ಆಗಸ್ಟ್ ೮ನೆಯ ಶುಕ್ರವಾರದ ದಿನಚರಿ:

“ಇವೊತ್ತು ಒಂದು ಕನ್ನಡ ಕವನ ರಚನೆ ಮಾಡಿದ್ದೇನೆ. ಹೆಸರು The Mother’s Song. (ತಾಯಿಯ ಹಾಡು). ಮಹತ್ತಾದ ತಾತ್ವಿಕತೆಯಿಂದ ಕೂಡಿದ್ದರೂ ಅತ್ಯಂತ ಸರಳವಾಗಿದೆ. ಇತ್ತೀಚೆಗೆ ನಾನು, ಒಂದು ರೀತಿಯಲ್ಲಿ ಹೇಳುವುದಾದರೆ, ಬ್ರಹ್ಮಾನಂದದಲ್ಲಿ ಮಗ್ನನಾಗಿದ್ದೇನೆ; ಮತ್ತು ಕವಿತೆ (ರಸಾನುಭವ?) ಬದುಕಿನ ಮಧುರಾಮೃತವಾಗಿ ಪರಿಣಮಿಸಿದೆ. (Of late I am, so to say, immersed in the eternal bliss and poetry is the sweets balm of life.) ಆನಂದ ಆನಂದ, ಮಾತಿಗೆ ಮೀರಿದ ಆನಂದ. (Sweet, sweet beyond convention) ಅದು ನನ್ನನ್ನು ಸರ್ವದಾ ಸುಖಮಯ ಮತ್ತು ರಸಮತಿಯನ್ನಾಗಿ ಇಟ್ಟಿರುತ್ತದೆ, (It keeps me always joyful and imaginative).

ತಾಯಿ, ನಿನ್ನ ಕೃಪೆ ಈ ಪೃಥ್ವಿಯನ್ನೆಲ್ಲ ತುಂಬಲಿ. ನನ್ನನ್ನು ಜ್ಞಾನಿಯನ್ನಾಗಿ ಮಾಡು, ಅದರ ಪ್ರದರ್ಶನಕ್ಕಾಗಿ ಅಲ್ಲ, ಮಾನವ ಸೇವೆಗಾಗಿ ಮತ್ತು ತನ್ಮೂಲಕ ನಿನ್ನ ಸೇವೆಗಾಗಿ! ನಾನು ನಿನ್ನ ಶಿಶು!”

‘ತಾಯಿಯ ಹಾಡು’ ಒಂದು ಸರಳರಚನೆ. ಐದು ಮಾತ್ರೆಯ ಎರಡು ಗಣಗಳ ನಾಲ್ಕು ಪಂಕ್ತಿಗಳ ಪಲ್ಲವಿಯೂ ಸೇರಿದಂತೆ ಇಪ್ಪತ್ತೆರಡು ಪದ್ಯಗಳಿವೆ. ಅವುಗಳಲ್ಲಿ ಹನ್ನೊಂದು ಪದ್ಯಗಳನ್ನು ಕೆಳಗೆ ಕೊಡುತ್ತೇನೆ. ಕವಿ ಆಗಲೇ ದ್ವಿತೀಯಾಕ್ಷರ ಪ್ರಾಸ ಬಂಧನದಿಂದ ಬಿಡುಗಡೆ ಪಡೆಯುತ್ತಿರುವುದೂ ಕಾಣುತ್ತದೆ. ಅಂತ್ಯಪ್ರಾಸವೂ ಇಣುಕ ತೊಡಗಿದೆ.

ತಾಯಿಯ ಹಾಡು

ಅಳಬೇಡವೆಲೆ ಕಂದ
ಇಳೆಯೊಳಿಹುದಾನಂದ
ಪೊಳೆವ ಹಿಮದೊಳು ಮಿಂದ
ಬೆಳೆಯು ನಗುತಿದೆ ಚಂದ. ||ಪಲ್ಲವಿ||

ಬಯಲೊಳಿಹ ಮರದಲ್ಲಿ
ರಮಣೀಯ ರಾಗದಿಂ
ಕೋಕಿಲೆಯು ಕೂಗುತಿದೆ
ನಿನಗಾಗಿ ಎಲೆ ಮಗುವೆ.

ಧರೆಯೊಳಿಹ ಪುಷ್ಪಗಳು
ಹೊರಗೆ ಆಡಲು ಬಂದು
ಶಿರವ ತೂಗುತಲಿಹವು
ನಿನಗಾಗಿ ಎಲೆ ಮಗುವೆ.

ಎಳೆಯ ನೇಸರ ಕಿರಣ
ಇಳೆಯ ಹಸುರನು ಬೆಳಗಿ
ಥಳಥಳಿಸಿ ಹೊಳೆಯುತಿದೆ
ನಿನಗಾಗಿ ಎಲೆ ಮಗುವೆ.

ತರತರದ ಪಕ್ಷಿಗಳು
ಇಂಪಾದ ಗಾನದಿಂ
ದೇವನನು ನುತಿಸುತಿವೆ
ನಿನಗಾಗಿ ಎಲೆ ಮಗುವೆ.

ನಾಕದಿಂದಲಿ ಬಂದು
ಸೊಬಗು ಲೋಕವ ತುಂಬಿ
ನಗುತಲಿದೆ ನಿನಗಾಗಿ
ಎಲೆ ಮುದ್ದಿನೆನ ಕಂದ.

ದೇವಲೋಕದಿ ಇಳಿದು
ದೇವದೂತರು ಬಂದು
ಭೂಮಿಯನು ತುಂಬುವರು
ನಿನಗಾಗಿ ಎಲೆ ಮಗುವೆ.

ಹತ್ತು ಅವತಾರಗಳ
ಎತ್ತಿ ದೇವನು ಧರೆಯ
ಪೊತ್ತು ಪೊರೆದುದು ನಲಿದು
ನಿನಗಾಗಿ ಎಲೆ ಮಗುವೆ.

