ಜೂನ್ ೧೯ರಿಂದ ೨೨ರವರೆಗೆ ಖಾಲಿ ಹಾಳೆಗಳಿವೆ. ಜೂನ್ ೨೩ನೆಯ ಸೋಮವಾರದ ದಿನಚರಿ ಹೀಗಿದೆ: “ದೀರ್ಘ ಪ್ರಯಾಸಕರವಾದ ರೈಲಿನ ಪಯಣಮಾಡಿ ನಾನಿಂದು ಮೈಸೂರಿಗೆ ಬಂದೆ. ಬಂದಾಗ ಪರಿಚಿತ ಮುಖಗಳೆಲ್ಲ ನನ್ನನ್ನು ಸುಸ್ವಾಗತಿಸಿದುವು. ನನಗೆ ಆ ಸ್ವಾಗತ ಸ್ವರ್ಗೀಯವಾಗಿತ್ತು. ಏನು ನಗೆ, ಏನು ಹರಟೆ, ಏನು ಕೂಗಾಟ, ಏನು ಕೇಕೆ, ನಮ್ಮ ಚಿಕ್ಕ ಕೊಠಡಿಯೆಲ್ಲ ಹರ್ಷದಿಂದ ತುಂಬಿಹೋಗಿತ್ತು. ನಾಲ್ಕು ಕಾಗದಗಳನ್ನು ಬರೆದೆ ಮತ್ತು ಒಂದು ಸೀಟಿಗೆ ಅರ್ಜಿ ಹಾಕಿದೆ”.

ಬೇಸಗೆ ರಜದಲ್ಲಿ ಬರೆದ ದಿನಚರಿಯನ್ನು ಅವಲೋಕಿಸಿದರೆ ಒಂದು ವಿಷಯ ಎದ್ದು ಕಾಣುತ್ತದೆ. ಕಾವ್ಯಕ್ಕೂ ಆಧ್ಯಾತ್ಮಕ್ಕೂ ಪ್ರಕೃತಿಸೌಂದರ್ಯಾದಿಗಳಿಗೂ ಸಂಬಂಧಿಸಿದ ವಿಚಾರಗಳಿಗಲ್ಲದೆ ಬೇರೆಯ ‘ಮನೆಯ ಬದುಕಿನ’ ಕಡೆಗೆ ಅಲ್ಲಿ ಇನಿತೂ ಗಮನ ಹರಿದಿಲ್ಲ. ಅದು ಅತ್ಯಂತ ಅಸ್ವಾದ್ಯವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅತಿ ಪರಿಚಯದಿಂದ ಅವಜ್ಞತವಾಗಿತ್ತೆಂದು ತೋರುತ್ತದೆ. ನನ್ನ ತಾಯತಂಗಿಯರ ಯಾವ ಪ್ರಸ್ತಾಪವೂ ಅಲ್ಲಿಲ್ಲ. ನನ್ನ ನೆನಪು ಖಾತ್ರಿಯಾಗಿಲ್ಲ! ಆದರೂ ನಾನು ಊಹಿಸುವಂತೆ ಆ ಬೇಸಿಗೆಯ ರಜದಲ್ಲಿ ನನ್ನ ತಾಯಿ ತಂಗಿಯರು ತಮ್ಮ ತವರಿನಲ್ಲಿದ್ದರೆಂದು ತೋರುತ್ತದೆ. ನಾನು ಹಿರಿಕೊಡಿಗೆಗೆ ಹೋಗಿ ಅವರನ್ನು ಕಂಡೂ ಇಲ್ಲ, ಕರೆತರಲೂ ಇಲ್ಲ. ನನ್ನ ತಾಯಿ ಬರಲೂ ಇಲ್ಲ. ಪುಟ್ಟಣ್ಣ ಅಲ್ಲಿಗೆ ಹೋಗಿದ್ದವನು ನನಗೆ ಹೇಳಿದಂತೆ ಜ್ಞಾಪಕ: ‘ಅವರು ಕಣ್ಣಲ್ಲಿ ನೀರು ತಂದುಕೊಂಡರು’ ಎಂದು. ಅವರು ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರೊಡನೆ ಏನೊ ಮನಸ್ತಾಪದಿಂದ ತವರಿಗೆ ಹೋಗಿದ್ದರೆಂದು ಊಹಿಸುತ್ತೇನೆ. ಏಕೆಂದರೆ ನಾನು ಮೈಸೂರಿನಲ್ಲಿದ್ದಾಗಲೇ ರಾಮಣ್ಣಗೌಡರು ನನಗೆ ಒಂದು ಕಾರ್ಡಿನಲ್ಲಿ ಬರೆದಿದ್ದಂತೆ ನೆನಪು: ‘ನಿನ್ನ ತಾಯಿ ಮಕ್ಕಳನ್ನೂ ಕರೆದುಕೊಂಡು ತವರುಮನೆಗೆ ಹೋಗಿ ಕೂತಿದ್ದಾಳೆ. ತಾನೂ ಕೆಡುವುದಲ್ಲದೆ ಮಕ್ಕಳನ್ನೂ ಕೆಡಿಸುತ್ತಿದ್ದಾಳೆ’ ಎಂದು. ಆಗ ನನ್ನ ಸಮಸ್ತ ಚೇತನವನ್ನೂ ಒಂದು ಅಲೌಕಿಕತೆ ಆಕ್ರಮಿಸಿಕೊಂಡಿರದಿದ್ದರೆ ನಾನು ಹಿರಿಕೊಡಿಗೆಗೆ ಹೋಗಿ ಅವ್ವನನ್ನು ಕಂಡು, ವಿಚಾರಿಸಿ, ವಿಷಯ ಏನು ಎಂಬುದನ್ನು ತಿಳಿದು, ಮುಂದೆ ಏನು ಮಾಡಬೇಕೊ ಅದನ್ನು ಮಾಡುತ್ತಿದ್ದೆ. ಆದರೆ ಜಗಜ್ಜನನಿಯ ಇಚ್ಛೆ ಬೇರೆಯಾಗಿತ್ತೆಂದು ತೋರುತ್ತದೆ, ಹಾಗೆ ಮಾಡಲಿಲ್ಲ. ಕವನ ಬರೆಯುವುದು, ವಿಭೂತಿಪುರುಷರ ಆರಾಧನೆ ಮಾಡುವುದು, ಏನೋ ಒಂದು ಮಹತ್ತಾದುದನ್ನು ಸಾಧಿಸಲು ನಾನು ಹುಟ್ಟಿದ್ದೇನೆ ಎಂಬ ಒಂದು ರೀತಿಯ ಅಹಂಕಾರದ ಮಹಾತ್ವಾಕಾಂಕ್ಷೆಯ ಬೆಂಕಿ ಹೊತ್ತಿ ಉರಿಯುವುದು, ಎಲ್ಲವನ್ನೂ ಜಗನ್ಮಾತೆಗೆ ಅರ್ಪಿಸುವ ಸಾಧನೆಯಲ್ಲಿ ತೊಡಗುವುದು, ಸ್ವಾಮಿ ವಿವೇಕಾನಂದರು, ಶ್ರೀರಾಮಕೃಷ್ಣ ಪರಮಹಂಸರು ಮುಂತಾದ ಮಹಾಪುರುಷರ ಹಾದಿಯಲ್ಲಿ ಹೋಗಬೇಕು ಎಂಬ ಅಭೀಪ್ಸೆಯನ್ನು ಹೃದಯದಲ್ಲಿ ಬಲಿಯುವುದು ಇತ್ಯಾದಿ ಇತ್ಯಾದಿ ಅರ್ಧ ವಿವೇದ ಅರ್ಧ ಅವಿವೇಕಗಳಲ್ಲಿ ನನ್ನ ಪ್ರಜ್ಞೆ ಅರ್ಧಮೂರ್ಛಿತ ಸ್ಥಿತಿಯಲ್ಲಿ ಮುಂದುವರಿಯುತ್ತಿತ್ತೆಂದು ಭಾಸವಾಗುತ್ತದೆ. ನನ್ನ ಚೈತನ್ಯಾಶ್ವವನ್ನೇರಿ ಅದಕ್ಕೆ ಮೂಗುದಾರವಿಕ್ಕಿ ಏನೊ ಒಂದು ನಿಷ್ಠುರ ಅತೀತಶಕ್ತಿ ಸವಾರಿ ಮಾಡುತ್ತಿದ್ದಂತೆ ಕಾಣುತ್ತದೆ!

