ಅಂತೂ ಹಾಗೆ ಹೀಗೆ ಹೇಗೋ ಒಂದು ವರ್ಷ ಕಳೆಯಿತು. ಪರೀಕ್ಷೆ ಪೂರೈಸಿತು. ಹೈಸ್ಕೂಲಿನ ಮೊದಲನೆಯ ತರಗತಿ ನಾಲ್ಕನೆ ಫಾರಮ್ಮಿನ ಪರೀಕ್ಷೆ ಇತರ ಪರೀಕ್ಷೆಗಳಿಗಿಂತ ಮೊದಲೇ ನಡೆದು ಬೇಗನೆ ರಜಾ ಸಿಕ್ಕತು. ಮೊದಲೇ ಟಿಕೆಟ್ಟುಗಳನ್ನು ತೆಗೆದುಕೊಂಡಿದ್ದೆವು. ಪರೀಕ್ಷೆಯ ಕೊನೆಯ ಪ್ರಶ್ನಪತ್ರಿಕೆಗೆ ಉತ್ತರ ಬರೆದು ಮುಗಿಸಿ, ರೂಮಿಗೆ ಬಂದು ನೇರವಾಗಿ, ಗಂಟುಮೂಟೆ ಕಟ್ಟಿಕೊಂಡು ರೈಲ್ವೇ ಸ್ವೇಷನ್ನಿಗೆ ಹೋಗಿ ರಾತ್ರಿ ರೈಲು ಹತ್ತಿದೆವು. ಜೀವ ಮನೆಯನ್ನು ನೆನೆದು ತವಕಿಸುತ್ತಿತ್ತು!

ಈಗ ಎಂತಹ ವ್ಯತ್ಯಾಸವಾಗಿದೆ ವಿದ್ಯಾರ್ಥಿಗಳ ದೃಷ್ಟಿಯಲ್ಲಿ? ಹಳ್ಳಿಯಿಂದ ನಗರಕ್ಕೆ ಓದಲು ಬರುವ ವಿದ್ಯಾರ್ಥಿಗಳು ತಮ್ಮ ಮನೆಯನ್ನು ಮರೆತೆಬಿಟ್ಟವರಂತೆ ವರ್ತಿಸುತ್ತಾರೆ. ರಜಾ ಪ್ರಾರಂಭವಾಗಿ ಹತ್ತುಹದಿನೈದು ದಿನಗಳಾದರೂ ಏನಾದರೂ ಒಂದು ಸಬೂಬು ಹೇಳುತ್ತಾ ಪೇಟೆಯಲ್ಲಿ ಅಲೆಯುತ್ತಿರುತ್ತಾರೆ, ಅವರಂತಹರೇ ಆಗಿರುವ ಮಿತ್ರರ ಸಂಗಡ. ಹಳ್ಳಿ ಮನೆಗೆ ತಡವಾಗಿ ಹೋದರೂ ಅಲ್ಲಿಯ ಸಂಗ, ಸ್ನೇಹ, ಜೀವನಗಳಲ್ಲಿ ಬೆರೆಯುವುದಿಲ್ಲ; ತಾವು ತುಂಬ ಮೇಲಿನಮಟ್ಟಕ್ಕೆ ಸೇರಿಬಿಟ್ಟವರು ಎಂಬಂತೆ ದೂರದೂರವಾಗಿ ವರ್ತಿಸುತ್ತಾರೆ. ಹಿಂದೆ ನಾವು ಹಳ್ಳಿಗೆ ರಜಾಕಾಲದಲ್ಲಿ ಹೋದಾಗ ಅಲ್ಲಿಯವರ ಬಾಳಿನ ನಾನಾ ಸಂಗತಿಗಳಲ್ಲಿ ಒಂದಾಗಿ ನಡೆಯುತ್ತಿದ್ದೆವು. ಬೇಟೆಯಾಡುವುದು, ಹೊಂಡ ತೊಣಕುವುದು, ಕೆರೆಗೆ ಬಲೆಹಾಕಿ ಮಿನು ಹಿಡಿಯುವುದು, ಮರಸು ಕೂರುವುದು, ಕೂಣೆಹಾಕುವುದು ಎಲ್ಲ ಮಾಡುತ್ತಿದ್ದೆವು. ಕಾಲಕಳೆದಿದ್ದೆ ಗೊತ್ತಾಗುತ್ತಿರಲಿಲ್ಲ. ಅಯ್ಯೋ ರಜಾ ಇಷ್ಟು ಬೇಗ ಮುಗಿಯಿತೇ ಎಂದು ಕೊರಗುತ್ತಿದ್ದೆವು. ಮೈಸೂರಿನಿಂದ ಹೊರಡುವಾಗ, ನಾಳೆ ರಜಾ ಪ್ರಾರಂಭವಾಗುತ್ತದೆ ಎಂದರೆ ಅದರ ಹಿಂದಿನ ದಿನವೇ ಮೊದಲನೆಯ ರೈಲಿಗೇ ಟಿಕೆಟು ತೆಗೆದುಕೊಳ್ಳುತ್ತಿದ್ದೆವು. ಹಳ್ಳಿ ಮನೆಯಿಂದ ಹೊರಡುವಾಗ, ಈಗೇನು ಮಾಡುವುದು ಮೈಸೂರಿಗೆ ಹೋಗಿ? ಕಾಲೇಜು ಸರಿಯಾಗಿ ಪ್ರಾರಂಭವಾಗಬೇಕಾದರೆ ಕೊನೆಯ ಪಕ್ಷ ಹದಿನೈದು ದಿನಗಳಾದರೂ ಬೇಕಾಗುತ್ತದೆ; ಎಂದು ಹೇಳುತ್ತಾ ರಜಾ ಮುಗಿದು ಎಷ್ಟೋ ದಿನಗಳ ಮೇಲೆ ಮನೆಯ ಹಿರಿಯರು ತಗಾದೆ ಶುರುಮಾಡಿದಮೇಲೆಯ ಮೈಸೂರಿಗೆ ಹೊರಡುತ್ತಿದ್ದೆವು. ಈಗ ಕಾಲೇಜು ಪ್ರಾರಂಭವಾಗಲು ಹದಿನೈದು ದಿನಗಳಿರುವಾಗಲೆ ಹುಡುಗ ಹಳ್ಳಿ ತೊರೆಯುತ್ತಾನೆ!

