ಹೆಸರಿನಮಟ್ಟಿಗೆ ‘ಆನಂದ ಮಂದಿರ’ವಾಗಿದ್ದ ಆ ಹೋಟಲಿನಲ್ಲಿ ನಾನು ಸುಮಾರು ಮೂರುನಾಲ್ಕು ವರುಷಗಳ ಕಾಲ ಇದ್ದೆ, ಶ್ರೀ ಗುರುಕೃಪೆ ಸ್ವಾಮಿ ಸಿದ್ದೇಶ್ವರಾನಂದರ ರೂಪದಲ್ಲಿ ಬಂದು ಕೈಹಿಡಿದೆಳೆದು ಕೃಷ್ಣರಾಜೇಂದ್ರ ಆಸ್ಪತ್ರೆಯ ಮುಖಾಂತರವಾಗಿ ಶ್ರೀರಾಮಕೃಷ್ಣಶ್ರಮಕ್ಕೆ ಕರೆದೊಯ್ಯವವರೆಗೆ.

ಸಂತೇಪೇಟೆ ಎಂದರೆ ಆಗಿನ ಮೈಸೂರಿನಲ್ಲಿ ಅತ್ಯಂತ ಕಿಷ್ಕಿಂಧೆಯಾದ ರಸ್ತೆ. ಇಕ್ಕೆಲಗಳಲ್ಲಿಯೂ ಹಳೆಯಕಾಲದ ಊರುಹೆಂಚಿನ ಹೆಮ್ಮೆನೆಗಳು. ಆ ಮನೆಗಳೆಲ್ಲ ಹೆಚ್ಚಾಗಿ ದಿನಸಿ ಮಂಎಇಗಳು ಮತ್ತು ಅಂಗಡಿಗಳು; ನೈರ್ಮಲ್ಯವಾಗಲಿ ಸೌಂದರ್ಯವಾಗಲಿ ಸ್ಥಳಾನುಕೂಲಿವಾಗಲಿ ವಲಲೇಶವೂ ಇಲ್ಲ. ಬೆಳೆಗಾಯಿತೆಂದರೆ ನಾನಾ ಧಾನ್ಯ ದಿನಸಿ ತುಂಬಿದ ಗಾಡಿಗಳು ಬರತೊಡಗಿ ಕಿಕ್ಕಿರಿಯುತ್ತಿದ್ದುವು. ಸ್ಕೂಲಿಗೊ ಕಾಲೇಜಿಗೊ ಹೋಗಬೇಕಾದರೆ ಆ ಬಂಡಿಗಳ ಸಂದಿಯಲ್ಲಿ ನುಗ್ಗಿ, ಗಾಡಿಗಳ ಹೊಟ್ಟೆಯಡಿಯಲ್ಲಿ ಹಾದು ನೊಗಗಳನ್ನೂ ಹತ್ತಿ ಹಾರಿ, ಮೂಗಿಗೂ ಕಣ್ಣಿಗೂ ದಿನಸಿಯ ಘಾಟೂ ಧೂಳಿಯೂ ಹೋಗದಂತೆ ಕರವನ್ನೊ ಕರವಸ್ತ್ರವನ್ನೊ ಅಡ್ಡಹಿಡಿದುಕೊಂಡು, ಆದರೂ ನುಗ್ಗಿಬರುವ ಸೀನುಗಳನ್ನು ‘ಆಕ್ ಸೀ’ ಎಂದು ಹೊರಗೆ ಹಾಕುತ್ತಾ, ಒಂದು ಅಪಾಯದಿಂದ ತಪ್ಪಿಸಿಕೊಂಡು ಪಾರಾಗುವವರಂತೆ ದೌಡಾಯಿಸಬೇಕಾಗುತ್ತಿತ್ತು! ಇನ್ನು ಶಬ್ದ? ಗಾಡಿಯ ಸದ್ದು, ಗಂಟೆಯ ಸದ್ದು, ಹಮಾಲಿಗಳ ಕೂಗು, ಗಾಡಿ ಹೊಡೆಯುವರ ಕಾಕು, ಎದುರುಬದರು ಅಂಗಡಿಗಳವರು ಕುಳಿತಲ್ಲಿಂದಲೆ ಕೂಗಿ ಸಂವಾದಿಸುವ ಸದ್ದು, ಗಿರಾಕಿಗಳ ಚೌಕಾಸಿಯ ಮಾತುಗಳ ಹೋರಾಟದ ಸದ್ದು, ಕಾಗೆಗಳ ಕಾದಾಟದ ‘ಕಾ’ ಸದ್ದು, ಬೀದಿನಾಯಿಗಳ ಕಚ್ಚಾಟದ ಸದ್ದು –ಒಟ್ಟಿನಲ್ಲಿ ಅದೊಂದು ರೌರವ ಸದ್ದಿನ ಸಂತೆ! ಜೊತೆಗೆ ಬೈಸಿಕಲ್ಲುಗಳ ಟ್ರೆಂ ಟ್ರೆಂ, ಕಾರುಗಳ ಪೋಂ ಪೋಂ! ಮಳೆಗಾಲದಲ್ಲಿ ದಿನಸಿ ಧೂಳಿನ ಕಟುವಾಸನೆಯ ಕೆಸರು; ಬೇಸಗೆಯಲ್ಲಿ ಬಿಸಿಲ ಬೇಗಗೆ ಹುರಿದಂತೆ ಒಣಗಿ ಜನದ ದನದ ಕಾಲು ಗೊರಸುಗಳ ಕಡೆದಾಟಕ್ಕೆ ಕಲಕಿ ಮೇಲೆದ್ದು, ಮನೆಗಳ ಇಕ್ಕಟ್ಟಿನಲ್ಲಿ ವೇಗವಾಗಿ ಸಂಚರಿಸಲಾರದ ಕುಂಟುಗಾಳಿಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಅಲ್ಲಿಯೆ ನಡೆಗೆಟ್ಟಂತೆ ಓಲಾಡುವ ಕಟು ಕನರುಗಂಪು, ಹೆಣವಾಸನೆ!

ಇಂತಹ ಸನ್ನಿವೇಶದಲ್ಲಿ ನಮ್ಮ ಹೋಟಲು ‘ಆನಂದಮಂದಿರ’ ಆ ಮನೆಯ ಮುಂಭಾಗವನ್ನು, ಬಹುಶಃ ತರುವಾಯ, ತುಸು ಹೊಸತನದ ರೀತಿ ಕಾಣುವಂತೆ ಕಟ್ಟಿಸಿದ್ದರೆಂದು ತೋರುತ್ತದೆ. ಅಲ್ಲಿ ರಂಗರಾಯರ
ವಕೀಲೀ ಬೋರ್ಡ್ ಇದ್ದು, ಕಕ್ಷಿದಾರರ ಸಂದಣಿ ಬಂದುಹೋಗುತ್ತಿತ್ತು. ಉಳಿದ ಉಪ್ಪರಿಗೆಯ ಭಾಗವೆಲ್ಲ ಹಳೆಯ ಅಟ್ಟವಾಗಿತ್ತು. ನಾಡಹೆಂಚು ಹೊದಿಸಿದ್ದು ಅದು ಕಾಣದಂತೆ ಹಲಗೆಗಳನ್ನು ಹಾಕಿ ಮೇಲೆ ಮಣ್ಣು ಮೆತ್ತಿದ್ದರು. ಅದನ್ನು ಎತ್ತಿಹಿಡಿದಿದ್ದ ಮರದ ಕಂಭಗಳಿಗೆ ಗೊಳೆಲೆ ಹತ್ತಿತ್ತು. ಯಾವಾಗ ಬೇಕಾದರೂ ಗಾಳಿಮಳೆಗೆ ಕುಸಿದು ಬೀಳಬಹುದಾಗಿತ್ತು. ಆ ಕಂಭಗಳಲ್ಲಿ ಹಲಗೆಯ ಬಿರುಕುಗಳಲ್ಲಿ ಗೋಡೆಯ ಸಂದುಗಳಲ್ಲಿ ಕೋಟಿ ಕೋಟಿ ಕೋಟಿ ತಿಗಣೆಗಳ ಕೋಟೆ! ಈ ಸಾರ್ವತಿಕ ನಾರಕತೆಯಲ್ಲಿ ಒಂದೇ ಒಂದು ಸ್ವರ್ಗೀಯತಾ ಅಂಶವಿತ್ತುಃ ಹಿತ್ತಲು ಕಡೆಯಲ್ಲಿದ್ದ ಬೃಹದಾಕಾರದ ಸಂಪಗೆಯ ಮರ!

