ಅಂತೂ ಒಂದು ವರ್ಷ ಮುಗಿಯುವುದರಲ್ಲಿ ನಾನೂ ತಕ್ಕಮಟ್ಟಿಗೆ ಪೇಟೆಯ ಕದೀಮತನದಲ್ಲಿ ಮುಂದುವರಿದಿದ್ದೆ. ಅಲ್ಲಿಯ ಜೀವನದ ಕೊಳಕು ಬೆಳಕುಗಳ ಪರಿಚಯವೂ ಕರ್ಣಾಕರ್ಣಿಯಾಗಿಯಾದರೂ ಸಾಕಷ್ಟು ಆಗಿತ್ತು. ಹಳ್ಳಿಯಿಂದ ಮೈಸೂರಿಗೆ ಬಂದಾಗ ಬೀದಿಯಲ್ಲಿ ಹೆಂಗಸರು ತೊಪ್ಪೆ ಹೆರಕುವುದನ್ನು ನೋಡಿ ನನಗೆ ಅರ್ಥವಾಗದೆ “ಯಾತಕ್ಕೆ ಸೆಗಣಿ ಹೆರಕುತ್ತಿದ್ದಾರೆ?” ಎಂದು ಮಿತ್ರರನ್ನು ಕೇಳಿದೆ. ಅವರು ಬೆರಣಿಯ ವಿಚಾರ ತಿಳಿಸಿದರು. ನಾನು ಬೆರಣಿ ಎಂಬ ಪದವನ್ನು “ನೀನಾರಿಗಾದೆಯೋ ಎಲೆ ಮಾನವಾ” ಎಂಬ ಗೋವಿನ ಹಾಡಿನ ಪಾಠದಲ್ಲಿ ಕೇಳಿದ್ದೆ. “ತಟ್ಟಿದರೆ ಕುರುಳಾದೆ” ಎಂಬಲ್ಲಿ “ಕರುಳು” ಎನ್ನುವುದಕ್ಕೆ ಪುಸ್ತಕದಲ್ಲಿ ‘ಬೆರಣಿ’ ಎಂದು ಅರ್ಥ ಕೊಟ್ಟಿತ್ತು. ನಮ್ಮ ಉಪಾಧ್ಯಾಯರು ಕೆ.ಬಿ. ಮಾನಪ್ಪನನ್ನು  ‘ಬೆರಣಿ  ಅಂದರೆ ಏನೊ?’  ಎಂದು ಕೇಳಿದರು. ಅವನು ಎದ್ದುನಿಂತು ಕೈಕಟ್ಟಿಕೊಂಡು ತುಂಬ ಗಂಭೀರವಾಗಿ “ಅದೇ, ಸಾರ್‌, ದಿನವೂ ಬೆಳಿಗ್ಗೆ ನಾವು ಗಂಜಿ ಉಣ್ಣುವಾಗ ಇಷ್ಟಿಷ್ಟೆ ಹಾಕಿಕೊಳ್ಳುತ್ತೀವಲ್ಲಾ ಅದು!” ಎಂದ. ಉಪಾಧ್ಯಯರು ತಡೆಯಲಾರದೆ ಗೊಳ್ಳೆಂದು ನಕ್ಕರು. ಅವರು ಬಯಲುಸೀಮೆಯವರಾಗಿದ್ದು, ಬೆರಣಿ ಎಂಬುದು ದಿನನಿತ್ಯದ ಅನುಭವದಿಂದ ಎಲ್ಲರಿಗೂ ಗೊತ್ತಿದ್ದ ವಿಷಯವೆಂದು ಭಾವಿಸಿದ್ದರು. ಆದ್ದರಿಂದಲೆ ಅವರಿಗೆ ನಗು! ಆದರೆ ನಮಗಾರಿಗೂ ನಗುಬರಲಿಲ್ಲ. ಶಬ್ದ ಸಾದೃಶ್ಯದಿಂದ ಮಾನಪ್ಪನ ಅಭಿಪ್ರಾಯ ಬೆರಣಿ ಎಂದರೆ ಬೆಣ್ಣೆ ಎಂದಾಗಿತ್ತು! ಮಲೆನಾಡಿನಲ್ಲಿ ಎಲ್ಲಿ ಅಂದರೆ ಅಲ್ಲಿ ಕಾಡಿನ ಸೌದೆ ಯಥೇಚ್ಛವಾಗಿರುವಲ್ಲಿ ಯಾರೂ ಹಾದಿಬೀದಿಯಲ್ಲಿ ಬಿದ್ದಿರುವ ಸೆಗಣಿಯನ್ನು ಆಯ್ದು ತಟ್ಟಿ ಒಣಗಿಸಿ ಇಂಧನವಾಗಿ ಉಪಯೋಗಿಸುತ್ತಿರಲಿಲ್ಲ. ಕೊಟ್ಟಿಗೆಯ ಸೆಗಣಿಯನ್ನೆತ್ತಿ ಗೊಬ್ಬರಗುಂಡಿಗೆ ಹಾಕುತ್ತಿದ್ದರೆ ಹೊರತು, ಕೊಟ್ಟಿಗೆಯ ಹೊರಗೆ ದನಕರು ಕಾಡಿನಲ್ಲಿ ಬೆಟ್ಟದಲ್ಲಿ ಬ್ಯಾಣದಲ್ಲಿ ಹಕ್ಕಲಿನಲ್ಲಿ ಹಾಕಿದ ಸೆಗಣಿಯನ್ನು ಎತ್ತುವ ಗೋಜಿಗೇ ಯಾರೂ ಹೋಗುತ್ತಿರಲಿಲ್ಲ. ಅಷ್ಟೊಂದು ಹಾಸ್ಯಾಸ್ಪದವಾಗಿರುತ್ತಿತ್ತು ಯಾರಾದರೂ ಹಾಗೆ ಮಾಡುವುದನ್ನು ನಾವು ಕಂಡಿದ್ದರೆ!

