ಆ ವರ್ಷ (೧೯೧೯-೨೦) ನಾನು ಇಂಗ್ಲಿಷ್ ಲೋವರ್ ಸೆಕೆಂಡರಿ ಕಟ್ಟಿದೆ. ಹಿಂದಿನ ವರ್ಷ (೧೯೧೮-೧೯) ಕನ್ನಡ ಲೋವರ್ ಸೆಕೆಂಡರಿಯಲ್ಲಿ ಇತರ ಎಲ್ಲ ವಿಷಯಗಳನ್ನೂ ಕಟ್ಟಿ ತೇರ್ಗಡೆಯಾಗಿದ್ದರಿಂದ ಈ ವರ್ಷ ಬರಿಯ ಇಂಗ್ಲಿಷ್ ಭಾಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಕೂರಬೇಕಾಗಿತ್ತು.

ಯಥಾಪ್ರಕಾರ ಐಯ್ಯಪ್ಪಗೌಡರು ನಮ್ಮ ಮನೆಯ ಗಾಡಿಯಲ್ಲಿಯೆ ನನ್ನೊಬ್ಬನನ್ನೆ ಶಿವಮೊಗ್ಗಕ್ಕೆ ಕರೆದುಕೊಮಡು ಹೋದರು. ಹಿಂದಿನ ವರ್ಷದಂತೆಯೆ ತೂದೂರು ಕಟ್ಟೆಯಲ್ಲಿ ಹೊಳೆಯ ಮಳಲಿನ ಮೇಲೆ ಗಾಡಿ ಬಿಟ್ಟಿದ್ದೆವು. ಆದರೆ ಶಿವಮೊಗ್ಗದಲ್ಲಿ ಕೋರ್ಪಾಲಿ ಛತ್ರಕ್ಕೆ ಹೋಗಲಿಲ್ಲ. ಕುಂಬಾರಗುಂಡಿ ಎಂಬಲ್ಲಿ, ದಿನಸಿ ಅಡಕೆ ಮುಂತಾದುವನ್ನು ಪೇಟೆಗೆ ತಂದು ಗಾಡಿ ಬಿಡುತ್ತಿದ್ದ ಇತರ ನೂರಾರು ಗಾಡಿಗಳ ಗೊಂದಲದ ನಡುವೆ ನಮ್ಮ ಗಾಡಿಯೂ ಬಿಟ್ಟಿತ್ತು. ಅಲ್ಲಿಯೆ ಕಸ ಕೊಳಕಿನ ನಡುವೆ ಇದ್ದ ಸುಂಕದ ಮನೆಯ ಒಂದು ಭಾಗದಲ್ಲಿ ಕಲ್ಲು ಗುಂಡು ಹೂಡಿ ಬೆಳಗಿನ ಅಡುಗೆ ಮಾಡಿದರು. ಊಟಮಾಡಿಸಿ ನನ್ನನ್ನು ಹೈಸ್ಕೂಲಿನ ಪರೀಕ್ಷಾ ಮಂದಿರಕ್ಕೆ ಕರೆದೊಯ್ದು  ಬಿಟ್ಟರು. ಹೋದ ವರ್ಷ ಅಲ್ಲಿಯ ಪರೀಕ್ಷೆಗೆ ಕೂತಿದ್ದವಾದ್ದರಿಂದ ಈ ವರ್ಷ ನಮ್ಮ ಕಡೆಯ ಪರಿಚಿತ ವಿದ್ಯಾರ್ಥಿಗಳಾರೂ  ಇರದಿದ್ದರೂ  ಅಷ್ಟೇನೂ ಗ್ರಾಮಿಣತೆಯನ್ನು ಅನುಭವಿಸಲಿಲ್ಲ ನಾನು. ಒಂದೇ ದಿನದಲ್ಲಿ ಇಂಗ್ಲಿಷಿನ ಎರಡೂ ಪ್ರಶ್ನೆಪತ್ರಿಕೆಗಳು ಮುಗಿದವು. ಮತ್ತೆ ಆ ರಾತ್ರಿಯೆ ವಾಪಸು ಗಾಡಿ ಕಟ್ಟಿದೆವು!

