ಮೇಲಣ ವಿಭಾಗದ ತುದಿಯಲ್ಲಿ ಉಲ್ಲೇಖಿಸಿರುವ ವಚನಕವನ ‘The Lover’s Embrace ಎಂಬುದನ್ನು ರಚಿಸಿದ ಮರುದಿನದಿಂದ, ಎಂದರೆ ೧೯೨೪ನೆಯ ಜನವರಿ ಒಂದನೆಯ ತಾರೀಖಿನಿಂದ ನಾನು ದಿನಚರಿ ಬರೆದಿಡಲು ಪ್ರಾರಂಭಿಸಿದೆ. ಅದೃಷ್ಟವಶಾತ್‌ ಆ ದಿನಚರಿಯ ‘The Bangalore Press Diary, ೧೯೨೪’ ಪುಸ್ತಕವೂ ಹಳೆಯ ಕಡತಗಳಲ್ಲಿ ಹುಡುಕಿದಾಗ ಸಿಕ್ಕಿತು. ರುಧಿರೋದ್ಗಾರಿ ಸಂವತ್ಸರದ ಮಾರ್ಗಶೀಷ ಬಹುಳ ನವಮಿಯ ಮಂಗಳವಾರ ಕ್ರಿಸ್ತಸಂವತ್ಸರಾರಂಭದಲ್ಲಿ ಹೀಗೆ ಪ್ರಾರಂಭವಾಗುತ್ತದೆ, ಇಂಗ್ಲಿಷಿನಲ್ಲಿ ! (ಆಗ ಎಲ್ಲವನ್ನೂ ಇಂಗ್ಲಿಷಿನಲ್ಲಿಯೆ ಬರೆಯುವ ಅಭ್ಯಾಸ ತಾನೆ?)

Oh Lord of my life, today I have begun to keep an account of my life and I invoke thee to aid me so that it may all be good and beautiful! Not that I desire to flee away from the aweful dangers of the battle field that thou hast set for me, but let me be courageous in facing it. O Lord of all the worlds, grant me the vision supreme that I may stand before thee face to face when the time of dissolution comes.

(ಓ ನನ್ನ ಜೀವನದ ದೊರೆಯೆ, ಇಂದು ನನ್ನ ಬದುಕಿನ ಒಂದು ದಾಖಲೆ ಬರೆದಿಡಲು ತೊಡಗಿದ್ದೇನೆ; ಅದಕ್ಕಾಗಿ ನಿನ್ನನ್ನು ನಾನು ಪ್ರಾರ್ಥಿಸುತ್ತೇನೆ, ಆ ಕಥನವೆಲ್ಲವೂ ಶಿವಮಯವೂ ಸೌಂದರ್ಯಮಯವೂ ಆಗುವಂತೆ ನೀನು ನನಗೆ ನೆರವಾಗಬೇಕೆಂದು. ನೀನು ನನಗಾಗಿ ಒಡ್ಡಿರುವ ಭವ್ಯವೂ ಅಪಾಯ ಬಹುಳವೂ ಆಗಿರುವ ರಣಕ್ಷೇತರದಿಂದ ಪಲಾಯನಮಾಡುವ ಉದ್ದೇಶದಿಂದಲ್ಲ, ಅದನ್ನು ಎದುರಿಸುವ ಧೈರ್ಯಸಾಹಸ ನನಗೆ ಬರಲಿ ಎಂದು. ಓ ಸರ್ವ ಜಗತ್ತುಗಳ ಸ್ವಾಮಿಯೇ, ಲಯ ಸಮಯ ಐತಂದಂದು ನಿನ್ನ ಮುಖಕ್ಕೆ ನಿನ್ನೆದುರು ಧೀರವಾಗಿ ನಿಲ್ಲುವಂತೆ ನನಗೆ ಪರಮ ಸಾಕ್ಷಾತ್ಕಾರದ ದಿವ್ಯದೃಷ್ಟಿಯನ್ನು ದಯಪಾಲಿಸು).

ಅಂದು ಜನವರಿ ಒಂದನೆಯ ತಾರೀಖಿನಿಂದ ಪ್ರಾರಂಭವಾದ ದಿನಚರಿ ಅದೇ ವರ್ಷದ ಆಗಸ್ಟ್‌ ೧೦ನೆಯ ಭಾನುವಾರದವರೆಗೆ ನಡೆದು ನಿಂತುಬಿಟ್ಟಿದೆ. ಬಹುಶಃ ನನ್ನ ತಾಯಿಯ ಮರಣ ಮೊದಲಾದ ಘಟನೆಗಳು ನಡೆದು ನಾನು ದಿನಚರಿ ಬರೆಯುವುದನ್ನು ಲೆಕ್ಕಿಸಲಿಲ್ಲ ಎಂದು ತೋರುತ್ತದೆ. ಆದರೆ ಅಚ್ಚರಿಯಾಗುವಂತೆ ಮತ್ತೆ ಸರಿಯಾಗಿ ಒಂದು ವರ್ಷಕ್ಕೆ ಅಂದರೆ ೧೧.೮.೧೯೨೪ರಲ್ಲಿ, ಮತ್ತೆ ಬೇರೊಂದು ಪುಸ್ತಕದಲ್ಲಿ ದಿನಚರಿ ಬರೆಯಲು ಪ್ರಾರಂಭವಾಗುತ್ತದೆ. ಆ ಅಚ್ಚರಿಯನ್ನೂ ದಿನಚರಿಯಲ್ಲಿ ಗುರುತಿಸಿದ್ದೇನೆ.

೧೯೨೪ನೆಯ ಜನವರಿ ೧ರಿಂದ ೧೯೨೪ನೆಯ ಆಗಸ್ಟ್‌ ೧೦ರ ವರೆಗೆ ಇಟ್ಟಿರುವ ದಿನಚರಿ ‘ನೆನಪಿನ ದೋಣಿಯಲ್ಲಿ’ಗೆ ಉತ್ತಮ ಸಾಕ್ಷಿಸಾಮಗ್ರಿಯನ್ನೊದಗಿಸುತ್ತದೆ. ಕೆಲವು ಭಾಗಗಳನ್ನೋದಿದರೆ ನನಗೇ ನಂಬಲು ಕಷ್ಟವಾಗುವಂತಿದೆ. ಅದರಲ್ಲಿಯೂ ನನ್ನ ಚೇತನ ತನ್ನ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಹಿಂದೆ ಆಗಿಹೋಗಿದ್ದ ದಿವ್ಯಗುರುಚೇತನಗಳ ಪಾದಾರವಿಂದಗಳನ್ನು ಅಪ್ಪಿಹಿಡಿದು ಮುಂದುವರಿದ ಹೆಜ್ಜೆಗುರುತುಗಳಂತೂ ವಿಸ್ಮಯಕರವಾಗಿವೆ. ಅಲ್ಲದೆ ಸಾಹಿತ್ಯಕ್ಷೇತ್ರದಲ್ಲಿಯೂ ನನ್ನ ಜೀವನದಲ್ಲಿ ಐತಿಹಾಸಿಕ ಎನ್ನಬಹುದಾದ ಘಟನೆಗಳೂ ಆ ಅವಧಿಯಲ್ಲಿಯೆ ನಡೆದಿರುವುದರಿಂದ ಆ ಅವಧಿಯ ದಿನಚರಿ ತುಂಬ ಅಮೂಲ್ಯವಾಗಿದೆ, ಮರೆತುಹೋಗಿದ್ದ ವಿವರ ಸಾಮಗ್ರಿಗಳನ್ನೊದಗಿಸಿ ನೆನಪು ಕೊಟ್ಟು. ಜನವರಿ ೪ರ ದಿನಚರಿ, ಭಗವಂತನನ್ನು ನೆರವಾಗಲು ಬೇಡಿಯಾದ ಮೇಲೆ, ಹೀಗೆ ಮುಂದುವರಿಯುತ್ತದೆ:

To day I have written an exhorting letter to my dear friend and sympathizer Mr. H.S. Manjappa Gowda.

I wrote the poem ‘The Lover’s Embrace’ in the manuscript. (Wrote ಎಂಬುದು copied ಅರ್ಥದಲ್ಲಿ).

I invoked at the beginning of the meeting of the Loutus Leaf Union which flourished well with nine or ten petals. Having finished the meeting my friends and I attended the Majestic Cinema. The episode was “A Royal Divorce”concerning the tale of Nepolean. I came home (ಅಂದರೆ ಬಾಡಿಗೆ ಕೊಟಡಿಗೆ, ಸಂತೆಪೇಟೆ ‘ಆನಂದ ಮಂದಿರ’ ದಲ್ಲಿದ್ದದ್ದು) and after reading and musing on two poems of Bhagavadgita, slept.

(ಇವೊತ್ತು ನನ್ನ ಸ್ನೇಹಿತರೂ ಮತ್ತು ಪ್ರೋತ್ಸಾಹಿಗಳೂ ಆದ ಶ್ರೀ ಎಚ್‌.ಎಸ್‌. ಮಂಜಪ್ಪಗೌಡರಿಗೂ ಒಂದು ಭಾವಪೂರ್ಣ ಪತ್ರ ಬರೆದಿದ್ದೇನೆ).

(ನಿನ್ನೆ ರಚಿಸಿದ್ದ) “The Lover’s Embrace” ಎಂಬ ಕವನವನ್ನು ಹಸ್ತಪ್ರತಿಗೆ ಎತ್ತಿ ಬರೆದಿದ್ದೇನೆ.

‘ಪದ್ಮಪತ್ರ ಸಂಘ’ದ

[1] ಸಭೆಯಲ್ಲಿ ಕಾರ್ಯಕ್ರಮದ ಮೊದಲು ‘ಪ್ರಾರ್ಥನೆ’ಯನ್ನು ನಾನೆ ನೆರವೇರಿಸಿದೆ. ಪದ್ಮಪತ್ರವು ಒಂಬತ್ತೊ ಹತ್ತೊ ದಳಗಳನ್ನುಳ್ಳದ್ದಾಗಿದೆ. ಸಭೆ ಮುಗಿದ ಮೇಲೆ ನಾನೂ ನನ್ನ ಮಿತ್ರರೂ ಮೆಜೆಸ್ಟಿಯೆ ಸಿನಿಮಾಕ್ಕೆ ಹೋದೆವು. ಅಂದಿನ ಕಥೆ, ನೆಪೋಲಿಯನ್ನಿಗೆ ಸಂಬಂಧಿಸಿದ್ದು ದೊರೆಯ ವಿವಾಹ ವಿಚ್ಛೇದ ಎಂದಿತ್ತು. ಕೊಟಡಿಗೆ ಹಿಂತಿರುಗಿ, ಭಗವದ್ಗೀತೆಯ ಎರಡು ಶ್ಲೋಕಗಳನ್ನು ಓದಿ, ಮನನಮಾಡಿ, ಮಲಗಿದೆ.

