೧೯೨೧ರಲ್ಲಿ ನಾನು ಐದನೆಯ ಫಾರಂನಲ್ಲಿ, ಅಂದರೆ ಹೈಸ್ಕೂಲು ಎರಡನೆ ವರ್ಷದಲ್ಲಿ, ಓದುತ್ತಿದ್ದಾಗ ಒಮ್ಮೆ ದಸರಾ ರಜಕ್ಕೆ ಊರಿಗೆ ಹೋಗಿದ್ದಾಗ ನಡೆದ ಒಂದು ಸಂಗತಿ, ಅಂದು ದೈನಂದಿನ ಒಂದು ಯಃಕಶ್ಚಿತ ಸಾಧಾರಣ ಘಟನೆಯಾಗಿದ್ದರೂ, ಇಂದು ಒಂದು ಅರ್ಥಪೂರ್ಣ ವಿಧಿನಿಯಂತ್ರಣದಂತೆ ತೋರುತ್ತದೆ. ಅಕ್ಟೋಬರ್ ತಿಂಗಳು ೮ನೆಯ ತಾರೀಖು.(ಮುಂದೆ ೧೯೨೯ರಲ್ಲಿ ಅದೇ ನನ್ನ ದೀಕ್ಷಾದಿನವೂ ಆಗುವುದೆಂದು ಯಾರಿಗೆ ಗೊತ್ತಿತ್ತು!) ನಾನು ನಮ್ಮ ಮನೆ ಕುಪ್ಪಳಿಯಿಂದ ನೆಂಟರ ಮನೆ ‘ಇಂಗ್ಲಾದಿ’ಗೆ ಹೋಗಿದ್ದೆ. ದೇವಂಗಿ ಮನೆಯವರು ಪಾಲಾಗಿ ಯಜಮಾನರಾಗಿದ್ದ ದೇವಂಗಿ ರಾಮಣ್ಣಗೌಡರು ಇಂಗ್ಲಾದಿಯಲ್ಲಿ ಮನೆ ಕಟ್ಟಿಸಿಕೊಂಡು ಅಲ್ಲಿ ನೆಲೆಸಿದ್ದರು. ನನ್ನ ಆಪ್ತಮಿತ್ರರಾದ ವೆಂಕಟಯ್ಯ ಅವರ ಹಿರಿಯ ಮಗ. ಆದ್ದರಿಂದ ಅವರು ಕುಪ್ಪಳಿಗೆ, ಅವರ ಸೋದರಮಾವನ ಮನೆಗೆ, ಬಂದಾಗಲೆಲ್ಲ ಹಿಂತಿರುಗವಾಗ ಅವರ ಮನೆಗೆ ಇಂಗ್ಲಾದಿಗೆ ನನ್ನನ್ನು ಕರೆದೊಯ್ಯುತ್ತಿದ್ದರು. ಅಲ್ಲಿ ಕಾಡಿನಲ್ಲಿ ಅಲೆದಾಟ, ಬೇಟೆ, ಆಟಗಳಲ್ಲಿ ಕಾಲ ಕಳೆಯುತ್ತಿದ್ದೆವು.

