೧೯೨೨ನೆಯ ಇಸವಿಯಲ್ಲಿ ಇಂಗ್ಲಿಷ್ ಕವನಗಳು ‘Beginner’s Muse’ ಪ್ರಕಟವಾದ ಮೇಲೆ, ಹಿಂದೆ ನನ್ನನ್ನು ಕಿಲಸ್ತರ ಜಾತಿಗೆ ಸೇರಿ ಜಾತಗೆಟ್ಟವನೆಂದು ತಮ್ಮ ವಿದ್ಯಾರ್ಥಿನಿಲಯಕ್ಕೆ ಸೇರಿಸಿಕೊಳ್ಳದೆ ಹೊರದೂಡಿದ ಬಯಲುಸೀಮೆಯ ಒಕ್ಕಲಿಗರೂ ನನಗೆ ಮಾನ್ಯತೆ ತೋರಿದರು, ತಮ್ಮ ಜಾತಿಯವನೆಂದು ಒಪ್ಪಿಕೊಂಡು! ಆದರೆ ಅಷ್ಟರಲ್ಲಿಯೆ ನನ್ನ ಚೇತನ ಜಾತಿಗೀತಿಗಳನ್ನೆಲ್ಲ ಮಿರಿ ನಿಂತಿತ್ತು, ಸ್ವಾಮಿ ವಿವೇಕಾನಂದರ ಕೃಪೆಯಿಂದ. ನನ್ನ ಆಪ್ತ ಸ್ನೇಹಿತರಲ್ಲಿ ಬ್ರಾಹ್ಮಣರಿದ್ದರು, ವೈಶ್ಯರಿದ್ದರು, ಮುಸಲ್ಮಾನರಿದ್ದರು, ಕ್ರೈಸ್ತರಿದ್ದರು, ಶೂದ್ರರ ಬೇರೆಬೇರೆ ಪಂಗಡಗಳವರೂ ಇದ್ದರು. ನನಗೆ ಜಾತೀಯತಾ ದೃಷ್ಟಿಯಿಂದ ನೋಡುವ ಮನೋಧರ್ಮವೆ ಲುಪ್ತವಾಗಿತ್ತು, ಭಾವನೆಯಲ್ಲಿ ಮಾತ್ರವಲ್ಲ, ನಿಜವರ್ತನೆಯಲ್ಲಿಯೂ. ಆ ಮತದವರು ಈ ಮತದವರು ಎಂಬ ಭೇಧವಿಲ್ಲದೆ ಎಲ್ಲರೊಡನೆಯೂ ಕುಳಿತು ಊಟ ತಿಂಡಿ ಮಾಡುತ್ತಿದ್ದೆ. ಬ್ರಾಹ್ಮಣರೊಡನೆ ಅವರ ಮನೆಗಳಲ್ಲಿ ಪಾಯಸ ಉಂಡು, ಮುಸಲ್ಮಾನರೊಡನೆ ಅವರ ಮನೆಗಳಲ್ಲಿ ಪಲಾವು ತಿನ್ನುತ್ತಿದ್ದೆ. ಅದನ್ನೆಲ್ಲ ತುಂಬ ಸಹಜವಾಗಿಯೆ ಮಾಡುತ್ತಿದ್ದೆ, ನಾನೊಬ್ಬ ಸುಧಾರಕ ಎಂಬ ಪ್ರತಿಷ್ಠೆಯ ಪ್ರಜ್ಞೆಯಿಂದಲ್ಲ.

