ಹೊಳೆ
(ಇಲ್ಲಿ ದ್ವಿತೀಯಾಕ್ಷರ ಪ್ರಾಸ ಬಿಡದೆ ತಲೆ ಹಾಕಿದೆ.)

ಹೊಳೆಯೋಡುತಿದೆ, ಶಿಲೆ ನೋಡುತಿದೆ:
ಕಡಲ ಸೇರಿ ಮೋಕ್ಷಸುಖವ
ಪಡೆವೆನೆಂಬ ಆಸೆಯಿಂದ
ಒಡೆಯನನ್ನು ಸೇರ್ವೆನೆಂದು
ಅಡಿಯ ಕುಣಿಯುತಿಡುತ ನಡೆವ
ಮಡದಿಯಂದದೀ
ಹೊಳೆಯೋಡುತಿದೆ, ಹೊಳೆಯೋಡುತಿದೆ!

ಹೊಳೆಯೋಡುತಿದೆ, ಪಿಕ ಹಾಡುತಿದೆ:
ಮಣಿಗಳಂತೆ ಹೊಳೆವ ಮರಳು
ಕಣಗಳನ್ನು ತೊಳೆದು ತೊಳೆದು
ಫಣಿಯ ವಕ್ರಗತಿಯ ಪಿಡಿದು
ಕುಣಿಯುತೇರಿ ಮಗಳೆ ಹಾರಿ ದಣಿವು ಕಾಣದೇ
ಹೊಳೆಯೋಡುತಿದೆ, ಹೊಳೆಯೋಡುತಿದೆ!

ಹೊಳೆಯೋಡುತಿದೆ, ಇಳೆಯಾಡುತಿದೆ:
ಕಡಲಶಯನನ್ನು ಭರದಿ
ಹುಡುಕುತವನ ಶಯನವಾಗಿ
ಪಡೆವೆ ಪುಣ್ಯವನ್ನು ಎಂಬ
ಹೆಡೆಯ ರಹಿತ ಶೇಷನಂತೆ
ಕಡಲ ದಿಕ್ಕಿಗೇ
ಹೊಳೆಯೋಡುತಿದೆ, ಹೊಳೆಯೋಡುತಿದೆ!

ಹೊಳೆಯೋಡುತಿದೆ, ಬೆಳೆ ಬೇಡುತಿದೆ:
ತಡಿಯ ಎಡೆಯೊಳಿರದೆ ನೋಳ್ಪ
ಗಿಡಗಳೊಡನೆ ಸರಸವಾಡಿ
ಪೊಡವಿಯಲ್ಲಿ ಜನ್ಮವೆತ್ತಿ
ಅಡವಿಯಲ್ಲಿ ವಾಸಿಸುತಿಹ
ಬಡವನಂದದೀ
ಹೊಳೆಯೋಡುತಿದೆ,
ಹೊಳೆಯೋಡುತಿದೆ!

ಹೊಳೆಯೋಡುತಿದೆ, ಹೊಳೆಯೋಡುತಿದೆ:
ರಾಜರಾಜ ಬಿರುದ ಧರಿಸಿ
ರಾಜಭಟರ ಕಾವಲಿಂದ
ರಾಜಠೀವಿಯನ್ನು ಹೊಂದಿ
ರಾಜಮಾರ್ಗದಲ್ಲಿ ಮೆರೆವ
ರಾಜನಂದದೀ
ಹೊಳೆಯೋಡುತಿದೆ, ಹೊಳೆಯೋಡುತಿದೆ!

ಜುಲೈ ೨೩ನೆಯ ಬುಧವಾರದ ದಿನಚರಿ:

“ಇವೊತ್ತು ನಮ್ಮದೊಂದು ಲೇಖನ ‘The Wealth of Mysore’ (ಸಂಪದಭ್ಯುದಯ) ಅಲ್ಲಿ ಪ್ರಕಟವಾಗಿರುವುದನ್ನು ಕಂಡೆ. ಕಾಲೇಜಿನಲ್ಲಿ ಕರ್ಣಾಟಕ ಸಂಘಕ್ಕೆ ತರಗತಿಗಳ ಪ್ರತಿನಿಧಿಗಳು ಸೇರಿ ಒಬ್ಬ ಕಾರ್ಯದರ್ಶಿಯನ್ನು ಆರಿಸಿದೆವು. ನಾನು ‘ಮಹಾ ಪುರುಷರ ಜೀವನಚರಿತ್ರೆಯೇ ಪ್ರಪಂಚದ ಚರಿತ್ರೆಯು’ ಎಂಬ ವಿಷಯದ ಮೇಲೆ ಭಾಷಣಮಾಡಲು ಒಪ್ಪಿಕೊಂಡಿದ್ದೇನೆ. ನಂಜಯ್ಯ ನಮ್ಮ ಸಂಘಕ್ಕೆ (ಪದ್ಮಪತ್ರ ಸಂಘಕ್ಕಿರಬೇಕು.) ಸದಸ್ಯರನ್ನು ಸಂಗ್ರಹಿಸಲು ಪ್ರಸಾರ ಕೈಕೊಳ್ಳಲು ಹೇಳಿದರು.

ಓ ತಾಯಿ ನನ್ನ ದಾರಿ ಎಷ್ಟೇ ವಕ್ರವಾಗಿದ್ದರೂ ಕಡೆಗಾದರೂ ನಿನ್ನ ವಕ್ಷಾಶ್ರಯಕ್ಕೆ ತಲುಪುವಂತಾಗಲಿ! ನನ್ನ ಗುರು, ನನ್ನ ಸ್ವಾಮಿ, ನನ್ನ ರಕ್ಷಕ, ನನ್ನ ಮಾರ್ಗದರ್ಶಿ, ನನ್ನ ಪರಮಸ್ಫೂರ್ತಿ ಶ್ರೀ ಸ್ವಾಮಿ ವಿವೇಕಾನಂದರಿಗೆ ನಮಸ್ಕಾರ, ನಮಸ್ಕಾರ, ನಮಸ್ಕಾರ!”

