ಜನವರಿ ೧೨ನೆಯ ಶನಿವಾರದ ದಿನಚರಿ:

“ಬೆಳಿಗ್ಗೆ ಕ್ಲಾಸಿಗೆ ಹೋಗಿ ಬಂದೆ. ವಿಶೇಷವಾದ್ದೇನೂ ಜರುಗಲಿಲ್ಲ. ಇಸ್ಪೀಟು ಆಡಿದೆವಷ್ಟೆ! ಮತ್ತೆ ‘ಪ್ರೇತ’ (Spirits) ಮತ್ತು ‘ಪ್ರೇತವಾದ’ (Spiritualism) ಆತ್ಮ ಮನಸ್ಸು (Soul and Mind) ಕುರಿತು ಮಾತಾಡಿದೆವು. ಮನಸ್ಸಿಗೊಂದು ಹೊಸ ಬೆಳಕು ಮೂಡಿತು ಇಂದು: ನಮ್ಮ ಕರ್ತವ್ಯ ಭಗವಂತನ ಸಾಕ್ಷಾತ್ಕಾರವಾಗಿರಬೇಕೆ ಹೊರತು ಸೃಷ್ಟಿಯನ್ನೆ ಪ್ರಶ್ನಿಸುವುದಿಲ್ಲ. (Not to question the very creation).  ಕೆ. ಮಲ್ಲಪ್ಪ “ಸೃಷ್ಟಿಗೆ ಅವಶ್ಯಕತೆಯಾದರೂ ಏನಿತ್ತು?” ಎಂದು ಪ್ರಶ್ನಿಸಿದರು. ಅದಕ್ಕೆ ನನ್ನ ಸ್ವಾಮೀಜಿ (ವಿವೇಕಾನಂದರು) ಉತ್ತರ ಕೊಟ್ಟಂತೆ ಕೊಟ್ಟೆ: ಮೂಲಪ್ರಶ್ನೆ ಹಾಕುವುದಾಗಲಿ, ಸಮಸ್ಯೆ ಪರಿಹರಿಸುವುದಾಗಲಿ ನಮ್ಮ ಕೆಲಸವಲ್ಲ; ದೇವರು ಸೃಷ್ಟಿಸಿದ್ದಾನೆ. ಏತಕ್ಕೊ ಗೊತ್ತಿಲ್ಲ, ನಮ್ಮ ಕರ್ತವ್ಯ ಅವನನ್ನು ಸಾಧಿಸುವುದು, ಅವನನ್ನು ಸೇರುವುದು. ನಾಲ್ಕು ಗಂಟೆಗೆ ತಂಟ್ಲುಮಾರಿ ಶೆಟ್ಟಿ (ಕೃಷ್ಣಶೆಟ್ಟಿ) ಬಂದ. ವಾಕ್‌ ಹೋದೆವು. ನನ್ನ ತಿಳಿದ ಮಟ್ಟಿಗೆ ಪ್ರೇತಗಳು ಪ್ರೇತವಾದವನ್ನು ಕುರಿತು ಭಾರತೀಯ ದೃಷ್ಟಿಯನ್ನು ಆತನಿಗೆ ವಿವರಿಸುವ ಭಾಗ್ಯ ನನ್ನದಾಯಿತು. ನಾವು ನಿಧಾನವಾಗಿ ಸಾಗಿದೆವು. ತಿರುಗಾಟ ಫಲಪ್ರದವಾಗಿತ್ತು. ವರ್ಡ್ಸವರ್ತ್‌ ಕವಿಯ ತತ್ತ್ವದೃಷ್ಟಿ ಮುಂತಾದ ವಿಷಯಗಳನ್ನು ಕುರಿತು ಸಂವಾದಿಸಿದೆವು. ಹಿಂತಿರುಗುವಾಗ ಕೆಲವು ಮಿತ್ರರನ್ನು ಸಂಧಿಸಿದೆವು, ಹಾರ್ಡಿಂಜ್‌ ಸರ್ಕಲ್ಲಿನಲ್ಲಿ ಪ್ರಾರಂಭವಾದ ಮಾತುಕತೆ ಅಲ್ಲಿಯೆ ಕೊನೆಮುಟ್ಟಿತು. ಆ ದಿನ ಅಷ್ಟೇನೂ ತೃಪ್ತಿತರುವಂತೆ ಕಳೆಯಲಿಲ್ಲ, ತಿರುಗಾಟದಲ್ಲಿ ನಡೆದ ಸಂವಾದವೊಂದನ್ನು ಬಿಟ್ಟರೆ. ಪುಪ್ಪಣ್ಣಗೆ ಏಳು ರೂಪಾಯಿ ಕೊಟ್ಟೆ. ನಿನ್ನೆ ಬೆಂಗಳೂರಿನವನೊಬ್ಬನಿಗೆ ಒಂಬತ್ತು ಆಣೆ ನೆರವಿತ್ತೆ.

ಓ ದೊರೆಯೆ, ಜಗತ್ತಿನ ಮೂಲತತ್ತ್ವ ಸ್ವರೂಪವನ್ನರಿಯಲು ನನಗೆ ಬೆಳಕು ಕೊಡು; ನಿನ್ನಲ್ಲಿ, ನಿನ್ನಲ್ಲಿ ಮಾತ್ರವೆ, ನನ್ನನ್ನು ಕಂಡುಕೊಳ್ಳುವಂತೆ. (Oh Lord, give me the light that I can see the inmost core of things, that I may find me in you and in you alone.)”

ಜನವರಿ ೧೩ನೆಯ ಭಾನುವಾರದ ದಿನಚರಿ:

