ಮಾರ್ಚಿ ೨೯ನೆಯ ಶನಿವಾರದ ದಿನಚರಿ:

“ಬೆಳಿಗ್ಗೆ ಭಗವದ್ಗೀತೆ ಮತ್ತು ಉಪನಿಷತ್ತುಗಳನ್ನು ಓದಿದೆ. ಮಧ್ಯಾಹ್ನ ಸಂಸ್ಕೃತ ಅಭ್ಯಾಸ ಮಾಡಿದೆ. ಸಂಜೆ ಮಿತ್ರರೊಡನೆ ಚಾಮುಂಡಿಬೆಟ್ಟದ ಬುಡದಲ್ಲಿರುವ ಮಾವಿನ ತೋಪಿನೆಡೆಗೆ ವಾಕ್‌ಹೋದೆ. ಮಲ್ಲಪ್ಪನೂ ನಮ್ಮ ಜೊತೆ ಇದ್ದರು. ದಾರಿಯಲ್ಲಿ ಮುಳುಗುತ್ತಿರುವ ಸೂರ್ಯನ ಮನೋಹರತೆಯನ್ನು ಸವಿಯಲು ಸ್ವಲ್ಪ ಹೊತ್ತು ನಿಂತಿದ್ದೆವು. ಅಗಲೆ ಒಂದು ಕವನದ ಪ್ರಥಮ ಪಂಕ್ತಿ ಸೃಷ್ಟಿಯಾಯಿತು. ‘Behold the cloudcrossed crimson sun, And the ray-built milky way!’. ರೂಮಿಗೆ ಹಿಂತಿರುಗಿದ ಮೇಲೆ ವಿ. ನಾಗಪ್ಪ ಮತ್ತು ರಾಮಚಂದ್ರರಾವ್ ಅವರಿಂದ ಸದ್ಯದ ಶೃಂಗೇರಿ ಜಗದ್ಗುರುವಿನ ವಿಚಾರವಾಗಿ ಕೆಲವು ಸಂಗತಿಗಳನ್ನು ತಿಳಿದುಕೊಂಡೆ. ಮಾತು ಆದಿಶಂಕರಾಚಾರ್ಯರತ್ತ ಹೋಯಿತು. ಸುಮಾರು ಮೂರು ಗಂಟೆಗಳ ಕಾಲ ತತ್ತ್ವಶಾಸ್ತ್ರ, ವಿವೇಕಾನಂದ, ಪರಮಹಂಸ ಮತ್ತು ಇತರ ವಿಭೂತಿಗಳನ್ನು ಕುರಿತು ಮಾತಾಡಿದೆ. ರಾತ್ರಿ ೧೦ ಗಂಟೆಗೆ ಅವರು ಬೀಳುಕೊಂಡರು. ನಾನು ಕೆಳಗೆ ಹೋಗಿ ಊಟ ಮುಗಿಸಿದೆ.”

ಮೇಲೆ ಹೇಳಿದ ಕವನ ‘The Evening West’[1] (೨೯.೩.೧೯೨೪) ಎಂಬ ಶೀರ್ಷಿಕೆಯಲ್ಲಿ ಹಸ್ತಪ್ರತಿಯಲ್ಲಿ ಬರೆಯಲ್ಪಟ್ಟಿದೆ. ಈ ಕವನ ವರ್ಣಿಸುವ ಸುರಸುಂದರ ದೃಶ್ಯ ನಿಜವಾಗಿಯೂ ಚೇತೋಹಾರಿಯಾಗಿತ್ತು. ಅತ್ಯದ್ಭುತವಾಗಿತ್ತು. ಅದರ ದೂರಸ್ಮೃತಿ ಅಸ್ಪಷ್ಟವಾಗಿಯಾದರೂ ಈಗಲೂ ಮೂಡುವಂತಿದೆ ಒಳಗಣ್ಣಿಗೆ. ಅಂದು ಆದ ಆ ಸಾಕ್ಷಾತ್ಕಾರಕ್ಕೆ ತಕ್ಕಮಟ್ಟಿಗೆ ಸಮರ್ಥವೂ ಸುಂದರವೂ ಆದ ಅಭಿವ್ಯಕ್ತಿಯನ್ನು ನೀಡುತ್ತದೆ ಈ ಕವನ.

ಮಾರ್ಚಿ ೩೦ನೆಯ ಭಾನುವಾರದ ದಿನಚರಿ:

“ಇವೊತ್ತು ನನ್ನ ಮನಸ್ಸೆಲ್ಲ ಕೆಟ್ಟು ಹೋಗಿತ್ತು, ಹೊಟ್ಟೆಯ ಎಡಭಾಗದಲ್ಲಿ ಎದ್ದ ಕುರುವಿನ ದೆಸೆಯಿಂದಲೂ ಮತ್ತು ಕಿವಿಯ ತೊಂದರೆಯಿಂದಲೂ. ಆದರೂ ಆ ದೈಹಿಕ ಯಾತನೆಗಳನ್ನು ಇಕ್ಕಿಮೆಟ್ಟುವ ಒಂದು ದಿವ್ಯಾನಂದದ ಅನುಭವವೂ ಆಗುತ್ತಲೆ ಇತ್ತು. ಏಕೆಂದರೆ, ಈ ಯಾತನೆಯನ್ನು ಅನುಭವಿಸುತ್ತಾ ನಾನೊಬ್ಬನೇ ಇದ್ದರೂ ಆನಂದಮಯರಾದ ನನ್ನ ಆರಾಧನೆಯ ಮಹಾಪುರುಷರು ನನಗೆ ಸಾಂತ್ವಾನವೀಯುತ್ತಿದ್ದರು; ಅಲ್ಲದೆ ನನ್ನ ಆತ್ಮವೂ ಆಧ್ಯಾತ್ಮಿಕ ಆನಂದವೂ ದೈಹಿಕ ಯಾತನೆಯನ್ನು ಅಳಿಸಿಹಾಕುತ್ತದೆ ಎಂಬುದನ್ನು ಕಂಡುಕೊಂಡಿತು. ರವೀಂದ್ರನಾಥರ ‘Personality’ ಓದಿದೆ. ಈ ಯಾತನೆಯ ಮಧ್ಯೆಯೂ ಸ್ಫೂರ್ತಿಗೊಂಡು ನಿನ್ನೆ ಚಾಮುಂಡಿಬೆಟ್ಟದ ಬುಡದ ಮಾವಿನ ತೋಪಿನಡೆ ಪ್ರಾರಂಭಮಾಡಿದ್ದ ‘The Evening West’ (ಪಶ್ಚಿಮ ಸಂಧ್ಯಾ) ಎಂಬ ಕವನವನ್ನು ಹೊರಹೊಮ್ಮಿದೆ. ರಾತ್ರಿ ಭಾರೀ ಮಳೆ ಸುರಿಯಿತು. ಗುಡುಗು ಆಕಾಶದಲ್ಲಿ ಉರುಳಿತು; ಮಿಂಚು ಬೆಳ್ಳಿಗೆರೆಗಳಲ್ಲಿ ಚಲಿಸಿ ಥಳಥಳಿಸಿತು. ನಾನೆಂದುಕೊಂಡೆ ‘ತಾಯಿ ನನ್ನನ್ನು ನಲಿಸುತ್ತಿದ್ದಾಳೆ. ಇದೆಲ್ಲ ನನ್ನನ್ನು ಸಂತೋಷಪಡಿಸಲು ಹೂಡಿದ ಅವಳ ಆಟ.’ ರಾತ್ರಿ ನನ್ನ ದಿವ್ಯಮಾತೆಯನ್ನು ಕುರಿತು ನೆನೆಯುತ್ತಿದ್ದೆ; ಕೃಷ್ಣನನ್ನೂ ಮತ್ತು ಇತರ ದಿವ್ಯ ಸಹೋದರರನ್ನೂ! ಅಂತಸ್ಸುಖದಿಂದ ಮನದಲ್ಲಿಯೆ ಮುಗುಳುನಕ್ಕೆ.”

