ಆ ವರ್ಷ ಲೋವರ್ ಸೆಕೆಂಟರಿ ಪರೀಕ್ಷೆಗೆ ಕೂತಿದ್ದ ನಮ್ಮ ಗುಂಪಿನಲ್ಲಿ ತೇರ್ಗಡೆ ಹೊಂದಿದ್ದು ನಾವಿಬ್ಬರೆ; ನಾನು ಮತ್ತು ಸೀತಮ್ಮ. ನಾವಿಬ್ಬರೂ ಕನ್ನಡ ಲೋವರ್ ಸೆಕೆಂಡರಿ ಕಟ್ಟಿದ್ದವರು. ಉಳಿದವರು ಇಂಗ್ಲಿಷ್ ಭಾಷೆಯೂ ಸೇರಿದಂತೆ ಇಡೀ ಲೋವರ್ ಸೆಕೆಂಡೆಇಗೆ ಕುಳಿತಿದ್ದವರು. ಇಂಗ್ಲಿಷ್ ನಿಂದ-ಅದನ್ನು ಎಲ್ಲರ ಮೇಲೆಯೂ ಕಡ್ಡಾಯ ಹೇರಿದರೆ- ಉಂಟಾಗುವ ಅನಾಹುತದ ಅರಿವಿಗೆ ನನ್ನ ಮನಸ್ಸು ಆ ಕಾಲದಿಂದಲೆ ಒಳಗಾಯಿತೇನೋ ಎನ್ನಿಸುತ್ತಿದೆ?

ಆ ವರ್ಷ ಒಂದು ಘಟನೆ ನಡೆಯಿತು. ಅದೇನೊ ಅದಕ್ಕದೇ ವಿಶೇಷವಾದುದಲ್ಲ. ಅದರ ವಿಶೇಷತೆ ಇರುವುದು ಅದರ ದೆಸೆಯಿಂದಾಗಿ ನನ್ನ ಜೀವನದ ಮೇಲೆ ಆದ ಪರಿಣಾಮದಲ್ಲಿ ದೇವಂಗಿ ರಾಮಣ್ಣಗೌಡರ ಇಬ್ಬರು ಹೆಣ್ಣುಮಕ್ಕಳಿಗೂ –ರಂಗಮ್ಮ, ಪುಟ್ಟಮ್ಮ –ಮದುವೆಯಾಯಿತು. ಪುಟ್ಟಮ್ಮನನ್ನು ಮೂಡಿಗೆರೆ ಸಮೀಪದ ನಂದೀಪುರಕ್ಕೂ ಹಿರಿಯವಳಾದ ರಂಗಮ್ಮನನ್ನು ಮೇಗರವಳ್ಳಿ ಕಡೆಯ ಹೊಸಮನೆಗೂ ಕೊಟ್ಟಿತು. ಆ ಸಂಬಂಧದಿದಾಗಿ ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ ಫೈಲಾಗಿದ್ದ ದೇವಂಗಿಯ ವೆಂಕಟಯ್ಯ ಮತ್ತು ಹಿರಿಯಣ್ಣ ಇಬ್ಬರನ್ನೂ ನಂದೀಪುರದ ತಮ್ಮ ಹೊಸ ಬೀಗರ ಮನೆಗೆ ಸಮೀಪವಾಗಿದ್ದ ಮೂಡಿಗೆರೆಯ ಸ್ಕೂಲಿನಲ್ಲಿ ಓದನ್ನು ಮುಂದುವರಿಸಲು ಅಲ್ಲಿ ಮೇಷ್ಟರಾಗಿ ನಂದೀಪುರಕ್ಕೆ ಆಪ್ತರಾಗಿದ್ದ ರಂಗರಾಜಯ್ಯ ಎಂಬುವರ ಮೇಲ್ವಿಚಾರಣೆಯಲ್ಲಿರಲು ಅವರ ಮನೆಗೆ ಕಳಿಸಿದರು. ಹಾಗಾಗಿ ತೀರ್ಥಹಳ್ಳಿಯಲ್ಲಿದ್ದ ದೇವಂಗಿಯವರ ಸ್ವಂತ ಮನೆ, ಓದುವ ಅವರ ಹುಡುಗರಾರೂ ಇಲ್ಲದೆ, ಖಾಲಿಯಾಯಿತು. ಅದನ್ನು ಬಾಡಿಗೆಗೆ ಕೊಡಲು ದೇವಂಗಿಯವರಿಗೆ ಇಷ್ಟವಿರಲಿಲ್ಲವೊ? ಅಥವಾ ತಾಲ್ಲೂಕು ಕಛೇರಿ ಮೊದಲಾದ ಸರಕಾರೀ ಇಲಾಖೆಗಳಿದ್ದ ತೀರ್ಥಹಳ್ಳಿಗೆ ಆಗಾಗ ಬಂದೂ ಉಳಿದೂ ಹೋಗಬೇಕಾದ ಪ್ರಮೇಯವಿದ್ದುದರಿಂದ ಅಲ್ಲಿ ತಮ್ಮವರೇ ಇದ್ದರೆ ಅನುಕೂಲವಾಗುತ್ತದೆ ಎಂಬ ಕಾರಣದಿಂದಲೊ, ಆ ಮನೆಯನ್ನು ಕುಪ್ಪಳಿ ಹುಡುಗರ ಬಳಕೆಗೆ ಬಿಟ್ಟುಕೊಟ್ಟರೆಂದು ತೋರುತ್ತದೆ. ಆಗ ತೀರ್ಥಹಳ್ಳಿಯಲ್ಲಿ ಶ್ರೀಮಂತ ಸಭ್ಯಗೃಹಸ್ಥರು ಇಳಿದುಕೊಳ್ಳಲು ಅರ್ಹವಾದಂತಹ ಹೋಟಲುಗಳಾವುವೂ ಇರಲಿಲ್ಲ ಎಂಬುದನ್ನು ಮನಸ್ಸಿಗೆ ತಂದುಕೊಂಡರೆ ಮೇಲಿನ ಊಹೆ ತಪ್ಪಲ್ಲವೆಂಬುದು ಸಾಧಿತವಾಗುತ್ತದೆ. ಇದು ದೇವಂಗಿಯ ಹೆಣ್ಣನ್ನು ನಂದೀಪುರಕ್ಕೆ ಕೊಟ್ಟುದರಿಂದ ಆದದ್ದು: ಕುಪ್ಪಳ್ಳಿಯ ಹುಡುಗರಾದ ನಾವು ಆ ಮನೆಯ ಎದುರಿಗೇ ದಿಬ್ಬದಲ್ಲಿದ್ದ ಎ.ವಿ. ಸ್ಕೂಲಿನಲ್ಲಿ ಓದು ಮುಂದುವರಿಸಿದೆವು. ನಾನು ಕನ್ನಡ ಲೋವರ್ ಸೆಕೆಂಡರಿ ಪೂರೈಸಿದ್ದರಿಂದ ಆ ವರ್ಷ ಬರೀ ಇಂಗ್ಲಿಷ್ ಒಂದನ್ನೇ ಓದಿ ಪರೀಕ್ಷೆಗೆ ಕಟ್ಟಬೇಕಾಯಿತು.

