ಮೈಸೂರಿಗೆ ಬರುವವರೆಗೆ ನನ್ನಲ್ಲಿ ಯಾವ ಖಚಿತವಾದ ರಾಜಕೀಯ ಪ್ರಜ್ಞೆಯೂ ಎಚ್ಚರಲಿಲ್ಲ. ಇಂಗ್ಲೆಂಡಿಗೂ ಜರ್ಮನಿಗೂ ನಡೆದ ಮೊದಲನೆಯ ಮಹಾಯುದ್ಧ ಸಮಯದಲ್ಲಿ ನಾನು ತೀರ್ಥಹಳ್ಳಿಯಲ್ಲಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗ, ಅಧಿಕೃತ ಸಭೆ ಸಮಾರಂಭಗಳಲ್ಲಿ ಚಕ್ರವರ್ತಿಯ ಪರವಾಗಿ ಎಲ್ಲರೂ ಕೂಗುತ್ತಿದ್ದ ಘೋಷಣೆಗಳಲ್ಲಿ ಯಾಂತ್ರಿಕವಾಗಿ ಭಾಗವಹಿಸಿ ಕೂಗುತ್ತಿದ್ದರೂ, ಯುದ್ಧದಲ್ಲಿ ಇಂಗ್ಲೆಂಡಿನ ಸಹಾಯಾರ್ಥವಾಗಿ ಹಣ ಸಂಗ್ರಹಿಸಲು ನಮ್ಮ ಶಾಲೆ ಏರ್ಪಡಿಸಿದ್ದ ಷೇಕ್ಸ್ ಪೀಯರನ ಮರ್ಚೆಂಟ್ ಆಫ್ ವೆನಿಸ್ ನಾಟಕದಲ್ಲಿ ಜೈಲಾಕ್ ಪಾತ್ರ ವಹಿಸಿದ್ದರೂ, ನನ್ನಂತಹ ಬಾಲಕರ ನಿಜ ಮನಸ್ಸು ಗೋಲಿಯಾಟದ ಸ್ಪರ್ದೆಗಳಲ್ಲಿ ಅಥವಾ ಪೆಟ್ಲುಗಳನ್ನು ಹಿಡಿದು, (ಅವುಗಳನ್ನೆ ಕೋವಿಗಳೆಂದು ನಟಿಸಿ,) ಎರಡು ಗುಂಪುಗಳಾಗಿ ಯುದ್ಧಲೀಲೆಯಲ್ಲಿ ತೊಡುಗುತ್ತಿದ್ದಾಗ ಬಯಲಾಗುತ್ತಿತ್ತು. ಆಗ ನಮ್ಮ  ಪ್ರಶಂಸೆಯ ಘೋಷಣೆಗಳೆಲ್ಲ ಜರ್ಮನಿಯ ಪರವಾಗಿರುತ್ತಿತ್ತು. ಯಾವನಾದರೊಬ್ಬನ ಗೋಲಿ ಎದುರಾಳಿಯ ಗೋಲಿಗೆ ಬಲವಾಗಿ ತಗುಲಿ ಅದನ್ನು ಬಹುದೂರಕ್ಕೆ ಒಗೆಯಿತೆಂದರೆ ‘ಬಿತ್ತು ಜರ್ಮನ್ ಏಟು! ಎಮ್ ಡನ್ ಹೊಡೆತ’ ಎಂದು ಕೈಚಪ್ಪಾಳೆಯ ಮತ್ತು ಕೇಕೆಯ ಸದ್ದು ಭೋರ್ಗರೆಯುತ್ತಿತ್ತು. ಹೇಗೋ ಯಾವುದೊ ಒಂದು ರೀತಿಯಿಂದ ಆಗ ಭರತಖಂಡದಲ್ಲಿ ಪ್ರಾರಂಭವಾಗಿದ್ದ ಸ್ವಾತಂತ್ರ್ಯ ಸಂಗ್ರಾಮದ ಬಿಸುಪು ಮಲೆನಾಡಿನ ಮಕ್ಕಳ ಪುಟ್ಟ ಎದೆಗಳಿಗೂ ತಾಗಿತ್ತು. ಆದರೆ ಆ ಬಿಸುಪು ಬೆಳಕಿನ ಮಟ್ಟಕ್ಕೆ ಏರಿರಲಿಲ್ಲ. ಮೈಸೂರಿಗೆ ಬಂದಮೇಲೆ ಸಾರ್ವಜನಿಕ ಜೀವನದ ಸಂಪರ್ಕದಿಂದಲೂ ಆ ರೀತಿಯ ಪ್ರಜ್ಞೆಯಲ್ಲಿ ಹಳ್ಳಿಯಿಂದ ಬಂದ ನಮಗಿಂತಲೂ ಮುಂದಿದ್ದ ಬಾಲಕ ಸ್ನೇಹಿತರ ಸಂಗಮಹಿಮೆಯಿಂದಲೂ ರಾಜವಾಳುತ್ತಿದ್ದ ದೇಶೀಯ  ಸಂಸ್ಥಾನವಾಗಿದ್ದರೂ ಬ್ರಿಟಿಷ್ ಇಂಡಿಯಾದಿಂದ ಬಂದು ಭಾಷಣಮಾಡುತ್ತಿದ್ದ ಕಾಂಗ್ರೆಸ್ಸಿಗರ ದೇಶಭಕ್ತಿಯ ಭಾಷಣಗಳಿಂದಲೂ ತಿಲಕರು ಗಾಂಧೀಜಿ ಮೊದಲಾದುವರನ್ನು ಕುರಿತ ಕರ್ಣಾಕರ್ಣಿಯಾದ ಕಥೆಗಳನ್ನು ಕೇಳುತ್ತಿದ್ದುದರಿಂದಲೂ ನನ್ನ ರಾಜಕೀಯ ಪ್ರಜ್ಞೆ ಕಣ್ದೆರೆದು ಖಚಿತವೂ ತೀಕ್ಷಟ್ಣವೂ ಆಗತೊಡಗಿತು. ಬರಿಯ ಭಾವದಲ್ಲಿಯೆ ಪರಿ ಸಮಾಪ್ತಿಹೊಂದದೆ ಬುದ್ಧಿ ವಿಷಯವೂ ಆಯಿತು ಕ್ರಮೇಣ.

