೧೩-೯-೧೯೨೪ರಲ್ಲಿ ಭೋಗಷಟ್ಪದಿಯಲ್ಲಿ ಬರೆದ ‘ಶರಚ್ಚಂದ್ರ’ ಎಂಬ ಕವನದ ಮೂರು ಪದ್ಯಗಳಲ್ಲಿ ಮೊದಲನೆಯದು ಹೀಗಿದೆ:

ತರುವ ತಳಿರ ನಡುವೆ ಸುದೆಯ
ತೆರೆದ ಕಿರಣ ಮಳೆಯ ಸುರಿದು
ಹರುಷದಿಂದ ನಗುತಲಿಹನು ಶರದಚಂದ್ರನು!
ಸುರರನಿರದೆ ಕರೆದು ಕರೆದು
ಧರಣೆಯ ಎದೆಯ ತೊಳಗಿ ಬೆಳಗಿ
ಮರೆಯುತಿಹನು, ಸರಸದಿಂದ ಶರದಚಂದ್ರನು!

೧೫-೯-೧೯೨೪ ರಲ್ಲಿ ಬರೆದ ‘ನೀನಾರು’ ಎಂಬ ಕವನ ಕವಿಯ ಆಗಿನ ಅದ್ವೈತ ಪರವಾದ ಮನೋಧರ್ಮಕ್ಕೆ ಒಂದು ಹೆಗ್ಗುರುತಾಗಿದೆ. ಅದು ಸ್ವಾಮಿ ವಿವೇಕಾನಂದರ ಭಾಷಣಗಳ ಅಧ್ಯಯನದ ಪ್ರಭಾವ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ೪೩ ಪಂಕ್ತಿಗಳುಳ್ಳ ಈ ಕವನದಲ್ಲಿ ಭಾವ ಮಾದರಿಗಾಗಿ ಎಂಟು ಹತ್ತು ಪಂಕ್ತಿಗಳನ್ನು ಕೊಡುತ್ತೇನೆ.

ನೀನಾರು? ನಾನಾರು? ನಿನಗೆನಗೆ ಸಂಬಂಧ
ಮೇನಿಹುದು? ಪೂಗಾಯಿಗಳಿಗಿರುವ ಬಂಧನಂ
ತಾನಲ್ಲವೆ! ನೀ ಬೇರೆ ನಾ ಬೇರೆ ಎಂದೇಕೆ
ಮಾನವರೆ ಕೂಗುತಿಹರರಿಯದಜ್ಞಾನದಲಿ?
ನೀನೆ ನಾನಾಗಿ ಬಂದೊಡಾಂ ನೀನಲ್ಲವೆ?
ಜಲ ಮೋಡವಾಗಿ ಬಂದೊಡದು ವಾರಿತ್ವಮಂ
ಕಳೆಯುವುದೇ? ಎಂದಾದರೊಂದು ದಿವಸವದು ತಾಂ
ಇಳೆಗಿಳಿಯದಿಹುದೆ ಮಳೆಯ ರೂಪಿಂ; ಮೇಣ್‌ ಪುಗದೆ
ಜಲಧಿಯನು ತೊರೆಗಳಲಿ ಹರಿದು?…

ಇಹೆ ನೀನು ನನ್ನೊಳಗೆ , ನಾನಿಹೆನು ನಿನ್ನೊಳಗೆ,
ನಾನು ನೀನಲ್ಲದೊಡೆ ನೀನು ನಾನಲ್ಲವೇ?

ವೇದಾಂತ ಬೆದರಿದೊಡೆ, ಸಾಂಖ್ಯ ತಾನಂಜಿದೊಡೆ,
ಆದರದ ಯೋಗ ತಾಂ ಹಿಂಜರಿಯದೊಡಾಂ ಬೆದರೆ!
ವೇದಗಳ್‌ ಸೋಲಬಹುದೊಡಾಂ ಸೋಲೆನೈ!
ನಡುನಡಗಿ ತರ್ಕ ತಲೆತಗ್ಗಿದೊಡೆ, ಮಿಮಾಂಸ
ಹುಡುಗರಂದದಿ ತಾನು ತೊದಳಬಹುದಾದೊಡಾಂ
ಇಡೆನು ಹಿಂದೊಂದಡಿಯನೀ ತತ್ವದೆಡೆಯಿಂದ!
ನೀನಾರು? ನಾನಾರು? ಪೇಳ್‌, ಭೇದ ತಾನಿಹುದೆ!
ನಾನಿಹೆನು ನಿನ್ನಲ್ಲಿ; ನೀನಿರುವೆ ನನ್ನಲ್ಲಿ!
ನಾನು ನೀನೆಂಬುದದು ಮಾಯೆ ತಾನಲ್ಲವೇ?
೧೫-೯-೧೯೨೪

