯೂ ಭಕ್ತಿ ಉದ್ದೀಪನವಾಗಿ, ಅದನ್ನು ನಿರಹಂಕಾರವಾಗಿ ಪ್ರಕಟಿಸಿದವರನ್ನು ತುಂಬ ಗೌರವಿಸುತ್ತಿದ್ದೆ. ನನ್ನಮ್ಮನಲ್ಲಿ ಅಂತಹ ಭಕ್ತಿ ನಂಬಿಕೆಗಳ ಸಹಜಸ್ಫೂರ್ತ ವರ್ತನೆಗಳನ್ನು ಕಂಡಾಗಲೆಲ್ಲ ನನ್ನ ಹೃದಯ ತುಂಬಿ ಬರುತ್ತಿತ್ತು. ಒಂದು ನಿದರ್ಶನ; ನಾವು ಮಲಗುತ್ತಿದ್ದ ಕೋಣೆಯ ಬಾಗಿಲನ್ನು ತೆಗೆದಾಗ ಎದುರು ಮೊದಲು ಕಣ್ಣಿಗೆ ಬೀಳುತ್ತಿದ್ದುದು ಅಂಗಳದಲ್ಲಿದ್ದ ತುಳಸೀಕಲ್ಲು. ಅವ್ವ ಯಾವಾಗಲೂ ಬೆಳಗಿನ ಜಾವದ ನಸುಗತ್ತಲೆಯಲ್ಲಿ ಬಾಗಿಲು ತೆರೆದು ನಿಂತು ಅನನ್ಯ ಭಕ್ತಿಯಿಂದ ಕೈಮುಗಿದು ಸುದೀರ್ಘಕಾಲ ನಿಂತು ಅನಿಮೇಷವಾಗಿ ಎಂಬಂತೆ ದೇವರನ್ನು ನೋಡಿ ಏನನ್ನೊ ಪರಿಭಾವಿಸುತ್ತಿದ್ದು ಹೊರಗೆ ಜಗಲಿಗೆ ದಾಟುತ್ತಿದ್ದರು, ದೈನಂದಿನ ಕೆಲಸದ ಪ್ರಾರಂಭಕ್ಕೆ. ಆ ಬರಿಯ ಚಿತ್ರದಿಂದಲ್ಲ, ಅದಕ್ಕಿಂತಲೂ ಆಳವಾದದ್ದೇನೋ ಒಂದರಿಂದ ಎಂದು ತೋರುತ್ತದೆ, ನನಗೆ ಭಗವಂತನ ಅಸ್ತಿತ್ವದಲ್ಲಿ ಅಸಾಧಾರಣ ಆಶ್ವಾಸನೆ ಮೂಡಿ ಆಸ್ವಾದ ಉಂಟಾಗುತಿದ್ದುದು! ಭೇರೆಯ ಸಮಯಗಳಲ್ಲಿ ಬರಿಯ ಕಲ್ಲಾಗಿದ್ದುದು ಆಗ ಮಾತ್ರ ಚಿನ್ಮಯ ಭಗವಂತನಾಗುತಿತ್ತು!

ಕುಪ್ಪಳಿಯ ಮನೆಯ ಅಂಗಳದ ತುಳಸಿಕಲ್ಲು ನಡನಡನಡುಗಿ ಸೃಷ್ಟಿಕರ್ತ ಸರ್ವಾಂತರ್ಯಾಮಿ ಸವೇಶ್ವರನ ತಾಟಸ್ಥ್ಯವನ್ನೆ ಅಲುಗಾಡಿಸಿ ಕೃಪಾಪುಲಕಿತನನ್ನಾಗಿ ಮಾಡಿತ್ತು ಈ ಮುಂದೆ ಹೇಳುವ ಇನ್ನೊಂದು ಘಟನೆ!