ನಾನು ಮೈಸೂರಿಗೆ ಬಂದ ಹೊಸದಲ್ಲಿಯೆ, ನಾಲ್ಕನೆಯ ಫಾರಂ ಎನ್ನಿಸಿಕೊಂಡಿದ್ದ ಹೈಸ್ಕೂಲಿನ ಮೊದಲನೆಯ ವರ್ಷದ ವಿದ್ಯಾರ್ಥಿಯಾಗಿ ದ್ದಾಗಲೆ, ೧೯೨೦ರಲ್ಲಿ, ಮಹಾತ್ಮ ಗಾಂಧೀಜಿ ಅಸಹಕಾರ ಚಳವಳಿ ಘೋಷಿಸಿದ ಸುಮಾರಿನಲ್ಲಿ, ಬಾಲಗಂಗಾಧರ ತಿಲಕರುತೀರಿಕೊಂಡರು ರಾಷ್ಟ್ರದಲ್ಲಿ ಎಲ್ಲೆಲ್ಲಿಯೂ ಹರತಾಳ ಸಭೆ ಮೆರವಣಿಗೆ ವಿದೇಶೀ ವಸ್ತ್ರದಹನ ಮೊದಲಾದವುಗಳ ರೂಪದಲ್ಲಿ ದೇಶಭಕ್ತಿಯ ಜ್ವಾಲಾಮುಖಿ ಆಸ್ಫೋಟಿಸಿ ಬ್ರಿಟಿಷರ ವಿರುದ್ಧವಾದ ವೈರಭಾವದ ಲಾವಾರಸ ಪ್ರವಹಿಸಿತು. ಕ್ರಾಂತಿ ಸಮುದ್ರದಲ್ಲಿ ಶಾಂತಿದ್ವೀಪದಂತಿದ್ದ ಮೈಸೂರು ಸಂಸ್ಥಾನಕ್ಕೂ ಆ ಅಗ್ನಿಸ್ರೋತ್ರದಿಂದ ಹೊಮ್ಮಿದ ಕಿರುದೊರೆಗಳು ಪ್ರವೇಶಿಸದೆ ಬಿಡಲಿಲ್ಲ. ಕೈಸ್ತ್ರ ಸಂಸ್ಥೆಯಾಗಿದ್ದು ಬ್ರಿಟಿಷರ ಆಶ್ರಯದ ರಕ್ಷೆಯಲ್ಲಿ ಅವರ ಪರವಾಗಿದ್ದ ವೆಸ್ಲಿಯನ್ ಮಿಷನ್ ಸಂಸ್ಥೆಯ ಹೈಸ್ಕೂಲಿನ ವಿದ್ಯಾರ್ಥಿಗಳು ಮಾತ್ರ ತಮ್ಮ ಭಾರತೀಯತೆಯನ್ನು ಬಿಟ್ಟುಕೊಡಲಿಲ್ಲ.

ಕೃಪಾದಾಸ್ ಎಂಬ ಕೈಸ್ತ್ರಮತಾವಲಂಬಿ ವಿದ್ಯಾರ್ಥಿಯೆ ನಮ್ಮ ಹರತಾಳದ ಮೆರವಣಿಗೆಯ ಪ್ರೇರಕನೂ ನಿಯಂತೃವೂ ಅಗ್ರೇಸರನೂ ಆಗಿ ನಾಯಕತ್ವ ವಹಿಸಿದ್ದನು. ಕೆಲವೇ ತಿಂಗಳ ಹಿಂದೆ, ಮೊದಲನೆಯ ಮಹಾಯುದ್ಧ ನಿಂತು ಇತ್ತಂಡಗಳೂ ಒಪ್ಪಂದಕ್ಕೆ ಸಹಿ ಹಾಕಿದುದರ ಸ್ಮರಣಾರ್ಥವಾಗಿ, ನಮ್ಮನ್ನೆಲ್ಲ ಸಾಲಾಗಿ ಕವಾತು ನಿಲ್ಲಿಸಿ, ಚಿನ್ನದಂತೆ ಹೊಳೆಯುತ್ತಿದ್ದ ಶಾಂತಿಪದಕಗಳನ್ನು ಹಂಚಿದ್ದರು ಆಳಸರು. ಮಕ್ಕಳು ಆಟದ ಸಾಮಾನುಗಳನ್ನು ಕಂಡು ಹಿರಿಹಿರಿ ಹಿಗ್ಗಿ ಸ್ವೀಕರಿಸುವಂತೆ ಆ ಚಿನ್ನದ ಹೊಳಪಿನ ಪದಕಗಳನ್ನೂ ಎದೆಯ ಮೇಲೆ ಅಲಂಕಾರವಾಗಿ ಚುಚ್ಚಿಕೊಂಡಿದ್ದೆವು! ಈ ಅಷ್ಟೇ ಹಿಗ್ಗಿನಿಂದ, ಅದಕ್ಕಿಂತಲೂ ಹೆಚ್ಚಿನ ಆವೇಶದಿಂದ ನಮ್ಮ ದೇಶಭಕ್ತಿ ಭುಗ್ಗನೆ ಹೊತ್ತಿ ಹೆಡೆಯೆತ್ತಿತ್ತು! ಆ ವಿಚಾರವಾದ ತಿಳಿವಳಿಕೆಯ ಸ್ಪಷ್ಟತೆ ಅಷ್ಟೇನೂ ಇಲ್ಲದಿದ್ದರೂ ಬ್ರಿಟಿಷರನ್ನು ಓಡಿಸಿಬಿಡಬೇಕು ಎಂಬ ಸಂಕಲ್ಪ ವಿದ್ಯಾರ್ಥಿ ವರ್ಗಕ್ಕೂ ತಗುಲಿತ್ತು.