ಮಾರ್ಚಿ ೩೧ರ ಸೋಮವಾರದ ದಿನಚರಿ:

“ಬೆಳಗಾಯಿತು. ಮಂಕುಮನಸ್ಸಿನಿಂದಲೆ ರೂಮನ್ನು ಶುಚಿಗೊಳಿಸಿದೆವು. ಕರುವಿನ ದೆಸೆಯಿಂದ ಮನಸ್ಸಿನ್ನೂ ಅಪ್ರಸನ್ನಸ್ಥಿತಿಯಲ್ಲಿಯೆ ಇತ್ತು. ಸಿ.ಟಿ.ಶೆಟ್ಟಿ ಮತ್ತು ಎಚ್‌.ಎಸ್‌.ಶಿವರಾಂ ಬಂದರು. ಆಸ್ಪತ್ರೆಗೆ ಹೋದೆವು. ಶೆಟ್ಟಿ ಹಾಸ್ಯಪ್ರವೃತ್ತಿಯವನಾಗಿ ನನ್ನನ್ನು ಲೇವಡಿಮಾಡುವಂತೆ ನಟಿಸುತ್ತಿದ್ದರೂ ಆತನ ಹೃದಯ ತುಂಬ ಸರಳ, ಸ್ನೇಹಮಯ. ಅವನ ಕಪ್ಪು ಬಣ್ಣ ಮತ್ತು ಉಲ್ಲಾಸದ ಭಂಗಿ ಸ್ನೇಹಿತರಿಗೆಲ್ಲ ಸಂತೋಷದಾಯಕವಾಗಿರುತ್ತದೆ. ಆತನ ಸಾನಿಧ್ಯವೇ ಸಾಕು ಎಂತಹ ಮಂಕು ಕವಿದಿದ್ದರೂ ಅದನ್ನು ಓಡಿಸುವುದಕ್ಕೆ. ಅಪರಾಹ್ನ ನಾಲ್ಕು ಗಂಟೆಗೆ ಸಿ.ಟಿ.ಶೆಟ್ಟಿಯ ರೂಮಿಗೆ ಹೋದೆವು. ಅಲ್ಲಿ ಒಂದು ಚರ್ಚೆ ಪ್ರಾರಂಭವಾಯಿತು, ಪಿತೃಗಳು ಮತ್ತು ಪಿತೃಪಿಂಡದ ವಿಚಾರವಾಗಿ. ಜನರಿಗೆ ‘ಮನುಷ್ಯರು ಸತ್ತಮೇಲೆಯೂ ಇರುತ್ತಾರೆ’ ಎಂಬ ಅಮೃತತ್ವವನ್ನು ಬುದ್ಧಿ ಜಾಗ್ರತವನ್ನಾಗಿ ಮಾಡುವುದಕ್ಕಾಗಿ ಪಿತೃ ಪಿಂಡಾರ್ಪಣೆಯ ಕ್ರಿಯಾಚರಣೆಯನ್ನು ತಂದಿದ್ದಾರೆ ಎಂಬ ಅಭಿಪ್ರಾಯವನ್ನು ಶ್ರೀ ಶಿವರಾಂ ವ್ಯಕ್ತಿಗೊಳಿಸಲು, ನಾನು ‘ಹಾಗಿದ್ದ ಪಕ್ಷದಲ್ಲಿ ಅಮೃತತ್ವದ ಅರಿವು ಹುಟ್ಟಿದ್ದ ಮೇಲೆಯೂ ಜನರು ಆ ಪಿಂಡಪ್ರದಾನ ಕ್ರಿಯೆಯನ್ನು ಮುಂದುವರಿಸುವುದು ಮೂಢತನವಾಗುತ್ತದೆ. ಏಕೆಂದರೆ, ಮನುಷ್ಯನ ಪ್ರಜ್ಞೆ ಮೇಲಿನ ಸ್ತರಕ್ಕೆ ಏರಿದಂತೆಲ್ಲ ಅವನ ಆರಾಧನಾ ವಿಧಾನವೂ ಅವಶ್ಯವಾಗಿ ಬದಲಾಗುತ್ತದೆ.’ ಎಂದು ನನ್ನ ಅಭಿಪ್ರಾಯ ಸೂಚಿಸಿದೆ. ಆಮೇಲೆ ನನ್ನ ರಾಷ್ಟ್ರಕವಿ (Poet Laureate)ಯಾದ ಲಕ್ಷ್ಮೀಶನ ಜೈಮಿನಿ ಭಾರತದಿಂದ ಅತ್ಯಂತ ಸುಂದರವೂ ಭವ್ಯವೂ ಆಗಿರುವ ಕಾವ್ಯಭಾಗಗಳನ್ನು ಪಠಿಸಿದೆವು. ಅಲ್ಲಿಂದ ಯೂನಿವರ್ಸಿಟಿ ಆಫೀಸಿಗೆ ಹೋಗಿ ನೋಟೀಸು ಬೋರ್ಡನ್ನು ಓದಿದೆವು. ಆದರೆ ಆ ನೋಟೀಸಿನ ಒಕ್ಕಣೆ ಸ್ಟೀಲ್ ಮಹಾಶಯನ Postman or lchobald Dock’s Letterನಷ್ಟೆ ಅನರ್ಥಪೂರ್ಣವಾಗಿತ್ತು. ಅಲ್ಲಿಂದ ರೂಮಿಗೆ ಬಂದು ಈ ದಿನಚರಿ ಬರೆಯುತ್ತಿರುವಾಗಲೆ ಗೋ.ಕೃ.ಶೆಟ್ಟರೂ ಬಂದರು. ನರಸಿಂಹಭಾರತಿ ಪ್ರತಿಮೆ ನೋಡಲು ಕರೆದರು. ಅಲ್ಲಿಗೆ ಹೋದೆವು, ದಾರಿಯಲ್ಲಿ ಏನೇನೂ ತಿನಿಸುಗಳನ್ನು ಜಗಿಯುತ್ತಾ, ಮಠಗಳೆಂಬ ಈ ಸೋಮಾರಿಗಳ ಕೇಂದ್ರಗಳು ಹೆಚ್ಚುತ್ತಿರುವ ಬಗ್ಗೆ ಮಾತಾಡುತ್ತಾ. ಓ ಶಂಕರಾ, ನಿನ್ನ ಅನುಯಾಯಿಗಳೆಂಬುವವರು ಏನು ಮಾಡುತ್ತಿದ್ದಾರೆ? ನಿನ್ನ ಅದ್ವೈತವನ್ನಷ್ಟು ಅವರಿಗೆ ಕಲಿಸಬಾರದೇ?”

ಏಪ್ರಿಲ್ ೧ನೆಯ ಮಂಗಳವಾರದ ದಿನಚರಿ:

“ಬೆಳಿಗ್ಗೆ ನಾನು ಗೋ.ಕೃ.ಶೆಟ್ಟಿ ಸ್ಟೂಡಿಯೋಗೆ ಹೋದೆವು. ಅಲ್ಲಿಂದ ಬಿ.ಅನಂತರಾಮಯ್ಯನ ರೂಮಿಗೆ. ಅನಂತರಾಮಯ್ಯ ನನ್ನ ಸಂಗಡ ಆಸ್ಪತ್ರೆಗೆ ಬಂದರು. ಅಲ್ಲಿ ಅಧೋಗತಿಗಿಳಿದಿರುವ ಮಠಗಳ ವಿಚಾರ ಮಾತಾಡಿದೆವು. ಹಾಗೆಯೇ ನಮ್ಮ ಸಂವಾದ ತತ್ತ್ವದತ್ತ ತಿರುಗಿತು. ಆ ವಿಚಾರವಾಗಿ ಮಾತು ಮುಂದುವರಿಸಲು ನನ್ನ ರೂಮಿಗೆ ಹಿಂತಿರುಗಿದೆವು, ಔಷಧಿಯನ್ನೂ ತೆಗೆದುಕೊಳ್ಳದೆ ನನ್ನ ಕೆಲವು ಕವನಗಳನ್ನು ಅವರಿಗೆ ಓದಿದೆ. ಅಲ್ಲದೆ ಜಿ.ಪಿ. ನಟೇಶನ್‌ ಅಂಡ್ ಕೋಗೆ ಕಳಿಸಲು ಮೂರು ಸಾನೆಟ್ಟುಗಳನ್ನು ಕೊಟ್ಟೆ. ಆಮೇಲೆ ಊಟ ಮಾಡಿ ಬಂದು ಒಬ್ಬನೆಯೆ ಮಲಗಿ ನಿದ್ದೆಹೋದೆ. (ಉಳಿದವರೆಲ್ಲರೂ ಬೇಸಿಗೆ ರಜಾಕ್ಕೆ ಅವರವರ ಊರುಗಳಿಗೆ ಹೋಗಿದ್ದು ನಾನೊಬ್ಬನೆ ಪುನರ್ ಪರೀಕ್ಷೆಗಾಗಿ ಉಳಿದುಕೊಂಡಿದ್ದೆ)… ಸಂಜೆ ‘The sermon on Gandhi by’….ಓದುವ ಸುಸಂದರ್ಭ ಒದಗಿತು. ತುಂಬ ಸ್ಫೂರ್ತಿದಾಯಕವಾಗಿತ್ತು. ಅದನ್ನು ಮುಗಿಸಿದ ಮೇಲೆ ನನ್ನ ಮಿತ್ರರಿಗೆ Is Mahatma Gandhi an Incarnation ಎಂಬ ನನ್ನ ಪ್ರಬಂಧ ಓದಿದೆ. ನಾವೆಲ್ಲ ನಮ್ಮನಮ್ಮ ಹಳ್ಳಿಗಳಿಗೆ ಹಿಂತಿರುಗಿದಮೇಲೆ ಪ್ರಚಾರ ಮಾಡಬೇಕೆಂದು ಮನಸ್ಸು ಮಾಡಿದೆವು. ರಾತ್ರಿ ೮.೩೦ಕ್ಕೆ ಶೆಟ್ಟಿ ಹಾಸ್ಟೆಲಿಗೆ ಹೋದೆ. ಅಲ್ಲೊಂದು ತಮಾಷೆ ನಡೆಯಿತು. ಶೆಟ್ಟಿ ತಮಾಷೆಗಾಗಿ ನನ್ನ ಕವನಗಳೆಲ್ಲವೂ ಕಾಪಿ ಮಾಡಿದವು ಎಂದು ಆಪಾದಿಸಿ ಲೇವಡಿ ಮಾಡಿದ. ವಂಚಕ ಎಂಬರ್ಥ ಬರುವಂತೆಯೂ ಹೇಳಿದ. ನನಗೆ ಸಿಟ್ಟು ಬಂದು ‘ನಾನು ಮಹಾತ್ಮಾ ಗಾಂಧಿಯನ್ನು ಅಕ್ಷರಶಃ ಅನುಸರಿಸುವವನು. ಅವರಲ್ಲಿರುವ ಆತ್ಮವೇ ನನ್ನಲ್ಲಿಯೂ ಇರುವುದು.’ ಎಂದೆಲ್ಲ ಒದರಿಬಿಟ್ಟೆ. ಆದರೆ ಈ ಜನರೇ ಹೀಗೆ: ಗಂಭೀರವಾಗಿದ್ದರೆ ಜಂಭ ಎನ್ನುವುದು, ಸರಳವಾಗಿದ್ದರೆ ನಟನೆ ಎನ್ನುವುದು. ಅಂತೂ ಆ ಘಟನೆಯಿಂದ ನನಗೆ ಒಳಿತೇ ಆಯಿತು. ರೂಮಿಗೆ ಬಂದು ತುಂಬ ಆಲೋಚನೆ ಮಾಡುವಂತಾಯಿತು, ಕೊನೆಗೆ ಕಂಬನಿದುಂಬಿ ತಾಯಿಗೆ ಹೇಳಿಕೊಂಡೆ ‘ಅಮ್ಮಾ, ನನ್ನ ಸಹೋದರರಿಗೆ ನೆರವೀಯುತ್ತಾ, ಅಜ್ಞಾತವಾಗಿದ್ದುಕೊಂಡು, ಕೊನೆಗೆ ನಿನ್ನೆದೆಯ ಮೇಲೆ ಆನಂದಾಶ್ರು ಸುರಿಸಲು ನಿನ್ನೆಡೆಗೆ ನಾನು ಬರುವಂತಾಗಲಿ.’ ಓಂ ಓಂ ಓಂ!”

ಏಪ್ರಿಲ್‌೨ನೆಯ ಬುಧವಾರದ ದಿನಚರಿ:

“ಏಳು ಗಂಟೆಗೆ ಎದ್ದೆ. ಎಚ್‌.ಬಿ.ನಂಜಯ್ಯನ ವಿ.ಪಿ. ಬಂತು. ಮಹಾತ್ಮಾಗಾಂಧಿ ಮೇಲಣ ನನ್ನ ಪ್ರಬಂಧದಲ್ಲಿ ಒಂದು ಪುಟ ಬರೆದೆ. ಮಾಧ್ವ ತತ್ತ್ವವನ್ನು ಓದಿದೆ, ಸ್ವಲ್ಪ ಹೆಚ್ಚು ಕಡಮೆ ಶಾಂಕರತತ್ತ್ವಕ್ಕೆ ಸಂಪೂರ್ಣ ವಿರುದ್ಧ. ನನಗೆ ತುಂಬ ಮನಸ್ಸಂಕಟವಾಯಿತು. ಶಾಂಕರತತ್ತ್ವದ ಏಕತ್ವವೂ ಸಿದ್ಧಿಸಲಿಲ್ಲ; ಜೀವಗಳೇ ಪ್ರತ್ಯೇಕವಾಗಿ ಅನೇಕ ಎಂಬುದನ್ನೂ ಒಪ್ಪಲಾಗಲಿಲ್ಲ. ಒಂದು ತರಹದ ಆಧ್ಯಾತ್ಮಿಕ ಕ್ರೋಧದಿಂದ ಹುಚ್ಚನಂತಾಗಿಬಿಟ್ಟೆ. ನಮ್ಮ ಏಕತ್ವವನ್ನು ಸಾಧಿಸಲಾರದ ಎಲ್ಲ ತತ್ತ್ವಗಳೂ ಬಂಜೆ ಎನಿಸಿತು ನನಗೆ. ಜನ ಪಾಪದ ವಿಚಾರ ಹೇಳುತ್ತಾರೆ: ನಮ್ಮ ಆತ್ಮ ತತ್ತ್ವತಃ ಪರಿಶುದ್ಧವಾಗಿರುವ ಪಕ್ಷದಲ್ಲಿ ಪಾಪ ಇರಲು ಹೇಗೆ ಸಾಧ್ಯ? ಜನ ವಿಧಿ ಎನ್ನುತ್ತಾರೆ, ನಮ್ಮ ಆತ್ಮ ಸ್ವತಂತ್ರವಾಗಿರುವ ಪಕ್ಷದಲ್ಲಿ ವಿಧಿ ಇರಲು ಹೇಗೆ ಸಾಧ್ಯ? ಕರ್ಮ ಪ್ರಾರಂಭವಾದದ್ದು ಹೇಗೆ? ಆತ್ಮ ಸರ್ವನಾಶವಾಗಿದ್ದರೆ, ಸೋ ಹಂ ಎಂದು ನಾವು ಹೇಳಿಕೊಳ್ಳುವ ಪಕ್ಷದಲ್ಲಿ ಜಗತ್ತಿನಲ್ಲಿ ಅನೇಕ ವಿಷಯಗಳಲ್ಲಿ ನಾವು ಅಜ್ಞಾನಿಗಳಾಗಿದ್ದೇವಲ್ಲ ಏಕೆ? ನಾನೂ ಅವನೂ ಒಂದೇ ಆಗಿರುವುದು ಹೇಗೆ, ಹಾಗೆ ಹೇಳುವಾಗಲೆ ನಾನು – ಅವನು ಎಂದು ಭೇದಕಲ್ಪನೆ ಮಾಡುತ್ತೇವಲ್ಲಾ? ಏಕತ್ವ ನಿಜವಾದ ಪಕ್ಷದಲ್ಲಿ ಬೇರೆಬೇರೆಯ ಆತ್ಮಗಳ ಜ್ಞಾನ ಬೇರೆಬೆರೆಯಾಗಿರುತ್ತದಲ್ಲಾ ಅದು ಹೇಗೆ? ಹಾಗಿದ್ದರೆ ಒಬ್ಬ ಸಂತನಿಗೂ ಒಬ್ಬ ಕಟುಕನಿಗೂ ಏನು ಭೇದ? ಒಂದು ದರ್ಶನ ಮತ್ತೊಂದಕ್ಕೆ ಸಂಪೂರ್ಣ ವಿರುದ್ಧ! ಆತ್ಮ ಆಗಲೇ ಶುದ್ಧವಾಗಿದ್ದರೆ ಅದನ್ನು ಪರಿಶುದ್ಧವನ್ನಾಗಿ ಮಾಡುವ ಅವಶ್ಯಕತೆ ಎಲ್ಲಿದೆ? ಆತ್ಮ ವಿಶ್ವವನ್ನೆಲ್ಲ ವ್ಯಾಪಿಸಿರುವ ಪಕ್ಷದಲ್ಲಿ ಅದಕ್ಕೇಕೆ ಅಮೆರಿಕಾದಂತಹ ದೂರ ದೇಶದಲ್ಲಿ ಏನಾಗುತ್ತಿದೆ ಎಂಬುದು ತಿಳಿಯುವುದಿಲ್ಲವಲ್ಲಾ? ಆತ್ಮಕ್ಕೆ ಅದೆಲ್ಲ ತಟ್ಟುವುದಿಲ್ಲ ಎಂದು ಹೇಳುತ್ತಾ, ಹೊಟ್ಟೆ ಬಿರಿಯುವಂತೆ ತಿಂದುಂಡು, ಬಡಬಗ್ಗರಿಗೆ ದೀನದಲಿತರಿಗೆ ಸಹಾಯವೆಸಗದೆ ಧಿಮ್ಮನೆ ಕುಳಿತುಕೊಳ್ಳುವುದು ನ್ಯಾಯವೆ? ಏತಕ್ಕಾಗಿ ಆತ್ಮ ಪುನರ್ ಜನ್ಮವೆತ್ತುತ್ತದೆ? ಭಗವಂತನ ಕೇವಲ ಸತ್ತ್ವವಾಗಿರುವ ಆತ್ಮಕ್ಕೆ ಕರ್ಮ ಅಂಟುವುದೆಂತು? (How can Karma stick to the abosolute Essence of God?)  ಅಮ್ಮಾ, ನಾನು ಅಳುತ್ತೇನೆ, ಈ ದಾರ್ಶನಿಕರು ಉತ್ತರ ಕೊಡುವಂತೆ ನೀನೂ ನನಗೆ ಉತ್ತರ ಕೊಡಬೇಕಮ್ಮಾ! ವಂದೇ ಸ್ವಾಮಿ ವಿವೇಕಾನಂದಂ!”

