ಮನೆಯಿಂದ ಮನಿಯಾರ್ಡರು ಬರುವುದು ತಡವಾಗಿ ನಾವು ಹೇಗೆ ಕಟುವರ್ತನೆ ಕಟುಭಾಷೆಗಳಿಗೆ ಈಡಾಗಿ ಅವಮಾನಿತರಾಗಬೇಕಾಗುತ್ತಿತ್ತು ಎಂಬುದನ್ನು ಹಿಂದೆ ಹೇಳಿದ್ದೇನೆ. ಕಷ್ಟಸಮಯದಲ್ಲಿ ಸಹಾಯಮಾಡಲು ನನಗೆ ಯಾರೂ ಪರಿಚಯಸ್ಥರು ಇಲ್ಲಿ ಇರಲಿಲ್ಲ. ವಿದ್ಯಾರ್ಥಿನಿಲಯದಲ್ಲಿ ಇದ್ದಿದ್ದರೆ ಆ ದೃಷ್ಟಿಯಿಂದ ಸ್ವಲ್ಪ ಅನುಕೂಲವಾಗಿರುತ್ತಿ‌ತ್ತು, ಏಕೆಂದರೆ ಹೊಟಲಿನವರಂತೆ ನಿಷ್ಠುರವಾಗಿ ತಟಕ್ಕನೆ ಅನ್ನಹಾಕುವುದನ್ನೆ ನಿಲ್ಲಿಸುತ್ತಿರಲಿಲ್ಲ!

ಶ್ರೀ ಮಾರ್ಗಸಹಾಯಂ ವರ್ಗವಾದರೊ ಅಥವಾ ಮನೆ ಬದಲಾಯಿಸಿದರೊ ಅವರಿದ್ದ ಮನೆಯನ್ನು ಬಿಟ್ಟರು. ಅವರಿಂದ ಬಾಡಿಗೆಗೆ ಇದ್ದ ನಾವೂ ಬಿಡಬೇಕಾಯಿತು. ಆಗ ಹಿಂದೆ ಮೈಸೂರು ಬ್ಯಾಂಕು ಇದ್ದ ಅಡ್ಡಬೀದಿಯ ಒಂದು ಓಡುಹೆಂಚಿನ ಮಹಡಿಮನೆಯಲ್ಲಿ ಮಹಡಿಯ ಒಂದು ಮೂಲೆಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡೆವು. ಆ ಮನೆ ಈಗಲೂ (೧೯೭೧ರಲ್ಲಿ) ಹಾಗೆಯೇ ಇದೆಯಲ್ಲಾ ಎಂಬುದೇ ಅಚ್ಚರಿ. ಅದರ ಸುತ್ತ ಇದ್ದ ಅಂತಹ ಎಲ್ಲ ಮನೆಗಳೂ ಉರುಳಿ, ಅವುಗಳ ಜಾಗದಲ್ಲಿ ಅತ್ಯಾಧುನಿಕವಾದ ಕಟ್ಟಡಗಳೆದ್ದಿವೆ. ತರತರದ  ಅಂಗಡಿಗಳಾಗಿ ಶೋಭಿಸುತ್ತಿವೆ. ಅದು ಮಾತ್ರ ಪ್ರಾಕ್ತನಾವಶೇಷವೆಂಬಂತೆ ಹಾಗೆಯೆ ಇದೆ! ನಾನು