ನನ್ನ ಒಳಬದುಕಿನ ಉದ್ಯಾನಕ್ಕೆ ವಸಂತಮಾಸ ಪ್ರಾಪ್ತವಾಗಿ ಸಂಪದ್ಯುಕ್ತವಾಗುತ್ತಿತ್ತು; ಆದರೆ ಹೊರಬದುಕು ಸನ್ನಿವೇಶದ ದೆಸೆಯಿಂದ ಕೆಡುತ್ತಿತ್ತು. ಒಳಬದುಕಿನ ನೂತನತೆಗೂ ಉತ್ಸಾಹಕ್ಕೂ ಕಾಂತಿಗೂ ಪರವಶವಾಗುತ್ತಿದ್ದ ಮನಸ್ಸು ಹೊರಬದುಕಿನ ಅನಾರೋಗ್ಯ ಅನೈರ್ಮಲ್ಯ ಅಸಹ್ಯಗಳನ್ನು ಅಲಕ್ಷಿಸಿಬಿಟ್ಟಿತು. ಆತ್ಮಶ್ರೀಯ ಅನುಸಂಧಾನದಲ್ಲಿ ದೇಹಶ್ರೀ ರಿಕ್ತದಶೆಗೆ ಹೋಗುತ್ತಿದ್ದುದ್ದನ್ನು ಗಮನಿಸಲಿಲ್ಲ. ಯಾರಾದರೂ ಗಮನ ಸೆಳೆದರೂ ಲೆಕ್ಕಿಸುತ್ತಿರಲಿಲ್ಲ. ಹಿಂದಿನ ಎರಡು ವರ್ಷಗಳಲ್ಲಿ ‘ಆನಂದಮಂದಿರ’ಕ್ಕಿಂತಲೂ ಹೊಲಸಾದ ಊಟವಸತಿಗಳಲ್ಲಿದ್ದರೂ ಆಗತಾನೆ ಹಳ್ಳಿಯಿಂದ ಬಂದಿದ್ದ ಒಡಲು ಅದರ ದುಷ್ಪರಿಣಾಮಗಳನ್ನು ತಡೆದುಕೊಂಡಿತು. ಆದರೆ ಕ್ರಮೇಣ ನಾನಾ ರೀತಿಯ ಸಣ್ಣಪುಟ್ಟ ತೊಂದರೆಗಳಿಗೆ ಪಕ್ಕಾಯಿತು.

ಆರೋಗ್ಯದ ಮೂಲಭೂತವಾದ ಪ್ರಾಥಮಿಕ ಸೂತ್ರಗಳನ್ನೂ ನಾವು ಅನುಸರಿಸುತ್ತಿರಲಿಲ್ಲ. ನಾವು ಎಂದರೆ ನಮ್ಮ ಕೊಟಡಿಯ ಸಹನಿವಾಸಿಗಳು. ಎಂಟೊ ಹತ್ತೊ ಹದಿನೈದೊ ದಿನಕ್ಕೊಮ್ಮೆ ಗುಡಿಸಿದರಾಯಿತು. ನೀನು ಗುಡಿಸು, ನೀನು ಗುಡಿಸು ಎಂದು ಒಬ್ಬರಿಗೊಬ್ಬರು ಹೇಳುತ್ತಿದ್ದೆವೆ ಹೊರತು ಯಾರೂ ಆ ಕೆಲಸಕ್ಕೆ ಕೈಹಾಕುತ್ತಿರಲಿಲ್ಲ. ಧೂಳು ಕಸದ ಮೇಲೆಯೆ ಚಾಪೆ ಹಾಕಿಕೊಂಡು ಹಾಸಗೆ ಬಿಚ್ಚಿ ಮಲಗುತ್ತಿದ್ದೆವು.ಮಗ್ಗಲುಹಾಸಿಗೆ ಕೊಳಕಿನ ಮುದ್ದೆಯಾದರೂ ಓದುವುದು ಬರೆಯುವುದು ಎಲ್ಲ ಮಾಡುತ್ತಿದ್ದೆವು.   ಜೊತೆಗೆ, ನಶ್ಯಹಾಕಿ ಸಿಂಬಳ ಸುರಿದು ಎದುರು ಗೋಡೆಗೆ ಬೀಸಿ ಒಗೆಯುತ್ತಿದ್ದುದರಿಂದ ಗೋಡೆಗಳೆಲ್ಲ ನಶ್ಯ ಬೆರೆತ ಸಿಂಬಳದ ಗೊನ್ನೆ ಒಣಗಿ ಅಸಹ್ಯವೋ ಅಸಹ್ಯವಾಗಿದ್ದುವು. ಇತರರಿಗೆ, ನಮಗೆಲ್ಲ! ಸೊಳ್ಳೆ ತಿಗಣೆಗಳೊ ಹಿಂಡು ಹಿಂಡು! ಪರಿಣಾಮ-ಮಲೇರಿಯಾ ಜ್ವರ, ಕಜ್ಜಿ, ಹೊಟ್ಟೆನೋವು, ಬಾವು, ಮಲಬದ್ಧತೆ. ಒಂದೆರಡು ನಿದರ್ಶಗಳನ್ನು ಕೊಟ್ಟರೆ ಮನದಟ್ಟಾಗಬಹುದು ನಮ್ಮ ಆಗಿನ ಅವ್ಯವಸ್ಥೆ.

ಏಳೆಂಟು ಅಡಿಯ ಚೌಕದ ನಮ್ಮ ಕೊಟಡಿಗೆ ಮಣ್ಣು ಮೆತ್ತಿದ ಮರದ ಹಲಗೆಯ ಮುಚ್ಚುಗೆಯಿತ್ತು. ಅದೂ ಶಿಥಿಲವಾಗಿದ್ದುದರಿಂದ ಬೀಳದಂತೆ ರೂಮಿನ ಮಧ್ಯಕ್ಕೆ ಸರಿಯಾಗಿ ಒಂದು ಕಂತ್ರಿಕಂಭವನ್ನು ಆಪುಕೊಟ್ಟು ನಿಲ್ಲಿಸಿದ್ದರು. ಆ ಕಂಭದಲ್ಲಿಯೂ ಸೀಳುಸೀಳಾಗಿ ಬಿರುಕುಗಳಿದ್ದುವು. ಮುಚ್ಚಿಗೆಯಲ್ಲಿಯೂ ಹಲಗೆಗಳಲ್ಲಿ ಬಿರುಕುಗಳಿದ್ದುವು. ಮೊದಲೇ ಹಳೆತನದಿಂದ ಬಣ್ಣಗೆಟ್ಟಿದ್ದ ಅವು ಹೋಟಲಿನ ಪಾಕಕರ್ಮದ ಹೊಗೆಯ ದೆಸೆಯಿಂದ ಕರ‍್ರಗಾಗಿದ್ದುವು. ಆ ಬಿರುಕುಗಳಲ್ಲಿ ಸಾವಿರಾರು ತಿಗಣೆಗಳು ಮೊಟ್ಟೆ ಮರಿ ಮಾಡುತ್ತಾ ಸಂಸಾರ ಹೂಡಿದ್ದುವು. ಬಾಡಿಗೆಗೆ ಬಂದು ಇದ್ದು ಹೋದ ಎಷ್ಟು ಜನರ ರಕ್ತದ ರುಚಿ ನೋಡಿದ್ದುವೋ ಅವು? ಹಗಲು ಹುಡುಕಿದರೂ ಅವು ಕಾಣಸಿಗುತ್ತಿರಲಿಲ್ಲ. ರಾತ್ರಿ ನಾವು ಹಾಸಗೆ ಬಿಚ್ಚಿ ಮಲಗಿ ದೀಪ ಆರಿಸುವುದನ್ನೆ ಕಾಯುತ್ತಿದ್ದು ಅಡಗುದಾಣಗಳಿಂದ ಹೊರಬಿದ್ದ ತಮ್ಮ ಕೆಲಸಕ್ಕೆ ತೊಡಗುತ್ತಿದ್ದುವು. ಮೊದಮೊದಲು ನಿದ್ದೆಗಣ್ಣಿನಲ್ಲಿದ್ದ ನಾವು ಯಾಂತ್ರಿಕವಾಗಿಯೆ ಅವು ಕಚ್ಚಿದ ಜಾಗವನ್ನು ತುರಿಸಿಕೊಂಡು ಮತ್ತೊಂದು ಮಗ್ಗುಲಿಗೆ ತಿರುಗಿ ನಿದ್ದೆಹೋಗುತ್ತಿದ್ದೆವು. ಆದರೆ ಅವುಗಳ ಸಂಖ್ಯೆ ಮಿತಿಮಿರಿದಾಗ ನಮ್ಮ ಸೋಮಾರಿತನವೂ ಮೈಕೊಡವಿ ಚಟುವಟಿಕೆಗೆ ಅಣಿಯಾಗುತ್ತಿತ್ತು. ಆಗ ಯಾರಾದರೂ ಎದ್ದು ದೀಪ ಹೊತ್ತಿಸುತ್ತಿದ್ದರು. ಆದರೆ ನಾವು ಎದ್ದು ಹೊದಿಕೆಗಳನ್ನೆಲ್ಲ ಎತ್ತಿ ನೋಡುವುದರಲ್ಲಿಯೆ ಮಾಯವಾಗುತ್ತಿದ್ದುವು. ಅಪ್ಪಿತಪ್ಪಿ ಸಿಕ್ಕಿದರೆ ಒಂದೆರಡನ್ನು ತಿಕ್ಕಿ ಸಾಯಿಸುತ್ತಿದ್ದೆವು. ಅದರೆ ಮತ್ತೆ ದೀಪವಾರಿಸಿ ಮಲಗಿದರೆ ಶುರುವಾಗುತ್ತಿತ್ತು ಮುತ್ತಿಗೆ.

