ಏಪ್ರಿಲ್‌ ೧೧ನೆಯ ಶುಕ್ರವಾರದ ದಿನಚರಿ:

“ವ್ಯಾಯಾಮ ಪೂರೈಸಿ, ನಿನ್ನೆ ರಾತ್ರಿ ರಚಿಸಿದ್ದ ಮೂರು ಪದ್ಯಗಳ, ಮುಂದಿನ ಆರು ಪದ್ಯಗಳನ್ನು ರಚಿಸಿ ‘I Wait for My Love’ ಮಧುರ ಕವನವನ್ನು ಮುಗಿಸಿದೆ. ನಂಜಯ್ಯನ ರೂಮಿಗೆ ಹೋಗಿದ್ದೆ. ಅಲ್ಲಿ ನೆಪೋಲಿಯನ್ನನ ವ್ಯಕ್ತಿತ್ವದ ಕೆಲವು ಸುಂದರ ಲಕ್ಷಣಗಳನ್ನು ಕುರಿತ ಬರಹದ ಭಾಗಗಳನ್ನು ಓದಿದೆ; ಮತ್ತು ಸ್ವಾಮಿ ಯೋಗೇಶ್ವರಾನಂದರ ಉಪನ್ಯಾಸಗಳ ಪುಸ್ತಕವನ್ನು ಅವರಿಂದ ತೆಗೆದುಕೊಂಡು ಬಂದು ಕೆಲವು ಗಂಟೆಗಳಲ್ಲಿ ಓದು ಪೂರೈಸಿದೆ. ನಾಲ್ಕು ಗಂಟೆ ಹೊತ್ತಿಗೆ ಶೆಟ್ಟಿ, ತಮ್ಮಯ್ಯ ಬಂದು ಇಸ್ಪೀಟು ಆಡತೊಡಗಿದರು. ನಾನು ಹೃದಯದಲ್ಲಿ ನಂದನವನ್ನೇ ಸೃಷ್ಟಿಸುತ್ತಾ ಠಾಕೂರರ ಕವನಗಳನ್ನು ಓದುತ್ತಿದ್ದೆ. (I waw reading the poems of Tagore with a heaven in my brest.) ಇದ್ದಕ್ಕಿದ್ದ ಹಾಗೆ ಹೊರಗೆ ಹೋಗಿ ಆಕಾಶದ ಕಡೆ ನೋಡಿದೆ. ನನ್ನ ಶರೀರ ಸಮಸ್ತವೂ ಒಂದು ಆನಂದ ಸ್ಪಂದನದಿಂದ ಪುಲಕಿತವಾಯಿತು. ಮೋಡಗಳು ಒಂದು ನ್ಯಾಪ್ತಾ ಟ್ಯಾಂಕಿಗೆ ಬೆಂಕಿಬಿದ್ದರೆ ಉಬ್ಬಿಹೊಮ್ಮುವ ಕರ್ಬೊಗೆಯಂತೆ ಮುದ್ದೆ ಮುದ್ದೆಯ ಮೇಲ್ವಾಯುತ್ತಿದ್ದುವು. (The clouds were bulging forth like the dark smoke from a burning tank of Naptha.) ಹಕ್ಕಿಗಳೂ, ಗಿಡಗಗಳೂ ಬಾನಿನಲ್ಲಿ ತೇಲಾಟವಾಡುತ್ತಿದ್ದುವು. ಗಾಳಿಯಲ್ಲಿ ಕೋಗಿಲೆಯ ಉಲಿಯ ಇಂಚರ ತೇಲಿ ಬರುತ್ತಿತ್ತು. ಮನೆಗಳ ಮೇಲೆ ಪುಟ್ಟ ಗುಬ್ಬಚ್ಚಿಗಳು ಚಲಿಮಿಲಿ ಗುಟ್ಟುತ್ತಾ ಗುಂಪುಗುಂಪು ಹಾರಾಡುತ್ತಿದ್ದುವು. ಹೋಟೆಲಿನ ಒಳಅಂಗಳದ ನಡುವೆ ಇದ್ದ ದೊಡ್ಡ ಸಂಪಗೆಯ ಮರ ವಿಶಾಲ ವಿಶ್ವದ ಸೌಂದರ್ಯದ ಮಧ್ಯೆ ತನ್ನದೇ ಒಂದು ಲೋಕವನ್ನು ಸೃಷ್ಟಿಸಿಕೊಂಡು ಅರ್ಥಪೂರ್ಣವಾಗಿ ನಿಂತಿತ್ತು. ಜಗತ್ತು ನನ್ನೊಳಗಿದೆ, ನಾನು ಜಗತ್ತಿನಲ್ಲಿಲ್ಲ ಎಂಬಂತೆ ಅನುಭವವಾಯಿತು ನನಗೆ. ಸ್ವಲ್ಪ ಹೊತ್ತು ಧ್ಯಾನಸ್ಥನಾಗಿ ನಿಂತೆ. ಮತ್ತೆ ರೂಮಿನೊಳಕ್ಕೆ ಬಂದು ಮಿತ್ರರನ್ನು ತಿರುಗಾಟಕ್ಕೆ ಬರುವಂತೆ ಕರೆದೆ. ಅವರೂ ಎದ್ದು ಬಂದರು; ಎಲ್ಲರೂ ಹೊರಗೆ ಹೊರಟೆವು. ಹೂವು ತುಂಬಿ ಅಲಂಕೃತವಾದ ಮರಗಳ ಸಾಲೂ ಸಜೀವಸಂತೋಷದಂತಿದ್ದ ವಾಯಮಂಡಲವೂ ಏಪ್ರಿಲ್ ತಿಂಗಳ (ಚೈತ್ರ ಮಾಸದ) ವೈಭವವನ್ನು ಪ್ರದರ್ಶಿಸಿದ್ದುವು. ಹೊಸ ಮಳೆಗಳಲ್ಲಿ ತೊಯ್ದ ನೆಲದಿಂದ ಹಸುರು ಚಿಮ್ಮುತ್ತಿತ್ತು. ಎಲ್ಲ ಆನಂದಮಯವಾಗಿತ್ತು. ಸಗ್ಗದ ಮಳೆಗಳು ಭೂಮಿಗೆ ಇಳಿತಂದರೆ ಅವಳಿಗೆ ಎಂತಹ ಹಿಗ್ಗು? (What joy the earth receives when she feels the showers of heaven?) ಮಿಂಚುಗಾಜಿನ ಕೊಳವೆಯಲ್ಲಿ ಹರಿಯುವ ಹೊಳಪಿನ ಬಳ್ಳಿಯಂತೆ ಆ ಸುಂದರ ದೃಶ್ಯವನ್ನು ಮತ್ತೂ ಸುಂದರತರವನ್ನಾಗಿ ಮಾಡಿತು. (The lightening like a brigh tube-led creeper made more joyful the scene). ಸರಸಿಯ ಬಳಿ ನಗುತ್ತಾ ನಲಿಯುತ್ತಾ ಅಲೆದಾಡಿದೆವು (We wandered beside the like with laughter and joy.) ಮಕ್ಕಳಿಗಂತಲೂ ಮಕ್ಕಳಂತಾಗಿ. ಅಲ್ಲಿಂದ ಮಾವಿನ ತೋಪಿನ ಬಳಿಗೆ ಹೋದೆವು. ಮಾವಿನ ತೋಪಂತೂ ಹಸುರೋಹಸುರಾಗಿತ್ತು. ಆದರೆ ಮತ್ತೊಂದು ಮನೋಹರತೆ ನಮ್ಮನ್ನು ಸೆಳೆಯಿತು. ರೇಸ್‌ಕೋರ್ಸ್‌ನ ಸುತ್ತಲೂ ಹಬ್ಬಿಸಿದ ಶಾದ್ವಲದ ಗರಿಕೆ ಎಷ್ಟು ಹಸುರಾಗಿತ್ತೆಂದರೆ ಪ್ರಕೃತಿವರ್ಣಶಿಲ್ಪಿಯ ಮನೋಜ್ಞಕಲೆ ಬಣ್ಣ ಬಳಿದಂತೆ ಮನಮೋಹಕವಾಗಿತ್ತು. ಅದನ್ನು ಆಸ್ವಾದಿಸುತ್ತಾ ಅಲ್ಲಿ ಕುಳಿತೆವು. ನಾನೆಂದೆ ‘ನಾನೊಂದು ಹಸುವಾಗಿದ್ದರೆ ಎಷ್ಟು ಮಜವಾಗಿ ಅದನ್ನು ಮೇಯುತ್ತಿದ್ದೆ!’ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ನಮ್ಮ ಸಂಚಾರದಲ್ಲಿ ಒಂದು ನಂದನವೆ ಹುದುಗಿತ್ತು! (Our walk had a paradise in it.)”