ಕಾರಿನಲ್ಲಿ ಆ ಬೀದಿಯಲ್ಲಿ ಹೋಗುವಾಗಲೆಲ್ಲ ನಾನಿದ್ದ ಆ ಮಸಿಯ ಕೊಟಡಿಯ ಕಿಟಕಿನಾಮಕ ಕಂಡಿಯ ಕಡೆಗೆ ದೃಷ್ಟಿಹಾಯಿಸಿ, ಎಂತೆಂತಹ ನರಕಗಳಲ್ಲಿ ವಾಸಿಸಿಯೂ ಎದ್ದುಗೆದ್ದು ಬರುವಂತೆ ಶ್ರೀಗುರು ನನ್ನನ್ನು ಕೈಹಿಡಿದು ಎತ್ತಿ ರಕ್ಷಿಸಿದ್ದಾನಲ್ಲಾ ಎಂದುಕೊಂಡು ಕೃತಜ್ಞತೆಯಿಂದ ಮನಸ್ಸಿನಲ್ಲಿಯೆ ಕೈಮುಗಿಯುತ್ತೇನೆ! ಆ ಕಿಟಕಿಯ ಹೊರಗೋಡೆ ಸುಣ್ಣಗಾರ ಬಿದ್ದುಹೋಗಿ, ಕುಳಿಬಿದ್ದು ಅಸಹ್ಯವಾಗಿ  ಕಾಣುತ್ತಿದ್ದುದು ಈಗಲೂ ಹಾಗೆಯೆ ಇದೆ. ಆ ಮನೆಯ ನೆಲ ಅಂತಸ್ತಿನಲ್ಲಿ ಒಂದು ಬ್ರೆಡ್ ತಯಾರಿಸುವ ಅಂಗಡಿಯಿತ್ತು. ಆ ರೊಟ್ಟಿಹಿಟ್ಟನ್ನು ನಾನಾ ರೀತಿಯ ಹಮ್‌ಹಮ್ ಉಸ್‌ಉಸ್‌ ಇತ್ಯಾದಿ ಶಬ್ದಮಾಡುತ್ತಾ ತೀಡುತ್ತಿದ್ದ ಪೈಲ್ವಾನರಂತಹ ಕಾಚಾ ತೊಟ್ಟ ಬೆತ್ತಲೆ ಮೈಯವರ ಚಿತ್ರ ಕಣ್ಣಿಗೆ ಕಟ್ಟಿದಂತಿದೆ ಈಗಲೂ. ಅವರ ಮೈಯಿಂದ ಬೆವರು ಚಿಮ್ಮುತ್ತಿತ್ತು. ಆ ಬೆವರು ಮುಖ ಹಣೆ ಎದೆಯ ಭಾಗಗಳಿಂದ ನೇರವಾಗಿ ಅವರು ನಾದುತ್ತಿದ್ದ ಹಿಟ್ಟಿಗೆ ತೊಟ್ಟಿಕ್ಕುತ್ತಿತ್ತು! ತೂಟ್ಟಿಕ್ಕುತ್ತಿತ್ತು ಎನ್ನುವುದಕ್ಕಿಂತಲೂ ಸೋರುತ್ತಿತ್ತು ಎಂದರೆ ನಿಜಕ್ಕೆ ಹತ್ತಿರವಾಗುತ್ತದೇನೊ: ಮನೆಯ ಆ ಭಾಗವೆಲ್ಲ ಹೆಂಡದ ವಾಸನೆಯೊಡನೆ ಕಲೆತ ಬೆವರಿನ ನಾತದಿಂದ ಗಿಡಿದುಹೋಗುತ್ತಿತ್ತು.

