ಫೆಬ್ರವರಿ ೮ನೆಯ ಶುಕ್ರವಾರದ ದಿನಚರಿ:

“ಹೊಸಮನೆ ಮಂಜಪ್ಪಗೌಡರಿಗೆ ಒಂದು ಕಾಗದ ಬರೆದೆ, ಹಣ ಕಳಿಸಲು. ಸಂಜೆ ೫ ಗಂಟೆಗೆ ಪಬ್ಲಿಕ್ ಲೈಬ್ರರಿಗೆ ಹೋಗಿ, ಸ್ವಾಮಿ ಅಭೇದಾನಂದರ How to be a Yogi ಓದಿ ಪೂರೈಸಿದೆ. ಪುರಸಭಾ ಭವನದ ಮೈದಾನದಲ್ಲಿ ೬.೩೦ಕ್ಕೆ ಭಾಷಣವಿತ್ತು. ಕೋಕನಾಡ ಕಾಂಗ್ರೆಸ್‌ ವಿಚಾರವಾಗಿ. ಭಾಷಣ ತಕ್ಕಮಟ್ಟಿಗಿತ್ತು. ಹೊಸದೇನನ್ನೂ ಹೇಳದಿದ್ದರೂ. ಮುಂದಿನ ೧೫ನೆಯ ತಾರೀಖು ದೊಡ್ಡ ದೇಶಭಕ್ತರಾದ ಗೌರೀಶಂಕರ ಮಿಶ್ರ ಎಂಬುವರು ಬರುತ್ತಾರಂತೆ. ರೂಮಿಗೆ ಬಂದು ‘Is Mahatma Gandhi an Incarnation? (ಮಹಾತ್ಮಾ ಗಾಂಧಿ ಅವತಾರವೇ?) ಎಂಬ ವಿಷಯವಾಗಿ ಒಂದು ಪ್ರಬಂಧ ಬರೆಯಲು ಮನಸ್ಸುಮಾಡಿದೆ. ರಾತ್ರಿ ಕೆಲವು ಪುಟ ಬರೆದು ಮಲಗಿದೆ. ಓ ದೇವ, ಈ ಪವಿತ್ರ ಕಾರ್ಯ ಮುಗಿಸುವಂತೆ ಶಕ್ತಿ ನೀಡು! ಸ್ವಾಮಿ ವಿವೇಕಾನಂದರೇ ಪರಮಧ್ಯೇಯ ಸಿದ್ಧಿಗೆ ನನ್ನನ್ನು ನಡೆಸಿ! ಕೃಷ್ಣ! ಕೃಷ್ಣ! ಕೃಷ್ಣ!”

ಫೆಬ್ರವರಿ ೯ನೆಯ ಶನಿವಾರದ ದಿನಚರಿ:

“ಬೆಳಿಗ್ಗೆ ೬ಗಂಟೆಗೆ ಎದ್ದೆ ‘ಮಹಾತ್ಮಾಗಾಂಧಿ ಅವತಾರವೇ?’ ಎಂಬ ಪ್ರಬಂಧವನ್ನು ತುಸು ಮುಂದುವರಿಸಿದೆ. ಬೆಳಿಗ್ಗೆ ಕ್ಲಾಸಿಗೆ ಹೋಗಿ ಪ್ರಾಕ್ಟಿಕಲ್ ಮುಗಿಸಿ ಬಂದೆ. ರೂಮಿಗೆ ಬಂದು ಮತ್ತೆ ಪ್ರಬಂಧದ ಕೆಲವು ಪ್ಯಾರಾಗಳನ್ನು ಬರೆದೆ. ಸಂಜೆ ಬಸವರಾಜು ಮಲ್ಲಪ್ಪ ಅವರೊಡನೆ ಮಹಾತ್ಮಾಗಾಂಧಿ, ಅವರ ಉದ್ದೇಶ, ಸ್ವರಾಜ್ಯ, ನಮ್ಮ ಕರ್ತವ್ಯ ಇತ್ಯಾದಿ ವಿಚಾರ ವಿನಿಮಯ ಮಾಡಿದೆ. ಮಲ್ಲಪ್ಪ ಒಂದು ಕೆಟ್ಟ ಸಂಗತಿ ಹೇಳಿದರು, ಮದುವೆಯಾಗಿ ವಿಧವೆಯಾಗಿದ್ದ ತನ್ನ ಮಗಳನ್ನೆ ಕೆಡೆಸಿದ ಒಬ್ಬ ತಂದೆಯ ವಿಚಾರವಾಗಿ. ಮಾತು ವಿಧವಾವಿವಾಹದ ಕಡೆಗೆ ತಿರುಗಿತು. ನಾನೆಂದೆ ‘ಗಂಡ ಸತ್ತ ಮೇಲೆ ಹೆಣ್ಣು ಮದುವೆಯಾಗಬಾರದು ಎಂದು ಗಂಡಸು ಹೇಳುವುದಾದರೆ, ಮೊದಲು ಅವನೇ ಆ ತತ್ತ್ವವನ್ನು ಪರಿಪಾಲಿಸಬೇಕು’. ಮಾರ್ಗದರ್ಶನ ಮಾಡಿ, ಓ ಸ್ವಾಮಿ ವಿವೇಕಾನಂದರೇ! ನಿನ್ನ ಸಾಕ್ಷಾತ್ಕಾರ ಸಾಧ್ಯವಾಗುವಂತೆ ನನಗೆ ಜ್ಞಾನವನ್ನು ದಯಪಾಲಿಸು, ಓ ಶ್ರೀಕೃಷ್ಣ!”

ಫೆಬ್ರವರಿ ೧೦ನೆಯ ಭಾನುವಾರದ ದಿನಚರಿ:

“ಸುಮಾರು ೫.೩೦ಕ್ಕೆ ಎದ್ದೆ. ಎಣ್ಣೆ ಸ್ನಾನ ಮಾಡಿದೆ. ಇವೊತ್ತಿನ ಸಭೆ ಮುಂದಕ್ಕೆ ಹೋಯಿತು, ಉಪನ್ಯಾಸಕನೆ ಬರಲಿಲ್ಲವಾದ್ದರಿಂದ. ಚಿಕ್ಕಪ್ಪನವರಿಂದ ಒಂದು ಕಾಗದ ಬಂತು, ವೆಂಕಟಯ್ಯ, ಮಾದಲು ಪುಟ್ಟು ಮತ್ತು ನನ್ನ ತಂಗಿ ಪುಟ್ಟಮ್ಮ ಎಲ್ಲರಿಗೂ ಕಾಯಿಲೆಯಾಗಿ ತುಂಬ ತೊಂದರೆಯಾಗಿದೆ ಎಂದು. ಇವತ್ತು ದಿನವನ್ನು ಯೋಗ್ಯವಾಗಿ ಕಳೆಯಲಾಗಲಿಲ್ಲ ಎಂದು ವ್ಯಥೆಯಾಗಿದೆ. (ಎರಡು ದಿನಗಳ ಹಿಂದೆ ನಾನು ಪಿ.ಮಲ್ಲಯ್ಯ ಗಡಿಯಾರ ಗೋಪುರದ ಚೌಕದಲ್ಲಿ, ಸ್ವಾಮಿ ವಿವೇಕಾನಂದರ ವಿಚಾರವಾಗಿ ಮಾತನಾಡುತ್ತಾ ನಿಂತಿದ್ದಾಗ ಒಬ್ಬ ಭಿಕ್ಷುಕ, ಅಂಗವಿಕಲನಲ್ಲ, ಬಂದು ಭಿಕ್ಷೆ ಬೇಡಿದನು. ಅವನ ಮನೆ ವಿಷಯ ಸ್ವಂತವಿಚಾರ ತಿಳಿಯಲೆಂದು ಪ್ರಶ್ನಿಸಿದೆ. ಅದಕ್ಕೆ ಅವನು ‘ಸ್ವಾಮಿ, ಅದನ್ನೆಲ್ಲ ಕೇಳಬೇಡಿ’ ಎಂದ. ‘ಅಮ್ಮ ಅಪ್ಪ ಇದಾರೆಯೆ?’ ಎಂದು ಕೇಳಿದೆ. ಅವನು ಹೇಳಿದ ‘ಅಪ್ಪ ಅಮ್ಮ ಏನು ಮಾಡ್ತಾರೆ? ನಮ್ಮ ನಮ್ಮ ಕರ್ಮ ನಾವು ಅನುಭವಿಸಬೇಕು. ‘ನಾವು ಹುಟ್ಟಿದ್ದು ಅದಕ್ಕಿಂತಲೂ ಹೆಚ್ಚಿನದನ್ನು ತಿಳಿಯಲೋಸ್ಕರ’ ಎಂದು ಹೇಳುತ್ತಿದ್ದೆ. ಆದರೆ ದಾರಿದ್ರ್ಯ ಅವನನ್ನು ಯಾವ ಮಟ್ಟಕ್ಕೆ ಇಳಿಸಿತ್ತು ಎಂದರೆ ಸ್ವಲ್ಪವೂ ತಾಳ್ಮೆತೋರಲಾರದೆ ಹೊರಟೆ ಹೋಗಿಬಿಟ್ಟ) ನನ್ನ ಪ್ರಬಂಧ ತುಸು ಬರೆದೆ. ಇವೊತ್ತು ಒಬ್ಬರು ಸ್ವಾಮಿಗಳು ಭಾಷಣ ಮಾಡುವುದನ್ನು ಕೇಳಿದೆ. ಅಷ್ಟೇನೂ ಅಮೂಲ್ಯ ವಿಷಯಗಳಿರಲಿಲ್ಲ. ನನ್ನ ದಿವ್ಯ ಸ್ವಾಮೀಜಿಯ ಹೃದಯವಾಗಲಿ ಮನಸ್ಸಾಗಲಿ ಕಂಡುಬರಲಿಲ್ಲ. ಜಯ್ ಕೃಷ್ಣ!”

