ಅಂಥಾ ಅಜ್ಜಿಯ ನೆನಪಾದರೂ ನನಗೆ ಸ್ಪಷ್ಟವಾಗಿದೆಯೇ? ಇರುವ ಒಂದೇ ಒಂದು ನೆನಪೂ ತುಂಬ ಮಬ್ಬುಮಬ್ಬು. ಅಜ್ಜಿಯ ಚಿತ್ರವಂತೂ ಕಣ್ಣಿಗೆ ಕಟ್ಟುವುದೇ ಇಲ್ಲ. ನಾನು ತುಂಬ ಚಿಕ್ಕವನಾಗಿದ್ದೆ ಎಂಬ ಕಾರಣದ ಜೊತೆಗೆ ಇನ್ನೊಂದು ಮುಖ್ಯವಾದ ಕಾರಣ ನನಗೆ ಹೊಳೆಯುತ್ತಿದೆ: ಅದೇನೆಂದರೆ, ಅಜ್ಜಿಯನ್ನು ಬಹುಶಃ ನಾನೆಂದೂ ಬೆಳಕಿನಲ್ಲಿ ನೋಡಿರಲಿಕ್ಕೇ ಇಲ್ಲ! ಎಲ್ಲ ಮಲೆನಾಡಿನ ಹಳೆಯ ಮನೆಗಳಲ್ಲಿರುಂತೆ ಹಿರಿಕೊಡಿಗೆಯಲ್ಲಿಯೂ ಬೆಳಕಿಗೆ ಪ್ರವೇಶವಿದ್ದ ಸ್ಥಳಗಳೆಂದರೆ ಹೊರಜಗಲಿ ಮತ್ತು ಚೌಕಿಯ ಅಂಗಳದ ಸುತ್ತಣ ಕಿರು ಜಗಲಿಗಳು. ಒಳಗೆ ಮಾಣಿಗೆಯಲ್ಲಿ ಕೋಣೆಗಳಲ್ಲಿ ಅಡುಗೆಯ ಮನೆಯಲ್ಲಿ ಕತ್ತಲೆಯದೇ ದರ್ಬಾರು. ಆ ಕತ್ತಲೆಯ ಆಸ್ಥಾನಗಳಿಗೆ ಬೆಳಕಿಗೆ ‘ಅಪ್ಪಣೆಯಿಲ್ಲದೆ ಪ್ರವೇಶವಿಲ್ಲ!’ ಮಾತ್ರವಲ್ಲ, ಪ್ರವೇಶಿಸಲು ಅಪ್ಪಣೆಯಂತಿರುವ ಬೆಳಕಿಂಡಿಗಳೂ ಕತ್ತಲೆಯ ಕಾವಲುಗಾರರಂತಿದ್ದ ದಪ್ಪದಪ್ಪ ಮರದ ಸರಳುಗಳಿಂದ ರಕ್ಷಿತವಾಗಿದ್ದುದರಿಂದ ಆ ಇಕ್ಕಟ್ಟಿನಲ್ಲಿ ತೂರಿ ಬಂದ ಬೆಳಕು ತನ್ನ ಸತ್ವವೆಲ್ಲವನ್ನೂ ಕಳೆದುಕೊಂಡು, ಕತ್ತಲೆಕೈ ಜೀವವನ್ನೆ ಹಿಂಡಿಬಿಟ್ಟ ಬೆಳಕಿನ ಬೆಳ್ಳಟ್ಟೆ ಮಾತ್ರವಾಗುತ್ತಿತ್ತು! ತುಂಬು ಮುಪ್ಪಿನ ಅಜ್ಜಿ ಯಾವಾಗಲೂ ಹೊರಗೆ ಬರುತ್ತಿರಲಿಲ್ಲವಾದ್ದರಿಂದಲೂ, ನಾನು ಅಜ್ಜಿಯನ್ನು ಕತ್ತಲೆಯಲ್ಲಿಯೆ ನೋಡುತ್ತಿದ್ದುದರಿಂದಲೂ ಅಜ್ಜಿಯ ಚಿತ್ರ ಕಣ್ಣಿಗೆ ಕಟ್ಟದಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಹೊರಗಣ ಕಣ್ಣಿಗೋ ಅಥವಾ ಮನಸ್ಸಿನ ಕಣ್ಣಿಗೋ ನಾನು ಹೇಳಲಾರೆ: ಅಜ್ಜಿಯ ನೆನಪನ್ನು ತರುವ ಒಂದೇ ಒಂದು ಸನ್ನಿವೇಶದ ಚಿತ್ರ ಮಾತ್ರ ಸುದೂರ ಸ್ಮೃತಿಯ ದಿಗಂತದಲ್ಲಿ ಜನ್ಮಾಂತರ ಸ್ಮರಣೆ ಎಂಬಂತೆ ಮಸುಗುಮಸುಗಾಗಿ ತೋರುತ್ತಿದೆ:

ಬೆಳಗಿನ ಹೊತ್ತು ಅಂದರೆ ಹೊತ್ತೇರಿ ಹೊರಗೆಲ್ಲ ಎಳಬಿಸಿಲು ನಲಿದಾಡುವ ಸಮಯ. ಆದರೆ ಅಲ್ಲಿ, ಅಡುಗೆ ಮನೆಯ ‘ಒಲೆಸರ’ದ ಮೂಲೆಯಲ್ಲಿ ಕತ್ತಲೆಯ ನೆಲೆವೀಡು. ಬೆಳಕು ಏನೂ ಇಲ್ಲವೆಂದಲ್ಲ. ಇದೆ! ಕತ್ತಲೆಯನ್ನು ಬಹಿರಂಗಪಡಿಸುವ ದುರುದ್ದೇಶಕ್ಕೆ ಎಷ್ಟು ಬೇಕೋ ಅಷ್ಟೇ! ಮರದಿಂದ ಮಾಡಿದ ದಪ್ಪ ದಪ್ಪ ಚೌಕನೆಯ ಸರಳುಗಳಿಂದ ತಾನು ಗಾಳಿ ಬೆಳಕುಗಳ ಪ್ರವೇಶದ್ವಾರ ಎಂಬ ಕರ್ತವ್ಯಕ್ಕೇ ಭಂಗ ತಂದುಕೊಂಡಿದ್ದ ಆ ‘ಕಿಟಕಿ’ ಹೆಸರಿಗೆ ಮಾತ್ರ ‘ಬೆಳಕಂಡಿ’ಯಾಗಿತ್ತು! ಇನ್ನು, ಹಿತ್ತಲುಕಡೆಗೆ ಹೋಗುವ ಬಾಗಿಲಿಂದ ಒಂದಷ್ಟು ಸೋತ ಬೆಳಕು ಅಕ್ರಮ ಪ್ರವೇಶ ಮಾಡಿ ದಿಗಿಲುಗೊಂಡಂತಿತ್ತು!