೨೫ನೆಯ ತಾರೀಖು ಸೋಮವಾರ ಮೈಸೂರಿಗೆ ಬಂದವನು ಮಹಾರಾಜಾ ಕಾಲೇಜಿನಲ್ಲಿ ಮೊದಲನೆಯ ವರ್ಷದ ಬಿ.ಎ.ಗೆ ಸೇರಲು ಒಂದು ಸೀಟಿಗೆ ಅರ್ಜಿ ಹಾಕಿದೆ. ನನ್ನ ಐಚ್ಛಿಕ ವಿಷಯಗಳು ಪಿ.ಎಂ.ಎಂ. ವೈಜ್ಞಾನಿಕವಾಗಿದ್ದರೂ ನಾನು ಬೆಂಗಳೂರಿಗೆ ಹೋಗಬೇಕಾದುದರಿಂದ ಪಾರಾಗಲೂ ಮತ್ತು ನನ್ನ ಕವಿಚೇತನಕ್ಕೆ ಹೆಚ್ಚು ಅಪೇಕ್ಷಣೀಯವೂ ಪ್ರಯೋಜನಕರವೂ ಆಗುತ್ತದೆಂಬ ಕಾರಣಕ್ಕಾಗಿಯೂ ಆರ್ಟ್ಸ್‌ವಿಭಾಗವನ್ನೆ ಆರಿಸಿಕೊಂಡಿದ್ದೆ. ೨೪ರಿಂದ ೨೭ರವರೆಗೆ ದಿನಚರಿ ಬರೆದಿಲ್ಲ. ಅಂದರೆ ಕಾಲೇಜಿಗೆ ಸೇರುವ ಸಂಭ್ರಮದ ಓಡಾಟದಲ್ಲಿ ದಿನಚರಿ ಬರೆಯುವುದಕ್ಕೆ ಮನಸ್ಸೆಲ್ಲಿರುತ್ತದೆ? ಬದುಕಿನ ಒಂದು ಪ್ರಮುಖವಾದ ಹೊಸ ಹೊಸ್ತಿಲಲ್ಲವೆ ಕಾಲೇಜು ಮೆಟ್ಟಲು ಹತ್ತುವುದು.

ಜೂನ್ ೨೮ನೆಯ ತಾರೀಖಿನ ಶನಿವಾರದ ದಿನಚರಿ:

“ಇವೊತ್ತು, ಬೇಸಿಗೆಯ ರಜಾಕಾಲದಲ್ಲಿ ರಚಿತವಾಗಿದ್ದು ಒಂದು ಒರಟಾದ ಕರಡು ಪುಸ್ತಕದಲ್ಲಿದ್ದ ನನ್ನ ಕೆಲವು ಕವನಗಳನ್ನು ಒಂದು ನೋಟುಬುಕ್ಕಿಗೆ ಹಸ್ತಪ್ರತಿಗೆ ಎತ್ತಿ ಬರೆದೆ. Sankara’s Select Works ಎಂಬ ಪುಸ್ತಕ ತೆಗೆದುಕೊಂಡೆ. ಅದರಲ್ಲಿರುವ ಅನೇಕ ಸ್ತೋತ್ರಗಳನ್ನು ಒಂದು ಆಧ್ಯಾತ್ಮಿಕ ಹರ್ಷದಿಂದ ಓದಿದೆ. ಸಂಜೆ ನಾವೆಲ್ಲ ವಾಕ್ ಹೋಗಿದ್ದೆವು. ಅಲ್ಲಿ ನಾನು ಬಹುಕಾಲದಿಂದ ಅಗಲಿದ್ದ ಹಳೆಯ ಗೆಳೆಯರನ್ನು ಎದುರುಗೊಳ್ಳುವಂತೆ ಪರಿಚಿತ ದೃಶ್ಯಗಳನ್ನು ಪುನಃ ಸಂದರ್ಶಿಸಿದೆ. ಬೇಲಿಗಳಲ್ಲಿ ತಲೆದೂಗುತ್ತಿದ್ದ ಹೂವುಗಳನ್ನು ನೋಡಿ ಹೃದಯ ನಲಿದಾಡಿತು. ಮೈಸೂರನ್ನು ಕುರಿತು ಒಂದು ಸಾನೆಟ್ ಕವನ ರಚನೆ ಮಾಡಿದೆ. ಅದನ್ನು ದಾರಿಯಲ್ಲಿ ನಡೆಯುತ್ತಲೇ ರಚಿಸಿದೆ ಮತ್ತು ಕೆರೆಯಬಳಿ ಕುಳಿತೆ. “The First Great Poet I saw” (ನಾನು ಕಂಡ ಮೊದಲ ಮಹಾಕವಿ) ಎಂಬುದಾಗಿ ಒಂದು ಪ್ರಬಂಧ ಬರೆಯಲು ಮನಸ್ಸು ಮಾಡಿದೆ. ಓಂ! ತತ್ ತ್ವಂ ಅಸಿ!”

ಜೂನ್ ೨೯ನೆಯ ಬುಧವಾರದ ದಿನಚರಿ:

“ನನ್ನ ತಾಯಿಗೆ ತುಂಬ ಖಾಯಿಲೆಯಾಗಿದೆ ಎಂದು ಡಿ.ಎನ್.ಹಿರಿಯಣ್ಣ ಕಾಗದ ಬರೆದಿದ್ದಾನೆ. ನನಗೇನೊ ಅಳುಕು ಹುಟ್ಟಿ, ಮನಸ್ಸಿನಲ್ಲಿ ಭಯ ಸಂಚಾರವಾಯಿತು. (I felt it and my heart gave way to formless fears.) ಆದರೆ ಮತ್ತೆ ಮನಸ್ಸಿಗೆ ಸಮಾಧಾನ ತಂದುಕೊಂಡು, ‘ನನ್ನ ತಾಯಿಯ ಕ್ಷೇಮವನ್ನು ನನ್ನ ಮಹಾಮಾತೆ ಜಗಜ್ಜನನಿಯ ಕೈಗೆ ಅರ್ಪಿಸಿದೆ. ಮತ್ತೆ ನನಗೆ ನಾನೆ ಅಂದುಕೊಂಡೆ: ‘ನನ್ನ ತಾಯಿ ಸತ್ತರೂ ಅವರು ಬೇರೆಯ ಲೋಕದಲ್ಲಿ ಬದುಕಿಯೆ ಇರುತ್ತಾರೆ’.’ ಓ ಸ್ವಾಮಿ, ನೀನು ನನಗೆ ತಂದೊಡ್ಡುವ ಕಷ್ಟಗಳನ್ನೆಲ್ಲ ಎದೆಗೆಡದೆ ಸಹಿಸುವಂತೆ ಧೈರ್ಯವನ್ನು ದಯಪಾಲಿಸು. ಸಮಸ್ತ ಜಗತ್ತನ್ನೂ ನೀನು ತಂದೆಯಂತೆ ಕಾಯುತ್ತಿರುವಲ್ಲಿ ನನ್ನ ಚೇತನ ಭಯಗಳಿಗೆ ತುತ್ತಾಗದಿರಲಿ. ಎಲೈ ಭಾರವೆ, ತೊಲಗಾಚೆ!’

ಜೂನ್‌೩೦ನೆಯ ಸೋಮವಾರದ ದಿನಚರಿ:

‘Select Works of Sankara’ದಲ್ಲಿ ಸ್ವಲ್ಪ ಓದಿದೆ. ಲ್ಯಾಂಬ್ ಮತ್ತು ಹ್ಯಾಜಿಲೆಟ್‌ರ ಪ್ರಬಂಧಗಳನ್ನೂ ಜಾರ್ಜ್‌ಈಲಿಯಟ್‌ಳ ‘The Mill on the Flose’ ಕಾದಂಬರಿಯನ್ನೂ ಓದಿದೆ. ರಜಾಕಾಲದಲ್ಲಿ ರಚಿಸಿದ್ದ ಕೆಲವು ಕವನಗಳನ್ನು ಹಸ್ತಪ್ರತಿಗೆ ಎತ್ತಿ ಬರೆದೆ. ಮತ್ತು ‘ನಾ ಕಂಡ ಮೊದಲ ಮಹಾಕವಿ’ಯ (The First Great Poet I Saw) ಪ್ರಬಂಧವನ್ನು ಕುರಿತು ಆಲೋಚಿಸಿದೆ. ಸಂಜೆ ಸ್ನೇಹಿತರೊಡನೆ ಸಂಚಾರ ಹೋದೆ. ಪುರಿ ತಿನ್ನುವುದರ ಮಾತು ಬಂದು ಎಲ್ಲರೂ ಹಿಂತಿರುಗಿ ಪಾರ್ಕಿಗೆ ಬಂದೆವು. ಅಲ್ಲಿ ಉಳಿದಿದ್ದ ನಮ್ಮ ಮಿತ್ರರು ಆಗಲೆಯ ಪುರಿ ಕಬಳಿಸಿಬಿಟ್ಟಿದ್ದರು. ನಾವೂ ಒಂದು ಸೇರು ಪುರಿ ಕೊಂಡುಕೊಂಡು, ನಗುತ್ತಾ, ಹರಟುತ್ತಾ, ಕೇಕೆ ಹಾಕುತ್ತಾ ತಿಂದೆವು. ಹಾಸಿದಂತಿದ್ದ ಹಸುರುಹುಲ್ಲು ನಮಗೆ ಮಧುರ ಮಂಚವೇದಿಕೆಯಾಗಿತ್ತು.

ಓ ತಾಯಿ, ನನ್ನ ಅವ್ವನ ಸಂರಕ್ಷಣೆ ನಿನಗೆ ಸೇರಿದ್ದು? ನಾನೇಕೆ ದುಃಖಿಸಲಿ? ಓಂ ತತ್‌ಸತ್‌ಓಂ! ವಂದೇ ಸ್ವಾಮಿ ವಿವೇಕಾನಂದಮ್‌!”