“ಹೆಡ್ಮಾಸ್ಟರ ಮನೆಗೆ ಹೋಗಿ ಅವರನ್ನು ಸಂಧಿಸಲಾರದೆ ಹಿಂದಕ್ಕೆ ಬಂದೆ. ಬರುವಾಗ ಮಹಾರಾಣಿ ಹೈಸ್ಕೂಲಿನ ಹತ್ತಿರ ಚೆಂಡುವಹೂವಿನ ತೋಟದ ಸೌಂದರ್ಯವನ್ನು ನೋಡಿ ನನ್ನ ಕವನ “Marigolds”  ಎಂಬುದನ್ನು ನೆನೆದೆ. ಇವೊತ್ತು ಒಂದು ಕವನ “The Poet’s Rhyme” ರಚಿಸಿದೆ. ಅದನ್ನು ರಚಿಸಿದುದು ಮುಖ್ಯವಾಗಿ ನನ್ನ ಕೆಲವು ಮಿತ್ರರ ಅಹಂಕಾರ ಶಮನಮಾಡುವುದಕ್ಕಾಗಿಯೆ. ಅವರು ದೊಡ್ಡ ತತ್ತ್ವಪಂಡಿತರಂತೆ ಆತ್ಮ, ಮನಸ್ಸು ಮೊದಲಾದವುಗಳ ವಿಚಾರವಾಗಿ ಹರಟುತ್ತಾರೆಯೆ ಹೊರತು ಏನು ಮಾತಾಡುತ್ತಿದ್ದೇವೆ ಎಂಬುದು ಕೂಡ ಗೊತ್ತಿರುವುದಿಲ್ಲ. ಅದೂ ಅಲ್ಲದೆ ಮುಂದಿನ ವಾರ ನೆರೆಯುವ ನಮ್ಮ ಸಂಘದ ಸಭೆಯಲ್ಲಿ, ಯಾರು ಬರೆದುದು ಎಂದು ಅವರಿಗೆ ತಿಳಿಯದಂತೆ ವಾಚನಮಾಡುವ ಸಲುವಾಗಿಯೂ ಬರೆದೆ. ಇವೊತ್ತು ವಾಕ್‌ ಹೋಗಲಿಲ್ಲ. ಪುಣ್ಯಕ್ಕೆ, ಕೆ.ಮಲ್ಲಪ್ಪನವರೊಡನೆ ಶ್ರೀಕೃಷ್ಣ ಚೈತನ್ಯನ ವಿಷಯ ಪ್ರಸ್ತಾಪಿಸಿ, ಅವರ ಹುಡುಗುಬುದ್ಧಿಯ ಅಹಂಕಾರವನ್ನು ಮುರಿಯುವ ಅವಕಾಶ ದೊರೆಯಿತು: ಜ್ಞಾನ ಮಾರ್ಗದಿಂದಲೂ ಭಗವತ್‌ ಸಾಕ್ಷಾತ್ಕಾರ ಸಾಧ್ಯವಾದರೂ ಅದು ನೀರಸವಾದ್ದರಿಂದ ಸಾಧಾರಣ ಮಾನವರಿಗೆ ಅವ್ಯಕ್ತದ ಉಪಾಸನೆ ಅಸಾಧ್ಯವಾಗುತ್ತದೆ ಎಂದು ವಿವರಿಸಿದೆ. ಇವೊತ್ತು ಡಿ.ಎನ್‌.ಹಿರಿಯಣ್ಣನವರಿಂದ ಒಂದು ಕಾಗದ ಬಂತು. ನಾನು ಕೆ.ಆರ್‌.ವೆಂಕಟಯ್ಯನಿಗಾಗಿ ಕಳಿಸಿದ ‘ಅಮಲನ ಕಥೆ’

[1] ಕೈಸೇರಿತಂತೆ. ಹೇ ದೇವದೇವ, ಮಹೋನ್ನತವಾದ ಭವ್ಯಮಾರ್ಗದಿಂದ ನಿನ್ನನ್ನು ಹೊಂದುವ ಸಾಮರ್ಥ್ಯ ನನಗೆ ನೀಡು.”

ಜನವರಿ ೧೩ನೆಯ ದಿನಚರಿಯಲ್ಲಿ ಹೆಸರಿಸಲಾದ್ದ “The Poets Rhyme” ಎಂಬ ಕವನ “The Noble Path”  ಎಂಬ ಶೀರ್ಷಿಕೆಯಿಂದ ನನ್ನ ಹಸ್ತಪ್ರತಿಯಲ್ಲಿರುವುದು ಕಂಡುಬಂದಿದೆ. ೨೦-೦೧-೧೯೨೪ರಲ್ಲಿ ಪ್ರತಿಯೆತ್ತಿದ್ದೇನೆ. ಆ ಕವನದಲ್ಲಿ ಜ್ಞಾನದ ಮಿತಿಯನ್ನೂ ಭಕ್ತಿಮಾರ್ಗದ ಹೆಚ್ಚಳವನ್ನೂ ಒತ್ತಿ ಹೇಳಿದೆ. ಬುದ್ಧಿಯ ಗರ್ವ ನಮ್ಮನ್ನು ಅಂತಃಪುರಕ್ಕೆ ಕೊಂಡೊಯ್ಯಲರದು; ಭಕ್ತಿಯ ನಮ್ರತೆಗೆ ಅದು ಸಾಧ್ಯ.

Speak not to me, thou learned friend,
Of things beyond our power;
For man is born not to contend
And mar the joy of life’s flower,

Vain, vain is the pride of lore
For the path is not the goal;
Tho’thou art knowledge’s mighty store
Yet higher is the soul.

The ship can trust the mighty deep
And it can avoid the shoal;
But it’s hard to find, still hard to keep
The happiness of soul.

The great are meek for they know the truth,
Loud and showy are the mean;
Know this thou fiery spirited youth,
And be as the great have been.

Oh! Ours is not question, why
Did the Lord create this earth?
For ours is but to work and try
Thro’gates of death and birth.

The secrets of the soul and mind
In mystery are hidden;
And when we strive their depths to find
Mad voices rise unbidden.

Duration is the youth of life,
A scene of cosmic play;
Time cannot end the merry strife
Nor death delude the day.

We do not end with the final breath,
Death only is our slave.
When man is not the slave of death
Why should he fear the grave?

We hold the one and levae the other
For our arms are not too long;
We strech in vain for both, dear brother,
And feel the anguish strong.

We blingdly hear whether madmen sing
And we dance to their lay.
O little we know that heavenly king
Doth smile at his own play.

To know a thread we weave a net,
And in the net we are caught;
Our joy is marred and we forget
The very things we sought.

The gloom of hell, the light of heaven,
And the world’s merry strife
All soon or late from us are driven
And leave a dreary life.

The heart alone can dare to soar
High up above the sky;
Whatever be the mental lore
Its range is but the eye.