ತರಗತಿಯಲ್ಲಿ ಪಾಠ ಕೇಳುತ್ತಾ ಕುಳಿತಿದ್ದ ನಮಗೆ ಎನೋ ಘೋಷಣೆ ಎಲ್ಲಿಂದಲೊ ಹೊರಗಡೆಯಿಂದ ಬಂದಂತೆ ಕೇಳಿಸಿತು. ಕಿವಿ ನಿಮಿರಿತು, ನೆತ್ತರು ನಾಡಿಗಳಲ್ಲಿ ಬಿಸಿಯಾಗಿ ನುಗ್ಗಿತು, ಕುತೂಹಲ ಉದ್ವಿಗ್ನವಾಯಿತು. ಮಹಾತ್ಮಾ ಗಾಂಧೀ ಕಿ ಜಯ್! ಲೋಕಮಾನ್ಯ ತಿಲಕ್ ಕೀ ಯ್ಯ್! “ಬಾಯ್ ಕಾಟ್” ದಿ ಬ್ರಿಟಿಷ್! ಇಂಗ್ಲಿಷ್ ಕನ್ನಡ ಹಿಂದೀ ಏನೇನೊ ಘೋಷಣೆಗಳ ಘೋಷ  ಬಳಿಸಾರಿತು. ಕಿವಿನಿಮಿರಿ ಕಣ್ಣರಳಿ ಕೊರಳೆತ್ತಿ ನಾವೆಲ್ಲ ಪಾಠ ಹೇಳುತ್ತಿದ್ದ ಅಧ್ಯಾಪಕರತ್ತ ಅರ್ಥಪೂರ್ಣವಾಗಿ ಕಣ್ಣು ಬಿಟ್ಟೆವು. ಅವರು ಭಾರತೀಯ ಅಧ್ಯಾಪಕರು. ಹೊಟ್ಟೆಪಾಡಿನ ಕೆಲಸವಿದ್ದುದು ಕೈಸ್ತ್ರ ಸಂಸ್ಥೆಯಲ್ಲಿ. ದೇಶಭಕ್ತಿಯ ಚಳುವಳಿಯಲ್ಲಿ ಎಷ್ಟೇ ಸಹಾನುಭೂತಿಯಿದ್ದರೂ ಅದನ್ನು ತೋರಗೊಡದೆ ‘ಯಾರೂ ಹೊರಗೆ ಹೋಗಬಾರದು’ ಎಂದು ಆಜ್ಞಾಪಿಸಿದರು. ಆದರೆ ಅಷ್ಟರಲ್ಲಿ ಬಾಗಿಲ ಬಳಿ ಹುಡುಗರ ಗಲಾಟೆಯ ಗುಂಪು ಕಾಣಿಸಿತ್ತು. “ಬನ್ನಿ ಹೊರಗೆ! ಷೇಮ್! ಷೇಮ್! ” ಎಂದು ಒರಲುತ್ತಾ ಒಳಗೇ ನುಗ್ಗಿದರು. ಸರಿ, ಗಲಾಟೆಯೋ ಗಲಾಟೆ. ಮೇಸ್ಟರು ಒಳಗೊಳಗೆ ಸಂತೋಷಿಸುತ್ತಾ ಮೇಲೆಮೇಲೆ ಕ್ರುದ್ಧರಾದಂತೆ ಏನೇನು ಹೇಳಿದರೋ ಯಾರಿಗೆ ಕೇಳಿಸಿತು. ತರಗತಿ ಖಾಲಿಯಾಯಿತು. ಎಲ್ಲ ಹೊರನುಗ್ಗಿದರು.

ಮುಂದಾಳುಗಳು ಹುಡುಗರನ್ನೆಲ್ಲ ನಾಲ್ಕು ನಾಲ್ಕು ಸಾಲುಗಟ್ಟಿಸಿ ನಿಲ್ಲಿಸಿದರು. ಅರಮನೆಯ ಕಡೆಗೆ ಹೋಗುವ ರಸ್ತೆಯಲ್ಲಿ ಗಗನ ಬಿರಿಯುವಂತೆ ಘೋಷಣೆಗಳನ್ನು ಕೂಗುತ್ತಾ ಹೊರಟಿತು ಮೆರವಣಿಗೆ. ರಸ್ತೆಯಲ್ಲಿ ನಿಂತ ಪೋಲಿಸರನ್ನು ಮೂದಲಿಸುತ್ತಾ, ಕೋಚು ಗಾಡಿಯಲ್ಲಿ ಬರುತ್ತಿದ್ದ ಐರೋಪ್ಯ ದಂಪತಿಗಳನ್ನು ಮುತ್ತಿ ‘ಲೋಕಮಾನ್ಯ ತಿಲಕರಿಗೆ ಜಯವಾಗಲಿ!’ ಎಂದು ಕೂಗಿ ಅವರನ್ನು ಮುಂದುವರಿಯದಂತೆ ಬಲಾತ್ಕರಿಸುತ್ತಾ. ದಾರಿಯಲ್ಲಿ ಸಿಕ್ಕಿದ ಶಾರದಾವಿಲಾಸ ಹೈಸ್ಕೂಲು, ಬನುಮಯ್ಯ ಹೈಸ್ಕೂಲು, ಮರಿಮಲ್ಲಪ್ಪ ಹೈಸ್ಕೂಲು, ಸದ್ವಿದ್ಯಾ ಪಾಠಾಶಾಲಾ ಇತ್ಯಾದಿ ಸಂಸ್ಥಗಳಿಗೆಲ್ಲ ಮುತ್ತಿಗೆ ಹಾಕಿ, ಬೊಬ್ಬೆ ಎಬ್ಬಿಸಿ, ಸಾಧ್ಯವಾದೆಡೆ ಕಲ್ಲನ್ನೂ ತೂರಿ, ವಿದ್ಯಾರ್ಥಿಗಳನ್ನೆಲ್ಲ ಕೂಡಿಕೊಂಡು, ಹತ್ತಾರು ಸಾವಿರದ ಜನಪ್ರವಾಹವಾಗಿ ಅಠಾರಾಕಛೇರಿಗೆ ಸಮಿಪಿಸಿತು ಮೆರವಣಿಗೆ.