ಬೇಸಗೆ ರಜಾ ಪ್ರಾರಂಭವಾದೊಡನೆ ನಾವು ಏಳೆಂಟು ಮಂದಿ ಹುಡುಗರು ಮನೆಗೆ ಬಂದೆವು. ಕಟ್ಟಿದ್ದ ಕುದುರೆಗೆ ಕಾಲು ಬಿಚ್ಚಿದಂತೆ ಅಗಿತ್ತು ನಮಗೆ. ಮುಂದಿನ ಒಂದೆರಡು ತಿಂಗಳಾದರೂ ಯಾವ ಹೊಣೆ ಹೊರೆಗಳೂ ಇಲ್ಲದೆ ಹಗುರವಾಗಿ ಹಾರಿಕೊಂಡಿರಬಹದು ಎಂಬ ಉಲ್ಲಾಸ. ತುಂಬಿ ತುಳುಕುವ ಪ್ರಾಣಮಯ ಕ್ರೀಡೋತ್ಸಾಹ. ಮನೆಗೆ ಬಂದ ಮರುದಿನ ಬೆಳಿಗ್ಗೆಯೆ ಕಾಫಿ ತಿಂಡಿ ಮುಗಿಸಿ “ಅಮ್ಚ್ ಅಲಿಚ್” ಆಡಲು ಹೆಬ್ಬಾಗಿಲು ದಾಟಿ ‘ಕಣ’ಕ್ಕೆ ಹೋದೆವು.

ತೀರ್ಥಹಳ್ಳಿಯಲ್ಲಿ “ಅಮ್ಚ್-ಅಲಿಚ್” ಆಡಲು ಯಾವಾಗಲೂ ನಾವು ಹೊಳೆಯ ಮಳಲಿಗೇ ಹೋಗುತ್ತಿದ್ದೆವು. ಕಾರಣ, ಆಟದಲ್ಲಿ ಒಬ್ಬರು ಆಟ ತೋರುವ ಒಬ್ಬರನ್ನು ಹಲವರು ಮುತ್ತಿ ಹಿಡಿದು ಹೋರಾಡಿ ಬೀಳಿಸಿದಾಗ ಮರಳಿನಲ್ಲಿ ಯಾವ ಅಪಘಾತವೂ ಆಗುತ್ತಿರಲಿಲ್ಲ. ಗಟ್ಟಿನೆಲದ ಮೇಲಾದರೆ ಏಟಾಗುವುದು ಖಂಡಿತ. ಅಲ್ಲದೆ ಮಳಲಿನ ಮೇಲೆ ಆಟಕ್ಕೆ ಬಾಕಾದ ಗೆರೆಗಳನ್ನು ಎಳೆಯುವುದೂ ಸುಲಭವಾಗಿತ್ತು: ಒಬ್ಬನು ಕುಳಿತು ತನ್ನೆರಡೂ ಕೈಗಳನ್ನು ಮಂಡಿಯ ಹಿಂಭಾಗದಲ್ಲಿ ಜೋಡಿಸಿಕೊಳ್ಳುತ್ತಿದ್ದ; ಇನ್ನೊಬ್ಬನು ಅವನ ಎರಡೂ ಕಾಲುತುದಿಗಳನ್ನು ಹಿಡಿದು ಎಳೆಯುತಿದ್ದ. ಕುಳಿತಿದ್ದವನ ಅಂಡು ನೇಗಿಲಿನಂತಾಗಿ ಉಳುತ್ತಿದ್ದು ಆ ಗೆರೆಯೆ ನಮಗೆ ಬೇಕಾದ ಕ್ರೀಡಾಂಗಣದ ವಿಭಜನೆಗಳನ್ನು ರೇಖಿಸುತ್ತಿತ್ತು. ಆದರೆ ಕುಪ್ಪಳಿ ಮನೆಯ ಹತ್ತಿರ ಎಲ್ಲಿಂದ ತರುವುದು ಹೊಳೆಯ ಮಳಲು ಗುಡ್ಡೆಯನ್ನು? ಕಣದ ಬಯಲಿನಲ್ಲಿಯೆ ಕೋಲುಗಳಿಂದ ಗೆರೆಗಳನ್ನು ಎಳೆದು, ಎರಡು ಗುಂಪುಗಳಾಗಿ ಒಡೆದು, ಆಟ ಪ್ರಾರಂಭಿಸಿದೆವು. ‘ಅಮ್ಚ್ ಅಲಿಚ್’ ಅನ್ನು ‘ಗುಡ್-ಗುಡ್’ ಎಂದೂ ಕರೆಯುತ್ತಾರೆ. ನಡುಗೆರೆಯನ್ನು ದಾಟಿ ಒಂದು ಗುಂಪಿನ ಒಬ್ಬನು ‘ಅಮ್ಚ್ ಅಲಿಚ್’ ‘ಅಮ್ಚ್-ಅಲಿಚ್’ ಎಂದು ಉಸಿರು ನಿಲ್ಲಿಸದೆಯೆ ಹೇಳುತ್ತಿರಬೇಕು. ಎದುರು ಗುಂಪಿನವರು ಅವನನ್ನು ಆಕ್ರಮಿಸಿದರೂ ಅವನು ‘ಅಮ್ಚ್-ಅಲಿಚ್’ ಅನ್ನು ನಿಲ್ಲಿಸದೆ ಎದುರಾಳಿಗಳನ್ನು ಸೆಣಸಿ ಮತ್ತೆ ತನ್ನ ಕಡೆಯ ಗೆರೆಯಿಂದೀಚೆಗೆ ಯಾರನ್ನಾದರೂ ಒಬ್ಬನನ್ನು ಎಳೆತಂದರೆ ಗೆದ್ದಂತೆಯೆ. ಹಾಗಲ್ಲದೆ ಅವರ ಆಕ್ರಮಕ್ಕೊಳಗಾಗಿ, ‘ಅಮ್ಚ್-ಅಲಿಚ್’ ನಿಲ್ಲಿಸಿದರೆ ಸೋತಂತೆಯೆ.