ಇನ್ನು ದೇವಂಗಿಯ ಹೆಣ್ಣನ್ನು ಮೇಗರವಳ್ಳಿ ಸೀಮೆಯ ಹೊಸಮನೆಗೆ ಕೊಟ್ಟುದರಿಂದ ನನ್ನ ಬದುಕಿನ ಮೇಲೆ ಆದ ಪ್ರಭಾವ ಮತ್ತೂ ಸ್ವಾರಸ್ಯವಾದುದಾಗಿದೆ. ರಂಗಮ್ಮನನ್ನ ಮದುವೆಯಾದವರು ಹೊಸಮನೆ ಮಂಜಪ್ಪಗೌಡರು. ಅವರು ವಾಟಗಾರು ವೆಂಕಪ್ಪಗೌಡರು ಮತ್ತು ಕುಪ್ಪಳಿ ಐಯ್ಯಪ್ಪಗೌಡರು ಮೊದಲಾದವರಂತೆಯೆ ಕ್ರೈಸ್ತಪಾದ್ರಿಗಳ ಪ್ರಭಾವದಿಂದ ಮೈಸೂರಿನ ಹಾರ್ಡ್ವಿಕ್ ಸಂಸ್ಥೆಯಲ್ಲಿದ್ದು ಕೊಂಡು ಓದಿದವರು. ಐಯ್ಯಪ್ಪಗೌಡರು ವೆಂಕಟಪ್ಪಗೌಡರು ಲೋವರ್ ಸೆಕೆಂಡರಿಯಲ್ಲಿಯೆ ವಿದ್ಯಾಭ್ಯಾಸಕ್ಕೆ ಕೈಮುಗಿದು ಹಳ್ಳಿಗೆ ಹಿಂತಿರುಗಿದ್ದರು. ಹೊಸಮನೆ ಮಂಜಪ್ಪಗೌಡರು ಎಸ್.ಎಸ್.ಎಲ್. ಸಿ.ವರೆಗೂ ಓದಿ ಬಿಟ್ಟು ಬಂದಿದ್ದರು. ಅವರು ಶಿವಮೊಗ್ಗದಲ್ಲಿ ತೆರೆದಿದ್ದ ಅಡಕೆ ಮಂಡಿಯನ್ನು ನೋಡಿಕೊಳ್ಳುತ್ತಿದ್ದರು. ಹೆಂಡತಿ ತವರು ಮನೆಯಲ್ಲಿದ್ದಾಗ ಮಂಜಪ್ಪಗೌಡರು ಶಿವಮೊಗ್ಗದಿಂದ ಆಗಾಗ ಮಾವನ ಮನೆಗೆ ಹೋಗುವಾಗ ತೀರ್ಥಹಳ್ಳಿಯಲ್ಲಿ ನಾವು ಓದಲು ಇದ್ದ ದೇವಂಗಿಯವರ ಮನೆಯಲ್ಲಿ ತಂಗಿ, ರಾತ್ರಿ ಉಳಿದು, ಬೆಳಿಗ್ಗೆ ದೇವಂಗಿಯ ಬಗ್ಗಿ ಗಾಡಿ ಹೊಳೆಯಾಚೆ ಕಾದಿರುತ್ತಿತ್ತು ಅವರಿಗಾಗಿ. ಇಲ್ಲದಿದ್ದರೆ ಕಾಲುನಡಿಗೆಯಲ್ಲಿಯೆ ಹೊಳೆದಾಟಿ ದೇವಂಗಿಗೆ ಹೋಗುತ್ತಿದ್ದರು.