ವೆಂಕಟಯ್ಯನವರ ತಾಯಿ (ದೇವಂಗಿ ರಾಮಣ್ಣಗೌಡರ ಹೆಂಡತಿ ಮತ್ತು ಕುಪ್ಪಳಿ ರಾಮಣ್ಣಗೌಡರ ತಂಗಿ) ತೀರಿಹೋಗಿ ದೇವಂಗಿ ರಾಮಣ್ಣಗೌಡರು ನಂಬಳದ ಹೆಣ್ಣನ್ನು ಮದುವೆಯಾಗಿದ್ದರು. ಅದೂ ಒಂದು ಅಚ್ಚರಿಯ ಸಂಗತಿಯೆ ನನ್ನ ಜೀವನ ಚರಿತ್ರೆಯಲ್ಲಿ! ಏಕೆಂದರೆ ತೀರ್ಥಹಳ್ಳಿಯಲ್ಲಿ ಓದುತ್ತಿದ್ದ ನಾವು (ಎಂದರೆ ಕುಪ್ಪಳಿ ಮನೆಯ ಹುಡುಗರು) ಆ ಮದುವೆಗೂ ಹೋಗಿದ್ದೆವು. ಆ ಮದುವೆ ನಡೆದದ್ದು ಚಳಿಗಾಲದಲ್ಲಿ. ನಾವು ಹುಡುಗಬುದ್ಧಿಯವರೆಲ್ಲ ಮದುವೆ ಚಪ್ಪರದ ಒಂದು ಮೂಲೆಯಲ್ಲಿ ಸೇರಿ ಹರಟೆ ಗಲಾಟೆ ಮಾಡುತ್ತಿದ್ದು ರಾತ್ರಿ ಅಲ್ಲಿಯೆ ಅಡ್ಡಾದಿಡ್ಡಿಯಾಗಿ ಮಲಗಿ ನಿದ್ರಿಸಿದ್ದೆವು. ಕುಪ್ಪಳಿ ಹುಡುಗರನ್ನು ಹುಡುಕತ್ತಾ ಬಂದು ನಂಬಳದ ಮನೆಯವರೊಬ್ಬರು ನಮ್ಮನ್ನು ಒಳಗೆ ಉಪ್ಪರಿಗೆಗೆ ಹೋಗಿ ಬೆಚ್ಚಗೆ ಹಾಸಗೆಗಳಲ್ಲಿ ಮಲಗಲು ಗೋಗರೆದು ಕರೆದರೂ ನಾವು ಉಡಾಫಿಮಾಡಿ ‘ಬರುವುದಿಲ್ಲ’ ಎಂದು ಹೇಳಿ ಕಳಿಸಿಬಿಟ್ಟೆವು. ಆದರೆ ರಾತ್ರಿ ಮುಂದುವರಿದಂತೆಲ್ಲ ಚಳಿ ಹೆಚ್ಚಾಗಿ ಎಷ್ಟು ಒತ್ತಿಒತ್ತಿ ಮಲಗಿಕೊಂಡರೂ ನಡುಕು ತಪ್ಪದೆ ತುಂಬ ತೊಂದರೆಪಟ್ಟುಕೊಂಡಿದ್ದೆವು! ೧೯೧೭ರಲ್ಲಿಯೊ? ೧೯೧೮ರಲ್ಲಿಯೊ?

೧೯೨೧ನೆಯ ಇಸವಿ ಸೆಪ್ಟೆಂಬರ್ ೨೭ರಂದು ದೇವಂಗಿ ದೊಡ್ಡಮಾವನಿಗೆ (ರಾಮಣ್ಣಗೌಡರನ್ನು ನಾನು ಕರೆಯುತ್ತಿದ್ದ ರೀತಿ) ಅವರ ಹೊಸ ಸಂಬಂಧದಲ್ಲಿ ಮೊದಲನೆಯ ಮಗು ಹುಟ್ಟಿತು, ತವರುಮನೆ ನಂಬಳದಲ್ಲಿ. ಅದು ಹೆಣ್ಣಾಗಿರದೆ ಗಂಡಾಗಿದ್ದಿದ್ದರೆ? ಈ ನನ್ನ ನೆನಪಿನದೋಣಿಗೆ ಏರುತ್ತಲೆ ಇರಲಿಲ್ಲ! ಆದರೆ ಜಗನ್ನಿಯಂತೃ ವಿಧಿಯ ಚಿತ್ರಲೀಲೆ ಹಾಗೆ ಇಚ್ಛಿಸಿತ್ತು!

ಆದರೆ ಹದಿನೇಳು ವರ್ಷ ತುಂಬುವುದರಲ್ಲಿದ್ದ ನನ್ನ ಬಾಳಿಗೆ ಆಗತಾನೆ ಹುಟ್ಟಿದ್ದ ಆ ಶಿಶು ಪ್ರವೇಶಿಸುತ್ತದೆ ಎಂದು ಯಾರುತಾನೆ ಊಹಿಸಲು ಸಾಧ್ಯವಾಗಿತ್ತು?