ಏಪ್ರಿಲ್‌೧೨ನೆಯ ಶನಿವಾರದ ದಿನಚರಿ:

“ಚೈತ್ರಮಾಸದ ಎಂದರೆ ಏಪ್ರಿಲ್ ತಿಂಗಳ ಸದ್ಯಃಪ್ರಫುಲ್ಲ ಸೌಂದರ್ಯವನ್ನು ಕುರಿತು ನಿನ್ನೆ ರಾತ್ರಿ ಧ್ಯಾನಿಸಿದ ಒಂದು ಕವನ ರಚನೆ ಮಾಡಿದೆ. ಅದರ ಶೀರ್ಷಿಕೆ ‘The Awakened April’ (ಸದ್ಯೋದಿತ ಚೈತ್ರ). ಸೆಲೂನಿಗೆ ಹೋಗಿ ಒಗೆದ ಬಟ್ಟೆ ತಂದೆ. ಹತ್ತು ಗಂಟೆಯವರೆಗೆ ವಿಗ್ರಹರಾಧನೆಯ ಕುರಿತ ಉಪನ್ಯಾಸವನ್ನು ಮುಂದುವರಿಸಿ ಬರೆದೆ. ಆಮೇಲೆ ಸ್ವಾಮಿ ಯೋಗೇಶ್ವರಾನಂದರ ‘Towards Light’ ಓದಲು ಶುರುಮಾಡಿದೆ. ಅದೆಷ್ಟು ಸ್ಫೂರ್ತಿದಾಯಕವಾಗಿತ್ತು ಎಂದರೆ ನಡುವೆ ತುಸು ಹೊತ್ತು ಊಟಕ್ಕೆ ಹೋಗಿ ಬಂದು ಮತ್ತೆ ಓದತೊಡಗಿದೆ. ಆ ಉಪನ್ಯಾಸಗಳು ನಿಜವಾಗಿಯೂ ನನ್ನ ಚೈತನ್ಯಕ್ಕೆ ಊರ್ಧ್ವಗಾಮಿತ್ವವಿತ್ತುವು. ನನ್ನ ಉದ್ದಾಮ ಮಹತ್ವಾಕಾಂಕ್ಷೆಗಳಿಗೆ ಅವುಗಳಿಂದ ಒಂದು ಉಜ್ವಲ ಪ್ರೋತ್ಸಾಹ ದೊರೆಕೊಂಡಿತು. ಮೊದಲನೆಯ ಉಪನ್ಯಾಸ ‘Ethical Standard’ ಎರಡನೆಯದು ‘Who will be A Wise Man?’ ಮೂರನೆಯದು ‘Illusions’ ಉಳಿದ ಎರಡನ್ನು –‘Doubt’ ಮತ್ತು ‘Self Realisation’ ನಿನ್ನೆಯ ಓದಿ ಪೂರೈಸಿದ್ದೆ. ಉಪನ್ಯಾಸಗಳನ್ನು ನಿರಂತರ ಓದಿ ಸಂಜೆ ಐದು ಗಂಟೆಗೆ ಮುಗಿಸಿಬಿಟ್ಟೆ. ಆಮೇಲೆ ಬಂದರು ನನ್ನ ಮಿತ್ರರು, ಗೋ.ಕೃ.ಶೆಟ್ಟ ಮತ್ತು ಎಚ್‌.ಎಸ್.ಶಿವರಾಂ, ತಿರುಗಾಟಕ್ಕೆ ಹೊರಟೆವು. ದಾರಿಯಲ್ಲಿ ಮಾತಾಡುತ್ತಾ ನಾನು ಶೃಂಗೇರಿ ಸ್ವಾಮಿಗಳನ್ನು ಅವರ ವೈಭವ ಪ್ರದರ್ಶನಕ್ಕಾಗಿ ಖಂಡಿಸಿದೆ. ಹಾಗೆಯೆ ಒಂದು ರಾಜಕೀಯ ಪ್ರಶ್ನೆಯೂ ಎದ್ದಿತು, ರಾಜರು ಮಂತ್ರಿಗಳನ್ನೆಲ್ಲ ಕಟುವಾಗಿ ಟೀಕಿಸಿದೆವು. ಅವರೆಲ್ಲ ರಾಕ್ಷಸರು (Satan) ಅಂತಲೂ ಅಲ್ಲ, ದೇವತೆಗಳು (Gods) ಅಂತಲೂ ಅಲ್ಲ. ಆದರೂ ಇಷ್ಟೊಂದು ಮಂದಿ ಬಡವರು ಹೊಟ್ಟೆಬಟ್ಟೆಗಿಲ್ಲದೆ ಗೋಳಾಡುತ್ತಿರುವಾಗ ಅವರು ಮಾಡುತ್ತಿರುವ ದುಂದು ನಿಜವಾಗಿಯೂ ಖಂಡನೆಗೆ ಯೋಗ್ಯ. ಮಹಾತ್ಮಾಜಿ ವಿದೇಶೀ ವಸ್ತುಗಳನ್ನು ಕೊಳ್ಳಬೇಡಿ ಎನ್ನುತ್ತಿದ್ದರೆ ಇವರು ವಿದ್ಯುಚ್ಚಾಲಿತ ಕಾರುಗಳನ್ನೆ ಕೊಳ್ಳುತ್ತಾರೆ. ಹಣವನ್ನು ಭೋಗವಸ್ತುಗಳಿಗಾಗಿ ಚೆಲ್ಲುತ್ತಾರೆ; ಇತ್ತ ಬಡವರು ಹೊಟ್ಟೆಗಿಲ್ಲದೆ ಸಾಯುತ್ತಿದ್ದರೂ ತ್ಯಾಗ, ಸತ್ಯದ ಮಹಿಮೆ, ಆಧ್ಯಾತ್ಮಿಕತೆಯ ಹಿರಿಮೆ ಇತ್ಯಾದಿ ವಿಚಾರಗಳನ್ನೂ ಕುರಿತು ಮಾತಾಡಿದೆವು. ಕೊನೆಗೆ ನಾನೆಂದೆ ಮಿತ್ರರಿಗೆ-‘ಬಡವರನ್ನು ದೇವರು ಸೃಷ್ಟಿಸಿರುವುದು ನಮ್ಮನ್ನು ಪರೀಕ್ಷಿಸುವುದಕ್ಕೆ ಎಂದುಕೊಳ್ಳೋಣ. ಮೊದಲು ಆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದೋಣ. ನಾವು ಬಡವರು ಎಂದುಕೊಳ್ಳುತ್ತಾ ಇರುವುದು ಬರಿಯ ಮೂರ್ಖತನ, ದೇವರು ನಮಗೆ ಹೃದಯ ಶ್ರೀಮಂತಿಕೆ ಕೊಟ್ಟಿದ್ದಾನೆ. ಐಶ್ವರ್ಯವಿದ್ದರೂ ಶ್ರೀಮಂತರಾದರೂ ಬಡವರನ್ನು ದೂರ ತಳ್ಳಿದ್ದಾರೆ; ನಾವು ಬಡವರಾಗಿದ್ದರೂ ಚಿಂತೆಯಿಲ್ಲ, ಬಡವರನ್ನು ನಮ್ಮ ಎದೆಗಪ್ಪಿಕೊಳ್ಳೋಣ. ನಾವು ಬಡವರಿಗೆ ನೆರವಾಗುತ್ತೇವೆ ಎಂದು ಘೋಷಿಸೋಣ.”

ಮೇಲಿನ ದಿನಚರಿಯಲ್ಲಿ ಉಕ್ತವಾದ ಕವನ:

O Earth! What joy receives thou
When heaven’s grace sheds its showers?
What secret gratitude or love
Blooms forth sweet grass and flowers?
Oh Mother kind, what thou receives
Is but a speck of what thou givest!

