ಎಂಟ್ರೆನ್ಸ್ ಪರೀಕ್ಷೆಯ ತರುವಾಯ ಬೇಸಗೆ ರಜಾಕ್ಕೆ ಊರಿಗೆ ಹೋದವನು ಕಾಲೇಜುಗಳು ಪ್ರಾರಂಭವಾಗುವ ಹಿಂದಿನ ದಿನಕ್ಕೆ ಸರಿಯಾಗಿ ಎಂದರೆ ೧೯೨೪ನೆಯ ಜೂನ್ ೨೩ನೆಯ ಸೋಮವಾರ ಮೈಸೂರಿಗೆ ಬಂದೆ. ಬಂದ ಒಂದು ವಾರಕ್ಕೆ ಸರಿಯಾಗಿ ಎಂದರೆ ಜೂನ್ ೨೯ನೆಯ ಭಾನುವಾರದಂದು ದೇವಂಗಿ ಹಿರಿಯಣ್ಣನವರಿಂದ ನನ್ನ ತಾಯಿಗೆ ತುಂಬಾ ಕಾಯಿಲೆಯಾಗಿದೆ ಎಂದು ಕಾಗದ ಬಂತು. ಹಿಂದೆಯೇ ಕೊಟ್ಟಿರುವ ದಿನಚರಿಯಲ್ಲಿ ಬರೆದಿರುವಂತೆ, ನನಗೆ ತುಂಬ ದು:ಖವಾಯಿತು; ಅವ್ವ ಎಲ್ಲಿ ಸತ್ತಹೋಗಿ ಬಿಡುವಳೋ ಎಂಬ ಭೀತಿಯೂ ಮನಸ್ಸನ್ನಾವರಿತು. ಆದರೆ ಜಗನ್ಮಾತೆಗೆ ಅವ್ವನ ಕ್ಷೇಮಕ್ಕಾಗಿ ಪ್ರಾರ್ಥಿಸಿ ಧೈರ್ಯ ತಂದುಕೊಂಡೆ. ಒಂದು ವೇಳೆ ಆಗಬಾರದ್ದು ಸಾಗಿ ಹೋದರೂ, ಆಗ ನನ್ನ ಚೇತನವನ್ನೆಲ್ಲ ಹೊತ್ತಿಕೊಂಡು ಪ್ರಜ್ವಲಿಸುತ್ತಿದ್ದ ಆತ್ಮದ ಅಮೃತತ್ವದ ಭಾವವನ್ನು ಆಶ್ರಯಿಸಿ, ನನ್ನ ತಾಯಿ ಜಗಜ್ಜನನಿಯ ಮಡಿಲಾದ ಅನ್ಯಲೋಕಗಳಲ್ಲಿ ಇದ್ದೇ ಇರುತ್ತಾರೆ ಎಂಬ ಶೃದ್ಧೆಯನ್ನು ಹೃದಯದಲ್ಲಿ ಬಲಿದು ಸಮಾಧಾನ ತಂದುಕೊಂಡೆ. ಆದರೆ ಮನೆಯಿಂದ ಆ ವಿಚಾರವಾಗಿ ಯಾವ ಕಾಗದವೂ ಬಂದಂತೆ ನೆನಪಿಲ್ಲ. ಒಟ್ಟು ಕುಟುಂಬದಲ್ಲಿ ಯಾರೊಬ್ಬರ ಯೋಗಕ್ಷೇಮದ ಭಾರವಾಗಲಿ ಎಲ್ಲರ ಮೇಲೆಯೂ ಇರುತ್ತದೆಯಾದ್ದರಿಂದ ನಾನಾ ಮನೆಗೆ ಹೋಗಿ ಅವ್ವನ ಶುಶ್ರೂಷೆ ಮಾಡುವ ಅನಿವಾರ‍್ಯತೆಯೂ ತೋರಲಿಲ್ಲ. ಅಲ್ಲದೆ ಕಾಯಿಲೆಯಾದ ಮಾತ್ರಕ್ಕೆ ‘ಅವ್ವ ಸತ್ತೇ ಹೋಗುತ್ತದೆ’ ಎಂದು ಒಂದಿನಿತೂ ಎಣಿಸಿರಲಿಲ್ಲ. ಮಲೆನಾಡಿನಲ್ಲಿ ಆಗ ಕಾಯಿಲೆ ಬೀಳುವುದು ಸರ್ವಸಾಧಾರಣವಾದ ದಿನನಿತ್ಯದ ವಿಷಯವಾಗಿದ್ದು ನನ್ನ ಅವ್ವಗೂ ಗುಣವಾಗುತ್ತದೆ ಎಂಬ ನಂಬುಗೆ ಇತ್ತು. ಮನೆಯಿಂದಲೆ ಕಾಗದ ಬಂದು, ಕಾಯಿಲೆಯ ವಿಷಮ ಸ್ಥಿತಿ ಗೊತ್ತಾಗಿದ್ದಾರೆ ಹೋಗುತ್ತಿದ್ದೆನೊ ಏನೋ? ಅದೂ ನಾನು ಮನೆ ಬಿಟ್ಟು ಬಂದು ಒಂದು ವಾರವೂ ಕಳೆದಿರಲಿಲ್ಲವಾದ್ದರಿಂದ ಮತ್ತೆ ಹಿಂದಕ್ಕೆ ಹೋಗುವ ಮನಸ್ಸೂ ಇರಲಿಲ್ಲ. ಜೊತೆಗೆ ನನ್ನ ಹುಟ್ಟುಗುಣವಾದ ‘ಸ್ಥಾವರ ಪ್ರಕೃತಿ’ ಪ್ರಯಾಣ ಕೈಕೊಳ್ಳುವ ವಿಚಾರದಲ್ಲಿ ಇಂದಿನಂತೆಯೆ ಅಂದೂ ವಿಮನಸ್ಕವಾಗಿದ್ದರಬೇಕು.

ನಾನು ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಂದಿನಿಂದ ಪ್ರತಿ ದಸರಾ ಮತ್ತು ಬೇಸಗೆ ರಜೆಯಲ್ಲಿ ಮನೆಗೆ ಹೋದಾಗಲ್ಲೆಲ್ಲ ಯಾರಾದರೊಬ್ಬರು ಮನೆಯವರು ತೀರಿ ಹೋಗಿರುತ್ತಿದ್ದರು. ಎಷ್ಟರಮಟ್ಟಿಗೆ ಎಂದರೆ, ನಾನು ಎಂ.ಎ. ತೇರ್ಗಡೆಯಾಗಿ ಮನೆಗೆ  ಹಿಂದಿರುಗಿದಂದು ಮನೆಯ ಮಂದಿ ಮುಕ್ಕಾಲು ಪಾಲಿಗಿಂತಲೂ ಹೆಚ್ಚಾಗಿಯೆ ಖಾಲಿಯಾಗಿದ್ದರು!

ನನ್ನ ತಾಯಿ ತೀರಿಕೊಳ್ಳುವುದಕ್ಕೆ ಸುಮಾರು ಒಂದು ತಿಂಗಳ ಮೊದಲು ಬಸಪ್ಪಜ್ಜಯ್ಯ ದಿವಗಂತರಾಗಿದ್ದರು. ಬಹುಶ: ಆ ಎಲ್ಲ ಗೊಂದಲದ ದೆಸೆಯಿಂದಲೆ ನನಗೆ ಅವ್ವನ ಖಾಹಿಲೆಯ ವಿಷಮಸ್ಥಿತಿಯ ವಿಚಾರವಾಗಿ ಕಾಗದ ಬರೆಯಲಿಲ್ಲವೊ ಏನೊ?

ನನ್ನ ತಾಯಿಯ ಮರಣದ ಸಂದರ್ಭದ ವಿಚಾರವಾಗಿ ತಮಗೆ ತಿಳಿದುದನ್ನೂ ಇತರರಿಂದ ವಿಚಾರಿಸಿ ತಿಳಿಯಬಹುದಾದುದನ್ನೂ ಬರೆಯಿರಿ ಎಂದು ಶ್ರೀ ಅಲಿಗೆ ಪುಟ್ಟಯ್ಯನಾಯಕರಿಗೆ ಕಾಗದ ಬರೆದಿದ್ದೆ. ಅವರು ಮೂರು ನಾಲ್ಕು ಕಡೆ ಕೇಳಿ ತಿಳಿದು, ತಮಗೆ ನೆನಪಿರುವಷ್ಟನ್ನು ಸೇರಿಸಿ ಕಾಗದ ಬರೆಯುವ ಕೃಪೆಮಾಡಿದ್ದಾರೆ. ಅದರ ಕೆಲವು ಅಂಶಗಳನ್ನು ಕೊಡುತ್ತೇನೆ:

ಶ್ರೀ ಕುಪ್ಪಳ್ಳಿ ವೆಂಕಟಯ್ಯನವರ ಹೇಳಿಕೆ:

“ಶ್ರಾವಣಮಾಸದಲ್ಲಿ ಮೃತಪಟ್ಟದ್ದು. ಆಗ ನಾನು ಓದುತ್ತಿದ್ದೆ. ಅವರ ಮರಣಕ್ಕೆ ನಾಲ್ಕು ದಿನ ಮೊದಲು ಮನೆಗೆ ಬಂದಿದ್ದೆ. ಸೀತಮ್ಮನವರು ಸ್ವರ್ಗಸ್ಥರಾಗುವ ಮೊದಲು ಅಂದರೆ ಎಂಟು ದಿನ ಮುಂಚೆ ಬಸಪ್ಪ ಅಜ್ಜಯ್ಯ ತೀರಿಕೊಂಡಿದ್ದರು. ಅವರಿಬ್ಬರ ಉತ್ತರಕ್ರಿಯಾದಿಗಳನ್ನು ಒಟ್ಟಿಗೆ ಮಾಡಿದ್ದರು.”