ಫೆಬ್ರವರಿ ೧೧ನೆಯ ದಿನಚರಿಯಲ್ಲಿ ಪ್ರಣಯೋದಯದ ವಿಚಾರವಿದೆ. ಪರೀಕ್ಷೆ ಮುಗಿಯುವವರೆಗೆ ಬೇರೆ ಪುಸ್ತಕ ಓದುವುದನ್ನು ಬಿಡಬೇಕೆಂದೂ ಕಾಲ ಕಳೆಯಬಾರದೆಂದೂ ಗೆಳೆಯ ಪಿ.ಮಲ್ಲಯ್ಯ ಬುದ್ಧಿ ಹೇಳಿದ ವಿಚಾರವಿದೆ. ದುರಾಲೋಚನೆಗಳ ವಿಮೋಚನೆಗಾಗಿಯೂ ಇಂದ್ರಿಯ ಜಯಕ್ಕಾಗಿಯೂ ಪ್ರಾರ್ಥನೆ ಇದೆ.

ಫೆಬ್ರವರಿ ೧೨ನೆಯ ದಿನಚರಿಯಲ್ಲಿ ಶಿವರಾಂಗೆ ನನ್ನ ಕವನಗಳನ್ನೆಲ್ಲ ತೋರಿಸಿದುದಾಗಿಯೂ, ‘Thoughts on Great Men’ ಕವನವನ್ನು ಟೈಪು ಮಾಡಿಸಲು ಅವರ ಕೈಲಿ ಕೊಟ್ಟಂತೆಯೂ ಇದೆ.

ಫೆಬ್ರವರಿ ೧೩ರಲ್ಲಿ Love ಎಂಬ ಕವನ ರಚಿಸಿದ್ದಾಗಿಯೂ, ಸಂಜೆ ಸ್ನೇಹಿತರೊಡನೆ ವಾಕ್ ಹೋಗಿದ್ದುದಾಗಿಯೂ ಬರೆದಿದೆ. ಆ ವಾಕ್ ವಿಚಾರವಾಗಿ ಟೀಕೆ ಇದೆ. ಅಂಥ ವಾಕ್ ಆಗಾಗ್ಗೆ ಪರ್ವಇಲ್ಲ, ಆದರೆ ದಿನವೂ ಇರಬಾರದು ಎಂದು: ಏಕೆಂದರೆ ಅದು ಲಘು ಸಂತೋಷವನ್ನೇನೊ ಇತ್ತಿತೆಂದೂ ಆದರೆ ಅದರಲ್ಲಿ ಉದ್ಬೋಧನವಿರಲಿಲ್ಲವೆಂದೂ. ‘ಮಹತ್ತು ಮಧುರ, ಆದರೆ ಮಧುರವೆಲ್ಲ ಮಹತ್ತಲ್ಲ!’ (Greatness is Sweetness, but Sweetness in not always great).

ಕೈಶೋರಪ್ರಣಯ ಭಾವನೆಯ ಪರಿಣಾಮವಾಗಿ ಮೂಡಿದ ಆ ಕವನ ಒಂದು ಸಾನೆಟ್ a b b a a b b a, c d c d, e e ಪ್ರಾಸಬದ್ಧವಾಗಿದೆ. ಗ್ರೀಕ್ ಪೌರಾಣಿಕ ನಾಮಗಳನ್ನೂ ಉಪಯೋಗಿಸುವ ಹಳೆಯ ಚಾಳಿಯನ್ನೂ ಕಾಣಬಹುದು:

Oft in the busiest hour I think on thee,
O Lover of my heart, thou maiden sweet;
Nor all my aspirations high can greet
Me with a sweeter thought or blither glee
Than thy sweet eyes so full of love for me!
My love stands rooted deeply many a feet
Within thy bosom’s dale; nor time can cheat,
Nor space, this flowery chain of purity!
O Death is weak to check the might of love;
Erebus quakes beneath her potent sway;
Adversity doth kneel! She floats above
Tartarean fires and heaven’s Elysian ray.

Eternal Love doth stand, the power divine
That binds all souls in one endearing chain.

ಫೆಬ್ರವರಿ ೧೪ನೆಯ ಗುರುವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಕ್ಲಾಸು. ಆರು ಗಂಟೆಗೆ ಎದ್ದು ಮಹಾತ್ಮಾಗಾಂಧೀಜಿಯನ್ನು ಕುರಿತು ಕವನವನ್ನು ರಚಿಸಿದೆ. ಮೂರು ಗಂಟೆಗೆ ಗೋ.ಕೃ.ಶೆಟ್ಟಿ ಬಂದರು. ಇಬ್ಬರೂ ಒಟ್ಟಿಗೆ ಕೆಲವು ಪಾಠ ಓದಿದೆವು. ಅವರು ಸ್ಟೀಲ್ ಕುರಿತು ಪ್ರಶ್ನೆ ಕೇಳಿದಾಗ ಅವನ ಪ್ರಬಂಧಗಳನ್ನು ಕುರಿತು ತಿಳಿಸಿದೆ. ಆಮೇಲೆ ಶಿವರಾಂ, ನರಸಿಂಹಶೆಟ್ಟಿ ಬಂದರು. ನರಸಿಂಹಶೆಟ್ಟಿಯಂತೂ ಇಡೀ ಕೊಠಡಿಯನ್ನೇ ನಗೆಗಡಲಲ್ಲಿ ಅದ್ದಿಬಿಟ್ಟ. ಕೆ.ಮಲ್ಲಪ್ಪ, ಎಂ.ಬಸವರಾಜು ಕರೆದರು; ಅವರೊಂದಿಗೆ ಹೋಗಲಾಗಲಿಲ್ಲ; ಬೇಜಾರುಮಾಡಿಕೊಂಡರು. ಶಿವರಾಂ ಮತ್ತು ನರಸಿಂಹಶೆಟ್ಟಿ ಅವರಿಗೆ ನನ್ನ ಕವನಗಳನ್ನು ತೋರಿಸಿದೆ. ‘Children of Youth’ ಎಂಬ ನನ್ನ ಕವನವನ್ನು ಮುಂದಿನ ಸಭೆಯಲ್ಲಿ ಓದಲೆಂದು ಕೊಟ್ಟೆ, ಆದರೆ ಅದರ ಕರ್ತೃ ಯಾರು ಎಂಬುದನ್ನು ಬಹಿರಂಗಪಡಿಸದೆ. ಶೆಟ್ಟಿ ಹೇಳಿದ ‘ಕೆಲವರು Lucy Grayಯನ್ನು Michaelಗೆ ಹೋಲಿಸುತ್ತಾರೆ’ ಎಂದರು. ಅದಕ್ಕೆ ನಾನು ‘ಅವುಗಳ ಸರಳತೆಯ ವಿಷಯದಲ್ಲಿ ಮಾತ್ರ ಸಮಾನತೆ ಹೇಳಬಹುದು; ಆದರೆ ದುರಂತತೆಯಲ್ಲಲ್ಲ. ಲ್ಯೂಸಿಯ ದುರಂತತೆ ಅದೀರ್ಘವಾದುದರಿಂದ ಮೈಕೇಲ್‌ಗಿಂತಲೂ ಹೆಚ್ಚು ತೀಕ್ಷ್ಣವಾಗಿ ನಮಗೆ ಎದೆ ಮುಟ್ಟುತ್ತದೆ. ಕಥೆ ಇನ್ನೂ ಮುಂದುವರಿಯುತ್ತದೆ ಎಂದು ನಿರೀಕ್ಷಿಸುವಾಗಲೆ ಅದು ತಟಕ್ಕನೆ ಕೊನೆಮುಟ್ಟುತ್ತದೆ. ಆದರೆ ಮೈಕೇಲ್ ಕಥೆ ನಾವು ಅದರೊಡನೆ ಸಾಕಷ್ಟು ದೂರ ನಡೆದ ಮೇಲೆ ಅದರ ಕೊನೆಯನ್ನು ಅಪೇಕ್ಷಿಸುತ್ತಿರುವಾಗಲೆ ಅದು ಮುಗಿಯುತ್ತದೆ. ಮೂರು ಕಾಗದ ಬರೆದೆ. (೧) ಡಿ.ಆರ್.ವೆಂಕಟಯ್ಯಗೆ, (೨) ಕೆ.ಆರ್.ವೆಂಕಟಯ್ಯಗೆ, (೩) ಡಿ.ಎನ್.ಹಿರಿಯಣ್ಣಗೆ.”