ಅವುಗಳನ್ನೆಲ್ಲ ತಪ್ಪಿಸಿಕೊಳ್ಳದಂತೆ ಸಾಮೂಹಿಕವಾಗಿ ಕಗ್ಗೊಲೆಮಾಡುವುದು ಹೇಗೆ ಎಂದು ನಮ್ಮನಮ್ಮಲ್ಲಿಯೆ ಮಂತ್ರಾಲೋಚನೆ ಮಾಡಿದೆವು. ಆಗ ಈಗಿರುವಂತೆ ತಿಗಣೆ ಔಷಧಿ ಪಾಲಿಪಾಡು ಇರಲಿಲ್ಲ ಅಥವಾ ಅಂಥವು ಇದ್ದರೂ ನಮಗೆ ಗೊತ್ತಿರಲೂ ಇಲ್ಲ. ರಾತ್ರಿ ಮಲಗಿದಾಗ ಹಾಸಗೆಯಲ್ಲಿ ನಮ್ಮ ರಕ್ತ ಹೀರುತ್ತಿದ್ದುದೇನೊ ನಮ್ಮ ರೀತಿ ಹೆಚ್ಚಿತು ಎಂದರೆ, ಕ್ಲಾಸಿನಲ್ಲಿ ಕೂತಿದ್ದರೆ ಕುತ್ತಿಗೆಯ ಮೇಲೆ ಕೋಟಿನ ಒಳಗಿಂದ ಹರಿದು ಬಂದುದನ್ನು ಹಿಂದಿನ ಬೆಂಚಿನವನು ತೋರಿಸಿ ನಕ್ಕಾಗ ರಕ್ತನಷ್ಟಕ್ಕಿಂತಲೂ ಹೆಚ್ಚಾಗಿ ಆಗುತ್ತಿತ್ತು ಮಾನನಷ್ಟ! ಅಲ್ಲಿ ಆ ಪಾಪಿಯನ್ನು ಹಿಸುಗಿ ಕೊಲ್ಲುವಂತೆಯೂ ಇಲ್ಲ. ಹಿಸುಗಿದರೆ ಸಹಿಸಲಾರದ ಯಮನಾತವಾಗಿ ಸುತ್ತಮುತ್ತಣದ ಹುಡುಗರ ಅಸಹ್ಯಕ್ಕೆ ಕಾರಣವಾಗಿ ಅವರಿಂದ ಮೂದಲೆಗೂ ತಿರಸ್ಕಾರಕ್ಕೂ ಪಕ್ಕಾಗಬೇಕಾಗುತ್ತಿತ್ತು. ಪಕ್ಕದಲ್ಲಿ ಕೂತಿದ್ದವರು ಎದ್ದು ಬಿದ್ದು ಬೇರೆ ಬೆಂಚುಗಳಿಗೆ ಧಾವಿಸಿದಾಗ ಉಪಧ್ಯಾಯರೇನಾದರೂ ನೋಡಿ ಕೇಳಿಬಿಟ್ಟರೆ ನಮಗೆ ಆಗುತ್ತಿದ್ದ ಅವಮಾನ ಅಷ್ಟಿಷ್ಟಲ್ಲ! ಈ ರಕ್ತಹಾನಿ, ಮಾನಹಾನಿ, ನಿದ್ರಹಾನಿ ಎಲ್ಲರಿಂದಲೂ ಪಾರಾಗುವ ಉಪಾಯ ಒಂದನ್ನು ಹುಡುಕಿದೆವು, ಅವುಗಳ ಸಾಮೂಹಿಕ ಕಗ್ಗೊಲೆಗೆ!

ಒಂದು ರಾತ್ರಿ ಹೊಸದಾಗಿ ಕಲಿತಿದ್ದ ಇಸ್ಪೀಟು ಆಟದಲ್ಲಿ ಬಹಳ ಹೊತ್ತು ಕಳೆದು, ಮಧ್ಯರಾತ್ರಿಯಾಗಿ ಎಷ್ಟೋ ಹೊತ್ತಾದ ಮೇಲೆ ಮಲಗಿದ್ದೆವು. ದೀಪ ಇರುವವರೆಗೂ ಹೊರಗೆ ಬರಲಾಗದಿದ್ದ ಅವಕ್ಕೆ ನಮ್ಮ ಇಸ್ಪೀಟು ಆಟವನ್ನು ಕಂಡು ಬಲು ರೇಗಿತ್ತೆಂದು ತೋರುತ್ತದೆ. ಪಾಪ! ಅವಾದರೂ ಹಸಿದುಕೊಂಡು ಎಷ್ಟು ಹೊತ್ತು ತಾನೆ ಕಾಯಲು ಸಾಧ್ಯ?

ನಾವು ಮಲಗಿ, ದೀಪ ಆರಿ, ಕತ್ತಲೆ ಕೋಣೆಯನ್ನೆಲ್ಲ ತುಂಬಿತೊ ಇಲ್ಲವೊ ಹಸಿದು ರೇಗಿದ್ದ ಅವಕ್ಕೆ ತಾಳ್ಮೆ ತಪ್ಪಿ, ಪ್ರಾಣಿಸಹಜವಾದ ಆತ್ಮರಕ್ಷಣೆಯ ವಿವೇಕವನ್ನೂ ಧಿಕ್ಕರಿಸಿ, ನಿಧಾನವಾಗಿ ಗೋಡೆಗಳ ಮೇಲಿಂದ ಮತ್ತು ಕೋಣೆಯ ನಡುವಿದ್ದ ಕಂತ್ರಿ ಕಂಬದ ಮೇಲಿಂದ ಹರಿದು ಬರುವ ತಡವಾಗುವಿಕೆಯನ್ನು ಸಹಿಸದೆ ತಿರಸ್ಕರಿಸಿ, ಮುಚ್ಚಿಗೆಯಿಂದ ಕೈಕಾಲು ಬಿಟ್ಟು ನೇರವಾಗಿ ಹಾಸಗೆಗೆ ಧುಮುಕಿಬಿಟ್ಟವು! “ಬೀಳುತ್ತಾ ಇವೆಯೋ, ಹಾಳು ಮುಂಡೇವು!” ಎಂದನು ಪಕ್ಕದಲ್ಲಿದ್ದ ರಾಮಪ್ಪ. “ಸುಮ್ಮನಿರೊ ಎಲ್ಲ ಬೀಳಲಿ” ಎಂದ ಇನ್ನೊಬ್ಬ ರಾಮಪ್ಪ. ರಾತ್ರಿ ಬಹಳ ಹೊತ್ತಾಗಿ ಕಣ್ಣಿನಮೇಲೆ ನಿದ್ದೆ ಭಾರವಾಗಿದ್ದ ನನಗೆ “ರಕ್ತ ಕುಡಿದರೆ ಕುಡಿದುಕೊಂಡು ಹೋಗಲಿ. ನಾಳೆ ಸ್ವಲ್ಪ ಮುಂಚೆಯ ಮಲಗಿ ಷಿಕಾರಿ ಮಾಡಿದರಾಯ್ತು!” ಎಂಬ ಮನಸ್ಸು. ಅಷ್ಟರಲ್ಲಿ ರಾಮಪ್ಪ ದಿ ಫಸ್ಟ್ ಪಿಸುದನಿಯಲ್ಲಿಯೆ ಅರಚಿದ. “ಕಚ್ತಾ ಇವೆಯಲ್ಲೋ ಶನಿಗಳು. ಬೇಗ ದೀಪ ಹಚ್ಚೊ” “ಕಚ್ಚಿದರೆ ಕಚ್ಚಲೋ. ಸ್ವಲ್ಪ ಸಹಿಸಿಕೊಳ್ಳೋ ಎಲ್ಲ ಜಮಾಯಿಸಲಿ. ಒಂದೇ ಏಟಿಗೆ ಧ್ವಂಸ ಮಾಡೋಣ!” ಎಂದನು ರಾಮಪ್ಪ ದಿ ಸೆಕೆಂಡ್. ನನಗೂ ಶುರುವಾಯ್ತು ಕಡಿತ! ನಿದ್ದೆ ಓಡಿಹೋಯ್ತು. ಎಚ್ಚರಿಕೆ ಹೆಳಿ, ದಡಬಡನೆ ಎದ್ದು ದೀಪ ಹಚ್ಚಿಯೆಬಿಟ್ಟೆ!

