ದಕ್ಷಿಣ ಆಫ್ರಿಕದಿಂದ ಭಾರತವರ್ಷಕ್ಕೆ ಆಗಮಿಸಿ ಇಲ್ಲಿಯ ರಾಜಕೀಯ ಮತ್ತು ಸಾಮಾಜಿಕ ಜೋವನರಂಗಕ್ಕೆ ಮಹಾತ್ಮಾಗಾಂಧೀಜಿ ಪ್ರವೇಶಿಸಿದಂದಿನಿಂದ ಸಮಗ್ರ ರಾಷ್ಟ್ರದ ಜನಜೀವನದಲ್ಲಿ ಒಂದು ನವೋತ್ಥಾನದ ಯುಗ ಪ್ರಾರಂಭವಾಯಿತು. ಆ ಸಮುದ್ರ ಮಂಥನದ ಕೇಂದ್ರವಿದ್ದುದು ಬ್ರಿಟಿಷ್ ಇಂಡಿಯಾದಲ್ಲಿ. ಆದರೂ ಆ ಕಡೆಹದ ರಭಸದಿಂದೆದ್ದ ಊರ್ಮಿಮಾಲೆಗಳು ಅಲ್ಲಲ್ಲಿ ದ್ವೀಪಗಳಂತಿದ್ದ ದೇಶೀಯ ಸಂಸ್ಥಾನಗಳನ್ನೂ ಅಪ್ಪಳಿಸಿದ ಬಿಡಲಿಲ್ಲ. ಮೈಸೂರು ಸಂಸ್ಥಾನದ ರಾಜಧಾನಿಯಾಗಿದ್ದ ಮೈಸೂರು ನಗರವೂ ಆ ಪ್ರಚಂಡ ಶಕ್ತಿಯ ಆಸ್ಫಾಲನೆಯಿಂದ ತಪ್ಪಿಸಿಕೊಳ್ಳಲು ಹೇಗೆ ತಾನೆ ಸಾಧ್ಯವಾದೀತು? ಹೊಸಹೊಸ ಭಾವತರಂಗಗಳಿಗೆ ಸದಾ ಎದೆತೆರೆದಿರುತ್ತಿದ್ದ ವಿದ್ಯಾರ್ಥಿವೃಂದವೂ ಆ ಅನೇಕ ಪ್ರಭಾವಗಳಿಂದ ದೀಪ್ತವಾಯಿತು. ನನ್ನ ಕವಿಚೇತನವಂತೂ ತನ್ನ ಸಮಸ್ತ ಗವಾಕ್ಷಗಳನ್ನೂ ತೆರೆದು ಆ ಶಕ್ತಿದೇವತೆಗಳನ್ನು ತನ್ನ ಹೃದಯ ದೇಗುಲಕ್ಕೆ ಆಹ್ವಾನಿಸಿತು,    ಆರಾಧಿಸಿತು, ಪೂಜಿಸಿತು, ಪ್ರಾರ್ಥಿಸಿತು, ಉಪಾಸಿಸಿತು! ಪ್ರಾಚ್ಯ ಪಾಶ್ಚಾತ್ಯಗಳೆರಡೂ ನನಗೆ ಆರಾಧ್ಯವಾದುವು. ಅದನ್ನೆ ಕುರಿತು ಮುಂದೆ ಸುಮಾರು ಇಪ್ಪತ್ತಯ್ದು ವರ್ಷಗಳ ಅನಂತರ ನಾನು ಹಾಡಿದ ‘ವಿಶ್ವವಿದ್ಯಾನಿಲಯೆ ಭಗವತಿ ಶ್ರೀ ಸರಸ್ವತಿಗೆ’ ಎಂಬ ಪ್ರಗಾಥೆಯಲ್ಲಿ “ಗಂಗೆಯೊಡನೆ ಥೇಂಸಿಗಾಯ್ತು ಗಹನ ಗಗನ ಸಂಗಮ; ನೆರೆಯುಕ್ಕಿದ ಕಾವೇರಿಗೆ ಸೊಗಸಿದುವು ವಿಹಂಗಮಃ ವಂದಿಸುತ್ತ ಸಂಧಿಸಿದುವು ಧನ್ಯ ಪೂರ್ವ ಪಶ್ಚಿಮ” ಎಂದು ಬಣ್ಣಿಸಿದ್ದೇನೆ.

ಒತ್ತಟ್ಟಿಗೆ ನನ್ನ ಚೇತನ ಈ ಎಲ್ಲ ಶಕ್ತಿಗಳ ತರಂಗತಾಡನಕ್ಕೆ ಪ್ರತಿಸ್ಪಂದಿಸಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿದ್ದಾಗಲೆ, ಇನ್ನೊತ್ತಟ್ಟಿಗೆ ಅದು ಕಾವ್ಯ ಸಾಹಿತ್ಯ ಸಂಸ್ಕೃತಿಗಳ ಪೂಜಾರಿಯಾಗಿ ಅಭಿವ್ಯಕ್ತಿಗೆ ಹವಣಿಸುತ್ತಿತ್ತು. ಆದರೆ ಆ ಅಭಿವ್ಯಕ್ತಿಯ ಮಾಧ್ಯಮ ಮೊದಲು ಪ್ರಕಟವಾದದ್ದು ತನ್ನ ತಾಯಿನುಡಿಯಲ್ಲಲ್ಲ; ಅದು ಮೊದಲು ಮೈದೋರಿದ್ದು ವಿದೇಶಿಯಾದ ಇಂಗ್ಲಿಷಿನಲ್ಲಿ; ಯಾವ ಬ್ರಿಟಿಷರನ್ನು ಹೊಡೆದೋಡಿಸಲು ಭರತಖಂಡ ಪ್ರಚಂಡ ಚಳವಳಿ ಹೂಡಿತ್ತೊ ಆ ಬ್ರಿಟಿಷರ ಭಾಷೆಯಾದ ಇಂಗ್ಲಿಷಿನಲ್ಲಿ!