ಫೆಬ್ರವರಿ ೧೫ನೆಯ ಶುಕ್ರವಾರದ ದಿನಚರಿ:

“ಇವೊತ್ತು ಚುನಾವಣೆಯ ದಿನವಾದ್ದರಿಂದ ರಜಾ ಕೊಟ್ಟಿದ್ದರು. ಬೆಳಿಗ್ಗೆ ‘The Sages of India’ ಎಂಬ ಸ್ವಾಮಿ ವಿವೇಕಾನಂದರ ಭಾಷಣದಲ್ಲಿ ಉಳಿದಿದ್ದ ಕೆಲವು ಭಾಗಗಳನ್ನು ಭಾಷಾಂತರಿಸಿದೆ. ಚುನಾವಣೆಯ ದಿನ ಎಂದರೆ ವಿದ್ಯಾರ್ಥಿಗಳಿಗೆ ತಿರುಪೆ ಬೇಡುವ ದಿನವಾಗಿತ್ತೆ ಹೊರತು…. ಅವರಲ್ಲಿ ಎಂತಹ ದೈನ್ಯತೆ ಮೂಡಿತ್ತು ಎಂದರೆ ಕಂಡಕಂಡವರನ್ನೆಲ್ಲ ಕೈಮುಗಿದು ಕೈ ಕುಲುಕುತ್ತಿದ್ದರು. ಹಿಂದೆ ಯಾರ ಬಳಿ ಕೂಡ ಸಾರುತ್ತಿರಲಿಲ್ಲವೊ ಅಂಥವರಿಗೂ ಸಲಾಮು ಹಾಕುತ್ತಿದ್ದರು. ಓಟಿಗಾಗಿ, ಸಂಘದ ಸಭೆ ಇತ್ತು. ಗ್ರೂಪ್ ಫೋಟೊ. ಶಿವರಾಂಗೆ ರವೀಂದ್ರನಾಥ ಠಾಕೂರರ ಕವನಗಳ ವಿಚಾರ ತಿಳಿಸಿದೆ. ಮಲ್ಲಪ್ಪ, ಬಸವರಾಜು ಸೇರಿದಂತೆ ನಾವೆಲ್ಲ ವಾಕ್ ಹೋದೆವು. ರೂಮಿಗೆ ಹಿಂತಿರುಗಿ ಸಂಯಮದ ದೃಢಪ್ರತಿಜ್ಞೆ ಮಾಡಿದೆ. ಮನೋದೌರ್ಬಲ್ಯದಿಂದ ನನ್ನನ್ನು ಪಾರುಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದೆ…. ಹೇ ಸ್ವಾಮಿ ವಿವೇಕಾನಂದ ಗುರುವೇ, ಕೈಹಿಡಿದು ನಡೆಸು, ನಾನು ನಿನ್ನ ಕಂದ, ನಿನ್ನ ಶಿಷ್ಯ. ಓಂ ಓಂ ಓಂ!”

ಫೆಬ್ರವರಿ ೧೬ನೆಯ ಶನಿವಾರದ ದಿನಚರಿ:

“ಬೆಳಿಗ್ಗೆ ‘The World and the Poet’ ಎಂಬ ಕವನ ರಚನೆ ಮಾಡಿದೆ. ರೂಮಿಗೆ ಬಂದ ಮೇಲೆ ‘ಮಹಾತ್ಮಾಗಾಂಧಿ ಅವತಾರವೇ?’ ಎಂಬ ಪ್ರಬಂಧವನ್ನು ತುಸು ಮುಂದುವರಿಸಿದೆ. ನಿದ್ದೆ ಬರುವ ಹಾಗಾಗುತ್ತಿತ್ತು. ಕೊಡಹಿ ಎಚ್ಚತ್ತುಕೊಂಡೆ… ಸಂಜೆ ೫ ಗಂಟೆಗೆ ನಾನು, ಶಿವರಾಂ, ಸಿ.ಟಿ.ಶೆಟ್ಟಿ ವಾಕ್ ಹೋದೆವು. ಕಾರಂಜಿ ಕೆರೆಯ ಬಳಿ ಕುಳಿತು ಉದ್ದವಾಗಿ ಬಿದ್ದಿದ್ದ ನಮ್ಮ ನೆರಳುಗಳನ್ನು ಪೂರ್ವಜನ್ಮದ ಅರಿವಿನ ರೂಪಗಳಿಗೆ ಹೋಲಿಸುತ್ತ ಕುಳಿತಿದ್ದೆವು. ಜಿ.ಎಚ್.ರಾಮಯ್ಯ, ಬಿ.ಎ. ಅವರು ಅಲ್ಲಿಗೆ ಬಂದರು. ಎಲ್ಲರೂ ಒಟ್ಟಿಗೆ ಇನ್ನೂ ಸ್ವಲ್ಪ ದೂರ ನಡೆದೆವು. ಹೋಗುತ್ತಿರುವಾಗ ಒಂದು ವಾಗ್ವಾದವಾಯಿತು: ಆಂಧ್ರಪ್ರೇಮದ ವಿಚಾರವಾಗಿ, ತಾಯಿಯ ಪರವಾದ ಮಗುವಿನ ಪ್ರೇಮ ಅಂಧವೋ ಬುದ್ಧಿ ಪೂರ್ವಕವೊ? ಮಗುವಿನ ಮೇಲಣ ಮಾತೆಯ ಪ್ರೀತಿ ಅಂಧವೋ ಬುದ್ಧಿ ಪೂರ್ವಕವೊ?-ಎಂದು. ತಾಯಿ ಪರವಾದ ಮಗುವಿನ ಪ್ರೀತಿ ಅಂಧ, ಅಬುದ್ಧಿಪೂರ್ವಕ. ಏಕೆಂದರೆ, ತಾಯಿ ನೀಡುವ ಆಹಾರಾದಿ ಸಕಲ ಸೌಕರ್ಯಗಳನ್ನು ಇತರರು ಯಾರು ಕೊಟ್ಟರೂ ಮಗು ಸುಮ್ಮನಿರುವುದಿಲ್ಲ ಎಂದು ನಾನು ವಾದಿಸಿದೆ. ಆಮೇಲೆ ನಾವು ಅವರ ರೂಮಿಗೆ ಹೋದೆವು. ಅವರು ಶಿವರಾಂ ಒಡನೆ ಏನೇನೊ ಹೇಳುತ್ತಿದ್ದರು. ನಾನು ತಟಸ್ಥನಾಗಿ ಆಲಿಸುತ್ತಿದ್ದೆ. ಆದರೆ ಅವರು ದೇವರು ಗೀವರು ಅಂತಾ ಕೂರುವುದು ಬರಿಯ ಕಾಲಹರಣ. ನಮ್ಮ ಪ್ರಗತಿಗಾಗಿ ದುಡಿಯುತ್ತಾ ಹೋಗುವುದು ಉತ್ತಮ ಎಂದು ಹೇಳಿದಾಗ ನಾನು ಸುಮ್ಮನಿರಲಾರದಾದೆ. ಗುಡುಗಿಬಿಟ್ಟೆ: (Burst out). ‘ಹಾಗಲ್ಲ ಸ್ವಾಮಿ, ನೀವು ಹೇಳುತ್ತಿರುವುದು ತಪ್ಪು. ಅದು ಎಂದಿಗೂ ಕಾಲಹರಣವಾಗಲಾರದು.’ ಅವರು ತಟಕ್ಕನೆ ಒಪ್ಪಿಕೊಂಡುಬಿಟ್ಟರು, ಅಂಥ ವಿಚಾರದಲ್ಲಿ ನಿರ್ಣಯ ಹೇಳುವುದಕ್ಕೆ ತಾವೇನೂ ತತ್ತ್ವಶಾಸ್ತ್ರಜ್ಞರಲ್ಲ ಎಂದು. ‘ನಾನೂ ತತ್ತ್ವಶಾಸ್ತ್ರಜ್ಞನೇನಲ್ಲ’ ಎಂದೆ ನಾನು. ತರುವಾಯ ನನ್ನ ಮಿತ್ರರೊಡನೆ ರೂಮಿಗೆ ಹೋಗುವ ದಾರಿಯಲ್ಲಿ ನಾನು ಅವರಿಗೆ ಹೇಳಿದೆ: ದೇವರೆ ಪರಮ ಸತ್ಯ; ಅವನನ್ನು ಕುರಿತು ಧ್ಯಾನಿಸುವುದು ಖಂಡಿತ ಕಾಲಹರಣವಲ್ಲ-ಎಂದು. ತರುವಾಯ ಶ್ರೀರಾಮಕೃಷ್ಣ ಪರಮಹಂಸರಿಗೆ ಕೈಮುಗಿದು ನಮಸ್ಕರಿಸಿದೆ.”

