ಜನವರಿ ೨೨ನೆಯ ಮಂಗಳವಾರದ ದಿನಚರಿ:

“ಬೆಳಿಗ್ಗೆ ‘The Lake View’ ಎಂಬ ಕವನರಚನೆ ಮಾಡಿದೆ. (ಅದನ್ನು ಹಿಂದೆಯೆ ಕೊಟ್ಟಿದ್ದೆ) ಸ್ಕೂಲಿನಲ್ಲಿ ಶ್ರೀಯುತ ಸಪ್ತರ್ಷಿ ಅಯ್ಯರ್ ಕ್ಲಾಸಿನ ವಿದ್ಯಾರ್ಥಿಗಳಿಗೆ ‘The Nature of Poet’ ಎಂಬ ವಿಷಯದ ಮೇಲೆ ಪ್ರಬಂಧ ಬರೆಯಲು ಹೇಳಿದರು. ನಾನು ಬರೆದು ತೋರಿಸಿದೆ. ಅವರು ಅದನ್ನು ಮೆಚ್ಚಿ ಎಷ್ಟು ಹೊಗಳಿದರು ಎಂದರೆ ನನಗೆ ಅತಿಯಾಯಿತೇನೋ ಎನ್ನಿಸಿತು. ಅಂತೂ ನನಗೆ ಪ್ರೋತ್ಸಾಹಕರವಾಗಿತ್ತು. ಅವರಲ್ಲಿ ನಿಜವಾದ ಅಧ್ಯಾಪಕನೊಬ್ಬನನ್ನು ನಾನು ಕಂಡುಕೊಂಡೆ. ಅಷ್ಟೊಂದು ಜನ ಅಧ್ಯಾಪಕರಲ್ಲಿ ಜೀವನಾನಂದವನ್ನು ಪಡೆದುಕೊಂಡವರು ಅವರೊಬ್ಬರೆ ಎಂದೆನಿಸಿತು. ನನ್ನ ಹೃದಯ ಸುಸ್ಪಂದಿಸಿತು; ಭಾವಾತಿಶಯದಿಂದ ನನ್ನ ಕೈಗಳು ವಿಕಂಪಿಸುತ್ತಿದ್ದುವು. ಪಬ್ಲಿಕ್ ಲೈಬ್ರರಿಗೆ ಹೋಗಿ ಶ್ರೀಕೃಷ್ಣಚೈತನ್ಯನ ಜೀವನಚರಿತ್ರೆ ಓದಿದೆ. ನನಗಾದ ಆನಂದಾತಿಶಯವನ್ನು ಇಲ್ಲಿ ವರ್ಣಿಸಲು ಸಾಧ್ಯವಿಲ್ಲ. ರೂಮಿಗೆ ಬಂದು ಊಟ ಮಾಡಿದ ಮೇಲೆ ಮಿತ್ರರಿಗೆ ಕಾವ್ಯದ (poetry) ವಿಚಾರವಾಗಿ ತಿಳಿಸಿದೆ. ವರ್ಡ್ಸ್‌ವರ್ತನ ಕೆಲವು ಕವನಗಳನ್ನು ಓದಿ ವಿವರಿಸಿದೆ. ವಿವರಿಸಿದ ತರುವಾಯವೆ ಅವರಿಗೆ ಅರ್ಥವಾಗಿ ಅಸ್ವಾದಿಸಿದರು. ಅನೇಕರಿಗೆ ತಿಳಿಸಿದರಲ್ಲದೆ ಕಾವ್ಯದ ರಸಾಸ್ವಾದ ಉಂಟಾಗುವುದಿಲ್ಲ ಎಂದುಕೊಂಡೆ. ಓ ಸ್ವಾಮೀ, ಪ್ರತಿಭೆಯನ್ನೇನೊ ದಾನಮಾಡಿದ್ದೀಯೆ; ನಾನದನ್ನು ಸರಿಯಾಗಿ ಅಹಂಭಾವರಹಿತವಾಗಿ ವಿನಿಯೋಗಿಸುವಂತೆ ಅನುಗ್ರಹಿಸು. ನಿನ್ನ ಸೇವಕನಂತೆ ಇರುವ ವಿನಯವನ್ನು ದಯಪಾಲಿಸು. ಅತ್ಯಂತ ವಿನಮ್ರನಾಗಿರುತ್ತೇನೆ. ಹೇ ಕೃಷ್ಣಭಗವಾನ್‌, ನನ್ನನ್ನು ಕೈಹಿಡಿದು ನಡೆಸು!”

ಮೇಲಿನ ದಿನಚರಿಯಲ್ಲಿ ‘ಕಾವ್ಯ ಸ್ವರೂಪ, (The Nature of Poetry) ಪ್ರಬಂಧ ಲೇಖನದ ಸಂಗತಿಯ ವಿಚಾರವಾಗಿಯೂ, ಅಧ್ಯಾಪಕ ಸಪ್ತರ್ಷಿ ಅಯ್ಯರ್ ವಿಚಾರವಾಗಿಯೂ ನಾಲ್ಕು ಮಾತು ವಿವರವಾಗಿ ಬರೆಯದಿದ್ದರೆ ‘ಅಸಾಧಾರಣ’ವಾದುದನ್ನು ‘ಯಃಕಶ್ಚಿತ’ಗೊಳಿಸಿದ ಔದಾಸೀನ್ಯದ ಅಪರಾಧವೆಸಗಿದಂತಾಗುತ್ತದೆ.

ಅವೊತ್ತು ನಮಗಿದ್ದದ್ದು ಇಂಗ್ಲಿಷ್ ಪೀರಿಯಡ್. ಇಂಗ್ಲಿಷ್ ಪಾಠ ಹೇಳುವ ಅಧ್ಯಾಪಕರು ರಜಾ ತೆಗೆದುಕೊಂಡಿದ್ದರು. ಆದರೆ ಆಗ ಮಹಾರಾಜಾ ಹೈಸ್ಕೂಲಿಗೆ ಹೆಡ್‌ಮಾಸ್ಟರ್ ಆಗಿದ್ದ ಆ.ವಿ.ಕೃಷ್ಣಸ್ವಾಮಿ ಅಯ್ಯರ್ ಅವರು ಬಹಳ ನಿಷ್ಠುರ ನಿಷ್ಠಾವಂತರಾಗಿದ್ದುದರಿಂದ ಅಧ್ಯಾಪಕರು ರಜಾ ತೆಗೆದುಕೊಂಡು ಬರಲಾಗದಿದ್ದರೂ ವಿದ್ಯಾರ್ಥಿಗಳಿಗೆ ಪೀರಿಯಡ್‌ ನಷ್ಟವಾಗಬಾರದೆಂದು ಬೇರೆ ಯಾರಾದರೂ ಅಧ್ಯಾಪಕರು ಆ ಕರ್ತವ್ಯಕ್ಕೆ ನಿಯಮಿತರಾಗುತ್ತಿದ್ದರು. ಪಾಠ ಇಂಗ್ಲಿಷ್ ಪೀರಿಯಡ್ ಆಗಿದ್ದರೂ ಗಣಿತದ ಅಧ್ಯಾಪಕರಾದರೂ ಚಿಂತೆಯಿಲ್ಲ. ಆ ಪೀರಿಯಡ್ಡನ್ನು ತೆಗೆದುಕೊಳ್ಳಲೆಬೇಕಾಗಿತ್ತು! ನಾವು ಇಂಗ್ಲಿಷ್ ಅಧ್ಯಾಪಕರಿಗಾಗಿ ಕಾಯುತ್ತಾ ಕುಳಿತಿದ್ದೆವು, ಮೊದಲನೆಯ ಪೀರಿಯಡ್ಡಿನಲ್ಲಿ. ಸಾಮಾನ್ಯವಾಗಿ ಮೊದಲನೆಯ ಪೀರಿಯಡ್ಡುಗಳೆಲ್ಲ ರಾಜಭಾಷೆಯಾದ ಇಂಗ್ಲಿಷಿಗೇ ಮೀಸಲಾಗಿರುತ್ತಿತ್ತು. ಕನ್ನಡಕ್ಕೆ ಕೊನೆಕೊನೆಯ ಗಂಟೆಗಳು, ಕನ್ನಡ ಕಾಟಾಚಾರ ಮಾತ್ರದ ವಿಷಯವಾಗಿದ್ದುದರಿಂದ.

ಅಧ್ಯಾಪಕರೇನೊ ಸ್ವಲ್ಪ ತಡವಾಗಿಯಾದರೂ ಬಂದರು. ನೋಡುತ್ತೇವೆ: ಇಂಗ್ಲಿಷ್ ಅಧ್ಯಾಪಕರಲ್ಲ, ಗಣಿತದ-ಅದರಲ್ಲಿಯೂ ‘ಆಲ್‌ಜೀಬ್ರ’ದ (ಬೀಜಗಣಿತದ) ಅಧ್ಯಾಪಕರು, ಸಪ್ತರ್ಷಿ! ಅವರೂ ಅಯ್ಯರೆ; ಆದರೆ ನಾವು ಅವರನ್ನು ‘ಸಪ್ತರ್ಷಿ’ ಎಂದೆ ಕರೆಯುತ್ತಿದ್ದುದು.