ಶ್ರೀ ವಾಟಿಗಾರು ಮಂಜಪ್ಪಗೌಡರ ಹೇಳಿಕೆ:

“ಸುಮಾರು ಸನ್ ೧೯೨೩-೨೪ನೆ ಇಸವಿ ಇರಬೇಕು. ನನಗೆ ಸರಿಯಾಗಿ ನೆನಪಿಲ್ಲ. ಆಗ ಕುಪ್ಪಳ್ಳಿಯವರಿಗೂ ನನಗೂ ತುಂಬಾ ಮನಸ್ತಾಪ. ಕೋರ್ಟು ವ್ಯಾಜ್ಯ ನಡೆಯುತ್ತಿತ್ತು. ದಿವಂಗತೆಯರಿಗೆ ಶ್ಲೇಷ್ಮಜ್ವರ ಆಗಿತ್ತು. ತೀರ್ಥಹಳ್ಳಿಯಲ್ಲಿ ಚಾರ್ಲಿ ಕಾಂಪೌಂಡರೆಂದಿದ್ದರು, ಅವರು ಔಷಧ ಕೊಡುತ್ತಿದ್ದರು. ಶ್ರಾವಣಮಾಸದಲ್ಲಿ ಸೀತಮ್ಮನವರು ತೀರಿಕೊಂಡರು.

ಶ್ರೀ ಹೊರಬೈಲು ಚಾ.ತಿಮ್ಮೈ ನಾಯ್ಕರ  ಹೇಳಿಕೆ:

“ಪುಟ್ಪಪ್ಪನವರ ತಾಯಿ ಅವರು ತೀರಿಕೊಳ್ಳುವ ಒಂದು ತಿಂಗಳ ಮುಂಚೆ ತಮ್ಮ ಹೆಣ್ಣುಮಕ್ಕಳೊಂದಿಗೆ ಆಲೆಮನೆ ನಮ್ಮ ಮನೆಗೆ ಸಹ ಬಂದು ಹೋಗಿದ್ದರು. ಹೋಗಿ ಒಂದು ತಿಂಗಳಲ್ಲಿ ಅಂದರೆ ಶ್ರಾವಣಮಾಸದಲ್ಲಿ ಸ್ವರ್ಗಸ್ಥರಾದರು”

ಶ್ರೀ ಕುಪ್ಪಳ್ಳಿ ಓಬಯ್ಯಗೌಡರ ಹೇಳಿಕೆ:

“ಪುಟ್ಟಪ್ಪನ ತಾಯಿ ತೀರಿಕೊಳ್ಳುವ ೧೫ದಿನದ ಮೊದಲು ನನ್ನ ತಂದೆ ದಿ.ಬಸಪ್ಪಗೌಡರು ತೀರಿಕೊಂಡಿದ್ದರು. ಅವರ ೧೧ನೆಯ ದಿನದ ಕಟ್ಟಳೆ ಮುಗಿದ ೪ನೆಯ ದಿನ ಪುಟ್ಟಪ್ಪನ ತಾಯಿ ತೀರಿಕೊಂಡಿದ್ದರು. ನಮ್ಮ ತಂದೆಯ ತಿಂಗಳ ತಿಥಿಗಾಗಿ ನನ್ನ ಅಣ್ಣ ಅಯ್ಯಪ್ಪಗೌಡರು ಕಂಚಿ ಜಾತಿಯ ಹೋತವನ್ನು ಕರೀದಿ ಮಾಡಿದ್ದರು. ಪುಟ್ಟಪ್ಪನ ತಾಯಿ ತೀರಿಕೊಂಡುದರಿಂದ ನಮ್ಮ ತಂದೆಯ ೨ನೆ ಕಟ್ಟಳೆ ನಿಂತುಹೋಯಿತು. ನಂತರ ಪುಟ್ಟಪ್ಪನ ತಾಯಿಯ ಮತ್ತು ನಮ್ಮ ತಂದೆಯವರ ೨ನೆಯ ಕಟ್ಟಳೆ ಒಟ್ಟಿಗೆ ನಡೆಯಿತು. ತೀರಿಕೊಂಡ ಸಮಯ ಶ್ರಾವಣಮಾಸ. ಶ್ಲೇಷ್ಮಜ್ವರ ಆಗಿತ್ತು. ಚಾರ್ಲಿ ಕಾಂಪೌಂಡರು ಔಷಧಿ ಕೊಡುತ್ತಿದ್ದರು.

ಅಲಿಗೆ ಪುಟ್ಟಯ್ಯನಾಯಕರು ಮುಂದುವರಿಯುತ್ತಾರೆ:

“ದಾನಮ್ಮ ಪುಟ್ಟಮ್ಮನವರೊಂದಿಗೆ ತಮ್ಮ ಮಾತೃಶ್ರೀ ಸೀತಮ್ಮನವರು ತಮ್ಮ ತವರು ಹಿರಿಕೊಡಿಗೆಗೆ ಬಂದವರು ಬೊಮ್ಮಲಪುರ ಜಾತ್ರೆಗೂ ಹೋಗಿ ಜಾತ್ರೆ ಪೂರೈಸಿಕೊಂಡು ಹಿರಿಕೊಡಿಗೆಗೆ ಬಂದು, ಹಾಗೆಯೇ ನಮ್ಮ ಮನೆಗೂ ಬಂದು, ನಮ್ಮ ಮನೆಯಿಂದ ಹಿರಿಕೊಡಿಗೆಗೆ ಹೋಗಿ, ಅಲ್ಲಿಂದ ಕುಪ್ಪಳಿಗೆ ಹೋಗಿದ್ದರು. ಸುಮಾರು ಜುಲೈ ತಿಂಗಳು ನಾನು ಕುಪ್ಪಳಿಗೆ ಹೋಗಿ ಬರುವಾಗ ತಮ್ಮ ಪೂಜ್ಯ ಮಾತೆಯವರು ಮೂಗಂಡುಗದ ಹಾಳಿ ಗದ್ದೆಯಲ್ಲಿ ನಾಟಿ ಮಾಡುತ್ತಿದ್ದರು. ಆಗ ನನ್ನನ್ನು ನೋಡಿದವರು ನನ್ನ ಕರೆದು ನಿಲ್ಲಿಸಿ ನಾನಿದ್ದಲ್ಲಿಗೆ ಬಂದು ‘ಹಿರಿಕೊಡಿಗೆಗೆ ಹೋಗಿದ್ದೆಯಾ?ಹಿರಿಕೊಡಿಗೆಯಲ್ಲಿ ಹ್ಯಾಗಿದ್ದಾರೆ ವರ್ತಮಾನವಿದಯೇ? ನಿಮ್ಮ ಮನೆಯಲ್ಲಿ ಅತ್ತೆಮ್ಮ ಹ್ಯಾಗಿದ್ದಾರೆ?(ಅಂದರೆ, ನನ್ನ ಅಜ್ಜಿ, ಅವರ ಸೋದರತ್ತೆ.) ಎಂದು ಮುಂತಾಗಿ ವಿಚಾರಿಸಿದ್ದರು. ಅಲ್ಲದೆ ಎರಡನೆಯ ಸಾರಿ ಕಾಯಾರ್ಥವಾಗಿ ನಾನು ಕುಪ್ಪಳಿಗೆ ಹೋದಾಗ ಅವರು ಕಾಹಿಲೆಯಾಗಿ ಮಲಗಿದ್ದರು. ಅಂದರೆ ಉಪ್ಪರಗಿ ಮೆಟ್ಟಿಲು ಹತ್ತಿರ ( ಅದರ ಹಿಂಬಾಗ) ಬಾಗಿಲಿರುವ ಕೋಣೆಯಲ್ಲಿ ಮಲಗಿದ್ದರು. ದಾನಮ್ಮ ಪುಟ್ಟಮ್ಮ ಸಹ ತಾಯಿಯ ಪಕ್ಕದಲ್ಲೆ ಇದ್ದರು. ನಾನು ಕೋಣೆಯೊಳಗೆ ಹೋಗಿ ಅವರನ್ನು ಮಾತನಾಡಿಸಿಕೊಂಡು ಬಂದಿದ್ದೆ. ಇಷ್ಟು ನನಗೆ ನೆನಪಿದೆ. ಸಂಗ್ರಹಿಸಿದ್ದನ್ನೂ ಬರೆದಿದ್ದೇನೆ”

ಟೆಲಿಗ್ರಾಂ ಬಂದಾಗ ನಾನು ಸಹನಿವಾಸಿಗಳೊಡನೆ ಮೈಸೂರಿನ ಸಂತೇಪೇಟೆಯ ಆನಂದಮಂದಿರ ಹೋಟೆಲಿನ ಉಪ್ಪರಿಗೆಯ ಕೊಠಡಿಯಲ್ಲಿ ಇಸ್ಪೀಟು ಆಡುತ್ತಾ ಕುಳಿತಿದ್ದೆ. ಇಸ್ಪೀಟು ಆಟ ಒಂದು ಉದ್ರೇಕಕರವಾದ ಸ್ವಾರಸ್ಯದ ಘಟ್ಟದಲ್ಲಿತ್ತು. ಟೆಲಿಗ್ರಾಂ ಒಡೆದು ಓದಿ ನೋಡಿದೆ. ಯಾವುದು ಆದರೇನು ಗತಿ ಎಂದು. ಭೀತನಾಗಿದ್ದೆನೋ ಅದು ನಡೆದುಹೋಗಿತ್ತು. ಯಾರ ಸ್ತನ್ಯಪಾನ ಲಾಲನೆ ಪಾಲನೆಗಳಿಂದ ನಾನೂ ಒಬ್ಬ ಮಾನವ ವ್ಯಕ್ತಿಯಾಗಿ ಬೆಳೆದುಬಂದಿದ್ದೆನೋ ಆ ಬ್ರಹ್ಮಮಯಾ ಮಾತೆ ದೇಹತ್ಯಾಗ ಮಾಡಿದ್ದರು! ಶೋಕಾಘಾತದಿಂದ ಚೇತನ ತತ್ತರಿಸಿತು, ಒಂದು ಕ್ಷಣ! ಒಡೆನೆಯ ನನ್ನ ಅದ್ವೈತಬುದ್ಧಿಯ ಅನೆಸ್ತಿಶಿಯಾ ಕೆಲಸ ಮಾಡಿತು. ಟೆಲಿಗ್ರಾಂಅನ್ನು ಜೇಬಿನಲ್ಲಿಟ್ಟುಕೊಂಡು, ಏನು ಎಂತ ಪ್ರಶ್ನಿಸಿದ ಮಿತ್ರರಿಗೆ ಏನೂ ವಿಶೇಷದ್ದಲ್ಲ ಎಂಬಂತೆ ಉತ್ತರಿಸಿ, ಮತ್ತೆ ಆಟದಲ್ಲಿ ತೊಡಗಿದೆ. ಏನೂ ನಡೆದಿಲ್ಲ ಎಂಬಂತೆ ಆಟ ಮುಂದುವರಿದು ಬಹಳ ಹೊತ್ತಿನ ಮೇಲೆ ಮುಗಿಯಿತು.