ಜನವರಿ ೨ನೆಯ ತಾರೀಖು ಬುಧವಾರದ ದಿನಚರಿ ಹೀಗಿದೆ: (ದಿನಚರಿಯೆಲ್ಲ ಇಂಗ್ಲೀಷಿನಲ್ಲಿಯೆ ಇದ್ದರೂ ಇನ್ನು ಮುಂದೆ ಕನ್ನಡದಲ್ಲಿಯೆ ಅದರ ಸಾರಾನುವಾದವನ್ನು ಕೊಡುತ್ತೇನೆ. ಅತ್ಯಂತ ಅವಶ್ಯಕವಾಗಿ ತೋರಿದಲ್ಲಿ ಮಾತ್ರ ಕಂಸಗಳಲ್ಲಿ ಇಂಗ್ಲೀಷ್‌ ವಾಕ್ಯಗಳನ್ನೂ ಬರೆಯುತ್ತೇನೆ.)

“ಸ್ನಾನ ಮುಗಿಸಿ ಬಂದು, ನಾಳೆ ನೆರೆಯಲು ಗೊತ್ತಾಗಿರುವ ಸಭೆಯಲ್ಲಿ ನಾಂದಿಯಾಗಿ ಓದಲು ಒಂದು ಕವನದ ಆಯ್ಕೆಯಗೆ ತೊಡಗಿದೆ. ರವೀಂದ್ರನಾಥ ಠಾಕೂರರ ‘Crescent Moon’ ತೆಗೆದುಕೊಂಡು ಹಾಳೆಗಳನ್ನು ತಿರುವಿಹಾಕಿದೆ. ಮೊದಲು ‘ The First Jasmines’ ಎಂಬುದನ್ನು ಓದಿದೆ. ಅದರಿಂದ ಎಷ್ಟು ಪ್ರಭಾವಿತನಾದೆ ಎಂದರೆ, ಗೋಡೆಗೆ ತಗುಲಿಹಾಕಿದ್ದ ಠಾಕೂರರ ಭಾವಚಿತ್ರದ ಕಡೆಗೆ ನಿರ್ನಿಮೇಷವಾಗಿ ಅತ್ಯಂತ ಪೂಜ್ಯಭಾವದಿಂದ ದೀಪ್ತವಾದ ಹೃದಯದಿಂದ ನೋಡತೊಡಗಿದೆ. ಆಮೆಲೆ ‘The end’  (ಕೊನೆ) ಎಂಬ ಕವನಕ್ಕೆ ಬಂದೆ. ಅಲ್ಲಿ ಒಂದು ಮಗು ತನ್ನ ಮರಣ ಸಮಯದಲ್ಲಿ ತನ್ನ ತಾಯಿಯಿಂದ ಬೀಳ್ಕೊಳುತ್ತಿದೆ ಏನೇನನ್ನೊ ಸಮಾಧಾನ ಹೇಳಿ. ಮೊದಲನೆಯ ನಾಲ್ಕು ಪಂಕ್ತಿಗಳನ್ನು ಓದುತ್ತಿದ್ದಂತೆ ನನ್ನ ಕಣ್ಣು ಹನಿಗೂಡಿತು. ಕಣ್ಣೀರು ಒರಸಿಕೊಂಡು ಭಾವವಶನಾಗದಂತೆ ಕಠೋರಮನಸ್ಸುಮಾಡಿಕೊಂಡು ಓದಲು ದೃಢಹೃದಯನಾಗಿ ಮತ್ತೆ ಓದತೊಡಗಿದೆ. ಓದುತ್ತಾ ಹೋದಂತೆಲ್ಲಾ, ಆರೋಪಿಸಿಕೊಂಡ ದೃಢಮನಸ್ಸಿನ ಕಠೋರತೆ ಕರಗಿಹೋಯಿತು! ಮತ್ತೆ ಕಣ್ಣೀರು ಮೊದಲಿಗಿಂತಲೂ ಜೋರಾಗಿ ಸುರಿಯತೊಡಗಿತು. ಹಿಂದಿನಂತೆಯ ರಸಾನುಭವದ (The joy of poetry) ಆನಂದದಲ್ಲಿ ಮಗ್ನನಾದೆ; ಹಿಂದಿಗಿಂತಲೂ ಅತಿಶಯವಾಗಿ, ನಾಳೆಯ ಸಭೆಯಲ್ಲಿ ನಾಂದಿಯಾಗಿ ಓದಲು ಆ ಕವನವನ್ನೆ ಆರಿಸಿದೆ. ಆದರೆ ಅದಕ್ಕೆ ನನ್ನ ಕವನ ‘The Lover’s Embrace’ (ಪ್ರಿಯನ ಆಲಿಂಗನ) ಅನ್ನೂ ಸೇರಿಸಿಬಿಟ್ಟೆ, ನನ್ನ ಗೆಳೆಯರಿಗೆ ಗೊತ್ತಾಗದಂತೆ!

ಅಪರಾಹ್ನ ೪ ರಿಂದ ೬ ಗಂಟೆಯವರೆಗೆ ಮಿತ್ರರೊಡನೆ ತಾತ್ತ್ವಿಕ ಸಂವಾದದಲ್ಲಿ ತೊಡಗಿದ್ದೆ. ಸುಮಾರು ಸಾಯಂಕಾಲ ೬ ಗಂಟೆಗೆ ನನ್ನ ಮಿತ್ರು ಶಿವರಾಂ ಮತ್ತು ಅವರ ತಮ್ಮನ ಒಡಗೂಡಿ ಚಾಮುಂಡಿ ಬೆಟ್ಟದತ್ತ ವಾಕ್‌ ಹೋದೆವು. ದಾರಿಯುದ್ದಕ್ಕೂ ವೈಯಕ್ತಿಕವಾದ ಮತ್ತು ತತ್ತ್ವಶಾಸ್ತ್ರೀಯವಾದ ವಿಷಯಗಳಿಂದಲೆ ನಮ್ಮ ಸಂವಾದವೆಲ್ಲ ತುಂಬಿತ್ತು. ಏಳು ಗಂಟೆ ಹೊತ್ತಿಗೆ ಕೊಟಡಿಗೆ ಹಿಂತಿರುಗಿದೆವು.

ಡಿ.ಎನ್‌.ಹಿರಿಯಣ್ಣನವರಿಂದ ಒಂದು ಕಾಗದ ಬಂದಿದೆ.

ಹೇ ಸ್ವಾಮಿ, ನನ್ನನ್ನು ಕ್ಷಮಿಸು, ನನ್ನ ಸ್ನೇಹಿತರ ಮುಂದೆ ನನ್ನನ್ನು ಕುರಿತು ಬಹಳ ದೊಡ್ಡದಾಗಿ ಹೇಳಿಕೊಂಡೆ, ನಾನು ಹೇಳಿದ್ದೆಲ್ಲ ಸತ್ಯವಾದರೂ. (Oh Lord, forgive me, for I spoke high about myself before my friends today tho’ it is truth that I gave out) ಅಹಂಕಾರದಿಂದಲ್ಲ, ವಿಶ್ವಾಸಕ್ಕಾಗಿ ನನ್ನ ವೈಯಕ್ತಿಕ ಭಾವಗಳನ್ನೆಲ್ಲ ಹೇಳಿಬಿಟ್ಟೆ. ಆಮೇಲೆ ‘The Bird and the Poet’ ಎಂಬ ಕವನರಚನೆಗೆ ಪ್ರಾರಂಭಿಸಿದೆ.”

ಮರುದಿನದ (೩.೧.೧೯೨೪) ದಿನಚರಿ ಪ್ರಾರಂಭವಾಗುತ್ತದೆ:“ ಬೆಳಿಗ್ಗೆ ಎದ್ದು, ಎಂದಿನಂತೆ ದೈನಂದಿನ ವ್ಯಾಯಾಮ ಪೂರೈಸಿ, ಹಿಂದಿನ ರಾತ್ರಿ ರಚಿಸಿದ ‘The Bird and the Poet’ ಕವನವನ್ನು ಕಾಪಿಮಾಡಿದೆ. (ಅಂದರೆ ರಚಿತವಾದ ಆ ಕವನ ಮನಸ್ಸಿನಲ್ಲಿಯೆ ಇತ್ತೆಂದು ಅರ್ಥ). ರಬೀಂದ್ರನಾಥ ಠಾಕೂರರ ಕವನ ‘The End’ ಎಂಬುದನ್ನು ಕನ್ನಡಕ್ಕೆ ಭಾಷಾಂತರಿಸಿ. (Translated into Canareese poetry ಎಂದಿದೆ ಒಕ್ಕಣೆ!) ಇವೊತ್ತಿನ ಸಭೆ ಮುಂದಿನ ಶನಿವಾರಕ್ಕೆ ಮುಂದಕ್ಕೆ ಹಾಕಲ್ಪಟ್ಟಿತು. ನನ್ನ ಮಿತ್ರರು ನನ್ನೊಡನೆ ಒಂದು ಸಾಹಿತ್ಯಕ ಚರ್ಚೆ ನಡೆಸಿದರು. ನಾನು ಭಾಷಾಂತರ ಮಾಡಿದ ‘The Sages of India’ ಎಂಬ ಸ್ವಾಮಿ ವಿವೇಕಾನಂದರ ಭಾಷಣವನ್ನು ಸ್ನೇಹಿತರಿಗೆ ಓದಿದೆ. ಆಮೇಲೆ ತಿರುಗಾಡಲು ಹೊರಟೆವು. ಆಗಲೆ ಬೀದಿ ದೀಪ ಹೊತ್ತಿಸಿದ್ದರು. ನಾನು ಮತ್ತು ಕೆ.ಅನಂತರಾಮಯ್ಯ ವೀರರಾಘವನ್‌ ಮತ್ತು ವೈದ್ಯನಾಥನ್‌ರನ್ನು ಸಂಧಿಸಿದೆವು. ರಸ್ತೆಯಲ್ಲಿ ಹೋಗುತ್ತಲೆ ದೀರ್ಘಸಂವಾದ ನಡೆಯಿತು. ಕೊಟಡಿಗೆ ಹಿಂತಿರುಗಿದಾಗ ಎಂ.ತಮ್ಮಯ್ಯ ಮತ್ತು ಕೆ.ಮಲ್ಲಪ್ಪ ಬಂದರು. ನಮ್ಮ ನಮ್ಮ ಹುಟ್ಟೂರಿನ ವಿಚಾರ ಮಾತಾಡಿದೆವು. ರಾತ್ರಿ ೯ ಗಂಟೆಗೆ ಅವರು ಹೋದರು. ಎಚ್‌.ಕೆ.ವೀರಪ್ಪ ಕಿತ್ತಳೆ ಹಣ್ಣುಗಳೊಡನೆ ಬಂದರು.