ಪರೀಕ್ಷೆಯಲ್ಲಿ ತೇರ್ಗಡೆಯಾಯಿತು. ಮುಂದೆ? ಆ ಕಾಲದಲ್ಲಿ ಆ ಹಳ್ಳಿಯ ಗೌಡರಲ್ಲಿ ಲೋವರ್ ಸೆಕೆಂಡರಿ ಪಾಸುಮಾಡಿದವರೆಂದರೆ ದೊಡ್ಡ ವಿದ್ವಾಂಸರು. ಎರಡಕ್ಷರ ಇಂಗ್ಲಿಷ್ ತಿಳಿದರೆ ಸಾಕು. ಮುಂದೆ ಓದಿ ಏನು ಅಮಲ್ದಾರಿಕೆ ಮಾಡಬೇಕೆ? ಆ ಮನೋಧರ್ಮ ಇದ್ದದ್ದರಿಂದಲೆ ಎಸ್.ಎಸ್.ಎಲ್. ಸಿ . ಓದಿದ್ದ ಮಂಜಪ್ಪಗೌಡರಲ್ಲಿ ಅಲ್ಲಿಯ ಎಲ್ಲರಿಗೂ ಅಷ್ಟೊಂದು ಗೌರವ, ಒಂದು ತೆರನಾದ ಭಯಮಿಶ್ರಿತ ಗೌರವ! ತಮಗಿಂತ ಅವರು ‘ಇಪರೀತ’ ಓದಿದ್ದಾರೆ ಎಂದು! ಅವರು ನಮ್ಮ ಚಿಕ್ಕಪ್ಪಯ್ಯಗಃ “ಹುಡುಗ ಬಹಳ ಚುರುಕಾಗಿದ್ದಾನೆ. ಮುಂದೆ ಓದಿಸಿದರೆ ಒಳ್ಳೆಯದಾಗುತ್ತದೆ. ನನ್ನ ತಮ್ಮ ರಾಮಪ್ಪ ಮತ್ತು ಗೋವಿನಹಳ್ಳಿ ವೆಂಕಪ್ಪಗೌಡರ ಮಗ ರಾಮಪ್ಪ ಇಬ್ಬರೂ ಹಾರ್ಡ್ವಿಕ್ ಕಾಲೇಜಿನಲ್ಲಿ ಓದುತ್ತಿದ್ದಾರೆ. ಬೇಸಗೆ ರಜ ಮುಗಿದ ಮೇಲೆ ಅವರೊಡನೆ ಪುಟ್ಟಪ್ಪನನ್ನು ಕಳಿಸಿ. ಊಟ ಬಟ್ಟೆ ಎಲ್ಲವನ್ನು ಕೊಟ್ಟು ಮಿಶನ್ ಸ್ಕೂಲಿನಲ್ಲಿ ಫೀ ತೆಗೆದುಕೊಳ್ಳದೆ ಓದಿಸುತ್ತಾರೆ. ನಿಮಗೆ ಹಣದ ತೊಂದರೆಯೂ ಆಗುವುದಿಲ್ಲ!” ಎಂದೆಲ್ಲ ಹೇಳಿ ಅವರ ಮನ ಒಲಿಸಿದರು. ಅದೂ ಅಲ್ಲದೆ, (ಮುಂದೆ ನಾನು ಅಳಿಯನಾಗುತ್ತೇನೆ ಎಂಬ ಅರಿವಾಗಲಿ ಆಶೆಯಾಗಲಿ ಒಂದಿನಿತೂ ಇಲ್ಲದೆ) ದೇವಂಗಿ ರಾಮಣ್ಣ ಗೌಡರು ತಮ್ಮ ಭಾವನಿಗೆ, ತಂದೆಯನ್ನು ಕಳೆದುಕೊಂಡು ಕುಪ್ಪಳಿಯ ಅರ್ಧ ಆಸ್ತಿಗೆ ಹಕ್ಕುದಾರನಾಗಿದ್ದ ನನ್ನನ್ನು ಮುಂದಕ್ಕೆ ಓದಲು ಕಳಿಸಿದಿದ್ದರೆ ಅಪವಾದಕ್ಕೆ ಗುರಿಯಾಗುತ್ತೀರಿ ಎಂದೂ ಹೇಳಿದ್ದರೂ ಹೇಳಿರಬಹುದು. ಏಕೆಂದರೆ ಇಂತಹ ವಿಚಾರಗಳಲ್ಲಿ ದೇವಂಗಿ ರಾಮಣ್ಣಗೌಡರು ತುಂಬ ಪ್ರಗತಿಪರ ದೃಷ್ಟಿಯುಳ್ಳವರಾಗಿ ತುಸು ಕ್ರಾಂತಿಕಾರಿ ಮನೋಧರ್ಮದವರಾಗಿಯೂ ಇದ್ದರು.

