ನಾವು ಮೂವರೂ ಸೇರಿ ಕಾಳಮ್ಮನಗುಡಿ ಬೀದಿಯಲ್ಲಿಯೆ ಒಂದು ಮನೆಯ ಮುಂಭಾಗದ ಒಂದು ರೂಮನ್ನು ಬಾಡಿಗೆಗೆ ಗೊತ್ತು ಮಾಡಿದೆವು. ಆ ಮನೆಯ ಮುಂದೆಯೆ ಇದ್ದ ಒಂದು ಊಟದ ಹೋಟಲಿನಲ್ಲಿ ಊಟಕ್ಕೆ ಏರ್ಪಡಿಸಿದೆವು; ಮತ್ತು ತುಸು ಸಮಿಪದಲ್ಲಿದ್ದ ಇನ್ನೊಂದು ಕಾಫಿಕ್ಲಬ್ಬಿನಲ್ಲಿ ಬೆಳಗಿನ ಮತ್ತು ಅಪರಾಹ್ನದ ಕಾಫಿತಿಂಡಿಗೂ ಲೆಖ್ಖ ಇಟ್ಟೆವು.

ವೆಸ್ಲಿಯನ್ ಮಿಶನ್ನಿನ ಹೈಸ್ಕೂಲಿನ ವಿಭಾಗದ ನಾಲ್ಕನೆಯ ಫಾರಂಗೆ ನಾನೂ, ನಾಲ್ಕನೆಯ ಫಾರಂನಿಂದ ತೇರ್ಗಡೆಹೊಂದಿದ್ದ ಗೋವಿನಹಳ್ಳಿ ರಾಮಪ್ಪನು ಐದನೆಯ ಫಾರಂಗೂ, ಹೊಸಮನೆ ರಾಮಪ್ಪನು ಅದೇ ಸ್ಕೂಲಿನ ಮಿಡ್ಲ್ ಸ್ಕೂಲ್ ಗೂ ಸೇರಿದೆವು. ಶುರುವಾಯ್ತು ನಮ್ಮ ವಿದ್ಯಾಭ್ಯಾಸ!

ಪ್ರಾರಂಭದ ದಿನಗಳಲ್ಲಿ ನನಗೆ ಎಲ್ಲವೂ ಹೊಸತು, ಎಲ್ಲೆಲ್ಲಿಯೂ ಬೆರಗು! ನನ್ನ ಮಿತ್ರರು ನನಗೆ ನಗರದ ಪ್ರೇಕ್ಷಣೀಯ ಭಾಗಗಳನ್ನೆಲ್ಲ ತೋರಿಸಿದರು. ಆಗಿನ ಮೈಸೂರು ಗಾತ್ರದಲ್ಲಿಯೂ ವೈವಿಧ್ಯದಲ್ಲಿಯೂ ವೈಭವದಲ್ಲಿಯೂ ಹೋಲಿಸಿದರೆ ಈಗಿನ ಮೈಸೂರು ಮಹಾನಗರದ ಮುಂದೆ ಒಂದು ದೊಡ್ಡ ಹಳ್ಳಿ ಎಂಬಂತಿದ್ದರೂ ಕಾಡಿನಿಂದ ಬಂದಿದ್ದ ನನಗೆ ಅದೊಂದು ಅದ್ಭುತದ ಮತ್ತು ಸೌಂದರ್ಯದ ಔತಣವೊದಗಿಸಿತ್ತು: ಅರಮನೆ, ಮೃಗಾಲಯ, ಜಗನ್ಮೋಹನ ಬಂಗಲೆ, ಮಹಾರಾಜಾ ಕಾಲೇಜು, ಚಾಮುಂಡಿಬೆಟ್ಟ ಮತ್ತು ದೇವಸ್ಥಾನ, ದೊಡ್ಡ ಕೆರೆ, ಲಲಿತಾದ್ರಿ ಇತ್ಯಾದಿ. ಆಗಿನ್ನೂ ಸಿನಿಮಾ ಪಿಡುಗು ಕಾಲಿಟ್ಟರಲಿಲ್ಲವೆಂದು ತೋರುತ್ತದೆ. ಹಾಗೆಯೆ ಸಮಿಪದ ಶ್ರೀರಂಗಪಟ್ಟಣ ಕನ್ನಂಬಾಡಿಗಳನ್ನೂ ನೋಡಿದೆವು. ಚರಿತ್ರೆಯಲ್ಲಿ ಓದಿದ್ದ ಟೀಪುಸುಲ್ತಾನನಿಗೆ ಸಂಬಂಧಿಸಿದ ಸ್ಮಾರಕಗಳೂ ನನಗೆ ಅಚ್ಚರಿಯ ವಸ್ತುಗಳಗಿದ್ದುವು!