ಜುಲೈ ೧ನೆಯ ಮಂಗಳವಾರದ ದಿನಚರಿ:

“ಇವೊತ್ತು ‘The First Great Poet I saw’ ( ನಾ ಕಂಡ ಮೊದಲ ಮಹಾಕವಿ) ಎಂಬ ಪ್ರಬಂಧ ಬರೆಯಲು ಶುರುಮಾಡಿದೆ. ಹಾಗೆಯೆ ಕೆಲವು ಕವನಗಳನ್ನು ಹಸ್ತಪ್ರತಿಗೆ ಬರೆದೆ. ಲ್ಯಾಂಬ್‌ನ ಕೆಲವು ಪ್ರಬಂಧ ಓದಿದೆ. ಚಾರಲ್ಸ್‌ಲ್ಯಾಂಬ್‌ಗೂ ಮಿಲಿಯಂ ವರ್ಡ್ಸ್ ವರ್ತ್‌ಗೂ ಇರುವ ತಾರತಮ್ಯ ಕುರಿತು ಚರ್ಚಿಸಿದೆವು. ಸಂಜೆ ವಾಕ್ ಹೋದೆವು. ತುಂಬ ಹಿತವಾಗಿತ್ತು. ಕೆರೆಯ ಪಕ್ಕದಲ್ಲಿಯೂ ಬೆಟ್ಟದ ತಪ್ಪಲಿನಲ್ಲಿಯೂ ಹಸುರಾದ ತೆಂಗಿನ ತೋಪಿನಲ್ಲಿಯೂ ಅಲೆದಾಡಿದೆವು. ರಾತ್ರಿ ಟೆನಿಸನ್ ಓದಿದೆ. ಹಾಸಗೆ ಮೇಲೆ ಮಲಗಿದ್ದಾಗಲೆ ‘Tumultuous Dream’ ಎಂಬ ಕವನ ರಚನೆ ಮಾಡಿದೆ.

ತಾಯೀ, ನಡಸು ನನ್ನ. ಜ್ಯೋತಿಗಳಿರಾ, ದಾರಿ ತೋರಿ. ನಿಮಗಾಗಿ ತಡವುತ್ತಿದ್ದೇನೆ. ನನ್ನ ಆತ್ಮಬೋಧೆ ನಶಿಸದಿರಲಿ. ಮೃತ್ಯುವಿನ ಕರಾಳ ಕತ್ತಲೆಯಲ್ಲಿ ನಾನು ದಿಕ್ಕುಗೆಡದಂತಾಗಲಿ. ವಂದೇ ಸ್ವಾಮಿ ವಿವೇಕಾನಂದಮ್‌! ಓಂ!”

ಮೇಲಿನ ದಿನಚರಿಯಲ್ಲಿ ನಮೂದಿಸಿರುವ Tumultuous Dream ಎಂಬ ಕವನದ ಶೀರ್ಷಿಕೆ ಡಿಕ್ವಿನ್ಸಿಯ ಅದೇ ಹೆಸರಿನ ಪ್ರಬಂಧದಿಂದ ತೆಗೆದುಕೊಂಡದ್ದು. ಆದರೆ ವಸ್ತು ಅದರದ್ದಲ್ಲ. ನನಗಾದ ಒಂದು ಸ್ವಪ್ನದಿಂದ ಪ್ರೇರಿತವಾದುದಿರಬೇಕು. ನನ್ನ ತಾಯಿಗೆ ತುಂಬ ಖಾಯಿಲೆಯಾಗಿದೆ ಎಂದು ಕಾಗದ ಬಂದಾಗಿನಿಂದಲೂ ನನ್ನ ಅಂತರ್ಮನಸ್ಸು ಕದಡಿಹೋಗಿತ್ತು. ಮೇಲೆಮೇಲೆ ತಾತ್ತ್ವಿಕ ಸಮಾಧಾನವನ್ನು ಹೇರಿಕೊಂಡಿದ್ದರೂ ಅದು ಒಳಗೊಳಗೇ ಅವ್ವಗೆ ಏನಾಗುತ್ತದೆಯೋ ಎಂದು ಕಳವಳಗೊಳ್ಳುತ್ತಲೆ ಇತ್ತು. ನನ್ನ ಸಂಕಟವನ್ನು ಹೊರಗಡೆಹದೆ ಮಿತ್ರರೊಡನೆ ಎಂದಿನಂತೆ ಸಂತೋಷದಿಂದ ಇರುತ್ತಿದ್ದೆನಾದರೂ ರಾತ್ರಿ ಸ್ವಪ್ನದಲ್ಲಿ ಒಳಮನಸ್ಸಿನ ಕಳವಳ ಕನಸಿನಲ್ಲಿ ಪ್ರತಿಮಿತವಾದಂತೆ ತೋರುತ್ತದೆ. ಆದ್ದರಿಂದಲೆ ಎಂದು ತೋರುತ್ತದೆ, ದಿನಚರಿಯಲ್ಲಿ ಆ ಕವನದ ಹೆಸರನ್ನು ‘ಟ್ಯುಮಲ್ಟುಅಸ್ ಡ್ರೀಮ್‌’ ಎಂದು ಕರೆದಿದ್ದರೂ ಒರಟು ಹಸ್ತಪ್ರತಿಯಲ್ಲಿಯೂ ಅದೇ ಹೆಸರೇ ಇದ್ದರೂ ಅದನ್ನು ಶುದ್ಧ ಹಸ್ತಪ್ರತಿಗೆ ಎತ್ತುವಾಗ ಆ ಕವನದ ಹೆಸರು ‘Despair’ (ನಿರಾಶೆ) ಎಂದು ಬದಲಾವಣೆಗೊಂಡಿದೆ. ಅವ್ವ ಎಲ್ಲಿಯಾದರೂ ಸತ್ತುಹೋದರೆ ನನ್ನ ಗತಿಯೇನು? ಎಂದು ಮರುಗುವ ಮನಸ್ಸಿನ ಉಲ್ಲೋಲ ಕಲ್ಲೋಲ ಸ್ಥಿತಿಗೆ ಸಾಂಕೇತಿಕವಾಗುವಂತಿದೆ ‘Despair’ ಕವನ.

Heave up thy mighty bosom,
O ocean vast!
Pull down each tiny blossom,
O raging blast!

Sink down, O mighty mountains;
Swallow them, Earth!
Leap forth, fire-breathing fountains
In your mad mirth!

Break! Break! Thou deep hard sky
With havoc wild!
Break! Break! Thou day’s great eye,
On ruins piled!

Howl, howl! Thou groaning breath,
Like gaunt wolves hungry!
Chase life, O icy death,
Like lions angry!

Die, birds and grass and flowers;
Die the dark death!
Die, meadows, trees and bowers;
Fire, be heaven’s breath!

Die, beauty, virtue, truth,
With vice and sin;
Die child-hood, boy-hood, youth,
Let old age win!

Dry up, O ponds and lakes;
Hot vapours, rise
The mighty deluge quakes
Your paradise

Devour the barges, O sea;
Let all go down!
Begone, Heavenly mercy!
Justice, come down!

Devour the earth, O Heaven;
Devour each crown!
Take all that thou hast given;
Let justice come down.

Thus I heared in my dream
Some mighty Being crying;
Thus it came like a scream
Of some dark Death dying!

೧೯೨೪ನೆಯ ಜುಲೈ ೨ನೆಯ ತಾರೀಕು ಬುಧವಾರದ ದಿನ ನನ್ನ ಜೀವನದಲ್ಲಿ-ವಿಶೇಷವಾಗಿ ಸಾಹಿತ್ಯ ಸಂಬಂಧವಾದ ಜೀವನದಲ್ಲಿ-ಒಂದು ಸ್ಮರಣೀಯವಾದ ದಿನ. ಮಹಾರಾಜ ಹೈಸ್ಕೂಲಿನ ಇತಿಹಾಸದ ಅಧ್ಯಾಪಕರಾಗಿದ್ದ ಎಂ.ಎಚ್‌.ಕೃಷ್ಣ ಐಯಂಗಾರರು ಬೇಸಿಗೆ ರಜಾ ಕಳೆದ ಮೇಲೆ ಅವರನ್ನು ಬಂದು ನೋಡುವಂತೆ ರಜಾಕ್ಕೆ ಊರಿಗೆ ಹೊರಡುವ ಮುನ್ನ ಅವರನ್ನು ಸಂಧಿಸಿದಾಗ ನನಗೆ ತಿಳಿಸಿದ್ದರು. ಆಗ ವೈಸ್‌ಛಾನ್ಸಲರ್ ಆಗಿದ್ದ ಬ್ರಜೇಂದ್ರನಾಥ ಶೀಲ್ ಅವರನ್ನು ಪರಿಚಯಿಸಿ ಕೊಡುತ್ತೇನೆ ಎಂದೂ ಹೇಳಿದ್ದರು. ಅವರನ್ನು ಹೋಗಿ ಕಂಡೆ. ಅನೇಕ ಪ್ರೋತ್ಸಾಹದ ಮಾತುಕತೆ ನಡೆದಮೇಲೆ, ಅವರು ವಿಶ್ವವಿದ್ಯಾನಿಲಯದಲ್ಲಿ ವಿಶೇಷೋಪನ್ಯಾಸಗಳನ್ನು ಕೊಡಲು ಬಂದಿದ್ದ ಐರಿಸ್‌ಕವಿ ಜೇಮ್ಸ್‌ಎಚ್‌.ಕಸಿನ್ಸ್‌ಅವರ ವಿಚಾರ ತಿಳಿಸಿ, ಅವರನ್ನು ಕಂಡು ಅವರಿಗೆ ನನ್ನ ಕವನಗಳನ್ನು ತೋರಿಸುವಂತೆ ಹೇಳಿದರು.