ಇಂಡಿಯಾದೇಶವನ್ನು ಶೋಷಣೆಮಾಡಿ ದಬ್ಬಾಳಿಕೆ ನಡೆಸುತ್ತಿದ್ದ ಇಂಗ್ಲಿಷರ ಮೇಲೆ ನನಗೆ ಎಷ್ಟು ದ್ವೇಷವಿದ್ದಿತೊ ಅದಕ್ಕೆ ದ್ವಿಗುಣಿತ ತ್ರಿಗುಣಿತವಾಗಿ ಇಂಗ್ಲಿಷ್ ಭಾಷೆಯ ಮೇಲೆ ಗೌರವ ಮಮತೆಗಳಿದ್ದುವು. ಮೊದಲನೆಯದಾಗಿ, ಇಂಗ್ಲಿಷ್ ಸಾಹಿತ್ಯಕ್ಕೆ ನಾನು ಮಾರುಹೋಗಿದ್ದೆ; ವಿಶೇಷವಾಗಿ ಇಂಗ್ಲಿಷ್ ಕವಿಗಳಿಗೆ; ಇಂಗ್ಲಿಷ್ ಕವಿಗಳು ನಮ್ಮ ಕವಿಗಳಿಗಿಂತಲೂ ಮೇಲಾಗಿದ್ದರು ಎಂಬ ಕಾರಣಕ್ಕಿಂತಲೂ ಮಿಗಿಲಾಗಿ ಇಂಗ್ಲಿಷ್ ಕವನಗಳನ್ನು ಪಾಠಹೇಳುತ್ತಿದ್ದ ರೀತಿಯೆ ನನಗೆ ಆಕರ್ಷಕವಾಗಿತ್ತು.ಜೊತೆಗೆ ಇಂಗ್ಲಿಷ್ ಕವನಗಳ ವಿಷಯದ ನೂತನತೆಯೂ, ಅವುಗಳ ಭಾವಗೀತಾತ್ಮಕತೆಯೂ, ಇಂಗ್ಲಿಷ್ ಕವಿಗಳ ವ್ಯಕ್ತಿನಿಷ್ಠನಾದ ರಸಾನುಭವಗಳ ರಮಣೀಯತೆಯೂ ನಮ್ಮ ಕವಿಗಳ ಬರಿಯ ಪೌರಾಣಿಕ ಕಥಾನಾತ್ಮಕತೆಗಿಂತ ಹೆಚ್ಚು ಮನಮೋಹಿತವಾಗಿತ್ತು. ಎರಡನೆಯದಾಗಿ, ನನ್ನ ಜ್ಞಾನತೃಷ್ಣೆ ತನ್ನ ದಾಯಪರಿಹಾರಕ್ಕಾಗಿ ರಸನಾ ಪ್ರಸಾರ ಮಾಡಿ ಅಮೃತವಾರಿಯನ್ನು ಅನ್ವೇಷಿಸುತ್ತಿದ್ದಾಗ ಕನ್ನಡ ವಾಙ್ಮಯ ಮರುಭೂಮಿಯಾಗಿತ್ತೆಂದೇ ಹೇಳಬೇಕು, ನನ್ನ ಭಾಗಕ್ಕಾದರೂ! ನನಗೆ ಚಿಕ್ಕಂದಿನಿಂದಲೂ ಸಹಜವಾಗಿದ್ದ ಆಧ್ಮಾತ್ಮಿಕ ಆಸಕ್ತಿಗೆ ಮತ್ತು ವಿಚಾರಾತ್ಮಕವಾದ ಜಿಜ್ಞಾಸೆಗೆ ಮೊತ್ತಮೊದಲು ಆಹಾರ ಒದಗಿದುದು ಆಂಗ್ಲೇಯಭಾಷೆಯ ಮುಖಾಂತರವೆ. ವಸ್ತು ಭಾರತೀಯವಾದದ್ದೆ ಆದರೂ ಅದನ್ನು ನಾನು ಇಂಗ್ಲಿಷಿನ ಮುಖಾಂತರವೆ ಪಡೆಯಲು ಸಾಧ್ಯವಾಗಿತ್ತು. ಪ್ರಚಲಿತ ವೈದಿಕ ಹಿಂದೂಧರ್ಮದ ಅನೇಕ ಶ್ರದ್ಧೆ ಆಚಾರ ವಿಚಾರಗಳೆಲ್ಲ ನನಗೆ ನಂಬುಗೆ ಇರಲಿಲ್ಲ ಮಾತ್ರವಲ್ಲ, ಅತ್ಯಂತ ತಿರಸ್ಕಾರವೂ ಇತ್ತು. ಮೇಲು ಕೀಳು ಭಾವನೆಗಳು, ಜಾತಿಪದ್ಧತಿ, ಬ್ರಾಹ್ಮಣನೆ ಬ್ರಹ್ಮದ ಬಾಯಿಂದ ಬಂದಿರುವ ಶ್ರೇಷ್ಠ ವಸ್ತು, ಶೂದ್ರನು ಸಂಸ್ಕೃತ ಓದಬಾರದು ಮತ್ತು ಅದನ್ನು ಯಾರಾದರೂ ಉಚ್ಚರಿಸುವುದನ್ನು ಅವನು ಆಲಿಸಿದರೆ ಅವನ ಕಿವಿಗೆ ಸೀಸ ಕಾಯಿಸಿ ಹೊಯ್ಯಬೇಕು ಎಂಬಂತಹ ಮನುವಿಂತಹರ ಶಾಸ್ತ್ರಾಜ್ಞೆ ಇತ್ಯಾದಿ ಒಂದಲ್ಲ ಎರಡಲ್ಲ ಸಾವಿರಾರು ಪ್ರಚಲಿತ ಹಿಂದೂ ಧರ್ಮದ ಅನುದಾರವೂ ಅವಿವೇಕವೂ ಆದ ನೀಚಭಾವನೆಗಳೆಲ್ಲಿ ನನಗೆ ಬದ್ಧದ್ವೇಷವಿತ್ತು. ಅಂತಹ ದುರ್ಭಾವನೆಗಳಿಗೆಲ್ಲ ಕುಠಾರ ಸ್ವರೂಪವಾಗಿದ್ದ ಸ್ವಾಮಿ ವಿವೇಕಾನಂದರಂತಹರ ವಾಣಿ ನನಗೆ ದೊರೆತದ್ದು ಇಂಗ್ಲಿಷ್ ಭಾಷೆಯ ಮೂಲಕವೆ. ನನ್ನ ಜೀವಕ್ಕೆ ಅಭಯ ಘೋಷಣೆಮಾಡಿ, ತಾನು ಶಿವತತ್ತ್ವದಿಂದ ಅಭಿನ್ನ ಎಂಬುದನ್ನೂ ಸಾರಿ, ಆತ್ಮದ ಔನ್ನತ್ಯ ನೈರ್ಮಲ್ಯ ಗೌರವಗಳನ್ನು ಮನಮುಟ್ಟುವಂತೆಯೂ ಎದೆವೊಗುವಂತೆಯೂ ಹಾಡಿದ ಪ್ರಾಚೀನ ಮಹರ್ಷಿಗಳ ವೇದಾಂತವಾಣಿ ನನ್ನ ಪ್ರಜ್ಞೆಗೆ ಪ್ರವೇಶಿಸಲು ಸಾಧ್ಯವಾದುದು ಇಂಗ್ಲಿಷ್ ಭಾಷಾ ಕೃಪೆಯಿಂದಲೆ! ಮೂರನೆಯದಾಗಿ ಇಂಡಿಯಾದೇಶವನ್ನು ಗೆದ್ದು ಅದರ ರಾಜಕೀಯ ಅವ್ಯವಸ್ಥೆಗೆ ಒಂದು ಸುವ್ಯವಸ್ಥೆಯನ್ನು ತಂದುಕೊಟ್ಟು, ಬ್ರಾಹ್ಮಣಾದಿ ಉಚ್ಚವರ್ಣದವರಿಂದ ಸಾವಿರಾರು ವರ್ಷಗಳಿಂದ ತುಳಿಯಲ್ಪಟ್ಟು ಶೋಷಿಸಿಲ್ಪಟ್ಟು ದಾಸ್ಯತ್ವವನ್ನೆ ದೈವದತ್ತವೆಂದೂ ವಿಧಿಯೆಂದೂ ಒಪ್ಪಿಕೊಂಡು ಕಾಲಡಿಯ ಕಸವಾಗಿ ಬಿದ್ದಿದ್ದ ಶೂದ್ರಾದಿವರ್ಗದವರನ್ನು ತಲೆಯತ್ತುವಂತೆ ಪ್ರೇರೇಪಿಸಿದ್ದೂ ಇಂಗ್ಲಿಷಿರೆ; ಮತ್ತು ಇಂಗ್ಲಿಷ್ ಭಾಷೆ ಸಾಹಿತ್ಯ ಚರಿತ್ರೆ ಮೊದಲಾದುವುಗಳನ್ನೋದಿ, ಅವರ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದ ಭಾರತೀಯರೆ! ಇಂಗ್ಲಿಷ್ ಆಳುವವರ ಅಧಿಕೃತ ಭಾಷೆಯಾಗಿ ಸಮಸ್ತ ಭರತಖಂಡವನ್ನೂ ಮೊತ್ತಮೊದಲಿಗೆಂಬಂತೆ ಏಕತ್ವದಲ್ಲಿ ಬಿಗಿದು, ನಮ್ಮಲ್ಲಿ ಧಾರ್ಮಿಕ ಭೂಮಿಕೆಯಲ್ಲಿ ಮಾತ್ರವೆ ಇದ್ದ ಅಖಿಲಭಾರತೀಯತ್ವವು ರಾಜಕೀಯಾದಿ ಭೂಮಿಕೆಗಳಲ್ಲಿಯೂ ನಿಷ್ಠಿತವಾಗುವಂತೆ ಕೃಪೆಗೈದಿತ್ತು. ಶೇಕಡ ಅರ್ಧವೊ ಕಾಲೊ ಜನಕ್ಕೆ ಮಾತ್ರ ಆ ಭಾಷೆ ತಿಳಿದಿದ್ದರೂ ಅದಕ್ಕೆ ಅಖಿಲ ಭಾರತೀಯ ವ್ಯಾಪ್ತಿ ಪ್ರಾಪ್ತವಾಯಿತು. ಎಲ್ಲರ ಗೌರವಕ್ಕೂ ಭಾಜನವಾಯಿತು. ಇಂಗ್ಲಿಷ್ ಜನವೆಂತೂ ಅಂತೆ ಇಂಗ್ಲಿಷ್ ಮಾತನಾಡುವವರೂ “ಪೂಜ್ಯ”ರಾಗಿಬಿಟ್ಟರು, “ದೊರೆ”ಗಳಾದರು, “ಸಾಹೇಬ”ರೂ ಆದರು. ಆ ಕಾರಣದಿಂದಲೂ ಆ ಭಾಷೆ ನನ್ನಂತಹ ಎಳೆಯರ ಮೇಲೆ ತನ್ನ ಪ್ರಭುತ್ವಧಿಕಾರ ಸ್ಥಾಪಿಸಿ, ಪೂಜ್ಯಸ್ಥಾನವನ್ನೂ ಗಿಟ್ಟಿಸಿಕೊಂಡು ಬಿಟ್ಟಿತು!

