ಇಷ್ಟಾದರೂ ‘ಆನಂದ ಮಂದಿರ’ ಬರಿಯ ಕೃಷ್ಣಪಕ್ಷದ ಬೀಡಾಗಿರಲಿಲ್ಲ. ನನ್ನ ಅಂತರಂಗಕ್ಕೆ ಸಂಬಂಧಪಟ್ಟಂತೆ ತತ್ತ್ವ ಸಾಹಿತ್ಯ ಸಂಸ್ಕತಿಗಳ ದೃಷ್ಟಿಯಿಂದ ನೋಡಿದರೆ ನನ್ನ ಬಾಳಿನ ಶುಕ್ಲಪಕ್ಷದಲ್ಲಿಯೊ ಅದಕ್ಕೊಂದು ಮಹತ್ವದ ಸ್ಥಾನ ದೊರಕುತ್ತದೆ. ಅಲ್ಲಿದ್ದ ಮೂರು ನಾಲ್ಕು ವರುಷಗಳಲ್ಲಿ ನನ್ನ ವ್ಯಷ್ಟಿಪ್ರಜ್ಞೆ ತನ್ನ ಹಲವಾರು ಬಾಗಿಲುಗಳನ್ನು ತೆರೆದು ವಿಶ್ವಪ್ರಜ್ಞೆಗೆ ಪ್ರವೇಶ ಪಡೆಯಿತು. ಇಂಗ್ಲಿಷ್ ಸಾಹಿತ್ಯದ ಜಗತ್ ಪ್ರಸಿದ್ಧ ಕವಿಗಳು, ನಾಟಕಾರರು, ಸಹಿತ್ಯ ವಿಮರ್ಶಕರು ಕಾವ್ಯಮೀಮಾಂಸಕರು ಪ್ರಬಂಧಕಾರರು ಬುದ್ಧಿಗೆ ಪುಷ್ಟಿಯನ್ನು ಭಾವಕ್ಕೆ ಕಾಂತಿಯನ್ನೂ ಒದಗಿಸಿದರು. ಭಾರತೀಯರು ಸ್ವಾತಂತ್ರ್ಯಸಂಗ್ರಾಮದ ವೀರಪುರುಷರೆ ಜೀವನಚರಿತ್ರೆ, ಲೇಖನ , ಭಾಷಣಗಳಿಂದ ಭಾರತೀಯತಾ ಭಕ್ತಿಯನ್ನೂ ದೇಶಪ್ರೇಮದ ಸ್ಪೂರ್ತಿಯನ್ನೂ ಪಡೆದ ನನ್ನ ಚೇತನ ತನ್ನ ಗ್ರಾಮೀಣ ಸ್ವಲ್ಪತ್ವವನ್ನು ವಿಸರ್ಜಿಸಿ ವಿಶ್ವಭೂಮತ್ವಕ್ಕೆ ಪದಾರ್ಪಣಮಾಡಿತು. ಸ್ವಾಮಿ ವಿವೇಕಾನಂದರಿಂದ ಮೊದಲುಗೊಂಡು ಆಧ್ಯಾತ್ಮ ಗಗನದ ಅನೇಕ ಉಚ್ಚಲ ನಕ್ಷತ್ರಗಳೊಡನೆ ನನ್ನ ಜೀವಾತ್ಮ ಸಂಪರ್ಕಗೊಂಡು ತನ್ನ ತಮಃಪ್ರಪಂಚದಿಂದ ಮೇಲಕ್ಕೆ ಹಾರಿ ಅಂಬರಿಗಾಮಿಯಾಗಿ ಅನಂತತೆಯ ಅಂಚಲ ಪ್ರದೇಶಗಳಲ್ಲಿ ವಿಹಾರಿಯಾಯಿತು. ಸಾಹಿತ್ಯ ಸೃಷ್ಟಿಯ ಪ್ರಾಥಮಿಕ ಆವೇಶ ನನ್ನ ಪ್ರತಿಭೆಯನ್ನಾಕ್ರಮಿಸಿದರೂ ಆ ಆನಂದ ಮಂದಿರದಲ್ಲಿಯೆ! ಅನೇಕ ವರ್ಷಗಳ ತರುವಾಯ ೧೯೫೧ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನ ಶತಮಾನೋತ್ಸವ ಸಂದರ್ಭದಲ್ಲಿ ರಚಿತವಾದ “ವಿಶ್ವವಿದ್ಯಾನಿಲಯೆ ಭಗವತಿ ಶ್ರೀ ಸರಸ್ವತಿಗೆ” ಎಂಬ ಪ್ರಗಾಥದ ಐದು ಆರನೆಯ ವಿಭಾಗಗಳಲ್ಲಿ ಆ ಆವೇಶದ ಆಕ್ರಮಣದ ಮತ್ತು ಪ್ರತಿಭೆಯ ಉನ್ಮೇಷನದ ಚಿತ್ರಣ ಪ್ರತಿಮಿತವಾಗಿದೆ.