ಇದೆಲ್ಲದರ ಜೊತೆಗೆ ವಿಧಿತಂತ್ರವೆಂಬಂತೆ ಮತ್ತೊಂದು ಸಂಗತಿಯೂ ಜರುಗಿತು. ಮೈಸೂರು ಸಂಸ್ಥಾನದ ವಿದ್ಯಭ್ಯಾಸ ಇಲಾಖೆಯ ಪ್ರಧಾನಾಧಿಕಾರಿಯಾಗಿದ್ದ ಸಿ.ಆರ್.ರೆಡ್ಡಿಯವರು ತಮ್ಮ ಶಾಲಾ ಪರಿಶೀಲನ ಪ್ರವಾಸದಲ್ಲಿ ತೀರ್ಥಹಳ್ಳಿಗೆ ಬಂದಿದ್ದರು. ಅವರೂ ಒಕ್ಕಲಿಗರಾದ್ದರಿಂದಲೂ ಬ್ರಾಹ್ಮಣೇತರರ ಏಳಿಗೆಗಾಗಿ ಶ್ರಮಿಸುತ್ತಿದ್ದವರಾದ್ದರಿಂದಲೂ ಆ ನಾಡಿನ ಗೌಡರುಗಳಲ್ಲಿ ಹೆಸರುವಾಸಿಯಾಗಿ, ಅಗ್ರಗಣ್ಯರಾಗಿ, ಮೈಸೂರಿನ ಪ್ರಜಾಪ್ರತಿನಿಧಿ ಸಭೆಯ ‘ಮೆಂಬರೂ’ ಆಗಿದ್ದ ದೇವಂಗಿ ರಾಮಣ್ಣಗೌಡರನ್ನು ಸಂಧಿಸುವ ಕಾರ್ಯಕ್ರಮ ಇಟ್ಟುಕೊಂಡರು. ಅವರೊಡನೆ ಇಂಗ್ಲಿಷಿನಲ್ಲಿ ಸಂಭಾಷಿಸಿ ಅಹವಾಲುಗಳನ್ನು ಹೇಳಿಕೊಳ್ಳುವ ಸಲುವಾಗಿ ರಾಮಣ್ಣಗೌಡರು ತಮ್ಮ ಅಳಿಯ ಮಂಜಪ್ಪಗೌಡರನ್ನು ಕರೆಸಿಕೊಂಡರು! ಸಿ.ಆರ್.ರೆಡ್ಡಿಯವರು ಇಂಗ್ಲಾದಿಗೆ ಬಂದರು. ಅವರ ವೇಷಭೂಷಣ ಠೀವಿಗಳು ಹಳ್ಳಿಗರನ್ನು ದಿಗ್ ಭ್ರಮೆಗೊಳಿಸುವಂತಿದ್ದುವು. ಕ್ರಾಪು, ಕನ್ನಡಕ, ಟೈ, ಅತ್ಯಂತ ಬೆಲೆಬಾಳುವ ಮಿರುಗು ಬಟ್ಟೆಯ ಕೋಟು, ಷರಾಯಿ, ಬೂಟ್ಸು, ಆಕ್ಸ್ ಫರ್ಡ್ ಇಂಗ್ಲಿಷ್, ಎಲ್ಲವೂ ಆಕ್ಸ್ ಫರ್ಡ್!

ಏನೇನು ಅಹವಾಲು ಹೇಳಿದರೋ ನನಗೆ ಗೊತ್ತಿಲ್ಲ. ಆ ಹೊತ್ತಿಗೆ ನನ್ನನ್ನೂ ಅಲ್ಲಿಗೆ ಕರೆಸಿಕೊಂಡಿದ್ದರು. ನನ್ನನ್ನೂ ಅವರ ಮುಂದೆ ಪ್ರದರ್ಶಿಸಿ ಇಂಗ್ಲಿಷಿನಲ್ಲಿ ಏನ್ನನ್ನೊ ಹೇಳಿದರು ಮಂಜಪ್ಪಗೌಡರು. ರೆಡ್ಡಿಯವರೂ ಮೆಚ್ಚುವಂತೆ ಸಮ್ಮತಿಸುವಂತೆ ಸಭ್ಯ ಸಂಪ್ರದಾಯದ ಮುಗುಳನಗೆ ಬೀರಿದರು. ಆಮೇಲೆ ನನಗೆ ತಿಳಿದುಬಂತು, ನನಗೆ ಸ್ಕಾಲರ್ ಷಿಪ್ ಕೊಡಿಸುವುದಾಗಿ ಭರವಸೆ ಕೊಟ್ಟರು ಎಂದು.

ಅಂತೂ ಈ ಎಲ್ಲ ಉಪಾಯಗಳನ್ನೂ ತನ್ನ ಇಚ್ಛಾಪ್ರಣಾಳಿಕೆಗಳನ್ನಾಗಿ ಮಾಡಿಕೊಂಡು ವಿಧಿ ನನ್ನನ್ನು ಮೈಸೂರಿಗೆ ಸೆಳೆಯುವ ತಂತ್ರ ಹೂಡಿತ್ತು.

ಬೇಸಗೆ ರಜ ಮುಗಿಯಿತು. ಕುಪ್ಪಳಿಯ ಹುಡುಗ ಮೈಸೂರಿಗೆ ಹೋಗುವುದೆಂದರೆ ಸಾಮಾನ್ಯವೆ? ಉದ್ವೇಗಪೂರ್ಣ ಸಂಭ್ರಮ! ಅವ್ವ ಒಂದೆರಡು ಬಗೆಯ ಹಳ್ಳಿತಿಂಡಿಮಾಡಿ ಗಂಟುಕಟ್ಟಿಕೊಟ್ಟರು. ತಮ್ಮ ಒಂದು ಹೊಚ್ಚಹೊಸ ಬಣ್ಣದ ಕಿರುಜಮಖಾನೆಯನ್ನು ಸುತ್ತಿ ಹಾಸಗೆಯ ಗಂಟನ್ನೂ ಕಟ್ಟಿಕೊಟ್ಟರು. ಮೈಸೂರಿಗೆ ಓದಲು ಹೋಗುವ ಸಂಭ್ರಮದ ಸಂತೋಷವಿದ್ದರೂ ತಾಯಿಯಿಂದ ಆಗಲಿ ದೂರ ಹೋಗುವ ಒಳಯಾತನೆ ಇಲ್ಲದಿರಲಿಲ್ಲ.