ಬೀದಿಯಲ್ಲಿ ನಾನೊಬ್ಬನೆ ಬರುತ್ತಿದ್ದಾಗ ಮೂವರು ಭಿಕ್ಷುಕರನ್ನು ಕಂಡೆ. ಅವರೊಡನೆ ಮಾತಾಡಿ, ಒಂದಾಣೆ ಕೊಟ್ಟೆ. ಅವರು ತುಂಬ ಎತ್ತರವಾಗಿ ಕಂಡರು. ಅವರಲ್ಲೊಬ್ಬ ಮುದುಕ ಎಷ್ಟರಮಟ್ಟಿಗೆ ಬಾಗಿದ್ದನೆಂದರೆ ಆರು ಅಡಿ ಎತ್ತರದ ಅವನ ದೇಹ ಮೂರು ಅಡಿಗೆ ಕುಗ್ಗಿತ್ತು. ಅವರ ಒರಟು ಮುಖಗಳಲ್ಲಿ ದಿವ್ಯತೆ ಹೊಳೆಯುತ್ತಿತ್ತು. (Divinity shone in their rugged faces).

ಪ್ರಶ್ನೆ ಕೇಳುವ ಚಾಪಲ್ಯವನ್ನು ವಿಡಂಬಿಸುವ ಈ ಮುಂದಿನ ಕವನ, ಜನವರಿ ಎರಡರ ರಾತ್ರಿ ರಚಿಸಿ ಮರುದಿನ ಪ್ರತಿಯೆತ್ತಿದ್ದು, “The Bird and the Poet”[2] (ಹಕ್ಕಿ ಮತ್ತು ಕವಿ) ಐದು ಪಂಕ್ತಿಯ ಆರು ಕವನಗಳನ್ನೊಳಗೊಂಡಿದೆ. ಎರಡನ್ನಿಲ್ಲಿ ಕೊಟ್ಟಿದೆ:

Where is thy temple, sweet little bird?
Is it beside the sacred river
Where myriad people go with flowers
To barter with their lofty giver?
The bird sang Coo-woo, Coo-woo!
Is it upon the mountain crest
Where sages sit and contemplate?
Or where the forester hews the wood?
Alone or with his comel mate?
The bird song Coo-woo, Coo-woo!

೧೯೨೪ನೆಯ ಜನವರಿ ೪ನೆಯ ಶುಕ್ರವಾರದ ದಿನಚರಿ:

“ನಾನು ಹೆಡ್‌ಮಾಸ್ಟ್‌ ಮನೆಗೆ ಹೋದೆ; ಆದರೆ ಬಾಗಿಲು ಮುಚ್ಚಿತ್ತು. ಹಿಂದಕ್ಕೆ ಬಂದೆ. ಬೈರನ್‌ ಕವಿಯ “The English Bards and Scottish Reviewers” ಎಂಬ ವಿಡಂಬನ ಕಾವ್ಯವನ್ನು (Satire) ಮಿತ್ರರಿಗೆ ಓದಿದೆ. ಬೈರನ್ ಕವಿಯ ಚಾರಿತ್ರ ಮತ್ತು ವಿಡಂಬನ ಪ್ರತಿಭೆ ವಿಚಾರವಾಗಿ ವಿಮರ್ಶಿಸಿದೆ. ನನ್ನ ಮಿತ್ರರು ಹೋದಮೇಲೆ ಶ್ರೀ ರಾಜಗೋಪಾಲರಾವ್‌, ಎಂ.ಎ., ಎಲ್‌.ಟಿ.ಅವರಿಗೆ ನನ್ನ “Flood” ಕಥನಕವನ ಕಳಿಸಿದೆ. ೧೨ ಗಂಟೆಗೆ ಊಟ ಮುಗಿಸಿ ಠಾಕೂರರ ಕವನಗಳನ್ನು ಓದಿದೆ. ಆಮೇಲೆ ಅವರ ‘ಸಾಧನಾ’ ಭಾಷಣಗಳ ಪುಸ್ತಕ ತೆಗೆದುಕೊಂಡು, ಮೊದಲನೆಯ ಪ್ರಬಂಧ “The Problem of Self” ಓದತೊಡಗಿದೆ. ಸ್ವಲ್ಪ ಮುಂದುವರಿಯುತ್ತಿದ್ದಂತೆ, ನನ್ನ ಕೊಟಡಿಯ ಬಾಗಿಲಿಗೆ ಎದುರಾಗಿದ್ದ ಸಂಪಗೆಮರದಲ್ಲಿ ಎರಡು ಹಕ್ಕಿಗಳ ಇಂಚರಾಲಾಪ ಕೇಳಿಬಂತು. ಅದನ್ನು ಆಲಿಸುತ್ತಾ ಎಂತಹ ಭಾವವಶನಾದೆನೆಂದರೆ ‘ಸಾಧನಾ’ ಗ್ರಂಥವನ್ನೂ ಮೀರಿಸುವ ಚಿಂತನಗಳಿಂದ ಮನಸ್ಸು ಆಕ್ರಮಿತವಾಯಿತು. ಧ್ಯಾನಮಗ್ನನಾಗಿ ಬಹಳ ಹೊತ್ತು ಕುಳಿತಿದ್ದು, ಈ ದಿನಚರಿಯ ಈ ಭಾಗವನ್ನು ಬರೆದೆ. ಮತ್ತೆ ಜೊಂಪು ಹತ್ತಿ ಮಲಗಿ ನಿದ್ರಿಸಿದೆ. ಏಳುವಾಗ ಅಪರಾಹ್ನ ಮೂರು ಗಂಟೆ ಆಗಿತ್ತು. ಆಮೇಲೆ ಪಬ್ಲಿಕ್‌ ಲೈಬ್ರರಿಗೆ ಹೋದೆ. ಯಾವ ವೃತ್ತಪತ್ರಿಕೆಯನ್ನೂ ಓದಲಿಲ್ಲ. ಸರ್ಕಾರ್ ಎಂಬುವರ ಬರೆದಿದ್ದ “Chaitanys’s Pilgrimages and Teachings” (ಚೈತನ್ಯದೇವನ ಯಾತ್ರೆ ಮತ್ತು ಉಪದೇಶ) ಎಂಬ ಪುಸ್ತಕ ತೆಗೆದುಕೊಂಡೆ. ೪ ಗಂಟೆಯಿಂದ ೭ ಗಂಟೆವರೆಗೆ ಎಂಬತ್ತೊಂದು ಪುಟ ಮಾತ್ರ ಓದಿದೆ. ಹಾಳೆಯ ಮೇಲೆ ಹಾಳೆ ಓದುತ್ತಾ ಹೋದಂತೆ ನಾನೂ ಒಬ್ಬ ಚೈತನ್ಯನಾಗುವ ಆವೇಶ ನನ್ನನ್ನಾವರಿಸಿತು. ಸುತ್ತ ಜನರಿಲ್ಲದಿದ್ದರೆ ನಾನೂ ಚೈತನ್ಯನೊಡನೆ ಹಾಡಿ ಕುಣಿದುಬಿಡುತ್ತಿದ್ದೆ. ಮೇಜು ನೆಲ ಮತ್ತು ಇತರ ವಸ್ತುಗಳ ಕಡೆ ನಿಟ್ಟಿಸಿದೆ. ಕಣ್ಣಿಟ್ಟ ಕಡೆಯೆಲ್ಲ ಪರಮ ಪುರುಷೋತ್ತಮನ ನಿರಾಕಾರ ಸಾಕಾರವೆ ಕಣ್ಣಿಗೆ ಬಿತ್ತು (Whereever I casted my eyes I saw the Supreme Being in a formless form.) ಆಲೋಚಿಸಿದೆ: ಪ್ರತಿಯೊಬ್ಬ ಮಹಾಪುರುಷನಿಗೂ ಒಬ್ಬೊಬ್ಬ ಗುರು ದೊರಕಿದ್ದಾನೆ; ನನ್ನ ಗುರು ಯಾರಾಗುತ್ತಾನೆ? ಮತ್ತೆ ನನಗೆ ನಾನೆ ನಕ್ಕುಬಿಟ್ಟೆ. ಹೇಳಿಕೊಂಡೆ: “ನೀನು ಎಲ್ಲೆಲ್ಲಿಯೂ ಇದ್ದೀಯೆ, ಹೇ ದೇವ ದೇವ. ನೀನೆ ನನ್ನ ಗುರು! ವಿವೇಕಾನಂದರು ಸಿಕ್ಕಿದ್ದಾರೆ, ರಾಮಕೃಷ್ಣರು ಸಿಕ್ಕಿದ್ದಾರೆ, ಚೈತನ್ಯ ಸಿಕ್ಕಿದ್ದಾನೆ, ಶಂಕರ ಸಿಕ್ಕಿದ್ದಾನೆ, ಇನ್ನೂ ಅನೇಕರು. ಅದಕ್ಕಿಂತಲೂ ಹೆಚ್ಚೇನು ಬೇಕು?” (Vivekananda I posses, Ramakrishna I posses, Chaitanya I posses, Shankar I posses and many more. What more do I want?) ಬೋಧಿಸುವ ಬುದ್ಧಿ ಬಹಳವಾಗಿದೆ ನನ್ನಲ್ಲಿ. ನನ್ನ ಸ್ನೇಹಿತನನ್ನು ಜೊತೆಗೂಡಿ ಅವನ ಹಾಸ್ಟಲಿಗೆ ಹೋದೆ, ದಾರಿಯಲ್ಲಿ ಭಕ್ತಿಯ ವಿಚಾರವಾಗಿ ಅನೇಕಾನೇಕವಾಗಿ ಪ್ರವಚಿಸುತ್ತಾ.”