ಬೇಸಗೆ ರಜಾಕ್ಕೆ ಮನೆಗೆ ಹಿಂತಿರುಗಿ ಮನೆಯ ಇತರ ಮಕ್ಕಳೊಡನೆ-ಮಾನಪ್ಪ, ತಿಮ್ಮಯ್ಯ, ಓಬಯ್ಯ, ವೆಂಕಟಯ್ಯ, ವಾಸಪ್ಪ, ದಾನಮ್ಮ, ಪುಟ್ಟಮ್ಮ, ರಾಜಮ್ಮ-ಮೊದಲಿನ ಬದುಕನ್ನೆ ಮತ್ತೆ ಬಾಳಿದೆ. ಕೋವಿ ಹಿಡಿದು ನಾಯಿ ಕರಕೊಂಡು ಕಾಡುಮಲೆಗಳಲ್ಲಿ ಪುಟ್ಟಣ್ಣನೊಡಗೂಡಿ ಹಗಲೂ ಬೈಗೂ ಅಲೆದಾಡಿದೆ. ಅಲ್ಲದೆ ಉಪ್ಪರಿಗೆಯ ಮೇಲೆ ಕುಳಿತು, ಹೊಸದಾಗಿ ಪರಿಚಿತವಾಗಿದ್ದ ಇಂಗ್ಲಿಷ್ ಪುಸ್ತಕಗಳಲ್ಲಿದ್ದ ವಿಷಯಗಳನ್ನು ಕಥೆಗಳನ್ನು ಕವಿತೆಗಳನ್ನು ಕುರಿತು ಸಂಗಾತಿಗಳೊಡನೆ ಹರಟೆ ಹೊಡೆದು ಹೆಮ್ಮೆ ಪಟ್ಟೆ.

ಕೋವಿಹಿಡಯಲು ಪ್ರಾರಂಭಮಾಡಿದ ದಿನಗಳಲ್ಲಿ ನಡೆದ ಒಂದೆರಡು ಸ್ವಾರಸ್ಯದ ಸಂಗತಿಗಳನ್ನು ಈ ಸಂದರ್ಭದಲ್ಲಿಯೆ ಹೇಳಿಬಿಡುತ್ತೇನೆ.

ಸಾಮಾನ್ಯವಾಗಿ ಹುಡುಗರನ್ನು ಕೋವಿಯ ಬಳಿ ಸುಳಿಯಲೂ ಬಿಡುತ್ತಿರಲಿಲ್ಲ ಹಿರಿಯರು, ಎಲ್ಲಿ ಏನು ಅಪಾಯಮಾಡಿಕೊಳ್ಳುತ್ತಾರೆಯೊ ಎಂದು. ಆದ್ದರಿಂದ ಆ ಕಿರಾತ ವಿದ್ಯೆಯನ್ನು ನಾವು ಕಳ್ಳತನದಿಂದಲೆ ಕಲಿಯಬೇಕಾಯಿತು.

