ಈ ಮೊದಲ ತೊದಲ ಕವನವು ಉತ್ತಮ ಕವಿತೆಗೆ ಭಾಷಾಪ್ರಭುತ್ವ ಎಷ್ಟರಮಟ್ಟಿಗೆ ಅವಶ್ಯಕ ಎಂಬುದನ್ನು ತೋರಿಸುತ್ತದೆ. ಇದುವರೆಗೆ ನಾನು ಬರೆದಿರುವ ಇಂಗ್ಲಿಷ್ ಕವನಗಳನ್ನು ಪರಿಶೀಲಿಸಿದರೆ ನನಗೆ ಭಾವಾಂಶ ಕಲ್ಪನಾಂಶಗಳಲ್ಲಿ ತಕ್ಕಮಟ್ಟಿನ ಸಂಪತ್ತಿ ಇರುವುದು ಗೊತ್ತಾಗುತ್ತದೆ; ವಿದೇಶಿಭಾಷೆಯಾದರೂ ರೂಪಾಂಶದಲ್ಲಿಯೂ, ಎಷ್ಟೇ ದೋಷ ನ್ಯೂನತೆಗಳು ಇದ್ದರೂ, ಅಷ್ಟೇನೂ ಕೆಳಮಟ್ಟಕ್ಕೆ ಇಳಿದಿಲ್ಲ ಎಂದು ಹೇಳಿಕೊಳ್ಳುವಂತಿದೆ. ಆದರೆ, ಅಷ್ಟೆಲ್ಲ ಇಂಗ್ಲಿಷ್ ಕವನಗಳನ್ನು ಬರೆದ ಮೇಲೆಯೂ ನನ್ನ ಭಾಷೆಯಲ್ಲಿ ಬರೆದ ಕವನವು ಏಕೆ ಹೀಗಿದೆ? ನನ್ನ ಚೇತನಕ್ಕೆ ಭಾವಾಂಶ ಚಿಂತನಾಂಶ ಕಲ್ಪನಾಂಶಗಳ ಕೊರತೆ ಇಲ್ಲದಿದ್ದರೂ ರೂಪಾಂಶದ ಕೊರತೆಯ ಕಾರಣದಿಂದಲೇ ಅಭಿವ್ಯಕ್ತಿಯಲ್ಲಿ ಇತರ ಎಲ್ಲ ಅಂಶಗಳ ಅಭಾವವೂ ಉಂಟಾಗಲು ಕಾರಣವಾಗಿದೆ. ಇಲ್ಲಿಯೆ ನಿದರ್ಶನ ಸಹಿತ ಸಿದ್ಧಾಂತವಾಗುತ್ತದೆ. ‘ರೀತಿರಾತ್ಮಾಕವ್ಯಸ್ಯ’ ಎಂಬುದು. ವಸ್ತು, ಅಲಂಕಾರ, ರಸ, ಧ್ವನಿ ಎಲ್ಲವೂ ವಿನಷ್ಟವಾಗಬಹುದು. ‘ರೀತಿ’ಯ ಕೊರತೆಯಿಂದ. ಪದಸಂಪತ್ತಿ ಭಾಷಾಪ್ರಭುತ್ವಗಳು ಅತ್ಯಂತ ಅವಶ್ಯ, ಉತ್ತಮ ಕಾವ್ಯಸೃಷ್ಟಿಗೆ. ಈ ಭಾಷಾಪ್ರಭುತ್ವ ಮತ್ತು ಪದಸಂಪತ್ತಿಯ ಅಭಾವವೆ ಮೂಲಕಾರ ‘ನವ್ಯ’ ಕವಿತೆಯ ಉಗಮಕ್ಕೂ ಮತ್ತು ಅದರ ನೀರಸ ಅಖಚಿತ ನಿರುಪಯುಕ್ತತೆಗೂ, ಬಹುಮಟ್ಟಿಗೆ, ಕೆಲವರಲ್ಲಾದರೂ.

