ಹೀಗೆ ನನ್ನ ಚೇತನ ಪುಸ್ತಕಳಲ್ಲದೆ ಬೇರೆ ಮಾರ್ಗದರ್ಶಕರಿಲ್ಲದೆ, ತನ್ನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪಥಗಳಲ್ಲಿ ಮುಂದುವರಿಯುತ್ತಿದ್ದ ಕಾಲದಲ್ಲಿ, ಎಂದರೆ ೧೯೨೧-೨೨ರಲ್ಲಿ ನಾನು ದಸರಾ, ಕ್ರಿಸ್ ಮಸ್ ಮತ್ತು ಬೇಸಗೆ ರಜೆಗಳಲ್ಲಿ ತಪ್ಪದೆ ಮನೆಗೆ ಹೋಗಿ ಹುಟ್ಟೂರಿನ ಬದುಕನ್ನು ಸವಿಯುತ್ತಿದ್ದೆ. ಹಳ್ಳಿಗರ ಗ್ರಾಮಿಣವಾದ ಆದರೂ ನನಗೆ ಅತ್ಯಂತ ಸ್ವಾರಸ್ಯಕರವಾಗಿದ್ದ ಜೀವನ ವ್ಯಾಪಾರಗಳಲ್ಲಿ ಭಾಗಿಯಾಗುತ್ತಿದ್ದೆ. ಆ ವ್ಯಾಪಾರಗಳಲ್ಲಿ ಬೇಟೆಯ, ಅದರ ನಾನಾ ಪ್ರಕಾರಗಳಲ್ಲಿ, ಪ್ರಮುಖಸ್ಥಾನ ಪಡೆದಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ನನ್ನ ಪ್ರಜ್ಞೆಯಲ್ಲಿ ಒಂದು ಪರಿವರ್ತನೆ ನಡೆದಿತ್ತು. ಹಿಂದೆ ಷಿಕಾರಿ ಅದರ ಸಾಹಸಂಶಕ್ಕಾಗಿ ಮೋಹಕವಾಗಿದ್ದರೆ ಈಗ ಪ್ರಕೃತಿ ಸೌಂದರ್ಯದ ಆಸ್ವಾದನೆಯ ಅಂಶವೂ ಸೇರಿ ಅದನ್ನು ಹೆಚ್ಚು ಪ್ರಿಯತರವನ್ನಾಗಿ ಮಾಡಿತ್ತು. ಬುದ್ಧಿ ಹೆಚ್ಚುಹೆಚ್ಚು ಚಿಂತನಶೀಲವಾಗಿ ಕಾಡು ಬೆಟ್ಟ ಮಲೆ ಹೊಳೆ ಹಕ್ಕಿ ಮಿಗ ಹೂವು ಮಳೆ ಬಿಸಿಲು ಇತ್ಯಾದಿ ನೂರಾರು ನಿಸರ್ಗ ವ್ಯಾಪಾರ ಚೇಷ್ಟಿತಗಳು ಭಗವತ್ಪರವಾದ ಭಾವನೆಗಳಿಗೆ ಪ್ರಚೋದಕವಾಗಿ ಅವೆಲ್ಲ ಯಾವುದೋ ದಿವ್ಯರಹಸ್ಯದ ಲೀಲಾ ವಸ್ತುಗಳಾಗಿ ತೋರತೊಡಗಿದ್ದುವು. ಅವುಗಳ ಸೌಂದರ್ಯವನ್ನು ಸವಿಯುವುದರ ಜೊತೆಗೆ ಆ ಸವಿಯನ್ನೂ ಸವಿಯುವ ಧ್ಯಾನಶೀಲತೆ ಹೃದಯರಸನೆಗೆ ಪ್ರಾಪ್ತವಾಗಿತ್ತು. ಆ ಉನ್ನತ ಸಹ್ಯಾದ್ರಿಯ ಪರ್ವತಶ್ರೇಣಿ ತನ್ನ ಶಂಕರ ಭಯಂಕರ ಕಂದರಾರಣ್ಯಗಳ, ರುಂದ್ರ ರಮಣೀಯತೆಯಲ್ಲಿ ಒಂದು ಗುಹ್ಯಾದ್ಭುತವಾದ ‘ಆಶ್ಚರ್ಯ’ವನ್ನು ಹುದುಗಿಸಿಟ್ಟುಕೊಂಡು ಭವ್ಯಾನುಭವವಾಗಿತ್ತು. ಕ್ರಮೇಣ ನನ್ನ ಪೂಜೆಗೂ ನಮಸ್ಕಾರಕ್ಕೂ ಪಾತ್ರವಾದ ದೇವತಾ ಸತ್ವವಾಗತೊಡಗಿತ್ತು.

ಆದರೆ ಈ ನನ್ನ ಅಂತರಂಗದ ಪರಿವರ್ತನೆ ಬಹಿರಂಗಕ್ಕೆ ಅಗೋಚರವಾಗಿತ್ತು. ಅದನ್ನು ಗುರುತಿಸುವ ವ್ಯಕ್ತಿಯಾಗಲಿ, ಅದನ್ನು ಅರಿಯಬಲ್ಲ ಶಕ್ತಿಯಾಗಲಿ ಅಲ್ಲಿ ಇರಲಿಲ್ಲ. ಹೆಚ್ಚು ಎಂದರೆ ನನ್ನ ನಡೆನುಡಿಗಳಲ್ಲಿ ತುಸು ವೈಚಿತ್ರ್ಯವನ್ನು ಕೆಲವರು ಗಮನಿಸಿರಬಹುದು, ಪೇಟೆಯ ಜೀವನದ ಪ್ರಭಾವ ಎಂಬರ್ಥದಲ್ಲಿ.

ನಾನು ಡಿ.ಆರ್.ವೆಂಕಟಯ್ಯ ಮೊದಲಾದ ನನ್ನ ಆಪ್ತ ಮಿತ್ರರಿಗೆ ಇಂಗ್ಲಿಷಿನಲ್ಲಿ ಬರೆಯುತ್ತಿದ್ದ ಕಾಗದಗಳಲ್ಲಿ, ಹೊಸದಾಗಿ ನನ್ನನ್ನು ಆಕ್ರಮಿಸಿದ್ದ ಕಾವ್ಯಭಾವಗಳ ಪರಿಣಾಮವಾಗಿ, ಠಾಕೂರರ ಗೀತಾಂಜಲಿಯ ತೆರೆನಾದ ಕಾವ್ಯಭಾಷೆಯೂ ಪ್ರಯೋಗವಾಗುತ್ತಿತ್ತುಃ ಪ್ರಾತಃಸಮಯ, ಹಿಮಮಣಿ, ಮೇಘಪಂಕ್ತಿ, ಪಕ್ಷಿಕೂಜನ, ತಳಿರು ಇತ್ಯಾದಿ ಇತ್ಯಾದಿ ಭಾವುಕ ಇಂಗ್ಲಿಷ್ ಪದಗಳ ವಿಲಾಸ ಯಥೇಚ್ಛವಾಗಿರುತ್ತಿತ್ತೆಂದು ತೋರುತ್ತದೆ. ಅದಕ್ಕೆಲ್ಲ ಒಂದು ಅತೀಂದ್ರಿಯ ‘ಮಿಸ್ಟಿಕ್’ ವಾತಾವರಣವು ಕಲ್ಪಿತವಾಗುತ್ತಿದ್ದಿರಬಹುದು. ಹೊಸಮನೆ ಮಂಜಪ್ಪಗೌಡರು ಆಗಾಗ್ಗೆ ತಮ್ಮ ಮಾವನವರ ಮನೆಗೆ, ಇಂಗ್ಲಾದಿಗೆ, ಹೋಗುತ್ತಿದ್ದರಷ್ಟೆ? ಅವರ ಕೈಗೂ ಆ ಕಾಗದಗಳು ಸಿಕ್ಕಿ, ಇತರರಿಗೆ ಅರಿವಾಗದಿದ್ದ ಭಾವಾತಿಶಯದ ಬರಹವನ್ನು ಅವರು ಓದಿ, ಇತರರಿಗೆ ತಿಳಿಸಿರಬಹುದು. ಅದು ಕಿವಿಯಿಂದ ಕಿವಿಗೆ ಹಬ್ಬಿರಬೇಕು. ಅದು ನನ್ನ ಅವ್ವನ ಕಿವಿಗೂ ಬಿದ್ದಿತ್ತೆಂದು ತೋರುತ್ತದೆ.(ಅವ್ವಗಂತೂ ಕಾಗದ ಬರೆಯುವ ಪ್ರಶ್ನೆಯೆ ಇರಲಿಲ್ಲವಷ್ಟೆ? ಅವರಿಗೆ ಓದು ಬರಹ ‌ಇರಲಿಲ್ಲವಾದ್ದರಿಂದ ಮಾತ್ರವಲ್ಲ, ಹಾಗೆಲ್ಲ ಗಂಡಸರಲ್ಲದವರಿಗೆ ಕಾಗದ ಬರೆಯುವ ರೂಢಿಯೆ ಇರಲಿಲ್ಲ. ಅಂಥಾದ್ದು ಆಲೋಚನೆಗೂ ಬರುವ ಪ್ರಶ್ನೆಯೆ ಆಗಿರಲಿಲ್ಲ ಅಂದು!) ಅವ್ವಗೆ ಹೆಮ್ಮೆ, ತನ್ನ ಮಗ ದೇವಂಗಿಗೌಡರ ಅಳಿಯ ಇಂಗ್ಲಿಷ್ ಓದಿದ್ದ ಹೊಸಮನೆ ಮಂಜಪ್ಪಗೌಡರಂತಹವರೂ ಹೊಗಳುವಂತೆ ಏನೇನೊ ಅದ್ಭುತವಾದದ್ದನ್ನು ಇಂಗ್ಲಿಷಿನಲ್ಲಿ ಬರೆಯುತ್ತಾನಂತೆ ಎಂದು! ಒಂದು ದಿನ, ನಾನೊಬ್ಬನೆ ಅವರಿಗೆ ಮಾತಾಡಲು ಸಿಕ್ಕಿದ ಅಪೂರ್ವ ಸಂದರ್ಭದಲ್ಲಿ,(ಒಟ್ಟು ಕುಟುಂಬದ ಮಕ್ಕಳ ಬಾಳಿನಲ್ಲಿ ತಾಯಿಯೊಡನೆ ಮಾತಾಡಲು ಒಬ್ಬೊಬ್ಬರೆ ಸಿಗುವ ಏಕಾಂತ ಸಾಧ್ಯವೆ ಇಲ್ಲ!) ಅವರು ತುಂಬ ಹಿಗ್ಗಿನಿಂದ, ಆದರೂ ಸಂಕೋಚದಿಂದ ಎಂಬಂತೆ, ಕೇಳಿದರುಃ “ಪುಟ್ಟೂ, ನೀನು ಇಂಗ್ಲಿಷಿನಲ್ಲಿ ಏನೇನೋ ಬರೆದೀಯಂತಲ್ಲಾ ದೇವಂಗಿ ಎಂಕ್ಟಯ್ಯಗೆ, ಅದೇನು ಬರೆದಿದ್ದೀಯಾ ಹೇಳೋ!” ಅವರ ಪ್ರಶ್ನೆಯಲ್ಲಿ ತಮ್ಮ ಒಬ್ಬನೆ ಮಗನ ಮೇಲಿದ್ದ ಮುದ್ದೂ ಹೆಮ್ಮೆಯೂ ಹೊಮ್ಮುವಂತಿತ್ತು. ಆದರೆ ನನಗೆ ಅದು ಅತ್ಯಂತ ಅನಿರೀಕ್ಷಿತವಾಗಿತ್ತು. ಗೆಲೆಯರಿಗೆ ಬರೆದ ಕಾಗದ, ನಮ್ಮ ಸಾಹಿತ್ಯ ವಿಚಾರ, ನಮ್ಮ ತತ್ತ್ವಶಾಸ್ತ್ರದ ಓದು-ಇವೆಲ್ಲ ಅವ್ವನವರೆಗೆ ಹೋಗುವ ವಿಷಯವೆ ಆಗಿರಲಿಲ್ಲ. ನನ್ನ ಮನಸ್ಸಿಗೆ, ಅದೂ ಅಲ್ಲದೆ, ನನಗೇ ಬುದ್ಧಿಸ್ಪಷ್ಟವಾಗಿರದಿದ್ದ, ಅದನ್ನು ಅವ್ವಗೆ ವಿವರಿಸುವುದು ಹೇಗೆ? ಹಸುರುಹುಲ್ಲಿನ ಮೇಲೆ ಇಬ್ಬನಿ ಎಳಬಿಸಿಲಲ್ಲಿ ಮಿರುಗುವ ಸಂಗತಿ, ಸಸಿನಟ್ಟಿ ಮಾಡಿ, ಕಳೆಕಿತ್ತು, ಗದ್ದೆಯಲ್ಲಿ ವರುಷವರುಷವೂ ತಿರುಗಾಡಿದ ಅನುಭವವಿರುವ ಅವ್ವಗೆ, ಹಕ್ಕಲು, ಗುಡ್ಡ, ಕಾಡುಗಳಲ್ಲಿ ಸಾವಿರಾರು ನೈಸರ್ಗಿಕ ದೈನಂದಿನ ವ್ಯಾಪಾರಗಳನ್ನು  ಬೇಸರ ಬರುವಷ್ಟರಮಟ್ಟಿಗೆ ನೋಡುತ್ತಲೆ ಇರುವ ಅವ್ವಗೆ, ಯಾವ ದೊಡ್ಡ ವಿಷಯ ಎಂದು ಹೇಳುವುದು? ಅವ್ವನ ಸುತ್ತ ನನಗಿದ್ದ ವಿಶಿಷ್ಟ ಭಾವನೆಯ ಪರಿವೇಷದ ವಿಪುಲೈಶ್ವರ್ಯದ ಇದಿರು ನಾನು ಕಾಗದದಲ್ಲಿ ಬರೆದಿದ್ದ ಸಂಗತಿ ತೀರ ಬಡಕಲಾಗಿ, ಅತ್ಯತಿ ಅಲ್ಪವಾಗಿ ತೋರಿತು. ನನಗೆ ಮುದುರಿಕೊಳ್ಳುವಷ್ಟು ನಾಚಿಕೆಯಾಯಿತು! ನಾನೇನಾದರೂ ಹೇಳಲು ಹೊರಟರೆ ನನ್ನ ಪ್ರತಿಭೆಯ ವಿಚಾರವಾಗಿ ಅವರಿಗೆ ಉಂಟಾಗಿದ್ದ ‘ಭ್ರಮಾ ಮಾಧುರ್ಯ’ ಸಂಪೂರ್ಣ ನಿರಸನವಾಗುತ್ತದೆಂದು ಭಾವಿಸಿ, ನಗುನಗುತ್ತಾ “ಎಂಥದೂ ಇಲ್ಲವ್ವಾ!” ಎಂದು ಏನೇನೊ ಹೇಳಿ ನಾನೂ ನಕ್ಕು ಅವರನ್ನೂ ನಗಿಸಿಬಿಟ್ಟಿದ್ದೆ!