ತೀರ್ಥಹಳ್ಳಿಯಲ್ಲಿದ್ದ ದೇವಂಗಿಯವರ ಮನೆಯಲ್ಲಿ ನಾವು ಓದುತ್ತಿದ್ದಾಗ ನಮ್ಮನ್ನು ನೋಡಿಕೊಳ್ಳಲು ಜವಾಬುದಾರಿ ನನ್ನ ತಾಯಿಯದೇ ಆಗಿತ್ತು. ಒಬ್ಬ ಆಳೂ ಇದ್ದ ಮನೆ ಕೆಲಸಕ್ಕಾಗಿ. ತೀರ್ಥಹಳ್ಳಿಗೆ ಕೆಲಸಕ್ಕಾಗಿ ಬರುತ್ತಿದ್ದ ಹತ್ತಿರದ ನೆಂಟರೂ ಆಗಾಗ ಬಂದು ಉಳಿದು ಹೋಗುತ್ತಿದ್ದರು. ಹಾಗೆಯೇ ಹೊಸಮನೆ ಮಂಜಪ್ಪಗೌಡರೂ.

ಆದರೆ ನನ್ನ ಭಾಗಕ್ಕೆ ಹೊಸಮನೆ ಮಂಜಪ್ಪಗೌಡರಿಗೂ ಇತರರಿಗೂ ತುಂಬ ವ್ಯತ್ಯಾಸವಿತ್ತು. ಮಂಜಪ್ಪಗೌಡರು ವಿದ್ಯಾವಂತರಾಗಿಯೂ ಸುಸಂಸ್ಕೃರಾಗಿಯೂ ನಯ ವಿನಯವಂತರಾಗಿಯೂ ನಿರ್ಮಲ ವೇಷಭೂಷಣಗಳಿಂದ (ಬೆಳ್ಳನೆ ಬಿಳಿಯ ಮಲ್ಲುಪಂಚೆಯ ಕಚ್ಚೆ, ಅಚ್ಚ ಬಿಳಿಯ ಷರ್ಟು, ಸಾಧಾರಣ ಬಣ್ಣದ ಕೋಟು ಮತ್ತು ಅಚ್ಚುಕಟ್ಟಾದ ಪೇಟ) ಆಕರ್ಷಕರಾಗಿಯೂ ನನ್ನ ಮೆಚ್ಚುಗೆಗೂ ಗೌರವಕ್ಕೂ ಬಹುಬೇಗ ಪಾತ್ರರಾದರು. ಬಹುಶ: ನನ್ನಲ್ಲಿಯೂ ಏನೋ ವಿಶೇಷತೆಯನ್ನು ಗುರುತಿಸಿದ ಅವರೂ ನನ್ನೊಡನೆ ತುಂಬ ವಿಶ್ವಾಸದಿಂದ ವರ್ತಿಸುತ್ತಿದ್ದರು. ಎಲ್ಲಕ್ಕಿಂತಲೂ ಹೆಚ್ಚಾಗಿ ತಾವು ಇಂಗ್ಲಿಷ್ ಪುಸ್ತಕಗಳಲ್ಲಿ ಓದಿ ಮೆಚ್ಚಿದ್ದ ವಿಷಯಗಳನ್ನು ಕ್ರೈಸ್ತ ಉಪಾಧ್ಯಯರುಗಳಿಂದಲೂ ಮತ್ತು ಅವರ ಸಂಗಸಮಾಜದಿಂದಲೂ ಕಲಿತು ತಿಳಿದ ವಿಚಾರಗಳನ್ನು ಕುರಿತು ನನ್ನೊಡನೆ ಸಮಾನಸ್ಕಂಧನೆಂಬಂತೆ ಪ್ರಸ್ತಾಪಿಸಿ ನನ್ನ ಕುತೂಹಲವನ್ನು ಕೆರಳಿಸುತ್ತಿದ್ದರು. ಸ್ಯಾಮುಎಲ್‌ಸ್ಮೈಲ್ ಎಂಬಾತನು ಬರೆದಿದ್ದ ನೀತಿಬೋಧಕವಾದ ಗ್ರಂಥಗಳನ್ನು ಅವರು ಬಹಳ ಓದುತ್ತಿದ್ದರು. ಆ ದೊಡ್ಡ ಹೊತ್ತಗೆಗಳನ್ನು ಜೊತೆಯಲ್ಲಿಯೂ ತರುತ್ತಿದ್ದರು. ಅವುಗಳಲ್ಲಿ ನಿದರ್ಶನವಾಗಿರುತ್ತಿದ್ದ ಜಗತ್ತಿನ ಪಾಶ್ಚಾತ್ಯ ಜಗತ್ತಿನ ಮಹಾಪುರುಷರ, ಮಹಾಲೇಖಕರ, ಮಹಾಸೇನಾನಿಗಳ, ಮಹಾಕವಿಗಳ ಜೀವನದ ಸಂಗತಿಗಳನ್ನು ಸ್ವಾರಸ್ಯವಾಗಿ ಹೇಳಿ, ನಾವೂ ಅವರಂತೆ ಆಗಬೇಕೆಂದು ಪ್ರೋತ್ಸಾಹಿಸುತ್ತಿದ್ದರು. ನನ್ನ ಅಂತ:ಶ್ಚೇತನದ ಪೆಟ್ರೋಲಿಗೆ ಬೆಂಕಿ ತೋರಿಸಿದಂತಾಗುತ್ತಿತ್ತು!