ಆಟ ಪೂರೈಸಿದ ಮೇಲೆ ತಂತಿಯ ದುರಂತವಾರ್ತೆಯನ್ನು ತಿಳಿದ ಸ್ನೇಹಿತರು ನನ್ನ ಅಮಾನುಷತಗೆ ದಿಗ್‌ಭ್ರಾಂತರಾದರು. ತಾಯಿಯ ಸಾವನ್ನು ಕೇಳಿ ದುಃಖಿಸಲಿಲ್ಲ! ಅಳಲಿಲ್ಲ, ಮುಖಭಾವದಲ್ಲಿ ವ್ಯಸನ ಸೂಚಿಸಲೂ ಇಲ್ಲ; ಮಾತ್ರವಲ್ಲ, ಏನೂ ಪ್ರಮಾದ ಸಂಭವಿಸಲಿಲ್ಲವೆಂಬಂತೆ ಇಸ್ಟೀಟು ಆಟವನ್ನು ಆಸಕ್ತಿಯಿಂದ ಮುಂದುವರಿಸಿದ್ದನ್ನು ಕಂಡು ಅವರಿಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ನಾನೇನು ಮನುಷ್ಯನೋ ಕಲ್ಲೋ ಎಂದುಕೊಂಡಿರಬೇಕು.

ನಾನು ಒಡೆನೆಯ ಊರಿಗೆ ರೈಲು ಹತ್ತುತ್ತೇನೆ ಎಂದು ತಿಳಿದಿದ್ದ ಮಿತ್ರರಿಗೆ ಎಂದಿನಂತೆ ಕಾಲೇಜಿಗೆ ಹೊರಡುತ್ತಿರುವುದನ್ನು ಕಂಡು ಕ್ರೋಧ ಸಂಮಿಶ್ರ ದಿಗ್‌ಭ್ರಾಂತಿಯೆ ಆಯಿತು. ನಾನು ಊರಿಗೆ ಹೊರಡಲೆಬೇಕು ಎಂದು ಆಪ್ತಮಿತ್ರರು ಅನುರೋಧಿಸಿದರು. ‘ಆಗುವುದೆಲ್ಲ ಆಗಿಹೋಗಿರುತ್ತದೆ; ನಾನು ಹೋಗಿ ಏನು ಪ್ರಯೋಜನ?’ ಎಂದೆ.
‘ನಿಮ್ಮ ತಂಗಿಯಂದಿರನ್ನಾದರೂ ಸಂತೈಸಲು ಹೋಗಿ ಬನ್ನಿ.’ ಎಂದರು. ‘ಮನೆಯಲ್ಲಿ ಹಿರಿಯರು ಕಿರಿಯರೂ ಅನೇಕರಿದ್ದಾರೆ. ಅಲ್ಲದೇ ಆತ್ಮೀಯ ಬಂಧುಬಳಗದವರೂ ಬಂದಿರುತ್ತಾರೆ. ಅವರಗಿಂತ ಹೆಚ್ಚಾಗಿ ನಾನೇನು ಸಂತೈಸಲಿ?’ ಎಂದೆ. ಹೀಗೆ ಒಂದೆರಡು ಮೂರು ದಿನಗಳೆ ಕಳೆದವು. ನಾನು ಆ ಸಮಯದ ದಿನಚರಿ ಬರದಿಲ್ಲವಾದ್ದರಿಂದ ನನ್ನ ಆತ್ಮದಲ್ಲಿ ನಡೆಯುತ್ತಿದ್ದ ಆಂದೋಳನವನ್ನು ಚಿತ್ರಿಸಲಾರೆ. ಆದರೂ ಇಷ್ಟನ್ನು ಹೇಳಬಹುದೆಂದು ತೋರುತ್ತದೆ: ನನ್ನ ತಾಯಿ ಸತ್ತಿಲ್ಲವೆಂದೇ ನನ್ನ ದೃಢ ನಂಬುಗೆಯಾಗಿತ್ತು, ಅವರ ದೇಹ ಭಸ್ಮೀಭೂತವಾಗಿದ್ದರೂ ಅವರ ಆತ್ಮ ಅಮೃತವಾಗಿ ನನ್ನ ತಂದೆಯ ಆತ್ಮದೊಡನೆ ಇರುತ್ತಾ ಮಕ್ಕಳ ಕ್ಷೇಮಕ್ಕಾಗಿ ಆ ಲೋಕದಿಂದ ಮಾಡಬಹುದಾದುದನ್ನು ಮಾಡುತ್ತಿರುತ್ತದೆ ಎಂದು. ತಾರೀಖು ೨೧-೮- ೧೯೨೪ರಲ್ಲಿ ಬರೆದು ಒಂದು ಕವನ ಅದೃಷ್ಟವಶಾತ್‌ ಹಸ್ತಪ್ರತಿಯಲ್ಲಿ ಸಿಕ್ಕಿದೆ. ಅದರ ಶೀರ್ಷಿಕೆ ‘ಅನಾಥ ಬಾಲ’ ಎಂದು. ಅದರ ಶೀರ್ಷಿಕೆಯ ಕೆಳಗೆ ಚಿಕ್ಕ ಅಕ್ಷರಗಳಲ್ಲಿ ಕಂಸದೊಳಗೆ ‘ನನ್ನ ಜನನಿಯ ಮರಣವಾರ್ತೆಯನ್ನು ಕೇಳಿ ಬರೆದುದು’ ಎಂದಿದೆ. ಅದನ್ನಿಲ್ಲಿ ಉದಾಹರಿಸಿದರೆ ಆಗಿನ ನನ್ನ ಮನಸ್ಥಿತಿ ಸ್ವಲ್ಪ ಮಟ್ಟಿಗೆ ಗೊತ್ತಾಗಬಹುದು.

ಅನಾಥ ಬಾಲ
(ನನ್ನ ಜನನಿಯ ಮರಣವಾರ್ತೆಯನ್ನು ಕೇಳಿ ಬರೆದುದು)

ಎಲೆ ಜನನಿ, ಎಲ್ಲಿರುವೆ?
ಬಿಳಿದಾದ ಮಲ್ಲಿಗೆಯು
ಪೊಳೆಯುತಿಹ ಮರದಲ್ಲಿ ನಗೆ ಬೀರುತ
ಅಲರ ರೂಪವ ತಾಳಿ
ತಳಿರ ಸೊಬಗನು ಹೊಂದಿ
ಇಳೆಯ ನಾಕದೊಳು ನೀಂ ನೆಲೆಸಿರ್ಪೆಯಾ?

ಗಗನದೊಳು ತೇಲುತಿಹ
ಮುಗಿಲಾಗಿ ನೀ ಬಂದು
ಮಗುವಾದ ನನ್ನ ನೀ ಮುದ್ದಿಸುವೆಯಾ?
ಹಗರಣವ ಮಾಡದಾಂ
ಹಗಲೆಲ್ಲ ಅಳುತಿರಲು
‘ಮಗುವೆ ಬಾ’ ಎಂದು ನೀ ಚುಂಬಿಸುವೆಯಾ?

ಗಿರಿಗಳಿಂದಿಳಿದು ಬಹ
ಮೊರೆಯುತಿಹ ತೊರೆಗಳೊಳು
ಹರುಷದಿಂದಲೆಯಾಗಿ ನೀನಿರುವೆಯಾ?
ಮರುಗುತಲಿ ದಡಕೆ ನಾ
ಬರಲು ನೀಂ ತುಂತುರಿನ
ಪರಿಯಿಂದ ಕಂದನಂ ಚುಂಬಿಸುವೆಯಾ?

ಜೇನುಹುಳು ಝೇಂಕರಿಪ
ಕಾನನದ ಹೃದಯದೊಳು
ನಾನೊಬ್ಬನೇ ಚಿಂತಿಸುತ ಜನನಿಯ
ಮೌನದಿಂದೈತರಲು
‘ಏನು ಮಗನೆ’ ಎಂದು
ನೀನಡವಿಯಿಂ ಜನನಿ ದನಿಗೈಯುವೆ!

ಸೊಂಪಾಗಿ ಬೆಳೆದಿರುವ
ಸಂಪಗೆಯ ಮರದಲ್ಲಿ
ಇಂಪಾಗಿ ಗಾನವಂ ನೀ ಹಾಡುವೆ
ತಂಪಾದ ಸಂಜೆಯೊಳು
ಸೋಂಪಾದ ತೋಟದೊಳು
ಇಂಪಾದ ಗಾನದಿಂ ನೀ ಕರೆಯುವೆ!

ಸಂಜೆಯೊಳು ಗಿರಗಳಲಿ
ರಂಜಿಸುವ ಶಿಖರಗಳ
ಮಂಜು ಮುಖವನು ಸೇರಿ ಕುಳುತಿರಲು ನಾ
ಕಂಜಸಖನಿಳಿಯುತಿಹ
ಮಂಜು ಕವಿದದ್ರಿಯಿಂ
‘ದಂಜ ಬೇಡೆ’ ನುತೈತರುವೆ ಜನನಿಯೆ !

ಉನ್ನತಾದ್ರಿಯನೇರಿ
ಮುನ್ನಿನಾ ದಿನಗಳನು
ಚಿನ್ತಿಸುತ, ಜನನಿಯೇ, ಕುಳಿತಿರಲು ನಾ
‘ಇನ್ನೇಕೆ ಅಳುತಿರುವೆ
ನಿನ್ನಲ್ಲಿ ನಾನಿಹೆನು!’
ಎನ್ನುತೈತಂದು ನೀಂ ಸಂತೈಸುವೆ!

ಎಲೆ ಜನನಿ, ಮುಂಜಾನೆ
ಅಲರ ಕೊಯ್ಯಲು ಬರಲು
ಎಲರಾಗಿ ನೀ ಬಂದು ಸಂತೈಸುವೆ!
ಎಳೆಯ ವೇಣಿಯ ಸವರಿ
‘ಎಲೆ ಮಗುವೆ, ಇಲ್ಲಿಹೆನು;
ಅಳಬೇಡ ನೀ’ ಎಂದು ಮುದ್ದಾಡುವೆ!