೧೯೨೪ನೆಯ ಜನವರಿ ೫ನೆಯ ತಾರೀಖಿನ ದಿನಚರಿ. “ರಾತ್ರಿ ಚೆನ್ನಾಗಿ ನಿದ್ದೆ ಬರಲಿಲ್ಲ. ಹಾಸಗೆಯ ಮೇಲೆ ಹೊರಳಾಡುತ್ತ ಮಲಗಿದ್ದೆ, ಶ್ರೀಕೃಷ್ಣಚೈತನ್ಯ ಮತ್ತು ಇತರ ನನ್ನ ಮಹಾ ಮಹೋನ್ನತರೂ ವಿಶ್ವವ್ಯಾಪಿಗಳೂ ನಿತ್ಯಚೇತನಗಳೂ ಆಗಿರುವ ಗುರುಗಳನ್ನು ನೆನೆಯುತ್ತಾ. ನನಗೆ ಒಂದು ಕನಸು ಬಿತ್ತು; ನನ್ನ ತಾಯಿಯ ಬಳಿಗೆ ಹೋಗಿದ್ದೆ. ಆಕೆಯ ಕೃಪೆಯಿಂದ ಒಬ್ಬ ಮಹಾಪುರುಷನ ದರ್ಶನವಾಯಿತು. ಅವನು ಬೃಹದಾಕಾರನಾಗಿದ್ದ, ಆದರೂ ಸುಂದರವಾಗಿದ್ದ. ಸಾಮಾನ್ಯ ಮನುಷ್ಯರಿಗಿಂತ ನಾಲ್ಕು ಪಟ್ಟು ಎತ್ತರವಾಗಿದ್ದ. ಅವನು ಅಮರ್ತ್ಯವಾಗಿ ಪ್ರಕಾಶಿತನಾಗಿದ್ದ. ನನ್ನ ಕಡೆ ಕೈಬೀಸಿ ಕರೆದ. ಅವನು ಒಳ್ಳೆಯವನೊ ಅಲ್ಲವೊ ಅಸುರನೊ ಸುರನೊ ಯಾವುದನ್ನೂ ಗಣಿಸದೆ ಗೋಡೆ ಹತ್ತಿ ಬಳಿಗೆ ಹೋದೆ. ಮಾತೃಹೃದಯದಿಂದ ಮಾತಾಡಿಸಿದ. ಅವನ ಪಕ್ಕದಲ್ಲಿ ನಡೆಯುತ್ತಾ ನಾನೊಂದು ಕುಬ್ಜ(pigmy)ನಾಗಿದ್ದೆ, ಗಲಿವರನ ಪಕ್ಕದಲ್ಲಿ ಲಿಲಿಪುಟ್ಟನಿಗಿಂತಲೂ. ಉದ್ಯಾನದಲ್ಲಿ ಅವನ ಎಡೆಯಲ್ಲಿ ನಡೆಯುತ್ತಿದ್ದಾಗ ನನಗಾದ ಆನಂದವನ್ನು ವರ್ಣಿಸಲಾರೆ. ನಾವಿಬ್ಬರೂ ಸ್ವಲ್ಪ ದೂರ ನಡೆದಿದ್ದೆವು, ಅಷ್ಟರಲ್ಲಿ ಯಾರೊ ಕೆಲವರು ನಮ್ಮ ಕಡೆ ಬರುತ್ತಿದ್ದುದನ್ನು ಕಂಡೆವು. ಆಗ ಆ ಮಹಾವ್ಯಕ್ತಿ ನನಗೆ ಏನನ್ನೊ ಕೊಟ್ಟು ತಿನ್ನಲು ಹೇಳಿದನು. ಅದರ ಹೆಸರನ್ನೂ ಹೇಳಿದನು; ನಾನೂ ಕೇಳಿಸಿಕೊಂಡೆ; ಆದರೆ ಈಗ ಅದರ ನೆನಪು ಸರಿಯಾಗಿ ಆಗುತ್ತಿಲ್ಲ. ಆದರೂ ನಾನು ಊಹಿಸುವಂತೆ ಅದೊಂದು ಗಿಡಮೂಲಿಕೆಯ ಹೆಸರಾಗಿತ್ತು. ತರುವಾಯ ನಾವಿಬ್ಬರೂ ಅಗಲಿದೆವು-ಅಪರಾಹ್ನ ಮೂರು ಗಂಟೆಗೆ ಮುಕ್ತಾಯವಾಯಿತು. ನಾನು ಅನಂತರಾಮಯ್ಯ ಆತ್ಮಗಳು ಪ್ರೇತಗಳು ವೇದಾಂತ ಇದ್ಯಾದಿ ಕರಿತು ಮಾತನಾಡುತ್ತಾ ತಿರುಗಾಡಲು ಹೋದೆವು. ಕೊಟಡಿಗೆ ಹಿಂದಿರುಗುತ್ತಿದ್ದಾಗ ಭಿಕ್ಷುಕನನ್ನು ಎದುರುಗೊಂಡೆ; ಆದರೆ ಅಯ್ಯೊ! ಅವರಿಗೆ ಕೊಡಲು ನನ್ನ ಹತ್ತಿರ ದುಡ್ಡು ಇರಲಿಲ್ಲ. ಅವರಿಗೆ ಏನನ್ನಾದರೂ ಕಾಸು ಕೊಡಲು ನಿಶ್ಚಯಿಸಿದೆ; ಕೊಠಡಿಗೆ ಬಂದು, ವೀರಪ್ಪನ ಕೈಲಿ ಎರಡಾಣೆ ಕೊಟ್ಟು ಕಳಿಸಿದೆ, ಅವರಿಗೆಲ್ಲ ಹಂಚಲು. ನಾನೊಬ್ಬನೆ ತಾರಸಿಯಲ್ಲಿ ಓಡಾಡುತ್ತಾ, ನಾಳೆ ಪದ್ಮಪತ್ರ ಸಂಘದ ಸಭೆಯ ಪ್ರಾರಂಭದಲ್ಲಿ ಓದುವುದಕ್ಕೋಸ್ಕರ ‘Invocation’ ಎಂಬ ಕವನ ರಚನೆಗೆ ತೊಡಗಿದೆ. ಅದರ ರಚನೆಯ ಭಾವಾವೇಶದಲ್ಲಿರುವಾಗ ಭಗವಂತನ ವಿಶ್ವರೂಪ (The Infinite form of God) ನನ್ನನ್ನು ತಬ್ಬಿಬ್ಬಾಗಿಸಿತು! ನನ್ನ ಪ್ರೇಮಯನನ್ನು ಬಯ್ದು ಶಪಿಸುವಂತೆಯೂ ಮನಸ್ಸು ಓಲಿತು! ಆಗ ನಾನಿದ್ದ ಸ್ಥಿತಿಯನ್ನು ಭಾಷೆ ಬಣ್ಣಿಸಲಾರದು. ಆದರೆ ಬಹುಬೇಗನೆ ಅನಂತತಾರೂಪವನ್ನು ತಿರಸ್ಕರಿಸಿಬಿಟ್ಟೆ. ಆಗ ಬಾಲಕೃಷ್ಣನ ಮಧುರ ರೂಪ ನನ್ನ ಮುಂದೆ ಮೈದೋರಿತು, ನನ್ನನ್ನು ಸಮಾಧಾನಪಡಿಸುತ್ತಾ ನನ್ನೆದುರು ಕುಣಿಯುತ್ತಾ ನಲಿಯುತ್ತಾ ನಗುತ್ತಾ (Stood before me consoling, playing, dancing and smiling at me).”

ಅಂದಿನ ಕವಿಪ್ರಜ್ಞೆ ತನ್ನ ಆಧ್ಯಾತ್ಮಿಕ ಅಭೀಪ್ಸೆಯನ್ನು ಹೀಗೆ ಅಭಿವ್ಯಕ್ತಿಗೊಳಿಸಿದೆ, ೫.೧.೧೯೨೪ರಲ್ಲಿ ರಚಿತವಾದ ಆ ‘Invocation’ ಎಂಬ ಕವನದಲ್ಲಿ:

O Lover of My soul, when thy infinite
form stands before me with the might of
the Present, the Future and the Past, beyond
Space and Time, my locks flutter in anxiety,
my eyes stand still in silent adoration;
my heart throbs with an aweful delight
and I forget to bow down before thee.

Then a thrill of sweet horror-such as
flowers feel when the flower-culler goes to
pluck them, shivers my frame. I blindly
grope in blazing splendour of thy glory!
Again O my sweet lover, when thy sweet
Form stands before me with Cowherd’s flute.
my vanity veils thy glory and I fail
to make obeisance to thee.

When thou playest with me I only
attend to thy play; when thou singest the
symphony steals my heart; when thou
dancest I will be unconscious, and I
recognize thee not.

O lover, grant me the vision supreme
and blest that I may see thee in
everything, in bliss and woe, in pleasure and
pain, in life and deth.