ಆಟ ಆರಂಭವಾಯಿತು, ‘ಅಮ್ಚ್-ಅಲಿಚ್’ ನನ್ನದೇ ಮೊಟ್ಟಮೊದಲನೆಯ ವೀರಸರದಿಯೂ ಆಯಿತು. ಗೆರೆ ದಾಟಿ ಅಮ್ಚ್-ಅಲಿಚ್ ವೀರಘೋಷಣೆ ಮಾಡುತ್ತಾ ನುಗ್ಗಿದೆ. ಎದುರಾಳಿಗಳು ಬಂದು ಆಕ್ರಮಿಸಿದರು. ಆದರೆ ನಾನು ಅಮ್ಚ್-ಅಲಿಚ್ ನಿಲ್ಲಿಸದೆ ಅವರನ್ನೆಳೆದುಕೊಂಡು ನಮ್ಮ ಗುಂಪಿನ ವಲಯಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದೆ. ಯಾರೊ ಒಬ್ಬನು ನನ್ನ ಕಾಲನ್ನು ಹಿಡಿದೆಳೆದ. ನಾನು ಬಿದ್ದೆ. ಆದರೂ ತೋಳುಗಳೆರಡನ್ನೂ ಹಿಂದಕ್ಕೆ ಚಾಚಿ ಮತ್ತೆ ಏಳಲು ಶ್ರಮಿಸುತ್ತಿದ್ದೆ. ಯಾವನೊ ಒಬ್ಬನು ನನ್ನ ಎಡತೋಳಿನ ಮೇಲೆ ಕಾಲಿಟ್ಟು ಮೆಟ್ಟಿ ತನ್ನ ಭಾರವನ್ನೆಲ್ಲ ಅಪ್ಪಳಿಸಿ ಕುಳಿತ. ತೋಳಿನ ನಡುವಣ ಸಂದುಲಟ್ಟನೆ ಸಶಬ್ದವಾಗಿ ಮುರಿದು, ಮುಂದಕ್ಕೆ ಸಹಜವಾಗಿ ಬಾಗುತ್ತಿದ್ದಂತೆ, ಹಿಂದಕ್ಕೇ ಬಾಗಿಬಿಟ್ಟಿತು! ಅಯ್ಯೋ ಕೈಮುರಿಯಿತು ಎಂದು ಕೂಗಿಕೊಂಡೆ. ಆದರೆ ಆ ಜಯಘೋಷದ ಗಲಾಟೆಯಲ್ಲಿ ವಿಷಯ ಗೊತ್ತಾಗಲು ತುಸು ತಡವೇ ಆಯಿತು. ಸಂಗತಿ ತಿಳಿದೊಡನೆಯೆ ಹತ್ತಿರದಲ್ಲಿಯೆ ಆಟ ನೋಡುತ್ತಿದ್ದ ನನ್ನ ತಂಗಿಯರು-ದಾನಮ್ಮ ಪುಟ್ಟಮ್ಮ-ಗಟ್ಟಿಯಾಗಿ ಅತ್ತು ಕೂಗಿಕೊಂಡರು. ಉಳಿದವರೂ ಭಯಭೀತರಾಗಿ ದೂರ ಸರಿದರು. ತಿಮ್ಮು ಒಳಗೆ ಓಡಿ “ಪುಟ್ಟಣ್ಣಯ್ಯನ ಕೈ ಮುರಿದುಹೋಯ್ತು!” ಎಂದು ಅಳುತ್ತಾ ಹೇಳಿದ. ನನ್ನ ಅಮ್ಮ ಒರಳಿನಲ್ಲಿ ಏನನ್ನೋ ಕಡೆಯುತ್ತಿದ್ದರೋ ಏನೋ? ಮೈಮೇಲೆ ಕುದಿನೀರು ಹೊಯ್ದಂತಾಗಿ ಬೇಗನೆ ಕೈ ತೊಳೆದುಕೊಂಡು ಕಣಕ್ಕೆ ಧಾವಿಸಿದರು, “ಅಯ್ಯೋ ಏನಾಯ್ತೋ?” ಎಂದು ರೋದಿಸುತ್ತಾ.