ಔತಣದ ಕಾಲದೊಳು
ಐತರುವ ಸ್ನೇಹಿತರು
ಮಾತೆಯರ ಮುದ್ದಿಪದನಾಂ ನೋಡಿರೆ
ಪ್ರೀತಿಯಿಂ ನೀನಲ್ಲಿ
ಗೈತಂದು ಚುಂಬಿಸುತ
ಮಾತಿನಿಂ ಮುದ್ದಿಡುವೆ, ಎಲೆ ಜನನಿಯೆ!

ಮುಗಿಲು ಛೇದಿಸಿ ಬರುವ
ಗಗನ ಕಿರಣದಿ ಬಂದು
‘ಮಗುವೆ’ ನಾನಿಹೆನು ನೀ ಬೆದರಬೇಡೈ!
ನಗುತ ನೀ ನಲಿದಾಡು!
ಖಗಪತಿ ಗಮನನಿಹನು,
ಮಗುವೆ.’ ಎಂದೆನುತ ನೀ ಮುದ್ದಾಡುವೆ!
೨೧-೮-೧೯೨೪

ದಿನಚರಿ ನಿಂತಿರುವ ಆಗಸ್ಟ್‌ ೧೦ನೆಯ ತಾರೀಖಿಗೂ ಈ ಮೇಲಣ ‘ಅನಾಥಬಾಲ’ ಕವನ ರಚಿತವಾಗಿರುವ ಆಗಸ್ಟ್‌ ೨೧ ನೆಯ ತಾರೀಖಿಗೂ ನಡುವೆ ಸುಮಾರು ೧೦-೧೫ ಕವನಗಳು ರಚಿತವಾಗಿವೆ. ಅವುಗಳ ವಸ್ತು ವಿಷಯಗಳು ಬೇರೆಬೇರೆಯಾದರೂ ಒಂದು ಆಧ್ಯಾತ್ಮಿಕವೂ ಚಿಂತನಶೀಲವೂ ಆದ ಭಾವುಕತೆ ಸರ್ವತ್ರ ವ್ಯಾಪಕವಾಗಿರುವುದನ್ನು ನೋಡುತ್ತೇವೆ: ಪಿಕಲೋಲ, ಮುಂಜಾನೆ, ನನ್ನೊಳಿಹುದೀ ಗಗನ ನನ್ನೊಳಿಹುದು, ಹಾಡುವ ಹಕ್ಕಿ, ಬಾನಿನಿಂದ ನೀನು ಬಾರೊ, ಹಳ್ಳಿ, ಗುಪ್ತಧ್ವನಿಗಳು, ಶ್ರೀರಾಮಕೃಷ್ಣ ಪರಮಹಂಸ (ಸಾನೆಟ್‌) ಭರತಖಂಡ (ಸಾನೆಟ್‌) ಕೋಕಿಲ ತತ್ತ್ವ, ನಿದ್ದೆ (ಸಾನೆಟ್‌), ನದೀ ತೀರ (ಸಾನೆಟ್‌), ಸಂಜೆ, ಕವಿ – ಇತ್ಯಾದಿ.

ತರುವಾಯ ೨೨-೮-೧೯೨೪ ರಲ್ಲಿ ಅಂದರೆ ‘ಅನಾಥಬಾಲ’ ಬರೆದ ಮರುದಿನ ಒಂದು ಕವನ ರಚಿತವಾಗಿದೆ. ಅದಕ್ಕೆ ಶೀರ್ಷಿಕೆ ಕೊಟ್ಟಿಲ್ಲ. ಆ ಕವನದ ಸಂಖ್ಯೆ, ನಂ. ೪೦ ರ ಪಕ್ಕದಲ್ಲಿ ಬ್ರಾಕೆಟ್ಟಿನಲ್ಲಿ ಸಣ್ಣದಾಗಿ ಒಂದು ಇಂಗ್ಲಿಷ್‌ ಅಕ್ಷರ ‘R’ ಎಂದು ಬರೆದಿದೆ. ಅದರ ಸಂಕೇತಾರ್ಥವೇನೋ ತಿಳಿಯದು. ಆ ಕವನದ ಎರಡು ಪದ್ಯಗಳು ತಾಯಿಯನ್ನು ಸಂಭೋದಿಸಿಯೆ ಪ್ರಾರಂಭವಾಗುತ್ತವೆ. ಆ ಸಂಭೋಧನೆ ನನ್ನನ್ನು ಹೆತ್ತ ತಾಯಿಗೋ ಅಥವಾ ಜಗಜ್ಜನನಿಗೋ ಅಥವಾ ನನ್ನ ಆಗಿನ ಗಣಿತಾದ್ವೈತ ಮನೋಭಾವದಂತೆ ಹೆತ್ತಮ್ಮ ಜಗದಮ್ಮರಿಗೆ ಅಭೇದ ಕಲ್ಪಿಸಿದ ಪರಿಣಾಮದ್ದೊ ಗೊತ್ತಾಗುವುದಿಲ್ಲ. ಬಹುಶಃ ಹೆತ್ತಮ್ಮ ಜಗದಮ್ಮರ ಅಭೇದ ಭಾವಕ್ಕೇ ಅನ್ವಯವಾಗುತ್ತದೆ ಎಂದು ತೋರುತ್ತದೆ:

ಎಲೆ ಜನನಿ, ನಿನ್ನ ನೋಡುವ ಸಕಲ ತರುಗಳಲಿ,
ನಿನ್ನ ನೋಡುವೆ ನೀಲ ಗಗನದಲ್ಲಿ;
ನಿನ್ನ ನೋಡುವೆ ನದಿಯ ಕಮನೀಯ ದಡಗಳಲಿ,
ಹಸುರಾದ ಭಾಗಿಸಿದ ಹೊಲಗಳಲ್ಲಿ.
ನಿನ್ನ ನೋಡುವೆನೆನ್ನಯಾತ್ಮದಲ್ಲಿ.
ನಿನ್ನ ನೋಡುವೆನಖಿಲ ಬ್ರಹ್ಮಾಂಡ ಕೋಟಿಯಲ್ಲಿ;
ಮನ ನಿಲುಕದಸಮವಹ ಭೀಕರದ ವಿಶ್ವದಲ್ಲಿ!

ಓ ದೇವಿ, ನಿನ್ನ ನೋಡುವೆನೆನ್ನ ಸೌಖ್ಯದಲ್ಲಿ,
ನಿನ್ನ ನೋಡುವೆನೆನ್ನ ಕಷ್ಟದಲ್ಲಿ;
ಕವಿತೆಯಲಿ, ವಚನದಲಿ, ವಿಜಯಾಪಜಯಗಳಲಿ,
ನಿನ್ನ ನೋಡುವೆನಖಿಲ ಬ್ರಹ್ಮಾಂಡ ಸೃಷ್ಟಿಯಲಿ;
ಮನ ನಿಲುಕದಸಮವಹ ಭೀಕರದ ವಿಶ್ವದಲ್ಲಿ!
೨೨-೮-೧೯೨೪

ತಾಯಿಯ ಮರಣವಾರ್ತೆಯನ್ನು ಕೇಳಿದ ನನ್ನ ಚೇತನ ತನ್ನ ದುಃಖವನ್ನು ತಾತ್ವಿಕ ಕಠೋರತೆಯಿಂದ ಮರೆ ಮಾಡಿಕೊಂಡು ಅದರಿಂದ ಅತೀತವಾಗಲು ಪ್ರಯತ್ತಿಸುತ್ತಿತ್ತು. ನನ್ನ ಆಪ್ತಮಿತ್ರರು ಹನ್ನೊಂದನೆಯ ದಿನದ ಕಟ್ಟಳೆಗಾದರೂ ಹಿರಿಯ ಒಬ್ಬನೆ ಗಂಡು ಮಗನಾದ ನಾನು ಹೋಗಿಯೇತೀರಬೇಕೆಂದು ಒತ್ತಾಯಿಸುತ್ತಲೆ ಇದ್ದರು. ನನಗೆ ತಿಥಿಗತಿ ಮೊದಲಾದುವಗಳಲ್ಲಿ ನಂಬಿಕೆ ಇರಲಿಲ್ಲ. ಗತಿಸಿದ ಜೀವಾತ್ಮಕ್ಕೆ ನಾವು ಕೊಡುವ ತಿಲೋದಕ ತಲಪುವುದೂ ಇಲ್ಲ, ಅದರಿಂದ ಆ ಜೀವಕ್ಕೆ ಪ್ರಯೋಜನವೂ ಇಲ್ಲ. ಅದರ ಬದಲು ಆ ಜೀವದ ಪ್ರಶಾಂತ ಪ್ರಯಾಣಕ್ಕೂ ಸದ್ಗತಿಗೂ ಭಗವಂತನನ್ನು ಭಕ್ತಿ ಶ್ರದ್ಧೆಗಳಿಂದ ಪ್ರಾರ್ಥಿಸುವುದೊಂದೇ ಬುದ್ಧಿ ಸಮ್ಮತವಾದ ಮಾರ್ಗವೆಂಬುದು ನನ್ನದಾಗಿತ್ತು. ಹೀಗಾಗಿ ಒಂದೆರಡು ದಿನ ಊರಿಗೆ ಹೋಗುವುದೇ ಬಿಡುವುದೇ ಎಂಬ ಒಳ -ತೋಟಿಯಲ್ಲಿಯೇ ಕಳೆಯಿತು. ಕಡೆಗೂ ನನ್ನ ಸ್ನೇಹಿತರು ನನ್ನನ್ನು ಒಪ್ಪಿಸಿದರು. ನಾನು ಊರಿಗೆ ರೈಲು ಹತ್ತಿದೆ.