ಆ ಬುಧವಾರ ದಿನಚರಿ ಇಂತಿದೆ:

“ಬೆಳಿಗ್ಗೆ ಶ್ರೀಯುತ ಎಂ.ಎಚ್‌.ಕೃಷ್ಣ ಐಯಂಗಾರ್ ಅವರನ್ನು ಕಾಣಲು ಹೋದೆ. ದಾರಿಯಲ್ಲಿ ನಡೆಯುತ್ತಲೆ ಅನೇಕ ಮಾತುಕತೆಯಾಡಿದೆವು, ಶ್ರೀ ಕಸಿನ್ಸ್‌ಅವರು ಮೈಸೂರಿಗೆ ಬಂದಿರುವ ವಿಚಾರ ತಿಳಿಸಿ, ಅವರನ್ನು ಭೇಟಿ ಮಾಡುವಂತೆ ಸಲಹೆಯಿತ್ತರು. ಅವರು ಎಲ್ಲಿ ಇಳಿದುಕೊಂಡಿದ್ದಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳದೆಯೆ ಬಂದುಬಿಟ್ಟೆ. ಆದರೆ ಮಾತಿನ ಮಧ್ಯೆ ಸ್ಟಾಫ್ ಕ್ವಾರ್ಟಸ್‌ನಲ್ಲಿ ಬಿಡಾರ ಮಾಡಿದ್ದಾರೆ ಎಂದಿದ್ದರು. ಕೆ.ಮಲ್ಲಪ್ಪನವರನ್ನು ಜೊತೆಗೆ ಕರೆದುಕೊಂಡು ನಾನು ಅವರನ್ನು ಕಾಣಲು ಹೋದೆ. ಆ ಭೇಟಿಯ ವಿಚಾರವಾಗಿ ಬರೆದರೆ ಒಂದು ಪ್ರಬಂಧವೇ ಆಗುತ್ತದೆ (To write about the visit it may take an essay) ಅವರೊಬ್ಬ ಸುಧಾರಕ ಮನೋಧರ್ಮದವರಾಗಿ ನನಗೆ ಕಂಡುಬಂದರು. ಆ ಮನೋಧರ್ಮ ಅವರಿಗೆ ಅಡಚಣೆಯಾಗಿತ್ತು. ಅವರನ್ನು ಸದ್‌ವಿಮರ್ಶಕರನ್ನಾಗಲಿ ಮೆಚ್ಚಿಕೊಳ್ಳಲಾಗದ ರೀತಿಯಲ್ಲಿ ಮತ್ತು ನನ್ನ ಭಾವಗಳನ್ನಾಗಲಿ ಆಲೋಚನೆಗಳನ್ನಾಗಲಿ ಮೆಚ್ಚಿಕೊಳ್ಳಲಾಗದ ರೀತಿಯಲ್ಲಿ. (But I found in him a reforming spirit which did not allow him to be a good critic or encourage my thoughts and sentiments). ಈ ಸಂದರ್ಶನವನ್ನು ಕುರಿತು ಒಂದು ಪ್ರಬಂಧವನ್ನೇ ಬರೆಯುವ ಇಚ್ಛೆ ನನಗಿದೆ. (I hope I will write an essay about this visit). ಸಂಜೆ ಮನೆಗೆ ಬಂದೆವು. ಮುನ್ನಡೆಸು, ತಾಯಿ! ಮಹಾ ಜ್ಯೋತಿಗಳಿರಾ, ದಾರಿ ತೋರಿ!”

ಶ್ರೀಯುತ ಕಸಿನ್ಸ್‌ಅವರು ಇಳಿದುಕೊಂಡಿದ್ದ ಸ್ಥಳವನ್ನು ವಿಚಾರಿಸಿ ತಿಳಿದು ನಿಷಾದ್‌ಬಾಗ್‌ನಲ್ಲಿದ್ದ ಗೌರ್ನಮೆಂಟ್ ಗೆಸ್ಟ್‌ಹೌಸ್‌ಗೆ ಹೋದೆವು, ನಾನೂ, ಮಲ್ಲಪ್ಪ. ಸ್ಥಳ ಏಕಾಂತವಾಗಿತ್ತು. ಉದ್ಯಾನಸೌಂದರ್ಯದ ಮಧ್ಯೆ ಗ್ರಾಮೀಣ ಮನಸ್ಸಿಗೆ ಗಾಬರಿ ಹುಟ್ಟಿಸುವ ಮಟ್ಟಿಗೆ ಭವ್ಯವಾಗಿತ್ತು ಆ ಕಟ್ಟಡ, ಅದರ ಶಿಸ್ತು ಒಬ್ಬ ಅನುಚರ ನೌಕರ ನಮ್ಮನ್ನು ಹೊರಗೆ ಬಂದು ಉದ್ದ ಸೋಫಾದ ಮೇಲೆ ಕೂರಿಸಿ, ನನ್ನ ಹೆಸರು ಬರೆದುಕೊಟ್ಟ ಚೀಟಿಯನ್ನು ತೆಗೆದುಕೊಂಡು ಒಳಗೆ ಹೋದನು. ಬಹಳ ಹೊತ್ತು ಅವನು ಹೊರಗೆ ಬರಲಿಲ್ಲ. ನಾನೂ ಮಲ್ಲಪ್ಪ ಸಣ್ಣದನಿಯಲ್ಲಿ ಮಾತಾಡಿಕೊಳ್ಳುತ್ತಾ ಕಾದೆವು.

ಬಹಳ ಹೊತ್ತಿನ ಮೇಲೆ ಅನುಚರ ಬಂದು ನನ್ನನ್ನು ಒಳಗೆ ಕರೆದೊಯ್ದು ಕಸಿನ್ಸ್‌ಅವರು ಕೂತಿದ್ದ ಸ್ಥಳ ನಿರ್ದೇಶನ ಮಾಡಿ ಹೊರಗೆ ಹೋದ. ನಾನು ಮುಂಬಂದು ಕಸಿನ್ಸ್‌ಅವರ ಸಮೀಪದಲ್ಲಿಯೆ ಮತ್ತೊಂದು ಸೋಫಾದ ಮೇಲೆ ಕುಳಿತೆ, ನಮಸ್ಕಾರಾದಿಗಳ ಅನಂತರ. ನಾನು ಏತಕ್ಕೆ ಬಂದೆ, ಯಾರ ಸಲಹೆಯ ಮೇರೆಗೆ, ಎಂಬುದನ್ನು ಹೇಳಿ ನನ್ನ ಕೈಲಿದ್ದ ಹಸ್ತಪ್ರತಿಯನ್ನು ಅವರಿಗೆ ಕೊಟ್ಟೆ. ಅವರು ಸ್ವಲ್ಪಹೊತ್ತು ಹಾಳೆಗಳನ್ನು ಮುಗುಚಿ ಮುಗುಚಿ ನೋಡಿದರು. ಮತ್ತೆ ತಲೆಯೆತ್ತಿ ನನ್ನನ್ನು ಆಪಾದಮಸ್ತಕ ನೋಡಿದರು. ನಾನು ಸ್ವದೇಶೀ ಚಳವಳಿಯಲ್ಲಿ ಅಂಗಿ ಟೋಪಿಗಳನ್ನು ಬೆಂಕಿಗೆ ಎಸೆದಂದಿನಿಂದ ಖಾದೀ ಬಟ್ಟೆಗಳನ್ನೆ ಉಪಯೋಗಿಸುತ್ತಿದ್ದೆ: ಖಾದಿ ಟೋಪಿ, ಖಾದಿ ಷರಟು, ಖಾದಿ ಕೋಟು, ಖಾದಿ ಪಂಚೆ.

ಕಸಿನ್ಸ್‌ ಸ್ವಲ್ಪ ಅಸಮಾಧಾನದ ಧ್ವನಿಯಿಂದಲೆ ಮಾತಾಡಿದರು: “ಏನಿದೆಲ್ಲ ಕಗ್ಗ? (What is all this stuff?) ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತ್ರಗಳೆ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?”

