ಸಾಹಿತ್ಯ ಭೂಮಿಕೆಯನ್ನು ಅನುಲಕ್ಷಿಸಿ ಹೇಳುವುದಾದರೆ ೧೯೨೪ನೆಯ ಸಂವತ್ಸರವು ನನ್ನ ಜೀವಮಾನದಲ್ಲಿ ಒಂದು ಕ್ರಾಂತಿಕಾರಕ ಸಂಧಿಕಾಲವಾಗುತ್ತದೆ. ಪ್ರತಿಮಾರೂಪದ ಅದರ ರಸವರ್ಣನೆ ‘ಇಕ್ಷುಗಂಗೋತ್ರಿ’ ಕವನಸಂಕಲನದಲ್ಲಿರುವ ‘ವಿಶ್ವವಿದ್ಯಾನಿಲಯೆ ಭಗವತಿ ಶ್ರೀ ಸರಸ್ವತಿಗೆ’ ಎಂಬ ಪ್ರಗಾಥದಲ್ಲಿ ಬರುತ್ತದೆ. ಅನೇಕ ಸಾಹಿತ್ಯ ಕ್ಷೇತ್ರಗಳಲ್ಲಿ, ವಿಶೇಷವಾಗಿ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ, ಮತ್ತು ಇಂಗ್ಲಿಷ್‌ ಭಾಷಾಂತರಗಳ ಮೂಲಕ ರಷ್ಯನ್‌, ಫ್ರೆಂಚ್‌, ಜರ್ಮನ್‌, ಇಟಾಲಿಯನ್ ಮತ್ತು ಸಂಸ್ಕೃತ ಸಾಹಿತ್ಯ ಕ್ಷೇತ್ರಗಳಲ್ಲಿ ನನ್ನ ಕವಿಪ್ರಜ್ಞೆ ಯಾತ್ರಿಯಾಗಿ ತನ್ನ ವಿಕಾ ಸಿದ್ಧಿಗೆ ಅವಶ್ಯಕವಾದ ಚಿಂತನಾಂಶ, ಕಲ್ಪನಾಂಶ, ಭಾವಾಂಶ, ರೂಪಾಂಶಗಳನ್ನು ಸಂಪಾದಿಸಿತು. ಜೀವನಚರಿತ್ರೆಗಳ ಮೂಲಕ ನನ್ನ ಆಧ್ಯಾತ್ಮಿಕ ತೃಷ್ಣೆ ಪ್ರಾಚೀನ ಮತ್ತು ಆಧುನಿಕ ವಿಭೂತಿಪುರುಷರ, ಸಂತರ, ಋಷಿಗಳ, ದಾರ್ಶನಿಕರ, ಅವತಾರ ಪುರುಷರ ಚೈತನ್ಯಾಮೃತ ಪಾನಮಾಡಿ. ನನ್ನ ಚೇತನ ತನ್ನ ಊರ್ಧ್ವಮುಖ ಪ್ರವಾಸದಲ್ಲಿ ತಕ್ಕಮಟ್ಟಿಗೆ ಮುಂದುವರಿಯಿತು. ನನ್ನ ಕವಿತಾ ಪ್ರತಿಭೆ ಎಡವುತ್ತಾ ಕುಂಟುತ್ತಾ ಮುಗ್ಗರಿಸುತ್ತಾ ಮುಂದುವರಿಯುತ್ತಿತ್ತು. ತನ್ನ ಸುಧೀರ್ಘ ಪ್ರಯಾಣದ ಪ್ರಪ್ರಥಮ ಘಟ್ಟದಲ್ಲಿ. ಸುಮಾರು ಒಂದು ವರ್ಷ ಕಾಲ ನನ್ನ ಕಾವ್ಯ ಪ್ರತಿಭೆ ಸ್ವದೇಶೀ ಮತ್ತು ವಿದೇಶೀ ವಾಹನಗಳೆರಡರ ಮೇಲೆಯೂ ಸವಾರಿಮಾಡುತ್ತಾ ಹೋಗಿ, ಸ್ವದೇಶಿವಾಹನ ಸುಪುಷ್ಟವಾಗಿ ಬಲಿಷ್ಠವಾದ ತರುವಾಯ ವಿದೇಶೀವಾಹನವನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿತು. ಆ ಸಂಧಿಕಾಲಕ್ಕೆ ಸಂಬಂಧಿಸಿದ ಕನ್ನಡ ಕವನಗಳು, ಒಂದೆರಡನ್ನು ಉಳಿದು, ಪ್ರಕಟನಯೋಗ್ಯವೆಲ್ಲವೆಂದು ಯಾವ ಕವನಸಂಗ್ರಹಗಳಲ್ಲಿಯೂ ಅಚ್ಚಾಗಿಲ್ಲ. ಆದರೆ ರೂಪಾಂಶದಲ್ಲಿ ತುಂಬ ಕೆಳಮಟ್ಟದವಾಗಿದ್ದರೂ ಕವಿಯ ಅಂದಿನ ಚಿಂತನೆ ಭಾವನೆ ಆಸೆ ಆದರ್ಶಗಳಿಗೆ ಸಾಕ್ಷಿಯಾಗಿ, ಆತನ ಕಾವ್ಯರೂಪದ ಬೆಳವಣಿಗೆಗೆ ತೋರುಬೆರಳಾಗಿರುವುದರಿಂದ ಅವುಗಳಲ್ಲಿ ಕೆಲವನ್ನಾದರೂ ಆಂಶಿಕವಾಗಿ ಇಲ್ಲಿ ನಿದರ್ಶಿಸಬಯಸುತ್ತೇನೆ.

೧೯೨೪ರಲ್ಲಿ ಕನ್ನಡ ಕವನಗಳಲ್ಲಿ, ಕಡೆಗೆ ಇಂಗ್ಲಿಷ್‌ ಪದ್ಯ ಜಾತಿಗಳನ್ನು ಅನುಕರಿಸುವಾಗಲೂ, ನಾನು ದ್ವಿತೀಯಾಕ್ಷರ ಪ್ರಾಸದ ಸಂಪ್ರದಾಯಕ್ಕೆ ಜೋತುಬಿದ್ದಿದ್ದೆ: ಕೆಲವು ಸಾರಿ ಇಂಗ್ಲಿಷ್‌ ಸಂಪ್ರದಾಯದ ಅಂತ್ಯಪ್ರಾಸವನ್ನು ಪ್ರಯೋಗಿಸಿದಾಗಲೂ! ಆ ಕಾರಣವೂ ಒಂದು ಎನ್ನಬೇಕಾಗುತ್ತದೆ, ನನ್ನ ಕನ್ನಡ ರಚನೆಯ ಕೀಳುಮಟ್ಟಕ್ಕೆ! ಬ್ಲಾಂಕ್‌ವರ್ಸ್ ಅನುಕರಣನೆಯಿಂದ, ಪ್ರಾಸ ವಿಮುಕ್ತವಾಗಲು ಹಾದಿ ಕಂಡುಕೊಂಡ ಮೇಲೆ ನಾನು ಕ್ರಮೇಣ ದ್ವಿತೀಯಾಕ್ಷರ ಪ್ರಾಸದಿಂದ ಬಿಡುಗಡೆ ಪಡೆದೆನೆಂದು ತೋರುತ್ತದೆ.

೯-೮-೧೯೨೪ ರಲ್ಲಿ ರಚಿಸಿದ ‘ಆನಂದ’ ಒಂದು ಸಾನೆಟ್‌. ಉಪನಿಷತ್ತಿನ ಒಂದು ಮಂತ್ರದ ಅನುವಾದವೆಂಬಂತೆ ಪ್ರಾರಂಭವಾಗುತ್ತದೆ. ತತ್ತ್ವವೇನೋ ತುಂಬ ಉದಾತ್ತ ಮತ್ತು ಗಹನ. ಆದರೆ ಭಾಷಾ ಅಭಿವ್ಯಕ್ತಿ ತುಂಬ ಬಡವು. ಸಾನೆಟ್‌ ರೂಪವನ್ನು ಸಾಧಿಸಲು ೧೪ ಪಂಕ್ತಿಗಳನ್ನು ದ್ವಿತೀಯಾಕ್ಷರ ಪ್ರಾಸದಿಂದ ೪+೪+೩+೩ ಆಗಿ ಹಂಚಿಕೊಂಡಿದೆ:

ಆನಂದದಿಂ ಜನಿಸಿ, ಆನಂದದೊಳು ಬೆಳೆದು
ಆನಂದವನೆ ಸೇರುವೆವು ಕಡೆಯೊಳೆಲೆ ಜೀವ!
ನೀನೇಕೆ ಅಳಲುತಿಹೆ? ಮುಂಜಾನೆ ಮಂಜಿನೊಳು
ಗಾನವಂ ಪಾಡುವುದು ಕಮನೀಯ ಕೋಕಿಲೆಯು;

ಧರಣಿಯಂ ತೇಜದಿಂ ತುಂಬಿ ಬರುವನು ರವಿಯು;
ಹರಿಣಾಂಕ ಬೆಳಗುವನು ತಿಮಿರವಂ ಹಾಲುಮಯ
ಕಿರಣದಿಂ; ಪುಷ್ಪಗಳು ಕಾನನವ ಸಲೆ ಮುತ್ತಿ
ಮೆರೆಯುವುವು: ಪಡೆ ಮುದವ ಪ್ರಕೃತಿಯೊಳು, ಎಲೆಜೀವ!