ಎಲ್ಲಿಗೆ? ಏಕೆ? ಯಾರು ನಿಯಂತ್ರಿಸುತ್ತಿದ್ದರೊ? ಅಂತೂ ಅಠಾರಾಕಛೇರಿ ಮೆರವಣಿಗೆಯ ಗಂತವ್ಯವಾಗಿತ್ತು, ಸರಕಾರದ ಕಛೇರಿಗಳಿಗೆಲ್ಲ ಕೇಂದ್ರವಾಗಿದ್ದುದರಿಂದ ಇರಬಹುದು. ಚಿಳ್ಳೆಪಿಳ್ಳೆ ಮಕ್ಕಳೆಲ್ಲ ಅಠಾರಾಕಛೇರಿಯ ಮಹಡಿಗೆ ನುಗ್ಗಿದರು. ಅಲ್ಲಿ ಬೌರಿಂಗ್ ಎಂಬ ಆಂಗ್ಲೇಯ ಐ.ಜಿ.ಪಿ ನಿಂತು ಕೆಳಗೆ ಬರುತ್ತಿದ್ದ ಮೆರವಣಿಗೆಯನ್ನು ಅರೆನಗೆ ಮೊಗದಿಂದ ನೋಡುತ್ತಿದ್ದನು. ಆತನಿಗೆ ಅದೊಂದು ನಿರಪಾಯಕರವಾದ ಮಕ್ಕಳ ಗುಂಪಾಗಿತ್ತೆಷ್ಟೆ. ಲಾಠಿಛಾರ್ಜು, ಛಢಿಏಟು, ಗೋಲಿಬಾರ್ ಇತ್ಯಾದಿಗಳ ಅವಶ್ಯಕತೆಗೆ ಇನ್ನೂ ಕಾಲ ಬಂದಿರಲಿಲ್ಲ. ಚಿಕ್ಕ ಮಕ್ಕಳೆಲ್ಲ ಆ ದೊಡ್ಡ ದಡಿಯ ಕೆಂಪು ಮನುಷ್ಯನ ಸುತ್ತಮುತ್ತ ಮುತ್ತಿ, ಕನ್ನಡದಲ್ಲಿ ಏನೇನೊ ಬಯ್ಯುತ್ತಿದ್ದರು. ಆತ ನಗುತ್ತಾ ಇಂಗ್ಲಿಷಿನಲ್ಲಿ ಏನೇನೊ ಹೇಳುತ್ತಿದ್ದನು. ಕಡೆಗೆ ಮುಂದಾಳುಗಳು ಅಲ್ಲಿಗೆ ಹೋಗಿ ಅವರನೆಲ್ಲ ಕೆಳಕ್ಕೆ ಕರೆತಂದರು. ಅಲ್ಲಿ ಯಾರೊಡನೆ ಯಾರು ಏನು ಮಾತಾಡಿದರು ಅದೊಂದು ನನಗೆ ಗೊತ್ತಾಗಲಿಲ್ಲ. ಅಂತೂ ಬೈಗಾಗುವಷ್ಟರಲ್ಲಿ ಮೆರವಣಿಗೆ ಚೆದರಿತು. ನಮ್ಮಲ್ಲಿ ಅನೇಕರು ಮಹಾರಾಜಾ ಕಾಲೇಜಿನ ಆಟದ ಮೈದಾನದಲ್ಲಿ ನಡೆಯುತ್ತಿದ್ದ ಪುಟ್ ಬಾಲ್ ಪಂದ್ಯ ನೋಡಲು ನೆರೆದಿದ್ದ ಜನಜಂಗುಳಿಯೊಡನೆ ಸೇರಿಕೊಂಡೆವು!

ಅಂತೂ ನಮ್ಮ ಮನಸ್ಸಿಗೆ ನಾವು ಏನೋ ಒಂದು ಮಹಾತ್ಕಾರ್ಯ ಮಾಡಿದೆವೆಂದು ಹಿಗ್ಗು! ಸ್ವರಾಜ್ಯ ಸಂಪಾದನೆಗೆ ನಾವೂ ಹೆಗಲು ಕೊಟ್ಟೆವೆಂಬ ಹೆಮ್ಮೆ!

* * *

ಇನ್ನೊಂದು, ಸಂಜೆ, ಸಂತೇಪೇಟೆ ಹೋಟೆಲು ‘ಆನಂದ ಮಂದಿರ’ದಿಂದ ಹೊರಟು ಕಾರಂಜಿ ಕೆರೆಯ ದಾರಿಯಲ್ಲಿ ಚಾಮುಂಡಿಬೆಟ್ಟದ ಬುಡದ ಮಾವಿನತೋಪಿನ ಕಡೆಗೆ ತಿರುಗಾಡಲು ಹೊರಟಿದ್ದೆವು, ನಾವು ಕೆಲ ಗೆಳೆಯರು. ಟೌನ್ ಹಾಲ್ ಮೈದಾನದಲ್ಲಿ ಜನ ಕಿಕ್ಕಿರಿದಿತ್ತು. ಮಿತ್ರರೊಬ್ಬರು ವಿಚಾರಿಸಿದಾಗ ತಿಳಿಯಿತು, ಗೌರೀಶಂಕರ ಮಿಶ್ರ ಎಂಬ ಹೆಸರಿನ ಉತ್ತರ ಭಾರತದ ಕಾಂಗ್ರೆಸ್ ಪಟು ಒಬ್ಬರು ಭಾಷಣ ಮಾಡುತ್ತಾರೆ ಎಂದು.