ಆಗ ನನ್ನ ಅವ್ವನ ಆ ಪ್ರಶ್ನೆಗೆ ಉತ್ತರ ಹೇಳದೆ, ಅವ್ವನ ತಿಳವಳಿಕೆ ಮತ್ತು ಕಲಾಪ್ರಜ್ಞೆಯ ವಿಚಾರವಾಗಿ ತಾತ್ಸಾರದಿಂದ ವರ್ತಿಸಿದ್ದೆನಾದರೂ ಈಗ ಅನ್ನಿಸುತ್ತದೆ, ನನ್ನ ಅವ್ವನ ಕಲಾಭಿರುಚಿ ಮತ್ತು ಸಾಹಿತ್ಯ ರಸಾಸ್ವಾದನೆಯ ಸಾಮರ್ಥ್ಯ ನಾನು, ಹುಡುಗನಾಗಿದ್ದ ನಾನು, ಊಹಿಸಿದ್ದಷ್ಟು ಕೀಳಾಗಿರಲಿಲ್ಲ ಎಂದು. ಅವ್ವನ ತವರುಮನೆ ಹಿರಿಕೊಡಿಗೆಯಲ್ಲಿ ಸಾಹಿತ್ಯಸಂಗೀತಗಳು ದಿನನಿತ್ಯವೂ ಸಂಜೆಯಲ್ಲಿ ಹೇಗೆ ತಮ್ಮ ಆಸ್ಥಾನವನ್ನು ಸಂಸ್ಥಾಪಿಸುತ್ತಿದ್ದುವು ಎಂಬ ವಿಚಾರವಾಗಿ ಪ್ರತ್ಯಕ್ಷಾನುಭವದಿಂದ ವರ್ಣಿಸಿದ್ದಾರೆ ಅಲಿಗೆ ಪುಟ್ಟಯ್ಯನಾಯಕರು ಎಂಬುದನ್ನು ಓದುಗರು ಗಮನಿಸಿರಬಹುದು. ಗಮನಿಸಿರದಿದ್ದರೆ ಇನ್ನೊಮ್ಮೆ ಅದನ್ನು ಗಮನವಿಟ್ಟು ಓದಿಕೊಂಡರೆ ತಿಳಿಯುತ್ತದೆಃ ನನ್ನನ್ನು ಹೆರುವ ಸಮಯದಲ್ಲಿಯೂ ಹೇಗೆ ಕಲಾಲಕ್ಷ್ಮಿ ತಾಳಮದ್ದಲೆಯ ಯಕ್ಷಗಾನರಂಗವನ್ನು ಸಿದ್ಧಪಡಿಸುತ್ತಿದ್ದಳು ಎಂದು! ನನ್ನ ತಾಯಿಯ ತಂದೆ ತಿಮ್ಮಯ್ಯನಾಯಕರು ತುಂಬ ಶ್ರೀಮಂತಾಭಿರುಚಿಯವರೂ ಲಲಿತಕಲಾರಸಿಕರೂ ಆಗಿದ್ದರೆಂಬುದರಲ್ಲಿ ಸಂದೇಹವಿಲ್ಲ. ನನ್ನ ಅಮ್ಮ ತನ್ನ ಬಾಲ್ಯಕಾಲದಿಂದಲೂ ಆ ತಾಳಮದ್ದಲೆಯಕ್ಷಗಾನಾದಿಗಳನ್ನು ನನ್ನ ಅಜ್ಜನ ತೊಡೆಯ ಮೇಲೆ ಪುಟ್ಟ ಹುಡುಗಿಯಾಗಿ ಕುಳಿತುನೂ ನೂರಾರು ಸಾವಿರಾರು ಸಾರಿ ಆಲಿಸಿ ಸವಿದಿರಬೇಕು. ಆದರೆ ಮದುವೆಯಾಗಿ ಕುಪ್ಪಳಿಗೆ ಬಂದ ಮೇಲೆ ಅದೆಲ್ಲ ಅಡುಗೆಮನೆಯ ಮೂಲೆಸೇರಿ ಹೋಯಿತೆಂದು ತೋರುತ್ತದೆ. ಕುಪ್ಪಳಿಯಲ್ಲಿಯೂ ತಾಳಮದ್ದಲೆ ಇದ್ದಿತ್ತಾದರೂ ಹಿರಿಕೊಡಿಗೆಯಲ್ಲಿ ಮನೆಯ ಹುಡುಗಿಯಾಗಿ ಸ್ವಾತಂತ್ರ್ಯವಹಿಸಿದಂತೆ ಗಂಡನ ಮನೆಯಲ್ಲಿ ಗೃಹಿಣಿಯಾಗಿ ಜಗಲಿಗೆ ಬರಲು ಸಾಧ್ಯವೇ? ಅಲ್ಲದೆ ಕುಪ್ಪಳಿಯವರ ಕಲಾಭಿರುಚಿ ಹಿರಿಕೊಡಿಗೆಯವರ ಮಟ್ಟದ್ದಾಗಿಯೂ ಇರಲಿಲ್ಲವೆಂದು ತೋರುತ್ತದೆ. ನನ್ನ ರಾಮಾಯಣ ಭಾರತಾದಿ ಸಾಹಿತ್ಯಾಭಿರುಚಿಗೆ, ನನಗೆ ಒಮ್ಮೊಮ್ಮೆ ಊಹಿಸಿಕೊಳ್ಳಲು ಹೆಮ್ಮೆಯಾಗುತ್ತದೆ, ನನ್ನ ಅವ್ವ ತಾನು ಚಿಕ್ಕಂದಿನಿಂದಲೂ ಆಲಿಸಿ ಆಸ್ವಾದಿಸಿದುದರ ಸಂಸ್ಕಾರವೂ ಒಂದು ಪ್ರಧಾನ ಕಾರಣವಾಗಿರಬೇಕು ಎಂದು. ನನ್ನ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಒಂದು ಮಹೋನ್ನತ ಶಿಖರವಾಗಿರುವ ಸಂಚಿಕೆಗೆ ನಾನು ಕೊಟ್ಟಿರುವ ಹೆಸರು ನೇರವಾಗಿ ನನ್ನ ಅವ್ವನಿಂದಲೆ ಬಂದುದಾಗಿದೆ. ಅವ್ವ ಯಾವುದಾದರೂ ತನಗೊದಗಿದ ಕಷ್ಟದ ಸಮಯದಲ್ಲಿ ಬೇರೆ ಯಾರಾದರೂ ತನ್ನಿಂದ ಏನಾದರೂ ಆಗಬೇಕೆಂದು ಕೇಳಿದಾಗ “ಅಯ್ಯೋ ನಾನೇ ಓ ಲಕ್ಷ್ಮಣಾ! ಅಂತಿದ್ದೀನಪ್ಪಾ!” ಎಂದು ಹೇಳುತ್ತಿದ್ದುದನ್ನು ನಾನು ಎಷ್ಟೋ ಬಾರಿ ಕೇಳಿದ್ದೆ. ಹಾಗಾಗಿ ‘ಓ ಲಕ್ಷ್ಮಣಾ!’ ಎಂಬುದು ಏನೋ ಒಂದು ಕಷ್ಟಕ್ಕೋ ಗೋಳಿಗೋ ದುರಂತಕ್ಕೋ ವಾಕ್ ಪ್ರತಿಮೆಯಾಗಿ ಬಿಟ್ಟಿತ್ತು ನನ್ನ ಅಂತಃಪ್ರಜ್ಞೆಯಲ್ಲಿ. ಶ್ರೀರಾಮಾಯಣ ದರ್ಶನದಲ್ಲಿ ಆ ಸಂಚಿಕೆಗೆ ಕೊಟ್ಟ ಶೀರ್ಷಿಕೆ “ಓ ಲಕ್ಷ್ಮಣಾ!” ಗೋಳ್ದನಿ ಬೇರೆಬೇರೆ ಸಂದರ್ಭಗಳಲ್ಲಿ ಬೇರೆಬೇರೆ ವ್ಯಕ್ತಿಗಳಿಂದ ಧ್ವನಿ ಪ್ರತಿಧ್ವನಿಯಾಗಿ ಹೊಮ್ಮಿ, ಮಹಾಗೋಳಿಗೆ ಒಂದು “‘’‘’‘ಶಬ್ದ ಪ್ರತೀಕ’ ವಾಗಿಬಿಟ್ಟಿದೆ.