ಮೇಲಿನ ದಿನಚರಿಯಲ್ಲಿ ಹೆಸರಿರುವ ‘The World and the Poet’ ಅದೇ ತಾರೀಖಿನಲ್ಲಿ ಎಂದರೆ ೧೬.೨.೧೯೨೪ರಲ್ಲಿಯೆ ಹಸ್ತಪ್ರತಿಗೆ ದಾಖಲಾಗಿದೆ. ಅದರ ಪ್ರಾಸನಿಯಮ ಕುತೂಹಲಕಾರಿಯಾಗಿರುವುದರಿಂದ ಗಮನಿಸುವಂತಿದೆ. ಹೀಗಿದೆ: abccabdde:e ಕೊನೆಯ ಪಂಕ್ತಿ ಮೂರು ಪದ್ಯಗಳಲ್ಲಿಯೂ ಪುನರುಕ್ತವಾಗುತ್ತದೆ.

In the sweet world of fruits and flowers
Beneath the blue inspiring sky
Breathing the fragrance of the breeze,
Hearing the humming birds and bees
Under the shade of flowery towers
With a receiving heart and eye,
Brimming the cup of love and life
Flooding the spirit of Nature with his fife
The poet stands alone, silent and strange.

In the vast ocean of reefs and waves
Beneath the stormy aweful sky,
Breathing the moisture of the spray,
Hearing the roaring surfs at bay,

Dancing upon the watery graves,
Ready to live, ready to die,
Brimming the cup of love and life
Soothing the spirit of Terror with his fife
The poet stands alone, silent and strange.

In thy great world of day and night
Beneath the sky of awe and joy
Reaping the fruits of good and bad,
Hearing the songs both blithe and sad,
Seeking in awe a sweet delight,
Singing the words ‘Save and destroy!’
Brimming the cup of love and life
Alluring woe and bliss with his fife
The poet stands alone, silent and strange!
೧೬-೨-೧೯೨೪

ಫೆಬ್ರವರಿ ೧೭ನೆಯ ಭಾನುವಾರದ ದಿನಚರಿ:

“ಜಿ.ಎ.ನಟೇಶನ್ ಅಂಡ್‌ ಕೋ, ಮದರಾಸು, ಅವರಿಗೆ ಎರಡು ಕಾಗದ ಬರೆದೆ. ಸುರೇಂದ್ರನಾಥ ಬ್ಯಾನರ್ಜಿ ಮತ್ತು ಸರೋಜಿನಿ ನಾಯ್ಡು ಅವರ ಭಾಷಣಗಳ ಹೊತ್ತಗೆಗಳನ್ನೂ ಮತ್ತು ಬಾಬಾ ಭಾರತೀಯರ ‘Light on Life’ (ಬದುಕಿನ ಮೇಲೆ ಬೆಳಕು) ಎಂಬ ಪುಸ್ತಕವನ್ನೂ ವಿ.ಪಿ.ಮೂಲಕ ಕಳಿಸಿಕೊಡಲು. ಮಧ್ಯಾಹ್ನ ಮೂರು ಗಂಟೆಯ ಹೊತ್ತಿನಲ್ಲಿ ‘ಮಹಾತ್ಮಾಗಾಂಧಿ ಅವತಾರವೇ?’ ಎಂಬ ಪ್ರಬಂಧವನ್ನು ಮುಂದುವರಿಸಿ ಸ್ವಲ್ಪ ಭಾಗ ಬರೆದೆ… ಐದು ಗಂಟೆಗೆ ಪಬ್ಲಿಕ್ ಲೈಬ್ರರಿಗೆ ಹೋದೆ. ಆದರೆ ಮೆಟ್ಟಲುಗಳನ್ನು ಹತ್ತಿ ಮೇಲಕ್ಕೆ ಹೋಗುತ್ತಿದ್ದಾಗ ಒಂದು ಬಡ ಪುಟ್ಟ ಮಗು (poor baby) ಸೋಪಾನ ಪಂಕ್ತಿಯ ಬುಡದ ಬಳಿ ಧೂಳಿನಲ್ಲಿ ಆಟವಾಡುತ್ತಿದ್ದುದು ಕಣ್ಣಿಗೆ ಬಿತ್ತು. ಅದೇಕೊ ನನ್ನ ಹೃದಯಕ್ಕೆ ಮುಟ್ಟಿ ಗಮನವನ್ನೆಲ್ಲ ಸೆಳೆದುಕೊಂಡಿತು. ನೂರಾರು ಉದ್ಭೋದಕ ಚಿಂತನ ತರಂಗಗಳು ನನ್ನ ಮನಸ್ಸಮುದ್ರದಲ್ಲಿ ಉಲ್ಲೋಲಿಸಿದುವು. ಕಲ್ಲು ನೆಟ್ಟಂತೆ ಅಲ್ಲಿಯೆ ನಿಂತುಬಿಟ್ಟೆ ಆ ಶಿಶುಲೀಲೆಯನ್ನೆ ನೋಡುತ್ತಾ. ಯಾರಾದರೂ ಲೈಬ್ರರಿಗೆ ಹೋಗುವವರು ಮೆಟ್ಟಿಲೇರಲು ಬಂದಾಗ ಮಾತ್ರ ಬೇರೆ ಎಲ್ಲಿಯೊ ನೋಡುವವನಂತ ನಟಿಸುತ್ತಿದ್ದೆ, ನಾನು ಆ ಶಿಶುಲೀಲೆಯಲ್ಲಿ ಅಷ್ಟೊಂದು ಆಸಕ್ತನಾಗಿರುವುದನ್ನು ಎಲ್ಲಿ ಕಂಡುಬಿಡುತ್ತಾರೊ ಎಂದು. ಆ ಮಗು ಒಂದು ಕಾಗದಕ್ಕೆ ಧೂಳನ್ನೆಲ್ಲ ಒಟ್ಟುಮಾಡಿ ಅದನ್ನು ಪಕ್ಕದಲ್ಲಿ ಒಂದು ಚಪ್ಪಡಿಗಲ್ಲಿನ ಮೇಲೆ ಸುರಿಯುತ್ತಿತ್ತು. ಲೈಬ್ರರಿಗೆ ಬರುವವರು ಹೋಗುವವರ ಕಡೆ ಅದರ ಗಮನ ಒಂದಿನಿತೂ ಹರಿದಿರಲಿಲ್ಲ. ಮಾನವ ಭೂಮಿಕೆಯಿಂದ ಪ್ರತ್ಯೇಕವಾದ ಬೇರೊಂದು ಲೋಕದಲ್ಲಿತ್ತು ಆ ಶಿಶು. ಅದರ ಅಮೇಯ ಆನಂದವನ್ನು ಅಳೆಯುವುದು ಬಹುಕಷ್ಟ; ಅದರ ಹೃದಯ ನಮಗೆ ಗೋಚರವಾಗಿ ಆ ಹೃದಯವನ್ನು ನಮ್ಮ ಹೃದಯ ಸಾಕ್ಷಾತ್ಕರಿಸಿಕೊಂಡು ಪಡೆದಲ್ಲದೆ…. ಸ್ವಾಮಿ ವಿವೇಕಾನಂದ! ಪರಮಹಂಸ! ಶ್ರೀಕೃಷ್ಣ ಚೈತನ್ಯ!”