ಸಂಜೆ ಸುಮಾರು ಐದು ಗಂಟೆಯ ಹೊತ್ತಿನಲ್ಲಿ ನಾವೆಲ್ಲ ಆಟವಾಡುತ್ತಾ ಹರಟುತ್ತಾ ದೊಡ್ಡಮಾವ ಅಲ್ಲಿಗೆ ಬಂದು “ಬರ್ತೀಯೇನೋ ನಂಬಳಕ್ಕೆ ಹೋಗಿ ಬರೋಣ” ಎಂದು ಕೇಳಿದರು. ನನ್ನ ಜೊತೆ ಅಲ್ಲಿಯೆ ಅವರ ಸ್ವಂತ ಮಕ್ಕಳು ವೆಂಕಟಯ್ಯ, ಮಾನಪ್ಪ ಮತ್ತು ಅವರ ತಮ್ಮದಿರು ನಾಗಪ್ಪಗೌಡರ ಮಕ್ಕಳು ಹಿರಿಯಣ್ಣ ಮುಂತಾದವರೂ ಇದ್ದರು. ಅವರನ್ನೆಲ್ಲ ಬಿಟ್ಟು ನನ್ನೊಬ್ಬನನ್ನೆ ಕರೆಯುತ್ತಾರೆಯೇ? ಅವರೆಲ್ಲ ಮನೆಯ ಮಕ್ಕಳ ಆಗಿರುವುದರಿಂದ ಅವರನ್ನೇನು ಕೇಳಬೇಕಾಗಿಲ್ಲ ಎಂದು ತೋರುತ್ತದೆ. ನಾನು ನೆಂಟರ ಹುಡುಗನಾದ್ದರಿಂದ ಕೇಳುತ್ತಿದ್ದಾರೆ. ಉಳಿದವರು ಎಂತಿದ್ದರೂ ನಮ್ಮೊಡನೆ ಬಂದೇ ಬರುತ್ತಾರೆ-ಎಂದು ಊಹಿಸಿ ನಾನು ‘ಆಗಲಿ, ಬರ್ತೇನೆ’ ಎಂದು ಸಮ್ಮತಿಸಿದೆ. ಮಾವ ಹೋಗುವುದು ಏಕೆ ಎಂದು ವಿಚಾರಿಸಿದಾಗ ನನ್ನ ಗೆಳೆಯರು ಹೇಳಿದರು, ಅವೊತ್ತು ನಂಬಳದಲ್ಲಿ ‘ಬಾಲೆ ತೊಟ್ಟಲಿಗೆ ಹಾಕುವ ಮನೆ’ ಎಂದು. ಮಾವ ನನ್ನನ್ನು ಕರೆದುಕೊಂಡು ಹೊರಟಾಗ ನಮ್ಮ ಸಂಗಡ ಕಾಡುಹಾದಿಯಲ್ಲಿ ಮೈಗಾವಲೆಂಬಂತೆ ಒಬ್ಬ ಆಳು ಮಾತ್ರವೆ ಕೋವಿಹಿಡಿದು ಹಿಂಬಾಲಿಸುತ್ತಿದ್ದುದನ್ನು ಕಂಡು ನನಗೆ ಸೋಜಿಗವಾಯಿತು, ವೆಂಕಟಯ್ಯ ಹಿರಿಯಣ್ಣ ಯಾರೂ ಏಕೆ ಜೊತೆಗೆ ಬರುತ್ತಿಲ್ಲ ಎಂದು. ಅವರು ಯಾರೂ ಬರದಿರಲು ಕಾರಣವಾಗಿದ್ದ ಸಾಂಸಾರಿಕ ರಾಗದ್ವೇಷಾದಿ ರಹಸ್ಯವನ್ನು ಅರಿಯುವ ವಿದಗ್ಧತೆಗೆ ಇನ್ನೂ ಏರಿರಲಿಲ್ಲ ನನ್ನ ಮುಗ್ಧತೆ ಅಂದು!

