ಹೈಸ್ಕೂಲಿನ ಎರಡನೆಯ ವರ್ಷದಲ್ಲಿ, ಅಂದರೆ ಐದನೆಯ ಫಾರಂನಲ್ಲಿ, ನನ್ನ ಸಾಹಿತ್ಯಕ ಜೀವನದ ಮೇಲೆ ಪ್ರಭಾವಬೀರಿದ ಎರಡು ಮುಖ್ಯ ಘಟನೆಗಳು ‘ನೆನಪಿನ ದೋಣಿ’ಯನ್ನೇರಲು ಕಾಲವಾಹಿನಿಯಂದ ತಲೆಯೆತ್ತಿ ಕೈಚಾಚಿ ಹವಣಿಸುತ್ತಿವೆ.

ವೆಸ್ಲಿಯನ್ ಮಿಶನ್ ಹೈಸ್ಕೂಲಿನ ಉಪಾಧ್ಯಾಯ ವರ್ಗದಲ್ಲಿ ಮೂರು ನಾಲ್ಕು ಜನರ ನೆನಪು ಇನ್ನೂ ಮಾಸದಿದೆ, ಪ್ರಿನ್ಸಿಪಾಲ್ ಪಿ.ಸಿ. ಬ್ರಂಟ್ ಅವರನ್ನು ಬಿಟ್ಟರೆ, ಹೆಡ್ಮಾಸ್ಟರ್ ಸುಬ್ಬಕೃಷ್ಣಯ್ಯ, ಸುಂದರ, ಶ್ರೀನಿವಾಸ ಐಯಂಗಾರ್, ದೇಶಿಕಾಚಾರ್, ಬಿ.ವಿ.ಕೃಷ್ಣ ಐಯಂಗಾರ್, ಕೆ.ಕೆ.ದಾಸ್. ಮೊದಲಿನ ಮೂವರು ಇಂಗ್ಲಿಷ್ ಪಾಠಕ್ಕೆ ಬರುತ್ತಿದ್ದರು. ಶ್ರೀನಿವಾಸ ಐಯಂಗಾರ್ ಗಣಿತಕ್ಕೂ ದೇಶಿಕಾಚಾರ್ ಚರಿತ್ರೆಗೂ ಉಳಿದಿಬ್ಬರು ರಸಾಯನಶಾಸ್ತ್ರ ಭೌತಶಾಸ್ತ್ರಗಳಿಗೂ ಬರುತ್ತಿದ್ದರು. ಆಗ ಪಾಠರಗಳೆಲ್ಲ ಇಂಗ್ಲಿಷ್ ಮಾಧ್ಯಮದಲ್ಲಿಯೆ ನಡೆಯುತ್ತಿದ್ದುವು. ಕನ್ನಡ ಮಾಧ್ಯಮದಲ್ಲಿ ಅವು ನಡೆಯಲು ಸಾಧ್ಯವೆಂಬ ಅತ್ಯಂತ ದೂರದ ಊಹೆಯೂ ಯಾರೊಬ್ಬರಿಗೂ ಇದ್ದಿಲ್ಲ.

ಶ್ರೀ ಸುಂದರ ಅವರು ಕ್ರೈಸ್ತರು. ಆಗತಾನೆ ಇಂಗ್ಲಿಷ್ ಎಂ.ಎ. ಪಾಸುಮಾಡಿ ಬಂದಿದ್ದರೆಂದು ತೋರುತ್ತದೆ. ಆದ್ದರಿಂದಲೆ ಪಾಠ ಹೇಳುವುದರಲ್ಲಿ ಒಂದು ಚೈತನ್ಯಪೂರ್ಣವಾದ ಸಂತೋಷವಿದ್ದು ಆಲಿಸುತ್ತಿದ್ದ ವಿದ್ಯಾರ್ಥಿಗಳನ್ನು ಸೆಳೆಯುತ್ತಿತ್ತು. ಒಂದು ದಿನ ಅವರು ಬ್ರೌನಿಂಗ್ ಕವಿಯ ‘ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಅನ್ನು ತರಗತಿಯಲ್ಲಿ ನಾಟಕೀಯವಾಗಿ ಓದಿ, ಇಂಗ್ಲಿಷಿನಲ್ಲಿಯೆ ಅಲ್ಲಲ್ಲಿ ತುಸು ಅರ್ಥ ವಿವರಣೆಯನ್ನೂ ಕೊಡುತ್ತಾ (ಇಂಗ್ಲಿಷ್ ಅಧ್ಯಾಪಕರು ಇಂಗ್ಲಿಷ್ ಪಾಠಮಾಡುವಾಗ ಕನ್ನಡದ ಪ್ರಯೋಗ ನಿಷಿದ್ಧವಾಗಿತ್ತು. ಹಾಗೇನಾದರು ಕನ್ನಡದಲ್ಲಿ ಮಾತಾಡಿದರೆ ಬೋಧನೆಯ ಪವಿತ್ರತೆಗೇ ಭಂಗವೆಂದು ಭಾವಿಸಲಾಗುತ್ತಿತ್ತು. ಕನ್ನಡದಲ್ಲಿ ಮಾತಾಡುವುದು ಅವಮಾನಕರವೆಂದೂ ಸರ್ವರೂ ಒಪ್ಪಿಕೊಂಡ ನಿರ್ಣಾಯಕ ವಿಷಯವಾಗಿತ್ತು.) ತಾವೂ ಬಿದ್ದು ಬಿದ್ದು ನಗುತ್ತಾ ವಿದ್ಯಾರ್ಥಿಗಳನ್ನು ನಗೆಯ ಹೊನಲಿನಲ್ಲಿ ತೇಲಿಸಿ ಬಿಟ್ಟರು. ಆ ಕವಿತೆಯ ಸ್ವಾರಸ್ಯ, ಅದರ ಹಾಸ್ಯರಸ ಅವರು ಓದಿದ ಧಾಟಿಯಿಂದಲ್ಲದೆ ಅಭಿವ್ಯಕ್ತವಾಗುತ್ತಿರಲಿಲ್ಲ. ಸಾಮಾನ್ಯವಾಗಿ, ಪಠ್ಯವಿಷಯವಾಗುವ ಸಾಹಿತ್ಯಭಾಗ ಪರೀಕ್ಷೆ ದೃಷ್ಟಿಯಿಂದ ಓದುವ ವಿದ್ಯಾರ್ಥಿಗಳಲ್ಲಿ ವೈರಭಾವವನ್ನೆ ಉದ್ರೇಕಿಸುವುದು ವಾಡಿಕೆ. ಆದರೆ ‘ಪೈಡ್ ಪೈಪರ್ ಆಫ್ ಹ್ಯಾಮಲಿನ್’ ತನ್ನ ನೃತ್ಯಮಯ ಶೈಲಿಯಿಂದಲೂ ಬಾಲಕ ಚೇತನಗಳಿಗೆ ಕಚಗುಳಿಯಿಟ್ಟು ನಗಿಸುವಂತಹ ಹಾಸ್ಯದಿಂದಲೂ ನನ್ನ ಮೆಚ್ಚಿಗೆಯನ್ನು ಸೂರೆಗೊಂಡಿತು. ಅದು ಎಷ್ಟರಮಟ್ಟಿಗೆ ನನ್ನ ಅಂತಃಕರಣದ ಭಾವಕೋಶವನ್ನು ಪ್ರವೇಶಿಸಿತ್ತು ಎಂದರೆ, ಮುಂದೆ ೧೯೨೯ರಲ್ಲಿ ಅಂದರೆ ಆರೇಳು ವರ್ಷಗಳ ತರುವಾಯ, ಶಿವಮೊಗ್ಗೆಯಲ್ಲಿ ನಾನು ಕಾಯಿಲೆಯಿಂದ ಗುಣಮುಖನಾಗುತ್ತಿದ್ದಾಗ ಆ ಕಥೆಯನ್ನು ಆಧರಿಸಿ “ಬೊಮ್ಮನ ಹಳ್ಳಿಯ ಕಿಂದರಿಜೋಗಿ”ಯನ್ನು ರಚಿಸಿದಾಗ ಇಂಗ್ಲಿಷ್ ಭಾಷೆಯ ಮೂಲಕವಿತೆ ನನ್ನ ಬಳಿ ಇರಲೆ ಇಲ್ಲ. “ಬೊಮ್ಮನ ಹಳ್ಳಿಯ ಕಿಂದರಿಜೋಗಿ”ಯನ್ನು  ಬ್ರೌನಿಂಗ್ ಕವಿಯ ಕಥನ ಕವನದ ಭಾಷಾಂತರವೆಂದು ಅನೇಕರು ತಪ್ಪಾಗಿ ತಿಳಿದಿದ್ದಾರೆ. ಅದು ಭಾಷಾಂತರವೂ ಅಲ್ಲ, ಅನುವಾದವೂ ಅಲ್ಲ, ಈ ಕಥೆಯನ್ನು ಆಧರಿಸಿರುವ ರೂಪಾಂತರ ಸೃಷ್ಟಿ.

ಮೇಲಿನದಕ್ಕಿಂತಲೂ ಮಹತ್ವಪೂರ್ಣವಾದ ಮತ್ತೊಂದು ರಸಕ್ಷೇತ್ರಕ್ಕೂ ನನಗೆ ಪ್ರಪ್ರಥಮ ಪ್ರವೇಶವನ್ನು ದೊರಕಿಸಿಕೊಟ್ಟವರೂ ಶ್ರೀಸುಂದರ ಅವರೇ. ಅಧ್ಯಾಪನಕ್ಕೆ, ನವೋನವವಾಗಿ ಪ್ರವೇಶಿಸಿದ್ದು, ಅದಿನ್ನೂ ಸುಧೀರ್ಘಕಾಲದ ವೃತ್ತಿಯಾಗಿ ಪರಿಚಯದಿಂದ ಹೊಳಪನ್ನು ಕಳೆದುಕೊಳ್ಳುದೆ ಹಳಸಾಗದೆ ಇದ್ದುದರಿಂದ ಅವರು ಪಠ್ಯಪುಸ್ತಕ ಮಾತ್ರದ ಅಚಾತುರ್ಯಕ್ಕೆ ಕರ್ತವ್ಯ ಎಂಬ ನಾಮಕರಣ ಮಾಡದೆ, ತಮಗೆ ನೂತನ, ಪ್ರಚಲಿತ, ಸ್ವಾರಸ್ಯಕರ ಎಂದು ತೋರಿದವುಗಳನ್ನೂ ಆಗಾಗ್ಗೆ ಪ್ರಸ್ತಾಪಿಸಿ ನಮ್ಮ ಕುತೂಹಲವನ್ನು ಕೆರಳಿಸಿ, ಚೇತನಕ್ಕೆ ವಿಕಾಸವಿಟ್ಟು, ಪ್ರಜ್ಞೆಯನ್ನು ವಿಕಾಸಗೊಳಿಸುತ್ತಿದ್ದರು. ಅದಕ್ಕೂ ನಮ್ಮ ಪಠ್ಯಪುಸ್ತಕದ ಪಾಠದ ವಿಷಯಕ್ಕೂ ಪರೀಕ್ಷೆಯ ದೃಷ್ಟಿಯಿಂದ ಏನೇನೂ ಸಂಬಂಧವಿರದಿದ್ದರೂ ಒಂದು ದಿನ ತರಗತಿಯ ಒಂದು ಇಡೀ ಪೀರಿಯಡ್ಡನ್ನೆ ರವೀಂದ್ರನಾಥ ಠಾಕೂರರ ‘ಗೀತಾಂಜಲಿಗೆ’ಗೆ ಮುಡಿಪು ಮಾಡಿಕೊಟ್ಟರು.

ರವೀಂದ್ರನಾಥ ಠಾಕೂರರು ಯಾರು ಏನು ಎಂಬ ವಿಚಾರ ತುಸು ಪ್ರಸ್ತಾಪಿಸಿ, ಅವರಿಗೆ ಜಗತ್ತಿನ ಸರ್ವಭಾಷೆಗಳಲ್ಲಿಯ ಅತ್ಯಂತ ಶ್ರೇಷ್ಠ ಸಾಹಿತ್ಯಕೃತಿಗೆ ಲಭಿಸುವ ‘ನೋಬೆಲ್’ ಬಹುಮಾನ ಬಂದುದನ್ನೂ ಅದರಿಂದ ಭಾರತೀಯರಿಗೆ ಲೋಕದ ಗೌರವ ಸಂದು ಕೋಡು ಮೂಡಿದಂತಾಗಿರುವುದನ್ನೂ ಆಲಿಸುತ್ತಿದ್ದ ನಮ್ಮ ಬಾಲಕ ಹೃದಯಗಳ ಹೆಮ್ಮೆ ಪುಲಕಿತವಾಗುವಂತೆ ವರ್ಣಿಸಿದರು. ಅದುವರೆಗೆ ಯಾವ ಏಷ್ಯಾದ ಸಾಹಿತಿಗೂ ಆ ಬಹುಮಾನ ದೊರೆತಿರಲಿಲ್ಲವೆಂದೂ, ಸಾಮಾನ್ಯವಾಗಿ ಪಾಶ್ಚಾತ್ಯರಿಗೆ ಮಾತ್ರ ದೊರೆಯುತ್ತಿತ್ತೆಂದೂ, ಏಷ್ಯಾಕ್ಕೆ ಅದು ದೊರೆತಿರುವುದು ಅದೇ ಮೊತ್ತಮೊದಲೆಂದೂ ನಮ್ಮ ತಲೆಗೆ ಕಿರೀಟ ತೊಡಿಸುತ್ತಿರುವರೆಂಬಂತೆ ಹೇಳಿದರು. ಮತ್ತೆ ‘ಗೀತಾಂಜಲಿ’ಯ ಕೆಲವು ಕವನಗಳನ್ನು ತುಂಬ ರಸವತ್ತಾಗಿ ಅವುಗಳ ಕಾವ್ಯತ್ವ ಮತ್ತು ಅಧ್ಯಾತ್ಮಿಕತ್ವ ಹೃದಯಸ್ಯಂದಿಯಾಗುವಂತೆ ವಾಚಿಸಿದರು. ಯಾವುದೋ ಒಂದು ರಹಸ್ಯಮಯ ಸುಮಧುರ ಭಾವಲೋಕಕ್ಕೆ ಒಂದು ಹೊಸ ಗವಾಕ್ಷ ತೆರೆದಂತಾಗಿ ನನ್ನ ಚೇತನ ರಸೋನ್ಮಾದಿಯಾಯಿತು. ಸಂಜೆ ಐದು ಗಂಟೆಗೆ ಸ್ಕೂಲು ಬಿಟ್ಟೊಡನೆ, ಗೀತಾಂಜಲಿ ಎಲ್ಲಿ ದೊರೆಯುತ್ತದೆ ಎಂಬುದನ್ನು ವಿಚಾರಿಸಿ ತಿಳಿದು ಆ ಸ್ಥಳದ ಪರಿಚಯವಿದ್ದ ಮಿತ್ರರೊಡನೆ ಆಗಿನ ಮರಿಮಲ್ಲಪ್ಪ ಹೈಸ್ಕೂಲಿನ ಎದುರಿನ  ಒಂದು ಕಟ್ಟಡದಲ್ಲಿದ್ದ ಪಿ.ಟಿ.ಐ. ಬುಕ್ ಡಿಪೋಗೆ ಹೋದೆ.