Then let us hear the poetic words
And lead a life of joy;
And thro’ the chimes of harbinger birds
Let’s gain the Cowherd Boy.[2]

ಜನವರಿ ೧೪ನೆಯ ಸೋಮವಾರದ ದಿನಚರಿ:

“ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿಹಬ್ಬದ ಪ್ರಯುಕ್ತ ಇವೊತ್ತು ರಜಾ ಇತ್ತು. ಬೆಳಿಗ್ಗೆ ೫ ಗಂಟೆಗೆ ಎಚ್ಚರವಾಯಿತು. ಏನೇನೊ ಆಲೋಚನೆಗಳು: ನನ್ನ ‘ಒಲುಮೆ’ಯನ್ನೂ ನೆನೆದೆ. ಆ ‘ಒಲುಮೆ’ ಗೆ ಸೆರೆಯಾದ ಹೃದಯ ಅನ್ಯಕ್ಕೆ ಎಳಸದು ಎಂದು ನಿಶ್ಚಯಿಸಿದೆ. ಹಾಗೆಯೆ ಬದುಕನ್ನೆಲ್ಲ ಭಗವಂತನ ಸೇವೆಗೆ ಅರ್ಪಿಸುವ ಆಲೋಚನೆಯೂ ಬಂತು. ಅದಂತೂ ‘ಒಲುಮೆ’ಯನ್ನೂ ಮೀರಿ ಸುಮಧುರವಾಗಿ ತೋರಿತು. ಏಳು ಗಂಟೆಗೆ ಎದ್ದೆ. ‘ಕರುಣೆ’ಯನ್ನು ಕುರಿತು ಏಳು ಪದ್ಯಗಳನ್ನು ಕನ್ನಡದಲ್ಲಿ ರಚಿಸಿ ಅವನ್ನು ‘ಅಮಲನ ಕಥೆ’ಗೆ ಸೇರಿಸಿದೆ: ಸ್ನೇಹಿತ ಡಿ.ಆರ್‌. ವೆಂಕಟಯ್ಯನವರಿಂದ ಒಂದು ಕಾಗದ ಬಂತು. ಅದರಲ್ಲಿ ದುಗ್ಗಪ್ಪಗೌಡರ ತಾಯಿ ತೀರಿಹೋದ ದುಃಖವಾರ್ತೆ ಇತ್ತು. ನನ್ನ ಶೋಕ ಹೊರಗೆ ತೋರಲಿಲ್ಲ. ಅವರು ದೇವರಲ್ಲಿ ಐಕ್ಯರಾಗಿ ಆನಂದಸ್ಥಿತಿ ಪಡೆಯಲಿ ಎಂದು ಪ್ರಾರ್ಥಿಸಿದೆ. ಮನುಷ್ಯರ ಮೂರ್ಖತೆಗಾಗಿ ಮನ ನೊಂದುಕೊಂಡೆ. ಕಾಲ ಮೀರುವುದರೊಳಗೆ ನಿಜವನ್ನರಿಯದೆ ಹೋಗುತ್ತಾರೆ. ಏನಾದರೂ ನನಗಂತೂ ಸಾವು ಎಂದರೆ ಒಂದು ಯಃಕಶ್ಚಿತ ಕಃಪದರ್ಥ! ಕೆ. ಮರಿಯಪ್ಪನಿಗೆ ಸಲ್ಲಬೇಕಾಗಿದ್ದ ಎರಡಾಣೆಯನ್ನು ಅವನಿಗರಿವಾಗದಂತೆ ಅವನ ಜೇಬಿಗೆ ಹಾಕಿಬಿಟ್ಟೆ. ಸಿನಿಮಾಕ್ಕೆ ಹೋದೆ. ಕಥೆ “The Lord and the Lion.” ಸಿನಿಮಾಕ್ಕೆ ಹೋಗಿದ್ದಕ್ಕೆ ಯಾರೋ ನನ್ನನ್ನು ಬೈದಂತೆ ಅನುಭವವಾಯಿತು. ಕೊಟಡಿಗೆ ಬಂದು ಸ್ನೇಹಿತರಿಗೆ ಕಥೆಯನ್ನೆಲ್ಲ ಹೇಳಿದೆ. ಆಮೇಲ ನಮ್ಮ ನಮ್ಮ ಊರುಗಳಲ್ಲಿ ನಡೆಯುವ ಹಬ್ಬ ಮತ್ತು ತೇರುಗಳು ವಿಚಾರ ಹರಟೆ ಹೊಡೆದೆವು. ಸ್ಕೂಲಿನ ಪಾಠಗಳ ಅಧ್ಯಯನಕ್ಕೆ ಒಂದು ಕ್ಷಣವನ್ನೂ ವಿನಿಯೋಗಿಸಲಿಲ್ಲ. ಆದರೂ ಹರ್ಷಪ್ರದವಾಗಿತ್ತು. “ಓ ದೊರೆಯೆ, ಪ್ರಪಂಚದ ದುರ್ದಮ್ಯ ಪ್ರವಾಹಕ್ಕೆ ಎಡೆಗೊಟ್ಟು ಸೆಣಸುವ ಶಕ್ತಿಯನ್ನು ನನಗೆ ದಯಪಾಲಿಸು! ತೀರಿಕೊಂಡ ನನ್ನ ಅಜ್ಜಿಗೆ ಆನಂದ ದೊರೆಯಲಿ!” (’ಅಮಲನ ಕಥೆ’ ಹಸ್ತಪ್ರತಿಯಲ್ಲಿಯೇ ಬೆಳೆಯುತ್ತಿತ್ತು.)

ಜನವರಿ ೧೫ನೆಯ ಮಂಗಳವಾರದ ದಿನಚರಿ:

“ಬೆಳಿಗ್ಗೆ ನಾನು ಎದ್ದಾಗ ಏಳು ಗಂಟೆ ಆಗಿತ್ತು. ನನ್ನ ಕರ್ತವ್ಯಪ್ರಜ್ಞೆ ಛೀಮಾರಿ ಹಾಕಿತು. ನನ್ನ ದೈನಂದಿನ ಕರ್ಮಗಳಲ್ಲಿ, ಅದರಲ್ಲಿಯೂ ನನ್ನ ಕ್ಲಾಸಿನ ಪಾಠಗಳನ್ನು ಓದಿಕೊಳ್ಳುವುದರಲ್ಲಿ ತುಂಬಾ ಕರ್ತವ್ಯಭ್ರಷ್ಟನಾಗಿದ್ದೇನೆ ಅನ್ನಿಸಿತು. ಲೌಕಿಕನಾದ ವ್ಯಕ್ತಿಗೆ ಈ ಸ್ಕೂಲಿಗೆ ಹೊಗುವ ವಿದ್ಯಾಭ್ಯಾಸದಿಂದ ಪ್ರಯೋಜನವಾಗುವುದಾದರೂ ಆಧ್ಯಾತ್ಮಿಕ ವ್ಯಕ್ತಿಗೆ ಇದರಿಂದ ಏನೂ ಉಪಯೋಗವಿಲ್ಲದಿದ್ದರೂ ವಿದ್ಯಾರ್ಥಿಯಾದ ನನ್ನ ಕರ್ತವ್ಯ ಈ ನೀರಸ ಪಠ್ಯಪುಸ್ತಕದ ಒಣ-ಹಾಳೆಗಳನ್ನೆಲ್ಲ ಓದಿ, ನಮ್ಮ ಮನೆಯವರನ್ನು ತೃಪ್ತಿಪಡಿಸುವುದಕ್ಕಾಗಿಯಾದರೂ, ಪರೀಕ್ಷೆಯಲ್ಲಿ ತೇರ್ಗಡೆಹೊಂದಬೇಕು ಎಂದು ಯೋಚಿಸಿದೆ. ಹಾಸಿಗೆಯ ಮೇಲೆಯೆ ನಿಂತು ದೃಢಪ್ರತಿಜ್ಞೆ ಮಾಡಿದೆ: ಆದಷ್ಟು ಪ್ರಯತ್ನಪಟ್ಟು ಪರೀಕ್ಷೆಯಲ್ಲಿ ಪಾಸುಮಾಡಲೂ, ಮತ್ತು ತಾತ್ಕಲಿಕವಾಗಿ ಸದ್ಯಕ್ಕೆ, ಜ್ಞಾನ ವಿಸ್ತರಣೆಗಾಗಿ ಇತರ ಪುಸ್ತಕಗಳನ್ನು ಓದುವ ಚಟವನ್ನು ನಿಲ್ಲಿಸಿ ಬಿಡಲೂ.” ಸ್ಕೂಲಿನಲ್ಲಿ ಕೇಳಿದೆ, ಕ್ಲಬ್ಬಿನಲ್ಲಿ ಕಾಫಿ ಕುಡಿದು ಎಂಟು ಜನ ಸ್ನೇಹಿತರು ಸತ್ತರೆಂದು. ಹಾಲು ಕುದಿಯುತ್ತಿದ್ದ ಹಂಡೆಗೆ ನಾಗರಹಾವು ಬಿದ್ದಿತ್ತಂತೆ. ಸಂಜೆ ನಾಲ್ಕೂವರೆ ಗಂಟೆಯ ಮೇಲೆ ನಾನು ಬಸವರಾಜು ಸಿನಿಮಾಕ್ಕೆ ಹೋದೆವು. ಕಥಾವಸ್ತು ‘The Mysterious Pearls’, ನಟವೀರ ಎಡೀಪೋಲೊ. ‘ಹೇ ದೇವರೆ, ಈ ಲೌಕಿಕ ವಿದ್ಯೆಗಾಗಿ ನಿನ್ನನ್ನು ತೊರೆಯುತ್ತಿದ್ದೇನೆ. ಕ್ಷಮಿಸು. ಈ ಹಾಳು ಲೌಕಿಕ ಅಭ್ಯುದಯದ ಪರೀಕ್ಷೆಗಾಗಿ ನಿನ್ನ ದಿವ್ಯ ಮಧುರ ಚರಿತ್ರೆಯ ಅಧ್ಯಯನವನ್ನು ತ್ಯಜಿಸುತ್ತಿದ್ದೇನೆ. ಸದ್ಯಕ್ಕೆ ಬೀಳ್ಕೊಳ್ಳುತ್ತೇನೆ ನಿಮ್ಮನ್ನು, ಓ ನನ್ನ ಕವಿತೆ, ಓ ನನ್ನ ಗುರೂ, ಸ್ವಾಮಿ ವಿವೇಕಾನಂದ! (For the time being farewell, Muse; farewell, my Guru Swami Vivekananda!) ಮತ್ತು, ಓ ಹಾಳು ಮೇರೆಯ ಭೌತಶಾಸ್ತ್ರವೇ, ಗಣಿತವೇ ಜಯವಾಗಲಿ ನಿಮಗೆ! ನರಕಾಧಿಪತಿಗೆ ನರಕ ಮಧುರಸ್ಥಾನವಾದರೂ ಅದನ್ನು ಉಳಿದೆಲ್ಲರೂ ಹೇಸುತ್ತಾರೆ. (And Hail, thou gloomy Physics and Mathematics, for tho’ Hell is sweet for Ixion it is abhorred by all. O Lord forgive me if I have abused thee!). ಓ ದೇವರೆ, ನಿನ್ನನ್ನು ನಿಂದಿಸಿದ್ದರೆ ನನ್ನನ್ನು ಮನ್ನಿಸು.

“ಎಚ್‌.ಎಸ್‌.ಮಂಜಪ್ಪಗೌಡರಿಗೆ ಇಂದು ಒಂದು ಕಾಗದ ಬರೆದೆ.”

ಜನವರಿ ೧೬ನೆಯ ಬುಧವಾರದ ದಿನಚರಿ:

“ಬೆಳಿಗ್ಗೆ ಎದ್ದವನೆ ವ್ಯಾಯಾಮ ಮಾಡಿದೆ. ಸ್ನಾನದ ತರುವಾಯ ಹೆಡ್ಮಾಸ್ಟರ ಮನೆಗೆ ಹೋದೆ. ಏನೂ ಫಲವಾಗಲಿಲ್ಲ. ಹಸ್ತಪ್ರತಿಯೊಡನೆ ಹಿಂತಿರುಗಿದೆ. ಕೆ.ಮಲ್ಲಪ್ಪನವರೊಡನೆ ಆತ್ಮ ಬ್ರಹ್ಮ ಕುರಿತು ಮಾತಾಡಿದೆ. ಅವರು ತುಂಬ ಬಿಸಿಯಾದರು, ತಣ್ಣೀರೆರಚಿ ಬಂದೆ. ರೂಮಿಗೆ ಬಂದಾಗ ಪಿ.ಮಲ್ಲಯ್ಯ ಬಂದಿದ್ದರು. ಅವರಿಗೆ ನನ್ನ ಕವನಗಳನ್ನು ತೋರಿಸಿದೆ. ನಾವಿಬ್ಬರೂ ಕೋದಂಡರಾಮ ಮುದ್ರಣಾಲಯಕ್ಕೆ ಹೋಗಿ ನನ್ನ ಚಿಕ್ಕ ಕಥೆ ‘ಅಮಲನ ಕಥೆ’ಯನ್ನು ಅವನು ಪ್ರಕಟಿಸಲು ಸಾಧ್ಯವೆ ಎಂದು ವಿಚಾರಿಸಿದೆವು. ಅವನು ಸಾಧ್ಯವಿಲ್ಲ ಎಂದನು. ತರುವಾಯ ಪಬ್ಲಿಕ್‌ ಲೈಬ್ರರಿಗೆ ಹೋದೆವು. ನಾನು ಕೆಲವು ಮಾಸಪತ್ರಿಕೆಗಳನ್ನು (Reviews) ನೋಡಿದೆ. ಅನೇಕ ಗಂಭೀರ ಚಿಂತನೆಗಳಿಂದ ಮನಸ್ಸು ತುಂಬಿತು. ಹೊರಗಡೆಯ ಪ್ರಪಂಚದ ಕಡೆ ಕಣ್ಣು ಹಾಯಿಸಿದಾಗ ಅದೆಂತಹ ಗಲಿಬಿಲಿಯನ್ನು ಅದು ಎದುರುಗೊಳ್ಳುತ್ತದೆ: ರಣಭೇರಿ. ವೀಣಾವಾದ್ಯ, ನಾನಾ ಕಲೆಗಳ ಬಣ್ಣಬಣ್ಣದ ಸಂತೆ, ಅವರೊಡನೆಲ್ಲ ಬೆರೆಯಬೇಕೆಂದು ಮನಸ್ಸಾಗುತ್ತದೆ. ಈ ಮಹಾ ಜಗತ್ತಿನ ಬೃಹಜ್ಜೀವನ ಜಟಿಲಜಾಲದಲ್ಲಿ ನಾನೊಂದು ಅಣುವಿಗಿಂತಲೂ ಅಣುವಾಗಿ ಶೂನ್ಯವಾಗಿ ಬಿಡುತ್ತೇನೆ. ಈ ಅಪಾರ ರಣರಂಗದಲ್ಲಿ, ಎಲ್ಲಿ ಒಬ್ಬೊಬ್ಬನೂ ತಾನೆ ಸೇನಾಧಿಪತಿಯಾಗಲು ಹೆಣಗುತ್ತಾನೆಯೋ ಅಲ್ಲಿ, ನಾನೇನು ಮಹಾ? ಒಂದು ಕಃಪದಾರ್ಥ! ಆದರೂ ನನಗೊಂದು ಮಹದಾನಂದ ಉಂಟಾಗುತ್ತಿದೆ. ನನ್ನನ್ಯಾರು ಲೆಕ್ಕಿಸುತ್ತಾರೆ? ಆಗ ಕಣ್ಣು ಅಂತರ್ಮುಖವಾಗುತ್ತದೆ. ಕಣ್ಣು ಒಳಕಡೆಗೆ ಹೊರಳಿದಾಗ, ನನ್ನನ್ನು ಲೆಕ್ಕಿಸುವ ವ್ಯಕ್ತಿ ನೀನೊಬ್ಬನೆ! ಈ ವಿಷಯವಾಗಿ ಒಂದು ಕವನ ಬರೆಯಬೇಕೆಂದಿದ್ದೇನೆ. ರಾತ್ರಿ ಒಂಬತ್ತು ಗಂಟೆಯಲ್ಲಿ ‘The Wreck of Titanic.’ ‘ಟೈಟಾನಿಕ್‌ ಮಹಾನೌಕೆ’ ಮುಳುಗಿ ಹೋದ ವಿಚಾರ ಓದಿದೆ. ಅದರ ನಾವಿಕರು ಸಾವನ್ನಪ್ಪಿದ ಧೈರ್ಯದಿಂದ ಪ್ರಚೋದಿತನಾಗಿ ಒಂದು ವೀರಕವನವನ್ನು ಬರೆಯಲು ಆಶೆಯಾಗಿದೆ. ರಾತ್ರಿ ಮಲಗಿದಾಗ ರಚಿಸುತ್ತೇನೆಂದು ತೋರುತ್ತದೆ. ದೇವದೇವ, ನೀನೊಬ್ಬನೆ ನನ್ನನ್ನು ಲೆಕ್ಕಿಸುವವನು; ನೀನೊಬ್ಬನೆ ಸತ್ಯ, ಉಳಿದವರೆಲ್ಲ ಮಿಥ್ಯೆ. ಕೃಷ್ಣ! ಕೃಷ್ಣ! ಕೃಷ್ಣ!”

೧೯೨೪ನೆಯ ಜನವರಿ ೧೭ನೆಯ ಗುರುವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಹತ್ತು ಗಂಟೆಗೆ ನನಗೆ ಮನಿಆರ್ಡರು ಲಭಿಸಿತು. ಹೋಟೆಲಿನವನಿಗೆ ಸಲ್ಲಬೇಕಾದ ಹಣವನ್ನೆಲ್ಲ ಪಾವತಿಮಾಡಿದೆ. ಸ್ಕೂಲಿನಲ್ಲಿ ವಿಶೇಷವೇನೂ ನಡೆಯಲಿಲ್ಲ, The Wreck of Titanic ಕುರಿತು ಪ್ರಥಮ ಪದ್ಯರಚನೆ ಮಾಡಿದೊಂದನ್ನು ಬಿಟ್ಟು. ರೂಮಿಗೆ ಬಂದು ಮಂಜಪ್ಪಗೌಡರಿಗೆ ಒಂದು ಕಾಗದ ಬರೆದು, ಕಾಫಿತಿಂಡಿ ಮುಗಿಸಿ, ತಿರುಗಾಟಕ್ಕೆ ಹೋದೆ, ಒಬ್ಬನೆಯ. ನನ್ನ ತಲೆಯಲ್ಲಿ ಸಂಚರಿಸಿದ ಅನೇಕಾನೇಕ ಆಲೋಚನೆಗಳನ್ನು ಕುರಿತು ಇಲ್ಲಿ ಬರೆಯಲು ಅಸಾಧ್ಯ. ಆದರೂ ಒಂದೆರಡನ್ನು ಹೇಳುತ್ತೇನೆ. ದಾರಿಯಲ್ಲಿ ನಡೆಯುತ್ತಲೆ ‘ಟೈಟಾನಿಕ್’ ಕುರಿತು ಕೆಲವು ಪದ್ಯಗಳನ್ನು ರಚಿಸಿದೆ. ಮತ್ತೊಂದೆಂದರೆ, “The Lake View at Eve” ಎಂಬ ಶೀರ್ಷಿಕೆಯಲ್ಲಿ ಒಂದು ಕವನ ರಚಿಸಲು ಮನಸ್ಸು ಮಾಡಿದೆ. ಇವೊತ್ತೊಂದು ‘ಮಕ್ಕಳ ಪ್ರದರ್ಶನ’ ನಡೆಯಿತೆಂದು ಕೇಳಿದೆ. ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಾತ್ಮಾಜಿ ಕ್ಷೇಮವಾಗಿದ್ದಾರೆಂದು ಗೊತ್ತಾಯಿತು…..ರೂಮಿಗೆ ಬಂದು ಊಟ ಪೂರೈಸಿದೆ. ಏನೂ ಉಪಯೋಗಕ್ಕೆ ಬರುವ ಕೆಲಸ ಮಾಡಲಿಲ್ಲ. ಸುಮ್ಮನೆ ಹರಟೆ ಹೊಡೆದೆ. ಸ್ವಲ್ಪ ಮುಂಚೆಯೇ ೯.೩೦ಕ್ಕೆ ಮಲಗಿದೆ, ಹಾಸಗೆಯ ಮೇಲೆ ಪ್ರಶಾಂತವಾಗಿ ಮಲಗಿ ಕವನರಚನೆ ಮಾಡುವ ಉದ್ದೇಶದಿಂದ. ಆದರೆ ದುರದೃಷ್ಟವಶಾತ್‌ ಒಂದು ಕನಸು ಕಂಡೆ: ನನ್ನ ಚಿಕ್ಕಪ್ಪ ನನ್ನನ್ನು ಕಠೋರವಾಗಿ ಬೈದಂತೆಯೂ ನಾನು ತಿರುಗಿಬಿದ್ದು ಸೆಟೆದು ನಿಂತಂತೆಯೂ, ಮತ್ತೂ ಏನೇನೊ…. ಓ ನನ್ನ ದೊರೆಯೆ, ಈ ದಿನವನ್ನು ನಾನು ಯೋಗ್ಯವಾಗಿ ಉಪಯೋಗಿಸದಿದ್ದ ಪಕ್ಷದಲ್ಲಿ ಕ್ಷಮಿಸು ಈ ನಿನ್ನ ಏಕಾಂಗಿ ಶಿಶುವನ್ನು! (Solitary Child!).