ಆದಿದೇವನು ಇಳೆಯ
ಹೃದಯದ ಕಮಲದ ಮೇಲೆ
ನೃತ್ಯವನು ಮಾಡುವನು
ನಿನಗಾಗಿ ಎಲೆ ಮಗುವೆ.

ಹಿಮಕರನು ಉದಯಿಸಲು
ಸಾಗರನು ಉಬ್ಬುವನು
ನೈದಿಲೆಯು ಅರಳುವುದು
ನಿನಗಾಗಿ ಎಲೆ ಮಗುವೆ.

ಹೆಚ್ಚು ಹೇಳುವುದೇನು
ನಿನ್ನೊಳಿಹುದೀ ವಿಶ್ವ
ಶಿವ ನೀನೆ ಶಿವ ನೀನೆ
ಎಲೆ ಮುದ್ದಿನೆನ ಕಂದ.      ೮.೭.೧೯೨೪.

ಆಗಸ್ಟ್ ೨ನೆಯ ಶನಿವಾರದ ದಿನಚರಿಯಲ್ಲಿ ಮೂರು ಕನ್ನಡ ಕವನಗಳ ಜೊತೆಗೆ ರಾತ್ರಿ ಒಂದು ಇಂಗ್ಲಿಷ್ ಕವನ Lotus Flower ರಚಿಸಿದೆ ಎಂದು ಹೇಳಿದೆ. ಆ ಕವನ ಒಂದು ಸಾನೆಟ್. ಅಂದೇ ರಚಿಸಿದ ಮೂರು ಕನ್ನಡ ಕವನಗಳ ಪರಿಚಯ ಕೊಟ್ಟಾಗಿದೆ. ಅಂದೇ ರಚಿಸಿದ ಈ ಇಂಗ್ಲಿಷ್ ಸಾನೆಟ್, ಯಾವ ಮಟ್ಟದಲ್ಲಿದೆ, ಅದರ ಕಾವ್ಯಾಭಿವ್ಯಕ್ತಿ ಕಲ್ಪನಾ ಪ್ರತಿಭೆಯ ದೃಷ್ಟಿಯಿಂದಲೂ ದಾರ್ಶನಿಕವಾಗಿಯೂ ಎಷ್ಟು ಉನ್ನತವಾಗಿದೆ ಎಂಬುದರ ನಿದರ್ಶನಾರ್ಥವಾಗಿ ಇಲ್ಲಿ ಕೊಡುತ್ತೇನೆ:

THE LOTUS FLOWER

On the blue lake of my sweet bosom blooms
The golden splendor-lit life’s lotus flower,
Full glorious to behold, with many a tower
Of crystals sheen and rain-bow coloured domes,

Radiant with light celestial! There stay
The fairies champak-bosom’d, lotus-eyed
And rosy-veiled. There live the great who died
Giving us thoughts divine: Eternal play!

There booms the dull boom of Eternity,
Vague, dim, sweet and serene! They come and go;
They dance and play and sing their liquid notes
Borrowed from that great OM. Infirmity,
Infancy, both rejoice in one inflow.
Within my life’s blue lake such Lotus floats!
೩.೮.೧೯೨೪

ಇದೇ ಸಮಯದಲ್ಲಿ, ಎಂದರೆ ಆಗಸ್ಟ್ ೫ರಲ್ಲಿ, ಬರೆದ ಮೂರು ಇಂಗ್ಲಿಷ್ ಸಾನೆಟ್ಟುಗಳಿವೆ. ದಿನಚರಿಯಲ್ಲಿ ಆಗಸ್ಟ್ ೫ನೆಯ ತಾರೀಖಿನ ಹಾಳೆ ಖಾಲಿಯಾಗಿರುವುದರಿಂದ ಅದರಲ್ಲಿ ಈ ವಿಷಯ ಬರೆದಿಲ್ಲ. ಆ ಮೂರರಲ್ಲಿ ಮೊದಲನೆಯದು Radha and Krishna ಎಂಬುದು ಒಂದು ‘vision’ ಎಂದರೆ ಸಕೃದ್ದರ್ಶನಕ್ಕೆ ಸಂಬಂಧಪಟ್ಟುದು. ಪ್ರಕೃತಿ ಮತ್ತು ಪುರುಷ ಇವರ ಮಿಲನದ ಆನಂದ ನೃತ್ಯದಿಂದ ಉದ್ಭವವಾಗುವ ಸೃಷ್ಟಿಯ ಸೌಂದರ್ಯ ಅದರ ವಸ್ತು. ಎರಡು ಮತ್ತು ಮೂರನೆಯ ಸಾನೆಟ್ಟುಗಳೆರಡೂ ಒಂದೇ ಶೀರ್ಷಿಕೆಯನ್ನು ಪಡೆದಿವೆ: ‘The Banished Indian Patriot.’ ಬ್ರಿಟಿಷ್ ಸರಕಾರ ವೀರ ಸಾವರ್ಕರ್ ಅವರಂತಹ ಅನೇಕ ದೇಶಭಕ್ತರನ್ನು ಹಿಡಿದು, ನಕಲಿ ವಿಚಾರಣೆ ನಡೆಸಿ, ದೇಶಾಂತರ ಶಿಕ್ಷೆ ವಿಧಿಸಿ, ‘ಪೃಥ್ವಿಯ ನರಕ’ ಎಂದು ಆಗ ಕುಪ್ರಸಿದ್ಧವಾಗಿದ್ದ ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಜೀವಾವಧಿ ಜೈಲುವಾಸಕ್ಕೆ ಅಟ್ಟುತ್ತಿದ್ದರು. ಅಂತಹ ಒಬ್ಬ ದೇಶಭಕ್ತ ವೀರನ ಹೃದಯದ ಅಭಿವ್ಯಕ್ತಿ ಆ ಎರಡು ನಾನೆಟ್ಟುಗಳಲ್ಲಿದೆ.