ಆ ಬುಕ್ ಡಿಪೋ ನನಗೆ ಬರಿಯ ಪುಸ್ತಕದ ಅಂಗಡಿಯಾಗಿ ತೋರಲಿಲ್ಲ. ಮೂಗಿಗೆ ಬಂದ ಅದರ ವಾತಾವರಣದ ಪುಸ್ತಕ ವಾಸನೆಯಲ್ಲಿಯೆ ಏನೊ ಒಂದು ದಿವ್ಯ ಮಾದಕತೆ ಇತ್ತು. ಬೀರುಗಳಲ್ಲಿ ಸಾಲಾಗಿ ಜೋಡಿಸಿಟ್ಟಿದ್ದ ಕ್ಯಾಲಿಕೊ ರಟ್ಟಿನ ಚಿನ್ನದಕ್ಷರದ ದಪ್ಪ ದಪ್ಪ ಪುಸ್ತಕಗಳನ್ನೆಲ್ಲ ಕಂಡು ಝಗಝಗಿಸಿ ಹೊಳೆಯುವ ದೇವತಾಮೂರ್ತಿಗಳನ್ನು ನೋಡಿ ಭಕ್ತಿ ಭಾರದಿಂದ ಬಾಗುವ ಯಾತ್ರಿಕನಂತಾಯ್ತು ನನ್ನ ಚಿತ್ತಸ್ಥಿತಿ. ಅಲ್ಲಿದ್ದವೆಲ್ಲ ಬರಿಯು ಇಂಗ್ಲಿಷ್ ಪುಸ್ತಕಗಳೆ! ನನ್ನ ಗೌರವವನ್ನು ಸೂರೆಗೊಂಡು ಮೋಹಿಸುತ್ತಿದ್ದುವು ಪಂಕ್ತಿಪಂಕ್ತಿ! ಒಂದೊಂದರ ಶೀರ್ಷಿಕೆಯನ್ನೂ ನಿಂತೂ ನಿಂತೂ ಓದಿದೆ ಪೂಜಾಕಾರ್ಯವೆಂಬಂತೆ. ಚಿನ್ನದ ಬೆಳ್ಳಿಯ ವಜ್ರ ವೈಡೂರ್ಯದ ಆಭರಣದ ಅಂಗಡಿಗೆ ಹೋಗುವ ಬಡ ಹುಡುಗಿಯಂತಾದ ಮನಸ್ಸಿಗೆ ಅವೆಲ್ಲವನ್ನೂ ಒಟ್ಟಿಗೆ ಕೊಳ್ಳುವ ಆಸೆಯಾಯ್ತು ಮತ್ತೆ ನಿರಾಶೆಯಾಯ್ತು!

ಅಂಗಡಿಯವನು ಏನು ಬೇಕು ಎಂದು ಕೇಳಿದಾಗ ‘ಗೀತಾಂಜಲಿ’ ಎಂದು ಹೆಮ್ಮೆಯಿಂದಲೆ ಹೆಸರು ಹೇಳಿದೆ. ಹಸರು ಬೈಂಡಿನ ಒಂದು ತೆಳ್ಳನೆಯ ಪುಸ್ತಕ ತೆಗೆದುಕೊಟ್ಟರು. ಬೆಲೆ ಒಂದೆ ರೂಪಾಯಿ! ಪುಸ್ತಕ ಕೊಂಡು ರೂಮಿಗೆ ಬಂದೆ. ಓದಿದೆ, ಮತ್ತೆ ಓದಿದೆ. ಒಬ್ಬ ಪ್ರೇಮಿ ತನ್ನ ಪ್ರಿಯೆಯನ್ನು ಕೂಡ ಆ ರೀತಿ ಮುದ್ದಾಡಿ ಆಸ್ವಾದಿಸುತ್ತಾನೆಯೊ ಇಲ್ಲವೊ? ಎಷ್ಟು ದಿನಗಳ ಅದರ ಮಾದಕತೆಯಲ್ಲಿ ಕಳೆದುವೊ? ದೈನಂದಿನ ಯಥಾಸ್ಥಿತಿಯ ವ್ಯಾಪಾರಗಳೇನೊ ನಡೆಯುತ್ತಿದ್ದುವು ಯಾಂತ್ರಿಕವಾಗಿ, ಮೇಯುವುದು, ಉಣ್ಣುವುದು, ಬಟ್ಟೆಬರೆ ಹಾಕಿಕೊಳ್ಳುವುದು, ಕ್ಲಾಸಿಗೆ ಹೋಗುವುದು ಇತ್ಯಾದಿ. ಆದರೆ ಚೇತನವೆಲ್ಲ ‘ಗೀತಾಂಜಲಿ’ಯ ನಂದನದಲ್ಲಿ ನರ್ತಿಸಿ ನಲಿವ ಅಪ್ಸರೆಯಾಗಿತ್ತು. ಆ ಇಂಗ್ಲಿಷ್ ವಚನ ಕವನಗಳಲ್ಲಿ ಸ್ಫುರಿಸುತ್ತಿದ್ದ ಕವಿಹೃದಯದ ಪ್ರಾರ್ಥನೆ, ಅಭೀಪ್ಸೆ, ಆರಾಧನೆ, ಅನಂತತಾ ಆಕಾಂಕ್ಞೆ, ಸುಮಧುರಾಸ್ಪಷ್ಟ ಸ್ವಾಪ್ನಿಕಾಹ್ವಾನ ಇವು ನನ್ನ ಆತ್ಮವನ್ನು ತಮ್ಮ ಇಂದ್ರಚಾಪ ಸದೃಶವಾದ ವರ್ಣೋಪವರ್ಣಮಯ ಭಾವಪಾಶಗಳಿಂದ ನೆಯ್ದ ಐಂದ್ರಜಾಲದಿಂದ ಬಂಧಿಸಿ, ಸುದೂರದೊಂದು ಇಂದ್ರಲೋಕಕ್ಕೊಯ್ದುವು. ಶ್ರೀರಾಮಕೃಷ್ಣ – ವಿವೇಕಾನಂದ ಸಾಹಿತ್ಯದಿಂದ ನನಗೆ ಆಗಲೆ ಗೋಚರವಾಗತೊಡಗಿದ್ದ ಆಧ್ಯಾತ್ಮಿಕ ಸತ್ಯಕ್ಕೆ ಒಂದು ಕಾವ್ಯಸೌಂದರ್ಯದ ದರ್ಶನದೀಪ್ತಿ ಸಂಗಮಿಸಿದಂತಾಯ್ತು!