ಮೇಲಿನ ದಿನಚರಿಯಲ್ಲಿ ನಮೂದಿತವಾದ “The Lake View at Eve.” ಹಸ್ತಪ್ರತಿಯಲ್ಲಿ ಸಿಕ್ಕಿದೆ. ಎಂಟು ಸಾಲುಗಳ ಒಂಬತ್ತು ಕವನಗಳಿವೆ. a, b, a, b, c,d- d, c,c-ಪ್ರಾಸವಿನ್ಯಾಸವಿದೆ. ಆರನೆ ಪಂಕ್ತಿಯಲ್ಲಿ ಅಂತಃಪ್ರಾಸವಿರುವುದರಿಂದ d-d’ ಎಂದು ಕೊಟ್ಟಿದ್ದು. ಇದು ಕಾರಂಜಿ ಕೆರೆಯ ಬಳಿ ಸಾಯಂಕಾಲದ ಒಂದು ದೃಶ್ಯದಿಂದ ಮೂಡಿದ ಕವಿತೆ. ಹಸ್ತಪ್ರತಿಯಲ್ಲಿ ಪ್ರತಿಯೆತ್ತಿದ ತಾರೀಖು ೨೩.೧.೧೯೨೪ ಎಂದಿದೆ.

How sweet it is to watch these waves
And feel the dizziness of joy!
The breeze of eve her sweetly laves
And plays in ripples like a boy.
The Nymph of the lake with dimples small
Is greeting shlyly
The passers by;
But oh to me is her special call,
She beckons me to her pearl-built hall!

Behold, how her breast falls and heaves
Like a maid when she meets her lover!
What expectation her now grieves?
What hope now sits in her bosom’s bower?
Doth she not beckon me, doth she not?
She pants with joy
To embrace her boy:
Sweet Nymph, fear not; the poet ne’er forgot,
To him thy lot is his own lot.

Travellor, who ploddest by the lake,
Dost not her smile appeal to thee?
If inward joys thou cannot partake,
Hast htou no eyes to the out-ward glee?
What tho’ sweet fancy far abides?
Hast thou no sighty
And man’s delight
To view the crane’s elated strides
That triumphantly break the puny tides?

Pause here, thou hasty friend, behold
The musing heron’s beguiling mood!
How still she stands surveying bold
The pigmy tempters of the flood,
Renouncing all save hipocracy!
Her looks how grave!
The very wave
Doth shrink from her ascetic plea;
And the depth reduces to her knee!

Thou cyclist gaudy, why so swift?
Nature doth not pollute they show;
The giver is hiding in the gift,
Pause for my sake, then may’st thou go.
Behold the sweet vermilion west;
What glory shines
In crimson lines!
What tho’thou art in muslins drest?
The glory of nature is ever blest!

Why all this grandeur false and vain?
At least with Nature simple be.
Oh vain’s thy parade upon this plain,
A maiden here thou canst not see!
If thou a lover art behold
The lake, and love!
It’s high above
The silken cloth or chain of gold:
This love is never bought and sold.

The breeze is singing on the trees
And the wood-pecker cracks its jokes;
The beetle’s drone comes thro’ the breeze
And rattles swift the hackney spokes,
The fowls now wend hither their way,
Now black, now white,
Now dim, now bright.
It is a glorious scene and gay
To watch them at the ebbing day.

This is a simple joy, yet more high
Than worldly evil theatric joys.
Oh high above the trifling eye
Of mankind and its worthiest choice
This lies! But short-eyed man ignores;
He doth not see
The real glee,
But tries to gather crores and crores
And in the long run roars and roars!

Thou poet or philosopher,
Thou scientist great or worthy teacher,
Thou simple man or gaudy lover,
Thou servant, sage or simple preacher,
Who-so-ever thou may’st be, hie, hie
To this sweet place
Of glory and grace,
And feel, oh feel with majestic eye
The bliss supreme, the joy too high!

ಜನವರಿ ೧೮ನೆಯ ತಾರೀಖಿನ ದಿನಚರಿಯಲ್ಲಿ ನನಗೂ ಕೆ.ಮಲ್ಲಪ್ಪಗೂ ವಾಗ್ವಾದದಲ್ಲಿ ವಿರಸವಾಗಿ, ಪತ್ರಗಳ ವಿನಿಮಯವಾದ ಸಂಗತಿ ಇದೆ. ಮತ್ತೆ, ನನಗೆ ಮನಿ ಆರ್ಡರೂ ಬಂದು ಸ್ಕಾಲರ್ ಷಿಪ್ಪಿನ ಮೊತ್ತವೂ ಕೈಸೇರಿದ್ದು ನಾನೂ ಬಸವರಾಜೂ ‘The Mysterious Pearls’ ಎಂಬ ಸಿನಿಮಾಕ್ಕೆ ಹೋದದ್ದೂ, ನಾನು ಆ ದಿನ “The wreck of Titanic” ಲಾವಣಿಯಲ್ಲಿ ಕೆಲವು ಪದ್ಯಗಳನ್ನೂ ರಚಿಸಿದ್ದೂ ಅವು ಬರೆದಿಡಲು ಯೋಗ್ಯವಾಗಿರದಿದ್ದುದರಿಂದ ತಿರಸ್ಕೃತವಾದದ್ದೂ ಉಲ್ಲೇಖಿತವಾಗಿದೆ.