ಆಗ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೇಗೆ ಪ್ರಯಾಣ ಮಾಡಿದೆನೋ ಸರಿಯಾಗಿ ನೆನಪಿಲ್ಲ. ಬಹುಶ: ಆಗತಾನೆ ಶುರುವಾಗಿದ್ದ ಬಸ್ಸಿನಲ್ಲಿದ್ದರೂ ಇರಬಹುದು. ಶಿವಮೊಗ್ಗದಲ್ಲಿ ಹೊಸಮನೆ ಮಂಜಪ್ಪಗೌಡರು ನೋಡಿಕೊಳ್ಳುತ್ತಿದ್ದ ದೇವಂಗಿ ಅಡಕೆಮಂಡಿಯ ಮನೆಯಲ್ಲಿ ಇಳಿದುಕೊಂಡೆ. ಹೊಸಮನೆ ರಾಮಪ್ಪನೂ ಗೋವಿನಹಳ್ಳಿ ರಾಮಪ್ಪನೂ ಮೈಸೂರಿಗೆ ಹೋಗುವ ಮಾರ್ಗವಾಗಿ ಅಲ್ಲಿಗೆ ಬಂದು ನನ್ನನ್ನೂ ಕರೆದುಕೊಂಡು ರೈಲು ಹತ್ತಿದರು. ಇನ್ನೊಂದು ನೆನಪು. ನನ್ನನ್ನು ಮೈಸೂರಿಗೆ  ಬಿಟ್ಟುಬರಲು ನಮ್ಮ ದೊಡ್ಡ ಚಿಕ್ಕಪ್ಪಯ್ಯ ಕುಪ್ಪಳಿ ರಾಮಣ್ಣಗೌಡರೇ ನನ್ನನ್ನು ಶಿವಮೊಗ್ಗಕ್ಕೆ ಕರೆತಂದರು ಎಂದು. ಜೊತೆಗೆ ದೇವಂಗಿ ರಾಮಣ್ಣಗೌಡರೂ ಮೈಸೂರಿನಲ್ಲಿ* ಡಾಕ್ಟರ್ ರಾಜಗೋಪಾಲು ಮೊದಲಿಯಾರರ ಮನೆಯಲ್ಲಿ ಓದಲಿಕ್ಕಿದ್ದ ಅವರ ಮಗ, ಮಾನಪ್ಪನನ್ನು ನೋಡಲಿಕ್ಕೆಂದು ಬಂದರೆಂದೂ ನೆನಪು. ನಾವೆಲ್ಲ ಒಟ್ಟಿಗೆ ರೈಲು ಪ್ರಯಾಣ ಮಾಡಿ ಮೈಸೂರು ತಲುಪಿದೆವು. ನನ್ನ ಮೊತ್ತಮೊದಲ ರೈಲ್ ಪ್ರಯಾಣ! ಆ ಬೆರಗು, ಆ ಕುತೂಹಲ, ಆ ಆನಂದ, ಆ ಹೊಸ ಲೋಕದ ಉತ್ಸಾಹ ಹೇಳತೀರದು.

ಹೊಸಮನೆ ರಾಮಪ್ಪ, ಗೋವಿನಹಳ್ಳಿ ರಾಮಪ್ಪ ಇಬ್ಬರೂ ನನ್ನನ್ನು ಡಾಕ್ಟರ್ ರಾಜಗೋಪಾಲ ಮೊದಲಿಯಾರರ ಮನೆಯಲ್ಲಿ ಬಿಟ್ಟು ಹಾರ್ಡ್ವಿಕ್ ಕಾಲೇಜಿಗೆ ಹೋದದ್ದು, ಅಲ್ಲಿ ಹಾಸ್ಟಲಿನಲ್ಲಿ ನನಗೂ ಜಾಗ ದೊರೆಯುವಂತೆ ಗೊತ್ತುಮಾಡಿದ ಮೇಲೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಸೇರಿಸುವುದಾಗಿ ಹೇಳಿ, ಆದರೆ ಮರುದಿನ ಹಿಂತಿರುಗಿ ಬಂದು, ಹಾರ್ಡ್ವಿಕ್ ಹಾಸ್ಟೆಲಿನಲ್ಲಿ ಸೇರುವುದು ಬೇಡ, ನಾವೇ ಒಂದು ರೂಂ ಬಾಡಿಗೆಗೆ ತೆಗೆದುಕೊಂಡು, ಹೋಟೆಲಿನಲ್ಲಿ ಊಟಕ್ಕೆ ಗೊತ್ತುಮಾಡಿ, ಸಮಿಪದ ವೆಸ್ಲಿಯನ್ ಮಿಶನ್ ಹೈಸ್ಕೂಲಿಗೆ ಸೆರೋಣ ಎಂದು ಹೇಳಿದರು. ಕಾರಣ?

