ಮೇ  ನೆಯ ಶುಕ್ರವಾರದ ದಿನಚರಿ:

(ಇಂಗ್ಲಾದಿಯಿಂದ ‘ಕುಪ್ಪಳಿ’ಗೆ-ನನ್ನ ಬಾಲ್ಯದ ಬದುಕಿನ ಹೃದಯಕೇಂದ್ರವಾಗಿ, ಮಲೆ ಕಾಡುಗಳಿಂದ ಸುತ್ತುವರಿಯಲ್ಪಟ್ಟು, ನನಗೆ ನಿಸರ್ಗಲಕ್ಷ್ಮಿಯ ಅತುಲೈಶ್ವರ್ಯದ ಸೌಂದರ್ಯಾನುಭವ ಮತ್ತು ಭೂಮಾನುಭೂತಿಗಳನ್ನು ಅನುಗ್ರಹಿಸಿದ ‘ನನ್ನ ಮನೆ’ಗೆ ಬೇಸಿಗೆ ರಜಾ ಕಳೆಯಲು ಬಂದಿದ್ದೇನೆ.)

“ನಾನು ಪುಟ್ಟಣ್ಣ ಬೇಟೆಯ ಸಾಹಸಕ್ಕೆ (Hunting Expedition) ಹೋಗಿದ್ದೆವು. ಅದು ದೀರ್ಘಕಾಲದ್ದಾಗಿಯೂ ಶ್ರಮಪೂರ್ಣದ್ದಾಗಿಯೂ ಇತ್ತು (It waw long and toilsome) ಊಟ ಮುಗಿಸಿ ಸುಮಾರು ೧೧ ಗಂಟೆಗೆ ಹೊರಟವರು ಬೈಗಿನ ೬ ಗಂಟೆಗೆ ಮನೆಗೆ ಬಂದೆವು, ಖಾಲಿ ಕೈಯಾಗಿ (without any booty)! ಪುಟ್ಟಣ್ಣ ಒಂದು ಕಾಡುಕೋಳಿಗೆ ಹೊಡೆದ, ಈಡೂ ತಗುಲಲಿಲ್ಲ, ತಪ್ಪಿತು. ‘ಕವಿಗಳು’ ಎಂಬ ಶೀರ್ಷಿಕೆಯ ಒಂದು ಕನ್ನಡ ಕವನ ರಚಿಸಿದೆ. ಹಿಂಜರಿಯದಿರು, ಓ ಹೃದಯ, ಬದುಕಿನ ಕ್ಲೇಶಕಷ್ಟಗಳಿಂದ. Be a giant ದೈತ್ಯಧೀರನಾಗಿ ಕರ್ಮಮಾಡು. ನಿನ್ನ ಉದಾತ್ತ ಭಾವಗಳಿಂದಲೂ ಉನ್ನತಾದರ್ಶಗಳಿಂದಲೂ ಚ್ಯುತನಾಗದಿರು. ಹೆಳವ ಲೋಕದೊಡನೆ ನಡೆದು ದಾರಿ ತಪ್ಪಬೇಡ. ಹೇ ದಿವ್ಯಜನನಿ, ನಿನ್ನೆಡೆಗೆ ನಡಸೆನ್ನನು! ವಂದೇ ಸ್ವಾಮಿ ವಿವೇಕಾನಂದಮ್‌!”

ಅಂದಿನ ನಮ್ಮ ಬೇಟೆಯ ಸಾಹಸವೆಲ್ಲವನ್ನೂ ದಿನಚರಿ ಒಂದು ಚುಟುಕ ವಾಕ್ಯದಲ್ಲಿ ಮುಗಿಸಿಬಿಟ್ಟಿದೆ: ಆದರೆ ಅಂದಿನ ಸಾಹಸದ ರೋಮಾಂಚನಕಾರಿಯಾಗ ಅನುಭವಗಳು ಇನ್ನೂ ನನ್ನ ಮನಸ್ಸಿನಲ್ಲಿ ನಿನ್ನೆ ಮೊನ್ನೆ ನಡೆದಂತೆ ಸ್ಪಷ್ಟವಾಗಿ ವಿವರವಾಗಿ ಹಸಿಹಸಿಯಾಗಿರುವುದರಿಂದ ಅದನ್ನಿಲ್ಲಿ ಓದುಗರೊಡನೆ ಹಂಚಿಕೊಂಡು ಸವಿಯಲು ಮನಸ್ಸು ಮಾಡಿದ್ದೇನೆ. ಅದರಲ್ಲಿಯೂ ನಗರದ ಬರಡು ಜೀವನದಲ್ಲಿದ್ದು ಮನೆಗೆಬಂದ ಮೊದಲ ದಿನದ ಚೊಚ್ಚಲಾನುಭವ ತುಂಬ ರಸವತ್ತಾಗಿತ್ತು, ಅದು ವಾಸ್ತವವಾಗಿದ್ದುದಕ್ಕಿಂತಲೂ ಎಷ್ಟೋ ಮೇಲಿನ ಉತ್‌ಪ್ರೇಕ್ಷಿತವಾದ ಸ್ತರದಲ್ಲಿ!

ಊಟ ಪೂರೈಸಿ, ಇಬ್ಬರೂ ಎರಡು ತೋಟಾ ಕೋವಿಗಳನ್ನೂ ಅದಕ್ಕೆ ಬೇಕಾದ ಗುಂಡು, ಕಡಕು, ಚರೆಯ ತೋಟಾಗಳನ್ನೂ ಷಿಕಾರಿ ಉಡುಪಿನ ಚೀಲಸದೃಶವಾದ ಜೇಬುಗಳಿಗೆ ತುಂಬಿಕೊಂಡು, ನಾವು ಹೊರಟಿದ್ದು, ‘ಸಾರಿಕೆಬೇಟೆ’ಯಾದ್ದರಿಂದ ನಮ್ಮ ಜೊತೆ ಬರಲು ಅತ್ಯುತ್ಸಾಹದಿಂದ ಪ್ರಯತ್ನಿಸುತ್ತಿದ್ದ ನಾಯಿಗಳನ್ನೆಲ್ಲ ಹೆದರಿಸಿ ಎಬ್ಬಿ, ಈಗ ‘‘ಕವಿಶೈಲ’’ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಗುಡ್ಡದ ನೆತ್ತಿಯ ಕಾನು ಬಾಗಿಲತ್ತ ಏರಿದೆವು. ಮೇ ತಿಂಗಳ ಮಧ್ಯಾಹ್ನದ ಸುಡುಬಿಸಿಲಿದ್ದರೂ ನಾವು ಅದನ್ನು ಗಮನಿಸುವ ಮನಃಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಕಾನುಬಾಗಿಲನ್ನು ಪ್ರವೇಶಿದೊಡನೆ ಅತ್ಯಂತ ನಿಬಿಡ ತರುಗುಲ್ಮ ಮಹಾವೃಕ್ಷರಾಜಿಗಳಿಂದ ಇಡಿದು, ಬಿಸಿಲನ್ನು ನೆಲಕ್ಕೆ ಬಿಡದಷ್ಟು ದಟ್ಟವಾಗಿದ್ದ ಕಾಡನ್ನು ಪ್ರವೇಶಿಸುತ್ತೇವೆ ಎಂಬುದು ನಮಗೆ ಗೊತ್ತು. ಕಡೆಮಕ್ಕಿ ಕಡೆಗೆ ಹೋಗುವ ಹುಳುವಿನ ಕಾಲುದಾರಿಯಲ್ಲಿ ತುಸುದೂರ ನಡೆದು ಎಡಕ್ಕೆ ತಿರುಗಿ, ಈಗ ‘ಸಂಜಿಗಿರಿ’ ಎಂದು ಹೆಸರಾಗಿರುವ ಶಿಖರದ ಓರೆಯಲ್ಲಿ ಹಾದು, ನಳಲುಗತ್ತಲೆ ತೀವಿದಡವಿಯಲ್ಲಿ ಹೊಕ್ಕು ನಡೆದೆವು. ನಾವು ಯಾವ ಸರಲಿನ ಕಡೆಗೆ ಇಳಿಯುತ್ತಿದ್ದೆವೋ ಆ ಕಾಡಿನ ಪರಿಸರಕ್ಕೆ ‘ಮ್ಯಾರರ ಗಡಿ ಹೊಂಡ’ ಎಂದು ಕರೆಯುತ್ತಾರೆ. ಬಹುಶಃ ಬಹುಕಾಲದ ಹಿಂದೆ ಮೇದರು ಅಲ್ಲಿ ಗುಡಿಸಲು ಹಾಕಿಕೊಂಡು ಬಿದಿರು ಬೆತ್ತ ಮೊದಲಾದವುಗಳನ್ನು ಕಡಿದು ಬುಟ್ಟಿ ತಟ್ಟಿ ಜಲ್ಲೆ ಹೆಡೆಗೆ ಮಣ್ಣು ತಟ್ಟೆ ಮೊದಲಾದವುಗಳನ್ನು ಮಾಡಿ ಸುತ್ತಣ ಪ್ರದೇಶದ ರೈತರಿಗೆ ಕೊಟ್ಟು ಜೀವಿಸುತ್ತಿದ್ದರೋ ಏನೊ? ಸುತ್ತಣ ಮಲೆಗಳೆಲ್ಲ ಇಳಿಜಾರಾಗಿ ಅಲ್ಲಿ ಕಣಿವೆಯಾಗಿದ್ದುದರಿಂದ ಅದನ್ನು ‘ಮೇದರ ಗುಡಿಸಲ ಹೊಂಡ’ ಎಂದು ಕರೆದಿರಬೇಕು. ಅದು ಸಮೆದೂ ಸಮೆದೂ ಈಗ ‘ಮ್ಯಾರ್ರ ಗುಡಿ ಹೊಂಡ’ ಎಂದಾಗಿರಬಹುದು. ಆದರೆ ಈಗ ಅದು ಮಹಾರಣ್ಯ ಪ್ರದೇಶ. ಅಲ್ಲಿ ಮನುಷ್ಯರು ಎಂದಾದರೂ ಪ್ರವೇಶಿಸಿದ್ದರು ಎಂಬುದಕ್ಕೂ ಏನೊಂದೂ ಗುರುತಿಲ್ಲ. ಮುಳ್ಳು ಮೈಯ ನಿಡಿದಾದ ಹೆಬ್ಬೆತ್ತದ ಹಿಂಡಿಲು ಹೆಣೆದು ಕೊಂಡು ನಡೆಗೆ ದುರ್ಗಮವಾಗಿದ್ದುವು. ಕೇತಕಿಯ ಜಾತಿಯ ಪೊದೆಗಳು ಸರಲಿನ ಅಕ್ಕಪಕ್ಕಗಳಲ್ಲಿ ಕೊಬ್ಬಿಬೆಳೆದು ದುಷ್‌ಪ್ರವೇಶ್ಯವಾಗಿದ್ದುವು, ಮನುಷ್ಯರಿಗಿರಲಿ ಪ್ರಾಣಿಗಳಿಗೂ ಎಂಬಂತೆ. ಸುಡುಬಿಸಿಲಿನ ಬೆಟ್ಟ ಬೇಸಗೆಯಾಗಿದ್ದರೂ ಅಲ್ಲಿಯ ಗಾಳಿ ಚಳಿಯಾಗುವಂತೆ ತೀಡುತ್ತಿತ್ತು. ಸರಲಿನ ನೀರು ಬತ್ತಿಹೋಗಿ ಬೇಸಗೆಯ ಕಾಲದ ಒಣ ಎಲೆಗಳ ರಾಶಿರಾಶಿಯೆ ಆ ಕಾಡಿನ ತೊರೆಯ ಹಾದಿಯನ್ನೆಲ್ಲ ಮುಚ್ಚಿ ತುಂಬಿದಂತಿತ್ತು. ಕಾಲಿಟ್ಟರೆ ಪುಸಕ್ಕನೆ ಕಾಲು ತರಗಿನ ನಡುವೆ ಇಳಿದು, ಅದಕ್ಕೆ ಹಿಮಗಡ್ಡೆಯ ಕುಳಿರ್ಪನ್ನೂ ಅಣಕಿಸುವಂತಹ ಸುಶೀತಲ ವಾರಿಯ ಸಂಸ್ಪರ್ಶವಾಗಿ ಚಳಿ ಅಂಗಾಲಿನಿಂದ ಷಾಕ್ ಹೊಡೆದಂತೆ ನೆತ್ತಿಯವರೆಗೂ ಏರಿದ ಅನುಭವವಾಗುತ್ತಿತ್ತು. ಕಾಡಿನ ಇನ್ನೆಲ್ಲ ಎಡೆಗಳಲ್ಲಿಯೂ ಸತ್ತೋ ಅಥವಾ ಸತ್ತಂತೆಯೋ ಆಗಿ ನಿಶ್ಚೇಶ್ಚಿತವಾಗಿ ಬಿದ್ದಿರುತ್ತಿದ್ದ ಇಂಬಳಗಳು ಅಲ್ಲಿ ಮಾತ್ರ ಅಮರರಾಗಿ ತಮ್ಮ ರಕ್ತಶೋಷಕ ಕಾರ್ಯದಲ್ಲಿ ಸ್ವಲ್ಪವೂ ಆಲಸ್ಯ ತೋರದೆ ಕರ್ತವ್ಯಕರ್ಮಿಗಳಾಗಿದ್ದುವು! ಸಾಮಾನ್ಯವಾಗಿ ಕಾಡಿನ ಅಂಚುಗಳಲ್ಲಿ ಮನುಷ್ಯಾವಾಸಗಳ ಸುತ್ತುಮುತ್ತು ಇರುವ ‘ನಾಗರಿಕ’ ಪಕ್ಷಿಗಳಾವುವೂ ಅಲ್ಲಿ ಇರಲಿಲ್ಲ. ಕೊಡಲಿ ಕೊಕ್ಕಿನ ಮಂಗಟ್ಟೆಯಂತಹ ರೂಕ್ಷ ‘ಆರಣ್ಯಕ’ ಪಕ್ಷಿಗಳ ಭೀಕರಧ್ವನಿ ಅಲ್ಲಿದ್ದ ಭೀಕರತರ ನಿಃಶಬ್ದತೆಗೆ ಆಗಾಗ ವಿರಳವಾಗಿ ಭಂಗ ತರುತ್ತಿತ್ತಷ್ಟೆ!