ಸಪ್ತರ್ಷಿಯವರು ತುಂಬ ಸಾತ್ತ್ವಿಕ ವ್ಯಕ್ತಿ, ಮಹಾ ಸಾಧು, ಇತರ ಅಧ್ಯಾಪಕರನ್ನು ಕಂಡರೆ ನಮಗಾಗುತ್ತಿದ್ದ ಭಯಭಾವನೆ ಅವರ ಮುಂದೆ ಉಂಟಾಗುತ್ತಿರಲಿಲ್ಲ. ಅವರು ತುಸು ಸ್ಥೂಲಕಾಯದ ಜಬಲುಜಬಲು ವ್ಯಕ್ತಿ. ಅವರ ಉಡುಪೂ ಇತರರಂತೆ ‘ಟ್ರಿಮ್‌’ ಆಗಿರುತ್ತಿರಲಿಲ್ಲ. ಅಂಚಿಲ್ಲದ ಒಂದು ಬಿಳಿ ರುಮಾಲು ಸುತ್ತಿರುತ್ತಿದ್ದರು. ಅದೂ ಖಾದಿಯದೇ ಇರಬೇಕು. ಒಂದು ಖಾದಿಬಟ್ಟೆಯ ಬಿಳಿಕೋಟು; ಅಂಥಾದ್ದೆ ಬಿಳಿ ಪಂಚೆ ಕಚ್ಚೆಹಾಕಿರುತ್ತಿದ್ದರು. ವಯಸ್ಸು ಐವತ್ತರ ಆಚೆ ಈಚೆ ಇರಬಹುದು. ನಡೆ, ನುಡಿ, ಚಲನ ವಲನ, ದನಿ ಎಲ್ಲದರಲ್ಲಿಯೂ ಅತ್ಯಂತ ಸಾವಧಾನದ ಭಂಗಿ. ಕೆಲವರು ಅವರಿಗೆ ‘ಈಗಲೂ ಅಷ್ಟಕಷ್ಟೆ!’ ಎಂದೂ ಸೂಚಿಸುತ್ತಿದ್ದರು. ಅದಕ್ಕೆಲ್ಲ ಕಾರಣ ಅವರ ಆಧ್ಯಾತ್ಮಿಕ ಧ್ಯಾನಶೀಲತೆ ಎಂದೇ ನನ್ನ ಭಾವನೆ. ಅವರು ಸಿಟ್ಟುಗೊಂಡದ್ದನ್ನಾಗಲಿ ಮುಖ ಸಿಂಡರಿಸಿದ್ದನ್ನಾಗಲಿ ನಾನು ಕಂಡಿರಲಿಲ್ಲ. ಯಾವಾಗಲೂ ಮುಗುಳು ನಗುಮೊಗದಿಂದಲೆ ಮಾತಾಡುತ್ತಿದ್ದರು. ಪಾಠ ಹೇಳುವಾಗಲೂ! ಅವರು ತೆಗೆದುಕೊಳ್ಳುತ್ತಿದ್ದದ್ದು, ಬೀಜಗಣಿತ. ನನಗೇನು ಅಂತಹ ಹೃದಯಪ್ರಿಯ ವಿಷಯವಾಗಿರಲಿಲ್ಲ ಅದು. ಆದರೂ ಅವರ ಪೀರಿಯಡ್ಡನ್ನು ಸಂತೋಷದಿಂದ ಎದುರುನೋಡುತ್ತಿದ್ದರು ವಿದ್ಯಾರ್ಥಿಗಳು. ಬೀಜಗಣಿತದಂತಹ ಅಪ್ರಿಯ ವಿಷಯವೂ ಪ್ರಿಯವಾಗುತ್ತಿತ್ತು ಸಪ್ತರ್ಷಿಗಳು ಬೋಧಿಸಿದಾಗ.

ಅವರು ‘ಆಲ್ಜೀಬ್ರ’ ಪಾಠಕ್ಕೇ ಶುರುಮಾಡುತ್ತಾರೆ ಎಂದು ಭಾವಿಸಿದ್ದ ನಮಗೆ ಅಚ್ಚರಿಯಾಯಿತು ‘The Nature of Poetry’ (‘ಕಾವ್ಯ ಸ್ವರೂಪ’ ಅಥವಾ ಕವಿತೆ ಎಂದರೇನು) ಎಂಬ ವಿಷಯದ ಮೇಲೆ ಪ್ರಬಂಧ ಬರೆಯಿರಿ ಎಂದು ಅವರು ಹೇಳಿದಾಗ. ಪ್ರಬಂಧವನ್ನು ಇಂಗ್ಲಿಷಿನಲ್ಲಿಯೆ ಬರೆಯಬೇಕೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿರಲಿಲ್ಲ. ಆಗ ಕನ್ನಡ ಇಂಗ್ಲಿಷಿನ ಸಿಂಹಾಸನದ ಕೆಳಗೆ ಕಾಲೊರಸಾಗಿತ್ತಷ್ಟೆ! ಆ ಭಾಷೆಯಲ್ಲಿ ಪ್ರಬಂಧ ಬರೆಯಿಸಿಕೊಳ್ಳುವಷ್ಟು ಗೌರವ ಅದಕ್ಕೆಲ್ಲಿಂದ ಬರಬೇಕು, ಆ ವರ್ನಾಕ್ಯುಲ್‌ಗೆ, ಅಂದರೆ, ಗುಲಾಂಭಾಷೆಗೆ?

ವಿದ್ಯಾರ್ಥಿಗಳಲ್ಲಿ ಪ್ರಬಂಧ ಬರೆಯುವಂತೆ ಎಲ್ಲರೂ ನಟಿಸುತ್ತಿದ್ದರು. ಆದರೆ ಕೆಲವರೇ ಮಾತ್ರ ನಿಜವಾಗಿಯೂ ಬರೆಯಲು ಪ್ರಯತ್ನಿಸುತ್ತಿದ್ದವರು: ಅನೇಕರಿಗೆ ವಿಷಯವೆ ಅಗಮ್ಯವಾಗಿತ್ತು! ಅಂತೂ ತಮ್ಮ ಕೈಸೇರಿದ ಕೆಲವನ್ನು ಸಪ್ತರ್ಷಿಗಳು ವೇದಿಕೆಯ ಮೇಲಿದ್ದ ಮೇಜಿನ ಹಿಂದಿದ್ದ ಕುರ್ಚಿಯ ಮೇಲೆ ಕುಳಿತು ಪರಿಶೀಲಿಸುತ್ತಿದ್ದರು. ಇದ್ದಕಿದ್ದ ಹಾಗೆ ಎದ್ದು ನಿಂತರು. ಮುಖದ ಮೇಲೆ ಏನೊ ಆನಂದದ ಮಂದಹಾಸ. ಉತ್ಸಾಹದ ಧ್ವನಿಯಲ್ಲಿ ತರಗತಿಯನ್ನು ಸಂಬೋಧಿಸಿ ‘ಮಿತ್ರರೆ, ವಿದ್ಯಾರ್ಥಿಗಳು ಬರೆದಿರುವ ಪ್ರಬಂಧಗಳಲ್ಲಿ ಒಂದನ್ನು ಮಾದರಿಯಾಗಿ ನಿಮಗೆ ಓದುತ್ತೇನೆ. ಕಿವಿಗೊಟ್ಟು ಆಲಿಸಿ, ಎಂದು ಹೇಳಿ ಭಾವಪೂರ್ಣವಾಗಿ ಓದಲುತೊಡಗಿದರು. ನೋಡುತ್ತೇನೆ: ಅದು ನಾನು ಬರೆದದ್ದೆ: From joy we come, in joy we live, towards joy we move, and into joy we merge in end? – so sings the sage of the Upanishads ಎಂದು ಪ್ರಾರಂಭಿಸಿದ್ದೆ ಆ ನನ್ನ ಪ್ರಬಂಧವನ್ನು.

ಸಪ್ತರ್ಷಿಗಳು ಇಡೀ ಪ್ರಬಂಧವನ್ನು ಗಂಭೀರವಾಗಿ ಪೂರ್ತಿಯಾಗಿ ಓದಿದರು. ಅವರ ಮುಖಭಂಗಿಯಲ್ಲಿ ತಾವು ಮಾಡುತ್ತಿರುವ ಕಾರ್ಯದ ಪವಿತ್ರತೆಯ ಅರಿವಿನಿಂದ ಮೂಡಿದುದೋ ಎಂಬಂತಹ ಗಾಂಭೀರ್ಯವಿತ್ತು. ಅವರ ಧ್ವನಿಯಲ್ಲಿ ಗೌರವ ಭಾವನೆ ಕಡಲಾಡುತ್ತಿತ್ತು. ಅವರ ಚೇತನವೆಲ್ಲ ಏನೊ ಒಂದು ಧನ್ಯತೆಯನ್ನು ಅನುಭಾವಿಸುವಂತಿತ್ತು. ಕ್ಲಾಸಿಗೆ ಕ್ಲಾಸೇ, ವಿಷಯದ ಅರಿವಾಗಲಿ ಬಿಡಲಿ, ಸೂಜಿಬಿದ್ದರೂ ಸದ್ದಾಗುವಂತಹ ನಿಃಶಬ್ದತೆಯಿಂದ ಕಿವಿನಿಮಿರಿ ಆಲಿಸಿತ್ತು. ಓದು ಪೂರೈಸಲು ಕೊಟಡಿಯೆ ಸಂತೃಪ್ತಿಯಿಂದೆಂಬಂತೆ ಸುಯ್ದಂತಾಯ್ತು. ಸಪ್ತೆರ್ಷಿಯವರು ಹೃದಯತುಂಬಿ ತಮಗಾದ ಆನಂದವನ್ನು ಪ್ರಶಂಸೆಯ ಅಮೃತಧಾರೆಯಲ್ಲಿ ಎರೆದುಬಿಟ್ಟರು. ಎಂದೆಂದಿಗೂ ಮರೆಯಲಾಗದಿದ್ದ ಒಂದೆರಡು ವಾಕ್ಯಗಳು ಮಾತ್ರ ನೆನಪಿಗೆ ಬರುತ್ತಿವೆ: Friends, this is a great day, we have spent an hour of blessedness! (ಮಿತ್ರರೇ, ಇದೊಂದು ಮಹಾ ಸುದಿನ. ನಾವು ಕಳೆದ ಈ ಒಂದು ಘಂಟೆ ಧನ್ಯ!)

ಇತರ ಪ್ರಬಂಧಗಳನ್ನು ಅವರವರಿಗೆ ಹಿಂದಕ್ಕೆ ಕೊಟ್ಟಂತೆ ನನ್ನದನ್ನು ನನಗೆ ಹಿಂತಿರುಗಿಸಲಿಲ್ಲ. ಅದನ್ನವರು ಜೇಬಿನಲ್ಲಿಟ್ಟುಕೊಂಡು ಸಮಯ ಸಂದರ್ಭ ಒದಗಿದಂತೆಲ್ಲ ಅಧ್ಯಾಪಕವರ್ಗದವರಿಗೂ ತಮ್ಮ ನಾಗರಿಕಮಿತ್ರರಿಗೂ ಓದಿಹೇಳುತ್ತಿದ್ದರೆಂದು ಎಷ್ಟೋ ಕಾಲದ ಮೇಲೆ ನನಗೆ ನಾ.ಕಸ್ತೂರಿಯವರು ಹೇಳಿದ ಜ್ಞಾಪಕ.