ಕಾಲದ ಅನುಕ್ರಮವನ್ನು ಅಷ್ಟೇನೂ ಹೆಚ್ಚಾಗಿ ಗಮನಿಸಿದೆ, ನಾನು ಹೈಸ್ಕೂಲಿನ ಮೂರು ವರ್ಷದ ವಿದ್ಯಾರ್ಥಿಯಾಗಿದ್ದಾಗ ನನ್ನ ಸಾಹಿತ್ಯದ ಜೀವನದ ಮೇಲೆ ಪ್ರಭಾವಬೀರಿದ ಕೆಲವು ಸನ್ನೀವೇಶಗಳನ್ನು ಘಟನೆಗಳನ್ನು ಇಲ್ಲಿ ಚಿತ್ರಿಸುತ್ತೇನೆ. ಗಮನಿಸಬೇಕಾದ ಒಂದು ಅಚ್ಚರಿಯ ವಿಷಯ: ಕನ್ನಡದಲ್ಲಿ ಆಗಲಿ, ಕನ್ನಡದ ಮುಖಾಂತರವಾಗಿ ಆಗಲಿ ಆ ಪ್ರಭಾವ ನನ್ನ ಚೇತನವನ್ನು ಪ್ರವೇಶಿಸಲಿಲ್ಲ; ಎಲ್ಲವೂ ಇಂಗ್ಲಿಷಿನ ಮುಖಾಂತರವೇ ಆದದ್ದು. ಆಗ ಕನ್ನಡವು ಸ್ಕೂಲುಗಳಲ್ಲಿ ವಿದ್ಯಾರ್ಥಿಗಳು ಅವಶ್ಯವಾಗಿ ಸಹಿಸಬೇಕಾಗಿದ್ದ ಒಂದು ಭಾಷಾವಸ್ತುವಾಗಿತ್ತು ಅಷ್ಟೆ. ಅದನ್ನು ಪಾಠ ಹೇಳುತ್ತಿದ್ದ ಉಪಾಧ್ಯಾಯರೂ ವೇಷಭೂಷಣಗಳಲ್ಲಿಯಾಗಲಿ ಪಾಠಹೇಳುತ್ತಿದ್ದ ರೀತಿಯಲ್ಲಾಗಲಿ ತರುಣ ಹೃದಯಗಳಿಗೆ ಯಾವ ನೂತನ ದೃಷ್ಟಿಯನ್ನೂ ಕೊಡಬಲ್ಲವರಾಗಿರಲಿಲ್ಲ; ಅವರ ಪ್ರವಚನದಲ್ಲಿ ಭಾವಪುಷ್ಟಿಯೂ ಇರುತ್ತಿರಲಿಲ್ಲ, ಬುದ್ಧಿಪುಷ್ಟಿಯೂ ಇರುತ್ತಿರಲಿಲ್ಲ. ತರಗತಿಗಳಲ್ಲಿ ಬರಿಯ ಗಲಾಟೆ, ಹಾಸ್ಯ ಪರಿಹಾಸ್ಯ, ಉಪಾಧ್ಯಾಯರಿಗೆ ಕಿರುಕುಳ! ಕನ್ನಡ ಓದಿದರೇನು? ಬಿಟ್ಟರೇನು? ಎಂಬ ತಾತ್ಸಾರ. ಕನ್ನಡದಲ್ಲಿ ಫೆಯಿಲ್ಲಾದರೂ ಪಾಸುಮಾಡಿಸುತ್ತಾರೆ ಎಂಬ ಮೊಂಡು ಕೆಚ್ಚು!  ಪಠ್ಯಪುಸ್ತಕಗಳನ್ನು ಕೊಂಡುಕೊಳ್ಳುವಾಗಲೂ ಇಂಗ್ಲಿಷ್ ಪುಸ್ತಕಗಳಿಗೇ ಪ್ರಧಾನ ಮಾನ್ಯತೆ. ಕನ್ನಡ ಪುಸ್ತಕಗಳನ್ನು ಆಮೇಲೆ ಕೊಂಡರಾಯಿತು, ದುಡ್ಡು ಉಳಿದರೆ! ಕೊಂಡುಕೊಳ್ಳದಿದ್ದರೂ ಚಿಂತೆಯಿಲ್ಲ. ಯಾರ ಹತ್ತಿರವಾದರೂ ಇದ್ದ ಪುಸ್ತಕ ಒಂದು ಚೂರು ನೋಡಿದರಾಯಿತು. ಆ ಪುಸ್ತಕಗಳಲ್ಲಿ ಇರುವುದೂ ಮಹಾ ಅಷ್ಟಕ್ಕಷ್ಟೆ! ಒಂದುವೇಳೆ ದುಡ್ಡು ಉಳಿದರೂ ಕಾಫಿತಿಂಡಿಗೆ ಖರ್ಚುಮಾಡುವ ಬುದ್ಧಿ; ಹಾಳು ಕನ್ನಡದ ಪುಸ್ತಕಕ್ಕೆ ಯಾಕೆ ದುಡ್ಡ ದಂಡಮಾಡಬೇಕು?

ಚೆನ್ನಾಗಿ ಅಚ್ಚುಮಾಡಿದ್ದು, ಒಳ್ಳೆಯ ಸೊಗಸಾದ ರಟ್ಟುಹಾಕಿದ್ದು, ಆಕರ್ಷವಾಗಿ, ನಮ್ಮ ಗೌರವವನ್ನೆ ಸೂರೆಗೊಳ್ಳುವಂತಿದ್ದ ಇಂಗ್ಲಿಷ್ ಪಠ್ಯಪುಸ್ತಕಗಳನ್ನೇ ಮೊದಲು ಕೊಂಡದ್ದಾಯಿತು: ಪ್ರಿಚರ್ಡ್‌ನ “ಸ್ಟಡೀಸ್ ಇನ್ ಲಿಟರೇಚರ್” –ಸ್ಕಾಟ್ ಕವಿಯ “ಲೇಡಿ ಆಫ್ ದಿ ಲೇಕ್”!

ಇಂಗ್ಲಿಷ್ ಪಠ್ಯಪುಸ್ತಕಗಳನ್ನು ಕೊಂಡುಕೊಂಡ ನನಗೆ ಅವುಗಳನ್ನೋದುವ ವರೆಗೂ ಸಮಾಧಾನವಿಲ್ಲ. ನನಗೆ ಆಗ ತಿಳಿದಿದ್ದ ಇಂಗ್ಲಿಷ್ ಭಾಷೆಯ ಮಟ್ಟ ಅಷ್ಟೇನೂ ಎತ್ತರದ್ದಾಗಿರಲಿಲ್ಲ. ಅರ್ಥವಾಗದ  ಪದಗಳನ್ನು ನಿಘಂಟಿನ ಸಹಾಯದಿಂದ ತಿಳಿದೇ ಮುಂದುವರಿಯಬೇಕು ಎಂಬ ಹಠವೇನೊ ಇತ್ತು. ಬಹುಮಟ್ಟಿಗೆ ಹಾಗೆ ಮಾಡುತ್ತಿದ್ದುದರಿಂದಲೆ ನನ್ನ ಇಂಗ್ಲಿಷ್ ಭಾಷೆಯ ಮಟ್ಟ ಇತರ ನನ್ನ ಸ್ನೇಹಿತರ ಮಟ್ಟಕ್ಕಿಂತ ಎತ್ತರ ವಾಯಿತೆಂದು ತೋರುತ್ತದೆ. ಆದರೂ ಸುಪ್ರಸಿದ್ಧ ಇಂಗ್ಲಿಷ್ ಲೇಖಕರನ್ನು ಓದುವಾಗ ಎಷ್ಟೋ ಪದಗಳಿಗೆ ಅರ್ಥವಾಗುತ್ತಿರಲಿಲ್ಲ. ಎಷ್ಟೋ ನುಡಿಗಟ್ಟುಗಳ ಮರ್ಮ ಹೊಳೆಯುತ್ತಿರಲಿಲ್ಲ. ಎಲ್ಲ ಸಮಯಗಳಲ್ಲೂ ಎಲ್ಲ ಸ್ಥಳಗಳಲ್ಲೂ ನಿಘಂಟು ಎಲ್ಲಿ ಸಿಗಬೇಕು? ಅಲ್ಲದೆ ಸಾಹಿತ್ಯಭಾಗದ ಸ್ವಾರಸ್ಯದಲ್ಲಿ ಲೀನವಾದ ಮನಸ್ಸು ಸ್ವಾರಸ್ಯದಿಂದ ಚ್ಯುತವಾಗಿ ನಿಘಂಟನ್ನು ನೋಡುವಷ್ಟು ಸಹನೆಯೂ ಇರುತ್ತಿರಲಿಲ್ಲ ಅನೇಕವೇಳೆ. ಆದ್ದರಿಂದ ಕೆಲವು ಪದಗಳಿಗೆ ಸ್ಷಷ್ಟಾರ್ಥ ತಿಳಿಯದಿದ್ದರೂ ಭಾವ ಹೊಳೆಯುತ್ತಿತ್ತು!