ತೋಟಾಕೋವಿಗಳು ರೂಢಿಗೆ ಬರುವ ಮುನ್ನ, ಬೇಟೆಗಾರರು ಉಪಯೋಗಿಸುತ್ತಿದ್ದ ಕೇಪಿನ ಕೋವಿಗಳನ್ನು, ಅಡುಗೆಮನೆಯ ಒಲೆಸರದ ಹತ್ತಿರ ನಾಗಂದಿಗೆಯ ಮೇಲೆ, ಮುಚ್ಚಿಗೆಗೆ ಹಾಕಿದ್ದ ದೊಡ್ಡ ತೊಲೆಗೆ ಹೊಡೆದಿದ್ದ ದೊಡ್ಡ ದೊಡ್ಡ ಮೊಳೆಗಳಮೇಲೆ, ಅಡ್ಡಡ್ಡ ಚಾಚಿ ಇರಿಸುತ್ತಿದ್ದರು: ಈಡು ತುಂಬಿರುತ್ತಿದ್ದ ಆ ಕೋವಿಗಳ ಕಿವಿಗೆ ಹಾಕಿದ್ದ ಕೇಪುಗಳನ್ನು ತೆಗೆದುಬಿಡುತ್ತಿದ್ದರು. ಏಕೆಂದರೆ ಕೇಪು ಇಲ್ಲದೆ ಈಡು ತುಂಬಿದ ಕೋವಿಗಳನ್ನಿಟ್ಟರೆ, ಮಸಿ ನೀರೆದ್ದು, ಈಡು ಹಾರುತ್ತಿರಲಿಲ್ಲವಾದ್ದರಿಂದ ಅವುಗಳನ್ನು ಬೆಚ್ಚಗಿಟ್ಟಿರಲು ಯಾವಾಗಲೂ ಬೆಂಕಿ ಉರಿಯುತ್ತಿದ್ದ ಒಲೆಸರದ ಕಾವಿನ ವಲಯದಲ್ಲಿಯೆ ಅವು ಇರುತ್ತಿದ್ದುವು.

ನಾವು ಎತ್ತರವಾಗುವವರೆಗೂ ಕೋವಿ ಕೈಗೆ ಎಟುಕುತ್ತಿರಲಿಲ್ಲವಾದ್ದರಿಂದ ಅವುಗಳ ತಂಟೆಗೆ ಹೋಗುತ್ತಿರಲಿಲ್ಲ; ಹೋಗಲಾಗುತ್ತಲೂ ಇರಲಿಲ್ಲ. ಆದರೆ ನಮ್ಮ ಕೈ ಕೋವಿಗಳಿಗೆ ಎಟುಕುವಷ್ಟು ನಾವು ಬೆಳೆದ ಮೇಲೆ ಹಿರಿಯರ ಮುಂಜಾಗ್ರತೆ ವಿಫಲಗೊಂಡಿತು. ಅಡುಗೆಮನೆಯ ಅಮ್ಮಂದಿರು ಕಂಡರೂ ಕಾಣದಿದ್ದವರಂತೆ ಸುಮ್ಮನಿರುತ್ತಿದ್ದರು, ನಮ್ಮ ದಮ್ಮಯ್ಯ ಗುಡ್ಡೆಯ ಲಂಚಕ್ಕೆ ಮರುಳಾಗಿ! ನಮ್ಮ ಮೇಲಣ ಅವರ ಅಕ್ಕರೆಯೂ ಕಾರಣವಾಗಿ!

ಒಂದು ಸಂಜೆ ನಾನು ಮಾನಪ್ಪ ಇಬ್ಬರೂ ಒಂದು ಕೇಪಿನ ಕೋವಿಯನ್ನು ಲಬಟಾಯಿಸಿಕೊಂಡು ಗುಡ್ಡ ಹತ್ತಿದೆವು. ಕೋವಿ ನನ್ನ ಹೆಗಲ ಮೇಲೆಯೆ ಇತ್ತು. ಹೊಡೆಯುತ್ತಿದ್ದವನೂ ನಾನೆ. ಮಾನಪ್ಪ ನನಗಿಂತಲೂ ಒಂದೆರಡು ವರ್ಷಕ್ಕೆ ಹಿರಿಯನಾಗಿದ್ದು, ನಾನು ಅವನನ್ನು ಆಗಿನ ರೂಢಿನಿಷ್ಟ ಸಂಪ್ರದಾಯದಂತೆ ‘ಮಾನಪ್ಪ ಚಿಕ್ಕಪ್ಪಯ್ಯ’ ಎಂದೇ ಕರೆಯುತ್ತಿದ್ದರೂ ಬೇಟೆಯ ವಿಚಾರದಲ್ಲಿ ನನಗೇ ‘ಹಿರೇತನ’ ಬಿಟ್ಟುಕೊಡುತ್ತಿದ್ದುದು ವಾಡಿಕೆಯಾಗಿತ್ತು, ಆ ಕಸುಬಿನಲ್ಲಿ ನಾನೇ ಹೆಚ್ಚು ನಿಷ್ಣಾತನಾಗಿದ್ದರಿಂದ.