ಫೆಬ್ರವರಿ ೧೮ನೆಯ ಸೋಮವಾರದ ದಿನಚರಿ:

“ಸ್ಕೂಲಿನಿಂದ ಸೈನ್ಸ್ ಕ್ಲಾಸುಗಳಿಗೆ ಬರುತ್ತಿದ್ದಾಗಲೆಲ್ಲ (ಆಗ ಮಹಾರಾಜ ಹೈಸ್ಕೂಲಿನಲ್ಲಿ ಗಣಿತ ಮತ್ತು ಸಾಹಿತ್ಯಾದಿ ವಿಭಾಗದ ಪಾಠಗಳು ಮಾತ್ರ ನಡೆಯುತ್ತಿದ್ದುವು. ಸೈನ್ಸ್ ಕ್ಲಾಸುಗಳೂ ಮತ್ತು ಲ್ಯಾಬೋರೇಟರಿಯ ಪ್ರಯೋಗಗಳೂ ಜಗನ್ಮೋಹನ ಪ್ಯಾಲೇಸ್ ಕಟ್ಟಡದಲ್ಲಿ ನಡೆಯುತ್ತಿದ್ದುವು. ಅವಕ್ಕಾಗಿ ನಾವು ಮಹಾರಾಜಾ ಹೈಸ್ಕೂಲಿನಿಂದ ಜಗನ್ಮೋಹನ ಬಂಗಲೆಗೆ ಆಯಾ ಪೀರಿಯಡ್‌ಗಳಿಗೆ ನಡೆದುಬರಬೇಕಾಗಿತ್ತು.) ದೊಡ್ಡ ಅರಳಿಕಟ್ಟೆಯ ಮಹೋನ್ನತ ಅರಳಿಮರದಲ್ಲಿದ್ದ ಹಳದಿಗೊಂಡ ಹಣ್ಣೆಲೆಗಳು (ಚಳಿಗಾಲ, ಫೆಬ್ರವರಿ) ಉದುರುತ್ತಿದ್ದುದನ್ನು ಅವಲೋಕಿಸುತ್ತಿದ್ದೆ. ಮರದಿಂದ ಹೊಮ್ಮುತ್ತಿದ್ದ ಮರ್ಮರ ನಾದ, ಗಾಳಿಯಲ್ಲಿ ಕುಣಿಕುಣಿದು ಉದುರುತ್ತಿದ್ದ ಹಣ್ಣೆಲೆಗಳ ಹಳದಿಯ ಹೊಳಪು, ಆ ಎಲೆಗಳು ನೆಲಕ್ಕೆ ಬಂದಿಳಿದು ಗಾಳಿಯಲ್ಲಿ ಉರುಳುರುಳಿ ತೇಲಿ ಬೀಳುವ ನೋಟದ ಮತ್ತು ಮೃದುಲಸದ್ದಿನ ಸೊಗಸು ಎಲ್ಲಕ್ಕೂ ಮಿಗಿಲಾಗಿ ಇವೆಲ್ಲದರ ಹಿಂದೆ ಅಗೋಚರವಾಗಿದ್ದ ಚಿನ್ಮಯ ಚೇತನದ ದಿವ್ಯಾನಂದದ ಸ್ಫೂರ್ತಿ-ನನ್ನನ್ನು ಭಾವೋನ್ಮಾದ ಮೂಕನನ್ನಾಗಿ ಮಾಡುತ್ತಿದ್ದುವು. ಆಹಾ! ಅದನ್ನು ಕವಿತೆಯಿಂದಲ್ಲದೆ ಬೇರೆ ರೀತಿಯಿಂದ ಹೇಳಲಾರೆ: ಒಂದು ಕವನ ರಚಿಸಲು ಮನಸ್ಸು ಮಾಡಿ, ಅಲ್ಲಿಯೆ ಒಡನೆಯೆ ‘Ah! The falling leaves, the sweet falling leaves!’ ಎಂದು ಪ್ರಾರಂಭಿಸಿದೆ… ರೂಮಿಗೆ ಬಂದಮೇಲೆ ಅಲ್ಲಿಗೆ ಬಂದ ಎಚ್.ಎಸ್. ಶಿವರಾಂಗೆ ಸ್ವಾಮಿ ವಿವೇಕಾನಂದರ ‘The Absolute and the Manifestation’ಎಂಬ ಪಂಕ್ತಿಗೆ ಬಂದಾಗ ನಿಲ್ಲಿಸಿಬಿಟ್ಟು, ಧ್ಯಾನಿಸುತ್ತಾ ಕುಳಿತುಬಿಟ್ಟೆ. ಅಷ್ಟರಲ್ಲಿ ಆಮೇಲೆ ವಿವರಿಸಿದೆ: ಪರಬ್ರಹ್ಮವು (Absolute) ಕಾಲಾತೀತ: ಏಕೆಂದರೆ, ಕಾಲ ಅದನ್ನು ಬದಲಾಯಿಸುವುದಿಲ್ಲ, ಇತರ ವಸ್ತುಗಳಲ್ಲಿ ಬದಲಾವಣೆ ತರುವಂತೆ. ಅಲ್ಲದೆ ಕಾಲವೂ ಬ್ರಹ್ಮದಲ್ಲಿಯೆ ಇದೆ, ಬ್ರಹ್ಮವು ಕಾಲದ ಒಳಗಿಲ್ಲ. ದೇಶಾತೀತ: ಏಕೆಂದರೆ, ಅದು ಎಲ್ಲ ವಿಸ್ತರಿಸುವುದಕ್ಕಾಗಲಿ ಚಲಿಸುವುದಕ್ಕಾಗಲಿ ಬೇರೆ ಜಾಗವೆ ಇಲ್ಲ. ಅದು ಕಾರ್ಯಕಾರಣ ಸಂಬಂಧಕ್ಕೆ ಅತೀತವಾಗಿದೆ: ಏಕೆಂದರೆ, ಅದೇ ಎಲ್ಲದಕ್ಕೂ ಕಾರಣವಾಗಿರುವುದರಿಂದ ಅದಕ್ಕೆ ಬೇರೆಯಾವುದೂ ಕಾರಣವಾಗಿರಲಾರದು. ಏಕೆಂದರೆ, ಅದಕ್ಕೂ ಒಂದು ಕಾರಣ ಕಲ್ಪಿಸುವುದಾದರೆ ಅದರ ಕೇವಲತ್ವಕ್ಕೇ ಭಂಗ ಬರುತ್ತದೆ. ಏಕಕಾಲದಲ್ಲಿ ಕಾರಣವೂ ಆಗಿ ಕಾರ್ಯವೂ ಆಗಲು ಸಾಧ್ಯವಿಲ್ಲ. ಆಮೇಲೆ ಅವರೆಲ್ಲ ಹೊರಟುಹೋದರು. ನಾನು ಸಿನಿಮಾಕ್ಕೆ ಹೋದೆ: ರಾಬಿನ್‌ಸನ್ ಕ್ರೂಸೊ ಕಥೆ.”