ಪ್ರಿಚರ್ಡ್ ಎಂಬಾತ ಸಂಗ್ರಹಿಸಿದ ‘ಸಾಹಿತ್ಯ ಅಧ್ಯಯನ’ (ಸ್ಟಡೀಸ್ ಇನ್ ಲಿಟರೇಚರ್) ಎಂಬ ಪುಸ್ತಕದಲ್ಲಿ ಇಂಗ್ಲಿಷ್ ಸಾಹಿತ್ಯದ ಸುಪ್ರಸಿದ್ಧ ಮಹಾಲೇಖಕರ, ಮಹಾ ಸಾಹಿತಿಗಳ ಮತ್ತು ಮಹಾಕವಿಗಳ ಕೃತಿಗಳಿಂದ ಅತ್ಯಂತ ಸ್ವಾರಸ್ಯವಾದ ಭಾಗಗಳನ್ನು ಅರಿಸಿ ಪೋಣಿಸಿತ್ತು. ಆರಿಸಿದ  ಭಾಗಗಳಾದರೂ ಮೂರು, ನಾಲ್ಕು, ಐದು ಪುಟಗಳಿಗೆ ಮಿರದ ಹ್ರಸ್ವವಾಗಿದ್ದವು. ಪ್ರತಿಯೊಂದು ಭಾಗಕ್ಕೂ ಪೀಠಿಕೆಯಾಗಿ ಆ ಕೃತಿ ಮತ್ತು ಕೃತಿಯ ವಿಷಯ ಸಂಕ್ಷೇಪವಾಗಿ ಆದರೂ ಓದುಗನ ಕುತೂಹಲ ಕೆರಳುವಂತೆ ವರ್ಣಿತವಾಗಿತ್ತು. ಪ್ರತಿಯೊಂದು ಭಾಗದ ತುದಿಯಲ್ಲಿಯೂ ವಾಚಕನಿಗೆ ನೆರವಾಗುವ ವಿಮರ್ಶನಾತ್ಮಕವಾದ ಲಘುಟಿಪ್ಪಣಿಗಳಿದ್ದುವು. ನೆನಪಿರುವಷ್ಟು ಹೇಳುತ್ತೇನೆ. ಷೇಕ್ಸ್ ಪಿಯರ್, ಮಿಲ್ಟನ್, ಕಾರ್ಲೈಲ್, ಗಿಬ್ಬನ್, ಡಾನಿಯೇಲ್ ಡೀಪೊ, ಸ್ವಿಫ್ಟ್, ಲ್ಯಾಂಬ್, ಡಿಕ್ಕಿನ್ಸಿ, ರಸ್ಕಿನ್ ಮುಂತಾದ ಲೇಖಕರ ಬರಹ ಭಾಗಗಳು ಪ್ರಾತಿನಿಧಿಕವಾಗಿದ್ದವು. ಅವು ಒಂದೊಂದೂ ನನಗೆ ಹೊಸಹೊಸ ಲೋಕಗಳನ್ನೆ ತೆರೆದು ತೋರಿಸಿ ‘ಬಾ, ಪ್ರವೇಶಿಸು’ ಎಂದು ಕೈಬೀಸಿ ಕರೆಯುವಂತಾಯಿತು, ಓದಿದಂತೆಲ್ಲ!

ಒಂದು ದಿನ ಯಾವುದೋ ತರಗತಿಯಲ್ಲಿ –ಬಹುಶಃ ಕನ್ನಡದ್ದ ಇರಬೇಕು- ನಾನು ಹಿಂದಿನ ಬೆಂಚಿನಲ್ಲಿ ಕುಳಿತು ಪ್ರಿಚರ್ಡ್ ಪುಸ್ತಕ ಓದುತ್ತಿದ್ದೆ. ಓದುತ್ತಿದ್ದ ಭಾಗದ ಶೀರ್ಷಿಕೆ “Footprints on the sand!” (ಮರಳಿನ ಮೇಲೆ ಮನುಷ್ಯ ಹೆಜ್ಜೆ! ಅದು ಡಾನಿಯೇಲ್ ಡೀಪೊ ಬರೆದ ‘ರಾಬಿನ್ ಸನ್ ಕ್ರೂಸೊ’ ಗ್ರಂಥದಿಂದ ಆಯ್ದ ಭಾಗವಾಗಿತ್ತು ಎಂಬುದನ್ನು ಮುನ್ನಡಿ ಮತ್ತು ಟಿಪ್ಪಣಿಗಳಿಂದ ಅರಿತೆ.

ಸಮುದ್ರ ಪ್ರವಾಸ ಮಾಡುತ್ತಿದ್ದಾಗ ಹಡಗು ಬಿರುಗಾಳಿಗೆ ಸಿಕ್ಕಿ ಬಟ್ಟೆಗೆಟ್ಟು ಯಾವುದೋ ಒಂದು ದ್ವೀಪದ ಬಳಿ ಅಡಗುಬಂಡೆಗೆ ತಗುಲಿ ಒಡೆದು ಹೋಗುತ್ತದೆ. ಪ್ರಯಾಣಿಕರೆಲ್ಲ ನೀರುಪಾಲಾಗುತ್ತಾರೆ. ಕ್ರೂಸೊ ಒಬ್ಬನೆ ನಿರ್ಜನ ದ್ವೀಪಕ್ಕೆ ಸೇರುತ್ತಾನೆ. ಅವನಿದ್ದ ದ್ವೀಪದಲ್ಲಿ ಯಾವ ನರಪ್ರಾಣಿಯೂ ಇರಲಿಲ್ಲ. ಕೆಲವು ಕಾಲದ ಮೇಲೆ ಒಂದು ದಿನ ಕಡಲ ದಡದ ಮರಳಿನಲ್ಲಿ ಮನುಷ್ಯರ ಹೆಜ್ಜೆಗಳನ್ನು ನೋಡುತ್ತಾನೆ! ಆ ದ್ವೀಪಕ್ಕೆ ಸಮಿಪವೋ ದೂರವೋ ಇದ್ದ ಭೂಪ್ರದೇಶಗಳಿಂದ ನರಭಕ್ಷಕ ಕಾಡು ಮನುಷ್ಯರು ಇವನಿದ್ದ ಗುಹೆಯ ತಾಣಕ್ಕೆ ಸುದೂರವಾಗಿದ್ದು ತಾನಿದ್ದ ಜಾಗಕ್ಕೆ ಅಗೋಚರವಾಗಿದ್ದ ತೀರಭಾಗಕ್ಕೆ ದೋಣಿಗಳಲ್ಲಿ ಬಂದು, ತಾವು ಸೆರೆಹಿಡಿದ ತಮ್ಮ ಶತ್ರುಗಳನ್ನು ಕೊಂದು ಸುಟ್ಟು ಹಸುಗೆಮಾಡಿ ತಿನ್ನುತಿದ್ದುದು ಇವನ ಗಮನಕ್ಕೆ ಬಂದಿತ್ತು. ಆದರೆ ಅವರು ಯಾವಾಗಲೂ ಇವನಿದ್ದ ದ್ವೀಪದ ಕಡೆಗೆ ಸುಳಿಯುತ್ತಲೆ ಇರಲಿಲ್ಲ. ಇವನಿದ್ದುದು ಅವರಿಗೆ ಗೊತ್ತಾಗಿರಲಿಲ್ಲ, ಗೊತ್ತಾಗುವಂತೆಯೂ ಇರಲಿಲ್ಲ. ತಾನು ಅಲ್ಲಿರುವುದು ಅವರಿಗೆ ಗೊತ್ತಾಗದಿರುವು ದೊಂದೇ ಇವನಿಗಿದ್ದ ರಕ್ಷೆ. ಹೀಗಿರುವಾಗ ಒಂದು ಸಂಜೆ ಕಡಲದಡದಲ್ಲಿ ಮಿನುಹಿಡಿಯಲು ಹೋದಾಗ ತನ್ನವಲ್ಲದ ಮನುಷ್ಯರ ಹೆಜ್ಜೆಗಳನ್ನು ಮರಳಿನಲ್ಲಿ ನೋಡುತ್ತಾನೆ! ತಾನಿದ್ದ ಗುಹೆಗೆ ಸಮಿಪದಲ್ಲಿಯೆ!

