ಮಾರ್ಚಿ ೧೦ನೆಯ ಸೋಮವಾರದ ದಿನಚರಿ:

“ನಾವು ಮೂವರು ಕನ್ನಡ ಪದ್ಯದ ಅಧ್ಯಯನಕ್ಕಾಗಿ ಪಾರ್ಕಿಗೆ ಹೋಗಿ ಹನ್ನೊಂದು ಗಂಟೆಗೆ ಹಿಂದಕ್ಕೆ ಬಂದೆವು. ಇವೊತ್ತೊಂದು ಭಯಂಕರ ವಾರ್ತೆ ಕೇಳಿದೆ; ಈ ಆಧುನಿಕ ಕಾಲದಲ್ಲಿಯೂ ನರಬಲಿ ಕೊಡುವರಂತೆ! ಒಬ್ಬ ಎರಡನೆ ವರ್ಷದ ಬಿ.ಎ. ಹುಡುಗನನ್ನು ಹೊತ್ತು ಹೋಗಿದ್ದರಂತೆ ನರಬಲಿಕೊಡುವುದಕ್ಕೆ. ದೈವವಶಾತ್ ತಪ್ಪಿಸಿಕೊಂಡು ಬಂದನಂತೆ. ನಾನಂತೂ ಸತ್ಕೋಪದಿಂದ ಬೆಂಕಿಯಾದೆ. ಆ ನೀಚ ಹತ್ಯಾಕಾರರನ್ನು ಹಿಡಿದು ಶಿಕ್ಷಿಸದಿದ್ದರೆ ಸರ್ಕಾರಕ್ಕೆ ಧಿಕ್ಕಾರ! ಓ ಕೃಷ್ಣಾ, ಎಲ್ಲಿ ನಿನ್ನ ಗೀತೋಪದೇಶ ? ಅಂತಹ ಕ್ರೂರಿಗಳಲ್ಲಿಯೂ ನಿನ್ನನ್ನು ಹೇಗೆ ಕಾಣಲಿ? ಸ್ವಲ್ಪ ಕಾಲ ಪ್ರಶಾಂತವಾಗಿ ಆಲೋಚಿಸಿದ ಅನಂತರ ಮನಸ್ಸು ಶಾಂತಸ್ಥಿತಿಗೆ ಬಂದಿತು. ಓ ತಾಯಿ, ಎಲ್ಲ ನಿನ್ನ ಕಪಟ ನಾಟಕ ಲೀಲೆ.”

ಮಾರ್ಚಿ ೧೧ನೆಯ ಮಂಗಳವಾರದ ದಿನಚರಿ:

“ನಮ್ಮ ಪರೀಕ್ಷೆ ೧೦ ಗಂಟೆಗೆ ಪ್ರಾರಂಭವಾಯಿತು. ಪ್ರಶ್ನೆಗಳು ಅಷ್ಟೇನೂ ಕ್ಲಿಷ್ಟವಾಗಿರಲಿಲ್ಲ. ಇಂಗ್ಲಿಷ್ ಪೇಪರು ಮೂರು ಗಂಟೆಯದು; ಕನ್ನಡ ೩ ಗಂಟೆಯದು. ಚೆನ್ನಾಗಿಯೆ ಮಾಡಿದ್ದೇವೆ. ಪಂದ್ಯಾಟದಿಂದ ಬರುವಂತೆ ಸಂತೋಷವಾಗಿ ಹೊರಗೆ ಬಂದೆವು; ಸೊಗಸಾಗಿತ್ತು. ನನ್ನ ಕನ್ನಡ ಉತ್ತರಪತ್ರಿಕೆಯ ಪ್ರಬಂಧದಲ್ಲಿ ‘ಜಗತ್ತಿನ ಒಬ್ಬ ಕವಿಯಾಗಬೇಕೆಂಬುದೆ ನನ್ನ ಇಚ್ಛೆ. ಮತ್ತೇನೂ ಅಲ್ಲ’ ಎಂದು ಬರೆದಿದ್ದೇನೆ. ರಾತ್ರಿ ಮತ್ತೆ ಗೌರಿಯನ್ನು ನೆನೆದೆ. ಅವಳ ರೂಪ ನನ್ನ ಕಲ್ಪನೆಯ ಕಣ್ಣಿಗೆ ಮೂಡಿ ನಿಂತಿತು. ಹಾಗೆಯೆ ನಿಂತು ಆಲೋಚಿಸಿದೆ: ‘ನನ್ನ ಒಲವು ಬರಿಯ ಐಂದ್ರಿಯ ಕಾಮವೊ ಏನು?” ಎಂದು. ‘ಅಲ್ಲ’ ಎಂದು ಬಂತು ಉತ್ತರ. ದಿವ್ಯಮಾತೆ ನನ್ನನ್ನು ಕೈ ಹಿಡಿದು ನಡೆಸು. ಮೇಲೆತ್ತಿಕೊ. ಅಣ್ಣಾ ಶ್ರೀಕೃಷ್ಣಾ, ದಾರಿ ತೋರು, ನೆರವಾಗು. ಸ್ವಾಮಿ ವಿವೇಕಾನಂದರೆ, ಪರಮಹಂಸರೆ ಕೃಪೆ ಮಾಡಿ.”

ಮಾರ್ಚಿ ೧೨ನೆಯ ಬುಧವಾರದ ದಿನಚರಿ:

“… Friendship”[1] ಎಂದು ಒಂದು ಕವನ ರಚಿಸಿದೆ. ಇವೊತ್ತು. ಇಂಗ್ಲಿಷ್ ಎರಡನೆ ಪೇಪರ್ ಮುಗಿಯಿತು. ರೂಮಿಗೆ ೧.೩೦ಕ್ಕೆ ಬಂದು ಪಾರ್ಕಿಗೆ ಓದಿಕೊಳ್ಳಲು ಹೋದೆ. ೬ ಗಂಟೆಗೆ ಹಿಂದಕ್ಕೆ ಬಂದೆ. ದಿವ್ಯಮಾತೆ, ನನ್ನ ಇಚ್ಛೆ ನಿನಗೆ ಸಂಪೂರ್ಣ ಶರಣಾಗಲಿ. ವಿವೇಕಾನಂದ! ಓಂ ಓಂ.”

When friends long loved bid us good-bye
And leave us far behind
Sad tears bedim the watching eye
And sadder thoughts the mind.
Then loneliness like death comes down
And makes a desert to the town.

O! then we feel the weight of time
And sweetness of friends’ speech,
While thoughts more deep and more sublime
The beating heart shall teach.
Then friends of earth do fade away
And heaven’s delightful greet us gay.

While thus we sit in pensive mood
Our minds survey the past;
And tho’ the fleeting scenes be crude
They lull the bosom’s blast;
And thus bring us hope in despair,
For present joys are future’s share.

While thus we build the friendship bridge
And scale the main of life
And thus attaining duration’s ridge
We end the human strife,
Our hearts still owe to noble friends
The glorious blessings that heaven sends!

ಮಾರ್ಚಿ ೧೪ನೆಯ ಗುರುವಾರದ ದಿನಚರಿ:

“ಬೆಳಗಿನ ಜಾವ ೪ ಗಂಟೆಗೆ ಎದ್ದು ಪರೀಕ್ಷೆಗಾಗಿ ೭.೩೦ರವರೆಗೆ ಓದಿಕೊಂಡೆ. ಪರೀಕ್ಷೆಯಲ್ಲಿ ತಕ್ಕಮಟ್ಟಿಗೆ ಮಾಡಿದ್ದೇನೆ. ೧.೩೦ ಗಂಟೆಗೆ ರೂಮಿಗೆ ಬಂದು, ಪಾರ್ಕಿಗೆ ಹೋದೆ ಕೆಮಿಸ್ಟ್ರಿ ಓದಲು. ಸಂಜೆ ಶೆಟ್ಟಿ, ಶಿವರಾಂ ಬಂದರು. ವಾಕ್ ಹೋದೆವು. ತಾಯಿ, ನಿನ್ನಿಚ್ಛೆ ನೆರವೇರಲಿ. ನನ್ನಿಚ್ಛೆ ನಿನಗೆ ಸಂಪೂರ್ಣ ಶರಣಾಗತವಾಗಿರಲಿ. ವಿವೇಕಾನಂದ ಗುರುವಿಗೆ ಜಯವಾಗಲಿ.”