ಸ್ವಲ್ಪವೆ ಕಾಲದ ಹಿಂದೆ ನನ್ನ ತಂದೆಯನ್ನು ಕಳೆದುಕೊಂಡಿದ್ದ ಆ ನನ್ನ ತಾಯಿಯ ದುಃಖ ದೈನ್ಯಗಳನ್ನು ಹೇಳತೀರದು. ಚಿಕ್ಕವನಾಗಿದ್ದ ನನ್ನ ಮುಗ್ಧ ಮನಸ್ಸಿಗೆ ಎಟುಕಲಾರದಿದ್ದ ಅನೇಕ ಸಾಂಸಾರಿಕ ಕ್ಲೇಷಕಷ್ಟಗಳಿಗೂ ಅವಮಾನ ಅವಹೇಳನಗಳಿಗೂ ಈರ್ಷ್ಯಾಸೂಯೆಗಳಿಗೂ ತುತ್ತಾಗಿ, ಇದ್ದ ಒಬ್ಬನೆ ಮಗನ ಮೇಲೆ ತನ್ನ ಮತ್ತು ತನ್ನಿಬ್ಬರು ಹೆಣ್ಣುಮಕ್ಕಳ ಭವಿಷ್ಯದ ಆಶಾಗೋಪುರವನ್ನು ನಿರ್ಮಿಸಿಕೊಂಡಿದ್ದ ಆ ನನ್ನ ತಾಯಿಯ ಹೃದಯದ ಮೇಲೆ ಆದ ಆಘಾತದ ಗಂಭೀರತೆಯನ್ನು ಮುಂದೆ ನಡೆದ ಘಟನೆಯಿಂದ ಮಾತ್ರ ಸ್ವಲ್ಪಮಟ್ಟಿಗೆ ಊಹಿಸಬಹುದು.