ಇಲ್ಲಿಯ ಅನೇಕರು ಕೊಳಕು ಬಟ್ಟೆಯ ಶರಟು ಚಡ್ಡಿ ಹಾಕಿ ತಿರುಗತ್ತಿದ್ದುದನ್ನು ನೋಡಿ ನಾನು ಅವರೆಲ್ಲ ತುಂಬ ಕೀಳುಜಾತಿಯವರಿರಬೇಕೆಂದುಕೊಂಡಿದ್ದೆ. ಒಂದು ದಿನ ಗೊತ್ತಾಯಿತು, ಅವರು ಒಕ್ಕಲಿಗರೆಂದು! ಮತ್ತು ನಾನೂ ಅವರ ಜಾತಿಗೇ ಸೇರಿದವನೆಂದು! ನಾನು ಹಳ್ಳಿಯಲ್ಲಿರುವಾಗ ಒಕ್ಕಲಿಗ ಎಂಬ ಮಾತನ್ನು ಜಾತ್ಯರ್ಥದಲ್ಲಿ ಕೇಳಿರಲಿಲ್ಲ. ನಮ್ಮನ್ನೆಲ್ಲ ‘ಗೌಡರು’ ಎಂದುಕೊಳ್ಳುತ್ತಿದ್ದೆವು. ನಮ್ಮ ಜಾತಿಯವರು ಯಾರೂ ಚಡ್ಡಿ ಹಾಕಿಕೊಳ್ಳುತ್ತಿರಲಿಲ್ಲ; ಹುಡುಗರನ್ನು, ಅದರಲ್ಲಿಯೂ ಓದಲು ಹೋಗುತ್ತಿದ್ದ ಹುಡುಗರನ್ನು ಬಿಟ್ಟರೆ. ಹುಡುಗರಲ್ಲಿಯೂ ಆಗತಾನೆ ಅದು ರೂಢಿಗೆ ಬರುತ್ತಿತ್ತು, ಇಜಾರದಂತೆಯೆ! ಎಲ್ಲರೂ ಪಂಚೆ ಸುತ್ತಿಕೊಳ್ಳುವುದು ಅಥವಾ ಕಚ್ಚೆ ಹಾಕಿಕೊಳ್ಳುವುದನ್ನೆ ನೋಡುತ್ತಿದ್ದ ನನಗೆ ಚಡ್ಡಿ ಹಾಕಿಕೊಂಡು ಪೇಟೆಯಲ್ಲಿ ಓಡಾಡುವುದು ತುಂಬ ಕೀಳು ವರ್ತನೆ ಎಂಬ ಭಾವನೆಯಿತ್ತು. ಅದಾದರೂ ಎಂತಹ ನಿಕ್ಕರು? ಅಡ್ಡಗೆರೆಯ ಬಟ್ಟೆಯದು! ಒಂದು ಕಡೆಯಲ್ಲಿ ಒಂದೆರಡು ಬೆರಷ್ಟು ಸೀಳಿರುತ್ತಿತ್ತು! ಇದನ್ನೆಲ್ಲ ಒಗ್ಗಿಸಿಕೊಳ್ಳುವುದು ನನ್ನ ಗ್ರಾಮಿಣ ಮನಸ್ಸಿ ಭಾರವಾಗಿತ್ತು ಮೊದಮೊದಲು.