ಈಗ ‘ಕವಿಶೈಲ’ ಎಂಬ ಹೆಸರಿನಿಂದ ಸುಪ್ರಸಿದ್ಧವಾಗಿರುವ ಗಿರಿನೆತ್ತಿಗೆ ದಕ್ಷಿಣದ ಓರೆಯಲ್ಲಿರುವ ಕಾಡಿಗೆ ಪ್ರವೇಶಿಸಿದೆವು. ಕೋವಿ ಹಿಡಿದ ನಾನು ಮುಂದೆ, ಮಾನಪ್ಪ ನನ್ನ ಹಿಂದೆ, ಇಬ್ಬರೂ ಕಣ್ಣಿನಿಂದಲೆ ಹುಳವನ್ನು ಹುಡುಕುತ್ತಾ ಸಾಗಿದೆವು. ಇದ್ದಕ್ಕಿದ್ದಹಾಗೆ ನಮಗೆ ತುಸುದೂರದಲ್ಲಿ ಪೊದೆ ಸದ್ದಾಗಿ ಒಂದು ಮೊಲ ಎದ್ದು ಚಂಗ ಚಂಗನೆ ಹಾರಿ ಓಡತೊಡಗಿತು, ಹಳುವಿನಲ್ಲಿ  ಅದು ತೋರಿ ತೋರಿ ಮರೆಯಾಗಿ ಮತ್ತೆ ತೋರಿ ಮತ್ತೆ ಮರೆಯಾಗಿ ಓಡುತ್ತಿತ್ತು. ಮಾನಪ್ಪ ‘ಪುಟ್ಟೂ ಪುಟ್ಟೂ, ಹೊಡೆಯೋ ಹೊಡೆಯೋ!’ ಎಂದು ಕೂಗಿಕೊಂಡನು. ನಾನೆ ಕೋವಿಯನ್ನೆತ್ತಿ ಗುರಿಯಿಡುತ್ತಾ ಅದರ ನಿಶ್ಚಲವಾಗಿರುವ ವಸ್ತುವಿಗೇ ಗುರಿಹಿಡಿಯುವುದು ಮುಚ್ಚಿ ಪ್ರಯಾಸವಾಗುತ್ತದೆ. ಕೈ ತುಸು ಅಲ್ಲಾಡಿದರೂ ಗುರಿ ತಪ್ಪುತ್ತದೆ. ಎಡಗಣ್ಣನ್ನು ಮುಚ್ಚಿ ಬಲಗಣ್ಣನ್ನು ತೆರೆದು ಒಕ್ಕಣ್ಣಿನ ನೋಟ ಕೋವಿಯ ಕಿವಿಯಿಂದ ಮೊದಲಾಗಿ ನಳಿಗೆಯ ಮೇಲೆ ಹಾದು ‘ನೊಳಮುದ್ರೆ’ ಮೇಲಿಂದಾಗಿ ಗುರಿಗೆ ನೇರವಾಗಿ ನಿಂತ ಮೇಲೆ ಕುದುರೆಯೆತ್ತಿ ಬಿಲ್ಲನ್ನು ಅಮುಕಬೇಕು; ಹಾಗೆ ಬಿಲ್ಲನ್ನು  ಅಮುಕುವಾಗ ಸ್ವಲ್ಪನೆ ಅಲುಗಾಡಿದರೂ ಗುರಿ ತಪ್ಪುತ್ತದೆ. ಆದ್ದರಿಂದ ಬಿಲ್ಲನ್ನು ಅಮುಕುವಾಗ ಎದೆಯ ಆಟ ನಿಲ್ಲುವಂತೆ ಉಸಿರು ಕಟ್ಟಿದರ ಮಾತ್ರ ಗುರಿ ಸರಿಯಾಗಿ ಬೀಳುತ್ತದೆ. ನಿಶ್ಚಲವಾಗಿರುವ ವಸ್ತುವಿಗೆ ಗುರಿಯಿಡುವುದನ್ನೇ ಕಷ್ಟದಿಂದ ಸಾಧಿಸುತ್ತಿದ್ದ ಚೊಚ್ಚಲು ಬೇಟೆಗಾರನಾಗಿದ್ದ ನನಗೆ ಪೊದೆಗಳ ನಡುವೆ ತೋರಿತೋರಿ ಮರೆಯಾಗಿ ಮಿಂಚಿನಂತೆ ನೆಗೆದೋಡುತ್ತಿದ್ದ ಮೊಲದಂತಹ ಸಣ್ಣ ಪ್ರಾಣಿಗೆ ಗುರಿಯಿಡುವುದಾದರೂ ಹೇಗೆ? ಆದರೆ ತರ್ಕಬುದ್ಧಿ ಸಾಧಿಸದ ಕೆಲಸವನ್ನು ಪ್ರತಿಭೆ ಅಪ್ರಯತ್ನವಾಗಿ ಸಾಧಿಸುತ್ತದೆಯಷ್ಟೆ? ಆ ಪ್ರತಿಭೆಗೆ ಶರಣಾಗಿ; ಕೋವಿಯನ್ನೆತ್ತಿ ನಿಂತು, ಓಡುತ್ತಿದ್ದ ಮೊಲದ ಚಲನೆಯ ರೇಖೆಯನ್ನೆ ಕೋವಿಯ ನಳಿಗೆ ಅನುಧಾವಿಸುವಂತೆ ಮಾಡಿ, ಒಂದೆಡೆ ಮೊಲ ಕಾಣಿಸಿಕೊಂಡೊಡನೆ ಬಿಲ್ಲನ್ನೊತ್ತಿದೆ! ಈಡು ಹಾರಿತು ಢಾಂ ಎಂದು! ನೋಡುತ್ತೇವೆ, ನೆಗೆದು ನೆಗೆದು ಓಡುತ್ತಿದ್ದ ಮೊಲ ಪಲ್ಟಿಹೊಡೆದು ತನ್ನ ವೇಗಕ್ಕೆ ತಾನೆ ಮೂರು ನಾಲ್ಕು ಉರುಳು ಉರುಳಿ ಬಿತ್ತು!

