ಸ್ಕೂಲು, ಹೋಟಲು, ಲೈಬ್ರರಿ, ಪೇಟೆ, ಕರ್ಜನ್‌ಪಾರ್ಕ್‌, ನಿಷಾದ್‌ಬಾಗ್‌, ಮಹಾರಾಜಾ ಕಾಲೇಜಿನ ಆಟದ ಮೈದಾನ ಇತ್ಯಾದಿಗಳ ನಡುವೆ ನನ್ನ ವಿದ್ಯಾರ್ಥಿ ಜೀವನ ಸಾಗುತ್ತಿತ್ತು. ಒಮ್ಮೊಮ್ಮೆ ಮನೆಯಿಂದ ಮನಿಆರ್ಡರು ಬರುವುದು ತಡವಾಗಿ ರೂಮಿನ ಬಾಡಿಗೆ ಸಕಾಲದಲ್ಲಿ ಕೊಡದಿದ್ದುದಕ್ಕಾಗಿ ಮನೆಯವರು ಬಿಡಿಸುತ್ತಿದ್ದರು; ತಿಂಗಳ ಊಟದ ಖರ್ಚನ್ನು ಕೊಡಲಿಲ್ಲವೆಂದು ಹೋಟಲಿನವರು ಅನ್ನಹಾಕುವುದನ್ನೆ ನಿಲ್ಲಿಸುತ್ತಿದ್ದರು; ಕಾಫಿತಿಂಡಿ ಹೋಟಲಿನಲ್ಲಿ ಲೆಖ್ಖ ತೀರಿಸಲಿಲ್ಲವೆಂದು ಅವರು ನಿರ್ದಾಕ್ಷಿಣ್ಯವಾಗಿ ವರ್ತಿಸುತ್ತಿದ್ದರು. ನನಗೆ ಅದೆಲ್ಲ ಹೊಸದಾಗಿದ್ದುದರಿಂದಲೂ, ಅದುವರೆಗೆ ‘ಮನೆ’ಯಲ್ಲಲ್ಲದೆ ಬೇರೆಕಡೆ ಇದ್ದು ಅನ್ನಿಸಿಕೊಂಡು ನೂಕಿಸಿಕೊಂಡು ಬಯ್ಯಿಸಿಕೊಂಡು ಅಭ್ಯಾಸವಿಲ್ಲದಿದ್ದುದರಿಂದಲೂ ತುಂಬ ಮುಜುಗರವಾಗುತ್ತಿತ್ತು. ಅವಮಾನವಾಗುತ್ತದೆಂದು ಮಿತ್ರರ ಮುಂದೆ ನಗುನಗುತ್ತಿರುತ್ತಿದ್ದೆನಾದರೂ ರೂಮಿನಲ್ಲಿ ಒಬ್ಬನೆ ಇದ್ದಾಗ ‘ಮನೆ’ಯನ್ನೂ ತಾಯಿತಂಗಿಯರನ್ನೂ ಆ ಅಕ್ಕರೆಯನ್ನೂ ನೆನೆದು ಕಣ್ಣೊರಸಿಕೊಳ್ಳುತ್ತಿದ್ದೆ. ಒಮ್ಮೊಮ್ಮೆ, ಈ ಹಾಳು ಓದುಗೀದು ಏನೂ ಬೇಡ; ಸುಮ್ಮನೆ ಮನೆಗೆ ಹೋಗಿ ನೆಮ್ಮದಿಯಾಗಿದ್ದು ಬಿಡಬೇಕು ಎಂದು ಹೃದಯ ಎಣ್ಣಿಕೊಳ್ಳುತ್ತಿತ್ತು. ಮಲೆನಾಡಿನ, ಅದರಲ್ಲಿಯೂ ಕುಪ್ಪಳಿ ಮನೆಯ ಗದ್ದೆ ತೋಟ ಕಾಡು ಹಕ್ಕಲು ಬ್ಯಾಣ ಬೇಟೆ ಮರಸು ನಾಯಿ ಕೋಳಿ ದನ ಕರು ಗಂಗ ಪುಟ್ಟ ತಮ್ಮ ಅವ್ವ ಅಮ್ಮಂದಿರು ತಂಗಿ ತಮ್ಮಂದಿರು –ಎಲ್ಲ ನೆನಹಿಗೆ ಬಂದು ಮನಸ್ಸಿಗೆ ‘ಮನೆಗಿರ’ ಹಿಡಿಯುತ್ತಿತ್ತು.