ನಾವು ಹೆಚ್ಚು ಸದ್ದಾಗಬಾರದೆಂದು ಗೊಣಗುದನಿಯಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಯಾವ ದಿಕ್ಕಿಗೆ ಹೋಗೋಣ? ಎತ್ತ ಕಡೆಗೆ ಹೋದರೆ ಶಿಕಾರಿಯಾಗುವ ಸಂಭವ ಹೆಚ್ಚು? ಯಾವಯಾವ ಹಣ್ಣಿನ ಮರಗಳು ಎಲ್ಲೆಲ್ಲಿವೆ? ಕಾಡುಕುರಿ ಹೆಚ್ಚಾಗಿರುವ ಜಾಗ ಯಾವುದು? ಕಣೆ ಹಂದಿಯ ಗುದ್ದುಗಳು ಇರುವೆಡೆಯ ಕಡೆ ಹೋದರೆ ಪ್ರಯೋಜನವೆ? ಬರ್ಕ ಸಿಗಬಹುದಾದ ಸಂಭವವಿದೆಯೆ? ಇತ್ಯಾದಿ ಇತ್ಯಾದಿ.

ಇದ್ದಕ್ಕಿದ್ದಂತೆ ಎದೆ ಧಿಗ್ಗೆಂದಿತು. ಕಾಡು ಕಂಪಿಸಿತು. ಹೆಮ್ಮರಗಳೂ ತರತರನೆ ನಡುಗಿದುವು. ಇಡೀ ಕಾಡು ಬೆಟ್ಟ ಭೂಮಿ ಎಲ್ಲ ಕಂಪಿಸುತ್ತಿರುವ, ಪ್ರತ್ಯಕ್ಷಕ್ಕಿಂತಲೂ ಪ್ರತ್ಯಕ್ಷವಾ, ಅನುಭವದೊಡನೆ ಕಿವಿ ಬಿರಿಯುವಂತೆ ತರಂಗತರಂಗವಾಗಿ ಹೆಬ್ಬುಲಿಯ ಭಯಂಕರ ಆರ್ಭಟೆ ಅಪ್ಪಳಿಸತೊಡಗಿತು! ಆ ಕಂಪನದ ಅನುಭವ ವಸ್ತುನಿಷ್ಠವಾಗಿರಲಾರದು ಭಾವನಿಷ್ಠವಾಗಿರಬೇಕು ಎಂದು ಯಾರೂ ಭಾವಿಸದಿರಲಿ. ಏಕೆಂದರೆ ಅಲ್ಲಿದ್ದ ನಾನಾಗಲಿ ಪಟ್ಟಣ್ಣನಾಗಲಿ ಇಂಥದಕ್ಕೆಲ್ಲ ಹೆದರುವವರಾಗಿರಲಿಲ್ಲ. ಅಷ್ಟೆ ಅಲ್ಲ. ಆ ಆರ್ಭಟೆ ಕೇಳಿಸಿದೊಡನೆ ಇಬ್ಬರೂ ಸಮರಸನ್ನದ್ಧರಾಗಿ ಕೋವಿಗಳನ್ನೆತ್ತಿ ಕುದುರೆ ಎಳೆದು ಬಿಲ್ಲಿಗೆ ಕೈಯಿಟ್ಟುಕೊಂಡು, ಕಂಡರೆ ಸಾಕು ಹುಲಿಗೆ ಗುಂಡು ಹೊಡೆಯಬೇಕೆಂಬ ಒಂದೆ ಮನಸ್ಸಿನಿಂದ, ಕಾತರತೆಯಿಂದ, ಆಶೆಯಿಂದ ಹುಲಿ ಎಷ್ಟು ಹೊತ್ತಿಗೆ ಹೊರಗೆ ಬಂದೀತೊ ಎಂದು ಬಯಸುತ್ತಾ ಕಡುಗಲಿಗಳಾಗಿ ಬೇಟೆಗಾರರ ಕೆಚ್ಚೆದೆಯಿಂದ ಮಲೆತು ನಿಂತಿದ್ದೆವು! ಆದ್ದರಿಂದ ನಮ್ಮ ಭಯಗ್ರಸ್ಥ ಹೃದಯದ ಕಂಪನ ಕಾರಣವಾಗಿರಲಿಲ್ಲ, ಆ ಬೆಟ್ಟ ಕಾಡು ಬಂಡೆ ಮರಗಿಡ ಭೂಮಿ ಎಲ್ಲದರ ನಡುಕಕ್ಕೆ: ನಮ್ಮ ಹೃದಯಗಳಲ್ಲಿ ಭಯ ಎಂದು ಕರೆಯಲ್ಪಡುವುದರ ಯಾವ ದೂರದ ಛಾಯೆಯೂ ಇರಲಿಲ್ಲ. ಆದರೂ ನಮಗೆ ಪ್ರತ್ಯಕ್ಷ ವಾಸ್ತವವಾಗಿತ್ತು, ಆ ಬೆಟ್ಟ ಕಾಡುಗಳ ನಡುಗುವಿಕೆ. ನನಗಂತೂ ಅರ್ಥವಾಗದೆ ಅತ್ಯಂತ ಆಶ್ಚರ್ಯಕರವಾಗಿತ್ತು. ಬ್ಲೇಕ್‌ಕವಿಯ “ಟೈಗರ್” ಎಂಬ ಕವನದಲ್ಲಿಯೊ ಎಲ್ಲಿಯೊ ಇಂಗ್ಲಿಷಿನಲ್ಲಿ ಹುಲಿಯ ಅಬ್ಬರಿಕೆಗೆ The forest shakes ಕಾಡು ನಡುಗುತ್ತದೆ ಎಂಬರ್ಥದ ವಾಕ್ಯವನ್ನು ಓದಿದ್ದೆ. ಆದರೆ ಅದು ಬರಿಯ ಕಾವ್ಯದ ರೀತಿಯ ಅಲಂಕಾರದ ಉಕ್ತಿ ಎಂದು ಭಾವಿಸಿದ್ದೆ. ಈಗ ಅದು ಅಲಂಕಾರದ್ದಲ್ಲ, ಅತ್ಯಂತ ಲೋಕನಿಷ್ಠವಾದ ವೈಜ್ಞಾನಿಕಸತ್ಯದ್ದು ಎಂಬುದು ಅನುಭವಕ್ಕೆ ಬಂದಿತು: ನಿಂತ ನೆಲವಂತಿರಲಿ ನನ್ನ ಇಡೀ ದೇಹ, ಹಿಡಿದಿದ್ದ ಕೋವಿ ಎಲ್ಲವೂ ಭಾವಿಕವಾಗಿ ಅಲ್ಲ ಭೌತಿಕವಾಗಿಯೆ ಅದುರುತ್ತಿವೆ! ಹೃದಯದಲ್ಲಿ ಹೆದರಿಕೆಯ ಲವಲೇಶವೂ ಇಲ್ಲ! ಸಮಯ ಬೇರೆಯದಾಗಿದ್ದರೆ ಚೆನ್ನಾಗಿ ನಗಬೇಕಾಗುತ್ತಿತ್ತು!