ಜುಲೈ ೨೪ನೆಯ ಗುರುವಾರದ ದಿನಚರಿ:

“ಬೆಳಿಗ್ಗೆ ನಾನೊಂದು ಕನ್ನಡ ಕವನ ‘The Greatness of a poet’ ರಚಿಸಿದೆ. (ಹಸ್ತಪ್ರತಿಯಲ್ಲಿ ಅದರ ಹೆಸರು ಬರಿದೆ ‘ಕವಿ’ ಎಂದಿದೆ) ‘The Wealth of Mysore’- ಸಂಪದಭ್ಯುದಯದಲ್ಲಿ ನನ್ನ ಕವನ ‘ಜ್ಞಾನಗೀತೆ’ ಅಚ್ಚಾದುದನ್ನು ಕಂಡೆ. (ದಿನಚರಿಯಲ್ಲಿ ‘ಜೀವಗೀತೆ’ ಎಂದು ಬರೆದಿದೆ). ನಾನು ಅದನ್ನು ಎಷ್ಟು ಕೌತೂಹಲದಿಂದ ಓದಿದೆ ಅಂದರೆ ಅದನ್ನು ಬರೆದವರು ಯಾರೋ ಎಂಬಂತೆ. ಶ್ರೀ ಕಸಿನ್ಸ್ ಕಾಲೇಜಿನ ಸಂಘದ ಪ್ರಾರಂಭ ಭಾಷಣ ಮಾಡಿದರು. ಮಹಾರಾಜಾ ಕಾಲೇಜ್ ಯೂನಿಯನ್ ಹಾಲ್‌ನಲ್ಲಿ ಅತ್ಯುತ್ತಮ ಅತಿಸುಂದರ ವರ್ಣಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದರು.

ನನಗೆ ಅನ್ನಿಸುತ್ತದೆ, ನಾಡಿನಲ್ಲೆಲ್ಲ ಕಾವ್ಯ ಸಾಹಿತ್ಯಕಲೆ ಚಿತ್ರಕಲೆಗಳಲ್ಲಿ ಏನೋ ಒಂದು ಹೊಸ ಜಾಗೃತಿ ತಲೆದೋರುತ್ತಿದೆ ಎಂದು. ಹಾಗೇ ಆಗಲಿ, ಓ ನನ್ನ ದೇವರೆ. ತಾಯಿ, ನನ್ನನ್ನು ನಿನ್ನ ಎದೆಗೊತ್ತಿಕೊ!”

ದಿನಚರಿಯಲ್ಲಿ ಉಕ್ತವಾಗಿರುವ ಕವನ ವಾರ್ಧಕಷಟ್ಟದಿಯಲ್ಲಿದೆ. ಆದರೆ ಛಂದಸ್ಸಿನಲ್ಲಿ ಒಂದೆರಡು ಕಡೆ ತಪ್ಪಿದೆ. ದ್ವಿತೀಯಾಕ್ಷರ ಪ್ರಾಸಬದ್ಧವಾಗಿದೆ. ಭಾವ ಆಲೋಚನೆಗಳ ಮಹತಿ ಇದ್ದರೂ ಭಾಷೆಯ ದೌರ್ಬಲ್ಯದಿಂದ ‘ಅಸಹ್ಯ’ ಮತ್ತು ‘ಅಯೋಗ್ಯ’ವಾಗಿದೆ. ಮಾದರಿಗೆ ಒಂದು ಪದ್ಯ ಕೊಡಬಹುದು:

ಬೀಸುತಿಹ ಗಾಳಿಯಲಿ ಪೊಗಳಂದದಿ ನಲಿವೆ;|
ಈಶನನು ಸೃಷ್ಟಿಯೊಳಗೀಕ್ಷಿಸುವೆ; ಮೇಣಾ ಪ|
ರೇಶನನು ತನ್ನುರದೆಡೆಯೊಳನುಭವಿಸಿ, ಹರುಷವನು ಪಡುವೆ;||

ಬೇಸರಿಲ್ಲದೆ ಪ್ರಕೃತಿಯನು ಮೈದೋರಿದಾ|
ಈಶನೆಂದರಿಯುತಾನಂದದಿಂ ಪರಮ ಸಂ|
ತೋಷವನು ಹೊಂದಿ ಸಲೆ ಸಚ್ಚಿದಾನಂದರೂಪವನು ತಳೆವೆ||

ಜುಲೈ ೨೫ನೆಯ ಶುಕ್ರವಾರದ ದಿನಚರಿ:

“ಇವೊತ್ತು ‘Te Wealth of Mysore’- ಸಂಪದಭ್ಯುದಯ ಪತ್ರಿಕೆಗೆ ನನ್ನ ಎರಡು ಕವನಗಳನ್ನು ಕಳಿಸಿದೆ. ಒಂದು ಕನ್ನಡದ್ದು ಮತ್ತೊಂದು ಇಂಗ್ಲಿಷ್‌ನದು- “ನೆನವರಿಕೆ”, ‘The World and The Poet’. ಅಲ್ಲಿಂದ ಕಾಲೇಜು ಸಂಘದ ಹಾಲ್‌ನಲ್ಲಿ ಪ್ರದರ್ಶಿಸಿದ್ದ ‘ವರ್ಣಚಿತ್ರ’ ಪ್ರದರ್ಶನಕ್ಕೆ ಹೋದೆ. ಮಾತು ಬಣ್ಣಿಸಲಾರದಷ್ಟು ಮಧುರವಾಗಿತ್ತು ಅದು. ಅಲ್ಲಿಂದ ಶ್ರೀ ಕಸಿನ್ಸ್ ಅವರ ‘Internationalism in Painting’- ವರ್ಣಚಿತ್ರ ಕಲೆಯಲ್ಲಿ ಅಂತರರಾಷ್ಟ್ರೀಯತೆಖಿ ಎಂಬ ಉಪನ್ಯಾಸಕ್ಕೆ ಹೋದೆವು. ಅವರು ಆ ಭಾಷಣವನ್ನು ಬರೆದುಕೊಂಡು ಬಂದು ಓದಿದರು. ನನಗೆ ಅದು ತುಂಬ ಆಕರ್ಷಣೀಯವೂ ಜ್ಞಾನಪ್ರದವೂ ಆಗಿತ್ತು. ಅವರ ಒಂದು ಕವಿತೆ ‘Ode To Truth’ ಎಂಬುದನ್ನು ಕೊಂಡುಕೊಂಡೆ. ಓ ಸ್ವಾಮಿ, ಹಸರಿನಾಶೆಯನ್ನು ತಿರಸ್ಕರಿಸುವಂತೆ ನನಗೆ ನೆರವಾಗು! (O Lord help me to spurn the desire for fame!) ನಿನಗಾಗಿ ಮತ್ತು ನಿನ್ನ ಪ್ರಪಂಚಕ್ಕಾಗಿ ನಾನು ದುಡಿಯುವಂತಾಗಲಿ! (Let me work for thy sake and for the world’s)”