ಮಲೆನಾಡಿನ ಒಕ್ಕಲಿಗ ಹುಡುಗರನ್ನು-ವಿಶೇಷವಾಗಿ ಪ್ರತಿಷ್ಠಿತ ಶ್ರೀಮಂತ ಮನೆತನದವರನ್ನು-ಬಿಟ್ಟಿ ಊಟ ಬಿಟ್ಟಿ ಬಟ್ಟೆ ಕೊಟ್ಟು ಓದಿಸುವ ನೆಪದಲ್ಲಿ ಕ್ರಿಶ್ಚಿಯನ್ ಸಂಸ್ಥೆಯಾದ ಹಾರ್ಡ್ವಿಕ್ ಹಾಸ್ಟೆಲಿಗೆ ಆಕರ್ಷಿಸಿದ್ದರು. ಮುಂದೆ ಎಂದಾದರೂ ಹೇಗಾದರೂ ಮಾಡಿ ಅವರನ್ನೆಲ್ಲ ಕ್ರೈಸ್ತಮತಕ್ಕೆ ಸೇರಿಸಿಕೊಳ್ಳಬಹುದೆಂಬ ದೂರದ ಉದ್ದೇಶವಾಗಿತ್ತು ಮಿಷನರಿಗಳದ್ದು. ಕುಪ್ಪಳಿ ಐಯಪ್ಪಗೌಡರು, ವಾಟಗಾರು ವೆಂಕಪ್ಪಗೌಡರು, ಹೊಸಮನೆ ಮಂಜಪ್ಪಗೌಡರು ಮುಂತಾದವರೆಲ್ಲ ಸೇರಿ, ಓದಿ, ಬಿಟ್ಟು ಬಂದಿದ್ದರು; ಕ್ರೈಸ್ತಮತಕ್ಕೆ ಸೇರದೆಯೆ! ಮಂಡಗದ್ದೆ ಚನ್ನಪ್ಪಗೌಡರು ಮತ್ತು ಅಂತಹ ಇನ್ನೂ ಒಬ್ಬಿಬ್ಬರು ಮತಾಂತರ ಹೊಂದಿಯೂ  ಇದ್ದರು. ಆದರೆ ಮಿಷನರಿಗಳಿಗೆ ತಾವು ಖರ್ಚುಮಾಡುವ ವೆಚ್ಚಕ್ಕೂ ಮತಾಂತರ ಹೊಂದುವವರ ಸಂಖ್ಯೆಗೂ ಬಹಳ ನಷ್ಟದ ಅಂತರ ಕಂಡುಬಂದುದರಿಂದಲೊ ಏನೊ, ನಾನು ಮೈಸೂರಿಗೆ ಬಂದ ಆ ವರ್ಷದಿಂದ, ಕ್ರೈಸ್ತರಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಬಿಟ್ಟಿ ಊಟ ಬಿಟ್ಟಿ ಬಟ್ಟೆ ಬಿಟ್ಟಿ ಓದು ಲಭಿಸುವುದಾಗಿಯೂ ಉಳಿದವರು ತಗಲುವ ವೆಚ್ಚ ಕೊಡಬೇಕೆಂದೂ ನಿರ್ಣಯಿಸಿದರಂತೆ. ಈ ಆಜ್ಞೆ ನನ್ನಂತಹ ಹೊಸದಾಗಿ ಬಂದು ಸೇರುವವರಿಗೆ ಪೂರ್ತಿಯಾಗಿಯೂ ಆಗಲೇ ಸೇರಿ ಹಾಸ್ಟೆಲಿನಲ್ಲಿ ಓದುತ್ತಿದ್ದವರಿಗೆ ಆಂಶಿಕವಾಗಿಯೂ ಅನ್ವಯವಾಗಿತ್ತು. ಅಂದರೆ ರಾಮಪ್ಪದ್ವಯರಿಗೆ ಬಿಟ್ಟಿ ಊಟ ಸಿಕ್ಕುತ್ತಿತ್ತು, ಅವರು ಸೇರಿದ್ದರೆ. ಆದರೆ ಅದುವರೆಗೂ ಬಿಟ್ಟಿ ಬಟ್ಟೆ ಕೊಡುತ್ತಿದ್ದವರು ಅದನ್ನು ಕೊಡುವುದಿಲ್ಲ ಎಂದುದಕ್ಕೆ ತಮಗೆ ಮಹಾ ಅನ್ಯಾಯ ಮಾಡಿದ್ದಾರೆ ಎಂದು ಸಿಟ್ಟುಗೊಂಡು ಅಲ್ಲಿಗೆ ಸೇರುವುದೇ ಬೇಡ ಎಂದು ನಿರ್ಣಯಿಸಿದ್ದರು! ತರುವಾಯ ನನ್ನೊಡನೆ ಇನ್ನೂ ಇತರ ಅನೇಕ ಕಾರಣಗಳನ್ನೂ ಹೇಳಿದರು ಅನ್ನಿ, ಅತಿಶಿಸ್ತು, ಹಾಳು ಊಟ, ಕಿಲಸ್ತರಂತೆ ಚರ್ಚಿಗೆ ಹೋಗಬೇಕು, ಬೈಬಲ್ ಓದಿ ಪ್ರಾರ್ಥಿಸಬೇಕು ಅದರಂತೆ, ಇತ್ಯಾದಿ, ಇತ್ಯಾದಿ; ಕೆಲವು ಉಲ್ಲೇಖನಯೋಗ್ಯವಲ್ಲದ ಕಾರಣಗಳೂ ಇದ್ದುವು ಅನ್ನಿ! ಅಂತೂ ಅವರ ಕೃತಜ್ಞತೆ ಅಷ್ಟಕ್ಕೇ ಪೂರೈಸಿ ಕೃತಘ್ನತೆಯ ಮಟ್ಟಕ್ಕೇರಿದಿದ್ದುದು ಮಿಷನರಿಗಳ ಪುಣ್ಯ!!