ನನ್ನ ಒಕ್ಕಲಿಗ ಮಿತ್ರರಲ್ಲಿ ಕೆಲರು-ಪಿ.ಮಲ್ಲಯ್ಯ, ಎಂ.ತಮ್ಮಯ್ಯ, ಎಚ್.ಬಿ.ನಂಜುಯ್ಯ, ಹನುಮಯ್ಯ ಇತ್ಯಾದಿ ಚನ್ನಪಟ್ಟಣದಲ್ಲಿ ಒಂದು ಅಖಿಲ ಮೈಸೂರು  ಒಕ್ಕಲಿಗ ಯುವಜನ ಸಮ್ಮೇಲನ ನಡೆಯುತ್ತದೆಂದೂ ಅದಕ್ಕೆ ನಾನು ಹೋಗಬೇಕೆಂದೂ ಬಲವಂತ ಮಾಡಿದರು. ಇಂಗ್ಲಿಷ್ ಪದ್ಯಗಳನ್ನು ಅಷ್ಟು ಸಣ್ಣ ವಯಸ್ಸಿನಲ್ಲಿಯೆ, ಇನ್ನೂ ಹೈಸ್ಕೂಲಿನಲ್ಲಿ ಓದುತ್ತಿರುವಾಗಲೆ, ಬರೆದು ಪ್ರಕಟಿಸಿದ್ದ ತಮ್ಮ ಗೆಳೆಯನನ್ನು ಮೆಹನತ್ತು ಮಾಡಿ ಮೆರೆಯಬೇಕೆಂಬ ಉತ್ಸಾಹ ಅವರದಾಗಿತ್ತು. ಅದರಲ್ಲಿಯೂ ಶೂದ್ರನಾಗಿ, ತಮ್ಮ ಜಾತಿಯವನೆ ಒಕ್ಕಲಿಗನಾಗಿ, ಇಂತಹನೊಬ್ಬನಿದ್ದಾನಲ್ಲಾ ಎಂಬುದನ್ನು ತಮ್ಮ ಜಾತಿಯವರಿಗೆ ತೋರಿಸಿ, ಅವರಿಗೆ ಹೆಮ್ಮೆಯುಂಟು ಮಾಡಬೇಕೆಂಬ ಚಪಲತೆ ಅವರಿಗೆ.

ನಾನು ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯ ಬರೆದಾಗ ಎಂತೊ ಅಂತೆಯೆ ‘ಅಮಲನ ಕಥೆ’ ಬರೆದಾಗಲೂ (೧೯೨೪ರಲ್ಲಿ) ಕೆಲವು ಬ್ರಾಹ್ಮಣರು ನಾನು ಬ್ರಾಹ್ಮಣನೇ ಇರಬೇಕೆಂದು ವಾದಿಸಿದ್ದರಂತೆ. ಅವರ ಪ್ರಕಾರ, ಬ್ರಾಹ್ಮಣಜಾತಿಯಲ್ಲಿ ಹುಟ್ಟಿದವನಿಗೆ ಕಾವ್ಯ ಬರೆಯುವುದು ಸಾಧ್ಯವೇ ಇಲ್ಲ. ಬ್ರಾಹ್ಮಣರ ಮುಂದೆ ತಾವು ಎಲ್ಲದರಲ್ಲಿಯೂ ಕೀಳು ಮತ್ತು ನೀಚರೆಂಬ ಭಾವನೆ ಶೂದ್ರವರ್ಗದಲ್ಲಿ ಶತಮಾನಗಳಿಂದ ಬೇರೂರಿ ಹೋಗಿತ್ತು. ಈಗಲೂ ಪೂರ್ತಿಯಾಗೇನು ತೊಲಗಿಲ್ಲ. ಆದರೆ ಅಂದಿಗಿಂತ ಉತ್ತಮ.