ನನಗೆ ಆಗಿನ ಕಾಲದ ಕನ್ನಡ ಸಾಹಿತ್ಯರಂಗದಲ್ಲಿ ಕೆಲಸಮಾಡುತ್ತಿದ್ದ ಯಾವ  ಸಾಹಿತಿಯ ಸಂಪರ್ಕಕ್ಕು ಅವಕಾಶವಿರಲಿಲ್ಲ. ಆ ತೆರನಾದ ಸಂಪರ್ಕ ಮತ್ತು ಅದರ ಅರಿವು ನನಗುಂಟಾದದ್ದು ನಾನು ಬಿ.ಎ. ತೇರ್ಗಡೆಯಾಗಿ ಕನ್ನಡ ಎಂ.ಎ. ತರಗತಿಗೆ ಬಂದಾಗಲೆ! ಕನ್ನಡ ಸಾಹಿತ್ಯ ಪರಿಷತ್ತಿನಂತಹ ಒಂದು ಸಂಸ್ಥೆ ಇದೆ ಎಂಬುದೂ ಗೊತ್ತಿರಲಿಲ್ಲ. ಕರ್ಣಾಟಕ ಸಂಘಗಳೂ ನನ್ನ ಮಟ್ಟಿಗಾದರೂ ಇದ್ದಿಲ್ಲ ಎಂದೇ ಹೇಳಬೇಕು. ನಾವು ಓದುತ್ತಿದ್ದ ಮಿಶನ್ ಸ್ಕೂಲಿನಲ್ಲಿ ಕನ್ನಡ ಎಂಬುದು ಪಠ್ಯವಿಷಯ ಮಾತ್ರವಾಗಿತ್ತು. ಅಲ್ಲಿ ಕರ್ಣಾಟಕ ಸಂಘ ಇರಲಿಲ್ಲ. ಇರಲಿಕ್ಕೆ ಅವಕಾಶವೂ ಇರುತ್ತಿರಲಿಲ್ಲ. ನನ್ನ ಆಸಕ್ತಿ ಗೌರವ ಎಲ್ಲ ಇಂಗ್ಲಿಷಿಗೇ ಸಮರ್ಪಿತವಾಗಿತ್ತು. ಇಂಗ್ಲಿಷ್ ಕವಿಗಳನ್ನು ಅನುಕರಿಸಿ ಇಂಗ್ಲಿಷಿನಲ್ಲಿಯೆ ಪದ್ಯರಚನೆ ಮಾಡತೊಡಗಿದೆ. ಮೊದಮೊದಲು ವಾರ್ಷಿಕೋತ್ಸವ ಸಂದರ್ಭಗಳಲ್ಲಿ ಮತ್ತು ವರ್ಗವಾಗಿ ಹೋಗುವ ಪ್ರಿನ್ಸಿಪಾಲರನ್ನು ಗೌರವಿಸಲು ಏರ್ಪಡಿಸಿದ್ದ ಸಭೆಗಳಲ್ಲಿ ಆ ಸಂದರ್ಭಕ್ಕೆ ತಗುವ ಪದ್ಯ ಹೊಸೆದು ಓದಿದೆ. ಸಹಾಧ್ಯಾಯಿಗಳೂ ಸ್ನೇಹಿತರೂ ಮೆಚ್ಚಿದರು; ಉಪಾಧ್ಯಾಯರೂ ಬೆನ್ನು ತಟ್ಟಿದರು. ಆ ಪ್ರೋತ್ಸಾಹದಿಂದ ಉತ್ಸಾಹಿತನಾಗಿ ನನ್ನಲ್ಲಿ ನೈಸರ್ಗಿಕವಾಗಿದ್ದ ಭಾವಾಭಿವ್ಯಕ್ತಿಗಾಗಿ ಇಂಗ್ಲಿಷ್‌ನಲ್ಲಿಯೆ ಕವನರಚನೆಯನ್ನು ಮುಂದುವರಿಸಿದೆ. ಅದಕ್ಕೆ ನೆರವಾಗುವಂತೆ ಇಂಗ್ಲಿಷ್ ಕಾವ್ಯಸಾಹಿತ್ಯವನ್ನೂ ತಕ್ಕಮಟ್ಟಿಗೆ ಶ್ರದ್ದೆಯಿಂದಲೆ ಅಭ್ಯಾಸಮಾಡಿದೆ. ನಾನು ಎಸ್.ಎಸ್.ಎಲ್. ಸಿ. ತರಗತಿಯಲ್ಲಿ ಓದುತ್ತಿದ್ದಾಗಲೆ ೧೯೨೨ರಲ್ಲಿ ‘Beginner Muse’s ಎಂಬ ಹದಿನಾರು ಪುಟದ ಪುಸ್ತಿಕೆಯನ್ನು ಪ್ರಕಟಸಿದೆ. ಈಗ ಆಲೋಚಿಸಿದರೆ ಅದನ್ನೆಲ್ಲ Eಏಕೆ ಮಾಡಿದೆನೋ ಎಂದು ಅಚ್ಚರಿಯಾಗುತ್ತದೆ. ಕೆಲವರು ಮಿತ್ರರು ನನ್ನನ್ನು ಉಬ್ಬಿಸಿದರೆಂದು ತೋರುತ್ತದೆ. ಆ ಹದಿನಾರು ಪುಟದ ಪುಸ್ತಕಕ್ಕೆ, ಬಹುಶಃ ಐನೂರು ಪ್ರತಿಗಳಿರಬೇಕು, ಎಷ್ಟು ದುಡ್ಡು ಕೊಟ್ಟೆನೊ ನೆನಪಿಲ್ಲ. ಆದರೆ ನಾನು ಅಂಥದಕ್ಕೆಲ್ಲ ಹಣ ಖರ್ಚುಮಾಡುವ ಸ್ಥಿತಿಯಲ್ಲಿರಲಿಲ್ಲ, ಬೆಳಗಿನ ಕಾಫಿ ತಿಂಡಿಗೇ ಒಂದಾಣೆಗಿಂತ ಹೆಚ್ಚು ಖರ್ಚುಮಾಡಲು ಹಿಂದೆಮುಂದೆ ನೋಡಬೇಕಾಗಿತ್ತು. ತಿಂಗಳಿಗೆ ಬರುತ್ತಿದ್ದ ಸ್ಕಾಲರ್ ಷಿಪ್ ನಾಲ್ಕೊ ಎಂಟೊ ರೂಪಾಯಿ. ಮನೆಯಿಂದ ಕಳುಹಿಸುತ್ತಿದ್ದ ಮೊತ್ತ ಅಷ್ಟಕಷ್ಟೆ. ಜೊತೆಗೆ, ನನಗೆ ಇಂಗ್ಲಿಷ್ ಕವಿಗಳ ಮತ್ತು ನಾಟಕಕರ್ತರ, ವಿಶೇಷವಾಗಿ ಷೇಕ್ಸ್ಪಿಯರನ, ಕೃತಿಗಳನ್ನು ಕೊಳ್ಳುವ ದುರ್ದಮ್ಯ ಅಭಿಲಾಷೆ. ಅಚ್ಚಾದ ‘ಬಿಗಿನರ‍್ಸ್ ಮ್ಯೂಸ್’ನ ಪ್ರತಿಗಳಲ್ಲಿ ಬಹುಪಾಲು ಕಾಂಪ್ಲಿಮೆಂಟರಿ ಕಾಪಿಗಳಾಗಿಯೆ ಖರ್ಚಾಗಿದ್ದು! ನನ್ನ ಗೆಳೆಯರು ಕೆಲವರು ತಮ್ಮ ಗೆಳೆಯರಿಗೆ ಮಾರಿದ್ದೂ ಉಂಟು. (ಅದರ ಬೆಲೆ ಕೇವಲ ಎರಡೇ ಆಣೆ! ಹಾಗೆ ಮಾರಾಟವಾದ ಪುಸ್ತಕದ ಸಂಖ್ಯೆ ಇಪ್ಪತ್ತಿರಬಹುದೋ ಅಥವಾ ಹೆಚ್ಚೆಂದರೆ ಮೂವತ್ತಿರಬಹುದು.) ಆದರೆ ನನಗೆ ಹೆಮ್ಮ. ಆ ಪುಸ್ತಕವನ್ನು ನಾನು ಖುದ್ದಾಗಿ ಕೊಂಡೊಯ್ದು ಪ್ರೊಪೆಸರ‍್ಸ್‌ ಕ್ವಾರ್ಟರ‍್ಸ್‌ ನಲ್ಲಿರುತ್ತಿದ್ದ ಬಂಗಲೆಗಳ ಮಹಾಮನೆಗಳಲ್ಲಿ ವಾಸಮಾಡುತ್ತಿದ್ದ ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಎನ್.ಎಸ್.ಸುಬ್ಬರಾಯರಿಗೂ ಇಂಗ್ಲಿಷ್ ಪ್ರೊಪೆಸರ್ ಜೆ.ಸಿ.ರಾಲೋ ಅವರಿಗೂ ಕೊಟ್ಟ ನೆನಪು ಇನ್ನೂ ಹಸಿಯಾಗಿದೆ. ಮನೆಯ ಎದುರುಗಡೆ ತಿರುಗಾಡುತ್ತಿದ್ದ ಅವರು ಪುಸ್ತಕ ತೆಗೆದುಕೊಂಡು ಉಪಚಾರದ ಪ್ರಶಂಸೆಯ ಮಾತಾಡಿ ಕವಿಯನ್ನು ಹೊರಗೆ ಕಳುಹಿಸಿ ಗೇಟು ಹಾಕಿಕೊಂಡರು. ಆದರೆ ನಾನು ಎಸ್.ಎಸ್.ಎಲ್.ಸಿ. ಪಾಸುಮಾಡಿ, ಎಂಟ್ರೆನ್ಸ್ ಪರೀಕ್ಷೆ ಮುಗಿಸಿ ೧೯೨೪ರಲ್ಲಿ ಮಹಾರಾಜಾ ಕಾಲೇಜಿಗೆ ವಿದ್ಯಾರ್ಥಿಯಾಗಿ ಹೋದಾಗ ಅವರು Beginner’s Museನ ಕವಿಯನ್ನು ಮರೆತಿರಲಿಲ್ಲ.