ಅವರ ಆ ಧ್ವನಿಗೂ ಭಂಗಿಗೂ ನನಗಾಗಲೆ ಮುನಿಸು ಬರತೊಡಗಿತ್ತು. ನನ್ನ ಇಂಗ್ಲಿಷ್ ಕವನಗಳನ್ನು ನೋಡಿ, ಇತರ ನನ್ನ ಭಾರತೀಯ ಮಿತ್ರರೂ ಅಧ್ಯಾಪಕರೂ ಶ್ಲಾಘಿಸಿದ್ದಂತೆ, ಅವರೂ ಅವುಗಳನ್ನು ಮೆಚ್ಚಿ ಹೊಗಳುತ್ತಾರೆ ಎಂದು ಆಸೆಪಟ್ಟಿದ್ದ ನನಗೆ ತುಂಬಾ ತೇಜೋವಧೆಯಾದಂತಾಗಿ ನಿರಾಶೆಯಾಯಿತು. ನಾನು ಕನ್ನಡದಲ್ಲಿ ಆಗಲೆ ‘ಅಮಲನ ಕಥೆ’ಯನ್ನೂ ಮತ್ತು ಇತರ ಒಂದೆರಡು ಕವನ ಬರೆಯುವ ಪ್ರಯತ್ನವನ್ನೂ ಮಾಡಿದ್ದೆನಾದರೂ ಅವರ ಪ್ರಶ್ನೆಗೆ ಮಲೆತವನಂತೆ ಉತ್ತರಿಸಿದೆ: “ಇಲ್ಲ. ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಸಾಧ್ಯವಾಗುವಂತೆ, ಉದಾತ್ತ ಭಾವನೆಗಳನ್ನು ಉನ್ನತ ಆಲೋಚನೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟ ಬಹಳ ಕೀಳು. ಅಲ್ಲದೆ ಅದರಲ್ಲಿರುವ ಛಂದಸ್ಸೂ ಹಳೆಯ ಕಂದಾಚಾರದ ಛಂದಸ್ಸು. ವೃತ್ತ, ಕಂದ ಇತ್ಯಾದಿ. ಇಂಗ್ಲಿಷಿನಲ್ಲಿರುವ ಛಂದೋ ವೈವಿಧ್ಯ ಇಲ್ಲವೆ ಇಲ್ಲ.”

ಈಗ ನನಗೆ ಅತ್ಯಂತ ಅವಿವೇಕವಾಗಿಯೂ ಹಾಸ್ಯಾಸ್ಪದವಾಗಿಯೂ ಧೂರ್ತವಾಗಿಯೂ ತೋರುವ ನನ್ನ ಆ ಉತ್ತರವನ್ನು ಆಲಿಸಿ ಪರಿಣತ ಮನಸ್ಸಿನವರೂ ಅನುಭವಶಾಲಿಯೂ ಆಗಿದ್ದ ಅವರು ಸೌಮ್ಯ ಸಾಂತ್ವನಕರ ಧ್ವನಿಯಿಂದ ಹೇಳಿದರು: “ಹಾಗಲ್ಲ. ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಅಸಮರ್ಥರಿಗೆ, ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು. ಈಗ ನೋಡಿ. ಬಂಗಾಳಿ ಭಾಷೆ ನೀವು ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆಯೆ ಅದೂ ಇತ್ತು. ರವೀಂದ್ರನಾಥ ಠಾಕೂರರು ಬಂದರು. ಹೊಸಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು! ಹಾಗೆಯೆ ನೀವು ಹೊಸಹೊಸ ಛಂದಸ್ಸುಗಳನ್ನು ಕಂಡು ಹಿಡಿದು, ಹೊಸಹೊಸ ಪದಗಳನ್ನು ಪದಪ್ರಯೋಗಗಳನ್ನು ಸಾಧಿಸಿ, ಹೊಸ ರೀತಿಯ ಸಾಹಿತ್ಯ ಸೃಷ್ಟಿಮಾಡಬೇಕು. ನೀವು ಸೃಷ್ಟಿಸುವ ಶ್ರೇಷ್ಠವೆಂದು ತೋರಿ ಬಂದರೆ ನಾವು ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿಕೊಳ್ಳುತ್ತೇವೆ. ರವೀಂದ್ರರ ಸಾಹಿತ್ಯ ಇಂಗ್ಲಿಷಿಗೆ ಭಾಷಾಂತರವಾಗಿರುವಂತೆ. ನೀವು ಇಂಗ್ಲಿಷಿನಲ್ಲಿ ಸೃಜನ ಸಾಹಿತ್ಯ ಸೃಷ್ಟಿ ಮಾಡಲಾರಿರಿ. ಅದು ನಿಮಗೆ ಪರಭಾಷೆ. ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅದರಲ್ಲಿಯೂ ಕವಿತೆಯಲ್ಲಂತೂ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ. ಅದು ನಿಮಗೆ ಗೊತ್ತಾಗುವುದೂ ಇಲ್ಲ. ಅದನ್ನು ಓದುವ ನಮಗೆ ಗೊತ್ತಾಗುತ್ತದೆ, ಅದೆಂತಹ ನಗೆಪಾಟಲ ಸೃಷ್ಟಿ ಎಂಬುದು.”

ಇನ್ನೂ ಕೆಲವು ವಿವೇಕದ ಮಾತುಗಳನ್ನಾಡಿ ಹಸ್ತಪ್ರತಿಯನ್ನು ನನಗೆ ವಾಪಸು ಕೊಟ್ಟು ಬೀಳ್ಕೊಂಡರು. ನಾನು ಖಿನ್ನನಾಗಿ ಅತೃಪ್ತ ಮತ್ತು ಕುಪಿತ ಚಿತ್ತಭಂಗಿಯಲ್ಲಿ ಹೊರಗೆಬಂದೆ.

ಹೊರಗಡೆ ಕುಳಿತಿದ್ದ ಮಿತ್ರರಿಗೆ ನನಗಾದ ತೇಜೋವಧೆ ಎಂದು ನಾನು ತಿಳಿದುಕೊಂಡಿದ್ದ ಸಂಗತಿಯನ್ನು ಹೊರಗೆಡಹದೆ ಮುಚ್ಚಿಕೊಂಡೆ. ಕಸಿನ್ಸ್ ಅವರು ಸ್ವದೇಶೀ ಚಳವಳಿಗಾರರಾಗಿರುವುದರಿಂದ ನನ್ನ ಸ್ವದೇಶಿ ಭಾಷೆಯಾದ ಕನ್ನಡದಲ್ಲಿಯೆ ನಾನು ಬರೆದರೆ ಉತ್ತಮ ಮತ್ತು ದೇಶಭಕ್ತಿದ್ಯೋತಕ ಎಂದು ಬೋಧಿಸಿದರೆಂದು ವ್ಯಂಗ್ಯವಾಗಿ ಟೀಕಿಸಿದೆ.

ಆದರೆ ಕಸಿನ್ಸ್‌ಅವರ ಹಿತವಚನ ಮೇಲೆಮೇಲೆಕ್ಕೆ ತಿರಸ್ಕೃತವಾಗಿದ್ದರೂ ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು!

ಹಿಂತಿರುಗಿ ಬರುವಾಗಲೆ ದಾರಿಯಲ್ಲಿ ಏನೋ ಒಂದು ಕನ್ನಡ ಕವಿತೆಯನ್ನು ರಚಿಸುತ್ತಾ ಗುನುಗುತ್ತಾ ಬಂದೆ. ನನ್ನ ಕೊಠಡಿಯ ಸಹನಿವಾಸಿ ಮಿತ್ರರೊಬ್ಬರು ಅದನ್ನು ರಾಗವಾಡಿ ಹಾಡಿದಾಗ ನನಗೆ ಉಂಟಾದ ಹಿಗ್ಗನ್ನು ಏನೆಂದು ಹೇಳಲಿ? ಅವರ ರಾಗದ ಮಾಧುರ್ಯವನ್ನು ನನ್ನ ಕವಿತಾ ಸಾಮರ್ಥ್ಯಕ್ಕೇ ಅಧ್ಯಾರೋಪ ಮಾಡಿ ನನ್ನ ಬೆನ್ನನ್ನು ನಾನೆ ತಟ್ಟಿಕೊಂಡೆ. ಅಂದಿನಿಂದ ಕನ್ನಡದಲ್ಲಿ ರಚಿಸುವ ಮನಸ್ಸುಮಾಡಿದೆ. ಆದರೆ ಇಂಗ್ಲಿಷ್ ಕವನರಚನೆಯನ್ನು ಬಿಡಲಿಲ್ಲ. ಎರಡೂ ಭಾಷೆಗಳಲ್ಲಿ ಸವ್ಯಸಾಚಿಯಾಗುತ್ತೇನೆಂದು ಭಾವಿಸಿದೆ. ಆದರೆ ಕ್ರಮೇಣ ೧೯-೨೫-೨೬ರ ಹೊತ್ತಿಗೆ ಇಂಗ್ಲಿಷ್ ರಚನೆ ಸಂಪೂರ್ಣವಾಗಿ ನಿಂತುದನ್ನು ನನ್ನ ದಿನಚರಿ ಹೇಳುತ್ತದೆ. ಅಂದರೆ ಮೊದಲನೆಯ ವರ್ಷದ ಬಿ.ಎ. ತರಗತಿಯಲ್ಲಿ ಸ್ವಲ್ಪಸ್ವಲ್ಪವಾಗಿಯೂ ಎರಡನೆಯ ವರ್ಷದ ಬಿ.ಎ. ತರಗತಿಯಲ್ಲಿ ಅತ್ಯಲ್ಪವಾಗಿಯೂ ನನ್ನ ಇಂಗ್ಲಿಷ್ ಕವನ ರಚನೆ ಮುಂದುವರಿದಿದೆ. ಕನ್ನಡದ ರುಚಿ ಮತ್ತು ಅಭಿರುಚಿ ಹೆಚ್ಚಾದಂತೆಲ್ಲ ಇಂಗ್ಲಿಷ್ ತಿರೋಹಿತವಾಗಿದೆ.

ಈ ಸಂಧಿಕಾಲಕ್ಕೆ ಸಂಬಂಧಪಟ್ಟ ನನ್ನ ದಿನಚರಿ ತುಂಬ ಸ್ವಾರಸ್ಯವಾಗಿದೆ ಕನ್ನಡ ಇಂಗ್ಲಿಷ್‌ಗಳ ಸೆಳೆದಾಟ, ಹೋರಾಟಗಳೂ, ಆಗ ಕವಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಾನು, ಇತರ ಯಾರ ಮತ್ತು ಯಾವ ಚಳವಳಿಯ ಅರಿವೂ ಸಂಪರ್ಕವೂ ಇಲ್ಲದೆ, ಏಕಾಂಗಸಾಹಸಿಯಾಗಿ ಕೈಕೊಳ್ಳಬೇಕೆಂದಿರುವ ಕ್ರಾಂತಿಕಾರಿ ನಿರ್ಣಯಗಳೂ ವಿಸ್ಮಯಗೊಳಿಸುವಂತೆ ಚಿತ್ರಿತವಾಗಿವೆ.

ಜುಲೈ ೩ನೆಯ ತಾರೀಖಿನ ಹಾಳೆ ಖಾಲಿಯಾಗಿದೆ.

ಜುಲೈ ೪ನೆಯ ತಾರೀಖಿನ ಶುಕ್ರವಾರದ ದಿನಚರಿ:

“ಬೆಳಿಗ್ಗೆ ಪ್ರಾರ್ಥನೆಗಳನ್ನು ಹೇಳಿಕೊಳ್ಳುತ್ತಾ ಎದ್ದೆ. ಗೀತಾತ್ಮಕವಾದ ಇಂಗ್ಲಿಷ್ ಗದ್ಯದಲ್ಲಿ ‘The poet and Children’[1] ಎಂಬ ಶೀರ್ಷಿಕೆಯಲ್ಲಿ ಎರಡು ಪದ್ಯಗಳ ಒಂದು ವಚನಕವನ ರಚಿಸಿ, ಅದನ್ನು Indian Review ಸಂಪಾದಕರಿಗೆ ಮದರಾಸಿಗೆ ಕಳಿಸಿದೆ. ಅದು ಅಚ್ಚಾಗಿಯೆ ಆಗುತ್ತದೆ ಎಂಬ ನಿರೀಕ್ಷೆಯಿಂದೇನೂ ಅಲ್ಲ, ಏಕೆಂದರೆ ಹಿಂದೆ ಅವರಿಗೆ ನಾನು ಅನೇಕ ಸಾರಿ ನನ್ನ ರಚನೆಗಳನ್ನು ಕಳಿಸಿದ್ದರೂ ಅವುಗಳನ್ನೆಲ್ಲ ವಾಪಸು ಕಳಿಸಿದ್ದರು, ಇಲ್ಲವೆ ಕಸದಬುಟ್ಟಿಗೆ ಎಸೆದಿದ್ದರು. ಕಾಲೇಜಿಗೆ ಹೋಗಿ ಮಧ್ಯಾಹ್ನ ಹನ್ನೆರಡು ಗಂಟೆಗೇ ಹಿಂದಕ್ಕೆ ಬಂದೆವು. ಶಂಕರರ ಕೆಲವು ಕೃತಿ ಓದಿದೆ. ಇವೊತ್ತು ‘Milton and His Poetry’ ಪುಸ್ತಕ ಕೊಂಡೆ. ನಾನು, ತಮ್ಮಯ್ಯ ಸಿನಿಮಾಕ್ಕೆ ಹೋಗಿದ್ದೆವು. ಚಿತ್ರ ‘ರೋಮಿಯೊ-ಜೂಲಿಯಟ್’ ತುಂಬ ಆಹ್ಲಾದಕರವಾಗಿಯೂ ಸುಂದರವಾಗಿಯೂ ಇತ್ತು. ನನಗಂತೂ ತುಂಬಾ ಮೆಚ್ಚುಗೆಯಾದುವೆಂದರೆ ಅಲ್ಲಿ ಬರುವ ಕೆಲವು ನೈಸರ್ಗಿಕ ದೃಶ್ಯಗಳು-ಉಷಃಕಾಲ, ಚಂದ್ರೋದಯ ರಾತ್ರಿ ಸರೋವರಗಳು, ಉದ್ಯಾನಗಳು ಮತ್ತು ಪ್ರಣಯ ಸನ್ನಿವೇಶದ ದೃಶ್ಯ! ಸಿನಿಮಾ ಮಂದಿರದಲ್ಲಿಯೂ ಮಧ್ಯೆ ವಿರಾಮ ಕಾಲದಲ್ಲಿ ದೀಪ ಹೊತ್ತಿಸಿದಾಗಲೂ ನಾನು ‘Milton and His poetry’ ಓದಿದೆ. ಓಂ! ವಿಶ್ವಮಾತೆಯೆ, ನನ್ನ ನಡೆಸು. Sweet, sweet, Swami Vivekananda, thou art sweet, sweet more than heaven.”

ಜುಲೈ ೫ನೆಯ ಶನಿವಾರದ ದಿನಚರಿ:

“ಎಂ.ಮಲ್ಲಪ್ಪನವರು ಎಂ.ಬಸವರಾಜು ಅವರಿಂದ ಒಂದು ಕಾಗದ ತಂದುಕೊಟ್ಟರು. (ಬೆಂಗಳೂರಿನಿಂದ ಎಂದು ತೋರುತ್ತದೆ.) ‘ಲೋಟಸ್ ಲೀಫ್ ಯೂನಿಯನ್’ ಎಂಬ ಹೆಸರಿನಲ್ಲಿ ಒಂದು ಸಂಘ ಸ್ಥಾಪನೆಮಾಡುವಂತೆ ಅವರಿಗೆ ಒಂದು ಕಾಗದ ಬರೆದೆ. ಮಧ್ಯಾಹ್ನ ಗೋ.ಕೃ.ಶೆಟ್ಟಿ ‘ವೆರಿಟಿ ಸಂಪಾದಿತ ಷೇಕ್ಸ್‌ಪಿಯರ್’ ತಂದುಕೊಟ್ಟರು. ಸಂಜೆ ನನ್ನ ಸ್ವಾಮಿ ವಿವೇಕಾನಂದರು ತೀರಿಕೊಂಡ ತಾರೀಖು ತಿಳಿಯಲು ಲೈಬ್ರರಿಗೆ ಹೋದೆ. ಅಲ್ಲಿ ‘The Vedanta Sutras With Shankara’s Commentary’ ತೆಗೆದುಕೊಂಡೆ. ಸುಮಾರು ಏಳು ಗಂಟೆಗೆ ರೂಮಿಗೆ ಬಂದು, ಆಮೇಲೆ ನಾನೊಬ್ಬನೆ ವಾಕ್ ಹೋದೆ. ರಾತ್ರಿ ‘Milton and His poetry’ ಓದಿದೆ. ಕೊನೆಗೆ ಸಚ್ಚಿದಾನಂದ ಪೂರ್ಣಬ್ರಹ್ಮವನ್ನು ಧ್ಯಾನಿಸುತ್ತಾ ಆನಂದಮಯ ಹೃದಯನಾಗಿ ನಿದ್ದೆ ಹೋದೆ. (Meditating upon the sweet and great Spirio of The WHOLE slept with a sweet heart.)

ತಾಯಿ, ನಾನು ನಿನ್ನಲ್ಲಿಯೆ ಬದುಕುತ್ತಿರುವೆ! ನಾನು ನೀನೆ ಆಗಿರುವೆ! ನಿನ್ನಲ್ಲಿ ಐಕ್ಯವಾಗಿರುವ ಆನಂದವನ್ನು ಅನುಭವಿಸುತ್ತಿದ್ದೇನೆ! ಜಯ್ ಜಗಜ್ಯೋತಿಗಳಿರಾ! ವಂದೇ ಸ್ವಾಮಿ ವಿವೇಕಾನಂದಮ್! ಓಂ!”