ಹೋಟಲನ್ನು ನಡೆಸುತ್ತಿದ್ದವರು ವಾಮನ ಐಯ್ಯರ್. ಸಂಸಾರಿಯಾಗಿದ್ದ ಆತನ ಮನೆ ಹೋಟೆಲಿನಿಂದ ಬೇರೆಯಾಗಿ ಎಲ್ಲಿಯೊ ದೂರದಲ್ಲಿತ್ತು. ಗೃಹಸ್ಥನ ಒಳ್ಳೆಯ ಲಕ್ಷಣಗಳಿದ್ದ ಆತ ತುಂಬ ಸಂಭಾವಿತನಾಗಿದ್ದು ನಾವು ಅದುವರೆಗೆ ಕಂಡಿದ್ದ ಹೋಟಲು ಮಾಲೀಕರಲ್ಲದ ಭಿನ್ನರೀತಿಯ ಯೋಗ್ಯವ್ಯಕ್ತಿಯಾಗಿದ್ದರು. ತಮಿಳುನಾಡೊ ಮಲೆಯಾಳವೊ ಅವರ ಹುಟ್ಟುನಾಡು. ವಾಮನಐಯ್ಯರವರು ನಮ್ಮೊಡನೆ ವ್ಯವಹರಿಸುತ್ತಿದ್ದ ದಾಕ್ಷಿಣ್ಯಪರ ಸಭ್ಯತೆಯ ಮುಖ್ಯಕಾರಣವಾಗಿ ನಾವು ಮೂರುನಾಲ್ಕು ವರ್ಷವೂ ಸ್ಥಳಾಂತರಿಸಿದೆ ಅಲ್ಲಿ ತಂಗಲು ಸಾಧ್ಯವಾಯಿತು.

ಆದರೆ ವಾಮನ ಐಯ್ಯರ್ ರವರ ಸಭ್ಯತೆಯಾಗಲಿ ಅವರ ದಾಕ್ಷಿಣ್ಯಪರತೆಯಾಗಲಿ ಕೇರಳೀಯರಿಗೆ ಸಹಜವಾದ ಅವರ ವೈಯುಕ್ತಿಕ ಶುಚಿರ್ಭೂತತೆಯಾಗಲಿ ಅವರ ಆನಂದ ಮಂದಿರವನ್ನು ಮೈಸೂರಿನ ಹೊಟುಲುಗಳಿಗೆ ಸರ್ವಸಾಧಾರಣವಾಗಿದ್ದ ಸಾಮಾನ್ಯ ಲಕ್ಷಣಗಳಿಂದ, ಅಥವಾ ಅವಲಕ್ಷಣಗಳಿಂದ, ಪಾರುಮಾಡಲು ಸಮರ್ಥವಾಗಲಿಲ್ಲ, ಆ ಹೊಲಸು ಹೇಸಿಗೆಗೆ ಪ್ರತಿನಿಧಿಯಾಗಿದ್ದುದೆಂದರೆ ಒಲೆಗಳ ಸಾಲಿನಂತಿದ್ದ ತೆರೆದ ಕಕ್ಕಸ್ಸುಃ ಡಾಂಟೆಯ ನರಕವೂ ಅದನ್ನು ಕಂಡು ನಾಚುವಂತಿತ್ತು!