Beginner’s Museನಲ್ಲಿದ್ದ ಏಳು ಕವಿತೆಗಳಲ್ಲಿ (Prelude ಸೇರಿ) ಎರಡು ಮಿಲ್ಟನ್ ಕವಿಯ L’allegro  ಮತ್ತು Ilpenseroso ಕವನಗಳ ಅನುಕರಣೆಗಳು: ‘The Rural Scenes’  ಮತ್ತು ‘The Urban Scenes’. ಮೊದಲನೆಯದರಲ್ಲಿ ೧೭೧ ಪಂಕ್ತಗಳಿವೆ: ಎರಡನೆಯದರಲ್ಲಿ ೧೦೫ ಪಂಕ್ತಿಗಳಿವೆ. ‘Ode to the Cuckoo’, ‘Awake My Slumbering Heart’, ‘We Walk The Verdant’ ‘Earth With Blindfold Eyes’ ಎಂಬ ಮೂರು ವರ್ಡ್ಸ್‌‌ವರ್ತ್ನ ಅನುಕರಣೆಗಳು. ಅವುಗಳಲ್ಲಿ Ode ಬಿಟ್ಟರೆ ಉಳಿ‌ದೆರಡೂ ‘ಸಾನೆಟ್‌’ಗಳು. ‘The Massacre of Delhi’ ಎಂಬುದು ಒಂದು ಬ್ಯಾಲಡ್, ಲಾವಣಿಯ ಜಾತಿಯದು. ‘Beginner’s Museನ  ಉಪಶೀರ್ಷಿಕೆ ‘Ballads,  Descriptive Poems and Sonnets’ ಎಂದಿರುವುದೇನೊ ಸಾರ್ಥಕವಾಗಿದೆ. ಆದರೆ Ballads ಎಂಬ ಬಹುವಚನ ಮಾತ್ರ ಔಪಚಾರಿಕ; ಏಕೆಂದರೆ ಇರುವುದೊಂದೇ ಬ್ಯಾಲಡ್‌!