ಆಗ ನನ್ನ ಮನಸ್ಸು ಹೆಚ್ಚುಹೆಚ್ಚು ಅಂತರ್ಮಖವಾಗುತ್ತಿದ್ದ ಕಾಲ. ಕಾಡು ಗುಡ್ಡಗಳಲ್ಲಿ ತಿರುಗಾಡಲು ಹೋಗುವಾಗಲೂ ಬಂಡೆಯ ಮೇಲೆಯೂ ಮರದಡಿಯೊ ಕುಳಿತು ದಿಂಗತವಿಶ್ರಾಂತವಾದ ಪರ್ವತಾರಣ್ಯಗಳನ್ನು ಅವಲೋಕಿಸುತ್ತಾ ಗ್ರಂಥಗಳಲ್ಲಿ ಓದಿದ್ದ ವರ್ಣನೆ ಮತ್ತು ಭಾವಾನುಭಗಳನ್ನು ಅನುಸಂಧಾನ ಮಾಡಲು ಹವಣಿಸುತ್ತಿತ್ತು ನನ್ನ ಚೇತನ. ಎಷ್ಟೋ ಸಾರಿ ಪ್ರಾತಃಕಾಲವೂ ಸಂಜೆಯೊ ಮರಗಳ ಮೇಲೆ ಕೋವಿ ಹಿಡಿದು ಮರಸಿಗೆ ಕೂತಾಗ, ಪ್ರಾಣಿಗಳು ಬರುವುದನ್ನು ಕಣ್ಣ ಮೇಲೆ ಕಣ್ಣಿಟ್ಟುಕೊಂಡು ನಿರೀಕ್ಷಿಸುವ ಕರ್ತವ್ಯಕ್ಕೆ ಬದಲಾಗಿ ‘ಗೋಲ್ಡನ್ ಟ್ರೆಜರಿ’ ಯನ್ನು ಬಿಚ್ಚಿ ಇಂಗ್ಲಿಷ್ ಕವನಗಳನ್ನು ತಲ್ಲೀನತೆಯಿಂದ ಓದುತ್ತಿದ್ದು, ಪ್ರಾಣಿಗಳು ಬಂದುದನ್ನಾಗಲಿ ಹೋದುದನ್ನಾಗಲಿ ಗಮನಿಸದೆ ‘ಖಾಲಿ’ ಕೈಯಲ್ಲಿ ಮನೆಗೆ ಬರುತ್ತಿದ್ದೆ, ಹೃದಯ ‘ಭರ್ತಿ’ಯಾಗಿ!

ಆ ಕಾಲಕ್ಕೆ ಸರಿಯಾಗಿ ನಮ್ಮ ತಿಲಕರ ‘ಗೀತಾರಹಸ್ಯ’ದ ಭಾಷಾಂತರ ಹೆಬ್ಛೊತ್ತಗೆ ಹೇಗೋ ಬಂದಿತ್ತು. ಬಹುಶಃ ಮರಾಠಿಯಿಂದ ಭಾಷಾಂತರ ಮಾಡಿದ ಆಲೂರು ವೆಂಕಟರಾಯರ ಕಡೆಯವರೆ ಅದನ್ನು ಮಾರುತ್ತಾ ಬಂದು ನಮ್ಮ ಮನೆಯವರ ಕೊರಳಿಗೂ ಒಂದನ್ನು ಕಟ್ಟಿದ್ದರೆಂದು ತೋರುತ್ತದೆ. ನಮ್ಮ ಮನೆಯವರಾರೂ ಅದನ್ನು ಓದಿದ್ದನ್ನು ನಾನು ನೋಡಿರಲಿಲ್ಲ. ಆದರೆ ಉಂಡಾಡಿ ಪುಟ್ಟಣ್ಣಗೆ ಅದು ಹೇಗೋ ಸಿಕ್ಕಿ, ಉಪ್ಪರಿಗೆಯ ನಾಗಂದಿಗೆಯಿಂದ ಅದನ್ನು ಹೊರತೆಗೆದು ಆಗಾಗ ಓದುತ್ತಿದ್ದು, ಮತ್ತೆ ಆ ಸ್ಥಳದಲ್ಲಿಯೆ ಹುದುಗಿಡುತ್ತಿದ್ದ. ಸರಿ ನಾನು ಗೀತೆ ಉಪನಿಷತ್ತುಗಳ ವೇದಾಂತದ ವಿಚಾರ ತಿಳಿದಿದ್ದುದರಿಂದ ‘ಗೀತಾರಹಸ್ಯ’ದಲ್ಲಿ ನಾನು ತುಂಬ ಆಸಕ್ತನಾಗಿದ್ದೆ. ಅದರಲ್ಲಿಯೂ ತಿಲಕರ ಕರ್ಮಯೋಗ ಸಿದ್ಧಾಂತ ಸ್ವಾಮಿ ವಿವೇಕಾನಂದರ ಭಾಷಣಗಳಲ್ಲಿರುತ್ತಿದ್ದ ಅನೇಕ ಭಾವನೆಗಳಿಗೆ ಸಂವಾದಿಯಾಗಿದ್ದುದರಿಂದ ನನಗೆ ಅದು ಹೆಚ್ಚು ಪ್ರಿಯವಾಗಿತ್ತು.

* * *

ಬೇಸಗೆಯಲ್ಲಿ ರಜೆಯಲ್ಲಿ ಒಂದು ಹಗಲು. ಮಧ್ಯಾಹ್ನ ಊಟವಾದ ಮೇಲೆ ಉಪ್ಪರಿಗೆಯ ಮೇಲೆ ನಾವೆಲ್ಲ ಹುಡುಗರೂ-ನಾನು, ಮಾನಪ್ಪ, ತಿಮ್ಮಯ್ಯ, ಓಬಯ್ಯ, ವೆಂಕಟಯ್ಯ-ಪುಟ್ಟಣ್ಣನೂ ಏನೋ ಬೇಟೆಯ ಹರಟೆ ಹೊಡೆಯುತ್ತಿದ್ದಾಗ ಐಯ್ಯಪ್ಪ ಚಿಕ್ಕಪ್ಪಯ್ಯ ಬಂದು “ಗುಡಿಕಲ್ಲು ಕೆರೆಗೆ ಬಲೆ ಹಾಕಲು ಹೋಗೋಣವೇನ್ರೋ” ಎಂದರು. ಎಲ್ಲರೂ ನೆಗೆದೆದ್ದರು! ನಾನೂ ಹೊರಟೆ, ಗೀತಾರಹಸ್ಯ, ಗೀತಾಂಜಲಿ, ಗೋಲ್ಡನ್ ಟ್ರೆಜರಿ, ಸೆಲೆಕ್ಟೆಡ್ ಸ್ಪೀಚಸ್ ಅಂಡ್ ರೈಟಿಂಗ್ಸ್ ಆಫ್ ಸ್ವಾಮಿ ವಿವೇಕಾನಂದ-ಎಲ್ಲವನ್ನು ಬದಿಗೊತ್ತಿ, ನಾಗರಿಕತೆಯ ಮೇಲು ಹೊದಿಕೆಯನ್ನೆಲ್ಲ ತೆಗೆದೆಸೆದು, ಅಪ್ಪಟ ಕಾಡುಮನುಷ್ಯರಲ್ಲಿ ಅಪ್ಪಟ ಕಾಡುಮನುಷ್ಯನಾಗಿ, ಕಿರಾತ ವೃತ್ತಿಗೆ! ಒಳಗೆ ಹೋಗಿ ಅಮ್ಮದಿರಿಗೆ ತೆಳುಗನ ದೋಸೆಗೆ ಹಿಟ್ಟು ಕಡೆಯಲೂ ಮಿನು ಪಲ್ಯಕ್ಕೆ ಖಾರ ಕಡೆಯಲೂ ಹೇಳಿಯಾಯಿತು. ಮಿನುಬೇಟೆ ಎಂದರೆ ‘ಪಕಾರ’ ಖಾತ್ರಿ!

ಬಲೆ, ಇರಿಗೂಣಿ ಮೊದಲಾದವುಗಳನ್ನೆಲ್ಲ ಬೇಲರಾಳುಗಳೂ ಹಳೆಪೈಕದವರೂ ಸೇರಿ ಹೊತ್ತು ತಂದರು. ಕಡುಬೇಸಗೆಯ ನಡುಹಗಲ ಸುಡುಬಿಸಿಲಿನಲ್ಲಿ ನಾವು ಬೆಳುದಿಂಗಳಿನಲ್ಲಿಯೊ ಎಂಬಂತೆ ನಡೆದೆವು! ಉತ್ಸಾಹದ ಮಹಿಮೆ ಅಂಥಾದ್ದು! ನೀರಿನ ಬೇಟೆಯಲ್ಲಿ ನಾಯಿಗಳಿಗೆ ಏನೂ ಕೆಲಸವಿರದಿದ್ದರೂ ಅವೂ ಬಾಲವಾಡಿಸಿ ಹರ್ಷೋತ್ಸಾಹದಿಂದ ನೆಗೆದಾಡುತ್ತಾ ನುಗ್ಗಿಬಂದುವು ನಮ್ಮ ಹಿಂದೆ ಮುಂದೆ.