ಮೂಗು ಮುಚ್ಚಿಕೊಂಡೆ ಅದನ್ನು ಸಮಿಪಸಬೇಕಾಗಿತ್ತು. ಕೆಲವರು ಅದರ ನಾತವನ್ನು ಎದುರಿಸಲು ಸಿಗರೇಟು ಹೊತ್ತಿಸಕೊಂಡು ಹೋಗುತ್ತಿದ್ದರು. ಆದರೆ ಅವರೂ ಮೂಗು ಮುಚ್ಚಿಕೊಳ್ಳದೆ ಇರುವುದು ಅಸಾಧ್ಯವಾಗುತ್ತಿತ್ತು. ಕೂತು ಬಾಧೆ ಪರಿಹರಿಸಿಕೊಳ್ಳಲು ಒಳಗೆ ಒಲೆಗಳಿದ್ದರೂ ಅಲ್ಲಿಗೆ ಹೋಗಲು ಹೇಸಿ ಅಂಜಿ ರಾತ್ರಿ ಕತ್ತಲೆಯಲ್ಲಿ ಕೆಲವರು ಕಕ್ಕಸ್ಸಿನ ಹೊರಗಡೆಯ ಎರಡೂ ಬಾಧೆಗಳನ್ನೂ ತೀರಿಸಿಕೊಳ್ಳುತ್ತಿದ್ದುದರಿಂದ ಬೆಳಿಗ್ಗೆ ಇತರರಿಗಿಂತ ಮೊದಲು ಸ್ಥಳಾಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದವರು ತುದಿಗಾಲಿಗನ ಮೇಲೆ ಸರ್ಕಸ್ಸುಮಾಡುತ್ತಾ ಹೋಗಿ ಒಲೆ ಹತ್ತುತ್ತಿದ್ದರು, ಹಗಲಿನಲ್ಲಿ ಹೊರಗೆ ಕೂರಲಾಗುತ್ತಿರಲಿಲ್ಲವಾದ್ದರಿಂದಷ್ಟೆ. ಬೆಳಿಗ್ಗೆ ಮುಂಚಿ ಹೋದರೆ ಒಲೆ ಖಾಲಿಯಾಗಿರಬಹುದೆಂಬ ಭ್ರಾಂತಿ ಅವರಿಗೆ, ಹಿಂದಿನ ಸಂಜೆ ಜಲಗಾರನು ತನ್ನ ಕರ್ತವ್ಯನಿರ್ವಹಣೆಮಾಡಿರುತ್ತಾನೆಂದು ನಂಬಿ. ಆದರೆ ಒಲೆಗಳು ಖಾಲಿಯಾದುದನ್ನೆ ಕಂಡರಿಯರು. ಅವು ಎಷ್ಟರಮಟ್ಟಿಗೆ ಭರ್ತಿಯಾಗಿರುತ್ತಿದ್ದುವು ಎಂದರೆ ಒಲೆಯ ತೋಳಿನ ಮೇಲೆ ಕುಕ್ಕರುಗಾಲಿನಲ್ಲಿ ಕೂತರೆ ಹೇಲಿನ ಕುತ್ತುರೆ ಅಂಡಿಗೆ ತಗುಲುತ್ತಿತ್ತು. ಆದ್ದರಿಂದ ಅಲ್ಲಿಯೂ  ಶಾಲೆಯ ಹುಡುಗರೂ ಕುರ್ಚಿಕೂರುವಂತಹ ಶಿಕ್ಷೆಯನ್ನನುಭವಿಸಬೇಕಾಗುತ್ತಿತ್ತು, ಅಮೇಧ್ಯ ಸ್ಪರ್ಶವಾಗದೆ ಇರಬೇಕಾಗಿದ್ದರೆ. ಬರಿಯ ಹೇಸಿಗೆಯ ದೃಷ್ಟಿಯಿಂದ ಮಾತ್ರವಲ್ಲ; ರೋಗ ಅಂಟಿಕೊಳ್ಳುವ ಭಯವೂ ಇರುತ್ತಿತ್ತು. ಆ ಹೇಲಿನ ರಾಶಿಯ ಮೇಲೆ ತರತರದ ಬಣ್ಣದ ರಕ್ತಗಳೂ ಬಿದ್ದಿರುತ್ತಿದ್ದುವು; ನೆತ್ತರೊಡನೆ ಔಷಧಿಯ ಹತ್ತಿರ ಚೂರುಗಳೂ ರೋಗಗಳ ವೈವಿಧ್ಯವನ್ನು ಸಾರುತ್ತಾ ಬಿದ್ದಿರುತ್ತಿದ್ದುವುಃ ಆಮಶಂಕೆಯೊ? ಮೂಲವ್ಯಾಧಿಯೊ? ಮೇಹರೋಗದ ವ್ರಣಗಳೊ? ಕ್ಷಯದ ಕಫದ ಕಲೆಯೊ? ಕಡೆಗೆ, ಎಲೆಯಡಕೆಯ ಉಗುಳೊ? ಸ್ಪರ್ಶದಿಂದ ತಪ್ಪಿಸಿ ಕೊಂಡರಾದರೂ ಕ್ಷೇಮ ಉಂಟೇ? ನೊಣಗಳು! ನೊಣಗಳು! ನಾನಾ ಗಾತ್ರದವೂ! ನಾನಾ ಬಣ್ಣದವು. ನಾನಾ ವಿಕಾರದ ಮಿಸೆಯ ಕಣ್ಣಿನ ರೆಕ್ಕೆಯ ನೊಣದ ಹಿಂಡು ದಂಡುಗೊಂಡು ಆ ಸ್ಥಳ ಈ ಸ್ಥಳ ಎಂದು ನೋಡದೆ ಮುತ್ತಿ ಮೈಮೇಲೆ ಮುಖದಮೇಲೆ ಕೆನ್ನೆ ತುಟಿಗಳ ಮೇಲೆಯೂ ಕೂರುತ್ತಿದ್ದುವು. ಅವುಗಳ ಸೋಂಕು ತರಬಹುದಾದ ರೋಗಗಳನ್ನು ನೆನೆದೇ ಜೀವಹಾರುವಂತಾಗುತ್ತಿತ್ತು. ಅದಕ್ಕಾಗಿ ಎರಡು ಕೈಗಳೂ ದನಗಳು ಬಾಲ ಬೀಸಿಕೊಳ್ಳುವಂತೆ ನಿರಂತವಾಗಿ ವ್ಯಾಯಾಮಪ್ರದರ್ಶನ ಕಾರ್ಯದಲ್ಲಿ ತೊಡಗಬೇಕಾಗುತ್ತಿತ್ತು. ಅಂತೂ ಬಾಧೆ ತೀರಿಸಿಕೊಳ್ಳುವ ಆ ಕ್ರೂರಶಿಕ್ಷೆಯಿಂದ ಪಾರಾಗಿ ಬರುವಷ್ಟರಲ್ಲಿ ಮೈಬೆವರಿ, ದುರ್ವಾಸನೆಗೆ ಮೂಗು ಮುಚ್ಚಿಕೊಂಡು ಹೋಗಿದ್ದ ಆಸಾಮಿ ಸರ್ಕಸ್ಸು ಮಾಡಿದ ಆಯಾಸದಿಂದ ಶ್ವಾಸಕೋಶವೆಲ್ಲ ಭರ್ತಿಯಾಗುವಂತೆ, ಧೀರ್ಘವಾಗಿ ಉಸಿರೆಳೆದು ಏದುತ್ತಾ, ದುರ್ವಾಸನೆಯ ಆ ಕಕ್ಕಸ್ಸಿಗೆ ದಿನವೂ ಹೋಗಿ ಬರುವ ಭಯಂಕರತೆಯಿಂದ ತಪ್ಪಿಸಿಕೊಳ್ಳಲು ಮಲಬದ್ಧತೆಯಂತಹ ರೋಗವನ್ನು ರಕ್ಷಣೆಗೆ ಕರೆದು ಆಶ್ರಯಿಸುವ ಹಂಬಲಾಗುತ್ತಿತ್ತು!