ನಮ್ಮ ತರಗತಿಗೆ ಬರುತ್ತಿದ್ದ ಒಬ್ಬ ಹುಡುಗನ ವಿಚಾರದಲ್ಲಿ ಕೆಲವರು ವಿಚಿತ್ರವಾಗಿ ವರ್ತಿಸುತ್ತಿದ್ದರು. ಕಿರುನಗೆ ಬೀರಿ ಮಾತಾಡಿಸುತ್ತಿದ್ದರು. ಏನೋ ವ್ಯಂಗ್ಯದ ಮಾತಿನಿಂದ ಅವನನ್ನು ಚುಡಾಯಿಸುತ್ತಿದ್ದರು. ಅವನು ತುಸು ಬೆಳ್ಳಗಿದ್ದು ನೋಡಲು ಲಕ್ಷಣವಾಗಿದ್ದನು. ನನ್ನೊಡದೆ ಅವನು ವರ್ತಿಸುತ್ತಿದ್ದ ಅಥವಾ ಮಾತಾಡುತ್ತಿದ್ದ ರೀತಿಯಲ್ಲಿ ನನಗೆ ಅವನು ಇತರ ಎಷ್ಟೋ ಹುಡಗರಿಗಿಂತ ಮೇಲುಮಟ್ಟದವನಾಗಿಯೆ ಕಾಣಿಸಿದ್ದನು, ನಯವಿನಯಗಳಲ್ಲಿ, ಬಟ್ಟೆಬರೆ ಹಾಕಿಕೊಳ್ಳುವುದರಲ್ಲಿ, ಮಾತುಕತೆಯಲ್ಲಿ, ಆದರೂ ಯಾಕೆ ಅವನನ್ನು ಹಾಗೆ ಪೀಡಿಸುತ್ತಾರೆ ಎಂಬುದೇ ನನಗರ್ಥವಾಗುತ್ತಿರಲಿಲ್ಲ. ಅವವನ್ನು ಹಾಗೆ ಪೀಡಿಸುತ್ತಿದ್ದವರೆಲ್ಲ ಯಾವುದೊ ಒಂದು ಪದವನ್ನು ಪ್ರಯೋಗಿಸುತ್ತಿದ್ದರು. ಆ ಪದವೂ ನನಗೆ ಹೊಸತು; ಎಂದೂ ಕೇಳಿರಲಿಲ್ಲ. ಒಂದು ದಿನ ನನ್ನ ಇನ್ನೊಬ್ಬ ಮಿತ್ರ ನನ್ನು – ನಾವಿಬ್ಬರೆ ಕ್ಲಾಸಿಗೆ ಎಲ್ಲರಿಗಿಂತ ಮೊದಲೆ ಹೋಗಿದ್ದ ಸಂದರ್ಭದಲ್ಲಿ –ಕೇಳಿದೆ, ಆ ಪದದ ಅರ್ಥ ಏನು ಎಂದು. ಅವನು ನನ್ನ ಹಳ್ಳಿಯತನಕ್ಕೆ ಬೆರಗಾಗಿ ನಕ್ಕುಬಿಟ್ಟು, ತುಂಬ ಸಂಕೋಚಪಟ್ಟುಕೊಂಡ, ಅತಿ ಅಶ್ಲೀಲದ ವಲಯ ಪ್ರವೇಶಮಾಡಲಾರದೆ, ಇಂಗಿತವಾಗಿಯೆ ಸಾಧ್ಯವಾದಷ್ಟನ್ನು ಸೂಚಿಸಿದಾಗ ನಾನು ದಿಗ್‌ಭ್ರಾಂತನಾಗಿ ಅದನ್ನು ನಂಬಲೊಲ್ಲದೆ ಹೋದೆ. ಆಮೇಲೆ ಆ ಪದವೂ ಸೇರಿದಂತೆ ಅಂತಹ ಇತರ ಪದಗಳೂ ಹುಡುಗರ ಹೆಸರಿನೊಡನೆ ಕಕ್ಕಸ್ಸಿನ ಗೋಡೆಗಳ ಮೇಲೆಯೂ ಕಾಂಪೌಂಡು ಗೋಡೆಗಳ ಮೇಲೂ ಕಾಣಿಸಿಕೊಂಡಾಗ ಆ ಹೀನ ದುರಭ್ಯಾಸ ಪಟ್ಟಣಗಳಲ್ಲಿ ಎಷ್ಟರಮಟ್ಟಿಗೆ ಪ್ರಚಲಿತವಾಗಿರಬಹುದು ಎಂದು ಜುಗುಪ್ಸೆ ಪಟ್ಟುಕೊಂಡಿದ್ದೆ.