ಜುಲೈ ೨೬ನೆಯ ಶನಿವಾರದ ದಿನಚರಿ:

“ಕನ್ನಡದಲ್ಲಿ ‘ಹಾದಿಕಾರನು’ ಎಂಬ ಹೆಸರಿನ ಒಂದು ಕವನ ರಚಿಸಿದೆ. ಸಂಜೆ ನಾವೆಲ್ಲ ವಾಕ್ ಹೋದೆವು; ತುಂಬ ಸೊಗಸಾಗಿತ್ತು, ಹರ್ಷ ಉತ್ಸಾಹಕರವಾಗಿ. ಗುರಿಯಿಡುವುದರಲ್ಲಿ ಮತ್ತು ಓಡುವುದರಲ್ಲಿ ನಮ್ಮ ಕುಶಲತೆಯ ಪರೀಕ್ಷೆ ನಡೆಸಿದೆವು. ಓಡುವ ಸ್ಪರ್ಧೆಯಲ್ಲಿ ಶಾಂತಮಲ್ಲಪ್ಪಗೆ ಪ್ರಥಮ ಸ್ಥಾನವೂ ನನಗೆ ದ್ವಿತೀಯ ಸ್ಥಾನವೂ ಲಭಿಸಿದುವು. ಸಂಚಾರದಿಂದ ವ್ಯಾಯಾಮವೂ ಆಯಿತು. ಆನಂದವೂ ದೊರೆಯಿತು.

ಭಯಂಕರ ಪ್ರವಾಹಗಳ ವಾರ್ತೆಗಳು ಎಲ್ಲ ಕಡೆಯಿಂದಲೂ ಬರುತ್ತಿವೆ. ಭಗವಂತ ರಕ್ಷಿಸಲಿ! ಲೈಬ್ರರಿಯಿಂದ ಮ್ಯಾಕ್ಸ್‌ಮುಲ್ಲರ್ ಅವರ ‘The Life and Sayings of Sri Ramakrishna’ ಮತ್ತು ವ್ಹಿಟ್‌ಮನ್‌ನ ‘Leaves of Grass’ ಎರಡನ್ನೂ ತಂದೆ.”

ಮೇಲೆ ಹೇಳಿರುವ ‘ಹಾದಿಕಾರನು’ ಎಂಬ ಕವನ ಮಹಾರಾಜ ಕಾಲೇಜಿನ ಯೂನಿಯನ್ ಮ್ಯಾಗಜೀನ್ ಅಲ್ಲಿ ಪ್ರಕಟವಾಗಿತ್ತು. ಮತ್ತು ಆ ಕಾಲದಲ್ಲಿ ಬರೆದ ಕವನಗಳಲ್ಲಿ ಬಹುಶಃ ಅದೊಂದೇ ಎಂದು ಕಾಣುತ್ತದೆ. ‘ಕೊಳಲು’ ಸಂಗ್ರಹದಲ್ಲಿ ಸೇರಿಕೊಂಡಿದೆ. ಅದರಲ್ಲಿ ಅಂತಹ ಯೋಗ್ಯತೆ ಏನೂ ಇಲ್ಲ. ಛಂದಸ್ಸು ಕೂಡ ಸ್ವಚ್ಛಂದವಾಗಿದೆ. ಆದರೆ ಅಭಿವ್ಯಕ್ತಗೊಂಡಿರುವ ಭಾವ ಅನುಭಾವಿಕವೂ ಆಧ್ಯಾತ್ಮಿಕವೂ ಆಗಿ ಹಾದಿಕಾರನು ‘ಜೀವ’ನಿಗೆ ಸಂಕೇತವಾಗುತ್ತಾನೆ. ಆ ಧ್ವನಿಯಿಂದಲೇ ಅದು ಗ್ರಾಹ್ಯವಾಯಿತೆಂದು ತೋರುತ್ತದೆ.

ಜುಲೈ ೨೭ನೆಯ ಭಾನುವಾರದ ದಿನಚರಿ:

“ನಾನು ತುಂಬಾ ಧ್ಯಾನಶೀಲನೂ ಅಂತರ್ಮುಖಿಯೂ ಆಗಿಬಿಟ್ಟಿದ್ದೇನೆ. ಭಗವಂತನ ನಿರಂತರ ಸಾನ್ನಿಧ್ಯಾನುಭವ ನನಗೆ ಸರ್ವದಾ ಹರ್ಷಪ್ರದವಾಗಿದೆ. ನಮ್ಮ ಸಂಘದಲ್ಲಿ ಒಂದು ಚರ್ಚೆ ಏರ್ಪಾಡಾಗಿತ್ತು. ಕಾರ್ಲೈಲ್‌ನ ಒಂದು ಉಕ್ತಿ ‘The History of the World is but the Biography of Heroes’ ‘ಮಹಾಪುರುಷರ ಜೀವನ ಚರಿತ್ರೆಯೆ ಪ್ರಪಂಚದ ಇತಿಹಾಸ’ ಎಂಬುದು ಚರ್ಚೆಯ ವಿಷಯವಾಗಿತ್ತು. ಚರ್ಚೆ ಬಿರುಸಿನಿಂದ ನಡೆಯಿತು. ನಮ್ಮ ಧ್ಯೇಯೋತ್ಸಾಹದ ಮಾಸಿಕಕ್ಕೆ (Magazine) ಅಧ್ಯಕ್ಷ, ಸಂಪಾದಕ, ಕೋಶಾಧಿಕಾರಿ, ಸದಸ್ಯರನ್ನು ಆರಿಸಿದೆವು. ಅಲ್ಲದೆ ತಿಲಕರ ದಿನವನ್ನಾಚರಿಸಲು ನಿಶ್ಚಯಿಸಿದೆವು. ರಾತ್ರಿ ‘ಪರಮಾನಂದಂ ಪರಮಾನಂದಂ’ ಎಂಬ ಒಂದು ಕವನವನ್ನು ಪ್ರಾರಂಭಿಸಿದೆ. ಅಮ್ಮಾ, ನಿನ್ನ ಸಾನ್ನಿಧ್ಯದಲ್ಲಿಯೆ ನನ್ನ ಪ್ರಜ್ಞೆ ಸರ್ವದಾ ಸರ್ವತ್ರ ನೆಲೆಸುವಂತೆ ಅನುಗ್ರಹಿಸು! ವಂದೇ ಸ್ವಾಮಿ ವಿವೇಕಾನಂದಮ್!”