‘ಅರಿಕೆ’ಯಂತಿರುವ Prelude ಐದು ಗಣಗಳ ‘ಅಯಾಂಬಿಕ್ ಪೆಂಟಾಮಿಟರ್’ (Iambic Pentametre)ನಲ್ಲಿದೆ, ಅಂತ್ಯಪ್ರಾಸದ ದ್ವಿಪದಿಗಳಲ್ಲಿ. ಅಲ್ಲಿ ಕವಿ ತಾನಿನ್ನೂ ಅಂಬೆಗಾಲಿಕ್ಕುತ್ತಿರುವ ವಾಗ್ದೇವಿಯ ಶಿಶುವೆಂದೂ, ತಾನು ಹಿಡಿದಿರುವ ತಂತ್ರೀವಾದ್ಯ (ಹಾರ್ಪ್‌) ತನ್ನದಲ್ಲದ ವಿದೇಶೀಯ ವಾದ್ಯವೆಂದೂ, ಆಲಿಸುವವರ ಸಹಾನುಭೂತಿಯನ್ನು ಯಾಚಿಸುತ್ತಾನೆ. ತಾನು ಬರೆಯುತ್ತಿರುವುದು ತನ್ನ ತಾಯಿನುಡಿಯಲ್ಲ ಎಂಬುದರ ಅರಿವು ಕವಿಯಲ್ಲಿ ಎಚ್ಚತ್ತಿದೆ. ಅದಕ್ಕಾಗಿ ಒಂದು ರೀತಿಯಲ್ಲಿ ಕ್ಷಮೆ ಬೇಡುತ್ತಾನೆ.

Distance not, my friends, this bard unknown,

Who holds an alien harp and not his own; …

ಆದರೂ ತುದಿಯಲ್ಲಿ ತನ್ನ ಕವಿತೆಗೆ ಅಂಗಲಾಚಿ ಬೇಡುವುದೇನೂ ಬೇಡ, ಹಾಗೆ ಮಾಡುವುದು ನಿನ್ನ ಗೌರವಕ್ಕೆ ಕಡಮೆ ಎಂಬರ್ಥದಲ್ಲಿ ಆತ್ಯಪ್ರತ್ಯಯವನ್ನೂ ತೋರುತ್ತಾನೆ.

Ye friends and learned men,
‘Courage his youthful Iyre to sing again
With nobler notes and nobler themes inspired
By higher Muse. But ah! My begging Iyre,
Crave not, it unworthy of thy sire…

ಕೋಗಿಲೆಯನ್ನು ಕುರಿತ ‘ಓಡ್ ಟು ದಿ ಕಕೂ’ ಎನ್ನುವ ಕವನ ಹೀಗೆ ಪ್ರಾರಂಭವಾಗುತ್ತದೆ: ಐಯಾಂಬಿಕ್ ಟೆಟ್ರಾಮಿಟರಿನ ನಾಲ್ಕು ನಾಲ್ಕು ಪಂಕ್ತಿಯ ಕವನಗಳಲ್ಲಿ:

O Bird of Spring, demure, divine,
Descended from the heaven,
Upon this earth for e’er remain;
Thou art to mortals givne.