ಇದು ಕಥೆಯ ಹಿನ್ನಲೆ Footprints on the sand ಗೆ. ಅದನ್ನು ಓದತೊಡಗಿದಾಗ ನನಗಾದ ಅನುಭವ ಅತೀಂದ್ರಿಯ ಸದೃಶವಾಗಿತ್ತುಃ ವಿಸ್ಮಯ! ಭಯ! ಕುತೂಹಲ! ಆಶಂಕ! ಮುಂದೇನು? ಮುಗಿಯಿತು ನನ್ನ ಗತಿ; ನಾನಾ ಭಾವಗಳಿಂದ ತಾಡಿತವಾದ ರಾಬಿನ್ ಸನ್ ಕ್ರೋಸೋವಿನ ಹೃದಯವೆ ನನ್ನೊಳಗೆ ಪ್ರಸ್ಪಂದಿಸುತ್ತಿರುವಂತಾಯಿತು: ಡೀಪೋವಿನ ಗದ್ಯಶೈಲಿ ಅದ್ಭುತವಾಗಿ ತನ್ನ ಕೆಲಸ ಸಾಧಿಸಿತ್ತು-ಒಂದು ದೀರ್ಘವಾಕ್ಯದಿಂದ ಸಾವಧಾನವಾಗಿ ಎಂಬಂತೆ ಪ್ರಾರಂಭವಾಗಿ , ಯಾವ ವಿಧವಾದ ಹೆಚ್ಚಿನ ವಿಶೇಷತೆಯನ್ನು ನಾವು ನಿರೀಕ್ಷಿಸದ ದೈನಂದಿನ ಸಾಧಾರಣ ಪ್ರಶಾಂತ ಮನೋಧರ್ಮವನ್ನು ನಮಗೆ ತಂದುಕೊಟ್ಟು, ಇದ್ದಕ್ಕಿದ್ದಂತೆ ಒಂದು ಅನಿರೀಕ್ಷಿತಕ್ಕೆ  ನಮ್ಮನ್ನು ತಳ್ಳಿಬಿಡುತ್ತಾನೆ. ಅತ್ಯಂತ ಯಃಕಶ್ಚಿತ ಅಲ್ಪವಸ್ತು ಎನ್ನಬಹುದಾದ, ಒಂದು ಸಾಧಾರಣ ಹೆಜ್ಜೆಯಿಂದ ನಮ್ಮ ಚೇತನವನ್ನೆಲ್ಲ ಒಂದು ಮಹಾ ಊದ್ವಿಗ್ನತೆಯ ಕಮರಿಗೆ ತುಯ್ದೆಸೆಯುತ್ತಾನೆ. ಕಡಲ ದಡದ ನಿರ್ಜನ ನೀರನ ನಿರ್ಲಕ್ಷಿತ ಮರಳು ದಿಣ್ಣೆ ಹಠಾತ್ತನೆ ನಮ್ಮ ಸಾವು ಬದುಕಿನ ಹೋರಾಟದ ಕಣವಾಗಿ ಪರಿಣಮಿಸುತ್ತದೆ. ಆ ದೀರ್ಘವಾಕ್ಯದ ತರುವಾಯ ಸಣ್ಣಸಣ್ಣ ವಾಕ್ಯಗಳೂ ವಾಕ್ಯಭಾಗಗಳೂ ಸುತ್ತಿಗೆಯ ಪೆಟ್ಟಿನಂತೆ ನಮ್ಮ ಮೇಲೆರಗಿ ಪ್ರಾಣವನ್ನೆ ಪ್ರಕಂಪಿಸುವಂತೆ ಮಾಡುತ್ತವೆ. “It happened one day, about noon, going towards my boat, I was exceedingly surprised with the print of a man’s naked foot on the shore, which was very plain to be seen on the sand. I stood like one thunder ‘struck, or as if  I had seen an apparition. I listened, I looked round me, I could hear nothing, nor see anything. I went up to a rising ground, to took farther. I went up shore, and down the shore, but it was all one…”

ಓದಿ ಮುಗಿಸಿ, ಆ ಭಾಗಕ್ಕೆ ಬರೆದ ಮುನ್ನುಡಿ ಟಿಪ್ಪಣಿಗಳನ್ನು ಓದಿದೆ. ಆ ಟಿಪ್ಪಣಿಗಳು ಕೇಳು-ಆಲಿಸು, ಜನಮೇಜಯರಾಯ –ಜನಮೇಜಯ ನೃಪಾಲನೇ ಎಂಬಂತಹ ಬರಿಯ ಅರ್ಥ ಕೊಡುವಂತಹ ಟಿಪ್ಪಣಿಗಳಾಗಿರದೆ, ಶೈಲಿಯ ವಿಮರ್ಶೆಗಳೂ ಆಗಿದ್ದುವು. ಮತ್ತೆ ಅದೇ ಗ್ರಂಥಕ್ಕೆ ಸೇರಿದ ಆ ಕಥೆಯ ಮುಂದಿನ ಒಂದು ಸಣ್ಣ ಭಾಗವೂ His man Friday ಎಂಬ ಶೀರ್ಷಿಕೆಯಲ್ಲಿತ್ತು. ಅದನ್ನೂ ಊರಿವ ಕುತೂಹಲದಿಂದಲೆ ಓದಿಮುಗಿಸಿದೆ. ದೊಡ್ಡ ಹಲಸಿನ ಹಣ್ಣಿಗೆ ಚಳುಕಿಹಾಕಿ, ಅದರ ಯಾವುದೋ ಒಂದು ತೊಳೆಯ ಚೂರನ್ನು ರುಚಿನೋಡಲು ಕೊಟ್ಟಂತಾಯಿತು ನನಗೆ. ಆ ಚೂರಿನ ರುಚಿ ನಾಲಗೆಗೆ ಹತ್ತಿ, ಹಣ್ಣನ್ನೆ ಹುಡುಕತೊಡಗಿದೆ.