ಕಕ್ಕಸ್ಸಿನಲ್ಲಿ ಮಾತ್ರವೆ ಅಲ್ಲ ಇಂತಹ ಭಿಕರ ಭೀಭತ್ಸದ ದೃಶ್ಯಗಳನ್ನು ಸಂದರ್ಶಿಸುತ್ತಿದ್ದುದು. ಮಹಡಿ ಎಂದು ನಾವು ಕರೆಯುತ್ತಿದ್ದ ಆ ಶಿಥಿಲ ಅಟ್ಟದ ಇತರ ಬಾಡಿಗೆಯ ಕೊಟಡಿಗಳಲ್ಲಿಯೂ ಮೈನಡುಗುವಂತಹ ಮತ್ತು  ವಾಕರಿಕೆ ತರುವಂತಹ ಜುಗುಪ್ಸೆಯ ನೋಟುಗಳೂ ಕಣ್ಗೆ ಬೀಳುತ್ತಿದ್ದವು. ಒಮ್ಮೆ ,ಮಿತ್ರರಾಗಿ ಹೊರನೋಟಕ್ಕೆ ಸಂಭಾವಿತರಾಗಿ ನಮಗಿಂತಲೂ ವೇಷಭೂಷಣಗಳಲ್ಲಿ ಹೆಚ್ಚು ನಾಗರಿಕರೂ ಶ್ರೀಮಂತರೂ ಆಗಿ ತೋರುತ್ತಿದ್ದ ಯುವಕರೊಬ್ಬರು ಬಾಡಿಗೆಗಿದ್ದ ಕೊಟಡಿಯ ಬಾಗಿಲು ತುಸುವೆ ತೆರೆದು ಒಳಗೆ ದೀಪ ಉರಿಯುತ್ತಿದ್ದುದನ್ನು ಕಂಡು, ಯಾರೂ ಇಲ್ಲವೋ ಏನೋ  ಆದರೂ ಬಾಗಿಲಿಗೆ ಬೀಗಹಾಕಿಕೊಳ್ಳದೆ ಹೊರಗೆ ಹೋಗಿದ್ದರಲ್ಲಾ ಎಂದುಕೊಂಡು ಇಣಿಕಿದಾಗ ನನ್ನ ಕಣ್ಣಿಗೆ ಬಿದ್ದ ದೃಶ್ಯ ಹೇಸಿಗೆಗಿಂತಲೂ ಹೆಚ್ಚಾಗಿ ಹೆದರಿಕೆ ಹುಟ್ಟಿಸುವಂತಿತ್ತು. ದೀಪದ ಹತ್ತಿರದ ಬೆಳಕಿನಲ್ಲಿ ಅವರು ತಮ್ಮ ಮರ್ಮಸ್ಥಾನದ ದುದರ್ಶನೀಯ ಅರಕ್ಷವರ್ಣದ ವ್ರಣಕ್ಕೆ ಔಷಧಿಯ ಹತ್ತಿಯನ್ನು ಮೆತ್ತುತ್ತಲೊ ಅಥವಾ ತೆಗೆಯುತ್ತಲೊ ಸಂಕಟಾನುಭವ ಮಾಡುವ ಮುಖ ಭಂಗಿಯಲ್ಲಿದ್ದುದನ್ನು ನೋಡಿ ಅಲ್ಲಿಂದ ಕಣ್ಣುಮುಚ್ಚಿಕೊಂಡು ಓಡಿಬಿಟ್ಟಿದ್ದೆ!

ಇನ್ನೂ ಇಂತಹ ಅಸಹ್ಯವಾದ, ಉಲ್ಲೇಖನೀಯವಲ್ಲದ, ನವನಾಗರಿಕ ನಗರಗಳಲ್ಲಿ ಸಾಮಾನ್ಯವೆಂದು ಪರಿಗಣಿತವಾಗಿರುವ  ಮಾನವದದೌರ್ಬಲ್ಯ ಸಹಜವಾದ ಎನಿತೆನಿತೊ ಅಸುರೀಯ ಸಂಗತಿಗಳನ್ನು ನನ್ನ ಅರಿವಿಗೆ ತಂದುಕೊಟ್ಟಿತು ಆ ‘ಆನಂದ ಮಂದಿರ’ ಆದರ್ಶಲೋಕ ಸಂಚಾರಿಯಾದ ಕವಿಗಲ್ಲದಿದ್ದರೂ ವಾಸ್ತವ ಪ್ರಪಂಚ ಪ್ರವಾಸಿಯಾಗುವ ಕಾದಂಬರಿಕಾರನಾಗುವವನಿಗೆ ಬದುಕಿನ ಆ ಕೃಷ್ಣಪಕ್ಷದ ಪರಿಚಯದ ಅವಶ್ಯಕತೆಯನ್ನರಿತು ನನ್ನ ಸಾಹಿತ್ಯ ವಿಧಿ ನನಗೆ ಆ ಅನುಭವಗಳನ್ನು ದಯಪಾಲಿಸಿತೆಂದು ತೋರುತ್ತದೆ!