ಫೆಬ್ರವರಿ ೨೨ನೆಯ ಶುಕ್ರವಾರದ ದಿನಚರಿ:

“ಇದೊಂದು ಸ್ವಾರಸ್ಯದ ದಿನವಾಗಿತ್ತು, ಅದರ ಪೌರುಷ ಪ್ರದರ್ಶನಕ್ಕಾಗಿ ಮತ್ತು ಅದರ ದೇಶಭಕ್ತಿಗಾಗಿ. ಗೌರೀಶಂಕರ ಮಿಶ್ರರಿಗೆ ಬಹಿರಂಗ ಭಾಷಣ ಮಾಡಲು ಬಿಡಲಿಲ್ಲ ಸರ್ಕಾರ. ಆ ನ್ಯಾಯಾಧೀಶರ ಆ ಆಜ್ಞೆಯನ್ನು, ಅದು ಮೂರ್ಖತನದ್ದೆ ಆಗಿತ್ತು, ಅವರ ಲೆಕ್ಕಿಸದೆ ಹೀಗೆ ಹೇಳಿದರು: ‘ನನ್ನ ಭಾಷಣವನ್ನು ಒಂದೆರಡು ನಿಮಿಷಗಳಲ್ಲಿ ಮುಗಿಸಿಬಿಡುತ್ತೇನೆ, ಭಾಷಣಗಳ ಮೇಲೆ ಭಾಷಣಗಳ ಸಾರಾಂಶವನ್ನೆಲ್ಲ ಮೂರೇ ಮೂರು ಪದಗಳಲ್ಲಿ ಸಂಗ್ರಹಿಸಬಹುದು. ನಿರ್ಭಯರಾಗಿರಿ! ಸತ್ಯವನ್ನೆ ಅನುಸರಿಸಿ! ವಿದೇಶೀ ವಸ್ತ್ರಗಳನ್ನು ಬಹಿಷ್ಕರಿಸಿ; ನ್ಯಾಯಾಧೀಶರಿಗೂ ನ್ಯಾಯಾಧೀಶನಾಗಿರುವ, ಮಹಾರಾಜರುಗಳಿಗೂ ಮಹಾರಾಜನಾಗಿರುವ ಭಗವಂತನಲ್ಲಿ ಶ್ರದ್ಧೆಯಿಡಿ. ಪ್ರಹ್ಲಾದನಂತಿರಿ!’ ನೆರೆದಿದ್ದ ಜನಜಂಗುಳಿ ಅವರು ಇಳಿದುಕೊಂಡಿದ್ದ ಸ್ಥಳಕ್ಕೇ ಅವರನ್ನು ಹಿಂಬಲಿಸಿತು. ಅಲ್ಲಿ ‘ಮೈಸೂರ್ ಹಾಸ್ಟಲ್‌’ನಲ್ಲಿ (ಅದು ಬಹಿರಂಗ ಸ್ಥಳವಾಗಿರಲಿಲ್ಲವಾದ್ದರಿಂದ ಕಾನೂನಿನ ನಿರೋಧಕ್ಕೆ ಒಳಗಾಗಿರಲಿಲ್ಲ.) ಅವರು ತಮ್ಮ ಭಾಷಣ ಮುಂದುವರಿಸಿದರು. ಅವರ ಭಾಷಣ ಎಷ್ಟು ಉತ್ತೇಜಕ ಮತ್ತು ಸ್ಫೂರ್ತಿದಾಯಕವಾಗಿತ್ತೆಂದರೆ, ಅಂಥ ಕೆಲಸ ಮಾಡುವುದರಲ್ಲಿ ಅತ್ಯಂತ ಕೊನೆಯವನಾಗಿದ್ದ ನಾನೂ ಕೂಡ, ನನ್ನ ಟೋಪಿ ಕೋಟುಗಳನ್ನು ಬೆಂಕಿಗೆ ಎಸೆದುಬಿಟ್ಟೆ. (ವಿದೇಶಿ ವಸ್ತ್ರದಹನ!) ಅವರ ಸಾನ್ನಿಧ್ಯವೆ ನಮಗೆಲ್ಲ ಒಂದು ಉಲ್ಲಾಸವಾಗಿತ್ತು! ಅವರ ಮುಖಮಂಡಲ ಒಂದು ಸ್ವರ್ಗೀಯ ಕಾಂತಿಯಿಂದ ಶೋಭಿಸಿತ್ತು. ದೇಶಭಕ್ತಿ ನಿಜವಾದ ಹೃದಯದ ಅಂತರಾಳದಿಂದ ಹೊಮ್ಮುವ ದೇಶಪ್ರೇಮ ಅವರಲ್ಲಿ ಸ್ಫುರಿಸುತ್ತಿತ್ತು. ರಾತ್ರಿ ಹತ್ತೂವರೆ ಗಂಟೆಯ ಮೇಲೆ ನಾವೆಲ್ಲ ರೂಮಿಗೆ ಹಿಂತಿರುಗಿದೆವು….. ತಾಯಿ, ನನ್ನ ದೇಶಕ್ಕೆ ಗೌರವ, ಸ್ವಾತಂತ್ರ್ಯ ಮತ್ತು ಸುಖ ಲಭಿಸುವಂತೆ ಅನುಗ್ರಹಿಸು! ಹೇ ಸ್ವಾಮಿ ವಿವೇಕಾನಂದ ಗುರುವೇ, ನಿನ್ನ ಧರ್ಮವನ್ನು ಬೋಧಿಸುವ ಸಾಮರ್ಥ್ಯ ನನಗುಂಟಾಗಲಿ! ಓಂ!”

ಫೆಬ್ರವರಿ ೨೩ನೆಯ ಶನಿವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಮಹಾತ್ಮಾ[1] ಗೌರೀಶಂಕರ ಮಿಶ್ರ ಅವರು ಬಿಟ್ಟು ಹೋದರು ಈ ಮೈಸೂರಿಂದ. ಆಮೇಲೆ ನಾವು ಜ್ಯಾಮಿಟ್ರಿ ಲೆಕ್ಕಗಳನ್ನು ಮಾಡಿದೆವು. ನನ್ನ ಕೋಟಿಗಾಗಿ ಸ್ವಲ್ಪ ಖಾದಿ ಬಟ್ಟೆ ಕೊಂಡುಕೊಂಡೆ. ‘The Vision’ ಎಂಬ ಕವನದ ನಾಲ್ಕು ಪಂಕ್ತಿ ಬರೆದೆ. ಸುರೇಂದ್ರನಾಥರ ಮತ್ತು ಪ್ರೇಮಾನಂದ ಭಾರತಿ ಅವರ ಕೆಲವು ಭಾಷಣಗಳನ್ನು ಓದಿದೆ. ಐದು ಗಂಟೆಗೆ ಕೆ.ಮಲ್ಲಪ್ಪ, ಗೋಪಾಲಕೃಷ್ಣ ಶೆಟ್ಟಿ, ಎಚ್.ಎಸ್.ಶಿವರಾಂ, ಸಿ.ಟಿ.ಶೆಟ್ಟಿ ಮತ್ತು ಎಂ.ಬಸವರಾಜು ಎಲ್ಲರೂ ನನ್ನ ಕೊಟಡಿಗೆ ಬಂದರು. ಕೆ.ಮಲ್ಲಪ್ಪನೊಡನೆ ಸ್ವಲ್ವ ವಾಗ್ವಾದ ನಡೆಯಿತು. ಆರು ಗಂಟೆಗೆ ವಾಕ್ ಹೋದೆವು. ದಾರಿಯಲ್ಲಿ ಅನೇಕ ವಿಷಯ ಕುರಿತು ಮಾತಾಡಿದೆವು. ಏಳು ಗಂಟೆಗೆ ಹಿಂತಿರುಗಿದೆ. ಬೀಳ್ಕೊಡಿಗೆಯ ಸಮಾರಂಭಕ್ಕೆ ಒಂದು ಪದ್ಯ ಬರೆಯಲು ಯೋಚಿಸಿದ್ದೇನೆ.

ಓಂ ತತ್ ಸತ್ ಓಂ. ಅಮ್ಮಾ, ನಿನ್ನೆಡೆಗೆ ನಾನು ಬಂದೆ, ನೀನು ನನಗಂದು ಮುತ್ತಿಟ್ಟೆ. ವಿವೇಕಾನಂದ! ಪರಮಹಂಸ!”