ಕಾನನದ ರೂಪಿನಿಂ ಪರ್ವತದ ರೂಪಿನಿಂ
ಆನಂದ ಮೆರೆಯುತಿದೆ! ಫಲ ಪುಷ್ಪ ಬಳ್ಳಿಗಳು,
ಗಾನವನು ಸಲೆ ಕೊಡುವ ಸಂಗೀತ ಕೋವಿದನು,

ಕವಿವರನು, ಎಲ್ಲರುಂ ರೂಪುದಳೆದಾನಂದ!
ಭುವನವನು ನಾಕವನು ಆತಳ ಪಾತಾಳವನು
ಸವಿಯಾದ ವಿಶ್ವವನೆ ಆನಂದ ತುಂಬಿಹುದು!
೯-೮-೧೯೨೪

೧೦-೮-೧೯೨೪ ರಲ್ಲಿ ಬರೆದ ‘ದಾಸಯ್ಯ’ ಎಂಬ ಕವನ ಗೋವಿನ ಕಥೆಯ ಮಟ್ಟಿನಲ್ಲಿದೆ. ಈ ಕವನದ ವೈಶಿಷ್ಟ್ಯವೆಂದರೆ ಕವಿ ದಾಸಯ್ಯನ ಪರವಾಗಿ ವಾದಿಸುತ್ತಿರುವುದು!

ಎಕೆ ನಿನ್ನನು ಬೈದು ಕಳೆವರು
ಲೋಕ ಭಿಕ್ಷುಕರಾದ ಜನಗಳು?
ಲೋಕ ರಕ್ಷಕ ದೇವ ನಿನ್ನಯ

ಸಾಕು ತಂದೆಯೆ, ದಾಸನೆ?
ಪರಮಪುರುಷನ ಮರೆತು ತಿರುಗುವ
ಹರೆಯ ಗರ್ವದಿ ಮೆರೆವ ಜನರಿಗೆ

ಹರಿಯ ನಾಮವನಾದರೀಯುವೆ,
ಹರಕು ವಸನದ ದಾಸನೆ!
ಗಾನ ಹಾಡುತ ಶಂಖ ಊದುತ

ದೀನನಂದದಿ ದೇವನಾಮವ
‘ದೀನರಕ್ಷಕ’ ಎಂದು ಪಾಡುತ
ನೀನು ಬೀದಿಯೊಳಲೆಯುವೆ.

ಒಲಿದು ಕಾಡೊಳಗಿರುವ ಹೂವನು
ಇಳೆಯು ಪೊರೆವುದು; ಮೇಲೆ ಗಗನವು
ಲಲಿತ ಮೇಘದಿ ಮಳೆಯ ಸುರಿವುದು

ಫಲವ ಬಯಸದ ಪ್ರೇಮದಿ.
ಇಳೆಯ ಜನಗಳು ಬೈದು ನಿನ್ನನು
ಕೆಲಸ ಮಾಡದೆ ತಿಂದು ತಿರುಗುವ

ಅಲಸಗಾರನು ಎಂದು ತಿಳಿವರು.
ಇಳೆಯ ಜನಗಳು ಕುರುಡರು.
ಹಣವ ಪಡೆಯುವ ಕೆಲಸವೊಂದನೆ

ಗಣನೆ ಮಾಡುವರಿಳೆಯ ಜನಗಳು!
ಫಣಿಪ ಶಯನನ ನಾಮಕೀರ್ತನೆ
ಹಣದ ಸುಖವನು ಮೀರದೆ?
ವನದ ಖಗಗಳು ಯಾವ ಕೆಲಸವ
ಧನವ ಪಡೆಯಲು ಮಾಡುತಿರುವುವು?
ದಿನವು ಹೊಲಗಳಲಿರುವ ಕಾಳನು
ಧನದ ರೂಪಿಂ ಪಡೆಯುವೆ?
ನೀನು ನರರೊಳು ಪಕ್ಷಿಯಂದದಿ
ಗಾನ ಹಾಡುತ ತಿರುಗಿ ನಲಿಯುವೆ!
ಹೀನ ಜನಗಳು ನಿನ್ನ ಹಳಿದರೆ
ಮಾನ ಹೋಗದು, ದಾಸನೆ.
ಪಕ್ಷಿ, ಬೇಡಗೆ ಮಾಂಸಮುದ್ದೆಯು;
ಪಕ್ಷಿ, ಕವಿಗಳ ಪರಮದೇವನು;
ಪಕ್ಷಿ, ಗಾನವು ಕರ್ಣವೆರಡಕೆ;
ಪಕ್ಷಿ ಎಂದಿಗು ಪಕ್ಷಿಯೆ.
ಏಕೆ ನಿನ್ನದು ಬೈದು ಕಳೆವರು
ಲೋಕ ಭಿಕ್ಷುಕರಾದ ಜನಗಳು?
ಲೋಕ ರಕ್ಷಕ ದೇವ ನಿನ್ನಯ
ಸಾಕುತಂದೆಯ, ದಾಸನೆ?
೧೦-೮-೧೯೨೪