ಮಾರ್ಚಿ ೧೪ನೆಯ ಶುಕ್ರವಾರದ ದಿನಚರಿ:

“ಇವೊತ್ತು ಸಂಜೆ ೭ ಗಂಟೆಗೆ ನಾನು ಶಿವರಾಂ ರೂಮಿಗೆ ಹೋದೆ. ಅಲ್ಲಿ ವಿ.ಪಿ.ರಾಮಕೃಷ್ಣಯ್ಯ ಕೂತಿದ್ದರು. ಸ್ವಲ್ಪ ಹೊತ್ತು ಮಾತಾಡಿದೆವು. ಶಿವರಾಂ ಒಂದು ಸೊಗಸಾದ ನೋಟುಪುಸ್ತಕದಲ್ಲಿ ನನ್ನ ಕವನಗಳನ್ನೆಲ್ಲ ಮುದ್ದಾದ ಅಕ್ಷರಗಳಲ್ಲಿ ಬರೆದುಕೊಂಡಿದ್ದನ್ನು ತೋರಿಸಿದರು. ಪಿ.ವಿ.ರಾಮಕೃಷ್ಣಯ್ಯ ನಾನು ನಮ್ಮನಮ್ಮ ಕೊಟಡಿಗಳಿಗೆ ಹೊರಟೆವು. ಆದರೆ ದಾರಿಯಲ್ಲಿ ಮಾತು ಮಹೋನ್ನತ ಸ್ತರಕ್ಕೇರಿತು. ನನ್ನ ಊರ್ಧ್ವಮುಖ ವಿಕಾಸದ ಭವಿಷ್ಯಚ್ಚಿತ್ರವನ್ನು ಕೊಟ್ಟು, ಸ್ವಾಮಿ ವಿವೇಕಾನಂದರಿಗೆ ನಾನೆಷ್ಟು ಋಣಿ ಎಂಬುದನ್ನು ವಿಸ್ತರಿಸಿದೆ. ಮಾತುಕತೆ ಬಹಳ ದೀರ್ಘವಾಗಿತ್ತು; ಮಧುರವಾಗಿಯೂ ಇತ್ತು. ಹೇ ದಿವ್ಯಮಾತೆ ನಿನ್ನಿಚ್ಛೆಗೆ ನನ್ನಿಚ್ಛೆ ಸಂತೋಷದಿಂದಲೆ ಶರಣಾಗಲಿ! ಜಯ್ ಸ್ವಾಮಿ ವಿವೇಕಾನಂದ! ಜಯ್ ಪರಮಹಂಸದೇವ!”

ಮಾರ್ಚಿ ೧೫ನೆಯ ಶನಿವಾರದ ದಿನಚರಿ:

“ಇದೊಂದು ನಾಟಕೀಯ ದಿನ. ಪರೀಕ್ಷೆ ಸಮಯದಲ್ಲಿ ನನ್ನ ಪಕ್ಕದಲ್ಲಿ ಕೂತಿದ್ದ ಹುಡುಗ ಒಂದು ಒತ್ತು ಕಾಗದದ ಮೇಲೆ ಏನನ್ನೊ ಬರೆದು ಬೆಂಚಿನ ಮೇಲೆ ಇಟ್ಟಿದ್ದನು. ನನಗೆ ಅದರ ವಿಚಾರವೆ ಗೊತ್ತಿರಲಿಲ್ಲ. ಆದರೆ ಕಾವಲು ಕಾಯುತ್ತಿದ್ದ ಅಧ್ಯಾಪಕಾಧಿಕಾರಿ, ಮೂರು ನಾಲ್ಕು ದಿನಗಳಿಂದಲೂ ತಮಗೆ ಎದುರುಬಿದ್ದು ಸೆಣಸಿ ಚುಡಾಯಿಸುತ್ತಿದ್ದ ಆ ಹುಡುಗನ ಮೇಲೆ ರೊಚ್ಚಿದ್ದುದರಿಂದ, ಅವಕಾಶ ಉಪಯೋಗ ಮಾಡಿಕೊಂಡು ಆ ಒತ್ತುಕಾಗದವನ್ನು ತೆಗೆದುಕೊಂಡು ಚೆಕ್ ಮಾಡಿದರು. ಆ ಅಪರಾಧದಲ್ಲಿ ನಾನೂ ಸೇರಿದ್ದೇನೆಂದು ಅನುಮಾನಿಸಿದರು. ನನ್ನ ಮನಸ್ಸಿಗೆ ತುಂಬ ನೋವಾಯಿತು. ಏಕೆಂದರೆ ಬದುಕಿನಲ್ಲಿ ಮಹತ್ತರ ಪರೀಕ್ಷೆಯೂ ಮಹತ್ತರನಾದ ಪರೀಕ್ಷಕನೂ ನಮಗಿರುವಾಗ ಈ ಪುಟಗೋಸಿ ಅಲ್ಪಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಸಲುವಾಗಿ ಆ ತರಹದ ವಂಚನೆಯ ಕಾರ್ಯ ಕೈಕೊಳ್ಳುವುದಕ್ಕಿಂತಲೂ ಅತ್ಯತಿ ಉನ್ನತ ತರವಾದ ಧ್ಯೇಯಗಳು ನನ್ನವಾಗಿದ್ದುವು. (ಮಹಾರಾಜಾ ಕಾಲೇಜಿನ ಪ್ರನ್ಸಿಪಾಲರಾಗಿದ್ದು ಪರೀಕ್ಷೆಗಳ ಮುಖ್ಯಾಧಿಕಾರಿಯಾಗಿದ್ದ) ರಾಲೋ ಬಳಿಗೂ ನಾನು ಹೋದೆ. ಅವರು ‘ಯಾರು ತಂದದ್ದು ಆ ಕಾಗದ?’ ಎಂದು ಕೇಳಿದರು. ‘‘ನನಗೆ ಗೊತ್ತಿಲ್ಲ’’ ಎಂದೆ. ಮತ್ತೆ ಪ್ರಶ್ನಿಸಿದರು. ‘ಆ ಕಡೆಗೆ ನೀನೇಕೆ ನೋಡುತ್ತಿದ್ದದ್ದು?’ ನಾನೆಂದೆ ‘ಯಾಕೆಂದರೆ ನನ್ನ ಪ್ರಶ್ನೆಪತ್ರಿಕೆ ನನ್ನ ಎಡಭಾಗಕ್ಕಿತ್ತು.’ ಹೀಗೆ ಕೆಲವು ಪ್ರಶ್ನೆಗಳನ್ನು ಕೇಳಿ ‘ಇನ್ನು ನೀನು ಹೋಗಬಹುದು’ ಎಂದರು. ನಾನು ಹೊರಟು ಬಂದೆ. ನನ್ನ ಎದೆ ತುಸು ಹೊತ್ತು ಡವಗುಟ್ಟುತ್ತಿತ್ತು. ಆದರೆ, ಪರೀಕ್ಷೆಯಲ್ಲಿ ಪಾಸಾಗದಿದ್ದರೇನಂತೆ ಎಂದುಕೊಂಡು ನನಗೆ ನಾನೆ ಮುಗುಳುನಕ್ಕೆ. ತಪ್ಪಿಲ್ಲದವರನ್ನು ಕಾಪಾಡಲು ನನ್ನ ತಾಯಿ ಇದ್ದಾಳೆ ಎಂದುಕೊಂಡೆ. ಈ ಅಲ್ಪ ಮಾನವರ ನ್ಯಾಯಕ್ಕೂ ತೀರ್ಪಿಗೂ ನಿಲಕದು ಬಹುಮೇಲು ಮಟ್ಟದಲ್ಲಿದ್ದೇನೆ ನಾನು, ಮನುಷ್ಯಕುಲದ ಸಹಾಯಕ್ಕಾಗಿ ಈ ಭೂಮಿಯಲ್ಲಿ ಜನ್ಮವೆತ್ತಿದ್ದೆನಾದ್ದರಿಂದ. (I said to myself there is my mother who shields the right. And thought that I am far above the Judgement of frail humanity, born on earth to help mankind).