‘ಪೂವು’ ಎಂದು ಕವನಕ್ಕೆ ಹೆಸರು ಕೊಡುವುದರಲ್ಲಿಯೆ ಭಾಷಾಜ್ಞಾನ ತಡವರಿಸುತ್ತದೆ. ಕಾಲೇಜಿಗೆ ಸೇರಿದ ಮೇಲೆ, (ಕಾಗದ ತಂದು ಜೋಡಿಸಿ, ಕತ್ತೆಕಾಗದದ ರಟ್ಟು ಹಾಕಿ, ನಾನೆ ಹೊಲಿದು ಮಾಡಿದ ಒಂದು ಪುಟ್ಟ ನೋಟುಬುಕ್ಕಿನಲ್ಲಿ ನನ್ನೆಲ್ಲ ಕನ್ನಡ ಕವನಗಳನ್ನು ಪ್ರತಿಯೆತ್ತಿ ಆ ಪುಸ್ತಕಕ್ಕೆ ‘ಪುಷ್ಪಗೀತೆ’ ಎಂದು ಹೆಸರಿಟ್ಟಿದ್ದ ಹಸ್ತಪ್ರತಿ ಇಲ್ಲಿಯೆ ನನ್ನೆದುರಿಗಿದೆ. ಅದರಲ್ಲಿ ೮೪ ಪುಟಗಳಿವೆ. ೧೦-೭-೧೯೨೪ರಿಂದ ೧೦-೮-೧೯೨೪ರವರೆಗೆ ಬರೆದ ಕವನಗಳು ಅದರಲ್ಲಿವೆ. ದೊಡ್ಡವು ಚಿಕ್ಕವು ಸೇರಿ ೬೭ ಕವನಗಳಿವೆ. ಅಂದರೆ ಕನ್ನಡದಲ್ಲಿ ಬರೆಯುವ ಸ್ಫೂರ್ತಿಯ ಜೋರಿಗೆ ಸಿಕ್ಕಿ ಒಂದೆ ತಿಂಗಳಲ್ಲಿ ೬೭ ಕವನಗಳು ರಚಿತವಾಗಿವೆ. ಎಲ್ಲವೂ ಪ್ರಾಯೋಗಿಕ ಪ್ರಯತ್ನಗಳು, ಅಕ್ಷರಾಭ್ಯಾಸ ಸದೃಶ. ಇಂಗ್ಲಿಷ್ ಛಂದಸ್ಸಿನ ಅನುಕರಣೀಯ ವಿವಿಧ ಮುಖಗಳನ್ನು ಅಲ್ಲಿ ಕಾಣುತ್ತೇವೆ. ಆದರೆ ಎಲ್ಲಿಯೂ ಕನ್ನಡ ಛಂದಸ್ಸಿನ ದ್ವಿತೀಯಾಕ್ಷರ ಪ್ರಾಸದ ಪೀಡೆಯಿಂದ ಪಾರಾಗಿಲ್ಲ; ಒಂದೆರಡು ಬ್ಲಾಂಕ್‌ವರ್ಸ್‌ಅನುಕರಣ ಪ್ರಯತ್ನಗಳನ್ನುಳಿದು.) ನನ್ನ ಆ ಹಸ್ತಪ್ರತಿ ‘ಪುಷ್ಪಗೀತೆ’ಯನ್ನು ಕನ್ನಡದ ಅಸಿಸ್ಟೆಂಟ್ ಪ್ರೋಫೆಸರ್ ಆಗಿದ್ದ ಬಿ.ಕೃಷ್ಣಪ್ಪನವರಿಗೆ ಕೊಟ್ಟಿದ್ದೆ. ನಾನಾಗಿದ್ದರೆ ಅದನ್ನು ವಂದನೆಗಳೊಡನೆ ಹಿಂದಿರುಸುತ್ತಿದ್ದೆ. ಅವರು ಶ್ರಮವಹಿಸಿ ಆ ಕಸದ ರಾಶಿಯಲ್ಲಿಯೂ ರಸವನ್ನು ಕಾಣುವ ಸಹೃದಯ ಸುಹೃದಯತೆಯನ್ನು ಪ್ರದರ್ಶಿಸಿ, ಕೆಲವು ಕವನಗಳ ಭಾಷೆಯನ್ನು ತಿದ್ದಲು ಪ್ರಯತ್ನಿಸಿದ್ದಾರೆ. ‘ಪೂವು’ ಎಂಬ ಶೀರ್ಷಿಕೆಯಲ್ಲಿ ‘ವು’ ಅನ್ನು ಹೊಡೆದುಹಾಕಿದ್ದಾರೆ.‘ಕೊಳಲನ್ನು ನುಡಿವಾಗ’ ಎನ್ನುವ ಪಂಕ್ತಿಯನ್ನು ‘ಕೊಳಲುಲಿಯನುಲಿವಾಗ’ ಎಂದು ಬದಲಾಯಿಸಿದ್ದಾರೆ. ಹಾಗೆಯೆ ‘ಎಳೆದಾದ ರವಿಕಿರಣ’ ‘ಇಳೆಯನ್ನು ತೊಳೆವಾಗ’ ಎನ್ನುವುದನ್ನು ‘ಎಳದಾದ ರವಿಕಿರಣ| ವಿಳೆಯನ್ನು ತೊಳೆವಾಗ’ ಎಂದು ಬದಲಾಯಿಸಿದ್ದಾರೆ. ‘ಎಳ’ ಎಂದೇ ಬರೆಯಬೇಕು| ‘ಇಳೆ’ಯನ್ನು ಸಂಧಿ ಬಿಡಿಸಬಾರದು! ‘ಕವಿವರನು ಹೊಲಗಳಲಿ’ ಎನ್ನುವ ಪಂಕ್ತಿಯಲ್ಲಿ ‘ಕವಿವರನು’ ಎನ್ನುವ ಪದಕ್ಕೆ ಅಡಿಗೀಟು ಹಾಕಿ, ಪಕ್ಕದಲ್ಲೊಂದು ಪ್ರಶ್ನೆಚಿಹ್ನೆ ಹಾಕಿದ್ದಾರೆ. ಅವರಿಗೆ ಬೆರಗಾಗಿರಬೇಕು ‘ಕವಿವರ’ ಯಾರು ಎಂದು! ‘ನಾನೆ’ ಎಂದುಕೊಳ್ಳುವಷ್ಟು ಧಾರ್ಷ್ಟ್ಯ ನನಗಿದೆ ಎಂದು ಅವರು ಭಾವಿಸುವಂತಿರಲಿಲ್ಲ ಎಂದು ತೋರುತ್ತದೆ, ನನ್ನ ಹೊರನೋ! ‘ಏಕಾಂತ ಸ್ಥಳದೊಳು’ ಎನ್ನುವ ಪಂಕ್ತಿಯಲ್ಲಿ ಒಂದು ಮಾತ್ರೆಯ ಅಭಾವವನ್ನು ಅವರು ಕಂಡುಹಿಡಿದು ‘ಏಕಾಂತ ಸ್ಥಾನದೊಳು’ ಎಂದು ತಿದ್ದಿದ್ದಾರೆ. ‘ಮನದಣಿವ ಗೀತದಿಂ’ ಎನ್ನುವಲ್ಲಿ ‘ಮನವೊಲಿವ’ ಎಂದು ತಿದ್ದಿದ್ದಾರೆ. ಇಷ್ಟು ತಿದ್ದುಪಡಿ ಸೂಚಿಸಿ ಈ ಕವನ ‘ಪಾಸಾಗಿದೆ’ ಎಂದು ಸೂಚಿಸುವುದಕ್ಕೆ ಬಣ್ಣದ ಪೆನ್ಸಿಲ್ಲಿನಲ್ಲಿ ಒಂದು ರೈಟ್ ಮಾರ್ಕ್‌ಹಾಕಿದ್ದಾರೆ. ಹಾಗೆಯೆ ‘ಪುಷ್ಪಗೀತೆ’ಯಲ್ಲಿರುವ ಕವನಗಳಲ್ಲಿ ಕೆಲವನ್ನು ತಿದ್ದಿ ರೈಟ್ ಮಾರ್ಕ್‌ಹಾಕಿದ್ದಾರೆ. ಅವರು ರೈಟ್‌ಮಾರ್ಕ್‌ಹಾಕಿರುವ ಕೆಲವು ಕವನಗಳನ್ನೂ ಕವನಭಾಗಗಳನ್ನೂ ಉದಾಹರಿಸಬೇಕೆಂದಿದ್ದೇನೆ. ಆದರೆ ಅವರ ವಿಮರ್ಶೆಯ ಮಹೌದಾರ್ಯವನ್ನು ನೆನೆದರೆ ನನಗೀಗ ಆಶ್ಚರ್ಯವಾಗುತ್ತದೆ! ಅದರಲ್ಲಿಯೂ ಅವರು, ವೇಷ ಭೂಷಣಗಳಲ್ಲಿ ಕೋಟು ಪ್ಯಾಂಟು ಪೇಟ ಧರಿಸಿ ಇಂಗ್ಲಿಷ್ ಪ್ರೊಫೆಸರುಗಳಂತೆಯೆ ಇದ್ದರೂ, ಹಳೆಯಪಂಡಿತ ಸಂಪ್ರದಾಯದ ಕಡೆಯಿಂದ ಬಂದವರು ಎಂಬುದನ್ನು ಮರೆಯುವಂತಿಲ್ಲವಾದ್ದರಿಂದ ಅವರ ಆ ತೆರನ ವಿಮರ್ಶೆಗೆ ಕರುಣೆ ಪ್ರೀತಿಗಳೆ ಹೃದಯ ಶ್ವಾಸಕೋಶಗಳಾಗಿದ್ದುವೆಂದು ಭಾವಿಸುತ್ತೇನೆ! ತರುಣನಿಗೆ ಉತ್ಸಾಹ-ಭಂಗವಾದೀತೆಂದು ಹೆದರಿಯೆ ಬೆನ್ನುತಟ್ಟಿ ಪ್ರೋತ್ಸಾಹಿಸಿದಂತಿದೆ!

ಮತ್ತೊಂದು ಗಮನಿಸಬೇಕಾದ ವಿಷಯ: ಆ ಕವನ ಹಸ್ತಪ್ರತಿಯಲ್ಲಿ ಹೇಗೆ ಬರೆದಿದೆಯೊ ಹಾಗೆಯೆ ಎತ್ತಿ ಬರೆದಿದ್ದೇನೆ. ಪ್ರತಿಪಂಕ್ತಿಯ ತುದಿಯಲ್ಲಿ ಒಂದು ಗೀಟೂ (|) ಪ್ರತಿಪದ್ಯದ ತುದಿಯಲ್ಲಿ ಎರಡು ಗೀಟೂ (||) ಇರುವುದನ್ನು ಗಮನಿಸಬೇಕಾದ್ದೆ! ದ್ವಿತೀಯಾಕ್ಷರ ಪ್ರಾಸ ಕೆಲವು ಪದ್ಯಗಳಲ್ಲಿ ನಾಲ್ಕು ಪಂಕ್ತಿಗಳಲ್ಲಿಯೂ ಇದೆ; ಇನ್ನು ಕೆಲವದರಲ್ಲಿ ೧ ಮತ್ತು ೩ರಲ್ಲಿ ಇದೆ. ಕ್ರಾಂತಿ ಮಾಡಲು ಹೊರಟ ತರುಣಕವಿಗೆ ಸಂಪ್ರದಾಯದ ಭ್ರಾಂತಿಗಳಿಂದ ಬಿಡುಗಡೆ ಹೊಂದುವುದು ಅಷ್ಟೇನೂ ಸುಲಭವಿಲ್ಲ ಅಲ್ಲವೆ?

ಜುಲೈ ೧೧ನೆಯ ಶುಕ್ರವಾರದ ದಿನಚರಿ:

‘ಪೂವು’ ಬರೆದ ಮರುದಿನದ್ದು: “ಕಾಲೇಜಿನಲ್ಲಿ ವಿರಾಮ ಸಮಯದಲ್ಲಿ ನಾನೊಬ್ಬನೆ ಶತಪಥ ತಿರುಗುತ್ತಾ ಒಂದು ಕನ್ನಡ ಪದ್ಯ ರಚಿಸಿದೆ ‘Dawn’ ಕುರಿತು. ಅದಕ್ಕೆ ‘ಅರುಣೋದಯ’ ಎಂದು ನಾಮಕರಣ ಮಾಡಿದ್ದೇನೆ.

ನನ್ನ ಕನ್ನಡ ಭಾವಗೀತೆಗಳು ಪಾಂಡಿತ್ಯ ಪ್ರದರ್ಶಕವಾಗಿಲ್ಲ, ಹಳಗನ್ನಡ ಕಾವ್ಯಗಳಂತೆ; ಆದರೆ ಅವು ಮನೆಮಾತಿನಂತೆ ಸರಳ. ಹಿರಿಯರಿಗೂ ಕಿರಿಯರಿಗೂ ರಚಿಸುವ ದಿನದಿನದ ಬದುಕಿನ ಸಾಮಾನ್ಯ ವಿಷಯಗಳನ್ನೆ ಕುರಿತವು. (My Kannada Iyrical poems are not so pedantic as the epic poetry, but they are simple and homely, and treat the everyday subject matter in which young as well as old is interested.) ಪೌರಾಣಿಕ ಕಾವ್ಯರೂಪಗಳನ್ನಲ್ಲದೆ ಅನ್ಯವನ್ನರಿಯದ ಕನ್ನಡ ಸಾಹಿತ್ಯದಲ್ಲಿ ಅವು ತಮ್ಮದೆ ವಿಶೇಷವಾದ ಒಂದು ನೂತನ ವಿಧಾನವಾಗಿವೆ. ಅಥವಾ ಕೆಲವಾದರೂ ಇದ್ದರೂ ಅವೂ ಪುರಾಣಕಾವ್ಯದತ್ತಲೆ ಓಲುತ್ತವೆ, ವಿಷಯ, ವಸ್ತು ಮತ್ತು ರೂಪಗಳಲ್ಲಿ, (They are, so to say, a different variety in Kanarese literature which knows nothing but the epic form of poetry. Or if there be some they lean almost towards epic from and theme.) ಕನ್ನಡ ಸಾಹಿತ್ಯವು ಪ್ರಕೃತಿಯನ್ನು ಅದರ ಸೌಂದರ್ಯಕ್ಕಾಗಿ ಮಾತ್ರ ಪುರಾಣಕಾವ್ಯಗಳ ಕೆಲವು ಪದ್ಯಗಳಲ್ಲಿ ವರ್ಣಿಸುತ್ತದೆಯೆ ಹೊರತು ಅದಕ್ಕಿಂತ ಮೇಲುಮಟ್ಟದ ಸ್ಥಾನವನ್ನು ಎಂದೂ ಕೊಟ್ಟಿಲ್ಲ. ನಿಸರ್ಗವನ್ನು ಇಂಗ್ಲಿಷ್ ಕವಿಗಳು ಉಪಯೋಗಿಸುವ ರೀತಿಯಲ್ಲಿ ಬಳಸಬೇಕೆಂಬುದೆ ನನ್ನ ಮಹಾದಾಶೆ. (Nature in Kanarese literature is simply taken for its beauty in some stanzas of the epics. Kanarese has never dealt with it in any higher sense. And my ambition is to deal with Nature as the English poets have dealt with.)”

ಆ ‘ಅರುಣೋದಯ’ ಕವನದಲ್ಲಿ ಆರಾರು ಪಂಕ್ತಿಗಳ ಏಳು ಪದ್ಯಗಳಿವೆ. ದ್ವಿತೀಯಾಕ್ಷರ ಪ್ರಾಸದ ಪಿಡುಗು ತಪ್ಪಿಲ್ಲ. ‘ಪೂವು’ ಕವನದಲ್ಲಿ ಐದು ಮಾತ್ರೆಗಳ ಗಣವಿದ್ದರೆ ಇಲ್ಲಿ ನಾಲ್ಕು ಮಾತ್ರೆಗಳ ಗಣದ ಪ್ರಯೋಗವಿದೆ. ಆದರೆ ಆ ವಿಚಾರದಲ್ಲಿ ಇನ್ನೂ ಖಚಿತ ಜ್ಞಾನವಿಲ್ಲ. ‘ಪರದಂ| ತೆ ಧರೆಯೊ| ಳು ಮಿರುಗುವ|’ ಎಂಬಂತಹ ವಿಷಮ ವಿಭಜನೆಯೂ ಇದೆ. ಭಾಷೆಯಂತೂ ಬಡಕಲು: ಅದರ ಮೊದಲಿನ ಮತ್ತು ಕೊನೆಯ ಪದ್ಯಗಳನ್ನು ಮಾದರಿಗಾಗಿ ಕೊಡುತ್ತೇನೆ:

ಅರುಣೋದಯವೇ ಅರುಣೋದಯವೇ|
ಕರುಣಾಸಾಗರನೆಳನಗುವೇ|
ಗಿರಿಗಳ ಶಿಖರದಿ ಮರೆಯುವ ದಯವೇ|
ಪರದಂತೆ ಧರೆಯೊಳು ಮಿರುಗವೇ||

* * *

ಅರುಣೋದಯವೇ ಅರುಣೋದಯವೇ|
ಅರಳುವ ಪುಷ್ಪದಿ ಪರಮಪುರುಷನ ತೋರುವೇ||
ಮಿಸುನಿಯ ಧೂಳಿಯ ಮುಸುಕಿದ ತೆರೆದಲಿ|
ಮೋಡಗಳಂಬರ ತುಂಬಿಹವು||
ಪಸುರಿನ ವಸನವ ಧರಿಸಿದ ತೆರೆದಲಿ|
ಕಾಡುಗಳವನಿಯ ತುಂಬಿಹವು||
ಅರುಣೋದಯವೇ…………….
೧೧-೭-೧೯೨೪

ಜುಲೈ ೧೨ನೆಯ ತಾರೀಖಿನ ದಿನಚರಿ ಬರೆದಿಲ್ಲ. ೧೩ನೆಯ ತಾರೀಖಿನದು ಇಂತಿದೆ:

“ಬ್ರಿಟಿಷ್ ಸಾಮ್ರಾಜ್ಯದ ಚರಿತ್ರೆಯನ್ನು ಓದುತ್ತಿರುವಾಗ ಸಿಪಾಯಿದಂತೆಯ ಒಂದು ದೃಶ್ಯಕ್ಕೆ ಬಂದೆ. ಅಲ್ಲಿ ಒಂದು ಚಿತ್ರದಲ್ಲಿ ಸೋಲ್ಜರುಗಳೂ ಸಿಪಾಯಿಗಳೂ ದೆಹಲಿಯಲ್ಲಿ ಕಾಶ್ಮೀರ ಹೆಬ್ಬಾಗಿಲನ್ನು (Kashmir gate) ಭೇದಿಸುತ್ತಿರುವುದನ್ನು ಕಂಡೆ. ಆಗ ಒಂದು ಲಾವಣಿ (Ballad) ರಚಿಸಿದೆ, ‘The Fatal Torch’ ಎಂಬ ಹೆಸರಿನಲ್ಲಿ. ಏಕೆಂದರೆ ಆ ಧಾಳಿಯಲ್ಲಿ ಒಂದು ಹಿಲಾಲು ಬೀಳುತ್ತಿರುವ ಒಬ್ಬ ಸೈನಿಕನಿಂದ ಮತ್ತೊಬ್ಬ ಸೈನಿಕನಿಗೆ ಸಾಗುತ್ತಿತ್ತು. ಹೀಗೆ ಸಾಯುವ ಸೈನಿಕನಿಂದ ಬದುಕಿರುವ ಸೈನಿಕನಿಗೆ ಸಾಗಿ ಸಾಗಿ ಕಡೆಯಲ್ಲಿ ಆ ಹಿಲಾಲು ಕೋವಿಮಸಿಗೆ ಬೆಂಕಿ ಹೊತ್ತಿಸಿ ಹೆಬ್ಬಾಗಿಲನ್ನು ಬಿರಿಯುವ ಕೆಲಸ ಸಾಗಿಸಿತ್ತು. ಬೆಳಿಗ್ಗೆ ‘ಪ್ರಕೃತಿ ಗೀತೆ’ ಎಂಬ ಕನ್ನಡ ಕವನ ರಚಿಸಿದೆ. ನನ್ನ ಕೊಠಡಿಯ ಸಹನಿವಾಸೀ ಮಿತ್ರರಿಂದ ಅದನ್ನು ಹಾಡಿಸಿದೆ. ನನ್ನ ಸೈಕಾಲಜಿ ಮತ್ತು ಲಾಜಿಕ್ ಪುಸ್ತಕಗಳನ್ನು ಹತ್ತು ರೂಪಾಯಿಗಳಿಗೆ ಕೊಂಡುಕೊಂಡೆ. ಓಂ, ದಿವ್ಯಮಾತೆ, ನಿನ್ನೆದೆಗೆ ನನ್ನನ್ನು ಕರೆದುಕೋ! ನಿನ್ನ ವೃಕ್ಷದಾಶ್ರಯದಲ್ಲಿ ಚಿಕ್ಕ ಮಗುವಾಗಿ ನಾನು ಪರಮಾನಂದವನ್ನೂ ಪಡೆಯುವಂತಾಗಲಿ! ಪ್ರಾಚೀನ ಜ್ಯೋತಿಗಳಿರಾ, ನಿಮಗೆ ನಮಸ್ಕಾರ! ಓಂ, ವಂದೇ ಸ್ವಾಮಿ ವಿವೇಕಾನಂದಮ್!”

ಒಂದೇ ದಿನದಲ್ಲಿ ರಚಿಸಿದ ಆ ಎರಡು ಕವನಗಳಲ್ಲಿ ನನ್ನ ಇಂಗ್ಲಿಷ್ ಲಾವಣಿ, ಸೈನಿಕ ಶಸ್ತ್ರ ವಸ್ತ್ರಧಾರಿಯಾದ ಐರೋಪ್ಯ ಸೇನಾನಿಯಂತೆ, ಧೀರಭಂಗಿಯಲ್ಲಿ ಗೌರವಾಸ್ಪದವಾಗಿ ನಿಂತರೆ, ನನ್ನ ಕನ್ನಡ ಕವನ, ಉದಾತ್ತ ಭಾವಾಂಶವನ್ನು ಪಡೆದಿದ್ದರೂ, ರೂಪಾಂಶದಲ್ಲಿ ಭಾಷೆಯಲ್ಲಿ ಎಷ್ಟು ಕನಿಕರಣೀಯವಾಗಿ ಬಡಕಲಾಗಿದೆ ಎಂದರೆ ಹೊಟ್ಟೆಗೂ ಸರಿಯಾಗಿಲ್ಲದೆ ಹರಕಲು ಕೊಳೆಬಟ್ಟೆ ತೊಟ್ಟು ಸಣಕಲು ಕಾಲಿನಲ್ಲಿ ಬಾಗಿ ನಡೆಯುವ ಪ್ರಾಥಮಿಕ ಶಾಲೆಯ ಪುರೋಹಿತೋಪಾಧ್ಯಾಯನಂತೆ ನಾಚಿಕೆಗೇಡಾಗಿ ತೋರುತ್ತದೆ! ಆದ್ದರಿಂದ, ಅದನ್ನಿಲ್ಲಿ ನಿದರ್ಶಿಸಿ ತಾಯಿ ಕನ್ನಡಕ್ಕೆ ಅವಮಾನ ಮಾಡಲು ನನಗಿಷ್ಟವಿಲ್ಲ:

THE FATAL TORCH
(Blowing in the Kasmiri Gate at Delhi)

Then the fatal signal flashed
To blow in the Kasmir porch;
Soldier after soldier dashed
And the foremost held the torch.
But the rebels from the walls
Sent wildly shell after shell;
And the angry bursting balls
Around them shattered and fell.

Ere they felled the foremost runner
Another held his spot;
Ere he fell, by another gunner
The burning torch was caught.
The wonded as they were lying
Lifted up the burning brand;
And they saw as they were dying
The brand pass from hand to hand

Like lightnings the canons flashed,
Like thunder the shells rumbled;
And like rain-drops the shots dashed,
And like trees the soldiers tumbled.
But amidst such fiery storm
Never stooped the fatal brand,
For it moved from arm to arm,
And it flew form hand to hand.

From the dead to the dying,
From the dying to the standing
It swiftly went on flying
Towards its fatal landing.
Indian and English fell
Like brothers side by side;
And there was no one to tell
Each…… a different hide.

(ಬಿಟ್ಟು ಹೋಗಿರುವ ಪದ ಅಥವಾ ಪದಗಳು ಏನು ಎಂಬುದು ಗೊತ್ತಾಗುವುದಿಲ್ಲ, ಹಸ್ತಪ್ರತಿಯಲ್ಲಿ)

And the gate at last was shattered,
And the brand was still flying;
Its stone-timbers wildly battered
Both the dead and the dying!
Wild was the charge they made,
Wild was the fate they met;
But their glory shall never fade,
And their courage we ne’er forget!
ಜುಲೈ ೧೪ನೆಯ ಸೋಮವಾರದ ದಿನಚರಿ:

“ಕಳೆದ ಸಂಜೆ ನಾನು, ಎಚ್‌.ಕೆ.ವೀರಪ್ಪ ನಿಷಾದ್‌ಬಾಗಿಗೆ ವಾಕ್ ಹೋಗಿದ್ದೆವು. ಅಗಲೆ ಕತ್ತಲೆಯಾಗಿತ್ತು. ಚಂದ್ರನು ಬಾನಿನಲ್ಲಿ ಬಹುಮೇಲಕ್ಕೆ ಏರಿದ್ದನು. ಮೋಡಗಳು ಮೂಡಲ ದಿಕ್ಕಿಗೆ ಓಡುತ್ತಿದ್ದುವು; ಚಂದ್ರನು ಪಡುವಲಕ್ಕೆ ಓಡುತ್ತಿದ್ದನು. ತಾರೆಗಳು ಅರ್ಥಪೂರ್ಣವಾಗಿ ಸವಿಗಣ್ಣಿಂದ ನೋಡುತ್ತಿದ್ದುವು ಪೃಥಿವಿಯ ಕಡೆಗೆ. ದೃಶ್ಯ ನನ್ನ ಹೃದಯಕ್ಕೆ ರಸದರ್ಶನಕಾರಿಯಾಗಿತ್ತು. ಅಲ್ಲಿಯೆ ಕನ್ನಡದಲ್ಲಿ ಕೆಲವು ಪದ್ಯಗಳನ್ನು ರಚಿಸಿದೆ. ಇವೊತ್ತು ಅದನ್ನು ಮುಗಿಸಿದೆ. ಅದಕ್ಕೆ ‘ಚಂದ್ರನು’ ಎಂದು ಹೆಸರು ಕೊಟ್ಟಿದ್ದೇನೆ. ಅದನ್ನು ಗಟ್ಟಿಯಾಗಿ ರಾಗವಾಗಿ ಹಾಡಿಕೊಂಡೆ. ಇಂಪಾಗಿತ್ತು. ಕಾಲೇಜಿಗೆ ಹೋದಾಗ ಅಲ್ಲಿ ನನ್ನ ಬಾಲ್ಯದ ದಿನಗಳನ್ನೂ ಹಳ್ಳಿಯ ಐಗಳ ಶಾಲೆಯನ್ನೂ ನೆನೆದುಕೊಂಡು ಕೆಲವು ಪದ್ಯಗಳನ್ನು ಕನ್ನಡದಲ್ಲಿ ರಚಿಸಿದೆ. ನಾನು ಆಗ ಕನಸು ಕವಿಯಂತಿದ್ದೆ. ನನ್ನ ಮಿತ್ರರಿಗೂ ಇತರ ಸಹಪಾಠಿಗಳಿಗೂ ಏನು ಅನ್ನಿಸಿತೊ ನಾನರಿಯೆ. ಹೇ ಮಹಾತಾಯಿ, ನಿನ್ನ ಬೆಳಕು ನನ್ನನ್ನು ನಡೆಸಲಿ! ನೀನೆ ನನ್ನ ಆನಂದ, ಆಲಯ! ಓಂ!”