RADHA  AND  KRISHNA

Come, VISION, Come: Upon the moon-lit green
Where the flower-graced Zephyrs lave and blow
Beneath the waving Champak-bosom’d bough
Two radiant forms celestial are seen!
Are they Universe’s King and Queen?
How beautiful their flower-hem’d garments flow
In the sweet breeze of the blushing dawn! Each brow
Is crowned with freshest spring-time flowerets sheen!
Behold! Like sun and moon in one embrace
They move, the mystic pair of Paradise,
Their flower-knit garments trailing to and fro!
Majestic forms! See, the self-effulgent rays
Hem radiant round their forms! Their sweet dark eyes.
Pour peace and harmony: Go, VISION, go!
೫-೮-೧೯೨೪

THE BANISHED INDIAN PATRIOT
SONNET I

Forget me not, sweet Land! I am thy child.
Tho far away from thy beloved shore
I breathe and pass away, I love thee more.
Dear India! Remember thy child exiled.
I fought for heaven when conflagration wild,
With heart of hell and cloak of heaven. All o’er
Thy beauteous bosom did its vengeance pour.
But Satan wins ere comes Christ undefiled!

O Mother, thou hast given a gift supreme:
The mighty “I AM HE!” Hell shudders cold
Beneath its potency. Happy the race
That feels the freedom of the soul! That DREAM
Is but the surest bliss. March and be bold.
Dear Indian, hoping for thy better days!
೫-೮-೧೯೨೪

SONNET II
Ye oceans that around me spread your vast
And endless wavy bosom, roar and swell!
And O thou Islet grim, Earth’s Darkest Hell,
But now a heaven to me. Rage, rage thy blast!
Here stands an Indian, mightiest INDIAN Soul,
That smiles at death, fiercer than ferocity,
And more infinite than Infinity,
Descendant of Rishis who were the WHOLE!

Ye feeble winds, ye pigmy oceans wide
Can you bind Him from whom you both survive?
Know that I am one with that mighty Power.
An Indian tho’ I be, it is my pride
I’m one and All. When I begin to dive
Deep. O joy, I find myself a great Lover!
೫-೮-೧೯೨೪

ಆಗಸ್ಟ್ ೯ನೆಯ ಶನಿವಾರದ ದಿನಚರಿ:

“ ‘ಸಂಪದಭ್ಯುದಯ’ The Wealt of Mysore ಪತ್ರಿಕೆಯಲ್ಲಿ ನನ್ನ ಕವನ ‘ಚಂದ್ರನು’ ಅಚ್ಚಾಗಿರುವುದನ್ನು ಕಂಡೆ. ನನ್ನ ಹೃದಯದಿಂದ ಒಂದು ಅತ್ಯಂತ ಸುಂದರತಮವಾದ ಕವನ ಹೊಮ್ಮಿದೆ, ‘ಚೈತ್ರ-ವೈಶಾಖ’ ಅಥವಾ ‘The Awakened April’ಎಂದು. ಅದರ ವಿಶೇಷತೆ ಏನೆಂದರೆ ಅದು ನನ್ನ ಅದೇ ಹೆಸರಿನ ಇಂಗ್ಲಿಷ್ ಕವನದ ಭಾಷಾಂತರವೊ ಎಂಬಂತಿದೆ. ಆದರೆ ಕನ್ನಡ ಕವನ ಇಂಗ್ಲಿಷಿನದಕ್ಕಿಂತ ಹೆಚ್ಚು ಸುಂದರವೂ ಅರ್ಥಪೂರ್ಣವೂ ಆಗಿರುವುದನ್ನು ಕಂಡು ನಾನು ಬೆರಗಾದೆ. ‘ಆನಂದ’ ಅಥವಾ ‘Bliss’ ಎಂಬ ಒಂದು ಕನ್ನಡ ಸಾನೆಟ್ಟನ್ನೂ ರಚಿಸಿದೆ. ತಾಯಿ! ತಾಯಿ! ತಾಯಿ!.