೧೯-೯-೧೯೨೪ ರಲ್ಲಿ ಬರೆದ ‘ಸನಾತನ ಕವಿ’ ಎಂಬುದು ದೇವರೆ ಕವಿ, ಸೃಷ್ಟಿ ಅವನ ಕವನ ಎಂಬ ಭಾವನೆಯನ್ನೊಳಗೊಂಡಿದೆ.

ಜಗದೀಶ ತಾನೊರ್ವ ವರಕವಿಯು,
ಜಗವು ತಾನವನ ಕವಿತೆ.
ಆದ್ಯಂತ ಮೊಂದಿಲ್ಲವನ ಪದಕೆ;
ಓದಿ ತಿಳಿಯಲಸದಳವು!

ಗಣ ಮಾತ್ರೆ ಪದಪ್ರಾಸ ತೋರುವುವು
ದಿನ ಮಾಸ ವರಷುಗಳಿ:
ವರ್ಣನಾ ಕೌಶಲ್ಯವೆಸೆಯುತಿದೆ
ಪರ್ಣವರ ಕೋಟೆಗಳಲಿ.
ಸಲ್ಲಲಿತ ಉಪಮಾನ ಉಪಮೇಯ
ಎಲ್ಲಿಯುಂ ಕಂಗೊಳಿಪುವು,
ಪರ್ಣಸೌಂದರ್ಯದಿಂ ಮೆರೆವೆಳೆಯು
ವರ್ಣಾರ್ಣವದಿ ತುಂಬಿದೆ!

ಮೊರೆಯುವಳಿವಿಂಡುಲಿಯ ಬೀರುತಿಹ
ವರ ಪುಗಲವನ ಗಾನವು;
ಸುಕವಿತಾ ನೈಪುಣ್ಯ ತೋರುತಿದೆ
ಸಕಲ ಲೋಕ ಸೃಷ್ಟಿಯಲಿ!

ಸಂತಸಮಸಂತಸದ ನೋಟಗಳು
ಸಂತತಂ ಕಂಗೊಳಿಪವು.
ಜನನ ಮರಣದ ಕವಿತೆಯಾಟಗಳು
ದಿನದಿವು ತೋರುತಿಹವು!

ಯಾರವನ ಕವಿಎಯನ್ನುಲ್ಲ ಸದಿ
ಬಾರಿಬಾರಿಗೋದುವರೊ
ತಿಳಿವರವರಾ ಸನಾತನ ಕವಿಯ,
ಕವಿತಾ ವಿಶ್ವದ ರವಿಯ!
೧೯-೯-೧೯೨೪