ಆ ವಾಗ್ದೇವಿಯ ಕೃಪೆ ನನಗೆ ಸುಲಭವಾಗಿ ಲಭಿಸಿಬಿಟ್ಟಿತೆಂದು ಯಾರೂ ಭಾವಿಸಿದಿರಲಿ. ಅದಕ್ಕಾಗಿ ತುಂಬ ಕಷ್ಟಪಡಬೇಕಾಯಿತು; ಹಗಲಿರುಳೂ ನಿಷ್ಟತಯಿಂದ ಸಾರಸ್ವತ  ಅನುಸಂಧಾನದಲ್ಲಿ ಮನಸ್ಸು ಮಗ್ನವಾಗಿ, ಲೌಕಿಕವೂ ಸಾಮಾಜಿಕವೂ ಆಗಿರುವ ಎಷ್ಟೋ ಕರ್ತವ್ಯಗಳನ್ನು ಮರ್ಯಾದೆಗಳನ್ನು ಉಲ್ಲಂಘಿಸಬೇಕಾಗಿದೆ ಬಂದು ಕಟುಟೀಕೆಗೂ ನಿಂದೆಗೂ ಒಳಗಾಗಬೇಕಾಯಿತು. ಬಂಧು ಬಳಗದವರಂತಿರಲಿ ಕಡೆಗೆ ತಾಯಿತಂಗಿಯರ ಅಕ್ಕರೆಯನ್ನೂ ಅಲಕ್ಷಿಸುವಷ್ಟು ಉಗ್ರವಾಯಿತು ಆ ಆವೇಶೋನ್ಮಾದಃ ಕಠೋರವೂ ನಿಷ್ಠುರವೂ ಆಗ ಬುದ್ಧಿ ಪೂರ್ವಕವಾಗಿರಲಿಲ್ಲ. ಆದರೂ ನನ್ನ ಚೇತನ ತನ್ನ ಸಹಜಧರ್ಮವೆಂಬಂತೆ ಅದನ್ನು ಅವಶವಾಗಿಯೆ ಕೈಕೊಂಡಿತ್ತು. ತಾಯಿ ಭಗವತಿಯ ನಿರ್ದಾಕ್ಷಿಣ್ಯ ಸಾರಸ್ವತ ಹಸ್ತ ತನ್ನ ಕಂದನನ್ನು ಆಧ್ಯಾತ್ಮಿಕ ಶ್ರೇಯಸ್ಸಿನತ್ತ ಕೈಹಿಡಿದೆಳೆಯುತ್ತಿತ್ತು!

ಒಮ್ಮೆ ಲ್ಯಾಂಡ್ಸ್ ಡೌನ್ ಬಿಲ್ಡಿಂಗ್ನ ಅಂಗಡಿ ಸಾಲುಗಳಲ್ಲಿದ್ದ ಒಂದು ಹಳೆ ಪುಸ್ತಕದಂಗಡಿ(ಸೆಕೆಂಡ್ ಹ್ಯಾಂಡ್ ಬುಕ್ ಸ್ಟಾಲ್)ಯಲ್ಲಿ  ಷೇಕ್ಸ್ ಪಿಯರ್ ನ ‘ಸಿಂಬಲೈನ್’ ನಾಟಕ ಕಂಡೆ. ಕ್ಯಾಲಿಕೊ ಪ್ರತಿಯಾಗಿದ್ದರೂ ಬೆಲೆಯೂ ಸುಲಭವಾಗಿದ್ದು ನನ್ನ ರಸಿಕತೆಗೆ ಎಟುಕುವಂತಿದ್ದುದರಿಂದ ಹಲವು ದಿನದ ಬಯಕೆಯಾಗಿದ್ದ ಅದನ್ನು ಕೊಂಡುಕೊಂಡೆ. ಒಡನೆಯ ನನ್ನ ಕೊಠಡಿಗೆ ಹೋದೆ. ಸಂಜೆಯಾಗಿದ್ದುದರಿಂದ ಎಲ್ಲರೂ ಹೊರಗೆ ಹೋಗಿದ್ದರು. ನಾನೊಬ್ಬನೆ ಚಾಪೆಯಮೇಲೆ ಕುಳಿತು ನನ್ನ ಹಾಸಗೆಯ ಸುರುಳಿಗೆ ಒರಗಿ ಪುಸ್ತಕ ಓದಲು ತೆರೆದೆ. ಏನು ಉತ್ಸುಕತೆ ಮಹಾಕವಿಯ ಕೃತಿ ಪ್ರವೇಶನಕ್ಕೆ!

ಮೊದಲನೆಯ ಅಂಕದ ಮೊದಲನೆಯ ದೃಶ್ಯದಿಂದಲೆ ಪ್ರಾರಂಭಿಸಿದೆ. ಒಂದೊಂದು ಪಂಕ್ತಿಯನ್ನೂ ಚೆನ್ನಾಗಿ ಅರ್ಥಮಾಡಿಕೊಂಡು ಭಾವವನ್ನು ಗ್ರಹಿಸಿಯೆ ಮುಂದುವರಿಯುವ ಹಟ. ಆದರೆ ಹತ್ತಾರು ಪಂಕ್ತಿಯನ್ನು ಓದಿದರೂ ಏನೂ ಅರ್ಥ ಹೊಳೆಯಲೆ ಇಲ್ಲ. ಕಷ್ಟ ಪದಗಳಿಗೆ ನಿಘಂಟನ್ನು ನೋಡಿ ತಿಳಿದು ಮತ್ತೆ ಓದಿದೆ. ಪ್ರಯೋಜನವಾಗಲಿಲ್ಲ. ಅರೆ! ಇದೇನು? ನನಗೆ ಇಂಗ್ಲಿಷ್ ಭಾಷೆ ಬರುತ್ತದೆ. ಎಸ್.ಎಸ್.ಎಲ್.ಸಿ ಓದುತ್ತಿದ್ದೇನೆ! ಆದರೆ ಷೇಕ್ಸ್ ಪಿಯರ್ ನ ಈ ನಾಟಕ ಏಕೆ ಅರ್ಥವಾಗುತ್ತಿಲ್ಲ. ನನ್ನ ವಿದ್ಯಾಹಂಕಾರಕ್ಕೆ ಒದೆ ಬಿದ್ದಂತಾಯಿತು. ನಿಘಂಟನ್ನೂ ನೋಡಿ ಪದಗಳಿಗೆಲ್ಲ ಅರ್ಥ ತಿಳಿದಿದ್ದೇನೆ. ಆದರೂ ಭಾವವಾಗುತ್ತಿಲ್ಲವಲ್ಲಾ? ಅಳು ಬಂದಂತಾಯಿತು. ಸಿಟ್ಟೂ ಬಂದಿತು. ಪುಸ್ತಕ ಮುಚ್ಚಿಟ್ಟು, ರೂಂ ಬಾಗಿಲಿಗೆ ಬೀಗ ಹಾಕಿಕೊಂಡು ನಿಷಾದ್ ಬಾಗಿನ ಕಡೆ ತಿರುಗಾಡಲು ಹೋದೆ.