ವಾಗ್ದೇವಿ ತನ್ನ ಕಂದನ ಸೃಷ್ಟಿಗೆ ಶಿಖರ ಕಂದರಾರಣ್ಯಮಯಸಹ್ಯಾದ್ರಿಯ ತೊಟ್ಟಿಲನ್ನು ಕಟ್ಟಿ, ಅಷ್ಟಕ್ಕೆ ಸುಮ್ಮನೆ ಕೂತಿರಲಿಲ್ಲ. ಹೇಗೆಹೇಗೆಯೊ ಸನ್ನಾಹಗಳನ್ನು ಜೋಡಿಸಿ, ಯಾರಯಾರ ಮುಖಾಂತರವೋ ಕವಿಚೇತನಕ್ಕೆ ತನ್ನ ಅಮೃತಸ್ತನ್ಯಪಾನ ಮಾಡಿಸಲು ತೊಡಗಿದ್ದಳು. ಹಾಗಲ್ಲದಿದ್ದರೆ ಕಾಡಿನಮೂಲೆಯ ಕುಪ್ಪಳಿ ಎಲ್ಲಿ? ದೇವಂಗಿ ಎಲ್ಲಿ? ದೂರದ; ಅಮೆರಿಕೆಯ ಪೋರ್ಟ್‌ಲೆಂಡ್ ಎಲ್ಲಿ? ವಿಶಾಲ ಸಾಗರಗಳಾಚೆಯ ಭೂಖಂಡದಲ್ಲಿ, ಸಂಪೂರ್ಣವಾಗಿ ಅಭಾರತೀಯ ಮಾತ್ರವಲ್ಲದೆ ಅಪ್ರಾಚ್ಯವೂ ಆದ ಅತ್ಯಂತ ವಿದೇಶಿಯ ಭಾಷೆಯಲ್ಲಿ ಹಾಡಿದ ಆ ಕವಿಯ ಗೀತೆಯೊಂದು ಕಾಲದೇಶಗಳ ಅಪಾರ ವಿಸ್ತಾರವನ್ನು ದಾಟಿ, ಮುಂದೆ ಕನ್ನಡದ ಮಹಾಕವಿಯಾಗಿ ಮೇರುಕೃತಿ ರಚನೆಗೆ ನಿಮಿತ್ತನಾಗುವ  ಕವಿಶಿಶುವಿನ ಹೃದಯದಲ್ಲಿ ಪ್ರಸ್ತುವಾಗಿದ್ದ ಸಾರಸ್ವತ ಪ್ರತಿಭೆಯ ಬತ್ತಿಗೆ ತನ್ನ  ದಿವ್ಯಾಗ್ನಿಯ ಸೊಡರನ್ನು ಅಂಕುರಿಸಲು ಸಾಧ್ಯವಾಗುತ್ತಿತ್ತೆ?

ಬೇಸಗೆಯಲ್ಲಿ ಒಂದು ಸಂಜೆ ಮಂಜಪ್ಪಗೌಡರು ಶಿವಮೊಗ್ಗದಿಂದ ಬಂದು ಉಳಿದರು, ಮರುದಿನ ಬೆಳಿಗ್ಗೆ ದೇವಂಗಿಗೆ, ಅಂದರೆ ಇಂಗ್ಲಾದಿಗೆ (ಆಗಲೆ ಮನೆತನ ಭಾಗವಾಗಿ ದೇವಂಗಿ, ಉಂಟೂರು, ಇಂಗ್ಲಾದಿನಗಳು ಮೂಡಿದ್ದುವೆಂದು ನನ್ನ ನೆನಪು!) ಹೋಗಲೆಂದು. ಆಗ ರಜಾಕಾಲವಾಗಿದ್ದರಿಂದ ನಾನು, ನನ್ನ ತಂಗಿಯರಿಬ್ಬರು ಮತ್ತು ನನ್ನ ತಾಯಿ ಮಾತ್ರ ತೀರ್ಥಹಳ್ಳಿಯಲ್ಲಿದ್ದೆವು. ಇತರ ಹುಡುಗರು ಮನೆಗೆ ಅಂದರೆ ಕುಪ್ಪಳಿಗೆ, ಹೋಗಿದ್ದರು. ಮಂಜಪ್ಪಗೌಡರು ಬಂದದ್ದು ನನಗೆ ತುಂಬ sಸಂತೋಷವಾಗಿತ್ತು. ಅವರೊಡನೆ ನಾನಾ ಪ್ರಶ್ನೆಗಳನ್ನು ಕೇಳಿ ಅವರು ಕೊಡುತ್ತಿದ್ದ ಉತ್ತರಗಳಿಂದ ಉದ್ದೀಪ್ತನಾಗುತ್ತಿದ್ದೆ. ನನ್ನ ಅವ್ವನೊಡನೆಯೂ ಅವರು ನನ್ನ ದೊಡ್ಡ ಭವಿಷ್ಯದ ವಿಚಾರವಾಗಿ ಹೇಳುತ್ತಿದ್ದರಂತೆ, ನನ್ನನ್ನು ಮುಂದಕ್ಕೆ ಓದಲು ಮೈಸೂರಿಗೆ ಕಳಿಸುವಂತೆ ಅವರು ಹೇಳಿದಾಗ ನನ್ನ ತಾಯಿ ತಾನು ಆ ವಿಷಯದಲ್ಲಿ ನಿಸ್ಸಹಾಯಕಳೆಂದೂ ಎಲ್ಲವೂ ಮನೆಯ ಯಜಮಾನರಾಗಿದ್ದ ಕುಪ್ಪಳ್ಳಿ ರಾಮಣ್ಣಗೌಡರ ಅಧಿಕಾರದಲ್ಲಿದೆ ಎಂದೂ ಹೇಳಿ ಕಣ್ಣೊರಸಿಕೊಂಡಿದ್ದರಂತೆ. ಅದಕ್ಕೆ ಅವರು ‘ನಾನೇ ರಾಮೇಗೌಡರಿಗೆ ಹೇಳಿ, ಮೈಸೂರಿನ ಓದುತ್ತಿರುವ ನನ್ನ ತಮ್ಮನ ಜೊತೆಗೆ ಇವನನ್ನು ಕಳಿಸುವಂತೆ ಹೇಳುತ್ತೇನೆ’ ಎಂದು ಧೈರ್ಯ ಹೇಳಿದ್ದರಂತೆ.