ನಾನು ಎದ್ದು ನಿಂತಿದ್ದೆ. ಆದರೆ ನನ್ನ ಎಡತೋಳು ನನ್ನಿಂತ ಪ್ರತ್ಯೇಕವಾದಂತೆ ಸುಮ್ಮನೆ ಜೋಲಾಡುತ್ತಿತ್ತು. ತಕ್ಷಣದಲ್ಲಿ ಯಾವ ಹೆಚ್ಚಿನ ನೋವೂ ಇರದಿದ್ದರೂ ಕೈಮುರಿದುಹೋಯ್ತು ಎಂಬ ಭಾವನೆಯಿಂದುಂಟಾದ ಭೀತಿ ಚೇತನವನ್ನಾವರಿಸಿ ಸ್ತಂಭಿತವವನ್ನಾಗಿ ಮೂಡಿತ್ತು. ಸುಮ್ಮನೆ ಅಳುತ್ತಿದ್ದೆ, ಹೆದರಿಯೆ! ಅಮ್ಮ ಓಡೋಡಿ ಬಂದು “ಅಯ್ಯೊ, ಪುಟ್ಟೂ!” ಎಂಬ ಸಣ್ಣ ಉದ್ಗಾರದಲ್ಲಿಯೆ ಕೋಟಿ ದುರಂತ ನಾಟಕಗಳ ಸಾರವನ್ನೆಲ್ಲ ಅಭಿವ್ಯಕ್ತಗೊಳಿಸುತ್ತಾ ತನ್ನ ಪಕ್ಕಕ್ಕೆ ನನ್ನನ್ನಪ್ಪಿಕೊಂಡು, ಮೆಲ್ಲನೆ ನಡೆಯಿಸುತ್ತಾ ಹಿತ್ತಲು ಕಡೆಯ ಬಾಗಿಲಿಂದ ಅಡುಗೆ ಮನೆ, ಮಾಣಿಗೆಗಳ ಮೇಲಾಸಿ ಜಗಲಿಗೆ ಕರೆದೊಯ್ದು ಕೆಸರಲಗೆಯ ಮೇಲೆ ಹಸಿದ್ದ ಜಮಖಾನದ ಮೇಲೆ ಮಲಗಿಸಿದರು.

ಅಮ್ಮ ಹಾಗೆ ನನ್ನನ್ನು ಎಚ್ಚರಿಕೆಯಿಂದ ಮಲಗಿಸುತ್ತಿದ್ದಾಗ ಆಗತಾನೆ ತಣ್ಣೀರಿನಲ್ಲಿ ತೊಳೆದಿದ್ದ ಅವರ ಬತ್ತಲೆ ತೋಳು ತನ್ನ ಮುಖಕ್ಕೆ ಸೋಂಕಿ ಆ ದಿವ್ಯಸ್ಪರ್ಶಕ್ಕೆ ನನ್ನ ಕೆನ್ನೆ ತಣ್ಣಗಾಯಿತು, ಆ ತಣ್ಪನೇನೆಂದು ಬಣ್ಣಿಸಲಿ? ನನ್ನ ಮಗುತನ ಮುಗಿದ ಮೇಲೆ ನಾನು ಅಮ್ಮನನ್ನು ಮುಟ್ಟುವ ಅವಕಾಶವೆ ಇರಲಿಲ್ಲ. ಮಗುತನದಲ್ಲಿ ಒದಗಿದ್ದ ಆಕೆಯ ಮಾತೃಸ್ಪರ್ಶದ ನೆನಪು ಮರೆತೆಹೋಗಿತ್ತು. ಓದುವ ಹುಡುಗನಾಗಿ ತಾಯಿಯಿಂದ ದೂರವಾದ ಮೇಲೆ ತಾಯಿಯ ಶ್ರೀದೇಹದ ತಣ್ಪಿನ ಅನುಭವಕ್ಕೆ ಅವಕಾಶವೆ ಇರಲಿಲ್ಲ. ಆದ್ದರಿಂದ ಬಹುವರ್ಷಗಳ ಅನಂತರ ಅಮ್ಮನ ಒದ್ದೆಯಾರದಿದ್ದ ತೋಳಿನ ತಣ್ಪು ನನ್ನ ಕೆನ್ನೆಗೆ ಅನಿರ್ವಚನೀಯವಾದ ಅಮೃತಸುಖವನ್ನು ತಂದುಕೊಟ್ಟಿತು. ಅದು ಇಂದಿಗೂ ಹಚ್ಚಹಲುಸಾಗಿ ಪ್ರಜ್ಞಾಸ್ಥಾಯಿಯಾಯಿದೆ!

ನನ್ನನ್ನು ಮಲಗಿಸಿ ಅಮ್ಮ ಅಂಗಳದಲ್ಲಿದ್ದ ದೇವರ ಕಡೆ ತಿರುಗಿದರು. ಆ ತುಲಸಿಯ ಕಲ್ಲು ಅವರಿಗೆ ಕಲ್ಲಾಗಿರಲಿಲ್ಲವೆಂದು ತೋರುತ್ತದೆ. ನಮ್ಮ ಸುತ್ತಮುತ್ತ ಆಗಲೆ ಮನೆಯ ಅಮ್ಮಂದಿರೆಲ್ಲ ನೆರೆದಿದ್ದರು. ಗಂಡಸರಾರೂ ಇದ್ದಂತೆ ನೆನಪಿಲ್ಲ.