ಜುಲೈ ೬ನೆಯ ಭಾನುವಾರದ ದಿನಚರಿ:

“ಎಣ್ಣೆಸ್ನಾನ ಮುಗಿಸಿಬಂದು ‘The Mill on the Floss’ ಓದುತ್ತಿದ್ದಾಗ ಎಂ. ತಮ್ಮಯ್ಯ ಬಂದರು. ನಾವೆಲ್ಲ ಪಿ.ಟಿ.ಐ. ಬುಕ್ ಡಿಪೋಗೆ ಹೋದೆವು. ಅವರು ‘Mill on the Floss’ ಕೊಂಡರು. ಅನೇಕ ಪುಸ್ತಕಗಳ ಬೆಲೆ ವಿಚಾರಿಸಿದೆವು. ನಾನು ‘Introduction to English Literature’ by Henry Hudson (ಇಂಗ್ಲಿಷ್ ಸಾಹಿತ್ಯಕ್ಕೆ ಅತ್ಯಂತ ಆನಂದದಿಂದಲೂ ಕುತೂಹಲೋತ್ಸಾಹದಿಂದಲೂ ಓದಿದೆ. ‘ಕಿಂಗ್‌ಲೀರ್’ ನಾಟಕದ ಕೆಲವು ದೃಶ್ಯಗಳನ್ನು ಓದಿದೆ. ವರ್ಡ್ಸ್‌ವರ್ತ್‌ ಕವಿಯನ್ನು ಕುರಿತು ಹ್ಯಾಜಿಲೆಟ್ ಬರೆದ ಪ್ರಬಂಧ ಓದಿದೆ. ಮಲಗುವಾಗ ಶ್ರೀ ತಾಯಿಯನ್ನು ನೆನೆಯಲಿಲ್ಲ; ಅವಳು ನನ್ನ ಹೃದಯ ಮನಸ್ಸುಗಳನ್ನೆಲ್ಲ ತುಂಬಿ, ಪ್ರತಿಕ್ಷಣವೂ ಅನುದಿನವೂ ನನ್ನಲ್ಲಿಯೆ ಇದ್ದಾಳೆ ಎಂಬ ಪೂರ್ಣಶ್ರದ್ಧೆಯಿಂದ ನಿದ್ದೆ ಮಾಡಿದೆ. ಓ ತಾಯಿ, ನಿನ್ನ ತೊಡೆಗೆ ನನ್ನನ್ನು ಕರೆದುಕೊ. ವಿವೇಕಾನಂದ-ಪರಮಹಂಸ.”

ಜುಲೈ ೭, ೮, ೯ನೆಯ ದಿನಚರಿಯ ಹಾಳೆಗಳಲ್ಲಿ ಅಮೆರಿಕನ್ ಕವಿ ‘ವ್ಹಿಟ್ಟಿಯರ್’ನನ್ನು ಕುರಿತ ಒಂದು ಪ್ರಶಂಸೆಯ ಲೇಖನವಿದೆ!

ಜುಲೈ ೧೦ನೆಯ ಗುರುವಾರ, ೧೯೨೪ನೆಯ ದಿನಚರಿಗೆ ನನ್ನ ಸಾಹಿತ್ಯ ಜೀವನದಲ್ಲಿ ಒಂದು ಐತಿಹಾಸಿಕ ಸ್ಥಾನವಿದೆ. ಈ ದಿನಚರಿ ಬರೆಯದೆ ಇದ್ದಿದ್ದರೆ ಅಥವಾ ಅದು ಉಳಿದು ಈಗ ನನಗೆ ದೊರೆಯದೆ ಇದ್ದಿದ್ದರೆ, ನಾನು ಆ ಪ್ರಾರಂಭಿಕ ಶೈಶವಾಸ್ಥೆಯಲ್ಲಿ ಅಷ್ಟು ದಿಟ್ಟತನದಿಂದ ಸಾಹಿತ್ಯ ಶಕಪುರುಷನಾಗಿ ಬಿಡುತ್ತೇನೆ ಎಂದು ಬರೆಯಲು ಸಾಧ್ಯ ಎಂಬುದನ್ನೇ ನಂಬಲು ಅಸಾಧ್ಯವಾಗುತ್ತಿತ್ತು. ಯಾವ ಧೈರ್ಯದಿಂದ ಹಾಗೆ ಬರೆದೆನೋ ಆ ದೇವೀ ಸರಸ್ವತಿಗೇ ಗೊತ್ತು! ದಿನಚರಿಯನ್ನು ಮೊದಲು ಇಂಗ್ಲಿಷ್ ಮೂಲದಲ್ಲಿಯೆ ಕೊಟ್ಟು ತರುವಾಯ ಅದರ ಅನುವಾದ ಕೊಡುತ್ತೇನೆ:

This is the precious day for which I was striving for a time when I received inspiration to write in my own language in a different style so as to bring I think a new era in the annals of Kannada literature. I have rebelled against convention in the sense that I have followed my own metre etc. The thems are my themes which I would have otherwise written in English. I composed a tiny beautiful poem and I named it ‘PUVA’ of (‘The flower’) It was hailed by my friends and casual admirers. Many for the music, few for the them and still few for the new style. “Mother, guide me! Let thy fire burn in my heart! Vande Swami Vivenkandam!”

“ಕನ್ನಡ ಸಾಹಿತ್ಯದ ಇತಿಹಾಸದಲ್ಲಿ, ನನಗನ್ನಿಸುತ್ತದೆ, ಒಂದು ನೂತನ ಶಕವನ್ನೆ ತರುವಂತೆ, ಸಂಪ್ರದಾಯ ದೂರವಾದ ಬೇರೆಯ ರೀತಿಯಲ್ಲಿ, ಸ್ಫೂರ್ತಿಗೊಂಡಾಗ ನನ್ನ ನುಡಿಯಲ್ಲಿಯೆ ನಾನು ಬರೆಯಬೇಕೆಂದು ಸ್ವಲ್ಪ ಕಾಲದಿಂದಲೂ ಯಾವುದಕ್ಕಾಗಿ ಹೆಣಗುತ್ತಿದ್ದೆನೋ ಅದು ಸಾರ್ಥಕವಾಗಿರುವ ಒಂದು ಅತ್ಯಂತ ಸುಮೂಲ್ಯ ದಿನ. ನಾನು ಸಂಪ್ರದಾಯಕ್ಕೆ ವಿರುದ್ಧವಾಗಿ ದಂಗೆಯೆದ್ದಿದ್ದೇನೆ, ಯಾವ ಅರ್ಥದಲ್ಲಿ ಎಂದರೆ, ನನ್ನದೇ ಆಗಿರುವ ಛಂದಸ್ಸು ಇತ್ಯಾದಿಗಳನ್ನು ಅನುಸರಿಸುವಲ್ಲಿ. ಕಾವ್ಯದ ವಸ್ತು ಭಾವಗಳೆಲ್ಲ ನನ್ನವೆ, ಕನ್ನಡದಲ್ಲಿ ಅಲ್ಲದಿದ್ದರೆ ಅವನ್ನೆಲ್ಲ ಇಂಗ್ಲಿಷಿನಲ್ಲಿಯೆ ಬರೆಯುತ್ತಿದ್ದೆ. ಒಂದು ಪುಟ್ಟ ಸುಂದರ ಕವನ ರಚಿಸಿದೆ. ಅದಕ್ಕೆ ‘ಪೂವು’ ಎಂದು ಹೆಸರು ಕೊಟ್ಟಿದ್ದೇನೆ. ನನ್ನ ಸ್ನೇಹಿತರೂ ಇತರ ಕೆಲವು ಪರಿಚಿತರೂ ಅದನ್ನು ಹೊಗಳಿದ್ದೇ ಹೊಗಳಿದ್ದು! ಅನೇಕರು ಅದರ ನಾದ ಮಾಧುರ್ಯಕ್ಕಾಗಿ, ಕೆಲವರು ಅದರ ವಸ್ತುಭಾವಗಳಿಗಾಗಿ, ಒಬ್ಬಿಬ್ಬರು ಅದರ ನೂತನ ಶೈಲಿಗಾಗಿ. ತಾಯಿ ದಾರಿ ತೋರು! ನಿನ್ನ ಅಗ್ನಿ ನನ್ನ ಹೃದಯದಲ್ಲಿ ಪ್ರಜ್ವಲಿಸಲಿ! ವಂದೇ ಸ್ವಾಮಿ ವಿವೇಕಾನಂದಮ್!”

ದಿನಚರಿಯಲ್ಲಿ ಬರೆದಿಡುವ ಅಂತಹ ಕ್ರಾಂತಿಕಾರಕವಾದ ಧೀರಪ್ರತಿಜ್ಞೆಯ ವೀರ ವಾಕ್ಯಗಳಿಗೆ ನಿಮಿತ್ತಮಾತ್ರವಾದ ಆ ‘ಪೂವು’ ಕವನವನ್ನು ಈಗ ನೋಡಿದರೆ ಕನಿಕರ ಪಡುವಂತಿದೆ! ಅಷ್ಟು ಬಡಕಲು, ಅಷ್ಟು ಸೊಂಟಮುರುಕ! ಕನ್ನಡ ಭಾಷೆಯೂ ಅದುವರೆಗಿನ ನನ್ನ ಇಂಗ್ಲಿಷ್ ಕವನಗಳ ಭಾಷೆಯ ಪ್ರಯೋಗದ ಮುಂದೆ ಬರಿಯ ಅಂಬೆಗಾಲು, ತಿಪ್ಪತಿಪ್ಪದಂತಿದೆ! ವಿದೇಶೀ ಭಾಷೆಯನ್ನೆ ಅಷ್ಟಾದರೂ ಸಮರ್ಥವಾಗಿ ಬಳಸಬಲ್ಲ ಕವಿಗೆ ತನ್ನ ನುಡಿಯನ್ನೆ ಸಾಧಾರಣವಾಗಿಯಾದರೂ ಬಳಸಲಾರದಷ್ಟು ದಾರಿದ್ರ್ಯವಿದ್ದುದನ್ನು ನೋಡಿದರೆ ನಮ್ಮ ವಿದ್ಯಾಭ್ಯಾಸ ಪದ್ಧತಿ ಎಂತಹ ಗುಲಾಮಗಿರಿಯಲ್ಲಿತ್ತು ಎಂಬುದು ಗೊತ್ತಾಗುತ್ತದೆ.