ಮರುದಿನ ಬೆಳಿಗ್ಗೆ ಕಾಫಿ ತಿಂಡಿ ಪೂರೈಸಿ ಅವರು ಹೊರಡಲನುವಾದರು. ತೀರ್ಥಹಳ್ಳಿಯಿಂದ ಇಂಗ್ಲಾದಿಗೆ ಸುಮಾರು ಆರೇಳು ಮೈಲಿ ಆಗುತ್ತದೆ. ದಾರಿ ಕಾಡುದಾರಿ ಸಾಮಾನ್ಯವಾಗಿ ನಿರ್ಜನ, ಒಬ್ಬರೇ ನಡೆದುಕೊಂಡು ಹೋಗುವುದು ಅವರಿಗೆ ಆಯಾಸಕರವಲ್ಲದಿದ್ದರೂ ಬೇಜಾರಾಗಿತ್ತೆಂದು ತೋರುತ್ತದೆ. ಜೊತೆಗೆ ಯಾರಾದರೂ ಇದ್ದರೆ ದಾರಿ ಸುಲಭವಾಗಿ ಸಾಗುತ್ತದೆಯಷ್ಟೆ ನನ್ನನ್ನು “ಬರುತ್ತೀಯಾ?” ಎಂದು ಕೇಳಿದರು. ನನಗೂ ಅಷ್ಟೇ ಬೇಕಾಗಿತ್ತು. ಹಿಗ್ಗಿನಿಂದ ಒಪ್ಪಿದೆ. ಅವರು ಅವ್ವನ್ನೂ ಕೇಳಿ ಒಪ್ಪಿಸಿದರು. ಆನಂದದಿಂದ ಅವರೊಡನೆ ಹೊರಟೆ.

ಬೆಳಗಿನ ಎಳೆಬಿಸಿಲಿನಲ್ಲಿ, ತಂಗಾಳಿಯಲ್ಲಿ ಕಲ್ಲುಸಂದಿಗಳಲ್ಲಿ ಮೊರೆಯುತ್ತಾ ಅನವರತ ಯಾತ್ರಿಯಾಗಿರುವ ಬೇಸಗೆಯ ತುಂಗಾನದಿಯನ್ನು ರಾಮೇಶ್ವರ ದೇವಸ್ಥಾನದ ಕಡೆಯಿಂದ ಕಲ್ಲುಸಾರಗಳ ಮೇಲೆ ದಾಟಿ, ಕೊಪ್ಪಕ್ಕೆ ಹೋಗುವ ಹೆದ್ದಾರಿ ಹಿಡಿದು ನಡೆದೆವು.

ಅತ್ತಕಾಡು, ಇತ್ತಕಾಡು, ದಟ್ಟವಾದ ಅರಣ್ಯಶ್ರೇಣಿ; ಎತ್ತರವಾಗಿದ್ದ ಮರಗಳಿದ್ದೆಡ ಆಕಾಶವೆ ಒಂದು ನೀಲಿಯ ಓಣಿ! ಕಾಡಿನ ಸಾಮಾನ್ಯ ನಿಃಶಬ್ದದ ಹಿನ್ನೆಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಹಾರಾಡುವ ತರತರದ ಹಕ್ಕಿಗಳ ಕೂಜನ. ನಾವು ಮಾತಾಡುತ್ತಾ ನಡೆದೆವು. ಕಾಲಿಗೆ ಸ್ಲಿಪ್ಪರ್ ಹಾಕಿದ್ದ ಅವರು ಬರಿಗಾಲಿನಲ್ಲಿ ನಡೆಯುತ್ತಿದ್ದ ನನ್ನ ಬಾಲವೇಗಕ್ಕೆ ತಮ್ಮ ವೇಗವನ್ನಿಳಿಸಿಕೊಂಡು, ಆಗಾಗ ‘ಕಾಲು ನೋಯುತ್ತದೇನಯ್ಯ’ ಎಂದು ಪ್ರಶ್ನಿಸಿ ಉತ್ತೇಜಿಸುತ್ತಿದ್ದರು. (ದೊಡ್ಡವರಾದ ಶ್ರೀಮಂತರಲ್ಲದ ನಮ್ಮಂತಹ ಹುಡುಗರು ಕಾಲಿಗೆ ಏನನ್ನೂ ಹಾಕಿಕೊಳ್ಳುತ್ತಿರಲಿಲ್ಲ. ಕಾಡುಮೇಡುಗಳನ್ನೆಲ್ಲ ನಾವು ಬರಿಗಾಲಿನಲ್ಲಿಯೆ ಸುತ್ತುತ್ತಿದ್ದುದು ವಾಡಿಕೆ. ಎಷ್ಟೋ ಸಾರಿ ಕಲ್ಲು ಎಡವಿ, ಮುಳ್ಳು ಚುಚ್ಚಿ, ಕೀತು, ಬಾತು, ಕಾಲುನೋವಿಗೆ ಜ್ವರ ಬರುತ್ತಿದ್ದುದೂ ಉಂಟು. ನಾನಂತೂ ಮೈಸೂರಿಗೆ ಹೋದಮೇಲೆಯೆ, ಅಲ್ಲಿಯ ವಿದ್ಯಾರ್ಥಿಗಳು ಕಾಲಿಗೆ ಮೆಟ್ಟನ್ನೂ ಬೂಟನ್ನೂ ಹಾಕಿಕೊಳ್ಳುತ್ತಿದ್ದುದನ್ನು ನೋಡಿ,