ಅಳುತ್ತಾ ದುಃಖ ಜರ್ಜರಿತ ಶೋಕತಪ್ತಹೃದಯರಾಗಿ ತೂಣ ಗೊಂಡವರಂತೆ ಮೆಟ್ಟಿಲುಗಳನ್ನಿಳಿದು ಕಠಿನ ಕಲ್ಲಿನ ತುಳಸೀಕಟ್ಟೆಗೆ ಅಭಿಮುಖರಾಗಿ ಕೈಮುಗಿದು ನಿಂತು ಸಂಕಟದಾರುಣ ಧ್ವನಿಯಿಂದ “ಅಯ್ಯೋ ಸ್ವಾಮೀ, ನಿನಗೆ ಕಣ್ಣಿಲ್ಲವೇ? ಗಂಡನನ್ನಂತೂ ನುಂಗಿಕೊಂಡೆ! ಇದ್ದ ಒಬ್ಬ ಮಗನಿಗೂ ಹೀಗೆ ಮಾಡಿದೆಯಲ್ಲೋ” ಎಂದು ಅತ್ಯಂತ ಆರ್ತರಾಗಿ, ನಮಸ್ಕಾರ ಮಾಡುವಂತೆ ಬಾಗಿ, ಹಣೆಯನ್ನ ದಿಡ್ಡೆಂದು ಸದ್ದಾಗುವಂತೆ ದೇವರ ಕಲ್ಲುಪೀಠಕ್ಕೆ ಕುಟ್ಟಿಬಿಟ್ಟರು? ಒಂದು! ಎರಡು!! ಮೂರು ಸಾರಿ!!!

ಪರಿಣಾಮ: ನೆತ್ತರು ತೊಟ್ಟಿಕ್ಕಿತು!

ಹೌದು ಹೊರಗಣ್ಣಿಗೆ ಕಂಡದ್ದು ಅಷ್ಟೆ: ನೆತ್ತರು ತೊಟ್ಟಿಕ್ಕಿ, ಹಣೆ ಊದಿ ಕೊಂಡದ್ದು! ಆದರೆ, ಅತೀಂದ್ರಿಯ ಪ್ರಜ್ಞೆಯ ಶ್ರದ್ಧಾಚಕ್ಷುಸ್ಸಿಗೆ? ಕಲ್ಲು ವಿಕಂಪಿಸಿ ಭಗವಚ್ಚರಣವಾಗಿ, ದೇವದೇವನ ಹೃದಯಕಮಲದಲ್ಲಿ ಕರುಣಾನುಕಂಪನವಾಗಿ ಮಾತೃಭಕ್ತಿಯ ಚಿತ್ತಪಶ್ಯಕ್ತಿಗೆ ಜಾಗ್ರತವಾದ ಈಶ್ವರೀಕೃಪೆ ಅತೀತದಿಂದ ಇಳಿದು ಬಂದು ನನ್ನ ಶಿರಸ್ಸಿನ ಮೇಲೆ ಆಶೀರ್ವಾದ ಮುದ್ರೆಯಾಗಿ ನಿಂತದ್ದು ಅಂದಿನಿಂದ ಇಂದಿನವರೆಗೂ ಬಿಡದೆ ಕೈಹಿಡಿದು ನಡೆಸಿ ಕಾಯುತ್ತಿದೆ! ನನ್ನ ಅವ್ವನ ಲಲಾಟಾಘಾತಕ್ಕೆ ಕರಗಿದ ವಿಧಿ ಅವರ ಕಂದನ ಲಲಾಟಲಿಪಿಯನ್ನು ನನ್ನ ಸುಭದ್ರವಶಕ್ಕೆ ತೆಗೆದುಕೊಂಡಿತೆಂದು ತೋರುತ್ತದೆ. ಅನಿರೀಕ್ಷಿತವಾದ ಚಿತ್ರವಿಚಿತ್ರ ರೀತಿಯಲ್ಲಿ ನನ್ನ ಬದುಕಿನ ಅಡಚಣೆಗಳನ್ನು ನಿವಾರಿಸಿ, ನನ್ನನ್ನು ಬಾಳಿನ ಸಂದುಗೊಂದುಗಳಲ್ಲಿ ನುಗ್ಗಿಸಿಕೊಂಡು ಬಂದು, ಜೀವನ ದೇಗುಲದ ಗೋಪುರಾಗ್ರ ಸ್ಥಾನದಲ್ಲಿ ನಿಲ್ಲಿಸಿದೆ!