ಆ ವರ್ಷವೆ ನನ್ನ ಪ್ರಜ್ಞೆಗೆ ನನಗರಿಯದಂತೆಯೆ ಮೊತ್ತಮೊದಲ ಕವಿಪ್ರತಿಭಾದೀಕ್ಷೆಯಾಯಿತೆಂದು ಭಾವಿಸುತ್ತೇನೆ. ‘ಗೀತಾಂಜಲಿ’ಯನ್ನು ಕೊಂಡಂತೆ ನನಗೆ ಬರುತ್ತಿದ್ದ ಹಿಂದುಳಿದ ಪಂಗಡದ ವಿದ್ಯಾರ್ಥಿವೇತನದ ಹಣದಲ್ಲಿ ಸ್ವಲ್ಪ ಭಾಗವನ್ನು ಪ್ರತಿ ತಿಂಗಳೂ ಪುಸ್ತಕ ಕೊಳ್ಳಲು ವಿನಿಯೋಗಿಸತೊಡಗಿದೆ. ಹಳೆ ಪುಸ್ತಕದ ಮಾರಾಟದ ಅಂಗಡಿಗಳಲ್ಲಿ (ಸೆಕೆಂಡ್ ಹ್ಯಾಂಡ್ ಬುಕ್ಸ್‌ ಸ್ಟಾಲ್) ಅರ್ಧ ಬೆಲೆಗೆ ಕಾಲುಬೆಲೆಗೆ ಸುಲಭ ಬೆಲೆಗೆ ಸುಪ್ರಸಿದ್ಧ ಸಾಹಿತ್ಯಕೃತಿಗಳನ್ನು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ! ನನ್ನ ಬಳಿ ಇನ್ನೂ ಇರುವ ಆ ಪುಸ್ತಕಗಳಲ್ಲಿ –ಗೀತಾಂಜಲಿ, ರಾಬಿನ್‌ಸನ್ ಕ್ರೂಸೋ, ಷೇಕ್ಸ್ಪಿಯರ್ ನಾಟಕಗಳು (ವೆರೈಟೀ ಎಡಿಷನ್) ಪ್ಯಾರಡೈಸ್ ಲಾಸ್ಟ್ ಮುಂತಾದುವು K.V. Puttappa, V Form, Wesleyan Mission High School, Mysore, ಎಂಬ ಲಿಖಿತವಿದೆ. ಅದನ್ನೋದಿದಾಗಲೆಲ್ಲ ನನ್ನ ಬೆನ್ನನ್ನು ನಾನೆ ತಟ್ಟಿಕೊಂಡಂತಾಗಿ, ಅದು ಕೆಂಪು ಗರ್ವಾಹಂಕಾರವಲ್ಲ, ಬಿಳಿಯ ಹೆಮ್ಮೆ ಎಂದು ಸಮಾಧಾನ ತಂದುಕೊಳ್ಳುತ್ತೇನೆ.

ನನಗೆ ನೆನಪಿರುವಂತೆ, ನನ್ನ ಮೊದಲ ಇಂಗ್ಲಿಷ್ ಪದ್ಯ ಅತ್ಯಂತ ಅಕಾವ್ಯಕ ಪ್ರೇರಣೆಯಿಂದ ತಯಾರಾದದ್ದು! ನನ್ನ ಗೆಳೆಯನೊಬ್ಬ ಚರಿತ್ರೆಯ ವಿದ್ಯಾರ್ಥಿ. ಚರಿತ್ರೆ ತನಗೆ ತಾನೆ ಅಂಥಾ ಕಷ್ಟಕೊಡುವ ವಿಷಯವಲ್ಲ. ನಾವು ಲೋವರ್ ಸೆಕೆಂಡರಿ ಓದುತ್ತಿರುವಾಗ ಎಂ.ಹೆಚ್.ಕೃಷ್ಣಯ್ಯಂಗಾರ್ ಬರೆದ “ಹಿಂದೂ ದೇಶದ ಚರಿತ್ರೆಯ ಸುಲಭ ಪಾಠಗಳು” ಎಂಬುದು ಪಠ್ಯಪುಸ್ತಕವಾಗಿತ್ತು. ಅದನ್ನು ನಾವು ಕಥೆ ಕಾದಂಬರಿ ಓದುವಂತೆ ಆಸ್ವಾದಿಸಿ ಓದುತ್ತಿದ್ದೆವು. ಕಷ್ಟವಾಗುತ್ತಿದ್ದುದು ಎಂದರೆ ಇಸವಿಗಳ ಪಟ್ಟಿ ಮತ್ತು  ಹಾಳು ಗೌರ್ನರ್ ಜನರಲ್ಗಳ ಹೆಸರುಗಳ ಪಟ್ಟಿ. ಶಿವಾಜಿಯ ಕಥೆ ಮತ್ತು ಪಾಣೀಪತ್ತದ ಯುದ್ಧಗಳನ್ನು ಕುರಿತ ಕಥನ ಇವುಗಳನ್ನೆಲ್ಲ ಕಾದಂಬರಿ ಓದುವಂತೆ ಕಥೋತ್ಸಾಹದಿಂದ ಓದುತ್ತಿದ್ದೆವು. ಆದರೆ ಹೈಸ್ಕೂಲಿಗೆ ಬಂದೊಡನೆ ಇಂಗ್ಲಿಷ್ ಭಾಷೆಯಲ್ಲಿ ಚರಿತ್ರೆ ಓದಬೇಕಾಯಿತು. ಕಥೆ ಕವಿತೆ ನಾಟಕ ಕಾದಂಬರಿಗಳನ್ನು ಇಂಗ್ಲಿಷಿನಲ್ಲಿಯೆ ಓದಿ ಆಸ್ವಾದಿಸುತ್ತಿದ್ದ ನನ್ನಂಥ ವಿದ್ಯಾರ್ಥಿಗಳೂ ಹಾಳು ಚರಿತ್ರೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಓದುವುದು ತುಂಬ ನೀರಸವಾಗುತ್ತಿತ್ತು. ಇನ್ನು ಪಠ್ಯಪುಸ್ತಕವನ್ನಲ್ಲದೆ ಬೇರೆ ಪುಸ್ತಕ ಕೈಯಲ್ಲಿ ಮುಟ್ಟದಿದ್ದ ಇತರ ವಿದ್ಯಾರ್ಥಿಗಳ ಗತಿ?  ಆ ನನ್ನ ಗೆಳೆಯ ಅಕ್ಬರನ ವಿಷಯವನ್ನೋ ಔರಂಗಜೇಬನ ವಿಚಾರವನ್ನೊ ಪರೀಕ್ಷೆಗಾಗಿ ಬಾಯಿಪಾಠಮಾಡುತ್ತಿದ್ದ. ಮತ್ತೆ ಮತ್ತೆ ಮರೆತುಹೋಗುತ್ತಿತ್ತು. ನಾನು ಅವನಿಗೆ ಹೇಳಿದೆಃ ಆ ಚರಿತ್ರೆಯ ಸಂಗತಿಗಳನ್ನು ನಾನು ಇಂಗ್ಲಿಷಿನಲ್ಲಿ ಪದ್ಯದಂತೆ ರಚಿಸಿಕೊಡುತ್ತೇನೆ, ಛಂದಸ್ಸು ಪ್ರಾಸಬದ್ಧವಾಗಿ. ಆಗ ಬಾಯಿಪಾಠಮಾಡಿದ ಪದ್ಯವನ್ನು ಹೇಳಿಕೊಂಡು ತಿಳಿದರೆ, ಬರೆಯಲು ಸುಲಭವಾಗುತ್ತದೆ-ಎಂದು, ಅವನು ಸಂತಸದಿಂದ ಹೂಗುಟ್ಟಿದ. ನಾನು ‘ಅಕ್ಬರ‍್ಸ್ ಟೂಂಬ್’ ಎಂದೊ ‘ಔರಂಗಜೇಬ್ಸ್ ಟೂಂಬ್’ ಎಂದೊ ಹೆಸರಿಟ್ಟು ಕೊಂಡು ಒಂದಷ್ಟು ಪಂಕ್ತಿ ಪದ್ಯ ತಯಾರಿಸಿದೆ. ಆ ಪುಣ್ಯಾತ್ಮ ಅದನ್ನು ಸುಲಭದಲ್ಲಿ ಬಾಯಿಪಾಠಮಾಡಿ, ಬೇರೆ ವಿಷಯಗಳ ಮೇಲೂ ಇನ್ನಷ್ಟು ಪದ್ಯ ಬರೆದುಕೊಡಲು ಅಂಗಲಾಚಿದ. ವರ ಅನುಗ್ರಹಿಸುವ ದೇವತೆಯಂತೆ ನಾನೂ ಹೆಮ್ಮೆಯಿಂದಲೆ ಇನ್ನಷ್ಟು ಪದ್ಯ ತಯಾರಿಸಿಕೊಟ್ಟೆ. ಅದರಿಂದ ಅವವನ ಪರೀಕ್ಷೆಗೆ ತುಂಬ ಅನುಕೂಲವಾಯಿತಂತೆ! ಹೇಗೋ ಅಂತೂ ಇಂಗ್ಲಿಷ್ ನಲ್ಲಿ ಪದ್ಯ ರಚಿಸುವುದಕ್ಕೆ ಪ್ರಾರಂಭದ ಗುದ್ದಲಿಪೂಜೆಯಾಯಿತು ಆ ಘಟನೆ.