ನಾವು ಹೊರಟಿದ್ದು ದಟ್ಟಕಾಡಿನ ಒಳದಾರಿಯಲ್ಲಿ. ಆ ಕಾಲುದಾರಿ ಹಳುವಿನ ನಡುವೆ ಅಂಕುಡೊಂಕು ಏರಿ ಇಳಿದು ಹೋಗುತ್ತಿತ್ತು. ತೀರ್ಥಹಳ್ಳಿಗೆ ಹೋಗುವ ಹೆದ್ದಾರಿಯ ಕಡೆಯಿಂದ ಹೋದರೆ ನಾಲ್ಕಾರು ಮೈಲಿಗಳಾಗಬಹುದಾಗಿರುವ ನಂಬಳ ಈ ಕಾಡಿನ ಒಳದಾರಿಯಿಂದ ಹೋದರೆ ಎರಡೂವರೆ ಮೂರು ಮೈಲಿಗಳಾಗಬಹುದೇನೊ? ನಾವು ಹೊರಟಾಗಲೆ ಬೈಗು ಬಳಿಸಾರಿತ್ತು. ಹೊರಟು ದಿಬ್ಬವೇರಿ ನಿತ್ಯ ಶ್ಯಾಮಲ ನಿಬಿಡಾರಣ್ಯ ಪ್ರವೇಶಮಾಡಿದಾಗ ಮರಗತ್ತಲೆಯ ಜೊತೆಗೆ ಬೈಗುಗಪ್ಪೂ ಇಳಿದು ಬಂದಿತು. ಕಾಡಿನ ಅಂಚುಗಳಲ್ಲಿ ಗೂಡಿಗೂ ಗೊತ್ತಿಗೂ ಹಾರಿಹೋಗುವ ವಿವಿಧ ಹಕ್ಕಿಗಳ ನಾನಾ ಕಲರವ ಸುಮಧರವಾಗಿತ್ತು. ಆದರೆ ಕಾಡಿನ ಒಳಗೆ ನುಗ್ಗಿ ಹೋದಂತೆಲ್ಲ ಕಾಡುಗತ್ತಲೆಯ ಜೊತೆಗೆ ನೀರವತೆಯೂ ಅತಿಶಯವಾಗುತ್ತಾ ಬಂದು ತುಸು ಹೆದರಿಕೆ ಹುಟ್ಟಿಸುವಂತಿತ್ತು. ಮತ್ತೆ ಜೀರುಂಡೆಗಳ ಕರೆಕರೆಯ ಚೀರ್ದನಿ ಆ ನೀರವತೆಯನ್ನು ತನ್ನ ಗರಗಸದಿಂದ ಕೊಯ್ಯುವಂತಾಗಿ ಕಿವಿಗೆ ಕರ್ಕಶವಾಯ್ತು.

ಹಳುವಿನ ದಾರಿ ಕಾಲುದಾರಿ ಆಗಿದ್ದುದರಿಂದ ಒಬ್ಬರ ಹಿಂದೆ ಒಬ್ಬರು ಮಾತ್ರ ಹೋಗಬಹುದಾಗಿತ್ತು. ಮಾವ ಮುಂದೆ, ಅವರ ಹಿಂದೆ ನಾನು, ನನ್ನ ಹಿಂದೆ ಕೋವಿ ಹೊತ್ತ ಆಳು. ಪಕ್ಕಪಕ್ಕದಲ್ಲಿ ನಡೆಯುವಾಗ ಸಂಭಾಷಿಸುವಂತೆ ಒಬ್ಬರ ಹಿಂದೆ ಒಬ್ಬರು ಕಾಲುದಾರಿಯ ಇಕ್ಕಟ್ಟಿನಲ್ಲಿ, ಹಳುವಿನ ಮಧ್ಯೆ ದಾರಿಯ ಕಡೆ ಕಲ್ಲುಗಿಲ್ಲು ಎಡವದಂತೆ ನೋಡಿಕೊಳ್ಳುತ್ತಾ ಎಚ್ಚರಿಕೆಯಿಂದ ನಡೆಯಬೇಕಾಗಿರುವಾಗ ಮಾತನಾಡುವುದಕ್ಕೂ ಮನಸ್ಸಿರುವುದಿಲ್ಲ. ಅಲ್ಲದೆ ನನಗಿಂತಲೂ ಬಹಳ ಹಿರಿಯರಾಗಿದ್ದವರೊಡನೆ ಎಂಥ ಮಾತು? ದಾರಿ ಮೌನವಗಿಯೆ ಸಾಗುತ್ತಿತ್ತು. ನಾನೇಕೆ ಬರಲೊಪ್ಪಿದೆನೋ ಎನ್ನುವಂತಾಗಿತ್ತು.

ನವಿಲುಕಲ್ಲು ಗುಡ್ಡದ ಬುಡಕ್ಕೆ ಬಂದಾಗ ಆ ಕಾಲುದಾರಿ ಮೇಳಿಗೆ ಕಡೆಗೆ ಹೋಗುತ್ತಿದ್ದ ಒಂದು ಕೊರಕಲು ರಸ್ತೆಗೆ ಅಥವಾ ಹಳ್ಳಿಯ ಗಾಡಿದಾರಿಗೆ ಬಂದು ಮುಟ್ಟಿತು. ದಾರಿ ಅಗಲವಾದಾಗ ಮಾವನ ನಡೆ ನಿಧಾನಿಸಿತು; ನಾನು ಅವರ ಮಗ್ಗುಲಲ್ಲಿ ನಡೆಯತೊಡಗಿದೆ. ಆಗ ಮಾತಾಡಲು ಪ್ರಾರಂಭಿಸಿದೆವು.