ನಾನು ಮನೆ ತಲುಪುವ ಹೊತ್ತಿಗೆ ದಹನ ಸಂಸ್ಕಾರಿಗಳೆಲ್ಲ ಮುಗಿದು ಹನ್ನೊಂದನೆಯ ದಿನ ಉತ್ತರಕ್ರಿಯೆಗೆ ಸಿದ್ಧತೆ ನಡೆಯುತ್ತಿತ್ತು. ಮನೆಯಲ್ಲಿ ಹತ್ತಿರದ ನಂಟರೂ ಮಕ್ಕಳೂ ಎಲ್ಲ ನೆರೆದಿದ್ದರು. ನನ್ನ ತಂಗಿಯರಿಬ್ಬರೂ ಅತ್ತು ಅತ್ತು ತಮ್ಮ ಅಣ್ಣಯ್ಯನ ಬರುವಿಗಾಗಿ ಪರಿತಪಿಸುತ್ತಿದ್ದರು. ಆದರೆ ಅವರ ‘ಅಣ್ಣಯ್ಯ’ ಮಾತ್ರ ಅವರು ಊಹಿಸಿದ ಮತ್ತು ನಿರೀಕ್ಷಿಸಿದ
‘ಮನುಷ್ಯ’ನಾಗಿರಲಿಲ್ಲ. ತಾನೂ ಅತ್ತು, ಅಳುತ್ತಿರುವ ತಮ್ಮನ್ನೂ ಸ್ವಾಂತನ ವಚನಗಳಿಂದಲೂ ಅಕ್ಕರೆಯ ಅಮೃತಸೇಚನೆಯಿಂದಲೂ ಸಮಾಧಾನಗೊಳಿಸುತ್ತಾನೆ ಎಂದು ಭಾವಿಸಿದ್ದ ಅವರಿಬ್ಬರಿಗೂ ನನ್ನ ಕಠೋರತೆ ಕಂಗೆಡಿಸುವಂತಾಯಿತು. ಒಟ್ಟು ಕುಟುಂಬದಲ್ಲಿ ಬೆಳೆದ ರೀತಿಯ ದೆಸೆಯಿಂದಲೋ ಅಥವಾ ನನ್ನ ಚೇತನದ ವೈಯಕ್ತಿಕ ಸಂಸ್ಕಾರದ ಕಾರಣವಾಗಿಯೋ ಪ್ರತ್ಯೇಕವಾಗಿ ಏಕಾಂತದಲ್ಲಿ ನನ್ನ ತಾಯಿಯೊಡನಾಗಲಿ ತಂಗಿಯರೊಡನೆಯಾಗಲಿ ಅಲಾಯಿದ ಮಾತುಕತೆ ನಡೆಸುವ ಅಭ್ಯಾಸವೆ ನನಗೆ ಬಂದಿರಲಿಲ್ಲ. ಏನಿದ್ದರೂ ಎಲ್ಲ ಗುಂಪು ಗುಂಪಿನಲ್ಲಿಯೆ ಎಲ್ಲರೊಡನೆಯ ಎಲ್ಲರಿರುವಾಗಲೆ ನಡೆಯುವುದು ಸ್ವಾಭವಿಕವಾಗಿತ್ತು. ಹೀಗಾಗಿ ನಾನು ಅವರಿಬ್ಬರನ್ನೂ ಬೇರೆ ಕರೆದು ಮಾತಾಡಿಸಲಿಲ್ಲ. ಅವ್ವ ಹೇಗೆ ತೀರಿಕೊಂಡರು? ಸಾಯುವ ಮುನ್ನ ಏನಾದರೂ ಹೇಳದರೇ? ದೂರದಲ್ಲಿದ್ದ ನನ್ನ ಪ್ರಸ್ತಾಪಮಾಡಿದರೆ? ಅಥವಾ ನನಗೆ ಹೇಳಲು ಏನನ್ನಾದರೂ ಹೇಳಿದರೇ? ತುಂಬಾ ಗೋಳಾಡಿದರೇ? ಇಂತಹ ನೂರಾರು ಪ್ರಶ್ನೆಗಳನ್ನು ಕೇಳಿ ತಿಳಿಯಬಹುದಿತ್ತು. ಆದರೆ ಏನೊಂದನ್ನೂ ಕೇಳಲಿಲ್ಲ. ಅಷ್ಟೇ ಅಲ್ಲ. ಅವರಿಬ್ಬರೂ ಏಕಾಂತದ, ತಕ್ಕಮಟ್ಟಿನ ಏಕಾಂತದ, (ಏಕೆಂದರೆ ಒಟ್ಟು ಕುಟುಂಬದ ರೀತಿಯಲ್ಲಿ ಪೂರ್ಣ ಏಕಾಂತವೆಂದರೆ ಗಂಡ ಹೆಂಡಿರ ನಡುವೆ ರಾತ್ರಿ ಕಾಲದಲ್ಲಿ ಮಾತ್ರ ಸಾಧ್ಯ! ಅಥವಾ ಏನಾದರೂ ಒಳ ಸಂಚು ಪಿತೂರಿ ನಡೆಸುವವರಿಗೆ ಮಾತ್ರ ಸಾಧ್ಯ!) ಸಮಯ ಸಾಧಿಸಿ, ನಾನು ಅಡುಗೆ ಮನೆಯಲ್ಲಿ ಕಾಫಿ ತೆಗೆದುಕೊಳ್ಳುತ್ತಿದ್ದಾಗ ಹತ್ತಿರ ಬಂದು ನಿಂತು ತುಂಬ ದುಃಖಭಾವದಿಂದ ನನ್ನ ಮೇಲಣ ಅಕ್ಕರೆ ತುಂಬಿದ ದೃಷ್ಟಿ ಬೀರಿ ಕಣ್ಣೀರು ಮಿಡಿದಾಗ, ನಾನು ಅಲ್ಲಿದ್ದ ಕೆಲವು ಅಮ್ಮಂದಿರ ಮುಂದೆ ನಮಗೊದಗಿದ ಸಂಕಟಕ್ಕಾಗಿ ಬಹಿರಂಗ ದುಃಖಪ್ರದರ್ಶನ ಮಾಡಿ ನಮ್ಮ ಅನಾಥ ದೈನ್ಯ ಸ್ಥಿತಿಯನ್ನು ಎಲ್ಲರ ಮುಂದೆಯೂ ತೋರಿಸುವಂತೆ ಮಾಡುತ್ತಿದ್ದಾರಲ್ಲಾ ಎಂಬ ಸ್ವಾಭಿಮಾನ ಭಂಗಕ್ಕೆ ತುಸು ಮುನಿದು ಅವರಿಬ್ಬರನ್ನೂ ಅಳುತ್ತಿದ್ದುದಕ್ಕಾಗಿ ‘ಅಂದು ಬಿಟ್ಟೆ’. ಅದನ್ನು ನೆನೆದರೆ ನನಗೆ ಈಗಲೂ ನಾಚಿಕೆಯಾಗುತ್ತದೆ; ನನ್ನ ಮೇಲೆ ತುಂಬ ಸಿಟ್ಟು ಬರುತ್ತದೆ; ಎಂತಹ ವ್ಯವಹಾರ ಜ್ಞಾನ ಲವಲೇಶವೂ ಇಲ್ಲದ ಅವಿವೇಕಿಯಾಗಿದ್ದೆ ಎನ್ನಿಸುತ್ತದೆ; ಎಷ್ಟು ನೊಂದುಕೊಂಡುವೊ ಆ ತಂಗಿಯರಿಬ್ಬರ ಕೋಮಲ ಹೃದಯಗಳು- ತಾಯಿಯ ಸಾವಿನ ದುಃಖದಲ್ಲಿ ಬೆಂದು, ಅಣ್ಣನ ಸಹಾನುಭೂತಿಗೂ ಅನುಕಂಪಕ್ಕೂ ಅಕ್ಕರೆಗೂ ಹಾತೊರೆಯುತ್ತಿದ್ದ ಆ ಸುಮಕೋಮಲ ಹೃದಯಗಳು- ಎಂದು ಹೃದಯ ಮಮ್ಮಲ ಮರುಗುವಂತಾಗುತ್ತದೆ.

ಆದರೆ ನನ್ನ ಸ್ವಾಭಿಮಾನದ ಬಹಿರಂಗ ಹಾಗೆ ಕಠೋರವಾಗಿ ಕಾಣುತ್ತಿದ್ದರೂ ಅಂತರಂಗದಲ್ಲಿ ನಡೆಯುತ್ತಿದ್ದ ವ್ಯಾಪಾರವೆ ಬೇರೆಯಾಗಿತ್ತು. ಆ ಕುದಿಹ, ಆ ಪಶ್ಚಾತ್ತಾಪ ಏಳು ವರ್ಷಗಳ ತರುವಾಯ ೩೦-೧೦-೧೯೩೧ ರಲ್ಲಿ ನಾನು ಬರೆದ
‘ಜನನಿಗೆ’ ಎಂಬ ಒಂದು ಕವನದಲ್ಲಿ ಪ್ರಕಟಗೊಂಡಿದೆ. ಆಗ ನಾನು ಆಶ್ರಮನಿವಾಸಿಯಾಗಿ ಐದು ವರ್ಷಗಳಾಗಿತ್ತು. ಎಂ.ಎ.ತೇರ್ಗಡೆಯಾಗಿ ಎರಡು ವರ್ಷ ಮುಗಿದಿತ್ತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿಯೂ ಎರಡು ವರ್ಷ ಕಳೆದಿತ್ತು. ಶ್ರೀರಾಮಕೃಷ್ಣಾಶ್ರಮ ತನ್ನ ಈಗಿರುವ ಶಾಶ್ವತ ಸ್ಥಳಕ್ಕೆ ತನ್ನ ಸ್ವಂತ ಕಟ್ಟಡಕ್ಕೆ ಬಂದಿತ್ತು. ನಾನು ದೀಕ್ಷೆ ತೆಗೆದುಕೊಂಡು ಎರಡು ವರ್ಷದ ಮೇಲಾಗಿತ್ತು. ನನ್ನ ತಂಗಿಯರಿಬ್ಬರಿಗೂ ಮದುವೆಯಾಗಿ ಇಬ್ಬರೂ ವಿಷಾದಕರ ಸನ್ನಿವೇಶಗಳಲ್ಲಿ ಅವ್ವನನ್ನೆ ಹಿಂಬಾಲಿಸಿಯೂ ಆಗಿತ್ತು; ನನ್ನ ಸಾಹಿತ್ಯ ಸೃಷ್ಟಿಯೂ – ನಾಟಕ, ಭಾವಗೀತೆ, ಸಣ್ಣಕತೆ – ತಕ್ಕಮಟ್ಟಿಗೆ ಮುಂದುವರಿದಿತ್ತು. ಒಂದು ಸಾಯಂಕಾಲ ಒಂಟಿಕೊಪ್ಪಲಿನ ಆಶ್ರಮದಿಂದ ನಾನೊಬ್ಬನೆ ಹೊರಟು ತಿರುಗಾಡುತ್ತಾ ಕುಕ್ಕನಹಳ್ಳಿ ಕೆರೆಯ ಪೂರ್ವದ ಬಯಲಿನಲ್ಲಿ ಕೆರೆಯಂಚಿನ ಹಸುರಿನ ಮೇಲೆ ಕುಳಿತುಕೊಂಡೆ. ಸಂಜೆಯ ರವಿ ಮುಳುಗಿ ಪಡುವಣ ಬಾನು ಕೆಂಪಾಗಿತ್ತು. ಬೈಗುಗತ್ತಲೆ ಒಯ್ಯೊಯ್ಯನೆ ಇಳಿಯುತ್ತಿತ್ತು. ಆಗ ನೆನಪು ನನ್ನ ಬಾಳಿನ ರಸ್ತೆಯಲ್ಲಿ ನಡೆದಾಡುತ್ತಾ ನನ್ನ ತಾಯಿ ತಂಗಿಯರು ಮತ್ತು ತಂದೆಯವರತ್ತ ಹೊರಳಿತು. ಹಿಂದಿನದನ್ನೆಲ್ಲ ನೆನೆದು ಕಣ್ಣೀರು ಕರೆದೆ. ಅಲ್ಲಿ ಯಾರೂ ಇರಲಿಲ್ಲವಾದರಿಂದ ಸ್ವಾಭಿಮಾನಕ್ಕೆ ಭಂಗ ಬರುವಂತಿರಲಿಲ್ಲ.