ಇಂಗ್ಲಿಷ್ ಪದ್ಯದ ಛಂದಸ್ಸಿನ ಪರಿಚಯ ನನಗಾದದ್ದು ಹೆಡ್ಮಾಸ್ಟರ್ ಸುಬ್ಬಕೃಷ್ಣಯ್ಯನವರ ಕ್ಲಾಸಿನಲ್ಲಿ. ಸ್ಕಾಟ್ ಕವಿಯ(The Lady of the Lake) `‘ದಿ ಲೇಡಿ ಆಫ್ ದಿ ಲೇಕ್’ ದೀಘð ಕಾವ್ಯದ ಮೊದಲನೆಯ ಕ್ಯಾಂಟೊ ನಮಗೆ ಪಠ್ಯವಿಷಯವಾಗಿತ್ತು. ನಾನು ಆ ಕಾವ್ಯದ ಇಡೀ ಪುಸ್ತಕವನ್ನೆ ಕೊಂಡುಕೊಂಡು ಆ ಕಥನ ಕವನವನ್ನು ಆಸಕ್ತಿಯಿಂದ ಓದಿಓದಿ ಆನಂದಪಟ್ಟಿದ್ದೆ. ನಾಲ್ಕು ಗಣದ ಅದರ ಛಂದಸ್ಸನ್ನು ಗತ್ತಿನಿಂದ ಪಠಿಸುವುದನ್ನೂ ಅಭ್ಯಾಸಮಾಡಿದ್ದೆ. ಅದರ ಛಂದಸ್ಸುನ್ನು ಕುರಿತು ಪಠ್ಯಪುಸ್ತಕದಲ್ಲಿಯೂ ಗುರುಲಘು ಚಿಹ್ನೆಗಳನ್ನು ಹಾಕಿ ವಿವರಣೆ ಕೊಟ್ಟಿತ್ತು. ಅದನ್ನು ಓದಿ ಸುಬ್ಬಕೃಷ್ಣಯ್ಯ ಬೋರ್ಡಿನ ಮೇಲೆ ಬರೆದು ವಿವರಿಸಿದರು. ಇಂಗ್ಲಿಷಿನ ಛಂದಸ್ಸಿನ ಮೂಲವರ್ಮ ನನ್ನ ಬುದ್ಧಿಗೆ ಸ್ಪುರಿಸಿತು. ಆಮೇಲೆ ಆ ವಿಚಾರವಾಗಿ ಇತರ ಗ್ರಂಥಗಳಿಂದಲೂ ವಿವಿಧ ಛಂದೋವಿಲಾಸಗಳ ವಿಚಾರ ಓದಿ ತಿಳಿದೆ. ಲಘು-ಗುರು, ಗುರು-ಲಘು, ಲಘು-ಲಘು-ಗುರು ಇತ್ಯಾದಿ ನಾನಾ ವಿನ್ಯಾಸಗಳನ್ನೆಲ್ಲ ಗುರುತಿಸಲು ಕಲಿತೆಃ

u___u_______u     _____  u ___
The stag at eve had drunk his fill
u_____ u        ___ u____ u _____
Where danced the moon, on monau’s rill;
u    ___       u             ___ u __ u ____
And deep his midnight lair had made
u____ u ____u ___u_____
In dark glemarks huzzle shade

ಈ ಇಂಗ್ಲಿಷ್ ಛಂದಸ್ಸಿನ  ಮತ್ತು ಪಂಕ್ತಿ ವಿನ್ಯಾಸದ ವೈವಿದ್ಯವನ್ನು ಕೂಲಂಕಷ ಎನ್ನುವಷ್ಟರ ಮಟ್ಟಿಗೆ ನಾನು ತಿಳಿದದ್ದು ಮುಂದೆ ಕನ್ನಡದಲ್ಲಿ ಕವನ ರಚಿಸಲು ಪ್ರಾರಂಭಿಸಿದಾಗ, ನನಗೆ ಅದು ಛಂದಸ್ಸಿನ ದೃಷ್ಟಿಯಿಂದ ನೀರು ಕುಡಿದಷ್ಟು ಸುಲಭವಾಗಿ ಕೈಸೇರಿತು. ಛಂದಸ್ಸಿನ ಮಟ್ಟಿಗೆ ಹೇಳುವುದಾದರೆ ನಾನು ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತೆಗಳಿಗೆ ಅಷ್ಟೇನೂ ಕಾಯಬೇಕಾಗಿದ್ದು ಋಣಿಯಾಗಿದ್ದೇನೆ ಎನ್ನಿಸುವುದಿಲ್ಲ.