O Trees! What glory enters you
When showers with heaven descend?
What foliage and flowers born anew
Your sylvan court commend?
O! in you glorious jubilee
Heaven and Earth mingle heartily!

O Lakes! What splendour crystalline
The cool showers bring to you?
What liquid joy, what trance divine
Like ripples pass you through?
To walk beside you is to roam
Like angels in their heavenly home!

O Birds! What nector thrills your life
When pearl-like showers descend?
What god of music brings his fife
In your sweet throats to blends?
Ye come with glory and with mirth
When April’s Beauty wakes the earth!

O April sweet! Of grace and flowers,
April of powers divine,
What heaven dissolved comes thro’ your showers
That makes the dullest shine?
Season of glory and of mirth,
Spirit of Beauty, walk the earth!
೧೨-೪-೧೯೨೪

ಏಪ್ರಿಲ್‌ ೧೫ನೆಯ ಭಾನುವಾರದ ದಿನಚರಿ:

“ಬೆಳಿಗ್ಗೆ ಎದ್ದೆ. ದೈನಂದಿನ ವ್ಯಾಯಾಮ ಮಾಡಿದೆ. ಎಣ್ಣೆಸ್ನಾನ ತೆಗೆದುಕೊಳ್ಳಲು ಹೋದೆ. ಬಂದಮೇಲೆ ಧ್ಯಾನಿಸಿದೆ. ಧ್ಯಾನದಲ್ಲಿ ನನ್ನ ತಾಯಿಯನ್ನು ಎಲ್ಲೆಲ್ಲಿಯೂ ಕಂಡೆ. ನನಗೆ ನಾನು ಹೇಳಿಕೊಂಡೆ: ‘ನನ್ನ ಸೋದರರಿಗೆ ನೆರವೀಯಲು ನಾನು ತ್ಯಾಗ ಮಾಡಬೇಕು,’ ತಾಯಿಯ ಇಚ್ಛೆಯಿದ್ದಂತೆ ಆಗುತ್ತದೆ. ತರುವಾಯ ನಾನೊಂದು ತುಂಬ ಹೃದಯಸ್ಪರ್ಶಿಯದ ಕವನ ರಚನೆ ಮಾಡಿದೆ. ಅದರ ಶೀರ್ಷಿಕೆ ‘The Child and the Flowers’[1] ರಚನೆಯ ಸಮಯದಲ್ಲಿ ಅನೇಕಸಲ ಅತ್ತೂ ಬಿಡಬೇಕಾಯ್ತು. ನಾನೂ ಮಗುವಿಗಿಂತ ಮಗುವಾಗಿ ಬಿಟ್ಟಿದ್ದೆ. ಕಂಡಕಂಡ ಹೂವುಗಳಿಗೆಲ್ಲ ಮುತ್ತುಕೊಡಬೇಕು ಎನ್ನಿಸಿತು, ಏಕೆಂದರೆ ಒಂದೊಂದು ಹೂವು ಆ ರೂಪದಲ್ಲಿರುವ ಒಂದೊಂದು ಜೀವವೆ. ಕವನ ಗೀತಮಯವಾಗಿಯೂ ಸಂವೇದನಪೂರ್ಣವಾಗಿಯೂ ಇದೆ, (musical and touching) ನಾವು ಅದನ್ನು ಶಿಶುಹೃದಯರಾಗಿ ಮುಗ್ಧ ಮನಸ್ಸಿನಿಂದ ರಾಗಮಯವಾಗಿ ಓದುವ ಪಕ್ಷದಲ್ಲಿ. ಆಮೇಲೆ ನಾವು ತಿರುಗಾಡಲು ಹೊರಟೆವು. ಗಾಳಿ ನಿದ್ದೆ ಮಾಡಿತ್ತು. ದೃಶ್ಯವೆಲ್ಲ ಸಪ್ಪೆಯಾಗಿಬಿಡುತ್ತಿತ್ತು. ನಾನೂ ಇತರರಂತೆ ಸುಖವನ್ನು ಹೊರಗಡೆಯಲ್ಲಿ ಹುಡುಕುವಂತಹ ಮನಸ್ಸಿನವನಾಗಿದ್ದಿದ್ದರೆ. ಕತ್ತಲೆಯಾದ ಮೇಲೆ ಹಿಂತಿರುಗಿದೆವು. ನಮ್ಮ ಕಡೆಯ ಜಾತ್ರೆಗಳಲ್ಲಿ ನಡೆಯುವ ಆಚಾರ ಕರ್ಮಕ್ರಿಯೆಗಳ ವಿಚಾರ ಹೇಳಿದೆ. ‘ನಮ್ಮನ್ನು ಅಧೋಮುಖಕ್ಕೆ ತಳ್ಳದೆ ಊರ್ಧ್ವಮುಖರನ್ನಾಗಿ ಮಾಡಿ ಮೇಲಕ್ಕೆತ್ತುವ ಪಕ್ಷದಲ್ಲಿ ನಾನು ವಿಗ್ರಹಾರಾಧನೆಯನ್ನು ಖಂಡಿಸುವುದಿಲ್ಲ ಅಷ್ಟೇ ಅಲ್ಲ, ದೇವರಿಗಾಗಿ ಹೂ ಕುಯ್ಯುವ ನೆಪದಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿಯುವುದಕ್ಕಾಗಿ ನಾನು ‘ಮೂಢ’ನಾಗಿ ಬೇಕಾದರೂ ಆಗಲು ಹಿಂಜರಿಯುವುದಿಲ್ಲ. ಒಳಗಿದ್ದು ಜ್ಞಾನಿಯಾಗುವುದಕ್ಕಿಂತಲೂ ಹೊರಗೆ ಪ್ರಕೃತಿ ಸೌಂದರ್ಯ ಆನಂದವನ್ನು ಸವಿಯುವುದು ಸಾವಿರ ಪಾಲಿಗೆ ಮೇಲು.”

ಮೇಲಿನ ದಿನಚರಿಯಲ್ಲಿ ಉಕ್ತವಾಗಿರುವ ಕವನವು ಛಂದಸ್ಸು, ಪ್ರಾಸ ಮತ್ತು ಲಾಸ್ಯಮಯ ವೈವಿಧ್ಯಗಳಿಂದ ಇಂಪಾಗಿದೆ. ಎಂಟು ಪಂಕ್ತಿಗಳ ಹನ್ನೊಂದು ಪದ್ಯಗಳಿವೆ. ಒಂದು, ಮೂರು, ಐದು, ಏಳನೆಯ ಪಂಕ್ತಿಗಳಲ್ಲಿ ಅಂತ್ಯಃಪ್ರಾಸವಿರುವುದೂ, ಎರಡು, ನಾಲ್ಕು, ಆರು, ಎಂಟನೆಯ ಪಂಕ್ತಿಗಳಲ್ಲಿ ಒಂದೇ ತರಹದ ಅಂತ್ಯಪ್ರಾಸವಿರುವುದೂ ಛಂದೋಲಾಲಿತ್ಯಕ್ಕೆ ಪೋಷಕವಾಗಿದೆ. ವಾಚನಕ್ಕೆ ಒಂದು ಮಕ್ಕಳ ಕುಣಿತದ ಸೊಗಸು ಒದಗುತ್ತದೆ.