ಆದರಲ್ಲಿ ಹನ್ನೆರಡು ಪದ್ಯಗಳಿವೆ, a b a b ಅಂತ್ಯಪ್ರಾಸದಲ್ಲಿ. ಕೆಲವು ಪಂಕ್ತಿಗಳು ನಿದರ್ಶನಕ್ಕೆ:

The winters turn to , blithesome springs
By those alluring notes;
And year shall glide upon thy wings…..

* * *

If I were bird so blithe and fair,
O Bird Elysian,
Would I have lived in wood-land air
And sung for human class……..
When stretch’d I lie upon the grass
Below the dappled sky…….

Thy voice reminds me of those times
When I was blithe like thee,
And sought for thee to hear thy chimes
In every bush and tree.

The woodland hills and flowery dales,
The dewy morning’s show,
Without thy songs of mystic tales
Begin to duller grow.

The verdant dales of spring-time green,
And gentle fragrant gales
Are naught without thee, Flowery-Queen!
Or Bard of Mystic Tales;

‘ದೆಹಲಿ ಕಗ್ಗೊಲೆ’ ಎಂಬ ಲಾವಣಿ (The Massacre of Delhi) ಕುಂಟ ತೈಮೂರನ ದಂಡಯಾತ್ರೆಯ ಸಮಯದಲ್ಲಿ ನಡೆದ ಸಾಮೂಹಿಕ ಕಗ್ಗೊಲೆಗೆ ಸಂಬಂಧಪಟ್ಟಿದೆ. ಮಗನೊಬ್ಬ ಓಡಿಬಂದು ತಂದೆತಾಯಿಯರಿಗೆ ನಡೆಯುತ್ತಿರುವ ಕಗ್ಗೊಲೆಯ ಸಂಗತಿ ತಿಳಿಸಿ, ತಡಮಾಡದೆ ಓಡಿ ತಪ್ಪಿಸಿಕೊಳ್ಳಲು ಹೇಳುತ್ತಾನೆ. ಆದರೆ ಅವರೆಲ್ಲ (ತಂದೆ ತಾಯಿ, ಮಗ, ತಂಗಿ, ಒಂದು ಶಿಶು) ರಸ್ತೆಯಲ್ಲಿ ಓಡುತ್ತಿದ್ದಾಗಲೆ ಕರಾಳ ಸೈನಿಕ  ಕೊಲೆಗಾರರು ಧಾವಿಸಿ ಬರುತ್ತಾರೆ. ಮಗ ತಂದೆಗೆ ಹೇಳುತ್ತಾನೆ “ನಾವಿಬ್ಬರೂ ಸೈನಿಕರನ್ನು ಎದುರಿಸೋಣ, ಅಮ್ಮ, ತಂಗಿ, ಪುಟ್ಟ ತಮ್ಮ ಬೇಗನೆ ಓಡಿಹೋಗಿ ತಪ್ಪಿಸಿಕೊಳ್ಳಲಿ”…. ತಂದೆ ಮಕ್ಕಳಿಬ್ಬರೂ ಪ್ರತಿಭಟಿಸಿ ಭಟರ ಖಡ್ಗಗಳಿಗೆ ತುತ್ತಾಗುತ್ತಾರೆ. ಸೈನಿಕರು ಮುನ್ನುಗ್ಗಿ ತಪ್ಪಿಸಿಕೊಳ್ಳಲು ಓಡುತ್ತಿರುವ ತಾಯಿ ಮಗಳು ಕಂದ ಎಲ್ಲರನ್ನೂ ಕತ್ತಿರಿಸುತ್ತಾರೆ.

It was a day of blackest deed
When Delhi streets of fame
Did glitter well by curse’d greed
Of harsh Timoor the lame.

A youth came running on the road,
And rush’d into a house….

* * *

“Question not; no time  to spare,
But shoot I tell the news…”

“The smoking house is falling down,
And singed stands the post;
O fallen! fall’n ! this puissant town,
By fire of Afghan host!”

* * *

“The roads are fill’d with tears and blood,
Shed by the foemen’s sowrd;
And like a stormy Jumma flood
The blood adown is pour’d.”

“Oh! Children die in cradded bed,
And woman with her child;
And helpless men by panic led
Are running mad and wild.”

* * *

And as he said, he turn’d aside
“Run, mother, sister, run…..”
“But, father; turn; let us defend;
Let mother, sister run…”
“Smash them down!” the foemen cried
And hundred swords did flash…
The mother shriked’d and clasp’d her child
That trembled at the sight.
“Down! Down with her! let not a child
Or woman live tonight.”

* * *

Before her kiss had leffft the cheek
The Afghan sword had met
Her throat; and with a moaning squeak
Down dropt before her pet!…

ಕಡೆಗೆ ಆ ಮಗುವನ್ನು ಕತ್ತರಿಸುತ್ತಾರೆ. ಕವಿಯ ಆಗಿನ ಭಾವುಕತೆ ಎಷ್ಟರಮಟ್ಟಿಗೆ ಏರಿತ್ತು ಎಂದರೆ ಶಿಲುಬೆಗೇರಿದ ಯೇಸುಕ್ರಿಸ್ತನ ಬಾಯಲ್ಲಿ ಬಂದ ಮಾತು ಆ ತೊದಲುವ ತುಟಿಗಳಿಂದ ಹೊಮ್ಮುತ್ತದೆ!

Tho’ yet a child she dying cried
“Oh Heaven Forgiven My Foes!”

‘ಬಿಗಿನರ್ಸ್ ಮ್ಯೂಸ್’ ನಲ್ಲಿರುವ ಎರಡು ಸಾನೆಟ್ಟುಗಳೂ ಪ್ರಕೃತಿಯ ಪ್ರೇಮ ಮತ್ತು ಪ್ರಕೃತಿಸೌಂದರ್ಯಗಳನ್ನು ಕುರಿತವು. abba, abba, cde, cde ಕ್ರಮದಲ್ಲಿ ಅಂತ್ಯ ಪ್ರಾಸಗಳನ್ನೊಳಗೊಂಡ ಹದಿನಾಲ್ಕು ಪಂಕ್ತಿಗಳಿವೆ. ಮುಂದೆ ನಾನು ಕನ್ನಡದಲ್ಲಿ ಸಾನೆಟ್ ಪ್ರಯೋಗ ನಡೆಸಿದಾಗ ಮೊದಮೊದಲು ಈ ಪ್ರಾಸಕ್ರಮವನ್ನು ದ್ವೀತಿಯಾಕ್ಷರದಲ್ಲಿಯೆ ನಡೆಸಿದ್ದುಂಟು. ಅವು ಯಾವುವೂ ಕಾವ್ಯದೃಷ್ಟಿಯಿಂದ ಅಚ್ಚು ಹಾಕಿಸಲು ಯೋಗ್ಯವಾಗಿರಲಿಲ್ಲವಾದ್ದರಿಂದ ಹಸ್ತಪ್ರತಿಯ ಪ್ರಯೋಗಶಾಲೆಯಲ್ಲಿಯೆ ಇವೆ. ಮುಂದೆ ಉಚಿತ ಸಂದರ್ಭದಲ್ಲಿ ಅವುಗಳನ್ನು ‘ನೆನಪಿನ ದೋಣಿಯಲ್ಲಿ’ ಉದಾಹರಣ ಮಾತ್ರವಾಗಿ ಕೊಡಲಿದ್ದೇನೆ: ಇಲ್ಲಿ ಈ ಎರಡೂ ಸಾನೆಟ್ಟುಗಳು ಮೇಲೆ ಹೇಳಿದ ಒಂದೇ ಕ್ರಮದ ಅಂತ್ಯಪ್ರಾಸವನ್ನೊಳಗೊಂಡಿರುವುದನ್ನು ಗಮನಿಸಬಹುದು.