ಸಂಜೆ ‘The Master as I saw Him’ ಓದಿ, ಅತ್ತೂಬಿಟ್ಟೆ. ಲೈಬ್ರರಿಯಿಂದ ಹಿಂತಿರುಗುತ್ತಿದ್ದಾಗ ದಾರಿಯಲ್ಲಿ ಒಬ್ಬ ಭಿಕ್ಷುಕ ಅಳುತ್ತಿದ್ದುದನ್ನು ಕಂಡು ನಾನು ಅತ್ತೆ. ಶಿವರಾಂ ಕೊಟಡಿಗೆ ಹೋಗಿದ್ದೆ, ಮೀಟಿಂಗ್ ವಿಚಾರ ತಿಳಿಸುವುದಕ್ಕೆ. ರಾತ್ರಿ ‘Friendship’ ಸ್ವಲ್ಪ ಭಾಗವನ್ನೂ ಮತ್ತೊಂದು ಕವನದ ಸ್ವಲ್ಪ ಭಾಗವನ್ನೂ ರಚಿಸಿದೆ.”[2]

In thy great world’s uncertainty
Where notes confounding come and greet
I have heard thee and I hear thee
Musician great, Musician sweet!

Beside the brooks that run and slide
Filling with murmur the silent woods,
Whose shades spread far and wide
Overs the gurgling floods,
I have seen thee sit, I’ve heard thee sing,
O thou majestic Musician King!

In all the joys that came to me
And all the woes that I did meet
I have heard thee and I hear thee,
Musician great, Musician sweet!

In the joyous song of birds
In the mute appeal of trees
In the voice of audible herds
In the murmer of the breeze
I’ve seen thee sit, I’ve hard thee sing,
O thou majestic Musician King!

Amidst the hailing loud and free
And midst many a stern defeat
I have heard thee and I hear thee,
Musician great, Musician sweet!
In all my emotions sweet
That brighten the path of life,
In my inmost bosom’s seat,
In this great world’s shifting strife
I’ve seen thee sit, I’vi heared thee sing,
O thou majestic Musician King!
೯-೩-೧೯೨೪

ಮಾರ್ಚಿ ೧೬ನೆಯ ಭಾನುವಾರದ ದಿನಚರಿ:

“ಬೆಳಿಗ್ಗೆ ಪರೀಕ್ಷೆ ಕಾಲದಲ್ಲಿ ರಚಿಸಿದ್ದ ಕೆಲವು ಕವನಗಳನ್ನು ಪುಸ್ತಕಕ್ಕೆ ಬರೆದೆ. ‘Friendship’ ಕವನವನ್ನು ಪೂರ್ತಿಗೊಳಿಸಿದೆ. ಅಪರಾಹ್ನ ‘ಲೋಟಸ್‌ಲೀಫ್ ಯೂನಿಯನ್’ ಆಶ್ರಯದಲ್ಲಿ ‘Life and Its Aim’ ಎಂಬ ವಿಷಯ ಭಾಷಣಮಾಡಿದೆ. ನಾವೆಲ್ಲ ಸೇರಿ ‘ಪದ್ಮಪತ್ರ ಸಂಘ’ದ ಸದಸ್ಯರ ಒಂದು ಗ್ರೂಪ್ ಫೋಟೋ ತೆಗೆಸಬೇಕೆಂದು ನಿಶ್ಚಯಿಸಿ ಚಂದಾ ಎತ್ತಿದೆವು. ಉಳಿದ ಮಿತ್ರರನ್ನೂ ನಾಳೆ ಚಂದಾ ಕೊಡುವಂತೆ ಕೇಳಿ ಕೊಂಡೆವು. ಸಿನಿಮಾಕ್ಕೆ ಹೋದೆವು. ಕಥೆ ಲಾರ್ಡ್‌ಲಿಟ್ಟನ್ ಬರೆದ The Last Days of Pompie (ಪಾಂಪೆಯ ಕೊನೆಯ ದಿನಗಳು.) ಹೇ ದಿವ್ಯಮಾತೆ, ನನ್ನನ್ನು ಮಾನವಕುಲದ ಮತ್ತು ನಿನ್ನ ಸೇವಕನನ್ನಾಗಿ ಮಾಡು. ಸ್ವಾಮಿ ವಿವೇಕಾನಂದ! ಓಂ ತತ್‌ಸತ್‌ಓಂ! ಜಿ.ಎ. ನಟೇಶನ್ ಅಂಡ್ ಕೋಗೆ ಪುಸ್ತಕಗಳಿಗಾಗಿ ಒಂದು ಕಾರ್ಡು ಬರೆದೆವು.”

ಮಾರ್ಚಿ ೧೭ನೆಯ ಸೋಮವಾರದ ದಿನಚರಿ:

“ಬೆಳಿಗ್ಗೆ ಶೆಲ್ಲಿಯ ‘ಯ್ಯಾಡೋನಿ’ ಓದಿದೆ. ಗೋ.ಕೃ.ಶೆಟ್ಟಿ ಬಂದರು. ನಮ್ಮ ಪುನರ್ ಪರೀಕ್ಷೆಯ ಸುದ್ದಿ ಕುರಿತು ಮಾತಾಡಿದೆವು. ಆಮೇಲೆ ಲೈಬ್ರರಿಗೆ ಹೋದೆ. ೧೨ ಗಂಟೆಗೆ ಎಚ್.ಎಸ್.ಶಿವರಾಂ ಬಂದರು. ಸ್ಟುಡಿಯೋಕ್ಕೆ ಹೋಗಿ ಲೋಟಸ್ ಲೀಫ್ ಯೂನಿಯನ್ ಸದಸ್ಯರ ಗ್ರೂಫ್ ಫೋಟೊ ತೆಗೆಸಿಕೊಂಡೆವು. ದುರದೃಷ್ಟವಶಾತ್ ಮಲ್ಲಯ್ಯ, ಕೆ.ಪಿ.ಮಲ್ಲಪ್ಪ ಬರಲಿಲ್ಲ. ಸಿ.ಟಿ.ಶೆಟ್ಟಿ ಹಾಸ್ಟೆಲ್ಲಿಗೆ ಹೋದೆ. ಬಿ.ಎ. ಟೆಕ್‌ಸ್ಟ್‌ನ ಪ್ರಶ್ನೆಪತ್ರಿಕೆ ನೋಡಿದೆ. ನಾನು ಮಲ್ಲಯ್ಯ, ಶಿವರಾಂ ವಾಕ್ ಹೋದೆವು. ಮಹಾಪುರುಷರ ಮತ್ತು ಮಹದಾಲೋಚನೆಯಗಳ ವಿಚಾರ ಮಾತಾಡುತ್ತಾ,”

ಮಾರ್ಚಿ ೧೮ನೆಯ ಮಂಗಳವಾರದ ದಿನಚರಿ:

“ಬೆಳಿಗ್ಗೆ ಪಬ್ಲಿಕ್ ಲೈಬ್ರರಿಗೆ ಹೋದೆ. ಎಚ್.ಬಿ. ನಂಜಯ್ಯ ಅಲ್ಲಿಗೆ ಬಂದರು. ಹಿಸ್ ಹೈನಸ್ ಅಗಾಖಾನರಿಗೆ ಒಂದು ಬಹಿರಂಗಪತ್ರ ಬರೆದಿದ್ದುದನ್ನು ಪತ್ರಿಕೆಗಳಲ್ಲಿ ಓದಿದೆ. ಅವರ ಅನುಯಾಯಿಗಳು ಅವರನ್ನು ಹನ್ನೊಂದನೆಯ ಅವತಾರವೆಂದು ಘೋಷಿಸುತ್ತಾರಂತೆ. ಈ ಕಾಲದಲ್ಲಿಯೂ ಅಂತಹ ಮೂಢಮತಭ್ರಾಂತರೂ ನಕಲಿಯ ನಟವಂಚಕರೂ ಇದ್ದಾರಲ್ಲಾ ಎಂದು ಮನಸ್ಸಿಗೆ ತುಂಬ ವ್ಯಥೆಯಾಯಿತು. ಅಲ್ಲಿಂದ Arts and show Roomಗೆ ಹೋದೆವು. ಜೇಬಿನಲ್ಲಿದ್ದ ದುಡ್ಡಿನಲ್ಲಿ ಬಹುಪಾಲನ್ನು ಖರ್ಚುಮಾಡಿದೆವು. ಅಷ್ಟೇನು ಮೋಹಕವಾಗಿರದಿದ್ದರೂ ಪ್ರಯೋಜನಕಾರಿಯಾಗಿತ್ತು. ಅಂತೂ ಬೆಲೆಯುಳ್ಳ ವಸ್ತುಗಳನ್ನೇನೊ ಕೊಂಡೆವು! ಮಧ್ಯಾಹ್ನ ಇಸ್ಪೀಟು ಆಡಿದೆವು. ಎರಡುಮೂರು ಗಂಟೆ ಆದಮೇಲೆ ಶೆಟ್ಟಿ, ತಮ್ಮಯ್ಯ, ನಾನು ವಾಕ್ ಹೋದೆವು. ತಮ್ಮಯ್ಯ ದೇವರಿಗೆ ಎರಡು ಬಾಳೆಹಣ್ಣು ಅರ್ಪಿಸಲು ದೇವಸ್ಥಾನಕ್ಕೆ ಹೋದರು. ಅದರ ವಿಚಾರವಾಗಿ ಅವರೊಡನೆ ಲೇವಡಿಮಾಡಿದೆವು. ಮೂರ್ತಿಪೂಜೆಯನ್ನು ಕುರಿತು. And in my heart I felt it would have been better for these to know the bliss of idol worship in a more blissful way. (ಮೂರ್ತಿಪೂಜೆಯ ಆನಂದವನ್ನು ಇನ್ನೂ ಹೆಚ್ಚಿನ ಆನಂದದ ರೀತಿಯಲ್ಲಿ ಅರಿಯಲು ಸಮರ್ಥರಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದುಕೊಂಡೆ ಮನಸ್ಸಿನಲ್ಲಿ.) ತುಂಬ ದೂರ ಸಂಚಾರ ಹೋದೆವು. ಹರ್ಷದಾಯಕವಾಗಿತ್ತು. “ದಿವ್ಯಜನನಿ, ನಿನ್ನ ಮಗುವನ್ನು ಮುದ್ದಿಸು” ಓಂ! ಓಂ! ಸ್ವಾಮಿ ವಿವೇಕಾನಂದ-ಪರಮಹಂಸ!”

ಮಾರ್ಚಿ ೧೯ನೆಯ ಬುಧವಾರದ ದಿನಚರಿ:

“ಬೆಳಿಗ್ಗೆ ಗೋ.ಕೃ.ಶೆಟ್ಟಿ ಬಂದರು. ನಾವಿಬ್ಬರೂ ಫಿಸಿಕ್ಸ್ ಲೆಖ್ಖಗಳನ್ನು ಅಭ್ಯಾಸ ಮಾಡಿದೆವು. ಅವರು ಹೋದಮೇಲೆ ರವೀಂದ್ರದ ‘personality’ ಓದಿದೆ. ಅಪರಾಹ್ನ ಮಲ್ಲಯ್ಯನವರ ಹತ್ತಿರ ಮಾತಾಡುತ್ತಿದ್ದಾಗ ಹಠಾತ್ತನೆ ಕೆಲವು ಭಾವನೆಗಳು ಕಾವ್ಯಮಯವಾಗಿ ಬಗೆಗೆ ಬಂದವು: ಗದ್ದೆಗಳು, ತೋಟಗಳು, ಹೂವುಗಳು, ಕೆರೆ ಕೊಳ ತೊರೆಗಳು, ನನಗಾಗಿ ಕಾಯುತ್ತಿರುವ ನನ್ನಮ್ಮ, ನನ್ನ ತಂಗಿಯರು ಮತ್ತು ನನ್ನೊಲುಮೆ ಗೌರಿ ಇತ್ಯಾದಿ. ಆಗ ಒಂದು ಕವನ The Friends of My Native Home, ರಚಿಸಿದೆ. ಕವನ ಮುಗಿಸಿ ಹಗಲುನಿದ್ದೆ ಮಾಡಿದೆ. ತುಂಬಾ ಹೊತ್ತು ಗಾಢನಿದ್ರೆ ಮಾಡಿಬಿಟ್ಟೆ! ರೂಮಿಗೆ ಬಂದ ಶೆಟ್ಟಿ, ನಾನು ಬರೆಯುತ್ತಿದ್ದು ಅಲ್ಲಿಯೆ ಇಟ್ಟಿದ್ದ ಪ್ರಬಂಧವನ್ನೆಲ್ಲ ಓದಿದ್ದೂ ನನಗೆ ತಿಳಿಯಲಿಲ್ಲ. ಆಮೇಲೆ ಶಿವರಾಂ, ಬಸವರಾಜು ಇತರರೂ ಬಂದರು. ನಾವೆಲ್ಲ ಫೋಟೋಗ್ರಾಫರ್ ಬಳಿಗೆ ಹೋದೆವು. ಆಮೇಲೆ ನಾನು ಸಿನಿಮಾಕ್ಕೆ ಹೋದೆ. ವಿಷಯ ಆಫ್ರಿಕದ ಕಾಡುಗಳಲ್ಲಿ ಬೇಟೆಯದಾಗಿತ್ತು. ಆ ದೃಶ್ಯಗಳು ಅದ್ಭುತವಾಗಿದ್ದುವು. ಕಾಡು ಬೆಟ್ಟಗಳು ಮನಮೋಹಕ. ಆ ಕಾಡುಪ್ರಾಣಿಗಳ ಹಿಂಡುಹಿಂಡುಗಳನ್ನೂ ವೈವಿಧ್ಯವನ್ನೂ ನೋಡಿನೋಡಿ ರೋಮಾಂಚಿತನಾದೆ… ನಾಗಪ್ಪ, ರಾಮಚಂದ್ರಭಟ್ಟ ಸಿಕ್ಕಿದ್ದರು. ಕೆ.ಮಲ್ಲಪ್ಪ ಇವೊತ್ತು ಅವರ ಊರಿಗೆ ಹೋದರು (ಅವರು ಆರ್ಟ್ಸ್‌ತೆಗೆದುಕೊಂಡಿದ್ದರಿಂದ ಅವರ ಪರೀಕ್ಷೆ ಮುಗಿದಿತ್ತು. ನಾನು ಸೈನ್ಸ್ ವಿದ್ಯಾರ್ಥಿಯಾಗಿದ್ದೆ. ಸೈನ್ಸ್ ಪೇಪರುಗಳು ಔಟ್ ಆಗಿದ್ದುದರಿಂದ ಪುನರ್ ಪರೀಕ್ಷೆಯಿದ್ದು ನಾವು ಮತ್ತೆ ಪರೀಕ್ಷೆಗೆ ಕೂತುಕೊಳ್ಳಬೇಕಾಗಿ ಊರಿಗೆ ಹೋಗುವುದು ಬಹಳ ತಡವಾಗಿತ್ತು ಆ ವರ್ಷ. ಅದರ ಪರಿಣಾಮವಾಗಿಯೆ, ಮಲೆನಾಡನ್ನೂ, ಮನೆಯವರನ್ನೂ ನೆನೆದು The Friends of Native Home[3] ಹೊರಬಂದದ್ದು.)”