ಏನೇನು ಮಾತಾಡಿದೆವೊ ನನಗೀಗ ನೆನಪಾಗುವುದಿಲ್ಲ. ಆದರೆ ಒಂದು ಚೆನ್ನಾಗಿ ನೆನಪಿಗೆ ಬರುತ್ತಿದೆ. ಮಾತು ಮಾತಿನ ಮಧ್ಯೆ ಅವರು ನಂಬಳದಲ್ಲಿ ಜನಿಸಿದ್ದ ಹೆಣ್ಣು ಮಗುವಿಗೆ ಒಂದು ಹೆಸರು ಸೂಚಿಸಲು ಹೇಳಿದರು.

ಸಾಮಾನ್ಯವಾಗಿ ಅವರು ನಮಗೆಲ್ಲ ಹೊರನೋಟಕ್ಕೆ ಬಿಗುಮಾನದ ವ್ಯಕ್ತಿಯಾಗಿ ಕಾಣುತ್ತಿದ್ದರು. ಅನೇಕರು ಅವರನ್ನು ಕಂಡು ಹೆದರುತ್ತಿದ್ದರು. ಅವರ ದರ್ಪಕ್ಕೆ ಮಣಿಯುತ್ತಿದ್ದರು. ಸ್ವಲ್ಪಮಟ್ಟಿಗೆ ಲೌಕಿಕದ ಲೆಕ್ಕಾಚಾರದ ನಿಷ್ಠುರ ನಿರ್ಭಾವ ವ್ಯಕ್ತಿಯಾಗಿಯೂ ಇದ್ದಿರಬಹುದೇನೋ? ಆದರೆ ಮಲೆನಾಡಿನಲ್ಲಿ ಆಗಿನ ಕಾಲದಲ್ಲಿ ಬ್ರಾಹ್ಮಣರ ಮತಮೌಢ್ಯದ ಉಸುಬಿನಲ್ಲಿ ಸಿಕ್ಕಿ ತಮ್ಮತನವನ್ನೆಲ್ಲ ಪುರೋಹಿತ ಹಾರುವರ ಕಾಲಡಿಗೆ ಸಮರ್ಪಿಸಿದ್ದ ಗೌಡರುಗಳ ಮಧ್ಯೆ ಅಂತಹ ಒಬ್ಬ ವೈಜ್ಞಾನಿಕ ದೃಷ್ಟಿಯ ಮತ್ತು ವೈಚಾರಿಕ ಬುದ್ಧಿಯ ಸಮರ್ಥ ಮುಂದಾಳು ಹುಟ್ಟಿ ಬಂದುದೆ ಆಶ್ಚರ್ಯಕರವಾಗಿ ತೋರುತ್ತದೆ.

ಅವರೆಲ್ಲಿಯಾದರೂ ಸಂಪ್ರದಾಯದ ಗೊಡ್ಡುದಾಸರಾಗಿದ್ದಿದ್ದರೆ, ಬ್ರಾಹ್ಮಣ ಜೋಯಿಸರು ಶೂದ್ರರ ಮಕ್ಕಳಿಗೆ ಇಟ್ಟುಕೊಡುತ್ತಿದ್ದ ಹೆಸರನ್ನೆ ಅವರ ಮಗಳಿಗೂ ಇಟ್ಟು, ನಾನು ಕುಳ್ಳಮ್ಮಗೊ ಗಿಡ್ಡಮ್ಮಗೊ ಬೊಳ್ಳಮ್ಮಗೊ ಗಂಡನಾಗಿರಬೇಕಾಗುತ್ತಿತ್ತು!

ನಾನೆ ನೋಡಿದ್ದೇನೆ: ಒಂದು ದಿನ ದೇವಂಗಿಯಲ್ಲಿ ಒಬ್ಬನು ಮೈಮೇಲೆ ದೇವರು ಬರಿಸಿಕೊಂಡು ಗಣಮಗನಂತೆ ಹೂಂಕರಿಸಿ ಏನೇನೊ ಕಣಿ ಹೇಳಲು ತೊಡಗಿದಾಗ ಇವರು, ಜಗಲಿಯ ಮೇಲೆ ಕೆಸರ್ಹಲಿಗೆಯ ಮೇಲೆ ಹಾಸಿದ್ದ ಜಮಾಖಾನದ ಮೇಲೆ ಕೂತಿದ್ದವರು, ಕೈಗೆ ಒಂದು ಬೆತ್ತ ಎಳೆದುಕೊಂಡು ಅಂಗಳಕ್ಕೆ ಹಾರಿ ಆ ಗಣಮಗನಿಗೆ ರಪ್ಪರಪ್ಪನೆ ಹೊಡೆದಾಗ ಅವನು ದೇವರತನವನ್ನೂ ಗಣಮಗನ ಅಧಿಕಾರವನ್ನೂ ತಟಕ್ಕನೆ ಕಳಚಿ ಎಸೆದು “ಅಯ್ಯಾ ನಿಮ್ಮ ದಮ್ಮಯ್ಯಾ ಹೊಡಿಬೇಡಿ!” ಎಂದು ಅಬ್ಬರಿಸಿ ಕೂಗಿಕೊಂಡು ಅವರ ಕಾಲು ಹಿಡಿದು ‘ತಪ್ಪಾಯ್ತು’ ಎಂದು ಕ್ಷಮೆ ಬೇಡಿದುದನ್ನು!