ನಮಗಾದ ದಿಗ್ವಿಜಯ ಹರ್ಷ ಅಷ್ಟಿಷ್ಟಲ್ಲ. ಓಡಿಹೋಗಿ ಇನ್ನೂ ಬೆಚ್ಚಗಿದ್ದ ಅದರ ಮೃತಶರೀರವನ್ನು ನೆಗಹಿ, ಹಿಗ್ಗಿನ ಹೆಮ್ಮೆಯಿಂದ ನೋಡಿದೆವು. ಆಗತಾನೆ ಕತ್ತಲಾಗುತ್ತಿತ್ತು. ಕಾಡಿನ ಜೀರುಂಡೆ ಕರೆಯಲು ತೊಡಗಿದ್ದುವು. ಮನೆಗೆ ಓಡಿದೆವು. ಅಮ್ಮಂದಿರಿಗೆಲ್ಲ ಅಚ್ಚರಿ. ಇಷ್ಟು ಸಣ್ಣ ಹುಡುಗರು ಪಿಕಾರಿಮಾಡಿಕೊಂಡು ಬಂದಿದ್ದಾರಲ್ಲ ಎಂದು. ನಮಗೆ ಹೆಮ್ಮೆಯ ಹಿಗ್ಗು ಬರಬರುತ್ತಾ ಇಳಿದು ಹೆದರಿಕೆ ಶುರುವಾಯಿತು. ಗದ್ದೆ ತೋಟಗಳಿಂದ ಹಿಂತಿರುಗಿದ ಚಿಕ್ಕಪ್ಪಯ್ಯಾದಿ ದೊಡ್ಡವರು ನಾವು ಕದ್ದು ಕೋವಿ ತೆಗೆದುಕೊಂಡು ಹೋಗಿದ್ದನ್ನು ಅರಿತು ಬಯ್ಯುತ್ತಾರೋ ಹೊಡೆಯುತ್ತಾರೋ ಎಂದು. ಆದರೆ ಹಾಗಾಗಲಿಲ್ಲ. ರಾತ್ರಿ ಊಟಕ್ಕೆ  ಮೊಲದ ಮಾಂಸದ ಪಲ್ಯವಿದ್ದುದನ್ನು ಗಮನಿಸಿ ಎಲ್ಲಿತ್ತು? ಯಾರು ಹೊಡೆದರು? ಎಂಬುದನ್ನು ಅಮ್ಮಂದಿರಿಂದ ಕೇಳಿ ತಿಳಿದು, ಗಂಡಸರೆಲ್ಲ ಸೋಜಿಗೊಂಡರೂ ಸಂತೋಷಪಟ್ಟು, ನನ್ನ ಈಡುಗಾರಿಕೆಗೆ ಶಹಭಾಷ್ ಹೇಳಿದರು. ಜೊತೆಗೆ ಎಚ್ಚರಿಕೆ ಕೊಡುವುದನ್ನೂ ಬುದ್ಧಿವಾದ ಹೇಳುವುದನ್ನೂ ಮರೆಯಲಿಲ್ಲ.