ಮಾರ್ಚಿ ೨೦ನೆಯ ಗುರುವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಗೋ.ಕೃ.ಶೆಟ್ಟಿ ಬಂದರು. ‘ಗೋಲ್ಡನ್ ಟ್ರೆಜರಿ’ಯಿಂದ ಕೆಲವು ಕವನಗಳನ್ನು-‘Milton’s On His Blindness’, ‘Happy Life’, ‘Solitude’, ‘Lycidsa’- ಓದಿ ವಿವರಿಸಿದೆ. ಜಿ.ಎ.ನಟೇಶನ್ ಕಂಪನಿಯಿಂದ ಎಲ್ಲ ಪುಸ್ತಕಗಳೂ ಬಂದುವು. ನನಗಂತೂ ಹಿಗ್ಗೋ ಹಿಗ್ಗು. ಈ ಸಣ್ಣ ವಲಯದಲ್ಲಿ ನನ್ನ ಸ್ವಾಮೀಜಿಯ ಸಂದೇಶ ನನ್ನಿಂದ ಪ್ರಚಾರವಾಗುತ್ತಿರುವುದಕ್ಕಾಗಿ! ನನ್ನಿಂದೇನಾದರೂ ಸಹಾಯವಾಗಿದ್ದರೆ ನನ್ನ ಮಿತ್ರರಿಗೆ ಅದು ಇದರಿಂದಲೆ: ಏನೆಂದರೆ, ಸ್ವಾಮಿ ವಿವೇಕಾನಂದರೆ, ಅವರ ಕೃತಿಗಳ ರೂಪದಲ್ಲಿ ಅವರು ಕೊಂಡುಕೊಳ್ಳುವಂತೆ ಮಾಡಿದ್ದು. ನನ್ನಿಂದೇನಾದರೂ ನೆರವು ಒದಗಿದ್ದರೆ ನನ್ನ ಗೆಳೆಯರಿಗೆ ಅದು ಈ ರೀತಿಯಿಂದಲೇ: ಮಹಾಪುರುಷರನ್ನು ಕುರಿತು, ಮಹದಾಲೋಚನೆಗಳನ್ನು ಕುರಿತು, ಮಹಾದರ್ಶನಗಳನ್ನು ಕುರಿತು, ಮತ್ತೆಮತ್ತೆ ಅವರೊಡನೆ ಮಾತಾಡಿದ್ದು. (I am very glad to see my Swamis’s mission carried out by me in this small circle. If at all have helped my friends in anything it is in this viz, I have tried my best to induce them to buy, as it were, Swami, Vivekananda himself. If all have helped my friends it is this, viz, I have spoken to them often about great men. Great things and great philosophers.) ನನಗೆ ತುಂಬ ಆನಂದವಾಯಿತು, ಎಂ.ತಮ್ಮಯ್ಯ ಬಂದು ನನ್ನ ಗುರುದೇವನ ಅದ್ಭುತ ಭಾಷಣ ‘My Master’ (ನನ್ನ ಗುರುದೇವ) ಅನ್ನು ಓದಿ ವಿವರಿಸಬೇಕೆಂದು ಕೇಳಿಕೊಂಡಾಗ, ಭಾಷಣವನ್ನು ಗಟ್ಟಿಯಾಗಿ ಓದಿದೆ. ತಮ್ಮಯ್ಯ, ಶಿವರಾಂ ಇಬ್ಬರೂ ಉಸಿರುಕಟ್ಟಿಕೊಂಡಂತೆ ಮೌನದಿಂದ ನಿಬ್ಬೆರಗಾಗಿ ಆಲಿಸಿದರು, ಸುತ್ತಲೂ ಇಸ್ಪೀಟು ಆಡುವ ಗೆಳೆಯರ ಬೊಬ್ಬೆಯಬ್ಬರವಿದ್ದರೂ! ಸುಮಾರು ಏಳುಗಂಟೆ ಹೊತ್ತಿಗೆ ಭಾಷಣ ವಾಚನ ಮುಗಿಯಿತು. ತಮ್ಮಯ್ಯ, ಮಲ್ಲಯ್ಯ, ನಾನು ವಾಕ್ ಹೋದೆವು. ಜಯ್ ದಿವ್ಯಮಾತೆ! ಜಯ್ ದಿವ್ಯ ಸೋದರರೆ!”

ಮಾರ್ಚಿ ೨೧ನೆಯ ಶುಕ್ರವಾರದ ದಿನಚರಿ:

‘Where hast thou fled, O Spirit Dear?’ ಎಂಬ ಶೀರ್ಷಿಕೆಯ ಒಂದು ಕವನ ರಚಿಸಿದೆ. ‘‘ಶಂಕರ ಮತ್ತು ಆತನ ದರ್ಶನ’’ (Shankara and His Philosophy) ಓದಿದೆ. ಗೋ.ಕೃ.ಶೆಟ್ಟಿ ಬಂದರು. ಅವರೊಡನೆ ಶಂಕರ, ರಾಮಾನುಜ ಮತ್ತು ಮಾಧ್ವರ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ತತ್ತ್ವಗಳನ್ನು ಕುರಿತು ಮಾತಾಡಿದೆ. ರಾತ್ರಿ ಹತ್ತು ಗಂಟೆಯವರೆಗೂ. ಮಲ್ಲಯ್ಯ ನಮ್ಮ ರೂಮಿನಲ್ಲಿಯೆ ಮಲಗಿದರು. ಭಗವದ್ಗೀತೆಯ ನಾಲ್ಕನೆ ಅಧ್ಯಾಯವನ್ನು ಓದಿ ವ್ಯಾಖ್ಯಾನಿಸಿದೆ. ರಸ್ಕಿನ್‌ನ ‘Pathetic Fallacy’’ ಓದಿದೆ. ರಾತ್ರಿ ಮಲಗುವುದು ಬಹಳ ಹೊತ್ತಾಗಿತ್ತು….

ಆಫ್ರಿಕಾ, ಅಮೆರಿಕಾ ಮೊದಲಾದ ದೇಶಗಳಲ್ಲಿ ಕರಿಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಅತ್ಯಾಚಾರಗಳನ್ನು ಕುರಿತು ಪತ್ರಿಕೆಗಳಲ್ಲಿ ಓದಿ ಮನಸ್ಸು ಕುದಿದು ಬರೆದ ಆ ಕವನ ೨೧ನೆಯ ಶುಕ್ರವಾರದ ದಿನಚರಿಯಲ್ಲಿ ಅದರ ಮೊದಲ ಪಂಕ್ತಿಯಿಂದ ಉಕ್ತವಾಗಿದೆ. ಆದರೆ ಹಸ್ತಪ್ರತಿಯಲ್ಲಿ ಅದರ ಶೀರ್ಷಿಕೆ ‘The Colour Bar’[4] ಎಂದು ವಾಚ್ಯವಾಗಿಯೆ ಲಿಖಿತಗೊಂಡಿದೆ.

ಮಾರ್ಚಿ ೨೨ನೆಯ ಶನಿವಾರದ ದಿನಚರಿ:

“ಇವೊತ್ತು ಬೆಳಿಗ್ಗೆ ಶ್ರೀಯುತ ಎಂ.ಎಚ್.ಕೃಷ್ಣಯ್ಯಂಗಾರ್ ಅವರ ಮನೆಗೆ ಹೋಗಿದ್ದೆ. (ನನ್ನ ಇಂಗ್ಲಿಷ್ ಕವನಗಳನ್ನು ತೋರಿಸಲು.) ಪುನರ್ ಪರೀಕ್ಷೆಗಳು ಪೂರೈಸಿದ ತರುವಾಯ ಬರಲು ಹೇಳಿದರು. ಅವರು ಭರವಸೆ ಕೊಟ್ಟರು, ಆಷ್ಪನಲ್ಸ್ (ಐಚ್ಛಿಕ) ವಿಷಯಗಳಲ್ಲಿ ಮಾತ್ರವೆ ಪರೀಕ್ಷೆ ನಡೆಯುತ್ತದೆ ಎಂದು…. ರಾಮಾನುಜಾಚಾರ್ಯರ ಜೀವನಚರಿತ್ರೆ ಮತ್ತು ದರ್ಶನ ಕುರಿತು ಓದಿದೆ. ಇವೊತ್ತು ಸಂಸ್ಕೃತ ಕಲಿಯಲು ಮನಸ್ಸು ಮಾಡಿದೆ. ಅಲ್ಲದೆ ತಪ್ಪುತಪ್ಪಾಗಿ ಓದಲೂ ಬರೆಯಲೂ ಅಭ್ಯಾಸ ಮಾಡಿಯೂಬಿಟ್ಟೆ. ೫ ಗಂಟೆಯ ಮೇಲೆ ನಾವೆಲ್ಲ ವಾಕ್ ಹೋದೆವು. ಕವಿತೆಯಲ್ಲಿ Rhythm, Rhyme, Bass, Treble, Fall, Rise ಇವುಗಳನ್ನು ಕುರಿತು ನನಗೆ ತಿಳಿದಷ್ಟು ಮಟ್ಟಿಗೆ ಮಿತ್ರರಿಗೆ ವಿವರಿಸಿದೆ.”