ಕ್ರೈಸ್ತಸಂಸ್ಥೆಯ ವಿದ್ಯಾರ್ಥಿನಿಲಯಕ್ಕೆ ಬೆಂದಿರುಹಿದ ನನ್ನ ಮಿತ್ರರು ಒಕ್ಕಲಿಗರ ವಿದ್ಯಾರ್ಥಿನಿಲಯಕ್ಕೆ ಸೇರುವ ಪ್ರಯತ್ನಮಾಡಿದರು. ಆಗ ಒಕ್ಕಲಿಗರ ವಿದ್ಯಾರ್ಥಿನಿಲಯ ಕಾಳಮ್ಮನ ಗುಡಿ ಬೀದಿಯಲ್ಲಿತ್ತು. ಅಲ್ಲಿಗೆ ನಾನೂ ಸೇರಿ ಮೂವರೂ ಹೋದೆವು. ಮ್ಯಾನೇಜರು ಮರುದಿನ ಬರುವಂತೆ ಹೇಳಿದರು, ಸೀಟು ಕೊಡುವುದಾಗಿ.

ಅಲ್ಲಿದ್ದ ವಿದ್ಯಾರ್ಥಿಗಳು ತಮ್ಮೊಡನೆ ಬಂದು ಸೇರಲಿದ್ದ ನಾವು ಮೂವರನ್ನೂ ನೋಡಿ ಮಾತಾಡಿಸಿದರು. ನಾನು ಅವರಿಗೆ ಸಂಪೂರ್ಣ ಅಪರಿಚಿತನಾಗಿದ್ದೆ. ಆದರೆ ರಾಮಪ್ಪ ರಾಮಪ್ಪರು ಅಲ್ಲಿದ್ದ ಕೆಲವರಿಗೆ ಮುಖಪರಿಚಿತರಾಗಿದ್ದರು. ಅವರು ಕ್ರಿಶ್ಚಿಯನ್ ಹಾಸ್ಟೆಲಿನಲ್ಲಿ ಇದ್ದುದನ್ನೂ ಅವರು ತಿಳಿದಿದ್ದರು. ಕ್ರೈಸ್ತಮತಕ್ಕೆ ಸೇರಿದವರನ್ನಲ್ಲದೆ ಬೇರೆ ಯಾರನ್ನೂ ಅಲ್ಲಿಗೇಕೆ ಸೇರಿಸಿಕೊಳ್ಳುತ್ತಾರೆ? ಆದ್ದರಿಂದ

ನಾವೆಲ್ಲ ಕ್ರಿಶ್ಚಿಯನ್ ಜಾತಿಗೆ ಸೇರಿರುವವರು ಎಂದು ನಿರ್ಣಯಿಸಿದ್ದರು.

ಮರುದಿನ ಒಕ್ಕಲಿಗರ ಹಾಸ್ಟೆಲಿಗೆ ಸೇರಲೆಂದು ನಾವು ಹೋದಾಗ ಮ್ಯಾನೇಜರು ಸೇರಿಸಲಿಕ್ಕೆ ಆಗುವುದಿಲ್ಲ ಎಂದು ಹೇಳಿಬಿಟ್ಟರು. ಏಕೆಂದರೆ ಅಲ್ಲಿ ಒಕ್ಕಲಿಗರಿಗಲ್ಲದೆ ಬೇರೆ ಮತದವರಿಗೆ ಪ್ರವೇಶವಿಲ್ಲ. “ನೀವು ಹಾರ್ಡ್ವಿಕ್ ಹಾಸ್ಟಲಿನಲ್ಲಿ ಇದ್ದವರೆಂದು ನಮ್ಮ ಹುಡುಗರಿಗೆ ಗೊತ್ತಾಗಿದೆ. ನೀವೆಲ್ಲ ಕಾನ್ವರ‍್ವ್ ಆದ ಕ್ರಿಶ್ಚಿಯನ್ನರಾದ್ದರಿಂದ ನಿಮಗೆ ಇಲ್ಲಿ ಜಾಗವಿಲ್ಲ. ಹಾಗೇನಾದರೂ ನಾನು ಜಾಗಕೊಟ್ಟರೆ ಒಕ್ಕಲಿಗ ಹುಡುಗರು ತಮ್ಮ ಜಾತಿ ಕೆಡುವುದೆಂದು ಗಲಾಟೆ ಮಾಡುತ್ತಾರೆ. ಅವರೆಲ್ಲ ಹಾಸ್ಟಲ್ಲನ್ನೇ ಬಿಟ್ಟು ಹೋಗಿಬಿಡುತ್ತೇವೆ ಎಂದು ಬೆದರಿಸಿದ್ದಾರೆ” ಎಂದು ತಿರಸ್ಕರಿಸಿದರು.