ಫೆಬ್ರವರಿ ೨೪ನೆಯ ಭಾನುವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ‘Adieu’ (ಹೋಗಿ ಬನ್ನಿ) ಶೀರ್ಷಿಕೆಯ ಒಂದು ಪದ್ಯ ರಚಿಸಿದೆ, ನಾಳೆ ನಮ್ಮ ತರಗತಿಯ ಬೀಳ್ಕೊಡಿಗೆಯ ಸಮಾರಂಭದಲ್ಲಿ ಪಠಿಸಲೆಂದು. (Social Gathering) ಹತ್ತು ಗಂಟೆಗೆ ಎಣ್ಣೆಸ್ನಾನ ಮುಗಿಸಿ, ಹೊಲಿಯಲು ಹಾಕಿದ್ದ ಸ್ವದೇಶೀ ಕೋಟು ತರಲು ಹೋದೆ. ಅದು ಸಿದ್ಧವಾಗಿರಲಿಲ್ಲ. ಹಿಂದಕ್ಕೆ ಬಂದೆ. ಕೆ.ಮಲ್ಲಪ್ಪ ಬಂದರು. ಅವರೂ ನಾನೂ ಜ್ಯಾಮಿಟ್ರಿ ಲೆಕ್ಕಗಳನ್ನು ಮಾಡಿದೆವು. ಸುಮಾರು ೫ ಗಂಟೆಗೆ ಗೋಪಾಲಕೃಷ್ಣ ಶೆಟ್ಟಿ ಬಂದರು. ೬ ಗಂಟೆಯವರೆಗೆ ಹರಟುತ್ತಿದ್ದು ಆಮೇಲೆ ವಾಕ್ ಹೋದೆವು. ದಾರಿಯುದ್ದಕ್ಕೂ ವಿನೋದ, ಕೀಟಲೆ, ಹಾಸ್ಯ, ಪರಿಹಾಸ್ಯ ಇವುಗಳಿಂದ ಒಳ್ಳೆ ಖುಷಿಯಾಗಿತ್ತು. ರಸ್ತೆಯ ಪಕ್ಕದಲ್ಲಿ ಒಂದು ಗುಂಪು ನೆರೆದಿತ್ತು. ಒಬ್ಬ ಜಂಭದ ಮನುಷ್ಯ ಭಾಷಣ ಮಾಡುತ್ತಿದ್ದ, ಬ್ರಾಹ್ಮಣ ಬ್ರಾಹ್ಮಣೇತರರಿಗೆ ಪರಸ್ಪರ ದ್ವೇಷ ತಂದು ಹಾಕಲು ತನ್ನ ಜಾಣ್ಮೆಯನ್ನೆಲ್ಲ ಖರ್ಚು ಮಾಡಿ, ಆ ತರಹದ ಪಕ್ಷದ್ವೇಷ ಪ್ರಚೋದನೆಗೆ ನಾವೆಲ್ಲ ಥೂಗುಟ್ಟಿದೆವು. ನಾವೇನು ಮಾಡುವುದಕ್ಕೆ ಆಗತ್ತೆ?…. ರಾತ್ರಿ ಭಗವದ್ಗೀತೆ ಪಠಿಸಿ ಮಲಗಿ ನಿದ್ರಿಸಿದೆ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶ್ರೀಕೃಷ್ಣ ಇವರ ಸ್ಮರಣೆ ಮಾಡಿ.”

ಫೆಬ್ರವರಿ ೨೫ನೆಯ ಸೋಮವಾರದ ದಿನಚರಿ:

“ಬೆಳಿಗ್ಗೆ ಎಂದಿನಂತೆ ದೈನಂದಿನ ವ್ಯಾಯಾಮದ ಅನಂತರ ಹಸ್ತಪ್ರತಿ ಪುಸ್ತಕಕ್ಕೆ ‘The Falling Leaves’ ಕವನವನ್ನು ಪ್ರತಿಯೆತ್ತಿದೆ. ತರುವಾಯ ಕಾಫಿ ತೆಗೆದುಕೊಂಡು ಕಾಫಿ ತೆಗೆದುಕೊಳ್ಳಲಿಲ್ಲ. ಬರಿ ತಿಂಡಿ ಮಾತ್ರ-ಶೆಟ್ಟಿಯ ರೂಮಿಗೆ ಹೋಗಿ ನನ್ನ “Adieu’ ಪದ್ಯವನ್ನು ಟೈಪ್ ಮಾಡಿಸಿದೆ. ಆಮೇಲೆ ಸುಬ್ಬಾಪಂಡಿತರಲ್ಲಿಗೆ (ಪಾರ್ಥನಾರಾಯಣ ಪಂಡಿತರ ತಂದೆ) ಹೋಗಿ ಒಂದು ಗಂಟೆ ಅವರೊಡನೆ ಮಾತಾಡುತ್ತಿದ್ದೆ. ಹಿಂತಿರುಗುವಾಗ ಶೆಟ್ಟಿಯ ಹಾಸ್ಟಲಿಗೆ ಹೋದೆ. ಮಧ್ಯಾಹ್ನ ೩ ಗಂಟೆಗೆ ಮತ್ತೆ ಶೆಟ್ಟಿಯ ಹಾಸ್ಟಲಿಗೆ ಹೋದೆ. ಆದರೆ ಗೇಟನ್ನು ಕಾಯುತ್ತಿದ್ದ ‘ವೈತರಣಿಯ ಅಂಬಿಗ’ (Pilot of Acheron) ತಡೆದುದರಿಂದ ಮತ್ತೆ ಸುಡುಬಿಸಿಲಿನಲ್ಲಿ ಹಿಂತಿರುಗಿದೆ, ದಾರಿಯಲ್ಲಿ ಈಶ್ವರೇಚ್ಛೆ ಇವೊತ್ತು ನನಗೆ ಹೀಗಾಗಬೇಕೆಂದು ನಿರ್ಣಯಿಸಿತ್ತು ಎಂದುಕೊಳ್ಳುತ್ತಾ. ಅಲ್ಲಿಂದ ಎಚ್.ಬಿ.ನಂಜಯ್ಯನವರ ರೂಮಿಗೆ ಬಂದೆ. ನಾವಿಬ್ಬರೂ ಸ್ಕೂಲಿನ ‘ಸೋಷಿಯಲ್ ಗ್ಯಾದರಿಂಗ್‌’ಗೆ (ವರ್ಷಾಂತ್ಯದ ವಿದಾಯ ಸಂತೋಷಕೂಟದ ಸಮಾರಂಭಕ್ಕೆ) ಹೊರಟೆವು. ರಸ್ತೆಯಲ್ಲಿ ಅವರು ನನ್ನ Adieu ಓದಿದರು. ೫ ಗಂಟೆಗೆ ಫೋಟೋ ತೆಗೆಸಿಕೊಳ್ಳುವುದು ಪೂರೈಸಿತು. ಆಮೇಲೆ ಹರ್ಷಾತಿಶಯದ ಕಲಕಲನಾದದೊಡನೆ ಕಾಫಿತಿಂಡಿಯ ಕಾರ್ಯ ಪೂರೈಸಿತು. ತರುವಾಯ ಎಲ್ಲರೂ ಹಾಲಿಗೆ ಬಂದು ಸೇರಿದರು. ಅಧ್ಯಾಪಕರೆಲ್ಲರೂ ನೆರೆದರು. ಸಂಗೀತ ಪಿಟೀಲು ಚೆನ್ನಾಗಿತ್ತು. ಎಲ್ಲವು ಮರ್ತ್ಯವನ್ನು ಮೀರಿ ಸ್ವರ್ಗೀಯವಾದಂತಿತ್ತು! ವಾಚನಗಳು (Recitations) ಜರುಗಿದವು. ಚೆನ್ನಾಗಿತ್ತು. ಆಮೇಲೆ ‘ಅಡ್ರೆಸ್’ ಓದಲಾಯಿತು. ಶ್ರೀಯುತ ಗಾರ್ಡನ್ ಮತ್ತು ಹೆಡ್‌ಮಾಸ್ಟರ್ ಅವರು ಉಪದೇಶ ಭಾಷಣ ಮಾಡಿದರು. ಆಮೇಲೆ ನಾನು ನನ್ನ Adieu ಪದ್ಯವನ್ನು ಗಟ್ಟಿಯಾಗಿ ಓದಿದೆ…”

ಫೆಬ್ರವರಿ ೨೬ನೆಯ ಮಂಗಳವಾರದ ದಿನಚರಿ:

“ಬೆಳಿಗ್ಗೆ ವ್ಯಾಯಾಮ ಮುಗಿಸಿ, ಸ್ನಾನ ಮಾಡಿದೆ. ಬಸವರಾಜು ಬಂದರು. ಹಾರ್ಡಿಂಜ್ ಸರ್ಕಲ್‌ಗೆ ಹೋಗಿ ಫಿಸಿಕ್ಸ್‌ನಲ್ಲಿ ಮಾಗ್ನಟಿಸಮ್ ಓದಿ ಮುಗಿಸಿದೆವು. ಹಿಂದಕ್ಕೆ ಬರುವಾಗ ದಾರಿಯಲ್ಲಿ ಕೆ.ಮರಿಯಪ್ಪ ಸಿಕ್ಕಿದರು. ಗಂಟೆ ೧೧ ಆಗಿತ್ತು. ಊಟ ಮಾಡಿದ ಮೇಲೆ ಕವಿ ಸರೋಜಿನಿಯವರ ಭಾಷಣ ‘Upon the Teacher’s Duty’ ಓದಿದೆ. ಆಮೇಲೆ ‘ಮಹಾತ್ಮಾ ಗಾಂಧಿ ಅವತಾರವೇ?’ ಎಂಬ ಪ್ರಬಂಧವನ್ನು ಮುಂದುವರಿಸಿದೆ. ಸಂಜೆ ೬ಕ್ಕೆ ಸಿ.ಟಿ.ಶೆಟ್ಟಿ ಮತ್ತು ಎಚ್.ಎಸ್. ಶಿವರಾಂ ಬಂದರು. ಶಿವರಾಂ ನನ್ನ ಕಥನಕವನ ‘Shivaji and The Martial Maid’ (ಶಿವಾಜಿ ಮತ್ತು ಕ್ಷಾತ್ರ ಕನ್ಯೆ) ಎಂಬುದನ್ನು ತೆಗೆದುಕೊಂಡರು. ನಾನು ಸಿನಿಮಾಕ್ಕೆ ಹೋಗಬೇಕಾಗಿದ್ದುದರಿಂದ ಅವರು ಬೀಳುಕೊಂಡರು. ಸಿನಿಮಾ ಭವನದಲ್ಲಿ ಎಲ್.ರಾಘವೆಂದ್ರರಾವ್ ಸಿಕ್ಕಿದರು. ಇಬ್ಬರೂ ಖುಷಿಯಾಗಿ ಮಾತಾಡುತ್ತಾ ಕಡಲೆಕಾಯಿ ತಿಂದೆವು, ವಿರಾಮವಾಗಿ. ೮.೪೫ಕ್ಕೆ ರೂಮಿಗೆ ಹಿಂತಿರುಗಿದೆ. ಇವೊತ್ತು ಊಟ ಮಾಡಲಿಲ್ಲ…. ಓಂ ಓಂ ಓಂ! ಹೇ ಗೋಪಾಲ ನನ್ನನ್ನು ನಿನ್ನೊಡನೆ ಕಂಡೊಯ್ಯ. ವಿವೇಕಾನಂದರ ಪರಮಹಂಸ, ಚೈತನ್ಯ!”