ಪ್ರಥಮ ಚಿಕಿತ್ಸೆಯ ಸಾಧಾರಣ ಅರಿವೂ ಇಲ್ಲದೆ, ಸಂದು ತಪ್ಪಿದ ತೋಳನ್ನು ಮುಂದಕ್ಕೆ ಬಗ್ಗಿಸಿ ಅದರ ಸಹಜ ಸ್ಥಿತಿಯಲ್ಲಿ ನಿಲ್ಲಿಸಿ ಕೊರಳಿಗೂ ಒಂದು ಬಟ್ಟೆಯ ಸಿಂಬಿಯನ್ನು ಉರುಳು ಕಟ್ಟಿ ತೂಗುಹಾಕುವ ಬದಲು, ತೋಳನ್ನು ಹಾಗೆಯೆ ನೆಟ್ಟಗೆ ಇಟ್ಟು, ಒದ್ದೆ ಬಟ್ಟೆ ಕಟ್ಟಿ, ಒಂಬತ್ತು ಮೈಲಿ ದೂರದಲ್ಲಿದ್ದ ತೀರ್ಥಹಳ್ಳಿ ಆಸ್ಪತ್ರೆಗೆ ಗಾಡಿಯಲ್ಲಿ ಮಲಗಿಸಿ ಉಗ್ದರು, ಐಯ್ಯಪ್ಪ ಚಿಕ್ಕಪ್ಪಯ್ಯ. ತೋಳು ಊದಿಕೊಂಡು ಮಹಾಯಾತನೆ ಕೊಟ್ಟಿತು. ಆಗ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ರಾಜಗೋಪಾಲ ಮೊದಲಿಯಾರ್ ಎಂಬುವರು ಡಾಕ್ಟರಾಗಿದ್ದರು, ಯುದ್ಧಾನಂತರದ ಇನ್‌ಪ್ಲೂಯನ್‌ಜಾದ ಸಾಂಕ್ರಾಮಿಕದಲ್ಲಿ ನಾಡಿಗೆ ತುಂಬ ಸೇವೆ ಸಲ್ಲಿಸಿದವರು. ಅವರು ಊದಿ ನೆಟ್ಟಗೆ ನಿಮಿರಿದ್ದ ತೋಳನ್ನು ಬಾಗಿಸಿ ಕುತ್ತಿಗೆಗೆ ನೇಲುಕಟ್ಟಿ ಔಷಧೋಪಚಾರ ಪಾಡಿದರು. ಹಾಗೆ ಬಾಗಿಸಿ ಕಟ್ಟುವಾಗ ನನಗೆ ಜೀವಹೋಗುವಷ್ಟು ನೋವಾದರೂ ತರುವಾಯ ನಾನು ಎದ್ದು ಓಡಾಡಿದರೂ ಅಷ್ಟೇನೂ ತೊಂದರೆಯಾಗುತ್ತಿರಲಿಲ್ಲ. ಹೀಗೆ ಬೇಸಗೆ ರಜದ ಅಮೂಲ್ಯ ಕಾಲವೆಲ್ಲ ಮುರಿದ ಕೈ ಗುಣವಾಗುವುದರಲ್ಲಿಯೆ ಕಳೆಯಿತು!

ನನ್ನ ಕೈ ಮುರಿದ ಮರುಕ್ಷಣದಲ್ಲಿಯೆ, ನೆಂಟರ ಮನೆಯ ನನ್ನ ಗೆಳೆಯರನ್ನೆಲ್ಲ ಕುಪ್ಪಳಿಯಿಂದಲೂ ಅವರವರ ಮನೆಗಳಿಗೆ ನಿರ್ದಾಕ್ಷಿಣ್ಯವಾಗಿ ಎಬ್ಬಿಬಿಟ್ಟರಂತೆ!