ಮಾರ್ಚಿ ೨೩ನೆಯ ಭಾನುವಾರದ ದಿನಚರಿ:

“ಎಚ್.ಎಸ್.ಶಿವರಾಂ ಒಡನೆ ಸಂಸ್ಕೃತ ಅಭ್ಯಾಸ ಮಾಡಿದೆ. ಗೋ.ಕೃ.ಶೆಟ್ಟಿ ಬಂದು ವಿವೇಕಾನಂದರ ಭಾಷಣದ ಕೆಲವು ಭಾಗಗಳನ್ನು ವಿವರಿಸಲು ಹೇಳಿದರು. ವಿವರಿಸುತ್ತಿದ್ದಾಗ ಮಾಂಸ ಭಕ್ಷಣದ ಕೆಲವು ಭಾಗಗಳನ್ನು ವಿವರಿಸಲು ಹೇಳಿದರು. ವಿವರಿಸುತ್ತಿದ್ದಾಗ ಮಾಂಸ ಭಕ್ಷಣದ ವಿಚಾರ ಬಂತು. ಆಗ ಅವರು ‘ಏನು ಸ್ವಾಮಿಗಳು ಮಾಂಸ ತಿನ್ನುವುದರ ಪರವಾಗಿಯೂ ಮಾತನಾಡಿದ್ದಾರೆಯೆ?’ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ‘ಈ ವಿಚಾರದಲ್ಲಿ ಸ್ವಾಮಿಗಳ ಮಸಸ್ಸಿನ ಆಳ ನನಗರಿಯದಾಗಿದೆ. ನಾನೂ ಅದನ್ನು ಸಮರ್ಥಿಸಲಾರೆ. ಅಷ್ಟೆ ಅಲ್ಲ, ಅದಕ್ಕೆ ವಿರುದ್ಧವಾಗಿಯೂ ಹೇಳಿ, ಅದನ್ನು ಖಂಡಿಸಲೂ ಹಿಂಜರಿಯುವುದಿಲ್ಲ’ ಎಂದೆ.* ರಾತ್ರಿ ‘ರಾಮಾನುಜ ಮತ್ತು ಆತನ ದರ್ಶನ’ ಓದಿದೆ. ಭಗವದ್ಗೀತೆಯ ಭಾಗವನ್ನೂ ಓದಿದೆ. ತಾಯಿ, ನಿನ್ನನ್ನು ಆದಷ್ಟು ಶೀಘ್ರ ಅರಿಯಲು ಸಮರ್ಥನಾಗುವಂತೆ ಅನುಗ್ರಹಿಸು! ಓಂ, ಸ್ವಾಮಿ ವಿವೇಕಾನಂದ, ಓಂ!’

ಮಾರ್ಚಿ ೨೪ನೆಯ ಸೋಮವಾರದ ದಿನಚರಿ:

“ದಿನದ ಬಹುಭಾಗವನ್ನು ಸಂಸ್ಕೃತ ಕಲಿಯಲು ಬಳಸಿದೆ. ಇಷ್ಟು ಸ್ವಲ್ಪ ಕಾಲದಲ್ಲಿ ಅಷ್ಟೊಂದು ಕಲಿತ ವೀರಸಾಹಸಕ್ಕಾಗಿ ಜಂಭ ಕೊಚ್ಚಿಕೊಳ್ಳಲೂಬಹುದು! ಈಗೀಗ ಕವಿತೆ ಬರೆಯಲು ಮನಸ್ಸೆ ಆಗುತ್ತಿಲ್ಲ. ಆಗಾಗ ಕಾವ್ಯಾವೇಶದ ಬಿರುಬು ತಲೆ ಹಾಕಿದರೂ! ಅದಕ್ಕೆ ಕಾರಣ, ನಾನು ಊಹಿಸುವಂತೆ, ನನ್ನ ಬುದ್ಧಿ ಮತ್ತು ಕಲ್ಪನೆ ಅನೇಕ ವಿಷಯಗಳಿಂದ ತುಂಬಿಹೋಗಿರುವುದೆ: ಸಂಸ್ಕೃತಾಭ್ಯಾಸ, ತತ್ತ್ವಶಾಸ್ತ್ರಗಳ ಅಧ್ಯಯನ, ಶಂಕರ-ರಾಮಾನುಜಾದಿ ದಾರ್ಶನಿಕ ಜೀವನಚರಿತ್ರೆಗಳ ಓದುವಿಕೆ ಇತ್ಯಾದಿ… ಸಂಜೆ ನಾವು ವಾಕ್ ಹೋದೆವು. ದಾರಿಯಲ್ಲಿ ನನ್ನ ಕಾಲಿಗೆ ಗಾಯವಾಯಿತು. ರಾತ್ರಿ ರಾಮಾನುಜರ ತತ್ತ್ವಗಳನ್ನು ಕುರಿತು ಓದಿದೆ. ವೀರಪ್ಪನ ಅಣ್ಣ ಬಂದರು. ವೀರಪ್ಪ ತಮಗಾಗಿ ನನ್ನ ಕವನಗಳನ್ನು ಪ್ರತಿಯೆತ್ತಿಕೊಂಡರು. ದಿವ್ಯಮಾತೆ, ನಿನ್ನನ್ನು ಬೇಗ ಪಡೆಯುವಂತಾಗಲಿ ಓಂ ಓಂ.!”

ಮಾರ್ಚಿ ೨೫ನೆಯ ಮಂಗಳವಾರದ ದಿನಚರಿ:

“ಒಂದು ಕವನ ರಚಸಿದೆ. ಅದರ ಶೀರ್ಷಿಕೆ ‘The Poet’. ಅದರ ಪ್ರಾರಂಭದ ಪಂಕ್ತಿಗಳನ್ನು ಕೆಲದಿನಗಳ ಹಿಂದೆಯೆ ಆಲೋಚಿಸಿದ್ದೆ. ಆದರೆ ಮುಗಿಸಲಾಗಿರಲಿಲ್ಲ. ಆದರೆ ಇವೊತ್ತು ಹಠಾತ್ತನೆ ಅತ್ಯಂತ ಸಮರ್ಥವಾಗಿ ಅದನ್ನು ಪೂರೈಸಿದೆ. ಬಸವರಾಜು ನನ್ನ ಅನೇಕ ಕವನಗಳನ್ನು ಓದಿದರು. ವೀರಪ್ಪ ತಮ್ಮ ಪುಸ್ತಕಕ್ಕೆ ಬರೆದುಕೊಂಡರು. ಸ್ವಲ್ಪ ಸಂಸ್ಕೃತ ಓದಿದೆ. ಮಧ್ಯಾಹ್ನ ಎಚ್.ಎಸ್. ಶಿವರಾಂ ಬಂದರು. ನಾವು ಎರಡನೆ ಪಾಠ ಅಧ್ಯಯನ ಮಾಡಿದೆವು, ಸಂಸ್ಕೃತದ್ದು. ಆಮೇಲೆ ಗೋ.ಕೃ.ಶೆಟ್ಟಿ, ಸಿ.ಟಿ.ಶೆಟ್ಟಿ, ಎಂ.ತಮ್ಮಯ್ಯ ಬಂದರು. ಎಲ್ಲರೂ ವಾಕ್ ಹೋದೆವು. ಹರ್ಷದಾಯಕವಾಗಿತ್ತು. ಸ್ಫೂರ್ತಿದಾಯಕವೂ ಆಗಿತ್ತು. ಎಂ.ತಮ್ಮಯ್ಯನ ಚೇಷ್ಟೆಯಿಂದ ನನ್ನ ಕಾಲಿನ ಗಾಯಕ್ಕೆ ಪೆಟ್ಟಾಯಿತು. ಗಟ್ಟಿಯಾಗಿ ಮಾತಾಡುತ್ತಾ ಹರಟುತ್ತಾ ಒದರುತ್ತಾ ಕೇಕೇಹಾಕುತ್ತಾ ಏಳು ಗಂಟೆಯ ಹೊತ್ತಿಗೆ ಹಿಂತಿರುಗಿದೆವು. ರಾತ್ರಿ ಹನ್ನೆರಡೂವರೆ ಗಂಟೆಯವರೆಗೆ ‘ರಾಮಾನುಜ ಮತ್ತು ವೈಷ್ಣವ ಮತ’ ಓದಿದೆ. ನಿದ್ದೆಯೆ ಬರಲಿಲ್ಲ.”