ನಮ್ಮ ಮಾತು ಥಟ್ಟನೆ ನಿಂತುಹೋಗಿತ್ತು. ಇಬ್ಬರೂ ಕಣ್ಣಲ್ಲಿಯೆ ಸಂಭಾಷಣೆ ಸಲ್ಲಿಸುತ್ತಿದ್ದೆವು. ಇಬ್ಬರೂ ಕೋವಿಗಳ ಎರಡು ನಳಿಗೆಗಳಿಗೂ ಹಾಕಿಕೊಂಡಿದ್ದ ಕಡಕು ಚೆರೆಯ ತೋಟಾಗಳನ್ನು ತೆಗೆದು ಬರಿಯ ಗುಂಡಿನ ತೋಟಾಗಳನ್ನೆ ಹಾಕಿಕೊಂಡು ಗರ್ಜನೆ ಕೇಳಿಬರುತ್ತದೆಂದು ನಾವು ಊಹಿಸಿದ ದಿಕ್ಕಿನ ಕಡೆಗೆ ಮುಖವಾಗಿ ನಿಂತಿದ್ದೆವು. ಇಂಥಾ ದಿಕ್ಕಿನಿಂದ ಬರಬಹುದು ಎಂದು ನಾವು ಊಹಿಸಿದ್ದೆವಷ್ಟೆ. ವಾಸ್ತವವಾಗಿ ಅದು ಎಲ್ಲ ದಿಕ್ಕುಗಳಿಂದಲೂ ಏಕಪ್ರಕಾರವಾಗಿ ಹೊಮ್ಮಿ ಬಂದು ಅಪ್ಪಳಿಸುತ್ತಿತ್ತು.

ನಾವು ಕಣ್ಣುಸನ್ನೆಯನ್ನೆ ಸಂವಾದದ ಪ್ರಧಾನ ವಿಧಾನವನ್ನಾಗಿ ಮಾಡಿಕೊಂಡಿದ್ದರೂ ನಡುನಡುವೆ ಪಿಸುಮಾತನ್ನೂ ಉಪಯೋಗಿಸುತ್ತಿದ್ದೆವು.

ಕಣ್ಣುಸನ್ನೆ ಮಾಡಿ, ಕೈಯ ಮುಷ್ಟಿಯನ್ನು ಪ್ರಶ್ನಾರ್ಥಕವಾಗಿ ಎತ್ತಿ, ಪುಟ್ಟಣ್ಣ “ಮುಂದೇನು ಮಾಡೋಣ?” ಎಂಬಂತೆ ಕೇಳಿದ.

ನಾನೂ ಅರ್ಧ ಸನ್ನೆಯಿಂದಲೂ ಅರ್ಧ ಕೆಳದನಿಯಿಂದಲೂ ಸೂಚಿಸಿದೆ: “ಹುಲಿ ಎಲ್ಲಿದೆ ಎಂದು ಪತ್ತೆ ಮಾಡೋಣ, ಆ ದಿಕ್ಕಿಗೆ ಹಳುನುಗ್ಗಿ.”

“ಎಲ್ಲಾದರೂ ಉಂಟೆ? ಅದು ಮರಿಹುಲಿಯೊ? ಅಲ್ಲ ಬೆದೆಹುಲಿಯೊ? ಮರಿಹುಲಿಯೆ ಆಗಿದ್ದರೆ ತುಂಬಾ ಅಪಾಯಕರ. ಮರಿಗಳ ರಕ್ಷಣೆಗಾಗಿ ತಾಯಿಹುಲಿ ಏನು ಬೇಕಾದರೂ ಮಾಡಿಬಿಡುತ್ತದೆ.”

“ಮತ್ತೆ ಅದು ಎಲ್ಲಿದೆ ಎಂದು ಕಂಡುಹಿಡಿಯಬೇಕಲ್ಲಾ!”

ಪುಟ್ಟಣ್ಣ ಒಂದು ಉಪಾಯ ಸೂಚಿಸಿದ. ನಾವು ನಿಂತಿದ್ದ ಸ್ಥಳದಲ್ಲಿ ಒಂದು ಮರ ಇತ್ತು. ಸಾಕಾದಷ್ಟು ಎತ್ತರವಾಗಿತ್ತು. ತಾನು ಮರಹತ್ತಿ ಮೇಲಿಂದ ದೂರದವರೆಗೆ ನೋಡುವುದಾಗಿಯೂ ಅದು ಇರುವ ಸೂಚನೆ ತೋರಿದರೆ ತಾನು ಈಡು ಹೊಡೆಯುವ ಮುನ್ನ ನನಗೆ ತಿಳಿಸುವುದಾಗಿಯೂ ನಾನು ಒಡೆನೆಯೆ ಮರ ಹತ್ತಿ ಅವನಿದ್ದೆಡೆಗೆ ಮೇಲಕ್ಕೆ ಬರಬೇಕಾಗಿಯೂ ತಿಳಿಸಿದ. ನಾನು ಒಪ್ಪಿದೆ.

ಈಗ ನೆನೆದರೆ, ಎಂತಹ ಅವಿವೇಕಕ್ಕೆ ನಾನು ಒಪ್ಪಿಗೆ ಕೊಟ್ಟಿದ್ದೆ ಎಂದು ಸೋಜಿಗವಾಗುತ್ತದೆ. ಅವನೇನೋ ಅಭ್ಯಾಸಬಲದಮೇಲೆ ಕೋವಿಯನ್ನು ಕತ್ತಿನ ಸಂಧಿಯಲ್ಲಿಯೂ ಬಗಲಿನಲ್ಲಿಯೂ ಹೇಗೋ ಒತ್ತಿ ಹಿಡಿದುಕೊಂಡು ಮರ ಹತ್ತಿದ್ದನು. ನನಗೆ ಮರ ಹತ್ತುವುದು ಸುಲಭವಾಗಿರಲಿಲ್ಲ. ಅದರಲ್ಲಿಯೂ ಕೋವಿಸಹಿತವಾಗಿ ಖಂಡಿತ ಹತ್ತುವುದಕ್ಕೆ ಆಗುತ್ತಿರಲಿಲ್ಲ. ಮೀನಮೇಷ ಮಾಡುತ್ತಾ ತಡಮಾಡುವಂತಹ ಸನ್ನಿವೇಶವೂ ಅದಾಗಿರಲಿಲ್ಲ. ಆದರೆ ಅಂದು ನನಗಿದ್ದ ಮೊಂಡುಕೆಚ್ಚಿನಲ್ಲಿ ಅದಾವುದೂ ಗಮನಕ್ಕೆ ಬರಲಿಲ್ಲ. ಕೈಯಲ್ಲಿದ್ದ ಜೋಡುನಳಿಗೆಯ ತೋಟಾಕೋವಿಯೂ ಆ ನಳಿಗೆಗಳಿಗೆ ಹಾಕಿಕೊಂಡಿದ್ದ ಎರಡು ಗುಂಡಿನ ತೋಟಾಗಳೂ ನನ್ನ ಧೈರ್ಯಕ್ಕೂ ನನಗಿದ್ದ ಸಂಹಾರ ಶಕ್ತಿಗೂ ಪ್ರಬಲ ಕಾರಣಗಳಾಗಿದ್ದುವು. ಪುಟ್ಟಣ್ಣ ಗುಂಡು ಹೊಡೆದ ಮೇಲಾದರೂ ಆ ಹುಲಿ ಹೊರಗೆ ಬರಲಿ, ಅಥವಾ ಹೊಡೆಯುವ ಮುನ್ನವಾದರೂ ಹೊರಗೆ ಬರಲಿ ನಾನು ಕೋವಿಯ ಎರಡು ಕುದುರೆಗಳನ್ನೂ ಎತ್ತಿ ಎರಡೂ ಬಿಲ್ಲುಗಳನ್ನು ಗುರಿಯಿಟ್ಟು ಅಮುಕಿಬಿಡುತ್ತೇನೆ ಎಂಬ ಉಡಾಫೆ!