AWAKE MY SLUMBERING HEART!
Awake, my slumbering heart! the breezy morn
Displays its glorious  scenes: the rosy east
Adorned by Aurora, who nobly drest
With bright-some Lucifer, smiles on the lorn
And misty land; the fragrant flowers adorn
The lovely dale and wave their dewy crests,
To call the drowsy birds of speckled brests,
Who by the lonely hunter’s earnest horn
Awaken’d send their charming chimes. O leave
The Poet’s leaf or painter’s flower; for they
Can sing and picture well, but can they show
The Nature’s charm? Or heavenly fragrance give?
Or breeze of morning blow? O do not stay;
The mountain Fay invites you on the brow.

WE WALK THE VERDANT EARTH
WITH BLINDFOLD EYES
We walk the verdant earth with blindfold eyes;
With deafen’d ears we hear. The scented rose
Perfumes the brezee, but not allures the nose!
The angels fair descend their heavenly skies,
To share the bliss of His creations nice,
Tho’ share they not the string of human woes
But man, such great and happy blessings, throws;
Embracing Woe, renouncing bliss he dies.
O God! I know not why these men disdain
The Zephyrs cool, and phoebus bright, and sky
Devoid or dappal’d by the clouds. O Love!
If thou art Nature’s faithful friend, constrain
The feeble hearts to love the Nature high,
The emblem of the Great who rules above.

ಮೇಲಣ ಎರಡು ಸಾನೆಗಳಲ್ಲಿಯೂ ಮತ್ತು `The rural scenes’ ಮತ್ತು `The urban scenes’ ಗಳಲ್ಲಿಯೂ ಪಾಶ್ಚಾತ್ಯಾರ ಅನುಕರಣ ಎಷ್ಟರಮಟ್ಟಿಗೆ ಆಗಿದೆ ಎಂದರೆ ಭಾರತೀಯವಾದ ಮತ್ತು ಭಾರತೀಯ ಪೌರಾಣಿಕವಾದ ಯಾವ ಹೆಸರುಗಳೂ ಕಾಣಸಿಗುವುದಿಲ್ಲ. ಅರುಣ, ಉಷಾ, ಸೂರ್ಯ, ಚಂದ್ರ, ಆಕಾಶ, ಸ್ವರ್ಗ, ಮಾರುತಾದಿಗಳನ್ನು ಧ್ವನಿಸುವ ಗ್ರೀಕರ ಮತ್ತು ಗ್ರೀಕ್ ಪುರಾಣ ದೇವದೇವತೆಗಳ ಹೆಸರನ್ನೆ ಬಳಸಲಾಗಿದೆ:

Aurora, Lucifier, Zephyr, Pheobus, Mammon,
Hermes, Pan, Elysian, Aglaia, Ihalia,
Fauns, Naiades, Jove, Hades, Cupid,
Stygian, Venus, Seyila, Charybdis,
Nymphs, Pluto, Bacchus, Euterpe,
Leto, Apollo, Hera, Ortygia, ಇತ್ಯಾದಿ

“ಶಬ್ದಜಾಲಂ ಮಹಾರಣ್ಯಂ ಸ್ಕೃತಿವಿಭ್ರಮ ಕಾರಣಂ!” ಎಂಬ ಹಾಗೆ ಆಗುತ್ತಿದೆ, ಈ ಹೆಸರುಗಳ ಪಟ್ಟಿಯನ್ನು ಓದಿದಾಗ, ಈಗ ಪರಭಾಷೆಯಲ್ಲಿ ಬರೆಯಲು ಹೋಗುವವರಿಗೆಲ್ಲ ಒಂದು ಎಚ್ಚರಿಕೆಯ ಸವಾಲಿನಂತೆಯೊ? ಅಥವಾ ಭರ್ತ್ಸನೆಯ ಮೂದಲಿಕೆಯಂತೆಯೊ?

‘The Rural scenes’ ಎಂಬ ದೀರ್ಘ ಕವನ ಹಳ್ಳಿಯ ಬದುಕಿನ ಸೌಂದರ್ಯ ಸ್ವಾರಸ್ಯ ಮುಗ್ಧತೆಗಳನ್ನು ಚಿತ್ರಿಸಲು ಹೊರಟಿದೆ. ಅದು ಪಟ್ಟಣದ ಬಾಳನ್ನು ಹಾಳು ಎಂದು ತೆಗಳುತ್ತಾ ಪ್ರಾರಂಭವಾಗುತ್ತದೆ.

Avaunt, ye weary scenes
Of streets tumultuous and mansions high,
Begot but recently
By Mammon’s craft to rase the jovial greens!
Let gloomy minds abide,
And taste those jollities, to suffer loss,
Like those who from the glass
Of Circe, drankfull the Necromantic drugs,
And turn’d to hateful slugs
Tho’ human senses sacred, yet undied.

ಬರೆಯುತ್ತಿರುವ ಕವಿ ಭಾರತೀಯ ಎಂಬುದರ ಚಿಹ್ನೆಯೆ ಇಲ್ಲ! ದೃಷ್ಟಾಂತಗಳೆಲ್ಲ ಗ್ರೀಕ್ ಪುರಾಣ ಕಥೆಗಳಿಗೇ ಸಂಬಂಧಪಟ್ಟುವಾಗಿವೆ.

Hail, thou son of Hermes, pan!
Hail, thou ancient site of man!
Clad with buxom grass so green,
And bright like Elysian scene…….