ಜನವರಿ ೨೩ನೆಯ ಬುಧವಾರದ ದಿನಚರಿ:

“ಬೆಳಿಗ್ಗೆ ಎದ್ದವನೆ ವ್ಯಾಯಾಮ ಮಾಡಿದೆ. ‘Lake View’ ಕವನದ ಒಂದೆರಡು ಪದ್ಯ ರಚಿಸಿ ಅದನ್ನು ಪೂರೈಸಿದೆ. ೯ ಗಂಟೆಗೆ ವಿ.ನಾಗಪ್ಪ ಬಂದು ಎರಡು ರೂಪಾಯಿ ಕಡ ತೆಗೆದುಕೊಂಡು ಹೋದರು. ಸ್ಕೂಲಿನಲ್ಲಿ ಏನೂ ವಿಶೇಷ ನಡೆಯಲಿಲ್ಲ. ಐದು ಗಂಟೆಗೆ ಕೊಟಡಿಗೆ ಬಂದು, ನನ್ನ Elegyಯನ್ನು ಒಂದೂವರೆ ರೂಪಾಯಿಗೆ ಟೈಪು ಮಾಡಲು ಕೊಟ್ಟು, ಕಾಫಿ ತಿಂಡಿಗೆ ಹೋದೆ. ಗೋಪಾಲಕೃಷ್ಣಶೆಟ್ಟಿ ಸಿಕ್ಕರು. ಆಮೇಲೆ ಪಬ್ಲಿಕ್ ಲೈಬ್ರೆರಿಗೆ ಹೋಗಿ, ಸ್ವಾಮಿ ಅಭೇದಾನಂದರ ‘Divine Heritance of Man’ ತೆಗೆದುಕೊಂಡು ೮೩ ಪುಟ ಓದಿದೆ. ರೂಮಿಗೆ ಬರುವಾಗ ದಾರಿಯಲ್ಲಿ ಭಿಕ್ಷುಕರಿಗೆ, ನಾನಿನ್ನು ಕೊಡಬೇಕಾಗಿದ್ದ ಮೊತ್ತದಲ್ಲಿ ಆರು ಕಾಸು ಕೊಟ್ಟೆ. ಇನ್ನೂ ಒಂದು ರೂಪಾಯಿ ಇದೆ ಅವರಿಗೆ ನಾನು ಕೊಡಬೇಕಾದ ಬಾಕಿ. ರೂಮಿಗೆ ಬಂದಾಗ ಪಿ.ಮಲ್ಲಯ್ಯ ಬಂದರು. ಇಬ್ಬರೂ ಬಹಳ ಹೊತ್ತು ಅನೇಕ ಗಂಭೀರ ವಿಚಾರ ಮಾತಾಡಿದೆವು. ಊಟ ಮುಗಿಸಿ ಅವರು ತಮ್ಮ ರೂಮಿಗೆ ಹೋದರು. ಜಾಮಿಟ್ರಿಯಲ್ಲಿ ಎರಡು ಥಿಯರಂ ಓದಿ, ಹಾಸಗೆ ಹಾಸಿಕೊಂಡು ಮಲಗಿದೆ, ಹತ್ತು ಗಂಟೆಗೆ, ಹೇ ಸ್ವಾಮೀ, ನಿನ್ನನ್ನು ನಿತ್ಯವೂ ನೆನೆಯುತ್ತಿದ್ದೇನೆ; ನಿನ್ನ ಸಾನ್ನಿಧ್ಯವನ್ನು ಸರ್ವತ್ರ ಅನುಭವಿಸುತ್ತಿದ್ದೇನೆ; ಆದರೂ ನನಗೇಕೆ ಇನ್ನೂ ಇಂದ್ರಿಯ ಜಯ ಕೈಗೂಡಿಲ್ಲ? ಕೃಷ್ಣ! ಕೃಷ್ಣ!”

ಜನವರಿ ೨೪ನೆಯ ಗುರುವಾರದ ದಿನಚರಿ:

ಇವೊತ್ತು ಬೆಳಿಗ್ಗೆ ನಾನು ಅತ್ಯಂತ ಹೇಯವೂ ಹೀನಾಯವೂ ಆಗಿರುವ ಅಪರಾಧ ಎಸಗಿದ್ದೇನೆ. ಬರೆದಿಟ್ಟ ವ್ರತಕ್ಕೆ ಭಂಗ ತಂದುಕೊಂಡಿದ್ದೇನೆ. ನನ್ನ ಪಾಪವನ್ನಳೆಯಲು ಅನಂತವೂ ಸೋಲುತ್ತದೆ, ಇದು ತುಂಬ ಅಸಾಧ್ಯವೂ ಪೌರುಷವಿಹೀನವೂ ಆಗಿರುವ ಹೇಡಿಕಾರ್ಯ ಎಚ್ಚರಿಕೆ! ಉಪನಿಷತ್ತಿನಲ್ಲಿ ಏನು ಬರೆದಿದ್ದೀಯ? ಪವಿತ್ರ ಸಂತರ ಮತ್ತು ‘ಪವಿತ್ರ ಗ್ರಂಥಗಳ ಮತ್ತು ಸರ್ವಶಕ್ತನಾದ ಸರ್ವೇಶ್ವರನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಅಂತಹ ಅಪರಾಧವನ್ನು ಇನ್ನೆಂದೂ ಮಾಡುವುದಿಲ್ಲ. ನನ್ನ ಗುರುದೇವ ಸ್ವಾಮಿ ವಿವೇಕಾನಂದರ ಮೇಲೆ ಆಣೆಯಿಟ್ಟು ಪ್ರತಿಜ್ಞೆ ಮಾಡುತ್ತೇನೆ. ಓ ಸ್ವಾಮಿಯೆ, ನಾನು ಪರಿಶುದ್ಧನಾಗಿದ್ದಾಗ ನೀನು “ನನ್ನಡೆಯೆ ಆಡುತ್ತಾ ಕುಣಿಯುತ್ತಾ ಸಖನಂತೆ ಇರುತ್ತಿದ್ದೆ. ಅಪರಾಧಿಯಾದಮೇಲೆ ನೀನು ನನ್ನಿಂದ ದೂರವಾಗಿಬಿಟ್ಟೆ, ಭಯಂಕರವಾಗಿಬಿಟ್ಟೆ! ನನ್ನನ್ನು ಕ್ಷಮಿಸು! ನನ್ನನ್ನು ತ್ಯಜಿಸಬೇಡ, ಓ ನನ್ನ ತಂದೆ, ಓ ನನ್ನ ತಾಯಿ, ಓ ನನ್ನ ಗೆಳೆಯ! ನನ್ನ ಪಾಪವನ್ನು ಕ್ಷಮಿಸಿ, ನನ್ನನಾಲಿಂಗಿಸು, ಓ ನನ್ನ ಪ್ರೇಮಮಯ ಕೃಷ್ಣ!… “ಸಂಜೆ ನಾನೂ ಬಸವರಾಜೂ ಸಿನಿಮಾಕ್ಕೆ ಹೋದೆವು. ದೀಪ ಆರಿಹೋಗಿದ್ದರಿಂದ ಅದು ತುದಿ ಮುಟ್ಟುವ ಮೊದಲೆ ನಿಂತು ಹೋಗಿ ನಾವು ಹೊರಗೆ ಬಂದೆವು. ರೂಮಿಗೆ ಬಂದು ಜಾಮಿಟ್ರಿ ಓದಿದೆ. ಪರೀಕ್ಷೆ ದಿನವನ್ನು ೨೮.೧.೧೯೨೪ ಎಂದು ಘೋಷಿಸಿದರು. ಸ್ಕೂಲಿನಲ್ಲಿ ನನ್ನ ಮಿತ್ರರಿಗೆ ನನ್ನ ಕವನ ಎಲಿಜಿಯನ್ನು ತೋರಿಸಿದೆ. ತುಂಬ ಮೆಚ್ಚಿಕೊಂಡರು. ಎಚ್ಚರಿಕೆ, ಓ ನನ್ನ ಹೃದಯ, ನೀನೇ ತೋಡಿಕೊಳ್ಳುವ ತಳವಿಲ್ಲದ ಪಾತಾಳದ ನರಕಕೂಪಕ್ಕೆ ಬೀಳಬೇಡ! ಶ್ರೀಕೃಷ್ಣನಿಗೆ ಮೊರೆಯಿಟ್ಟು ಪ್ರಾರ್ಥಿಸು! ಅವನು ಪ್ರಸನ್ನನಾಗುತ್ತಾನೆ.

ಜನವರಿ ೨೫ನೆಯ ಶುಕ್ರವಾರದ ದಿನಚರಿ:

“ಬೆಳಿಗ್ಗೆ ಮುಂಚೆ ೪.೪೫ಕ್ಕೆ ಎದ್ದೆ. ಕೆಲವು ಪಾಠಗಳನ್ನು ಅಧ್ಯಯನ ಮಾಡಿ, ನನ್ನ ದೈನಂದಿನ ವ್ಯಾಯಾಮಗಳನ್ನು ಮುಗಿಸಿದೆ. ನನ್ನ ‘ಎಲಿಜಿ’ಯನ್ನು (Elegy)’Indian Review’ ಪತ್ರಿಕೆಗೆ ಕಳಿಸಿದೆ (ಮದ್ರಾಸಿಗೆ). ರೂಮಿನಲ್ಲಾಗಲಿ ಸ್ಕೂಲಿನಲ್ಲಾಗಲಿ ಪರೀಕ್ಷೆಯಲ್ಲಿ ತೇರ್ಗಡೆಹೊಂದುವ ಅಥವಾ ಹೊಂದದಿರುವ ಯಾವ ಕಾತರತೆಯೂ ನನ್ನ ಮುದ್ದು ಬಾಲಕೃಷ್ಣನ ಸನ್ನಿಕಟ ಸಂಗದಿಂದ ನನ್ನನ್ನು ಅಗಲಿಸಲು ಸಮರ್ಥವಾಗಲಿಲ್ಲ. ನಾನು ಏನೇ ಮಾಡುತ್ತಿರಲಿ ನನ್ನ ಸುತ್ತಮುತ್ತ ಅವನು ಕೊಳಲೂದುತ್ತಾ ಆಡುತ್ತಾನೆ ಕುಣಿಯುತ್ತಾನೆ ನಲಿಯುತ್ತಾನೆ; ಮತ್ತೆ ನನ್ನತ್ತ ತುಂಟ ನೋಟವಟ್ಟಿ ನನ್ನ ಹೃದಯವನ್ನು ಮೋಹಗೊಳಿಸುತ್ತಾನೆ. ಕ್ಲಾಸಿನ ಪಾಠಗಳಲ್ಲಿ ಮಗ್ನನಾಗಬೇಕೆಂದು ನಾನು ಪ್ರಯತ್ನಿಸಿದರೂ ಆ ಸ್ವರ್ಗೀಯ ದೃಶ್ಯದಿಂದ ವಿಮುಖನಾಗಲಾರದವನಾದೆ. ನನಗೆ ಗೊತ್ತು, ಅವನಿಗಾಗಿ ನಾನು ಎಲ್ಲವನ್ನೂ ಬಿಡಬೇಕಾಗುತ್ತದೆ ಎಂದು; ಬಿಟ್ಟೂಬಿಡುತ್ತೇನೆ. ಪ್ರಲೋಭನೆಗಳು ಅಡ್ಡ ಹಾಕುತ್ತವೆ. ಎಷ್ಟೊ ಸಾರಿ ಅವಕ್ಕೆ ವಶನಾಗುತ್ತೇನೆ. ಪಶ್ಚಾತ್ತಾಪರೂಪದ ಪ್ರಾಯಶ್ಚಿತ್ತಕ್ಕೂ ಒಳಗಾಗುತ್ತೇನೆ. ಯಥಾರ್ಥತೆಯ ಅರಿವೂ ಆಗುತ್ತದೆ. ಸಂಜೆ ೫ ಗಂಟೆಗೆ ಎಂ.ತಮ್ಮಯ್ಯ ನಾನು ಸ್ಟಡಿ ಮಾಡಲು ಉದ್ಯಾನಕ್ಕೆ ಹೋದೆವು. ಅಲ್ಲಿಗೆ ಸಿ.ಟಿ.ನರಸಿಂಹಶೆಟ್ಟಿ ಬಂದರು. ಒಳ್ಳೆಯ ಚರ್ಚೆ ನಡೆಯಿತು. ಹೇ ಜಗದೀಶ್ವರನೆ, ನಿನಗೆನ್ನ ಸೇವೆ ಮುಡಿಪಾಗಿರಲಿ, ಗಾಳಿಗೆ ಹೂವಿನ ಸೇವೆಯಂತೆ, ಭೂಮಿಗೆ ಮರಗಳ ಸೇವೆಯಂತೆ, ತಾಯಿಗೆ ಕಂದನ ಸೇವೆಯಂತೆ. ಕೀಳು ಸುಖಗಳತ್ತ ಮನಸ್ಸು ಓಡದಂತೆ ನನಗೆ ಪರಮ ಆನಂದವನ್ನು ದಯಪಾಲಿಸು. ಸರ್ವವನ್ನೂ ಸಮಗೊಳಿಸುವ ಮೃತ್ಯುವನ್ನು ಎದುರಿಸುವಂತೆ ನನ್ನನ್ನು ಧೀರನನ್ನಾಗಿ ಮಾಡು, ಕೃಷ್ಣಾ! (Let me be courageous in facing Death the Leveller!)

ಜನವರಿ ೨೬ನೆಯ ಶನಿವಾರದ ದಿನಚರಿ:

“ಬೆಳಿಗ್ಗೆ ೫ ಗಂಟೆಗೆ ಎದ್ದು ಪಾಠಗಳನ್ನು ಓದಿಕೊಂಡೆ. ಸ್ಕೂಲಿಗೆ ಹೋದೆ. ಮೂರು ಪೀರಿಯಡ್ಡುಗಳೂ ಥಿಯರಿಯೆ ಆಗಿದ್ದು ತುಂಬಾ ಬೇಸರವಾಯ್ತು, ರೂಮಿಗೆ ಬಂದು, ಸ್ನಾನ ಪೂರೈಸಿ, ನನ್ನ ತಮ್ಮ (ಕೆ.ಆ.ತಿಮ್ಮಯ್ಯ) ಕೇಳಿದ್ದರಿಂದ ಅವನಿಗೆ ಒಂದು “A Farewell Song” (ಬೀಳ್ಕೊಡಿಗೆ ಹಾಡು) ಬರೆದುಕೊಟ್ಟೆ, ಅವರ ಉಪಾಧ್ಯಾಯರಿಗೆ ವಿದಾಯ ನೀಡುವ ಸಂದರ್ಭಕ್ಕಾಗಿ. ವಾಕ್ ಹೋಗಲಿಲ್ಲ; ಅನೇಕ ವಿಷಯ ಮಾತಾಡಿದೆವು. ಸಂಜೆ ಪಿ.ಮಲ್ಲಯ್ಯ ಬಂದರು. ಬಹಳ ಹೊತ್ತು ಮಾತಾಡಿದೆವು, ಸ್ವಾಮಿ ವಿವೇಕಾನಂದರ ಜೀವನ, ಉಪದೇಶ, ದರ್ಶನ, ಅವರ ದಿವ್ಯಹೃದಯ- ಇವುಗಳನ್ನು ಕುರಿತು. ಅವರ ಹೆಸರೇ ನಮಗೊಂದು ವಿದ್ಯುತ್ ಸಂಚಾರವಾಗಿತ್ತು. ಮಾರ್ಕೆಟ್ಟಿನ ಚೌಕದಲ್ಲಿ ನಿಂತೇ ರಾತ್ರಿ ಹತ್ತೂವರೆಗಂಟೆಯವರೆಗೆ ಮಾತಾಡುತ್ತಿದ್ದೆವು, ಆಮೇಲೆ ರೂಮಿಗೆ ಹಿಂತಿರುಗಿ ಕೆಲವು ಕ್ಲಾಸ್‌ ಪಾಠಗಳನ್ನು ಓದಿ ಮಲಗಿದೆ. ಪುಪ್ಪಣ್ಣಗೆ ೪ ಆಣೆ ಕೊಟ್ಟೆ. ತಪ್ಪು ಮಾಡಿದ್ದರೆ ಕ್ಷಮಿಸು, ಸ್ವಾಮೀ; ಸರಿದಾರಿಯಲ್ಲಿ ನಡೆಸು, ಮೃತ್ಯು ಭಯವನ್ನು ನನ್ನಿಂದ ಕಿತ್ತೆಸೆ. ನನ್ನನ್ನು ಧೀರನನ್ನಾಗಿಸು, ಕೃಷ್ಣ!”

ಜನವರಿ ೨೭ನೆಯ ಭಾನುವಾರದ ದಿನಚರಿ:

“ಎಣ್ಣೆಸ್ನಾನ ಮುಗಿಸಿದೆ. ಮಲ್ಲಪ್ಪ, ಬಸವರಾಜು, ನಾನು ಪಾರ್ಕಿಗೆ ಹೋಗಿ ಕನ್ನಡ ಪದ್ಯ ಅಧ್ಯಯನಮಾಡಿದೆವು. ಪೂರ್ತಿಯಾಗಿಯೆ ಮುಗಿಸಿಬಿಟ್ಟೆವು. ಅಪರಾಹ್ನ ಒಂದು ಗಂಟೆಗೆ ರೂಮಿಗೆ ಹಿಂತಿರುಗಿ ಊಟ ಮಾಡಿದೆ. ನಾಲ್ಕು ಗಂಟೆಗೆ ಅನಂತರಾಮಯ್ಯ, ಗೋಪಾಲಕೃಷ್ಣ ಶೆಟ್ಟಿ ಬಂದರು. ನಾವೆಲ್ಲ ಪಾರ್ಕಿಗೆ ವಾಕ್‌ ಹೋದೆವು.

ಶೈಲಾಕ್‌ ವಿಚಾರ ಚರ್ಚಿಸಿದೆವು. ರೂಮಿಗೆ ಹಿಂತಿರುಗಿ ಪಾಠ ಓದಿ ಮಲಗಿದೆ. ವ್ಯರ್ಥವಾಗಿ, ತಿಗಣೆಯ ಕಾಟದಿಂದ ರಾತ್ರಿ ಒಂದು ಗಂಟೆವರೆಗೆ ನಿದ್ದೆ ಮಾಡಲಾಗಲಿಲ್ಲ. ಹಾಸಗೆಯನ್ನು ತಾರಸಿಗೆ ಸಾಗಿಸಿ ಮಲಗಿ ನಿದ್ದೆಮಾಡಿದೆ. ಶೋಕಿಗಲ್ಲ, ಅವಶ್ಯವಾಗಿತ್ತು. ಸ್ವಾಮಿ, ನನ್ನ ಬದುಕೆಲ್ಲ ನಿನ್ನ ಚಿಂತನದಲ್ಲಿಯೆ ಕಳೆಯಲಿ ! ಕೃಷ್ಣ!”

ಜನವರಿ ೨೮ನೆಯ ಸೋಮವಾರದ ದಿನಚರಿ:

“ಬೆಳಿಗ್ಗೆ ೪.೩೦ಕ್ಕೆ ಎದ್ದೆ, ಪಾಠ ಓದಿಕೊಂಡೆ. ಲೆಖ್ಖ ಮಾಡಿದೆ. ಪರೀಕ್ಷೆಯಲ್ಲಿ ಬರೆಯಲು ಕಾಗದ ಕೊಂಡುಕೊಂಡೆ. ೧೦ ಗಂಟೆಗೆ ಸ್ಕೂಲಿಗೆ ಹೋದೆ. ಗಣಿತದ ಪ್ರಶ್ನೆ ಪತ್ರಿಕೆ ಕಷ್ಟವಾಗಿತ್ತು. ರೂಮಿಗೆ ಬಂದು ಸಿನಿಮಾಕ್ಕೆ ಹೋದೆ. ಊಟ ಮಾಡಲಿಲ್ಲ, ಮೈಸರಿಯಾಗಿರಲಿಲ್ಲವಾದ್ದರಿಂದ. ಮೈಕೆಯೆಲ್ಲ ಏನೋ ಒಂದು ಥರಾ. ಹೇ ಜಗದೀಶ್ವರಾ, ನಾನು ನಿನ್ನಲ್ಲಿಗೆ ಬರುವಂತಾಗಲಿ. ನಿನ್ನ ಗೋಪಾಲಬಾಲರೂಪ ನನ್ನ ಕಣ್ಣಿನ ಮುಂದೆ ನರ್ತಿಸುವಂತಾಗಲಿ. ಸ್ವಾಮಿ ವಿವೇಕಾನಂದರೆ, ನನ್ನನ್ನು ಧೀರನನ್ನಾಗಿ ಮಾಡಿ ! ಕೃಷ್ಣ!”  ಕೃಷ್ಣ!”  ಕೃಷ್ಣ!”