ಏಪ್ರಿಲ್‌೩ನೆಯ ಗುರುವಾರದ ದಿನಚರಿ:

“ಬೆಳಿಗ್ಗೆ ಎದ್ದು, ಇದುವರೆಗೂ ಕೈಬಿಟ್ಟಿದ್ದ ದೈನಂದಿನ ವ್ಯಾಯಾಮ ತೆಗೆದುಕೊಂಡೆ. ಸ್ನಾನ ಕಾಫಿ ಮುಗಿಸಿ, ‘ವೃತ್ತಾಂತ ಪತ್ರಿಕೆ’ಗೆ ‘Missioneries in Malnad’ (ಮಲೆನಾಡಿನಲ್ಲಿ ಮಿಶನರಿಗಳು) ಎಂಬ ವಿಚಾರವಾಗಿ ಒಂದು ಲೇಖನ ಬರೆಯತೊಡಗಿದೆ. ೧೦.೩೦ರವರೆಗೆ ಅದನ್ನು ಬರೆದೆ. ಮಿತ್ರರಿಗೆ ಓದಿದೆ. ಆಲೋಚನೆ ವಾದಗಳನ್ನು ಮೆಚ್ಚಿಕೊಂಡರು. ಡಿ.ಆರ್.ವೆಂಕಟಯ್ಯನಿಂದ ಒಂದು ಕಾಗದ ಬಂತು. ಸಂಜೆ ಕಾರಂಜಿಕೆರೆ ಕಡೆ ಸಂಚಾರ ಹೋದೆವು. ಲೋಟಸ್ ಲೀಫ್ ಕ್ಲಬ್ಬಿನ ಗ್ರೂಪ್ ಫೋಟೋ ನೋಡಿದೆವು. ಮಧ್ನಾಹ್ನ ಶೆಟ್ಟಿಗೂ ನನಗೂ ಒಂದು ವಾದ ನಡೆಯಿತು. ದೇವರನ್ನು ತಾಯಿ ಎಂದು ಭಾವಿಸಿ ಅವನ ಕರುಣೆಗೆ ಪಾತ್ರರಾಗುವ, ಮತ್ತು ದೇವರನ್ನು ತಂದೆ ಎಂದು ಭಾವಿಸಿ ಅವನಿಂದ ನ್ಯಾಯ ಪಡೆಯುವ ವಿಚಾರದಲ್ಲಿ. (On the Motherhood and Mercy of God and Fatherhood and Justice of God). ದೇವರನ್ನು ತಾಯಿ ಎಂದು ಭಾವಿಸಿದರೆ ನಮ್ಮ ಪ್ರೀತಿ ಹೆಚ್ಚುತ್ತದೆ ಎಂದೆ ನಾನು. ಅದಕ್ಕೆ ಅವನು ‘ಹಾಗಾದರೆ, ನಾವು ಕರಣೆಯನ್ನು ಅಪೇಕ್ಷಿಸಿದರೆ ನ್ಯಾಯಪಾಲನೆಗೆ ಭಂಗ ಬರುತ್ತದೆ’ ಎಂದ. ಯಾವುದನ್ನು ನೀನು ನ್ಯಾಯಮೂರ್ತಿಯಾದ ಭಗವಂತನಿಂದ ಶಿಕ್ಷೆ ಎಂದು ಪರಿಗಣಿಸುತ್ತೀಯೋ ಅದನ್ನೇ ನಾನು ತಾಯಿ ನನ್ನ ಕಂದಗೆ ಕೊಡುವ ಮುದ್ದಿನ ಗುದ್ದು ಎಂದು ಸ್ವೀಕರಿಸುತ್ತೇನೆ, ಈ ಎರಡರಲ್ಲಿ ಯಾವುದು ಮೇಲು? ರಾತ್ರಿ ದಯಾನಂದ ಸರಸ್ವತಿಯವರ ಜೀವನಚರಿತ್ರೆ ಓದಿದೆ. ಮಹಾಸಂನ್ಯಾಸಿಗಳಂತೆ ನನಗೂ ಸಾಧ್ಯವಾಗುವುದಿಲ್ಲವೆ ಪ್ರಪಂಚತ್ಯಾಗ ಮಾಡುವುದು ಎಂದು ಯೋಚಿಸಿದೆ…. ತಾಯಿ, ನಾನು ನಿನ್ನೆಡೆಗೇ ಬರುತ್ತಿದ್ದೇನೆ ಎಂಬ ಶ್ರದ್ಧೆ ನನಗೆ ಸಂಪೂರ್ಣವಾಗಿ ಇದೆ. ವಂದೇ ಸ್ವಾಮಿ ವಿವೇಕಾನಂದಮ್‌!”

ಏಪ್ರಿಲ್‌ ೪ನೆಯ ಶುಕ್ರವಾರದ ದಿನಚರಿ:

“ನಿತ್ಯದ ವ್ಯಾಯಾಮ ಮುಗಿಸಿ, ಸ್ನೇಹಿತರಿಗೆ ಕಾಗದ ಬರೆದೆ. ಕವೀಂದ್ರ ಎಂಬ ಮರೆಯ ಹೆಸರು ಹಾಕಿ, Missionaries in Malnad’ ಲೇಖನವನ್ನು ‘ವೃತ್ತಾಂತ ಪತ್ರಿಕೆ’ಗೆ ಪೋಸ್ಟ್ ಮಾಡಿದೆ. ಕಿವಿಗೆ ಔಷಧಿ ಹಾಕಿಸಿಕೊಳ್ಳುವುದಕ್ಕೆ ಆಸ್ಪತ್ರೆಗೆ ಹೋದೆ. ಸುಮಾರು ೩ ಗಂಟೆ ಕಾಯಬೇಕಾಯ್ತು ಆ ಅಹಂಕಾರಿ ಡಾಕ್ಟರ ಬಳಿ ಸಾರಲು. ಅವನೋ ಕೊಬ್ಬಿ ಬೆಳೆದು ದುರಹಂಕಾರದ ಮೂರ್ತಿಯಾಗಿದ್ದ. ಡಾಕ್ಟರಾಗುವುದಕ್ಕೆ ಅನರ್ಹ! ….. ಮನೆಯಿಂದ ೨೦ ರೂ. ಮನಿಯಾರ್ಡರು ಬಂತು. ನನ್ನ ತಮ್ಮನಿಂದ ಕಾಗದವೂ ಬಂತು. ಸಂಜೆ ಮಳೆ ಬಿತ್ತು. ವಾಕ್‌ಹೋದೆವು. ರಾತ್ರಿ ಸ್ವಾಮಿ ವಿವೇಕಾನಂದರ ‘The Apparent and the Abolute Man’ ಭಾಷಣ ಓದಿದೆ….. ಎಚ್‌.ಬಿ. ನಂಜಯ್ಯಗೆ ಸ್ವಾಮಿ ದಯಾನಂದರ ಜೀವನ ಮತ್ತು ಕಾರ್ಯಗಳನ್ನು ಕುರಿತು ಹೇಳಿದೆ. ಯೇಸುಕ್ರಿಸ್ತನಿಗೂ ಶ್ರೀಕೃಷ್ಣನಿಗೂ ಇರುವ ವ್ಯತ್ಯಾಸವನ್ನು ವಿವರಿಸಿದೆ. ಶ್ರೀಕೃಷ್ಣನ ವ್ಯಕ್ತಿತ್ವ ಬಹುಮುಖವಾದದ್ದು; ಯೇಸುವಿನದು ಏಕ ಮುಖ. ಶ್ರೀಕೃಷ್ಣ ಋಷಿ, ಯೋಗಿ, ತತ್ತ್ವಜ್ಞ, ಆಲೋಚಕ, ದೊರೆ, ಕೊಲೆಗಾರ ಇನ್ನೂ ಏನೇನೊ ಆಗಿದ್ದ; ಆದರೆ ಕ್ರಿಸ್ತ ಒಬ್ಬ ಮಹಾ ಸಂತ ಮಾತ್ರನಾಗಿದ್ದ.”