೧೧-೮-೧೯೨೪ ರಲ್ಲಿ ರಚಿಸಿದ ‘ಪಿಕಲೋಲ’ ಶೀರ್ಷಿಕೆಯ ಒಂದು ಕವನ ಮೂರು ಮೂರು ಪಂಕ್ತಿಯ ಏಳು ಪದ್ಯಗಳನ್ನೊಳಗೊಂಡಿದೆ.

ಜಯ ವಿಜಯಾ ಭವ:
ಕಾನನ ಕವಿವರ,
ದೀನರ ಗಾಯಕ, ಪಿಕಲೋಲ!

ಪೂವಿನ ಮರದೊಳು
ದೇವನ ತೋರುವ
ಪಾವನ ಪಕ್ಷಿಯೆ ನೀನ್ಯಾರೆ!

ಪಕ್ಷಿಯೆ! ಪಕ್ಷಿಯೆ!
ಯಕ್ಷರ ಗಾನದ
ಅಕ್ಷಯ ವೀಣೆಯೆ, ನೀ ಹಾಡ್ಯೆ!

೧೨-೮-೧೯೨೪ ರಲ್ಲಿ ಬರೆದ ‘ಮುಂಜಾನೆ’ ನಾಲ್ಕು ಪಂಕ್ತಿಗಳ ಏಳು ಪದ್ಯಗಳಿವೆ. ಛಂದೋವಿಶೇಷವೆಂದರೆ ಪ್ರತಿ ಪದ್ಯದ ನಾಲ್ಕನೆಯ ಪಂಕ್ತಿಯ ತುದಿಯಲ್ಲಿ ಒಂದು ಗುರು ಹೆಚ್ಚಾಗಿರುವುದು.

ಪೂಗಳಿಂ ತುಂಬಿರುವ ಸಂಪಗೆಯ ಕೊಂಬೆಯಿಂ
ದಾಗಸದ ಮಂಜುಹನಿ ಪಟಪಟನೆ ಬೀಳುತಿದೆ.
ಕೂಗುತಿದೆ ಮಡಿವಾಳ ಮಸುಕಿನಲಿ, ರಮಣೀಯ
ರಾಗದಿಂ ನಾಕವನು ಭೂಲೋಕಕೆಳೆಯುವಂತೆ!

ದುಂಬಿಗಳು ಮಘಮಘಪ ಮರಗಳಲಿ ಮೊರೆಯುತಿವೆ;
ಅಂಬರವು ಧರಣಿ ಝೇಂಕಾರದಿಂ ತುಂಬಿಹವು;
ಕುಂಭಿನಿಯೊ? ನಾಕವೊ? ಕವಿಯು ತಾ ಬೆರಗಾಗಿ
ಅಂಬರವ ಎವೆಯಿಕ್ಕದಕ್ಷಿಯಿಂ ನೋಡುತಿಹನು!

ನಮ್ಮದಲ್ಲವೆ ಭೂಮಿ? ನಮ್ಮದಲ್ಲವೆ ಗಗನ?
ಅಮ್ಮನೆಮಗಾಗಿ ಆಕಾರವಂ ತಳೆದಿಹಳು.
ನಮ್ಮದಲ್ಲವೆ ವಿಶ್ವವೆಲೆ ಜೀವ? ಕರುಣೆಯಿಂ
ನಮ್ಮದೀ ವಿಶ್ವವೀ ಗಗನವೀ ನಿತಂಬಿನಿಯು!

ಇಲ್ಲಿ ನಿತಂಬಿನಿ ಪಕಕ್ಕೆ ಹೆಂಗಸು ಎಂದು ಅರ್ಥ ಮಾಡದೆ ಪೃಥಿವಿ ಎಂದು ಅರ್ಥ ಮಾಡಬೇಕು. ನಿತಿಂಬ ಪದಕ್ಕೆ ‘ಸಾನು’ ಎಂಬ ಅರ್ಥವೂ ಇದೆ. ಗಿರಿಸಾನುಪ್ರದೇಶವುಳ್ಳದ್ದು ‘ಭೂಮಿ’.