ಜನವರಿ ೨೯ನೆಯ ಮಂಗಳವಾರದ ದಿನಚರಿ:

“ಇವೊತ್ತು ಇಂಗ್ಲಿಷ್‌ II ಪೇಪರ್ ಮತ್ತು ಕನ್ನಡ ಪರೀಕ್ಷೆಯಿತ್ತು. ನಾನು ಏನನ್ನೂ ಓದಲಿಲ್ಲ. ಏಕೆಂದರೆ ಎರಡೆ ಗಂಟೆಗಳಲ್ಲಿ ಮೂರು ಪಠ್ಯಪುಸ್ತಕಗಳನ್ನು ಓದುವುದು ಅಸಾಧ್ಯವಾಗಿ ಕಂಡುಬಂತು. ನಾನು ‘Laodamia’ ಮತ್ತು ‘Happy Warrior’ಎರಡನ್ನೆ ನೋಡಿಕೊಂಡೆ. ಇನ್ನು ಕನ್ನಡವೋ ದೇವರೆಗತಿ. (It was hopeless). ಓದಿಕೊಳ್ಳಲೆ ಇಲ್ಲ ಆದರೂ ಪರೀಕ್ಷೆಯಲ್ಲಿ ಇತರ ವಿದ್ಯಾರ್ಥಿಗಳಿಗಿಂತ ಕಡಿಮೆ ಮಾಡಿಲ್ಲ ಎಂದುಕೊಂಡಿದ್ದೇನೆ. ರೂಮಿಗೆ ಬಂದಾಗ ಒಂದು ಅಂಚೆ ಲಕ್ಕೋಟೆ ಬಿದ್ದಿತ್ತು. ನೋಡಿದರೆ, ನಾನು ಕಳಿಸಿದ್ದ ಕವನ ‘ಎಲಿಜಿ’ ವಾಪಸಾಗಿತ್ತು! ಅದು ಆ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎಂದು ಭಾವಿಸಿದ್ದೆ, ಏಕೆಂದರೆ ಅದು ಅಷ್ಟೇನೂ ಕಳಪೆಯಾಗಿರಲಿಲ್ಲ. ನನಗನ್ನಿಸಿತ್ತು, ಬಹುಶಃ ಅದು ನನಗೆ ಮಾತ್ರ ಚೆನ್ನಾಗಿದೆ ಅನ್ನಿಸಬಹುದು; ಇತರರಿಗಲ್ಲ ಎಂದು. ನನ್ನ ಎಲಿಜಿ ವಾಪಸಾದುದರಿಂದ ‘ನನ್ನ ಎಲಿಜಿ ವಾಪಸಾದುದನ್ನು ಕಂಡು’ (An Elegy on finding my Elegy returned) ಎಂಬ ಶೀರ್ಷಿಕೆಯಲ್ಲಿ ಒಂದು ‘ಎಲಿಜಿ’ ಬರೆಯುವಂತೆ ಪ್ರೇರಣೆಯಾಯಿತು. ನಾನು ಇನ್ನೆಂದೂ ಮ್ಯಾಗಜೀನ್‌ಗಳಿಗೆ ಕವನಗಳನ್ನು ಕಳಿಸಬಾರದು ಎಂದು ನಿರ್ಧರಿಸಿದೆ. ಏಕೆಂದರೆ ಅವರೆಲ್ಲ ‘ಹೆಸರಾಂತವರು ಮತ್ತು ಸಿರಿವಂತರು’ (Birth and Worth) ಬರೆದುದಕ್ಕೆ ಮಾತ್ರ ಬೆಲೆಕೊಡುತ್ತಾರೆ. ಪ್ರಸಿದ್ಧರ ಲೇಖನಗಳೆ ಅವರಿಗೆ ಬೇಕಾದ್ದು. (They want contributions from Mr. So and Sop A, BCD……Z……)  ಅದರಯ್ಯೋ ಅದೃಷ್ಟವಶಾತ್‌ ನಾನು ಅಂಥವನಾಗಿಲ್ಲ. (But alas! Fortunately I am not one) ಜಯ್‌ ಸ್ವಾಮಿ ವಿವೇಕಾನಂದ ! ಜಯ್‌ ಶ್ರೀಕೃಷ್ಣ!”

ಜನವರಿ ೩೦ನೆಯ ಬುಧವಾರದ ದಿನಚರಿ:

“ಬೆಳಿಗ್ಗೆ ೪ ಗಂಟೆಗೆ ಎಚ್ಚತ್ತೆ. ಮನದಲ್ಲಿಯೆ ಕೆಲವು ಪಂಕ್ತಿಗಳನ್ನು ರಚಿಸಿದೆ.

‘O sweet flower, thou art young and fair
Fair with the glishtening dew.’

ಮತ್ತೆ ಹಿಂದೆ ಯಾವಾಗಲೊ ಮನದಲ್ಲಿಯೆ ರಚಿಸಿಕೊಂಡಿದ್ದ ಕೆಲವು ಪಂಕ್ತಿಗಳ ನೆನಪು ಬಂದು ಬರೆದೆ:

The world’s great men like meteors dazzling come;
A moment blaze upon the darkened land,
And their resplendent glory doth command
The slumbering hearts that live like cattle dumb.’

ಇವೊತ್ತು ಎರಡು ಪ್ರಶ್ನೆಪತ್ರಿಕೆಗಳೂ ತುಂಬ ಕಷ್ಟವಾಗಿದ್ದವು. ನನಗನ್ನಿಸಿತು, ಕೊಲೆಯಲ್ಲದೆ ಬೇರೆಯ ಗುರಿಯಿಲ್ಲ ಅವಕ್ಕೆ ಎಂದು. ನಾನಂತೂ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿಲ್ಲ. ಸಂಜೆ ನಾನು, ನನ್ನ ತಮ್ಮ ಮತ್ತು ಬಸವರಾಜು ಸಿನಿಮಾಕ್ಕೆ ಹೋದೆವು. ಸಿನಿಮಾ ಟಿಕೆಟ್‌ ಕೊಳ್ಳುವ ವಿಷಯವಾಗಿ ಒಂದು ಲಘು ಪ್ರಬಂಧ ಬರೆಯುವ ಸಲಹೆ ಕೊಟ್ಟೆ. ರಾತ್ರಿ ಹತ್ತೂವರೆವರೆಗೆ ಮಲಗಲಿಲ್ಲ. ಸ್ವಾಮೀ ಎಲ್ಲವನ್ನೂ, ಸ್ವರ್ಗಸುಖವನ್ನು ಕೂಡ ನಿನಗಾಗಿ ಬಿಟ್ಟೇನು. ಪ್ರೇಮಕ್ಕಾಗಿಯೆ ನಿನ್ನನ್ನು ಪ್ರೀತಿಸುವುದನ್ನು ಕಲಿಸು.”

ಜನವರಿ ೩೧ನೆಯ ಗುರುವಾರದ ದಿನಚರಿ:

“ಎರಡು ವಿಷಯಗಳು ನನ್ನ ಮನಸ್ಸನ್ನು ಕಾಡುತ್ತಿವೆ. ನನ್ನಾತ್ಮ ಕವಿತೆಯ ಕಡೆಗೆ ತುಡಿಯುತ್ತಿದೆ; ನನ್ನ ಮನಸ್ಸು, ಪರೀಕ್ಷೆಯ ಒತ್ತಾಯಕ್ಕೆ ಒಳಗಾಗಿ ಎಂದೇ ನನ್ನ ನಂಬಿಕೆ, ನೀರಸ ಪಠ್ಯಪುಸ್ತಕಗಳ (ಕೆಮಿಸ್ಟ್ರಿ, ಫಿಸಿಕ್ಸ್) ಅಧ್ಯಯನಕ್ಕೆ ಹೆಗಲುಕೊಡುತ್ತಿದೆ. ಪರೀಕ್ಷೆ ಬಳಿ ಸಾರುತ್ತಿದೆ; ಫೆಯಿಲ್‌ ಆದರೆ ನನ್ನ ಪ್ರಗತಿ ಸಂದೇಹಾಸ್ಪದ. ಏನೆ ಆಗಲಿ, ಒಂದು ಮಾತ್ರ ಸತ್ಯ: ನನ್ನ ಜೀವಮಾನವೆಲ್ಲ ಅಧ್ಯಾತ್ಮಿಕ ಅನ್ವೇಷಣೆಗೂ ಅಧ್ಯಾತ್ಮಿಕವಾದ ಆನಂದಾನುಭವಗಳಿಗೂ ಮೀಸಲಾಗಿ ವ್ಯಯವಾಗುತ್ತದೆ …… ಹೇ ಸ್ವಾಮೀ, ನಿತ್ಯ ನಾಟಕರಂಗದ ಮೇಲಣ ಈ ನಿನ್ನ ಮಧುಮಯ ಲೀಲೆಯಲ್ಲಿ ನಾನೊಂದು ಪಾತ್ರವಾಗಿದ್ದೇನೆ. ನಿನ್ನನ್ನು ಪಡೆದಿದ್ದೇನೆ ಎಂದೂ ಹೇಳಲಾರೆ, ಪಡೆದಿಲ್ಲ ಎಂದೂ ಹೇಳಲಾರೆ. ನಿನ್ನನ್ನು ಅರಿತಿದ್ದೇನೆ ಎಂದು ಹೇಳುವ ಧೈರ್ಯವನ್ನಾದರೂ ಮಾಡಿಯೇನು, ಆದರೆ ನಿನ್ನನ್ನು ಪಡೆದಿಲ್ಲ ಎಂದು ಮಾತ್ರ ನಾನೆಂದೆಂದಿಗೂ ಹೇಳಲಾರೆ. ನಿನ್ನ ಸಾಕ್ಷಾದ್ರೂಪವೆ ಆಗಿರುವ ಸ್ವಾಮಿವಿವೇಕಾನಂದರು ನನಗೆ ಕಲಿಸಿದ್ದಾರೆ, ಮತ್ತು ನಿತ್ಯವೂ ಬೋಧಿಸುತ್ತಲೂ ಇದ್ದಾರೆ. ನನ್ನ ಗುರುದೇವ ವಿವೇಕಾನಂದರಿಗೆ ನನ್ನ ಕೃತಜ್ಞತೆಯನ್ನು ಹೇಗೆ ಸಲ್ಲಿಸಬೇಕೋ ನನಗರಿಯದಾಗಿದೆ!”