ಅವರಲ್ಲಿ ಕೆಲವರು ಬರಿಗಾಲಲ್ಲಿ ನಡೆಯುತ್ತಿದ್ದ ನನ್ನ ಹಳ್ಳಿಗಮಾರಿಕೆಯನ್ನು ಮೂದಲಿಸಿದ ಮೇಲೆಯೆ ಮೆಟ್ಟು ಕೊಂಡು ಹಾಕಿಕೊಳ್ಳಲು ಪ್ರಾರಂಭಿಸಿದ್ದು) ಆದರೆ ನನಗೆ ಕಾಲಿನ ಪರಿವೆಯೆ ಇರಲಿಲ್ಲ. ಅವರಾಡುತ್ತಿದ್ದ ಮಾತುಗಳಲ್ಲಿಯೆ ಆಸಕ್ತನಾಗಿದ್ದೆ. ಮೈಸೂರಿನ ವಿಚಾರ, ವಿದ್ಯಾಭ್ಯಾಸದ ವಿಚಾರ, ವಿದ್ಯೆಯಿಂದೊದಗುವ ಏಳ್ಗೆಯ ವಿಚಾರ ಗ್ರಂಥಗಳಿಂದ ನಮ್ಮ ಚೇತನ ವಿಕಾಸಕೊಂಡು ನಮಗುಂಟಾಗುವ ಅಭ್ಯುದಯ ವಿಚಾರ ಏನೇನೊ ಹೇಳುತ್ತಾ, ಹೇಳುತ್ತಾ ‘ಒಂದು ಇಂಗ್ಲಿಷ್ ಪದ್ಯ ಇದೆ. ಅದರಲ್ಲಿ ನಾವು ಜೀವನದಲ್ಲಿ ಹೇಗೆ ಸಾಗಬೇಕು,  ಯಾವ ಮನೋಧರ್ಮದಿಂದ ಮುಂದೆ ನುಗ್ಗಬೇಕು ಎಂಬುದನ್ನೆಲ್ಲ ಹೇಳಿದ್ದಾನೆ; ತುಂಬ ಸೊಗಸಾಗಿ’ ಎಂದರು. ನಾನು ಅದನ್ನು ಹೇಳಿ ವಿವರಿಸಲು ಕೇಳಿದೆ. ನನಗೆ ಇಂಗ್ಲಿಷ್ ತಿಳಿಯುತ್ತಿದ್ದುದೂ ಅಷ್ಟಕ್ಕಷ್ಟೆ! ಆದರೆ ಪಠ್ಯಪುಸ್ತಕದಲ್ಲಿದ್ದ ವರ್ಡ್ಸ್ ವರ್ತ್ ಮುಂತಾದ ಕವಿಗಳ ಕೆಲವು ಸುಲಭ ಕವನಗಳನ್ನು ಓದಿದ್ದೆನಲ್ಲವೆ? ಸಾಲದ್ದಕ್ಕೆ ಬೇರೆ, ಮೊದಲನೆಯ ಮಹಾಯುದ್ಧಕ್ಕೆ ನಿಧಿ ಶೇಖರಿಸಲು ತೀರ್ಥಹಳ್ಳಿಯ ಎ.ವಿ. ಸ್ಕೂಲಿನ ಮಕ್ಕಳು ಆಡಿದ್ದ ‘ದಿ ಮರ್ಚೆಂಟ್ ಆಫ್ ವೆನ್ನಿಸ್’ ನಾಟಕದಲ್ಲಿ ಷೈಲಾಕ್ ಪಾತ್ರ ವಹಿಸಿದ್ದೆನಲ್ಲವೆ?

ಅವರು ನೆನಪಿನಿಂದಲೆ ‘ಲಾಂಗ್ ಫೆಲೊ’ ಕವಿಯ ‘ದಿ ಸಾಮ್ ಆಫ್ ಲೈಫ್’ ಎಂಬ ಕವನವನ್ನು ಒಂದೊಂದೆ ಪದ್ಯವನ್ನಾಗಿ ಹೇಳುತ್ತಾ ವಿವರಿಸುತ್ತಾ ಸಾಧ್ಯವಾದಲ್ಲಿ ನಿದರ್ಶನಗಳನ್ನು ಕೊಡುತ್ತಾ ಸಾಗಿದರು.