ಆ ವರ್ಷದ ಇನ್ನೊಂದೆರೆಡು ನೆನಪಿನಲ್ಲಿರುವ ವಿಶೇಷ ಸಂಗತಿಗಳೆಂದರೆ, ಬೈಬಲ್ ಪ್ರಶ್ನಪತ್ರಿಕೆಗೆ ಉತ್ತರ ಬರೆದದ್ದು ಮತ್ತು ಪ್ರಿನ್ಸಿಪಾಲರ ಬೀಳ್ಕೊಡಿಗೆ ಸಮಾರಂಭದಲ್ಲಿ ಅದಕ್ಕೆಂದೇ ರಚಿತವಾದ ನನ್ನ ಪದ್ಯ ‘ಅಡ್ಯೂ’(‘Adieu’ ಬೀಳ್ಕೊಡಿಗೆ)ವನ್ನು ಓದಿದ್ದು.

ವೆಸ್ಲಿಯನ್ ಮಿಶನ್ ಹೈಸ್ಕೂಲಿನಲ್ಲಿ ಕ್ಲಾಸುಗಳು ಪ್ರಾರಂಭವಾಗುವ ಮುನ್ನ ವಿದ್ಯಾರ್ಥಗಳೂ ಅಧ್ಯಾಪಕವರ್ಗದವರೂ ಎಲ್ಲರೂ ಕೇಂದ್ರ ಮಂದಿರದಲ್ಲಿ ನೆರೆಯಲೇ ಬೇಕಾಗಿತ್ತು. ಆಗ ಪಿನ್ಸಿಪಾಲರು ಸಾಮಾನ್ಯವಾಗಿ ಐರೋಪ್ಯ ಮಿಶನರಿಗಳಿಗೇ ಸ್ಥಾನ ಮಿಸಲಾಗಿರುತ್ತಿತ್ತು –ಬೈಬಲ್ಲಿನಿಂದ ಓದಿ ಪ್ರಾರ್ಥನೆ ನಡೆಸುತ್ತಿದ್ದರು. ಅದು ಮುಗಿದ ಮೇಲೆ ಅವರವರು ಅವರವರ ತರಗತಿಯ ಕೊಠಡಿಗಳಿಗೆ ಹೋಗಿ, ಪಾಠಪ್ರವಚನ ಪ್ರಾರಂಭವಾಗುತ್ತಿತ್ತು. ಇತರರಿಗಿರಲಿ, ಕ್ರೈಸ್ತ ವಿದ್ಯಾರ್ಥಿಗಳಿಗೇ ಆ ಪ್ರಾರ್ಥನಾ ಸಭೆಯಲ್ಲಿ ಎಷ್ಟರಮಟ್ಟಿಗೆ ಭಕ್ತಿಪೂರ್ವಕ ಇರುತ್ತಿತ್ತೊ ನಾನು ಹೇಳಲಾರೆ, ಅದೊಂದು ಮಾಡಲೇಬೇಕಾದ ಬೇಜಾರಿನ ದಿನಚರಿಯಾಗಿತ್ತೆಷ್ಟೆ.

ವರ್ಷದ ತುದಿಯಲ್ಲಿ ಇತರ ವಿಷಯಗಳ ಪರೀಕ್ಷೆಯ ಜೊತೆಯಲ್ಲಿ ಬೈಬಲ್ ಪರೀಕ್ಷೆಯೂ ನಡೆಯುತ್ತಿತ್ತು. ಆ ಪ್ರಶ್ನಪತ್ರಿಕೆಗೆ ಬರೆಯುವ ಉತ್ತರದಿಂದ ವಿದ್ಯಾರ್ಥಿಗಳಿಗೆ ಲಭಿಸುವ ಅಂಕಗಳಿಂದ ಯಾವ ಹಾನಿಯೂ ಆಗುತ್ತಿರಲಿಲ್ಲ. ಏಕೆಂದರೆ ಒಂದು ತರಗತಿಯಿಂದ ಮತ್ತೊಂದಕ್ಕೆ ತೇರ್ಗಡೆಯಾಗುವುದಕ್ಕೆ ಬೇಕಾದ ಅಂಕಗಳಿಗೆ ಬೈಬಲ್ ಪತ್ರಿಕೆಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಅದರಲ್ಲಿ ಚೆನ್ನಾಗಿ ನಂಬರು ತೆಗೆದರೆ ಇತರ ಕೆಲವು ಅನುಕೂಲಗಳೂ ರಿಯಾಯಿತಿಗಳೂ ಬಹುಮಾನಗಳೂ ಲಭಿಸುತ್ತಿದ್ದುವು. ಉದಾಹರಣೆಗೆಃ ಫ್ರೀಷಿಪ್ಪು ಸ್ಕಾಲರ್ ಷಿಪ್ಪುಗಳ ನಿರ್ಣಯದಲ್ಲಿ; ಸಂಘ ಸಭೆಗಳಿಗೆ ಆಯ್ಕೆಯಾಗುವ ಸದಸ್ಯತ್ವ ಕಾರ್ಯದರ್ಶಿತ್ವಗಳ ವಿಚಾರದಲ್ಲಿ; ಲಕ್ಷಣವಾದ ಬೈಬಲ್ಲು ಮತ್ತು ಇತರ ಪುಸ್ತಕಗಳ ವಿತರಣೆಯಲ್ಲಿ; ಪ್ರಿನ್ಸಿಪಾಲರ ವಿಶ್ವಾಸಗಳಿಕೆಯಲ್ಲಿ ಮತ್ತು ತರಗತಿಯಿಂದ ತರಗತಿಗೆ ತೇರ್ಗಡೆಯಾಗಲು ಒಂದೊ ಎರಡೊ ಅಂಕಗಳು ಕಡಮೆಯಾದಾಗ ಕೂಡಿಕೊಡುವ ಅನುಗ್ರಹಾಂಕಗಳ ಕೃಪಾಲಾಭದಲ್ಲಿ!