೧೯೨೪ನೆಯ ಫೆಬ್ರವರಿ ೧ನೆಯ ಶುಕ್ರವಾರದ ದಿನಚರಿ:

“ತಿಗಣೆ ಕೊಲ್ಲುವುದಕ್ಕಾಗಿಯೆ ಬೆಳಿಗ್ಗೆ ೪ ಗಂಟೆಗೇ ಎದ್ದೆ. ಸಂಜೆ ನಾಲ್ಕು ಗಂಟೆಗೆ ಪಬ್ಲಿಕ್‌ ಲೈಬ್ರರಿಗೆ ಹೋಗಿ, ಸ್ವಾಮಿ ಅಭೇದಾನಂದರ ‘Vedanta: The Divine Inheritance of Man’  ಎಂಬ ಪುಸ್ತಕಕ್ಕಾಗಿ ಹುಡುಕಾಡಿದೆ. ಅದು ಸಿಕ್ಕಲಿಲ್ಲವಾದ್ದರಿಂದ ಸ್ವಾಮಿ ವಿವೇಕಾನಂದರ ‘Inspired Talks’  ತೆಗೆದುಕೊಂಡೆ. ಅದನ್ನು ಓದುತ್ತಿದ್ದ ಹಾಗೆ ನನ್ನ ಸ್ವಾಮಿಜಿಯ ಚೇತನ ನನ್ನ ಮೇಲೆ ಆನಂದಾಮೃತವರ್ಷವನ್ನು ಕರೆಯುತ್ತಿರುವಂತೆ ಅನುಭವವಾಯಿತು. ಅವರ ಪಾದಾರವಿಂದವನ್ನೆ ಎದೆಗಪ್ಪಿ ಕೊಂಡಂತಾಯಿತು. ಅವರ ದಿವ್ಯದೇದೀಪ್ಯಮಾನಸಾನ್ನಿಧ್ಯ ನನ್ನನ್ನು ಜ್ಯೋತಿರ್ಮಯಂಗೊಳಿಸಿತೊ ಎಂಬಂತಾಯಿತು; ಛೆಃ ಅಂತೆಗಿಂತೆ ಅಲ್ಲ, ಜ್ಯೋತಿರ್ಮಯನನ್ನಾಗಿಯೆ ಮಾಡಿತ್ತು. ಲೈಬ್ರರಿಯಿಂದ ಹೊರಗೆ ಬರುತ್ತಿದ್ದಾಗ ಅವರ ಜನ್ಮದಿನ ಮುಂದಿನ ಭಾನುವಾರಕ್ಕೆ ಬೀಳುತ್ತದೆ ಎಂದು ಗೊತ್ತಾಯಿತು. ಆ ದಿನ ನಮ್ಮ ಸಂಘದ ಸಭೆ ನಡೆಸಿ ಮಿತ್ರರಿಗೆ ಸ್ವಾಮಿ ವಿವೇಕಾನಂದರ ವಿಚಾರ ತಿಳಿಸಲು ದೃಢಮನಸ್ಸು ಮಾಡಿದೆ. ರೂಮಿಗೆ ಬಂದವನೆ ಎಂ. ಬಸವರಾಜು. ಅವರಿಗೆ ಸ್ವಾಮೀಜಿಯ ವಿಷಯ ಹೇಳತೊಡಗಿದೆ. ಅವರು ಮಂತ್ರಮುಗ್ಧರಾಗುದಂತೆ ನಿಷ್ಪಂದರಾಗಿ ಕುಳಿತು ನಾನು ಹೇಳಿದುದನ್ನೆಲ್ಲ ತುದಿವರೆಗೂ ಆಲಿಸಿದರು. ನನಗೂ ಒಬ್ಬ ‘ಸಣ್ಣ ಗುರು’ (puny teacher) ವಿಗಾಗುವ ಆನಂದವಾಯಿತು. ಆದರೆ ಅದು ಖಂಡಿತ ಗರ್ವಭಾವವಾಗಿರಲಿಲ್ಲ. “ಓ ಸ್ವಾಮೀ, ನಿನ್ನನ್ನು ಕುರಿತು ಇತರರಿಗೆ ತಿಳಿಯಹೇಳುವ ಶಕ್ತಿಯನ್ನು ನೀಡು!”

ಫೆಬ್ರುವರಿ ೩ನೆಯ ಶನಿವಾರದ ದಿನಚರಿ:

“ದೇವ ದೇವ, ನನ್ನನ್ನು ಕ್ಷಮಿಸು. ದಯಪಾಲಿಸೆನಗೆ ದುರ್ದಮ್ಯ ಇಂದ್ರಿಯ ಸಂಯಮದ ಸಾಮರ್ಥ್ಯವನ್ನು. ಎನಿತೆನಿತು ಸಲ ಅದಕ್ಕಾಗಿ ಪ್ರಯತ್ನಿಸಿದ್ದೇನೆ. ಆದರೆ ಎಷ್ಟೋ ಸಾರಿ ಸೋತುಹೋಗಿದ್ದೇನೆ.” ದಿನವೆಲ್ಲ ಇಸ್ಪೀಟು ಆಟದಲ್ಲಿಯೆ ಕಳೆಯಿತು. ಸಿನಿಮಾಕ್ಕೂ ಹೋಗಿದ್ದೆವು. ರೋಮಾಂಚಕ ಕಥೆ! ರಾಮಯ್ಯಗೆ ಒಂದು ರೂಪಾಯಿ ಕೊಟ್ಟೆ. ನನ್ನ ‘ಎಲಿಜಿ’ಯನ್ನು ಎಚ್‌.ಎಸ್‌.ಶಿವರಾಮಯ್ಯಗೆ ಓದಲು ಕೊಟ್ಟೆ.

ಫೆಬ್ರವರಿ ೩ನೆಯ ಭಾನುವಾರದ ದಿನಚರಿ:

“ಈ ದಿನ ನನಗೆ ಅತ್ಯಂತ ಸುಮಧರ ದಿನವಾಗಿತ್ತು, ಅದರ ಶ್ರಮಸಾಧನೆಗೂ ಮತ್ತು ಅದರ ಗೌರವಗಾಂಭೀರ್ಯಕ್ಕೂ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ನಮ್ಮ ರೂಮನ್ನು ಶುಚಿಗೈದು ಶುಭ್ರಗೊಳಿಸಿದೆವು. ರೂಮಿಗೆಲ್ಲ ಸುಣ್ಣ ಬಳಿದೆವು. ಪೂರ್ತಿಯಲ್ಲದಿದ್ದರೂ ಸುಂದರವಾಗಿತ್ತು. ಕೆಳಗಿನಿಂದ ಉಪ್ಪರಿಗೆಗೆ ಕೊಡಗಳಲ್ಲಿ ನೀರು ಹೊತ್ತು ತಂದೆವು. ನೆಲವನ್ನೆಲ್ಲ ಚೆನ್ನಾಗಿ ತೊಳೆದೆವು. ಇಂದು ನಿಜವಾಗಿಯೂ ಮಹತ್ತಾದ ದಿನವಾಗಿತ್ತು: ಶ್ರೀ ಸ್ವಾಮಿ ವಿವೇಕಾನಂದರ ಅರವತ್ತಾರನೆಯ ಜನ್ಮದಿನ! ಇವೊತ್ತಿನ ಸಭೆಯಲ್ಲಿ ಭಾಷಣ ಮಾಡಲು ಸಿದ್ಧನಿರಲಿಲ್ಲ, ಏಕೆಂದರೆ ಸಿದ್ಧತೆಗೆ ಸಮಯವೆ ಸಿಗಲಿಲ್ಲ. ಆದರೆ ನನಗೆ ಸಂಪೂರ್ಣ ಶೃದ್ಧೆಯಿತ್ತು. ಸ್ವಾಮೀಜಿ ನನಗೆ ನೆರವಾಗುತ್ತಾರೆ, ಚಿಕಾಗೊ ಸರ್ವಧರ್ಮಸಮ್ಮೇಲನದಲ್ಲಿ ತಮಗೆ ತಾವೆ ನೆರವಿತ್ತುಕೊಂಡಂತೆ ಎಂದು. ಸುಮಾರು ನಾಲ್ಕು ಗಂಟೆಗೆ ಸಭೆ ಪ್ರಾರಂಭವಾಯಿತು. ನಾನು ಸದಸ್ಯರನ್ನು ಸಂಬೋಧಿಸಿ ಮಾತನಾಡತೊಡಗಿದೆ. ಚೆನ್ನಾಗಿ ಭಾಷಣ ಮಾಡಿದೆ ಎಂದು ಭಾವಿಸಿದ್ದೇನೆ. ನನ್ನ ಭಾಷಣ ಬಿಡುವಿಲ್ಲದೆ (gap-less hours) ಎರಡು ಗಂಟೆಯ ಹೊತ್ತು ಸಾಗಿತ್ತು. ಮುಗಿಸುವಷ್ಟರಲ್ಲಿ ಅನೇಕರು ಬಂದು ನೆರೆದಿದ್ದರು. ನಾನು ಭಾಷಣಕ್ಕೆ ಸಿದ್ಧತೆಮಾಡಿಕೊಳ್ಳಲಾಗದಿದ್ದರೂ ನನ್ನ ಸ್ವಾಮೀಜಿಯ ಅದ್ಭುತ ಸಾಹಸಗಳೆಲ್ಲ ನನ್ನ ಮನಸ್ಸನ್ನು ತುಂಬಿಕೊಂಡಿದ್ದರಿಂದ ಅವರು ದಯಪಾಲಿಸಿದ ಎಲ್ಲವನ್ನೂ ಧಾರೆಧಾರೆ ಸುರಿದುಬಿಟ್ಟೆ. ತುದಿಯಲ್ಲಿ ಹೇಳಿದೆ ‘ನನ್ನಲ್ಲಿ ಏನಾದರೂ ಇದ್ದ ಪಕ್ಷದಲ್ಲಿ, ನಾನು ಏನನ್ನಾದರೂ ನಿಮಗೆ ಹೇಳಿರುವ ಪಕ್ಷದಲ್ಲಿ, ಅದೆಲ್ಲಕ್ಕೂ ನಾನು ನನ್ನ ಸ್ವಾಮೀಜಿಯ ಕೃಪೆಗೆ ಋಣಿಯಾಗಿದ್ದೇನೆ; ಭಾಷಣದಲ್ಲಿರಬಹುದಾದ ದೋಷಗಳಿಗೆ ಮಾತ್ರ ನನ್ನ ಸ್ವಂತಪ್ರತಿಭೆ ಹಕ್ಕುದಾರನಾಗಿದೆ.” ಸ್ವಾಮಿ ವಿವೇಕಾನಂದರ ಮೇಲೆ ಒಂದು ಕವನ ರಚನೆ ಮಾಡಿದೆ. ಮೇಲಿನ ದಿನಚರಿಯಲ್ಲಿ ನಮೂದಿತವಾದ ಕವನ ಒಂದು ಸಾನೆಟ್ಟು. ಹಸ್ತಪ್ರತಿಯಲ್ಲಿಯೂ ರಿಚಿತವಾದ ತಾರೀಖು ೩.೨.೧೯೨೪ ಎಂದಿದೆ. ಅದನ್ನಿಲ್ಲಿ ಕೊಡುತ್ತೇನೆ.