ಜನನಿಗೆ

ಜನನಿಯೇ, ವರುಷವೇಳರ ಹಿಂದೆ ನೀನಗಲಿ
ಹೋದೆ; ಕಣ್ಮರೆಯಾದೆ. ನಾನಂದು ಸುರಿಯದಾ
ಕಂಬನಿಗಳೆಲ್ಲವೂ ಹಿರಿಯ ಹೊಳೆಯಾಗಿಂದು
ನನ್ನೆದೆಯ ನೊಂದ ದಡಗಳ ಕೊಚ್ಚಿ ಹರಿಯುತಿದೆ.
ನೀನು ಮಡಿದಂದು ನಾನದ್ವೈತ ದರ್ಶನದ
ಮದಿರೆಯಲಿ ಮುಳುಗಿದ್ದೆ: ನನ್ನ ಕಿರುಬಾಳಿನಲಿ
ನನ್ನದಲ್ಲದ ಹಿರಿಯ ಶಕ್ತಿಯೊಂದಿರುತಿತ್ತು.
ವಿಶ್ವವೆಲ್ಲವು ಮಾಯೆ; ಜೀವರೆಂಬುವರೆಲ್ಲ
ಸುಳ್ಳಿನಲಿ ಕೆತ್ತಿರುವ ಗುಳ್ಳೆಗಳು; ಶಿವ ನಾನು;
ಎಂಬ ತತ್ತ್ವದ ಮತ್ತಿನಲಿ ನೀನು, ಯಾರೆದೆಯ
ಹಾಲುಂಡು ಬದುಕಿದೆನೊ ಆ ನೀನು, ಮಡಿದುದನು
ಸುಳ್ಳೆಂದು ಬಗೆದ. ನನ್ನ ತಂಗಿಯರು ಬಂದು
ನನ್ನೆದುರು ನಿಂತು ಕಂಬನಿಗರೆದು ಗೋಳಿಡಲು
ಅವರನಾಲಿಂಗಿಸುತೆ ಸಂತವಿಡುವುದನುಳಿದು
ಗದರಿದೆನು, ಕರುಣೆಯಿಲ್ಲದ ಕಠಿಣವಾಣಿಯಲಿ.
ಶಿವ ಶಿವಾ, ಅವರಿರ್ವರೂ ನನ್ನ ಬೆನ್ನುಗಡೆ
ಬಂದು, ನನ್ನಯ ಕಣ್ಣ ಮುಂಗಡೆಯ ತೆರಳಿದರು!
ನಿಡುಸುಯ್ದು ಪ್ರಾರ್ಥಿಸಿದೆ; ಕಂಬನಿಗೆರೆಯಲಿಲ್ಲ.
ಅದರಿಂದೆ ನಾ ಜಗದ ರಂಗದಲಿ ಏಕಾಂಗಿ:
ತಂದೆ ತಾಯಿಗಳಿಲ್ಲ; ಅಣ್ಣನಿರಲೇ ಇಲ್ಲ;
ಇದ್ದ ತಂಗಿಯರಿಲ್ಲ: ಸಾಧು ಸಂಗದೊಳಿಂದು

ಏಕಾಂಗಿ: ಆಗಿಹೆನು ನಿಜವಾಗಿ ಅದ್ವೈತಿ!
ಇಂದು ಈ ಬೈಗಿನಲಿ, ಈ ಬಯಲು ಹಸುರಿನಲಿ,
ಹುಟ್ಟಿದೂರಿಗೆ ದೂರದೀ ರಾಜಧಾನಿಯಲಿ,
ನೀರವದ ನಿರ್ಜನದ ಗಂಭೀರ ಶಾಂತಿಯಲಿ,
ಚಿತ್ತದಲಿ ಮರಳಿ ಮೂಡಿದ ಕಳೆದ ಕಾದಾ
ಚಿತ್ರಭಿತ್ತಿಯಲಿ ಹೊಳೆಹೊಳೆದು ಮೈದೋರುತಿದೆ
ಮತ್ತೆ ನಿನ್ನಾ ಮೂರ್ತೀ ಮೊಗದಲ್ಲಿ ಮುಗಳುನಗೆ;
ಕಣ್ಗಳಲಿ ಚಿರಶಾಂತಿ; ಕೈಯೆತ್ತಿ ಹರಸುತಿಹೆ
ನಿನ್ನ ಮುದ್ದಿನ ಶಿಶುವ; ಹರಸು ಓ ಹರಸಮ್ಮಾ,
ನೀನೆನಗೆ ಶುಭದ ಆಶೀರ್ವಾದ ಮೂರ್ತಿಯೌ:
ನಿನ್ನಡಿಗೆ ಇದೊ ಮಣಿದು ಬೀಳುವೆನ್ತ್ಯು ನನ್ನೊಳಿಯ
ಶಕ್ತಿಯುಕ್ತಿಗಳೆಲ್ಲ ನಿನ್ನ ಪದತೀರ್ಥದಲಿ
ಭಕ್ತಿ ಬಿಂದುಗಳಾಗಿ ಸಂಗಮಿಸಲ್ತ್ಯಿ.
೩೦-೧೦-೧೯೩೧

ಹನ್ನೊಂದನೆಯ ದಿನದ ತಿಥಿಗೆ ಅನೇಕ ಹಿರಿಯ ಕಿರಿಯ ಬಂಧುಬಾಂಧವರು ಬಂದಿದ್ದರು. ಆದರೆ ನನಗೆ ಮುಖ್ಯರಾಗಿದ್ದವರು ನನ್ನಂತಹ ತರುಣ ಮತ್ತು ಯುವಕ ವರ್ಗದವರು: ದೇವಂಗಿ ವೆಂಕಟಯ್ಯ, ಹಿರಿಯಣ್ಣ, ಅಲಿಗೆ ಪುಟ್ಟಯ್ಯನಾಯಕರು ಮೊದಲಾದವರು. ಅವರೊಡನೆ ನಾನು ಅಂದಿನ ರಾಜಕೀಯದ ಜೊತೆಗೆ ಭಗವದ್ಗೀತೆ ಉಪನಿಷಿತ್ತು ಸ್ವಾಮಿ ವಿವೇಕಾನಂದರು ರವೀಂದ್ರನಾಥ ಠಾಕೂರರು ಮಹಾತ್ಮಗಾಂಧಿಯವರು ಇತ್ಯಾದಿ ವಿಷಯಗಳನ್ನು ಕುರಿತು ಮಾತನಾಡುವುದರಲ್ಲಿಯೂ ಮತ್ತು ಕನ್ನಡ ಕಾವ್ಯಗಳ ಸ್ವಾರಸ್ಯ ಭಾಗಗಳನ್ನು ಓದುವುದರಲ್ಲಿಯೂ ತೊಡಗಿರುತ್ತದೆ, ಉಪ್ಪರಿಗೆಯ ಮೇಲೆ.

ಐಯಪ್ಪಗೌಡರು ಬೆಳಿಗ್ಗೆ ಸುಮಾರು ಎಂಟು ಒಂಬತ್ತರ ಹೊತ್ತಿಗೆ ಬಂದು ನನ್ನನ್ನು ಸುಡುಗಾಡಿನೆಡೆಗೆ ಕರೆದರು. ಅವ್ವನನ್ನು ಸುಟ್ಟು ಹಾಕಿದೆಡೆ ಹಿರಿಯ ಮಗನಾದ ನನ್ನಿಂದ ಕೆಲವು ಕರ್ಮಕ್ರಿಯೆಗಳನ್ನು ಮಾಡಿಸುವುದಕ್ಕೆ. ನನಗೆ ಅವುಗಳಲ್ಲಿ ನಂಬಿಕೆಯಿರದಿದ್ದುರಿಂದ ನಾನು ಒಪ್ಪಲಿಲ್ಲ. ಆ ಕ್ರಿಯೆ ನನ್ನಿಂದ ನಡೆದ ಮೇಲೆಯೆ ಮುಂದಿನ ಕೆಲಸಗಳು ಆಗತಕ್ಕದ್ದಾದ್ದರಿಂದ ನನ್ನ ಸ್ನೇಹಿತರು ‘ಹೋಗಿ ಬಂದುಬಿಡಿ’ ಎಂದು ಪುಸಲಾಯಿಸಿದರು. ನಾನು ಅವರೊಡನೆ ಶ್ಮಶಾನಕ್ಕೆ ಹೋದೆ.

ಹಿಂದೆ ಏಳೆಂಟು ವರುಷಗಳಾಚೆ ನನ್ನ ತಂದೆ ಯಾವ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ಒಳಗಾಗಿದ್ದರೋ ಅದೇ ಜಾಗದಲ್ಲಿ ಅವ್ವನೂ ಅಂತ್ಯಸಂಸ್ಕಾರಕ್ಕೆ ಒಳಗಾಗಿದ್ದರು. ನನಗೆ ಸಾವಿಗೆ ಸಂಬಂಧಪಟ್ಟ ಕರ್ಮ ಕ್ರಿಯಾದಿಗಳಲ್ಲಿ ಶ್ರದ್ಧೆಯಿರದಿದ್ದರೂ ನನ್ನಮ್ಮ ನನ್ನ ಅಪ್ಪಯ್ಯನ ಅಗ್ನಿಸಂಸ್ಕಾರದ ಜಾಗದಲ್ಲಿಯೇ ತಮ್ಮ ಸಂಸ್ಕಾರವನ್ನು ಪಡೆದ ಸಂಗತಿ ನನ್ನನ್ನು ಭಾವಮಯವನ್ನಾಗಿ ಮಾಡಿತು. ಸುತ್ತಲೂ ಅರಣ್ಯಾವೃತವಾಗಿತ್ತು. ಆ ಸ್ಥಲ. ಮಳೆಗಾಲವಾಗಿದ್ದುದರಿಂದ ಹಸರು ಚಿಮ್ಮುತ್ತಿತ್ತು. ಆದರೆ, ಆ ದಿನ ಎಳೆ ಬಿಸಿಲು ತಾಯಿಯ ನಗೆಯಂತೆ ತಂಪಾಗಿ ಶೋಭಿಸಿತ್ತು. ಅಯ್ಯಪ್ಪಗೌಡರು ಹಾಲು ಹುಯ್ಯುವದು ಮತ್ತು ಏನೇನೋ ಮಾಡುತ್ತಿದ್ದರು. ನಾನು ಅದೊಂದನ್ನೂ ಗಮನಿಸದೆ ತುಂಬ ಅಂತಮುರ್ಖಿಯಾಗಿ ಸಂಸ್ಕೃತದ ಓಂಕಾರವನ್ನು ಗರಿಕೆಯಿಲ್ಲದಿದ್ದ ಸುಟ್ಟ ನೆಲದಲ್ಲಿ ಬರೆದು ಬಾಯಿಗೆ ಬರುತ್ತಿದ್ದ ಉಪನಿಷತ್ತಿನ ಮಂತ್ರಗಳನ್ನೂ ಭಗವದ್ಗೀತೆಯ ಅಮೃತತ್ವ ಪ್ರತಿಪಾದನೆಯ ಮಹಾಶ್ಲೋಕಗಳನ್ನೂ ಹೇಳಿಕೊಂಡು ತಾಯಿಯನ್ನು ನೆನೆದು ಅವರ ಪಾದಾರವಿಂದಕ್ಕೆ ಮನದಲ್ಲಿಯೆ ನಮಿಸುತ್ತಿದ್ದೆ.

ಮಧ್ಯಾಹ್ನ ಊಟದ ಸಮಯದಲ್ಲಿ ಒಂದು ‘ತಮಾಷೆ’ ನಡೆಯಿತು. ಅದು ಕೆಲವು ಹಿರಿಯರ ದೃಷ್ಟಿಯಲ್ಲಿ ‘ವಿಷಾದ’ವೂ ಆಗಿತ್ತು.

ಹನ್ನೊಂದನೆಯ ದಿನ ಕಟ್ಟಳಗೆ ಸಂಪ್ರದಾಯದಂತೆ ಒಬ್ಬ ದಾಸಯ್ಯನನ್ನು ಆಹ್ವಾನಿಸಿದ್ದರು. ಆತ ತೀರ್ಥ ಚಿಮುಕಿಸಿ ಏನನ್ನೊ ಶುದ್ಧ ಮಾಡುತ್ತಾನಂತೆ! ಆದರೆ ನಮಗೆ ಗೊತ್ತಿದ್ದದ್ದು ಆ ದಾಸಯ್ಯನಿಗೆ ಊಟಕ್ಕೆ ಕುಳಿತಾಗ ಒಂದು ಬುಟ್ಟಿ ಉದ್ದಿನ ಒಡೆಯನ್ನೂ ಜೇನುತುಪ್ಪವನ್ನೂ ಬಡಿಸಿ ತಣಿಉಣಿಸುತ್ತಿದ್ದ ನಗೆಸಂಗತಿ! ಆ ದಾಸಯ್ಯನೋ ಕಜ್ಜಿತುರಿ ಮೈ ತುಂಬಿ, ಕೊಳಕೋ ಕೊಳಕುಬಟ್ಟೆ ಸೊಂಟಕ್ಕೆ ಸುತ್ತಿ, ಡೊಳ್ಳು ಹೊಟ್ಟೆ ಬಿಟ್ಟುಕೊಂಡಿದ್ದ ಒಂದು ಮನುಷ್ಯ ಪ್ರಾಣಿ! ಅವನು ಪೂಜೆ ಗೀಜೆ ಮಾಡಿದ ಮೇಲೆ ದೊಡ್ಡವರು ಕೆಲವರು ಅವನಿಗೆ ಕಾಲುಮುಟ್ಟಿ ಅಡ್ಡಬಿದ್ದರು. ನನಗೂ ಹಾಗೆ ಮಾಡಲು ಹೇಳಿದರು! ನನ್ನ ಜುಗುಪ್ಸೆಗೆ ಅಳವಿರಲಿಲ್ಲ. ನಾನು ಥೂ ಎಂದು ತಿರಸ್ಕರಿಸಿಬಿಟ್ಟೆ. ಆ ದಾಸಯ್ಯ ಕಜ್ಜಿ ಹಿಡಿದ ‘ಕೈಕಾಲು ಸಣ್ಣ ಹೊಟ್ಟೆ ಡುಬ್ಬಣ್ಣ’ ನಾಗಿದ್ದರೂ ತಿಥಿ ಊಟಕ್ಕೆ ಬಡಿಸಿದ ಒಂದು ಕುಕ್ಕೆ ಒಡೆಗಳನ್ನೂ ಜೇನುತುಪ್ಪವನ್ನೂ ಪೂರೈಸಿದ್ದಲ್ಲದೆ ಅಷ್ಟೆ ಪ್ರಮಾಣದ ಕಡುಬುಗಳನ್ನೂ ಮತ್ತು ಮಾಂಸದ ಹುಳಿಯನ್ನೂ ಹಾಸಿದ್ದ ದೊಡ್ಡ ಬಾಳೆಯೆಲೆ ತೊಳೆದಿಟ್ಟಂತಾಗುವಂತೆ ತಿಂದು ಪೂರೈಸಿದನು, ಮೃತರ ಆತ್ಮಕ್ಕೆ ಪರಿಪೂರ್ಣ ತೃಪ್ತಿಯಾಗುವಂತೆ!

ಅಂದಿನ ತಿಥಿಯೂಟದಲ್ಲಿ ನಡೆದ ಮತ್ತೊಂದು ‘ಅಕ್ರಮ’ ಎಂದರೆ, ತಿಥಿಗಾಗಿಯೇ ಕಡದಿದ್ದ ‘ಕಂಚಿಹೋತದ’ ಮಾಂಸವನ್ನು ಭಕ್ಷಿಸಲು ನಾನು ನಿರಾಕರಿಸಿದ್ದು! ಶಾಸ್ತ್ರಕ್ಕಾದರೂ ಸ್ವಲ್ಪವನ್ನು ಪ್ರಸಾದದಂತೆ ತೆಗೆದುಕೊಳ್ಳಬೇಕೆಂದು ಹಿರಿಯ ಸಂಪ್ರದಾಯ ರಕ್ಷಕರು ಒತ್ತಾಯಪಡಿಸಿದರೂ ನಾನು ‘ವೃತಭ್ರಷ್ಟ’ ನಾಗಲು ಒಪ್ಪಲಿಲ್ಲ. (ನಾನು ಆಗ ಮಾಂಸಹಾರವು ಆಧ್ಯಾತ್ಮಿಕ ಜೀವನಕ್ಕೆ ಹಾನಿಕಾರ ಎಂದು ಭ್ರಮಿಸಿದ್ದೆ. ಮುಂದೆ ೧೯೨೮ ರಲ್ಲಿ ನನಗೆ ಮೈಲಿಯಾಗಿದ್ದಾಗ ಒದಗಿದ ಆಧ್ಯಾತ್ಮಿಕ ಲಕ್ಷಣದ ಕೆಲವು ಉನ್ಮಾದ ಸದೃಶ ವಿಶೇಷಾನುಭವಗಳಾದ ಬಳಿಕವೆ ನಾನು ಆಹಾರನಿಷ್ಠೆಯಿಂದ ಮುಕ್ತನಾದದ್ದು)

ಮತ್ತೊಂದು ಇಲ್ಲಿ ಉಲ್ಲೇಖಿಸಬಹುದಾದ ಘಟನೆ ಎಂದರೆ ‘ಕೊಲೆಗಿಡುವುದು’ಕ್ಕೆ ಸಂಬಂಧಿಸಿದುದು. ಕೊಲೆಗಿಡುವುದೆಂದರೆ ಮನೆತನದ ಹಿಂದೆ ಸತ್ತವರ ಪಂಕ್ತಿಗೆ ಸದ್ಯವೇ ತೀರಿದವರ ಪ್ರೇತವನ್ನೂ ಕೊಡುವುದು, ಮತ್ತು ಎಡೆಯಿಡುವುದು, ‘ಕೊಲೆಕೊಡುವುದು’ ಎಂದೂ ಅದಕ್ಕೆ ಹೇಳುತ್ತಾರೆಂದು ತೋರುತ್ತದೆ. ಅಂದರೆ ಅದೆಲ್ಲ ಪಿತೃಪೂಜೆಗೆ ಸಂಬಂಧಿಸಿದ್ದು.