೧೩-೮-೧೯೨೪ ರಲ್ಲಿ ಬರೆದ ‘ನನ್ನೊಳಿಹುದೀ ಗಗನ, ನನ್ನೊಳಿಹುದು’ ಮತ್ತು ‘ನನ್ನೊಳಿಹುದೀ ಧರಣಿ, ನನ್ನೊಳಿಹುದು’ ಎಂಬ ಎರಡು ಪದ್ಯಗಳಿರುವ ಶೀರ್ಷಿಕೆಯಿಲ್ಲದ ಕವನವಿದೆ. ‘ಅದ್ವೈತ ದರ್ಶನದ’ ಸಮಸ್ತ ವಿಶ್ವವೂ ಆತ್ಮದಲ್ಲಿಯೆ ಇದೆ ಎಂಬ ಭಾವನೆಯನ್ನೊಳಗೊಂಡಿದೆ. ವಿಶ್ವವೆಲ್ಲವೂ ಆತ್ಮದಲ್ಲಿಯೇ ಐಕ್ಯವಾಗಿ ಇದೆ ಎಂಬ ಭಾವನೆಯನ್ನೊಳಗೊಂಡಿದೆ. ವಿಶ್ವವೆಲ್ಲವೂ ಆತ್ಮದಲ್ಲಿಯೇ ಐಕ್ಯವಾಗಿ ಇದೆ ಎಂಬ ಭಾವನೆ ಆ ಕಾಲದಲ್ಲಿ ಬರೆದ ಅನೇಕ ಕವನಗಳಲ್ಲಿ ಮತ್ತೆ ಮತ್ತೆ ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತವಾಗುತ್ತದೆ. ೧೪-೮-೧೯೨೪ ರಲ್ಲಿ ಬರೆದಿರುವ ‘ಹಾಡುವ ಹಕ್ಕಿ’ ಎಂಬ ಕವನದಲ್ಲಿ ಈ ಭಾವನೆ ಹೀಗೆ ಅಭಿವ್ಯಕ್ತವಾಗುತ್ತದೆ:

ಅದೇನ ಹಾಡುವೆ
ಮಧುರ ಕಂಠದಿ?
ಚದುರ ಪಕ್ಷಿಯೆ,
ಮುದದಿ ಪೇಳೈ.

ನಾನು ಹಾಡುವ
ಗಾನ ನಾಕವು!
ನಾನೆ ಗಾಯನ,
ನಾನೆ ಗಾಯಕ!

ಹಾದಿಗಾರಗೆ
ಆದಿದೇವನು;
ನಾನನಂತನು!
ನಾನೆ ದೇವನು!
ನಾನೆ ನೀನ್ಯೆ!
ನೀನೆ ನಾನ್ಯೆ!
ದೀನ ಕವಿವರ,
ನೀನು ಕೇಳೈ!

೧೫-೮-೧೯೨೪ ರಲ್ಲಿ ಬರೆದ ‘ಹಳ್ಳಿ’ ಎಂಬ ಒಂದು ಸರಳವಾದ ಕವನ ಗಮನೀಯವಾಗಿದೆ:

ಬಳ್ಳಿಯ ಹೂವಿಂ ಬೆಳ್ಳಗೆ ಕಾಣುವ
ಹಳ್ಳಿಯೆ ಹಳ್ಳಿಯೆ ನೀ ಚಂದ!
ಹುಲ್ಲಿನ ಹಸುರಿಂದೆಲ್ಲಿಯು ಮಿರುಗುವ
ಹಳ್ಳಿಯೆ ನೀ ಬಲು ಆನಂದ!

ಪಕ್ಷಿಯ ಗುಂಪಿಂದಕ್ಷಿಗೆ ಮೆರೆಯುವ
ಅಕ್ಷಯ ಸುಖವಂ ನೀ ಕೊಡುವೆ.
ಅಕ್ಷಯ ಪಾತ್ರೆಯ ಕುಕ್ಷಿಯ ಸುಖವಂ
ಭಿಕ್ಷುಕ ಲಕ್ಷಕೆ ನೀನಿಡುವೆ.

ಬಟ್ಟೆಯ ಬಳಿಯಲಿ ಹುಟ್ಟಿಹ ಪೊದೆಯಲಿ
ಮೊಟ್ಟೆಯನಿಟ್ಟಿಹ ಮಡಿವಾಳ,
ಟಿಟ್ಟಿಭ, ಕೋಕಿಲೆ, ಚಿಟ್ಟೆಯು ಹಕ್ಕಿಯು
ಬೆಟ್ಟದಮೇಲಿಂ ಪಾಡುವುವು.

ಬೆಳಗಿನ ಜಾವದಿ ಗಳಗಳ ಓಡುವ
ಜಲಗಳು ನನ್ನದು ಕರೆಯುವುವು.
ಬಳಬಳ ಬೀಳುವ ಅಲರಿನ ಮಳೆಯೊಳು
ಹೊಲಗಳು ಪಳಪಳ ಹೊಳೆಯುವುವು.

ದಿನಕರ ಮೂಡಲು ದನಕರ ಮೇಯಲು
ಹನಿಯೊಳು ಹರುಷದಿ ನಡೆಯುವುವು;
ವನಗಳ ಸೇರುತ ಹನಿಯೊಳು ಚಂದದಿ
ನನೆದಿಹ ಹುಲ್ಲನು ಮೇಯುವುವು.

ಕೊಳಲನು ಊದುತ ಅಲರನು ಕೀಳುತ
ಮಲೆಯೊಳು ಮೆರೆವನು ಗೋಪಾಲ;
ಕೊಳಲಿನ ಗಾನವ ತಳಿರೊಳು ಕೇಳುತ
ಹೊಲದೊಳು ಮೆರೆವನು ಪಿಕಲೋಲ.

ಕಣ್ಣನು ಮೋಹಿದ ಬಣ್ಣದ ಖಗಗಳು
ಪಣ್ಣನೆ ಪಣ್ಣನೆ ಹಾರುವುವು.
ಹಣ್ಣನು ತಿನ್ನುವ ಸಣ್ಣ ವಿಹಗಗಳು
ಕಣ್ಣಿಗೆ ಬಣ್ಣ ತೋರುವುವು.

ಕಾನನ ಕವಿಗಳ ಗಾನವ ಕೇಳುವ
ದೀನರ ಹಳ್ಳಿಯೆ ನೀ ಚಂದ!
ಭಾನುವು ಮೂಡಲು ಗಾನದಿ ಕುಣಿಯುವ
ಕಾನನ ಹಳ್ಳಿಯೆ ಆನಂದ!

ನಿನ್ನೊಳು ಮೆರೆಯುವ ಉನ್ನತ ಗಿರಿಗಳು
ನನ್ನನು ಪೊರೆದುವು, ಓ ಹಳ್ಳಿ!
ನಿನ್ನೊಳು ಬೆಳೆದಿಹ ಚಿನ್ನದ ಹೂಗಳು
ನನ್ನೊಳು ನಲಿದುವು, ಓ ಹಳ್ಳಿ!

ಅಂದಿನ ಬಾಲನು ಇಂದಿಗು ನಿನ್ನನು
ಎಂದಿಗು ನೆನೆವನು, ಓ ಹಳ್ಳಿ!
ಮುಂದೆಯೂ ನಿನ್ನೊಳು ಅಂದಿನ ಕಂದನು
ಚಂದದಿ ಇರುವನು, ಓ ಹಳ್ಳಿ!

ನಿನ್ನೊಳೆ ಬೆಳೆಯುವೆ; ನಿನ್ನಿಂ ಸೆಳೆಯುವೆ
ಮುನ್ನಿನ ಬಾಲ್ಯವ, ಓ ಹಳ್ಳಿ!
ಉನ್ನತ ಕವಿತೆಯ ನಿನ್ನಿಂ ಪಡೆಯುವೆ;
ನನ್ನನು ಮುದ್ದಿಸು, ಓ ಹಳ್ಳಿ!

ಹೂವಿನ ಗುಂಪಿಂ ದೇವನ ತೋರುವ
ಪಾವನ ಹಳ್ಳಿಯೆ ಆನಂದ!
ಸಾವನೆ ತೋರದ ಕಾವನ ಪ್ರೇಮದ
ಪಾವನ ಹಳ್ಳಿಯೆ ನೀ ಚಂದ!

ಕಳ್ಳಿಯ ಹೂವಿಂ ಬೆಳ್ಳಗೆ ಮಿರುಗುವ
ಹಳ್ಳಿಯೆ ನಿನ್ನಂ ನಾ ಬಿಡೆನು;
ಬೆಳ್ಳಿಯ ಹೂವಿಂದೆಲ್ಲಿಯು ಶೋಭಿಪ
ಹಳ್ಳಿಯೆ ನಿನ್ನಂ ನಾ ಬಿಡೆನು!
೧೫-೮-೧೯೨೪