ನಾವಂತೂ ಷಿಕಾರಿದಾರರಾಗುವಷ್ಟು ದೊಡ್ಡವರಾದೆವೆಂದು ಭ್ರಮಿಸಿ, ಇನ್ನೊಂದು ದಿನ ಬೆಳಗಿನ ಜಾವದಲ್ಲಿ, ಇನ್ನೂ ಕತ್ತುಲೆಕತ್ತಲೆ ಇರುವಾಗಲೆ, ಜೋಡು ನಳಿಗೆಯ ತೋಟಾಕೋವಿ ಹಿಡಿದಿದ್ದೆ; ಅವನು ಕೇಪಿನಕೋವಿ ಹಿಡಿದಿದ್ದ. ಅಡಿಕೆತೋಟ ದಾಟಿ, ಭೂತದ ಬನವನ್ನು ಹಾಯ್ದು ಬಿಳುಗಲ್ಲು ತುಂಡು ನೆತ್ತಿ ಕಡೆಗೆ ಕಾಡಿನಲ್ಲಿ ನುಗ್ಗಿದೆವು.

ಸ್ವಲ್ಪ ದೂರ ಹೋಗುವುದರಲ್ಲಿಯೆ ಒಂದು ಸರಲು ಸಿಕ್ಕಿತು. ಬೇಸಗೆ ಕಾಲವಾದ್ದರಿಂದ ನೀರಿರಲಿಲ್ಲ, ಒಣಗಿಹೋಗಿತ್ತು. ಸರಲಿನ ಬುಡದಲ್ಲಿದ್ದ ಒಂದು ಬಿದಿರುಹಿಂಡಿಲಿಗೆ ಬೆಂಕಿಬಿದ್ದು ಸುಟ್ಟು ಬೂದಿಯ ರಾಶಿಯಾಗಿತ್ತು. ಆ ಬೂದಿಯ ರಾಶಿಯಲ್ಲಿ ಒಂದು ದೊಡ್ಡ ಸಲಗ ಕಾಡುಹಂದಿ ಮಗ್ಗಲು ಬಿದ್ದಿತ್ತು. ಅದು ಅಲ್ಲಿದ್ದ ಪರಿವೆಯ ಇಲ್ಲದೆ ನಾವಿಬ್ಬರೂ ಪಿಸುಗುಟ್ಟಿ ಮಾತಾಡುತ್ತಾ ಸರಲಿನ ದಂಡೆಗೆ ಬಂದಿದ್ದೆವು.

ಆ ಸಲಗ ಒಂಟಿಗ ನಮ್ಮ ಸಾಮಿಪ್ಯವನ್ನರಿತು, ಮಲಗಿದ್ದಲ್ಲಿಂದ ಎದ್ದು, ಸಾವಧಾನವಾಗಿ ಸರಲಿನ ಆಚೆಯ ದಡಕ್ಕೇರಿ, ಮೂಗಾಳಿ ಹಿಡಿಯುತ್ತ ನಿಂತಿತ್ತು, ಮುಸುಡಿಯನ್ನು ಮೇಲ್ಮೊಗಮಾಡಿ ಅತ್ತಇತ್ತ ಮುಖ ತಿರುಗಿಸಿ. ಇನ್ನೂ ಚೆನ್ನಾಗಿ ಬೆಳಕು ಬಿಟ್ಟಿರಲಿಲ್ಲವಾದ್ದರಿಂದ ಆ ಹಂದಿಯ ಆಕಾರ ಅಷ್ಟೇನೂ ಸುಸ್ಪಷ್ಟವಾಗಿರಲಿಲ್ಲ.