ಮೇಲಿನ ದಿನಚರಿಯಲ್ಲಿ ಹೆಸರಿಸಿರುವ ‘ಚೈತ್ರ-ವೈಶಾಖ’ ಮತ್ತು The Awakened April ಈ ಕವನಗಳನ್ನು ಕೇಂದ್ರವಾಗಿ ಉಳ್ಳ ಒಂದು ಚಿಕ್ಕ ಇತಿಹಾಸವಿದೆ: ದಿನಚರಿ ‘ಚೈತ್ರ-ವೈಶಾಖ’ವನ್ನು ಅತ್ಯಂತ ಸುಂದರತನವಾದ ಸ್ವತಂತ್ರ ಕವನವೆಂದು ಬಣ್ಣಿಸಿದ್ದರೂ, ಮತ್ತು ಅದು ನನ್ನ ಇಂಗ್ಲಿಷ್ ಕವನದ ಭಾಷಾಂತರವೂ ಎಂಬಂತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದರೂ ಆ ಶ್ಲಾಘನೆಯಲ್ಲಿ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆಯ ಸಮರ್ಥನೆ ನಡೆದಿದೆ ಎಂದು ಶಂಕಿಸಬೇಕಾಗುತ್ತದೆ. ಅಲ್ಲದೇ, ಕನ್ನಡ ಕವನವನ್ನು ಮಿತ್ರರು ಹಾಡಿದಾಗ ಆಗುತ್ತಿದ್ದ ಪರಿಣಾಮದಲ್ಲಿ ಅರೆಪಾಲು ಕವನಕ್ಕಲ್ಲದೆ ಗಾಯನಕ್ಕೆ ಸೇರಿರುತ್ತಿದ್ದು, ಇಂಗ್ಲಿಷ್ ಕವನಕ್ಕೆ ಆ ಸೌಕರ್ಯವಿಲ್ಲದೆ ಹೋಗುತ್ತಿದ್ದದ್ದೂ ಒಂದು ಪ್ರಬಲವಾದ ಕಾರಣವಾಗುತ್ತದೆ. ಜೊತೆಗೆ, ಆಗಾತನೆ ಕನ್ನಡದ ಪರವಾಗಿ ಮೂಡಿ ವರ್ಧಿಸುತ್ತಿದ್ದ ಸ್ವಭಾಷಾಭಿಮಾನವೂ ನನ್ನ ಇಂಗ್ಲಿಷ್‌ ಕವನಕ್ಕಿಂತ ಕನ್ನಡ ಕವನ ಮೇಲಾಗಿದೆ ಎಂಬ ‘ಕ್ಷಮ್ಯಭ್ರಾಂತಿ’ಗೆ ಎಡೆಕೊಟ್ಟಿದೆ. ಈಗ ಆ ಎರಡು ಕವನಗಳನ್ನೂ ಅಕ್ಕಪಕ್ಕ ಇಟ್ಟು ನೋಡಿದರೆ ನನ್ನ ಕನ್ನಡ ಕವನ ಇಂಗ್ಲಿಷ್‌ ಕವನದ ಅನುವಾದರೂಪವಾಗಿಯೆ ಮೂಡಿರಬೇಕು ಎನಿಸುತ್ತದೆ. ಶೀರ್ಷಿಕೆಯೇ ಆ ಗುಟ್ಟನ್ನು ಬಯಲಿಗೆಳೆಯುತ್ತದೆ. The Awakened April ಮೊದಲು ರಚಿತವಾದದ್ದು. ನಿಘಂಟಿನಲ್ಲಿ ಬಹುಶಃ ಏಪ್ರಿಲ್‌ ತಿಂಗಳಿನಲ್ಲಿ ಸ್ವಲ್ಪಭಾಗ ಚೈತ್ರವೂ ಸ್ವಲ್ಪ ಭಾಗ ವೈಶಾಖವೂ ಬರುವುದರಿಂದ ಚೈತ್ರ-ವೈಶಾಖ ಮಾಸಗಳೆರಡನ್ನೂ ಸೂಚಿಸಿರಬಹುದು. ಆದ್ದರಿಂದ ಏಪ್ರಿಲ್‌ಗೆ ಸಂವಾದಿಯಾಗಿ ‘ಚೈತ್ರ-ವೈಶಾಖ’ ಎಂದು ಕನ್ನಡ ಶೀರ್ಷಿಕೆ ಹುಟ್ಟಿತೆಂದು ತೋರುತ್ತದೆ. ಅಲ್ಲದಿದ್ದರೆ, ಭಾರತೀಯ ಸಾಹಿತ್ಯ ಸಂಸ್ಕೃತಿಗಳಲ್ಲಿ ಸುಪ್ರಿಸಿದ್ಧವೂ ಸರ್ವವಿದಿತವೂ ಆಗಿರುವ ‘ವಸಂತಮಾಸ’ ಎಂಬ ಹೆಸರು ಹೊಳೆಯದೆ ಇರುತ್ತಿರಲಿಲ್ಲ.

ಮೊದಲು ಇಂಗ್ಲಿಷ್‌ ಕವನ ಕೊಡುತ್ತೇನೆ. ಅದು ಉಳಿದಿರುವುದು ದಿವಂಗತ ದೇವಂಗಿ ಮಾನಪ್ಪನವರ ಕೃಪೆಯಿಂದ. ಅದನ್ನು ಪ್ರತಿಯೆತ್ತಿದವರು ಅವರು, ‘Kishora Chandra Vani’ Selected Kannada and English Poems’ ಎಂದು ಅಚ್ಚು ಮಾಡಿರುವ ರಟ್ಟಿನ ಹಸ್ತಪ್ರತಿಯೊಂದು ಅದೃಷ್ಟವಶಾತ್‌ ಸಿಕ್ಕಿದೆ. ಅದರಲ್ಲಿ, ಬಹುಶಃ ಯಾವುದಾದರೂ ಸ್ಪರ್ಧೆಗೆ ಕಳಿಸುವ ಇಚ್ಛೆಯಿಂದ, ಕೆಲವು ಕನ್ನಡ ಮತ್ತು ಇಂಗ್ಲಿಷ್‌ ಕವನಗಳನ್ನು ದಿವಂಗತ ಶ್ರೀ ಮಾನಪ್ಪನವರು ಪ್ರತಿಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ ಕವನಗಳೆರಡನ್ನೂ ತುಲನಾತ್ಮಕವಾಗಿ ಪರಿಶೀಲಿಸಬಹುದು.

THE AWAKENED APRIL

O Earth! what joy receivest thou
when heaven’s grace sheds its showers?
what secret gratiude or love
Blooms forth sweet grass and flowers?
Oh mother kind, what thou receivest
Is but a speck of what thou givest!

O Trees! what glory enters You
When showers with heaven descend?
What foliage and flowers born anew
Your sylvan court commend?
O! in your glorius jubilee
Heavan and Earth mingle heartily!

O Lakes! what splendour crystalline
The cool showers bring to you?
What liquid joy, what trance divine
Like ripples pass you through?
To walk beside you is to roam
Like angels in thier heavenly home!

O Birds, what nector thrills you life
When pearl- like showers descend?
what god of music brings his life
In your sweet throats to blend?
ye come with glory and with mirth
when April’s beauty wakes the Earth!

O April sweet! of grass and flowers,
April of powers divine,
What heaven dissolved comes thro, your showers
That makes the dullest shine?
Season of glory and mirth
Spirit of Beauty walk the earth!