ಉತ್ತರ ಭಾರತದವರು ಮೈಸೂರು ಸಂಸ್ಥಾನೇತರ ಕರ್ಣಾಟಕರು ಭಾಷಣ ಮಾಡುತ್ತಾರೆ ಎಂದರೆ ಜನ ಕಿಕ್ಕಿರಿದು ಆಲಿಸುತ್ತಿದ್ದರು. ಶ್ರೀಮನ್ ಮಹಾರಾಜರ ಪ್ರಜೆಗಳಿಗೆ ರಾಜರನ್ನಾಗಲಿ ಸರಕಾರವನ್ನಾಗಲಿ ಖಂಡಿಸಿ ಸಾರ್ವಜನಿಕವಾಗಿ ಭಾಷಣ ಮಾಡಲು ಹೆದರಿಕೆ. ಇನ್ನು ಬ್ರಿಟಿಷರನ್ನು ಸಂಸ್ಥಾನದ ಒಳಗೆ ನಿಂದಿಸುವ ಔಚಿತ್ಯ ಇರಲಿಲ್ಲ. ಹೊರಗಿನಿಂದ ಬಂದವರು ಖಾದಿಟೋಪಿ ಹಾಕಿಕೊಂಡು ಭಾಷಣಕ್ಕೆ ಶುರು ಮಾಡಿದರೆ ಎಲ್ಲರನ್ನೂ ಖಂಡಿಸುವ ಕೆಚ್ಚು ತೋರುತ್ತಿದ್ದರು. ನಮಗೆ ಪುಕ್ಕಲು. ನಾವು ಮಾಡಲಾರದಿದ್ದುದನ್ನು ಇತರರು ಧೈರ‍್ಯದಿಂದ ಮಾಡುವುದನ್ನು ಕಂಡರೆ ನಮಗೆ ಖುಷಿ. ಸರಿ, ನಾವೂ ಭಾಷಣ ಕೇಳಲು ಗುಂಪು ಸೇರಿದೆವು, ತಿರುಗಾಟವನ್ನು ನಿಲ್ಲಿಸಿ.

ಭಾಷಣಕಾರರು ಇಂಗ್ಲಿಷಿನಲ್ಲಿ ಖಂಡನೆಯ ಖಡ್ಗವನ್ನು ಬೀಸಿ ಝಳಪಿಸಿದರು. ಮಧ್ಯೆಮಧ್ಯೆ ಸಭೆ ಅಥವಾ ನೆರವಿ ಕೇಕೆ ಹಾಕಿತು, ಕೈಚಪ್ಪಾಳೆ ತಟ್ಟಿತು, ಪ್ರಸಿದ್ಧ ದೇಶಭಕ್ತರ ಹೆಸರು ಕೂಗಿ ಜೈಕಾರ ಘೋಷಿಸಿತು. ಭಾಷಣಕಾರರು ಆಗಾಗ್ಗೆ, ಎದುರಿಗಿದ್ದು ದೀಪಗಳಿಂದ ಜಾಜ್ವಲಿಸುತ್ತಿದ್ದ, ಅರಮನೆಯ ಕಡೆಗೆ ಕೈಬೀಸಿ, ಬಡವರು ಹೊಟ್ಟೆಗಿಲ್ಲದೆ ಬಟ್ಟೆಗಿಲ್ಲದೆ ಸಾಯುತ್ತಿದ್ದಾರೆ. ಈ ರಾಜಮಹಾರಾಜರುಗಳು ತಮ್ಮ ಭೋಗವಿಲಾಸಗಳಲ್ಲಿ  ಮೈಮರೆತು ಬಡವರ ದುಡಿಮೆಯ ಸಂಪತ್ತನ್ನೆಲ್ಲ ದೋಚುತ್ತಿದ್ದಾರೆ ಎಂದೊಡನೆ ನಿಂತು ಆಲಿಸುತ್ತಿದ್ದ ನಮ್ಮಂತಹ ತರುಣರಿಗೆ ಹಿಗ್ಗೋ ಹಿಗ್ಗು! “ನೋಡಿದೆಯಾ? ಮುಲಾಜಿಲ್ಲದೆ ಹೇಗೆ ಕೊಡ್ತಾ ಇದಾನೆ ಏಟು? ಗಂಡು ಕಣೊ ಅವನು! ಇಷ್ಟೊಂದು ಪೋಲೀಸರು ಸುತ್ತಮುತ್ತ ಇರುವಾಗ ಮಹಾರಾಜರನ್ನು ಕೂಡ ತರಾಟೆಗೆ ತಗೊಳ್ತಿದಾನಲ್ಲಾ!” ಯಾರೋ ಒಬ್ಬರು ‘ಭಾಷಣಕಾರರನ್ನು ದಸ್ತಗಿರಿ ಮಾಡದೆ ಬಿಡುವುದಿಲ್ಲ’ ಎಂದಾಗ ಇನ್ನೊಬ್ಬರು ‘ಅಷ್ಟೊಂದು ಜೂರತ್ ಮೈಸೂರು ಪೋಲೀಸರಿಗೆ ಎಲ್ಲಿದೆಯೊ?’ ಎಂದು ಮೂದಲಿಸಿದರು.

