ಅಲಿಗೆ ಪುಟ್ಟಯ್ಯನಾಯಕರು ವಿಶ್ವಾಸವಿಟ್ಟು ನನಗಾಗಿ ನಿಃಸ್ವಾರ್ಥ ಸೇವಾ ಪ್ರಯತ್ನ ನಡೆಸದೆ ಇದ್ದಿದ್ದರೆ, ಈ ಈಳಿ ವಯಸ್ಸಿನಲ್ಲಿ ತಮ್ಮ ಸಂಸಾರದ ಕೋಟಲೆಗಳನ್ನೆಲ್ಲ ಬದಿಗಿಕ್ಕಿ ಕಾಡುಮೇಡುಗಳ ಕಾಲುದಾರಿಯಲ್ಲಿ ನಡೆದು ಹೋಗಿ ನಂಟರ ಮನೆಗಳಲ್ಲಿ ಹಳೆಯ ದಪ್ತರ ಕಡತಗಳಲ್ಲಿ ಹುಡುಕಿ ತಡಕಿ ಸಂಗ್ರಹಿಸದಿದ್ದರೆ, ನಾನು ಈ ಮುಂದೆ ಬರೆಯಲಿರುವ ನನ್ನ ಜನನ ಜನನಿ ಜನಕರ ಮತ್ತು ಆ ಸಮಯ ಸಂದರ್ಭ ಸನ್ನಿವೇಶಗಳ ಕಥನ ಎಂದೆಂದಿಗೂ ಅಲಿಖಿತವಾಗಿಯೆ ಇರುತ್ತಿತ್ತು:

ನನ್ನ ತಾಯಿ ತಂದೆಯರ ಮದುವೆ ಆದದ್ದು ಶಾಲಿವಾಹನ ಶಕ ೧೮೨೪ನೆಯ ಪ್ಲವನಾಮ ಸಂತ್ಸರದ ಜ್ಯೇಷ್ಠ ಶುದ್ಧ ೧೪ನೆಯ ಶುಕ್ರವಾರವಂತೆ; ಅಂದರೆ ಕ್ರಿಸ್ತಾಬ್ದ ೧೯೦೧ನೆಯ ಮೇ ತಿಂಗಳು ಮೂವತ್ತೊಂದನೆಯ ತೇದಿ.

ನನ್ನ ತಾಯಿಯ ತವರುಮನೆ-ಹಿರಿಕೊಡಿಗೆ. ತವರು ‘ಮನೆ’ ಎಂದರೆ ಮನೆಯೆ! ಮಲೆನಾಡಿನ ಎಲ್ಲ ಹಳ್ಳಿಗಳಂತೆ ಅದೂ ಒಂದೆ ಮನೆಯ ಹಳ್ಳಿ: ಸಹ್ಯಾದ್ರಿಯ ಭವ್ಯ ಏಕಾಂತದಲ್ಲಿ, ತರಂಗೋಪಮ ಮಹಾ ನಿಮ್ಮೋನ್ನತ ಅರಣ್ಯಮಯ ಪರ್ಣಾರ್ಣವದ ಮಧ್ಯೆ! ಕಂದರ ಸೀಮೆಯಲ್ಲಿ ಗದ್ದೆಯ ಕೂಗು, ಅಡಕೆಯ ತೋಟ. “ಮಲೆನಾಡಿನ ಚಿತ್ರಗಳು” “ಕಾನೂರು ಹೆಗ್ಗಡಿತಿ” ಮೊದಲಾದ ನನ್ನ ಸಾಹಿತ್ಯ ಕೃತಿಗಳಲ್ಲಿ ಚಿತ್ರಿತವಾಗಿರುವ ಕಾನೂರು, ಕುಪ್ಪಳಿಗಳಂತೆಯೆ ಹಿರಿಕೊಡಿಗೆ, ಅಂದರೆ, ಒಂದೆ ವ್ಯತ್ಯಾಸ ನನಗೆ ನೆನಪಿರುವಂತೆ; ನಮ್ಮ ಮನೆ ಕುಪ್ಪಳಿಗೆ ಹೆಂಚು ಹೊದಿಸಿತ್ತುಲ ಹಿರಿಕೊಡಿಗೆಗೆ ಹೊದಿಸಿದ್ದು ಅಡಕೆಯ ಸೊಗೆ. ಇಂದಿನ ದೃಷ್ಟಿಯಿಂದ ಆಗಿರುವ ಮತ್ತೂ ಒಂದು ವ್ಯತ್ಯಾಸವನ್ನು ಇಲ್ಲಿಯೆ ಸೂಚಿಸಿದರೆ ತಪ್ಪಾಗದು. ಅರ್ಧ ಶತಮಾನದ ಅನಂತರ ಆ ಸ್ಥಳಕ್ಕೆ ಸಂದರ್ಶವಿತ್ತ ನನಗೆ ಒದಗಿದ ಆ ಕರುಣಮಯ ಅನುಭವದ ವಿವರ ಚಿತ್ರವನ್ನು ಮುಂದೆ ಉಚಿತ ಸ್ಥಳದಲ್ಲಿ ನೀಡಲಿದ್ದೇನಾದರೂ ಇಲ್ಲಿ ಅದನ್ನು ಸೂಚಿಸಬಯಸುತ್ತೇನೆ, ಈ ಕುಪ್ಪಳಿ ಇನ್ನೂ ಇದೆ; ಆ ಹಿರಿಕೊಡಿಗೆ ಇಲ್ಲ! ಅದು ಇದ್ದ ಕುರುಹೂ ಕಾಣಿಸದಷ್ಟು ಮಟ್ಟಿಗೆ ನಾಮಾವಶೇಷ ಮಾತ್ರವಾಗಿದೆ! ನನ್ನಮ್ಮ ನನ್ನನ್ನು ಹೆತ್ತಂದು ನಾನು ಈ ಜನ್ಮದಲ್ಲಿ ಭೂಸ್ಪರ್ಶಮಾಡಿದ ಪವಿತ್ರ ಜಾಗವೂ ಇಂದು ಹಿರಿಕೊಡಿಗೆಯ ಜಮೀನನ್ನು ಸಾಲಕ್ಕಾಗಿ ಪಡೆದು ಹಿಂದಿನ ಮನೆಯ ಪಕ್ಕದಲ್ಲಿಯೆ ಮನೆ ಕಟ್ಟಿಕೊಂಡು ಬೇಸಾಯ ಜೀವನ ಮಾಡುತ್ತಿರುವ ಭಟ್ಟರೊಬ್ಬರ ದನದ ಕೊಟ್ಟಿಗೆಯ ಹಿಂಬದಿಯ ಗೊಬ್ಬರ ಗುಂಡಿಯಾಗಿದೆ!

ನನ್ನ ಅಜ್ಜನ ಎಂದರೆ ತಾಯಿಯ ತಂದೆಯ ಮೂಲಮನೆ ಅಮ್ಮಡಿ; ಕೊಪ್ಪಕ್ಕೆ ಒಂದೆರಡು ಮೈಲಿಯೊಳಗಿದೆ, ತೀರ್ಥಹಳ್ಳಿಯ ಕಡೆಗೆ ಹೋಗುವ ರಸ್ತೆಯ ಎಡಪಕ್ಕದಲ್ಲಿ, ಕಣ್ಣಿಗೆ ಕಾಣಿಸುವಂತೆ. ಅಜ್ಜ ತಿಮ್ಮಯ್ಯ ನಾಯಕರು ತಮ್ಮ ಅಣ್ಣ ಸಿದ್ದಯ್ಯ ನಾಯಕರು ಮತ್ತು ತಮ್ಮ ರಂಗಪ್ಪ ನಾಯಕರುಗಳಿಗೆ ಅಮ್ಮಡಿಯನ್ನು ಬಿಟ್ಟುಕೊಟ್ಟು ತಾವು ಅಮ್ಮಡಿಗೆ ಒಂದೆರಡು ಮೈಲಿಯೊಳಗಿರುವ ಹಿರಿಕೊಡಿಗೆಯ ಗದ್ದೆ ತೋಟಗಳನ್ನು ಕೊಂಡು ಅಲ್ಲಿ ನೆಲಸಿದರಂತೆ. ಅಜ್ಜ ತಿಮ್ಮಯ್ಯನಾಯಕರಿಗೂ ಅಜ್ಜಿ ಶೇಷಮ್ಮ ಹೆಗ್ಗಡಿತಿಯವರಿಗೂ ಗಂಡುಮಕ್ಕಳಾಗಲಿಲ್ಲ. ಹುಟ್ಟಿದ ಮೂರೂ ಹೆಣ್ಣು ಮಕ್ಕಳಲ್ಲಿ ನನ್ನ ತಾಯಿ ಸೀತಮ್ಮನೆ ಕೊನೆಯವರು.