ಏಪ್ರಿಲ್‌೧೪ನೆಯ ಸೋಮವಾರದ ದಿನಚರಿ:

“ವ್ಯಾಯಾಮ ಮತ್ತು ಸ್ನಾನ ಪೂರೈಸಿ ನನ್ನ ಉಪನ್ಯಾಸ ‘ವಿಗ್ರಹಾರಾಧನೆ’ ಬರೆಯತೊಡಗಿದೆ. ಹತ್ತೂವರೆ ಗಂಟೆಯವರೆಗೆ ಬರೆದೆ. ಬೇರೆಬೇರೆ ಮತಗಳ ಬೇರೆಬೇರೆ ರೀತಿಯ ಪೂಜಾವಿಧಾನಗಳನ್ನು ವಿವರಿಸುವ ಅವಶ್ಯಕತೆ ತೋರಿ, ಅದನ್ನು ಮಾಡತೊಡಗಿದೆ. ಆದರೆ ಅಷ್ಟಕ್ಕೆ ನಿಲ್ಲಿಸಿ, ಯೇಸುಕ್ರಿಸ್ತನ ಜೀವನವನ್ನು ಮ್ಯಾಥ್ಯೂಸುವಾರ್ತೆ (Gospel of St. Mathew)ನಲ್ಲಿ ಓದತೊಡಗಿದೆ. ಯೇಸುವಿನ ಬೊಧನೆಯಲ್ಲಿ ನಮ್ಮ ವೈಷ್ಣವ ಮತಗಳಲ್ಲಿರುವಂತೆ ಸ್ವರ್ಗ ನರಕ ಕಲ್ಪನೆಗಳನ್ನು ಗುರುತಿಸಿದೆ. ಆದರೆ ಆತನ ನೀತಿ ಕಲ್ಪನೆಗಳು ಯಾವ ಸಮಾಜದ ನೈತಿಕ ಸುವ್ಯವಸ್ಥೆಗೂ ವಿರೋಧವಾಗಿಲ್ಲ. ನಾವು ಮೂವರು ಸಂಚಾರ ಹೊರಟೆವು. ನಾನು, ಗೋ.ಕೃ.ಶೆಟ್ಟಿ ಅವರ ಮನೆಯ ಎದುರು ಸುಮಾರು ಒಂದು ಗಂಟೆಯ ಹೊತ್ತು ನಿಂತು ಮಾತಾಡುತ್ತಿದ್ದೆವು. ರೂಮಿಗೆ ಬಂದೆ. ಮಧುರ ಗೌರಿಯ ಒಲವಿನ ನೆನಪು ಬಂದು ಭಾವವಶನಾದೆ. ‘The secret Lovers’ ಎಂಬ ಕವನ ರಚನೆ ಮಾಡಿದೆ. ನನ್ನ ಒಲವು ಯಾವಾಗಲೂ ದೈಹಿಕವಾಗಿರದೆ ಪರಿಶುದ್ಧವಾಗಿರುತ್ತದೆ ಎಂದು ಭಾವಿಸಿದೆ. ಹೊರಗೆ ತಾರಸಿಯ ಮೇಲೆ ಮಲಗಿದೆ. ತಣ್ಣಗೆ ಗಾಳಿ ಬೀಸಿದಾಗ ನನ್ನ ತಾಯಿ ಬಿಜ್ಜಣವಿಕ್ಕುತ್ತಿದ್ದಾಳೆ ಎಂದುಕೊಂಡೆ. ಹೇ ಮಧುರ ದಿವ್ಯ ಜನನಿ ನನ್ನ ಹೃದಯದಿಂದ ಎಂದೆಂದಿಗೂ ನಿನ್ನ ನೆನಪು ತೊಲಗದಿರಲಿ. ನನ್ನ ಮಧುರ ಗುರು, ನನ್ನ ಮಹಾ ಗುರು, ವಂದೇ ಸ್ವಾಮಿ ವಿವೇಕಾನಂದಮ್‌!

THE SECRET LOVERS

I have loved thee too long. My flower,
And I cannot exchange my Love;
For I wish to remain as thy lover
When we go to regions above!
O, the breeze may not know the truth
As it passes across the garden:
But I know I will spend my youth
In the joy of thy fragrant burden!

On the morn I met thee on the green
Did my love embrace thy bosom;
From that hour I hold thee as my queen;
And the bud has become a blossom.
The quick glance of thy eyes are divine,
I know not what powers thy posses;
Like celestial virtue they shine;
And like biliss they come to caress!

Thou alone of all flowers in the valley
Didst shine with celestial beauty;
And out from a bowers didst thou sally
With a smile of love-laden duty!
The sweet smile thou didst send from the bush
Filled me with a desire to be thine;
O! I do not forget the blush
That tinged thy stature divine.

Let none know the love between us,
Let it be obtruse and cherish;
E’en the winds that scatter thy tresses
Should know naught of it when they perish!
O the green beneath us shall be blind
When we kiss and caress each other;
And the angels that pass us behind
Shall ont tell of this to our Mother!

Life of death I embrace for thy sake;
Heaven or hell I’m ready to enter;
For with thee accurs’d hell doth quake,
And thy bosom is heaven’s sweet centre!
Heaven shall follow whither thou goest
For thou art born of putity;
And along thy sweet path thou sowest
Tender flowers of divinity!

I love thee in the sun and the shower
Thou dost shine in my heart as a star;
I’d be rather without a flower,
Than go from thy side afar!
I will come to thy valley ere long
Thou’ it a again embrace me with a song,
And we will make a heaven of our bower!
೧೫-೪-೧೯೨೪

ಏಪ್ರಿಲ್ ೧೫ನೆಯ ಮಂಗಳವಾರ ದಿನಚರಿ:

“ಮೊದಲೆ ಗೊತ್ತಾಗಿದ್ದಂತೆ ಎಚ್.ಎಸ್‌.ಶಿವರಾಂ, ವೆಂಕಟಸುಬ್ಬಯ್ಯ ನನ್ನ ರೂಮಿಗೆ ಬಂದರು. ಆದರೆ ದುರದೃಷ್ಟವಶಾತ್ ಗೋ.ಕೃ.ಶೆಟ್ಟಿ ಬರಲಿಲ್ಲ. ಆದ್ದರಿಂದ ನನಗೆ ಒಳ್ಳೆಯ ಅವಕಾಶ ದೊರೆಯಿತು ಶಿವರಾಂಗೆ ಕವಿತೆ ಸಾಹಿತ್ಯಗಳ ವಿಚಾರ ತಿಳಿಸಲು. ಪ್ರಸಿದ್ಧ ಲೇಖಕರಿಂದ ಭಾಗಗಳನ್ನು ಆರಿಸಿಕೊಂಡು ಅವರ ವಿಮರ್ಶೆಗಳನ್ನು ಓದಿದೆವು. ಆಮೇಲೆ ಕವಿತೆಗಳನ್ನು ತೆಗೆದುಕೊಂಡು ಓದಲಾರಂಭಿಸಿ, ವಿವರಿಸುತ್ತಾ, ಕವಿಹೃದಯದ ಅನುಭವದಲ್ಲಿ ಲೀನವಾಗಿ ತತ್ಸಂವೇದನೆಯನ್ನೆ ಪಡೆಯುತ್ತಾ ಆಲಿಸುವಂತೆ ಹೇಳಿದೆ. ಪಾಲ್ ಗ್ರೇವನ ‘ಗೋಲ್ಡನ್ ಟ್ರಿಜರಿ’ಯ ಅತ್ಯುತ್ತಮ ಕವನಗಳನ್ನೆ ಆರಿಸಿಕೊಂಡಿದ್ದೆ. ಸುಮಾರು ಮೂರು ನಾಲ್ಕ ಗಂಟೆ ಹೀಗೆ ಕಳೆಯಿತು. ಅವರು ಹೋದಮೇಲೆ ‘The Secret Love’ ಉಳಿದ ಪದ್ಯಗಳನ್ನೂ ರಚಿಸಿದೆ. ನನ್ನ ಗುಪ್ತ ಪ್ರೇಮಿ ಮತ್ತಾರೂ ಅಲ್ಲ, ನನ್ನ ಮುದ್ದು ಗೌರಿ. ಅವಳ ಮೇಲಿರುವ ನನ್ನ ಒಲವು ನನ್ನ ತಾಯಿಯ ಅಥವಾ ತಂಗಿಯ ಮೇಲಿರುವ ಒಲವಿನಷ್ಟೇ ತೀವ್ರವಾದುದು; ಆದರೆ ಅದು ಕಾಮುಕನ ಐಂದ್ರಿಯವೂ ಅಶ್ಲೀಲವೂ ಅಸಹ್ಯವೂ ಆದ ಪ್ರೇಮನಾಮಕ ಆಕರ್ಷಣೆಗಿಂತ ಭಿನ್ನವಾದುದು. ಆಮೇಲೆ ನಾನು ಮತ್ತೊಂದು ಕವನ ರಚಿಸಿದೆ, ‘The Joys of Home’[2] (ಮನೆಯ ಸುಖಸಂತೋಷಗಳು) ಎಂದು. (ಊರಿಗೆ ಹೋಗಲಾರದೆ, ಎಲ್ಲರೂ ಹೋದಮೇಲೆಯೂ, ಇಲ್ಲಿಯೆ ಇರಲೇಬೇಕಾಗಿ ಬಂದುದರಿಂದ ಊರನ್ನು ನೆನೆದು) ಭಾವಾತಿಶಯದಿಂದ ರಚಿಸಿದೆ. ಆದಷ್ಟು ಬೇಗನೆ ಊರಿಗೆ ಹೋಗಬೇಕೆಂದು ಮನಸ್ಸು ಹಾತೊರೆಯಿತು. ರಾತ್ರಿ ನಮ್ಮ ದೇಶದ ಪೂರ್ವ ವೈಭವಗಳನ್ನು ಕುರಿತು ‌ಬ್ರಾಹ್ಮಣ ಸಭ್ಯರೊಡನೆ ಮಾತಾಡುವ ಪ್ರಸಂಗ ಬಂದಿತು. ಠಾಕೂರರ The Second Birth (ದ್ವಿಜನ್ಮ) ಎಂಬ ಪ್ರಬಂಧ ಓದಿದೆ. ರಾತ್ರಿ ೪ಹ ಗಂಟೆಮೇಲೆ ಶಿವರಾಂ ಬಂದರು. ಅವರೊಡನೆ ಕವಿತೆಯ ಸ್ವರೂಪ ಕುರಿತು ಮಾತಾಡಿದೆ. ತಾಯಿ, ನಿನ್ನ ಸಾನ್ನಿಧ್ಯವನ್ನು ಎಲ್ಲೆಲ್ಲಿಯೂ ಅನುಭವಿಸುತ್ತೇನೆ; ನೀನು ಎಲ್ಲರಲ್ಲಿಯೂ ಇದ್ದೀಯೆ ಎಂಬುದನ್ನೂ ನನ್ನನ್ನೂ ನಿನ್ನಂತೆಯೆ ಭೂಮನನ್ನಾಗಿ ಮಾಡು; ನಾನು ನಿನ್ನ ಮಗು ಅಲ್ಲವೇನಮ್ಮಾ? ಹಾಗೆ ನಿನ್ನನ್ನು ಕಾಡಿಸಲು ನನಗೆ ಅಧಿಕಾರವಿಲ್ಲವೇನಾಮ್ಮಾ? ನಾನು ಪ್ರೀತಿಸುತ್ತೇನೆ, ಅಮ್ಮಾ! ವಂದೇ ಸ್ವಾಮಿ ವಿವೇಕಾನಂದಮ್‌!”