ಆ ದಿನ ರಾತ್ರಿ ಮನೆಯ ನಮ್ಮ ಕೋಣೆಯ (ಅಂದರೆ ಅವ್ವ ಅಪ್ಪಯ್ಯ ನಾನು ದಾನಮ್ಮ ಪುಟ್ಟಮ್ಮ ಎಲ್ಲರೂ ಮಲಗಿ ಎದ್ದು ಬಳಸುತ್ತಿದ್ದ ಕೊಠಡಿ) ಬಾಗಿಲ ಬಳಿ ಮಣೆಹಾಕಿ, ದೀಪದ ಕಂಭಗಳನ್ನಿಟ್ಟು ಎಲೆ ಹಾಕಿ, ಅದರಲ್ಲಿ ಮೃತರು ಬದುಕಿದ್ದ ಕಾಲದಲ್ಲಿ ಅವರು ವಿಶೇಷವಾಗಿ ಅಪೇಕ್ಷಿಸುತ್ತಿದ್ದ ಭಕ್ಷ್ಯಭೋಜ್ಯ ಪಾನೀಯಾದಿಗಳನ್ನಿಟ್ಟು, ಊದಿನಕಡ್ಡಿ ಹೊತ್ತಿಸಿದ್ದರು. ಅದಕ್ಕೆ ತಿಥಿಗೆ ಬಂದ ನೆಂಟರೆಲ್ಲ ‘ಧೂಪಹಾಕಿ’ ಅಡ್ಡ ಬೀಳುತ್ತಿದ್ದುದು ರೂಢಿ. ಮೊದಲು ‘ಧೂಪ ಹಾಕಿ’ ಅಡ್ಡ ಬೀಳುವ ಕರ್ತವ್ಯ ಹಿರಿಯ ಮಗನಾದ ನನ್ನದಾಗಿತ್ತು. ತರುವಾಯವೇ ಇತರರ ಸರದಿ. ಅದೆಲ್ಲ ಮುಗಿದ ಮೇಲೆ ಮುಂದಿನ ಭೋಜನಾದಿ ಕಾರ್ಯ.

ಉಪ್ಪರಿಗೆಯ ಮೇಲೆ ಲ್ಯಾಂಪಿನ ಬೆಳಕಿನಲ್ಲಿ ಸ್ನೇಹಿತರೊಡನೆ ಇದ್ದ ನನ್ನನ್ನು ಕರೆದರು ಧೂಪ ಹಾಕುವುದಕ್ಕೆ. ನಾನು ಹೆಂಡ ಮುಂತಾದುವನ್ನಿಟ್ಟ ಎಡೆಗೆ ಪೂಜೆ ಸಲ್ಲಿಸಲು ಸಾಧ್ಯವಿಲ್ಲ ಎಂದುಬಿಟ್ಟೆ. ಅಲ್ಲದೆ ನನ್ನ ತಾಯಿ ಪ್ರೇತವಾಗಿ ಇತರ ಪ್ರೇತಗಳೊಡನೆ ಅಲ್ಲಿಗೆ ಬರುತ್ತಾರೆ ಎಂಬುದಂತೂ ನನಗೆ ಅಹಸ್ಯವಾಗಿತ್ತು. ಉತ್ತಮ ಲೋಕಗಳಿಗೆ ಹೋಗಿರುವ ಅವರನ್ನು ಆಹ್ವಾನಿಸಿ ಭೂತಪ್ರೇತಗಳೊಡನೆ ಸೇರಿಸುವುದು ಅವರಿಗೆ ನಾವೆಸಗುವ ಅತ್ಯಂತ ಅವಮಾನಕಾರ ಅಪಚಾರವೆಂದು ನನ್ನ ಭಾವನೆಯಾಗಿತ್ತು. ಉತ್ತಮ ಲೋಕಗಳಲ್ಲಿ ಅವರ ಪಯಣ ಮಂಗಳಕರವಾಗಿ, ಅವರು ಜಗನ್ಮಾತೆಯ ಮಡಿಲನ್ನು ಸೇರಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುವುದೊಂದೇ ನಾವು ಅವರಿಗೆ ಸಲ್ಲಿಸಬೇಕಾದ ಸೇವೆ ಎಂಬುದು ನನ್ನ ನಂಬುಗೆಯಾಗಿತ್ತು.

ಒಬ್ಬರಾದಮೇಲೆ ಒಬ್ಬರು ಹಿರಿಯರು ಬಂದು ನನ್ನನ್ನು ಕರೆಯತೊಡಗಿದರು. ನಾನು ಹೋಗಿ ಧೂಪಹಾಕಿದ್ದಲದೆ ಏನೂ ಮುಂದುವರಿಯುವಂತಿಲ್ಲ ಎಂದರು. ನನ್ನ ಮಿತ್ರರು ಕೆಲವರು ಕಾರ್ಯ ಸುಗಮವಾಗಿ ನೆರವೇರಿಸುವ ಸಲುವಾಗಿ ನಾನು ಸ್ವಲ್ಪ ರಿಯಾಯಿತಿ ತೋರಿಸಿ, ಹೋಗಿ ಧೂಪಹಾಕಿ ಬಂದುಬಿಡಲು ಸೂಚಿಸಿದರು. ಆದರೆ ನಾನು ನನ್ನ ಆತ್ಮಸಾಕ್ಷಿಗೆ ವ್ಯತಿರಿಕ್ತವಾಗಿ ನಡೆಯಲು ನಿರಾಕರಿಸಿದೆ.

ಕಡೆಗೆ ಒಂದು ರಾಜಿ ಸೂಚಿಸಿದೆ, ಎಡೆಯಲ್ಲಿಟ್ಟ ಹೆಂಡ ಮಾಂಸಗಳನ್ನೆಲ್ಲ ತೆಗೆದುಬಿಡುವಂತೆ. ಆಮೇಲೆ ನಾನು ಒಂದು ಭಗವದ್ಗೀತೆಯ ಪ್ರತಿಯನ್ನೂ, ಸ್ವಾಮಿವಿವೇಕಾನಂದರದ್ದೋ ಅಥವಾ ಶ್ರೀರಾಮಕೃಷ್ಣ ಪರಮಹಂಸರದ್ದೋ ಅಥವಾ ಅವರಿಬ್ಬರೂ ಸೇರಿಯೇ ಇದ್ದ ಪಟವನ್ನೂ ಆ ಮಣೆಯ ಮೇಲೆ ಸ್ಥಾಪಿಸಿ, ಹೂವು ಮುಡಿಸಿ, ಮಂತ್ರಗಳನ್ನೂ ಶ್ಲೋಕಗಳನ್ನೂ ಮನದಲ್ಲಿಯೆ ಹೇಳಿಕೊಳ್ಳುತ್ತಾ ಮಾತೆಗೆ ಶಾಂತಿ ಕೋರಿ ಧೂಪ ಹಾಕಿದೆ!

ಮೈಸೂರಿಗೆ ಹಿಂತಿರುಗುವ ಮುನ್ನ ಇಬ್ಬರು ತಂಗಿಯರೊಡನೆ ಯಾವ ಲೌಕಿಕದ ವಿಚಾರವನ್ನೂ ಪ್ರಸ್ತಾಪಿಸಲಿಲ್ಲ; ಅವ್ವನ ಒಡವೆ ವಸ್ತುಗಳ ಹೊಣೆಹೊರೆಯನ್ನೆಲ್ಲ ಅವರಿಗೇ ಬಿಟ್ಟಿದ್ದೆ! ಆ ಬಗ್ಗೆ ಯಾವ ಆಲೋಚನೆ ಕೂಡ ನನ್ನ ತಲೆಗೆ ಬರಲಿಲ್ಲ!

ಕಾಲಾನುಕ್ರಮದಂತೆ ಹಿಂದೆಯೆ ಹೇಳಬೇಕಾಗಿದ್ದ ಒಂದು ಮುಖ್ಯ ಸಂಗತಿಯನ್ನು ಇಲ್ಲಿಯೆ ಹೇಳುಬಿಡುತ್ತೇನೆ. ನನ್ನ ಅವ್ವ ತೀರಿಕೊಳ್ಳುವ ಮುನ್ನವೆ ನಮ್ಮ ಮನೆ ಹಿಸ್ಸೆಯಾಗಿತ್ತು. ಹಿಸ್ಸೆ ಮೂರು ಪಾಲು: ನನ್ನ ತಂದೆಯದು, ದೊಡ್ಡ ಚಿಕ್ಕಪ್ಪ ರಾಮಣ್ಣಗೌಡರದು, ಮತ್ತು ಬಸಪ್ಪಗೌಡರದು. ಹಿರಿಯರಾಗಿದ್ದು ಈ ಮನೆಯ ಯಜಮಾನರಾಗಿದ್ದ ನನ್ನ ತಂದೆಯ ಪಾಲು ದೊಡ್ಡ ಪಾಲಾಗಿತ್ತು. ಹಿಸ್ಸೆಯ ಸಮಯದಲ್ಲಿ ಪಂಚಾಯತರಲ್ಲಿ ಒಬ್ಬರಾಗಿದ್ದ ದೇವಂಗಿ ರಾಮಣ್ಣಗೌಡರು ಮೈಸೂರಿನಲ್ಲಿ ಓದುತ್ತಿದ್ದ ನನಗೆ ಕಾಗದ ಬರೆದರು: ನನ್ನ ಪಾಲನ್ನು ನಾನೆ ಬಂದು ವಹಿಸಿಕೊಳ್ಳುತ್ತೇನೆಯೊ? ಅಥವಾ ನನ್ನ ಪಾಲನ್ನು, ನಾನು ಓದು ಮುಗಿಸಿ ಬರುವ ತನಕ, ಬಸಪ್ಪಗೌಡರ ಪಾಲಿನ ಜೊತೆಗೆ ಸೇರಿಸುವುದೋ, ರಾಮಣ್ಣಗೌಡರ ಪಾಲಿನ ಜೊತೆಗೆ ಸೇರಿಸುವುದೋ ಎಂದು. ನಾನು ಓದು ನಿಲ್ಲಿಸಿ ಬರಲು ಇಷ್ಟವಿಲ್ಲವೆಂದೂ ನನ್ನ ಪಾಲನ್ನು ರಾಮಣ್ಣಗೌಡರ ಪಾಲಿನ ಜೊತೆಗೆ ಸೇರಿಸಬಹುದೆಂದೂ ಸ್ವಲ್ಪಮಟ್ಟಿಗೆ ಅನಾವಶ್ಯಕವಾಗಿ ಭಾವಮಯವಾಗಿದ್ದ ಧೀರ್ಘ ಪತ್ರ ಬರೆದೆ. ಅದರಂತೆಯೆ ಹಿಸ್ಸೆ ನಡೆದಿತ್ತು.