ಜನವರಿ ೬ನೆಯ ಭಾನುವಾರದ ದಿನಚರಿ:

“ಅಮಾವಾಸ್ಯೆಯ ದಿನ ಅಭ್ಯಂಜನ ಮಾಡಬಾರದು ಎಂದು ಕೆಲವರು ನಿಷೇಧಿಸಿದರೂ ನಾನು ಎಣ್ಣೆಸ್ನಾನ ಮಾಡಿ, (ಭಾನುವಾರದ ಹಕ್ಕು) ಕೊಟಡಿಗೆ ಬಂದು, ಎರಡು ತುಪ್ಪದ ದೋಸೆ ತರಿಸಿದೆ. ನಾನೊಬ್ಬನೆ ಇದ್ದೆ. ನಾನು ತಿನ್ನಲು ಶುರು ಮಾಡಲು ಕುಚೇಷ್ಟೆಯ ಶ್ರೀ ಬಾಲಕೃಷ್ಣನು ಬಂದು ನನ್ನ ಎದುರು, ಕೊಳಲು ಹಿಡಿದು ಬಲಗೈ ಊರಿ, ಒರಗಿದಂತೆ ಕುಳಿತನು. ಮುಗುಳುನಗುತ್ತಿದ್ದನು. ಅವನ ಸಾನ್ನಿಧ್ಯ ನನಗೆ ತುಂಬ ಹರ್ಷದಾಯಕವಾಗಿತ್ತು. ಸಲುಗೆಯ ಮಾತುಗಳಿಂದ ಅವನನ್ನು ಕೇಳಿಕೊಂಡೆ ‘ದೋಸೆ ತಿನ್ನುವುದನ್ನು ಮೊದಲು ನೀನೆ ಪ್ರಾರಂಭಿಸು’ ಎಂದು. ಅವನು ಒಪ್ಪಲಿಲ್ಲ. ನಾನೆ ದೋಸೆಯ ಒಂದು ಚೂರನ್ನು ಕಿತ್ತು ಅವನ ಬಾಯಿಯ ಬಳಿಗೆ ಒಯ್ದೆ ತಿನ್ನಿಸಲೆಂದು ಆದರೆ ಅವನು ಹಿಂದು ಹಿಂದಕ್ಕೆ ಸರಿದುಬಿಟ್ಟ. ನನಗೆ ಮುನಿಸು ಬಂದು, ಕೊಟಡಿಯಿಂದಾಚೆಗೆ ನಡಿ ಎಂದು ಆಜ್ಞೆಮಾಡಿದೆ. ಅವನು ಮಾತ್ರ ನಗುತ್ತಲೆ ಅಲ್ಲೆ ಇದ್ದನು. ಅವನಿಗೆ ಕೊಡಲೆಂದು ಹಿಡಿದಿದ್ದ ಚೂರನ್ನು, ನಾನು ಅವನಿಗೆ ತಿನ್ನಿಸಬೇಕೆಂದಿದ್ದು ನಾನು ಬಾಯಿಗೆ ಹಾಕಿಕೊಂಡಿದ್ದ ಚೂರನ್ನೆ! ಎಡಗೈಯಿಂದ ಕೊಳಲು ಹಿಡಿದಿದ್ದ ಬಲಗೈಯನ್ನು ಊರಿ ಬಾಲಲೀಲೆಯಿಂದ ಓರೆಯಾಗಿ ಕುಳಿತೆ ಇದ್ದ. ಹಾಗೆ ನಾನು ಅವನೂ ಏಕಕಾಲದಲ್ಲಿ ದೋಸೆಗಳನ್ನೆಲ್ಲ ತಿಂದೆವು. ನಮ್ಮ ಆನಂದ ಮಾತಿಗೆ ಮೀರಿತ್ತು. ನಡುವೆ ನಾನು ಅವನಿಗೊಂದು ಏಟುಕೊಟ್ಟು ಲಂಬೋದರ (ದೊಡ್ಡ ಹೊಟ್ಟೆ) ನವನೀತ ಚೋರ (ಬೆಣ್ಣೆ ಕಳ್ಳ) ಎಂದು ಕರೆಯಬೇಕೆಂದಿದ್ದೆ. ನಾನು ಎರಡೇ ದೋಸೆ ತರಿಸಿದ್ದೆ. ಅವನೂ ಎರಡು ತಿಂದ, ನಾನೂ ಎರಡು ತಿಂದಿದ್ದೆ. ಸುಖವೋ ಪರಾಕಾಷ್ಠೆಯನ್ನೆದಿತ್ತು. ನಾನು ಒಂದು ದೊಡ್ಡ ಚೂರನ್ನು ತೆಗೆದುಕೊಂಡಾಗ ಆ ಹುಡುಗನೂ ಅಂತಹುದೇ ಒಂದು ದೊಡ್ಡ ಚೂರನ್ನು ತೆಗೆದುಕೊಳ್ಳುತ್ತಿದ್ದ. ಅಂತೂ ಕಡೆಗೆ ದೋಸೆಗಳು ಮಾಯವಾಗಿದ್ದವು! ದೋಸೆಗಳನ್ನು ಕಟ್ಟಿದ್ದ ಕಾಗದ ಮತ್ತು ಎಲೆಗಳನ್ನು ಎಸೆಯಲು ಹೇಳಿದೆ. ಆದರೆ ಅವನು ತುಂಟಗಣ್ಣು ಮಾಡಿ ಒಲ್ಲೆ ಎಂದುಬಿಟ್ಟನು. ‘ಆಗಲಿ, ಕೃಷ್ಣ, ನೀನು  ಮತ್ತೆ ಬಂದರೆ ನಿನಗೂ ಹಾಗೆ ಮಾಡುತ್ತೇನೆ” ಎಂದೆ. ಹಾಗೆ ಹೇಳುತ್ತಾ ಎಲೆಕಾಗದಗಳನ್ನು ಕೈಗೆ ತೆಗೆದುಕೊಂಡೆ; ಅವನೂ ತೆಗೆದುಕೊಂಡ. ನಾನು ಎಸೆದಾಗ ಅವನೂ ಎಸೆದ. ಅವು ಒಂದೇ ಜಾಗದಲ್ಲಿ ಬಿದ್ದು, ಒಂದಾದವು. ಅವನು ನನ್ನ ಕಡೆ ನೋಡುತ್ತಾ ನಗುತ್ತಾ ನಿಂತಿದ್ದ. ನಾನು ನಡೆದ ಇದನ್ನೆಲ್ಲ ಬರೆಯಲು ಡೈರಿ ತೆಗೆದುಕೊಂಡೆ. ಅವನು ಹೇಳಿದ “ಬರೆಯಬಾರದು!” ನಾನು ಲೆಕ್ಕಿಸಲಿಲ್ಲ, ಹೇಳಿದೆ ‘ನಿನ್ನ ತಂಟೆಯ ಆಟವನ್ನು ಎಲ್ಲರಿಗೂ ತೋರಿಸುತ್ತೇನೆ’ ನಾನು ಇದನ್ನೆಲ್ಲ ಬರೆಯುತ್ತಿದ್ದಾಗ ಅವನು ಕುತ್ತಿಗೆ ಚಾಚಿ ನೋಡುತ್ತಲೆ ಇದ್ದ ಇದರ ಕಡೆಯೆ. ‘ನೀನೆ ನೋಡುತ್ತಿದ್ದೀಯಲ್ಲಾ? ಹೇಳು, ಇದೆಲ್ಲ ಸುಳ್ಳೊ ನಿಜವೊ?’ ಎಂದೆ…

ಇವೊತ್ತಿನ ಸಭೆಗೆ ಭಾಷಣಕಾರನೆ ಬರಲಿಲ್ಲ. ನಾನೆ ಭಾಷಣ ಮಾಡಿದೆ. ಆರು ಗಂಟೆ ಹೊತ್ತಿಗೆ ನಾವು ತಿರುಗಾಟಕ್ಕೆ ಹೊರಟೆವು, ದಾರಿಯಲ್ಲಿ ಇಂಗ್ಲಿಷ್ ಮತ್ತು ದೇಶ ಭಾಷೆಗಳ (vernaculars) ವಿಚಾರ ಮಾತಾಡುತ್ತಾ.”

ಜನವರಿ ೭ನೆಯ ಸೋಮವಾರದ ದಿನಚರಿ:

“ನನ್ನ ಕವನಗಳ ಹಸ್ತಪ್ರತಿಯೊಡನೆ ಹೆಡ್‌ ಮಾಸ್ಟರ್ ಮನೆಗೆ ಹೋಗಿದ್ದೆ. ಹಸ್ತ ಪ್ರತಿಯನ್ನು ಅವರಲ್ಲಿಯೆ ಬಿಟ್ಟುಬಂದಿದ್ದೇನೆ. ಅವರು ನನ್ನ ಕವನಗಳನ್ನು ಮೆಚ್ಚಿಕೊಂಡು, ಅವನ್ನು ಪ್ರಕಟಿಸುವಂತೆ ನನಗೆ ಹೇಳಿದರು.