ಹೊದಿಕೆ ಮಗುಚಿ ನೋಡುತ್ತೇವೆ, ತೋಳ ಎರಗಿದ ಕುರಿಹಿಂಡು ಬಯಲಿನಲ್ಲಿ ದಿಕ್ಕಾಪಾಲು ಓಡುವಂತೆ ತಿಗಣೆದಂಡು ಕೊಳಕು ಬಿಳಿಯ ಬೆಡ್ ಷೀಟುಗಳ ಮೇಲೆ(ಬೆಡ್ಷೀಟುಗಳೆಂದರೆ ನಾವು ಕ್ಲಾಸಿಗೆ ಸುತ್ತಿಕೊಂಡು ಹೋಗುತ್ತಿದ್ದ ಪಂಚೆಗಳೆ. ಆಗ ಷರಾಯಿ ಹಾಕುತ್ತಿರಲಿಲ್ಲ. ಆ ಪಂಚೆಗಳು ಕ್ಲಾಸಿಗೆ ಉಟ್ಟುಕೊಂಡು ಹೋಗಲಾರದಷ್ಟು ಕೊಳೆಯಾದೊಡನೆ ಅವನ್ನು ಬೆಡ್ ಷೀಟಾಗಿ ಮಾಡಿಕೊಳ್ಳುತ್ತಿದ್ದೆವು. ಡೋಬಿಗೇನು ಬಿಟ್ಟಿ ದುಡ್ಡು ಕೊಡುತ್ತಿದ್ದೆವೇನು? ಕೊಟ್ಟು ದುಡ್ಡಿಗೆ ಅವನಿಂದ ಸರಿಯಾದ ಕೆಲಸ ತೆಗೆದುಕೊಳ್ಳದಷ್ಟು ದಡ್ಡರಲ್ಲ ನಾವು! ಆ ಕೊಳಕು ಪಂಚೆ ಬೆಡ್ ಷೀಟಾಗಿ ಚೆನ್ನಾಗಿ ಕೊಳೆಯಾದ ಮೇಲೆ, ನಮಗೂ ಅಸಹ್ಯವಾಗುವಷ್ಟು ಕೊಳೆಯಾದಮೇಲೆ, ಅದನ್ನು ವಾಷಿಂಗ್ ಸೆಲೂನ್ ಗೆ ಒಯ್ಯುತ್ತಿದ್ದೆವು. ಅಗಸಗೇನು ಹಕ್ಕು ಅಸಹ್ಯಪಟ್ಟುಕೊಳ್ಳವುದಕ್ಕೆ?) ಕಿಕ್ಕಿರಿದು ಧಾವಿಸುತ್ತಿವೆ! ಸರಿ, ಮೂವರೂ ಆರು ಕೈಗಳಿಂದಲೂ ಅವನ್ನು ಹಾಸಗೆಯ ಮಧ್ಯರಂಗಕ್ಕೆ ಗುಡಿಸಿಗುಡಿಸಿ ಒಟ್ಟುಮಾಡಿದೆವು. ಒಬ್ಬೊಬ್ಬರೂ ಸಾಧ್ಯವಾದಷ್ಟು ನಮ್ಮ ಭಾರವನ್ನೆಲ್ಲ ಪ್ರಯೋಗಿಸಿ ಆರು ಅಂಗೈಗಳಿಂದಲೂ ತಿಕ್ಕಿದೆವು, ತೀಡಿದೆವು, ಒತ್ತಿದೆವು, ಒರಸಿದೆವು, ಕ್ರಿಯಾ ಪದಗಳೆ ಸಾಲದೆ ಸೋಲುವಂತೆ ಕೆಲಸ ಮಾಡಿದೆವು. ಮಗ್ಗಲು ಹಾಸಗೆಯೆಲ್ಲಾ ರಂಪ! ಕೆಂಪುರಕ್ತ, ಕರಿರಕ್ತ, ಕಡುನೀಲಿ ರಕ್ತ! ನಾನಾ ವಕ್ರ ವಿನ್ಯಾಸಗಳಲ್ಲಿ! ತಿಗಣೆಯ ದುರ್ವಾಸನೆ ನಮಗೆ ಸುಪರಿಚಿತ ವಾಗಿದ್ದರಿಂದ ನಾವೇನು ಅದಕ್ಕೆ ಜಗ್ಗಲಿಲ್ಲ. ಅಂಗೈಗಳಿಗೆ ತಿಗಣೆಯ ನೆತ್ತರು ಮೆತ್ತಿ ಬಣ್ಣಕ್ಕೆ ತಿರುಗಿ ಅಸಹ್ಯವಾಗಿದ್ದರೂ ಮೂಗಿನ ಹತ್ತಿರಕ್ಕೆ ಅದನ್ನು ಹಿಡಿದು ಥೂ ಥೂ ಎಂದು ಜುಗುಪ್ಸೆ ಪಟ್ಟಕೊಳ್ಳುವಷ್ಟು ನೈರ್ಮಲ್ಯಭಾವನೆಯನ್ನು ಪ್ರದರ್ಶಿಸಿದರೂ ಯಾರೂ ಕೆಳಕ್ಕಿಳಿದು ಹೋಗಿ ನಲ್ಲಿಯ ನೀರಿನಲ್ಲಿ ಕೈ ತೊಳೆಯುವಷ್ಟು ನಾಗರಿಕತೆಗೆ ಶರಣಾಗುವ ಗೋಜಿಗೆ ಹೋಗದೆ, ಹಾಗೆಯೆ ದೀಪ ಆರಿಸಿ ಮಲಗಿಯೆಬಿಟ್ಟೆವು!