ಅಜ್ಜ ತಿಮ್ಮಯ್ಯನಾಯಕರು ತೀರಿಕೊಂಡ ಮೇಲೆ ಮನೆ, ಗದ್ದೆ, ತೋಟ, ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳುವರಿಲ್ಲದಿದ್ದುದರಿಂದ ಅಜ್ಜಿ ಶೇಷಮ್ಮನವರು ತಮ್ಮ ಗಂಡನ ಅಣ್ಣ ಅಮ್ಮಡಿ ಸಿದ್ದಯ್ಯನಾಯಕರ ಎರಡನೆಯ ಹೆಂಡತಿಯ ಏಳು ಮಕ್ಕಳಲ್ಲಿ (ಮೊದಲ ಐದು ಗಂಡು, ಕೊನೆಯ ಎರಡು ಹೆಣ್ಣು!) ಹಿರಿಯ ಮಕ್ಕಳಾದ ಸುಬ್ಬಯ್ಯ ನಾಯಕರನ್ನು ದತ್ತು ತೆಗೆದುಕೊಂಡರಂತೆ. ನಾನು ಈ ಲೋಕಕ್ಕೆ ಕಣ್ದೆರೆದು ಚಿಕ್ಕ ಹುಡುಗನಾಗಿ ತಾಯಿಯೊಡನೆ ಹಿಡಿಕೊಡಿಗೆಗೆ ಹೋಗಿ ಬರುತ್ತಿದ್ದಾಗ ಆ ‘ಸುಬ್ಬಮಾವ’ನೆ  ಮನೆಯ ಯಜಮಾನರಾಗಿ, ಸೊಂಟದಲ್ಲಿದ್ದ ನೆವಣಕ್ಕೆ ‘ತವಾಜಿ’ಯನ್ನೂ ಬೀಗದ ಕೈಗೊಂಚಲನ್ನೂ ಸಿಕ್ಕಿಸಿಕೊಂಡು, ಸೊಂಟದ ಪಂಚೆವಿನಾ ನಗ್ನರಾಗಿ, ರೋಮಮಯರಾಗಿ, ಒಂದು ಕಾಲಿಗೆ ಬೆಳ್ಳಿಸರಿಗೆ ಹಾಕಿಕೊಂಡು, ಮತ್ತೊಂದು ತುಸು ಸಣ್ಣವೂ ಗಿಡ್ಡವೂ ಆಗಿಹೋಗಿದ್ದ ಕಾಲಿನಿಂದ ಕುಂಟಿ ಕುಂಟಿ ಝಣತ್ಕಾರ ಸಶಬ್ದರಾಗಿ ನಡೆಯುತ್ತಿದ್ದುದು ಸುದೂರದ ಚಿತ್ರದಂತೆ ಈಗಲೂ ನನ್ನ ನೆನಪಿಗೆ ಹೊಳೆಯುತ್ತಿದೆ!