ಆದರೆ ನನ್ನ ಜೊತೆಗಾರರು ರಾಮಪ್ಪದ್ವಯರಿಗೆ ಹಾಗೇನೂ ಅನ್ನಿಸುತ್ತಿರಲಿಲ್ಲ. ಮೂರುನಾಲ್ಕು ವರುಷಗಳು ಪೇಟೆಯಲ್ಲಿದ್ದು ಇಂಥದನ್ನೆಲ್ಲ ಕಂಡುಂಡು ಅವರ ಜೀವಕ್ಕೆ ಜಡ್ಡುಗಟ್ಟಿಹೋದಂತಾಗಿತ್ತು: ಮಾನಾವಮಾನಗಳ ಸೂಕ್ಷ್ಮತೆಯನ್ನೇ ಅವರು ನಿರ್ಲಕ್ಷಿಸಿಬಿಟ್ಟಿದ್ದರು! ಅಲ್ಲದೆ ಪೇಟೆಯ ಬಾಳಿನ ವಂಚಕ ವಿಧಾನಗಳನ್ನೂ ಅಭ್ಯಾಸ ಮಾಡಿದ್ದರು, ದುಡ್ಡು ಉಳಿಸಲು, ಖರ್ಚು ಕಡಮೆಮಾಡುವ ಮಿತವ್ಯಯದ ಅಂಗವಾಗಿ. ಏತಕ್ಕೂ ಏನೊ ನನಗೆ ಅರ್ಥವಾಗದ ಕಾರಣಕ್ಕಾಗಿ ಅವರಿಬ್ಬರೂ ರೂಮಿನೊಳಗೇ ಜಗಳವಾಡಿ ಕೈಕೈ ಮಿಲಾಯಿಸಿಕೊಳ್ಳುತ್ತಿದ್ದರು. ಮುಖ ಮುಖಕ್ಕೇ ಗುದ್ದಿ ಕೊಂಡು ಹಲ್ಲಿನಿಂದ ರಕ್ತ ಸೋರುವವರೆಗೂ; ಷರ್ಟು ಹರಿದು, ಪಂಚೆಯೆಲ್ಲ ಬಿಚ್ಚಿಹೋಗುತ್ತಿತ್ತು. ಹೊರಗಿನವರು ನೋಡದಿರಲಿ ಎಂದು ನಾನು ಬಾಗಿಲು ಮುಚ್ಚಿದರೆ, ಇವರ ಗುದ್ದುಮಳಿಯನ್ನು ಕೇಳಿ ದಿಗಿಲುಗೊಂಡ ಮನೆಯಮಂದಿ ಕಿಟಕಿಯಲ್ಲಿ ಇಣಿಕಿ ನೋಡುತ್ತಿದ್ದರು. ಅದಕ್ಕಾಗಿಯೆ ಅಂತಾ ಕಾಣುತ್ತೆ, ನಮ್ಮನ್ನು ರೂಮು ಬಿಡುವಂತೆ ಬಲಾತ್ಕರಿಸಿದ್ದು.

ನಮ್ಮ ರೂಮಿನ ಎದುರಿಗೆ ಬೀದಿಯಾಚೆ ಇದ್ದ ಮನೆ ಒಂದು ಊಟದ ಹೋಟಲು. ಹೋಟಲಿನ ಯಾವ ಲಕ್ಷಣವೂ ಅದಕ್ಕೆ ಇರಲಿಲ್ಲ. ಬೋರ್ಡು ಕೂಡ ಹಾಕಿದ್ದಂತೆ ನೆನಪಿಲ್ಲ ಅದನ್ನು ನಡೆಸುತ್ತಿದ್ದವನು ಒಬ್ಬ ಮುದುಕ ಹಾರುವ. ಅವನಿಗೊಬ್ಬಳು ಚಿಕ್ಕವಯಸ್ಸಿನ ಹೆಂಡತಿ. ಆ ಹೆಂಡತಿಯೂ ನಮಗೆ, (ಶೂದ್ರರಿಗೆ ಹೊರಗೆ ಬೇರೆ ಕಡೆ ಊಟಹಾಕುತ್ತಿದ್ದರಷ್ಟೆ!) ಊಟ ಬಡಿಸಲು ಬರುತ್ತಿದ್ದಳು. ನಮ್ಮೊಡನೆ ಊಟಕ್ಕೆ ಬರುತ್ತಿದ್ದ ನನಗಿಂತ ತುಸು ಬೆಪ್ಪುಬೆರಗಾಗುತ್ತಿದ್ದೆ. ಆಕೆಯೂ ಸ್ವಲ್ಪವೂ ಅಳುಕದೆ ತಮಾಷೆಮಾಡುತ್ತಿದ್ದಳು. ಮತ್ತಿನ್ನೇನೇನು ನಡೆಯುತ್ತಿತ್ತೊ ದೇವರಿಗೇ ಗೊತ್ತು. ಇದೆಲ್ಲಾ ಒಮ್ಮೊಮ್ಮೆ ಆ ಮುದುಕಗಂಡನ ಎದುರಿಗೇ ನಡೆಯುತ್ತಿದ್ದುದರಿಂದ ನನಗೆ ಸೋಜಿಗವೆನಿಸುತ್ತಿತ್ತು.