ಫೆಬ್ರವರಿ ೧೯ನೆಯ ಮಂಗಳವಾರದ ದಿನಚರಿ:

“ಪಶ್ಚಾತ್ತಾಪಪಟ್ಟುಕೊಂಡೆ. ಬದುಕೆಲ್ಲ ಪಾಪ ಮಾಡುವುದರಲ್ಲಿ ಮತ್ತು ಪಶ್ಚಾತ್ತಾಪ ಪಡುವುದರಲ್ಲಿ ಕಳೆಯುವುದಾದಪಕ್ಷದಲ್ಲಿ ಅದರಿಂದೇನು ಪ್ರಯೋಜನ? ಎಂದು ಚಿಂತಿಸಿದೆ. ನಾನು ಶ್ರದ್ಧಾಪೂರ್ವಕವಾಗಿ ಎಷ್ಟೊ ಜನ ಮಹದ್ ವ್ಯಕ್ತಿಗಳನ್ನು ಅಧ್ಯಯನ ಮಾಡಿದ್ದೇನೆ; ಮತ್ತ ಶ್ರದ್ಧಾಪೂರ್ವಕ ಅವರನ್ನು ಅನುಸರಿಸಲು ದೃಢ ಮಾಡಿಕೊಂಡಿದ್ದೇನೆ. ಅವರ ಪವಿತ್ರನಾಮಗಳ ಮೇಲೆ ಆಣೆಯಿಟ್ಟೂಕೊಂಡಿದ್ದೇನೆ. ಆಣೆಯಿಟ್ಟು ಪ್ರತಿಜ್ಞೆ ಮಾಡಿದ್ದರೂ ಅದನ್ನು ಮುರಿದು ವ್ರತಭ್ರಷ್ಟನಾಗಿದ್ದೇನೆ. ಓ ದೇವ, ಏಕೆ ಹಾಗೆ ಮಾಡುತ್ತೇನೆಂದು ನನಗೆ ಗೊತ್ತಾಗುವುದಿಲ್ಲ. ಮನಸ್ಸನ್ನು ಬಿಗಿಹಿಡಿಯಲಾರದವನಾಗಿದ್ದೇನೆ. ಓ ತಂದೆ, ನನ್ನನ್ನು ಮೇಲೆತ್ತು! ಓ ತಾಯಿ, ನನ್ನನ್ನು ಕ್ಷಮಿಸು! ಹೇ ಸಖನೆ, ನೆರವಾಗು! ಓ ರಕ್ಷಕನೆ, ಕಾಪಾಡು! ಓ ಆತ್ಮಾ, ನಿನ್ನನ್ನು ನೀನು ಅರಿ! ನನ್ನನ್ನು ನಾನು ವಿಶ್ಲೇಷಿಸಿಕೊಂಡು ಇಂತೆಂದೆ; ‘ತಂದೆಯೆ, ಅವರೇನು ನನ್ನ ಸರ್ವಸ್ವವನ್ನೂ ಸುಲಿದುಕೊಂಡಿಲ್ಲ; ಇನ್ನೂಕೂಡ ನನ್ನಲ್ಲಿ ಸ್ವಲ್ಪ ಉಳಿದಿದೆ!…. ಬೆಳಿಗ್ಗೆ ‘The Falling Leaves’ ಎಂಬ ಕವನ ರಚಿಸಿದೆ. ಅದೇ ನನ್ನ ಮೊಲದನೆಯ ಕವನ ಎಂದು ಕಾಣುತ್ತದೆ, ನಾನು ಬರೆಯುತ್ತಿದ್ದಂತೆಯೇ ನನ್ನ ಮೈಯೆಲ್ಲ ಕಂಪಿಸುವಂತೆ ಮಾಡಿದ್ದು. ಕೊಟಡಿಯಲ್ಲಿ ಇತರರಿದ್ದರು. ಆದರೂ ನಾನೆಷ್ಟು ಅದನ್ನು ತಡೆಗಟ್ಟುವಂತೆ ಪ್ರಯತ್ನಿಸಿದರೂ ತಡೆಯದೆ ನನ್ನ ದೇಹಸಮಸ್ತವೂ ಭಾವಾವೇಶದಿಂದ ಸ್ಪಂದಿಸತೊಡಗಿತು. ಕಣ್ಣೀರು ಉಕ್ಕಿತು, ಬೇಗ ಬೇಗ ಒರಸಿಕೊಂಡೆ. ಆನಂದ ಆವೇಶಗಳಿಂದ ತುಂಬಿ ತುಳುಕುತ್ತಾ ಪಂಕ್ತಿಯ ಮೇಲೆ ಪಂಕ್ತಿಯಂತೆ ಬರೆಯುತ್ತಾ ಹೋದೆ. ಕೊನೆಗೆ ‘For yours is to give, And mine to receive’ ಎಂಬ ಪಂಕ್ತಿಗಳಿಗೆ ಬರುವಷ್ಟರಲ್ಲಿ ಮುಂದೆ ಬರೆಯಲು ಸಾಧ್ಯವಾಗಲಿಲ್ಲ. ನನ್ನ ಕೈ ನಡುಗಿತು; ತುಂಬ ಆಯಾಸಗೊಂಡಂತಾಯಿತು. ಹಾಗೆಯೇ ತಲೆದಿಂಬಿನ ಮೇಲೆ ಓರೆಯಾಗಿ ಒರಗಿ ಬಿಟ್ಟೆ. ಮತ್ತೆ ಒಂಬತ್ತೂವರೆ ಗಂಟೆಗೆ ಎಚ್ಚರಗೊಂಡೆ. ಇತರರ ಮುಂದೆಯೂ ನನ್ನನ್ನು ಆವೇಶದಿಂದ ಕಂಪಿಸುವಂತೆ ಮಾಡಿದ್ದು ಇದೇ ಮೊದಲನೆಯ ಕವನ ಎಂದು ನನ್ನ ಭಾವನೆ… ಸಂಜೆ ಲೈಬ್ರರಿಗೆ ಹೋಗಿ, ಸ್ವಾಮಿ ಅಭೇದಾನಂದರ Divine Inheritance Of Man ಪುಸ್ತಕದಲ್ಲಿ ೮೭ನೆಯ ಪುಟದಿಂದ ೧೬೭ನೆಯ ಪುಟದವರೆಗೆ ಓದಿದೆ. ಮತ್ತು ಪಿ.ಮಲ್ಲಯ್ಯನವರಿಂದ ಠಾಕೂರರ ವಿಚಾರವಾಗಿ ಕೆಲವು ವಿಷಯಗಳನ್ನು ಕೇಳಿದೆ…. ಭಿಕ್ಷುಕರಿಗೆ ಕೊಡಬೇಕಾಗಿದ್ದ ಋಣದಲ್ಲಿ ಒಂದಾಣೆಯನ್ನು ಕೊಟ್ಟು ತೀರಿಸಿದೆ. ಇನ್ನೂ ಕೊಡಬೇಕಾದ್ದು ಹನ್ನೆರಡೂವರೆ ಆಣೆ ಉಳಿಯುತ್ತದೆ… ತಾಯಿ, ಶಿಶುವಿನಂತೆ ನಿನ್ನ ತೊಡೆಯೇರಲು ಬರುತ್ತೇನೆ…. ಓ ಕೃಷ್ಣಾ, ನನ್ನನ್ನು ಎದೆಗಪ್ಪಿಕೊ!”

ಫೆಬ್ರವರಿ ೨೦ನೆಯ ಬುಧವಾರದ ದಿನಚರಿ:

“ಬೆಳಿಗ್ಗೆ ಮುಂಜಾನೆ ನಾಲ್ಕು ಗಂಟೆಗೆ ಎದ್ದು ಜ್ಯಾಮಿಟ್ರಿ ಅಧ್ಯಯನ ಮಾಡಿದೆ, ಆಮೇಲೆ ನಿನ್ನೆ ಪ್ರಾರಂಭಿಸಿ ಸ್ವಲ್ಪ ಬರೆದು, ಇನ್ನೂ ಮುಗಿಯದಿದ್ದು, ಭಾವಾತಿಶಯದ ಆವೇಶಕ್ಕೆ ವಶನಾದ ಕಾರಣಕ್ಕಾಗಿ ನಿಲ್ಲಿಸಿಬಿಟ್ಟಿದ್ದ ‘The Falling Leaves’ ಕವನದ ಕೆಲವು ಪಂಕ್ತಿಗಳನ್ನು ಮುಂದುವರಿಸಿದೆ. ಸ್ಕೂಲಿನಲ್ಲಿ ಸ್ವಾಮಿ ಶಾರದಾನಂದರ ‘The Ethics of the Hindu Religion’ ಪ್ರಬಂಧ ಓದಿದೆ. ಇವೊತ್ತು ಚಂದ್ರಗ್ರಹಣವಾದ್ದರಿಂದ ಮಧ್ಯಾಹ್ನದ ಮೇಲೆ ರಜಾ ಕೊಟ್ಟರು. ರೂಮಿಗೆ ಬಂದು ನಿದ್ದೆ ಮಾಡಿದೆ. ಎದ್ದ ಮೇಲೆ ‘The Falling Leaves’ ಕವನದ ಇನ್ನಷ್ಟು ಸಾಲುಗಳನ್ನು ಬರೆದೆ. ಕೆ.ಮಲ್ಲಪ್ಪ, ಪಿ.ಮಲ್ಲಯ್ಯ ಬಂದರು. ಆದರೆ ನಾನು ಸಿನಿಮಾಕ್ಕೆ ಹೋಗಬೇಕಾಗಿದ್ದುದರಿಂದ (ರಾಬಿನ್‌ಸನ್ ಕ್ರೋಸೋ ಕಥೆ ಆಗಿನ ಕಾಲದ ಮಾತಿಲ್ಲದ ಮೂಕರೀತಿಯಲ್ಲಿ ಸೀರಿಯಲ್ ಆಗಿ ಹದಿನೈದು ದಿನಗಳ ಕಾಲ ನಡೆಯುತ್ತಿತ್ತು) ಮತ್ತು ಚಂದ್ರಗ್ರಹಣದ ಪ್ರಯುಕ್ತ ಸಂಜೆ ಐದು ಗಂಟೆಗೇ ಊಟ ಪೂರೈಸಿದೆ. ಚಂದ್ರಗ್ರಹಣ ನೋಡಲು ಚೆನ್ನಾಗಿತ್ತು. ಹೊಗೆ ಬಣ್ಣದ ಮುಗಿಲು ಮುಸುಗಿದಂತೆ ಅದರ ಜ್ಯೋತಿರ್ಮಯ ಬಿಂಬ ಆಕ್ರಮಿತವಾಗಿತ್ತು. ನಾವು ಎಷ್ಟು ಹೊತ್ತು ನೋಡಿದರೂ ನಮ್ಮ ಕುತೂಹಲ ತಣಿಯಲಿಲ್ಲ. ರಾತ್ರಿ ಒಂಬತ್ತೂವರೆ ಗಂಟೆಗೆ ರೂಮಿಗೆ ಬಂದೆ. ಕೆಮಿಸ್ಟ್ರಿ ಪಠ್ಯಪುಸ್ತಕದಲ್ಲಿ ಕಾರ್ಬನ್ ಪಾಠ ಓದಿದೆ. ಭಗವದ್ಗೀತೆಯಲ್ಲಿ ಕೆಲವು ಶ್ಲೋಕಕಗಳನ್ನು ಪಠಿಸಿದೆ. ಮಲಗಿದೆ… ತಾಯಿ, ನಾನು ನಿನ್ನ ಶಿಶು. ಕೃಷ್ಣಾ, ನನ್ನನ್ನು ಮುದ್ದಿಸು, ಸ್ವಾಮಿ ವಿವೇಕಾನಂದರು ನನ್ನ ಸಹೋದರ”.

ಫೆಬ್ರವರಿ ೨೧ನೆಯ ಗುರುವಾರದ ದಿನಚರಿ:

“ಇವೊತ್ತು ‘The Falling Leaves’ ಕವನವನ್ನು ಪೂರೈಸಿದೆ. ಸುರೇಂದ್ರನಾಥ ಬ್ಯಾನರ್ಜಿ ಮತ್ತು ಸರೋಜಿನಿ ನಾಯ್ಡು ಅವರ ಭಾಷಣಗಳೂ ಮತ್ತು ಬಾಬಾ ಪ್ರೇಮಾನಂದ ಭಾರತಿಯವರ ‘Light on Life’ ಎಂಬ ಪುಸ್ತಕವೂ ವಿ.ಪಿ.ಬಂದುವು. ಸ್ಕೂಲಿನಲ್ಲಿ ಅಧ್ಯಾಪಕ ಸಪ್ತರ್ಷಿ ಅಯ್ಯರ್ ಅವರು ನಾನು ಡಿಗ್ರಿಗೆ ಯಾವ ಐಚ್ಛಿಕಗಳನ್ನು ತೆಗೆದುಕೊಳ್ಳಬೇಕೆಂದಿದ್ದೇನೆ ಎಂದು ಪ್ರಶ್ನಿಸಿದರು. ಈಗ ತೆಗೆದುಕೊಂಡಿರುವ ಗಣಿತ, ವಿಜ್ಞಾನಗಳನ್ನು ಬಿಟ್ಟು ತತ್ತ್ವಶಾಸ್ತ್ರ, ಸಾಹಿತ್ಯಗಳನ್ನು ತೆಗೆದುಕೊಳ್ಳಬೇಕೆಂದಿದ್ದೇನೆ ಎಂದು ಉತ್ತರಿಸಿದೆ… ಬಿಡುವಿನ ಸಮಯದಲ್ಲಿ ಸುರೇಂದ್ರನಾಥರ ಒಂದು ಭಾಷಣವನ್ನು ಗಟ್ಟಿಯಾಗಿ ವಾಚಿಸಿದೆ. ನನ್ನ ಗೆಳೆಯರೂ ಕೇಳಲಿ ಎಂದು. ಕೆಲವರು ಅದನ್ನಾಲಿಸಲು ಬಂದು ನೆರೆದರು. ಸಂಜೆ ಆರು ಗಂಟೆಗೆ ದೇಶಭಕ್ತ ಗೌರೀಶಂಕರ ಮಿಶ್ರ ಎಂಬುವರ ಬಹಿರಂಗ ಭಾಷಣವಿತ್ತು. ಗಾಂಧೀ ಮೈದಾನದಲ್ಲಿ ಭಾರೀ ಜನ ನೆರೆದಿತ್ತು. ನಾವೆಲ್ಲ ಕಾಯುತ್ತಾ ಕುಳಿತಿದ್ದೆವು, ಮಿಶ್ರ ಅವರಿಗಾಗಿ. ಅವರು ಅತ್ಯಂತ ಸರಳವಾದ ಉಡುಪು ಧರಿಸಿ ಬಂದರು. ಅವರ ಆಕರ್ಷಣೀಯವಾಗಿದ್ದ ಮುಖ ತೇಜಸ್ಸಿನಿಂದ ಪ್ರಕಾಶಿಸುತ್ತಿತ್ತು, ಶಕ್ತಿಪೂರ್ಣವಾಗಿತ್ತು; ಸರಳತೆಯ ಲಾಂಛನದಂತಿದ್ದರು ಅವರು. ಭಾಷಣ ಪ್ರಾರಂಭಿಸಿದಾಗ ನಿಧಾನವಾಗಿತ್ತು ವಿನಮ್ರವಾಗಿತ್ತು. ಆದರೆ ಮುಂದುವರಿದಂತೆಲ್ಲ ಗುಡುಗಿನೋಪಾದಿಯಲ್ಲಿ ಗರ್ಜಿಸತೊಡಗಿದರು. ಭಾಷಣದ ಭಾಷೆಯಲ್ಲಿ ಎಂತಹ ವೀರ್ಯವತ್ತಾದ ಶೈಲಿಯಿತ್ತೆಂದರೆ, ಅವರ ಕಂಠಶ್ರೀಯಲ್ಲಿ ಎಂತಹ ಅಧಿಕಾರ ಪ್ರಮತ್ತತೆಯಿತ್ತೆಂದರೆ, ಆಲಿಸಿದ ಕಲ್ಲುಮರಗಳೂ ಕೂಡ ಉದ್ರೇಕಗೊಳ್ಳುವಂತಿತ್ತು. ಹತ್ತಿರದಲ್ಲಿದ್ದ ಅರಮನೆಗೂ ಅದು ತಲುಪಿ, ಕೋಟೆಯ ಗೋಡೆಗಳಿಂದ ಅನುರಣಿತವಾಗುತ್ತಿತ್ತು. ಅವರ ಧ್ವನಿ. ಅರಮನೆಯಲ್ಲಿ ಮಹಾರಾಜರಿದ್ದಿದ್ದರೆ, ಹೆಚ್ಚು ಪ್ರಯತ್ನವಿಲ್ಲದೆ ಅದನ್ನು ಕೇಳಬಹುದಾಗಿತ್ತು. ಸುಮಾರು ರಾತ್ರಿ ೯ ಗಂಟೆಯವರೆಗೂ ಸಾಗಿತ್ತು ಅವರ ಭಾಷಣ.

[1] ವಂದೇ ಮಾತರಂ!”

