ಆ ವರ್ಷದ ನಮ್ಮ ಊಟದ ಹೋಟಲಿನ ಅನುಭವವೊಂದು ನೆನಪಿಗೆ ಬರುತ್ತದೆ.

ಆ ಹೋಟಲು ಈಗ ಬಾಂಬೆಭವನ ಇರುವ ಚೌಕದಲ್ಲಿ ಒಂದು ಹೊಸದಾಗಿ ಕಟ್ಟಿದ ಸಿನಿಮಾಮಂದಿರದ ಪಕ್ಕದಲ್ಲಿತ್ತು. ಅತ್ಯಂತ ಹಳೆಯಕಾಲದ ತೊಟ್ಟಿಯಮನೆಯಂತೆ ಕಾಣುತ್ತಿತ್ತು, ಒಳಗೆ ಹೋದರೆ. ಹೊರಗಡೆಯಿಂದ ಅದರ ಅಸ್ತಿತ್ವದ ಅರಿವೇ ಆಗುತ್ತಿರಲಿಲ್ಲ, ಸುತ್ತಲೂ ಅಂಗಡಿಗಳು ಬಳಸಿ. ಒಂದು ಸಣ್ಣ ಬಾಗಿಲು, ಇದ್ದೇನೋ ಇಲ್ಲವೋ ಎಂಬಂತಿದ್ದು, ಅದಕ್ಕೆ ಪ್ರವೇಶದ್ವಾರವಾಗಿತ್ತು. ಅದಕ್ಕೆ ಹಳೆಯಕಾಲದ ಓಡುಹೆಂಚು ಹೊದಿಸಿತ್ತು. ಅದಕ್ಕೆ ಉಪ್ಪರಿಗೆ ಬೇರೆ ಇತ್ತು, ಕತ್ತಲೆಗವಿಯಹಾಗೆ ರಹಸ್ಯಪೂರ್ಣವಾಗಿ! ನಮ್ಮ ಅನ್ನಯಾತ್ರೆ ಎಲ್ಲೆಲ್ಲಿಂದಲೊ ಸಾಗಿ ಅಲ್ಲಿಗೆ ಬಂದು ಮುಟ್ಟಿತು, ನನ್ನ ಮಿತ್ರರು ರಾಮಪ್ಪದ್ವಯರ ರಾಜಕೀಯ ಸ್ವರೂಪದ ಆರ್ಥಿಕ ಚಟುವಟಿಕೆಯಿಂದಾಗಿ. ನಾನು ಸ್ವಭಾವತಃ ಹಾಗೆ ಮತ್ತೆಮತ್ತೆ ಬದಲಾವಣೆಯನ್ನು ಅಪೇಕ್ಷಿಸುವ ಪ್ರಾಣಿಯೆ ಅಲ್ಲ. ನನ್ನದು ಒಂದಿ ರೀತಿಯ ಸ್ಥಾವರ ಪ್ರಕೃತಿ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ, ಒಬ್ಬರಿಂದ ಮತ್ತೊಬ್ಬರಿಗೆ ಬದಲಾಯಿಸುತ್ತಿದ್ದರು. ಈ ಹೋಟೆಲಿನಲ್ಲಿ ಸುಣ್ಣಹಾಕಿದ ರಂಗೂನಕ್ಕಿಯಿಂದ ಅನ್ನ ಮಾಡುತ್ತಾನೆ, ಅದು ಹೊಟ್ಟೆಗೆ ಕೆಟ್ಟದ್ದು; ಆ ಹೋಟೆಲಿನವನದು ಬಹಳ ದಿಮಾಕು, ಇವನು ಭಾನುವಾರ ತಯಾರುಮಾಡುತ್ತಿದ್ದ ಈರುಳ್ಳಿಹುಳಿಯನ್ನು ಸ್ವಲ್ಪ ಹೆಚ್ಚಾಗಿ ಹಾಕು ಎಂದರೆ ‘ನೀವು ಕೊಡೋ ದುಡ್ಡಿಗೆ ಇನ್ನೆಷ್ಟು ಹಾಕಬೇಕು?’ ಎಂದು ಮೂದಲಿಸಿ ಮೂಂದೆ ಹೋಗುತ್ತಾನೆ; ಅವನು ಹಾದರಮಾಡಿ ಮೈಯೆಲ್ಲ ಕಜ್ಜಿಮಾಡಿಕೊಂಡಿದ್ದಾನೆ, ಅವನು ಬಡಿಸಿದ್ದನ್ನು ಉಂಡರೆ ನಮಗೂ ಅಂಟುತ್ತೆ; ಮತ್ತೊಬ್ಬನು ಸಿಂಬಳ ಸುರಿದ ಕೈಯನ್ನು ತೊಳೆಯದೆಯೆ ಅನ್ನವನ್ನು ಕೈಯಿಂದಲೆ ಬಡಿಸಿಬಿಟ್ಟೆ ಹೀಗೆ ನನಗೆ ಅರ್ಥವಾಗದ ಹಲವಾರು ನೆಪಗಳನ್ನು ಅರ್ಥವಾಗುವ ಕೆಲವು ಕಾರಣಗಳೊಂದಿಗೆ ಬೆರಸಿ ಸ್ಥಳಾಂತರ ಮಾಡುತ್ತಿದ್ದರು. ಬಹುಶಃ ಬೇಜಾರುಪರಿಹಾರಕ್ಕೆ ಅವರಿಗೆ ಅದು ಅವಶ್ಯಕವಾಗಿತ್ತೆಂದು ತೋರುತ್ತದೆ. ಅಂತೂ ಈ ಹೊಸ ಊಟದ ಹೋಟಲಿಗೆ ಗಿರಾಕಿಗಳಾಗಿ ವಿಧಿ ನಮ್ಮನ್ನು ಎಳೆತಂದಿತ್ತು.

ಆ ಹೋಟಲಿಗೆ ಊಟಕ್ಕೆ ಬಂದ ಮೊದಲ ರಾತ್ರಿಯೆ ನನಗೆ ಏನೋ ಅನುಮಾನಾಸ್ಪದವಾಗಿ ತೋರಿತ್ತು. ಎಲ್ಲೆಲ್ಲಿಯೂ ಕತ್ತಲೆ ತುಂಬಿತ್ತು. ನಾವು ಊಟಕ್ಕೆ ಕುಳಿತ ಒಂದು ಸ್ಥಳದಲ್ಲಿ ಒಂದು ಕಿರುದೀಪ ಮಿಣಿಮಿಣಿ ಉರಿಯುತ್ತಿತ್ತು. ಆ ಬೆಳಕು ಎಷ್ಟು ಕತ್ತಲೆಯಾಗಿತ್ತೆಂದರೆ ನಮಗೆ ಬಡಿಸುವ ಪದಾರ್ಥಗಳ ಸ್ಪಷ್ಟತೆಯೆ ನಮಗೆ ಕಾಣುವಂತಿರಲಿಲ್ಲ! ಆ ಬದನೆಕಾಯಿ ಒಣಪಲ್ಯವೋ? ಇಂಗು ಮೂಗಿಗೆ ಬಡಿಯುತ್ತಿದ್ದ ಸಾರೊ? ನೀರುಮಜ್ಜಿಗೆಯೊ? ನನ್ನ ಮಿತ್ರರು ‘ಕ್ರಮೇಣ ಸರಿಹೋಗುತ್ತದೆ’ ಎಂದು ಸಮಾಧಾನ ಹೇಳಿದರು; ಏಕೆಂದರೆ, ಅವನು ಹಿಂದೆ ನಾವು ಊಟಮಾಡುತ್ತಿದ್ದ ಹೋಟಲಿನವನಿಗಿಂತ ಅರ್ಧದಷ್ಟು ಕಡಿಮೆ ಛಾರ್ಜು ಮಾಡುತ್ತಾನೆ ಎಂದು ಆರ್ಥಿಕ ಲಾಭದತ್ತ ನನ್ನ ಗಮನ ಸೆಳೆದು! ಉಳಿತಾಯವಾದ ಹಣದಲ್ಲಿ ಸ್ವಲ್ಪ ಹೆಚ್ಚಿಗೆ ತಿಂಡಿ ತಿನ್ನಬಹುದಲ್ಲಾ?