Holy Kabir, I Salute thee ಎಂದು ಒಂದೆಡೆ ಬರೆದಿದೆ.

ಫೆಬ್ರವರಿ ೨೭ನೆಯ ಬುಧವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ‘ಎಲೆಕ್ಟ್ರಿಸಿಟಿ’ ಅಧ್ಯಯನಕ್ಕಾಗಿ ಹಾರ್ಡಿಂಜ್ ಸರ್ಕಲ್ ಉದ್ಯಾನಕ್ಕೆ ಹೋದೆವು. ಪ್ರಕೃತಿ ಸೌಂದರ್ಯದ ನಡುವೆ ತುಂಬ ಸುಖಕರವಾಗಿತ್ತು. ವಾದ್ಯಮೇಲ ಬೇರೆ ಇತ್ತು. ಪಾರ್ಕಿನಿಂದ ಹಿಂತಿರುಗುತ್ತಿದ್ದಾಗ ಎಂ.ತಮ್ಮಯ್ಯನನ್ನು ಸಂಧಿಸಿದೆವು. ಅವರು ಸ್ಟೀಲ್ ಪ್ರಬಂಧ ಅಧ್ಯಯನ ಮಾಡುತ್ತಿದ್ದರು. ‘ನನಗೆ ‘ಸೋಮೇಶ್ವರ ಶತಕ’ದ ವಿ.ಪಿ. ಬಂತು, ಹೋಟೆಲ್ ಮ್ಯಾನೇಜರ್ ದುಡ್ಡು ಕೊಟ್ಟು ಬಿಡಿಸಿಟ್ಟಿದ್ದರು. ಗೆಳೆಯರಿಗೆಲ್ಲ ಸೋಮೇಶ್ವರ ಶತಕವನ್ನು ರಾಗವಾಗಿ ಓದಿ ಹೇಳಿದೆ. ಎಲ್ಲರೂ ಋಷಿಪಟ್ಟರು…. ಒಂದು ಎಳನೀರು ಕೊಂಡು ಕುಡಿದು ತಿಂದೆ. ಸುಮಾರು ೩ ಗಂಟೆ ಹೊತ್ತಿಗೆ ಎಂ.ಬಸವರಾಜು ಬಂದರು. ಇಬ್ಬರೂ ಪಾರ್ಕಿಗೆ ಹೊರಟೆವು. ದಾರಿಯಲ್ಲಿ ಗೋಪಾಲಾಕೃಷ್ಣ ಶೆಟ್ಟಿ, ಕೆ.ಮರಿಯಪ್ಪ, ಎಂ.ತಮ್ಮಯ್ಯ ನಮ್ಮನ್ನು ಮಾತಾಡಿಸಿದರು. ಆದರೆ ನಾವು ಅವರೊಡನೆ ಹೊತ್ತು ಕಳೆಯದೆ ನಡೆದುಬಿಟ್ಟೆವು. ಗೊತ್ತಿಗೆ ಹೋಗಿ ಕುಳಿತು ಎಲೆಕ್ಟ್ರಿಸಿಟಿಯ ಕೆಲವು ಲೆಖ್ಖಗಳನ್ನು ಮಾಡಿದೆವು. ಆಮೇಲೆ ವಾಕ್ ಹೋಗಿ ೭.೩೦ಕ್ಕೆ ಮನೆಗೆ ಬಂದೆವು. ತುಂಬ ಹಸಿದಿದ್ದೆ, ಊಟ ಮುಗಿಸಿದೆ. ಮಲಗುವ ಮುನ್ನ ಭಗವದ್ಗೀತೆಯ ನಾಲ್ಕನೆಯ ಅಧ್ಯಾಯ ಓದಿದೆ; ಅವ್ಯಕ್ತ (The Abosolute and the Manifestation)ಗಳನ್ನು ಕುರಿತು ಆಲೋಚಿಸಿದೆ; ಮತ್ತು ನನ್ನಡೆಯೆ ಕುಳಿತಿದ್ದ ಮುದ್ದು ಗೋಪಾಲನನ್ನು ಕುರಿತೂ!”

ಫೆಬ್ರವರಿ ೨೮ನೆಯ ಗುರುವಾರ ದಿನಚರಿ:

“ಬೆಳಿಗ್ಗೆ ಫಿಸಿಕ್ಸ್ ಅಧ್ಯಯನ ಮಾಡಲು ಪಾರ್ಕಿಗೆ ಹೋದೆವು. ೧೧ಕ್ಕೆ ರೂಮಿಗೆ ಬಂದೆ. ಪ್ರೇಮಾನಂದ ಭಾರತಿಯವರ ಉಪನ್ಯಾಸಗಳಲ್ಲಿ ಒಂದಾದ ‘The Real Real Life’ ಅನ್ನು ಓದಿದೆ. ಸುರೇಂದ್ರನಾಥ ಬ್ಯಾನರ್ಜಿಯವರ ಒಂದು ಭಾಷಣವನ್ನೂ ಓದಿದೆ. ೩ ಗಂಟೆಗೆ ಮತ್ತೆ ಪಾರ್ಕಿಗೆ ಹೋದೆವು. ಅಧ್ಯಯನಕ್ಕಾಗಿ ಹೊರಡುವ ಮುನ್ನ ಬೋರ್ಡಿನ ಮೇಲೆ ಬೆಳಿಗ್ಗೆ ಮನದಲ್ಲಿಯೆ ರಚಿಸಿ ಇಟ್ಟುಕೊಂಡಿದ್ದ ಒಂದು ಚುಟುಕ ಪದ್ಯವನ್ನು ಬರೆದೆ. ಅದರ ಮೊದಲನೆಯ ಪಂಕ್ತಿಯ ಮೊದಲನೆಯ ಅಕ್ಷರ, ಎರಡನೆಯ ಪಂಕ್ತಿಯ ಎರಡನೆಯ ಅಕ್ಷರ, ಮೂರನೆಯ ಪಂಕ್ತಿಯ ಮೂರನೆಯ ಅಕ್ಷರ, ಹೀಗೆಯೆ ಜೊಡಿಸಿಕೊಂಡು ಓದಿದರೆ ಒಲಿದ ಚೆಲುವೆಯ ಹೆಸರು ಬರುತ್ತದೆ:

Go, thou sweet Bird, and tell my love
How much I love her lovely brow.
Soul sweet and swift, fly, fly above
And remember my sacred vow
For I yearn there ere long to go!

ಆದರೆ ನನ್ನ ಮಿತ್ರರಿಗೆ ಆ ಗುಟ್ಟು ಹೊಳೆಯಲಿಲ್ಲ…. ಮೈಸೂರು ಸರ್ಕಾರ ಗೌರೀಶಂಕರ ಮಿಶ್ರರನ್ನು ಸಭ್ಯವಾಗಿ ನೋಡಿಕೊಳ್ಳಲಿಲ್ಲ ಎಂಬುದನ್ನು ಕೇಳಿದೆ…. ಪಾಪಗಳನ್ನು ಕ್ಷಮಿಸು, ತಾಯಿ, ನಾ ನಿನ್ನ ತೊಡೆಯನೇರಿರುವೆ. ವಿವೇಕಾನಂದಸ್ವಾಮಿ, ನನ್ನನ್ನೆತ್ತಿ, ನನಗೆ ನೆರವಾಗಿ! ಓಂ ಓಂ!”