ಆ ಬೆಳಕಲ್ಲದ ಬೆಳಕಿನಲ್ಲಿ, ಹೌದೊ ಅಲ್ಲವೊ ಎಂಬಂತೆ ಕಾಣಿಸುತ್ತಿದ್ದುವು, ಅಡುಗೆ ಮನೆಯ ಮೂಲೆಯಲ್ಲಿ ಗೋಡೆಗೆ ಅಂಟಿಕೊಂಡಂತಿದ್ದ ಮೂರು ನಾಲ್ಕು ಮಣ್ಣಿನ ತೋಳಿನ ಒಲೆಗಳು. ನಮಗೆ ಆ ಸ್ಥಳವನ್ನು ನಿರ್ದೇಶಿಸುತ್ತಿದ್ದ ಪದ-‘ಒಲೆಸರ!’ ಬಹುಶಃ ಒಲೆಗಳ ಸರವಾಗಿದ್ದುದರಿಂದಲೆ ಆ ಹೆಸರು, ಬಂದಿರಬೇಕು. ಆ ‘ಒಲೆಸರ! ಮಕ್ಕಳಿಗಂತೂ, ಮಾತೆಯ ಮಡಿಲಂತೆ, ತುಂಬ ಹಿತಕರವಾದ ಜಾಗ. ಮಳೆಗಾಲ ಚಲಿಗಾಲಗಳಲ್ಲಿ ಅಲ್ಲಿ ಬಹಳ ನೂಕು ನುಗ್ಗಲು, ಈಗ ಸಿನಿಮಾಕ್ಕೆ ಪಟ್ಟಣಗಳಲ್ಲಿ ಕ್ಯೂ ಇರುವಂತೆ! ಮಕ್ಕಳು ಹೆಚ್ಚು ಸಂಖ್ಯೆಯಲ್ಲಿರುವ ಮನೆಗಳಲ್ಲಿ ಅಲ್ಲಿ ಹೊಡೆದಾಟ ಬಡಿದಾಟಗಳೂ ನಡೆಯುವುದುಂಟು! ಹಿರಿಯರಿಂದ ಬೈಸಿಕೊಂಡು ಎಳೆಸಿಕೊಳ್ಳುವುದೂ ಉಂಟು! ಆದರೆ ಹಿರಿಕೊಡಿಗೆಯಲ್ಲಿ ನಾನು ಕಿಶೋರನಾಗಿದ್ದಾಗ ಇತರ ಓರಗೆಯ ಮಕ್ಕಳಾರೂ ಇದ್ದುದು ನನಗೆ ನೆನಪಿಲ್ಲ. ಆಮೇಲೆಯೂ ನನ್ನ ಇಬ್ಬರು ತಂಗಿಯರಲ್ಲದೆ ಬೇರೆ ಮಕ್ಕಳು ಅಲ್ಲಿದ್ದುದು ನೆನಪಿಗೆ ಬರುವುದಿಲ್ಲ. ಆದ್ದರಿಂದ ಆ ಒಲೆಸರ ನನಗೆ ಏಕಚ್ಛತ್ರಾಧಿಪತ್ಯವಾಗಿತ್ತೆಂದು ತೋರುತ್ತದೆ.

ಅವ್ವ, ಅತ್ತೆಮ್ಮ ಆ ಒಲೆಯ ಬೆಂಕಿಯ ಕೆಂಬೆಳಕು ಮಬ್ಬಿನಲ್ಲಿ ಆ ಒಲೆಸರದ ವಲಯದಲ್ಲಿ ಏನೋ ಮಾಡುತ್ತಿದ್ದಾರೆ. ಆದರೆ ಅಜ್ಜಿ ಒಲೆಗೆ ತೀರ ಸಮೀಪದಲ್ಲಿ ಕುಳಿತು ಅಪ್ಪು ಮಾಡುತ್ತಿದ್ದಾರೆ, ಸೀಅಪ್ಪು! ಆ ಸಿಹಿಅಪ್ಪು ಬೇರೆ ಯಾರಿಗೂ ಅಲ್ಲ, ನನಗಾಗಿ. ಅನ್ನ ಅಕ್ಕಿ ಹಿಟ್ಟಿಗೆ ಬಾಳೆಯ ಹಣ್ಣನ್ನು ಕಲಸಿ ನುರಿಯುತ್ತಿದ್ದಾರೆ. ಇಕ್ಕೈಗಳಿಂದಲೂ ರೊಟ್ಟಿ, ದಪ್ಪ ರೊಟ್ಟಿ, ತಟ್ಟುತ್ತಿದ್ದಾರೆ. ಹೆಂಚಿನಲ್ಲಿ ಬೇಯಿಸುತ್ತಿದ್ದಾರೆ. ಆ ಅಡುಗೆಯ ಒಲೆಯ ಕಿರುಬೆಂಕಿಯ ಕೆಂಬೆಳಕು ಅಜ್ಜಿಯ ಶೀರ್ಣವದನದ (ಪಾಪ! ಅರವಿಂದ ಎಂದೋ ಬಿದ್ದುಹೋಗಿದೆ!) ಮೇಲೆ ತನ್ನ ಛಾಯಲೀಲೆಯಲ್ಲಿ ತೊಡಗಿದೆ! ಸ್ಞಿ ಇಅಪ್ಪು ಸುಡುವ ಸ್ಞಿ ಇಕಂಪು ಮೂಗಿಗೆ ಎಷ್ಟು ಅಪ್ಯಾಯಮಾನವಾಗಿದೆ! ಬಾಯಿಗೆ?