ಮುಂದಿನ ದಿನದ ದಿನಚರಿ ಬರೆಯುವ ಮುನ್ನ ಹಿಂದಿನ ದಿನದ ದಿನಚರಿಯಲ್ಲಿ ಪೂರೈಸಿದನೆಂದು ಹೇಳಲಾದ ‘The Falling Leaves’ ಕವನವನ್ನು ಕೊಡುತ್ತೇನೆ. ಅದು ದೀರ್ಘವಾಗಿದ್ದರೂ ಪೂರ್ತಿಯಾಗಿಯೆ ಇರುತ್ತದೆ. ಏಕೆಂದರೆ ಅದು ಅಂದಿನ ಕವಿಯ ಚೇತನದ ಒಂದು ವಿಶೇಷ ಅನುಭಾವಕ್ಕೆ ಕನ್ನಡಿ ಹಿಡಿಯುತ್ತದೆ. ಉದ್ದ ಗಿಡ್ಡ ಪಂಕ್ತಿಗಳಿಂದಲೂ ಮತ್ತು ವಿವಿಧ ಪ್ರಾಸಾನುಪ್ರಾಸಗಳಿಂದಲೂ ವಿಭಾಗಗಳಿಂದಲೂ ಕೂಡಿ ಪ್ರಗಾಥ (Ode) ಲಕ್ಷಣಸ್ವರೂಪಗಳಿಂದ ನಮೂದಿತವಾಗಿದೆ. ತನ್ನದಲ್ಲದ

ವಿದೇಶೀಭಾಷೆಯ ಅಸಮರ್ಪಕ ಪ್ರಭುತ್ವದ ನ್ಯೂನತೆ ಕಾರ್ಪಣ್ಯಗಳಿದ್ದರೂ ಕವನದ ಭಾವಶ್ರೀ ಸಹೃದಯ ಗಣ್ಯವಾಗಿದೆ:

I

Ah! The falling leaves, the sweet falling leaves
The leaves of golden yellow,
Bright and sweet, pleasing and mellow!
What message great-my heart receives?
What glory shines behind
The subtle poetic mind!
What secret meaning do I find?
There peeps in every falling leaf,
Tho’Withered by time, care and grief
As if they inderit
The subtle poetic mind!
What secret meaning do I find?
There peeps in every falling leaf,
Tho’ withered by time, care and grief
As if they inherit
The eternal spirit,
The Cow-herd Boy
Of eternal joy!
The murmer of the breeze
Upon these Aswath trees
Doth echo in my heart
And singeth “That Thou Art!”
Their time of life is done;
Their glory they have won;
They now return to their home
With jollity to roam!

II

Sweet withering leaves, ye pleased me then
When ye were young and gay;
Trembling with delight ye made the glen
As sweet as morn of May!
When I alone upon the grass
Dappled with twinkling dew of morn
Took slow my silent way to the pass,
Sweet leaves, ye left me not forlorn;
But beckoning me with fluttering call
Played, prayed, conversed and with me smiled
And taught me highest truths of the wild
To conquer ere we fall,
To see the One in all!
And gave me emotions sweet, and thoughts
Which stand in my life as brightest spots,
Too high for words, too dear to part;
And thus breathed into me a rapturous heart;
And sometimes created in me delights
Too Subtle and too delicate
To ordinary sights
And too refined for those who hate!
And high above the human joys and sorrows
Unbound by todays and tomorrows!

III

Yes, sweet leaves, tho’mute your message came,
Those lispings tho’ inarticulate
Were messengers from beyond my fate,
That made me into the future peer
And thus become a poetic seer!
One delightful flutter of your frame
Taught my sensitive soul more
Than the mightiest priests of lore;
One tremble of your dumb delight
Revealed the invisible to my sight!
The throngs of angels came
And played around the boy
While from the bottom my frame
Shook with excessive joy!
Then all did fade before
The mind’s philosophic lore:
And I, beyond all, stood,
Beyond sorrows, joys, evil and good;
While angels, heavnes, joys and sorrows
Flew like the wizzing arrows;
And stood before me
The great Eternity:
Aweful yet sweet.
Ready to greet,
Unknown yet known,
Vacant yet full,
Young yet full-grown,
Delightful tho’dull!
Such inspirations did then I feel
Brightest, noblest, sweetest, blest;
Sweet leaves, tos thank you, now I kneel,
The only tribute of my brest!
Ye go and with you I too shall come;
But oh! The difference is,
Mine may not be with such ease!
Oh give me the bliss to pass away dumb!
Ye please when ye come
And smile when ye go;
Your Salutations dumb
I know, sweet leaves, I know!

IV

Oh! For the withering glory
When my head turns hoary!
Oh! For the leaves’ withering mirth
When I have to leave this green earth!
Ah! Aged leaves, teach me to die
Without a tear, without a sigh,
Even a you taught me to live
With joy, to give and to receive!
Ye come not but for beauty
Tho’ye shall come with glee,
As man’s mind thinks to be;
But ye have got your duty,
A sacred duty of your own
Not known to all but few alone!
Tho’ poets find in you a joy
And attribute to you
The bliss to smile with dew,
Duty they never can decoy!
Tho’ye to outward view
Seem but bright things of joy
Yet there is duty
Above your beauty.

V

Nor fot sweet poet’s pleasure
Alone ye are born;
Not for philosopher’s treasure
Alone ye dost adorn
Yonder fading Aswath hoary!
But for Nature’s mystic glory!
For the great joy of Divine Mother
We come every playful brother!
Apart from your jollity
Your duty lingered still
While Nature worked her will
Regardless of your beauty.
You daily toiled in sun and wind
And helped the fruit and flower;
Your beauty never allured the mind
Of the great universal Lover,
Whose joy gives birth to you
Whose joy feeds you with nector dew
Whose love of mighty blast
Consumes you all atlast!
There must ye go; from heaven ye came
And there shall ye abide
With ever-lasting fame
Where happiness is piled!
Depart, sweet leaves, depart!
My tribute is but a tear;
Your memory lingers in my heart,
Too dear to erase, oh! Too dear.

VI

Some flutter in joy and some wave
And some come again and again;
While some shall vanish thro’the grave
In one continous chain!
And there in yonder tree,
The child of liberty,
Some leaves are green,
And some are sheen,
While some are bright
And dance with delight;
While some are meek, serene and mild
Like contemplaters in the wild,
While some are yellow
And some are mellow
And some wither and fall
Leaving their brightest pleasure,
Throwing their sweetest treasure
To respond to the Mother’s Call!
One by one, with the lightest breeze
The golden leaves come fluttering down,
And give the dust a silent kiss
As if it were their highest bliss,
To show that death is but their ease
And death’s grim frown is Mother’s frown!
A subtle secret thrills my frame;
I live again those days I lived;
And to me sweet Infancy’s flame
Brings back such joys that were bereaved.

VII

Heaven makes you and heaven takes you
And heaven alone is your home!
Ye come to the world of flowers and dew
Only for a time to roam.
Ye bring a heaven to the poet’s eye
Both when ye come and when ye go;
And when he sees your trembling hall
He hears the ancient fluttering call;
And feels the infant thrills
Of mountains, lakes and hills,
While thro’ the sweet emotion’s eye
The liquid joy doth flow!
Ye go from the world but not from my heart,
Your teachings great shall ever remain;
The poet from you shall never depart
In this great world’s uncertain main.
Adieu, sweet leaves, adieu!
Let this farewell be short;
For ye shall come anew
To please a poet’s heart!
Again and yet again
My salutations to you!
Again and yet again
My short but sweet adieu!
೨೯-೨-೧೯೨೪

 


[1] ‘ನೆನಪಿನ ದೋಣಿಯಲ್ಲಿ’ ಹಿಂದೆ ನಡೆದ ಒಂದು ಘಟನೆಯಲ್ಲಿಯೂ ಭಾಷಣಕಾರರ ಹೆಸರು ‘ಗೌರೀಶಂಕರ ಮಿಶ್ರ’ ಎಂದು ಬರುತ್ತದೆ. ಈ ದಿನಚರಿ ದೊರಕುವ ಮುನ್ನ ಅದನ್ನು ಬರಿಯ ನೆನಪಿನಿಂದ ಬರೆಯಲಾಗಿತ್ತು. ಆ ಭಾಷಣಕಾರರ ಹೆಸರು ಬೇರೆಯಾಗಿರಬೇಕು. ನೆನಪಿಗೆ ಬರುವುದಿಲ್ಲ. ಬಿರುಗಾಳಿ ಕೃಷ್ಣರಾಯರೊ?