ಆ ರೂಮನ್ನು ಬಿಟ್ಟಮೇಲೆ, ಅಲ್ಲಿಯೆ ಎದುರಿಗೆ ಆ ಹೋಟಲಿಗೆ ಬಳಿಯಾಗಿ, ಒಂದು ಹೊಸದಾಗಿ ಕಟ್ಟಿದ್ದ ಮಹಡಿಯಿದ್ದ ತಾರಸಿಯ ಮನೆಯಲ್ಲಿ, ಮಹಡಿಯ ಮೇಲಿದ್ದ ಮೂರು ರೂಮುಗಳಲ್ಲಿ ಒಂದನ್ನು ನಾವು ಬಾಡಿಗೆಗೆ ತೆಗೆದುಕೊಂಡೆವು.

ಆ ಇಡಿಯ ಮನೆಯನ್ನೆ ಬಾಡಿಗೆಗೆ ಹುಡುಕುತ್ತಿದ್ದುದನ್ನು ನೋಡಿ, ನಾವು ವಿದ್ಯಾರ್ಥಿಗಳಾದ್ದರಿಂದ ಸಂಭಾವಿತರೆಂದು ಭಾವಿಸಿ ನಮಗೆ ಒಂದು ರೂಮನ್ನು ಬಾಡಿಗೆಗೆ ಕೊಟ್ಟರು. ಅವರು ತಮಿಳರು. ತಮಿಳೆಂದರೆ ಕನ್ನಡನಾಡಿನಲ್ಲಿ ಬಹಳ ಕಾಲದಿಂದ ನೆಲಸಿದ್ದವರಲ್ಲ; ಮದರಾಸಿನಲ್ಲಿ ಡಿಗ್ರಿ ಪಡೆದು ಆಗತಾನೆ ಗೌರ್ನಮೆಂಟ್ ಹೈಸ್ಕೂಲಿನಲ್ಲಿ ಭೌತಶಾಸ್ತ್ರದ ಬೋಧಕರಾಗಿ ನೇಮಕಗೊಂಡಿದ್ದರೆಂದು ತೋರುತ್ತದೆ. ಕನ್ನಡ ಬರುತ್ತಿರಲಿಲ್ಲ. ತೊದಲು ತೊದಲು ಆಡುತ್ತಿದ್ದರು. ಆದರೆ ಬಹಳ ಒಳ್ಳೆಯವರು. ಅವರಿನ್ನೂ ಸಂಸಾರಿ ಆಗಿರಲಿಲ್ಲವೋ ಅಥವಾ ಮೈಸೂರಿಗೆ ಇನ್ನೂ ಸಂಸಾರವನ್ನು ಕರೆತಂದಿರಲಿಲ್ಲವೋ ತಿಳಿಯದು. ಅವರು ಒಬ್ಬರೇ ಇರುತ್ತಿದ್ದರು. ತಾವೇ ಸ್ವವ್ ಕುಕ್ಕರ್ ಇಟ್ಟುಕೊಂಡು ಅಡುಗೆಮಾಡಿಕೊಳ್ಳುತ್ತಿದ್ದರು. ಆಗೊಮ್ಮೆ ಈಗೊಮ್ಮೆ ನಮಗೂ ಅವರ ಅಡುಗೆಯ ರುಚಿ ತೋರಿಸುತ್ತಿದ್ದರು. ಗಣಿತ ಭೌತಶಾಸ್ತ್ರಗಳಲ್ಲಿ ಏನಾದರೂ ಕ್ಲಿಷ್ಟತೆ ತೋರಿದಾಗ ಅವರ ಹತ್ತಿ ಹೋಗಿ ಹೇಳಿಸಿಕೊಳ್ಳುತ್ತಿದ್ದೆ. ಹಿರಿಯ ಅಣ್ಣನಂತೆ ಅವರು ನಮಗೆ ತಪ್ಪುದಾರಿಗೆ ಹೋಗದಂತೆ ಬೋಧಿಸುತ್ತಿದ್ದರು. ನಾವು ಹಳ್ಳಿಗಾಡಿನಿಂದ ಬಂದ ಬ್ರಾಹ್ಮಣೇತರರೆಂದು ತಿಳಿದ ಮೇಲೆ (ಅವರೂ ಬ್ರಾಹ್ಮಣೇತರರಾಗಿದ್ದರೆಂದು ಊಹಿಸುತ್ತೇನೆ.) ನಮ್ಮ ಯೋಗಕ್ಷೇಮ ವಿಚಾರದಲ್ಲಿ ತುಂಬ ಮುತುವರ್ಜಿ ವಹಿಸುತ್ತಿದ್ದರು. ಸಿನಿಮಾ ನಾಟಕಗಳಿಗೆ ಹೋಗಿ ದುಡ್ಡು ಪೋಲುಮಾಡದಿರಲು ಹೇಳುತ್ತಿದ್ದರು. ಹೋಟಲಿನ ತಿಂಡಿ ತಿಂದು ಆರೋಗ್ಯ ಕೆಡಿಸಿಕೊಳ್ಳುದಿರುವಂತೆ ಹೇಳುತ್ತಿದ್ದರು. ರಾತ್ರಿ ಹೊತ್ತು ಹೊರಗೆ ಹೋಗದಂತೆ ಎದುರು ಬಾಗಿಲಿಗೆ ಬೀಗಹಾಕುತ್ತಿದ್ದರು. ಆದರೆ ನನ್ನ ಮಿತ್ರರು ಒಮ್ಮೊಮ್ಮೆ ಚಪಲಚಿತ್ತರಾಗಿ, ಕತ್ತಲಲ್ಲಿ ಕಕ್ಕಸ್ಸಿನ ಕಿರುಗಂಡಿಯಿಂದ ನುಗ್ಗಿ ಹೋಗಿ ಸಿನಿಮಾ ನೋಡಿಕೊಂಡು ಬರುತ್ತಿದ್ದುದನ್ನು ಎಷ್ಟೊ ಕಾಲದ ತರುವಾಯ ತಿಳಿದಿದ್ದೆ!

ನಾವು ಬೆಳಿಗ್ಗೆ ಮಧ್ಯಾಹ್ನದ ಕಾಫಿತಿಂಡಿಗೆ ಲೆಖ್ಖ ಇಟ್ಟಿದ್ದ ಹೋಟಲಿಗೆ ನಾವು ಮೂವರು ಒಟ್ಟಿಗೆ ಹೋಗಿ ಕಾಫಿತಿಂಡಿ ತೆಗೆದುಕೊಳ್ಳುತ್ತಿದ್ದೆವು. ನನ್ನ ಮಿತ್ರರು ನನಗಿಂತಲೂ ಹೆಚ್ಚಾಗಿಯೆ ದೋಸೆ ಇಡ್ಲಿ ಒಡೆ ದಮರೋಟು ಇತ್ಯಾದಿಗಳನ್ನು ತಿನ್ನುತ್ತಿದ್ದರೂ ತಿಂಗಳ ತುದಿಯಲ್ಲಿ ನನ್ನ ಲೆಖ್ಖದಲ್ಲಿಯೆ ಯಾವಾಗಲೂ ಹೆಚ್ಚಿಗೆ ಮೊಬಲಗು ಇರುತ್ತಿತ್ತು! ಇದು ಹೇಗೆ ಎಂದು ನನಗೆ ಅಚ್ಚರಿ, ಜೊತೆಗೆ ತುಸು ಮತ್ಸರ. ವಿಚಾರಿಸಿದರೆ ಮಿತ್ರರು ಸುಮ್ಮನೆ ಹುಳಿನಗೆ ಬೀರುತ್ತಿದ್ದರಷ್ಟೆ! ನನ್ನೊಡನೆ ನಿಜ ಹೇಳಲು ಭಯಪಡಬೇಕಾದ ಕಾರಣವಿರಲಿಲ್ಲ. ಅವರಿಗೆ; ಆದರೆ ಹಳ್ಳಿಯಿಂದ ಹೊಸದಾಗಿ ಬಂದು ಇನ್ನೂ ತಕ್ಕಮಟ್ಟಿಗೆ ಸ್ವಚ್ಛವಾಗಿದ್ದ ನನಗೆ ಹೇಳಲು ಸಂಕೋಚ. ಕಡೆಗಂತೂ ಒಂದು ಬೆರಗುಗೊಂಡೆನಷ್ಟೆ. ಅದನ್ನು ಹೇಗೆ ಮಾಡುವುದೆಂದು ತೋರಿಸಿಯೂಕೊಟ್ಟರು. ದುಡ್ಡು ಉಳಿಸಲು ನಾನೂ ಹಾಗೆ ಮಾಡಬಹುದೆಂದು ಬೋಧಿಸಿದರು. ಉಳಿತಾಯವಾಗುವ ದುಡ್ಡು ಎಷ್ಟು? ಮೂರೊ ನಾಲ್ಕೊ ರೂಪಾಯಿಗಳು!