ನನ್ನ ತಾಯಿಯ ಇಬ್ಬರು ಅಕ್ಕಂದಿರಲ್ಲಿ ಹಿರಿಯ ಅಕ್ಕ ದಾನಮ್ಮನವರನ್ನು ಅಲಿಗೆ ನಾಗಪ್ಪ ನಾಯಕರಿಗೂ, ಎರಡನೆಯ ಅಕ್ಕ ವೆಂಕಮ್ಮನವರನ್ನು ಕೊಳಾವರದ ವೆಂಕಟಯ್ಯ ಗೌಡರಿಗೂ ಮದುವೆಮಾಡಿಕೊಟ್ಟಿತ್ತು. ಆ ಇಬ್ಬರೂ ಮಕ್ಕಳಾಗುವ ಮುನ್ನವೆ ವಿಧವೆಯರಾದಂತೆ!

ನನ್ನ ತಾಯಿ ಅಥವಾ ಅವ್ವ (ನಮ್ಮ ಮನೆಯಲ್ಲಿ ಮಕ್ಕಳೆಲ್ಲ ತಮ್ಮ ತಮ್ಮ ತಾಯಂದಿರನ್ನು ಅಮ್ಮ ಎಂದು ಕರೆಯುತ್ತಿರಲಿಲ್ಲ; ಅವ್ವ ಎಂದೇ ಕರೆಯುತ್ತಿದ್ದುದು ರೂಢಿ.) ಸೀತಮ್ಮನವರನ್ನು ಕುಪ್ಪಳಿ ವೆಂಕಟಯ್ಯಗೌಡರಿಗೆ (ಅಥವಾ ಅನೇಕ ವರುಷಗಳ ತರುವಾಯ ನಾನು ಓದುವ ವಿದ್ಯಾರ್ಥಿಯಾಗಿ ಸ್ಕೂಲಿಗೆ ಸೇರಿದಾಗ ತಂದೆಯ ಹೆಸರು ಕೊಟ್ಟಂತೆ-ವೆಂಕಟಪ್ಪಗೌಡರು) ಧಾರೆಯೆರೆದಿದ್ದು, ಕ್ರಿ.ಶ. ೧೯೦೧ ರಲ್ಲಿ.

ನಾನು ಹುಟ್ಟಿದಂದು ಐದಾರು ವರುಷದ ಹುಡುಗರಾಗಿದ್ದ ಅಲಿಗೆ ಪುಟ್ಟಯ್ಯ ನಾಯಕರು ನನ್ನನ್ನು ತೊಟ್ಟಿಲಿಗೆ ಹಾಕುವ ದಿನದಲ್ಲಿ ಮಾತ್ರವಲ್ಲದೆ ನಾನು ಜನ್ಮವೆತ್ತಿದ ದಿನವೂ ಹಿರಿಕೊಡಿಗೆಯಲ್ಲಿ ನೆಂಟರ ಮನೆಯಲ್ಲಿದ್ದರಂತೆ! ನನ್ನ ಸಂಭವದ ವಿಚಾರವಾಗಿ ಅವರು ತಮ್ಮದೇ ಆಗಿರುವ ಸ್ವಲ್ಪ ರೂಕ್ಷ ಎನ್ನಬಹುದಾದರೂ ಸಹಜ ರೀತಿಯಲ್ಲಿ ಕಾಗದ ಬರೆದಿದ್ದಾರೆ. ಅದರ ಐತಿಹಾಸಿಕ ಸತ್ಯಕ್ಕಲ್ಲದಿದ್ದರೂ ಸ್ವಾರಸ್ಯಕ್ಕಾಗಿ ಅಲ್ಪಸ್ವಲ್ಪ ತಿದ್ದುಪಡಿಯೊಡನೆ ಅದನ್ನು ಇಲ್ಲಿ ಕೊಡುತ್ತೇನೆ:

“….. ಈ ದೇವಸ್ಥಾನಗಳಿಗೂ-(ದೇವರುಗಳಿಗೂ)-ತಮಗೂ ಇರುವಂಥ ನಿಕಟ ಸಂಬಂಧವನ್ನು ಸ್ವಲ್ಪ ಬರೆಯುತ್ತೇನೆ, ಕ್ಷಮಿಸಿ, ಮತ್ತು ಸಾವಧಾನದಿಂದ ಆಲೋಚಿಸಿ. ತಮ್ಮ ಅಜ್ಜಿಗೆ (ತಾಯಿಯ ತಾಯಿ) ಮೂರು ಜನ ಹೆಣ್ಣು ಮಕ್ಕಳು. ಅದರಲ್ಲಿ ಕಿರಿಯವರೇ ತಮ್ಮ ತಾಯಿ. ಹಿರಿಯ ಹೆಣ್ಣು ಮಕ್ಕಳಿಬ್ಬರಿಗೂ ಮದುವೆಯಾಗಿ ಅವರುಗಳ ಗಂಡಂದಿರೂ ತೀರಿಹೋದುದಲ್ಲದೆ ಮಕ್ಕಳೂ ಆಗಿರಲಿಲ್ಲ. ಈ ದಾರುಣ ಕೊರತೆಯನ್ನು ಕಿರಿಯ ಮಗಳೊಬ್ಬಳಿಂದ ಪರಿಹರಿಸಿಕೊಳ್ಳಬೇಕಾಗಿತ್ತು. ಆಕೆಗೂ ಮದುವೆಯಾಯ್ತು. ಆದರೆ ಮೂರು ನಾಲ್ಕು ವರ್ಷ ಸಂದರೂ ಮಕ್ಕಳಾಗಲಿಲ್ಲ. ಪಾಪ! ಕೊರತೆಯ ಗಾಯಕ್ಕೆ ಹುಳಿ ಹಿಂಡಿದಂತಾಯ್ತು! ಅಶ್ವತ್ಥನಾರಾಯಣನಲ್ಲಿ ತನ್ನ ಮಗಳಿಗೆ ಮಕ್ಕಳಾಗುವಂತೆ ಪ್ರಾರ್ಥಿಸಿ, ನಾಗರ ಕಲ್ಲನ್ನೂ ಪ್ರತಿಷ್ಠೆ ಮಾಡಿಸಿದರು. ಪ್ರತಿ ಶನಿವಾರ ಹಣ್ಣುಕಾಯಿ ಕೊಟ್ಟು, ಅಶ್ವತ್ಥ ಪ್ರದಕ್ಷಿಣೆ ಮಾಡಿಸುತ್ತಿದ್ದರು. ಅಂತೆಯೇ ಶ್ರೀ ಸೋಮೇಶ್ವರ, ಶ್ರೀ ಸಿದ್ಧಿವಿನಾಯಕರಲ್ಲಿಯೂ ನಂದಾದೀಪ, ಪಂಚ ಕಜ್ಜಾಯ, ಈಶ್ವರನಿಗೆ ಅಭಿಷೇಕ ಮುಂತಾದ ಪ್ರಾರ್ಥನಾ ಪೂಜಾದಿಗಳು ನಾಲ್ಕು ವರುಷ ಎಡೆಬಿಡದೆ ನಡೆದೆ ನಡೆಯುತ್ತಿತ್ತು. ಶ್ರೀ ತಿರುಪತಿ ತಿಮ್ಮಪ್ಪನ ಭಂಡಾರಕ್ಕೂ ಶ್ರೀ ಧರ್ಮಸ್ಥಳದ ಮಂಜುನಾಥನ ಭಂಡಾರಕ್ಕೂ ಬೆಳ್ಳಿಯ ತೊಟ್ಟಿಲು ಚಿನ್ನದ ಶಿಶುಗಳ ಸಮರ್ಪಣೆಯೂ ಆಗಿತ್ತು. ಇಷ್ಟೆ ಅಲ್ಲದೆ ಕೊಪ್ಪದ ಶ್ರೀ ಗುತ್ಯಮ್ಮ (ಅವರ ಮನೆ ದೇವರು)ನಲ್ಲಿ ಪ್ರತಿ ಮಂಗಳವಾರ ಪೂಜೆ ಮತ್ತು ಕೋಳಿಯ ಹರಕೆ ಸಲ್ಲುತ್ತಿತ್ತು. ಇದೂ ಸಾಲದ್ದಕ್ಕೆ,  ಎಲ್ಲೆಲ್ಲಿಗೋ ಕಾಣಿಕೆ! ಮತ್ತು ಕೊಟ್ಟದ ಮನೆ ಹಾರತಿಯಿಂದ ಗರ್ಭೋತ್ಪಾದನೆಗೆ ಔಷಧಿ! ….. ಇಲ್ಲಿ ಸ್ವಲ್ಪ ನಿಂತು ಗ್ರಹಿಸಿ: ತಮ್ಮನ್ನು ನೋಡುವ ಘನೋದ್ದೇಶಕ್ಕೆ ತಮ್ಮ ಅಜ್ಜಿಯ ನಿಷ್ಕಾಮ ಪ್ರೇಮದ ಬೆಲೆಯನ್ನು!  ತಮ್ಮ ಕಾವ್ಯದ ನುಡಿಯಂತೆ ‘ಹೂವಿನ ಬಾಳಿಗೆ ಪಂಪನು ಕೊಟ್ಟಾ ಬೀಜದ ಗೋಳನು-’! ಆ ಸನ್ಮಾನ್ಯೆಯ ಪ್ರಾಥನೆಯ ಫಲವಾಗಿ ದೇವರು ದಯಪಾಲಿಸಿದ ವರಪ್ರಸಾದ ಪುತ್ರರು ತಾವೆಂದು ಹೇಳಕೊಂಡಲ್ಲಿ ಅನುಚಿತವೇನಿಲ್ಲವಲ್ಲ? ತನ್ನ ಸಂತಾಪ ನಿವೃತ್ತಿಗಾಗಿ ತೋಡಿದ ತಿಳಿಗೊಳದ ಅಮೃತಪಾನ ಮಾಡುವ ಅವಕಾಶ ಕಲ್ಪಿಸಿಕೊಟ್ಟುದಕ್ಕಾಗಿ ಆ ಸನ್ಮಾನ್ಯ ಮಾತೆಗೆ ನನ್ನ ಅನಂತಾನಂತ ವಂದನೆಗಳನ್ನು ಸಲ್ಲಿಸುತ್ತೇನೆ. ಮೇಲೆದ್ದು ಚಿಮ್ಮುವ ಈ ಅಮೃತದ ಬುಗ್ಗೆಯನ್ನು ಆತ್ಮಲೋಕ ನಿವಾಸಿನಿಯಾದಾಕೆಯೂ ನೋಡಿ ಆನಂದಿಸುತ್ತಿರುವಳೆನ್ನುವುದರಲ್ಲಿ ಸಂಶಯವಿಲ್ಲ.”

ಅಂತೂ, ಎಷ್ಟೊಂದು ದೇವ ದೇವಿಯರ ಕಮ್ಮಾರಸಾಲೆಯಲ್ಲಿ ಅವರ ಹೃದಯದ ದಿವ್ಯಮೂಷೆಯಲ್ಲಿ ಕಾಯಿಸಿ, ತಮ್ಮ ಬಯಕೆಯ ತಪಸ್ಸಿನ ಅಡಿಗಲ್ಲಿನ ಮೇಲೆ ಬಡಿ ಬಡಿದು, ನನ್ನ ಅಜ್ಜಿ ನನ್ನನ್ನು ತಯಾರಿಸಿದ್ದಾರೆ ಎಂಬುದನ್ನು ನೆನೆದರೆ, ನನ್ನ ವಿಚಾರ ಬುದ್ಧಿಯ ನಾಸ್ತಿಕತೆ ತನ್ನ ಕೃತಘ್ನತೆಗೆ ನಾಚಿ, ಆಸ್ತಿಕತೆಗೆ ತಿರುಗಿ, ಕೃತಜ್ಞತೆಯ ಕಣ್ಣೀರು ಕಪೋಲಗಳನ್ನು ತೊಯ್ಯಿಸಿ ಮೀಯಿಸಿದಂತಾಗುತ್ತದೆ!