೧೬-೮-೧೯೨೪ ರಲ್ಲಿ ಬರೆದ ‘ಶ್ರೀರಾಮಕೃಷ್ಣ ಪರಮಹಂಸ’ ಎಂಬ ಒಂದು ‘ಸಾನೆಟ್‌’ ಇದೆ. ಸಾನೆಟ್‌ ರೂಪವಲ್ಲದೆ ಬೇರೆ ಯಾವ ಕಾವ್ಯಾಂಶದ ವೈಶಿಷ್ಟ್ಯವೂ ಅದಕ್ಕಿಲ್ಲ. ‘ಗುರುದೇವ, ಅದ್ವೈತ ದೇವನಂ ಮರೆತಿಹವು. ಪರೆಯನಿವ, ಶೂದ್ರನಿವ, ಬೌದ್ಧನಿವ, ಕ್ರೈಸ್ತನಿವ ತುರುಕನಿವ ಎಂಬ ಖಳವೇದವನು ಕಲಿತಿಹೆವು.‘ಶಿವನಾನು ಎಂಬುದನು ಕಲಿಸೆಮೆಗೆ’ ಮುಂತಾದ ಭಾವಗಳಿವೆ. ಹಾಗೆಯೆ ೧೭-೮-೧೯೨೪ರಲ್ಲಿ ಮತ್ತೊಂದು ಸಾನೆಟ್‌ ಇದೆ ‘ಭರತಖಂಡ’ ಎಂಬ ಶೀರ್ಷಿಕೆಯಲ್ಲಿ. ೧೮-೮-೧೯೨೪ರಲ್ಲಿ ಬರೆದ ಒಂದು ಕವನ ‘ಕೋಕಿಲ ತತ್ತ್ವ’ ದಲ್ಲಿ ಪ್ರಕೃತಿಯ ಸುಂದರ ವ್ಯಾಪಾರಗಳಲ್ಲಿ ಪರಮಾತ್ಮನನ್ನು ಸಂದರ್ಶಿಸಬಹುದು ಎಂಬ ಆಲೋಚನೆಯಿದೆ. ‘ಬೂದಿ ಭೂಜದೊಳಿರುವುದಲ್ಲದೆ ಬೂದಿಯೊಳು ಭೂಜತಾನಿರುವುದೆ ಮೇದಿನಿಯೊಳೆಂದಮಿತ ಕೋಕಿಲೆಗಳುಲಿಯ ಬೀರಿದುವು!’ ಎಂಬುದಾಗಿ ಕೊನೆಯಾಗುತ್ತದೆ. ದಿಗ್‌ಭ್ರಮೆ ಹುಟ್ಟಿಸುವಂತೆ! ಆ ದಿನವೆ ಬರೆದ ಮತ್ತೊಂದು ಸಾನೆಟ್‌ ‘ನಿದ್ದೆ’ ಎಂಬ ಶೀರ್ಷಿಕೆ ತಳೆದಿದೆ. ವರ್ಡ್ಸ್‌ವರ್ತ್‌ ಕವಿಯ Sleep ಎಂಬ ಸಾನೆಟ್ಟಿನ ಅನುಕರಣೆಯಂತಿದೆ, ಅದರ ಅನುಭವ ಸ್ವಂತದ್ದಾಗಿದ್ದರೂ. ಭಾಷಾಭಿವ್ಯಕ್ತಿಯ ದೃಷ್ಟಿಯಿಂದ ಅನರ್ಹವಾಗಿದ್ದರೂ ಭಾವಕ್ಕಾಗಿ ಕೊಡುತ್ತೇನೆ.

ನಿದ್ದೆ

ಹೊಲಗಳಲ್ಲಿ ಮೇಯುತಿಹ ತರತರಹದ ಜಂತುಗಳು,
ಲಲಿತವಹ ಪುಷ್ಪಗಳು, ಹಸುರಾದ ವೃಕ್ಷಗಳು,
ಗಳಗಳನೆ ಹರಿಯುತಿಹ ತಿಳಿನೀರ ಹಳ್ಳಗಳು,
ಇಳೆಯ ಮೇಲ್‌ ಮೆರೆಯುತಿಹ ಹರಿನೀಲದಂಬರವು,
ವನಗಳೊಳು ಹಾಡುತಿಹ ಕಮನೀಯ ಪಕ್ಷಿಗಳು,
ತೆನೆಯಿಂದ ಕಂಗೂಳಿಪ ಬಿತ್ತರದ ಪೈರುಗಳು,
ಮನೆಯಿಂದ ಹೊರಹೊರಟು ಅಲೆಯುತಿಹ ಕವಿವರನು,
ಮನದೊಳಗೆ ಒಂದಾದ ಮೇಲೊಂದು ಸಾಗಿದುವು!

ಶಯನದೊಳು ತಿರುತಿರುಗಿ ಹೊರಳಾಡಿ ಎಡಬಲಕೆ
ನಯನಗಳ ತೆರೆತೆರೆದು ಬಿಗಿಹಿಡಿದು ಮಲಗಿದೆನು:
ಶಯನವೆಂಬುದು ದಿನದ ‘ಕವಿ ಪಯಣ’ ವಾಯ್ತೆನಗೆ!