* * *

‘ಮೂಗೊಸ್ತ್ರ’ ‘ಮೂಗೊಸ್ತ್ರ’ ಎನ್ನುತ್ತದ್ದೆವು ನಾವು ನಮ್ಮತ್ತ ಕಡೆಯ ಮಾತಿನಲ್ಲಿ. ‘ಅಂಗವಸ್ತ್ರ’ ಎನ್ನುವುದು ‘ಅಂಗೊಸ್ತ್ರ’ ಆದಂತೆ ‘ಮೂಗುವಸ್ತ್ರ’ ಎನ್ನುವುದು ‘ಮೂಗೊಸ್ತ್ರ’ವಾಗಿತ್ತು, ಸಿಂಬಳ ಸುರಿಯುವುದಕ್ಕೇ ಅದು ಉಪಯುಕ್ತ ಎಂಬ ಅರ್ಥದಲ್ಲಿ. ನಾಗರಿಕರಾಗಿ ಸಾಹಿತ್ಯದ ಭಾಷೆ ಉಪಯೋಗಿಸುವವರು ‘ಕರವಸ್ತ್ರ’ ಎಂದರು. ಇಂಗ್ಲಿಷ್ ಭಾಷೆ ಪ್ರಚಿಲಿತವಾದ ಮೇಲೆ ‘ಹ್ಯಾಂಡ್ ಕರ್ಚೀಫ್’ ಆಯಿತು. ಕಡೆಗೆ ಅದೇ ‘ಮಿನಿ’ ಆಗಿ ‘ಕರ್ಚೀಪು’ ಆಯಿತು. ಆದರೆ, ನಮ್ಮಮಟ್ಟಿಗೆ, ಹೆಸರು ಬದಲಾಯಿಸಿದರೂ ಅದರ ಕರ್ತವ್ಯ ಬದಲಾಗಲಿಲ್ಲ. ಅದರ ಕೆಲಸ ಮೂಗಿನ ಮಟ್ಟಿಗೇ ಸೀಮಿತವಾಗಿ ‘ಮೂಗೊಸ್ತ್ರ’ವೇ ಆಗಿ ಉಳಿದಿತ್ತು.

ಪ್ರಾಥಮಿಕ ಶಾಲೆಯ ಕಾಲದಿಂದಲೆ ಇತರ ಸಂಗಡಿಗರೊಂದಿಗೆ ನಾನೂ ನಶ್ಯಾಭ್ಯಾಸ ಮಾಡಿದ್ದೆ. ಮೊದಲು ಆ ಅಭ್ಯಾಸ ಪ್ರಾರಂಭಿಸಿದ್ದು ಅದರ ರುಚಿಗಾಗಿ ಅಲ್ಲ, ಷೋಕಿಗಾಗಿ. ಕುಪ್ಪಳಿ ಮನೆಯ ಉಪ್ಪರಿಗೆಯ ಐಗಳ ಮಠದ ವಿದ್ಯಾರ್ಥಿಯಾಗಿದ್ದಲೆ ಅಜ್ಜಯ್ಯನ ಮಡ್ಡಿನಶ್ಯದ ಕೋಡಿನ ಡಬ್ಬಿಯಿಂದ ಚುಟಿಕೆಗಳನ್ನು ಕದಿಯುತ್ತಿದ್ದೆವು. ದೊಡ್ಡ ಚಿಕ್ಕಪ್ಪಯ್ಯನ, ನೋಡುವುದಕ್ಕೆ ಚೆನ್ನಾಗಿ ಹೊಳೆಯುತ್ತಿದ್ದ, ಬಣ್ಣದ ಪುಟ್ಟ ಶೀಶೇಯನ್ನು ಕದ್ದು, ಬೆಳ್ಳಿಯ ಅಂತ್ರದ ಅಂಡೆಯಲ್ಲಿದ್ದ ತಾಯಿತಿಯ ಮಂತ್ರಲಿಪಿಯನ್ನು ತೆಗೆದೆಸೆದು ಖಾಲಿಮಾಡಿ, ಅದಕ್ಕೆ ಆ ಪುಡಿನಶ್ಯವನ್ನು ತುಂಬಿ, ಗುಟ್ಟಾಗಿ ಸೇಯುತ್ತಿದ್ದೆವು. ತೀರ್ಥಹಳ್ಳಿಗೆ ಓದುವುದಕ್ಕೆ ಬಂದ ಮೇಲೆ ಪೇಟೆಯಲ್ಲಿ ನಮ್ಮ ಬಾಲನೇತ್ರಗಳಿಗೆ ಮೋಹಕವಾಗಿ ಕಾಣುತ್ತಿದ್ದ ‘ನಶ್ಯದ ಡಬ್ಬಿ’ಯ ಹೆಸರಿನ ಚಿಕ್ಕ ಶೀಸೆಗಳನ್ನು ನಾವು ಇತರ ದೊಡ್ಡವರಂತೆ ಇಟ್ಟುಕೊಳ್ಳಬೇಕೆಂಬ ಚಪಲತೆಯಿಂದಲೆ ಅವನ್ನು ಕೊಂಡು, ಸುಮ್ಮನೆ ಇಟ್ಟುಕೊಂಡರೆ ಏನು ಬಂದ ಹಾಗಾಯಿತು ಎಂದ ಅವಕ್ಕೆ ನಶ್ಯ ತುಂಬಿದೆವು. ಹೀಗಾಗಿ ಬರಬರುತ್ತಾ ಬಿಡಲಾರದ ಚಟವಾಗಿಬಿಟ್ಟಿತ್ತು, ನಶ್ಯ!