“ಚಂದ್ರನು” ಎಂಬ ಕವನವನ್ನು ಪ್ರೊ.ಬಿ.ಕೃಷ್ಣಪ್ಪನವರು ತಿದ್ದಿದ್ದಾರೆ. ನಾಲ್ಕು ಪಂಕ್ತಿಗಳ ಒಂಬತ್ತು ಪದ್ಯಗಳಿವೆ. ದ್ವಿತೀಯಾಕ್ಷರ ಪ್ರಾಸ ತಪ್ಪಿಲ್ಲ. ವರ್ಣನಾತ್ಮಕವಾಗಿದೆ. ಹೆಸರು ಕೊಡುವಾಗಲೂ ‘‘ಚಂದ್ರ’’ ಎಂದು ಬರೆದರೆ ‘‘ಚಂದ್ರನು’’ ಎಂದು ಬರೆದಿರುವಲ್ಲಿ ‘‘ಮಡಿವಂತಿಕೆ’’ಯನ್ನುಗುರುತಿಸಬಹುದು. ಪಂಕ್ತಿಗಳ ತುದಿಯಲ್ಲಿ ಒಂದು ಗೀಟಿರುವುದನ್ನೂ ಪದ್ಯದ ತುದಿಯಲ್ಲಿ ಎರಡು ಗೀಟಿರುವುದನ್ನೂ ಗಮನಿಸಿ ಮುಗುಳು ನಗುವಂತಿದೆ. ಒಂದೆರಡನ್ನು ಮಾತ್ರ ಮಾದರಿಗಾಗಿ ನಿದರ್ಶಿಸುತ್ತೇನೆ:

ಚಂದ್ರನು

ಮೂಡಣ್ಗೆ ಓಡುತಿಹ|
ಮೋಡಗಳ ನಡುನಡುವೆ|
ಓಡುತಿಹ ಚಂದ್ರನನು|
ನೋಡು ಬಾ ಬಾಲನೇ||

ಮಿಣುಕುತಿಹ ತಾರೆಯೊಳು|
ಇಣುಕಿಣುಕಿ ನೋಡುತಿವೆ|
ನೋಡು ಬಾ ಬಾಲನೇ||

* * *

ಆಗಸದ ಕಡಲಿನೊಳು|
ಮೇಘದ ತರಂಗದೊಳು|
ಸಾಗುತಿಹ ಭೈತ್ರವನು|
ನೋಡು ಬಾ ಬಾಲನೇ||

ಉದಯಿಸಿದ ಇಂದುವನು|
ಹೃದಯದೊಳು, ಧರಿಸಿರುವ|
ಬುಧರಂಥ ಸರಸುಗಳ|
ನೋಡು ಬಾ ಬಾಲನೇ||

ಇದನೆಲ್ಲ ಸೃಷ್ಟಿಸಿದ|
ಹೃದಯದೊಳು ನೆಲೆಸಿರುವ|
ಬುಧನೊಬ್ಬ ಬರುತಿಹನು|
ನೋಡು ಬಾ ಬಾಲನೇ||
೧೪-೭-೧೯೨೪

ಜುಲೈ ೧೬ನೆಯ ಬುಧವಾರದ ದಿನಚರಿ:

“ಇವೊತ್ತು ನಾನು ‘ನೆನವರಿಕೆ’ ಎಂಬ ಒಂದು ಕನ್ನಡಕವನ ರಚಿಸಿದೆನು. ಅದನ್ನು ಸ್ನೇಹಿತರ ಎದುರು ಓದಲು, ಅದರ ಪ್ರಾರಂಭ ಸ್ವಲ್ಪ ವಿನೋದಕರಕವಾಗಿದ್ದುದರಿಂದ ಬಿದ್ದುಬಿದ್ದು ನಕ್ಕರು. ಆದರೆ ತುದಿಯ ಭಾಗವನ್ನು ಓದುತ್ತಿದ್ದಂತೆ ಒಂದು ಗಂಭೀರವಾದ ಮೌನ ವ್ಯಾಪಿಸಿತು. ಅಲ್ಲಿ ತೀರಿಹೋದ ಸಂಗಾತಿಗಳನ್ನು ನೆನಪಿಗೆ ತಂದ ವಿಷಯವಿತ್ತು. ಕಾಲೇಜಿನಲ್ಲಿಯೂ ರೂಮಿನಲ್ಲಿಯೂ ನಾನು ಬಹುದಿನಗಳಿಂದ ಯೋಚಿಸುತ್ತಿರುವ ಒಂದು ಇಂಗ್ಲಿಷ್ ಕವನವನ್ನು ಕುರಿತು ಮೆಲುಕು ಹಾಕಿದೆ. ಅದಕ್ಕೆ ‘ಮಹಾರಾಜಾ ಕಾಲೇಜ್’ ಎಂದು ಹೆಸರು ಕೊಡಲು ಯೋಚಿಸಿದ್ದೇನೆ. ಅನೇಕ ದಿನಗಳಿಂದ ಧ್ಯಾನಕ್ಕೆ ಒಳಗಾಗಿರುವ ಆ ಕವನ ಒಂದು ರೀತಿಯಲ್ಲಿ ಈಗಾಗಲೇ ಸಿದ್ಧವಾಗಿದೆ ಹೃದಯದಲ್ಲಿ. ಅದನ್ನು ಯಾವೊತ್ತಾದರೂ ಹೊರಹೊಮ್ಮಿಸಲು ಮನಸ್ಸು ಮಾಡಿದ್ದೇನೆ. ಆದರೆ ಯಾವೊತ್ತೋ ನನಗೆ ಗೊತ್ತಿಲ್ಲ. ಅಮ್ಮಾ, ನನ್ನ ಹೃದಯವನ್ನು ಪರಿಶುದ್ಧವಾಗಿರಿಸು. ನಿನ್ನ ಸಾನ್ನಿಧ್ಯವನ್ನು ನಾನು ಸರ್ವತ್ರ ಅನುಭವಿಸುವಂತೆ ಅನುಗ್ರಹಿಸು. ನನ್ನ ಬದುಕಿನ ಕಹಿಯ ಬರಗಾಲದಲ್ಲಿಯೂ ನಿನ್ನ ಕರುಣೆಯ ಮಳೆಗಾಲನ್ನು ನಾನು ಕಾಣುವಂತಾಗಲಿ.

(Let me feel your Kindness even in the bitter draughts of my life) ನಶ್ವರವನ್ನು ದಾಟಿ ನನ್ನ ಅನ್ವೇಷಣೆ ಶಾಶ್ವತದ ಕಡೆ ಸಾಗಲಿ. (Let me transcend the transitory and seek the ever lasting) ಪೂಜ್ಯ ಸ್ವಾಮಿ ವಿವೇಕಾನಂದರೇ ನಿಮಗೂ ನಿಮ್ಮ ಗುರುಗಳಿಗೂ ಪ್ರಣಾಮಗಳು! ಓಂ!”