ಏಪ್ರಿಲ್ ೧೬ನೆಯ ಬುಧವಾರದ ದಿನಚರಿ:

“ಬೆಳಿಗ್ಗೆ ಎದ್ದೊಡನೆ (ತಾರಸಿಯಲ್ಲಿ ಹೊರಗೆ ಮಲಗಿದ್ದೆ.) ನನ್ನ ಕಣ್ಣು ಹೂವು ತುಂಬಿ ಮೆಲ್ಲೆಲರಿನಲ್ಲಿ ಒಯ್ಯನೆ ಒಲೆಯುತ್ತಿದ್ದ ಪೊದೆಯ ಮೇಲೆ ಬಿತ್ತು. ಕಂಡು ವಿಸ್ಮಯಗೊಂಡು ಅನಿರ್ವಚನೀಯ ಸುಖವನ್ನು ಅನುಭವಿಸಿದೆ. ಒಳಗೆ ರೂಮಿಗೆ ಬಂದು ‘The Flowers’ ಎಂಬ ಕವನ ಬರೆದಿಟ್ಟೆ. ಎಚ್‌.ಬಿ.ನಂಜಯ್ಯನ ರೂಮಿಗೆ ಹೋದೆ. ಇಬ್ಬರೂ ಸಾಹಿತ್ಯಕ ಮತ್ತು ದಾರ್ಶನಿಕ ಗ್ರಂಥಗಳನ್ನು ಓದಿದೆವು, ಅಲ್ಲಿಂದ ರೂಮಿಗೆ ಹಿಂತಿರುಗಿದೆ. ಆದರೆ ಏನೂ ಕೆಲಸ ಮಾಡಲಿಲ್ಲ. ನನ್ನ ಹೃದಯ ಯಾವುದೋ ಭಾವಸಂಚಾರದಿಂದ ಆಂದೋಲಿತವಾಯಿತು. ನನ್ನ ದಿವ್ಯಮಾತೆ ನನ್ನನ್ನು ಸರ್ವದಾ ಸುತ್ತಿ-ಮುತ್ತಿದ್ದಳು. ಕೆಲವೊಮ್ಮೆ ನನ್ನ ಮುದ್ದು ಗೌರಿಯ ರೂಪ ನನ್ನೆದುರು ನಿಲ್ಲುವುದು. ನನ್ನ ಭವಿಷ್ಯತ್ತನ್ನು ಕುರಿತು ಚಿಂತಿಸಿದೆ. ಏನೆ ಆಗಲಿ ಮಹಾಪುರುಷರು ನಡೆದ ಹಾದಿಯಲ್ಲಿಯೆ ಹೆಜ್ಜೆಯಿಡಬೇಕೆಂದು ನಿಶ್ಚಯಿಸಿದೆ. ನನ್ನ ದೇಶಕ್ಕೆ, ತನ್ಮೂಲಕ ಪ್ರಪಂಚಕ್ಕೆ ಯಾವುದಾದರೂ ಒಂದು ರೀತಿಯಲ್ಲಿ ನೆರವಾಗಬೇಕೆಂದು ಮನಸ್ಸು ಮಾಡಿದೆ. ಅನೇಕ ವಿಘ್ನಗಳು ನನ್ನ ಮುಂದೆ ನಿಲ್ಲುವಂತೆ ತೋರಿತು; ಆದರೆ ನನಗೆ ನೆರವಾಗುವಂತೆ ನನ್ನ ತಾಯಿಯನ್ನು ಬೇಡಿಕೊಂಡೆ. ಸಂಜೆ ನಾವು ತಿರುಗಾಟಕ್ಕೆ ಹೋದಾಗ ಜನರ ಮೂಢನಂಬಿಕೆಗಳನ್ನೂ ಅಜ್ಞಾನವನ್ನೂ ಕುರಿತು ಮಾತಾಡುತ್ತಾ ಹೋದೆವು. ಜನರ ಮೌಢ್ಯಪರವಾದ ವಾದಗಳನ್ನು ಪ್ರತಿವಾದದ ಗುಡುಗಿನಿಂದ ನಿವಾರಿಸಬೇಕೆಂದೂ, ಅವರ ಮೂಢನಂಬಿಕೆಗಳನ್ನು ಅವಕ್ಕಿಂತಲೂ ಉತ್ತಮ ತರವಾದ ನಂಬಿಕೆಗಳನ್ನು ನೀಡುವುದರಿಂದ ಪರಿಹರಿಸಬೇಕೆಂದೂ ನಾನು ಸಲಹೆಯಿತ್ತೆ. ‘ಓ ತಾಯಿ, ಯಾಕೆ ಹೀಗೆ ಕುರಿಡಿಯಾಗಿ ಕುಳಿತಿದ್ದೀಯಾ ಜನರ ಹೃದಯಗಳಲ್ಲಿ?’ ರಾತ್ರಿ ಬಾಬಾ ಪ್ರೇಮಾನಂದ ಭಾರತಿಯವರ ಆತ್ಮಕಥೆಯನ್ನು ಓದಿದೆ, ಅವರ ಬದುಕು ನನ್ನ ಬದುಕಿಗೆ ಏನಾದರೂ ಬೆಳಕುತಂದು ನಡೆಸಬಹುದು. ತಾಯಿ, ನಿನ್ನ ಸಾನಿಧ್ಯ ನನ್ನ ಹೃದಯ, ಮನಸ್ಸು, ಆತ್ಮಗಳನ್ನೇ ತುಂಬಲಿ! ನನ್ನ ದೌರ್ಬಲ್ಯವನ್ನು ಊದಿ ತೂರಿಬಿಡಾಚೆ! ನನ್ನಲ್ಲಿ ಅಗ್ನಿಜ್ಯೋತಿಯನ್ನು ಹೊತ್ತಿಸು, ನನ್ನ ದೇಶದ ಮತ್ತು ಜಗತ್ತಿನ ಅಜ್ಞಾನ ಮೌಢ್ಯಗಳನ್ನು ದಹಿಸಿಬಿಡಲು ಸಮರ್ಥನಾಗುವಂತೆ. ಓಂ! ವಂದೇ ಸ್ವಾಮಿ ವಿವೇಕಾನಂದಮ್‌.”