ಇಷ್ಟೆಲ್ಲ ಆಗುತ್ತಿದ್ದಂತೆಯೆ ಹುಲಿಯ ಆರ್ಭಟೆಯೂ ಗಿರಿವನಪ್ರಾಂತ ಕಂಪನಕಾರಿಯಾಗಿ ಸಾಗುತ್ತಲೆ ಇತ್ತು. ನಡುನಡುವೆ ಸ್ವಲ್ಪ ಕ್ಷಣ ಒಮ್ಮೊಮ್ಮೆ ಸದ್ದು ನಿಂತಂತಾಗುತ್ತಿತ್ತು. ನನಗಂತೂ ಸದ್ದು ನಿಂತಾಗ ಬಹಳ ಆತಂಕವಾಗುತ್ತಿತ್ತು! ಹುಲಿ ಎಲ್ಲಿ ಕೂಗುವುದನ್ನು ನಿಲ್ಲಿಸಿ ಹಳುವಿನಲ್ಲಿ ನಮ್ಮತ್ತಕಡೆ ಬಾರದೆ ತನ್ನತ್ತಕಡೆಯೆ ಹೋಗಿ ಬಿಡುತ್ತದೆಯೋ ಎಂದು.

ಪುಟ್ಟಣ್ಣ ಮರದ ನೆತ್ತಿಯ ಹರೆಯವರೆಗೂ ಹತ್ತಿ ಸುತ್ತಣ ದಟ್ಟಹುಳುವಿನ ಕಾಡನ್ನೆಲ್ಲಾ ಕಣ್ಣಟ್ಟಿ ಹುಡುಕಿ ನೋಡುತ್ತಿದ್ದನು. ಬುಡದಲ್ಲಿ ನಿಂತಿದ್ದ ನಾನು ಆಗಾಗ ಕತ್ತೆತ್ತಿ ಅವನ ಕಡೆ ನೋಡಿ ಕೈಯಿಂದ ಸನ್ನೆಮಾಡಿ ಪ್ರಶ್ನಿಸುತ್ತಿದ್ದೆ. ಹುಲಿಯಿದ್ದ ಜಾಗದ ಚಿಹ್ನೆ ಅವನಿಗೆ ಗೋಚರವಾಗಲಿಲ್ಲ. ಇದ್ದಕ್ಕಿದ್ದಂತೆ ಗರ್ಜನೆ ನಿಂತೆಬಿಟ್ಟಿತು!

ಪುಟ್ಟಣ್ಣ ಮೆಲ್ಲಗೆ ಒರಕಿ ಒರಕಿ ಕೆಳಗಿಳಿದು ಬಂದ. ಮುಂದೇನು ಮಾಡೋಣ ಎಂದು ಯೋಚಿಸಿದೆವು: “ಅದು ಇಲ್ಲಿ ಸಮೀಪದಲ್ಲಿ ಮರಿ ಹಾಕಿಕೊಂಡಿದೆ ಎಂದು ತೋರುತ್ತದೆ. ಮನುಷ್ಯರ ವಾಸನೆ ಸಿಕ್ಕಿ ಹೆದರಿಸಲೆಂದು ಗರ್ಜಿಸಿತೆಂದು ಕಾಣುತ್ತದೆ. ಅದರ ಆರ್ಭಟೆ ಕೇಳಿಬರುವಂತಿದ್ದ ಜಾಗವಂತೂ ನಾಯಿ ಕೂಡ ಹೋಗಲು ಸಾಧ್ಯವಾಗದಷ್ಟು ದಟ್ಟ ಹಳುವಾಗಿದೆ. ನಾವೇನಾದರೂ ಪ್ರಯತ್ನಿಸಿದರೆ ನಾವು ಅದನ್ನು ಅರಿಯುವ ಮೊದಲೆ ಅದು ನಮ್ಮನ್ನು ಕಂಡುಹಿಡಿದು ಮೇಲೆ ಹಾರುತ್ತದೆ. ನಮಗಂತೂ ಕೋವಿ ತಿರುಗಿಸುವುದಕ್ಕೂ ಸಾಧ್ಯವಾಗದಷ್ಟು ಗಿಡಮರಬಳ್ಳಿ ಪಿಣಿಸಲಾಗಿದೆ. ಮರಿಹುಲಿ ಮರಿಹಂದಿ ತಂಟೆ ಹೋಗದಿರುವುದೆ ಲೇಸು. ಹಾಗೆ ಮಾಡಲು ಹೋಗಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ.”

ಇಷ್ಟು ನಮ್ಮ ಮಂತಣದ ಸಾರಾಂಶವಾಗಿತ್ತು. ಹುಲಿಯೂ ತನ್ನ ಉದ್ದೇಶ ನೆರವೇರಿತೆಂದು ವಿರಮಿಸಿತ್ತೋ ಅಥವಾ ಆ ಸ್ಥಳದಿಂದಲೆ ತೊಲಗಿಹೋಗಿತ್ತೋ ಅಂತೂ ಅದರ ಆಟೋಪಾರ್ಭಟೆ ಸಂಪೂರ್ಣವಾಗಿ ನಿಂತು ಕಾಡು ನಿಃಶಬ್ದವಾಗಿತ್ತು, ವ್ಯಾಘ್ರ ಗರ್ಜನೆಯ ‘ನೆಗೆಟಿವ್‌’ ಎಂಬಷ್ಟೆ ಭೀಷಣವಾಗಿ!

ಎಂಥ ಅವಕಾಶ ಸಿಕ್ಕಿತ್ತು ಹುಲಿ ಹೊಡೆಯುವುದಕ್ಕೆ, ಅನ್ಯಾಯವಾಗಿ ತಪ್ಪಿ ಹೋಯಿತಲ್ಲಾ ಎಂದು ನನ್ನ ಹುಡುಗುಬುದ್ಧಿ ಹೇಳುತ್ತಿದ್ದರೂ ಬೇಟೆಯಲ್ಲಿ ನುರಿತು ಬೇಟೆಯ ಅಪಾಯಗಳನ್ನು ಅರಿತ ಪುಟ್ಟಣ್ಣನ ಪ್ರವೀಣತೆ ಎಷ್ಟು ಭಯಂಕರವಾಗಬಹುದಾಗಿದ್ದ ಅಪಾಯದಿಂದ ನಾವು ಪಾರಾದೆವೆಂದು ಗುಣಿಸುತ್ತಿತ್ತು. ಮತ್ತೆ ಅವನ ಸಲಹೆಯ ಮೇರೆಗೆ ನಾವು ‘ಕಣ್ಹಂದಿಗುದ್ದಿ’ನ ಮೇಲಾಸಿ ಹೋಗಿ ‘ಕೆಮ್ಮಣ್ಣುಬ್ಬು’ ಮತ್ತು ‘ಬಿಳುಗಲ್‌ತುಂಡು’ ನೆತ್ತಿಗಳ ಕಡೆಯಿಂದ ಮನೆಯ ಕಡೆಗೆ ಇಳಿಯುವುದೆಂದು ಗೊತ್ತುಮಾಡಿಕೊಂಡು ಹೊರಟೆವು.

ಇಬ್ಬರೂ ಒಟ್ಟೊಟ್ಟಿಗೆ ಹೋಗುವುದಕ್ಕಿಂತ ದೂರದೂರವಾಗಿ ಹೋದರೆ ಕಾಡಿನ ಹೆಚ್ಚಿನ ಭಾಗವನ್ನು ಸೋವಿದಂತಾಗುತ್ತದೆಂದು ಒಬ್ಬರನ್ನೊಬ್ಬರು ಅಗಲಿ ಮುಂದುವರಿದೆವು. ನನ್ನ ಹುಡುಗಾಟದ ಸಾಹಸಬುದ್ಧಿ ಎಕಾಂಗಸಾಹಸಿಯಾದುದಕ್ಕೆ ಹಿಗ್ಗಿ, ಬಿರುಬಿರನೆ ಕಾಡಿನ ಓರೆಯಲ್ಲಿ ಮೇಲೇರಿ, ಪುಟ್ಟಣ್ಣನಿಂದ ದೂರದೂರ ಹೋದಷ್ಟೂ ನನ್ನ ಮೃಗಯಾಸ್ವಾತಂತ್ರ್ಯಕ್ಕೆ ಕಳೆಯೇರುತ್ತದೆ ಎಂದು ಭಾವಿಸಿತು.

ಪಟ್ಟಣ್ಣ ಕಣ್ಮರೆಯಾದನು ಹುಳುವಿನಲ್ಲ, ಕಿವಿಮರೆಯೂ ಆದನು, ತುಸು ಹೊತ್ತಿನೊಳಗೆ. ಹೊತ್ತೇರಿ ಬಿಸಿಲು ಅಳುರುತ್ತಿತ್ತು. ಅದರೆ ಆ ದಟ್ಟಗಾಡಿನ ಮರ ನೆಳಲಿನಲ್ಲಿ ಅದರ ಪರಿವೆ ನನಗಿರಲಿಲ್ಲ. ಒಬ್ಬನೆ ನಿರ್ಜನವಾದ ಕಾಡಿನಲ್ಲಿ ಕೋವಿಹಿಡಿದು ಅಲೆಯುತ್ತಿರುವ ರಸಪ್ರಜ್ಞೆಯ ಆನಂದದಿಂದ ಮುಂದುವರಿದೆ: ನಿಂತು ನಿಂತು ಎಲ್ಲಿಯಾದರೂ ಜಂತುಗಳ ಸಂಚಾರದ ಸುಳಿವಾಗಲಿ ಸದ್ದಾಗಲಿ ಕಾಣುತ್ತದೆಯೆ ಎಂದು ಪರಿಶೀಲಿಸುತ್ತಾ, ಮತ್ತೆ ಹೊಸದಾಗಿ ಎಂಬಂತೆ ಪಡೆದ ಕವಿಪ್ರಜ್ಞೆಯ ಚಿತ್ಕಾಂತಿಯಲ್ಲಿ ಮಲೆಯ ನಿಸರ್ಗ ಸೌಂದರ್ಯವನ್ನು ಪ್ರಜ್ಞಾಪೂರ್ವಕವಾಗಿಯೂ ಸವಿಯುತ್ತಾ, ವರ್ಡ್ಸ್ ವರ್ತ್‌ ಮೊದಲಾದ ಇಂಗ್ಲಿಷ್ ಕವಿಗಳಿಂದ ಕಲಿತ ಪ್ರಕೃತಿ ಸೌಭಾಗ್ಯಾಸ್ವಾದನೆಯ ರಸರಸನೆಯನ್ನು ಚಾಚಿ ಸೊಬಗಿನ ಸವಿಯನ್ನು ಹೀರುತ್ತಾ ಈಂಟುತ್ತಾ, ಪುಟ್ಟಣ್ಣ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ, ಅವನಿಂದ ಎಷ್ಟು ದೂರವಾಗುತ್ತಿದ್ದೇನೆ ಎಂಬುದಾವುದನ್ನೂ ಬಗೆಯದೆ ಸುಮ್ಮನೆ ಅಲೆದೂ ಅಲೆದೂ ಅಲೆದೂ ಮುನ್ನಡೆದೆ.