ನೆನಪಿನ ಬಾಯಿಗೆ ತುಂಬ ರುಚಿಯಾಗಿದ್ದಂತೆಯೆ ಭಾವನೆ. ಆದರೆ ನನ್ನ ಆ ಭಾವನೆ ಮೊನ್ನೆ ಮೊನ್ನೆ ಮೂದಲಿಕೆಗೆ ಪಕ್ಕಾಗಿಬಿಟ್ಟಿತು: ಅದನ್ನೂ ಹೇಳಿಬಿಡುತ್ತೇನೆ.

ಅಜ್ಜಿ ಸುಟ್ಟು ಕೊಟ್ಟ ಆ ಸಿಹಿಅಪ್ಪಿನ ವಿಚಾರವಾಗಿ ನಾನು ಸ್ವಲ್ಪ ಭಾವವಶನಾಗಿಯೆ ಆಗಾಗ ಮಾತನಾಡುತ್ತಿದ್ದುದುಂಟು, ನನ್ನ ಸೌಭಾಗ್ಯವತಿ ಮತ್ತು ಮಕ್ಕಳು ಇಂದುಕಲಾ ತಾರಿಣಿ-ಮುಂದೆ.

“ನಿಮಗೆ ಅಂದು ಅದು ರುಚಿಯಾಗಿದ್ದಿರಬಹುದು. ಆದರೆ ಈಗ ಅದನ್ನು ಮಾಡಿಕೊಟ್ಟರೆ ನೀವು ತಿನ್ನುತ್ತೀರೋ ಇಲ್ಲವೋ” ಎಂದು ನನ್ನ ಸೌಭಾಗ್ಯವತಿ, ತನ್ನ ಪದ್ಧತಿಯಂತೆ, ನನ್ನ ಭಾವವಶತೆಗೆ ತುಸು ತಣ್ಣೀರೆರಚಿದಳು.

ಆ ಟೀಕೆಯ ಹಿಂದೆ ನಾನು ಪ್ರಾಚೀನತೆಯನ್ನೆಲ್ಲ ಗ್ರಾಮ್ಯರೂಕ್ಷ ಎಂದು ಹಳಿಯುವ ಆಧುನಿಕತೆಯ ಮೂದಲಿಕೆಯನ್ನು ಮೂಗಾಳಿ ಹಿಡಿದು ಪ್ರತಿಭಟಿಸಿದೆ. ಇಂದ್ರಭವನ ಚಂದ್ರಭವನಗಳ ಬಹು ಬೆಲೆಯುಳ್ಳ ನವುರಾದ ತಿಂಡಿಗಳ ಮುಂದೆ ಅವಮಾನಿತವಾಗಿ ತಲೆಬಾಗಿ ನಿಂತಂತೆ ತೋರಿತು, ಪೂಜ್ಯೆ ಅಜ್ಜಿಯ ಅಕ್ಕಿಹಿಟ್ಟು-ಅನ್ನ-ಬಾಳೆ ಹಣ್ಣಿನ ಆ ಸಿಂಇಅಪ್ಪು.

ಸವಾಲು ಹಾಕಿದೆ “ನೀವು ಮಾಡಿಕೊಡಿ; ಆಮೇಲೆ ಹೇಳುತ್ತೇನೆ.”