ನಾನು ಅಂದಿನವರೆಗೆ ಆ ತರಹದ ಸಮ್ಮೇಲನ ಸಮಾರಂಭಗಳಲ್ಲಿ ಭಾಗವಹಿಸಿರಲಿಲ್ಲ. ಎರಡು ಮೂರು ವರ್ಷದ ಪೇಟೆಯ ಜೀವನ ಅನುಭವಿಸಿದ್ದರೂ ನಾನು ಇನ್ನೂ ತುಸು ಹಳ್ಳಿಹಳ್ಳಿಯೆ ಆಗಿದ್ದೆ. ಹೊಸ ಗೆಳೆಯರು (ನನ್ನನ್ನು ಮೈಸೂರಿಗೆ ಕರೆತಂದ ಹಳ್ಳಿಯ ಮಿತ್ರರು ಹೊಸಮನೆ ರಾಮಪ್ಪ ಮತ್ತು ಗೋವಿನಹಳ್ಳಿ ರಾಮಪ್ಪ ಓದು ನಿಲ್ಲಿಸಿ ಮನೆಗೆ ಹೋಗಿದ್ದರು, ಒಂದು ವರುಷದ ಹಿಂದೆಯೆ. ನಮ್ಮ ತಿಮ್ಮಯ್ಯ, ದೇವಂಗಿ ಮಾನಪ್ಪ ಬಂದಿದ್ದರು) ಜೊತೆ ಇರುತ್ತಾರಲ್ಲಾ ಎಂಬ ಧೈರ್ಯದಿಂದ ಅವರೊಡನೆ ಹೊರಟೆ. ಚನ್ನಪಟ್ಟಣದಲ್ಲಿ ಒಕ್ಕಲಿಗರ ಹಾಸ್ಟೆಲಿಗೆ ಎರಡು ಮೂರು ಫರ್ಲಾಂಗು ದೂರದಲ್ಲಿ ನಮಗೆ ಇಳಿದುಕೊಳ್ಳಲು ಏರ್ಪಾಡುಮಾಡಿದ್ದರು. ಊಟ ತಿಂಡಿಗಳಿಗೆ ನಾವು ಅಷ್ಟು ದೂರವೂ ನಡೆದುಕೊಂಡು ಹೋಗಿಬರಬೇಕಾಗಿತ್ತು. ಎರಡಕ್ಕೂ ಮಧ್ಯೆ ಊರಿರಲಿಲ್ಲ. ಕುರುಚಲ ಕಾಡಿನಂತಿದ್ದು ನಡುವೆ ಒಂದೆಡೆ ಹಳ್ಳವಿತ್ತು. ಅದನ್ನಿಲ್ಲಿ ಏತಕ್ಕೆ ಹೇಳಬೇಕಾಯಿತೆಂಬುದು ಮುಂದೆ ಗೊತ್ತಾಗುತ್ತದೆ. ನನ್ನ ಜೀವಮಾನದಲ್ಲಿ ನನಗೆ ಒದಗಿರುವ, ಸಾವು ಬದುಕಿನ ಕೆಲವು ಸನ್ನಿವೇಶಗಳಲ್ಲಿ ಒಂದನ್ನು ದಯಪಾಲಿಸಿದ ‘ಪುಣ್ಯ’ ಚನ್ನಪಟ್ಟಣಕ್ಕೆ ಸಲ್ಲುತ್ತದೆ.

ಸಮ್ಮೇಲನದಲ್ಲಿ ಏನೇನು ನಡೆಯಿತೋ ಅದೊಂದೂ ವಿವರ ನನಗೆ ನೆನಪಿಲ್ಲ. ನನ್ನನ್ನು ಮಾತ್ರ ಕವಿ ಎಂದು ಸನ್ಮಾನಿಸಿದುದೂ, ಇಂಗ್ಲಿಷ್‌ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದುದೂ ನೆನಪಿದೆ. ಎಂಟಾಣೆಗಾತ್ರದ ಒಂದು ಬೆಳ್ಳಿಯ ತಗಡಿನ ಮೇಲೆ Poet ಎಂದು ಇಂಗ್ಲಿಷಿನಲ್ಲಿ ಕೆತ್ತಿರುವ ಆ ‘ಪದಕ’ ಇನ್ನೂ ನನ್ನಲ್ಲಿದೆ. ಮತ್ತು ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಬಂದ ಸುಪ್ರಸಿದ್ಧ ಫ್ರೆಂಚ್‌ ಕಾದಂಬರಿ ಅಲೆಗ್ಸಾಂಡರ್ ಡ್ಯೂಮಾಸ್‌ನ “The Three Musketeers” ಇನ್ನೂ ನನ್ನಲ್ಲಿದೆ, ಅಲ್ಲಲ್ಲಿ ಹುಳು ತಿಂದು ಬಹುಮಾನ ಅಂಟಿಸಿದ ಚೀಟಿ ಹೀಗಿದೆ:

THE VOKKALIGARA STUDENTS UNION
CHANNAPATNA
ESTD-1918
COMPETITIVE EXAMINATIONS 1922
First Prize Awarded to K.V.Puttappa
V.S. Union, Mysore
For
English Essay writing
On the occasion of
The Third Anniversary Celebration on
Saturday the 21st October, 1922
With
B.N. Vizayadeva Esqr. M.A., Bar-at-Law,
Advocate & Member of the Legislative Council
Fellow of the Mysore University, in the Chair.