ಮತ್ತೆ ಮನದೊಳು ದೇವನಂ ನೆನೆದು, ಧರೆಯೊಳಿಹ
ಉತ್ತಮರ ಹೆಸರುಗಳನುಚ್ಚರಿಸಿ, ‘ಶಿವ ನಾನು!’
‘ತತ್ತ್ವ ಮಸಿ!’ ಎಂದೆನುತ ಮಲಗಿದೆನು ಶಯನದೊಳು!
೧೮-೮-೧೯೨೪

೨೦-೮-೧೯೨೪ ರಲ್ಲಿ ಬರೆದ ಒಂದು ಸಾನೆಟ್‌ ‘ನದಿ ತೀರ’ ಸೌಂದರ್ಯ ಸ್ವಾದನೆಯ ಹಿರಿಮೆಯನ್ನು ಘೋಷಿಸಿ, ತುದಿಯಲ್ಲಿ

ಪರಮಾತ್ನಾಡುತಿಹನಲೆಯಾಗಿ ಲೀಲೆಯಿಂ;
ಮರಗಳಲಿ ಅಲರಾಗಿ ನಗುತಿಹನು; ನದಿಯಾಗಿ
ಹರಿಯುವನು; ಕವಿಯಾಗಿ ಸಂತೋಷಪಡುಹತಿಹನು!
ಎಂದು ಪೂರ್ಣಾದ್ವೈತವನ್ನು ಸಾರುತ್ತದೆ.

‘ಸಂಜೆ’ ‘ಕವಿ’ ‘ಸರೋವರ’ ‘ಎಲ್ಲಿಹುದು ವೈಕುಂಠ?’ ‘ಸುರ್ಯೋದಯ’ (ಪಶ್ಚಿಮಘಟ್ಟಗಳ ಮೇಲೆ), ಮೊದಲಾದ ಕವನಗಳ ತರುವಾಯ ೧೨-೯-೧೯೨೪ರಲ್ಲಿ ‘ಬಾಲ್ಯ’ ಎಂಬ ಕವನ ರಚಿತವಾಗಿದೆ. ಅದರ ಸರಳತೆಗಾಗಿ ಇಲ್ಲಿ ಉಲ್ಲೇಖನಾರ್ಹವಾಗಿದೆ: ವಸ್ತು ಕವಿ ತನ್ನ ಬಾಲ್ಯವನ್ನು ನೆನೆದು ಅದರ ಮತ್ತೆ ಮರಳಲಾರದ ಸುಖವನ್ನು ಕುರಿತು ಸದ್ಯದಲ್ಲಿ ಬಾಲ್ಯವನ್ನು ಅನುಭವಿಸುತ್ತಿರುವ ಬಾಲಕನೊಬ್ಬನಿಗೆ ಹೇಳುತ್ತಿದ್ದಾನೆ.

ಬಾಲ್ಯ

ಕಂದನ ಲೀಲೆಯ
ಅಂದಿನ ದಿನಗಳು
ಹಿಂದಕೆ ಬರುವುವೆ ಎಲೆ ಕಂದ?
ಅಂದಿನ ಇಂದುವು
ಇಂದಿಗು ಬಂದರು
ಬಂದುದೆ ಅಂದಿನ ಆನಂದ?
ಅದುದರಿಂದಲಿ
ಈ ದಿನ ಶುಭದಿನ
ವಾದುದು ಎನ್ನುತ ನಲಿದಾಡು!
ಆದುದು ಆಗಲಿ;
ಮೋದವ ನೀ ಪಡೆ;
ಹೋದುದು ಬಾರದು ಎಲೆ ಕಂದ!

ಅಂದನ ಭಾನುವೆ
ಇಂದಿಗು ಬರುವನು;
ಮುಂದೆಯು ಎಂದಿಗು ತೊಳಗುವನು.
ಅಂದಿನ ಗಗನವೆ
ಚೆಂದದಿ ಮೆರೆದರು
ಹಿಂದಿನ ಅಂದವ ಹೊಂದುವೆಯ?

ಅಂದಿನ ಶೋಕವೆ
ಇಂದಿನ ಸಂತಸ
ಅಂದಿನ ಕಂಬನಿ ಆನಂದ!
ಅಂದಿನ ತೊಂದರೆ
ಇಂದೆನಗಾದೊಡೆ
ಚಂದದ ನಲಿಯುವೆ ಎಲೆ ಕಂದ!
ಕಂದನೆ! ಚಂದನೆ!
ಇಂದಿನ ದಿನಗಳೆ
ಅಂದಿನ ದಿನಗಳು ಆಗುವುದು!
ಹಿಂದಿನ ದಿನಗಳ
ಚಂದನ ಹೊದಿಕೆಯ
ಮುಂದಿನ ಕಾಲಕೆ ನೀ ಹೊದಿಸು!

ಬಾಲನ ದಿನಗಳೆ,
ಲೀಲೆಯ ವನಗಳೆ,
ಕಾಲನು ಬಾಲ್ಯವ ನುಂಗುವನೆ?
ಕಾಲವು ಕಳೆದರು
ಬಾಲನು ಮೆರೆಯನೆ
ಲೀಲೆಯ ಪೂವಿನ ತೋಟದೊಳು?
೧೨-೯-೧೯೨೪