ಜುಲೈ ೨೮ನೆಯ ಸೋಮವಾರದ ದಿನಚರಿ:

“ನಿನ್ನೆ ರಾತ್ರಿ ಪ್ರಾರಂಭಿಸಿದ್ದ ಕವನವನ್ನು ಬೆಳಿಗ್ಗೆ ಎದ್ದ ಕೂಡಲೆ ಮುಗಿಸಲು ತೊಡಗಿದೆ. ಆಮೇಲೆ ತೈತ್ತರೀಯೋಪನಿಷತ್ತಿನ ಕೆಲವು ಭಾಗಗಳನ್ನು ಓದಿದೆ. ಕಾಲೇಜಿಗೆ ಹೋದಾಗ ನನ್ನ ಯಾವುದಾದರೂ ಲೇಖನ ಪತ್ರಿಕೆಯಲ್ಲಿ ಬಂದಿರಬಹುದೇ ಎಂದು ಯೋಚಿಸಿದೆ. ಆದರೆ ನನಗೆ ಹೇಳತೀರದ ಹಿಗ್ಗಾಯಿತು. ನನ್ನ ಇಂಗ್ಲಿಷ್ ಕವನ-ಕೆಲವು ತಪ್ಪುಗಳೊಡನೆ-ಅಚ್ಚಾಗಿದ್ದುದನ್ನು ಕಂಡು! ಒಬ್ಬ ಕವಿಗೆ ಲಭಿಸಬಹುದಾದ ತೃಪ್ತಿಯ ಪರಾಕಾಷ್ಠೆಯನ್ನೆ ಅದು ನನಗೆ ಕೊಟ್ಟಿತು! ವ್ಯಂಗ್ಯದಂತೆ ತೋರುವುದಾಗಿದ್ದರೂ! (It gave me the greatest satisfaction possible for a poet! Ironical tho it be?)”

೨೯, ೩೦, ೩೧ನೆಯ ತಾರೀಕಿನ ಹಾಳೆಗಳು ಖಾಲಿ.

ಆಗಸ್ಟ್ ೧ನೆಯ ಶುಕ್ರವಾರದ ದಿನಚರಿ:

“ಇವೊತ್ತು ಟೌನ್‌ಹಾಲಿನಲ್ಲಿ ಜರುಗಿದ ಮುದವೀಡು ಕೃಷ್ಣರಾಯರ ಮತ್ತು ಕೇಶವದಾಸರ ಭಾಷಣ ಕೇಳಲು ಹೋಗಿದ್ದೆ. ಅವರ ಭಾಷಣಗಳಲ್ಲಿ ಕೆಲವು ನ್ಯೂನತೆಗಳಿದ್ದು ನನಗೆ ಸರಿಬರಲಿಲ್ಲ. ಮೊದಲನೆಯ ದೋಷವೆಂದರೆ, ಇಂಗ್ಲಿಷ್ ಭಾಷೆಯ ಖಂಡನೆ; ಎರಡನೆಯದು, ಭಾಷಣದಲ್ಲಿ ದಿನಬಳಕೆಯ ಮತ್ತು ಸರ್ವಪರಿಚಿತವಾದ ಇಂಗ್ಲಿಷ್ ಪದಗಳನ್ನ ಬಳಸಬಾರದೆಂಬ ಸೋಗು. ನಮ್ಮ ರೂಮಿನಲ್ಲಿ ‘ತಿಲಕರ ದಿನ’ವನ್ನು ಆಚರಿಸಿದೆವು. ಅವರ ಪಟವನ್ನು ಹೂಮಾಲೆಗಳಿಂದ ಅಲಂಕರಿಸಿದ್ದೆವು. ನಾನೊಂದು ದೇಶಭಕ್ತಿಯ ಗೀತೆಯನ್ನು ಕನ್ನಡದಲ್ಲಿ ರಚಿಸಿದೆ. ಅದು ಹೀಗೆ ಪ್ರಾರಂಭವಾಗುತ್ತದೆ.

Awake! Awake! Ye sons of India
And guard the honour of your Mother.
Hark! Hark! To the sounds of drums
That thundering come thro’ the wind.
Is it meet for you to linger thus
And laugh, O sons of India, at your Mother’s woes?

ಮೇಲಿನ ಆರು ಇಂಗ್ಲಿಷ್ ಪಂಕ್ತಿಗಳು ಆ ಕನ್ನಡ ದೇಶಭಕ್ತಿಗೀತೆಯ ಮೊದಲ ಪದ್ಯದ ಭಾಷಾಂತರ. ಇಂಗ್ಲಿಷ್‌ನಲ್ಲಿ ದಿನಚರಿ ಬರೆಯುವಾಗ ಅದನ್ನು ಇಂಗ್ಲಿಷಿಗೆ ಸಲೀಸಾಗಿ ಭಾಷಾಂತರಿಸಿದ್ದೇನೆ. ಭಾಷೆಯ ದೃಷ್ಟಿಯಿಂದ ನನ್ನ ಕನ್ನಡ ಜಬಲು ಜಬಲಾಗಿದ್ದರೆ ನನ್ನ ಇಂಗ್ಲಿಷ್ ಎಷ್ಟೋ ಮೇಲುಮಟ್ಟದಾಗಿದೆ. ‘ಏಳಿರಿ! ಏಳಿರಿ! ಭಾರತ ಪುತ್ರರೆ’ ಎಂಬ ಶೀರ್ಷಿಕೆಯ ಆ ಕವನದಲ್ಲಿ ಆರು ಪಂಕ್ತಿಯ ಮೂರು ಪದ್ಯಗಳಿವೆ. ಅವುಗಳಲ್ಲಿ ಇಂಗ್ಲಿಷಿಗೆ ಭಾಷಾಂತರಗೊಂಡಿರುವ ಮೊದಲನೆಯ ಪದ್ಯವನ್ನು ಮಾತ್ರ ಇಲ್ಲಿ ಕೊಡುತ್ತೇನೆ! ಇಂಗ್ಲಿಷ್ ಭಾಷಾಂತರ ಪ್ರಾಸರಹಿತವಾಗಿದ್ದರೂ ಕನ್ನಡದ ಮೂಲ ದ್ವಿತೀಯಾಕ್ಷರ ಪ್ರಾಸದಿಂದ ಶೃಂಖಲಾಬದ್ಧವಾಗಿಯೆ ಇದೆ!