Flower of philosophy, thou teacher great
Of cosmic creeds, O spiritual giant,
O Soldier of God, thou mighty-hearted saint,
O thou commander of suspicious fate,
All hail to thee!For thee the death-less date
Shall dazzling e’er survive! No shriek nor plaint
Thy brave devotee gives; he’ll be a giant
Commanding earth and heaven; he ruleth fate!
Like a great dazzling meteor did’st thou come
Enlightening all, and flashed across the key.
Then wonder thrilled each slumbering heart, while dumb
All stood adoring thee with winkless eye!
Again and yet again, O Ascetic blest,
Way-Shower sweet, they orient rays blaze WEST!
೩-೨-೧೯೨೪

ಫೆಬ್ರವರಿ ೪ನೆಯ ಸೋಮವಾರದ ದಿನಚರಿ:

“ಇವತ್ತೊ ಬೆಳಿಗ್ಗೆ ಕ್ಲಾಸು. ಲೊಯಿಡೇಮಿಯಾಳನ್ನು ಸಾವಿತ್ರಿಗೆ ಹೋಲಿಸುವ ಒಂದು ಚರ್ಚೆ ನಡೆಯಿತು. ಕೊನೆ ಪೀರಿಯಡ್ ರಜಾ ಕೊಟ್ಟರು. ಪದ್ಮಪತ್ರ ಸಂಘದ ಗೋಷ್ಠಿಯಲ್ಲಿ ಸ್ಟೀಲ್ ಮತ್ತು ಅವನ ಪ್ರಬಂಧಗಳು ಎಂಬ ವಿಷಯವಾಗಿ ಪ್ರವಚನವಿತ್ತು. ಇವೊತ್ತು ‘Thoughts on Great Men’ (ಮಹಾಪುರುಷರು) ಎಂಬ ಶೀರ್ಷಿಕೆಯಲ್ಲಿ ಒಂದು ಸಾನೆಟ್ ಬರೆದೆ. ನಮ್ಮ ಲೋಟಸ್‌ ಲೀಫ್ ಯೂನಿಯನ್‌ಗೆ ಮತ್ತೊಬ್ಬ ಹೊಸಬ ಸದಸ್ಯನಾಗಿ ಸೇರಿದ್ದಾನೆ. ಸಂಘದ ಸಭೆಯ ತರುವಾಯ ನಾನು ಪಿ.ಮಲ್ಲಯ್ಯ ತಮ್ಮ ಬಾಲ್ಯಕಾಲದ ವಿಷಯವಾಗಿ ಮಾತಾಡುತ್ತಾ, ಅವರ ಇಬ್ಬರು ಗೆಳೆಯರು ಒಂದು ಕೆರೆಯಲ್ಲಿ ಮುಳುಗಿ ಸತ್ತ ವಿಚಾರವನ್ನು, ಸತ್ತ ಹುಡುಗರ ತಂದೆ ದುಃಖಾಗ್ನಿಯಲ್ಲಿ ಬೆಂದು, ಕೆಲಸಗಿಲಸ ಎಲ್ಲವನ್ನು ತ್ಯಜಿಸಿ ಕಡುಬಡವನಾದುದನ್ನೂ ತಿಳಿಸಿದರು. ನಮ್ಮ ಆಲೋಚನೆ ಸಾವು ಬಾಳುಗಳ ವಿಚಾರವಾಗಿ ಗಂಭೀರ ಚಿಂತೆಯಲ್ಲದಿದ್ದರೂ ದಾರಿಯುದ್ದಕ್ಕೂ ವಾತಾವರಣ ಗಂಭೀರವಾಗಿಬಿಟ್ಟಿತು. ಆ ಸರಳ ಸಂಗತಿಯನ್ನು, ಆಧರಿಸಿ ಒಂದು ನೀಳ್ಗವನ ಬರೆಯಬೇಕೆಂದುಕೊಂಡೆ. ಏಕೆಂದರೆ, ‘ಕವಿತೆ ಒಂದು ಸರಳಸಾಮಾನ್ಯ ಸತ್ಯದ ಮೇಲೆ ವೈಭವಯುಕ್ತ ರಾಜಸಿಂಹಾಸನವನ್ನೆ ಸ್ಥಾಪಿಸಬಲ್ಲದು.’ (Verse can build a princely throne on humble truth.) ದೇವದೇವ, ನಿನ್ನಲ್ಲಿ ನನಗೆ ನಿಃಸ್ವಾರ್ಥ ಭಕ್ತಿ ಮೂಡುವಂತೆ ಮಾಡು.”

ಮೇಲಿನ ದಿನಚರಿಯಲ್ಲಿ ರಚಿತವಾಯಿತೆಂದು ಹೇಳಲಾಗಿರುವ ಸಾನೆಟ್ Thoughts on Great Men

[1] ಅದೇ ತಾರೀಖಿನಲ್ಲಿ ಎಂದರೆ ೪.೨.೧೯೨೪ರಲ್ಲಿಯೆ ಹಸ್ತಪ್ರತಿಗೆ ಬರೆಯಲ್ಪಟ್ಟಿದೆ. ಪ್ರಾಸವಿನ್ಯಾಸ: a b b a, a b b a, c d e c d e.

ಫೆಬ್ರವರಿ ೫ನೆಯ ಮಂಗಳವಾರದ ದಿನಚರಿ:

“ಇವೊತ್ತು ಸಾಯಂಕಾಲ ಅತ್ಯಂತ ಸಂತೋಷಕರವಾದ ಮಹತ್ವದ ಸುದ್ದಿ ಬಂತು: ಮಹಾತ್ಮಾಜಿಯನ್ನು ಸೆರೆಯಿಂದ ಬಿಡುಗಡೆ ಮಾಡಿದರಂತೆ! ಒಂದು ಸಾರ್ವಜನಿಕ ಸಭೆಯಲ್ಲಿ ಭಾಷಣಗಳಾಗಿ ತರುವಾಯ ಮೆರವಣಿಗೆಯೂ ಇತ್ತು. ನಾನು ಸಿನಿಮಾಕ್ಕೆ ಹೋಗಿದ್ದರಿಂದ ಅಲ್ಲಿಗೆ ಹೋಗಿ ಭಾಗಿಯಾಗಲಾಗಲಿಲ್ಲ. ರೂಮಿಗೆ ಬಂದಮೇಲೆ ಗಾಂಧೀಜಿಯ ಬಿಡುಗಡೆ ಸುದ್ದಿ ತಿಳಿಯಿತು. ಯಾವುದಾದರೂ ಪತ್ರಿಕೆಗೆ ಒಂದು ಪದ್ಯ ಕಳಿಸಲು ಮನಸ್ಸು ಮಾಡಿದೆ. ತಕ್ಷಣವೆ ರಚನೆ ಮಾಡಲಿಲ್ಲ. ಆದರೆ ಮೊದಲ ಪಂಕ್ತಿಗಳನ್ನು ಯೋಚಿಸಿದೆ. ಅವು ಹೀಗಿದ್ದವು! ‘Ring temples, ring; sing, churches, sing’ ರಾತ್ರಿ ನನಗೆ ಪಾಠಗಳನ್ನು ಓದಿಕೊಳ್ಳಲಾಗಲಿಲ್ಲ. ದೇಶಪ್ರೇಮ ಇತ್ಯಾದಿ ಸಾಮಾಜಿಕ ವಿಚಾರಗಳನ್ನು ಕುರಿತು ಮಾತನಾಡುವುದರಲ್ಲಿಯೆ ಹೊತ್ತು ಕಳೆದೆ. ಕ್ಷಮಿಸಿ, ಸ್ವಾಮಿ ವಿವೇಕಾನಂದರೆ, ಕೃಪೆಮಾಡಿ ಕೈ ಹಿಡಿದು ನಡೆಸಿ.”