ಮರುದಿನ ಮತ್ತೆ ಓದಲು ತೆಗೆದುಕೊಂಡೆ. ಮೊದಲನೆಯ  ಪಂಕ್ತಿಗಳೆ ಮೂದಲಿಸುವಂತೆ ತೋರಿತು. ನೋಡೋಣ ಎಂದು, ಪುಸ್ತಕಕ್ಕೆ ಬರೆದಿದ್ದ ಪೀಠಿಕೆಯಲ್ಲಿದ್ದ ಕಥಾ ಸಾರಾಂಶವನ್ನು ಓದಿದೆ. ಕಥೆಯೇನೊ ತಕ್ಕಮಟ್ಟಿಗೆ ಗೊತ್ತಾಯಿತು. ಅದನ್ನು ಆಧಾರವಾಗಿಟ್ಟುಕೊಂಡು ಮತ್ತೆ ಮೊದಲನೆಯ ದೃಶ್ಯವನ್ನು ಓದತೊಡಗಿದೆ. ಉಹ್ಞು! ಏನೂ ಅರ್ಥವಾಗಲಿಲ್ಲ. ಸಿಟ್ಟೇರಿತು! ಪುಸ್ತಕವನ್ನು ತೆಗೆದು ಎದುರಿಗೆ ಆರೇಳು ಅಡಿಗಳಲ್ಲಿದ್ದ ಗೋಡೆಗೆ ಬಲವಾಗಿ ಎಸೆದು ಅಪ್ಪಳಿಸಿಬಿಟ್ಟೆ! ಹಾಳೆಗಳೆಲ್ಲ ಹಕ್ಕಿಪುಕ್ಕಗಳಂತೆ ಕೆದರಿ, ಕ್ಯಾಲಿಕೊ ರಟ್ಟು ಗೋಡೆಗೆ ಡಿಕ್ಕಿಯಾದ ಹೊಡೆತಕ್ಕೆ ಹಿಸಿದು, ರಪ್ಪನೆ ಕೆಳಗೆ ಬಿತ್ತು. ಕಣ್ಣಲ್ಲಿ ನೀರೂ ಬಂತು. ಅಯ್ಯೋ ದುಡ್ಡುಕೊಟ್ಟು ಕೊಂಡ ಪುಸ್ತಕ  ಹಾಳಾಯಿತಲ್ಲಾ ಎಂದೂ ಕರುಳು ಕಿವಿಚಿತು. ಎದ್ದುಹೋಗಿ ಅದನ್ನೆತ್ತಿಕೊಂಡು ಹಾಳೆರಟ್ಟುಗಳನ್ನೆಲ್ಲ ಸರಿಪಡಿಸಿದೆ. ಮತ್ತೆ ಓದಲು ಪ್ರಯತ್ನಿಸಿದೆ.

ಈ ಸಾರಿ, ಮನಸ್ಸಿಗೆ ಹೊಳೆಯಿತು, ಅರ್ಥವಾಗದಿದ್ದರೂ ಓದುತ್ತಾ ಹೋಗಬೇಕೆಂದು. ಹೇಗಿದ್ದರೂ ಕಥೆ ಸ್ವಲ್ಪಮಟ್ಟಿಗೆ ಗೊತ್ತಿತ್ತು. ಸುಮ್ಮನೆ ಓದುತ್ತಾ ಹೋದೆ. ತಂತಿ ಅಲ್ಲಲ್ಲಿ ತುಂಡುಗಡಿದಿದ್ದರೂ ಸಮಿಪಗತವಾಗುವುದರಿಂದ ವಿದ್ಯುತ್ತು ತುಂಡಿನಿಂದ ತುಂಡಿಗೆ  ಹಾರುವಂತೆ ಅನೇಕ ಎಡೆಗಳಲ್ಲಿ ಅರ್ಥವಾಗದಿದ್ದರೂ ಕಥಾಸೂತ್ರದ ಸಹಾಯದಿಂದ ಭಾವಕಲ್ಪನೆಯಾಗಿ ಮನಸ್ಸಿಗೆ ಸಂತೋಷವಾಗ ತೊಡಗಿತು. ಪೂರ್ತಿ  ನಾಟಕವನ್ನು ಓದಿ ಮುಗಿಸಿಯೆಬಿಟ್ಟೆ! ಅಂತೂ ಕಡೆಯಲ್ಲಿ ಪರ್ವಾ ಇಲ್ಲ ಎನ್ನಿಸಿತು.