‘ಕವಿಯ ನಾನಲ್ಲ; ನನ್ನೊಳೊರ್ವಂ ಜೋತಿಮಯ ಕವಿಯಿಯನು’ ಎಂದು ಪ್ರಾರಂಭವಾಗುತ್ತದೆ ೯-೯-೧೯೨೪ ರಲ್ಲಿಯೇ ಬರೆದಿರುವ ಒಂದು ಸಾನೆಟ್‌. ೨೦-೯-೧೯೨೪ರಲ್ಲಿ ಬರೆದ ಒಂದು ‘ಚಕೋರ ಗೀತೆ’ ಎಂಬ ಪ್ರೇಮಕವನ ಪದಮಾಧುರ‍್ಯ ಸಾಧನೆಗಾಗಿ ರಚಿತವಾದಂತಾಗಿದೆ. ೨೦-೯-೧೯೨೪ ರಲ್ಲಿಯೆ ಬರೆದ ಒಂದು ಕವನ ‘ಕವಿ ಪ್ರಲಾಪ’ ಎಂಬುದು ಕವಿಯ ಮನದಲ್ಲಿ ನಡೆಯುತ್ತಿದ್ದ ತಾತ್ವಿಕವಾದ ಹೋರಾಟ ಒಳತೋಟಿಗಳನ್ನು ಕುರಿತದ್ದಾಗಿದೆ. ನಿಸರ್ಗ ಸೌಂದರ್ಯ ಆಸ್ವಾದನೆ, ವೇದಾಂತಾದಿ ಗ್ರಂಥಗಳ ಅಧ್ಯಯನ, ನೈತಿಕ ಜೀವನದ ಸಾಧನಾ ಪ್ರಯತ್ನ, ಮತಧರ್ಮದ ಪೂಜಾರಿ ಕ್ರಿಯೆಗಳ ಅನುಷ್ಠಾನ – ಯಾವುದರಿಂದಲೂ ಭಗವದ್ದರ್ಶನವಾಗಲಿಲ್ಲವಲ್ಲಾ ಎಂಬ ಕೊರಗು ಆ ಕವನದಲ್ಲಿ ಪ್ರತಿಫಲಿತವಾಗಿದೆ. ಸಾಮಾನ್ಯವಾಗಿ ಐದು, ವಿಶೇಷವಾಗಿ ಆರು, ಪಂಕ್ತಿಗಳುಳ್ಳ ಇಪ್ಪತ್ತಾರು ಪದ್ಯಗಳಿವೆ. ಪಲ್ಲವಿಯೂ ಸೇರಿ. ಅದರಲ್ಲಿ ಉಲ್ಲೇಖನಾರ್ಹವಾದ ನಾಲ್ಕಾರನ್ನು ಮತ್ತೆ ಇಲ್ಲಿ ಕೊಡಬಹುದಾಗಿದೆ. ಈ ಕವನದ ಮೂರೊ ನಾಲ್ಕೊ ಪದ್ಯಗಳನ್ನು ಮಹಾರಾಜಾ ಕಾಲೇಜಿನ ‘ಯೂನಿಯನ್‌ ಮ್ಯಾಗಜೀನ್’ ಅಚ್ಚು ಮಾಡಿತ್ತು.

ಏನು ಮಾಡಿದರೇನು?
ಏನನಾಡಿದರೇನು?
ಏನು ನೋಡಿದರೇನು?
ನೀನಾರು ಎಂಬುದನು
ನಾನರಿಯೆನಲ್ಲೊ! ’ ಪಲ್ಲವಿ’

ಕೆಳೆಯರೊಡಗೂಡಿ ನಾಂ
ತಳತಳಿಪ ಸಂಜೆಯಲಿ
ಇಳೆಯ ದೇಸಿಯ ನೋಡಿ
ನಲಿವಾಗ ಬೀಸಿಬಹ
ಎಲರ ಸೇವಿಸಿದೆ…

ಕಂಜಸಖನುದಯಿಸುವ
ಮಂಜಳಿದ ಸಮಯದೊಳು
ರಂಜಿಸುವ ಮೂಡಣದ
ಪಿಂಜರಿತ ರಾಗವನು
ಮುಂಜಾನೆ ಕಂಡೆ…

ನೀಲ ಗಗನದಿ ನಲಿದು
ಲೀಲೆಯಾಡುವ ಮೋಡ
ಮಾಲೆಯನು ನಾ ನೋಡಿ
ಬಾಲಕವಿತೆಯ ಬರೆದು
ಕಾಲವನು ಕಳೆದೆ…

ಉಪನಿಷದಗಳನೋದಿ
ಉಪದೇಶವನು ಮಾಡಿ
ಉಪಮಾನ ಉಪಮೇಯ
ಜಪವ ನಾ ಮಾಡಿ ಬಿಡ
ದಪಮಾನ ಪಡೆದೆ…

ಪ್ರೀತಿಸಿದೆ! ಪ್ರೀತಿಸಿದೆ!
ಪ್ರೀತಿಯೆಂಬುದನರಿಯೆ!
ಪ್ರೀತಿಯೊಂದಿಹುದೆಂದು
ನೀತಿ ಹೇಳಿ‌ದೆ ನಾನು
ಖ್ಯಾತಿಯನ್ನು ಪಡೆದ…

ಶಿವನ ನಾ ಕಂಡಿಹೆನು;
ಶಿವ ರೂಪವಿಲ್ಲದವ.
ಶಿವನಾದಿ, ಶಿವನಂತ್ಯ;
ಶಿವ ನಿತ್ಯ ನಿರ್ಗುಣನು.
ಶಿವ ನಾನು ಎಂದೆ!…