ಕೃತಿ ರಾಬಿನ್ ಸನ್ ಕ್ರೂಸೋ; ಕೃತಿಕಾರ ಡಾನಿಯೇಲ್ ಡೀಪ್ಲೊಃ ಆ ಪುಸ್ತಕ ಎಲ್ಲಿ ಸಿಗುತ್ತದೆ?

ಮೈಸೂರಿನಲ್ಲಿ ನನಗಿಂತ ಮೊದಲೆ ಎರಡು ವರ್ಷಗಳಿಂದ ಇದ್ದ ಆ ನನ್ನ ಮಿತ್ರರು ಪಬ್ಲಿಕ್ ಲೈಬ್ರರಿಯಲ್ಲಿ ದೊರೆಯಬಹುದು ಎಂದರು. ಹಳ್ಳಿಯಿಂದ ಬಂದಿದ್ದ ನನಗೆ ಒಬ್ಬನೇ ದೊಡ್ಡ ಕಟ್ಟಡಗಳಿಗೆ ಪ್ರವೇಶಿಸುವುದೆಂದರೆ ದಿಗಿಲು.ಆ ಲೈಬ್ರರಿ ಎಲ್ಲಿದೆ ಅದೂ ತಿಳಿದಿರಲಿಲ್ಲ. ಆದ್ದರಿಂದ ಆ ಮಿತ್ರರನ್ನು ನನ್ನನ್ನಲ್ಲಿಗೆ ಕರೆದೊಯ್ದು, ಪುಸ್ತಕ ತೆಗೆಸಿಕೊಡುವಂತೆ ಬೇಡಿಕೊಂಡೆ. ಏಕೆಂದರೆ, ಯಾರನ್ನು ಕೇಳಬೇಕು? ಹೇಗೆ ತೆಗೆದುಕೊಳ್ಳಬೇಕು? ಎಂಬುದೂ ಒಂದು ಸಮಸ್ಯೆಯಾಗಿತ್ತು ನನಗಗೆ.

ಎದುರಿನ ವಿಭಾಗದಲ್ಲಿ ಸ್ಟ್ಯಾಂಡ್ ಗಳ ಮುಂದೆ ನಿಂತು ಪತ್ರಿಕೆಗಳನ್ನು ಓದುತ್ತಿದ್ದರು ಕೆಲವರು. ಮತ್ತೆ ಕೆಲವರು ಅಲ್ಲಿಯೆ ಬಳಿಯಲ್ಲಿ ಹಾಕಿದ್ದ ದೊಡ್ಡ ಮೇಜಿನ ಸುತ್ತ ಇದ್ದ ಕುರ್ಚಿಗಳ ಮೇಲೆ ಕುಳಿತು ಮಾಸಪತ್ರಿಕೆಗಳನ್ನೋದುತ್ತಿದ್ದರು. ಅವರನ್ನೆಲ್ಲ ಹಾಯ್ದು ಒಳಗೆ ಹೋದೆವು. ನಾನು ಬೆರಗು ಬಡಿದಂತಾಗಿ ನಿಂತೆ, ಉನ್ನತವಾದ ಬೀರುಗಳಲ್ಲಿ ಕನ್ನಡಿ ಬಾಗಿಲುಗಳ ಹಿಂದೆ ಸಾಲ್ಗೊಂಡು ನಿಂತಿದ್ದ ಗ್ರಂಥರಾಶಿಗಳ ಮುಂದೆ! ಆ ಗ್ರಂಥಗಳೊ ಎಂತೆಂತಹ ಬಣ್ಣದ ಕ್ಯಾಲಿಕೊ ರಟ್ಟುಗಳಿಂದ ಶೋಭಾಯಮಾನವಾಗಿ ಮನಮೋಹಿಸುತ್ತಿವೆ? ಅವುಗಳ ಹೆಸರುಗಳೋ ಚಿನ್ನದ ಅಕ್ಷರಗಳಲ್ಲಿ ರಂಜಿಸುತ್ತಿವೆ! ಇಂಗ್ಲಿಷ್ ಅಕ್ಷರಗಳು ಕವಾತುಮಾಡುವ ಸೈನಿಕರಂತೆ ಮಿಂಚುತ್ತವೆ. The poetical works of Tennyson! The Drams of Shakespeare! Milton’s Paradise Lost! ಇತ್ಯಾದಿ, ಇತ್ಯಾದಿ, ಇತ್ಯಾದಿ, ಬುಡದಿಂದ ನೆತ್ತಿಯವರೆಗೆ, ನೋಡಿದಷ್ಟೂ ಸಾಲದು; ನೋಡಿದಷ್ಟೂ ಕಣ್ಣು ತಣಿಯದು. ವಿಪುಲೈಶ್ವರ‍್ಯಮಯಿಯಾದ ಸಾಕ್ಷಾತ್ ತಾಯಿ ಸರಸ್ವತೀದೇವಿಯ, ಸೆರಗು ಓಸರಸಿ, ಸ್ವರ್ಣ ಕಲಶಸದೃಶಗಳಾದ ತನ್ನ ದುಗ್ಧಪೀನ ಪಯೋಧರಗಳನ್ನು ತನ್ನ ಮುಗ್ಧ ಕವಿಕಂದನ ಮುಂದೆ ಚಾಚಿ ನಿಂತಂತಿತ್ತು, “ಬಾ ಪೀಯುಷ ಪಾನಗೈ!” ಎಂದು.

ಕನ್ನಡದ್ದು ಮಾತ್ರ ಕಣ್ಣಿಗೆ ಬೀಳಲಿಲ್ಲ! ನಾನು ನಿರೀಕ್ಷಿಸಿಯೂ ಇರಲಿಲ್ಲ! ಇಂತಹ ಶ್ರೀಮಂತ ಸ್ಥಳಕ್ಕೆ ದರಿದ್ರ ಪ್ರವೇಶ ದೊರೆಯುವುದಿಲ್ಲ ಎಂಬುದು ಆಗಿನ ನಮಗೆ ಪ್ರಕೃತಿ ಸಹಜ ಸತ್ಯದಂತಿತ್ತು, ದೇವಸ್ಥಾನ ಹೊಲೆಯರಿಗೆ ಪ್ರವೇಶವಿಲ್ಲ ಎಂಬುದು ಹೇಗೆ ಸ್ವತಃಸಿದ್ಧವಾಗಿತ್ತೊ ಹಾಗೆ!

ಗ್ರಂಥಪಾಲಕನ ಎದುರಿಗಿದ್ದ ಮೇಜಿನ ಮುಂದೆ ನಿಂತು ಪುಸ್ತಕ ತೆಗೆದುಕೊಳ್ಳುವುದಕ್ಕಾಗಿ ಇಟ್ಟಿದ್ದ ಚೀಟಿಗಳಲ್ಲಿ ಒಂದನ್ನು ತೆಗೆದುಕೊಂಡು Name of the Reader ಎನ್ನುವುದರ ಮುಂದೆ K.V. Puttappa ಎಂದು ನನ್ನ ಹೆಸರು ಬರೆದು, ಉಳಿದ ಜಾಗದಲ್ಲಿ Robinson Crusoe ಎಂದು ಬರೆದುಕೊಟ್ಟೆ.