ನನ್ನ ಸವಾಲು ಸ್ವೀಕೃತವಾಗಿ ತಯಾರೂ ಆಯಿತು ಸೀಅಪ್ಪು! ತಟ್ಟೆಯಲ್ಲಿದ್ದ ಆ ಆರ್ಷೇಯ ಪದಾರ್ಥವನ್ನು ಕಂಡು ನನ್ನ ಕಣ್ಣು ತುಂಬ ಶಂಕೆಗೊಳಗಾಯಿತು. ಮೇಜಿನ ಮೇಲೆ ನನ್ನ ಮುಂದೆ ಇದ್ದ ಅದು ತಿನ್ನುವುದಕ್ಕಿರಲಿ ನೋಡುವುದಕ್ಕೂ ಕನಿಕರಕ್ಕೆ ಅರ್ಹವಾದ ವಸ್ತುವಾಗಿ ತೋರಿತು. ತುಟಿಗೆ ರಂಗು ಬಳಿದುಕೊಂಡು, ಅತ್ಯಂತ ನವೀನ ಶೈಲಿಯಲ್ಲಿ ಕೇಶವಿನ್ಯಾಸಗಳನ್ನು ರಚಿಸಿಕೊಂಡು, ಮನಮೋಹಿಸುವ ತೆಳು ಬಣ್ಣದ ಸೀರೆಯುಟ್ಟೂ ರಸಿಕ ದರ್ಶನೀಯವಾದ ಅಂಗಭಾಗಗಳನ್ನು ಧ್ವನಿಪೂರ್ವಕವೆಂಬಂತೆ ಪ್ರದರ್ಶಿಸುತ್ತಾ ನಿಂತಿರುವ ಅರ್ವಾಚೀನ ‘ಅಂಗಡಿ ಹುಡುಗಿ’ಯರ ಮುಂದೆ ಹರಳೆಣ್ಣೆ ಹಚ್ಚಿ, ಮರದ ಬಾಚಣಿಗೆಯಲ್ಲಿ ಬಾಚಿ, ಹರಳೆಲೆ ಹಾಕಿ ಮಂಡೆ ಕಟ್ಟಿಕೊಂಡು, ಮೈಯೆಲ್ಲಾ ಮುಚ್ಚುವಂತೆ ಜಿಡ್ಡು ಸೀರೆಯುಟ್ಟಿರುವ ಗತಕಾಲದ ಮುದುಕಿಯಂತೆ ಕನಿಕರಣೀಯವಾಗಿ ತೋರಿತು ಆ ಸೀಅಪ್ಪು, ಜಾಮೂನು, ಜಾಂಗೀರು, ಕಜೂರ, ಜಿಲೇಬಿ, ರಸಗುಳ್ಳ ಇತ್ಯಾದಿ ವರ್ಣಗಂಧ ರಸಮಯವಾದ ಆಧುನಿಕ ತಿಂಡಿಗಳ ಮುಂದೆ!-ಅಯ್ಯೋ ಎಷ್ಟು ದೂರ ಸರಿದು ಪತಿತವಾಗಿ ಹೋಗಿದೆ, ನನ್ನ ಅಂದಿನ ಸರಳ ಗ್ರಾಮ್ಯಾಭಿರುಚಿ? ಎಂತಹ ಅಧೋಗತಿಗೆ ಇಳಿದುಬಿಟ್ಟಿದ್ದೇನೆ!-ಎನ್ನಿಸಿತು ನನಗೆ. ಗತಕಾಲದ ನೆನಪಿನ ಲೋಕದಲ್ಲಿ ಪವಿತ್ರವಾಗಿದ್ದು ಆ ಪ್ರಿಯ ವಸ್ತುವನ್ನು ಪದಚ್ಯುತಿಗೊಳಿಸಿ ವರ್ತಮಾನ ಕಾಲದ ನೈಜ ಲೋಕದ ನಿಷ್ಠುರತೆಗೆ ಇಳಿಸಿದುದೆ ನನ್ನ ದೊಡ್ಡ ತಪ್ಪು ಎಂದುಕೊಂಡೆ.