ಅವರನ್ನು ಕ್ರೈಸ್ತಮತಕ್ಕೆ ಸೇರಿಸಿಕೊಂಡರೆ ಮಲೆನಾಡಿನ ಒಕ್ಕಲಿಗರೆಲ್ಲ ಕ್ರೈಸ್ತರಾಗುತ್ತಾರೆ ಎಂದು ಐರೋಪ್ಯಪಾದ್ರಿಗಳು ಮಾಡಿದ ಪುಸಲಾಯಿಕೆಯ ಪ್ರಯತ್ನವೆಲ್ಲ ವ್ಯರ್ಥವಾದುದಕ್ಕೆ, ಒಬ್ಬ ಆಂಗ್ಲೇಯ ಪಾದ್ರಿ ಇಂಗ್ಲೆಂಡಿನ ತನ್ನ ಮಿಶನ್ನಿನ ಸೈನಾಡ್ ಅಥವಾ ಸೈನೋಗಾಗ್ ಗೆ ಅಚ್ಚುಹಾಕಿ ಕಳಿಸಿದ ಒಂದು ಪುಸ್ತಿಕಾರೂಪದ ವರದಿಯಲ್ಲಿ, ಮಂಡಗದ್ದೆ ಚನ್ನಪ್ಪಗೌಡರನ್ನು ಕ್ರೈಸ್ತರನ್ನಾಗಿ ಮಾಡಿದುದಾಗಿಯೂ, ಆದರೆ ದೇವಂಗಿ ರಾಮಣ್ಣಗೌಡರು ತಮ್ಮ ಮತದಲ್ಲಿಯೆ ಮುಂದುವರಿಯಲು ನಿಶ್ಚಯಿಸಿರೆಂದೂ ಬರೆದಿದ್ದಾನೆ. ತಮ್ಮ ಹಿಂದೂಮತದಲ್ಲಿಯೆ ಮುಂದುವರಿಯುವುದು ಎಂಬುದನ್ನು ಅವನು ವಿವರಿಸುತ್ತಾ ಈ ಅರ್ಥ ಬರುವಂತೆ ಇಂಗ್ಲಿಷಿನಲ್ಲಿ ಬರೆದಿದ್ದಾನೆ. ‘ಬ್ರಾಹ್ಮಣರ ಪೂಜೆ ಮಾಡಿ, ಅವರ ಪಾದ ತೊಳೆದು ನೀರನ್ನು ಪವಿತ್ರತೀರ್ಥ ಎಂದು ಕುಡಿಯುವುದು!’ ಅಲ್ಲಿಯ ಶೂದ್ರರ ಆಗಿನ ಹಿಂದೂಧರ್ಮದ ವ್ಯಾಖ್ಯಾನದಲ್ಲೇನೋ ಆ ಪಾದ್ರಿ ಒಂದಿನಿತೂ ತಪ್ಪು ಮಾಡಿಲ್ಲ!

ಅವರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದು ಮಹಾರಾಜರಿಂದ ಸೇವಾ ಪ್ರಶಸ್ತಿಯನ್ನೂ ಪಡೆದಿದ್ದರಂತೆ. ಆದರೆ ನಾನೀಗ ಪ್ರಸ್ತಾಪಿಸುತ್ತಿರುವ ಸಂಗತಿ ನಡೆದ ಕಾಲದಲ್ಲಿ ಅವರು ಅದನ್ನೆಲ್ಲ ಬಿಟ್ಟು ರಾಜಕೀಯದಿಂದ ನಿವೃತ್ತರಾದಂತಿದ್ದರು. ನನಗೆ, ಅವರ ಬದುಕಿನ ಆ ಗಂಭೀರ ವಿಚಾರಗಳಾದವುವೂ ಗೊತ್ತಿರದಿದ್ದುದರಿಂದ ಅವರು ನನಗೆ, ಬರಿಯ “ದೇವಂಗಿ ದೊಡ್ಡಮಾವ” ಮಾತ್ರರಾಗಿ ಅಷ್ಟೇನೂ ‘ಭಯಂಕರ’ ವ್ಯಕ್ತಿಯಾಗಿರಲಿಲ್ಲ. ಆದರೂ ಅವರಲ್ಲಿ ಒಂದು ಭಯಮಿಶ್ರಿತ ಗೌರವವಿದ್ದು, ಅವರೊಡನೆ ಹಿರಿಯ ಇತರರೊಡನೆ ವರ್ತಿಸುತ್ತಿದ್ದಂತೆ ಲಘುವಾಗಿ ವರ್ತಿಸುತ್ತಿದ್ದಿಲ್ಲ. ಚಿಕ್ಕಂದಿನಿಂದಲೂ ಅವರು ನನ್ನೊಡನೆ ಅಕ್ಕರೆಯಿಂದಲೆ ವರ್ತಿಸಿ ಮಾತಾಡಿಸುತ್ತಿದ್ದರೆಂದು ನನ್ನ ಅನುಭವ. ಒಮ್ಮೆ ತೀರ್ಥಹಳ್ಳಿಯಲ್ಲಿ ನಾವು ಓದುತ್ತಿದ್ದಾಗ ಯಾವುದೊ ಕಛೇರಿ ಕೆಲಸಕ್ಕಾಗಿಯೋ ಏನೋ ಅವರೂ ಕೂಡಿಗೆ ಮಣೆಗಾರರೊಡನೆ ಪ್ರಶಂಸೆಯ ಮಾತನಾಡಿದಾಗ ಅವರು “ಏನೋ ನೀನು ಎಂ.ಎ. ಪಾಸು ಮಾಡ್ತಿಯೇನೋ?” ಎಂದು ಲಘು ಹಾಸದಿಂದ ಪ್ರಶ್ನಿಸಿದಾಗ ನಾನು ‘ಎಂ.ಎ.’ಯ ಗುರುತ್ವವನ್ನಾಗಲಿ ಅದರ ಅಸಂಭಾವ್ಯ ವ್ಯಾಪ್ತಿಯನ್ನಾಗಲಿ ಅರಿಯದಿದ್ದರೂ ಒಂದಿನಿತೂ ಲೆಕ್ಕಿಸದೆ “ಓಹೋ!” ಎಂದು ಧೈರ್ಯವಾಗಿ ಉತ್ತರಿಸಿದ್ದೆ. ನಾನು ಮೈಸೂರಿಗೆ ಓದಲು ಹೋಗಿ, ಇಂಗ್ಲಿಷಿನಲ್ಲಿ ಪದ್ಯಗಿದ್ಯ ಬರೆಯುತ್ತಿದ್ದ ಸುದ್ದಿ ಅವರ ಕಿವಿಗೂ ಬಿದ್ದಮೇಲೆ ನನ್ನ ವಿಚಾರವಾಗಿ ಅವರಿಗೆ ಒಳ್ಳೆಯ ಅಭಿಪ್ರಾಯವೂ ಮೂಡಿತ್ತೆಂದು ತೋರುತ್ತದೆ. ನನ್ನ ಆ ಸಾಹಿತ್ಯಕ ಕೀರ್ತಿಯೆ ಕಾರಣವಾಯಿತು ಎಂದು ತೋರುತ್ತದೆ, ತಮ್ಮ ಹೆಣ್ಣು ಶಿಶುವಿಗೆ ಹೆಸರು ಸೂಚಿಸಲು ನನ್ನನ್ನು ಕೇಳಿದ್ದಕ್ಕೆ.