ಫೆಬ್ರವರಿ ೨೯ನೆಯ ಶುಕ್ರವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಎಂದಿನಂತೆ ವ್ಯಾಯಾಮ ತೆಗೆದುಕೊಂಡು ಅನಂತರ ‘Great Men, I stand before you now and then’ ಎಂದು ಪ್ರಾರಂಭವಾಗುವ ಒಂದು ಸಾನೆಟ್ ಬರೆದೆ. ಏಕೆ ಬರೆದೆ ಎಂದರೆ, ನಾನು ಅನೇಕ ವೇಳೆ ಮತ್ತೆಮತ್ತೆ ಹಾಗೆ ಮಾಡುತ್ತಿರುತ್ತೇನೆ ಆದ್ದರಿಂದ.[2]ಏಕೆಂದರೆ ಇಂತಹ ದಿವ್ಯಾತ್ಮರ ಸಾನ್ನಿಧ್ಯ ಮಾತ್ರವೂ ನಮಗೆ ಸ್ಪೂರ್ತಿಯಿತ್ತು, ನಮ್ಮಲ್ಲಿ ಆಶಾವಾದವನ್ನು ಮೂಡಿಸುತ್ತದೆ. ಇನ್ನೊಂದು ನಾಲ್ಕು ಸಾಲಿನ ಪದ್ಯ, ‘With Wordsworth’s heart I move among the trees’ ಎಂಬುದನ್ನೂ ರಚಿಸಿದೆ…. ಆಮೇಲೆ ಪಾರ್ಕಿಗೆ ಹೋದೆವು, ಪರೀಕ್ಷೆಗಾಗಿ ಅಧ್ಯಯನ ಮಾಡಲು. ವಿ.ನಾಗಪ್ಪ ಬಂದು ತನಗೆ ಬರೆದಿದ್ದ ಒಂದು ಕಾಗದ ಕೊಟ್ಟ. ಓದಿದೆ. ಸಂತೋಷವಾಯ್ತು. ತೀರ್ಥಹಳ್ಳಿಯಲ್ಲಿ ನಮ್ಮ ಜೊತೆ ಓದುತ್ತಿದ್ದ ಗೆಳೆಯ ಪಿ.ಎಸ್.ತಿಮ್ಮಪ್ಪಶೆಟ್ಟಿಯ ಕಾಗದವಾಗಿತ್ತು ಅದು. ಸ್ನೇಹಿತರು ಬಂದು ವಾಕ್ ಹೋಗಲು ಕರೆದರು. ಆದರೆ ನಾನು ಕಾಗದ ಓದುತ್ತಿದ್ದೆನಾದ್ದರಿಂದ ಹೋಗಲಿಲ್ಲ. ಆಮೇಲೆ ನಾನೊಬ್ಬನೆ ವಾಕ್ ಹೋದೆ. ತಲೆತುಂಬ ಬಾಲ್ಯಕಾಲದ ನೆನಪುಗಳೆ! ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಆ ಮಿತ್ರನಿಗೆ ಒಂದು ಪದ್ಯರೂಪದ ಕಾಗದ ಬರೆಯಬೇಕೆನ್ನಿಸಿತು. ನಾನು ಹೋಗುತ್ತಿರುವಾಗ ದಾರಿಯಲ್ಲಿ ಡಿ.ವಿ.ಕೃಷ್ಣಮೂರ್ತಿ ಮತ್ತು ಇನ್ನೊಬ್ಬರು ನನ್ನ ಮತ್ತು ನನ್ನ ಕವಿತೆಗಳ ವಿಚಾರವಾಗಿ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ಆಲಿಸಿದ ನಾನು ಪ್ರಾರ್ಥಿಸಿದೆ: ‘ಹೇ ದೇವ, ವಿನಮ್ರತೆಯಿರಲಿ ನನ್ನಲ್ಲಿ. ನನಗೆ ಬರುವ ಹೊಗಳಿಕೆಯೆಲ್ಲ ನಿನಗೆ ಅರ್ಪಿತವಾಗಲಿ’. ನನ್ನೊಬ್ಬನೆಯ ತಿರುಗಾಟ ಆನಂದದಾಯಕವಾಗಿತ್ತು. (The solitary walk was pleasant.)… ತಾಯಿ, ಮುದ್ದಿಸು ನನ್ನ! ವಿವೇಕಾನಂದ, ನನ್ನನ್ನೆತ್ತು. ರಾಮಕೃಷ್ಣ ಪರಮಹಂಸರಿಗೆ ಮತ್ತು ಚೈತನ್ಯದೇವನಿಗೆ ಜಯವಾಗಲಿ!”

ಮೇಲಿನ ದಿನಚರಿಯಲ್ಲಿ ಉಕ್ತವಾದ ‘ಸಾನೆಟ್ಟು’ ಆಗಿನ ಕವಿಯ ವಿಭೂತಿಪೂಜೆಯ ಪರವಾದ ಮನೋಧರ್ಮವನ್ನೂ ಆತ ಕೈಕೊಂಡ ಅನುಷ್ಠಾನವನ್ನೂ ಧ್ವನಿಸುತ್ತದೆ. ಆದರೆ ಇಲ್ಲಿ ವಿಭೂತಿಗಳೆಂದರೆ ವಿಶೇಷವಾಗಿ ಆಧ್ಯಾತ್ಮಿಕರೆಂದೇ ಅರ್ಥಯಿಸಬೇಕು. ಹಸ್ತಪ್ರತಿಯಲ್ಲಿ ಪದ್ಯದ ಪ್ರಾರಂಭಕ್ಕೆ ಮೊದಲು ‘Written in front of the portraits of great men in my room’ (ನನ್ನ ಕೊಟಡಿಯಲ್ಲಿದ್ದ ಮಹಾಪುರುಷರ ಭಾವಚಿತ್ರಗಳ ಎದುರು ನಿಂತು) ಎಂದು ಬರೆದಿದೆ. ಪ್ರಾಸವಿನ್ಯಾಸ:

a b b a a b b a c d e c d e.

Great Men, I stand before you, now and then,
With folded hands and humble knees; I pray
That I may follow or Ixion’s den!
Again I plough the land which many a pen
Hath  ploughed, and reap the precious corn which they

Have Sowed: The glebe still bears their foot-prints gay
That guide and life me from the horrid glen!
O mighty souls, Your lives fill me with hope
In all my flickering light of life; great truths
Stand smiling face to face; and noble aims
Enthrone my heart in bliss! I no more grope
In darkness lost, like the adrifted youths;
But stand unchanged, illumined by your flames!
೨೯-೨-೧೯೨೪

ಮಾರ್ಚಿ ೧ನೆಯ ಶನಿವಾರದ ದಿನಚರಿ:

“ಬೆಳಿಗ್ಗೆ ನನ್ನ ಪದ್ಯಕಾಗದ (Poem Letter) ಸ್ವಲ್ಪ ಬರೆದೆ. ಆಮೇಲೆ ಪರೀಕ್ಷೆಗೆ ಓದಿಕೊಳ್ಳಲು ಪಾರ್ಕಿಗೆ ಹೋಗಿ ೧೧ಗಂಟೆಗೆ ಬಂದೆವು. ಮ್ಯಾಜಿನಿಯನ್ನು ಕುರಿತ ಸುರೇಂದ್ರನಾಥ ಬ್ಯಾನರ್ಜಿಯವರ ಅತ್ಯಂತ ಸೊಗಸಾದ ಭಾಷಣವನ್ನು ಓದಿದೆ. ನಿಸ್ಸಂದೇಹವಾಗಿ ಅದೊಂದು ಸುಂದರವಾದ ಸಾಹಿತ್ಯ ಕೃತಿಯೆ ಆಗಿದೆ. ಮತ್ತೆ ನನ್ನ ಪದ್ಯಕಾಗದ ಮುಂದುವರಿಸುತ್ತಿದ್ದೆ, ನನ್ನ ಸನ್ಮಿತ್ರ ಗೋಪಾಲಕೃಷ್ಣ ಶೆಟ್ಟಿ ಬಂದರು. ಅಧ್ಯಾಪಕರು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಬೀಳ್ಕೊಡಿಗೆಯ ಸಂತೋಷ ಸಮಾರಂಭಕ್ಕೆ ಬರುಲು ನನ್ನನ್ನು ಕರೆದರು. ಧನ್ಯವಾದವನ್ನು ಸೂಚಿಸುವ ಒಂದು ಕವನವನ್ನು ರಚಿಸಲೂ ಕೇಳಿಕೊಂಡರು. ಹತ್ತು-ಹದಿನೈದು ನಿಮಿಷಗಳಲ್ಲಿ ಎಂಟು ಪದ್ಯಗಳ ಒಂದು ಕವನವನ್ನು ರಚಿಸಿದೆ. ಇಬ್ಬರೂ ಹೊರಟೆವು. ಸ್ಕೂಲಿನಲ್ಲಿ ಚೆನ್ನಾಗಿ ಉಪಹಾರ ಹೊಡೆದವು. ತುಂಬ ಋಷಿಯಾಗಿತ್ತು. ಇಡೀ ಭವನವೆ ಕರತಾಡನಗಳಿಂದಲೂ ಜಯಘೋಷಗಳಿಂದಲೂ ಅನುರಣಿತವಾಗಿತ್ತು. ಸಂಗೀತವೋ ಬಹಳ, ಬಹಳ, ಬಹಳ ಮಧುರವಾಗಿತ್ತು. ತುದಿಯಲ್ಲಿ ನಾನು ವಿದ್ಯಾರ್ಥಿಗಳ ಪರವಾಗಿ ಅಧ್ಯಾಪಕರಿಗೆ ಅಭಿವಂದನೆ ಭಾಷಣ ಮಾಡಿ, ಸಿದ್ಧಪಡಿಸಿ ಇಟ್ಟುಕೊಂಡಿದ್ದ ಕವನವನ್ನು ವಾಚಿಸಿದೆ. ನಾನು ವೇದಿಕೆಯಿಂದ ಕೆಳಗಿಳಿದೊಡನೆಯೆ ಅಧ್ಯಾಪಕರು ಗಂಧವಿತ್ತು ಕೊರಳಿಗೆ ಹೂಮಾಲೆ ಹಾಕಿದರು. ಅಂತಹ ಮನ್ನಣೆಗೆ ನಾನು ಅರ್ಹನಲ್ಲವೆಂದು ನನಗೆ ತುಂಬ ಸಂಕೋಚವಾಯಿತು; ಮನಸ್ಸಿನಲ್ಲಿಯೆ ಇದೆಲ್ಲ ನನ್ನ ಕೃಷ್ಣನ ಲೀಲೆ ಎಂದುಕೊಂಡೆ! ಶ್ರೀಯುತ ಎಂ.ಎಚ್‌. ಕೃಷ್ಣ ಐಯಂಗಾರ್ ಅವರು, ಅವರಲ್ಲಿ ನನಗೇನೆ ಒಂದು ವಿಶೇಷತೆ ಗೋಚರಿಸಿತ್ತು, ಎದ್ದು ಬಂದು ನನಗೆ ಅತ್ಯಂತ ಆನಂದದಿಂದ ಹಸ್ತಲಾಘವವಿತ್ತು ‘Mr. Puttappa I did not make acquaintance with you earlier’ (ಪುಟ್ಟಪ್ಪನವರೆ, ಇದಕ್ಕೆ ಮೊದಲೆ ನಿಮ್ಮ ಪರಿಚಯ ಮಾಡಿಕೊಳ್ಳಲಿಲ್ಲವಲ್ಲಾ ಎಂದು ವಿಷಾಧಿಸುತ್ತೇನೆ.) ಎಂದರು. ನಾನೆಂದುಕೊಂಡೆ ‘ಮಹಿಮರಿಗೇ ಮಹಿಮರನ್ನು ಗುರುತಿಸಲು ಸಾಧ್ಯ, ನಾನೇನು ಮಹಿಮನಲ್ಲದಿದ್ದರೂ’ ….. ಠಾಕೂರರೆ, ನಿಮಗೆ ನಮಸ್ಕಾರ, ವಿವೇಕಾನಂದರೆ, ಭಗವಾನ್ ರಾಮಕೃಷ್ಣರೆ, ಚೈತನ್ಯರೆ ಮತ್ತೂ ಇನ್ನೂ ಅನೇಕರೆ ನಿಮಗೆಲ್ಲ ಜಯಕಾರ!”