ಪರಮ ಹಂಸರ ಕಂಡೆ;
ವರ ವಿವೇಕರ ಕಂಡೆ;
ಪರಮಾತ್ಮ ನೀನಿಹೆಯಾ?
ಪರಲೋಕ ನಾಕಗಳು
ಇರುವುದೇ ಎಂದೆ…

ಧರೆಯ ಕಟ್ಟುವೆನೆಂದೆ!
ಸಿರಿಯ ಗೆಲ್ಲುವೆನೆಂದು
ಸರಪಣಿಯ ನಾ ಮಾಡೆ,
ಸಿರಿಯ ಕಟ್ಟಲು ಬಿಟ್ಟು
ಕರವ ಬಂಧಿಸಿತು!…

ಒಂದು ಸಲ ನಾ ಬಲ್ಲೆ
ಎಂದು ಹಿಗ್ಗಿದೆನು; ಮ
ತ್ತೊಂದು ಸಲ ನಾನರಿಯೆ
ಎಂದು ನೆರೆ ಕುಗ್ಗಿದೆನು;
ಒಂದು ಸಲ ಇಂದು ನಾ
ಳೆಂದೆನೆಲೆ ದೇವ!…
* * *
ಕವಿತೆಗಳ ಕಳುಹಿದೆನು!
ತಿವಿಯಿರೋ ಈ ಹಾಳು
ಕವಿತಾ ವಿಹಂಗಗಳ
ಕವಿಯನೆಂದು ನುಡಿದರು!
ಕವಿತೆಯೇ ಸಾಕೋ!

ಕಾವ ನೀನೆಂದು
ನಾ ದೇವ ನಿಲಯಂಗಳಿಗೆ
ಪೂವನರ್ಪಿಸ ಪೋದೆ
ಪೂವೊಡೆಯ ತಿಳಿಯದೆಯೆ
ಗಾವಿಲನು ಆದೆ!
೨೦-೯-೧೯೨೪

೨೦-೯-೧೯೨೪ರಲ್ಲಿಯೆ ಬರೆದ ಕವನಗಳಲ್ಲಿ ‘ಏಕಾಂತ’ ಎಂಬುದು ಹೀಗೆ ಮೊದಲಾಗುತ್ತದೆ.

ರಂಜಿಸುವ ಸಂಜೆಗೆಂಪೆಸೆಯುತಿಹುದಂಬರದಿ,
ಕಂಜಸಖನುರಿಯುತಿಹನಂದದಿಂ, ಹೊಂಧೂಳಿ
ಮಂಜು ಮಿಸುನಿಯ ತೆರದಿ ತುಂಬಿಹುದು ಪಡುವಲಂ;
ಸಂಜೆಗೆಂಪಾನಂದಂವಂ ಸಲೆ ಸುರಿಯುತಿಹುದು!

ಇದಲ್ಲದೆ ಇನ್ನೂ ಹತ್ತು ಪದ್ಯಗಳಿವೆ. ಭಾಷೆಯ ಮತ್ತು ಪದಗಳ ಪ್ರಯೋಗದಲ್ಲಿ ಕಾಲೇಜಿನಲ್ಲಿ ಓದಲು ಪ್ರಾರಂಭಿಸಿರುವ ಕನ್ನಡದ ಪ್ರಾಚೀನ ಕಾವ್ಯಗಳ ಪ್ರಭಾವ ಕಾಣುತ್ತದೆ; ಪಿಂಜರಿತ, ಮಯೂಖ, ದ್ಯುಮಣಿ, ಮರೀಚಿ, ನೀಹಾರ, ಕಜ್ಜ, ಮಿಸನಿ ಇತ್ಯಾದಿ! ‘ಏಕಾಂತವೆ, ನೀನೆನ್ನ ಕವಿತಾ ಕಾಂತೆಯೈ!’ ಎಂಬುದೂ ಒಂದ ಪಂಕ್ತಿ. ಇನ್ನೊಂದು ಪದ್ಯ:

ಹಗಲ ಕಡು ಕಜ್ಜಮಂ ಪೂರೈಸಿ, ನೇಗಿಲಂ
ಹೆಗಲ ಮೇಲ್ವೊತ್ತು ಬಳಲಿಕೆಯಿಂದ, ಸಂಜೆಯೊಳು
ನಗುತಲಿಹ ಹೊಲಗಳಂ ನೆರೆ ನೋಡಿ ತಾ ನಗುತ
ಗಗನ ವೈಭವದಿಂದ ಒಕ್ಕಲಿಗ ನಡೆಯುವನು!