ನಾವು ಕಾಫಿತಿಂಡಿ ತೆಗೆದುಕೊಂಡಾಗಲೆಲ್ಲಾ ಹೋಟಲಿನವನು ನಮ್ಮಂತಹ ಗಿರಾಕಿಗಳಿಗಾಯೆ ಇಟ್ಟಿದ್ದ ಒಂದು ಪುಸ್ತಕದಲ್ಲಿ ತಾರೀಖು ಹಾಕಿ ನಾವು ತಿಂದು ಕುಡಿದುದರ ಬಾಬ್ತು ಹಣದ ಮೊತ್ತವನ್ನು ನಾವೇ ಬರೆದು ರುಜುಹಾಕಬೇಕಿತ್ತು. ನನ್ನ ಮಿತ್ರರು ಹಣದ ಮೊತ್ತದ ಅಂಕಿಗಳನ್ನು ಬರೆಯುವಾಗ ಮುಂದೆ ಅದನ್ನು ತಿದ್ದಬಹುದಾದ ರೀತಿಯಲ್ಲಿ ಬರೆಯುತ್ತಿದ್ದರು: ಒಂದನ್ನು ತುಸು ಡೊಂಕು ರೀತಿಯಲ್ಲಿ ಬರೆದು, ಮುಂದೆ ಅದನ್ನು ಸೊನ್ನೆ ಮಾಡುವಂತೆ! ಹಾಗೆಯೆ ಇತರ ಕೆಲವು ಅಂಕಿಗಳನ್ನೂ! ನನಗೀಗ ಅವರು ಹೇಗೆ ಮಾಡುತ್ತಿದ್ದರೆಂದು ನೆನಸಿಕೊಳ್ಳುವುದೂ ಸಾಧ್ಯವಾಗುತ್ತಿಲ್ಲ. ಆದರೂ ನಾನೂ ಹಾಗೆ ಮಾಡುವುದರ ಸಾಹಸದ ಸವಿಗಾಗಿಯೆ ಒಂದೆರಡು ಸಾರಿ ತಿದ್ದುವ ಅವಿವೇಕ ಮಾಡಿದ್ದೆನೆಂದು ತೋರುತ್ತದೆ. ನನಗೆ ಅದರ ಅನೀತಿಗಿಂತಲೂ ಹೆಚ್ಚಾಗಿ, ಎಲ್ಲಿಯಾದರೂ ಸಿಕ್ಕಿಬಿದ್ದರೆ ಏನು ಗತಿ? ಎಷ್ಟು ಅವಮಾನ? ಎಂದು ದಿಗಿಲು! ಕಡೆಗೂ ಹೋಟಲಿನವರಿಗೂ ಇದು ಗೊತ್ತಾಯಿತೆಂದು ತೋರುತ್ತದೆ. ಬಹಿರಂಗವಾಗಿ ನಮ್ಮ ಮಾನಕಳೆದು ಗಿರಾಕಿಗಳನ್ನು ಗಾರಾಗಿಸುವ ನಷ್ಷದ ಕಾರ್ಯಕ್ರಮಕ್ಕೆ ಬದಲಾಗಿ ಲೆಖ್ಖ ಇಡುವ ಪದ್ಧತಿಯನ್ನೆ ರದ್ದುಗೊಳಿಸಿಬಿಟ್ಟ!