ಎಷ್ಟೊ ವಿದ್ಯಾರ್ಥಿಗಳು ಏನಾದರೂ ನೆಪ ಒಡ್ಡಿ ಬೈಬಲ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಪರೀಕ್ಷೆಗೆ ಬಂದವರಲ್ಲಿಯೂ ಎಷ್ಟೋ ಮಂದಿ ಕಾಟಾಚಾರಕ್ಕೆ ಏನಾದರೂ ಗೀಚಿ ಹೋಗುತ್ತಿದ್ದರು. ನಾನು ಆಗತಾನೆ ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದತೊಡಗಿದ್ದು ಹಿಂದೂಧರ್ಮದ ಶಾಶ್ವತಾಂಶವಾದ ವೇದಾಂತದರ್ಶನದ ಮತ್ತು ಶ್ರೀರಾಮಕೃಷ್ಣರಿಂದ ಪ್ರಣೀತವಾದ ಸರ್ವಧರ್ಮ ಸಮನ್ವಯದ ತತ್ವಗಳಿಗೆ ಮಾರುಹೋಗಿದ್ದೆ. ಪ್ರಪಂಚದ ಬೇರೆ ಯಾವ ಮತಧರ್ಮವೂ ವೇದಾಂತದರ್ಶನದಷ್ಟು ವಿಚಾರಪೂರ್ವಕವೂ ವೈಜ್ಞಾನಿಕವೂ ಆಗಿಲ್ಲವೆಂಬ ಸತ್ಯ ಬುದ್ಧಿಗೋಚರವಾಗ ತೊಡಗಿತ್ತು. ವಾದದಲ್ಲಿ ಯಾರನ್ನಾದರೂ ಸೋಲಿಸಿಬಿಡುತ್ತೇನೆ ಎಂಬ ಬೌದ್ಧಿಕವರ್ಗದ ಕೆಚ್ಚೂ ಮೊಳೆಯುತ್ತಿತ್ತು. ಹೊಸದಾಗಿ ಕೋಡುಮುರಿದ ಜಿಂಕೆಮರಿ ಹುತ್ತಿನಮೇಲೆ ತನ್ನ ಸೇಡು ತೀರಿಸಿಕೊಳ್ಳುವಂತೆ ನಾನು ಬೈಬಲ್ ಪ್ರಶ್ನಪತ್ರಿಕೆಯ ಮೇಲೆ ನನ್ನ ತರ್ಕಬುದ್ಧಿಶಕ್ತಿಯ ಕೋಡುಗಳನ್ನು ಪ್ರಯೋಗಿಸಲು ನಿರ್ಣಯಿಸಿ ಬೈಬಲ್ ಪರೀಕ್ಷಾಭವನಕ್ಕೆ ಶಸ್ತ್ರಸಜ್ಜಿತನಾಗಿ ಯುದ್ಧಹೂಡಲು ಹೋದೆ.

ಬೈಬಲ್ ಪ್ರಶ್ನಪತ್ರಿಕೆ ಇತರ ಪ್ರಶ್ನಪತ್ರಿಕೆಗಳಂತೆಯೆ ಏಳೆಂಟು ಪ್ರಶ್ನೆಗಳನ್ನೊಳಗೊಂಡಿರುತ್ತಿತ್ತು. ಒಂದೊಂದು ಪ್ರಶ್ನೆಗೂ ಅಂಕಗಳನ್ನು ಹಂಚಿ ಒಟ್ಟಿನಲ್ಲಿ ನೂರು ಬರುವಂತೆ ಮಾಡಿರುತ್ತಿದ್ದರು. ನಾನು ಪ್ರಶ್ನೆಗಳನ್ನು ಓದಿದೆ. ಕ್ರೈಸ್ತಮತ ಮತ್ತು ಮಿಶನರಿಗಳ ಕ್ರೈಸ್ತಮತ ಪ್ರಚಾರ ಇವುಗಳನ್ನು ಖಂಡಿಸುವುದಕ್ಕೆ ಅನುಕೂಲವಾದಂತೆ ನನಗೆ ತೋರಿದ ಒಂದು ಪ್ರಶ್ನೆಯನ್ನು ಆರಿಸಿಕೊಂಡೆ. ಮೂರು ಗಂಟೆಗಳ ಕಾಲ ಅದೊಂದೇ ಪ್ರಶ್ನೆಗೆ ಹತ್ತು ಹನ್ನೆರಡು ಪುಟಗಳಷ್ಟು ಉತ್ತರವನ್ನು ನನಗೆ ಸಾಧ್ಯವಾದ ಗೌಡೀ ಶೈಲಿಯ ಇಂಗ್ಲಿಷ್ನಲ್ಲಿ ಬರೆದೆ ಪಕ್ಕದಲ್ಲಿದ್ದ ಗೆಳೆಯನೊಬ್ಬ ನನ್ನ ಸಾಹಸಕ್ಕೆ ಬೆರಗಾಗಿ “ಅದಕ್ಕಿಟ್ಟಿರುವ ನಂಬರೆ ಇಪ್ಪತ್ತೋ! ನೀನು ಅದಕ್ಕೆ ಎಷ್ಟು ಚೆನ್ನಾಗಿ ಉತ್ತರ ಬರೆದರೂ ಇಪ್ಪಕ್ಕಿಂತ ಜಾಸ್ತಿ ಕೊಡುವುದಿಲ್ಲ. ಬೈಬಲ್ ಪರೀಕ್ಷೆಯಲ್ಲಿ ಫೈಲಾಗಿಬಿಡುತ್ತೀಯ. ನೀನು ಸ್ಕಾಲರ್ ಷಿಪ್ ಹೋಲ್ಡರ್” ಎಂದು ಎಚ್ಚರಿಕೆ ಹೇಳಿದನು. ಆದರೆ ಆ ಕ್ರೈಸ್ತಮತ ಪ್ರಚಾರಕರನ್ನು ಖಂಡಿಸುವ ನನ್ನ ಮತಪ್ರಚಾರ ರೋಷಾವೇಶ ನನಗೊದಬಹುದಾದ ಮಂಗಳಾಮಂಗಳಗಳನ್ನು ಒಂದಿನಿಂತೂ ಲೆಕ್ಕಿಸಲಿಲ್ಲ.