B.G.Dase Gowda, Secretary          V.Venkatappa Hon:, President

ಆ ಪುಸ್ತಕದ ಮೇಲೆ ನನ್ನ ಹೆಸರು K.V.Puttappa, III Form, W.M.C.H.School, Mysore.

“V.S.Union” ಅಂದರೆ “Vokkligara Sangha or Students’ Union” ಎಂಬರ್ಥವಾಗುತ್ತದೆ. ಆದರೆ ನಾನು ಯಾವ ಒಕ್ಕಲಿಗರ ವಿದ್ಯಾರ್ಥಿ ಸಂಘಕ್ಕೂ ಸೇರಿದವನಾಗಿರಲಿಲ್ಲ. ನನ್ನನ್ನು, ಹಿಂದೆಯೆ ತಿಳಿಸಿದಂತೆ, ಯಾವ ಒಕ್ಕಲಿಗರ ಹಾಸ್ಟೆಲಿಗೂ ಸೇರಿಸಿರಲಿಲ್ಲ. ಆದರೂ ನನಗೆ ಬಹುಮಾನ ಬಂದಿರುವುದು ನಾನು ಒಕ್ಕಲಿಗರ ವಿದ್ಯಾರ್ಥಿ ಸಂಘದ ಸದಸ್ಯ ಎಂದು. ಇದೆಲ್ಲ ಹೇಗೆ ನಡೆಯಿತೋ ನಾನರಿಯೆ. ಬಹುಶಃ ನನ್ನ ಮಿತ್ರರು ತಮ್ಮ ಸ್ನೇಹೋತ್ಸಾಹದಲ್ಲಿ ಸತ್ಯಕ್ಕೂ ಪ್ರಾಮಾಣಿಕತೆಗೂ ಅಷ್ಟೇನೂ ಬೆಲೆ ಕೊಡಲಿಚ್ಛಿಸದೆ ಹೋಗಿದ್ದರೆಂದು ತೋರುತ್ತದೆ!

ಸಮ್ಮೇಲನದ ಕೊನೆಯ ದಿನ ರಾತ್ರಿ ಒಕ್ಕಲಿಗರ ವಿದ್ಯಾರ್ಥಿನಿಲಯದಲ್ಲಿ ಸಮ್ಮೇಲನಕ್ಕೆ ಆಗಮಿಸಿದ ಮತ್ತು ಸಮ್ಮೇಲನಕ್ಕಾಗಿ ಶ್ರಮಿಸಿದ ಜಾತಿ ಬಾಂಧವರಿಗೆ ಗೌರವಾರ್ಥವಾಗಿ ಭಾರೀ ಔತಣದ ಏರ್ಪಾಡಾಗಿತ್ತು. ಅಂದರೆ ಹಲವಾರು ಬನ್ನೂರು ಟಗರುಗಳಿಗೆ ದೊರಕಿತ್ತು ಬ್ರಹ್ಮಸಾಕ್ಷಾತ್ಕಾರ!

ಹಿಂದೆಯೆ ಸೂಚಿಸಿದಂತೆ ನಮ್ಮನ್ನು ಇಳಿಸಿದ್ದ ಸ್ಥಳಕ್ಕೂ ಹಾಸ್ಟಲಿಗೂ ಮೂರು ನಾಲ್ಕು ಫಲಾಂಗಿಗೆ ಹತ್ತಿರತ್ತಿರ ದೂರವಿತ್ತು. ನಡುವೆ ಮನೆ ಬೀದಿ ಯಾವುದೂ ಇರಲಿಲ್ಲ, ಇನ್ನೂ ಬೆಳೆಯಲಿರುವ ಪಟ್ಟಣದ ತುದಿಯಾಗಿದ್ದು ಅಲ್ಲಲ್ಲಿ ಬೆಳೆದಿದ್ದ ಹಕ್ಕಲು ಹಬ್ಬಿತ್ತು. ಆ ಹಕ್ಕಲಿನ ನಡುವೆ ಅದನ್ನು ಇಬ್ಬಾಗ ಮಾಡಿದಂತೆ ಊರಿನ ಕೊಳಚೆ ನೀರನ್ನೆಲ್ಲ ಕೊಂಡೊಯ್ಯುವ ಒಂದು ಮಹಾ ಚರಂಡಿ ಆಕಳಿಸುತ್ತಾ ಹರಿಯುತ್ತಿತ್ತು. ಒಂದೆರಡಾಳು ಆಳವಾಗಿಯೂ ಇಪ್ಪತ್ತು ಮೂವತ್ತು ಅಡಿ ಅಗಲವಾಗಿಯೂ ಇದ್ದ ಅದನ್ನು ನೀರು ತುಂಬಿ ಹರಿದಾಗ ಒಂದು ‘ಹಳ್ಳ’ವೆಂದೇ ಕರೆಯಬಹುದಿತ್ತು. ಅದರ ಇಕ್ಕೆಲದ ಅಂಚುಗಳಲ್ಲಿಯೂ ತಳದಲ್ಲಿಯೂ ಮುಳ್ಳುಗಳು ಬೆಳೆದು ಕೊರಕಲು ಕೊರಕಲಾಗಿತ್ತು. ಇತ್ತಿಂದತ್ತ ದಾಟಲು ಅದಕ್ಕೊಂದು ಮೋರಿ ಕಟ್ಟಿತ್ತು, ಒಂದು ಎತ್ತಿನ ಗಾಡಿ ಓಡಾಡಬಹುದದಾಷ್ಟು ಅಗಲವಾಗಿ. ಆ ಹಕ್ಕಲಿನಲ್ಲಿ ಅಲ್ಲಲ್ಲಿ ಸೊಂಟೆತ್ತರದ ಕುಣಿಗಳನ್ನು ತೋಡಿದ್ದರು, ತೆಂಗಿನಸಸಿ ನೆಡುವುದಕ್ಕಾಗಿ ಅಂತೆ.

ಈ ವಿವರ ವರ್ಣನೆ ಏಕೆ ಆವಶ್ಯಕವಾಯಿತೆಂದರೆ, ಮುಂದೆ ನನಗೊದಗಿದ ವಿಪತ್ತಿನ ಭೀಕರತೆಯ ಸ್ವರೂಪ ಪರಿಚಯವಾಗುವುದಕ್ಕಾಗಿ.

ವಿದ್ಯಾರ್ಥಿನಿಲಯದಲ್ಲಿ ನಮ್ಮ ಔತಣವೆಲ್ಲ ಮುಗಿಯುವ ಹೊತ್ತಿಗೆ ರಾತ್ರಿ ಬಹುಮಟ್ಟಿಗೆ ಮುಂದುವರಿದಿತ್ತು. ಅಷ್ಟರಲ್ಲಿ ಕಾರ್ಮೋಡ ದಟ್ಟಯ್ಸಿ ಮಿಂಚು ಗುಡುಗು ಸಿಡಿಲುಗಳ ಆರ್ಭಟ ಭಯಂಕರವಾಯಿತು. ಮಳೆ ಶುರುವಾದರೆ ಅದು ನಿಲ್ಲುವವರೆಗೂ ನಾವು ಹಾಸ್ಟಲಿನಿಂದ ಹೊರಡುವಂತಿರಲಿಲ್ಲ. ಯಾರ ಬಳಿಯೂ ಕೊಡೆಗಿಡೆ ಇರಲಿಲ್ಲ. ಇದ್ದರೂ ಆ ಬಿರುಮಳೆಗೆ ಅದೊಂದೂ ರಕ್ಷಿಸುತ್ತಲೂ ಇರಲಿಲ್ಲ. ಊಟ ಮುಗಿಯುತ್ತಲೆ ಬೇಗಬೇಗನೆ ಕೈತೊಳೆದ ಶಾಸ್ತ್ರ ಮಾಡಿ ನಾವು ಇಳಿದುಕೊಂಡಿದ್ದ ಸ್ಥಳಕ್ಕೆ ಧಾವಿಸುವ ಸಲಹೆ ಕೊಟ್ಟರು, ಯಾರೊ ಒಬ್ಬರು. ಅಷ್ಟರಲ್ಲಿಯೆ ತೋರ ಮಳೆಹನಿ ಟಿಪ್ಸಟಪ್ಪನೆ ಇಲ್ಲೊಂದು ಅಲ್ಲೊಂದು ಬಿದ್ದ ಸಪ್ಪುಳ ಕೇಳಿಸಿತು. “ಬನ್ನಿ, ಬನ್ನಿ, ಬೇಗ ಹೊರಡಿ!” ಎಂದು ಯಾರೋ ಕೂಗಿದರು. ಕಗ್ಗತ್ತಲೆ ಕವಿದಿದ್ದುದರಿಂದ ಯಾರೊ ಒಬ್ಬ ಎಲ್ಲಿಂದಲೋ ಒಂದು ಲಾಟೀನು ಸಂಪಾದಿಸಿಕೊಂಡು ನಮ್ಮನ್ನೆಲ್ಲ ಕರೆಯುತ್ತ ಬಾಗಿಲತ್ತ ಧಾವಿಸಿದರು. ನಾವೂ ಸತ್ತೆವೊ ಕೆಟ್ಟೆವೊ ಎಂಬಂತೆ ಗುಂಪುಗುಂಪು ನುಗ್ಗಿದೆವು. ಅಷ್ಟರಲ್ಲಿ ಭೋರೆಂದು ಬಿರುಗಾಳಿ ಬೀಸಿ, ಮಳೆ ಮುಸಲಧಾರೆಯಾಗಿ ಸುರಿಯತೊಡಗಿತು. ಆ ಸ್ಥಳದ ಪರಿಚಯವಿದ್ದವರು, ದೂರದಲ್ಲಿ ಧಾವಿಸುತ್ತಿದ್ದು ಮಳೆಯ ಜವನಿಕೆಯಲ್ಲಿ ಮುಸುಗುಮಸುಗಾಗಿದ್ದ ಲಾಟೀನಿನ ಬೆಳಕಿನತ್ತ ಓಡತೊಡಗಿದರು. ಊರಿನ ಪರಿಚಯವಿರದೆ ಹೊರಗಡೆಯಿಂದ ಬಂದಿದ್ದ ನನ್ನಂತಹ ಕೆಲವರು ದಾರಿ ಗೊತ್ತಾಗದೆ ಲಾಟೀನಿನ ಬೆಳಕಿನ ದಿಕ್ಕನ್ನೆ ದಾರಿಮಾಡಿಕೊಂಡು ಓಡತೊಡಗಿದೆವು. ಬಿರುಗಾಳಿ, ಬಿರುಮಳೆ, ಗುಡುಗು, ಸಿಡಿಲು, ಮಳೆಯ ಹನಿ ಬಾಣದಂತೆ ಮುಖಕ್ಕೆ ಎರಗುತ್ತಿದ್ದುದರಿಂದ ತಲೆಯೆತ್ತಿ ನೋಡುವುದು ಶ್ರಮಸಾಧ್ಯವಾಯಿತು. ದಿಕ್ಕು ಹಿಡಿದ ನಾವು ದಾರಿ ತಪ್ಪಿದೆವು. ಎಷ್ಟು ಕೂಗಿದರೂ ಕರೆದರೂ ಲಾಟೀನಿನವರು ನಿಲ್ಲಲಿಲ್ಲ. ಓಡಿದರು, ಓಡಿದರು, ಓಡಿಯೆಬಿಟ್ಟರು. ಲಾಟೀನಿನ ಮಂದಕಾಂತಿಯ ಮಾರ್ಗದರ್ಶನವೂ ಕಣ್ಮರೆಯಾಗಿ ಕಗ್ಗತ್ತಲೆಯಲ್ಲಿ ಸಿಕ್ಕಿಬಿದ್ದೆವು. ಆದರೆ ಓಡುವುದನ್ನು ನಿಲ್ಲಿಸಲಿಲ್ಲ; ಆದಷ್ಟು ಶೀಘ್ರ ಠಿಕಾಣಿ ಸೇರಿಕೊಳ್ಳುವ ಅವಸರದಲ್ಲಿ.