‘ನೆನವರಿಕೆ’ ಕವನ ಬಿ.ಎಂ.ಶ್ರೀಯವರು ಭಾಷಾಂತರಿಸಿರುವ ಚಾರಲ್ಸ್ ಲ್ಯಾಂಬ್‌ನ ಕವನ ‘ಹಳೆಯ ಪಳಕೆಯ ಮುಖಗಳು’ ಎಂಬುದರ ಛಂದಸ್ಸಿನಲ್ಲಿದೆ. ಹಿಂದೆ ಬರೆದ ಕವನಗಳಲ್ಲಿ ಐದು ಮಾತ್ರೆಯ ಮತ್ತು ನಾಲ್ಕು ಮಾತ್ರೆಯ ಗಣಗಳ ಪ್ರಯೋಗವಿದ್ದರೆ ಇದರಲ್ಲಿ ಮೂರು ನಾಲ್ಕು ಮಾತ್ರಾಗಣ ವಿನ್ಯಾಸವಿದೆ. ದ್ವಿತೀಯಾಕ್ಷರ ಪ್ರಾಸದ ಜೊತೆಗೆ ಕೆಲವು ಪಂಕ್ತಿಗಳಲ್ಲಿ ‘ಜೋಲು ಮೋರೆಯ ಕಾಲುಬಾರದ ಶಾಲೆಗೈದುವ ಸಖನನು’ ಎಂಬಂತಹ ಒಳಪ್ರಾಸಗಳೂ ಇವೆ. ದ್ವಿತೀಯಾಕ್ಷರ ಪ್ರಾಸದ ಜೊತೆಗೆ ಅಂತ್ಯಪ್ರಾಸವೂ ಬಂದು ಸೇರಿಕೊಂಡಿದೆ, ಇಂಗ್ಲಿಷ್ ಪ್ರಭಾವ ಸೂಚಕವಾಗಿ! ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ್ದು, ಮೂರು ಮಾತ್ರೆಯ ಗಣಕ್ಕೆ ಬದಲಾಗಿ ಒಂದು ಪ್ಲುತಸ್ವರ ‘ಓ’ ಅನ್ನು ಪ್ರಯೋಗಿಸುವ ಸ್ವಾತಂತ್ರ್ಯ ವಹಿಸಿರುವುದು. ಇದು ಮುಂದೆ ಈ ಕವಿ ಛಂಧಸ್ಸಿನಲ್ಲಿ ವಹಿಸಲಿರುವ ಸ್ವಾತಂತ್ರ್ಯಕ್ಕೂ ಕ್ರಾಂತಿ ಮನೋಭಾವನೆಯ ಧೈರ್ಯಕ್ಕೂ ಸಾಕ್ಷಿಯಾಗಿರುವಂತಿದೆ:

ನೆನವರಿಕೆ

ನಾನು ಬಲ್ಲೆನು, ನಾನು ಬಲ್ಲೆನು:
ಬೀದಿಯೆಡೆಯೊಳು ಪಾಳುಬಿದ್ದಿಹ ನಾನು ಓದಿದ ಶಾಲೆಯ|
ಓದು ಕಲಿಯಲು ನನ್ನ ಜೊತೆಯಲಿ ಬಂದ ಪ್ರೇಮದ ಬಾಲೆಯ||

ಏನ ಹೇಳಲಿ? ಏನ ಹೇಳಲಿ?
ಹಾದಿಯೆಡೆಯೊಳು ಇರುವ ಅಂದಿನ ಕಲ್ಲುಸಂಪಗೆ ಮರವನು|
ಮೋದದಿಂದಲಿ ಅದರ ಹಣ್ಣನು ತಿಂದ ಶೀತದ ಜ್ವರವನು||

ನಾನು ಬಲ್ಲೆನು, ನಾನು ಬಲ್ಲೆನು:
ಆಡುಸೋಗೆಯ ಕೋಲು ಹಿಡಿದಿಹ ನಮ್ಮ ಭೀಕರ ಗುರುವನು|
ಓಡಿಹೋಗುತ ಶಾಲೆಯಿಂದಲಿ ನಾವು ಅಡಗುವ ತರುವನು||

ಇಂದಿಗಿರುವುದು, ಇಂದಿಗಿರುವುದು:
ನಮ್ಮ ಶಾಲೆಯ ಒಡಕು ಗೋಡೆಯ ಮೇಲಿನಂದಿನಿ ಶಾಸನ
ನಮ್ಮ ಶಾಲೆಯ ಹುಲ್ಲು ಬೆಳೆದಿಹ ಪ್ರೇಮದಂದಿನ ಆಸನ||

ನಾನು ಬಲ್ಲೆನು, ನಾನು ಬಲ್ಲೆನು:
ಜೋಲು ಮೋರೆಯ ಕಾಲು ಬಾರದ ಶಾಲೆಗೈದುವ ಸಖನನು|
ಶಾಲೆಯಿಂದಲಿ ಹಾರಿ ಹೋಗುವ ಚಂದ್ರನಂದದ ಮುಖವನು||

ಏನ ಹೇಳಲಿ? ಏನ ಹೇಳಲಿ?
ಹಾಳು ಗುರುಗಳ ಹೇಳಬಾರದ ಕೋಳದಂಡದ ಸುಖಗಳ|
ಬಾಲರೆಲ್ಲರ ಉರಿವ ಮೋರೆಯ ಕೋಪತಾಪದ ಮುಖಗಳ||

ನಾನು ಬಲ್ಲೆನು, ನಾನು ಬಲ್ಲೆನು:
ಲೀಲೆಯಿಂದಲಿ ನಾವು ಈಜಿದ ಕಮಲಶೋಭಿತ ಕೆರೆಯನು|
ಕಾಲಿನಿಂದಲೆ ನಾವು ದಾಂಟಿದ ಗಿರಿಯ ವೇಗದ ತೊರೆಯನು||

ನಿನ್ನ ನೆನೆವೆನು, ನಿನ್ನ ನೆನೆವೆನು:
ಹುಲ್ಲು ಹೊದಿಕೆಯ ಬಡವನಂದದ ನನ್ನ ಬಾಲ್ಯದ ಶಾಲೆಯ|
ಕಲ್ಲು ಹೂಗಳು ಬೆಳೆದ ವದನದ ನನ್ನ ವಿದ್ಯಾತಾಯಿಯೆ||

ನಿಮ್ಮ ಮರೆಯೆನು, ನಿಮ್ಮ ಮರೆಯೆನು:
ಓ ಊರಿನ ಬೆಟ್ಟತೊರೆಗಳೆ ಅಂದಿನೆನ್ನಯ ಕೆಳೆಯರೆ||
ಓ ಊರಿನ ಬಯಲು ಹೊಲಗಳೆ ನಿಮ್ಮನೆಂದಿಗು ಮರೆವರೆ||

ಪಡೆಯಲಾರೆವು, ಪಡೆಯಲಾರೆವು:
ಬಾಲತನದೊಳು ಲೀಲೆಯಿಂದಲಿ ನಾವು ಪಡೆದಿಹ ಮುದವನು,
ಕಾಲಮುಟ್ಟಿಯೊಳಳಿದ ಅಂದಿನ ಪಾಪವಿಲ್ಲದ ಮದವನು||

ಇಂತು ತರುವುದು, ಇಂತು ತರುವುದು:
ಸಂದ ಕಾಲವು ಎಂದು ಬಾರದ ಅಂದಿನೆನ್ನಯ ಸುಖಗಳ|
ಅಂದು ನನ್ನೊಡನೋದಿ ಹಾರಿದ ಕಳೆದ ಪ್ರೇಮದ ಮುಖಗಳು||
೧೬-೭-೧೯೨೪

ಜುಲೈ ೧೭, ೧೮, ೧೯ನೆಯ ದಿನಚರಿಯ ಹಾಳೆಗಳೆಲ್ಲ ಜುಲೈ ೧೯ರಂದು ಕೃಷ್ಣರಾಜ ಸಾಗರಕ್ಕೆ ರೈಲಿನಲ್ಲಿ ಮೈಸೂರಿನ ಜನ, ವಿದ್ಯಾರ್ಥಿಗಳು, ಅಧ್ಯಾಪಕರು ಎಲ್ಲರೊಡನೆ ನಾನೂ ಮತ್ತು ನನ್ನ ಹತ್ತು ಜನ ಮಿತ್ರರೂ ಪ್ರವಾಹದರ್ಶನಕ್ಕಾಗಿ ಹೋಗಿದ್ದರ ವಿವರ ಇದೆ. ರೈಲಿನಲ್ಲಿ ನೂಕುನುಗ್ಗಲು, ಬೆಳಗೊಳ ಸ್ಟೇಷನ್ನಿನಲ್ಲಿ ಇಳಿದು ಸಾವಿರಾರು ವಿದ್ಯಾರ್ಥಿಗಳು ಕೇಕೆಹಾಕುತ್ತಾ ಮೆರವಣಿಗೆವರಿದುದು, ಪ್ರವಾಹದ ವೇಗ, ರಭಸ, ನೊರೆ, ಮೊರೆ, ಸಾಗರದ ವೈಶಾಲ್ಯ, ಮುಂದೆ ಆ ಸ್ಥಳ ಮೈಸೂರಿನ ಒಂದು ‘ಕಲಾ-ಸಾಹಿತ್ಯ’ ಕೇಂದ್ರವಾಗಬಹುದೆಂಬ ಸೂಚನೆ-ಇತ್ಯಾದಿ ಲಿಖಿತವಾಗಿದೆ.

ಜುಲೈ ೨೦ನೆಯ ಭಾನುವಾರದ ದಿನಚರಿ:

“ಬೇಸಗೆ ರಜದ ದೀರ್ಘವಿರಾಮದ ತರುವಾಯ ನಮ್ಮ ‘ಲೋಟಸ್ ಲೀಫ್ ಯೂನಿಯನ್’ ಅನ್ನು (Lotus leaf Union) ಮತ್ತೆ ಪ್ರಾರಂಭಿಸಿದೆವು. ಸಂಘದ ವ್ಯಾಪ್ತಿಯನ್ನು ವಿಸ್ತರಿಸುವ ವಿಚಾರವಾಗಿ ವಿಶೇಷ ಜಿಜ್ಞಾಸೆ ನಡೆಸಿದೆವು. ನನ್ನಿಂದ ಒಂದು ‘Invocation’ ಆದ ಮೇಲೆ ಎಚ್.ಕೆ.ವೀರಪ್ಪನವರಿಂದ ನಾನೆ ರಚಿಸಿದ್ದ ಒಂದು ಕನ್ನಡ ಗೀತೆಯ ಪ್ರಾರ್ಥನೆ ಹಾಡಲ್ಪಟ್ಟಿತು. ಸಂಘದ ಚರಿತ್ರೆಯ ಸಾಮಾನ್ಯ ವರದಿಯನ್ನು ಕೆ.ಮಲ್ಲಪ್ಪ ಓದಿದರು. ಸಂಘದ ಹೆಸರಿನಲ್ಲಿ ಒಂದು ಮಾಸಿಕೆಯನ್ನು ಪ್ರಾರಂಭಿಸಲೂ ನಿಶ್ಚಯಿಸಿದೆವು; ಮತ್ತು ಅದಕ್ಕೂ ಇನ್ನಿತರ ಖರ್ಚುಗಳಿಗೂ ಒಂದು ಸಣ್ಣ ನಿಧಿಯನ್ನು ಸಂಗ್ರಹಿಸಲು ಗೊತ್ತುಮಾಡಿದೆಉ. ‘ಮಹಾ ವ್ಯಕ್ತಿಗಳ ಜೀವನ ಚರಿತ್ರೆಯೇ ಜಗತ್ತಿನ ಇತಿಹಾಸ’ ಎಂಬ ವಿಚಾರವಾಗಿ ನಾನೊಂದು ಭಾಷಣ ಮಾಡಲು ಒಪ್ಪಿದೆ. ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಬೇಕೆಂದೂ ನಿರ್ಣಯವಾಯಿತು.

ತಾಯಿ, ಸತ್ಯಕ್ಕೆ ನಡೆಸು ನನ್ನ! ವಿಲಯವಶನಾಗದಿರಲಿ ನಾನು! ವಂದೇ ಸ್ವಾಮಿ ವಿವೇಕಾನಂದಮ್!

ಜುಲೈ ೨೧ನೆಯ ಸೋಮವಾರದ ದಿನಚರಿ:

“ಇವೊತ್ತು ಶ್ರೀ ಕಸಿನ್ಸ್ ಅವರ ಉಪನ್ಯಾಸವಿತ್ತು, ‘ವಿದ್ಯಾಭ್ಯಾಸ ಕ್ರಮದಲ್ಲಿ ಸಂಗೀತದ ಸ್ಥಾನ, (The Place of Music in Education) ಎಂದು. ನಾನು ಮತ್ತು ಎಚ್.ಬಿ.ನಂಜಯ್ಯ ಪತ್ರಿಕಾ ಕಛೇರಿಗೆ ಹೋದೆವು. (ತಾತಯ್ಯನೆಂದು ಪ್ರಸಿದ್ಧರಾಗಿದ್ದ ವೆಂಕಟಕೃಷ್ಣಯ್ಯನವರ ಪತ್ರಿಕಾಲಯಕ್ಕಿರಬೇಕು) ಆದರೆ ಸಂಪಾದಕರು ಸಿಕ್ಕಲಿಲ್ಲ. ಮತ್ತೆ ಸಂಜೆ ೫ ಗಂಟೆಗೆ ೧೯ನೆಯ ತಾರೀಖು ರಚಿಸಿದ್ದ ‘ಜ್ಞಾನಗೀತೆ’ ಎಂಬ ಒಂದು ಕನ್ನಡ ಕವನದೊಂದಿಗೆ ಅಲ್ಲಿಗೆ ಹೋದೆವು. ‘ನಮ್ಮ ಲೋಟಸ್ ಲೀಫ್ ಯೂನಿಯನ್’ ವಿಚಾರದ ಒಂದು ವರದಿರೂಪದ ಲೇಖನವನ್ನೂ ಪ್ರಕಟಣೆಗಾಗಿ ಕೊಂಡೊಯ್ದಿದ್ದೆವು. ಅವೆರಡನ್ನೂ ಸ್ವೀಕರಿಸಿದರು; ಆದರೆ ಕನ್ನಡ ಕವನ ಮಾತ್ರ ಕಮಿಟಿಯ ಒಪ್ಪಿಗೆ ಪಡೆದ ಅನಂತರವೆ ಅಚ್ಚಾಗಲು ಸಾಧ್ಯ ಎಂದರು. ಕಸಿನ್ಸ್ ಉಪನ್ಯಾಸಕ್ಕೆ ಹೋಗಿದ್ದೆವು. ತುಂಬ ಸೊಗಸಾಗಿತ್ತು. ಸ್ನೇಹಿತರೊಬ್ಬರೆಂದರು ‘ನಾನು ನಿರೀಕ್ಷಿಸಿದ್ದಕ್ಕಿಂತಲೂ ಎಷ್ಟೋ ಪಾಲು ಹೆಚ್ಚು ಸ್ವಾರಸ್ಯವಾಗಿತ್ತು.’ ವಂದೇ ಸ್ವಾಮಿ ವಿವೇಕಾನಂದ!”

ಜುಲೈ ೨೨ನೆಯ ಮಂಗಳವಾರದ ದಿನಚರಿ:

“‘ಹೊಳೆ’ ಎಂಬ ಶೀರ್ಷಿಕೆಯಲ್ಲಿ ಒಂದು ಕನ್ನಡ ಕವನ ರಚಿಸಿದೆ. ‘ಸಂಗೀತದಲ್ಲಿ ಅಂತರರಾಷ್ಟ್ರೀಯ’ ಎಂಬ ಕಸಿನ್ಸ್ ಅವರ ಉಪನ್ಯಾಸವಿತ್ತು. ಇವೊತ್ತು ಆ ಉಪನ್ಯಾಸಕ್ಕೆ ನಾವೂ ಕುತೂಹಲದಿಂದ ಹೋಗಿದ್ದೆವು. ಜನವೂ ನಿನ್ನೆಗಿಂತಲೂ ಹೆಚ್ಚು ಜಮಾಯಿಸಿತ್ತು. ತುಂಬ ಸ್ಫೂರ್ತಿಯ ಭಾಷಣವಾಗಿತ್ತು. ಸಂಗೀತಕ್ಕೂ ಸಂಗೀತಗಾರರಿಗೂ.”