ನನ್ನ ಆ ಉತ್ತರ ಪತ್ರಿಕೆಗೆ ಬೆಲೆಕಟ್ಟಿದ ಪ್ರಿನ್ಸಿಪಾಲರು ಒಂದು ದಿನ (ನನ್ನ ಆ ಒಂದೇ ಪ್ರಶ್ನೆಗೆ ಬರೆದ ದೀರ್ಘ ಉತ್ತರದಿಂದ ಚಕಿತರಾದರೆಂದು ತೋರುತ್ತದೆ). ನನ್ನನ್ನು ಕರೆದು ಆ ಪ್ರಬಂಧಕ್ಕಾಗಿ ಶ್ಲಾಘಿಸುವಂತೆ ನಟಿಸಿ, ನನ್ನ ಅಭಿಪ್ರಾಯಗಳನ್ನು ತಪ್ಪೆಂದು ಸಾಧಿಸುವುದಕ್ಕೆ ಪ್ರಯತ್ನಿಸಿದರು. ಆದರೆ ನಾನು ಅವರಿಗೆ ಬಿಟ್ಟುಕೊಡಲಿಲ್ಲ. ಕ್ರೈಸ್ತಮತ ಮೂಲತತ್ವಗಳ ಅಭದ್ರವಾದುವು, ವಿಚಾರಸಮ್ಮತವಾದುವಲ್ಲ, ತರ್ಕವಿರುದ್ಧವಾದುವು ಮತ್ತು ಅವೈಜ್ಞಾನಿಕವಾದುವು ಎಂದು ವಾದಿಸಿದೆಃ ಹುಟ್ಟುವ ಜೀವ ಹಿಂದೆ ಇರಲಿಲ್ಲ, ಮುಂದೆ ಯಾವಾಗಲೂ ಇರುತ್ತದೆ. ಈ ಒಂದೇ ಜನ್ಮದಲ್ಲಿ ಅದು ಸಾಧಿಸುವ ಕರ್ಮದಿಂದ ಅದು ಅನಂತಕಾಲದವರೆಗೂ ನಿತ್ಯನರಕವಾಸಿಯಾಗುತ್ತದೆ ಅಥವಾ ಸ್ವರ್ಗವಾಸಿಯಾಗಿಬಿಡುತ್ತದೆ; ತನ್ನ ತಪ್ಪನ್ನು ಎಇದ್ದಿಕೊಳ್ಳಲಾಗಲಿ ಮತ್ತೆ ಜೀವನದಲ್ಲಿ ಶ್ರೇಯಸ್ಸಿನ ಕಡೆಗೆ ಮುಂದುವರಿಯುವುದಕ್ಕಾಗಲಿ ಅದಕ್ಕೆ ಪುನರ್ಜನ್ಮಗಳ ಅವಕಾಶವಿಲ್ಲ; ಜನ್ಮಾಂತರ ,ಕರ್ಮ, ಸಂಸ್ಕಾರ ಮುಂತಾದ ಭಾವನೆಗಳಿಗೆ ಕ್ರೈಸ್ತಮತದಲ್ಲಿ ಸ್ಥಾನವೆ ಇಲ್ಲ; ಅವತಾರಗಳ ಕಲ್ಪನೆಯೂ ಇಲ್ಲ; ದೇವರು ತನ್ನ ಮಗನನ್ನು ಒಮ್ಮೆ ಕಳಿಸಿ, ಮನುಜರ ಪಾಪವಿಮೋಚನೆಗಾಗಿ ಅವನು ಶಿಲುಬಗೇರಿದನೆಂಬ ಕಥೆಯನ್ನು ಬುದ್ಧಿವಂತರಾರೂ ನಂಬಲಸಾಧ್ಯ. ಇಂತಹ ನಾನಾ ನಿದರ್ಶನಗಳನ್ನೊಡ್ಡಿ, ಉಪನಿಷತ್ತುಗಳು ನಮಗೆ ದಯಪಾಲಿಸಿರುವ ವೇದಾಂತ ದರ್ಶನವಾದರೊ ಕ್ರೈಸ್ತಮತದಂತೆ ಕುರುಡು ನಂಬಿಕೆಗಳ ಮೇಲೆ ನಿಲ್ಲದೆ, ವಿಚಾರಪೂರ್ವಕವಾದ ಸಿದ್ಧಾಂತವನ್ನಾಶ್ರಯಿಸಿ ಭಗವತ್ ಸಾಕ್ಷಾತ್ಕಾರಮಾಡಿರುವ ಸಿದ್ಧಪುರುಷ ತಮ್ಮ ಸಾಧನಾ ಪ್ರಯೋಗಜನ್ಯವಾದ ವಿಜ್ಞಾನಸತ್ಯದ ಮೇಲೆ ಸಂಸ್ಥಾಪಿಸಿರುವ ದರ್ಶನದಲ್ಲಿ ಸುಭದ್ರವಾಗಿ ನಿಷ್ಠಿತವಾಗಿದೆ ಎಂದು ವಾದಿಸಿದೆ. ಅವರಿಗೆ ಎಷ್ಟು ಅರ್ಥವಾಯಿತೋ ನಾನರಿಯೆ. ಆದದರೆ ಅವರು ಸಂಬಳ ತೆಗೆದುಕೊಂಡು, ಕ್ರೈಸ್ತಮತ ಪ್ರಚಾರಕ್ಕಾಗಿಯೆ ನಿಯೋಜಿತರಾದ ವೃತ್ತಿಯವರಾಗಿದ್ದುದರಿಂದ ನನ್ನ ವಾದವನ್ನು ಅರ್ಥಮಾಡಿಕೊಳ್ಳುವ ಅಥವಾ ಅರಿಯುವ ಗೋಜಿಗೆ ಹೋಗಲಿಲ್ಲವೆಂದು ಭಾವಿಸುತ್ತೇನೆ.

ಆದರೆ ಆ ಪ್ರಿನ್ಸಿಪಾಲರ ವಿಷಯದಲ್ಲಿ ನನಗೆ ವೈಯುಕ್ತಿಕವಾಗಿ ಯಾವ ಅಗೌರವ ಭಾವನೆಯೂ ಇರಲಿಲ್ಲ. ಅವರು ಆ ಕೆಲಸದಿಂದ ನಿವೃತ್ತರಾಗಿ ಹೋಗುವಾಗ ಒಂದು ಬೀಳ್ಕೊಡಿಗೆ ಪದ್ಯವನ್ನು ಇಂಗ್ಲಿಷಿನಲ್ಲಿ ಬರೆದು, ಅಚ್ಚಾಗಿದ್ದ ಅದನ್ನು ಸ್ಕೂಲಿನಲ್ಲಿ ನಡೆದ ಸಮಾರಂಭದಲ್ಲಿ ಓದಿದೆ. ಅಧ್ಯಾಪಕರೂ ವಿದ್ಯಾರ್ಥಿಗಳೂ ಎಲ್ಲರೂ ವಿಸ್ಮಿತರಾದಂತೆ ಅದನ್ನು ಮೆಚ್ಚಿ ಹೊಗಳಿದರು, ಅದು ಅತ್ಯಂತ ಕೃತಕವಾಗಿ ತಯಾರಾದ ಪದ್ಯವಾಗಿದ್ದರೂ!

ಈಗ ಅದನ್ನು ನೆನೆದರೆ ‘ಅಯ್ಯೊ ಪಾಪ!’ ಅನ್ನಿಸುತ್ತೆಃ ಇಂಗ್ಲಿಷರಂತೆ ಡ್ರೆಸ್ ಮಾಡಿಕೊಂಡರೆ ಸಾಕು ‘ಸಾಹೇಬ್’ ಎ/ಮದು ಬಗ್ಗಿ ಸಲಾಂ ಮಾಡುತ್ತಿದ್ದ ಅಂದಿನ ದಾಸಜಾತಿ ಸುಲಭವಾದ ಭಾರತೀಯತೆಯ ಸ್ವದೇಶ ಸ್ವಭಾಷಾ ಸ್ವಧರ್ಮ ಸ್ವಸಂಸ್ಕೃತಿಗಳನ್ನು ಕುರಿತ ಅಭಿಮಾನ್ಯ ಶೂನ್ಯತೆಗೂ ಪರಭಾಷಾ ವ್ಯಾಮೋಹಕ್ಕೂ ಅದು ಸಂಕೇತವಾಗಿದ್ದಂತೆ ತೋರುತ್ತದೆ. ‘ಅಂದಿನ’ ಎಂದೇನೊ ಬರೆದೆ. ಆದರೆ ಇಂದಿಗೂ, ಸ್ವಾತಂತ್ಯ್ರೋದಯವಾಗಿ ಇಪ್ಪತ್ತೈದು ವರ್ಷಗಳ ಅನಂತರವೂ (೧೯೭೧ರಲ್ಲಿ) ಇಂಗ್ಲಿಷ್ ಪರವಾದ ಅಂತಹುದೆ ದಾಸಾಂಧತೆಗೆ ಶರಣಾಗಿರುವ ಎಷ್ಟೋ ಜನರನ್ನೂ ಪತ್ರಿಕೆಗಳನ್ನೂ ಸಂಸ್ಥೆಗಳನ್ನೂ ನೋಡುತ್ತಿದ್ದೇವೆ ಅಲ್ಲವೆ?