ಮಾರ್ಚಿ ೨ನೆಯ ಭಾನುವಾರದ ದಿನಚರಿ:

“ಬೆಳಿಗ್ಗೆ ೬ಕ್ಕೆ ಎದ್ದು ದೈನಂದಿನ ವ್ಯಾಯಾಮ ಮುಗಿಸಿದೆ. ನನ್ನವೆ ಕೆಲವು ಕವನಗಳನ್ನು ಓದಿದೆ. ಆಮೇಲೆ ಸ್ನಾನಮಾಡಿ ಬಸವರಾಜು ಜೊತೆಗೂಡಿ ಪಾರ್ಕಿಗೆ ಹೋದೆ, ಜ್ಯಾಮಿಟ್ರಿ ಅಧ್ಯಯನಕ್ಕೆ. ಹತ್ತುವರೆಗಂಟೆಗೆ ರೂಮಿಗೆ ವಾಪಾಸಾದೆ. ಹಗಲೆಲ್ಲ ಬಾಬಾ ಭಾರತಿಯ ಉಪನ್ಯಾಸಗಳನ್ನು ಓದಿದೆ. ಸಂಜೆ ಸಿನಿಮಾಕ್ಕೆ ಹೋದೆ. ದಾರಿಯಲ್ಲಿ ಹೆಂಗಸೊಬ್ಬಳು ಕೋತಿಗಳಿಗೆ ತಿಂಡಿ ಹಾಕುತ್ತಿದ್ದುದನ್ನು ಕಂಡೆ. ಮಂಗಗಳ ಕಷ್ಟಕ್ಕಿಂತಲೂ ಹೆಂಗಸಿನ ಸಾಮರ್ಥ್ಯವೆ ಮೆಚ್ಚುವಂತಿತ್ತು. ಪ್ರಾಣಿಗಳೂ ಕೂಡ ನಮ್ಮ ಸಂಗಾತಿಗಳಾಗಬಹುದು ನಾವು ಪ್ರಯತ್ನಿಸಿದರೆ ಎಂದುಕೊಂಡೆ. ಹೇ ಜನನಿ, ಸರ್ವರೂ ನನಗೆ ಸಹೋದರರೆ! ಎಲ್ಲರನ್ನೂ ಸಮದರ್ಶನದಿಂದ ಒಲಿಯುವಂತೆ ನನಗೆ ಕಲಿಸು! ಓಂ! ಓಂ! ಓಂ!”

ಮಾರ್ಚಿ ೩ನೆಯ ಸೋಮವಾರದ ದಿನಚರಿ:

“ಸಾಯಂಕಾಲ ಸುಮಾರು ಐದು ಗಂಟೆಗೆ ನಾನು ಶಿವರಾಂ ಮತ್ತು ಸಿ.ಟಿ.ಶೆಟ್ಟಿ ತಿರುಗಾಡಲು ಹೋದೆವು. ಅವರು ನನ್ನನ್ನು ‘ಕವಿ’ ಎಂದು ಕರೆಯತ್ತಿದ್ದರು. ಆದರೆ ಆ ವಿಶೇಷಣ ನನ್ನಲ್ಲಿರುವ ದೇವನಿಗೆ ಸಲ್ಲುತ್ತದೆ ಎಂದುಕೊಂಡು ಸ್ವಲ್ಪವೂ ಅಹಂಕಾರ ಪಡಲಿಲ್ಲ. ನಡೆಯುತ್ತಾ ನಡೆಯುತ್ತಾ ಕಾರಂಜಿ ಕೆರೆಯ ದಂಡೆಗೆ ಬಂದೆವು. ಪಶ್ಚಿಮ ದಿಗಂತದಲ್ಲಿ ಸೂರ್ಯನು ಆಗತಾನೆ ಮುಳುಗುತ್ತಿದ್ದನು. ಶೆಟ್ಟಿ ಕೂಗಿಕೊಂಡನು. ‘ನೋಡಿ, ಅಲ್ಲಿ ನೋಡಿ!’ ಬರಿಯ ಕಣ್ಣುಗಳಿಂದಲೆ ಅವನನ್ನು ನೋಡಬಹುದಾಗಿತ್ತು, ಏಕೆಂದರೆ ಅವನು ನಿಷ್ಕಿರಣನಾಗಿ ಸೌಮ್ಯನಾಗಿದ್ದನು. ಸ್ವಲ್ಪ ಹೊತ್ತು ಅದನ್ನು ಎವೆಯಿಕ್ಕದೆ ಈಕ್ಷಿಸಿದೆ. ನನ್ನ ಮನಸ್ಸು ಸದ್ಯಃಪರವಾಗಿ ದೃಶ್ಯದ ಹಿಂದಿರುವ ಅದೃಶ್ಯ ಸತ್ಯದ ಕಡೆಗೆ ಏರಿತು. ನಮ್ಮ ತಿರುಗಾಟದ ಉಳಿದ ಭಾಗವನ್ನೆಲ್ಲ ನನ್ನ ಮನಸ್ಸು ತದೇಕ ಧ್ಯಾನದಲ್ಲಿ ಮುಳುಗಿ ಕಳೆಯಿತು. ನನ್ನ ಸ್ನೇಹಿತರೇನೊ ಕಲ್ಪನೆಗೆ ಒಂದಿನಿತೂ ಆಲೋಚಿಸಲು ಅವಕಾಶಕೊಡದೆ ಅದೂ ಇದೂ ಮಾತಾಡುತ್ತಲೆ ಇದ್ದರು. ಈ ಮಹದ್‌ವಿಶ್ವದಲ್ಲಿ ನಾನೊಂದು ಅಲ್ಪ ಅಣು ಎಂಬ ಅನುಭವ ಉಂಟಾಯಿತು. ಸೂರ್ಯ ಭೂಮಿಗಿಂತ ೧೩೦೦೦ ಪಾಲು ದೊಡ್ಡವನಾಗಿದ್ದಾನೆ. ಖಗೋಲಶಾಸ್ತ್ರ ಹೇಳುತ್ತದೆ, ಈ ಸೂರ್ಯನಿಗಿಂತಲೂ ಹದಿಮೂರು ಸಾವಿರಬಹುಪಾಲು ಮಿಗಿಲಾದ ಸೂರ್ಯರ ಸೌರ್ಯವ್ಯೂಹಗಳೆ ಬ್ರಹ್ಮಾಂಡದಲ್ಲಿ ಕಿಕ್ಕಿರಿದಿವೆ ಎಂದು. ಈ ಮಹಾ ಅನಂತ ಅಪಾರದಲ್ಲಿ ನಾನೊ ಅಲ್ಪಕ್ಕೂ ಅಲ್ಪ, ಶೂನ್ಯವೆಂದರೂ ತಪ್ಪಲ್ಲ. ಆದರೆ ಮತ್ತೊಂದು ಭಾವನೆ ಮನದಲ್ಲಿ ಚರಿಸಿತು: ಈ ಮಹಾ ವಿಶ್ವಕ್ಕಿಂತಲು ನಾನು ಮಹತೋಮಹೀಯನೆಂದು, ಏಕೆಂದರೆ, ಈ ಎಲ್ಲದರ ಪ್ರೇಮಿಯಾಗಿ! ನನ್ನ ಕಣ್ಮುಂದೆ ಶ್ರೀಕೃಷ್ಣನ ರೂಪ ನಿಂತಿತು. ನನಗಿಂತಲೂ ಹೆಚ್ಚಿನ ಜ್ಞಾನಿಯಾಗಿ, ತನ್ನ ಸಹೋದರರನ್ನು ಉದ್ಧರಿಸಲು ಬಂದವನೆಂದು ಅವನನ್ನು ನನ್ನ ಸಹೋದರನೆಂದು ಕರೆದೆ. ಅಲ್ಲದೆ ನಮ್ಮ ತಾಯಿ ಒಬ್ಬಳೆ. ‘ನಾನು ಅಲ್ಪ, ನೀನು ಮಹಾನ್ ಎಂದು ಭಾವಿಸುವುದನ್ನು ನಾನು ಸಹಿಸಲಾರೆ’ ಎಂದು ಅವನನ್ನು ಪ್ರಶ್ನಿಸಿದೆ: ‘ನೀನು ಎಲ್ಲರಿಗಿಂತಲೂ ದೊಡ್ಡವನು ಅಂದುಕೊಂಡರೆ ನಾನೇಕೆ ಅಂದುಕೊಳ್ಳಬಾರದು?” ಅದಕ್ಕೆ ಅವನೆಂದ: ‘ನನ್ನಂತೆಯೆ ಒಲಿ; ನೀನೂ ಆಗುತ್ತೀಯೆ. ಏಕೆಂದರೆ ನಮ್ಮ ಅಮ್ಮ ದಯಾಮಯಿ. ಎಲ್ಲರೂ ನಿನಗೆ ಸಮಾನರು ಎಂದು ಭಾವಿಸಬೇಕು. ಇಲ್ಲದಿದ್ದರೆ, ನೀನು ಒಬ್ಬನನ್ನು ಹೀನ ಎಂದು ಭಾವಿಸಿದರೆ ನೀನೂ ಇತರರ ಕಣ್ಣಿನಲ್ಲಿ ಹೀನನಾಗುವೆ ಅವಶ್ಯವಾಗಿ.’ ತಿರುಗಾಟದ ಕೊನೆಯಲ್ಲಿ ನಾನು ಮಾತಾಡಲು ನನ್ನ ಗೆಳೆಯರಿಗೆ ವಿಸ್ಮಯವಾಯ್ತು! ಅದುವರೆಗೂ ಮೌನದಿಂದ ನಾನು ಧ್ಯಾನಿಸುತ್ತಿದ್ದುದು ಏನು ಎಂದು ಕೇಳಿದರು. ನಾನೇನೊ ತುಸು ಸೂಚನೆಕೊಟ್ಟೆ. ಅವರಿಗೆ ಗೊತ್ತಾಯಿತೊ ಇಲ್ಲವೊ ತಿಳಿಯಲಿಲ್ಲ.