ಏಪ್ರಿಲ್‌ ೫ನೆಯ ಶನಿವಾರ ದಿನಚರಿ:

“ಬೆಳಿಗ್ಗೆ ನನ್ನ ಹಿಂದಿನ ಬದುಕನ್ನೆಲ್ಲ ಒಮ್ಮೆ ಸಿಂಹಾವಲೋಕಿಸಿದೆ. ಸೆಲೂನಿನಿಂದ ಬಟ್ಟೆಗಳನ್ನು ತಂದು, ಎಣ್ಣೆಸ್ನಾನ ಮಾಡಲು ಹೋದೆ…. ಸ್ವಾಮಿ ಪ್ರೇಮಾನಂದ ಭಾರತಿಯವರ ‘Sons and Saints of God’ ಓದಿದೆ. ನಾನೂ ಏಕೆ ಸಂಸಾರ ತ್ಯಾಗ ಮಾಡಿ ಸನ್ಯಾಸಿಯಾಗಬಾರದು ಎಂಬೊಂದು ಆಲೋಚನೆ ಮೂಡಿತು; ಮತ್ತೆ, ಸಂಸಾರದಲ್ಲಿದ್ದುಕೊಂಡೆ ಲೋಕಸೇವೆ ಮಾಡಬಹುದು ಎಂಬ ಆಲೋಚನೆಯೂ ಮೂಡಿತು. ಮನಸ್ಸಿನಲ್ಲಿ ಹೋರಾಟ ನಡೆಯಿತು. ಮಧ್ಯಾಹ್ನ ಸ್ವಾಮಿ ವಿವೇಕಾನಂದರ ‘Maya and Freedom’ (ಮಾಯೆ ಮತ್ತು ಮುಕ್ತಿ) ಓದಿದೆ. ಮನಸ್ಸು ಬಹಳ ಕ್ಷುಬ್ಧವಾಯಿತು. ಶಾಂತಿಗಾಗಿ ಏಕಾಂತಕ್ಕೆ ಹೋಗಿ ಧ್ಯಾನಮಾಡುವ ಮನಸ್ಸಾಯಿತು. ನನ್ನ ಸ್ನೇಹಿತರೂ ನನ್ನೊಡನೆ ಬಂದರು; ಆದರೆ ಇಂದು ನನಗೆ ಯಾರ ಸಂಗವೂ ಬೇಡವಾಗಿತ್ತು; ಒಬ್ಬನೆ ಇರಬೇಕೆಂದು ಅನ್ನಿಸಿತು. ಆದ್ದರಿಂದ ಏನೇನೊ ಸಬೂಬು ಹೇಳಿ ಸ್ನೇಹಿತರನ್ನೆಲ್ಲ ಕಳಿಸಿಬಿಟ್ಟೆ. ತರುವಾಯ ಕಾರಂಜಿಕೆರೆಯ ಏರಿಯ ರಸ್ತೆಯಲ್ಲಿ ನಡೆದು ಚಾಮುಂಡಿ ಬೆಟ್ಟದ ಬುಡಕ್ಕೆ ಹೋದೆ. ಸರ್ವವ್ಯಾಪ್ತಿಯಾದ ಭಗವಂತನ ಸರ್ವತ್ರ ಸಾನ್ನಿಧ್ಯ ಹೃದಯಕ್ಕೆ ಆನಂದದಾಯಕವಾಗಿತ್ತು. ಮನಸ್ಸಿಗೆ ಶಾಂತಿ ಲಭಿಸಿದ್ದೇನೋ ನಿಶ್ಚಯ. ಮೂರನೆಯ ವರ್ಷದ ಬಿ.ಎ. ಓದುತ್ತಿರುವ ನನ್ನ ಮಿತ್ರ ಬಸಪ್ಪ ದಾರಿಯಲ್ಲಿ ಸಂಧಿಸಿ ಹೊಸ ವರ್ಷದ ಶುಭಾಶಯ ಕೋರಿದರು. ನನ್ನ ಮನಸ್ಸಿನಲ್ಲಿ, ಆಗಲೇ “New Year’(ಹೊಸವರ್ಷ) ಎಂಬ ಕವನದ ಕೆಲವು ಪಂಕ್ತಿಗಳು ಮೂಡಿದುವು. ಮನೆಗೆ ಬಂದು ಅದನ್ನೊಂದು ಸಾನೆಟ್ ಆಗಿ ಬರೆದೆ. ಸಂಜೆ ಒಬ್ಬ ಫಾರೆಸ್ಟರ್ ಗೆ ಸ್ವಾಮಿ ವಿವೇಕಾನಂದರ ಮತ್ತು ದಯಾನಂದರ ವಿಚಾರ ತಿಳಿಸುವ ಸಂದರ್ಭ ಒದಗಿತು. ರಾತ್ರಿ ಹತ್ತೂವರೆ ಗಂಟೆತನಕ ಅಲುಗಾಡದೆ ಆಲಿಸಿದರು. ಆಮೇಲೆ ರೂಮಿಗೆ ಬಂದು ಪ್ರಾರ್ಥನೆ ಮಾಡಿ ಮಲಗಿದೆ. ಭಗವದ್ಗೀತೆ ಓದಿದೆ…. ತಾಯಿ, ಈಗ ನನಗೆ ಗೊತ್ತಾಗುತ್ತಿದೆ, ನೀನು ನನಗೆ ಅದ್ಭುತ ಶಕ್ತಿ ಕೊಟ್ಟಿದ್ದೀಯಾ ಎಂದು!”

೧೯೨೪ನೆಯ ಏಪ್ರಿಲ್ ೫ನೆಯ ಶನಿವಾರ ಯುಗಾದಿಯ ದಿನ. ಮೇಲಿನ ದಿನಚರಿಯಲ್ಲಿ ಸ್ನೇಹಿತರೊಬ್ಬರು ಹೊಸ ವರ್ಷದ ಶುಭಾಶಯ ಕೋರಿದರೆಂದು ಹೇಳಿದೆ. ಆ ದಿನವೇ ಈ ಕೆಳಗೆ ಕೊಡುವ ಸಾನೆಟ್ ‘To a friend on the Hindu New Year Day (Yugadi)’ ರಚಿತವಾಗಿದೆ.