ಏಳಿರಿ! ಏಳಿರಿ! ಭಾರತಪುತ್ರರೆ,
ಪಾಲಿಸಲೆಮ್ಮಯ ಮಾತೆಯ ಮಾನವ.
ಕೇಳಿರಿ! ಕೇಳಿರಿ: ಭೇರಿಯ ನಾದವು,
ಗಾಳಿಯ ಮೇಲಿಂ ಭೋರನೆ ಬರುತಿದೆ,
ತರವೇ ತರವೇ ನಿಮಗಿದು ತರವೇ,
ಮರುಗುವ ಮಾತೆಯ ಪೊರೆಯದೆ ನಗುವುದು, ಭಾರತೀಯರೇ?

ಬಹುಶಃ ಈ ದೇಶಭಕ್ತಿ ಗೀತೆ ಕೂಡ ಮುದುವೀಡು ಕೃಷ್ಣರಾಯರ ಮತ್ತು ಕೇಶವದಾಸರ ಭಾಷಣ-ಹರಿಕಥೆಗಳ ಪರಿಣಾಮವಾಗಿದ್ದರೂ ಇರಬಹುದು. ಆದರೆ ಅಂದಿನ ನನ್ನ ಇಂಗ್ಲಿಷ್ ಅಭಿಮಾನ ಮಾತ್ರ ಅವರ ಇಂಗ್ಲಿಷ್ ಖಂಡನೆಯನ್ನು ಸಹಿಸುವ ಸ್ಥಿತಿಯಲ್ಲಿರಲಿಲ್ಲ!”

ಆಗಸ್ಟ್ ೨ನೆಯ ಶನಿವಾರದ ದಿನಚರಿ:

“ಇವೊತ್ತು ನಾನು ಮೂರು ಕವನಗಳನ್ನು ರಚಿಸಿದೆ, ಎಲ್ಲವೂ ತಾತ್ತ್ವಿಕ, ಗೀತಾತ್ಮಕ ಮತ್ತು ಸುಂದರ (all philosophical, lyrical and beautiful). ಮೊದಲನೆಯ ಕವನ, ಅತೀವ ತಾತ್ತ್ವಿಕವಾದುದು. ಭಗವಂತನ ಸರ್ವದಾ ಆಗಮನತ್ವವನ್ನು ಕುರಿತದ್ದು. (ನೀ ಬರುವೆ.) ಆತನ ಸಕೃದ್ದರ್ಶನ ನಮಗೆ ವನಗಳಲ್ಲಿ, ಪಕ್ಷಿಕೂಜನ ಇತ್ಯಾದಿಗಳಲ್ಲಿ ದೊರೆಯುತ್ತದೆ. ಎರಡನೆಯದು, ಭಗವಂತನ ಅನ್ವೇಷಣೆಗೆ ಸಂಬಂಧ ಪಟ್ಟದ್ದು! ದೇವರನ್ನು ನಾವು ಎಲ್ಲೆಲ್ಲಿಯೂ ಸಂದರ್ಶಿಸಬಹುದು ಎಂಬ ಭಾವನೆ. (ಎಲ್ಲಿ ನಿನ್ನನು ನೋಡಲಿ?). ಮೂರನೆಯದು, ಮಾನವ ಹೃದಯದ ಶುಷ್ಕತೆಯನ್ನೂ, ಭಗವತ್ ಕೃಪೆಗಾಗಿ ಜೀವ ಹಂಬಲಿಸುವುದನ್ನೂ ಕುರಿತದ್ದು. ಅದಕ್ಕೆ ಶೀರ್ಷಿಕೆ ಕೊಟ್ಟಿಲ್ಲ.) ಕಾಲೇಜಿನಲ್ಲಿ ಒಂದು ಚರ್ಚಾಕೂಟಕ್ಕೆ ಹೋಗಿದ್ದೆ. ಲೈಬ್ರರಿಯಿಂದ ‘ರೂಪರ್ಟ್ ಬ್ರುಕ್’ ಮತ್ತು ‘ಶಂಕರ’ ತಂದೆ. ರಾತ್ರಿ ಹಾಸಗೆಯಲ್ಲಿ ಮಲಗಿ ‘Lotus Flower’ (ಕಮಲದ ಹೂ) ಎಂಬ ಇಂಗ್ಲಿಷ್‌ಕವನ ರಚಿಸಿದೆ. ತಾಯಿ, ನೀನು ಎಲ್ಲೆಲ್ಲಿಯೂ ಇದ್ದೀಯೆ. ಓಂ!”

ಮೇಲಿನ ದಿನಚರಿಯಲ್ಲಿ ಉಕ್ತವಾಗಿರುವ ಮೂರು ಕವನಗಳಲ್ಲಿ ಒಂದೆರಡು ಭಾಗಗಳನ್ನು ಮಾತ್ರ ಕೊಡಬಯಸುತ್ತೇನೆ. ದಿನಚರಿ ಅವುಗಳನ್ನು ತುಂಬ ಉತ್‌ಪ್ರೇಕ್ಷಿತ ವಿಶೇಷಣಗಳಿಂದ ಮೆಚ್ಚಿದ್ದರೂ ಆ ಮೆಚ್ಚುಗೆ ಅಂದಿನ ಕವಿಯ ಭಾವೋಜ್ವಲತೆಗೆ ಸಾಕ್ಷಿಯಾಗಿದೆಯೆ ಹೊರತು ಕವನಗಳ ಅಭಿವ್ಯಕ್ತಿಯ ವಸ್ತುನಿಷ್ಠ ಮೌಲ್ಯವಾಗಿಲ್ಲ. ಆದ್ದರಿಂದ Philosophical, Lyrical, Beautiful ಮೊದಲಾದ ವಿಶೇಷಣಗಳು ಭಾವಸತ್ಯಗಳಾಗಿವೆಯೆ ಹೊರತು ಅಭಿವ್ಯಕ್ತಿಯನ್ನು ಕುರಿತು ಲೋಕಸತ್ಯಗಳಾಗಿಲ್ಲ:

ನೀ ಬರುವೆ

ಕಾಡಿನ ಬಳಿಯೊಳು ಕೊಳಲನು ಊದುತ
ಓಡುವ ಗಗನದ ಚಂದ್ರನ ನೋಡುತ
ಒಬ್ಬನೆ ಪಸುರೊಳು ನಡೆವಾಗ
ಹೆಜ್ಜೆಯ ಮೇಲೆ ಹೆಜ್ಜೆಯನಿಡುತ
ಚೋರನಂದದಿ ನೀ ಬರುವೆ.