1
Tell me not, in mournful numbers,
“Life is but an empty dream!”
For the soul is dead that slumbers
And things are not what they seem.

2
Life is real! Life is earnest!
And the grave is not its goal;
“Dust thou art, to dust returnest,”
Was not spoken of the soul.

3
Not enjoyment, and not sorrow,
Is our destined end or way;
But to act, that each to-morrow
Find us farther than to-day.

4
Art is long, and Time is fleeting,
And our hearts, though stout and brave,
Still, like muffled drums, are beating
Funeral marches to the grave.

5
In the world’s broad field of battle,
In the bivauvac of Life,
Be not like dumb, driven cattle!
Be a hero in the strife!

6
Trust no Future, however pleasant!
Let the dead Pasty bury its dead!
Act-act in the living present!
Heart within, and God o’erhead!

7
Lives of great men all remind us
We can make our lives sublime,
And, departing, leave behind us
Footprints on the sands of time-

8
Foot prints, that perhaps another,
Sailing o’er life’s solemn main,
A forlorn and ship wrecked brother,
Seeing, shall take heart again.

9
Let us then be and doing,
With a heart for any fate;
Still achieving, still pursuing,
Learn to labour and to wait.

ನನ್ನ ಆತ್ಮಕ್ಕೆ ಚೈತನ್ಯಪೂರ್ಣವಾದ ಒಂದು ಮಂತ್ರದೀಕ್ಷೆಯನ್ನೆ ಕೊಟ್ಟಿತ್ತು ಆ ಕವಿತೆ. “ಜಗತ್ತು ಮತ್ತು ಜೀವನ ಬರಿಯ ಒಂದು ಶೂನ್ಯ ಸ್ವಪ್ನವಲ್ಲ. ಹಾಗೆಂದುಕೊಂಡು ನಿದ್ರಿಸುವ ಜೀವ ಸತ್ತಂತೆಯೆ ಸರಿ! ಬದುಕು ಮಿಥ್ಯೆಯಲ್ಲ; ಬದುಕು ಸುದೃಢ ಸತ್ಯ. ಪಂಚಭೂತಗಳಿಂದ ಹುಟ್ಟಿಬಂದ ನೀನು ಪಂಚಭೂತಗಳಲ್ಲಿ ಸೇರಿ ಹೋಗುತ್ತೀಯೆ ಎಂಬುದು ಆತ್ಮಕ್ಕಲ್ಲ; ಆ ಮಾತು ಅನ್ವಯವಾಗುವುದು ದೇಹಕ್ಕೆ. ನಮ್ಮ ದಾರಿ, ನಮ್ಮ ಗುರಿ, ಸುಖಕ್ಕೂ ಅಲ್ಲ, ದುಃಖಕ್ಕೂ ಅಲ್ಲ, ಕಮ್ಮಕ್ಕೆ; ಕರ್ಮಮಾಡುವುದೆ ನಮ್ಮ

ಕರ್ತವ್ಯ. ಇಂದಿಗಿಂತ ನಾಳೆ, ಒಂದೊಂದು ದಿನಕ್ಕೂ ನಮ್ಮ ದಾರಿ ಮುಂದುಮುಂದಕ್ಕೆ ಸಾಗುತ್ತಿರಬೇಕು. ವಿದ್ಯೆ, ಕಲೆ, ಜ್ಞಾನ ಇವು ಅನಂತ, ಅಪಾರ, ನಮ್ಮ ಆಯುಸ್ಸಾದರೊ ಕ್ಷಣಿಕವೆಂಬಂತೆ ಮಿಂಚಿಹರಿಯುತ್ತಿದೆ. ಯಾವತ್ತಾದರೂ ಮೃತ್ಯುವಿನ ಕರೆ ಬರಹುದು ನಮಗೆ. ಆದ್ದರಿಂದ ಬದುಕಿನ ಕದನ ರಂಗದಲ್ಲಿ, ಮೂಕಪ್ರಾಣಿಗಳಂತಲ್ಲದೆ, ವೀರರಂತೆ ಹೋರುತ್ತಾ ಮುನ್ನುಗ್ಗಬೇಕು. ಭವಿಷ್ಯತ್ತಿನ ಸುಖಸ್ವಪ್ನ ನಂಬಿ ಕುಳಿತಿರಬಾರದು; ಹಾಗೆಯೆ ಕಳೆದ ಕಾಲದ ವೈಭವವನ್ನೆ ಮೆಲುಕು ಹಾಕುತ್ತಲೂ ಇರಬಾರದು; ಹಿಂದಕ್ಕೂ ನೋಡದೆ, ಮುಂದಕ್ಕೂ ಹಾಕದೆ, ಇಂದಿನದನ್ನು ಇಂದೆಯೆ ಮಾಡಿ ಪೂರೈಸಬೇಕು, ಹೃದಯದ ಧೈರ್ಯೋತ್ಸಾಹ ಕೆಡದೆ, ಭಗವಂತನಲ್ಲಿ ಮಹಾಪುರುಷರು. ಅವರನ್ನನುಸರಿಸಿ ಅವರ ಮಾರ್ಗದರ್ಶಿಗಳಾಗಿದ್ದಾರೆ ಜಗತ್ತಿನ ಮಹಾಪುರುಷರು. ಅವರನ್ನನುಸರಿಸಿ ಅವರ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆದರೆ ನಮ್ಮ ಬದುಕು ಭವ್ಯವಾಗುತ್ತದೆ. ಅಳಿದ ಮೇಲೆ ನಾವೂ ಅವರಂತೆಯೆ ಕಾಲದ ಹೊಳೆಯ ಮರುಳುದಿಣ್ಣೆಯ ಮೇಲೆ ನಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಬಹುದು. ಬಹುಶಃ ನಮ್ಮ ತರುವಾಯ ನಮ್ಮ ಹಿಂದೆ ಸಂಸಾರ ಮಹಾಸಾಗರದಲ್ಲಿ ತೇಲುತ್ತಾ ಬರುವ ಯಾವನಾದರೊಬ್ಬ ಹಡಗೊಡೆದು ದಿಕ್ಕುಗೆಟ್ಟು ಬರುವ ಜೀವನಪ್ರಯಾಣಿಕನು ಆ ನಮ್ಮ ಹೆಜ್ಜೆಗುರುತುಗಳನ್ನು ಕಂಡು ಧೈರ್ಯತಂದುಕೊಂಡು ಮುಂಬರಿಯಬಹುದು. ಆದ್ದರಿಂದ ಎದ್ದೇಳು! ಕರ್ಮನಿರತನಾಗು! ಬಂದದ್ದೆಲ್ಲಾ ಬರಲಿ! ಹೋಗುತ್ತಾ ಜಯಿಸುತ್ತಾ ಮುಂದುವರಿ! ಕರ್ಮಮಾಡುತ್ತಾ ತಾಳ್ಮೆಗೆಡದೆ ಕಾಯುವುದನ್ನು ಕಲಿ!”