ಗಡಿಕಲ್ಲಿನ ಆ ಕೆರೆ ನಮ್ಮ ಮನೆ ಕುಪ್ಪಳಿಗೆ ಎರಡು ಅಥವಾ ಎರಡೂವರೆ ಮೈಲಿ ಇರಬಹುದು. ಆ ಕೆರೆಗೆ ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ಸರ್ಕಾರಿ ಹೆದ್ದಾರಿಯೆ ದಂಡೆ. ಸುತ್ತ ನಿಬಿಡ ಕಾನನ ಪಂಕ್ತಿ; ಏರಿಯ ಕೆಳಭಾಗದಲ್ಲಿ ಗದ್ದೆಯ ಕೋಗು, ಆಲೆಮನೆ, ಚೌಕಿಮನೆ, ಹೊಸಮನೆ, ಹೊರಬೈಲು ಇತ್ಯಾದಿ ಹಳ್ಳಿಗಳಿಗೆ ಸೇರಿದ್ದು. ಸ್ಥಳ ನಿರ್ಜನ. ಆ ರಸ್ತೆಯಲ್ಲಿ ಬಹುಶಃ ತಿಂಗಳಿಗೊಮ್ಮೆ ಒಂದು ಗಾಡಿ ಸಂಚರಿಸುತ್ತಿತ್ತೊ ಇಲ್ಲವೊ, ಆ ಕಾಲದಲ್ಲಿ. ಜನಸಂಚಾರವೂ ಬಹಳ ಅಪರೂಪ. (ಈಗ ಸ್ಥಳದಲ್ಲಿ ಒಂದು ಊರೇ ಎದ್ದುಬಿಟ್ಟಿದೆ. ಒಂದು ಹೈಸ್ಕೂಲು ಸ್ಥಾಪಿತವಾಗಿದೆ!) ನಿರ್ಜನ ಎಂದೇ ಹೇಳಬೇಕು. ಆದ್ದರಿಂದ ನಾವೆಲ್ಲ ಕೌಪೀನಧಾರಿಗಳಾಗಿ ಕೆರೆಗಿಳಿದು ಕೆಲಸಕ್ಕೆ ಕೈಹಾಕಲು ಸಂಕೋಚಪಡಬೇಕಾಗಿರಲಿಲ್ಲ.

ಬಟ್ಟೆ ಬಿಚ್ಚಿ ಬತ್ತಲೆಯಾದೆವು. ಸೊಂಟಕ್ಕೆ ಉಡಿದಾರವಿರುವವರು ಲಂಗೋಟಿ ಕಟ್ಟಿಕೊಂಡ ಇದ್ದುದರಿಂದ ದಡಬಡನೆ ನೀರಿಗೆ ಇಳಿದರು. ನಾನೂ ನನ್ನಂತೆ ಇದ್ದವರೂ ಉಡಿದಾರವನ್ನು ಎಂದೋ ತ್ಯಜಿಸಿಬಿಟ್ಟಿದ್ದರಿಂದ ಒಂದೊಂದು ಜಾಳು ಪಾಣಿಪಂಚೆ ಸುತ್ತಿಕೊಂಡೆವು, ಸೊಂಟಕ್ಕೆ ಬಿಗಿದೆಳೆದು ಕಟ್ಟಿ. ನಡುಹಗಲು ಉರಿಬಿಸಿಲಿನ ಪರಿವೆಯೆ ನಮಗಿರಲಿಲ್ಲ. ಬೇಸಗೆಯಲ್ಲಿ ಆ ಕೆರೆಯ ಅತ್ಯಂತ ಹೆಚ್ಚಿನ ಆಳವೆಂದರೆ ನಮ್ಮ ಎದೆಯ ಮಟ್ಟಕ್ಕೆ ಬರುತ್ತಿತ್ತು ನೀರು. ವಾಸ್ತವವಾಗಿ ನೀರಿನ ಆಳ ಅದಕ್ಕಿಂತಲೂ ಕಡಮೆಯೆ ಕೆರೆಯ ತಳದ ಉಸುಬು ಏನಿಲ್ಲ ಎಂದರೂ ತೊಡೆಮಟ್ಟಕ್ಕಿತ್ತು, ಕಲೆವೆಡೆಗಳಲ್ಲಿ. ಆದ್ದರಿಂದ ಬಿಸಿಲಿನ ತಾಪ ಹೆಚ್ಚಾಗಲು ನಾವು ಕೂತೇ ಮಂಡೆ ಮುಳುಗಿಸಿಕೊಳ್ಳ ಬೇಕಾಗುತ್ತಿತ್ತು. ನೀರಾದರೂ ಕಾಣುತ್ತಿತ್ತು ಎಂದು ಊಹಿಸಬೇಡಿ. ಅಕ್ಯಂಡೆ ಹೂವು, ಎಲೆ ಮತ್ತು ಪಾಚಿ ಹಬ್ಬಿ ಕೆರೆಯೆಲ್ಲ ಮುಚ್ಚಿಕೊಂಡಿತ್ತು. ಎಲ್ಲಿಯೋ ನಡುವೆ ನೀರು ತುಸು ಆಳವದೆಡೆಯಲ್ಲಿ ಒಂದು ಅಂಗೈಯಗಲದ ನೀರು ಹೌದೊ ಅಲ್ಲವೊ ಎಂಬಂತೆ ಕಾಣಿಸುತ್ತಿತ್ತು.

ಬಲೆಯನ್ನು ಹೊತ್ತು ನೀರಿಗಿಳಿದ ಪುಟ್ಟಣ್ಣ, ಐಯ್ಯಪ್ಪಗೌಡರು ಬೇಲರಾಳುಗಳ ನೆರವಿನಿಂದ ಕೆರೆಯ ಒಂದು ಭಾಗಕ್ಕೆ ಬಲೆ ಬಿಡತೊಡಗಿದರು. ಬಲೆ ಬಿಡುವುದೆಂದರೆ ಅದರ ತಳಭಾಗ ನೆಲ ಮುಟ್ಟವಂತೆಯೂ ಮೇಲುಭಾಗ ತೇಲುವಂತೆಯೂ ಮಾಡಿ ಕೆರೆಯ ಒಂದು ತುಂಡನ್ನು ಸುತ್ತವರಿಯುವುದು. ಬಲೆಯ ಕೆಳಭಾಗದಲ್ಲಿ ಅದನ್ನೆಳೆದು ನೆಲಕ್ಕೆ ಕೂರುವಂತೆ ಮಾಡಲು ಎರೆಮಣ್ಣಿನಿಂದ ಮಾಡಿ, ಸುಟ್ಟು, ಗಟ್ಟಿಗೊಳಿಸಿದ ಪಂಕ್ತಿಪಂಕ್ತಿ ಗುಂಡುಗಳಿರುತ್ತವೆ. ಮೇಲುಭಾಗ ತೇಲುವಂತೆ ಮಾಡಲು ಬೆಂಡಿನ ತುಂಡುಗಳು ಪಂಕ್ತಿಪಂಕ್ತಿ ಇರುತ್ತವೆ. ಆ ಬೆಂಡಿನ ಸಾಲು ನಮಗೆ ದೃಗ್ಗೋಚರವಾಗಿದ್ದು, ಮಿನು ಬಲೆಗೆ ನುಗ್ಗಿ, ಅದರ ಕಣ್ಣಿಗೆ ಸಿಕ್ಕಿಹಾಕಿಕೊಂಡರೆ, ಅದರ ಎಳೆದಾಟ ಒದ್ದಾಟದಿಂದಾಗಿ ಮುಳುಗಿ ಮುಳುಗಿ ಎದ್ದು ಎದ್ದು ನಮಗೆ ಸೂಚನೆ ಕೊಡುತ್ತವೆ. ಒಡನೆಯ ಆ ಕಲೆಯಲ್ಲಿ ನಿಷ್ಣಾತರಾದವರು ಅಲ್ಲಿಗೆ ನುಗ್ಗಿ, ನೀರಿನೊಳಗೇ ಕೈತಡಕಿ, ಸಿಕ್ಕಿರುವ ಕುಂಚಿನ ಅಥವಾ ಅವಲಿನ ಮಿನನ್ನು ಬಲೆಯ ದಾರಕ್ಕೆ ಅಪಾಯ ಬರದಂತೆ ಮಿನಿನ ಕಿವುರಿನಿಂದ ತಪ್ಪಿಸಿ, ಕೊರಳು ಮುರಿದು, ದಡ ಹತ್ತಿರವಿದ್ದರೆ ಅಲ್ಲಿ ಎಸೆಯುತ್ತಾರೆ, ಇಲ್ಲದಿದ್ದರೆ ಸೊಂಟದ ಉಡಿದಾರಕ್ಕೆ ಕಿವುರಿನ ಸಹಾಯದಿಂದ ಮಿನನ್ನು ಸಿಕ್ಕಿಸಿಕೊಳ್ಳುತ್ತಾರೆ.

ಸರಿ; ಬಲೆ ಬಿಟ್ಟಾದ ಮೇಲೆ, ನಮಗೆಲ್ಲ ‘ದುಡುಬು’ವಂತೆ ಹೇಳಿದರು. ದುಡಬುವುದೆಂದರೆ, ಕಾಡಿನ ಬೇಟೆಯಲ್ಲಿ ಹಳುವಿನವರು ಬಿಲ್ಲಿನವರ ಕಂಡಿಗೆ ಪ್ರಾಣಿಗಳು ಓಡಿ ನುಗ್ಗುವಂತೆ ಸೋವುತ್ತಾರಲ್ಲಾ ಹಾಗೆ. ನಾವೆಲ್ಲ ಸಾಲಾಗಿ ಮಾರಿಗೊಬ್ಬರಂತೆ ನಿಂತು, ನೀರನ್ನು ಕೈಯಿಂದ ಬಡಿಯುತ್ತಾ ಮೀನುಗಳನ್ನು ಬಲೆಯುತ್ತ ಓಡಿಸತೊಡಗಿದೆವು. ಕೆರೆಯ ಪಾಚಿಯೆಲ್ಲ ನಮ್ಮ ಕಾಲು ತುಳಿತಕ್ಕೆ ತಳ ಸೇರಿ, ನೀರು ಬಗ್ಗಡವಯಿತು.