ತೊರೆಗಳು ಹಾಡುವ ಗಾನವ ಕೇಳುತ
ಹುರುಷದಿ ಹಸುರೊಳು ಬೀಳುತ ಏಳುತ
ನಿರ್ಜನ ದಡದೊಳು ನಡೆವಾಗ
ಮೆಲ್ಲಮೆಲ್ಲನೆ ಹೆಜ್ಜೆಯನಿಡುತ
ವಲ್ಲಭನಂದದಿ ನೀ ಬರುವೆ.

ಮೂಡಣ ದೆಸೆಯೊಳು ಸೂರ್ಯನು ಮೂಡಲು
ಮೋಡದ ಬಾಗಿಲ ಚಕ್ರವು ಪಾಡಲು
ಒಬ್ಬನೆ ಮುಸುಕಲಿ ನಡೆವಾಗ
ಗಾನವಿನೋದ ರೂಪವ ತಳೆದು
ಆನಂದಮಯನೆ ನೀ ಬರುವೆ.

ನಾಕವ ಹೃದಯದಿ ಸ್ಥಾಪಿಸುವಂದದಿ
ಕೋಕಿಲ-ನಾದವು ಬರಲಾನಂದದಿ
ನೀರವ ಗಿರಿಯೊಳು ನಡೆವಾಗ
ಕನಸು ಕಾಣುವ ಕವಿಯ ತೆರದಿಂ
ಮನಸನು ಸೆಳೆಯುತ ನೀ ಬರುವೆ.

ಹೃದಯದ ಸರಸಿನ ಹೃದಯಕಮಲದೊಳು
ಮುದದಿಂ ಜೀವನು ನೃತ್ಯವ ನಟಿಸುತ
ಗಾನವ ಹಾಡುತ ನಡೆವಾಗ
ಹೆಜ್ಜೆಯ ಮೇಲೆ ಹೆಜ್ಜೆಯನಿಡುತ
ವಿಶ್ವೇಶ್ವರನೇ ನೀ ಬರುವೆ.
೨-೮-೧೯೨೪

ದೊಡ್ಡ ಹೊರೆಯನ್ನು ಹೊರಲಾರದೆ ಹೊತ್ತು ತತ್ತರಿಸುತ್ತಾ ನಡೆಯುವ ಸಣಕಲನಂತೆ ಮಹತ್ತಾದ ಭಾವದ ಭಾರವನ್ನು ಹೊರಲಾರದೆ ಭಾಷೆ ತತ್ತರಿಸುತ್ತಾ ಮುಗ್ಗರಿಸುತ್ತಿದ ಎಲ್ಲಿ ನಿನ್ನನು  ನೋಡಲಿ? ಎಂಬ ಮುಂದಿನ ಕವನ. ನಾಲ್ಕಾರು ಪಂಕ್ತಿಗಳಲ್ಲಿ ಮಾತ್ರ ನಿದರ್ಶಿಸಲು ಯೋಗ್ಯವಾಗಿದೆ:

ಎಲ್ಲಿ ನಿನ್ನನು ನೋಡಲಿ?

ಎಲ್ಲಿ ನಿನ್ನನು ನೋಡಲಿ| ಎಲ್ಲಿ ನಿನ್ನನು ಪಾಡಲಿ ||
ಎಲ್ಲಿ ನಿನ್ನನು ಬೇಡಲಿ| ಎಲ್ಲಿ ನಿನ್ನ ಕೂಡಲಿ ||
ಪೂಗಳು ಬೆಳೆಯುವ ವನದಲ್ಲಿ |
ಗೋಗಳು ಮೇಯುವ ಬಯಲಿಲ್ಲಿ ||
ಕೋಗಿಲೆ ಕೂಗುವ ತಳಿರಲ್ಲಿ |
ಬಡವರಯ ಬೇಡಯವ ಕಡೆಯಲ್ಲಿ |
ಹೊಟ್ಟೆಗೆ ಇಲ್ಲದ ಹೀನರೊಳು!
ಬಟ್ಟೆಯ ಕಾಣದ ದೀನರೊಳು ||
ಮೂರನೆಯ ಶೀರ್ಷಿಕೆಯಲ್ಲದ ಕವನವಿದು:

ಕೃಪಾಭಿಕ್ಷೆ

ಬಿಸಿಲ ಜಳವ ತಾಳಲಾರೆ |
ಬಿಸನಾಭವೆ |
ಕುಸುಮಶೀಲ ಕುಸುಮನೇತ್ರ
ಕುಸುಮ ವಾಸನೆ|| ||ಪಲ್ಲವಿ||

ದೂರ ತೋರ್ಪ ದಿಗಂತದೊಳು |
ಕಾಣಲಾರೆನು |
ಹಾರಿ ಬರುವ ಮುಗಿಲ ಗುರುತ |
ವೇಣುನಾದನೆ ||

ಮೇಘದೂತನನ್ನು ಕಳುಹು |
ಬೇಗೆಯಾರಲಿ |
ಆಗಸದಿಂದ ಮಲೆಯು ಸುರಿದು |
ಭೋಗಿ ಶಯನನೆ ||

ಗಗನ ನೀಲವರ್ಣದಿಂದ |
ತುಂಬಿ ಇರುವುದು |
ಮುಗಿಲ ಮಚ್ಚೆಯೊಂದು ಇಲ್ಲ |
ಅಂಬರಾಗ್ರದಿ ||

ಗುಡುಗು ಮಿಂಚು ಕಾಳರೂಪ |
ಧರಿಸಿ ಕುಣಿಯಲಿ |
ಸಿಡಲು ಬಡಿದು ಮಳೆಯು ಕರೆದು |
ಧರಣಿ ತಣಿಯಲಿ ||

ಬರವು ಬಂದು ಹೃದಯಭೂಮಿ |
ಬಾಯಿಬಿಡುತಿದೆ |
ಕರುಣವರ್ಷವನ್ನು ಕರೆದು |
ಕಾಯೊ ದೇವನೆ ||

ದಿನಚರಿಗಳಲ್ಲಿ ಆಗಸ್ಟ್ ೩, ೪, ೫ರ ಹಾಳೆಗಳು ಖಾಲಿ.