ಆದರೆ ಮನಸ್ಸು ದೃಢಮಾಡಿಕೊಂಡೆ: ನನ್ನ ನಾಲಗೆಗೂ ಕಣ್ಣಿಗೂ ಎಷ್ಟೇ ಕಷ್ಟವಾದರೂ ಅಸಹನೀಯವಾದರೂ ಚಿಂತೆಯಿಲ್ಲ, ಅಜ್ಜಿಗೆ ಆಗಲಿರುವ ಅವಮಾನವನ್ನು ತಪ್ಪಿಸಲೇಬೇಕು ಎಂದು; ಸೀಅಪ್ಪಿನ ಮರ್ಯಾದೆಯನ್ನು ಬಿಟ್ಟುಕೊಡದೆ ಅಜ್ಜಿಯ ಗೌರವವನ್ನು ರಕ್ಷಿಸಲೇಬೇಕು ಎಂದು. ತುಂಬ ಸಂತೋಷವನ್ನೂ ಸ್ವಾದುವನ್ನೂ ನಟಿಸುತ್ತಾ ಭಕ್ಷಿಸತೊಡಗಿದೆ! ಸ್ವಲ್ಪ ಮುಂದುವರಿಯುವುದರೊಳಗಾಗಿ ಚರ್ವಣ ಕಾರ್ಯ ತಟಸ್ಥಗೊಂಡಿತು: ನನ್ನ ನೆನಪಿನ ರುಚಿಯ ಭಾವನೆಗೂ ಸದ್ಯದ ನಾಲಗೆಯ ಅನುಭವಕ್ಕೂ ಎಷ್ಟು ದೂರಾಂತರ ಒದಗಿಬಿಟ್ಟಿದೆ! ಆ ದೂರವನ್ನು ಕಡಿಮೆ ಮಾಡಿ ಆದಷ್ಟು ಸಮೀಪಗೊಳಿಸಲು ಮಾಡಿದ ಪ್ರಯತ್ನವೆಲ್ಲ ವಿಪರೀತ ಫಲಿತಕ್ಕೇ ಹಾದಿಯಾಯಿತು. ಮೆಲುಕು ಹಾಕಿ ಚಿಂತಿಸಿದಷ್ಟೂ ಅಂತರದ ದೂರ ಹೆಚ್ಚುಹೆಚ್ಚಾಗತೊಡಗಿತು. ಕಡೆಗೆ ಆ ದೂರ ಪೂರಾ ಹೆಚ್ಚಾಗಿ ತನ್ನ ಅಧೀನದಲ್ಲಿರುವ ವಸ್ತುವನ್ನು ಜಿಹ್ವೆ ಎಲ್ಲಿ ವಿಸರ್ಜಿಸಿಯೆ ಬಿಟ್ಟು ಅಜ್ಜಿಯ ಸೀಅಪ್ಪಿನ ಗೌರವಕ್ಕೆ ಚಿರಂತನ ಹಾನಿಯನ್ನು ತಂದು ಬಿಡುತ್ತದೆಯೋ ಎಂಬ ಭೀತಿಯಿಂದ ಸೀಅಪ್ಪಿನ ಚರ್ವಣವನ್ನು ನಾಲಗೆಯ ಅಧಿಕಾರದಿಂದ ತಟಕ್ಕನೆ ತಪ್ಪಿಸಿ ಗಂಟಲಿನ ಶವಕ್ಕೆ ತಳ್ಳಿ ಜಠರ ಪ್ರವೇಶ ಮಾಡಿಸಿಬಿಟ್ಟೆ!

ಅದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಾ ನನ್ನೆದುರು ಮೇಜಿನಾಚೆಯ ಕುರ್ಚಿಯ ಮೇಲೆ ಕುಳಿತು ಮುಗುಳು ನಗುತ್ತಿದ್ದ ನನ್ನ ಸೌಭಾಗ್ಯವತಿ ಕೇಳಿದಳು: “ಏನು? ಬಹಳ ರುಚಿಯಾಗಿದೆ ಅಲ್ಲವೆ ಅಜ್ಜಿಯ ಸೀಅಪ್ಪು?”

“ಅಜ್ಜಿಯ ಪರಿಣತೆ ನಿಮಗಿದ್ದರೆ ತಾನೆ ರುಚಿ ಬರುವುದು!” ಎನ್ನುತ್ತಾ ಸೀಅಪ್ಪು ನನಗೆ ರುಚಿಯಾಗದಿದ್ದ ತಪ್ಪನ್ನೆಲ್ಲಾ ಅಜ್ಜಿಯ ಮೊಮ್ಮಕ್ಕಳು ಮರಿಮಕ್ಕಳ ಅಕೌಶಲಕ್ಕೂ ಅಸಾಮರ್ಥ್ಯಕ್ಕೂ ಆರೋಪಿಸಿಬಿಟ್ಟೆ!