ಕಂಗೆಟ್ಟ ನನ್ನ ಮಿತ್ರರು “ನಾವು ಹಾರ್ಡ್ವಿಕ್ ಹಾಸ್ಟೆಲಿನಲ್ಲಿ ಇದ್ದುದು ನಿಜ. ನಾವು ಅವರ ಜಾತಿಗೆ ಸೇರಿಲ್ಲ, ಈಗ ಹಾಸ್ಟೆಲನ್ನೂ ಬಿಟ್ಟಿದ್ದೇವೆ. ನಾವು ಮಲೆನಾಡಿನ ಒಕ್ಕಲಿಗರು” ಎಂದು ಎಷ್ಟು ವಾದಿಸಿದರೂ ಪ್ರಯೋಜನವಾಗಲಿಲ್ಲ.

ಕಡೆಗೆ ನನ್ನ ಮಿತ್ರರು ನನಗಾದರೂ ಅಲ್ಲಿ ಜಾಗ ದೊರಕಿಸಿಕೊಡುವ ಉದ್ದೇಶದಿಂದ “ನಾವಿಬ್ಬರೂ ಹಾರ್ಡ್ವಿಕ್ ನಲ್ಲಿದ್ದೆವು. ಆದರೆ ಇವರು ಕುಪ್ಪಳಿ ಮನೆಯವರು. ಲೋವರ್ ಸೆಕೆಂಡರಿ ಪಾಸುಮಾಡಿ ಈಗತಾನೆ ಮೈಸೂರಿಗೆ ಓದಲು ಬಂದಿದ್ದಾರೆ. ಇವರಿಗಾದರೂ ಒಂದು ಸೀಟು ಕೊಡಿ” ಎಂದು ಅಂಗಲಾಚಿದರು.

ಆದರೆ ಅಲ್ಲಿದ್ದ ಒಕ್ಕಲಿಗೆ ಹುಡುಗರು “ಈ ಮಲೆನಾಡಿನ ಒಕ್ಕಲಿಗರೆಲ್ಲ ಕ್ರಿಶ್ಚಿಯನ್ ಆಗಿದ್ದಾರೆ. ಇವರು ಸುಳ್ಳು ಹೇಳುತ್ತಿದ್ದಾರೆ, ಇವರೆಲ್ಲ ಕ್ರಿಶ್ಚಿಯನ್ನರೇ. ಖಂಡಿತ ಜಾಗಕೊಡಬಾರದು!” ಎಂದು ನಮ್ಮನ್ನು ಹೊರಗೆ ಹಾಕಿದರು.

ಹಾರ್ಡ್ವಿಕ್ ಹಾಸ್ಟಲ್ಲನ್ನೂ ತಿರಸ್ಕರಿಸಿ (ಕ್ರಿಶ್ಚಿಯನ್ನರಲ್ಲ ಎಂಬ ಕಾರಣದಿಂದ), ಒಕ್ಕಲಿಗರ ಹಾಸ್ಟಲಿನಿಂದಲೂ ತಿರಸ್ಕೃತರಾಗಿ (ಕ್ರಿಶ್ಚಿಯನ್ನರು ಎಂಬ ಕಾರಣಕ್ಕೆ) ತ್ರಿಶಂಕು ಸ್ವರ್ಗಾನ್ವೇಷಿಗಳಾಗಿ ಹೊರಬಿದ್ದೆವು.

ಇಲ್ಲಿಯೂ ವಿಧಿಯ ಕೈಯೆ ನನ್ನನ್ನು ಹಿಡಿದು ನಿಯಂತ್ರಿಸುತ್ತಿತ್ತಲ್ಲವೆ? ಸಿಂಹಾಲೋಕನ ಮಾಡುತ್ತಿರುವ ಮನಸ್ಸಿಗೆ ಹಾಗೆಂದೆ ತೋರುತ್ತಿದೆ ಈಗ!

ನಾನೆಲ್ಲಿಯಾದರೂ ಈ ಕ್ರೈಸ್ತ ಅಥವಾ ಒಕ್ಕಲಿಗೆ ಕೋಮುವಾರು ವಿದ್ಯಾರ್ಥಿನಿಲಯಗಳಿಗೆ ಸೇರಿದ್ದರೆ ನನ್ನ ಮನಸ್ಸಿನ ವೈಶಾಲ್ಯ ಸಾಧನೆಗೆ ಭಂಗ ಬರುತ್ತಿತ್ತು. ನನ್ನ ಚಲನವಲನಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತಿರಲಿಲ್ಲ. ನಿಲಯದ ನಿಯಮಾವಳಿಗೆ ಒಳಗಾಗಬೇಕಾಗಿ ನಾನು ಪಬ್ಲಿಕ್ ಲೈಬ್ರರಿಯಲ್ಲಿ ರಾತ್ರಿ ಒಂಬತ್ತು ಗಂಟೆವರೆಗಿದ್ದು ನನಗೆ ಬೇಕುಬೇಕಾದ ಗ್ರಂಥಗಳನ್ನು ಓದಿಕೊಳ್ಳಲಾಗುತ್ತಿರಲಿಲ್ಲ. ಹೊತ್ತಾಗಿ ಹೋಗಿದ್ದರೆ ಹಾಸ್ಟಲಿನ ಅಡುಗೆ ಮುಗಿದು ಹೋಗಿರುತ್ತಿತ್ತು; ಇಲ್ಲವೆ ಅಡುಗೆಯವನು ನನ್ನೊಬ್ಬನಿಗಾಗಿ ಕಾಯಲಾರದೆ ದೂರು ಹೇಳಿ ಓಡಿಸುತ್ತಿದ್ದನು. ಜೊತೆಗೆ, ಸಂಗಮಹಿಮೆಯಿಂದ ಒಂದೇ