ಇನ್ನೊಂದು ಚಿಕ್ಕ ಹಾಡು: ‘ಕಾಲ ಕಾಲ ನೀನಾಗಿರಲು ಕಾಲನಾರೋ?’ ಎಂದು ಮೊದಲುಗೊಂಡು ‘ಲೀಲೆಯಿಂದ ಬಂದಿಹ ನಾವು ಲೀಲೆ ಸೇರ್ವೆವು’ ಎಂದು ಕೊನೆಯಾಗುತ್ತದೆ. ೨೪-೯-೧೯೨೪ ರಲ್ಲಿ ರಚಿತವಾಗಿರುವ ‘ರಾಷ್ಟ್ರೀಯ ಗೀತೆ’ ಭಾಷಾದೃಷ್ಟಿಯಿಂದಲ್ಲದಿದ್ದರೂ ಕವಿಯ ಆಗಿನ ದೇಶಭಕ್ತಿಯ ಭಾವವನ್ನು ಪ್ರಕಾಶಿಸುತ್ತದೆ.

ಓಂ! ಓಂ! ನಮೋ ದೇವಿ ಜಗಜ್ಜನನಿಯೆ!
ಓಂ! ಓಂ! ನಮೋ ದೇವಿ ಭರತಮಾತೆಯೆ!
ಜಯತು ಜಯತು ದೇವಿ ಜನನಿ ಭರತಮಾತೆಯೆ
ಭಯವ ತೊರೆದು ಬರುತಲಿಹೆವು ದಿಶಾಖ್ಯಾತೆಯ!
ಲೋಹ ಬಲವ ರಕ್ತಕರವ ನಾವು ಬಿಡುವೆವು;
ದೇಹ ಬಲವ ಬಿಡದೆಯಾತ್ಮ ಬಲವ ಹಿಡಿದೆವು!
ರಕ್ತ ಕೋಡಿಯನ್ನು ಹರಿಸಿ ಮುಕ್ತಿ ಪಡೆಯೆವು;
ಶಕ್ತಿದೇವಿ ಜಗದ್ಯುಮಣಿ ಸುಳ್ಳ ನುಡಿಯೆವು;
ಜೀವ ದೇಹದಲ್ಲಿ ಇರಲು ನಿನ್ನ ಮರೆಯೆವು;
ದೇವದೇವ ನಿನ್ನೊಳಿಹನು ನಿನ್ನ ತೊರೆಯೆವು;
ತತ್ವಬೋಧೆ ಖಡ್ಗದಿಂದ ನಿನ್ನ ಪೊರೆವೆವು;
ತತ್ವದಿಂದ ಕಾಳಜವನ ನಾವು ಜರೆವೆವು!
ನಿನ್ನ ಸೇವೆಯಮಗೆ ಮೋಕ್ಷ ದೇಶಮಾತೆಯೆ;
ನಿನ್ನ ಉದರಡೆಡೆಯೊಳಿಹನು ಪರಂಜ್ಯೋತಿಯೆ:
‘ನಿನ್ನ ಶಿವನು’ ‘ತತ್ವಮಸಿಯು’ ಎಂಬ ದುರ್ಗವು
ನೀನು ಭಾರತೇಯ ಜನಕೆ ಕೊಡುವ ಸ್ವರ್ಗವು!
ಜಗದ್ಯುಮಣಿ ಭರತಮಾತೆ ಓಂ! ಓಂ! ಓಂ!
ಭಗವದಂಶೆ ಜನ್ಮಭೂಮಿ ಓಂ! ಓಂ! ಓಂ!
೨೪-೯-೧೯೨೪