ಜುಲೈ ೧೯ರಲ್ಲಿ ರಚಿತವಾದ ‘ಜ್ಞಾನಗೀತೆ’ ಮತ್ತು ಜುಲೈ ೨೨ರಲ್ಲಿ ರಚಿತವಾದ ‘ಹೊಳೆ’ ಎರಡೂ ಪ್ರಾರಂಭಿಕತೆಯ ದೋಷಗಳಿಂದ ಕೂಡಿದ್ದರೂ ಅಂಬೆಗಾಲಿಕ್ಕುತ್ತಿದ್ದ ವಾಗ್ದೇವಿ ತಿಪ್ಪತಿಪ್ಪನೆ ಹೆಜ್ಜೆಯಿಟ್ಟು ನಡೆನಲಿಯುವಷ್ಟು ಮುಂದುವರಿದಂತೆ ತೋರುತ್ತದೆ. ಹಿಂದೆ ಐದು, ನಾಲ್ಕು, ಮೂರು, ನಾಲ್ಕು ಮಾತ್ರಾಗಣಗಳು ಉಪಯುಕ್ತವಾಗಿದ್ದರೆ ‘‘ಜ್ಞಾನಗೀತೆ’’ ಮತ್ತು ‘ಹೊಳೆ’ಗಳಲ್ಲಿ ತ್ರಿಮಾತ್ರಾಗಣಪ್ರಯೋಗ ಕಂಡು ಬರುತ್ತದೆ. ಮೊತ್ತಮೊದಲ ‘ಜ್ಞಾನಗೀತೆ’ಯಲ್ಲಿ ದ್ವಿತೀಯಾಕ್ಷರ ಪ್ರಾಸ ತಿರಸ್ಕೃತವಾಗಿದೆ. ಅಂತ್ಯಪ್ರಾಸವೂ ಇಲ್ಲ. ಅಂದರೆ ಕವಿ ಸ್ವಾತಂತ್ರ್ಯ ವಹಿಸುವತ್ತ ಮುನ್ನಡೆಯುತ್ತಿರುವಂತೆ ತೋರುತ್ತದೆ. ಇಂಗ್ಲಿಷ್‌ನಿಂದ ಬಂದ ವಿರಾಮಚಿಹ್ನೆಗಳನ್ನು ಹಾಕಿದ್ದರೂ ಪಂಕ್ತಿಯ ತುದಿಯಲ್ಲಿ ಒಂದು ಗೀಟನ್ನೂ ಪದ್ಯದ ಕೊನೆಯಲ್ಲಿ ಎರಡು ಗೀಟುಗಳನ್ನೂ ಹಾಕುವ ಹಳೆಯ ಚಾಳಿ ಬಿಟ್ಟಿಲ್ಲ! ‘ಜ್ಞಾನಗೀತೆ’ಯಲ್ಲಿ ಅದ್ವೈತದ ಮತ್ತು ಭಗವದ್‌ಗೀತೆಯ ಪ್ರಭಾವವೂ ಸ್ವಾಮಿ ವಿವೇಕಾನಂದರ ‘ಅಭೀಃ’ ಧೈರ್ಯದ ಆಶಾವಾದವೂ ಚೆನ್ನಾಗಿ ಕಾಣಿಸಿಕೊಂಡಿದೆ. ಒಂದು ಗೀಟು ಎರಡು ಗೀಟು ಈ ಗೊಡ್ಡೆನೆಲ್ಲ ಬಿಟ್ಟು ಆ ಕವನಗಳನ್ನು ಸೂಕ್ತಕಂಡಂತೆ ಪೂರ್ತಿಯಾಗಿಯೂ ಅಂಶವಾಗಿಯೂ ಕೊಡುತ್ತೇನೆ:

ಜ್ಞಾನಗೀತೆ

ಕಡೆಯ ದಿನವ ಕಾಯೊ ಜೀವ
ಎಂಬ ನುಡಿಯ ನಂಬ ಬೇಡ;
ಪರಮ ಪುರುಷನಾದ ನಿನಗೆ
ಮರಣಭಯವು ಬೇಡ, ಜೀವ.
ನಾನೆ ಶಿವನು, ನಾನೆ ಶಿವನು
ಎಂದು ಭಯವ ನೀಗೊ, ಜೀವ!

ಸತ್ಯರೂಪನಾದ ಶಿವನ
ನಿತ್ಯ ಅಂಶನಪ್ಪ ನಿನಗೆ
ಬಂಧನಕ್ಕೆ ಬೀಳ್ವೆನೆಂಬ
ಮಿಥ್ಯೆಶಂಕೆ ಏಕೊ, ಜೀವ?
ನಾನೆ ಶಿವನು, ನಾನೆ ಶಿವನು
ಎನುತ ಭಯವ ನೀಗೊ, ಜೀವ|

ಅನಲನಲ್ಲಿ ಬೇಯಲಾರೆ,
ಅನಿಲದಲ್ಲಿ ತೋಯಲಾರೆ;
ಇನಿತು ಇರುವ ನಿತ್ಯನಾದ
ನಿನಗೆ ಭಯವು ಏಕೊ, ಜೀವ?
ನಾನೆ ಶಿವನು, ನಾನೆ ಶಿವನು
ಎನುತ ಭಯವ ನೀಗೊ, ಜೀವ!

ಶಸ್ತ್ರಗಳಲಿ ಸಾಯಲಾರೆ,
ಅಸ್ತ್ರಗಳಲಿ ನೋಯಲಾರೆ,
ವಸ್ತ್ರಗಳನು ಧರಿಸಿ ಇರುವೆ;
ಭಯವು ಏಕೊ, ಅಭಯಜೀವ?
ನಾನೆ ಶಿವನು, ನಾನೆ ಶಿವನು
ಎಂದು ಭಯವ ನೀಗೊ, ಜೀವ!

ಭಯವೆ ನರಕ, ಭಯವೆ ಕೂಪ,
ಅಭಯವೆಂಬ ಗುಣವೆ ನಾಕ;
ಭಯವೆ ಮರಣವೆಂದು ತಿಳಿದು
ಭಯವ ನೀಗೋ, ಅಭಯಜೀವ:
ನಾನೆ ಶಿವನು, ನಾನೆ ಶಿವನು
ಎಂದು ಭಯವ ನೀಗೊ, ಜೀವ!

ಸತ್ಯ ಜ್ಞಾನವಾದ ನೀನು
ಮಿಥ್ಯಲೋಕವನ್ನು ನಂಬಿ
ನಿತ್ಯವನ್ನು ಮರೆಯಬೇಡ,
ನಿತ್ಯ ಅಭಯನಾದ ಜೀವ:
ನಾನೆ ಶಿವನು, ನಾನೆ ಶಿವನು
ಎಂದು ಭಯವ ನೀಗೊ, ಜೀವ!

ರೂಪರಹಿತನಾದ ನೀನು
ವಿಶ್ವವನ್ನೆ ತುಂಬಿ ಇರುವೆ;
ಇಲ್ಲಿ ಇರುವ, ಅಲ್ಲಿ ಇರುವ
ನಿನಗೆ ಭಯವು ಏಕೊ, ಜೀವ?
ನಾನೆ ಶಿವನು, ನಾನೆ ಶಿವನು
ಎನುತ ಭಯವ ನೀಗೊ, ಜೀವ!       ೨೦-೭-೧೯೨೪