ಈಗ ನಾವು ಓಡುತ್ತಿದ್ದುದು ಹಕ್ಕಲಿನಲ್ಲಿ, ತೆಂಗಿನಸಸಿಗಳನ್ನು ನೆಡುವುದಕ್ಕೆಂದು ಎದೆಯೆತ್ತರದ ಕುಣಿಗಳನ್ನು ತೋಡಿದ್ದ ಹಕ್ಕಲಿನಲ್ಲಿ! ಇದ್ದಕ್ಕಿದ್ದಂತೆ ನಾನು ಒಂದು ಕುಣಿಗೆ ಬಿದ್ದೆ! ಅಯ್ಯೋ ಎನ್ನುವಷ್ಟರಲ್ಲಿ ಇನ್ನೊಬ್ಬರು ಯಾರೋ ಇನ್ನೊಂದು ಕುಣಿಗೆ ಬಿದ್ದು ಕಿರಿಚಿದ ಸದ್ದು ಆ ಭೋರಿಡುವ ಬಿರುಗಾಳಿಯ ಮಳೆಯಲ್ಲಿಯೂ ಕೇಳಿಸಿತು! ಹಾಗೆಯೆ ಮತ್ತೊಬ್ಬರು!

ಆ ಕುಣಿಗಳೂ ಹೊಸತಾಗಿರದೆ ಎಂದೊ ತೋಡಿದವಾಗಿ ಇದ್ದುದರಿಂದ ಅವುಗಳಲ್ಲಿ ಮುಳ್ಳುಗಿಡಗೆಂಟೆಗಳು ಬೆಳೆದು ಅಪಾಯಕರವಾಗಿದ್ದುವು. ನಾನು ಬಿದ್ದೊಡನೆ ನಾನೇ ನೆಯ್ದು ಹಾಕಿಕೊಂಡಿದ್ದ ನನ್ನ ಟೋಪಿ ಕೆಳಗೆ ಬಿತ್ತು. (ಆಗ ನಮ್ಮಲ್ಲಿ ಒಂದೊಂದು ಕಾಲದಲ್ಲಿ ಒಂದೊಂದು ಹವ್ಯಾಸ ಬೆಳೆಯುತ್ತಿತ್ತು. ಇಸ್ಪೀಟು ಪಗಡೆ ಕಾಲ ಒಂದಿತ್ತು. ಪ್ಲಾಂಚೆಟ್‌ನ ಕೈಲಿ ಬರೆಸಿ ಸತ್ತವರನ್ನು ಬರಮಾಡಿಕೊಂಡು ಪ್ರಶ್ನೆ ಕೇಳಿಸುವ ಕಾಲ ಒಂದಿತ್ತು. ಮತ್ತೆ ಪುಸ್ತಕ ಹಾಕಿಕೊಳ್ಳುವ ಕೈಚೀಲ, ಟೋಪಿ ಮುಂತಾದುವನ್ನು ದಾರದಿಂದ ಹೆಣೆಯುವ ಕಾಲ ಒಂದಿತ್ತು. ಆ ಹವ್ಯಾಸಕ್ಕೆ ಸಿಕ್ಕಿ ನಾನೂ ಕೈಚೀಲಗಳನ್ನೂ ಟೋಪಿಗಳನ್ನೂ ಹಣೆದುಕೊಂಡಿದ್ದೆ.) ಕೈಚಾಚಿ ಹುಡುಕಿದೆ. ಸಿಕ್ಕಲಿಲ್ಲ. ತಡೆಯುವ ಹಾಗಿಲ್ಲ. ಪಕ್ಕದ ಕುಣಿಗೆ ಬಿದ್ದವರು ಎದ್ದು ಕರೆಯುತ್ತಾ ಹೋದರು. ಟೋಪಿಯ ಅನ್ವೇಷಣೆಯನ್ನು ಕೈಬಿಟ್ಟು, ಕುಣಿಯಿಂದ ಮೇಲೆ ಹತ್ತಿ ನಾನೂ ಅಂದಾಜಿನ ಮೇಲೆ ಓಡಗೊಡಗಿದೆ, ಎಲ್ಲಿಯೂ ಬೆಳಕಿನ ಸುಳಿವಿಲ್ಲ; ಮಳೆ, ಗಾಳಿ, ಕತ್ತಲೆ, ದಿಗಿಲು. ಹಕ್ಕಲಿನ ನಡುವೆ ಹರಿಯುತ್ತಿದ್ದ ಮಹಾ ಚರಂಡಿಯ ನೆನಪು