ಅವರು ನನ್ನ ಕಡೆ ಪರಿಹಾಸ್ಯದಿಂದ ನೋಡುತ್ತಾ, ಪುಸ್ತಕ ತೆಗೆದು ವಾಚಕರಿಗೆ ಕೊಡವ ಮತ್ತು ಹಿಂದಕ್ಕೆ ತೆಗೆದುಕೊಂಡು ಅದರ ಸ್ಥಳದಲ್ಲಿ ಜೋಡಿಸುವ ಕೆಲಸಕ್ಕಿದ್ದ ಒಬ್ಬ ಅಟೆಂಡರ್ ಸಾಬಿಗೆ “ಇಲ್ಲಿ ನೋಡ್ರೀ, ರಾಬಿನ್ ಸನ್ ಕ್ರೂಸೋನೆ ಬಂದುಬಿಟ್ಟಿದ್ದಾನೆ ನಮ್ಮ ಲೈಬ್ರರಿಗೆ!” ಎಂದು ನನ್ನನ್ನು ತೋರಿಸಿ ಲೇವಡಿಮಾಡಿದರು. ಅಲ್ಲಿ ನಿಂತಿದ್ದ ಇತರರೂ ನನ್ನ ಕಡೆ ನೋಡಿ ನಕ್ಕರು. ನಾನು ನೆಲಕ್ಕಿಳಿದು ಹೋದೆ, ಏನೋ ನಗೆಪಾಟಲು ತಪ್ಪು ಮಾಡಿಬಿಟ್ಟೆ ಎಂದುಕೊಂಡು.

Name of the Reader ಎನ್ನುವುದರ ಮುಂದೆ ಪುಸ್ತಕದ ಹೆಸರು ಬರೆಯಬೇಕಿತ್ತಂತೆ. ಆದರೆ ನನಗೆ ತಿಳಿದಿದ್ದ ಇಂಗ್ಲಿಷಿನಂತೆ ರೀಡರ್ ಎಂದರೆ ಓದುವವನು ಎಂದರ್ಥವಾಗಿತ್ತು. ಆದ್ದರಿಂದ ಓದುಗ ನಾನಾದ್ದರಿಂದ ನನ್ನ ಹೆಸರನ್ನೇ ಬರೆದಿದ್ದೆ. ಅವರು Name of the book ಎಂದು ಅಚ್ಚು ಹಾಕಿಸಿದ್ದರೆ ಈ ತಪ್ಪು ಮಾಡುತ್ತಿರಲಿಲ್ಲ.

ಸರಿ, ಮತ್ತೊಂದು ಚೀಟಿ ತೆಗೆದುಕೊಂಡು ಅವರು ಹೇಳಿದ ಜಾಗದಲ್ಲಿ ಹೇಳಿದಂತೆ ಬರೆದುಕೊಟ್ಟೆ. ಆ ಅಟೆಂಡರ್ ಸಾಬಿ ನನ್ನನ್ನು ಕುರಿತು “ನನ್ನ ಜೊತೆ ಬನ್ನಿ, ಐಯ್ಯಂಗಾರ್!” ಎಂದು ನನ್ನನ್ನು ಲೈಬ್ರರಿಯ ಅತ್ಯಂತ ಹಿಂಭಾಗದಲ್ಲಿದ್ದ ಕೊನೆಯ ಸಾಲಿನ ಬೀರುವಿನೆಡೆಗೆ ಕರೆದೊಯ್ದು, ದಪ್ಪಕಾಗದದ ಮೇಲೆ ಅಚ್ಚಾಗಿ, ಚಿತ್ರಗಳಿಂದ ಕೂಡಿ, ತುಂಬ ದಡೂತಿಯಾಗಿದ್ದ ಹೆಬ್ಬೊತ್ತಗೆಯೊಂದನ್ನು ತೆಗೆದುಕೊಟ್ಟ: The Life and Adventures of Robinson Crusoe by Daniel Defoe ಆ ಅಟೆಂಡರ್ ಸಾಬಿ ನನ್ನನ್ನೇಕೆ ‘ಅಯ್ಯಂಗಾರ್’ ಎಂದು ಕರೆದನೋ ನನಗೆ ತಿಳಿಯದು? ನನ್ನ ಯಾವ ಲಕ್ಷಣದಲ್ಲಿ ಅವನಿಗೆ ಅಯ್ಯಂಗಾರ್ತನ ಕಂಡಿತೋ ನಾನರಿಯೆ. ಅಯ್ಯಂಗಾರ್ ಲಾಂಛನವಾದ ನಾಮವನ್ನೂ ನಾನು ಹಾಕುತ್ತಿರಲಿಲ್ಲ! ನಾಮಧಾರಿ ಒಕ್ಕಲಿಗನಾಗಿದ್ದರೂ ನಾಮಹಾಕುವುದನ್ನು ಎಂದೋ ತ್ಯಜಿಸಿಬಿಟ್ಟಿದ್ದೆ. ಆದರೂ ಆ ಪುಣ್ಯಾತ್ಮ ನಾನು ಆ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುತ್ತಿದ್ದ ಎರಡೂ ಮೂರು ವರ್ಷವೆಲ್ಲಾ ನನ್ನನ್ನು ‘ಅಯ್ಯಂಗಾರ್’ ಎಂದೇ ಸಂಬೋಧಿಸುತ್ತಿದ್ದ!