ಮೇಲಿನ ದಿನಚರಿಯಲ್ಲಿ ಉಕ್ತವಾಗಿರುವ The poet ಕವನ ಅದೊಂದು ಸಾನೆಟ್. ಅದರ ಮೊದಲ ನಾಲ್ಕು ಪಂಕ್ತಿಗಳು ಈ ಹಿಂದೆಯೆ ಮಾರ್ಚಿ ೬ನೆಯ ಗುರುವಾರದ ದಿನಚರಿಯಲ್ಲಿ ಲಿಖಿತವಾಗಿದೆ. ಆದರೆ ಅವು ಇಲ್ಲಿ ಬದಲಾವಣೆಗೊಂಡಿರುವುದನ್ನು ಕಾಣುತ್ತೇವೆ. ಅಷ್ಟೇನೂ ಉತ್ತಮತರವಾಗಲಿಕ್ಕಲ್ಲ!

A poet-less land is like a moon-less night;
Unheard, unseen, unfelt its splendor  lies
A havoc mild! Unsung its glory dies;
A garden blooming with a vocal blight!
Great kings may rule and men of martial might
May stun the earth with their victorious cries,
But all their pomp decaying Lethe-ward flies,
Like flooded streams subside upon the height!
A poet’s voice the clamour doth retain
For ages death-less. O! it penetrates
The heights uncrossed and sweeps the sleep-less deep;
It swallows time and space; shows joy in pain;
Consoles the hearts on islands wreck’d; creates
A strength to smile before a head-less heep.

ಮಾರ್ಚಿ ೨೬ನೆಯ ಬುಧವಾರ ದಿನಚರಿ:

“ರಾತ್ರಿಯೆಲ್ಲ ಸರಿಯಾಗಿ ನಿದ್ದೆ ಬರಲಿಲ್ಲ. ದ್ವೈತ ಅದ್ವೈತದ ಆಲೋಚನೆ ಮೆದುಳಿಗೆ ತುಂಬ ಕಿರಿಕಿರಿ ಉಂಟುಮಾಡಿತ್ತು. ಕೊನೆಯಲ್ಲಿ ನಾನು ನನ್ನದೇ ಒಂದು ನಿರ್ಣಯಕ್ಕೆ ಬಂದೆ. ಆ ಪರಬ್ರಹ್ಮವನ್ನೆ ತಾಯಿ ಎಂದು ಭಾವಿಸುವುದು ಉತ್ತಮ. ಏಕೆಂದರೆ, ತಾಯಿಯ ಜೊತೆ ನಾವು ಬಿಚ್ಚುಮನಸ್ಸಿನಿಂದ ನಿರ್ದಾಕ್ಷಿಣ್ಯವಾಗಿ ಇರಬಹುದು, ನಿರ್ಭೀತರಾಗಿಯೂ! ಅಲ್ಲದೆ ಭೂಮಾಹೃದಯಿಯಾದ mighty hearted ಶಂಕರರಂತೆ ಏಕತ್ವವನ್ನೂ ಅನುಭಾವಿಸಬಹುದು. ಶಂಕರರೇನೊ ಮಹೋನ್ನತ ಭವ್ಯ (majestic) ರಾಗಿದ್ದಾರೆ; ಆದರೆ ಸಾಮಾನ್ಯಬುದ್ಧಿಗೆ ಅಮೇಯರಾಗಿದ್ದಾರೆ. ಇವೊತ್ತು ಬೈಬಲ್ಲನ್ನೂ ಓದಿದೆ: ಸಂತ ಮಾರ್ಕ್ ಮತ್ತು ಸಂತ ಜಾನ್ ನನಗೆ ಮತ್ತೊಮ್ಮೆ ಅನುಭವವಾಯ್ತು ಯೇಸುಕ್ರಿಸ್ತನಲ್ಲಿಯೂ ನನ್ನ ಶ್ರೀಕೃಷ್ಣನನ್ನೆ ಕಂಡಂತೆ, ಯೇಸುವಿನ ಬೋಧೆ ಭಗವದ್ಗೀತೆಯ ಬೋಧೆಗೇನು ಕಡಮೆಯದಲ್ಲ. ರಾತ್ರಿ ರಾಜಶೇಖರ ವಿಲಾಸ ಓದಿದೆವು….”

ಮಾರ್ಚಿ ೨೭ನೆಯ ಗುರುವಾರದ ದಿನಚರಿ:

“Three Acharys” (ಮೂವರು ಆಚಾರ್ಯರು) ಸ್ವಲ್ಪ ಓದಿದೆ. ಪಿ.ಮಲ್ಲಯ್ಯ, ಎಚ್.ಎಮ್.ಪುಪ್ಪಣ್ಣ ಬೇಸಿಗೆ ರಜಾಕ್ಕೆ ಅವರವರ ಊರುಗಳಿಗೆ ಹೋದರು. ಮಧ್ಯಾಹ್ನ ಎಚ್.ಎಸ್.ಶಿವಾರಾಂ ಬಂದರು; ಸಂಸ್ಕೃತ ಓದಿದೆವು. ಗೋ.ಕೃ.ಶೆಟ್ಟಿ, ಎಂ.ತಮ್ಮಯ್ಯ, ಎಸ್‌.ವಿ. ಮತ್ತು ನಾನು ಕುಕ್ಕನಹಳ್ಳಿ ಕೆರೆಯ ಕಡೆಗೆ ವಾಕ್ ಹೋದೆವು. ದಾರಿಯಲ್ಲಿ ಒಂದು ಚರ್ಚೆ ಪ್ರಾರಂಭವಾಗಿ, ನಾನು ಮಾಂಸಭಕ್ಷಣವನ್ನೇನೊ ಖಂಡಿಸಿದೆ: ಆದರೆ ಮೊಟ್ಟೆ ತಿನ್ನುವುದರ ವಿಚಾರವಾಗಿ ತುಸು ಸಡಿಲವಾಗಿದ್ದೆ. ಚರ್ಚೆ ಕೊನೆಕೊನೆಗೆ ಹೃದಯದ ವಸ್ತುವಾಗುವುದಕ್ಕೆ ಬದಲಾಗಿ ಮೆದುಳಿನ ವಿಷಯವಾಗಿ ಬಿಟ್ಟಿತು. ರಾತ್ರಿ ಮಾಧ್ವ ಸಿದ್ಧಾಂತವನ್ನೂ ಮತ್ತು ಭಗದ್ಗೀತೆಯನ್ನೂ ಓದಿದೆ.”

ಮಾರ್ಚಿ ೨೮ನೆಯ ಶುಕ್ರವಾರದ ದಿನಚರಿ:

“ಹೇ ದಿವ್ಯಜನನಿ, ನಿನ್ನ ಕಂದನನ್ನು ಕ್ಷಮಿಸು: ಬದುಕಿನಲ್ಲಿ ತಾರುಣ್ಯ ಯೌವನಗಳ ಬಿಸುಪಿನಲ್ಲಿ ಶಿಶು ಹೆಜ್ಜೆ ತಪ್ಪುತ್ತದೆ. ರಾತ್ರಿ ಹಾಸುಗೆಯಲ್ಲಿ ಮಲಗಿದ್ದಾಗಲೆ ‘Golden Dreams’ ಎಂಬ ಕವನದ ಸ್ವಲ್ಪ ಭಾಗ ರಚಿಸಿದೆ. ಅದಾದ ತರುವಾಯವೆ ‘The Divine Love’ ಎಂಬ ಕವನವನ್ನು ಭಾವಪೂರ್ವಕವಾಗಿ ಹೃದಯದಲ್ಲಿ ಆವೇಶ ತುಂಬಿತುಳುಕಿ ರಚಿಸಿದೆ. Gospel of St. John (ಸಂತ ಯೋಹಾನನ ಸತ್ಯವೇದ) ಅನ್ನು ಭಗದ್ಗೀತೆಯ ಮಹೋನ್ನತ ಬೋಧೆಗಳೊಡನೆ ಹೋಲಿಸಿ ಅಧ್ಯಯನ ಮಾಡಿದೆ. ಆಮೇಲೆ ಗಣಿತದಲ್ಲಿ ಕೆಲವು ಲೆಖ್ಖಗಳನ್ನು ಅಭ್ಯಾಸ ಮಾಡಿದೆವು. ೬.೩೦ಕ್ಕೆ ವಾಕ್ ಹೋಗಿ ೭.೩೦ಕ್ಕೆ ಹಿಂತಿರುಗಿದೆವು. ರಾತ್ರಿ ಬೃಹತ್ ಸ್ತೋತ್ರ ರತ್ನಾಕರದಲ್ಲಿ ಕೆಲವು ಸ್ತೋತ್ರಗಳನ್ನು ಓದಿದೆ. ಓಂ ತತ್ ಸತ್‌ಓಂ!”