ಚೈತ್ರವೈಶಾಖ

ಎಲೆ ಧರಣಿ! ಯಾವ ವಿಧಾನಂದವಂ ಪಡೆವೆ
ಮಳೆಯ ಹನಿ ಮುತ್ತಿನಂದದಿ ಬೀಳೆ?
ಇಳೆಯ ಮೇಲಲರುಗಳು ಮುಂಜಾನೆ ಬೀಳ್ವಂತೆ
ಬಳಬಳನೆ ಗಗನದಿಂ ಮಳೆ  ಸೂಸೆ?
ತಳಿರುಗಳು ಹೂವುಗಳು ಹಸನಾದ ಗರಿಕೆಗಳು
ಸಲೆ ತುಂಬಿ ನಿನ್ನುರವ ಮೆರೆಯುವುವು ಎಲೆ ಮಾತೆಯೆ!

ಸುರ ತುರುವೆ! ಮಹಿಮೆ ಯಾವುದು ನಿನ್ನ ಚುಂಬಿಪುದು
ವರ ಮಳೆಯು ನಾವಕಂ ಸಲೆ ಸೊಸೆ?
ಅರಳುತಿಹ ಪುಷ್ಪಗಳು ಬರಬರನೆ ಹೊರಡುವುವು
ಹರುಷದಿಂದ ನಿನ್ನುದರದಿಂ ತರುವೆ!
ಮಿರುಗತಿಹ ಎಸಳೊಡೆದ ನಸುನಗೆಯ ಪೂಗಳನು
ಕರೆಕರೆದು ಕೈಬೀಸಿ ಕವಿಗೆ ನೀಂ ತೋರುತಿರುವೆ!

ಸರಸುಗಳೆ! ನೀವೇಕೆ ನಗುನಗುತ ಹಿಗ್ಗುವಿರಿ
ಹರುಷದಿಂ ಬಹ ಮಳೆಯು ತಾ ಸುರಿಯೇ?
ಸರಸವಾವುದು ನಿಮ್ಮ ಕೆನ್ನೆಗಳ ಚುಂಬಿಪುದು,
ತರುಣಿಯರೆ, ಕಮಲದಳ ಶೋಭಿತರೆ?
ಪರವಾತ್ಮ ಮೋಡದಿಂ ಮಳೆಯಾಗಿ ಇಳಿಯುವನೆ?
ಸರಸಾಗಿ ಉಕ್ಕುವುದೆ ಪರಬೊಮ್ಮನಾನಂದವು?

ಕೋಕಿಲೆಯೆ! ಕಮನೀಯ ಪ್ರಕೃತಿ ವೈಣಿಕನೆ,
ಲೋಕವನೆ ಗಾನದಿಂ ರಂಜಿಸುವ
ನಾಕದಿಂ ಬಂದ ವರ ಸಂಗೀತ ಕೋವಿದನೆ,
ಈ ಕಲೆಯ ನಿನಗಾರು ಹೇಳಿದರು?
ನಾ ಕೇಳಿ ಸಲೆ ನಲಿವೆ;ಕೂ ಕೂಗು, ಕೋಕಿಲೆಯೆ;
ನಾಕವನು ತಲ್ಲಣಿಸು, ಓ ಗೀತ ಕೋವಿದನೆ!

ಓ ಚೈತ್ರ ವೈಶಾಖರೆ! ಫಲಪುಷ್ಪ ಬಾಂಧವರೆ!
ವೈಚಿತ್ರ ರಮಣೀಯ ಮಾಸಗಳೆ!
ಈ ಚಿತ್ರ ಕೋಟಿಗಳು ಇಳಿಯುವುವೆ ಮಳೆಯೊಡನೆ?
ನಾಚಿ ಪೋಪುದು ನಾಕ ತಲೆವಾಗಿ!
ಭೂ ಚಕ್ರಮಂ ಕೋಟಿ ಸಲ ಸುತ್ತಿ ಮೆರೆಯುವಿರಿ;
ಓ ಚೈತ್ರ ವೈಶಾಖರೆ, ಹರುಷವನು ಬೀರಿ ಜಗಕೆ!
೯-೮-೧೯೨೪