ರಾಬಿನ್‌ಸನ್ ಕ್ರೂಸೊ ಓದಲು ಮೊದಲು ಮಾಡಿದೆ. ಲೈಬ್ರರಿಯ ಕೊಟ್ಟಕೊನೆಯಲ್ಲಿ ಇತರರಾರೂ ಹೆಚ್ಚಾಗಿ ಬರದೆ ಇರುತ್ತಿದ್ದ ಜಾಗದಲ್ಲಿ ಒಂದು ಕುರ್ಚಿಯಮೇಲೆ ಮೇಜಿನ ಮುಂದೆ ಕುಳಿತು ಓದತೊಡಿಗದೆ. ಸ್ವಲ್ಪ ಹೆಚ್ಚು ಕಡಿಮೆ ನನಗೆ ಯಾವಾಗಲೂ ಆ ಜಾಗದ ಆ ಕುರ್ಚಿಯೆ ಸಿಗುತ್ತಿತ್ತು. ಬೆಳಿಗ್ಗೆ ಲೈಬ್ರರಿಗೆ ಹೋಗಲು ಆಗುತ್ತಿರಲಿಲ್ಲ. ಸ್ನಾನ ಊಟಮಾಡಿ ಹನ್ನೊಂದು ಗಂಟೆಗೆ ಸ್ಕೂಲಿಗೆ ಹೋಗಬೇಕಾಗುತ್ತಿತ್ತು. ಸಂಜೆ ಐದು ಗಂಟೆಗೆ ಕ್ಲಾಸ್ ಬಿಟ್ಟಕೂಡಲೆ, ಓಡುತ್ತ ಹೋಗಿ ರೂಮಿನಲ್ಲಿ ಸ್ಕೂಲ್ ಬುಕ್ಕುಗಳನ್ನು ಎಸೆದು, ಲೈಬ್ರರಿಗೆ, ಹೆಚ್ಚು ಕಡಮೆ ಓಡುತ್ತಲೆ, ಹೋಗುತ್ತಿದ್ದೆ, ಇತರರು ಯಾರಾದರೂ ಆ ಪುಸ್ತಕವನ್ನು ನನಗಿಂತ ಮೊದಲೇ ತೆಗೆದುಕೊಂಡು ಬಿಟ್ಟಾರು ಎಂದು. ರಾತ್ರಿ ಒಂಬತ್ತು ಗಂಟೆಗೆ ಲೈಬ್ರರಿ ಮುಚ್ಚುತ್ತಿತ್ತು. ಅದರ ಸೂಚನೆಗಾಗಿ ಒಂದು ಹೆಗ್ಗಂಟೆ ಬಾರಿಸುತ್ತಿದ್ದರು. ಒಡನೆಯೆ ಓದುತ್ತಿದ್ದರೆಲ್ಲರೂ  ತಮ್ಮತಮ್ಮ ಪುಸ್ತಕಗಳನ್ನು ತೆಗೆದು ಕೊಂಡು ಹೋಗಿ ಗ್ರಂಥಪಾಲಕನ ಮೇಜಿನ ಮುಂದೆ ಇಟ್ಟು  ಹೋಗುತ್ತಿದ್ದರು. ಆದರೆ ಸಾಮಾನ್ಯವಾಗಿ ರಾತ್ರಿ ಒಂಬತ್ತು ಗಂಟೆಯವರೆಗೂ ಯಾರೂ ಅಲ್ಲಿ ಓದುತ್ತಾ ಕುಳಿತಿರುತ್ತಿರಲಿಲ್ಲ. ಅದಕ್ಕೆ ಮುಂಚೆಯೆ ಎಲ್ಲರೂ ಹೋಗಿಬಿಟ್ಟಿದ್ದರೆ ಗ್ರಂಥಪಾಲರೂ ಅಟೆಂಡರೂ ಒಂಬತ್ತು ಗಂಟೆಗೆ ಮೊದಲೇ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿಬಿಡುತ್ತಿದ್ದರೆಂದು ತೋರುತ್ತದೆ. ಆದರೆ ನಾನು ಲೈಬ್ರರಿಗೆ  ಹೋಗತೊಡಗಿದ ಮೇಲೆ ಅವರಿಗೆ ಆ ಸೌಕರ್ಯ ತಪ್ಪಿಹೋಯಿತು. ನಾನು ಒಂಬತ್ತು ಗಂಟೆಯಾಗಿ, ಅವರು ಗಂಟೆ ಬಾರಿಸಿದರೂ ಓದುತ್ತಲೆ ಕುಳಿತಿರುತ್ತಿದ್ದೆ. ಒಂದೆರಡು ದಿನ ಆ ಸಾಬಿ ಸ್ವಲ್ಪ ದಾಕ್ಷಿಣ್ಯ ತೋರಿಸಿ ಕಾದು, ನನ್ನ ಬಳಿಗೆ ಬಂದು ಸಕರುಣ ವಿನಯ ಧ್ವನಿಯಿಂದ ಹೊತ್ತಾಯ್ತು ಎಂದು ಹೇಳಿ ಪುಸ್ತಕ ಈಸಿಕೊಂಡು ಹೋಗುತ್ತಿದ್ದನು. ಆದರೆ ಕ್ರಮೇಣ ಆತನಿಗೆ ತಾಳ್ಮೆ ತಪ್ಪಿ, ಪುಸ್ತಕವನ್ನು ನನ್ನ ಕೈಯಿಂದ ಕಸಿದುಕೊಂಡೇ ಹೋಗಲು ಶುರುಮಾಡಿದನು. ಆದರೆ ನಾನು ಮಾತ್ರ ಅವನು ಕಸಿದುಕೊಳ್ಳುವವರೆಗೂ ಓದಿಯೆ ಓದುತ್ತಿದ್ದೆ!

ರಜಾ ದಿನಗಳಲ್ಲಂತೂ ಬೆಳಿಗ್ಗೆ ಸಾಯಂಕಾಲ ಎರಡೂ ಹೊತ್ತೂ ಧಾವಿಸಿ ಹೋಗಿ ಓದುತ್ತಿದ್ದೆ. ಒಮ್ಮೊಮ್ಮೆ  ಬೆಳಿಗ್ಗೆ ಲೈಬ್ರರಿ ಬಾಗಿಲು ತೆಗೆಯುವ ಮುನ್ನವೇ ಹೋಗಿ ಬಾಗಿಲ ಬಳಿ ಕಾಯುತ್ತಾ ನಿಂತಿರುತ್ತಿದ್ದೆ. ಅಟೆಂಡರ್ ಮಹಾಶಯನು ಬಂದವನು ನಗು‌‌ತ್ತಾ ಬಾಗಿಲು ತೆಗೆದು ಒಳಗೆ ಬಿಡುತ್ತಿದ್ದ. ಅವನ ನಗುವಿನಲ್ಲಿ ‘ಯಾಕೆ ಇವನಿಗೆ ಈ ಪಿತ್ತ ಕೆದರಿದೆ? ಇಷ್ಟು ವರ್ಷದ ಸರ್ವಿಸ್ಸಿನಲ್ಲಿ ಯಾರನ್ನೂ ನೋಡಿಲ್ಲವಲ್ಲಾ ಹೀಗೆ ಓದುವ ಹುಚ್ಚು ಹಿಡಿದಿರುವವರನ್ನು? ಈ ಅಯ್ಯಂಗಾರಿಗೆ, ಪಾಪ, ತಲೆಯಲ್ಲಿ ಏನೋ ಐಬಾಗಿರಬೇಕು! ಎಂಬ ಕನಿಕರದ ಛಾಯೆ ಇರುತ್ತಿತ್ತು.