ಹೀಗೆ ಭಾಷಣ ಘೋಷಣ ಕತ್ತಲೆಯಾದ ಅನಂತರವೂ ಕೊನೆಗಾಣದೆಂಬಂತೆ ಸಾಗುತ್ತಿರುವಾಗ, ಇದ್ದಕ್ಕಿದ್ದಂತೆ ಗುಸುಗುಸು ಹಬ್ಬಿತು. ಬೀದಿ ದೀಪಗಳಿದ್ದರೂ ವೇದಿಕೆಯಿದ್ದ ಜಾಗದ ಕತ್ತಲಲ್ಲಿ ಏನು ಎಂತು ಏಕೆ ಯಾವುದೂ ಸ್ಷಷ್ಟವಾಗುವಂತಿರಲಿಲ್ಲ, ಜನಜಂಗುಳಿಯ ಅಂಚಿನಲ್ಲಿದ್ದ ನಮಗೆ. ಕೊನೆಗೆ ಭಾಷಣ ನಿಂತೇ ಬಿಟ್ಟಿತು. ಹಿರಿಯ ಪೋಲೀಸರು ಅಧಿಕಾರಗಳು ‘ಸಾರ್ವಜನಿಕ ಸ್ಥಲದಲ್ಲಿ ಜಿಲ್ಲಾಧಿಕಾರಿಗಳ ಅಪ್ಪಣೆಯಿಲ್ಲದೆ ರಾಜದ್ರೋಹಕರವಾದ ಭಾಷಣ ಮಾಡಬಾರದೆಂದು ತಡೆದರಂತೆ’ ಎಂದು ಗೊತ್ತಾಯಿತು. ನಮಗೆಲ್ಲ ರೇಗು. ಆದರೆ ಅಷ್ಟರಲ್ಲಿ ಮತ್ತೊಂದು ಸುದ್ದಿ ಹಬ್ಬಿತುಃ ವೇದಿಕೆಯಿಂದಲೆ ಯಾರೊ ಗಟ್ಟಿಯಾಗಿ ಘೋಷಿಸಿದರಂತೆಃ “ದೇಶಬಂಧು ಗೌರಿಶಂಕರ ಮಿತ್ರ ಅವರು ತಮ್ಮ ಭಾಷಣವನ್ನು ತಾವು ಇಳಿದುಕೊಂಡಿರುವ ಖಾಸಗಿ ಸ್ವಲ್ಪದಲ್ಲಿ ರಾತ್ರಿ ೯ಗಂಟೆಗೆ ಮುಂದುವರಿಸುತ್ತಾರೆಂದೂ, ಅಲ್ಲದೆ ಅಲ್ಲಿ ವಿದೇಶೀ ವಸ್ತ್ರ ದಹನದ ಯಜ್ಞವೂ ನಡೆಯುತ್ತದೆಂದೂ, ಭರತಖಂಡದ ಸ್ವಾತಂತ್ರ್ಯ ಪ್ರೇಮಿಗಳೆಲ್ಲರೂ ಅಲ್ಲಿಗೆ ಹೊತ್ತಿಗೆ ಸರಿಯಾಗಿ ದಯಮಾಡಿಸಬೇಕೆಂದೂ!”

ಇನ್ನು ಸ್ವಾತಂತ್ರ್ಯಪ್ರೇಮಿಗಳಾದ ನಾವು ಸುಮ್ಮನಿರವುದಕ್ಕಾಗುತ್ತದೆಯೆ? ದೇಶಭಕ್ತಿಯ ಬೆಂಕಿ ಬಿದ್ದಂತಾಗಿತ್ತು ನಮ್ಮ ಚೇತನಕ್ಕೆ!

ಹೋಟಲಿಗೆ ಹಿಂತಿರುಗಿ, ಊಟ ಮುಗಿಸಿ, ಮಹಾರಾಜಾ ಕಾಲೇಜು ಹಾಸ್ಟಲಿನ ಹತ್ತಿರವಿದ್ದ ಆ ಹೋಟಲಿಗೆ ಹೋದೆವು. ಜನ ಆಗಲೆ ನೆರೆದಿತ್ತು. ಆ ಸಭೆಯನ್ನೂ ಪೋಲೀಸರು ನಡೆಯದಂತೆ ತಡೆಯುತ್ತಾರಂತೆ ಎಂದೂ ಲಾಠಿ. ಛಾರ್ಜೂ ಆಬಹುದೆಂದೂ ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಹೋಟಲಿನ ಕಾಂಪೌಂಡಿನ ಒಳಗೆ ಖಾಸಗಿ ಸ್ಥಳವಾಗಿದ್ದರಿಂದ ಅಲ್ಲಿ ನೀಷೆಧಾಜ್ಞೆ ಜಾರಿಮಾಡುವ ಹಾಗಿಲ್ಲವೆಂದೂ ಒಬ್ಬರು ಹೇಳಿದರು. ಏನೊ ಒಂದು ಮಹದ್ ಘಟನೆ ನಡೆಯಿಂದಲಿದೆಯೆಂದು ನಾವು ಕಾದುನಿಂತೆವು.

ಆ ಸಭೆಗೆ ಹೆಚ್ಚಾಗಿ ಆಗಮಿಸಿದ್ದವರು, ಕಾಲೇಜು ಹಾಸ್ಟಲಿನ ಮತ್ತು ಮಹಾರಾಜಾ ಕಾಲೇಜಿನ ವಿದ್ಯಾರ್ಥಿಗಳು. ಹೈಸ್ಕೂಲಿನ ವಿದ್ಯಾರ್ಥಿಗಳಾಗಿದ್ದ ನಮಗೆ ಕಾಲೇಜು ವಿದ್ಯಾಥಿಗಳೆಂದರೆ ಭಯಮಿಶ್ರಿತ ಗೌರವ! ಕೆ.ಅನಂತರಾಮಯ್ಯ, ಎಂ.ಎ.ವೆಂಕಟರಾವ್ ಮೊದಲಾದ ಎಂ.ಎ ತರಗತಿಯ ವಿದ್ಯಾರ್ಥಿಗಳು ಇಂಗ್ಲಿಷಿನಲ್ಲಿ ಜೋರಾಗಿ ಮಾತಾಡುತ್ತಿದ್ದರಾದ್ದರಿಂದ ಅವರನ್ನೆಲ್ಲ ಮುಂದಾಳು ವೀರರೆಂದು ಇತರರು ಗೌರವಿಸುತ್ತಿದ್ದರು.