ಮೈಸೂರಿಗೆ ಬಂದ ಮೇಲೆ ಮಂಗಳೂರಿನ ಕೆಂಪು ನಶ್ಯಕ್ಕೆ ಬದಲಾಗಿ ‘ಮದರಾಸು ನಶ್ಯ’ ಎಂದು ಸಂಗಾತಿಗಳು ಕರೆಯುತ್ತಿದ್ದ ಕರಿ ನಶ್ಯ ಸೇಯತೊಡಗಿದೆವು. ಹಳ್ಳಿಯಲ್ಲಿ ಮತ್ತು ತೀರ್ಥಹಳ್ಳಿಯಲ್ಲಿ ‘ಮೂಗೊಸ್ತ್ರ’ದ ಅವಶ್ಯಕತೆ ಅಷ್ಟಾಗಿ ಇರಲಿಲ್ಲ. ನಶ್ಯಹಾಕಿ ಸಿಂಬಳ ಸುರಿದು ಗೋಡೇಗೋ ಮರಕ್ಕೋ ಅನಿವಾರ್ಯವಾದರೆ ಉಟ್ಟ ಪಂಚೆಯ ಹೊರಗೆ ಕಾಣದಿದ್ದ ಮಡಿಕೆಯ ಒಳಭಾಗಕ್ಕೋ ಒರಸುತ್ತಿದ್ದೆವು. ಒಮ್ಮೊಮ್ಮೆ ಯಾವನಾದರೊಬ್ಬ ಬೆಪ್ಪುಗೆಳೆಯನ ಬೆನ್ನಿನ ಮೇಲೆ ಕೈಯಿಟ್ಟು ಸ್ನೇಹಪ್ರದರ್ಶನ ಮಾಡುವ ನೆಪದಿಂದ ಸುರಿದ ಸಿಂಬಳದ ಅವಶೇಷವಿದ್ದ ಕೈಬೆರಳುಗಳನ್ನು ಶುಚಿಗೊಳಿಸುತ್ತಿದ್ದುದೂ ಉಂಟು! ಆದರೆ ಮೈಸೂರಿಗೆ ಬಂದಮೇಲೆ ಜೇಬಿನಲ್ಲಿ ‘ಕರ್ಚೀಪು’ ಇಡುವ ಅಬ್ಯಾಸ ಕೈಕೊಂಡೆವು, ಕಾಲಿಗೆ ಮೆಟ್ಟುಹಾಕಲು ಕಲಿತಂತೆ.

ಆದರೆ ಆ ಅಂಗೈ ಅಗಲದ ‘ಕರ್ಚೀಪು’ ಎಲ್ಲಿ ಸಾಲುತ್ತದೆ, ಮದರಾಸು ನಶ್ಯ ಹಾಕಿದ ಮೂಗಿನ ಸಿಂಬಳ ಭರಿಸುವುದಕ್ಕೆ? ಅದರಲ್ಲಿಯೂ ಕರಿನಶ್ಯದ ಕರಿಸಿಂಬಳ! ‘ಕರ್ಚೀಪು’ ಒಂದೆರಡು ಗಂಟೆಗಳಲ್ಲಿಯೆ ಹುಡುಕಿದರೂ ಬಿಳಿಯ ಖಾಲಿ ಜಾಗ ಸಿಗದಷ್ಟು ತುಂಬಿಹೋಗಿ ಮೂಗಿಗೂ ಅಸಹ್ಯವಾಗುವಂತೆ ಲೋಳಿಗರೆಯುತ್ತಿತ್ತು. ಆದ್ದರಿಂದ ಕರ್ಚೀಪಿನ ಉಪಯೋಗವನ್ನು ಸ್ಕೂಲಿಗೆ ಹೋದಾಗ ಕ್ಲಾಸಿನ ಸಮಯಕ್ಕೆ ಮಾತ್ರ ಸೀಮಿತಗೊಳಿಸಿಬೇಕಾಯಿತು. ರೂಮಿನಲ್ಲಿದ್ದಾಗ ‘ಮೂಗೊಸ್ತ್ರ’ದ ಗೋಜಿಗೆ ಹೋಗುತ್ತಿರಲಿಲ್ಲ.