ಆ ದಟ್ಟ ಮಲೆಗಾಡಿನಲ್ಲಿ ಕಾಲದೇಶಗಳೂ ಮೈಮರೆಯುತ್ತಿದ್ದುವು. ಕನ್ನಡನಾಡಿನ ಸಹ್ಯಾದ್ರಿಯಲ್ಲಿದ್ದೇನೆಯೋ ಅಮೆರಿಕಾದ ಆಂಡೀಸ್ ಪರ್ವತಶ್ರೇಣಿಯಲ್ಲಿದ್ದೇನೆಯೋ ಎಂಬ ಪ್ರಶ್ನೆಗಳಿಗೆ ಅರ್ಥವಿರಲಿಲ್ಲ. ಕಾಡಿನಲ್ಲಿದ್ದೇನೆ ಎಂಬುದಂತೂ ಪ್ರತ್ಯಕ್ಷಪ್ರಜ್ಞೆ. ಅತ್ತ ಕಾಡು, ಇತ್ತ ಕಾಡು, ಸುತ್ತಲೂ ಕಾಡು, ಮುತ್ತಲೂ ಕಾಡು! ಮಲೆಯ ನೆತ್ತಿಯಲ್ಲಿ ನಿಂತು ನೋಡಿದ್ದರೂ ದೂರದ ಕೆಳಗಿನ ಗದ್ದೆ ತೋಟ ಬಯಲು ಹಳ್ಳಿಮನೆ ಯಾವುದೂ ಕಾಣುತ್ತಿರಲಿಲ್ಲ. ಅಷ್ಟು ದಟ್ಟವಾಗಿತ್ತು ಅರಣ್ಯ. ಇನ್ನು ಕಾಲದ ವಿಷಯ? ಸೂರ್ಯ ಅಲ್ಲಲ್ಲಿ ಮರದ ನೆತ್ತಿಗಳ ಸಂಧಿಯಲ್ಲಿ ಇಣುಕಿದರೂ ಹೊತ್ತನ್ನು ಧೈರ್ಯವಾಗಿ ನಿರ್ಣಯಿಸುವಂತಿರಲಿಲ್ಲ. ಅಂತೂ ಸುಮಾರು ಅಪರಾಹ್ನ ಮೂರು ಅಥವಾ ನಾಲ್ಕು ಗಂಟೆಯ ಹೊತ್ತಿನಲ್ಲಿ ಎಲ್ಲಿಯೊ ದೂರದಲ್ಲಿ ಒಂದು ಈಡು ಕೇಳಿಸಿತು. ಪುಟ್ಟಣ್ಣ ಹೊಡೆದ ಈಡು ಎಂದೇ ಭಾವಿಸಿದೆ. ನನ್ನ ಕುತೂಹಲ ಕೆರಳಿತು. ಯಾವ ಪ್ರಾಣಿಗೆ ಹೊಡೆದಿರಬಹುದು? ಸಣ್ಣದೊ ದೊಡ್ಡದೊ? ಕಾಡುಕೋಳಿಗೊ? ಮಿಗಕ್ಕೊ? ಒಂಟಿಗ ಹಂದಿಗೊ? ದೊಡ್ಡ ಪ್ರಾಣಿಯಾಗಿದ್ದರೆ ಒಬ್ಬನೆ ಹೊರುವುದು ಹೇಗೆ? ಹೀಗೆ ಏನೇನೆಲ್ಲ ಅಲೋಚನೆ ಸುಳಿದು, ಅವನಿಗೆ ಸಹಾಯ ಒದಗಿಸುವ ಆಶೆಯಿಂದಲೂ, ಅವನು ಶಿಕಾರಿ ಮಾಡಿದ್ದು ಏನು ಎಂದು ತಿಳಿಯುವ ಕುತೂಹಲಕ್ಕೆ ವಶನಾಗಿಯೂ ಅವನನ್ನು ಹೆಸರು ಹಿಡಿದು ಗಟ್ಟಿಯಾಗಿ ಕೂಗತೊಡಗಿದೆ. ನಾನೇನೊ ಗಟ್ಟಿಯಾಗಿಯೆ ಕೂಗುತ್ತಿದ್ದೆ. ಆದರೆ ನನ್ನ ಕಾಕು ಆ ಬೃಹದಾರಣ್ಯಕ ನಿಃಶಬ್ದತಾ ಸಮುದ್ರಕ್ಕೆ ಎಸೆದ ಒಂದು ದನಿಹನಿಯಾಗಿತ್ತು. ಎಷ್ಟೆಷ್ಟು ಕೂಗಿದರೂ ಎಲ್ಲಿಂದಲೂ ಯಾವ ಪ್ರತಿಕ್ರಿಯೆಯೂ ತೋರಿಬರಲಿಲ್ಲ. ಮರುದನಿಯಂತಹ ಮೂದಲಿಕೆಯ ಪ್ರತಿಕ್ರಿಯೆ ವಿನಾ!

ಆಮೇಲೆ ನನಗೆ ತಿಳಿದಂತೆ, ಪುಟ್ಟಣ್ಣನಿಗೂ ನನಗೂ ಯಾವ ಸಂಪರ್ಕವೂ ಸಾಧ್ಯವಾದಷ್ಟು ನಾನೂ ಅವನೂ ವಿರುದ್ಧ ದಿಕ್ಕುಗಳಿಗೆ ನಡೆದಿದ್ದೆವು, ದೂರದೂರವಾಗಿ. ಅವನಿಗೆ ನನ್ನ ಕರೆ ಕೇಳಿಸಿದರೆ ತಾನೆ ಅವನು ಓಕೊಳ್ಳುವುದು? ಅಷ್ಟೆ ಅಲ್ಲ. ಆಮೇಲೆ ಅವನು ಹೇಳಿದಂತೆ, ಅವನೂ ನನ್ನನ್ನು ಗೊತ್ತು ಹಚ್ಚಲು ಕಾಕು ಹಾಕಿ ಕೂಗಿ ಕೂಗಿ ಸಾಕಾಗಿದ್ದನಂತೆ.

ಪ್ರಯತ್ನ ವ್ಯರ್ಥವಾಗಲು ನನ್ನಲ್ಲಿ ಪುಟ್ಟಣ್ಣನ ಮೇಲೆ ಮುನಿಸು ತೋರಿದಂತಾಗಿ ‘ಹಾಳಾದವನು ಎಲ್ಲಾದರೂ ಸಾಯಲಿ’ ಎಂದುಕೊಂಡು ಬಿರುಬಿರನೆ ಕಾಡಿನಲ್ಲಿ ತೂರಿದೆ. ನಾನು ಎತ್ತಹೋಗುತ್ತಿದ್ದೇನೆ ಎಂಬ ಅರಿವೂ ನನಗಿರಲಿಲ್ಲ. ದಿಕ್ಕು ತಪ್ಪಿದ್ದೇನೆಯೆ ಎಂದು ಯೋಚಿಸಲೂ ಇಲ್ಲ.

ಆದರೆ ನಾನು ದಿಕ್ಕು ತಪ್ಪಿದ್ದೆ.

ಕುಪ್ಪಳ್ಳಿಗೆ ಎದುರಾಗಿರುವ ಮಲೆಯ ಸಾಲು ಆ ಪರ್ವತಶ್ರೇಣಿಯ ಪಶ್ಚಿಮ ದಿಕ್ಕಿನ ಓರೆ. ಆ ಪರ್ವತದ ಪೂರ್ವದಿಕ್ಕಿನ ಕಡೆಯ ಇಳಿಜಾರು ಓರೆ ಘೋರಾರಣ್ಯಗಳಿಂದ ಇಡಿದು ಬಸರೊಳ್ಳಿ ಮೊದಲಾದ ದೂರದತ್ತ ಕಡೆಯ ಪ್ರದೇಶಗಳಿಗೆ ಇಳಿಯುತ್ತದೆ. ನಾನೇನಾದರೂ ಆ ಕಡೆಗೆ ನಡೆದು ದಾರಿತಪ್ಪಿದ್ದರೆ ಆ ರಾತ್ರಿಯೆಲ್ಲ ಕಾಡಿನಲ್ಲಿಯೆ ಅಲೆದು ಏನಾಗುತ್ತಿತ್ತೊ ಕಾಣೆ. ಆದರೆ ಅದೃಷ್ಟವಶಾತ್ ಹಾಗಾಗಿರಲಿಲ್ಲ. ನಾನು ದಾರಿತಪ್ಪಿ ಅಲೆಯುತ್ತಿದ್ದದ್ದು ಪಶ್ಚಿಮ ದಿಕ್ಕಿನ ಓರೆಯೆ ಆಗಿದ್ದುದರಿಂದ ಬಚಾವಾದೆ.