ನನಗಿಂತಲೂ ತಿಳಿದವರು ಯಾರಾದರೂ ನಮ್ಮ ಜೊತೆ ಇದ್ದಿದ್ದರೆ ಅವರಿಂದ ಓದಿಸಿ ಅರ್ಥ ಹೇಳಿಸಿಕೊಂಡು ಭಾವವಿವರಣೆ ಪಡೆದು ಅಷ್ಟೊಂದು ಪಾಡುಪಡದೆ ಮುಂದುವರಿಯಬಹುದಿತ್ತು. ಆದರೆ ಆಗ ನಾನಿದ್ದ ಸ್ಥಿತಿಯಲ್ಲಿ ಆ ಅನುಕೂಲವಿರಲಿಲ್ಲ. ನನ್ನ ರೂಮುಮೇಟುಗಳು ನನಗಿಂತಲೂ ಮಹಾಬೃಹಸ್ಪತಿಗಳು. ಬೇರೆಯವರ ಪರಿಚಯವಿಲ್ಲ. ಹೈಸ್ಕೂಲಿನ ಅಧ್ಯಾಪಕರು ಪಾಠಹೇಳಿಕೊಡುವುದೆ ಹರ್ಮಾಗಾಲವಾಗಿತ್ತು. ಅವರ ಮನೆಗಳನ್ನು ಹುಡುಕಿಕೊಂಡು ಹೋಗಿ, ಅವರ ಸಮಯ ಕಾದು, ಅದನ್ನೆಲ್ಲ ಮಾಡುವ ಚೇತನ ನನ್ನದಾಗಿರಲಿಲ್ಲ. ಆದ್ದರಿಂದ ಯಾರ ನೆರವನ್ನೂ ಹಾರೈಸದೆ ಏಕಾಂಗಸಾಹಸಿಯಾಗಿಯೆ ಮುಂದುವರಿಯಬೇಕಾಗಿತ್ತು. ಅದರಿಂದ ಒಂದು ದೊಡ್ಡ ಲಾಭವಾಯಿತು. ಸಾಹಿತ್ಯದೊಡನೆ ಹೋರಾಡಿ, ಅರ್ಥದೊಡನೆ ಗುದ್ದಾಡಿ, ತಪ್ಪೊನೆಪ್ಪೊ ಭಾವಗಳೊಡನೆ ಗರುಡಿಮಾಡಿ, ನನ್ನ ಬುದ್ಧಿಗೆ ವ್ಯಾಯಾಮ ಒದಗಿ ಬಲಿಷ್ಠವಾಯಿತು; ಉಜ್ಜಿಉಜ್ಜಿ ನನ್ನ ಭಾವಶಕ್ತಿ ಉಜ್ವಲವಾಯಿತು; ಪ್ರತಿಭೆಗೆ ಒಂದು ಕೆಚ್ಚು ಲಭಿಸಿ, ಆತ್ಮಪ್ರತ್ಯಯ ನಿಷ್ಠೆಗೆ ನಾಂದಿಯಾಯಿತು. ಆದ್ದರಿಂದ ನಾನು ಎಸ್.ಎಸ್.ಎಲ್.ಸಿ ತರಗತಿಯಲ್ಲಿರುವಾಗಲೆ ಷೇಕ್ಸ್ ಪಿಯರ್ ನಾಟಕಗಳನ್ನೂ ಮಿಲ್ಟನ್ ಕವಿಯ ಪ್ಯಾರಡೈಸ್ ಲಾಸ್ಟ್ ಕಾವ್ಯವನ್ನೂ ಓದಲು ಸಮರ್ಥನಾದೆ.