ಉಟ್ಟ ಪಂಚೆ ಮಾಸಿದ ಮೇಲೆ ಬೆಡ್ ಷೀಟಾಗುತ್ತಿತ್ತು ಎಂದು ಹಿಂದೆಯೆ ಹೇಳಿದೆಯಷ್ಟೆ. ಬೆಡ್ ಷೀಟು ಮತ್ತೂ ಕೊಳೆಯಾಗಿ ತಿಗಣೆಯ ರಕ್ತ ಕಜ್ಜಿಕಲೆ ಇತ್ಯಾದಿಗಳಿಂದ ಮತ್ತೂ ಚೆನ್ನಾಗಿ ಗಲೀಜಾದ ಮೇಲೆ ಅದನ್ನು ತೆಗೆದು ನಮ್ಮ ನಮ್ಮ ಹಾಸಿಗೆಯ ಸುರುಳಿಯ ಪಕ್ಕದಲ್ಲಿಡುತ್ತಿದ್ದೆವು, ನಶ್ಯ ಹಾಕಿದ ಮೇಲೆ ಸಿಂಬಳ ಸುರಿಯುವುದಕ್ಕೆ! ಅದೂ ಸುಮಾರು ಒಂದು ವಾರದಷ್ಟಕ್ಕೆ ಒದಗುತ್ತಿತ್ತು. ಇನ್ನು ಸಾಧ್ಯವಿಲ್ಲ ಉಪಯೋಗಿಸುವುದಕ್ಕೆ ಎನ್ನುವಷ್ಟರ ಮಟ್ಟಿಗೆ ಕೊಕ್ಕೊಕ್‌ಒಳೆಯಾದಾಗ, ಅದನ್ನು ತಿಕ್ಕಿ ಗೋಡೆಗೆ ಬಡಿದು, ಒಣಗಿದ್ದು ನಶ್ಯದ ಧೂಳನ್ನೆಲ್ಲ ಕೊಡವಿ ಸೆಲೂನಿಗೆ ಒಗೆಯಲು ಹಾಕುತ್ತಿದ್ದೆವು. ಆಗ, ಇನ್ನೊಂದು ಬೆಡ್ ಷೀಟು ತನ್ನ ಹೊಸ ಕರ್ತವ್ಯಕ್ಕೆ ಹಾಜರಾಗುವ ಮುನ್ನಿನ ಕಾಲದ ಅವಧಿಯಲ್ಲಿ ಸುರಿದ ಸಿಂಬಳಕ್ಕೆ ಎದುರಿನ ಗೋಡೆಯೆ ಗುರಿಯಾಗುತ್ತಿತ್ತು. ಗೋಡೆ ನಶ್ಯಗೂಡಿದ ಕರಿಗೊನ್ನೆಯಿಂದ ಕಲೆಕಲೆಕಲೆಯಾಗಿ ಒಣಗುತ್ತಿತ್ತು. ನಶ್ಯದ ಗೊನ್ನೆ ಗೋಡೆಗೆ ತಗುಲಿ ಒಮ್ಮೊಮ್ಮೆ ಕೆಲವು ಪ್ರಾಣಿಯ ಹಕ್ಕಿಯ ಮನುಷ್ಯರ  ಆಕಾರಗಳೂ ಸಂಭವಿಸುತ್ತಿದ್ದುವು. ಆಗ ನಾವು ಚಿತ್ರಭಿತ್ತಿಯ ಕಲಾಕೌಶಲ್ಯವನ್ನು ಟೀಕಿಸುತ್ತಾ ಪ್ರಶಂಸಿಸುತ್ತಾ ನಗೆಯ ಕೋಲಾಹಲ ಎಬ್ಬಿಸುತ್ತಿದ್ದುದೂ ಉಂಟು. ಆ ಗೋಡೆಯನ್ನು ಶುಚಿಗೊಳಿಸುವ ಗೋಜಿಗೆ ನಾವು ಹೋಗುತ್ತಲೂ ಇರಲಿಲ್ಲ. ಬೇಸಗೆ ರಜಕ್ಕೆ ನಾವು ಊರಿಗೆ ಹೋದಮೇಲೆ ಅದನ್ನೆಲ್ಲ ಮನೆಯ ಮಾಲೀಕರು ತಮ್ಮ ಕರ್ತವ್ಯಾಂಗವಾಗಿ ಶುಚಿಗೊಳಿಸುತ್ತಾರಷ್ಟೆ! ನಾವು ಬಾಡಿಗೆ ದುಡ್ಡು ಕೊಡುವುದೇನು ಬಿಟ್ಟಿಯೆ? ನಾವೇಕೆ ಅವರ ಕೆಲಸ ಮಾಡಬೇಕು?

ದಸರಾ ರಜಾ ಪ್ರಾರಂಭವಾಗಿತ್ತು. ದಸರಾ ನೋಡಬೇಕೆಂದು ನಾವು ಯಾರೂ ಊರಿಗೆ ಹೊರಡಲಿಲ್ಲ ಆ ವರ್ಷ. ಮತ್ತೂ ಒಂದು ಕಾರಣವಿತ್ತು. ದೊಡ್ಡ ಚಿಕ್ಕಪ್ಪಯ್ಯ ಕುಪ್ಪಳಿ ರಾಮಣ್ಣಗೌಡರು ಮತ್ತು ಹೊಸಮನೆ ಮಂಜಪ್ಪಗೌಡರು ಕೆಲವರೊಡನೆ ದಸರಾಕ್ಕೆ ಬರಬಹುದು ಎಂದು ಹಿಂದೆಯೆ ಕಾಗದ ಬಂದಿತ್ತು. ಆದರೆ ಯಾವಾಗ ಬರುತ್ತಾರೆ ಎಂಬುದಾಗಲಿ, ಕಡೆಗೆ ಬರುವುದು ನಿಶ್ಚಯವೆ ಎಂದಾಗಲಿ ಖಾತ್ರಿಯಾಗಿರಲಿಲ್ಲ.