One year is gone, dear Friend, one precious year
That was good, kind and dear! Bid her adieu
She shall return on more. Save thro’ the dew
That you have gained thro’ many a smile and tear
When she did reign. Forgive Her carrion-spear;
Froget Her tyranny; be to Her true!
Her, death has sanctified: give her her due,
If nothing great, at lease one tender tear!
Another has come whose reign we have to taste;
A ruler new, however good and kind
Is yet unkown and strange, and apt to press
His subjects new and lay their gardens waste.
But oh! Republicans are we to bind
The tyrant to his doom. Our land to bless!
೫-೪-೧೯೨೪

ಏಪ್ರಿಲ್‌೬ನೆಯ ಭಾನುವಾರದ ದಿನಚರಿ:

“ಇವೊತ್ತೆಲ್ಲ ಆಲಸ್ಯದಲ್ಲಿಯೆ ಕಳೆಯಿತು. ಏನು ದೊಡ್ಡ ಕೆಲಸ ಮಾಡಲಿಲ್ಲ. ಬೆಳಿಗ್ಗೆ ಹಸ್ತಪ್ರತಿಗೆ ಕೆಲವು ಕವನಗಳನ್ನು ಪ್ರತಿಯೆತ್ತಿದೆ. ಸ್ನೇಹಿತರುಗಳಾದ ಸಿ.ಟಿ.ಶೆಟ್ಟಿ, ಗೋ.ಕೃ.ಶೆಟ್ಟಿ, ಬಿ.ಅನಂತರಾಮಯ್ಯ ಬಂದರು. ಚೆನ್ನಾಗಿ ಹರಟೆ ಹೊಡೆದವು. ಹಗಲೆಲ್ಲ ಇಸ್ಪೀಟು ಆಡಿದೆವು. ಭಗವಂತನ ಶ್ರೇಷ್ಠ ಸೃಷ್ಟಿಯಾಗಿರುವ ‘ಕಾಲ’ವನ್ನೂ ಪೂರ್ತಿ ತಿರಸ್ಕರಿಸಲು ಸಮರ್ಥವಾದ ಆಟ ಈ ಇಸ್ಪೀಟು! (A game which can scorn God’s precious time) ವಾಕ್ ಹೋಗಿ ಬಂದೆವು. ರಾತ್ರಿ ಸ್ಟೂಅರ್ಟ್‌ಮಿಲ್‌ನ ‘Poetry and Its Varieties’ (ಕವಿತೆ ಮತ್ತು ಅದರ ಪ್ರಭೇದಗಳು) ಓದಿದೆ. ಓದುತ್ತಿದ್ದಾಗ ಕವಿಯ ಅಂತಃಸ್ವರೂಪದ ಅವನ ವಿವರಣೆ ಮತ್ತು ವರ್ಣನೆ ನನ್ನನ್ನೆ ಕುರಿತು ಮಾಡಿದಂತೆ ತೋರುತ್ತಿತ್ತು. ಅವನು ವರ್ಣಿಸಿರುವ ಎಲ್ಲ ರೀತಿಯ ಕವಿಹೃದಯ ರಹಸ್ಯಗಳನ್ನೂ ನಾನು ಸಂವೇದಿಸಿದ್ದೇನೆ, ಕಂಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಆದರೆ ಅವನು ವರ್ಡ್ಸ್ ವರ್ತ್‌ ವಿಚಾರವಾಗಿ ಹೇಳಿರುವ ಪಕ್ಷಪಾತದ ಮಾತು— ಅವನ ಕಾವ್ಯವ್ಯಕ್ತಿತ್ವ ಶೆಲ್ಲಿಯದರಂತೆ ಅಥವಾ ಶೆಲ್ಲಿಯದರಷ್ಟು ನೈಜವಲ್ಲ ಎಂಬುದು-ನನ್ನ ಮನಸ್ಸಿಗೆ ನೋವುಂಟುಮಾಡಿತು. ತಾರಸಿಯ ಮೇಲೆ ಆಕಾಶದ ಕೆಳಗೆ ಮಲಗಿ ನಿದ್ರೆ ಮಾಡಿದೆ. (ಬೇಸುಗೆಯಾದ್ದರಿಂದ ರೂಮಿನಲ್ಲಿ ಸೆಕೆಯಾದ್ದರಿಂದ). ನಕ್ಷತ್ರಗಳು ಉಜ್ವಲವಾಗಿ ಮಿರುಗುತ್ತಿದ್ದವು. ರಾತ್ರಿಯ ‘The Beauty of the Night’ ಅನ್ನು ಕುರಿತು ಧ್ಯಾನಿಸಿದೆ…. ತಾಯಿ, ನಾನು ನಿನ್ನೊಂದು ದಂಗೆಯೆದ್ದ ಶಿಶು. ಆದರೆ ನಿನ್ನ ಮೇಲೆ ತುಂಬ ಅಕ್ಕರೆ. ನಾನೆಷ್ಟು ತಂಟಲುಮಾರಿಯಾದರೂ ನೀನು ಕೈಬಿಡುವುದಿಲ್ಲ ಕ್ಷಮಿಸುತ್ತೀಯ ಎಂದು ನನಗೆ ಭರವಸೆಯಿದೆ. ನೀನು ಕೊಡುವ ಶಿಕ್ಷೆಯನ್ನು ನಿನ್ನ ಮುದ್ದಾಟದ ಒಂದು ರೂಪವೆಂದೇ ಭಾವಿಸುತ್ತೇನೆ. ಜಯ್‌ ಶ್ರೀಕೃಷ್ಣ, ಪರಮಹಂಸ, ವಿವೇಕಾನಂದ!”

ಏಪ್ರಿಲ್‌೭ನೆಯ ಸೋಮವಾರದ ದಿನಚರಿ:

“ಬೆಳಿಗ್ಗೆ ಎದ್ದವನೆ “The Beauty of Night’[2] (ರಾತ್ರಿಯ ಸೌಂದರ್ಯ) ಎಂಬ ಕವನ ರಚಿಸಿದೆ. ಈ ದಿನ ಇಷ್ಟೊಂದು ಸಮೃದ್ಧ ಕವನ ರಚನೆಯ ದಿನವಾಗುತ್ತದೆ ಎಂದು ನಾನು ತಿಳಿದಿರಲಿಲ್ಲ. ನನ್ನ ಮಿತ್ರರ ಸಂಗಡ ಕೃಷ್ಣರಾಜೇಂದ್ರ ಕಾಟನ್ ಮಿಲ್ಸ್‌ ಹತ್ತಿಗಿರಣಿಯನ್ನು ನೋಡಲು ಹೋದೆ. ಯಂತ್ರದಿಂದ ಯಂತ್ರಕ್ಕೆ ಚಲಿಸುತ್ತಿದ್ದಾಗ ‘ಇವೂ ಮನುಷ್ಯತ್ವ ಹತ್ಯೆಮಾಡುವ ಒಂದು ತರಹದ ಫಿರಂಗಿಗಳೆ!’ ಎಂದು ಗೊಣಗಿಕೊಂಡೆ.

ಅದ್ಭುತವಾಗಿಯೇನೊ ಇತ್ತು, ಆದರೂ ಕನಿಕರಣೀಯವಾಗಿತ್ತು. ನಾವು ಹೋಗಿದ್ದು ಒಂದು ಕಾರಿನಲ್ಲಿ; ಆದರೆ ನನಗೆ ನಡೆದುಕೊಂಡೇ ಹೋಗಲು ಆಶೆಯಿತ್ತು ಕಾರಿನಲ್ಲಿ ಕೂತು ನಿಟ್ಟುಸಿರುಬಿಟ್ಟೆ, ದೃಶ್ಯಗಳನ್ನೆಲ್ಲ ಚೆನ್ನಾಗಿ ವೀಕ್ಷಿಸಲು ಅವಕಾಶವಿಲ್ಲದೆ ಭರ್ರನೆ ಹೋಗಬೇಕಾಯಿತಲ್ಲಾ ಎಂದು. ಹತ್ತು ಗಂಟೆಗೆ ಹಿಂದೆಕ್ಕೆ ಬಂದು, ತುಂಬ ಭಾವಾವೇಶದಿಂದ ಎರಡು ಸೊಗಸಾದ ಕವನಗಳನ್ನು ರಚಿಸಿದೆ: ‘When we were out for flowers’ (ಹೂವು ಕುಯ್ಯಲು ಹೊರಟಾಗ) ಮತ್ತು ‘The Jasmine Bower’ (ಮಲ್ಲಿಗೆಯ ಪೊದೆ). ‘ಮಲ್ಲಿಗೆಯ ಪೊದೆ’ ಕವನ ನನ್ನನ್ನು ಅನ್ಯಲೋಕಕ್ಕೇ ಕರೆದೊಯ್ದಿತು; ತಾಯಿಯ ಅಪ್ಪುಗೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿದೆ. ಭಗವಂತ ತನ್ನ ಆನಂದದ ಪರಿಪೂರ್ಣತೆಗಾಗಿ ಮಾನವಜೀವದ ಆಗಮನವನ್ನೆ ಎದುರು ನೋಡುತ್ತಿರುತ್ತಾನೆ ಎಂಬುದರ ನೈಜಾನುಭವ ನನಗೆ ಉಂಟಾಯಿತು. ಆನಂದವೋ ಆನಂದವಾಗಿತ್ತು!… ಫೋಟೊಗ್ರಾಫರ್ ಬಳಿಗೆ ಹೋಗಿ ಪದ್ಮಪತ್ರ ಸಂಘದ ಗುಂಪಿನ ಭಾವಚಿತ್ರಗಳನ್ನು ತಂದೆವು. ಆಮೇಲೆ ಅದರ ಖರ್ಚನ್ನು ಪಡೆಯುವುದಕ್ಕೆ ಚಂದಾಹಂಚಿಕೆಗಾಗಿ ಲೆಖ್ಖ ಹಾಕಿದೆವು. ರಾತ್ರಿ ಭಗವದ್ಗೀತೆ ಓದಿದೆ. ಮತ್ತು ಶೆಲ್ಲಿಯ ‘Cenci’ (ಚಂಚಿ) ನಾಟಕ ತಗೆದುಕೊಂಡು ಎರಡು ಅಂಕ ಓದಿದೆ. ತಾಯಿ, ನೀನು ನನ್ನಲ್ಲಿ ವಾಸಿಸುತ್ತಿರುವೆ. ನಿಃಸ್ವಾರ್ಥವೂ ಪರಿಶುದ್ಧವೂ ಆದ ಬಾಳನ್ನು ಬಾಳುವಂತೆ ಅನುಗ್ರಹಿಸು. ವಂದೇ ಸ್ವಾಮಿ ವಿವೇಕಾನಂದಮ್‌!”