ಆಗಸ್ಟ್ ೬ನೆಯ ಬುಧವಾರದ ದಿನಚರಿ:

“ರಾತ್ರಿ ನನ್ನ ರೂಮಿನ ಹೊರಗೆ ತಾರಸಿಗೆ ಹೋದೆ. ಆಕಾಶದಲ್ಲಿ ಚಂದ್ರ ರಮಣೀಯವಾಗಿ ರಂಜಿಸುತ್ತಿದ್ದ, ಇಡೀ ದೃಶ್ಯವೆ ದಿವ್ಯವಾಗಿತ್ತು. ಒಂದು ಸಾನೆಟ್ ರಚಿಸುವ ಮನಸ್ಸಾಯಿತು. ಒಡನೆಯೆ ಹಾಡಿಕೊಳ್ಳತೊಡಗಿದೆ: ‘This sky, this moom, these clouds, these stare etc,’ ಆದರೆ ಒಡನೆಯೆ ಹಠಾತ್ತನೆ ಎಂಬಂತೆ ಮನದಲ್ಲಿ ಒಂದು ಮಿಂಚು ಹೊಳೆಯಿತು. ಅದನ್ನೆ ಕನ್ನಡದಲ್ಲಿ ಹೇಳಿಕೊಂಡೆ. ‘ಈ ಗಗನವೀ ಚಂದ್ರ’ ಇತ್ಯಾದಿ. ಆಗ ನನಗೆ ಒಂದು ದಾರಿ ಹೊಳೆಯಿತು. ಬಹುಕಾಲದಿಂದ ನಾನು ಹುಡುಕುತ್ತಿದ್ದುದು, ಕನ್ನಡದಲ್ಲಿ ‘ಬ್ಲ್ಯಾಂಕ್‌ವರ್ಸ್‌’ ಬರೆಯುವ ಗುಟ್ಟನ್ನು ಕಂಡುಹಿಡಿದೆ. ನನ್ನ ಈ ಹೊಸ ಸಿದ್ಧಾಂತದಿಂದ, ನನಗನ್ನಿಸುತ್ತಿದೆ, ಕನ್ನಡ ಸಾಹಿತ್ಯದಲ್ಲಿಯೆ ಒಂದು ‘ಹೊಸ ಶಕ’ದ ನವಯುಗ ಪ್ರಾರಂಭವಾಗುತ್ತದೆ.

ತಾಯಿ, ದಿವ್ಯೆ, ನೀನೆನಿತು ಮಧುರೆ, ಮಧುರೆ, ಮಧುರೆ!”

ಮೇಲಿನ ದಿನಚರಿಯಲ್ಲಿ ಹೇಳಿಕೊಂಡಿರುವ ಕನ್ನಡ ಬ್ಲ್ಯಾಂಕ್‌ವರ್ಸ್ ಕವನ ಹಸ್ತಪ್ರತಿಯಲ್ಲಿ ‘ಬೆಳದಿಂಗಳ ರಾತ್ರಿ’ ಎಂಬ ಶೀರ್ಷಿಕೆಯಲ್ಲಿದೆ. ಪ್ರತಿಯೆತ್ತಿರುವ ತಾರೀಕು ೭-೮-೧೯೨೪ ಎಂದಿದೆ. ಹದಿನೇಳು ಪಂಕ್ತಿಗಳಿದ್ದು ಆದಿ ಅಂತ್ಯಪ್ರಾಸಗಳಿಂದ ಮುಕ್ತವಾಗಿದೆ. ಮುಂದೆ ‘ಶ್ರೀರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ತನ್ನ ಮಹೋನ್ನತ ಪರಿಪೂರ್ಣ ಭಾವ್ಯಾಕಾರದಲ್ಲಿ ವಿಜೃಂಭಿಸುತ್ತಿರುವ ಮಹಾಛಂದಸ್‌. ತ್ರಿವಿಕ್ರಮನಿಗೆ ಮೂಲ ಬೀಜಾಂಕುರಾರ್ಪಣೆಯಾದುದು ಈ ಅಣುವ ವಾಮನದಲ್ಲಿ!

ಬೆಳದಿಂಗಳ ರಾತ್ರಿ

ಈ ಗಗನವೀ ಚಂದ್ರನೀ ಮುಗಿಲಿನಾನಂದ
ತಾರಕೆಗಳೀ ಪುರವು ಈ ಮನೆಯ ಈ ನರನು
ಈ ಗಿರಿಗಳೀ ಬಯಲು ಈ ತೊರೆಗಳೀ ಧರೆಯು
ಯಾ ಮಹ ಮಹಿಮನನು ಸೂಚಿಪುವು? ಓ ಮನವೆ,
ಗರ್ವದಿಂದೆಲ್ಲವಂ ಬಲ್ಲೆನೆಂಬುವನೀಗ
ಭಯಭರಿತ ಅಚ್ಚರಿಯ ತೋರಿ ನೀ ಹಿಂಜರಿವೆ!
ವೇದಗಳು ಮುಗ್ಗುರಿಸಿ ಬೀಳುವವು. ನಿಲುಕದಾ
ಮಹಿಮನನು ನಿಲುಕಲೆತ್ನಿಸಿ ಬರಿದೆ ಬೀಳುವರು
ಶಾಸ್ತ್ರಿಗಳು ಪಂಡಿತರು ಶಿಲ್ಪಿಗಳು ಗಾಯಕರು
ತತ್ವಗಳ ತಿಳಿದವರು! ಬೆರಗಾಗಿ ನಿಲ್ಲುವರು
ಸಕಲವನು ಗೀತದಲಿ ಸಲೆ ಗೆಲುವ ಕವಿವರರು!
ವೇದಗಳು ಶಾಸ್ತ್ರಗಳು ತತ್ವಗಳು ನೀತಿಗಳು
ತಲೆತಗ್ಗಿ ಹೋಗುವುವು ಒಂದಾದ ಮೇಲೊಂದು
ಮೌನದಿಂ ಮೂಕರಂತೆಲೆ ಮನವೆ; ಅಚ್ಚರಿಯ
ತಾನೊಂದೆ ಉಳಿಯುವುದು. ಹುಚ್ಚನಂದದ ಕವಿಯು
ತಾನೊಬ್ಬ ಕವಿತನದ ಹೆಚ್ಚಿಗೆಯ ಮಹಿಮೆಯಿಂ
ದಚ್ಯುತನ ಸೇರುವನು! ಕವಿಯಾಗು, ಓ ಮನವೆ!
೭-೮-೧೯೨೪