ಆಲಿಸುತ್ತಾ ಆಲಿಸುತ್ತಾ ನನ್ನ ಜೀವ ಜ್ವಾಲಾಮಯವಾಯ್ತು, ನನ್ನ ಅಂತಃಶ್ಚೇತನಕ್ಕೊಂದು ಮೊತ್ತಮೊದಲನೆಯ ‘ಉಪನಯನ’ ವಾಯ್ತು! ಚೈತನ್ಯ ಕಣ್ಣುಬಿಟ್ಟಿತು ಎಚ್ಚರಗೊಂಡು!

“ಇನ್ನೆಲ್ಲಿಯ ನಿದ್ದೆ?”

ಮಂಜಪ್ಪಗೌಡರು ತಾವು ಮಾಡುತ್ತಿದ್ದುದರ ಮಹತ್ತಿನ ಅರಿವಿಲ್ಲದೆ, ಮಾವನ ಮನೆಯಲ್ಲಿ ಒದಗಲಿರುವ ಒಲವಿನ ಮುಖದರ್ಶನದ ಮಹೋತ್ಸಾಹದಿಂದ ಸಾಗಿದ್ದರು!

ಇಂಗ್ಲಾದಿಗೆ ಹೋದಮೇಲೆ ನಾನು ಆ ಪದ್ಯವನ್ನು ಬರೆದುಕೊಡುವಂತೆ ಅವರನ್ನು ಕೇಳಿಕೊಂಡೆ. ಅವರೂ ತುಂಬ ಸಂತೋಷದಿಂದಲೆ ಬರೆದುಕೊಟ್ಟರು. ನಾನು ಅದನ್ನು ಮತ್ತೆಮತ್ತೆ ಓದಿಓದಿ ಬಾಯಿಪಾಠ ಮಾಡಿದೆ. ಅದು ನನ್ನ ಹೃದಯದಲ್ಲಿ ಎಷ್ಟು ಆಳವಾಗಿ ಬೇರೂರಿತೆಂದರೆ ಅಂದು ಬಾಯಿಪಾಠಮಾಡಿದ್ದು ಇಂದಿಗೂ ಒಂದಿನಿತೂ ಮಾಸಿಲ್ಲ!

ಮುಂದೆ ನನ್ನ ಜೀವನದಲ್ಲಿ ಈ ‘ಸಾಮ್ ಆಫ್ ಲೈಫ್’ಗಿಂತಲೂ ಭಾಷೆಯಲ್ಲಿ ಭಾವದಲ್ಲಿ ದರ್ಶನದಲ್ಲಿ ಉನ್ನತೋನ್ನತವಾದ ಸಾಹಿತ್ಯವನ್ನು ಸಂಧಿಸುವ ಪುಣ್ಯ ಲಭಿಸಿತು. ಭಗವದ್ ಗೀತೆಯಲ್ಲಿ ಉಪನಿಷತ್ತುಗಳಲ್ಲಿ ಈ ಇಂಗ್ಲಿಷ್ ಕವನವನ್ನು ಬರಿಯ ಬಾಲಭಾಷೆಯನ್ನಾಗಿಸಿ ತೊದಲುಗೊಳಿಸುವ ಭಾಗಗಳೂ ಯಥೇಚ್ಛವಾಗಿವೆ. ಆದರೆ ನನ್ನ ಬಾಲ್ಯದ ‘ಗುರು’ವಾಗಿ ನನ್ನ ಚೇತನಕ್ಕೆ ಕಣ್ದೆರೆಯಿಸಿದ ಈ ಕವನ ನನ್ನ ಪ್ರಪ್ರಥಮ ದೀಕ್ಷಾಗುರುವಾಗಿಯೆ ನಿಂತಿದೆ!