ನಾವು ನೀರಿಗಿಳಿದು ದುಡುಬಲು ಶುರು ಮಾಡಿದ್ದೆ ತಡ, ದಡದಲ್ಲಿ ಅಲ್ಲಲ್ಲಿ ಮಲಗಿಯೊ ಕುಳಿತೊ ತಿರುಗುತ್ತಲೊ ಇದ್ದ ನಯಿಗಳಲ್ಲಿ ಕೆಲವು ಕೆರೆಗೆ ಹಾರಿ ಬಲೆಯುತ್ತ ಈಜ ತೊಡಗಿದವು. “ಹಭೀ, ರೋಜಿ!” “ಹಭೀ, ಡೈಮಂಡ್” “ಹಭೀ, ಟಾಪಿ!” “ಹಭೀ,ಡೂಲಿ!” ಅವುಗಳ ಹೆಸರುಗಳನ್ನೆಲ್ಲ ಕೂಗಿ, ಹೆದರಿಸಿ ದಡಕ್ಕೆ ಎಬ್ಬದೆವು. ಆ ಉರಿ ಬಿಸಿಲಿನಲ್ಲಿ ನೀರಿಗಿಳಿಯಲು ಅವುಗಳಿಗೂ ಬಹಳ ಖುಷಿಯಾಗಿತ್ತು! ಆದರೇನು ಮಾಡುವುದು? ನೀರಿನಲ್ಲಿ ಬೇಟೆ ಕಾಡಿನಲ್ಲಿ ಬೇಟೆಯಂತಲ್ಲ. ಅಲ್ಲಿ ಅವು ಎಷ್ಟು ಉಪಯುಕ್ತವೊ ಇಲ್ಲಿ ಅವು ಅಷ್ಟೂ ನಿರುಪಯುಕ್ತ, ಮತ್ತು ಉಪದ್ರವಕಾರಿ.

ದುಬುತ್ತಿದ್ದವರಲ್ಲಿ ಒಬ್ಬ ಕೂಗಿದ “ಅಕೊಳ್ಳೊ! ಅಕೊಳ್ಳೊ! ಅಲ್ಲಿ ಬೆಂಡು ಮುಳುಗ್ತಲ್ಲೊ!”

ಪುಟ್ಟಣ್ಣ ಆದಷ್ಟು ಬೇಗನೆ ಬೆಂಡು ಮುಳುಮುಳುಗುತ್ತಿದ್ದ ಜಾಗಕ್ಕೆ ತಲುಪಿ, ನೀರಿನಡಿಯಿದ್ದ ಬಲೆಯ ಆ ಭಾಗವನ್ನು ಕೈಯಿಂದ ತಡವುತ್ತಾ ನಿಂತನು. ನಮಗೆಲ್ಲ ಕುತೂಹಲ, ಮಿನು ಸಿಕ್ಕತೊ ಇಲ್ಲವೊ ನೋಡಬೇಕೆಂದು. ನಾನಾ ಕಡೆಗಳಿಂದ ಪ್ರಶ್ನೆಗಳ ಮಳೆ: “ಏನಾಯ್ತೊ? ಏನಾಯ್ತೊ? ಏನಾಯ್ತೊ” ಪುಟ್ಟಣ್ಣ ತುಟಿ ಮುದುರಿಸಿ ಮುಖದಲ್ಲಿ ವ್ಯರ್ಥತಾಭಂಗಿಯನ್ನು ಪ್ರದರ್ಶಿಸುತ್ತಾ “ಲೌಡಿಮಗನ್ದು, ಬಲೆ ಹರುಕೊಂಡೇ ಹೋಗಾದಾ?” ಎಂದ ನಮ್ಮ ಕಡೆ ನೋಡುತ್ತಾ.

“ಏ! ಸುಳ್ಳು ಹೇಳ್ತೀಯಾ? ಕೈಯೆತ್ತು!” ಎಂದೆವು.

ಎರಡೂ ಕೈಗಳನ್ನು ಎತ್ತಿ ತೋರಿದ. ಖಾಲಿ!

“ಥೂ ನಿನ್ನ! ಮತ್ತೆ ಭಾರೀ ಮಿನು ಹಿಡಿಯೋ ಹಮ್ಮಿರನಂತೆ ಇವನು?”

ಎಂದು ಛೀಮಾರಿಮಾಡಿ, ಮತ್ತೆ ದುಡುಬತೊಡಗಿದೆವು.

ಆದರೆ ನಡೆದಿದ್ದ ಸಂಗತಿಯ ಬೇರೆಯಾಗಿತ್ತು. ಪುಟ್ಟಣ್ಣ ಕುಂಚಿನ ಮಿನನ್ನು ಬಲೆಯ ಕಣ್ಣಿನಿಂದ ತಪ್ಪಿಸಿ, ನೀರಿನೊಳಗೇ ಅದರ ಕುತ್ತಿಗೆ ಮುರಿದು, ಅದರ ಕಿವುರು ಸಂದಿಯನ್ನು ತನ್ನ ಸೊಂಟದ ಉಡಿದಾರಕ್ಕೆ ಸಿಕ್ಕಿಸಿಕೊಂಡಿದ್ದ! ಮುಂದೆ ನಮಗೆ ಬೆರಗುಂಟಮಾಡುವ ಉದ್ದೇಶದಿಂದ ಖಾಲಿ ಕೈಗಳನ್ನೆತ್ತಿ ತೋರಿಸಿದ್ದ, ಬಲೆಗೆ ಎರಡನೆ ಮಿನು ಸಿಕ್ಕಾಗ ಅದನ್ನು  ಹಿಡಿದೆತ್ತಿ ತೋರಿಸುವಾಗ, ಎರಡು ಮಿನುಗಳಿದ್ದುದನ್ನು ಕಂಡು ನಾವೆಲ್ಲ ಆಶ್ಚರ್ಯಪಡುತ್ತಿದ್ದಾಗ, ಐಯ್ಯಪ್ಪ ಚಿಕ್ಕಪ್ಪಯ್ಯನಿಂದ ನಿಜವಿಷಯ ತಿಲಿದು ನಾವೆಲ್ಲ ಆ ಪರಿಹಾಸ್ಯದಲ್ಲಿ ಭಾಗಿಗಳಾಗಿ ಸುತ್ತಣ ನೀರವ ಅರಣ್ಯ ನಮ್ಮ ನಗೆಯ ಅಲೆಯಿಂದ ನಲಿಯಿತು.

ಸಾಯಂಕಾಲ ಐದುಗಂಟೆಯವರೆಗೂ ನಮ್ಮ ಮಿನುಬೇಟೆ ಮುಂಬರಿಯಿತು. ಮಿನೂ ‘ಮಸ್ತಾಗಿ ಸಿಕ್ಕಿದುವು. ಆದರೆ ಸೊಂಟದ ಮಟ್ಟದ ನೀರಿನಲ್ಲಿ ನಿಂತು, ಮಿನು ಹಿಡಿಯುವ ಹುಮ್ಮಸ್ಸಿನಲ್ಲಿದ್ದ ನಮಗೆ ಬಿರುಬೇಸಗೆಯ ಪರಿವೆಯ ಇರಲಿಲ್ಲ, ಬಿಸಿಲು ಸುಡುತ್ತಿದ್ದದ್ದು ದೇಹಕ್ಕೆ ಅರಿವಾಗುತ್ತಿರಲಿಲ್ಲ ಎಂದಲ್ಲ; ಮನಸ್ಸು ಅದನ್ನು ಗಮನಿಸುತ್ತಿರಲಿಲ್ಲ, ದೇಹವೇ ಅದನ್ನು ಗಮನಿಸುತ್ತಿತ್ತು. ಆಗ ನಾವು ಯಾಂತ್ರಿಕವಾಗಿ ಎಂಬಂತೆ ನೀರು ತಲೆಯನ್ನು ಮುಳುಗಿಸುವಷ್ಷು ಮಟ್ಟಿಗೆ ಕೆರೆಯಲ್ಲಿ ಕುಳಿತು, ಬೆನ್ನು  ತಲೆ ಎಲ್ಲ ಒದ್ದೆಯಾಗಿ ತುಸು ತಣ್ಣಗಾಗುವಂತೆ ಮಾಡಿಕೊಂಡು, ಮತ್ತೆ ಎದ್ದು ನಿಂತು ಕೆಲಸಕ್ಕೆ ತೊಡಗುತ್ತಿದ್ದೆವು. ಅಂದು  ನಮಗಾದ ಬಿಸಿಲಿನ  ಹೊಡೆತದ  ಪರಿಣಾಮ ಕೆಲದಿನಗಳ  ಮೇಲೆಯೆ ನಮಗೆ ಗೊತ್ತಾದುದು; ಒಂದೆರಡು ದಿನಗಳ ತರುವಾಯ ಮಿಯುವಾಗ ಮೈಗಗೆ ಬಿಸಿನೀರು ಹೊಯ್ದುಕೊಂಡರೆ ಬೆನ್ನಗೆ ಚುರುಕ್ ಎಂದು  ಉರಿಯಾಗುತ್ತಿತ್ತು. ಸಾಬೂನು ತಿಕ್ಕಿಕೊಳ್ಳುವಾಗಲೂ ಬೆನ್ನಗೆ ಸುಟ್ಟಗಾಯ ಮುಟ್ಟಿದಂತಾಗಿ ನೋವಾಗುತ್ತಿತ್ತು. ಆಗಲೂ ನನಗೆ ಕಾರಣ ತಿಳಿಯಲಿಲ್ಲ. ಆದರೆ ಇನ್ನೆರಡು ದಿನ ಹೋಗುವುದರೊಳಗಾಗಿ ಬೆನ್ನು ಕರ್ರಗಾಗಿದ್ದನ್ನು ಬೆನ್ನುತಿಕ್ಕುವವರು ಗಮನಿಸಿದರು. ಮತ್ತೂ ಇನ್ನೆರಡು ದಿನಗಳಲ್ಲಿ ಬೆನ್ನಿನ ಚರ್ಮ ಸುಟ್ಟಂತೆ ಸುಲಿಯತೊಡಗಿತು, ಆಗಲೆ ಗೊತ್ತಾದುದು ನಿಜಸಂಗತಿ!