(ವೆಸ್ಲಿಯನ್ ಮಿಶನ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಸುಬ್ಬಕೃಷ್ಣಯ್ಯನವರು. ಅವರು ಥಿಯಾಸೊಫಿ ಸಂಘಕ್ಕೂ ಸೇರಿದವರಾಗಿದ್ದರು. ಯಾವ ಕವನಗಳನ್ನು ನೋಡಿ ಮುಂದೆ ಕಸಿನ್ಸ್‌ ಅವರು ಕನ್ನಡದಲ್ಲಿ ಬರೆಯುವಂತೆ ಸೂಚನೆ ಕೊಟ್ಟರೂ ಆ ಕವನಗಳನ್ನೇ ಇವರು ಶ್ಲಾಘಿಸಿ ಅಚ್ಚುಹಾಕಿಸುವಂತೆ ಹೇಳಿದ್ದು. ನಮ್ಮವರ ಹಾಸ್ಯಬುದ್ದಿಗೂ ಸ್ವತಂತ್ರದೇಶದವರ ಸ್ವತಂತ್ರಬುದ್ಧಿಗೂ ಇರುವ ವ್ಯತ್ಯಾಸವೆ ಅದು!) ಹತ್ತು ಗಂಟೆಗೆ ರೂಮಿಗೆ ಬಂದೆ. ಬಸವರಾಜು, ಪುಪ್ಪಣ್ಣ ಮತ್ತು ಇತರರು ಬಂದರು. ಸುಮಾರು ಅಪರಾಹ್ನ ಎರಡು ಗಂಟೆಯ ಸಮಯದಲ್ಲಿ ನಾನು ಮಾತನಾಡುತ್ತಿದ್ದಾಗ ‘ಪ್ರೇತಸಿದ್ಧಾಂತ’ (theory of spirits) ಪ್ರಸ್ತಾಪಕ್ಕೆ ಬಂತು. ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮಟ್ಟದಲ್ಲಿರಲಿಲ್ಲ ನನ್ನ ಮಿತ್ರು. ಅವರನ್ನು ಮನಗಾಣಿಸುವುದು ನನಗೆ ಪ್ರಯಾಸಕರವಾಯ್ತು. ಒಂದು ಸಮಸ್ಯೆ ನನ್ನನ್ನು ಪೀಡಿಸಿತು. ಅವರೆಲ್ಲ ಬೀಳ್ಕೊಂಡಮೇಲೆ ನಾನೊಬ್ಬನೆ ಕುಳಿತು ಶ್ರೀಕೃಷ್ಣನನ್ನೂ ಸ್ವಾಮಿ ವಿವೇಕಾನಂದರನ್ನೂ ಇತರರನ್ನೂ ನನ್ನ ನೆರವಿಗೆ ಬರುವಂತೆ ಬೇಡಿಕೊಂಡೆ. ಚೆನ್ನಾಗಿ ಅತ್ತೂಬಿಟ್ಟೆ. ಬೆಳಿಗ್ಗೆ ಒಂದು ಥಿಯಾಸೊಫಿಯ ಪುಸ್ತಕದಲ್ಲಿ ‘ಶ್ರೀಕೃಷ್ಣನು Logas ಮಾತ್ರನೆಂದೂ ಪರಬ್ರಹ್ಮದ ಅಂಶಮಾತ್ರವೆಂದೂ ಓದಿದ್ದು, ಈ ಹಾಳು ಮಂದಿ ಸಮಸ್ಯೆಯನ್ನು ಬಿಡಿಸುತ್ತೇವೆ ಎಂದು ಹೊಸ ಹೊಸ ಪದಗಳನ್ನು ನೆಯ್ದು ವಿಷಯವನ್ನು ಮತ್ತೂ ಜಟಿಲವನ್ನಾಗಿ ಮಾಡಿ, ಜೀವನಿಗೂ ದೇವನಿಗೂ ಇರುವ ಅಂತರವನ್ನು ಇನ್ನೂ ದೂರಾಂತರವನ್ನಾಗಿ ಮಾಡುತ್ತಾರಲ್ಲಾ ಎಂದು ನನ್ನ ಮನಸ್ಸು ರೇಗಿ ಹುಚ್ಚೆದ್ದು ಹೋಗಿತ್ತು. ತುಸು ಸಿಟ್ಟಿನಿಂದಲೆ ರೂಮಿನಿಂದ ಹೊರಬಿದ್ದು ಏಕಾಂತ ಸ್ಥಳಕ್ಕಾಗಿ ಚಾಮುಂಡಿಬೆಟ್ಟದ ತಪ್ಪಲಿಗೆ ಅಭಿಮುಖವಾಗಿ ಬೀದಿಯಲ್ಲಿ ಸರಸರನೆ ನಡೆದೆ. ದಾರಿ ಸೀಳುತ್ತಿರುವಂತೆ ಭಾಸವಾಗಿ ಸಿಟ್ಟಿಗೆ ಒಂದೆರಡು ಸಾರಿ ರಸ್ತೆಯನ್ನು ಒದ್ದೂ ಬಿಟ್ಟೆ. ಹೋಗುತ್ತಾ ಒಮ್ಮೆ ಅತ್ತು, ಕೃಷ್ಣನನ್ನೂ ಕಡೆಗೆ ಪೂಜ್ಯರಾದ ನನ್ನ ಸ್ವಾಮಿ ವಿವೇಕಾನಂದರನ್ನೂ ತರಾಟೆಗೆ ತೆಗೆದುಕೊಂಡೆ. ಅಷ್ಟರಲ್ಲಿ ಒಂದು ಸಂಗತಿ ಜರುಗಿತ್ತು. ಒಂದು ಹಕ್ಕಿ ಮರದಲ್ಲಿ ಹಾಡುತ್ತಿದ್ದುದು ಕೇಳಿಸಿತು, ಹಕ್ಕಿ ಮಾತ್ರ ಕಾಣುತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆ ಬುದ್ಧಿಗೆ ಹೊಳೆಯಿತು: ಶ್ರೀಕೃಷ್ಣನೆ ಆ ರೂಪದಲ್ಲಿ ನನ್ನನ್ನು ಸಾಂತ್ವನಗೊಳಿಸಲು ಬಂದಿದ್ದಾನೆ ಎಂದು. ಏನೊ ಒಂದು ರಸಾನಂದ ನನ್ನ ಚೇತನವನ್ನು ತುಂಬಿತು. ಹಕ್ಕಿಯನ್ನು ನೋಡಲಾಗದಿದ್ದರೂ ಹಾಡಿನಿಂದ ಅದರ ಅಸ್ತಿತ್ವವನ್ನರಿಯಬಹುದು ಎಂದು. ಜೇಬಿನಲ್ಲಿ ಭಗವದ್ಗೀತೆ ಇತ್ತು.

ಒಂದೆರಡು ಫರ್ಲಾಂಗು ಮುಂದೆ ಹೋಗಿ ಒಂದು ಹೂವಿನ ಪೊದೆಯ ಪಕ್ಕದಲ್ಲಿ ಕುಳಿತು ಎರಡು ಮೂರು ಶ್ಲೋಕಗಳನ್ನು ಓದಿದೆ: ‘ಕೆಲವರು ವೇದಗಳನ್ನು ಓದಿ ತಪ್ಪಾಗಿ ಅರ್ಥಮಾಡಿ ಅನರ್ಥಕರವಾಗಿ ಬೋಧಿಸುತ್ತಾರೆ.’ ಹಾಗೆಯೆ ಆಲೋಚಿಸಿದೆ, ಥಿಯಾಸೊಫಿಗಳು ಮೂರ್ಖರು! ಏಕೆಂದರೆ, ಭಗವಂತನಿಗೂ ನಮಗೂ ಇರುವ ಅಂತರವನ್ನು ಹೆಚ್ಚಿಸುತ್ತಾರೆ.

ಜನವರಿ ೮ನೆಯ ಮಂಗಳವಾರದಂದು ದಿನಚರಿಯ ಸಾರಾಂಶ:

“ಬೆಳಿಗ್ಗೆ ಗೋಪಾಲಕೃಷ್ಣ ಶೆಟ್ಟಿ ಅವರೊಡನೆ ಭಗವದ್ಗೀತೆಯನ್ನು ಕುರಿತು ಸಂವಾದಿಸಿದೆ. ಟಿ.ರಾಮಯ್ಯ ಅವರ ಮನೆಯ ಪೂಜಿಗೆ ಆಹ್ವಾನಿಸಿದರು. ನಮ್ಮ ಸಭೆ ಮೂರು ಗಂಟೆಗೆ ಮೊದಲಾಯ್ತು. ಚೆನ್ನಾಗಿ ನಡೆಯಿತು. ಎಲ್ಲರೂ ಕನ್ನಡದಲ್ಲಿಯೆ ಮಾತಾಡಿದರು. ತುಂಬ ಸೊಗಸಾಗಿತ್ತು. “ಸಂಜೆ ಐದು ಗಂಟೆಗೆ ರಾಮಯ್ಯನ ಕೊಟಡಿಗೆ ಹೋದೆವು. ಭಜನೆ ಕೀರ್ತನೆ ಹರಟೆಗಳಲ್ಲಿ ಬಹಳ ಕಾಲ ಕಳೆದೆವು. ಪ್ರಸಾರೂಪವಾಗಿ ಎಲ್ಲರಿಗೂ ಕೊಬ್ಬರಿಸಕ್ಕರೆ ಪೊಟ್ಟಣಗಳನ್ನೂ ಬಾಳೆಹಣ್ಣಿನ ರಸಾಯನವನ್ನೂ ಹಂಚಿದರು. ಬೀಳ್ಕೊಂಡು ಕೊಟಡಿಗೆ ಹೊರಟೆವು. ದಾರಿಯಲ್ಲಿದ್ದ ಭಿಕ್ಷುಕರಿಗೆ ನನ್ನ ಪ್ರಸಾದದ ಪೊಟ್ಟಣಗಳನ್ನು ಕೊಡಬೇಕೆಂದು ಮನಸ್ಸಾಯಿತು. ಆದರೆ ಗೆಳೆಯರು ಜೊತೆಯಲ್ಲಿದ್ದವರು ಏನೆಂದು ಹೇಳುತ್ತಾರೊ ಎಂದು ಅಂಜಿದೆ. ಒಂದಕ್ಕೆ ಕೂತುಕೊಳ್ಳುವಂತೆ ನಟಿಸಿದೆ. ಅವರೆಲ್ಲ ಮುಂದೆ ಹೋದರು. ಅವರಿಗೆ ಗೊತ್ತಾಗದಂತೆ ಭಿಕ್ಷುಕಿಯರಿಗೆ ಪೊಟ್ಟಣಗಳನ್ನು ಕೊಟ್ಟೆ. ಕೊಟ್ಟವನ ಸಂತೋಷ ಕೊಂಡವರ ಸುಖಕ್ಕಿಂತ ಹೆಚ್ಚಾಗಿತ್ತು! ಧರ್ಮ ಕೊಡುವುದು ಸಕ್ಕರೆಗಿಂತ ಸಿಹಿ ಎಂದು ಭಾವಿಸಿದೆ. (I thought that charity is sweeter than sugar!) ನನ್ನೆದುರು ಶ್ರೀಕೃಷ್ಣ ನಿಂತಿದ್ದನು ಮುಗುಳುನಗುತ್ತಾ: ಅವನೇ ಧರ್ಮ ಕೊಟ್ಟವನು ಎಂದರಿತೆ. ಆ ಸಂಗತಿಯನ್ನು ಯಾರಿಗೂ ತಿಳಿಸಲಿಲ್ಲ. ಎಚ್‌.ಎಸ್‌.ಮಂಜಪ್ಪಗೌಡರಿಂದ ಒಂದು ಕಾಗದ ಬಂತು.”