ಮೇಲಿನ ದಿನಚರಿಯಲ್ಲಿ ಹೆಸರಿಸಿದ ಕವನ ‘Lines: Written When I heard of Mahatma’s Release (ಪಂಕ್ತಿಗಳು: ಮಹಾತ್ಮಾಜಿಯವರು ಬಿಡುಗಡೆಯಾದದ್ದನ್ನು ಕೇಳಿ ಬರೆದುದು.) ಹಸ್ತಪ್ರತಿಯಲ್ಲಿ ೧೫.೨.೧೯೨೪ರಲ್ಲಿ ಪ್ರತಿಯೆತ್ತಲಾಗಿದೆ:

Sing, hills and groves of Hindustan.
And birds that cheer the Bharat-Land
For the great soul, for the mighty man
Who has come to strengthen India’s stand!
Sing, temples, sing,
Ring, churches, ring,
For the great and uncrowne’d King

Whose pain is India’s pain,
Whose chain is India’s chain,
Who weeps at other’s woes
And cares not for his throes!

Ye mosques, your incense burn and pray.
For him whose hairs with cares are gray,
Whom ignoble honour doth not allure,
Who cares not titles to secure!

He is safe, he is sound,
Fresh from the prison bound
To tread his primal ground.

God bless the British Nation!
God bless the mercy of Ocean!
Let this sound rach the sky:
“Mahatma Gandhiki Jai!”
೧೫-೨-೧೯೨೪

ಫೆಬ್ರವರಿ ೬ನೆಯ ಬುಧವಾರದ ದಿನಚರಿ:

“ಇವೊತ್ತು ನಡೆದ ಅತ್ಯಂತ ಸ್ವಾರಸ್ಯವಾದ ಘಟನೆ ಎಂದರೆ, ಮಹಾತ್ಮಾಜಿಯವರ ಬಿಡುಗಡೆಯ ಸಂದರ್ಭದಲ್ಲಿ ಸಂತೋಷ ಪ್ರದರ್ಶನಕ್ಕಾಗಿ ನಡೆದ ಮೆರವಣಿಗೆ. ವೆಸ್ಲಿಯನ್ ಮಿಶನ್ ಸ್ಕೂಲಿನ ವಿದ್ಯಾರ್ಥಿಗಳು ಕ್ಲಾಸುಗಳಿಂದ ಹೊರಬಂದು ಮೆರವಣಿಗೆ ಹೊರಟರು. ಆ ಸ್ಕೂಲಿನ ಪ್ರಿನ್ಸಿಪಾಲ್ ಪಿ.ಸಿ.ಬ್ರಂಟ್ ಅವರು ಮಾತನಾಡುತ್ತಾ ‘ಮಿಸ್ಟರ್ ಗಾಂಧಿ ಎಂದಾಗ ವಿದ್ಯಾರ್ಥಿಯೊಬ್ಬನು (ಆತನೆ ಮುಂದೆ ನಾಟಕಪ್ರಪಂಚದಲ್ಲಿ ಪ್ರಖ್ಯಾತನಾದ-ಪೀರ್.) ‘ಸರ್, ದಯವಿಟ್ಟು “ಮಹಾತ್ಮಾ ಗಾಂಧಿ” ಎನ್ನಿ’ ಎಂದು ಕೂಗಿಕೊಂಡನಂತೆ, ಅದನ್ನು ಖಂಡಿಸಲು (ಕ್ರಿಶ್ಚಿಯನ್ ಆಗಿದ್ದ) ಅಧ್ಯಾಪಕರೊಬ್ಬರು ‘ಷೇಂ’ (ನಾಚಿಕೆ) ಎಂದು ಕೂಗಿದರಂತೆ. ಮುಸಲ್ಮಾನನಾಗಿದ್ದ ಆ ವಿದ್ಯಾರ್ಥಿ ಪೀರ್ ತಾನೆಂದುದನ್ನು ಸಮರ್ಥಿಸಿಕೊಳ್ಳುತ್ತಾ ಗಾಂಧೀಜಿಯಂತಹವರನ್ನು ಮಿಸ್ಟರ್ ಎಂದು ಕರೆದು ಅವಹೇಳನಮಾಡುವುದನ್ನು ತಾನು ಸಹಿಸುವುದಿಲ್ಲ ಎಂದು ಪ್ರತಿಭಟಿಸಿದನಂತೆ. ಅಂತೂ ಮೆರವಣಿಗೆ ಅದ್ಭುತವಾಗಿತ್ತು, ಒಂದೆರಡು ವಿಷಾದಕರ ಘಟನೆಗಳನ್ನುಳಿದು: ಒಂದು, ಶಾಲೆಯ ಅಧಿಕಾರಿಗಳಿಗೆ ಅವಿಧೇಯರಾಗಿದ್ದು; ಮತ್ತೊಂದು, ಮಹಾತ್ಮಾಗಾಂಧಿಯವರ ಪಟಕ್ಕೆ ನಮಸ್ಕಾರ ಮಾಡಲಿಲ್ಲ ಎಂದು ಒಬ್ಬ ಸೈಕಲ್‌ಸವಾರನ ವಾಹನವನ್ನು ಮುರಿದುಹಾಕಿದ್ದು. ಸಂಜೆ ಆ ದುರ್ಘಟನೆಗಳನ್ನು ಕುರಿತೇ ನಾವು ಚರ್ಚೆ ನಡೆಸಿದೆವು. ಏನೇ ಆದರೂ ವಿಭೂತಿಪೂಜೆ (hero-worship) ಸ್ತುತ್ಯಾರ್ಹ ಮತ್ತು ವಿದ್ಯಾರ್ಥಿಗಳು ಅತ್ಯುತ್ಸಾಹದ ಭರದಲ್ಲಿ ಒಂದೆರಡು ತಪ್ಪು ಮಾಡಿದ್ದರೂ ಒಟ್ಟಿನಲ್ಲಿ ಅವರ ಹೃದಯಧ್ಯೇಯ ಮೆಚ್ಚತಕ್ಕದ್ದೆ ಎಂದು ಮಿತ್ರರಿಗೆ ಮನಗಾಣಿಸಲು ನಾನು ತುಂಬಾ ಕಷ್ಟಪಡಬೇಕಾಯಿತು.

ಫ್ರೆಬ್ರವರಿ ೭ನೆಯ ಗುರುವಾರದ ದಿನಚರಿ:

“ಬೆಳಿಗ್ಗೆ ನಾನು ಬಸವರಾಜನೂ ಕೆಮಿಸ್ಟ್ರಿ ಅಧ್ಯಯನ ಮಾಡಿದೆವು. ಸ್ಕೂಲಿನಲ್ಲಿ ನನಗೆ ಗಣಿತದ ಪ್ರಶ್ನೆಪತ್ರಿಕೆಯಲ್ಲಿ ೩೬ ನಂಬರು ಬಂದಿರುವುದು ಗೊತ್ತಾಯಿತು. ಕನ್ನಡದ ಕ್ಲಾಸಿನಲ್ಲಿ ನಾನು ಒಂದು ಕಿಟಕಿಯ ಬಳಿಯೆ ಕುಳಿತಿದ್ದೆ. ಹೊರಗೆ ನೋಡಿದೆ. ಕಟು ನೀಲ ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಬಿಳಿಮೋಡದ ತುಂಡುಗಳು ಸ್ವಲ್ಪವೂ ಅಲುಗಾಡದೆ ನಿಂತಿವೆಯೊ ಎಂಬಂತೆ ತೇಲಿದ್ದುವು. ನನ್ನ ಮನಸ್ಸು ಚಿಂತಾಗಂಭೀರವಾಯಿತು. ಠಾಕೂರರ ‘Realisation of Beauty’ (ಸೌಂದರ್ಯ ಸಾಕ್ಷಾತ್ಕಾರ) ಓದುತ್ತಿದ್ದೆ. ಆ ಸುಡು ಬಿಸಲಿನಲ್ಲಿ ಒಂದು ಮರದ ನೆತ್ತಿಕೊಂಬೆಯ ಮೇಲೆ ಕುಳಿತು ಒಂದು ಹಕ್ಕಿ ಹಾಡುತ್ತಿತ್ತು. ಏಕಾಗಿ ಹಾಡುತ್ತಿತ್ತು ? ಏನು ಆನಂದ ಅದನ್ನು ಹಾಡುವಂತೆ ಮಾಡುತ್ತಿತ್ತು? ಉರಿ ಕಾರುವ ಬೇಸಿಗೆಯ ಬಿಸಿಲಿನ ಬೇಗೆಯಲ್ಲಿ ಎಲ್ಲವೂ ಬೆಂದುಹೋಗುತ್ತಿರಲು ! ಅಲ್ಲಿಯೆ ಆ ಕ್ಷಣವೆ ‘The School Window’ (ಶಾಲೆಯ ಕಿಟಕಿ) ಎಂಬ ಹೆಸರಿನಲ್ಲಿ ಒಂದು ಕವನದ ಕೆಲವು ಪಂಕ್ತಿಗಳನ್ನು ರಚಿಸಿದೆ. Sing, sweet bird, sing’ ಇತ್ಯಾದಿ. ಸಂಜೆ ಪಬ್ಲಿಕ್ ಲೈಬ್ರರಿಗೆ ಹೋಗಿ ಸ್ವಾಮಿ ಅಭೇದಾನಂದರ How to be a Yogi ಪುಸ್ತಕದಲ್ಲಿ ೧೦೬ಪುಟಗಳನ್ನು ಓದಿದೆ. ರೂಮಿಗೆ ಹಿಂದಿರುಗುತ್ತಿರುವಾಗ ಭಿಕ್ಷುಕರಿಗೆ ೨.೫ ಆಣೆ ಕೊಟ್ಟೆ, ನಾನು ಅವರಿಗೆ ಕೊಡಬೇಕಾಗಿದ್ದ ಒಂದು ರೂಪಾಯಿಯಲ್ಲಿ. ಇನ್ನು ಮೇಲೆ ನನ್ನ ಇಂದ್ರಿಯಗಳನ್ನು ಸಂಯಮಿಸಲು ಆದಷ್ಟು ಪ್ರಯತ್ನಮಾಡಲು ಮನಸ್ಸು ಮಾಡಿದೆ. ದೇವರು ನೆರವಾಗಲಿ! ಸ್ವಾಮಿ ವಿವೇಕಾನಂದರು ಕೃಪೆಗೈಯಲಿ! ಶ್ರೀಕೃಷ್ಣನು ಮೇಲೆತ್ತಲಿ!”

 


[1] Alien Harp. Pp. 50