ಸರಲಿನ ಈಚೆಯ ಉಬ್ಬಿನಲ್ಲಿದ್ದ ನಮಗೆ ಆಚೆಯ ಉಬ್ಬಿನಲ್ಲಿದ್ದ ಅದು ಮೂಗಾಳಿ ಹಿಡಿಯುವ ಸದ್ದು ಕೇಳಿಸಿತ್ತು. ತುಂಬ ಉದ್ವೇಗಗೊಂಡು ಆ ಸದ್ದು ಎತ್ತಣಿಂದ ಬರುತ್ತದೆ ಪರಿಶೀಲಿಸುತ್ತಿದ್ದಾಗಲೆ ಮಾನಪ್ಪ “ಹೊಡೆಯೋ, ಹೊಡೆಯೋ, ಪುಟ್ಟೂ!” ಎಂದು ಪಿಸುದನಿಯಲ್ಲಿ ಹೇಳುತ್ತಾ ಕೈದೋರಿದನು. ನಾನೂ ನೋಡಿದೆ. ನನಗೂ ಕಂಡಿತು. ತೋಟಾ ಕೋವಿಯನ್ನೆತ್ತಿ, ಎಡದ ನಳಿಗೆಗೆ ಗುಂಡನ್ನೂ ಬಲದ ನಳಿಗೆಗೆ ಚರೆಯನ್ನೂ ಹಾಕಿಕೊಂಡಿರುವುದನ್ನು ಮನಸ್ಸಿಗೆ ತಂದುಕೊಂಡು, ಹಂದಿಯಂತಹ ದೊಡ್ಡ ಜಂತುವಿಗೆ ಗುಂಡಿನಿಂದಲೆ ಹೊಡೆಯಬೇಕೆಂಬ ಷಿಕಾರಿನಿಯಮವನ್ನೂ ಮರೆಯದೆ, ಕೋವಿಯ ಎಡದ ಕುದುರೆಯನ್ನೆತ್ತಿ ಗುರಿಯಿಟ್ಟು ಬಿಲ್ಲನ್ನು ಅಮುಕಿದೆ. ಈಡು ಹಾರಲೇ ಇಲ್ಲ. ಮತ್ತೂ ಅಮುಕಿದೆ, ಈಡು ಹಾರಲಿಲ್ಲ. ಅಷ್ಟರಲ್ಲಿ ಹಂದಿ ನಮ್ಮ ಸಾನ್ನಿಧ್ಯವನ್ನರಿತು ಹೂಂಕರಿಸಿ ಬೇಗಬೇಗನೆ ಮುಂಬರಿದು ಹಳುವಿನಲ್ಲಿ ಮರೆಯಾಗಿಯೆ ಬಿಟ್ಟಿತು. ಮಾನಪ್ಪ “ಥೂ ನಿನ್ನ! ಎಂಥಾ ಹಂದೀನ ಬಿಟ್ಟೆಯಲ್ಲಾ? ಎಂಟೊಂಬತ್ತು ಆಳಿಗಿತ್ತಲ್ಲೋ ಆ ಒಂಟಿಗ!” ಎಂದು ನನ್ನನ್ನು ಹೀಯಾಳಿಸಿದ.

“ನೀನ್ಯಾಕೆ ಹೊಡೀಬಾರ್ದಾಗಿತ್ತು?” ಎಂದು ಪ್ರತಿಯಾಗಿ ಮೂದಲಿಸಿದೆ ನಾನು.

“ಕೇಪಿನ ಕೋವಿಗೆ ಕಾಡುಕೋಳಿ ಹೊಡಿಯೋಕೆ ಚರ ಹಾಕಿಕೊಂಡು ಬಂದೀನಿ. ಆ ಹಂದಿಗೆ ಹೊಡೆದರೆ ಅದರ ರೋಮಕ್ಕೂ ಸಾಲದು ಈಡು” ಎಂದು ಸಕಾರಣವಾಗಿ ಉತ್ತರಿಸಿದನು.