ಮೇಲಿನ ದಿನಚರಿಯಲ್ಲಿ ಹೆಸರಿಸಿದ ಕವನಗಳೆರಡೂ ಸಾನೆಟ್ಟುಗಳಾಗಿವೆ. ಅವುಗಳನ್ನಿಲ್ಲಿ ಕೊಡಲಾಗಿದೆ. ಮೊದಲು ‘Golden Dreams’ (ಹೊಂಗನಸುಗಳು). ಎರಡನೆಯದು ‘Divine Love’ (ಭಗವತ್ ಪ್ರೇಮ).

Our dreams are golden dreams; our hopes are flowers
Of glorious Spring, that flutter in the breeze
Of  Faith. As days are spent desires increase:
Vague phantoms of the solitary hours!
We lay waste our imaginary powers
In vain pursuit of pleasures that ne’er please;
Beginning with birth they end with decease,
While we behind us leave our blasted flowers.
The glimpse of truth doth flash before the eye
Like the pure splendor of our Heavenly King,
When on the death-bed we forlorn shall lie,
And pray with sincere heart. All joys betray!
And none, save strength of Truth, shall come to sing
About the Love divine, and make us gay.
೨೮-೩-೧೯೨೪

O, speak not of grim Hell, Moralist weak,
Of ghastly shapes and tormenting fires;
It’s not the way to build the heavenly spires,
For fear-gained heaven is barren, dull and bleak.
O, flood the souls with strength supreme, and speak
Of  Love Divine; for Love, not fear. Inspires
The heart! Strength, strength the feeble heart requires;
And power is born of Love: Make no heart weak!
O Sinner blackst, worst, fear not! The love
Of heaven is far above the curse of man;
Take heart; our Mother’s Love on thee shall shine.
Despair not, Brother, for thou art above
The sway of hell or heaven! O these began
With weaklings who know not the Love Divine!
೨೮-೩-೧೯೨೪

 


[1] ಈ ಕವನ ಹಸ್ತಪ್ರತಿಗೆ ೧೬.೩.೧೯೨೪ರಲ್ಲಿ ದಾಖಲಾಗಿದೆ.

[2] Friendship ಎಂಬ ಕವನವನ್ನು ಈ ಹಿಂದೆ ಕೊಟ್ಟಿದೆ. ಬಹುಶಃ ಮತ್ತೊಂದು ಕವನ ‘The Musician and the Listener’ ಇರಬೇಕು. ಮಾರ್ಚಿ ೯ನೆಯ ದಿನಚರಿಯಲ್ಲಿ ಉಕ್ತವಾಗಿರುವ ‘I’ve heared thee. I hear thee’ ಎಂಬ ಪಂಕ್ತಿ ಆ ಕವನದಲ್ಲಿ ಬರುತ್ತದೆ. ಆದ್ದರಿಂದ ಆ ಪದ್ಯವನ್ನು ಇಲ್ಲಿಯೆ ಕೊಡಲಾಗುತ್ತದೆ.

[3] Alien Harp. Pp ೫೮-೫೯ (‘ಮುಂದೆ ಕನ್ನಡದಲ್ಲಿ ಸುವ್ಯಕ್ತವಾದ ಕವಿಯ ಪ್ರಕೃತಿ ಪ್ರೇಮವನ್ನೂ ಮತ್ತು ಮಲೆನಾಡಿನ ಪರ್ವತಾರಣ್ಯ ಮೃಗಪಕ್ಷಿ ಸಂಕುಲದ ವೈಭವದ ಪರವಾದ ತೃಷೆಯನ್ನೂ ಮುನ್ಸೂಚಿಸುತ್ತದೆ ಆ ಕವನ. ಛಂದಸ್ಸಿನ ದೃಷ್ಟಿಯಿಂದ ಅಲ್ಲಿ ಎರಡು ಲಘು ಒಂದು ಗುರು (UU-) ಇರುವ ಗಣದ ಪ್ರಯೋಗ ವಿಶೇಷವಾಗಿರುವುದನ್ನೂ ಗಮನಿಸಬಹುದು. ಪ್ರಾಸನೀಯಮ: ab ab cc dd.

[4] Alien Harp. P 62

ಮಾಂಸಭಕ್ಷಣದ ವಿಚಾರವಾಗಿ ಆಗ ನನಗಿದ್ದ ಸಂಕುಚಿತ ಮತಮೂಢ ಸಂಪ್ರದಾಯಬುದ್ಧಿ ಇಲ್ಲಿ ಪ್ರತಿಫಲವಾಗಿದೆ. ಆಗ ನನಗೆ ವೇದಕಾಲದ ಋಷಿ ಮಹರ್ಷಿಗಳೂ ರಾಮಾಯಣ ಮಹಾಭಾರತದ ಆರಾಧನೀಯ ವೀರರೂ ಗೋಮಾಂಸ ಆದಿಯಾಗಿ ಎಲ್ಲವನ್ನೂ ತಿನ್ನುತ್ತಿದ್ದರೆಂದಾಗಲಿ, ಭಾರತೀಯರಲ್ಲದ ಇತರ ದೇಶಗಳ ಮಹಾಸಂತರೂ ಮಹಾಸಾಹಿತಿಗಳೂ ಮಹಾ ದಾರ್ಶನಿಕರೂ ಎಲ್ಲರೂ ಸರ್ವಮಾಂಸ ಭಕ್ಷಕರಾಗಿದ್ದ ವಿಚಾರವಾಗಲಿ ತಿಳಿದಿರಲಿಲ್ಲ. ಐರೋಪ್ಯಾದಿ ಪಾಶ್ಚಾತ್ಯರೂ ಮಧ್ಯಪ್ರಾಚ್ಯದ ಮುಸಲ್ಮಾನರೂ ಆಧ್ಯಾತ್ಮಿಕ ವ್ಯಕ್ತಿಗಳು ಲೌಕಿಕರು ಎಂಬ ಭೇದವಿಲ್ಲದೆ ಎಲ್ಲರೂ ದನ ಕುರಿ ಕೋಳಿ ಮೀನು ಎಲ್ಲವನ್ನೂ ಅಕ್ಕಿ, ಗೋಧಿ ಜೋಳ ರಾಗಿಗಳನ್ನು ತಿನ್ನುವಂತೆ ಯಾವ ಧರ್ಮಸಂಕಟಕ್ಕೂ ಒಳಗಾಗದೆ ಭಜಿಸುತ್ತಿದ್ದ ಸಂಗತಿ ನನಗೆ ಸುಮಾರಾಗಿ ಸಾಮಾನ್ಯವಾಗಿ ತಿಳಿದಿದ್ದರೂ ಅದು ಈ ಸಮಸ್ಯೆಯ ಜಿಜ್ಞಾಸೆಗೆ ಒಳಗಾಗುವಷ್ಟು ಮಂಥನ ವಸ್ತುವಾಗಿರಲಿಲ್ಲ. ಮಾಂಸ ತಿನ್ನದಿರುವಿಕೆಯೆ ದೊಡ್ಡ ಆಧ್ಯಾತ್ಮಿಕ ಲಕ್ಷಣ ಎಂದು ನಾನೂ ಇತರ ಮೂರ್ಖರಂತೆ ಭಾವಿಸುತ್ತಿದ್ದ ಕಾಲವಾಗಿತ್ತು ಅದು.