ಗೌರೀಶಂಕರ ಮಿಶ್ರರ ಉಗ್ರ ಭಾಷಣಾ ನಿರರ್ಗಳವಾಗಿ ಸಾಗಿತು. ನಾವು ಸ್ವಲ್ಪಮಟ್ಟಿಗೆ ಆಶಾಪೂರ್ವಕವಾಗಿಯೆ, ನಿರೀಕ್ಷಿಸಿದ್ದಂತೆ ಪೋಲೀಸರು ಪ್ರವೇಶಿಸಲೆ ಇಲ್ಲ. ಭಾಷಣ ಮುಗಿದ ಮೇಲೆ ವಿದೇಶ ವಸ್ತ್ರದಹನವಾಗುತ್ತದೆ ಎಂದು ಘೋಷಿಸಿಲಾಯಿತು. ಭಾಷಣಕಾರರ ವೇದಿಕೆಯ ಮುಂದೆ “ಬಾನ್ ಪೈರ್” ಎಂದು ಎಲ್ಲರೂ ಹೆಸರಿಸುತ್ತಿದ್ದ ಕಾರ‍್ಯ ಪ್ರಾರಂಭವಾಗಿ ಬೆಂಕಿ ಎದ್ದಿತು. ಭಾಷಣದಿಂದ ಆವೇಶಗೊಂಡಿದ್ದ ಹುಡುಗರು ತಲೆಯ ಟೋಪಿಗಳನ್ನೂ ಹಾಕಿಕೊಂಡಿದ್ದ ಕೋಟುಗಳನ್ನೂ ನಿಕ್ಕರ್ ಹಾಕಿದ್ದವರು ತಮ್ಮ ಪ್ಯಾಂಟುಗಳನ್ನೂ ಬೆಂಕಿಗೆ ಎಸೆಯತೊಡಗಿತದರು. ಆದರೆ ಎಸೆದ ಟೋಪಿಗಳೆಲ್ಲವೂ ತಮ್ಮ ತಲೆಗಳದ್ದೇ ಆಗಿರಲಿಲ್ಲ ಪಕ್ಕದಲ್ಲಿರುವವನ ತಲೆಯ ಟೋಪಿಯನ್ನೂ ಅನೇಕರು ಕಿತ್ತೆಸೆದು ಅಲ್ಲಲ್ಲಿ ಹೊಡೆದಾಟವೂ ಆಯಿತು. ಪಾಪ, ಒಂದೇ ಒಂದು ಕೋಟು, ಸ್ಕೂಲಿಗೆ ಹೋಗುವಾಗ ಮಾತ್ರ ಹಾಕಿಕೊಳ್ಳುವ ಮಟ್ಟಿಗೆ ಇದ್ದಂಥ ಬಡವರನ್ನೂ ಮೂದಲಿಸಿ, ದೇಶದ್ರೋಹಿ ಎಂದು ಬೈದು, ಕೋಟನ್ನು ಬಿಚ್ಚಿ ಬೆಂಕಿಗೆ ಎಸೆಯುವಂತೆ ಬಲಾತ್ಕರಿಸಿದರು. ಕೆಲವರು  ಬೇಗಬೇಗನೆ ಟೊಪ್ಪಿಗಳನ್ನು ತೆಗೆದು ಬಚ್ಚಿಟ್ಟುಕೊಂಡು ಪಾರಾದರು. ಕೆಲವರು ತಮ್ಮ ಕೋಟುಗಳನ್ನು ಬೆಂಕಿಗೆ ಎಸೆಯುವಂತೆ ನಟಿಸಿ, ಬಿಚ್ಚಿ ಸುತ್ತಿ, ಬಗಲಿಗೆ ಸೇರಿಸಿಕೊಂಡು ಗುಂಪಿನಲ್ಲಿ ನುಗ್ಗಿ ಮನೆಗೆ ಓಡಿದರು, ದೇಶಭಕ್ತಿ ಅಷ್ಟು ದುಬಾರಿಯ ವಸ್ತುವೆಂದು, ಪಾಪ, ಆ ಬಡವರಿಗೆ ತಿಳಿದಿರಲಿಲ್ಲ!

ದೇಶಭಕ್ತಿಯ ಆವೇಶದ ಸುಳಿಗೆ ಸಿಕ್ಕಿ ಅನೈಚ್ಛಿಕವಾಗಿಯೋ, ಐಚ್ಛಿಕವಾಗಿಯೋ ಅಥವಾ ಇತರರು ದೇಶದ್ರೋಹಿ ಎಂದು ಕರೆದು ಮೂದಲಿಸಿ ಅವಮಾನ ವಾಗುತ್ತದೆಂದೋ ನಾನು ನಿನ್ನ ತಲೆಯಲ್ಲಿದ್ದ, ಹೊಸದಾಗಿ ಕೊಂಡಿದ್ದ, ಫೆಲ್ಟ್ ಕ್ಯಾಪನ್ನು ಎಸೆದೇ ಬಿಟ್ಟೆ! ಆದರೆ ಒಡನೆಯ ಮನಸ್ಸಿಗೆ ಸಂಕಟವಾಯಿತು, ಮನೆಯವರು ನಿರ್ವಾಹವಿಲ್ಲದೆ ಕಳಿಸಿದ್ದ ಸುಮಿತ ಪ್ರಮಾಣದ ತಿಂಗಳ ಖರ್ಚಿನ ಹಣದಲ್ಲಿ ಕೊಂಡಿದ್ದ ಟೋಪಿಯನ್ನು ಅನ್ಯಾಯವಾಗಿ ಬೆಂಕಿಗೆ ಹಾಕಿದೆನಲ್ಲಾ ಎಂದು. ಆದರೆ ಏನು ಮಾಡುವುದು? ಗಾಂಧಿಯವರು ಕೊಟ್ಟು ಕರೆಯಂತೆ ‘ವಿದೇಶೀ ವಸ್ತ್ರದಹನ’ವೂ ದೇಶಭಕ್ತಿಯ ಒಮದು ಪ್ರಧಾನ ಲಕ್ಷಣವೆಂದು ಭಾವಿಸಿ ಅನೇಕರು ಮಿತ್ರರು ತಮ್ಮ ವಸನಗಳನ್ನೂ, ಕಡೆಗೆ ವಿದೇಶೀಯವೆಂದು ಕಂಡುಬಂದ ಪಾದುಕೆಗಳನ್ನೂ (ಬೂಟ್ಸ್) ಎಸೆದಿರುವಾಗ ನಾನು ‘ಕರಿಕುರಿ’ ಎನ್ನಿಸಿಕೊಳ್ಳಲಾಗುತ್ತದೆಯೆ?