ಇಲ್ಲಿ ಮೇಲೆ ಹೇಳಿರುವ ಮೂರು ಕವನಗಳಲ್ಲಿ ಎರಡನ್ನು ಕೊಟ್ಟು ಮುಂದುವರಿಯುತ್ತೇನೆ: ಒಂದು – ‘When we wear out for flowers’, ಎರಡು -The Jasmine Bower. ಕೊನೆಯ ಕವನದಲ್ಲಿ ಮಲ್ಲಿಗೆ ಹೂವುಗಳು ಮರದಿಂದ ಉದುರಿದುವು ಎಂದಿದೆ. ಕುಪ್ಪಳಿಯಲ್ಲಿ ಮಲ್ಲಿಗೆ ಬಳ್ಳಿ ಕಾಡಿನಂಚಿನಲ್ಲಿದ್ದ ಒಂದು ಮರಕ್ಕೆ ಹಬ್ಬಿತ್ತು. ಹೂವು ಮರದಿಂದ ಬೀಳುತ್ತಿದ್ದುವು.

WHEN WE WERE OUT FOR FLOWERS

The sweet shower fell like pearls from heaven,
It pattered on tress and bowers;
The earth rejoiced and heaved and fell
With the glory of shower-bloomed flowers!

The breeze blew cool and fresh and sweet
From the fresh awakened woods;
The birds made sweeter with their chimes
The murmuring sound of floods.

The rain-bow with its message shone
After the gentle soft showers.
A glory revived with light and life,
And heaven and earth were ours.

Wherever we gazed the earth was gone!
Around us play strange powers;
Our earth was but a paradise
When we were out for flowers.
೭-೪-೧೯೨೪

THE JASMINE BOWER

It was a shower – awakened dawn,
And I was out on the green;
And when I neared the mist-veiled lawn
My eyese met a glorious scene!
In the hazy light the ground seemed white
And a delightful phantom met my sight.

I stood motionless and still, and drew
A breath of the fragrant breeze;
The earth was heaven with grass and dew,
And the flowers fell from the trees
Like stars, and decked the heaven beneath;
And the green earth was veiled by a flowery sheath!

The bower stood like a shyful bride
Half bent with the weight of flowers,
And half as if she stood beside
Her lover in his frolicsome powers!
So fair she stood, so sweet she smiled,
I feared she took me for her Lover beguiled!

Again I saw her white tears fall
And even I heared her sad sighs;
Again she waved as if to call
Some sadder tears from my eyes.
So sad she stood. So sad she smiled,
I ran and hugged her breast as her dear child!

“Mother”, I said “why weepest thou?
Why art thou, Mother, so sad?
The earth beneath, the sky above
All are glad, Oh! all are glad!
Rejoice, Mother, for I have come;
Tell me what aileth thee? O be not dumb!”

“The heaven and earth are glad my child,
For they find their joy in me;
But I depend on none, my child,
And only wait for thee!
Thou seek’st in me the joy, dear child,
But I fulfil my joy in thee, my child!”

Thus said my Mother dear to me,
And she kissed a heavenly kiss!
In her embrace, O! I was free,
For my Mother is all bliss!
And I to myself muttered slow:
“From my Mother’s embrace I shall ne’er go!”
೭-೪-೧೯೨೪

ಏಪ್ರಿಲ್‌ ೮ನೆಯ ಮಂಗಳವಾರದ ದಿನಚರಿ

“ಬೆಳಿಗ್ಗೆ ಸಿ.ಟಿ.ಶೆಟ್ಟಿ ಬಂದ. ಅವನಿಗೆ ಫೋಟೋವನ್ನೂ ನಿನ್ನೆ ನಾನು ಕೊಂಡಿದ್ದ ಸರಪಣಿಯನ್ನೂ ಕೊಟ್ಟೆ. ಬೇಡ ಬೇಡ ಎಂದರೂ ಕೇಳದೆ ನನ್ನ ದಿನಚರಿ ತಗೆದುಕೊಂಡು, ಬಲಾತ್ಕಾರದಿಂದಲೆ ತೆಗೆದುಕೊಂಡು ನನ್ನ ಅನುಮತಿಯಿಂದ ಹಿಂದಿನ ಮೂರು ದಿನದ ದಿನಚರಿಯನ್ನು ಓದಿದ. ಅವನ ಹಾಸ್ಟೆಲಿಗೆ ಹೋಗಿ ಅವನೊಡನೆ ಮತ್ತೆ ೧೧ ಗಂಟೆಗೆ ಹಿಂತಿರುಗಿದೆ. ಅವನಿಗೆ ನನ್ನ ಕೆಲವು ಕವನಗಳನ್ನು ಓದಿದೆ. ನಿದ್ದೆ ಮಾಡಿದೆ. ಆಮೇಲೆ ಇಸ್ಪೀಟು ಆಡಿದೆವು. ಭಾರೀ ಮಳೆ ಬಿತ್ತು. ಊಟ ಮಾಡಿ ಬಂದು ಭಗವದ್ಗೀತೆಯನ್ನೂ, ಶೆಲ್ಲಿಯ ‘Cenci’ಯನ್ನೂ ಓದಿದೆ. ನನ್ನ ತಾಯಿಯ ಪವಿತ್ರಸಾನ್ನಿಧ್ಯ ನನಗೆ ಆನಂದದಾಯಕವಾಗದೆ ಹೃದಯಕ್ಕೆ ಸಾಂತ್ವನವನ್ನೂ ಮನಸ್ಸಿಗೆ ಶಕ್ತಿಯನ್ನೂ ಕೊಡುತ್ತದೆ. ಅನೇಕ ಸಾರಿ ನನಗೆ ಈ ಭಾವಾವಸ್ಥೆ ಬರುತ್ತದೆ. ಯಾರಾದರೂ ಕಂಡರೆ ನನಗೆ ತಲೆ ಕೆಟ್ಟಿದೆ ಎಂದುಬಿಟ್ಟಾರು ಎಂದು ಅದು ಹೊರಗೆಹೊಮ್ಮಿ ತೋರದಂತೆ ದಮನ ಮಾಡಿಕೊಳ್ಳುತ್ತೇನೆ….. ನನ್ನ ಶ್ರೀಕೃಷ್ಣನ ಮಧುರವಾಣಿಯ ನಾನು ಅದನ್ನು ಅನೇಕ ಸಾರಿ ಕೇಳಿದ್ದರೂ ಅಮೃತಪ್ರಾಯವಾಗಿರುತ್ತದೆ ನನಗೆ. ಈ ಹೂವನ್ನು ನಿನ್ನ ವಕ್ಷಕ್ಕೆ ಒತ್ತಿ ಅವುಚಿಕೊ, ತಾಯಿ. ಮಾತೆಗೆ ನಮಸ್ಕಾರ. ವಂದೇ ವಿವೇಕಾನಂದಮ್‌!”