ಮಾರ್ಚಿ ೪ನೆಯ ಮಂಗಳವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಓದಿಕೊಳ್ಳಲು ಪಾರ್ಕಿಗೆ ಹೋದೆವು. ಆದರೆ ೯ ಗಂಟೆಗೆ ಹಿಂದಕ್ಕೆ ಬಂದೆವು. ಆಮೇಲೆ ‘The Self and the Universe?’ ಎಂಬ ಸಾನೆಟ್ ರಚಿಸಿದೆ. ಅದರ ವಸ್ತು ನಿನ್ನೆ ವಾಕ್ ಹೋದಾಗ ಕಾರಂಜಿ ಕೆರೆಯ ಬಳಿ ಸಂಧ್ಯಾಸೂರ್ಯಾಸ್ತದರ್ಶನದಿಂದ ಮನದಲ್ಲಿ ಮೂಡಿದ ಚಿಂತಾತರಂಗಗಳಿಂದ ದೊರೆಕೊಂಡ ರಸಾನುಭವ. ಮಧ್ಯಾಹ್ನ ಕೆಮಿಸ್ಟ್ರಿ ಓದಿಕೊಂಡೆವು. ಸಂಜೆ ೫ ಗಂಟೆಗೆ ಲೈಬ್ರರಿಗೆ ಹೋಗಿ ರಾಮಾನುಜಾಚಾರ್ಯರ ಶ್ರೀಭಾಷ್ಯ ತೆಗೆದುಕೊಂಡೆ. ಕೆಲವು ಪುಟ ಓದಿದೆ; ಆದರೆ ಅವರ ಸಿದ್ಧಾಂತ ಗ್ರಾಹ್ಯವಾಗುವುದು ಕಷ್ಟವಾಗಿ ತೋರಿತು. ಹೀಗೆ ಅವಸರ ಅವಸರವಾಗಿ ಓದುವುದು ಪ್ರಯೋಜನಕರವಲ್ಲ ಎಂದುಕೊಂಡೆ. ಒಟ್ಟಿನಲ್ಲಿ ಶಂಕರಾಚಾರ್ಯರ ವಾದವನ್ನು ಖಂಡಿಸುವ ಪ್ರಯತ್ನ ನಡೆದಿತ್ತು. ಇಂತಹ ವಾದ ವಿವಾದಗಳಲ್ಲಿ ನಾನು ನನ್ನ ಸಮತೆಯನ್ನು ಸ್ವಾಮಿ ವಿವೇಕಾನಂದರೂ ಶ್ರೀ ರಾಮಕೃಷ್ಣ ಪರಮಹಂಸರೂ ಬೋಧಿಸಿರುವ ಸಮನ್ವಯ ದೃಷ್ಟಿಯಿಂದ ಸಾಧಿಸಿಕೊಳ್ಳುತ್ತೇನೆ. ಸರ್ವವೂ ಕೊನೆಯಲ್ಲಿ ಭಗವಲ್ಲೀನವಾಗಿ ಸಾರ್ಥಕತೆ ಪಡೆಯುತ್ತವೆ. ಸರ್ವೋತ್ತಮ ದಾರ್ಶನಿಕನೆಂದರೆ, ಯಾರು ವಿಶಾಲಹೃದಯದಿಂದ, ಅನೇಕ ಬಣ್ಣದ ಮಣಿಗಳನ್ನು ಕೋದಿರುವ ಏಕೈಕ ಸೂತ್ರದಂತೆ, ಸಮನ್ವಯ ದೃಷ್ಟಿಯನ್ನು ಹೊಂದಿರುತ್ತಾನೆಯೊ ಅವನು. ಓಂ! ಓಂ! ಓಂ!

ಮೇಲಿನ ದಿನಚರಿಯಲ್ಲಿ ಉಕ್ತವಾಗಿರುವ ಸಾನೆಟ್ ಕವನ ೪.೩.೧೯೨೪ನೆಯ ತಾರೀಖಿನಲ್ಲಿಯೆ ಹಸ್ತಪ್ರತಿಗೆ ದಾಖಲಾಗಿದೆ. ಪ್ರಾಸ ಮೊದಲಿನ ಎಂಟು ಪಂಕ್ತಿಗಳಲ್ಲಿ abbaabba ಆಗಿಯೂ ಕೊನೆಯ ಆರು ಪಂಕ್ತಿಗಳಲ್ಲಿ cdcede ಆಗಿಯೂ ಇದೆ.

The wonder of creation humbles me,
Mother Divine! The earth’s colossal frame
That circles round the hugest orb of flame
Is but a speck of vast Infinity.
The systems great that eyes can scarcely see.
Or minds conceive, or aught that yet no name
Received from man, are wonders of thy game
That check the pride of vain Humanity.
How low I stand?  not greater than a fly,
Nor wiser, worthier, nor more great in power!
But yet I feel far mightier than the sky
In whose vast dome all orbs and systems shine
And move incessant, I am, as a Lover:
For I am one with thee, Mother Divine!
೪-೩-೧೯೨೪

ಮಾರ್ಚಿ ೫ನೆಯ ಬುಧವಾರದ ದಿನಚರಿ:

“ಬೆಳಿಗ್ಗೆ ನಾನು ಮತ್ತು ಬಸವರಾಜು ಕೆಮಿಸ್ಟ್ರಿ ಓದಿದೆವು. ನನ್ನ ಸಾವಿಗೆ ನಾನು ವ್ಯಸನಪಡುವುದಾದರೆ ಅದಕ್ಕೆ ಒಂದು ಕಾರಣ, ಲೋಕ ಮಹತ್ತಾದುದನ್ನಲ್ಲದಿದ್ದರೂ ಉತ್ತಮವಾದ ಸಾಹಿತ್ಯವನ್ನಾದರೂ ಕಳೆದುಕೊಳ್ಳುತ್ತದಲ್ಲಾ ಎಂದು ಆಲೋಚಿಸಿದೆ. ಇನ್ನೊಂದು ಕಾರಣ, ಆಧ್ಯಾತ್ಮದಲ್ಲಿ ಮುಂದುವರಿದು ಆತ್ಮದ ಅಮೃತತ್ವವನ್ನರಿಯದ ನನ್ನ ಬಂಧುಮಿತ್ರರು ದುಃಖಿಸುವರಲ್ಲಾ ಎಂದು. ಮತ್ತೂ ಒಂದು ಮುಖ್ಯ ಕಾರಣ, ನನ್ನವ್ವ ಶೋಕದ ಬೆಂಕಿಯಲ್ಲಿ ದಗ್ಧವಾಗಿಬಿಡುತ್ತಾರಲ್ಲಾ ಎಂದು. (ಇದನ್ನು ಬರೆಯುತ್ತಿದ್ದಾಗ ನನ್ನವ್ವ ಆ ವರ್ಷ ಎಂದರೆ ೧೯೨೪ನೆಯ ಸಂವತ್ಸವ ಕೊನೆಮುಟ್ಟುವುದರೊಳಗೆ ಇಹಲೋಕದಿಂದ ಕಣ್ಮರೆಯಾಗುತ್ತಾರೆ ಎಂಬುದು ನನಗೆ ಹೇಗೆ ಗೊತ್ತಾಗಬೇಕು?) ಮೇಲಿನ ಆಲೋಚನೆಗಳೇನೊ ಅವಿವೇಕದವಾದರೂ ಅವುಗಳಿಂದ ನನ್ನ ಮನಸ್ಸು ಉನ್ನತವೂ ಆಳವೂ ಆದ ಭಾವನೆಗಳಿಗೆ ಒಳಗಾಯಿತು. ಸಂಜೆ ನನ್ನ ಪ್ರಬಂಧದ (ಗಾಂಧೀಜಿ ಅವತಾರವೇ?) ಕೆಲವು ವಾಕ್ಯಗಳನ್ನು ಬರೆದೆ. ಪಿ.ಮಲ್ಲಯ್ಯ ಬಂದರು; ಇಬ್ಬರೂ ವಾಕ್ ಹೋದೆವು. ತುಂಬ ಹಿತವಾಗಿತ್ತು. Falling Leaves ಕವನವನ್ನು ಟೈಪು ಮಾಡಿ ತಂದುಕೊಟ್ಟರು ಶಿವರಾಂ. ಓ ತಾಯಿ, ಪಾಪದಿಂದ ನನ್ನನುದ್ಧರಿಸು! ವಿವೇಕಾನಂದ! ಪರಮಹಂಸ! ಚೈತನ್ಯ! ಕಬೀರ!”