THE FLOWERS

Who are ye, sweet Flowers?
And Whence do ye come?
Ye adorn the bowers
And pass away dumb!

Some angels from heaven
Or maidens of mirth
From the firmament driven
For their second birth?

Some children of youth
Withered ere life’s bloom?
Or messengers of truth?
Or proclaimers of doom?

Or some poets who died
Ere they poured their arts?
Or some lovers who vied
In loving their sweet hearts?

I know not who ye are,
But I know how to love;
And to me a star
Is less dear tho’ above.

As I pass the bower
Oft I stand and kiss
Like a child each flower,
And feel some sweet bliss!
And I hold too dear
My credulity:
That a flower has a tear,
And a flower can pity!

Why should man be vain
And decry all others
When the flowers feels the pain
That disturbs their brothers?

ಏಪ್ರಿಲ್‌ ೧೭ನೆಯ ಗುರುವಾರದ ದಿನಚರಿ:

“ಬೆಳಿಗ್ಗೆ ಎದ್ದು ವ್ಯಾಯಾಮ ಮಾಡಿದೆ. ಎಚ್.ಎಸ್‌. ಮಂಜಪ್ಪಗೌಡರಿಂದ ಮತ್ತು ಕುಪ್ಪಳ್ಳಿ ರಾಮಣ್ಣಗೌಡರಿಂದ ಕಾಗದ ಬಂದಿವೆ. ‘ಬೃಹತ್ ಸ್ತೋತ್ರ ರತ್ನಾಕರ’[3]ವನ್ನು ಕೊಳ್ಳಲು ನಂಜಯ್ಯನಿಂದ ಹಣ ತೆಗೆದುಕೊಳ್ಳಲು ಅವರ ರೂಮಿಗೆ ಹೋಗಿದ್ದೆ. ಗುರುಗಳು ಮತ್ತು ಮೂಢಜನರು ಇವರ ಆಷಾಢಭೂತಿತನದ ವಿಚಾರ ಮಾತಾಡಿದೆವು, ಈ ಸಂಪ್ರದಾಯ ಗುರುಗಳನ್ನು ಪೂಜಿಸುವುದಾದರೆ, ಇತರ ಸುಪ್ರಸಿದ್ಧ ಮಹಾಪುರುಷರನ್ನೂ ಏಕೆ ಪೂಜಿಸಬಾರದು? ಆದರೆ ಈ ಪೂಜೆಯಿಂದ ಜನರು ಹೆಚ್ಚು ಹೆಚ್ಚು ಉತ್ತಮ ಜೀವನ ನಡೆಸಲು ಸಾಧ್ಯವಾಗುವ ಪಕ್ಷದಲ್ಲಿ ನನ್ನದೇನೂ ಅಭ್ಯಂತರವಿಲ್ಲ. ಸಂಜೆ ನಾನು, ಗೋ.ಕೃ.ಶೆಟ್ಟಿ ವಾಕ್ ಹೋದಾಗ ವೈಶ್ಯರಿಗೂ ಅವರ ಗುರುಗಳಿಗೂ ಆಗುತ್ತಿರುವ ತಿಕ್ಕಾಟದ ವಿಚಾರ ತಿಳಿಸಿದರು. ಯಾರೋ ಒಬ್ಬ ಗುರುಗಳ ಅಡ್ಡಪಲ್ಲಕ್ಕಿಯ ವೈಭಪೋಪೇತ ಉತ್ಸವ ಮೆರವಣಿಗೆಯಲ್ಲಿ ಸಾಗುತ್ತಿತ್ತು. ರಾತ್ರಿ ‘ಬೃಹತ್ ಸ್ತೋತ್ರರತ್ನಾಕರ’ ಓದಿದೆ. ತಾಯಿ, ನಾನು ನಿನ್ನನ್ನು ಬೇಗ ಪಡೆಯಲು ಅನುಕೂಲವಾಗುವಂತೆ ನನಗೆ ಇಂದ್ರಿಯ ಸಂಯಮದ ಸಾಮರ್ಥ್ಯವನ್ನು ದಯಪಾಲಿಸು!”

ಎಪ್ರಿಲ್ ೧೮ನೆಯ ಶುಕ್ರವಾರದ ದಿನಚರಿ:

“ನನಗೆ ತುಂಬಾ ವ್ಯಸನವಾಗುತ್ತದೆ, ಎಷ್ಟೋಸಾರಿ ಪ್ರತಿಜ್ಞೆ ಮಾಡಿದ್ದರೂ ಆಣೆಯಿಟ್ಟುಕೊಂಡಿದ್ದರೂ ಅಸಂಯಮಿಯಾಗಿ ಇಂದ್ರಿಯ ದೌರ್ಬಲ್ಯವಶನಾಗುತ್ತಿದ್ದೇನಲ್ಲಾ ಎಂದು. ಋಷಿಯ ವೇಷದ ಆಷಾಢಭೂತಿ! ಇಷ್ಟೊಂದು ಸಂಯಮ ಸಾಧನೆಯಲ್ಲಿಯೂ ಪಾಪಕಾರ್ಯ! ತಾಯಿ, ಮತ್ತೆ ನಾನು ಪಾಪಕಾರ್ಯದಲ್ಲಿ ತೊಡಗದಂತೆ ನನ್ನನ್ನು ರಕ್ಷಿಸಮ್ಮಾ!” ‘ವಿಗ್ರಹಾರಾಧನೆ’ ಉಪನ್ಯಾಸ ಸ್ವಲ್ಪ ಬರೆದೆ. ಆಮೇಲೆ ನಿದ್ರಿಸಿದೆ. ಗೋ.ಕೃ.ಶೆಟ್ಟಿ, ನಾನು, ಎಚ್‌.ಎಸ್. ವೆಂಕಟಸುಬ್ಬಯ್ಯ ವಾಕ್ ಹೋಗಿ ಕಾರಂಜಿ ಕರೆಯ ಮೇಲೆ ಕುಳಿತೆವು. ಚಂದ್ರನು ಉಜ್ವಲವಾಗಿ ಹೊಳೆಯುತ್ತಿದ್ದನು. ವೈಡೂರ್ಯದ ಸಮುದ್ರದಲ್ಲಿ ಮುತ್ತಿನ ಹೊಳೆಗಳೆ ನರ್ತಿಸುವಂತೆ ಚಂದ್ರಕಿರಣಗಳು ಕೆರೆಯ ನೀರಿನಲ್ಲಿ ರಾರಾಜಿಸುತ್ತಿದ್ದುವು. ಸುಮ್ಮನೆ ನೋಡುತ್ತಾ ಕುಳಿತಿದ್ದೆ. ರೂಮಿಗೆ ಹಿಂತಿರುಗಿ ಬರುತ್ತಾ ಪೇಟೆಯಲ್ಲಿ ಸ್ವಲ್ಪ ಒರಟುಕಾಗದ ಕೊಂಡೆ. ‘ಅಮಲನ ಕಥೆ’ಯಲ್ಲಿ[4] ಕೆಲವು ಪದ್ಯಗಳನ್ನು ರಚಿಸಿದೆ…. ಹೊರಗೆ ತಾರಸಿಯ ಮೇಲೆ ಒಬ್ಬನೆ ಮಲಗಿದೆ.

ಹೇ ದಿವ್ಯಮಾತೆ. ನನ್ನ ಮೇಲೆ ನಿನ್ನ ಪ್ರೀತಿಯನ್ನು ಅನುಗ್ರಹಿಸು. ವಂದೇ ಸ್ವಾಮಿ ವಿವೇಕಾನಂದಮ್‌.!”