ಜನವರಿ ೯ನೆಯ ಬುಧವಾರದ ದಿನಚರಿ:

“ಇವೊತ್ತು ತರಗತಿಗಳು ಪ್ರಾರಂಭವಾದುವು. ವಿಶೇಷವೇನೂ ನಡೆಯಲಿಲ್ಲ. ಸ್ಕೂಲ್ ಪ್ರಾರಂಭದ ದಿನವಾದ್ದರಿಂದ ೧೧ ಗಂಟೆಗೇ ರಜಾ ಘೋಷಿಸಿದರು. ‘On the Reopening Day of the School’ ಎಂಬ ಒಂದು ಸಾನೆಟ್‌ ಬರೆಯಬೇಕೆಂದಿದ್ದೇನೆ. ದಿನವೆಲ್ಲ ಬರಿಯ ಸ್ಥೂಲ ವಿಷಯಗಳಲ್ಲಿಯೆ ಕಳೆಯಿತು. ಅತಿಶಯದ ಆಲೋಚನೆ ಯಾವುದೂ ತಲೆಗೆ ಬರಲಿಲ್ಲ. ಸಾಯಂಕಾಲ ಆರು ಗಂಟೆಯ ಮೇಲೆ ಒಬ್ಬನೆ ಹಾರ್ಡಿಂಜ್‌ ಸರ್ಕಲಿನಲ್ಲಿದ್ದಾಗ ಸಂಗೀತವನ್ನು ಆಲಿಸುತ್ತಾ ಇದ್ದೆ. ಹಠಾತ್‌ ಬಾಲಕೃಷ್ಣನ ಸಾನ್ನಿಧ್ಯಾನುಭವವಾಯಿತು! ಕೊಟಡಿಗೆ ಬಂದು ಅಧ್ಯಯನ ಮಾಡಬೇಕಾಗಿದ್ದ ಪಠ್ಯಪುಸ್ತಕಗಳ ರಾಶಿಯನ್ನು ಖಿನ್ನದೃಷ್ಟಿಯಿಂದ ಅವಲೋಕಿಸಿದಾಗ ಆಲೋಚಿಸಿದೆ. ‘ಈ ತರಹದ ವಿದ್ಯಾಭ್ಯಾಸ ನನಗೆ ಯೋಗ್ಯವಲ್ಲ’ ಎಂದು….ಓ ದೊರೆಯೆ, ಜಗತ್ತಿನ ಅಪಾಯಗಳನ್ನು ಎದುರಿಸುವ ಧೈರ್ಯವನ್ನು ದಯಪಾಲಿಸಲು. ನಿನ್ನೆದುರು ಹಸುಳೆಯಂತೆ ನಿಲ್ಲುವ ಸಾರ್ಮರ್ಥ್ಯವನ್ನು ನೀಡು.”

ಜನವರಿ ೧೦ನೆಯ ಗುರುವಾರದ ದಿನಚರಿ:

“ಸ್ಕೂಲಿನಲ್ಲಿ ಫೀಸ್‌ ವಾಪಸು ಮಾಡುವುದಾಗಿ ನೋಟಿಸ್‌ ಕಳಿಸಿದರು. ನನಗೆ ಬರಬೇಕಾದ ಹನ್ನೆರಡು ರೂಪಾಯಿ ಈಸಿಕೊಂಡು ಕೊಟಡಿಗೆ ಬಂದೆ. ಎರಡಾಣೆಯನ್ನು ಭಿಕ್ಷುಕರಿಗೆ ಕೊಡುವುದಕ್ಕಾಗಿಯೂ ಮತ್ತು ಎರಡಾಣೆಯನ್ನು ತಿಂಡಿ ತೆಗೆದುಕೊಳ್ಳುವುದಕ್ಕಾಗಿಯೂ ತೆಗೆದುಕೊಂಡೆ. ಒಮ್ಮೆ ವಾಕ್‌ ಹೋಗಲು ಮನಸ್ಸಾಯಿತು; ಮತ್ತೆ ಲೈಬ್ರರಿಗೆ ಹೋಗಲು ಮನಸ್ಸು ಮಾಡಿದೆ. ಅಂತೂ ಲೈಬ್ರರಿಗೇ ಹೋದೆ. ‘Chaitanya’s Pilgrimage and Teachings’ ತೆಗೆದುಕೊಂಡೆ. ಕೆಲದಿನಗಳ ಹಿಂದೆ ಓದಿ ಬಿಟ್ಟಿದ್ದ ೮೧ನೆಯ ಪುಟದಿಂದ ೧೩೩ನೆಯ ಪುಟದವರೆಗೆ ಓದಿದೆ. ನನ್ನ ಚೇತನಕ್ಕೆ ತುಂಬಿಬಂದ ಆ ಪೂರ್ಣಪ್ರವಾಹವನ್ನು ನಾನು ವರ್ಣಿಸಲಾರೆ. (I cannot describe the full flood of my soul) ಇತ್ತೀಚೆಗೆ ಬಾಲಕೃಷ್ಣನು ಸದಾ ನನ್ನ ಬಳಿಯೆ ಇರುತ್ತಾನೆ. ಆ ತುಂಟ ಕೃಷ್ಣನ ರೂಪದಲ್ಲಿಯೆ ಚೈತನ್ಯದೇವನು ನನ್ನ ಮುಂದೆ ನಿಂತನು. ‘ಅದೆಲ್ಲವೂ ನಿನ್ನದೆ ಲೀಲೆ’ ಎಂದು ನಾನು ಕೃಷ್ಣನಿಗೆ ‘ಅಂದೆ’. (chid). ಅವನು ಸುಮ್ಮನೆ ಮುಗುಳುನಕ್ಕನಷ್ಟೆ, ಮಗುವಿನಂತೆ. ಪುಸ್ತಕ ಓದುತ್ತಿದ್ದಂತೆಯೆ, ಸ್ಕೂಲಿನ ನೆನಪಾಗಿ, ನಾನು ಅಧ್ಯಯನ ಮಾಡಬೇಕಾದ ವಿಷಯಗಳು ಪರ್ವತಾಕಾರವಾಗಿ ನಿಂತುವು. ಈ ಆಧುನಿಕ ನೀರಸ ಪಠ್ಯಪುಸ್ತಕಗಳನ್ನು ಓದುವುದಕ್ಕಿಂತಲೂ ಸುಲಭವಾಗಿ ಏಕಕಾಲದಲ್ಲಿ ಹರ್ಕ್ಯುಲಿಸ್‌ ಮತ್ತು ಜಯಂಟ್‌ ಅಟ್ಲಾಸ್‌ ಇಬ್ಬರನ್ನೂ ಒಟ್ಟಿಗೆ ಎದುರಿಸಬಲ್ಲೆನೆಂದು ತೋರಿತು! ನನ್ನ ಪಕ್ಕದಲ್ಲಿಯೆ ಕುಳಿತಿದ್ದ ಬಾಲಕೃಷ್ಣ ಹೇಳಿದ ‘ಅದೂ ನನ್ನ ಲೀಲೆಯೆ’ ನಾನು ಹೇಳಿದೆ ‘ಪರೀಕ್ಷೆ ಪಾಸುಮಾಡಲು ನೀನು ನನಗೆ ನೆರವಾಗಬೇಕು’ ಅವನೆಂದ: ‘ಲೋಕದ ಪರೀಕ್ಷೆಯಲ್ಲಿ ಪಾಸಾಗು ಮೊದಲು, ಹಾಗಾದರೆ ಎಲ್ಲ ಪಾಸಾದಂತೆ.’ ತಟಕ್ಕನೆ ನನಗೆ ಸತ್ಯೋದಯವಾದಂತಾಯಿತು: ಯಾವುದಕ್ಕೂ ದುಃಖಿಸಬಾರದು! ಏಕೆಂದರೆ ಎಲ್ಲವೂ ಲೀಲೆ. ಸ್ವಾಮೀ, ನನ್ನಿಂದ ಎಲ್ಲವನ್ನೂ ಕಸಿದುಕೊ ಬೇಕಾದರೆ, ಆದರೆ ನಿನ್ನ ಪ್ರೀತಿಯನ್ನು ದಯಪಾಲಿಸು. ಕೊಟಡಿಗೆ ಹಿಂತಿರುಗುವಾಗ ದಾರಿಯಲ್ಲಿ ಭಿಕ್ಷುಕರಿಗೆ ದುಡ್ಡು ಕೊಟ್ಟೆ; ಆದರೆ ನಾನು ಕೊಟ್ಟದ್ದನ್ನು ದಾನವೆಂದು ಭಾವಿಸಲಿಲ್ಲ, ಏಕೆಂದರೆ ನಾನು ಪ್ರತಿಜ್ಞೆ ಮಾಡಿದ್ದಂತೆ ಅವರಿಗೆ ಇನ್ನೂ ಒಂದು ರೂಪಾಯಿ ಒಂದು ಆಣೆ ಸಲ್ಲುವುದಿತ್ತು.”

ಜನವರಿ ೧೧ನೆಯ ತಾರೀಖಿನ ದಿನಚರಿ:

“ಸಂಜೆ ೪ ಗಂಟೆಗೆ ಕ್ಲಾಸ್‌ ಪೂರೈಸಿತು. ಕೊಟಡಿಗೆ ಬಂದು, ಕಾಫಿ ತಿಂಡಿಗೂ ಭಿಕ್ಷೆ ಕೊಡುವುದಕ್ಕೂ ಸ್ವಲ್ಪ ದುಡ್ಡು ತೆಗೆದುಕೊಂಡು ಹೊರಕ್ಕೆ ಹೊರಟೆ. ಪಬ್ಲಿಕ್‌ ಲೈಬ್ರರಿಗೆ ಹೋಗಿ, ಚೈತನ್ಯನ ಜೀವನಚರಿತ್ರೆಯನ್ನು ತೆಗೆದುಕೊಂಡು, ೧೫೯ ಪುಟಗಳನ್ನು ಓದಿದೆ. ಎಚ್‌.ಎಸ್‌.ಶಿವರಾಮ್‌ ಅಲ್ಲಿಗೆ ಬಂದರು. ‘Talks with the Dead’ (ಸತ್ತವರೊಡನೆ ಸಲ್ಲಾಪ) ಪುಸ್ತಕವನ್ನು ತಂದು ಓದತೊಡಗಿದರು. ಅವರಿಗೆ ಅದು ಹಿಡಿಸಲಿಲ್ಲ. ನಾನೆ ತೆಗೆದುಕೊಂಡು ಓದತೊಡಗಿದೆ. ಓದುತ್ತಾ ಹೋದ ಹಾಗೆಲ್ಲ ನನ್ನ ಕುತೂಹಲ ಹೆಚ್ಚಿತು. ಹಿಂದೂದರ್ಶನದ ಪ್ರಕಾರ ಪರಿಪೂರ್ಣತೆಗೆ ಏರಿದ ಜೀವಾತ್ಮವು ಪರಬ್ರಹ್ಮದಲ್ಲಿ ಐಕ್ಯವಾಗಿ ಪರಮಾನಂದ ಸ್ಥಿತಿಯಲ್ಲಿರುತ್ತದೆ. ಬೇರೆಯಾದ ಲೋಕಕ್ಕೆ ಹೋದರೂ ಅದರಿಂದ ನಾವು ಮತ್ತೆ ಪತನಹೊಂದಿ ಭೂಲೋಕಕ್ಕೆ ಇಳಿಯಲೇ ಬೇಕಾಗುತ್ತದೆ. ಆ ಪುಸ್ತಕ ಓದುತ್ತಾ ಮುಂದುವರದಂತೆಲ್ಲ ನಾನು ಇದುವರೆಗೆ ನಮ್ಮ ಪ್ರಾಚೀನ ಮಹಾಋಷಿಗಳಿಗೆ ಸಮನೆಂದು ಭಾವಿಸಿದ್ದ ಮಹಾವ್ಯಕ್ತಿಗಳೆಲ್ಲ ಒಬ್ಬರಾದ ಮೇಲೆ ಒಬ್ಬರಂತೆ ಕೆಳಗಿಳಿಯತೊಡಗಿದರು. ಲಾಂಗ್‌ ಫೆಲೊ, ಷೆಕ್ಸ್‌ಪಿಯರ್‌, ಚಾರ್ಲ್ಸ್‌ಕಿಂಗ್‌ಸ್ಲೀ, ಕಾರ್‌ಲೈಲ್‌ ಇತ್ಯಾದಿಯರು ಒಬ್ಬೊಬರೆ ‘ಪ್ರೇತ’ (spirits) ಗಳಂತೆ ಬರತೊಡಿದರು. ಲಾಂಗ್‌ಫೆಲೊ ತಾನು ಕಾಲರಿಜ್‌ ಮತ್ತು ಷೆಲ್ಲಿಯನ್ನು ಸಂಧಿಸಿದುದಾಗಿ ಹೇಳಿದನು; ಅಲ್ಲದೆ ಆ ಲೋಕದಲ್ಲಿಯೆ, ಷೆಕ್ಸ್‌ಪಿಯರ್‌ ‘ನಾನು, ಬೆನ್‌ಜಾಸನ್‌ ಮತ್ತು ಇತರ ಅನೇಕರು ಒಟ್ಟಿಗೆ ಇದ್ದೇವೆ, ಎಂದೂ, ಆದರೆ ಷೆಲ್ಲಿ, ಕಾಲರಿಜ್‌ ಮತ್ತು ಇತರ ಅನೇಕರು ನನಗಿಂತಲೂ ಕೆಳಗಿನ ಲೋಕದಲ್ಲಿದ್ದಾರೆ ಎಂದೂ ರಾಬರ್ಟ್‌ ಸದೇ (Robert Southey) ವಿಷಯ ಕೇಳಿದ್ದೇನೆ. ಅವನಲ್ಲಿ ನನಗೆ ತುಂಬ ವಿಶ್ವಾಸ. ಭೂಮಿಯ ಸುತ್ತಲೂ ಲೋಕಗಳು, ಶನಿಗ್ರಹವನ್ನು ಸುತ್ತುವರಿದಿರುವ ಉಂಗುರಗಳಂತೆ, ಒಂದರ ಮೇಲೊಂದು ಸುತ್ತಿ ಆವರಿಸಿವೆ” ಎಂದೂ ಮತ್ತು ‘ನ್ಯೂಟನ್‌ ನಮಗಿಂತಲೂ ಮೇಲಿನ ಲೋಕದಲ್ಲಿದ್ದಾನೆ’ ಎಂದೂ ಹೇಳುತ್ತಾನೆ. ಸರ್‌. ಎಡ್ವಿನ್‌ ಅರ್ನಾಲ್ಡ್‌ ಕೂಡ ‘ಪ್ರೇತ’ವಾಗಿ ಬರುತ್ತಾನ. ಅವರಿರುವ ಆ ಸ್ವರ್ಗೀಯ ಲೋಕಗಳ ವರ್ಣನೆ ಕೇಳಿದರೆ, ಭಾರತೀಯವಾದ ಮನಸ್ಸಿಗೆ ಹೊಳೆಯುತ್ತದೆ, ಅವರೆಲ್ಲ ಭೂಲೋಕಕ್ಕೆ ಮತ್ತೆ ಇಳಿಯಲೇಬೇಕಾಗುತ್ತದೆ ಎಂದು. ಅವರ ಆ ಲೋಕಗಳು ಭೂಮಿಗಿಂತ ಸ್ವಲ್ಪ ಅತಿಶಯವಾದ ಸುಖದ ಲೋಕಗಳಾಗಿರಬಹುದು, ಆದರೆ ಶಾಶ್ವತವಲ್ಲ. ಸರ್ವೇಶ್ವರನಲ್ಲಿ (Almighty) ಐಕ್ಯರಾದವರು ಮತ್ತೆ ಮರ್ತ್ಯಕ್ಕೆ ಇಳಿಯಲಾರರು. ಷೇಕ್ಸ್‌ಪಿಯರ್‌ ಮೊದಲಾದವರು ಸರ್ವೇಶ್ವರನಲ್ಲಿ ಐಕ್ಯವಾಗಿರುವ ಪಕ್ಷದಲ್ಲಿ, ಗಣಮಗ (Medium) ಮೋಸಹೋಗಿದ್ದಾನೆ; ಇಲ್ಲದೆ ಪ್ರೇಕ್ಷಕರು (Sitters) ವಂಚಿತರಾಗಿದ್ದಾರೆ. ಹಾಗೆಲ್ಲ ಹೇಳಿದುದು ಯಾವುದೊ ಹುಸಿ ನುಡಿದು ನಟಿಸುವ ‘ದೆವ್ವ’ (devil) ಇರಬೇಕು. ತುಂಬ ಚಿಂತಾಭಾರವಾದ ಮನಸ್ಸಿನಿಂದ ಹೊರಗೆ ಬಂದೆ. ದಾರಿಯಲ್ಲಿ ಬರುತ್ತಾ ಹೇಳಿಕೊಂಡೆ: ‘ಅಯ್ಯೊ ಭಗವಂತಾ ನಾನು ಓದಿದ್ದು ನಿಜವಾಗಿಯೂ ಸತ್ಯವಾಗಿದ್ದರೆ ನನಗೆ ಷೇಕ್ಸ್‌ಪಿಯರ್‌ನ ಲೋಕವೂ ಬೇಡ, ನ್ಯೂಟನ್ನಿನ ಲೋಕವೂ ಬೇಡ, ಕಾಲರಿಜ್‌ನ ಲೋಕವೂ ಬೇಡ; ಏಕೆಂದರೆ ಅವು ಯಾವುವೂ ಭೂಮಿಗಿಂತಲೂ ಉತ್ತಮತರವಾಗಿಲ್ಲ. ನನಗೆ ಬೇಕಾದ್ದು ಪರಮೋತ್ತಮ ಲೋಕ. ಭಿಕ್ಷುಕರಿಗೆ ಹತ್ತು ಕಾಸು ಕೊಟ್ಟೆ.”

 


[1] ಸಂತೆಪೇಟೆಯ ‘ಆನಂದ ಮಂದಿರ’ದ ಉಪ್ಪರಿಗೆಯ ಮೇಲೆ ಲಾಯರ ಆಫೀಸಾಗಿದ್ದ ದೊಡ್ಡ ನಡುವನ ಕೊಟಡಿಯನ್ನು ನಾವು ಕೆಲವು ವಿದ್ಯಾರ್ಥಿಗಳು ಸೇರಿ ಬಾಡಿಗೆಗೆ ತೆಗೆದುಕೊಂಡೆವು. ಮೊದಲು ಇರುತ್ತಿದ್ದ ಸಣ್ಣ ಕೊಟಡಿಗಳನ್ನು ಬಿಟ್ಟುಕೊಟ್ಟು. ಆ ವಿದ್ಯಾರ್ಥಿಗಳಲ್ಲಿ ಕೆಲವರು ಕೊಡಗಿನಿಂದ ಬಂದವರಾಗಿದ್ದರು: ಕೆ. ಮಲ್ಲಪ್ಪ, ಎಚ್‌.ಕೆ.ವೀರಪ್ಪ, ಶಾಂತಮಲ್ಲಪ್ಪ, ವಸವರಾಜು, ಪುಪ್ಪಣ್ಣ. ನಾವು ಕೆಲವರು ಮಲೆನಾಡಿನ ಕಡೆಯವರು: ನಾನು, ಕೆ.ಆ. ತಿಮ್ಮಯ್ಯ. ಡಿ.ಆ.ಮಾನಪ್ಪ. ಅಲ್ಲಿಗೆ ಹೊರಗಿನ ಅನೇಕ ಮಿತ್ರರು ಬಂದುಹೋಗುತ್ತಿದ್ದರು. ವಿಶೇಷವಾಗಿ ನನ್ನ ವಾಚನ, ತತ್ತ್ವ ಜಿಜ್ಞಾಸೆ, ತತ್ತ್ವಾಧ್ಯಯನ ಇತ್ಯಾದಿಗಳಿಗೆ ಒಂದು ರೂಪು ಕೊಡಲು ಒಂದು ಸಂಘ ಸ್ಥಾಪನೆ ಮಾಡಿದೆವು. ಅದಕ್ಕೆ ಹೆಸರು ಕೊಟ್ಟೆವು: ‘Lotus Leaf Union’ ಕನ್ನಡದಲ್ಲಿ ‘ಪದ್ಮಪತ್ರ ಸಂಘ’. ಅದರ ಆಶ್ರಯದಲ್ಲಿ ವಾರಕ್ಕೊಮ್ಮೆ ಸಭೆ ನೆರೆಯುತ್ತಿತ್ತು. Lotus Leaf ಎಂಬ ಹೆಸರಿನ ಮ್ಯಾಗಜೀನ್‌ ಹೊರಡಿಸಲೂ ‘ಕರಪತ್ರ’ ಅಚ್ಚು ಮಾಡಿದ್ದೆವು. ಅದಕ್ಕೆ ಸಂದೇಶ ಕಳಿಸಿಕೊಡಬೇಕೆಂದು ಬೇಡಿ ಶ್ರೀಮತಿ ಅನಿಬೆಸಂಟರಿಗೂ ಕಾಗದ ಬರೆದಿದ್ದು, ಅವರಿಂದ ಉತ್ತರ ರೂಪದ ಸಂದೇಶವೂ ಬಂದಿತು! ಆದರೆ ಅದೃಷ್ಟವಶಾತ್‌ ಪತ್ರಿಕಾ ಪ್ರಕಟಣೆ ಅದರ ಭ್ರೂಣಾವಸ್ಥೆಯನ್ನು ದಾಟಲೆ ಇಲ್ಲ! ಈ Lotus Leaf Union ವಿಚಾರ ಹೆಚ್ಚಾಗಿ ಮುಂದೆ ಬರುತ್ತದೆ.

[2] Alien Harp. Pp. 47-48