ನಾನು ತುಸು ಸಂಕೋಚದಿಂದಲೆ ಒಪ್ಪಿಗೆ ಸೂಚಿಸಿ, ನಡೆಯುತ್ತಲೆ ಆಲೋಚಿಸತೊಡಗಿದೆ. ಆಗಲೆ ಕತ್ತಲೆಯ ಮಬ್ಬು ದಟ್ಟೈಸುತ್ತಿತ್ತು. ದಾರಿ ಮಸಗು ಮಸಗಾಗುತ್ತಿತ್ತು. ಹೆಮ್ಮರಗಳ ನೆತ್ತಿಯ ಬಿಡುವಿನಲ್ಲಿ ಅರಿಲುಗಳೂ ಮಿಣುಕುತ್ತಿದ್ದುವು. ಅಲ್ಲಲ್ಲಿ ನೀರಿನ ನೆಲೆಗಳಿದ್ದ ದಟ್ಟಮರಗಳಿಂದಾದ ಕಡುಗತ್ತಲಲ್ಲಿ ಮಿಣುಕುಹುಳಗಳ ಕಾಂತಿಯೂ ಗೋಚರಿಸತೊಡಗಿತ್ತು. ನಮ್ಮ ಹಾದಿ ದೈನೆ ಭಟ್ಟರ ಮನೆಯ ಅಂಗಳದ ಬೇಲಿಯ ತಡಬೆ ದಾಟಿ, ಅವರ ಮುಂಚೆಕಡೆಯ ಅಂಗಳದಲ್ಲಿ ತುಳಸಿಕಟ್ಟೆಯ ಸಮಿಪದಲ್ಲಿಯೆ ಹಾದು ಮುಂಬರಿಯಿತು. ಸ್ವಲ್ಪ ದೂರ ಹೋಗುವುದರಲ್ಲಿ ಕಾಡಿನ ದಾರಿ ಕಾಣಿಸದಷ್ಟು ಕಪ್ಪಾಯಿತು. ಹಾದಿಯ ಬಳಿ ಸಿಕ್ಕಿದ ಒಂದು ಮನೆಯಲ್ಲಿ ದೊಂದಿ ಮಾಡಿಸಿ ಹೊತ್ತಿಸಿಕೊಂಡೆವು. ಅದನ್ನು ಬೀಸುತ್ತಾ ಆಳು ಮುಂದೆ ನಡೆಯುತ್ತಿರಲು ಅದರ ಮಂದಕಾಂತಿಯಲ್ಲಿ ಹಾದಿ ಹುಡುಕುತ್ತಾ ಮುಂದುವರಿದು, ನಂಬಳದ ಮನೆ ಸೇರುವುದರಲ್ಲಿ ಚೆನ್ನಾಗಿ ಕತ್ತಲಾಗಿತ್ತು. ಜಗಲಿಗೆ ದೀಪ ಹೊತ್ತಿಸಿದ್ದರು. ಗೌಡರು ಬರುವುದನ್ನೇ ಕಾಯುತ್ತಿದ್ದರು, ಮನೆಯವರು.

ಆ ಮನೆಯಲ್ಲಿ ಯಾರೂ ನನ್ನ ಓರಗೆಯ ಹುಡುಗರಿರಲಿಲ್ಲ, ಆದ್ದರಿಂದ ನನಗೆ ತುಂಬ ಬೇಸರವೂ ಆಯಿತು, ಇಂಗ್ಲಾದಿಯಲ್ಲಿ ಗೆಳೆಯರನ್ನು ಬಿಟ್ಟು ನಾನೊಬ್ಬನೆ ಇವರೊಡನೆ ಬರಬಾರದಿತ್ತು ಎನ್ನಿಸಿತ್ತು.

ಆದರೆ ಲೀಲಾಮಯಿ ಜಗದಂಬೆ ಮುಂದೆ, ಹದಿನಾರು ವರ್ಷಗಳ ಅನಂತರ ೧೯೩೭ರಲ್ಲಿ, ನನಗೆ ಸಹಧರ್ಮಿಣಿಯಾಗಿ ನನ್ನ ಜೀವನವನ್ನು ಪಾವನಗೊಳಿಸಿ ಮಧುಮಯವನ್ನಾಗಿ ಮಾಡಲಿದ್ದ ಆ ತೊಟ್ಟಿಲ ಕೂಸಿಗೆ ನಾನೆ ಹೆಸರಿಡುವಂತೆ ವ್ಯೂಹ ಯೋಜನೆ ವಿಧಿಸಿದ್ದಳು. ಅದೇನಾದರೂ ಅಂದು ಹೊಳೆದಿದ್ದರೆ! ಬೇಸರವಾಗುತ್ತಿತ್ತೆ?

‘ಬಾಲೆ ತೊಟ್ಟಲಿಗೆ ಹಾಕು’ವ ಶಾಸ್ತ್ರ ಪೂರೈಸಿ, ನಮಗೆಲ್ಲ ಔತಣದೂಟವಾಯಿತುಃ ಲೋಕಕ್ಕೆ ಅವತರಿಸಿದ್ದಳು, ಹೆಸರಾಂತುಃ ‘ಹೇಮಾವತಿ!’