ಮಾರ್ಚಿ ೬ನೆಯ ಗುರುವಾರದ ದಿನಚರಿ:

“ ಈ ದಿನದ ದಿನಚರಿ ಅಂದೇ ಬರೆದುದಲ್ಲವಾದ್ದರಿಂದ ಸರಿಯಾಗಿಲ್ಲದಿರಬಹುದು. ಏನೂ ವಿಶೇಷ ನಡೆಯಲಿಲ್ಲ. ಸಂಜೆ ವಾಕ್ ಹೋಗಲಿಲ್ಲ. ಗೆಳೆಯರೊಡನೆ ರೂಮಿನಲ್ಲಿಯೆ ಹರಟೆ ಹೊಡೆದೆ, ನನ್ನ ಬಾಲ್ಯಕಾಲದ ಸಾಹಸಗಳನ್ನೂ ಏಳುಬೀಳುಗಳನ್ನೂ ಸುಖ ದುಃಖ ಆನಂದಾತಿಶಯಗಳನ್ನೂ ಕುರಿತು. ನಾಲ್ಕೊ ಐದೊ ಗಂಟೆ ಹರಟೆ ನಡೆಯಿತು. ನಗೆಯ ತರಂಗಗಳು ರೂಮನ್ನೆಲ್ಲ ಆಗಾಗ್ಗೆ ಅಪ್ಪಳಿಸುತ್ತಿದ್ದುವು. ಎಲ್ಲರೂ ಅವರವರ ತಾವುಗಳಿಗೆ ಹೋದಮೇಲೆ ನಾನೂ ಮಲ್ಲಯ್ಯನೂ ಊಟಕ್ಕೆ ಹೋದೆವು. ದಿವ್ಯಜನನಿ, ನಿನ್ನ ನಿತ್ಯತೆಯ ತೊಡೆಯ ಮೇಲಾಡುವ ಶಿಶು ನಾನು. ಎಲ್ಲ ಅವತಾರಗಳೂ ನನ್ನ ಒಡಹುಟ್ಟಿದವರು, ಏಕೆಂದರೆ ಅವರೂ ಕೂಡ ನಿನ್ನ ಮಕ್ಕಳೆ! (ತುದಿಯಲ್ಲಿ ನಾಲ್ಕು ಪಂಕ್ತಿಗಳಿವೆ.)

A poetless land is like the moon-less sky;
It sleeps unheared; unsung its glory dies.
Great Kings may rule and mighty warriors rise,
But all its gems without a ray shall die.

ಮಾರ್ಚಿ ೭ನೆಯ ಶುಕ್ರವಾರದ ದಿನಚರಿ:

“ಓಂ! ಬೆಳಿಗ್ಗೆ ಓದಿಕೊಳ್ಳಲು ಪಾರ್ಕಿಗೆ ಹೋದೆ. ಅಲ್ಲಿ ಒಂದು ಬೆಂಚಿನ ಮೇಲೆ ಕುಳಿತುಕೊಂಡೆ. ಆದರೆ ಮನಸ್ಸೆಲ್ಲ ಉದ್ಯಾನದ ಮುದ್ದು ಪ್ರಾಣಿಗಳಿಂದ ಸಮ್ಮೋಹಿತವಾಯಿತು: ಚಿಮ್ಮಿ ನಲಿಯುವ ಅಳಿಲುಗಳು, ಉಲಿಯುವ ಮೈನಾಗಳು, ಸಿಳ್ಳಿಂಚರದ ಹಳದಿಹಕ್ಕಿಗಳು, ಪೊದೆಪೊದೆಗಳಲ್ಲಿ ನಲಿಯುವ ಟುವ್ವಿ ಹಕ್ಕಿಗಳು. ಪರಿಪೂರ್ಣ ಮುದನನ್ನೂ ಅರಿವನ್ನೂ ಇತ್ತುವು ಅವು ನನಗೆ! ನನಗೂ ರೆಕ್ಕೆ ಬಂದು ನಾನೂ ಹಕ್ಕಿಯಾಗಿದ್ದರೆ ಇವುಗಳ ಜೊತೆ ಹಾರಾಡಬಹುದಿತ್ತಲ್ಲಾ ಎನಿಸಿತು. ಎಳಬಿಸಿಲು ಬಿದ್ದು ಹಸುರು ಚಿಮ್ಮುವ ತುದಿ ಕೊನೆಗಳಲ್ಲಿ ಅಳಿಲುಗಳೊಡನೆ ಆಡಬಹುದಿತ್ತಲ್ಲಾ ನಾನು, ಅಳಿಲಾಗುವ ಸಾಮರ್ಥ್ಯವಿದ್ದಿದ್ದರೆ ಎನ್ನಿಸಿತು…. ಇವೊತ್ತು ನಮಗೆ ಯೂ. ಈ ಪರೀಕ್ಷೆಗೆ ಅಡ್ಮಿಷನ್ ಟಿಕೆಟ್‌ಗಳನ್ನು ಕೊಟ್ಟರು. ಪ್ರಯೋಗಶಾಲೆಯಲ್ಲಿ ನಾನು ಒಡೆದು ಹಾಕಿದ್ದ ಗಾಜಿನ ಪದಾರ್ಥಗಳಿಗಾಗಿ ನನ್ನಿಂದ ಎಂಟಾಣೆ ಜುಲ್ಮಾನೆ ವಸೂಲು ಮಾಡಿಕೊಂಡರು…. ನನ್ನ ವಿದ್ಯಾರ್ಥಿವೇತನ ಮೂವತ್ತು ರೂಪಾಯಿ ಬಂತು. ಬಿ.ಅನಂತರಾಮಯ್ಯ ರೂಮಿಗೆ ಬಂದರು. ನನ್ನ ಅನುಭವಗಳು, ಭಾವಗಳು, ಆಲೋಚನೆಗಳು ಎಲ್ಲವನ್ನು ಅವರಿಗೆ ವಿವರಿಸಿದೆ. ಬಹುದೂರ ವಾಕ್ ಹೋಗಿ ಬಂದೆವು. ದಾರಿಯಲ್ಲಿ ಅವರಿಗೆ ಹೇಳಿದೆ ‘ನನಗೆ ಹಳ್ಳಿಯ ಸರಳ ಗೋಪಾಲ ಬಾಲಕನಾದ ಕೃಷ್ಣನೆ ಇಷ್ಟಮೂರ್ತಿ, ಗೀತೋಪದೇಶ ಮಾಡಿದ ಮಹಾ ಶ್ರೀಕೃಷ್ಣನಲ್ಲ. ಏಕೆಂದರೆ, ನನ್ನಂತಹ ಹುಡುಗನೊಡನೆ ನಾನು ಯಾವ ದಾಕ್ಷಿಣ್ಯವೂ ಇಲ್ಲದೆ ವರ್ತಿಸಬಹುದು, ಆದರೆ ಹಿರಿಯ ಆಚಾರ್ಯನೊಡನೆ ಹಾಗೆ ವರ್ತಿಸುವುದು ಸಾಧ್ಯವಿಲ್ಲ’ ಎಂದು. ಅದೂ ಅಲ್ಲದೆ ನಾವು ಶಂಕರಾಚಾರ್ಯರ ರಾಮಾನುಜಾಚಾರ್ಯರ ಮತ್ತು ಸ್ವಾಮಿ ವಿವೇಕಾನಂದರ ತತ್ತ್ವ ವಿಚಾರವಾಗಿಯೂ ಮಾತಾಡಿದೆವು. ಓಂ! ಓಂ! ಓಂ!”

ಮಾರ್ಚಿ ೮ನೆಯ ಶನಿವಾರದ ದಿನಚರಿ:

“ಖಾದಿಬಟ್ಟೆ ಕೊಳ್ಳಲು ಹೋದೆವು. ಸುಮಾರು ೧೦ ಗಂಟೆಗೆ ನಮ್ಮನಮ್ಮ ರೂಮುಗಳಿಗೆ ಹಿಂತಿರುಗಿದೆವು. ಇವೊತ್ತು ನಾಲ್ಕು ಕಾಗದ ಬರೆದೆ: (೧) ಡಿ.ಆರ್.ವಿ, (೨) ಡಿ.ಎನ್.ಎಚ್, (೩) ಕೆ.ಆರ್.ಜಿ, (೪) ಎಂ.ಚನ್ನಪ್ಪಗೌಡ. ಮಧ್ಯಾಹ್ನ ಕೆಮಿಸ್ಟ್ರಿ ಅಧ್ಯಯನಕ್ಕೆ ಪಾರ್ಕಿಗೆ ಹೋಗಿ, ಸುಮಾರು ೩ ಗಂಟೆಗೆ ವಾಪಸಾದೆವು. ಸಂಜೆ ಪುಸ್ತಕದ ಅಂಗಡಿಗೆ ಹೋಗಿ, ‘Golden Treasury’ (‘ಗೋಲ್ಡನ್ ಟ್ರೆಜರಿ’ ಎಂಬ ಇಂಗ್ಲಿಷ್ ಕವನಗಳ ಸುಪ್ರಸಿದ್ಧ ಸಂಕಲನ) ಕೊಂಡುಕೊಂಡೆ. ರಾತ್ರಿ ಗಂಭೀರ ಆಲೋಚನೆಗಳಲ್ಲಿ ಗಭೀರಮಗ್ನನಾಗಿದ್ದು ನಿದ್ರೆ ಮಾಡಿದೆ. ನನ್ನ ಪರಮ ಜಗನ್ಮಾತೆಯನ್ನು ಕುರಿತವೇ ಬಹಳ; ಜೊತೆಗೆ ನನ್ನ ಒಲುಮೆಯ ಗೌರಿಯ ನೆನಪೂ ಹೃದಯೋದ್ವಿಗ್ನವಾಗಿ, ಮನಸ್ಸು ಅವಳನ್ನು ಮತ್ತೊಮ್ಮೆ ನೋಡಲಾಶಿಸಿತು. ನನ್ನ ಒಲುಮೆ ಅವಳ ಹೃದಯದಲ್ಲಿ ಆಳವಾಗಿ ನೆಟ್ಟಿದೆ, ಅವಳದೂ ನನ್ನಲ್ಲಿ. ಅವಳ ರೂಪು ಅಪ್ಸರೆಯಂತೆ ಮನೋಜ್ಞವಾಗಿ ಕಂಡಿತು. ಆಮೇಲೆ ಆಲೋಚನೆ ಮತ್ತೊಂದು ಲೋಕ ಪ್ರವೇಶ ಮಾಡಿತು: ವಿಭೂತಿಗಳು, ಮಹಾಪುರಷರು ಮತ್ತು ಅವರ ಮಹತ್ಕಾರ್ಯಗಳು. ಈ ಎಲ್ಲ ಚಿಂತಾತರಂಗಗಳ ಮೇಲೆ ತೇಲುತ್ತಾ ನಿದ್ದೆ ಮಾಡಿದೆ…. ಹೇ ನನ್ನ ಪ್ರೇಮಮಯಿ ಜನನೀ. ನಿನ್ನ ರಕ್ಷೆಯ ಬಾಹುಬಂಧನವನ್ನು ನಾನು ಸ್ಪಷ್ಟ ಅನುಭವಿಸುವಂತೆ ನನ್ನನ್ನು ಬಿಗಿದಪ್ಪಿಕೊ… (Speeches and Writings of swami Vivekananda. ಎರಡು ಪುಸ್ತಕಗಳಿಗೆ ಬರೆದು ಹಾಕಿದೆವು.”

ಮಾರ್ಚಿ ೯ನೆಯ ಭಾನುವಾರದ ದಿನಚರಿ:

“ಬೆಳಿಗ್ಗೆ ತಿಮ್ಮಯ್ಯನಿಗೆ ಎರಡು ಪಂಚೆ ಕೊಂಡುಕೊಳ್ಳಲು ನಾಲ್ಕು ರೂಪಾಯಿ ಕೊಟ್ಟೆ! ಆದರೆ ಅವನು ಅಷ್ಟೂ ದುಡ್ಡಿಗೆ ಒಂದು ಪಂಚೆ ಕೊಂಡುತಂದ. ನಂಜಯ್ಯನ ರೂಮಿಗೆ ಹೋಗಿದ್ದೆ; ನಮ್ಮ ಪರೀಕ್ಷೆಯ ವಿಚಾರ ಬಹಳ ಮಾತಾಡಿದೆವು. ನಮ್ಮ ರೂಮಿಗೆ ಬರುವಂತೆ ಅವರನ್ನು ಆಹ್ವಾನಿಸಿದೆ. ರೂಮಿಗೆ ಬಂದವನು ವರ್ಡ್ಸ್ ವರ್ತ್ ಕವಿಯನ್ನು ಕುರಿತ ವಿಮರ್ಶಗ್ರಂಥವನ್ನು ಓದಿದೆ. ಆ ಮಹಾಕವಿ ಚೇತನದಿಂದ ಸ್ಫೂರ್ತನಾಗಿ ‘The Squirrel’s Scream’ ಎಂಬ ಕವನ ರಚನೆ ಮಾಡಿದೆ. ತರುವಾಯ ಮತ್ತೊಂದು ಕವನ ‘I ve Heared Thee, I Hear Thee’ ಪ್ರಾರಂಭಿಸಿದೆ. ಸ್ಟೀಲ್‌ನ ಪ್ರಬಂಧಗಳನ್ನು ಓದಿದೆ. ಅದರ ಮೇಲೊಂದು ವಿಮರ್ಶೆ ಬರೆಯಲು ಮನಸ್ಸು ಮಾಡಿದೆ. ಶೆಟ್ಟಿ, ಮಲ್ಲಯ್ಯ, ನಾನು ವಾಕ್ ಹೋದೆವು. ರಾತ್ರಿ ಸ್ಟೀಲ್‌ನ ಮೇಲೆ ನನ್ನದೇ ಸ್ವಂತ ವಿಮರ್ಶೆ ಬರೆದೆ. ಮಲಗುವ ಮುನ್ನ ನನ್ನ ಮಧುರ ಗೌರಿಯನ್ನೂ ಅವರ ಪರವಾದ ನನ್ನ ಪವಿತ್ರ ಪ್ರೇಮವನ್ನೂ ನೆನೆದು ಭಾವಿಸಿದೆ. ಕೃಷ್ಣ! ಓಂ! ಓಂ! ಓಂ! ಓಂ! ಓಂ! ಓಂ! ಓಂ! “ಬಸಪ್ಪಗೆ ನಾಲ್ಕು ರೂಪಾಯಿ ಕೊಟ್ಟೆ”.

ಹಿಂದಿನ ದಿನಚರಿಯಲ್ಲಿ ಉಕ್ತವಾದ ‘The Squirrel’s Scream’ ಹಸ್ತಪ್ರತಿಯಲ್ಲಿದೆ. ತಾರೀಖು ೯.೩.೧೯೨೪ ಎಂದು ತುದಿಯಲ್ಲಿ ಇದೆ.

Listen O Heart! Oh listen to the cry
Soul stirring, sweet and serene!
It dances thro’ the frame, it flows thro’ the eye;
And it unveils the scene that lies between
The inner and the out-ward sky!
Hark! Hark! How sweet the rhythmic scream
Rings thro’ the air its sylvan sound!
Sweeter than angel’s song in a dream
It cheers and lifts the inward art:
And brings to the emotional heart
Thoughts universal and profound!

It is not strange, the familiar voice,
The tunes so near and dear;
Many a time ere now did I rejoice,
And still the bliss retains another tear,
A tear of pure and innocent joys!
Drink! Drink! Sweet heart, the bliss supreme,
It is mother’s lullaby!
The Mother sings! She sings thro’ the scream!
Ah! Listen to the hidden chime,
Serene, consoling, sweet and sublime!
There cannot be a diviner glee.

Those notes so sweetly dear; ah! They inspire
And a different world they show!
Each time the heavenly rhymes swell thro’ the air,
They thrill my heart; wherever they echo
I feel my heart is there!
Hide, heart, hide the bliss in thy soul,
Press it with love, caress and kiss!
It is the Mother who comes to console!
Let not these chimes go from the heart,
Let not the Mother’s voice depart,
For they are messages of bliss!
೯-೩-೧೯೨೪

 


[1] ಆಗಿನ ತರುಣರ ಮನೋಧರ್ಮಕ್ಕೆ ಇದೊಂದು ಸಾಕ್ಷಿ. ತುಸು ದೇಶಭಕ್ತಿಯ ಮಾತನಾಡಿದರೆ ಸಾಕು, ಅವರೆಲ್ಲ ಮಹಾತ್ಮರಾಗಿ ಬಿಡುತ್ತಿದ್ದರು!

[2] ಆಗಿನ ದೇಶಭಕ್ತಿಯ ಮತ್ತು ಆಧ್ಯಾತ್ಮಿಕ ಜಾಗ್ರತಿಯ ವಾತಾವರಣದಲ್ಲಿ ತರುಣವರ್ಗದಲ್ಲಿ ‘ವೀರಪೂಜೆ’ ‘ವಿಭೂತಿಪೂಜೆ’ಗಳು ಶಿಖರದ ಮಟ್ಟಕ್ಕೆ ಏರಿದ್ದುವು. ನಮ್ಮ ಬಾಡಿಗೆಯ ರೂಮಿನಲ್ಲಿ ಪಂಕ್ತಿಪಂಕ್ತಿಯಾಗಿ ಪಟಗಳ ಸರಮಾಲಿಗೆ ಇದ್ದುವು. ಕಾರ್ಡಿನ ಗಾತ್ರದ ಬಣ್ಣದ ಮತ್ತು ಬಣ್ಣವಿಲ್ಲದ ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳು ಮುದ್ರಿತವಾಗಿ ಮಾರಾಟವಾಗುತ್ತಿದ್ದುವು. ಸ್ವಾತಂತ್ರ್ಯ ಸಂಗ್ರಾಮದ ಒಂದಂಗವೋ ಎಂಬಂತೆ! ಶ್ರೀರಾಮಕೃಷ್ಣ, ಸ್ವಾಮಿ ವಿವೇಕಾನಂದ, ಶ್ರೀ ಅರವಿಂದಗಾಂಧಿ ಇಂಥವರದಂತಿರಲಿ ಕಡೆಗೆ ಮಹಮ್ಮದಾಲಿ ಮತ್ತು ಷೌಕತಾಲಿಯಂಥವರ ಚಿತ್ರಗಳೂ ಪೂಜೆಗೊಳ್ಳುತ್ತಿದ್ದುವು!