ನಾನು ಪೆಚ್ಚಾದೆ, ಯಾಕೆ ನನ್ನ ತೋಟಾ ಕೋವಿಯ ಈಡು ಹಾರಲಿಲ್ಲ, ಈಡು ಹಾರಿದ್ದರೆ ಹತ್ತೇ ಮಾರು ಹತ್ತಿರದಲ್ಲಿದ್ದ ಆ ಹಂದಿ ಬಿದ್ದೇಬೀಳುತ್ತಿತ್ತಲ್ಲಾ ಎಂದು. ಕಡೆಗೆ ಗೊತ್ತಾಯಿತು ನಡೆದಿದ್ದ ಅವಿವೇಕ, ಅಚಾತುರ್ಯ: ಗುಂಡಿನಿಂದ ಹೊಡೆಯಬೇಕೆಂದು ಎಡದ ಕುದುರೆಯನ್ನೇನ್ನೊ ಎಳೆದು ನಿಲ್ಲಿಸಿದ್ದೆ. ಆದರೆ ತೋಟಾ ಕೋವಿಯ ಬಲದ ಕುದುರೆಯ ಬಿಲ್ಲು ಮುಂದಕ್ಕೂ ಎಡದ ಕುದುರೆಯದು ಅದರ ಒತ್ತಿಗೆ ಹಿಂದಕ್ಕೂ ಇರುತ್ತದೆ. ಅವಸರದ ಉದ್ವೇಗದಲ್ಲಿ ಬಿಲ್ಲನ್ನು ಎಳೆಯುವಾಗ ಹಿಂದಿನ ಬಿಲ್ಲಿಗೆ ಬೆರಳು ಹಾಕುವ ಬದಲು ಮುಂದಿನ ಬಿಲ್ಲಿಗೇ ಬೆರಳುಹಾಕಿ ಎಳೆಯುತ್ತಿದ್ದೆ: ಹಂದಿಯ ಆಯುಸ್ಸು ಗಟ್ಟಿಯಾಗಿತ್ತು!

ಎರಡು ತಿಂಗಳ ಮೇಲಿನ ರಜಾ ನೋಡುನೋಡುತ್ತಿದ್ದಂತೆಯೆ ಕರಗಿಹೋಯಿತು. ಇಷ್ಟು ಬೇಗನೆ ಮುಗಿಯಿತಲ್ಲಾ ಎಂದು ಸಂಕಟ. ಒಂದೆರಡು ಮಳೆಯೂ ಆಗಲೆ ಬಿದ್ದಿತ್ತು. ಇನ್ನೊಂದು ನಾಲ್ಕುದಿನ ತಡೆದರೆ ಚೆನ್ನಾಗಿ ಮಳೆ ಬಿದ್ದು ಹಳ್ಳದ ನೀರೇರಿದರೆ ಮೀನು ಹಿಡಿಯಬಹುದಿತ್ತಲ್ಲಾ ಎಂಬ ಮನಸ್ಸು; ರಾತ್ರಿ ಲಾಟೀನು ಕತ್ತಿ ಹಿಡಿದು ಹತ್ತು ಮೀನು ಕಡಿಯುವ ಸ್ವಾರಸ್ಯದ ಸಾಹಸ ತಪ್ಪಿ ಹೋಗುತ್ತದಲ್ಲಾ ಎಂಬ ಒಳಕುದಿಹ. ಆದರೆ ನಾನು ಮೇಗರವಳ್ಳಿ ಕಡೆಯ ತಮ್ಮ ಊರಿಂದ ಶಿವಮೊಗ್ಗಕ್ಕೆ ಬಂದು ನನ್ನನ್ನು ಕೂಡಿಕೊಳ್ಳುವ ರಾಮಪ್ಪದ್ವಯರ ಸಂಗಡವೆ ಮೈಸೂರಿಗೆ ಹೋಗಬೇಕಾಗಿದ್ದುದರಿಂದ ಮನಸ್ಸಿಲ್ಲದ ಮನಸ್ಸಿನಿಂದ ಹೊರಟುಬಿಟ್ಟೆ.

ಎಂದಿನಂತೆ ಅವ ಕಾಯುಂಡೆಯಂತಹ ಹಳ್ಳಿತಿಂಡಿಗಳನ್ನು ಮಾಡಿ ನನ್ನ ಟ್ರಂಕಿನಲ್ಲಿಡುವ ‘ತಾಯಳ್ಕರೆ’ಯನ್ನು ಮರೆಯಲಿಲ್ಲ. ಮೈಸೂರಿನಲ್ಲಿ ಅತ್ಯಂತ ನಾಗರಿಕವಾದ ಮತ್ತು ಹಳ್ಳಿಯ ಊಹೆಯ ಕನಸಿಗೂ ಎಟುಕದ ಬಣ್ಣಬಣ್ಣದ ತರತರದ ತಿಂಡಿಗಳಿರುತ್ತವೆ ಎಂಬುದು ನಿಜವಾದರೂ ಆ ತಿಂಡಿಗಳಲ್ಲಿ ಹೆತ್ತಮ್ಮನ ಮುದ್ದು ಇರುತ್ತದೆಯೆ?