ಕನ್ನಡ ಕವನ ಇಂಗ್ಲಿಷಿನದರ ಕ್ರಮಬದ್ಧ ಭಾಷಾಂತರವಲ್ಲ ಎಂಬುದೇನೋ ಸುಸ್ಪಷ್ಟ. ಭಾವಾನುವಾದ ಕೂಡ ಅಲ್ಲವೆಂದರೂ ಪ್ರಭಾವಕ್ಕೆ ವಶವಾಗಿದೆ ಎಂಬುದನ್ನು ಪ್ರತಿ ಪದ್ಯದ ಪ್ರಾರಂಭದ ಸಂಶೋಧನಾ ವಿಧಾನದಿಂದ ಒಪ್ಪಿಕೊಳ್ಳುವಂತಾ‌ಗುತ್ತದೆ: ‘O Eart’ = ‘ಎಲೆ ಧರಣಿ!’, ‘O Trees’! ‘ =’ ‘ಸುರ ತರುವೆ!’,‘O Lakes’= ‘ಸರಸುಗಳೆ!’ ‘ O Birds!’ = ‘ಕೋಕಿಲೆಯೆ!’, ‘O April Sweet !’ = ‘ಓ ಚೈತ್ರ ವೈಶಾಖರೆ!’ ಅಲ್ಲದೆ ಕಾವ್ಯಭಾಷೆ ಮತ್ತು ಭಾವಸೂಕ್ಷ್ಮತೆ ಮತ್ತು ಅಲ್ಲಿ ಇಲ್ಲಿ ಹೊಳೆಯುವ ಕಲ್ಪನಾ ವೈಭವದಲ್ಲಿ ಇಂಗ್ಲಿಷ್‌ ಕವನ, ದಿನಚರಿಯಲ್ಲಿರುವ ಕನ್ನಡ ಕವನದ ಅತಿಶ್ಲಾಘನೆಯನ್ನು ಇಳಿಕೆಗೈವಂತೆ, ಮೇಲುಮಟ್ಟದ್ದಾಗಿದೆ ಎಂಬ ಅಂಶ ನಿಷ್ಪಕ್ಷಪಾತಕ್ಕೆ ವೇದ್ಯವಾಗದೆ ಇರದು. ಇಂಗ್ಲೀಷಿನ ಅಂತ್ಯ ಪ್ರಾಸಕ್ಕೆ ಬದಲಾಗಿ ಕನ್ನಡದಲ್ಲಿ ಆರು ಪಂಕ್ತಿಗಳಲ್ಲಿಯೂ  ಏಕರೂಪದ ದ್ವಿತೀಯಾಕ್ಷರ ಪ್ರಾಸ ಬಂದಿದೆ. ಆದರೆ ಇಂಗ್ಲೀಷನಲ್ಲಿ ಒಂದು ಮೂರು, ಎರಡು ನಾಲ್ಕು, ಐದು ಆರನೆಯ ಪಂಕ್ತಿಗಳಲ್ಲಿಯೂ ಏಕರೂಪದ ದ್ವಿತೀಯಾಕ್ಷರ ಪ್ರಾಸ ಬಂದಿದೆ. ಆದ್ದರಿಂದ ಸ್ವಾತಂತ್ರ್ಯಾಂಶಕ್ಕಿಂತ ಬಂಧನಾಂಶವೆ ಅತಿಯಾಗಿ ಕಾವ್ಯತ್ವ ಕುಂಠಿತವಾಗುವುದಕ್ಕೆ ಕಾರಣವಾಗಿವೆ. ಕನ್ನಡದ ಕವನದ ಮಾತ್ರಾಗಣ ಪ್ರಯೋಗದಲ್ಲಿಯೂ ಒಂದು ವಿಶೇಷವನ್ನು ಗಮನಿಸಬಹುದು. ಪ್ರತಿ ಪದ್ಯದ ಎರಡನೆಯ ಮತ್ತು ಮೂರನೆಯ ಪಂಕ್ತಿಗಳಲ್ಲಿ ಐದು ಮಾತ್ರೆಯ ಮೂರು ಗಣಗಳಿವೆ; ಒಂದು ಗುರು ಹೆಚ್ಚಾಗಿರಬೇಕಾಗಿದ್ದುದನ್ನು ನಿರ್ಲಕ್ಷಿಸಿದೆ. ಅಲ್ಲದೆ ಪ್ರತಿಪದ್ಯದ ಆರನೆಯ ಪಾದದಲ್ಲಿ ಮಾತ್ರ ಐದು ಮಾತ್ರೆಯ ನಾಲ್ಕು ಗಣಗಳ ಜೊತೆಗೆ ಒಂದು ಗುರು ಹೆಚ್ಚಾಗಿ ಸೇರಿದೆ.

ಇದುವರೆಗೆ ಸಾಹಿತ್ಯ, ಭಾಷೆ, ಛಂದಸ್ಸುಇವುಗಳಿಗೆ ಸಂಬಂಧಿಸಿದ ವಿಚಾರಗಳನ್ನೆ ಹೇಳಿದ್ದೇನೆ. ಇನ್ನು ಈ ಕವನಕ್ಕೆ ಸಂಬಂಧಿಸಿದ ಸ್ವಾರಸ್ಯವಾದ ‘ಇತಿಹಾಸ’ವನ್ನು ಹೇಳಿಬಿಡುತ್ತೇನೆ.

ಹಿಂದೆ ಕೆಲವು ಕವನಗಳನ್ನು ‘ಸಂಪದಭ್ಯುದಯ’ ಅಥವಾ The Wealth of Mysore ಪತ್ರಿಕೆಗೆ ಪ್ರಕಟಣೆಗೆ ಕೊಟ್ಟಂತೆ ಈ ‘ಚೈತ್ರ ವೈಶಾಖ’ ವನ್ನು ಕೊಟ್ಟೆ. ಅದು ಅಚ್ಚಾಯಿತು. ಆ ಪತ್ರಿಕೆ ಆಗ ಲಂಡನ್ನಿನಲ್ಲಿ ಮೈಸೂರಿನ ಪರವಾಗಿ ಟ್ರೇಡ್ ಕಮಿಷನರ್ ಆಗಿದ್ದ ದಿವಂಗತ ಎಸ್. ಜಿ. ಶಾಸ್ತ್ರಯವರಿಗೆ ಹೋಗುತ್ತಿತ್ತು. ಈ ಕವನವನ್ನು ಅದರಲ್ಲಿ ಓದಿದ ಅವರಿಗೆ ಆ ಕವನಕರ್ತೃವಿನಲ್ಲಿದ್ದ ಸ್ಫೂರ್ತಿಯುತವಾದ ನವೀನತೆ ಹೃದ್ಗೋಚರವಾಗಿ ಆ ಪತ್ರಿಕೆಯ ಸಂಪಾದಕರಾಗಿದ್ದು ಮೈಸೂರಿನ ಸುಪ್ರಸಿದ್ಧ ವ್ಯಕ್ತಿಯಾಗಿದ್ದ ತಾತಯ್ಯ ವೆಂಕಟಕೃಷ್ಣಯ್ಯವರಿಗೆ ಕಾಗದ ಬರೆದರು: ‘ಈ ಕವಿ ಯಾರು?ಇವರ ಕವನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆಯೆ? ಆಗಿದ್ದರೆ ನನಗೊಂದು ಪ್ರತಿ ಕಳುಸಿ ಕೊಡಿ’-ಇತ್ಯಾದಿಯಾಗಿ. ವೆಂಕಟಕೃಷ್ಣಯ್ಯನವರಿಗೂ ಯ:ಕಶ್ಚಿತವಾಗಿನಾಗಿದ್ದ ನಾನು ಸಂಪೂರ್ಣ ಅಪರಿಚಿತ. ನನ್ನ ಪತ್ತೆಗೆ ಅವರು ಪ್ರಯತ್ನಪಟ್ಟು, ಅವರಿಗೆ ಹತ್ತಿರವಾಗಿದ್ದ ಕಾಲೇಜು ವಿದ್ಯಾರ್ಥಿಗಳ ಮೂಲಕ ವಿಚಾರಿಸತೊಡಗಿದರು. ಅದು ನನ್ನ ಮಿತ್ರರ ಕಿವಿಗೂ ಬಿದ್ದು ಅವರು ಆ ಪತ್ರಿಕಾಲಯಕ್ಕೆ ಹೋಗಿ ಅವರನ್ನು ಕಾಣುವಂತೆ ಪ್ರೇರೇಪಿಸಿದರು. ಆದರೆ ನಾನು, ಇಂದಿನಂತೆಯೆ ಅಂದೂ ಹಾಗೆಲ್ಲ ಯಾರನ್ನೂ ಬಡಪಟ್ಟಿಗೆ ಹೋಗಿ ಕಾಣುವ ಆಸಾಮಿ ಆಗಿರಲಿಲ್ಲ. ಹೀಗೆ ಅವರು ಮತ್ತೇ ಮತ್ತೇ ಕಳಿಸಿದ ಮೇಲೆ ನನ್ನ ಸ್ನೇಹಿತರು ತಾವೂ ನನ್ನೊಡನೆ ಬರುವ ಭರವಸೆ ಇತ್ತು ನನ್ನನ್ನು ಪತ್ರಿಕಾಲಯಕ್ಕೆ ಕರೆದೊಯ್ದರು. ತುಂಬ ಸಾಧಾರಣವಾಗಿ, ಬಡತನದ ವೈಭವವನ್ನೇ ಪ್ರಕಟಿಸುವಂತಿದ್ದ ಆ ಕೊಠಡಿಗೆ ನಾನು ಪ್ರವೇಶಿಸಿದೆ. ಅತ್ಯಂತ ಸ್ಥೂಲಕಲೆಯ ಮರದ ಮೇಜಿನ ಬಳಿ ಇಬ್ಬರೋ ಮೂವರೋ ಕುಳಿತ್ತಿದ್ದರು. ನನಗೆ ನೆನಪಿರುವಂತೆ ದಿವಂಗತ ಪಿ. ಆರ್. ರಾಮಯ್ಯ ಅವರೂ ಮತ್ತು ವೆಂಕಟಕೃಷ್ಣಯ್ಯನವರು ಇದ್ದರು. ಇನ್ನೋಬ್ಬರು ಯಾರೋ ಗೊತ್ತಿಲ್ಲ.