ಪರ್ವತಾಗ್ರದ ಯಾವುದೊ ಒಂದು ತುಸು ಬಯಲು ಸಂಧಿಗೆ ಬಂದಾಗ ಸೂರ್ಯ ಪಶ್ಚಿಮ ದಿಗಂತದಲ್ಲಿ ಮುಳುಗುವುದಕ್ಕೆ ಹವಣಿಸುತ್ತಿದ್ದುದು ಗೊತ್ತಾಗಿ ನನಗೆ ದಿಗಿಲು ಶುರುವಾಯ್ತು. ವೇಗವೇಗವಾಗಿ ನಡೆಯತೊಡಗಿದೆ. ಮತ್ತೆಮತ್ತೆ ಪುಟ್ಟಣ್ಣನನ್ನು ಕರೆದು ಗಟ್ಟಿಯಾಗಿ ಕೂಗಿದೆ. ಏನೂ ಪ್ರಯೋಜನವಾಗಲಿಲ್ಲ. ಕಾಡಿನಲ್ಲಿಯೆ ಕತ್ತಲಾಗಿಬಿಟ್ಟರೆ ಏನು ಗತಿ ಎಂದು ಚಿಂತಿಸತೊಡಗಿ ಧಾವಿಸಲಾರಂಭಿಸಿದೆ. ಪರ್ವತದ ಇಳಿಜಾರಿನಲ್ಲಿ ಇಳಿಯುತ್ತಾ ಹೋದರೆ ಕುಪ್ಪಳ್ಳಿಯಲ್ಲದಿದ್ದರೆ ಹಡಗಿನಮಕ್ಕಿ, ಅದಲ್ಲದಿದ್ದರೆ ಜಟ್ಟಿನಮಕ್ಕಿ ಈ ಮನೆಗಳ ಗದ್ದೆ ತೋಟಗಳ ಬಯಲಿಗೆ ಇಳಿಯುತ್ತದೆ ಎಂಬುದೇನೊ ಗೊತ್ತಿತ್ತು. ಆದ್ದರಿಂದ ಪಶ್ಚಿಮದ ದಿಕ್ಕಿಗೆ ಮುಖಮಾಡಿ ಜೋರಾಗಿ ಇಳಿದೆ. ಮಧ್ಯಾಹ್ನದ ಕಾಫಿ ತಿಂಡಿಯೂ ಇಲ್ಲದೆ ಆಯಾಸದ ಜೊತೆಗೆ ಹಸಿವು ಬೇರೆ ಆಗುತ್ತಿತ್ತು.

ಅಂತೂ ಕಡೆಗೆ ಮಲೆಯ ಒಂದೆಡೆ ತುಸು ಬಂಡೆಗಳಿದ್ದ ಜಾಗ ಸಿಕ್ಕಿದಾಗ ಏರಿ ನಿಂತು ಈಕ್ಷಿಸಿದೆ. ಕೆಳಗೆ ದೂರದಲ್ಲಿ ಗದ್ದೆಯ ಬಯಲು ಗೋಚರವಾಯ್ತು. ಗೆದ್ದೆ ಎಂದು ಧೈರ್ಯ ತಂದುಕೊಂಡೆ. ಸುಮ್ಮನೆ, ಶಿಕಾರಿಗಿಕಾರಿ ಎಲ್ಲವನ್ನೂ ಮನಸ್ಸಿನಿಂದ ತಳ್ಳಿಬಿಟ್ಟು, ಬೇಗಬೇಗ ನಡೆದೆ. ಓಡಿದೆನೆಂದರೂ ತಪ್ಪಾಗದು. ಕತ್ತಲಾಗುವ ಮುನ್ನ ಬಯಲಿಗೆ ಬೀಳಬೇಕೆಂದು.

ಸೂರ್ಯಾಸ್ತದ ಸಮಯದ ದಿಗಂತದ ಸೌಂದರ್ಯವನ್ನಾಗಲಿ, ಗೊತ್ತುಕೂರಲು ಹೋಗುವ ಗಿಳಿ ಕಾಮಳ್ಳಿ ಮೊದಲಾದ ಹಕ್ಕಿಗಳ ಕೂಜನ ಮಾಧುರ್ಯವನ್ನಾಗಲಿ ಲೆಕ್ಕಿಸಲೂ ನನ್ನ ಚೇತನಕ್ಕೆ ಪುರುಸೊತ್ತಿರಲಿಲ್ಲ! ಇಂದ್ರಿಯಗಳೆಲ್ಲ ಆತ್ಮರಕ್ಷಣೆಯ ಸಲುವಾಗಿ ಪಲಾಯನ ಪಟುಗಳಾಗಿದ್ದುವು!

ಮನೆಗೆ ಬಂದು ವಿಚಾರಿಸುತ್ತೇನೆ: ಪುಟ್ಟಣ್ಣ ಇನ್ನೂ ಬಂದಿರಲಿಲ್ಲ!

ಚೆನ್ನಾಗಿ ಕತ್ತಲಾಗಿತ್ತು ಅವನು ಬಂದಾಗ. ಅವನೂ ನನ್ನಂತೆಯೆ ನನಗಾಗಿ ಕೂಗಿ ಕರೆದು ಹುಡುಕಿ, ಮನೆಗಾದರೂ ಬಂದಿದ್ದಾರೊ ಏನೊ ನೋಡೋಣ ಎಂದು ಸುಸ್ತಾಗಿ ಬಂದಿದ್ದ. ನಾನೇನಾದರೂ ಮನೆಗೆ ಬಂದಿರದಿದ್ದರೆ ಮತ್ತೆ ನಾಯಿಗಳನ್ನೂ ಕರೆದುಕೊಂಡು ನನ್ನನ್ನು ಹುಡುಕಲು ಕಾಡಿಗೇರಲು ಮನಸ್ಸುಮಾಡಿದ್ದನಂತೆ!

ಮೇ ೧೦ನೆಯ ಶನಿವಾರದ ದಿನಚರಿ:

“ದೈಹಿಕ ಮಾನಸಿಕ ಎರಡೂ ದೃಷ್ಟಿಗಳಿಂದಲೂ ಈ ದಿನ ಬಹಳ ಸಂತೋಷದ ದಿನವಾಗಿತ್ತು. ಉದಯಮಾನ ಪ್ರಾತಃಕಾಲ ಎಳನಗೆ ಬೀರಿತ್ತು. ಹಕ್ಕಿಗಳ ಉಲಿಹ ಆಹ್ಲಾದಕರವಾಗಿತ್ತು. ನಾವು (ಕುಪ್ಪಳ್ಳಿಯ ಹುಡುಗರು-ತಿಮ್ಮಯ್ಯ, ಮಾನಪ್ಪ, ಓಬಯ್ಯ ಇತ್ಯಾದಿ) ನಮ್ಮ ಕೆರೆಯಲ್ಲಿ ಮನಸ್ಸು ತೃಪ್ತಿಯಾಗುವವರೆಗೂ ಈಜಾಡಿದೆವು. ಅಲ್ಲಿಂದ ಬಂದವನು ಭಗವದ್‌ಗೀತೆಯ ಸ್ವಲ್ಪ ಭಾಗವನ್ನು ಓದಿ ಹೇಳಿದೆ. ನಾನು ಹೇಳಿದ್ದನ್ನೆ ಚೆನ್ನಾಗಿ ವಿವರಿಸಿಯೂ ತಿಳಿಸಿದೆ….(ಮಧ್ಯಾಹ್ನ ಊಟವಾದ ತರುವಾಯ) ಹಗಲುನಿದ್ದೆ ಮಾಡುತ್ತಿದ್ದೆ. ದೇವಂಗಿ ಹಿರಿಯಣ್ಣ ಬಂದವನು ಒಂದು ನಾಯಿಯನ್ನೆತ್ತಿ ನನ್ನ ಮೇಲೆ ಎಸೆದು ನನ್ನನ್ನು ಎಬ್ಬಿಸಿದನು. ನಾನೂ ಅವನೂ ಮರಿತೊಟ್ಲಿಗೆ ಹೊರಟೆವು, ನನ್ನ ಮಧುರ ಒಲುಮೆ ಇರುವಲ್ಲಿಗೆ. ಗಾಡಿಪಯಣ ತುಂಬ ಸೊಗಸಾಗಿತ್ತು. ಗುರಿಯನ್ನು ಸಮೀಪಿಸಿದಂತೆಲ್ಲ ನನ್ನ ಹೃದಯ ಒಲವನ್ನು ಸಂದರ್ಶಿಸುವ ಉದ್ವೇಗದಿಂದ ಹೊಡೆದುಕೊಳ್ಳುತ್ತಿತ್ತು. ಆ ಒಲುಮೆಯನ್ನೆ ಕುರಿತು ನಾನು ಅನೇಕ ಕವನಗಳನ್ನು ಬರೆದಿದ್ದೇನೆ, ನನ್ನ ಸೃಜನ ಸಾಹಿತ್ಯದ ಅಂಗವಾಗಿ. ಮನೆಯ ಬಳಿ ಸೇರಿದಾಗ ‘ಅವಳಲ್ಲಿದಾಳೆ! ಅವಳಲ್ಲಿದಾಳೆ!’ ಎಂದುಕೊಂಡೆ. ಓ ತಾಯಿ, ನನ್ನ ಒಲವು ಇಂದ್ರಿಯಗಳನ್ನು ಮೀರಿದುದಾಗಿರಲಿ! ಸ್ವಾಮಿ ವಿವೇಕಾನಂದಮ್‌ ವಂದೇ!”