ಏಪ್ರಿಲ್‌ ೯ನೆಯ ಬುಧವಾರದ ದಿನಚರಿ:

“ತಾಯಿ, ನನ್ನ ಅಪರಾಧವನ್ನು ಕ್ಷಮಿಸು. ಆಣೆಯಿಟ್ಟುಕೊಂಡಿದ್ದೆ! ಅದನ್ನು ಎಷ್ಟೋಸಲ ಉಲ್ಲಂಘಿಸಿದ್ದೇನೆ…. ‘Image worship or Idolatry’ (ವಿಗ್ರಹಾರಾಧನೆ) ವಿಚಾರವಾಗಿ ನನ್ನ ಉಪನ್ಯಾಸ ಬರೆಯಲು ಶುರುಮಾಡಿದೆ. ಹನ್ನೊಂದು ಗಂಟೆವರೆಗೂ ಬರೆದೆ. ಆಮೇಲೆ ಶೆಲ್ಲಿಯ ‘Defence of Poetry’ (ಕವಿತೆಯ ಸಮರ್ಥನೆ) ಓದಿದೆ. ತುಂಬ ಉತ್ತೇಜಕವೂ ಹರ್ಷದಾಯಕವೂ ಆಗಿತ್ತು. ಎಷ್ಟು ಸಂತೋಷವಾಯಿತು ಎಂದರೆ ಅದನ್ನು ಮುಗಿಸಿದ ಮೇಲೆ ನನಗೆ ನಾನೇ ಹೇಳಿಕೊಂಡೆ: ‘ಸರಿ, ಬಿಡು: ಇನ್ನೇನೂ ಹೆದರಿಕೆಯಿಲ್ಲ. ನನ್ನ ಹಿರಿ ಅಣ್ಣನೊಬ್ಬ ನನ್ನ ಹಕ್ಕನ್ನು ಸಮರ್ಥಿಸಿದ್ದಾನೆ’ ಒಡನೆಯೆ ಸ್ಫೂರ್ತಿಗೊಂಡು ಒಂದು ಸಾನೆಟ್ಟನ್ನೂ ಬರೆದುಬಿಟ್ಟೆ, ಅತ್ಯಂತ ಭಾವಾವೇಶದಿಂದ, ‘To Shelly’[3]ಎಂಬ ಶೀರ್ಷಿಕೆಯಲ್ಲಿ…. ಆಮೇಲೆ ಇಸ್ಪೀಟು ಆಡಿದೆವು. ಆಟದ ಮಧ್ಯೆ ಎಂ.ತಮ್ಮಯ್ಯನ ಮೇಲೆ ತುಂಬ ರೇಗಿಬಿಟ್ಟೆ. ಅದಕ್ಕಾಗಿ ವ್ಯಥೆಯೂ ಆಯಿತು. ವಾಕ್‌ಹೋಗಿ ಬಂದೆವು. ಶಿವರಾಂಗೆ ಶೆಲ್ಲಿಯ ‘Defence of Poetry’ ಇಂದ ಕೆಲವು ಭಾಗಗಳನ್ನು ಓದಿದೆ….

ಏಪ್ರಿಲ್ ೧೦ನೆಯ ಗುರುವಾರದ ದಿನಚರಿ:

“ಬೆಳಿಗ್ಗೆ ಎದ್ದವನೆ ವ್ಯಾಯಾಮ ಮಾಡಿದೆ. ‘ವಿಗ್ರಹಾರಾಧನೆ’ ಉಪನ್ಯಾಸದ ಕೆಲವು ಪುಟ ಬರೆದೆ. ಆಮೇಲೆ ಸಿ.ಟಿ.ಶೆಟ್ಟಿ ಮತ್ತು ಶಿವರಾಂ ಬಂದರು. ನನ್ನ ಸಂಗಡ ಕೆಲಹೊತ್ತು ಇದ್ದರು. ಆದರೆ ಆಗ ನನಗೆ ಒಂಟಿಯಾಗಿರಲು ಹೃದಯ ತುಯ್ಯುತ್ತಿತ್ತು. ಕಾರಣ-ಕಾವ್ಯ ಸ್ಫೂರ್ತಿಯನ್ನು ಸವಿಯುವ ಉತ್ಕಟ ಅಭಿಲಾಷೆ…. ಅವರು ಹೋದ ಮೇಲೆ ಎಂಟು ಪದ್ಯಗಳನ್ನು ಬರೆದೆ ‘Hours of Inspiration’[4]ಎಂಬ ಶೀರ್ಷಿಕೆಯಲ್ಲಿ. ಆ ಕವನದಲ್ಲಿ ಮೈದಾಳಿರುವ ಕಲ್ಪನಾಸಂಪತ್ತಿಗೂ ಪ್ರತಿಮಾ ವೈಭವಕ್ಕೂ ನನ್ನ ಚೇತನ ಅತ್ಯತಿಸುಖಿಯಾಗಿ ರಸಾನಂದ ಮಗ್ನವಾಯಿತು….. ಸಂಜೆ ಗೋ.ಕೃ.ಶೆಟ್ಟಿ, ಎಚ್‌.ಎಸ್‌.ಶಿವರಾಂ ಮತ್ತು ನಾನು ತಿರುಗಾಡಲು ಹೋದೆವು, ಮಾನವಲೋಕದ ಕ್ಲೇಶಕಷ್ಟಗಳಿಗೆಲ್ಲ ಆಧ್ಯಾತ್ಮಿಕತಾವಿಹೀನವಾದ ದೌರ್ಬಲ್ಯವೇ ಮೂಲಕಾರಣ ಎಂಬುದನ್ನು ಕುರಿತು ಚರ್ಚಿಸುತ್ತಾ, ಪ್ರಾಸಂಗಿಕವಾಗಿ ಶಾಂಕರ ಮತ್ತು ಮಾಧ್ವ ಸಿದ್ಧಾಂತಗಳ ಜಿಜ್ಞಾಸೆ ಮಾಡುತ್ತಾ… ರಾತ್ರಿ ಭಗವದ್ಗೀತೆಯನ್ನು ಓದಿ, ತಾರಸಿಯ ಮೇಲೆ ಮಲಗಲು ಹೊರಗೆ ಹೋದೆ. ನಿದ್ದೆಗೆ ಮುನ್ನ ಮೂರು ಸೊಗಸಾದ ಪದ್ಯಗಳನ್ನು ಮನದಲ್ಲಿಯೆ ರಚಿಸಿದೆ. ಬೆಳಗಾಗುವುದರೊಳಗೆ ಎಲ್ಲಿ ಮರೆತು ಹೋಗುತ್ತವೆಯೊ ಎಂದು ಹೆದರಿ ಮತ್ತೆ ರೂಮಿಗೆ ಹೋಗಿ ಅವನ್ನು ಬರೆದಿಟ್ಟೆ. ಆ ಕವನದ ಶೀರ್ಷಿಕೆ ‘I wait for my Love’ ಎಂದು.”

I WAIT FOR MY LOVE[5]

The flowers have closed their door.
The birds have gone to their nests;
But beside the sleeping shore
Alone the ferry-man rests!

The stars have begun to peep;
The winds have fled to their home;
The silent shadow of sleep
Is now abroad to roam!

The clouds have begun to pour
Their silent grace on the crests;
But beside the sleeping shore
Alone the Ferry-man rests!

He sits reclined at the prow
And the oar rests on his thigh;
And he moves in act to row
But stops to gaze at the sky.

What makes thee wait here alone
When all the world is asleep?
What agony not thine own
Awakes thee now from thy sleep?

What do thy anxious eyes see,
Ferry-man, on yonder side?
What love or fear now makes thee
Await with a boat and oar?

Awaitest thou the coming
Of a heart too dear to you?
Or the visit of some great King
From the land of flowers and dew?

The ferry-man muttered low
And I heared him form above:
“She comes. Comes; I shall not go!
Ay, Ay, I wait for my Love!”

Love dispels my wearied sleep,
Love brings me hope from above;
Love disperses languor deep;
Ay, Ay, I wait for my Love!”
೧೧-೪-೧೯೨೪

 


[1] Alien Harp, pp. ೬೦-೬೧.

[2] Alien Harp pp ೬೩-೬೪

[3] Alien Harp. pp.

[4] Ibid. ೬೬-೬೮

[5] ಈ ಕವನ ೧೦ನೆಯ ತಾರೀಖಿನಲ್ಲಿ ರಾತ್ರಿ ಪ್ರಾರಂಭವಾದದ್ದು ೧೦ನೆಯ ತಾರೀಖು ಮುಗಿದು ಹಸ್ತಪ್ರತಿಗೆ ದಾಖಲಾಗಿದೆ.