ಟೋಪಿ ಹೋದುದಕ್ಕೇ ಆತಂಕಗೊಂಡು ನಿಂತಿದ್ದ ನನ್ನನ್ನು ಕೆಲವು ಮಿತ್ರರು ಕೋಟನ್ನೂ ಎಸೆಯುವಂತೆ ಹೇಳಿದರು. ‘ಆಜ್ಞಾಪಿಸಿದರು’ ಎಂದರೂ ತಪ್ಪಾಗುವುದಿಲ್ಲ. ಹಾಗೆ ಆಜ್ಞಾಪಿಸಿದವರಲ್ಲಿ ಕೆಲವರಾದರೂ ಶ್ರೀಮಂತವರ್ಗದವರಾಗಿ ಮನೆಯಲ್ಲಿ ನಾಲ್ಕು ಅಥವಾ ಐದು ವಿದೇಶೀಬಟ್ಟೆಯ ಬೆಲೆಯುಳ್ಳ ಕೋಟುಗಳನ್ನು ಪಡೆದಿದ್ದವರೇ! ಅವರು ಈಗ ಹಾಕಿಕೊಂಡಿದ್ದ ಕೋಟನ್ನು ಬೆಂಕಿಗೆ ಎಸೆದರೂ ನಾಳೆ ಸ್ಕೂಲಿಗೆ ಹಾಕಿಕೊಂಡು ಹೋಗುವಷ್ಟರ ಮಟ್ಟಿನ ಕೋಟು ಅದೊಂದೇ. ನಾನು ಸ್ವಲ್ಪ ಹಿಂದೆಮುಂದೆ ನೋಡುತ್ತಿದ್ದುದನ್ನು ಕಂಡು ‘ಏನ್ರೀ, ಭರತಮಾತೆ ಭರತಮಾತೆ ಎಂದೆಲ್ಲ ದೇಶಭಕ್ತಿಯ ಹಾಡು ಬರೆಯುತ್ತೀರಿ. ಪರದೇಶೀ ಬಟ್ಟೆ ಬೆಂಕಿಗೆ ಹಾಕಲು ಹಿಂದೆಮುಂದೆ ನೋಡುತ್ತೀರಿ. ನಾಚಿಕೆಗೇಡು’ ಎಂದು ಮೂದಲಿಸಿದಾಗ ತಡೆಯಲಾಗಲಿಲ್ಲ. ಕೋಟನ್ನೂ ಬಿಚ್ಚಿಕೊಟ್ಟೆ. ಅವರೇ ಬೆಂಕಿಗೆ ಎಸೆದೂ ಬಂದರು. ಮರುದಿನ ನಾನು ತಲೆಗೆ ಟೋಪಿ ಇಲ್ಲದೆ, ಕೋಟನ್ನು ಹಾಕಿಕೊಳ್ಳದೆ ಬರಿಯ ಷರ್ಟಿನಲ್ಲಿಯೆ ಕ್ಲಾಸಿಗೆ ಹೋದಾಗ ನೋಡುತ್ತೇನೆಃ ವಿದೇಶಿ ವಸ್ತ್ರ ದಹನಕ್ಕೆ ತಮ್ಮ ಕಾಣಿಕೆ ನಿವೇಸಿದಿದ್ದ ನನ್ನ ಶ್ರೀಮಂತ ಮಿತ್ರರು ಉತ್ತಮ ತರದ ವಿದೇಶಿ ಕೋಟು ಟೋಪಿಗಳಿಂದ ಅಲಂಕೃತರಾಗಿಯೆ ಸೀಟುಗಳಲ್ಲಿ ರಂಜಿಸುತ್ತಿದ್ದಾರೆ!

ಕೆಲವು ಮಿತ್ರರಂತೂ ತಾವು ಅಗ್ನಿಗೆ ಅರ್ಪಿಸಿದ್ದ ಹಳೆಯ ಕೋಟುಗಳಿಗೆ ಬದಲಾಗಿ ಅದಕ್ಕಿಂತಲೂ ಸೊಗಸಾದ ಮತ್ತು ಬೆಲೆಬಾಳುವ ವಿದೇಶೀವಸ್ತ್ರದ ಕೋಟುಗಳನ್ನೆ ಮತ್ತೆಯೂ ಹೊಲಿಸಿಕೊಂಡರು. ಕೇಳಿದರೆ, ‘ಏನು ಮಾಡೋದ್ರೀ? ಮನೆಯಲ್ಲಿ ತರಾಟೆಗೆ ತೆಗೆದುಕೊಂಡುಬಿಟ್ರು!’ ಎಂದು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡರು. ಆದರೆ ನಾವು ಕೆಲವರು ಮಾತ್ರ ಅಂದಿನಿಂದ ಮುಂದೆ ಗಾಂಧೀಟೋಪಿ ಮತ್ತು ಖಾದಿ ಬಟ್ಟೆಗಳನ್ನು ತೊಡುವ ವ್ರತ ತೊಟ್ಟೆವು!