ಮೇ ೧೧ನೆಯ ಭಾನುವಾರದ ದಿನಚರಿ: (ಮರಿತೊಟ್ಲಿನಲ್ಲಿ)

“ಬೆಳಿಗ್ಗೆ ಸುಮಾರು ಆರು ಗಂಟೆಗೆ ಎದ್ದೆವು. ಸ್ನಾನ ಕಾಪಿ ಮುಗಿಸಿ ನಾರ್ವೆಗೆ ಹೊರಟೆವು. (ಸಣ್ಣ ಊರು. ಅಲ್ಲಿ ಚನ್ನಪ್ಪ ಒಂದು ಅಂಗಡಿ ನಡೆಸುತ್ತಿದ್ದರು, ವ್ಯವಸಾಯದ ಜೊತೆಗೆ) ಚನ್ನಪ್ಪಗೌಡರನ್ನು ನೋಡುವ ಸಂತೋಷಕ್ಕಾಗಿ. ಸದ್ಯಕ್ಕೆ ಅವರೂ ಅಲ್ಲಿದ್ದರು. ಅವರೊಡನೆ ಸರಸಸಲ್ಲಾಪದಲ್ಲಿ ಕಳೆದೆವು. ಅವರು ಕಾರ್ಯಾರ್ಥವಾಗಿ ಕೊಪ್ಪಕ್ಕೆ ಹೋದರು. ನಾವು ಹಿಂದಕ್ಕೆ ಬಂದೆವು. ಏಕೆಂದರೆ ಎಲ್ಲ ದೊಡ್ಡವರೊಡನೆ ಇರುವುದು ಚೆನ್ನಾಗಿಲ್ಲ ಎಂದು. ಅಪರಾಹ್ನ ಮೂರೂವರೆ ಗಂಟೆಗೆ ಹೊರಟೆವು. ಪಯಣ ಆನಂದಕರವಾಗಿತ್ತು, ಏಕೆಂದರೆ ಗಾಡಿಯಲ್ಲಿ ನನ್ನ ಒಲುಮೆಯೂ ಕುಳಿತಿದ್ದಳು. ಅವಳು ಕದ್ದು ಕದ್ದು ನನ್ನ ಕಡೆ ನೋಡುತ್ತಿದ್ದುದನ್ನು ಕಂಡೆ; ಅಥವಾ ಕಂಡೆ ಎಂದು ಕಲ್ಪಿಸಿಕೊಂಡೆನೇನೊ. ಅಂತೂ ತುಂಬ ಸವಿಯಾಗಿತ್ತು. ಅವರನ್ನೆಲ್ಲ ಮನಸ್ಸಿಲ್ಲದ ಮನಸ್ಸಿನಿಂದ ಅಗಲಿದೆ. ಆ ವರದಿ ಕವನಗಳಲ್ಲಿರುತ್ತದೆ. ತಾಯಿ, ಪ್ರಾಪಂಚಿಕ ಭಯಂಕರ ರೀತಿಗಳಿಂದ ನನ್ನನ್ನು ರಕ್ಷಿಸು, ನನ್ನನ್ನು ಪರಿಶುದ್ಧನನ್ನಾಗಿ ಮಾಡು. ವಂದೇ ಸ್ವಾಮಿ ವಿವೇಕಾನಂದಮ್‌!”

ಮೇ ೧೨ನೆಯ ಸೋಮವಾರದ ದಿನಚರಿ: (ಕುಪ್ಪಳಿ

“ಬೆಳಿಗ್ಗೆ ಕಾಡಿನಲ್ಲಿ ಸಂಚರಿಸುತ್ತಾ ಕೆರೆಯ ಅಂಚಿಗೆ ಬಂದೆ. ಅಲ್ಲಿ ಒಂದು ಸಣ್ಣ ಗೋರಿಯನ್ನು ಕಂಡೆ. ಸ್ವಾಮಿ ವಿವೇಕಾನಂದರು ಸ್ವರ್ಗಸುಖಸದೃಶವಾದ ಅಥವಾ ಅದನ್ನೂ ಮೀರುವ ಮಹಾದಾನಂದದಿಂದ ನನ್ನನ್ನೆ ನೋಡಿ ಮುಗುಳುನಗುತ್ತಿರುವುದನ್ನು ಕಂಡೆ. ನಾನೆಂದೆ: ‘ಪ್ರಿಯ ಸ್ವಾಮೀಜಿ, ಹೆದರಬೇಡಿ. ನನ್ನ ಕರ್ತವ್ಯವನ್ನು ನಾನು ಮಾಡುತ್ತೇನೆ. ವಿಕಲಾಂಗಿ ಪ್ರಾಪಂಚಿಕರಂತೆ ನಾನಿರುತ್ತೇನೆಂದು ಭಾವಿಸಬೇಡಿ.’ ನಾನು ತ್ರಿವಿಕ್ರಮ (I am a giant) ಆಕಾರದಲ್ಲಿ ಸಣ್ಣವನಾದರೂ ನಾನೊಬ್ಬ ತ್ರಿವಿಕ್ರಮ. (A giant though with a punyform). ನನ್ನ ಒಲುಮೆಯ ವಿಚಾರವಾಗಿ ಬಹಳ ಚಿಂತಿಸಿದೆ. ಅವಳನ್ನೆ ಮದುವೆಯಾಗುತ್ತೇನೆ, ಇಲ್ಲದಿದ್ದರೆ ಸ್ವಾಮಿ ವಿವೇಕಾನಂದರಂತೆ ಬ್ರಹ್ಮಚಾರಿಯಾಗಿಯೆ ಇರುತ್ತೇನೆ. ‘ಗೌರಿಯೊಡನೆ ನನ್ನ ಭವಿಷ್ಯ!’ ಅಂದುಕೊಂಡೆ. (ಆ ಹುಡುಗಿ ಕೆಲವೆ ದಿನಗಳಲ್ಲಿ ಕಾಯಿಲೆಯಾಗಿ ತೀರಿಕೊಂಡಳಂತೆ.) ಅಲೋಚನೆಗಳೂ ಭಾವಗಳೂ ಕಲಬೆರಕೆಯಾಗುತ್ತಿವೆ? ತಾಯಿ, ನನ್ನನ್ನು ನಿನ್ನೆದೆಗಪ್ಪಿಕೊ! ಐಶ್ವರ್ಯ ಅಧಿಕಾರಗಳು ನನ್ನನ್ನು ನಿನ್ನಿಂದ ದೂರಮಾಡದಂತೆ ನೋಡಿಕೋ. “ಮಹಾಪುರುಷರಿಗೆ ಜಯವಾಗಲಿ! ನನ್ನ ಏಕಾಂತತೆಯ ಸಂಗಾತಿಗಳು! ವಂದೇ ಸ್ವಾಮಿ ವಿವೇಕಾನಂದಮ್‌!”

ದಿನಚರಿಯಲ್ಲಿ ಹೇಳಿರದಿದ್ದರೂ ಮೇ ೧೨ನೆಯ ತಾರೀಖು ಹಾಕಿರುವ ಒಂದು ಪುಟ್ಟ ಸೊಗಸಾದ ಕವನ ಕರಡು ಹಸ್ತಪ್ರತಿಯಲ್ಲಿ ಇದೆ. ಬಹುಶಃ ಅಂದು ಬೆಳಿಗ್ಗೆ ಕಾಡಿನಲ್ಲಿ ಸಂಚಾರ ಹೋದಾಗ ಸಂಭವಿಸಿದ ಒಂದು ಅನುಭವದಿಂದ ಪ್ರೇರಿತವಾಗಿದ್ದಿರಬಹುದು. ನಾಲ್ಕು ಪಂಕ್ತಿಗಳ ನಾಲ್ಕು ಪದ್ಯಗಳಿವೆ ಆ ಕವನದಲ್ಲಿ. ಕವನಕ್ಕೆ ಶೀರ್ಷಿಕೆ ‘On a Morn’ (ಒಂದು ಪ್ರಾತಃಕಾಲದಲ್ಲಿ) ಎಂದು ಸರಳವಾಗಿದೆ. ಪುಟ್ಟ ಚಿಟ್ಟೆಹಕ್ಕಿಯ ಹೃದಯದಲ್ಲಿ ಸೃಷ್ಟಿ-ಸೌಂದರ್ಯಲಕ್ಷ್ಮಿ ತನ್ನ ಪದ್ಮಾಲಯವನ್ನು ಸ್ಥಾಪಿಸಿಕೊಂಡಿದ್ದಾಳೆಯೆ? ಎಂಬ ಸೊಗಸಾದ ಧ್ವನಿಪೂರ್ವಕ ಪ್ರಶ್ನೆಯಲ್ಲಿ ಕವನ ಮುಕ್ತಾಯವಾಗುತ್ತದೆ:

ON A MORN

A sweet bird sang and I stood still,
Half dreamy tho’ full mad!
A poet’s joy heaved up the hill;
And every flower was glad!

And I to myself muttered slow:
“A small dear thing if sweet
Can make the great Heavens come and go
Or spurn them with its feet!”

And then the sun smiled and the wind blew,
And Beauty kissed the earth;
And then the sweet bird sang and flew
And swiftly fled all mirth.