ಅದಲ್ಲಕ್ಕಿಂತ ಹೆಚ್ಚಾಗಿ ನನ್ನ ಅನುಮಾನಕ್ಕೆ ಕಾರಣವಾದದ್ದು, ಆ ಅರೆಬೆಳಕಿನ ಕತ್ತಲೆಯಲ್ಲಿ ಚೆನ್ನಾಗಿ ಉಟ್ಟು ತೊಟ್ಟು ಸ್ತ್ರೀರೂಪಗಳು ಹೊರಗಿನಿಂದ ಬಂದು ಚಲಿಸುತ್ತಾ ಕತ್ತಲೆಯಲ್ಲಿ ಕಾಣದಿರುತ್ತಿದ್ದ ಏಣಿಟ್ಟಿಲುಗಳನ್ನೇರಿ ಉಪ್ಪರಿಗೆಗೆ ಹೊಗುತ್ತಿದ್ದುದು. ಮತ್ತು ಪೇಟ ಕೋಟು ಕಚ್ಚಿಪಂಚೆ ಹಾಕಿ  ಸಂತಪೇಟೆಯ ಸಾಹುಕಾರರಂತೆ ತೋರುತ್ತಿದ್ದ ವ್ಯಕ್ತಿಗಳೂ; ಸಾಬರ ತರದ ಟೋಪಿಹಾಕಿ, ನಿಲುವಂಗಿತೊಟ್ಟು, ಬಿಗಿ ಇಜಾರದಿಂದ ಸೇಟುಗಳಂತಿದ್ದ ಶ್ರೀಮಂತರೂ; ಎರಡು ಕೈಗಳನ್ನೂ ಜೋಡಿಸಿ ಹಿಡಿದ ಅಂಜಲಿಯಲ್ಲಿ ರೂಪಾಯಿಗಳನ್ನು ಝಣಝಣಿಸುತ್ತಾ ಕತ್ತಲೆಯ ಸೋಪಾನ ಪಂಕ್ತಿಗಳನ್ನೇರಿ ಉಪ್ಪರಿಗೆ ಸೇರುತ್ತಿದ್ದದೂ!

ಕೆಲವು ದಿನಗಳಲ್ಲಿಯೆ ನಮ್ಮ ಹೋಟಲಿನ ನಿಜಸ್ವರೂಪ ಬಯಲಾಗುವ ಒಂದು ಘಟನೆ, ನಾವು ರಾತ್ರಿ ಊಟಕ್ಕೆ ಕುಳಿತಿದ್ದಾಗಲೆ ನಡೆದು, ನನ್ನ ಮಿತ್ರರಿಗೆ ಸ್ಥಳಾಂತರ ಮಾಡಲು ಮತ್ತೊಂದು ನಿಜವಾದ ಕಾರಣ ದೊರಕಿತುಃ

ಎಂದಿನಂತೆ ಅರೆಬೆಳಕಿನ ಮಬ್ಬು ಮುಸುಗಿದ್ದ ನೆಲದಮೇಲೆ ಊಟಕ್ಕೆ ಕುಳಿತಿದ್ದೆವು. ಆ ರಹಸ್ಯಪೂರ್ಣವಾದ ಉಪ್ಪರಿಗೆಗೆ ರಹಸ್ಯಮಯವಾದ ವ್ಯಕ್ತಿಗಳು ಹೋಗಿ ಸೇರಿದ್ದರು. ಇದ್ದಕ್ಕಿದ್ದ ಹಾಗೆ ಪೋಲಿಸರು ಸಮವಸ್ತ್ರ ಧರಿಸಿದ ಕೆಲವು ಜನರು ಆ ಮಬ್ಬಿನಲ್ಲಿ ಒಳಕ್ಕೆ ಒಂದು ಕತ್ತಲೆ ಮುಸುಕಿದ್ದ ಸೋಪಾನ ಪಂಕ್ತಿಗಳತ್ತ ಧಾವಿಸಿದರು. ಅವರ ಬೂಟಿನ ಸದ್ದು ಮಾತ್ರ ಕೇಳಿಸಿತು. ಇದ್ದಕ್ಕಿದ್ದಂತೆ ನಮಗೆ ಬಡಿಸುತ್ತಿದ್ದವರಲ್ಲಿ, ಹೋಟಲಿನ ನೌಕರವರ್ಗದವರಲ್ಲಿ ಏನೋ ಗಾಬರಿ ಸಂಚಾರವಾಯಿತು. ಹಠಾತ್ತನೆ ದೀಪಗಳೆಲ್ಲ ಆರಿಹೋಗಿ ಕತ್ತಲೆ ಕವಿಯಿತು. ಏನೊ ಗುಸುಗುಸು! ಪೋಲಿಸು! ಪೋಲಿಸು! ನಮಗೊಂದೂ ಅರ್ಥವಾಗದೆ ದೀಪ ಹೊತ್ತಿಸಲು ಕೂಗಿಕೊಂಡೆವು. ಇದ್ದಕ್ಕಿದ್ದ ಹಾಗೆ ಉಪ್ಪರಿಗೆಯ ಮೇಲೆ ಜನ ಓಡುವ ದಡದಡ ಸದ್ದು! ಯಾರೋ ಗಟ್ಟಿಯಾಗಿ ಏನನ್ನೊ ಹೇಳುವ ಸದ್ದು! ನೋಡುತ್ತಿದ್ದಂತೆಯೆ ಸಾಹುಕಾರರೋ ಸೇಠರೋ ಮೆಟ್ಟಿಲುಗಳನ್ನು ಧುಮುಕಿ ದಡದಡನೆ ಇಳಿದು ಅಂಗಳಕ್ಕೆ ಹಾರಿ ಬಾಗಿಲತ್ತ ಬಿರುಬಿರನೆ ಧಾವಿಸಿದ ಸದ್ದು! ನಮ್ಮಂತೆಯೆ ಉಟಕ್ಕೆ ಬಂದಿದ್ದು ಆ ಹೋಟಿಲಿನ ಗುಟ್ಟನ್ನು ಅರಿತಿದ್ದವರಿಂದ  ಗೊತ್ತಾಯಿತು, ಕೆಳಗೆ ಹೋಟಲಿನ ಮುಖವಾಡ ಧರಿಸಿದ್ದ ಆಮನೆಯ ಉಪ್ಪರಿಗೆಯಲ್ಲಿ ವೇಶ್ಯಾವಾಟಿಕೆ, ಪಾನಗೋಷ್ಟಿ ಮತ್ತು ಜೂಜಿನಕಟ್ಟೆ ಇವು ಮೂರೂ ಸಮಾವೇಶಗೊಂಡಿದ್ದುವಂತೆ!

ದಿಗಿಲುಗೊಂಡ ನಾವು ಆ ಹೋಟಲನ್ನು ತ್ಯಜಿಸಿ, ಮೈಸೂರಿನ ನನ್ನ ಜೀವನದಲ್ಲಿ ಊಟದ ಮತ್ತು ವಾಸದ ಕೊಟ್ಟಕೊನೆಯ ಹೋಟಲಾಗಿ ಪರಿಣಮಿಸಲಿರಲಿದ್ದ, ಸಂತಪೇಟೆಯಲ್ಲಿ ವಾಮನ್‌ಐಯ್ಯರ್ ಎಂಬುವರು ಮಾಲೀಕರಾಗಿ ನಡೆಸುತ್ತಿದ್ದ ‘’ಆನಂದ ಮಂದಿರ’ದ ಉಪ್ಪರಿಗೆಯ ಒಂದು ಸಣ್ಣ ಕೊಠಡಿಯಲ್ಲಿ ಆಶ್ರಯ ಪಡೆದೆವು.