ಅಲ್ಲಿಯ ಮಹಡಿಯ ಮೇಲೆ ನಾವಿದ್ದ ಕೊಠಡಿಯ ಎದುರಿನ ನಡುಮನೆಯಲ್ಲಿ ನೆಲ ಅಂತಸ್ತಿನಲ್ಲಿದ್ದ ವಾಷಿಂಗ್ ಸೆಲೂನಿನಬಟ್ಟೆಗಳನ್ನು ಇಸ್ತ್ರಿಮಾಡುವ ವಿಶಾಲವಾದ ಮೇಜು ಇತ್ತು. ಒಬ್ಬ ಯುವಕ ಅಲ್ಲಿ ಯಾವಾಗಲೂ ಇಸ್ತ್ರಿಮಾಡುವ ಕೆಲಸದಲ್ಲಿ ತೊಡಗಿರುತ್ತಿದ್ದ. ನಮ್ಮ ಬಟ್ಟೆಗಳನ್ನು ಅಲ್ಲಿಯೆ ಒಗೆಯಲು ಹಾಕುತ್ತಿದ್ದೆವು. ಅವನೇ ಇಸ್ತ್ರಿಮಾಡಿಕೊಡುತ್ತಿದ್ದ. ತುಂಬ ಸರಳನಾಗಿ ಸ್ನೇಹಪರನಾಗಿಯೂ ಇದ್ದ. ನಮ್ಮ ಮೂವರೊಡನೆಯೂ ಸಮಯವಿರುವಾಗಲೆಲ್ಲ ಹರಟುತ್ತಿದ್ದ. ಒಮ್ಮೆ ನನ್ನ ಇಬ್ಬರು ಮಿತ್ರರೂ ರಾತ್ರಿ ಸಿನಿಮಾ ನೋಡಲು ಹೋದರು. ನಾನೊಬ್ಬನೆ ರೂಮಿನಲ್ಲಿದ್ದೆ. ಆಗ ಆ ಯುವಕ ರೂಮಿಗೆ ಬಂದು ನನ್ನೊಡನೆ ಅಶ್ಲೀಲವಾಗಿ ವರ್ತಿಸುವ ಪ್ರಯತ್ನಮಾಡಿದ. ಆದರೆ ನಾನು ಅದನ್ನು ಗಮನಿಸದಿರುವಂತೆ ತೋರಿಸಿ ಕಟು ಗಂಭೀರವಾಗಿದ್ದುದನ್ನು ಕಂಡು, ಹಿಂಜರಿದು ಹೊರಕ್ಕೆ ಹೋದ. ಮತ್ತೆಂದೂ ನನ್ನ ಬಳಿ ಸಾರಲಿಲ್ಲ. ಇಂತಹ, ಬರೆಯಲು ಯೋಗ್ಯವಲ್ಲದ, ಕೆಲವು ಅನುಭವಗಳು ನನ್ನ ಬದುಕಿನ ನೆನಪಿನಲ್ಲಿ ನರಕ ಭಾಗಗಳಾಗಿ ಉಳಿದಿದೆ. ಪ್ರಾರ್ಥನಾ ಮಹಿಮೆಯಿಂದಲೇ ನಾನು ಆ ನರಕದಿಂದ ಪಾರಾಗಿ ಬದುಕಿ ಬಂದಿದ್ದೇನೆ. ಮತ್ತೆ ಒಮ್ಮೊಮ್ಮೆ ಭಗವಂತನ ಮೇಲೆ ತುಂಬ ಕೋಪಗೊಳ್ಳುತ್ತೇನೆ. ಏಕೆ ನನ್ನನ್ನು ಅಂತಹ ಹೊಲಸಿಗೆ ತಳ್ಳಬೇಕಾಗಿತ್ತು ಎಂದು. ಮತ್ತೆ ಸಮಾಧಾನಗೊಳ್ಳುತ್ತೇನೆ, ಆ ಪಾಪಂಕದಲ್ಲಿ ಕಾಲಿಟ್ಟು ಮೈ ಕೆಸರು ಮಾಡಿಕೊಳ್ಳದೆ ಇದ್ದಿದ್ದರೆ, ನನ್ನ ಪರಿಶುದ್ಧಿಯಲ್ಲಿ ನನಗೆ ಗರ್ವವುಂಟಾಗಿ ಶುಚಿತ್ವದಲ್ಲಿ ಇತರರಿಗಿಂತ ಬಹಳ ಮೇಲಿನವನು ಎಂಬ ಅಹಂಭಾವದ ಪಿತ್ತ  ಎಲ್ಲಿ ನೆತ್ತಿಗೇರಿಬಿಡುತ್ತಿತ್ತೋ ಎಂದು. ಆದರೆ ಈಗ ನನಗೊದಗಿದ ಆ ನರಕಾನುಭವಗಳಿಂದಾಗಿ ನಾನು ಪತಿತರನ್ನೂ ಪಾಪಿಗಳನ್ನೂ ಅನುಕಂಪದಿಂದ ನೋಡಲು ಸಾಧ್ಯವಾಗಿದೆ. ಕೋಟ್ಯಂತರ ಬುದ್ಧಿಜೀವಿಗಳಲ್ಲಿ ನಾನೂ ಒಬ್ಬನೆಂದೂ, ನನ್ನಲ್ಲಿ ಏನಾದರೂ ಇತರರಲ್ಲಿ ಇಲ್ಲದ ಒಂದು ವಿಶೇಷ ವಿಭೂತಿ ಪ್ರಕಾಶಿತವಾಗಿದ್ದರೆ ಅದಕ್ಕೆ ಶ್ರೀಗುರುವಿನ ಅನುಗ್ರಹವೇ ಸಂಪೂರ್ಣ ಕಾರಣವೆಂದೂ ತಿಳಿದ ಕೃಪಾಭಗವತಿಯ ಚರಣತಲದಲ್ಲಿ ನನ್ನೆಲ್ಲ ಬಾಹ್ಯ ಮತ್ತು ಆಂತರಿಕ ಶ್ರೀಯನ್ನೆಲ್ಲ ಸಮರ್ಪಿಸಿ ಶರಣಾಗತನಾಗಿದ್ದೇನೆ.

ಒಂದು ತಿಂಗಳು ಮನೆಯಿಂದ ಹಣ ಬರುವುದು ತಡವಾಯ್ತು. ಹೊಟಲಿನವನು ಊಟ ನಿಲ್ಲಿಸಿಬಿಟ್ಟ. ಹಲವಾರು ದಿನ ಕೈಯಲ್ಲಿದ್ದ ಸ್ವಲ್ಪವೆ ದುಡ್ಡಿನಲ್ಲಿ  ದಿನಕ್ಕೆ ಎರಡೇ ಇಡ್ಲಿ ತಿಂದು ನೀರು ಕುಡಿದು ಕಾಲಹಾಕಬೇಕಾಯ್ತು. ಒಂದು ದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಕಸ್ಮಾತ್ತಾಗಿ ಒಬ್ಬರು ನನ್ನನ್ನು ನಿಲ್ಲಿಸಿ ಮಾತನಾಡಿಸಿದರು, ನನಗೆ ಗುರುತಾಯಿತು. ತೀರ್ಥಹಳ್ಳಿಯಲ್ಲಿ ನನಗೆ ಕೆಲವು ಕಾಲ ಉಪಾಧ್ಯಾಯರಾಗಿದ್ದರು, ಮಂಜುನಾಥಯ್ಯ. ಅವರು ಕೊಂಕಣಿಗಳು. ಜರಿಯಿಲ್ಲದ ಸಾದಾ ರುಮಾಲು ಸುತ್ತಿ ಕಚ್ಚೆಪಂಚೆ ಉಟ್ಟು, ಸಾಧರಣ ಬಟ್ಟೆಯ ಕೋಟಹಾಕಿ, ಅತ್ಯಂತ ಸರಳಜೀವಿಯಾಗಿದ್ದರು. ಮಾತಿನಲ್ಲಿ ಮೃದುತ್ವ ಸ್ನೇಹಪರತೆ ಸೂಸುತ್ತಿತ್ತು. ಇತರ ಕೆಲವು ಉಪಾಧ್ಯಯರಲ್ಲಿ ತೋರುತ್ತಿದ್ದ ಉಗ್ರತೆ ಲವಲೇಶವೂ ಅವರಲ್ಲಿ ಇರಲಿಲ್ಲವಾದ್ದರಿಂದ ನಾವು ಅವರನ್ನು ತುಂಬ ವಿಶ್ವಾಸದಿಂದ ಕಾಣುತ್ತಿದ್ದೆವು. ಮೈಸೂರಿನಲ್ಲಿ ನನ್ನನ್ನು ಕಂಡು ಅವರಿಗೆ ತುಂಬ ಸಂತೋಷ, ಎಲ್ಲಿ? ಏನು ಓದುತ್ತಿದ್ದೀಯ? ಎಂದೆಲ್ಲ ವಿಚಾರಿಸಿದರು. ಮತ್ತೆ ನನ್ನ ಮುಖ ನೋಡಿ “ಯಾಕೆ ತುಂಬ ಎಚ್ಚರಿಕೆಯಿಂದಿರಬೇಕು” ಎಂದರು. “ಕಾಯಿಲೆ ಏನೂ ಇಲ್ಲ” ಎಂದು, ಊಟದ ವಿಚಾರ ತಿಳಿಸಲು ಸಂಕೋಚಪಡುತ್ತಿದ್ದೆ. ಅವರೇ ಕೇಳಿದರು “ಎಲ್ಲಿ? ನಾನು ಊಟಮಾಡುತ್ತಿರುವ ಹೋಟಲಿನಲ್ಲಿಯೆ ನಿನ್ನನ್ನೂ ನೋಡುತ್ತಿದ್ದೆ. ಇತ್ತೀಚೆಗೆ ಒಂದು ವಾರದಿಂದ ಕಾಣಲಿಲ್ಲ. ಯಾಕೆ? ಬೇರೆ ಹೋಟಲಿಗೆ ಬದಲಾಯಿಸಿದಿರೇನು? ಊಟ ಸರಿಹೋಗಲಿಲ್ಲವೇ? ಇದ್ದಿದ್ದರಲ್ಲಿ ಆ ಹೋಟಲೇ ವಾಸಿ ಎಂದು ನನ್ನ ಅನುಭವ.”

ಅವರು ಬ್ರಾಹ್ಮಣರು ಊಟಮಾಡುವೆಡೆ ಒಳಗೆ ಕೂರುತ್ತಿದ್ದುದರಿಂದಲೂ ನಮ್ಮ ಸಮಯವಲ್ಲದ ಬೇರೆ ಸಮಯಗಳಲ್ಲಿ ಬರುತ್ತಿದ್ದುದರಿಂದಲೂ ನಾನು ಹೋಟಲಿನಲ್ಲಿ ಅವರನ್ನು ಸಂಧಿಸಿರಲಿಲ್ಲ.

ಆಗ ನಾನು ನಿಜ ಹೇಳಬೇಕಾಯಿತು. ‘ಒಂದು ವಾರದಿಂದ ಊಟಮಾಡುತ್ತಿಲ್ಲ. ಇಡ್ಲಿ ತಿಂದುಕೊಂಡು ಇದ್ದೇನೆ’ ಎಂದುದನ್ನು ಕೇಳಿ ಅವರು ತುಂಬ ಸಂಕಪಟ್ಟುಕೊಂಡರು.

“ಎಲ್ಲಾದರೂ ಉಂಟೆ? ಹಾಗೆಂದಿಗೂ ಮಾಡಬೇಡ, ಅವನಿಗೆಷ್ಟು ಕೊಡಬೇಕು ಬಾಕಿ?”

“ಇಪತ್ತು ಅಂತಾ ಕಾಣುತ್ತೆ. ಜೊತೆಗೆ ಬೆಳಗಿನ ತಿಂಡಿ ಕಾಫಿಯದೂ ಸ್ವಲ್ಪ ಇರಬೇಕು. ಇನ್ನೇನು ನಾಳೆ ಮನಿಯಾರ್ಡರು ಬರಬಹುದು, ಹೇಗೂ ಇಡ್ಲಿ ತಿಂದದ್ದೆ ಸಾಲುತ್ತದೆ.”