ಸಂವಾದದ ವಿವರ ನೆನಪಿಗೆ ಬರುವುದಿಲ್ಲ. ನೆನಪಿನಲ್ಲಿರುವಷ್ಟು ಮುಖ್ಯ ವಿಷಯವನ್ನು ಹೇಳುತ್ತೇನೆ. ನಾನು ಯಾರು ಎತ್ತ ಎಲ್ಲಿರುವುದು ಏನು ಓದುವುದು ಇದನ್ನೆಲ್ಲ ಕೇಳಿ ತಿಳಿದರು. ನನ್ನ ಕವನಗಳನ್ನು ಮೆಚ್ಚಿದರು. ಎಸ್.ಜಿ.ಶಾಸ್ತ್ರಿಯಂಥವರೂ ಅದನ್ನು ಮೆಚ್ಚಿ ಹೊಗಳಿ ಬರೆದಿದ್ದ ವಿಚಾರವನ್ನು ಪ್ರೋತ್ಸಾಹಕರವಾಗಿ ಹೇಳಿದರು. ಕಡೆಗೆ ಊರು ಮನೆ ತಂದೆ ತಾಯಿಗಳ ಹೆಸರು ಮುಂತಾದುವನ್ನು ವಿಚಾರಿಸಿದರು. ನಾನು ಮಲೆನಾಡಿನ ಮೂಲೆಯ ಒಂದು ಕೊಂಪೆ ಹಳ್ಳಿಯಿಂದ ಬರುತ್ತಿದ್ದೇನೆ ಎಂಬುದನ್ನು ತಿಳಿದು ಅವರಿಗೆ ಆಶ್ಚರ್ಯವಾಯಿತು. ಅದುವರೆಗೆ ನನ್ನ ಬಣ್ಣ ಆಕಾರ ರೂಪ ಮಾತಿನ ರೀತಿ ತಿಳಿದು ಅವರಿಗೆ ಉಡುಗೆ ಇವುಗಳಿಂದ ನಾನು ಬ್ರಾಹ್ಮಣನೆಂದೇ ಅವರು ಭಾವಿಸಿದರು! ಬ್ರಾಹ್ಮಣನಲ್ಲದವನಿಗೆ ಅಂತಹ ವ್ಯಕ್ತಿತ್ವವಾಗಲಿ ಕಾವ್ಯರಚನಾ ಶಕ್ತಿಯಾಗಲಿ ಅಲಭ್ಯವಂದೇ ಆಗಿನ ಕಾಲದವರ ಅದರಲ್ಲಿಯೂ ಉಚ್ಚವರ್ಗದವರ ನಂಬಿಗೆಯಾಗಿತ್ತು. ಆದ್ದರಿಂ‌ದ ನಾನು  ನನ್ನ ಊರು ಮತ್ತು ತಂದೆಯ ಹೆಸರನ್ನು ಹೇಳಿ‌ದೊಡನೆ ಅವರ ಮೊದಲಿನ ಆಶ್ಚರ್ಯ ವಿಸ್ಮಯಕ್ಕೆ ತಿರುಗಿಬಿಟ್ಟಿತು. ಡಂಗು ಬಡಿದವರಂತೆ ಎಲ್ಲರೂ ಸ್ವಲ್ಪ ಹೊತ್ತು ಮಾತಿಲ್ಲದಿದ್ದರು. ಕಡೆಗೆ ತಾತಯ್ಯನವರು ಅವರೆಲ್ಲರ ಕಡೆಗೂ ಇಂಗಿತ ಭಂಗಿಯ ದೃಷ್ಟಿಯನ್ನಟ್ಟುತ್ತಾ ಅಂದರು:

‘ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆಯೋ ಯಾರು ಬಲ್ಲರು?’ ಪ್ರಶಂಸೋಕ್ತಿಯಾಗಿ ಎಂದು ಆಶಿಸುತ್ತೇನೆ.