ಜಾತಿಯ ಹುಡುಗರೊಂದಿಗೆ ಸೇರಿ ಸಣ್ಣಮನಸ್ಸೂ ಸಂಕುಚಿತಭಾವಗಳೂ ನನ್ನಲ್ಲಿ ಮನೆಮಾಡುತ್ತಿದ್ದುವು. ಅಲ್ಲದೆ ಕಾಡುಹರಟೆ, ಪೋಲಿಮಾತು, ಪರನಿಂದೆ, ಪರಚರ್ಚೆ ಇವುಗಳಿಗೆಲ್ಲ ಅನಿವಾರ್ಯವಾಗಿ ಸಿಲುಕಿ ಅಧ್ಯಯನಕ್ಕೂ ವಿನಿಯೋಗವಾಗದ ಕಾಲಹರಣವಾಗುತ್ತಿತ್ತು. ತರಗತಿಯಲ್ಲಿ ತೇರ್ಗಡೆ ಹೊಂದದೆ ವಿದ್ಯಾರ್ಥಿವೇತನವನ್ನು ಕಳೆದುಕೊಂಡು ಮನೆಗೆ ಹಿಂತಿರುಗಬೇಕಾಗುತ್ತಿತ್ತು!

ಹಾಸ್ಟಲಿಗೆ ಸೇರದೆ ಬಿಡಿಯಾಗಿರುವವರೆಲ್ಲ ಉದ್ಧಾರವಾಗಿಬಿಡುತ್ತಾರೆ ಎಂಬುದಲ್ಲ ನನ್ನರ್ಥ. ನನ್ನನ್ನು ಮೈಸೂರಿಗೆ ಕರೆತಂದ ನನ್ನ ಮಿತ್ರದ್ವಯರ ಅದಕ್ಕೆ ಸಾಕ್ಷಿ. ಅವರಿಗೂ ನನ್ನಂತೆಯೆ ಸ್ವಾತಂತ್ರ್ಯ ವಿದ್ದರೂ ಆ ಅವಕಾಶವನ್ನು ಅವರು ನನ್ನ ಮಾರ್ಗದಲ್ಲಿ ಉಪಯೋಗಿಸಿಕೊಳ್ಳಲಿಲ್ಲ. ಅವರವರ ಜನ್ಮಾಂತರ ಸಂಸ್ಕಾರ, ಅವರವರ ಜನ್ಮೋದ್ದೇಶಗಳೆ ಅವರವರ ಮಾರ್ಗನಿರ್ಣಯ ಮಾಡುತ್ತವೆ ಎಂದು ತೋರುತ್ತದೆ. ಅವಕಾಶ ಕಲ್ಪಿಸಿಕೊಟ್ಟರೆ ಯಾರನ್ನು ಬೇಕಾದರೂ ಏನನ್ನಾಗಿಯಾದರೂ ಮಾಡಬಹುದು ಎಂಬ ಕ್ರೈಸ್ತಮತಾಧಾರದ ಮೇಲೆ ನಿಂತಿರುವ ಪಾಶ್ಚಾತ್ಯ ಶಿಕ್ಷಣತತ್ವ, ಬೆಳಕನ್ನು ಕುರಿತ ಅಂಧರವಿಜ್ಞಾನದಂತೆ, ಅತ್ಯಂತ ಅವೈಜ್ಞಾನಿಕವಾದುದೆಂದು ಈ ಕ್ಷೇತ್ರದಲ್ಲಿ ಸ್ವಾನುಭವ ಇರುವವರೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ.

 


* ಅವರು ಹಿಂದೆ ತೀರ್ಥಹಳ್ಳಿಯಲ್ಲಿ ಡಾಕ್ಟರ್ ಆಗಿದ್ದು, ರಾಮಣ್ಣಗೌಡರಿಗೆ ಮಿತ್ರರಾಗಿದ್ದುದರಿಂದ, ಅವರಿಗೆ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಗೆ ವರ್ಗವಾದಮೇಲೆ, ರಾಮಣ್ಣಗೌಡರ ಮಗ ಮಾನಪ್ಪನನ್ನು ತಮ್ಮ ಮಗ ಸುಂದರಮೂರ್ತಿಯೊಡನೆ ಓದಲಿಕ್ಕೆ ಇಟ್ಟುಕೊಂಡಿದ್ದರು