ಜನವರಿ ೧೯ನೆಯ ಶನಿವಾರದ ದಿನಚರ:

“ಬೆಳಿಗ್ಗೆ ಏಳುಗಂಟೆಗೆ ಎದ್ದು ಸ್ನಾನ ಮುಗಿಸಿ ಸ್ಕೂಲಿಗೆ ಹೋದೆ. ಹತ್ತೂವರೆಗೆ ರೂಮಿಗೆ ಬಂದೆ. ಊಟಮಾಡಿದ ಮೇಲೆ ನಾನು ಗೆಳೆಯರೂ ಇಸ್ಪೀಟು ಆಡಿದೆವು. (most hideous and unworthy action! ಅತ್ಯಂತ ಹೀನಾಯವಾದ ಅಯೋಗ್ಯ ಕಾರ್ಯ!) ಆ ದಿನವೆಲ್ಲ ಇಸ್ಪೀಟಿನಿಂದ ಹಾಳಾಯಿತಷ್ಟೆ! ಕೆ.ಮರಿಯಪ್ಪ ರೂಮಿಗೆ ಬಂದರು. ಐದು ಗಂಟೆಗೆ ಸ್ಕೌಟ್‌ ರ್ಯಾಲಿಮತ್ತು ಒಂದು ದೇಶಭಕ್ತಿಯ ಭಾಷಣ ಇದ್ದುವು. (National Lecture ಎಂದರೆ ಆ ಕಾಲದಲ್ಲಿ ಬ್ರಿಟಿಷರ ವಿರುದ್ಧ ಕಾಂಗ್ರಿಸ್ಸಿಗರು ಮಾಡುತ್ತಿದ್ದ ಸಾರ್ವಜನಿಕ ಭಾಷಣಗಳು.) ನ್ಯಾಷನಲ್‌ ಲೆಕ್ಚ್‌ ನನಗೆ ಗೊತ್ತಿರಲಿಲ್ಲವಾದ್ದರಿಂದ ನಾನು ಸ್ಕೌಟ್ರ್ಯಾಲಿ  ನೋಡಲು ಹೋದೆ. ಸಮವಸ್ತ್ರಧಾರಿಗಳಾದ ತರುಣರು ಪ್ರದರ್ಶಿಸಿದ ನಾನಾಕ್ರೀಡಾವ್ಯಾಯಾಮ ವ್ಯಾಪಾರಗಳು ಮನೋಹರವಾಗಿದ್ದುವು. ನನಗೆ ಒಂದೇ ದುಃಖ. ಏನೆಂದರೆ ಮೈಸೂರಿನಲ್ಲಿ ಸ್ಕೌಟು ಚಳುವಳಿ ಕೆಲಸಕ್ಕೆ ಬಾರದೆ ಬರಿ ಅಲಂಕಾರದ ವಿಷಯವಾಗಿದೆ ಎಂಬುದು. ವಿ.ನಾಗಪ್ಪನ ಜೊತೆಗೆ ಸಾಯಂಕಾಲ ಆರು ಗಂಟೆಗೆ ವಾಕ್‌ ಹೋದೆ, ಕೆಲವು ತರುಣರಲ್ಲಿ ನಡೆಯುತ್ತಿದ್ದ ಹೀನಾಯ ವರ್ತನೆಗಳ ವಿಚಾರ ಮಾತಾಡತ್ತಾ. ಸಂಜೆ ಏಳುಗಂಟೆಗೆ ರೂಮಿಗೆ ಬಂದು ವ್ಯಾಯಾಮ ಮಾಡಿದೆ. ಮತ್ತೆ ಸ್ವಾಮಿ ವಿವೇಕಾನಂದರ ಪಟದ ಕೆಳಗೆ ಮಂಡಿಯೂರಿ ಕುಳಿತು ಪ್ರಾರ್ಥಿಸಿದೆ. ತುಂಬ ಶಕ್ತಿಮೈಗೂಡಿದಂತೆ ಅನುಭವವಾಯ್ತು! ಹೇ ಜಗದೀಶ್ವರನೆ, ಕಾಲವನ್ನು ಸದ್‌ವಿನಿಯೋಗಿಸಲು ನನಗೆ ಶಕ್ತಿ ಕೊಡು! ಜಯ್‌ ಕೃಷ್ಣ! ಜಯ್‌ ವಿವೇಕಾನಂದ!”

ಜನವರಿ ೨೦ನೆಯ ಭಾನುವಾರದ ದಿನಚರಿ:

“ಏಳುಗಂಟೆಗೆ ಎದ್ದು ವ್ಯಾಯಾಮ ಮಾಡಿದೆ. ಬಸವರಾಜು ಬಂದರು. ಇಬ್ಬರೂ ಒಟ್ಟಿಗೆ ‘ಮ್ಯಾಗ್ನಟಿಸಮ್‌’ ಅಧ್ಯಯನ ಮಾಡಿದೆವು. ‘The poets Rhyme’ ಎಂದು ನಾಮಕರಣ ಮಾಡಿದ್ದ ಕವನಕ್ಕೆ “The Noble Path” ಎಂದು ಹೆಸರು ಬದಲಾಯಿಸಿ, ಅದನ್ನು ಪೂರ್ತಿಗೊಳಿಸಿದೆ. ಅಪರಾಹ್ನ ಮೂರುಗಂಟೆಯಿಂದ ಏಳು ಗಂಟೆಯವರೆಗೆ ನಮ್ಮ ವಾರದ ಮೀಟಿಂಗು ನಡೆಯಿತು. ಆ ಸಂದರ್ಭದಲ್ಲಿ “The Noble Path” ಕವನವನ್ನು ನಾಂದಿಯಾಗಿ ವಾಚಿಸಿದೆ. ಆದರೆ ಯಾರಿಗೂ ಅದು ನನ್ನದೇ ರಚನೆ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ. ಸಭೆ ಮುಗಿಸಿ ತಿರುಗಾಟಕ್ಕೆ ಹೊರಟೆವು. ದಿನವೆಲ್ಲ ಹರ್ಷಮಯವಾಗಿತ್ತು; ಮಿತ್ರರ ಸಂಗವು ಇನ್ನೂ ಹರ್ಷತರವಾಗಿತ್ತು……”

ಜನವರಿ ೨೧ನೆಯ ಸೋಮವಾರದ ದಿನಚರಿ:

“ರಾತ್ರಿ ಕನಸಿನಲ್ಲಿ ಮೃತ್ಯುವಿನ ಕನಸು ಬಿತ್ತು. ಸ್ವಪ್ನದಲ್ಲಿ ನಾನು ಸತ್ತಿದ್ದೆ. ತುಂಬ ಆನಂದವಾಗಿಯೂ ಇತ್ತು. ಲೋಕದಿಂದ ಲೋಕಕ್ಕೆ ಅನೇಕ ಲೋಕಗಳನ್ನು ದಾಟುತ್ತಿದ್ದೆ. ಆ ಲೋಕಗಳಲ್ಲ ನನಗೆ ಆನಂದವಿತ್ತದ್ದು; ನಾನೆ ಆನಂದವಾಗಿದ್ದೆ. ಆದರೆ ತಟಕ್ಕನೆ ಎಚ್ಚರವಾಗಿ ನೋಡುತ್ತೇನೆ, ನಾನು ಸ್ಥೂಲವಾಗಿ ಹಾಸಗೆಯಲ್ಲಿ ಬಿದ್ದುಕೊಂಡಿದ್ದೆ! (But suddenly I woke and found myself bulky on the bed!) ಸ್ಕೂಲಿಗೆ ಹೋಗುವ ಮುನ್ನ ನನ್ನ ಕವನ “The Noble Path” ಅನ್ನು ಹಸ್ತಪ್ರತಿಗೆ ಕಾಪಿ ಮಾಡಿದೆ. ಹನ್ನೊಂದನೆ ಗಂಟೆಯ ಪೀರಿಯಡ್ಡಿನಲ್ಲಿ ಇಂಗ್ಲೀಷ್‌ ಪಾಠಹೇಳುವ ಅಧ್ಯಾಪಕ ಶ್ರೀ ಗಾರ್ಡನ್‌ ಎಂಬುವರು (ಭಾರತೀಯರೇ.) ಯಾವುದೊ ಪಾಠದ ಸಂದರ್ಭದಲ್ಲಿ ಸತ್ತ ಮೇಲೆ ನಾವು ಇರುತ್ತೇವೆ ಎಂದು ಹೇಳುವುದಕ್ಕೆ ನಮಗೆ ಯಾವ ವಾಸ್ತವಿಕ ಆಧಾರವೂ ತಿಳಿದುಬಂದಿಲ್ಲ ಎಂದರು ಸತ್ತಮೇಲೆಯೂ ನಾವು ಇರುತ್ತೇವೆ ಎಂದು ಅವರಿಗೆ ಮನಗಾಣಿಸುವುದಕ್ಕಾಗಿ ನಾನು ಇಡೀ ಪೀರಿಯಡ್ಡನ್ನೇ ಅವರೊಡನೆ ಜಿಜ್ಞಾಸೆಯಲ್ಲಿ ಕಳೆಯುವಂತೆ ಮಾಡಿದೆ. ನಾನು ಎಷ್ಟೊ ನಿದರ್ಶನಗಳನ್ನೂ ಸಂಗತಿಗಳನ್ನೂ ನನ್ನ ವಾದ ಸಮರ್ಥನೆಗಾಗಿ ಕೊಟ್ಟೆ. ಆದರೆ ಅವರು ‘ಅವೆಲ್ಲ ವಾಸ್ತವ ಸಂಗತಿಗಳಲ್ಲ, ಬರಿಯ ನಂಬಿಕೆಗಳು’ ಎಂದು ಬಿಟ್ಟರು. ಭೌತವಸ್ತುಗಳನ್ನು ಆಧಾರ ಸಹಿತವಾಗಿ ಸಮರ್ಥಿಸುವಂತೆ ಆತ್ಮವನ್ನು ಸ್ಥೂಲೇಂದ್ರಿಯಗಳಿಗೆ ತೋರಿಸಲಾಗುವುದಿಲ್ಲ ಎಂದೆ ಆಧುನಿಕ ಪ್ರೇತಶಾಸ್ತ್ರದ (spiritualism) ಮಾತೆತ್ತಿ ನಾನು ‘ಸತ್ತವರೊಡನೆ ಸಂಪರ್ಕ ಹೊಂದಲು ಸಾಧ್ಯ’ ಎಂದೆ. ‘ನಾವೆಲ್ಲರೂ ಅದನ್ನು ನೋಡುವ ಹಾಗಿದ್ದರೆ ಮಾತ್ರ ನಂಬಬಹುದು’ ಎಂದರು ಅವರು ‘ನೀವೆಂದಂತೆ ನಾವೆಲ್ಲರೂ ಹಾಗೆ ನೋಡಲು ಸಾಧ್ಯವಾದರೂ ನಾವು ಆತ್ಮದ ಅಮೃತತ್ವವನ್ನು ನಂಬುವಂತೆ ಮಾಡಲು ಸಾಧ್ಯವಾಗದಿರಬಹುದು; ಏಕೆಂದರೆ ನಮ್ಮೊಡನೆ ಸಂಪರ್ಕಗೊಳ್ಳುವ ಆ ಪ್ರೇತಜೀವಕ್ಕೂ ನಮಗಿರುವಂತೆಯೆ ಒಂದು ಕೊನೆ ಇರಬಾರದೇಕೆ? ಒಂದು ವೇಳೆ ಅದು ‘ನನಗೆ ಸಾವಿಲ್ಲ. ನಾನು ಅಮೃತ’ ಎಂದು ಹೇಳಿದರೂ ನಮ್ಮ ಹೇಳಿಕೆಗಿರುವಷ್ಟೆ ಬೆಲೆ ಅದರ ಹೇಳಿಕೆಗೂ. ಹೀಗೆ ಇಡೀ ಪೀರಿಯಡ್ಡೆ ಇಂತಹ ವಾದದಲ್ಲಿ ಮುಗಿದುಹೋಯ್ತು. ಹಾಗೆಯೆ ಬೀಜಗಣಿತದ ಕ್ಲಾಸಿನಲ್ಲಿ Ö-1 ಎಂಬ ಕಾಲ್ಪನಿಕ ಬೀಜಮೊತ್ತವನ್ನು ಕುರಿತೂ ತುಂಬ ಚರ್ಚೆ ನಡೆಸಿದೆ.[3] ಸಿನಿಮಾಕ್ಕೆ ಹೋಗಿದ್ದೆ.

 


[1] ಇದರಿಂದ ಒಂದು ವಿಷಯ ಗೊತ್ತಾಗುತ್ತದೆ. ನಾನು ಕನ್ನಡದಲ್ಲಿ ಬರೆಯತೊಡಗಿದುದು ಶ್ರೀಯುತ ಕಸಿನ್ಸ್‌ ಅವರನ್ನು ಕಂಡಮೇಲೆಯೆ ಎಂಬುದು ಪೂರ್ತಿ ನಿಜವಲ್ಲ. ಅಮಲನ ಕಥೆಯನ್ನು ಅದಕ್ಕೆ ಮುಂಚೆಯೆ ೧೯೨೪ರಲ್ಲಿ ಬರೆದಿದ್ದೇನೆ.

[2] ಗೋಪಾಲ ಬಾಲರೂಪಿಯಾದ ಭಗವಾನ್ ಶ್ರೀಕೃಷ್ಣ ಎಂಬರ್ಥದಲ್ಲಿ

[3] In algebra we had a discussion about Ö-1 =1 as imaginary. 14 = Iso 1=4 Ö land so on. At last I came to the conclusion that when we take numbers relatively then we have fractions. Irrationals etc… but individually they themselves are units.