ಮತ್ತೇಕೆ ಆ ಉನ್ಮೇಷನ? ಆ ಸಂತೋಷ? ಅಷ್ಟೊಂದು ಹೆಮ್ಮೆ? ಆ ಪದ್ಯದ ವಿಚಾರದಲ್ಲಿ? ಅದನ್ನು ಇಂಪಾಗಿ ಹಾಡಿ ಭಾವಪೂರ್ವಕವಾಗಿ ಸಹೃದಯರಲ್ಲಿ ಸಂವಹನ ಉಂಟುಮಾಡಿದ್ದಕ್ಕಾಗಿಯೂ ಇರಬಹುದು. ಆದರೂ ಆ ಕಾರಣ ಸಾಲದಾಗಿದೆ. ಈಗ ಆಲೋಚಿಸಿದರೆ ನನಗನ್ನಿಸುತ್ತದೆ. ಆ ಕವನದ ಭಾಷಾಭಿವ್ಯಕ್ತಿಗಾಗಿ ಅಲ್ಲ, ಅದರ ಹಿಂದಿರುವ ಕನ್ನಡ ಛಂದಸ್ಸಿನ ಸ್ವರೂಪರಹಸ್ಯ ಅಂತಃಪ್ರಜ್ಞಾಗೋಚರವಾದುದರಿಂದಲೇ ಕವಿಗೆ ಅಂತಹ ಆತ್ಮಪ್ರತ್ಯಯವೂ ಕನ್ನಡ ಸಾಹಿತ್ಯದಲ್ಲಿ ನೂತನ ಶಕಾರಂಭ ಸಾಧ್ಯ ಎಂಬ ಭರವಸೆ ಮೂಡಿದುದು. ಇಂಗ್ಲಿಷ್ ಭಾವಗೀತೆಗಳ ನಾನಾರೂಪದ ವೈವಿಧ್ಯದ ಪ್ರಯೋಗತಃ ಪರಿಚಯವಿದ್ದ ನನಗೆ ಕನ್ನಡದಲ್ಲಿಯೂ ಆ ಎಲ್ಲ ರೂಪಗಳನ್ನೂ ವೈವಿಧ್ಯವನ್ನೂ ಸಾಧಿಸಲು ಸಾಧ್ಯ ಎಂಬುದು ಮನಸ್ಸಿಗೆ ಸ್ಫುರಿಸಿರಬೇಕು. ಟ್ರೈಮೀಟರ್, ಟೆಟ್ರಾಮೀಟರ್, ಪೆಂಟಾಮೀಟರ್, ಹೆಕ್ಯಾಮೀಟರ್ ಮೊದಲಾದವುಗಳಿಗೆ ಸಂವಾದಿಯಾಗಿ ಮೂರು ಮಾತ್ರೆಯ, ನಾಲ್ಕು ಮಾತ್ರೆಯ, ಮೂರುನಾಲ್ಕು ಮಾತ್ರೆಯ, ಐದು ಮಾತ್ರೆಯ, ಆರುಮಾತ್ರೆಯ ಗಣಗಳನ್ನು ಉಪಯೋಗಿಸಬಹುದೆಂಬ ತತ್ತ್ವ ಗೋಚರವಾಗಿ ಆ ಧೀರಪ್ರತಿಜ್ಞೆಯ ವೀರೋಕ್ತಿ ಹೊಮ್ಮಿತೆಂದು ತೋರುತ್ತದೆ! ಅದಕ್ಕೆ ಸಾಕ್ಷಿಯಾಗಿ ಇನ್ನು ಕೆಲವೇ ತಿಂಗಳುಗಳಲ್ಲಿ ಕನ್ನಡದಲ್ಲಿಯೂ ಬ್ಲಾಂಕ್‌ವರ್ಸ್, ಸಾನೆಟ್, ಬ್ಯಾಲೆಡ್ ಮೀಟರ್ಸ್ ಮೊದಲಾದ ಎಲ್ಲ ಪ್ರಯೋಗಗಳೂ ಅದೇ ಬಡಕಲು ಸೊಂಟಮುರುಕ ಕನ್ನಡ ಭಾಷೆಯಲ್ಲಿಯೆ ನಡೆದಿರುವುದನ್ನು ಕಾಣುತ್ತೇವೆ. ಕನ್ನಡದಲ್ಲಿ ಬರೆಯಲು ತೊಡಗಿದ ಮೇಲೆ ಕ್ರಮೇಣ ಕನ್ನಡ ಕಾವ್ಯಗಳನ್ನು ಭಾಷಾಪ್ರಭುತ್ವಕ್ಕಾಗಿಯೂ ಗಮನಿಸಿ ಓದತೊಡಗಿದೆ. ಅದರಲ್ಲಿಯೂ ಲಕ್ಷ್ಮೀಶನನ್ನು ಪಾಂಡಿತ್ಯಕ್ಕಾಗಿಯೂ ಮಾಧುರ್ಯಕ್ಕಾಗಿಯೂ ಲಯವಿನ್ಯಾಸಕ್ಕಾಗಿಯೂ ವಿಶೇಷವಾಗಿ ಅಧ್ಯಯನ ಮಾಡಿದೆ, ಕರಿಬಸಪ್ಪ ಶಾಸ್ತ್ರಿಗಳ ಅರ್ಥಟೀಕಾದಿಸಹಿತ-‘ಜೈಮಿನಿಭಾರತ’ದ ಸಹಾಯದಿಂದ.

ಪೂವು

ಎಲೆ ಪೂವೆ ಆಲಿಸುವೆ|
ನಾ ನಿನ್ನ ಗೀತೆಯನು||
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು|| ||ಪಲ್ಲವಿ||

ಮಜ್ಜನವ ಮಂಜಿನೊಳು|
ನೀ ಮಾಡಿ ನಲಿವಾಗ|
ಉಜ್ಜಗದಿ ಸಂಜಿಯೊಳು|
ನರರೆಲ್ಲ ಬರುವಾಗ||

ತಳಿರೊಳಗೆ ಕೋಕಿಲೆಯು|
ಕೊಳಲನ್ನು ನುಡಿವಾಗ|
ಎಳೆದಾದ ರವಿಕಿರಣ|
ಇಳೆಯನ್ನು ತೊಳೆವಾಗ||

ಕವಿವರನು ಹೊಲಗಳಲಿ||
ರವಿಯಿಂದ ತೊಳಗುತಿಹ|
ಭುವನವನು ಸಿಂಗರಿಸಿ|
ಸವಿಯಾಗಿ ಬೆಳಗುತಿಹ||

ಅಲರುಗಳ ಸಂತಸದಿ|
ತಾ ನೋಡಿ ನಲಿವಾಗ|
“ನಲಿ” ಪೂವೆ ಎನ್ನುತಲಿ|
ರಾಗದಿಂ ನುಡಿವಾಗ||

ಗೀತವನು ಗೋಪಾಲ|
ಏಕಾಂತ ಸ್ಥಳದೊಳು|
ಪ್ರೀತಿಯಿಂ ನುಡಿವಾಗ|
ನಾಕವನು ಸೆಳೆಯುತ್ತ||

ವನದಲ್ಲಿ ಪಕ್ಷಿಗಳು|
ಇನನನ್ನು ಸವಿಯಾಗಿ|
ಮನದಣಿವ ಗೀತದಿಂ|
ಮನದಣಿಯೆ ಕರೆವಾಗ||

ಮೋಡಗಳು ಸಂತಸದಿ|
ಮೂಡುತಿಹ ಮಿತ್ರನನು|
ನೋಡಿ ನೋಡಿ ನಲಿಯಲು|
ನಾಡ ಮೇಲ್ ನಡೆವಾಗ||

ಮುಂಜಾನೆ ಮಂಜಿನೊಳು|
ಪಸುರಲ್ಲಿ ನಡೆವಾಗ|
ಅಂಜಿಸುವ ಸಂಜೆಯೊಳು|
ಉಸಿರನ್ನು ಎಳೆವಾಗ||

ಎಲೆ ಪೂವೆ ಆಲಿಸುವೆ|
ನಾ ನಿನ್ನ ಗೀತೆಯನು|
ಎಲೆ ಪೂವೆ ಸೋಲಿಸುವೆ|
ನಾ ನಿನ್ನ ಪ್ರೀತಿಯನು||

 


[1] ಈ ವಚನಕವನ ನನ್ನ ಒರಟು ಕರಡು ಹಸ್ತಪ್ರತಿಯಲ್ಲಿದೆ.