ನಾನು ಸ್ಕೂಲ ಬಿಟ್ಟಕೂಡಲೆ ಇತರರಿಗಿಂತ ಮುಂಚೆ ಓಡಿಓಡಿಹೋಗಿ ಹೋಗಿ ಪುಸ್ತಕ ತೆಗೆದುಕೊಳ್ಳುತ್ತಿದ್ದರೂ ಒಂದೆರಡು ಸಾರಿ ನನಗಿಂತಲೂ ಮೊದಲೇ ಯಾರೋ ಪುಸ್ತಕ ತೆಗೆದುಕೊಂಡಿದ್ದೂ ಉಂಟು. ಆಗ ನನ್ನ ಗೋಳು ಹೇಳತೀರದು. ಆ ಪುಸ್ತಕ ತೆಗೆದುಕೊಂಡವನು ಎಲ್ಲಿ ಕೂತಿದ್ದಾನೆ ಎಂದು ಪತ್ತೆಹಚ್ಚಲು ಇಡೀ ಲೈಬ್ರರಿಯನ್ನೆ ಅಲೆಯುತ್ತಿದ್ದೆ, ಪ್ರತಿಯೊಬ್ಬರ ಹತ್ತಿರವೂ ನಿಂತೂ  ನಿಂತೂ! ಕಡೆಗೆ ಪತ್ತೆಯಾಗುತ್ತಿತ್ತು, ಒಬ್ಬನ ಕೈಲಿ! ಆಗ ಅವನ ಮೇಲೆ ನನ್ನ ಮತ್ಸರ ಕೆರಳುತ್ತಿತ್ತು. ಅವನ ಕೈಯಿಂದ ಪುಸ್ತಕ ಕಸಿದುಕೊಂಡುಬಿಡುವಂತೆ ಮನಸ್ಸಾಗುತ್ತಿತ್ತು. ತನ್ನ ಪತಿವ್ರತೆಯಾದ ಪ್ರಿಯೆಯನ್ನು ಇನ್ನೊಬ್ಬನು ಎತ್ತಿಕೊಂಡು ಹೋಗಿ ಇಟ್ಟುಕೊಂಡಿದ್ದನ್ನು ಕಂಡರೆ ಆಗುವಂತಹ ರೋಷ ಉಕ್ಕುತ್ತಿತ್ತು. ಅವನಾದರೂ ಅದನ್ನು ನಿಷ್ಠೆಯಿಂದ ಓದುವುದಕ್ಕಾಗಿ ತೆಗೆದುಕೊಂಡಿದ್ದಾನೆಯೇ? ಅದೂ ಅಲ್ಲ. ಸುಮ್ಮನೆ ಲೈಬ್ರರಿಗೆ ಬಂದವನು ಯಾವುದಾದರೂ ಒಂದು ಪುಸ್ತಕ ತೆಗೆದುಕೊಳ್ಳಬೇಕಲ್ಲಾ ಎಂದು ಅಕಸ್ಮಾತ್ತಾಗಿ ಇದನ್ನೇ ತೆಗೆದುಕೊಂಡುಬಿಟ್ಟಿದ್ದಾನೆ! ಏಕೆಂದರೆ ಆ ಪುಣ್ಯಾತ್ಮ ಮತ್ತೆಂದೂ ಆ ಪುಸ್ತಕ ತೆಗೆದುಕೊಳ್ಳಲಿಲ್ಲ. ಒಮ್ಮೊಮ್ಮೆ ಹಾಗೆ ತೆಗೆದುಕೊಂಡುವರು ಒಂದು ಹತ್ತು ನಿಮಿಷ ಓದಿದಂತೆ ಮಾಡಿ ಹಿಂತಿರುಗಿಸಿಬಿಡುತ್ತಿದ್ದುದೂ ಉಂಟು. ಆಗ ನಾನು ಅಟೆಂಡರ್ ಮಹಾಶಯನಿಂದ ರಾಬಿನ್‌ಸನ್ ಕ್ರೂಸೋವನ್ನು ಈಸಿಕೊಳ್ಳುತ್ತಿದ್ದೆ. ಆತನೂ ತಿಂಗಳುಗಟ್ಟಲೆ ನನ್ನ ಪರಿಚಯವಾದ ಮೇಲೆ ನಾನೂ ಒಬ್ಬ ಆ ಸಾರ್ವಜನಿಕ ಗ್ರಂಥಾಲಯದ ಅವಿಭಾಜ್ಯ ಅಂಗವೆಂದು ಭಾವಿಸಿಬಿಟ್ಟು ನನಗೆ ವಿಶೇಷ ರೀತಿಯ ರಿಯಾಯಿತಿ ತೋರಿಸುತ್ತಿದ್ದ.

ಜ್ವಲಂತ ಕುತೂಹಲದಿಂದ ನಾನು ಓದುತ್ತಿದ್ದ ಆ ಪುಸ್ತಕವನ್ನು ನನಗಿಂತಲೂ ಮೊದಲೆ ಲೈಬ್ರರಿಗೆ ಬಂದವರು ತೆಗೆದುಕೊಳ್ಳುತ್ತಿದ್ದಾಗ ನನಗೆ ಅತೀವ ಮನಃ ಖೇದವಾಗುತ್ತಿದ್ದರೂ ಅದರಿಂದಲೂ ಒಂದು ಉಪಕಾರವಾಯ್ತು. ಅಂತಹ ಸಮಯಗಳಲ್ಲಿ ನಾನು ಗ್ರಂಥಾಲಯದ ಮಹೋನ್ನತ ಬೀರುಗಳಲ್ಲಿ ಅಂತರ ಅಂತರವಾಗಿ ಸಾಲುಗೊಂಡಿರುತ್ತಿದ್ದ ಇತರ ಪುಸ್ತಕಗಳನ್ನು ಸಾವಕಾಶಾವಲೋಕನ ಮಾಡುತ್ತಿದ್ದೆ. ಗ್ರಂಥಲೋಕದ ವಿಸ್ತಾರ ವೈವಿಧ್ಯಗಳಿಗೆ ಬೆರಗಾಗುತ್ತಿದ್ದೆ. My days among the dead are past, around me I behold, where ever these casual eyes are cast, the mighty minds of old! ಎಂಬ ಆಂಗ್ಲೇಯ ಕವಿಯ ಕವನವನ್ನು ಮುಂದೆ ನಾನು ಓದಿದಾಗ, ಹಿಂದೆ ನನಗೆ ಆಗಿದ್ದ ಈ ಅನುಭವದಿಂದ ಜನ್ಯವಾದ ಭಾವಕೋಶದ ನೆರವಿನಿಂದಲೆ ಆ ಕವನದ ಅರ್ಥಸ್ಫೂರ್ತಿಯಾಗಿ ನಾನು ರಸವಶನಾಗಲು ಸಾಧ್ಯವಾದದ್ದು. ಬೀರುಗಳಲ್ಲಿ ತುಂಬ ಎತ್ತರವಾಗಿದ್ದ ಅರೆಗಳಲ್ಲಿದ್ದ ಒಂದು ಚಕ್ರಕಾಲಿನ ಏಣಿಯ ಸಹಾಯದಿಂದ ನೋಡಬಹುದಾಗಿತ್ತು. ಹೀಗೆ ನೋಡುತ್ತಿದ್ದಾಗಲೆ ನನಗೆ ನನ್ನ ಜೀವನದ ದಿಕ್ಕನ್ನೆ ತಿರುಗಿಸಿ, ನನ್ನ ಬದುಕನ್ನೆಲ್ಲ ಮರ್ತ್ಯದಿಂದ ಅಮರ್ತ್ಯಕ್ಕೆತ್ತಿ ಬೀಸಿದ ಭಗವತ್ ಕೃಪಾ ಹಸ್ತರೂಪದ ಶ್ರೀರಾಮಕೃಷ್ಣ-ವಿವೇಕಾನಂದ ವಿಷಯಕವಾದ ಕೃತಿಶ್ರೇಣಿಯ ದರ್ಶನವಾದದ್ದು!