ಬಿಸಿಲಿನ ರೌಸಿನ ತೀವ್ರ ಪರಿಣಾಮ ಸದ್ಯಕ್ಕೆ ಅನುಭವಗೋಚರವಾಗದಿದ್ದರೂ ಇಂಬಳ, ಬೆಗಣೆ, ಪಟ್ಟೆಜಿಗಣೆ ಮುಂತಾದವುಗಳ ಕೀಟಕಾಟವನ್ನು ಹೆಚ್ಚು ಗಮನಿಸದಿರಲು ಆಗುತ್ತಿರಲಿಲ್ಲ. ಹಿಂದೆಂದೂ ಆಗಿರಲಿಲ್ಲ; ಮುಂದೆಂದೂ ಇದುವರೆಗೂ ಆಗಿಲ್ಲ; ಅಂತಹ ಒಂದು ಅನುಭವ ಅಂದು ನನ್ನ ಪಾಲಿಗೆ ಒದಗಿತು. ದುಡುಬುತ್ತಿದ್ದಾಗ ಒಮ್ಮೆ ಏತಕ್ಕೋ ಸೊಂಟಕ್ಕೆ ಕೈಹಾಕಿಕೊಂಡೆ. ಏನೋ ಕೈಗೆ ನುಣ್ಣಗಾಯಿತು. ಕಳಕು ನೀರು ನನ್ನ ಎದೆಮಟ್ಟಕ್ಕಿತ್ತಾದ್ದರಿಂದ ಸೊಂಟದ ಆ ಭಾಗ ನೀರೊಳಗಿದ್ದು ಕಣ್ಣಿಗೆ ಕಾಣಿಸುವಂತಿರಲಿಲ್ಲ. ಕೈಗೆ ಆ ನುಣುಪಿನ ಲೋಳಿ ಲೋಳಿ ವಸ್ತು ಏನೆಂದು ಪರಶೀಲಿಸಲು ಬರೆಳುಗಳನ್ನು ಅದರ ಮೇಲೆ ಹಾಯಿಸಿದಾಗ, ಹೆಬ್ಬೆರಳಿನಷ್ಟು ದಪ್ಪಗಿದ್ದ ಆ ಪದಾರ್ಥ ನನ್ನ ಸೊಂಟದ  ಮುಕ್ಕಾಲು ಭಾಗವನ್ನು  ಸುತ್ತುವರಿದಿದ್ದು ಗೊತ್ತಾಗಿ ನನಗೆ ದಿಗಿಲಾಯಿತು. ಹೆದರಿ ಕೂಗಿ ಕೊಂಡೆ, ಯಾವುದೋ ಹವು ಇರಬೇಕೆಂದು ಊಹಿಸಿ. ಅದು ಕಣ್ಣಿಗೆ ಬೀಳುವಂತೆ ಮಾಡಲು ಬೇಗಬೇಗನೆ ದಡದತ್ತ ಓಡಿದೆ. ಎಲ್ಲರೂ ಏನೆಂದರಿಯದೆ ನನ್ನತ್ತಲೆ ನೋಡುತ್ತಿದ್ದರು. ಪುಟ್ಟಣ್ಣ ಮಾತ್ರ ನನ್ನೆಡೆಗೆ ಓಡಿ ಬಂದ, ನನ್ನ ಸೊಂಟದ ಭಾಗ ನೀರಿನ ಮೇಲಕ್ಕೆ ಬಂದು ಕಾಣುವಷ್ಟು ದಡದೆಡೆಯ ತೆಳ್ಳಗೆ ನಾನು ಓಡಿದ್ದೆ. ನೋಡುತ್ತೇನೆ ಬೆರಳುದಪ್ಪದ ಕರಿಬಿಳುಪು ಪಟ್ಟೆಪಟ್ಟೆಯ, ಹಾವಿನಂತೆಯೆ ತೋರುತ್ತಿದ್ದರೂ ತಲೆ ಯಾವುದು ಬಾಲವಾವುದು ಗೊತ್ತಾಗದಂತೆ ಉದ್ದಕ್ಕೂ ಸಮಗಾತ್ರವಾಗಿದ್ದ ಒಂದು  ಜಂತು ಸೊಂಟಕ್ಕೆ ಸುತ್ತುವರಿದು ಕಚ್ಚಿಕೊಂಡಿದೆ! ಅದಕ್ಕೆ ಕೈಹಾಕಿ ಕಿತ್ತೆಳೆಯಲೂ ಹೆದರೆಇ ಹೇಸುತ್ತಿದ್ದ ನನ್ನೆಡೆಗೆ ಧಾವಿಸಿದ ಪುಟ್ಟಣ್ಣ ಅದನ್ನು ನಿರ್ದಾಕ್ಷಿಣ್ಯವಾಗಿ ಕಿತ್ತೆಳೆದು ದಡಕ್ಕೆ ಬೀಸಿ ಎಸೆದುಬಿಟ್ಟ. ಅದು ‘ಪಟ್ಟೆ ಜಿಗಳೆ’ಯಂತೆ! ಹುಲಿಗಳಲ್ಲಿ ಪಟ್ಟೆಹುಲಿ ಇರುವಂತೆ ಜಿಗಣಿಗಳಲ್ಲಿ ‘ಪಟ್ಟೆ ಜಿಗಳೆ!’ ಅದು ರಕ್ತ ಕುಡಿದೂ ಕುಡಿದೂ ತನಗೆ ತಾನೆ  ಬಿದ್ದು ಹೋಗುತ್ತಿತ್ತಂತೆ! ಈಗ ಅರ್ಧಮಟ್ಟಿಗೆ ರಕ್ತ ಕುಡಿದಿತ್ತಂತೆ. ಪೂರ್ತಿ ಕುಡಿಯುವ ಹೊತ್ತಿಗೆ ಸೊಂಟವನ್ನು ಪೂರ್ತಿ ಬಳಸುತ್ತಿತ್ತಂತೆ! ದಡಕ್ಕೆ ಎಸೆದಿದ್ದ ಅದನ್ನು ಕಲ್ಲಿನಿಂದ ಕುಟ್ಟಿದರೂ ಸಾಯಲಿಲ್ಲ. ಕತ್ತಿಯಿಂದ ತುಂಡುತುಂಡು ಕತ್ತರಿಸಿದರೂ ಎಷ್ಟು ತುಂಡಾಗುತ್ತದೆಯೋ ಅಷ್ಟೇ ಜಿಗಣಿಗಳಾಗುತ್ತದಂತೆ! ಅದಕ್ಕಾಗಿ ತರಗೆಲೆ ಒಟ್ಟುಮಾಡಿ ಆ ಕಬಂಧನನ್ನು ಸುಟ್ಟುಹಾಕಿದೆವು.

ನಮ್ಮ ನೀರು ಷಿಕಾರಿ ಮುಗಿಯುವ ಹೊತ್ತಿಗೆ ಬಾನೆಲ್ಲ ಮೋಡ  ಕವಿದು, ಗುಡುಗಿ, ಮಿಂಚಿ, ಸಿಡಿಲೂ ಸದ್ದುಮಾಡಿ, ಬಿರುಗಾಳಿ ಬೀಸಿ ಮುಂಗಾರ ಮೊದಲ ಮಳೆ ಹನಿ ಹಾಕತೊಡಗಿತು. ಕೆರೆಯ ನೀರೆಲ್ಲ ಕೊಳಕು ಬಗ್ಗಡವಾಗಿದ್ದು ಕೆಸರು  ಮೆತ್ತಿದಂತಿದ್ದ ಮೈಯನ್ನು  ಅದರಲ್ಲಿ ತೊಳೆಯುವುದು ಸಾಧ್ಯವೆ ಇರಲಿಲ್ಲ. ಪುಟ್ಟಣನೂ ಬೇಲರೂ ಹಳೆಪೈಕದವರೂ ಆ ಕೆಸರು ನೀರಿನಲ್ಲಿಯೆ ಮೈ ತೊಳೆದುಕೊಳ್ಳತೊಡಗಿದರು. ನಾವು ನಮ್ಮ ಬಟ್ಟೆಗಳನ್ನು ಮುದುರಿ ಗಂಟುಮಾಡಿ ಬಗಲಿಗೆ ಹಾಕಿಕೊಂಡು ಒಂದೇ ಸಮನೆ ಕಾಡಿನೊಳಗೆ ಕುಪ್ಪಳಿಯ ದಿಕ್ಕಿಗೆ ಓಡಿದೆವು. ಏಕೆಂದರೆ ಬತ್ತಲೆಯಿದ್ದ ನಾವು ಬಂದ ಹಾದಿಯಲ್ಲಿ ಹಿಂತಿರುಗಿ ಹೋಗಿ ಜನರ ಕಣ್ಣಿಗೆ ಬೀಳುವಷ್ಟು ನಾಣ್ಗೇಡಿಗಳಾಗಿರಲಿಲ್ಲ. ಕಾಡಿನ ಮರೆಯಲ್ಲಿ ಓಡಿ ಓಡಿ ಮನೆಯ ಬಚ್ಚಲುಮನೆಯನ್ನು ಸೇರಿಕೊಂಡೆವು. ಭೋರ್ಗರೆದು ಬಿದ್ದ ಮಳೆಯಲ್ಲಿ ನೆಂದು ಒದ್ದೆಮುದ್ದೆಯಾಗಿ ನಮ್ಮ ಸಂಗಡ ಓಡಿ ಬಂದವರೆಂದರೆ ನಾಯಿಗಳು ಮಾತ್ರ!

* * *

ಮೇಲೆಮೇಲೆ ಮನೆಯ ಬದುಕು ಎಂದಿನಂತೆ ಸಾಗುತ್ತಿರುವಂತೆ ತೋರುತ್ತಿದ್ದರೂ ಒಳಗೊಳಗೆ ಸಂಸಾರದಲ್ಲಿ ಮಸೆತ ಉಂಟಾಗಿ ಬಿರುಕು ತೋರುತ್ತಿತ್ತು. ಆದರೆ ಕಾವ್ಯದ ಕಾಮನಬಿಲ್ಲಿನ ಮೋಡದ ಮೇಲೇರಿ ಆಕಾಶಯಾತ್ರಿಯಾಗಿದ್ದ ನನ್ನ ಮನಸ್ಸು ಅವುಗಳನ್ನೆಲ್ಲ ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಆಗಿನ ನನ್ನ ಬುದ್ದಿಗೆ ಗ್ರಾಹ್ಯವಲ್ಲದಿದ್ದರೂ ನನ್ನ ಅಂತರಾತ್ಮಕ್ಕೆ ಗೋಚರವಾಗಿದ್ದ ಯಾವುದೋ ಒಂದು ಮಹಾಧ್ಯೇಯ ತನ್ನ ಸೌಂದರ್ಯ ಹಸ್ತಗಳನ್ನು ಚಾಚಿ ನನ್ನ ಚೇತನವನ್ನು ಕರೆ ಕರೆದು ಸೆಳೆಯುತ್ತಿದ್ದುದರಿಂದ  ಅದಕ್ಕೆ ಸ್ವಲ್ಪವೂ ಇಷ್ಟವಿರಲಿಲ್ಲ, ಸಾಂಸಾರಿಕ ಪಂಕಪ್ರವೇಶ ಮಾಡಿ ಅದರಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕೆ. ನಾನೇನಾದರೂ ಆ ಉಸುಬಿಗೆ ಕಾಲು ಹಾಕಿದ್ದರೆ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯಿಂದ ಹಿಡಿದು ‘ಶ್ರೀರಾಮಾಯಣದರ್ಶನಂ’ದ ವರೆಗಿನ ಸಾಹಿತ್ಯಕ್ಕೆ ಗೋರಿಯಾಗುತ್ತಿತ್ತು! ‘ಕಾನೂರು ಹೆಗ್ಗಡಿತಿ’ಯಾಗಲಿ ‘ಮಲೆಗಳಲ್ಲಿ ಮದುಮಗಳು’ ಆಗಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರಲಿಲ್ಲ. ಸಾಹಿತ್ಯಕ ವಿನಷ್ಟಿಗಿಂತಲೂ ಮಹತ್ತರವಾದ ಮತ್ತೊಂದು ವೈಯಕ್ತಿಕ ವಿನಷ್ಟಿಗೂ ಪಕ್ಕಾಗಿ ನನ್ನ ಆತ್ಮ  ತನ್ನ ಆಧ್ಯಾತ್ಮಿಕ ಉದ್ಧಾರದಿಂದ ವಂಚಿತವಾಗಿ ಈ ಜನ್ಮವೆ ಅಸಾರ್ಥಕವಾಗಿ ಹೋಗುತ್ತಿತ್ತು!