ಆಗಸ್ಟ್ ೭ನೆಯ ಗುರುವಾರದ ದಿನಚರಿ:

“ಇವೊತ್ತು ನಾನೊಂದು ವಿಧಾನ ಕಂಡುಹಿಡಿದೆ, ಕನ್ನಡದಲ್ಲಿ ಸಾನೆಟ್ಟು ಎನ್ನಬಹುದಾದುದಕ್ಕೆ. (To day I found out a method to compose something like Kannada sonnets.) ನನ್ನ ಆ ಕಂಡುಹಿಡಿಯುವಿಕೆಯನ್ನು ಕಂಡು ನನಗೇ ಪರಮಾಶ್ಚರ್ಯವಾಯಿತು. ನನಗೆ ನಾನೇ ಹೇಳಿಕೊಂಡೆ ‘ಇದರ ನೆರವಿನಿಂದ ಕವಿತಾ ಪ್ರಪಂಚವನ್ನೆ ಸೂರೆಗೊಳ್ಳುತ್ತೇನೆ.’ ಎಂದು. (I said to myself with this I will sack the Kingdom of Muse!) ಒಂದು ಕನ್ನಡ ಸಾನೆಟ್ ರಚಿಸಿದೆ ‘Beauty’ ಅಥವಾ ‘ಸೊಬಗು’ ಎಂದು. ಅದೊಂದು ಸೊಗಸಾದ ಸಾನೆಟ್; ಸೌಂದರ್ಯದ ಪರಿಪೂರ್ಣತೆಯನ್ನು ವರ್ಣಿಸುತ್ತದೆ; ಮತ್ತು ತೋರಿಕೆಯ ವಿಕೃತಿಗಳ ನಡುವೆಯೂ ವಿಶ್ವದ ಏಕತ್ವವನ್ನು ಸಾಧಿಸುತ್ತದೆ. (It is a beautiful sonnet describing the perfection of Beauty and the oneness of the Universe even in its seeming distortions.) ವಂದೇ ಸ್ವಾಮಿ ವಿವೇಕಾನಂದಂ. ತಾಯಿ ನಿನಗೆ ನಮಸ್ಕಾರ!”

ಮೇಲೇ ಹೇಳಿದ ಸಾನೆಟ್ಟಿನ ಗುಣಸ್ತುತಿಗೆ ಏನೂ ಆಧಾರ ದೊರೆಯುತ್ತಿಲ್ಲ. ಕಾವ್ಯವಾಗಿ ಅದರ ಯೋಗ್ಯತೆ ಸಾಧಾರಣ ಕೂಡ ಅಲ್ಲ. ಭಾಷೆಯೂ ಬಡಕಲು. ಕಡೆಗೆ ಛಂದಸ್ಸು ಕೂಡ ನ್ಯೂನತೆ ಲೋಪದೋಷಗಳಿಂದ ಕೂಡಿದೆ. ಆದರೆ ಸಾನೆಟ್ಟಿನ ರೂಪ ಸಾಧನೆಗೆ ಸಮರ್ಥ ಮಾರ್ಗದರ್ಶನವೀಯುತ್ತದೆ. ಆ ‘ಸೊಬಗು’ ಶೀರ್ಷಿಕೆಯ ಸಾನೆಟ್ಟನ್ನು ಅದರ ಎಲ್ಲ ಲೋಪದೋಷಗಳೊಡನೆ ಹಾಗೆಹಾಗೆಯೆ ಬರೆಯುತ್ತೇನೆ. ಆಮೇಲೆ ಮಾಡಬಹುದಾದ ವ್ಯಾಖ್ಯಾನ ಮಾಡುತ್ತೇನೆ.

ಸೊಬಗು

ನಾನೊಂದು ರಾತ್ರಿಯೊಳು ಕೋಣೆಯಿಂ ಹೊರಹೊರಟು
ಆನಂದಗಗನದಿಂ ಹಿಮಕರನು ಸೂಸುತಿಹ
ಭಾನುಪೋಷಿತ ಸುಧಾ ಕಿರಣವಲಿಯ, ನೀರವ
ಗಾನವನು ಸಲೆ ಕೇಳಿ ಹರುಷದಿಂ ಮೈಮರೆತೆ.

ರಮಣೀಯ ರವರಹಿತ ಅಡವಿಗಳು, ಮನಲೋಲ
ಹಿಮಕರನ ರಶ್ಮಿಗಳ ಕೇಳಿಯೊಳು ಮನಸೋತು
ಭ್ರಮಿಸಿ ನಿದ್ರಿಸುತಿರ್ದುವು. ಧರಣಿಯುಮಾಗಸವು
ರಮಣ ರಮಣಿಯರಂತೆ ಶಶಿಭೋಗದೊಳಿರ್ದುವು!

ಹರುಷದಿಂ ನಿಜಹೃದಯ ಗಡಗಡನೆ ನಡನಡುಗಿ,
ಪರಮಾತ್ಮನನು ನೆನೆದು ದಳದಳನೆ ಕಣ್ಣೀರ
ಸುರಿಯಿಸಿತು. ಸೌಂದರ್ಯದಾನಂದವೆಂತಹುದೊ!

ಸೊಬಗೆ ದೇವ, ದೇವನೆ ಸೊಬಗು ನಿಜ. ಹೃದಯವೇ
ಸೊಬಗೆಂಬ ದೇವನನು ನೀನರಿತು ಸುಖಿಯಾಗು.
ಸೊಬಗೆ ನೀಂ; ನಿನ್ನೊಳಿಹುದೀ ವಿಶ್ವವೆಲೆ ಜೀವ!