Again I muttered slow, and smiled:
“O Beauty, is thy home
A tiny breast that hugs the wild?
And with it doest thou roam?”
೧೨-೫-೧೯೨೪

ಮೇ ೧೩ರಿಂದ ಮೇ ೧೮ರವರೆಗೆ ದಿನಚರಿ ಖಾಲಿಯಿದೆ. ಬಹುಶಃ ನಾನು ಅಸ್ವಸ್ಥನಾಗಿರಬೇಕು. ಏಕೆಂದರೆ ೧೯ನೆಯ ತಾರೀಖಿನ ದಿನಚರಿ ಪ್ರಾರಂಭವಾಗುತ್ತದೆ. ‘I was sick and was lying bed’ ಎಂದು. ಸೃಷ್ಟಿಸೌಂದರ್ಯ, ಆಧ್ಯಾತ್ಮಿಕತೆ, ಸಾಹಿತ್ಯಾಧ್ಯಯನ, ಕವಿಕಾವ್ಯಗಳ ರಸಸಂಸರ್ಗ ಇತ್ಯಾದಿ ಅಲೌಕಿಕ ವ್ಯಾಪಾರಗಳಲ್ಲಿಯೆ ನನ್ನ ಚೇತನ ನಿರಂತರವೂ ಮಗ್ನವಾಗಿದ್ದು, ಬಿ.ಎಂ.ಶ್ರೀಯವರು ‘ಕೊಳಲು’ ಮುನ್ನುಡಿಯಲ್ಲಿ ಹೇಳಿರುವಂತೆ, ಜೀವಾನಂದ, ಕಾವ್ಯಾನಂದ, ಬ್ರಹ್ಮಾನಂದಗಳನ್ನು ಸವಿಯುತ್ತಿದ್ದರೂ ಮಲೇರಿಯಾ ಮಾತ್ರ ನನ್ನ ಒಡಲನ್ನು ಆಗಾಗ ಕಾಡುವ ಕೈಂಕರ್ಯದಿಂದ ವಿರಮಿಸತ್ತಿರಲಿಲ್ಲ. ಅದನ್ನೂ ಕೂಡ ಜಗಜ್ಜನನಿ ನನ್ನ ಒಳ್ಳೆಯದಕ್ಕಾಗಿಯೆ ನಿಯೋಜಿಸಿದ್ದಾಳೆ ಎಂದು, ನನ್ನ ದಿನಚರಿ ಹೇಳುತ್ತಿರುವಂತೆ, ಆಲೋಚಿಸುತ್ತಿದ್ದೆ!

ಮೇ ೧೯ನೆಯ ಸೋಮವಾರದ ದಿನಚರಿ:

“ನನಗೆ ಕಾಯಿಲೆಯಾಗಿದ್ದರಿಂದ ಬೆಳಿಗ್ಗೆಯಿಂದಲೂ ಹಾಸಗೆಯಲ್ಲಿ ಮಲಗಿದ್ದೆ. ಅದೂ ನನ್ನ ಒಳ್ಳೆಯದಕ್ಕೇ ಎಂದು ಆಲೋಚಿಸಿದೆ. ಸುಮಾರು ೧೦ ಗಂಟೆಯ ಹೊತ್ತಿಗೆ ನನ್ನ ಪ್ರಿಯ ಸ್ನೇಹಿತ ಡಿ.ಆರ್. ವೆಂಕಟಯ್ಯ ಬಂದು ನನ್ನನ್ನು ತನ್ನೊಡನೆ ಮರಿತೊಟ್ಲಿಗೆ ಬರಲು ಕರೆದ. ಅವನ ಸ್ನೇಹದ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಅವನೊಡನೆ ಹೊರಟೆ, ಎತ್ತಿನಗಾಡಿಯಲ್ಲಿ. ಗಾಡಿಪಯಣ ತತ್ಕಾಲದಲ್ಲಿ ಹಿತಕರವಾಗಿರದಿದ್ದರೂ ನನ್ನ ಚೇತನದ ಕವಿಪಕ್ಷಕ್ಕೆ ಅದು ಸಂತೋಷಕರವಾಗಿತ್ತು. ಗಾಡಿಯ ಒಲೆದಾಟ, ಅದರ ಕಟಕಟ ಗಡಗಡ ಸದ್ದು, ಎತ್ತುಗಳ ಹಣೆಗೂ ಕೊರಳಿಗೂ ಕಟ್ಟಿದ್ದ ಗೆಜ್ಜೆಯ ಮತ್ತು ಗಗ್ಗರದ ಟಿಂಟಿಣಿಯ ಇಂಚರ, ಎಲ್ಲಕ್ಕಿಂತ ಮಿಗಿಲಾಗಿ ನಾವು ಪಯಣಿಸುತ್ತಿದ್ದ ಹೆಗ್ಗಾಡಿನ ಮಲೆಯ ಕಣಿವೆಬೆಟ್ಟಗಳ ದೃಶ್ಯದ ರಮಣೀಯತೆ-ಇವು ನನ್ನ ಕವಿ ಮನಸ್ಸಿಗೆ ಸುಖಮಧುರವಾಗಿ ರಸಾನಂದಕರವಾಗಿದ್ದುವು. ಹಿಂದಿನ ಇಂದಿನ ಮುಂದಿನ ಎಲ್ಲ ಕವಿಗಳಿಗೂ ಜಯವಾಗಲಿ! ವಂದೇ ವಿವೇಕಾನಂದಮ್‌! ವಿಶ್ವಮಾತೆಗೆ ನಮಸ್ಕಾರ!”

ಮೇ ೨೦ನೆಯ ಮಂಗಳವಾರದ ದಿನಚರಿ:

“ಆಗಾಗ್ಗೆ ನನ್ನ ಮನಸ್ಸಿಗೆ ಬರುತ್ತದೆ, ನನ್ನ ಬದುಕನ್ನೆಲ್ಲ ಬ್ರಹ್ಮಚಾರಿಯಾಗಿಯೆ ಕಳೆಯಬೇಕೆಂದು. ಆದರೆ ಮತ್ತೊಂದು ನೋವು ಬಾಧಿಸುತ್ತದೆ, ನಾನು ಪ್ರೀತಿಸುತ್ತಿರುವ ಕನ್ಯೆಯನ್ನು, ಅವಳು ಸಾಂಸಾರಿಕವಾದ ಬಾಳನ್ನು ಬಯಸುವ ಪಕ್ಷದಲ್ಲಿ, ಕೈಬಿಡಬಾರದೆಂದು. ಆದ್ದರಿಂದಲೇ ನಾನು ಮನಸ್ಸು ಮಾಡಿದ್ದೇನೆ, ನಾನು ಒಲಿದಿರುವ ಚೆಲುವೆ ಗೌರಿಯನ್ನು ಮದುವೆಯಾಗುತ್ತೇನೆ, ಇಲ್ಲದಿದ್ದರೆ ಲೋಕಕ್ಕಾಗಿಯೂ ನನ್ನ ನಾಡಿಗಾಗಿಯೂ ಬ್ರಹ್ಮಚಾರಿಯಾಗಿಯೆ ಇದ್ದುಬಿಡುತ್ತೇನೆ ಎಂದು. ಜಗತ್ತಿನಲ್ಲಿ ನನ್ನ ಸ್ಥಾನ—ದಾರ್ಶನಿಕ ಕವಿ (Philosopher-poet)ಯದು, (One who dreams nothing but gigantic dreams.)

ಮಹಾ ಕನಸುಗಳನ್ನಲ್ಲದೆ ಬೇರೆ ಅಲ್ಪವನ್ನೇನನ್ನೂ ಕಾಣದ್ದು. ನನ್ನ ಮಹಾಗುರುಗಳಾದ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ಮಧುರ ಮಹೋನ್ನತ ಭಾವನೆಗಳನ್ನು ಪ್ರಸಾರ ಮಾಡುವುದೆ ನನ್ನ ಜೀವನದ ಗುರಿ. ಹೇ ದಿವ್ಯಮಾತೆ, ನೀನು ನನಗೆ ದಯಪಾಲಿಸಿರುವ ಪ್ರತಿಭಾಬಲದಿಂದ ಲೋಕಸೇವೆಯ ನಮ್ರಕರ್ತವ್ಯವನ್ನು ನಾನು ಸಾಧಿಸುವಂತೆ ನನಗೆ ನೆರವಾಗು, ತಾಯಿ!”

ಮೇ ೧೩ರಿಂದ ೧೮ರವರೆಗೆ ದಿನಚರಿ ಖಾಲಿಯಾಗಿದ್ದರೂ ರುಗ್ಣಶಯ್ಯೆಯಲ್ಲಿಯೆ ಬರೆದ ಎರಡು ಮೂರು ಕವನಗಳು ಹಸ್ತಪ್ರತಿಯಲ್ಲಿವೆ. ೧೭-೫-೧೯೨೪ ಹಾಕಿರುವ ವಚನಕವನವೊಂದು, ೧೮-೫-೧೯೨೪ ಹಾಕಿರುವ ‘The Bamboo Bell’. (ಎಂದರೆ ದನಗಳ ಕೊರಳಿಗೆ ಕಟ್ಟುವ ‘ದೊಂಟೆ’. ಬಿದಿರಿನಿಂದ ಮಾಡಿರುತ್ತಾರೆ. ತಾಳಿಗಳಂತೆ ದಾರ ಕಟ್ಟಿ ಇಳಿಬಿದ್ದಿರುವ ಎರಡು ಸಣ್ಣಮರದ ತುಂಡುಗಳು ಒಂದು ಗೇಣುದ್ದದ ಬಿದಿರಿನ ಅಂಡೆಗೆ ತಗುಲಿ, ದನ ಚಲಿಸಿದಂತೆಲ್ಲ ಸದ್ದು ಮಾಡುತ್ತದೆ. ಆ ಸದ್ದಿನಿಂದ ಆ ಪ್ರಾಣಿ ಎಲ್ಲಿದೆ? ಎತ್ತ ಹೋಗುತ್ತಿದೆ? ಎಂಬುದು ದನಗಾಹಿಗೆ ಗೊತ್ತಾಗುತ್ತದೆ.)

The noise of the marriage heaved the house and I went out to muse in solitude. The clouds were sailing fast to the east, and the moon was flying to the West.

In the dim distance the hezy horizon stood dreaming like a phantom. And the forests were all asleep.

The noise of the marriage troubled them not in the least. In that stillness of the night there crept into my ears a sweet symphony as if the song of the heavenly maids.

I looked up and I looked around. In a cloud that was sailing I beheld a from of a damsel serene as the night, fair as the morn, dark as the clouds and sweet as my thoughts and I gasped “It’s my Love!”