ಆದರೆ ಶ್ರೀಗುರುವಿನ ಕರುಣೆಯ ಕೈಹಾಗಾಗಲು ಬಿಡಿಲಿಲ್ಲ.

ಒಂದು ದಿನ ಬೈಗಿನ ಹೊತ್ತು ಐಯ್ಯಪ್ಪ ಚಿಕ್ಕಪ್ಪಯ್ಯ ನನ್ನೊಬ್ಬನನ್ನೆ ತಮ್ಮ ಜೊತೆ ಬರಲು ಕರೆದು ಈಗ ‘ಕವಿಶೈಲ’ ಎಂಬ ಹೆಸರು ಹೊತ್ತಿರುವ ಗುಡ್ಡದತ್ತ ಏರಿದರು. ಅವರ ಕೈಲಿ ಕೋವಿ ಇರಲಿಲ್ಲ; ಹೆಗಲ ಮೇಲೆ ಕಂಬಳಿ ಇರಲಿಲ್ಲ. ನನಗೆ ಸೋಜಿಗವಾಯ್ತು. ‘ಮರಸು’ ಕೂರಲು ಹೋಗುತ್ತಾರೇನೊ? ಅದಕ್ಕೆ ಜೊತೆಗಿರಲು ನನ್ನನ್ನು ಒಬ್ಬನನ್ನೆ ಕರೆಯುತ್ತಾರೆ ಎಂದುಕೊಂಡಿದ್ದುದು ಹುಸಿಯಾಯ್ತು.

ನಾವು ಗುಡ್ಡವೇರಿ ತರುವಾಯ ‘ಭೂತದ ಸಿಲೇಟು’ ಎಂದು ನಾಮಕರಣ ಮಾಡಿದ, ಹಾಸುಗಲ್ಲಿನ ಬಂಡೆಯೆಡೆಗೆ ಹೋದಾಗಾ ಅವರು ಕೂತು, ನನ್ನನ್ನೂ ಪಕ್ಕದಲ್ಲಿಯೆ ಕೂರುವಂತೆ ಹೇಳಿದರು. ಸೂರ್ಯ ಮುಳುಗಿದ್ದರೂ ಸಂಜೆಗೆಂಪು ಎದುರು ಮಲೆಯ ಪರ್ಣನಿಬಿಡವಾದ ಅರಣ್ಯದ ಮೇಲೆ ಆಡುತ್ತಿತ್ತು. ಗೂಡುಗೊತ್ತುಗಳಿಗೆ ಹೋಗುವ ಹಕ್ಕಿಗಳ ಉಲಿ ಇಂಪಾಗಿತ್ತು.

ಅವರು ಏನನ್ನೊ ಗುಟ್ಟಾಗಿ ಹೇಳುವಂತೆ ಮೆಲ್ಲಗೆ ಮಾತಾಡತೊಡಗಿದರು. ಬಹಲ ಹೊತ್ತು ವಿವರವಿವರವಾಗಿ ನಿದರ್ಶಗಳನ್ನು ಕೊಟ್ಟು ರಾಮಣ್ಣಯ್ಯ (ಐಯ್ಯಪ್ಪಗೌಡರು ರಾಮಣ್ಣಗೌಡರನ್ನು ಕರೆಯುತ್ತಿದ್ದದ್ದು ಹಾಗೆ.) ಸಂಸಾರದಲ್ಲಿ ಮಾಡುತ್ತಿರುವ ಅನ್ಯಾಯಗಳ ಪಟ್ಟಿಯನ್ನು ನನ್ನ ಮುಂದಿಟ್ಟರು. ತಮ್ಮ ತಂದೆ ಬಸಪ್ಪಗೌಡರಿಗೆ ಕೊಡುತ್ತಿರುವ ತೊಂದರೆಗಳನ್ನು ತಿಳಿಸಿದರು. ವಿಧವೆಯಾಗಿರುವ ನನ್ನ ತಾಯಿಗೆ ಏನೇನು ಸಂಕಟಗಳನ್ನು ಒದಗಿಸುತ್ತಿದ್ದಾರೆ ಎಂಬುದನ್ನೂ ಹೇಳಿದರು. ರಾಮಣ್ಣಗೌಡರು ತನಗಾಗಿ ತನ್ನ ಹೆಂಡಿರುಮಕ್ಕಳಿಗಾಗಿ  ಎಷ್ಟೆಲ್ಲ ಒಡವೆ ದುಡ್ಡು ಒಟ್ಟುಹಾಕುತ್ತಿದ್ದಾರೆ  ಮತ್ತು ಮನೆಯ ಆಸ್ತಿಯ ಅರ್ಧಕ್ಕೆ ಹಕ್ಕುದಾರನಾಗಿರುವ ನನಗೂ  ನನ್ನ ತಾಯಿ ತಂಗಿಯರಿಗೂ ಏನೂ ವಂಚನೆಯಾಗುತ್ತಿದೆ ಎಂಬುದನ್ನೂ ನಿದರ್ಶಗಳನ್ನು ಕೊಟ್ಟು ವರ್ಣಿಸಿದರು. ತಾವು ಹೇಳುತ್ತಿರುವುದು ಬರಿಯ ಊಹೆಯಲ್ಲವೆಂದು ತೋರಿಸಲು ಅವರು ಡೈರಿ ಇಟ್ಟು ಅನ್ಯಾಯಗಳನ್ನೆಲ್ಲ ಬರೆದಿಟ್ಟುಕೊಂಡಿರುವುದಾಗಿಯೂ ಹೇಳಿದರು.

ನನಗೀಗ ಆಶ್ಚರ್ಯವಾಗುತ್ತದೆ. ಅವರು ಹೇಳಿದ್ದನ್ನೆಲ್ಲ ಕಿವಿ ಕೇಳಿತು; ಮನಸ್ಸೂ ತಕ್ಕಮಟ್ಟಿಗೆ ಗ್ರಹಿಸಿತೆಂದು ಕಾಣುತ್ತದೆ, ಆದರೆ ಹೃದಯಕ್ಕೆ ಇಳಿಯಲೆ ಇಲ್ಲ! ನನಗೆ, ನನ್ನ ತಾಯಿಗೆ, ನನ್ನ ತಂಗಿಯರಿಗೆ ಕಷ್ಟಸಂಕಟ ಅನ್ಯಾಯಗಳಾಗುತ್ತಿವೆ ಎಂಬುದನ್ನು  ನನ್ನ ಚೇತನ ಯಾವುದೋ ಒಂದು ಕಾದಂಬರಿಯ ದಾರುಣ ಸಂಕಟದ ಕಥೆಯನ್ನು ಕೇಳಿ ಕರುಣ ರಸಾನುಭವ ಮಾಡಿದಂತೆ ಮಾಡಿತೇ ವಿನಾ ವೈಯಕ್ತಿಕವಾದ ಯಾವ ಸ್ಥಾಯಿಭಾವ ಸಂಚಾರವೂ ಆಗಿ ನನ್ನನ್ನು ಕಾರ್ಯೋನ್ಮುಖನ್ನಾಗಿ ಕಲಕಿದಂತೆ ತೋರುವುದಿಲ್ಲ!

ಈಗ ಊಹಿಸುತ್ತೇನೆ: ಐಯಪ್ಪಗೌಡರು ಆ ದಿನ ಮಾಡಿದ ಪ್ರಯತ್ನದ ಸದುದ್ದೇಶ, ಮನೆ ಪಾಲಾಗುವ ಕಾಲ ಸನ್ನಿಹಿತವಾಗುತ್ತಾ ಇದ್ದುದರಿಂದ ನಾನು ರಾಮಯ್ಯಗೌಡರ ಕಡೆಗೆ ಸೇರಿ ನಮ್ಮ ಮನೆಯ ಆಸ್ತಿಯ ಅರ್ಧಭಾಗವನ್ನು ಅವರ ಆಡಳಿತಕ್ಕೆ ಒಪ್ಪಿಸುವ ಬದಲಾಗಿ ತಮ್ಮ ತಂದೆ ಬಸಪ್ಪಗೌಡರ ಕಡೆಗೆ ಸೇರುವಂತಾಗಲಿ ಎಂದೇ ಇರಬೇಕೆಂದು. ಆದರೆ ಆ ವಿಚಾರವೇನೂ ನನ್ನ ಪ್ರಜ್ಞೆಗೆ ಇಳಿಯದೆ ಹೋದುದರಿಂದ ಅವರ ಉದ್ದೇಶ ಸಫಲವಾಗಲಿಲ್ಲ. ಬಹುಶಃ ಈಗ ಅದನ್ನು ಕುರಿತು ಬರೆಯುತ್ತಿರುವಾಗಲ್ಲದೆ ಹಿಂದೆಂದೂ ಅದನ್ನು ನೆನೆದೆಯೆ ಇಲ್ಲವೇನೂ!