ಒಡನೆಯೆ ಜೇಬಿನಿಂದ ಪಾಕೆಟ್ ಹೊರತೆಗೆದು ಇಪ್ಪತ್ತು ರೂಪಾಯಿ ಎಣಿಸಿಕೊಟ್ಟು, ಮನಿಯಾರ್ಡರ್ ಬಂದಮೇಲೆ ವಾಪಸು ಕೊಡಲು ಹೇಳಿದರು. ಅಲ್ಲದೆ ಆ ಹೋಟಲಿನವನಿಗೂ ಛೀಮಾರಿಮಾಡಿದರೆಂದು ತೋರುತ್ತದೆ. ‘ಅವರೇನು ಗರೀಬರೆಂದು ತಿಳಿದೆಯಾ? ಅಡಕೆತೋಟ ಗದ್ದೆ ಎಲ್ಲ ಇರುವ ಶ್ರೀಮಂತ ಕುಟುಂಬದವರು. ಮರ್ಯಾದಸ್ಥರು. ನಿನ್ನ ದುಡ್ಡು ಎಲ್ಲಿಗೂ ಹೋಗುವುದಿಲ್ಲ. ನಾನು ಜಾಮಿನಾಗಿರುತ್ತೇನೆ, ಬೇಕಾದರೆ’ ಎಂದೆಲ್ಲ! ಏಕೆಂದರೆ ಆ ಹೋಟಲಿನವರು ನನ್ನ ವಿಚಾರದಲ್ಲಿ ಆಮೇಲೆ ತುಂಬ ಗೌರವದಿಂದ ಬೇರೆಯ ರೀತಿಯಲ್ಲಿ ವರ್ತಿಸ ತೊಡಗಿದ್ದನು.

ಶ್ರೀ ಮಂಜುನಾಥಯ್ಯನವರು ಮೈಸೂರಿಗೆ ಬಹುಶಃ ನಾರ್ಮಲ್ ಸ್ಕೂಲ್ ಟ್ರೈನಿಂಗ್‌ಗಾಗಿ ಬಂದು ಓದುತ್ತಿದ್ದರೆಂದು ತೋರುತ್ತದೆ, ಅವರು ಯಾವ ಧೈರ್ಯದ ಮೇಲೆ ಹಾಗೆ ದುಡ್ಡುಕೊಟ್ಟರೊ? ನಮ್ಮ ಕುಪ್ಪಳ್ಳಿ ಮನೆತನದವರು ಅವರಿಗೆ ಗೊತ್ತಿದ್ದರೂ ಇರಬಹುದು. ಅವರು ಕೊಟ್ಟ ಹಣವನ್ನು ಮನಿಯಾರ್ಡರು ಬಂದೊಡನೆಯೆ ಅವರಿಗೆ ವಾಪಸುಕೊಟ್ಟು ಕೃತಜ್ಞತೆ ಸೂಚಿಸಿದೆ. ತರುವಾಯ ಜೀವನದಲ್ಲಿ ಇದುವರೆಗೂ ಅವರನ್ನು ನಾನು ನೋಡಿಲ್ಲ. ಬದುಕಿದ್ದಾರೆಯೊ? ಇಲ್ಲವೂ ಅದೂ ತಿಳಿಯದು. ಆದರೆ ಅವರ ನೆನಪು ಮಾಸಿಲ್ಲ. ಇನ್ನೆಷ್ಟೋ ಮೇಷ್ಟರುಗಳು, ಹೈಸ್ಕೂಲಿನವರು, ಕಾಲೇಜಿನವರು ಎಲ್ಲ ಮರೆತುಹೋಗಿದ್ದಾರೆ. ಆದರೆ ಆ ತೀರ್ಥಹಳ್ಳಿಯ ಪ್ರೈಮರಿ ಸ್ಕೂಲ್ ಮೇಷ್ಟರು ಮಾತ್ರ ಅವಿಸ್ಮೃತ, ಅವರಿಗೆ ಮಂಗಳವಾಗಲಿ, ಶಾಂತಿ ದೊರೆಯಲಿ!