ತಲೆಗೆ ಬರಲಿಲ್ಲ. ಆ ಚರಂಡಿ ತುಂಬಿ ಕಿರುಹೊಳೆಯಂತೆ ಹರಿಯುತ್ತಿದ್ದರೂ ಅದರ ಸದ್ದು ಗಾಳಿಮಳೆ ಸದ್ದಿನಲ್ಲಿ ಅಡಗಿಹೋಗಿತ್ತು. ಕಂಗೆಟ್ಟು ಓಡುತ್ತಾ ಬಂದು ಇನ್ನೇನು ಧುಮುಕಬೇಕು: ಒಂದು ಮಿಂಚು ಫಳ್ಳನೆ ಹೊಳೆಯಿತು! ಎದುರುಗಡೆ ತುಂಬಿ ಭೋರೆಂದು ಹರಿಯುತ್ತಿದ್ದ ಚರಂಡಿ ಹಳ್ಳದ ನೀರು ಅಲೆಅಲೆಅಲೆ ಥಳಿಸಿತು! ನಾನು ಫಕ್ಕನೆ ಸ್ತಂಭಿತನಂತೆ ನಿಂತೆ! ನನ್ನ ಹಿಂದೆ ಓಡುತ್ತಿದ್ದು, ನಾನು ಧುಮುಕಿದ್ದರೆ ತಾನೂ ಧುಮುಕುತ್ತಿದ್ದ, ಆ ಮಿತ್ರನೂ ನಿಂತ! ಆ ಮಿಂಚಿನ ಬೆಳಕಿನಲ್ಲಿ ಅಲ್ಲಿಯೆ ಸಮೀಪದಲ್ಲಿದ್ದ ಸೇತುವೆ (ಮೋರಿ)ಯೂ ಕಾಣಿಸಿತು. ಬೇಗನೆ ಆಯೆಡೆಗೆ ತಿರುಗಿ, ದಾಟಿ, ನಮ್ಮನ್ನಿಳಿಸಿದ್ದ ಕಟ್ಟಡದ ಕಡೆಗೆ ನುಗ್ಗಿದೆವು: ಟೋಪಿಯಿಲ್ಲದ ತಲೆಕೆದರಿ, ಅಂಗಿಬಟ್ಟೆಯೆಲ್ಲ ಒದ್ದೆಮುದ್ದೆಯಾಗಿ!

ಆ ಮಿಂಚು ಹೊಳೆಯದಿದ್ದರೆ ಅದೆಂತಹ ದುರಂತವಾಗುತ್ತಿತ್ತೊ! ಹೇಳಬಲ್ಲವರಾರು? ಅಂತೂ ನಿರಪಾಯವಾಗಿ ಪಾರಾದ ಅಪಾಯವನ್ನು ಕುರಿತು ಒಬ್ಬರನ್ನೊಬ್ಬರು ಟೀಕಿಸಿ ನಕ್ಕದ್ದೂ ಆಯಿತು. ಅನೇಕ ವೇಳೆ ಸಾವಿಗೂ ಬದುಕಿಗೂ ಮಧ್ಯೆ ಒಂದು ಕೂದಲೆಳೆಯ ಅಂತರವಿರುತ್ತದೆ. ಮಿಂಚಿನ ರೂಪದಲ್ಲಿ ಬಂದು ಅಂದು ನನ್ನನ್ನು ಕಾಪಾಡಿದ ಆ ಘಟನೆಯಲ್ಲಿ ನಾನು ಕೃಪೆಯ ಹಸ್ತವನ್ನು ಗುರುತಿಸಿದ್ದೇನೆ. ನನ್ನ ಬದುಕಿನಲ್ಲಿ ಅಂತಹ ಮೂರು ನಾಲ್ಕು ಸಂದರ್ಭಗಳು ಮರೆಯದಂತೆ ಮೂಡಿ ನಿಂತಿವೆ: ಹೊರನೋಟಕ್ಕೆ ಆಕಸ್ಮಿಕದಂತೆಯೊ ಕಾಕತಾಳೀಯವಾಗಿಯೊ ಆಗಿ ತೋರಬಹುದಾದ ಅವು ಶ್ರದ್ಧಾನುಭವಕ್ಕೆ ಭಗವತ್‌ಕೃಪೆಯ ರಕ್ಷಾಹಸ್ತಗಳಾಗಿಯೆ ನೇರವಾಗಿ ಸಾಕ್ಷಾತ್ಕಾರವಾಗುತ್ತವೆ.