* * *

ಅಯ್ಯಪ್ಪಗೌಡರ ಹಾಗೆಯ ನನ್ನ ಅವ್ವನೂ ಒಂದು ದಿನ ಸಮಯಕಾದು ಕೆರೆಯ ಕಡೆಗೆ ಹೋಗುತ್ತಿದ್ದ ನನ್ನೊಬ್ಬನನ್ನೆ ಮನೆಯ ಪೂರ್ವದ ಹೆಬ್ಬಾಗಿಲೆಡೆ ಸಂಧಿಸಿ, ಏನನ್ನೊ ಹೇಳಬೇಕಾಗಿರುವಂತೆ ನನ್ನ ಹತ್ತಿರಕ್ಕೆ ಬಂದರು. ಅವರು ಯಾರನ್ನೂ ದೂರಲಿಲ್ಲ. ‘ಮನೆ ಪಾಲಾಗುತ್ತದಂತೆ. ನಮ್ಮ ಪಾಲನ್ನು ನಾವು ತೆಗೆದುಕೊಂಡು ಅಲಾಯಿದ ಇದ್ದು ಬಿಡೋಣ                                             ’ ಎಂಬರ್ಥದ ಮಾತುಗಳನ್ನು ಸ್ಪಷ್ಟವಾಗಿಯೆ ತಿಳಿಸಿದರು. ಅಲ್ಲದೆ ನನ್ನ ಅಭಿಪ್ರಾಯವನ್ನು ಕೇಳಿದರು, ‘ನಾನು ವಿದ್ಯಾಭ್ಯಾಸ ನಿಲ್ಲಿಸಿ ಮನೆಯಲ್ಲಿ ನಿಲ್ಲುವುದು ಸಾಧ್ಯವೇನು’ ಎಂದು. ‘ನನಗೆ ಮುಂದಕ್ಕೆ ಓದಬೇಕೆಂಬ ಆಶೆಯಿದೆ’ ಎಂಬುದನ್ನು ಸೂಚಿಸಿದಾಗ ಅವರು ಮತ್ತೆ ಆ ವಿಚಾರವಾಗಿ ನನ್ನನ್ನು ಬಲಾತ್ಕರಿಸಲೇ ಇಲ್ಲ. ಅವರೇ ಹಿಂದೊಮ್ಮೆ ನನಗೆ ಹೇಳಿದ್ದರು, ನನ್ನ ತಂದೆ ಅವರೊಡನೆ ಮಾತಾಡಿದ್ದನ್ನು. ನನ್ನ ತಂದೆ ಹೇಳಿದ್ದರಂತೆ “ಏನಾಗಲಿ ಬಿಡಲಿ, ನನ್ನ ಮಗನ್ನ ಚೆನ್ನಾಗಿ ಓದಿಸಿಬಿಡ್ತೀನಿ!” ಎಂದು. ತಂದೆಯ ಆಶೆಗೆ ತಾಯಿ ವಿರುದ್ಧವಾದಾರೇ?

ಆದರೂ ನನ್ನ ತಾಯಿಗೆ ಮಗನಾದವನು ತಾಯಿಯಾದವಳ ವಿಚಾರವಾಗಿ ಎಷ್ಟು ಹೊಣೆಗಾರಿಕೆ ಹೊರಬೇಕೊ ಅಷ್ಟನ್ನು ತನ್ನ ಮಗನು ಹೊರುತ್ತಿಲ್ಲವಲ್ಲದೆ ಉದಾಸೀನವಾಗಿಯೂ ಇದ್ದಾನೆ ಎಂಬ ಭಾವನೆ ಆಗಾಗ ಮನಸ್ಸಿಗೆ ಬಂದು ನೊಂದುಕೊಳ್ಳುತ್ತಿದ್ದರೆಂದು ತೋರುತ್ತದೆ. ಒಮ್ಮೆ ನಾನು ರಜೆಗೆ ಹಳ್ಳಿಗೆ ಹೋಗಿದ್ದಾಗ ಅವರಿಗೆ ಮೈ ಸರಿಯಾಗಿರಲಿಲ್ಲ. ನಮ್ಮ ಕೋಣೆಯಲ್ಲಿ ಮಲಗಿರುತ್ತಿದ್ದರು. ಹುಡುಗಬುದ್ಧಿಯ ನಾನು ಇತರ ಹುಡುಗರೊಡನೆ ಆಟದಲ್ಲಿ, ಶಿಕಾರಿಯಲ್ಲಿ, ಅಲೆತದಲ್ಲಿ ತೊಡಗಿರುತ್ತಿದ್ದೆ. ಮನೆಯಲ್ಲಿ ಅನೇಕ ಹಿರಿಯ ಅಮ್ಮಂದಿರೂ ಇರುತ್ತಿದ್ದರು. ಅವರು ನೋಡಿಕೊಳ್ಳುತ್ತಾರಲ್ಲಾ ಎಂಬ ಭಾವನೆ ನನ್ನದು. ಇತರರು ಯಾರೂ ಇಲ್ಲದೆ ನಾನು ಮಾತ್ರ ದಿಕ್ಕಾಗಿದ್ದರೆ ಬಹುಶಃ ಖಂಡಿತ ನಾನು ಹಾಗೆ ವರ್ತಿಸುತ್ತಿರಲಿಲ್ಲ. ಆದರೆ ಮನೆಯ ಸಂಪ್ರದಾಯಃ ಯಾರಿಗೆ ಕಾಯಿಲೆಯಾದರೂ ಯಜಮಾನರೂ ಎಲ್ಲರೂ ನೋಡಿಕೊಳ್ಳುತ್ತಾರೆ ಎಂಬ ಭಾವನೆ. ಒಂದು ಸಾರಿ ಅವ್ವನನ್ನು ವಿಚಾರಿಸಲು ಕೋಣೆಗೆ ಹೋದೆ. ಅವ್ವ ತಕ್ಕಮಟ್ಟಿಗೆ ಹುಷಾರಾಗಿದ್ದರು. ಆದರೆ ಅವರ ಮನಸ್ಸಿನಲ್ಲಿ ಕೊರೆಯುತ್ತಿದ್ದ ನೋವನ್ನು ಹೊರಗೆಡವಿದರು, ತುಂಬ ಪ್ರೀತಿಯ ಧ್ವನಿಯಿಂದಲೆ. “ಏನು ಪುಟ್ಟೂ, ನನಗೆ ಕಾಯಿಲೆಯಾಗಿ ಬಿದ್ದುಕೊಂಡಿದ್ದರೂ ನೀನು ಬಂದು ಮಾತಾಡಿಸುವುದೆ ಇಲ್ಲವಲ್ಲ?” ಅಂದರೆ ತಮ್ಮ ಯೋಗಕ್ಷೇಮದ ವಿಚಾರದಲ್ಲಿ ನಾನು ಉದಸೀನನಾಗಿದ್ದೇನೆ ಎಂಬರ್ಥದಲ್ಲಿ. ಆಗ ನಾನು ಅವರಿಗೆ ಹೇಳಿದ ಮಾತುಗಳನ್ನು ನೆನೆದು ತರುವಾಯ ನನ್ನ ಜೀವನದಲ್ಲಿ ತುಂಬ ನಾಚಿಕೆಪಟ್ಟುಕೊಂಡಿದ್ದೇನೆ, ದುಃಖಪಟ್ಟುಕೊಂಡಿದ್ದೇನೆ, ಸಂಕಟಪಟ್ಟುಕೊಳ್ಳುತ್ತಲೂ ಇದ್ದೇನೆ. ಅವರು ತೀರಿಹೋದ ಏಳು ವರ್ಷಗಳ ಮೇಲೆ, ನಾನು ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಸಿದ್ದೇಶ್ವರಾನಂದರ ಸಾನಿಧ್ಯದಲ್ಲಿ ‘ಮನುಷ್ಯತ್ವ’ ಸಂಪಾದನೆ ಮಾಡುತ್ತಿದ್ದ ಕಾಲದಲ್ಲಿ, ಒಂದು ಸಂಜೆ ಕುಕ್ಕನಹಳ್ಳಿಯ ಕೆರೆಯ ದಡದ ಹಸುರು ದಿಬ್ಬದ ಮೇಲೆ ಒಬ್ಬನೆ ಕುಳಿತು, ಅವ್ವನನ್ನು ನೆನೆದು ಕಂಬನಿ ಸುರಿಸುತ್ತಾ ಅಂದು ಅವರಿಗೆ ನಾನಾಡಿದ ವೇದಾಂತದ ಮಾತುಗಳಿಗಾಗಿ ಪಶ್ಚಾತ್ತಾಪಪಡುತ್ತಾ ನನ್ನ ದುಃಖವನ್ನು ಒಂದು ಕವನದಲ್ಲಿ ತೋಡಿಕೊಂಡಿದ್ದೇನೆ.

ಅಂದು ನಾನಾಡಿದೆ ವೇದಾಂತದ ಮಾತುಗಳಿವುಃ “ಅವ್ವ ನನಗೇನು ನಿನ್ನ ಮೇಲೆ ಪ್ರೀತಿ ಇಲ್ಲ ಅಂತಾ ತಿಳಿದುಕೊಂಡಿದ್ದೀಯಾ? ನೀನು ಅಂದರೆ ಬರಿಯ ಈ ನಿನ್ನ ದೇಹವೇನು? ನೀನು ಸತ್ತರೂ ನಿನ್ನ ಆತ್ಮ ಅಮರವಾಗಿರುತ್ತದೆ…..” ಇತ್ಯಾದಿ ಉಪನ್ಯಾಸ ಮಾಡಿಬಿಟ್ಟೆ.

ಅದಕ್ಕೆ ನಿಟ್ಟುಸಿರು ಬಿಟ್ಟು ಅವರು ಕೊಟ್ಟ ಉತ್ತರಃ

“ಆಗಲಪ್ಪಾ! ಎಲ್ಲಾದರೂ ಇರು, ನೀನು ಸುಖವಾಗಿದ್ದರೆ ನನಗದೇ ಸಂತೋಷ!”

ನನ್ನ ತಂದೆ ನನ್ನ ಎರಡನೆಯ ಮಗನಾಗಿ ಹುಟ್ಟಿರುವ ಸಂಗತಿ ನನಗೆ ಗೊತ್ತಾದ ಮೇಲೆ, ಎಷ್ಟೋ ಸಾರಿ ಆಲೋಚಿಸುತ್ತೇನೆ: ಆ ಮಗನಿಗೆ ಹೆಂಡತಿಯಾಗಿ ಬರುವವಳು ನನ್ನ ತಾಯಿಯೆ ಆಗಿರುತ್ತಾಳೆ. ಆ ತಾಯಿಗೆ ನನ್ನಮ್ಮನಾಗಿದ್ದ ಅವರ ಹಿಂದಿನ ಜನ್ಮದಲ್ಲಿ ನಾನು ಕೊಟ್ಟಿರಬಹುದಾದ ಸಂಕಟಕ್ಕೆ ತಕ್ಕ ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಅವರನ್ನು ಈ ಜನ್ಮದಲ್ಲಿ ಸಂತೋಷಪಡಿಸುತ್ತೇನೆ ಎಂದು. ಆದರೆ ಆ ಕಾಲ ಇನ್ನೂ ಬಂದಿಲ್ಲ(೩.೧೦.೧೯೭೧).