ಒಂದು ದಿನ ಬೆಳಿಗ್ಗೆ ನಾವಿನ್ನೂ ರೂಮಿನ ಬಾಗಿಲು ಅಗಣಿ ಹಾಕಿಕೊಂಡು ಮಲಗಿಯೆ ಇದ್ದೆವು. ಯಾರೊ ಬಾಗಿಲು ತಟ್ಟಿದ ಸದ್ದಾಯಿತು. ನಾವು ಮಲಗಿದ್ದಲ್ಲಿಂದಲೆ ಜೋರುಮಾಡಿದೆವು “ಯಾರ್ರೀ ಯಾಕ್ರೀ ಇಷ್ಟು ಬೇಗ ಬಂದು ಬಾಗಿಲು ಗುದ್ದುತ್ತೀರಿ?” ಎಂದು. “ ಯಾರೋ ನಿಮ್ಮ ಕಡೆಯುವರಂತೆ ಬಂದಿದ್ದಾರೆ. ಕೆಳಗೆ ಹೋಟಲಿನ ಆಫೀಸಿನಲ್ಲಿ ಕೂತಿದ್ದಾರೆ” ಎಂದಿತು ಆ ಧ್ವನಿ. ನಾವು ದಡಬಡನೆ ಎದ್ದೆವು. ಹೊಸಮನೆ ರಾಮಪ್ಪ ಕೆಳಗಿಳಿದು ಹೋದವನೆ ಮತ್ತೆ ಓಡಿ ಬಂದು “ ನಮ್ಮ ಅಣ್ಣಯ್ಯ ನಿಮ್ಮ ದೊಡ್ಡ ಚಿಕ್ಕಪ್ಪಯ್ಯ ಬಂದಿದ್ದಾರೆ! ಕೆಟ್ಟಿತು ಕೆಲಸ, ಅವರೆಲ್ಲಿಯಾದರೂ ರೂಮಿಗೆ ಬಂದರೆ! ” ಎಂದವನೆ ಗೋವಿನಹಳ್ಳಿ ರಾಮಪ್ಪಗೆ ಹೇಳಿದ “ನೀನು ಹೋಗಿ  ಅವರಿಗೆ ಮುಖಗಿಖ ತೊಳೆದುಕೊಳ್ಳಲು ನೀರುಮನೆ ತೋರಿಸಿ, ಅಲ್ಲಿಯೆ ಕಾಫಿ ತಿಂಡಿ ತೆಗೆದುಕೊಳ್ಳುವಂತೆ ಏರ್ಪಡಿಸು. ಅಷ್ಟರಲ್ಲಿ ನಾವು ರೂಮನ್ನು ಗುಡಿಸಿ, ಗೋಡೆ ಕೆರೆದು, ಚೊಕ್ಕಟ ಮಾಡುತ್ತೇವೆ” ಎಂದು ಅವನನ್ನು ಎಬ್ಬಿದ ಕೆಳಕ್ಕೆ.

ಒಡನೆಯ ಬಾಗಿಲು ಮುಚ್ಚಿ ಅಗಣಿ ಹಾಕಿದ, ನಮ್ಮ ಕೆಲಸ ಮುಗಿಯುವುದರೊಳಗೆ ಅವರು ಒಳಗೆ ಬರದಿರಲಿ ಎಂದು. ಒಂದು ಪೊರಕೆ ತೆಗೆದುಕೊಂಡು ಅದರ ಹಿಡಿಯ ಹಿಂಭಾಗದಿಂದ ಗೋಡೆಗಳನ್ನೆಲ್ಲ ಕೀಸಿ ನಶ್ಯದ ಕಲೆಗಳನ್ನೆಲ್ಲ  ಕರೆದು ಹಾಕಿದ. ಘಾಟಿನ ಧೂಳು ರೂಮನ್ನೆಲ್ಲ ತುಂಬಿತು. ಆ ರೂಮಿಗೆ ಬಾಗಿಲೇ ಕಿಟಕಿಯೂ ಆಗಿತ್ತು. ಮತ್ತೆ ಹಾಸಗೆ ಚಾಪೆ ಎಲ್ಲ ಕೊಡವಿ ರೂಮನ್ನು ಗುಡಿಸಿದೆವು, ಸೀನಿನ ಮೇಲೆ ಸೀನುತ್ತಾ! ಮೂಲೆಯಲ್ಲಿದ್ದ ಒಂದು ಅಕ್ಷರಶ: ಗವಾಕ್ಷದ  ಬಿಗಿಗೊಂಡಿದ್ದ ರೆಕ್ಕೆಬಾಗಿಲುಗಳನ್ನೂ ಬಲಾತ್ಕಾರವಾಗಿ ಮಿಟಿ ತೆಗೆದೆವು; ಧಳು ಹೋಗುವಂತೆ ತುಸುವಾದರೂ ಗಾಳಿ ಬರಲಿ ಎಂದು. ಅಂತೂ ‘ಬಿಟ್ಸ್’ ವೇಗದಲ್ಲಿ ನಮ್ಮ ವೇಗದಲ್ಲಿ ನಮ್ಮ ಗಲೀಜು ಬಾಳು ಗೊತ್ತಾಗುದಂತೆ ನಿರ್ಮಲೀಕರಣವನ್ನು ಕೈಕೊಂಡು, ತಕ್ಕಷ್ಟು ಸಾಧಿಸಿ ಬಾಗಿಲು ಅಗಣಿ ತೆಗೆದು, ಅತಿಥಿಗಳನ್ನು ಸ್ವಾಗತಿಸಲು ಸಿದ್ದರಾದೆವು, ಸದ್ಯಕ್ಕೆ ಗೆದ್ದೆವು ಎಂದುಕೊಂಡು!