ಹಾಸ್ಯಾಸ್ಪದತ್ವ ಪರಮ ಶಿಖರ ಮುಟ್ಟುತ್ತದೆಃ ಹಳ್ಳಿಯ ಮಹಿಳೆಯರೊಡನೆಯೂ ಮಹನೀಯರೊಡನೆಯೂ ಕವಿ ಒಲೆಯ ಬಳಿ ಬೆಂಕಿ ಕಾಯಿಸುತ್ತಾ ಕುಳಿತು ಹೇಳುವ ಕಥೆಗಳೆಲ್ಲ ಗ್ರೀಕ್ ಪುರಾಣದವು!

And sit beside the rural fire
To chat with dame and household sire,
Of ancient mythsH how Cronus tried
To eat his sons and how they vied
And won; how Pluto proud became
The nether Jove; or how the game
Of Orpheus brought his lovely bride
Eurydice who sudden died;
And by folly lost his wife
And on the Bacchus feast his life….

‘The Urban Scenes’ ಎಂಬುದು ಹಳ್ಳಿಯ ಜೀವನದ ಅನಾಗರಿಕತೆಯನ್ನು ಮೂದಲಿಸಿ ತಿರಸ್ಕರಿಸಿ ಪಟ್ಟಣದ ನಾಗರಿಕ ಜೀವನದ ಮೇಲ್ಮೆಯನ್ನು ಘೋಷಿಸುತ್ತದೆ. ಅಲ್ಲಿಯೂ ಎಲ್ಲ ಬರಿಯ ಗ್ರೀಕ್ ಪುರಾಣದ ನಿದರ್ಶನಗಳೆ!

Avaunt, ye lustful scenes,
Born of ages old where knowledge crude
Dwells in very rude
Mind, uncivilized in civic means!

ಎಂದು ಮೊದಲಾಗಿ ಮುಂದುವರಿಯುತ್ತದೆಃ

Hail, thou offspring of Leto
Hail, thou mighty Apollo!…..

ಪಟ್ಟಣದ ವೈಭವವನ್ನು ಹೊಗುಳತ್ತಾನೆ ಕವಿಃ

Hail, ye cities, towns, new-born!
And garners of the farmer’s Corn,

(ಅಂದರೆ ಹಳ್ಳಿಯವರು ಬೆಳೆದದ್ದನ್ನೆಲ್ಲ ತಂದು ತುಂಬಿಕೊಳ್ಳುವ ಕಣಜಗಳೆಂದು ಪಟ್ಟಣಗಳ ಪ್ರಶಂಸೆ!!)

Dight with coloured mansions high
That seem to kiss the cloud sky;
And paved streets of measured plan,
Surrounded by the sculptured lawn,
With surpassing beauty run,
As if the rustic swain to stun;(!!)….

* * *

Lords with ladies handsome, fair,
Walk along and pair by pair,
Proud with glittering garments dight,….
And Night accompany’d by light…

(ಕಾಡಿನ ಹಳ್ಳಿಮನೆಯಲ್ಲಿ ಚಿಮಿನಿ ಬೆಳಕನ್ನೆ ಕಂಡ ಕವಿ ನಗರದಲ್ಲಿ ವಿದ್ಯುದ್ದೀಪಾದಿಗಳನ್ನು ಕಂಡು ಬೆಪ್ಪು ಬೆರಗಾಗಿರುವಂತೆ ತೋರುತ್ತದೆ!! ಅಷ್ಟೆ ಸಾಕು ಪಟ್ಟಣದ ಪ್ರಶಂಸೆಗೆ!)

ನಗರದಲ್ಲಿ ಶಾಲೆಗಳೂ ವಿಶ್ವವಿದ್ಯಾನಿಲಯದ ಕಾಲೇಜುಗಳೂ ಇರುವುದನ್ನು ಶ್ಲಾಘಿಸಿ ಕವಿ ವಾದಿಸುತ್ತಾನೆ ನಗರದ ಪರವಾಗಿಃ

The temple of learning best
Where Muses sit upon the crest.
Will bring up minds to glow-like fire,
Such of armours or of lyre,
Who try to raise a nation’s name
In Art or Muse or Warlike game;
And who if staid in rural parts
Would not have known the civic arts,
But fad’d like scented rose that blooms
To waste its fragrance O’er the brooms
And other forest trees in vain….

ಇದೆಲ್ಲ ನಾನು ಎಸ್.ಎಸ್.ಎಲ್.ಸಿ ಓದುತ್ತಿದ್ದಾಗ ಮತ್ತು ಅದಕ್ಕು ತುಸು ‘ಮುನ್ನ ೧೯೨೧-೨೨ರಲ್ಲಿ ಬರೆದ ಅನುಕರಣ ಮಾತ್ರದ ಅಭ್ಯಾಸಗಳು. ಮುಂದೆ ೧೯೨೪-೨೫ರಲ್ಲಿ ಬರೆದಿರುವ ಇಂಗ್ಲಿಷ್ ಕವನಗಳಲ್ಲಿ ಈ ಬಾಲಿಶ ಅನುಕರಣೆ ತಕ್ಕಮಟ್ಟಿಗೆ ತಿರೋಹಿತವಾಗಿರುವುದನ್ನು ನೋಡಬಹುದು. ಆದರೂ ಅನ್ನು ನೋಡಿದ ಭಾರತೀಯರಾದ ಹಿರಿಯರಾರಿಗೂ ನನಗೆ ಬುದ್ಧಿ ಹೇಳುವ ಸದವಕಾಶ ದೊರೆಯಲಿಲ್ಲ. ಆಳುವವರ ಭಾಷೆಯ ವಿಚಾರದಲ್ಲಿ ಅತ್ಯಂತ ದಾಸ್ಯದ ಮನೋಧರ್ಮ ರೂಢಮೂಲವಾಗಿಬಿಟ್ಟಿತ್ತು! ಐರೋಪ್ಯ ವೇಷಭೂಷಣ ಹಾಕಿಕೊಂಡ ಎಂತಹ ಬೆಪ್ಪನನ್ನೂ ಮೇಧಾವಿ ಎಂದು ಗೌರವಿಸಿದಂತೆ, ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವವನನ್ನು ಅದ್ಭುತ ಜ್ಞಾನಿ ಎಂದು ಶ್ಲಾಘಿಸುತ್ತಿದ್ದಂತೆ, ಇಂಗ್ಲಿಷ್ ನಲ್ಲಿ ಕವನ ರಚನೆ ಮಾಡುವುದನ್ನೆ ಪ್ರತಿಭೆಯ ಒಂದು ಲಕ್ಷಣವೆಂದು ಭಾವಿಸಿದ್ದರೇನೂ?