ಅಗಸ್ಟ್ ೧೦ನೆಯ  ಭಾನುವಾರದ ದಿನಚರಿ:

‘ಇಂದು ನಾನು ಎರಡು ಕನ್ನಡ ಕವನಗಳನ್ನು ರಚಿಸಿದೆ. ಒಂದರ ಹೆಸರು ‘ಕೋಗಿಲೆ’, ಇತರ ಎಲ್ಲ ಕವನಗಳಿಗಿಂತ ಅತ್ಯಂತ ಸುಂದರವಾದದ್ದು ಮತ್ತು ಲಯಬದ್ಧವಾದದ್ದು. (The most beautiful and rhythmic than any of the other poems, and it also adds meaning to the charms of its music,) ನಾದ ಮಾಧುರ್ಯಕ್ಕೆ ಅರ್ಥದ ಚಾರುತ್ವವೂ ಕಾರಣವಾಗುತ್ತದೆ. ನನ್ನ ರೂಂ-ಮೇಟುಗಳಿಗೆ ಅದನ್ನು ರಾಗವಾಗಿ ಹಾಡಿದಾಗ ಅವರೆಲ್ಲರೂ ಅದರ ನಾದಕ್ಕೂ ಲಯಕ್ಕೂ ಮಾರುಹೋಗಿ ಬೆರಗಾದರು. ಎಸ್.ವಿಷಕಂಠ ಅವರು ಅದನ್ನು ಅಭಿನಯಸಹಿತವಾಗಿ ಸೊಗಸಾಗಿ ಹಾಡಿದಾಗ ಎಲ್ಲರೂ ಮರುಳಾಗಿಬಿಟ್ಟರು.

ತಾಯಿ, ಜನರನ್ನು ನಿನ್ನೆಡೆಗೆ ನನ್ನ ಕವನಗಳ ಗಾಯನದಿಂದ ಸೆಳೆಯುವ ಪುಟ್ಟ ಗಾಯಕನನ್ನಾಗಿ ಮಾಡಮ್ಮ ನನ್ನನ್ನು….

ಆ ‘ಕೋಗಿಲೆ’ ಕವನ ಭಾಷೆಯ ಮತ್ತು ಭಾವದ ಸ್ವಲ್ಪ ಮಾರ್ಪಾಡುಗಳೊಡನೆ ‘ಕೊಳಲು’ ಕವನ ಸಂಗ್ರಹದಲ್ಲಿ ಅಚ್ಚಾಗಿದೆ, ೧೯೩೦ರಲ್ಲಿ.

ಇಲ್ಲಿಗೆ ನನ್ನ ೧೯೨೪ರ ದಿನಚರಿ ನಿಂತಿದೆ. ಬಹುಶ: ನನ್ನ ತಾಯಿಯ ಮರಣ ವಾರ್ತೆಯೆ  ಕಾರಣವೆಂದು ತೋರುತ್ತದೆ. ಮತ್ತೆ, ಇದಕ್ಕಿಂತಲೂ ಲಘುತ್ತರ ಪ್ರಮಾಣದಲ್ಲಿ ನಾನು ದಿನಚರಿ ಬರೆಯಲು ತೊಡಗಿದುದು, ಸರಿಯಾಗಿ ಲೆಕ್ಕಮಾಡಿದಂತೆ ಒಂದು ವರ್ಷದ ಮೇಲೆ, ೧೯೨೫ನೆಯ ಆಗಸ್ಟ್ ೧೧ನೆಯ ತಾರೀಖಿನಲ್ಲಿ! ಆಶ್ಚರ್ಯವಾಗುವಂತಿದೆ.

೧೯೨೫ನೆಯ ಆಗಸ್ಟ್ ೧೧ನೆಯ ತಾರೀಖಿನಲ್ಲಿ ಇನ್ನೊಂದು ಸಣ್ಣ ಕಿರುಜೇಬಿನ ನೋಟುಪುಸ್ತಕದಲ್ಲಿ (೧೯೨೪ರ ದಿನಚರಿಯಂತೆ ಬೆಂಗಳೂರು ಪ್ರೆಸ್ ಡೈರಿಯಲ್ಲಿ ಅಲ್ಲ.) ದಿನಚರಿ ಬರೆಯಲು ಪ್ರಾರಂಭಿಸುವ ಮುನ್ನ ಹಿಂದಿನ ವರ್ಷದ ಡಯರಿಯನ್ನು ಪರಿಶೀಲಿಸಿ, ಅದರ ಖಾಲಿಯಾಗಿದ್ದ ೧೯೨೪ನೆಯ ಆಗಸ್ಟ್೧೧ನೆಯ ಸೋಮವಾರದ ಹಾಳೆಯಲ್ಲಿ ಇಂಗ್ಲಷಿನಲ್ಲಿ ಹೀಗೆಂದು ಷರಾ ಬರೆದಿದೆ:

೧೧-೮-೧೯೨೫ Ah ye unwrit leaves how sweet  and elevating would it have been if ye had the contents of my life! But ah the absence adds more glory to the life because there will not be the speck of pride or vanity in the unrecorded leaves of life.       – K.V. PUTTAPPA.

ಮತ್ತೆ ಅದರ ಮುಂದಿನ ಖಾಲಿ ಪುಟದಲ್ಲಿಯೂ ಒಂದೆರಡು ವಾಕ್ಯಗಳಿವೆ:

11-8-1925. I perused over the contents of this dairy and felt glad. The scenes,almost faded and lost, returned one by one,both sad and joyful.Ah, life is sweet with all its defects!