ಏಪ್ರಿಲ್ ೧೯ನೆಯ ಶನಿವಾರದ ದಿನಚರಿ:

“ಬೆಳಿಗ್ಗೆ ಎದ್ದು ನೋಡುತ್ತೇನೆ, ಆ ಹುಚ್ಚ ಬಾಗಿಲು ಮುಚ್ಚಿದ್ದ ನನ್ನ ರೂಮಿನೊಳಕ್ಕೆ ಕಿಟಕಿಯಿಂದ ಒಂದಷ್ಟು ರಾಶಿ ಮಲ್ಲಿಗೆ ಹೂಗಳನ್ನೂ ಇತರ ಬಣ್ಣಬಣ್ಣದ ಸುಂದರ ಪುಷ್ಪಗಳೊಡನೆಯೂ ಮತ್ತು ಊದಿನಕಡ್ಡಿಯ ಕಟ್ಟುಗಳ ಸಹಿತವಾಗಿಯೂ ತೂರಿಸುತ್ತಿದ್ದ. ನಾನೆಲ್ಲಿಯೊ ನೋಡಿದ ಹಾಗಿದ್ದ ಆ ಹುಚ್ಚ ನನಗೆ ಮುಖವನ್ನೂ ತೋರಿಸದೆ ಹೊರಟೆಹೋಗಿಬಿಟ್ಟ. ‘ಅಮಲನ ಕಥೆ’ಯ ಕೆಲವು ಪ್ರಾರ್ಥನಾ ಪದ್ಯಗಳನ್ನು ರಚಿಸಿದೆ. ಸಂಜೆ ವಾಕ್ ಹೋಗಿದ್ದೆವು. ನನಗೂ ಸ್ನೇಹಿತನಿಗೂ ‘ವಿಜ್ಞಾನ ಮತ್ತು ಸೌಂದರ್ಯ’ ಇವುಗಳ ವಿಚಾರವಾಗಿ ಅಲ್ಪವಾದ ಮತ್ತು ಮಹತ್ತಾದ ವಾಗ್ವಾದ ನಡೆಯಿತು. ನಮ್ಮ ವಾಗ್ವಾದ ಅಷ್ಟೇನೂ ತರ್ಕಬದ್ಧವಾಗಿರಲಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಅವನದೂ ನನ್ನದೂ ತುಂಬ ರೂಕ್ಷಸ್ತರದ ವಾದವಾಗಿತ್ತು. ಅದಕ್ಕಾಗಿ ನನಗೆ ಈಗಲೂ ನಾಚಿಕೆಯಾಗುತ್ತೆ. ರಾತ್ರಿ ರವೀಂದ್ರರ ಎರಡು ಪ್ರಬಂಧಗಳನ್ನು ‘The Realisation in Beauty’, ‘The Realisation.in Love’ ಓದಿದೆ. ಓ ಜಗನ್ಮಾತೆ, ನೀನೇ ಎಲ್ಲವೂ ಆಗಿದ್ದೀಯೆ; ನೀನಲ್ಲದೆ ಬೇರೆ ಎನೂ ಇಲ್ಲ! ವಂದೇ ಸ್ವಾಮಿ ವಿವೇಕಾನಂದಮ್‌.!”

ಏಪ್ರಿಲ್ ೨೦ನೆಯ ಭಾನುವಾರದ ದಿನಚರಿ:

“ಬೆಳಿಗ್ಗೆ ಗೋ.ಕೃ.ಶೆಟ್ಟಿ ಮತ್ತು ಎಚ್‌.ಎಸ್‌. ಶಿವರಾಂ ಜೊತೆ ಪಾರ್ಕಿಗೆ ‘ಕೆಮಿಷ್ಟ್ರಿ’ ಅಧ್ಯಯನ ಮಾಡಲು ಹೋದೆ. ಆದರೆ ಅಲ್ಲಿ ನನ್ನ ಮನಸ್ಸು ಪ್ರಕೃತಿಯ ಸೌಂದರ್ಯಕ್ಕೆ ಸೆರೆಯಾಯಿತು. ಅಳಿಲುಗಳು ಒಂದನ್ನೊಂದು ಅಟ್ಟಿ ಆಡುತ್ತಿದ್ದವು. ಅತ್ಯಂತ ಚಮತ್ಕಾರದಿಂದ ಒಂದನ್ನೊಂದು ಸೋಲಿಸಲು ಹವಣಿಸುತ್ತಿದ್ದುವು. ನನಗಂತೂ ನನ್ನ ದಿವ್ಯ ತಾಯಿ ಎಲ್ಲೆಲ್ಲಿಯೂ ಇರುವಂತೆ ಭಾಸವಾಯಿತು. ಆ ತಾಯಿಯಲ್ಲಿ ಒಂದಾಗುವ ನಿರವಧಿ ಸುಖದಲ್ಲಿ ಮುಳುಗಿಹೋದೆ. ಅವಳ ಕೃಪೆಯ ಕಟಾಕ್ಷ ನನ್ನನ್ನೆ ಈಕ್ಷಿಸುವಂತೆ ತೋರಿ ಮಾತಿಗೆ ಮೀರಿದ ಆನಂದವನ್ನು ಅನುಭವಿಸಿದೆ. ಕೆಮಿಸ್ಟ್ರಿಗೂ ನನಗೂ ಬಹು ದೂರ ಇರುವಂತಾಯಿತು!” ರೂಮಿಗೆ ಬಂದಮೇಲೆ ಠಾಕೂರರ ‘Soul Conciousness’ ಓದಿದೆ. ‘ಅಮಲನ ಕಥೆ’ಯನ್ನು ಹಸ್ತಪ್ರತಿಗೆ ಬರೆದ. ಬಿ. ಅನಂತರಾಮಯ್ಯ ಬಂದರು. ಅವರಿಗೆ ನನ್ನ ಇತ್ತೀಚಿನ ಕವನಗಳನ್ನೆಲ್ಲ ಓದಿದೆ. ಶೆಲ್ಲಿಯ ‘Defence of Poetry’ಯ ಭವ್ಯಭಾಗಗಳನ್ನು ಅವರಿಗೆ ಓದಿದೆ. ಶೆಲ್ಲಿಯ ಸಿದ್ಧಾಂತವನ್ನು ಸಮರ್ಥಿಸಲು ನನ್ನ ಅನುಭವವನ್ನೆ ಮುಂದೊಡ್ಡಿದೆ: ಸ್ಫೂರ್ತಿಯಿಲ್ಲದೆ ಕವಿ ಬರೆಯಲಾರ ಎಂಬುದಕ್ಕೆ. ನಮ್ಮ ಇಚ್ಛೆ ಬಂದಾಗೆಲ್ಲ ನಾವು ಕವನರಚನೆ ಮಾಡಲಾರೆವು. ನಮ್ಮ ದಾರ್ಶನಿಕರಲ್ಲಿ ಕೆಲವನ್ನಾದರೂ ಓದಲು ಅವರಿಗೆ ಹೇಳಿದೆ. ಏಕೆಂದರೆ ಕಾವ್ಯ (Poetry) ಮತ್ತು ದರ್ಶನ (Philosophy) ಎರಡೂ ನಮ್ಮಾತ್ಮದ ಜೇನುಗೂಡು (honey-stores)ಗಳಿರುವಂತೆ. ವಂದೇ ಸ್ವಾಮಿ ವಿವೇಕಾನಂದಮ್‌.!”

ಏಪ್ರಿಲ್ ೨೧ನೆಯ ಸೋಮವಾರದ ದಿನಚರಿ:

“ಬೆಳಿಗ್ಗೆ ನನ್ನ ಮನಸ್ಸನ್ನು ಬಲಾತ್ಕಾರದಿಂದ ಕೆಮಿಸ್ಟ್ರಿ ಓದುವ ಕಡೆಗೆ ತಿರುಗಿಸಿದೆ. ಅದರೇನು ಅದು ಆ ವಿಷಯದತ್ತ ಹೋಗುವುದಕ್ಕೆ ಬದಲಾಗಿ ನಿತ್ಯತತ್ತ್ವದ (Thoughts of the Eternal) ಚಿಂತನದಲ್ಲಿ ಲೀನವಾಯಿತು. ಆದರೆ ಮತ್ತೆ ಅದನ್ನು ಬಲಾತ್ಕಾರಿಸಿ ಕೆಮಿಸ್ಟ್ರಿಯ ಕಡೆಗೆ ತಿರುಗುವಂತೆ ಮಾಡಿದೆ. ದೇಶ ಮತ್ತು ಜನರ ಸೇವೆಯೆ ನನ್ನ ಗುರಿ. ನಾನು ಕವಿತೆ ಬರೆಯುವುದು ಮತ್ತೇತಕ್ಕೂ ಅಲ್ಲ, ನನ್ನ ಆತ್ಮಾನಂದಕ್ಕಾಗಿ. ಮತ್ತು ಇತರರೂ ಸ್ವಾಗತಿಸಿದರೆ ಅವರಿಗೂ ಆ ಆನಂದ ನೀಡುವುದಕ್ಕಾಗಿ. ತರುವಾಯ ನನ್ನ ಕನ್ನಡ ಕವನಗಳನ್ನು ಹಸ್ತಪ್ರತಿಗೆ ಬರೆದೆ. ಇವೊತ್ತು ಎಂ.ಬಸವರಾಜು ಊರಿಂದ ಬಂದರು, ಸಂಜೆ ವಾಕ್ ಹೋಗಲಿಲ್ಲ. ಇಸ್ಪೀಟು ಆಡಿದೆವು. ರಾತ್ರಿ ಬಸವರಾಜುಗೆ ನನಗೆ ತುಂಬ ಪ್ರಿಯವಾದ ಶೆಲ್ಲಿಯ ‘Defence of Poetry’ಯ ಭಾಗಗಳನ್ನು ಓದಿದೆ. ರಾತ್ರಿ ಭಗದ್ಗೀತೆಯ ಕೆಲವು ಶ್ಲೋಕಗಳನ್ನು ಓದಿದ ಅನಂತರ ಮಲಗಲು ಹೋದೆ. ಹಾಸಗೆಯಲ್ಲಿ ಮಲಗಿಯೆ ‘Kisses’’ (ಮುತ್ತುಗಳು) ಎಂಬ ಕವನ ರಚನೆಗೆ ಪ್ರಾರಂಭಿಸಿದೆ. ನನ್ನ ದಿವ್ಯಜನನಿಯನ್ನೂ ಆಕೆಯ ವಿಭೂತಿಗಳನ್ನೂ ಕುರಿತು ಯೋಚಿಸಿದೆ. ಅಮ್ಮಾ, ನಿನ್ನ ಕಂದನಿಗೆ ನಿನ್ನ ಪ್ರೇಮವನ್ನಲ್ಲದೆ ಇನ್ನೇನನ್ನೂ ಕೊಡಬೇಡ! ನನ್ನ ಮಹಾ ಆಚಾರ್ಯನಿಗೆ, ನನ್ನ ಮಹಾ ಗುರುದೇವನಿಗೆ ಸ್ವಾಮಿ ವಿವೇಕಾನಂದರಿಗೆ ಜಯವಾಗಲಿ!’’ ಹಿಂದಿನ ಎಲ್ಲ ಮಹಾ ಗುರುಗಳಿಗೂ ನನ್ನ ನಮನ. ಓಂ!”

ಏಪ್ರಿಲ್ ೨೨ನೆಯ ಮಂಗಳವಾರದ ದಿನಚರಿ:

“ಬೆಳಿಗ್ಗೆ ಎದ್ದು ದೈನಂದಿನ ವ್ಯಾಯಾಮ ತೆಗೆದುಕೊಳ್ಳದೆ, ಸ್ನಾನಕ್ಕೆ ಹೋದೆ. ನಾನು ಬಸವರಾಜು ಕೆಮಿಸ್ಟ್ರಿ ಅಧ್ಯಯನ ಮಾಡಲು ಪಾರ್ಕಿಗೆ ಹೋದೆವು. ಸುಮಾರು ನಾಲ್ಕು ಗಂಟೆ ಅಲ್ಲಿದ್ದೆವು. ರೂಮಿಗೆ ಹಿಂದಕ್ಕೆ ಬಂದಮೇಲೆ ನಿನ್ನೆ ರಾತ್ರಿ ಮಲಗಿದ್ದಲ್ಲಿಯೆ ರಚಿಸಲು ತೊಡಗಿದ್ದ ‘Kisses’ ಎಂಬ ಕವನದ ಕೆಲವು ಪದ್ಯಗಳನ್ನು ಮುಂದುವರಿಸಿದೆ. ಆಮೇಲೆ ಇಸ್ಪೀಟು ಆಡಿದೆವು. ಮತ್ತು ಮಲಗಿ ನಿದ್ರೆಹೋದೆ. ಒಬ್ಬ ಸ್ಕೂಲ್ ಜವಾನ ಬಂದು ಎಚ್ಚರ ಮಾಡಿದ. ಅವನು ಹಣ ಕೇಳಲು ಬಂದಿದ್ದ. ಆಮೇಲೆ ಕರಣಿಕರ ಹಣ ಕೇಳಲು ಬಂದರು. ಇವೊತ್ತು ವಾಕ್‌ಹೋಗಲಿಲ್ಲ. ಮಧ್ಯಾಹ್ನ ಎಚ್.ಎಸ್‌.ಶಿವರಾಂ ಒಡನೆ ವಿಜ್ಞಾನ ಮತ್ತು ಸೌಂದರ್ಯ (Scince and Beauty) ವಿಚಾರವಾಗಿ ಮಾತಾಡಿದೆ. ‘ವಿಗ್ರಹಾರಾಧನೆಯ’ಯ ಮೇಲೆ ಬರೆದ ನನ್ನ ಉಪನ್ಯಾಸವನ್ನು ಅವರು ಓದಿದರು. ರಾತ್ರಿ ಕೆ.ಮಲ್ಲಪ್ಪ ಅವರ ಊರಿಂದ ಹಠಾತ್ತನೆ ಬಂದರು. ಅವರ ಊರಿನ ವಿಚಾರ ಬಹಳ ಹೊತ್ತು ಮಾತಾಡಿದೆವು. ತಾಯಿ, ಈ ಹೂವನ್ನು ನಿನ್ನ ಎದೆಗಪ್ಪಿಕೊ; ಅದು ಅಲ್ಲಿ ಹೊಳೆಯುತ್ತಿರಲಿ, ಇನ್ನಾರೂ ಅದನ್ನು ಉಪಯೋಗಿಸದಿದ್ದರೆ! ಮನೋಬುದ್ಧಿ ಅಹಂಕಾರ ನಾಹಂ ನ ಶ್ರೋತ್ರಂ ನ ಜಿಹ್ವಾ…. Hail Holy Men of the past. Present and future! (ಭೂತ ವರ್ತಮಾನ ಮತ್ತು ಭವಿಷ್ಯತ್ತಿನ ಎಲ್ಲ ಪವಿತ್ರ ಗುರುಗಳಿಗೂ ನಮೋನಮಃ!)

 


[1] Alien Harp. Pp.೬೯-೭೨

[2] Alien Harp. Pp-೭೩-೭೪

[3] ತೆಲುಗು ಲಿಪಿಯಲ್ಲಿದ್ದ ಸಂಸ್ಕೃತ ಭಾಷೆಯ ಆ ಬೃಹತ್ ಸ್ತೋತ್ರರತ್ನಾಕರವು ನನಗೆ ನಮ್ಮ ಛಂದಸ್ಸಿನ ಮಹಿಮೆಯನ್ನೂ ಪದಮಾಧುರ್ಯದ ಲಾಲಿತ್ಯ ಸೌಂದರ್ಯ ಭವ್ಯತೆಯನ್ನೂ ಮನದಟ್ಟು ಮಾಡಿಕೊಳ್ಳಲು ತುಂಬಾ ಸಹಾಯ ಮಾಡಿತು. ಆ ಸ್ತೋತ್ರಗಳನ್ನು ರಾಗವಾಗಿ ಹೇಳಿಕೊಂಡು ಎಷ್ಟು ಆನಂದಪಟ್ಟೆನೊ! ರಂಜನೆ ಉತ್ಕರ್ಷ ಎರಡನ್ನೂ ಅನುಭವಿಸುತ್ತಾ!

[4] ೧೯೨೪ನೆಯ ಏಪ್ರಿಲ್ ೧೮ನೆಯ ಶುಕ್ರವಾರದಲ್ಲಿ ‘ಅಮಲನ ಕಥೆ’ ಬರೆಯುತ್ತಿದ್ದೆ ಎಂದು ಈ ದಿನಚರಿಯಿಂದ ತಿಳಿಯುವುದರಿಂದ ನಾನು ಕನ್ನಡದಲ್ಲಿ ಬರೆಯುವ ಪ್ರಯತ್ನವನ್ನು ಶ್ರೀಯುತ ಜೇಮ್ಸ್ ಎಚ್‌.ಕಸಿನ್ಸ್‌ಅವರನ್ನು ಸಂಧಿಸುವ ಮೊದಲೇ ಪ್ರಾರಂಭಿಸಿದ್ದೆನಂದಾಗುತ್ತದೆ.