೨೭-೯-೧೯೨೪ ರಲ್ಲಿ ಬರೆದ ಒಂದು ಸಾನೆಟ್‌ ‘ಕರ್ನಾಟಕ ಮಾತೆಗೆ-(ಕವಿಯ ಭರವಸೆ)’ ಎಂಬುದು ವಿಸ್ಮಯಕಾರಿಯಾಗಿದೆ! ತೊದಲುನುಡಿಯ, ತಿಪ್ಪತಿಪ್ಪ ಹೆಜ್ಜೆಯ ಹಸುಳೆಕವಿ ಕರ್ನಾಟಕದ ಮಾತೆಗೆ ಕೊಡುವ ಭರವಸೆಯನ್ನು ಆಲಿಸಿದರೆ ಹೊಟ್ಟು ಹುಣ್ಣಾಗುವಂತೆ ನಗಲೂಬಹುದು, ಅಥವಾ ಕಾಲದ ಈ ದೂರದಲ್ಲಿ ನಿಂತು ನೋಡಿ ಅಚ್ಚರಿಗೊಳ್ಳಲೂಬಹುದು. ಅಂತೂ ಯಾವ ಭವಿಷ್ಯದ ದುರ್ದಮ್ಯ ಧೈರ್ಯವು ಅಂದಿನ ಬಾಲಕವಿ ಹೃದಯದಲ್ಲಿ ವಾಮನನಂತೆ ಮೂಡಿ ತನ್ನ ಮುಂದಿನ ತ್ರಿವಿಕ್ರಮ ವಿಕ್ರಮವನ್ನು ಘೋಷಿಸುವಂತೆ ಪ್ರೇರಿಸಿತೊ ಅದು ಅತಿಮಾನುಷವೆಂಬಂತೆ ತೋರುತ್ತದೆ. ಅಂದು ಕೊಟ್ಟ ಆ ಭರವಸೆ ಇಂದಿಗೂ (೨೨-೫-೧೯೨೭) ಪೂರ್ತಿಯಾಗಿ ಕೈಗೂಡಿಲ್ಲ, ಕೈಗೂಡದಿದ್ದರೂ ಚಿಂತೆಯಿಲ್ಲ. ಮಗುವಿನ ಒಲವಿನ ಭರವಸೆಯ ಅದರ ಕೈಗೂಡಿಕೆಗಿಂತ ತಾಯಿಗೆ ಮೆಚ್ಚುಗೆಯಾಗುವುದರಲ್ಲಿ ಸಂದೇಹವಿಲ್ಲ.

ಕರ್ನಾಟಕ ಮಾತೆಗೆ
(ಕವಿಯ ಭರವಸೆ)

ಬೆದರದಿರು; ಬೆದರದಿರು; ನಾನಿಹೆನು, ಓ ದೇವಿ!
ಉದಯಿಸುವನೊರ್ವ ಕವಿ ನಿನ್ನುದರ ಭೂಮಿಯಿಂ-
ದದುಭುತದಿ ಧಾರಿಣಿಯ ಜನಗಳಿಗೆ ಮೈದೋರಿ,
ಉದಯ ಭಾಸ್ಕರತೇಜದಿಂದ ಮೆರೆದು ಕಂಗಳಿಗೆ!
ಕುಡಿಯುವಂ ಮಹಾ ತತ್ವಾಂಬುಧಿಯ; ಸಾಹಿತ್ಯ
ದೊಡಲ ಭೇದಿಸುತ ಕವಿತೆಯಾನಂದಮಂ ತಾಂ
ಪಡೆಯುವಂ! ಧರೆಯ ಜನಕೀಯುವಂ ತತ್ವಗಳ
ಬಿಡದೆ; ಪರಲೋಕಮಂ ಹಿಡಿದೆಳೆಯುವನು ಧರೆಗೆ!
ದೇವಿ, ನಿನ್ನುಡಿಯ ಮೇಲವನೊಲಿದು ಪಾಡುವಂ
ಜೀವ ಪರಮರ ವರ ವಿನೋದಮಂ ಮಾಯೆಯಂ
ಭಾವನೆಯ ಕನ್ನಡಿಯನೊಡೆಯುವಂತೊಡೆಯುವಂ!
ಏಳುವಂ ಜೀವಾರ್ಣವ ತರಂಗ ಗಿರಿಯಂತೆ;
ಕಾಲನ ಕರಾಳಮಂ ಅದ್ರಷ್ಟದಾ ದಾಡೆಯಂ
ಸೀಳುವಂ ಸುಕವಿತಾ ಪೂಗೊಡಲಿಯಿಂ ಬಡಿದು!
೨೭-೯-೧೯೨೪

೯-೮-೧೯೨೪ನೆಯ ತಾರೀಖು ಹಾಕಿರುವ ‘ಕೋಕಿಲೆ’ ಎಂಬ ಶಿಶುಗೀತಾ ಸದೃಶವಾದ ಕವನವಿದು.

ಆಲಿಸೈ! ಆಲಿಸೈ! ಕೂಗುತಿದೆ ಕೋಕಿಲೆಯು,
ಬಾಲಕನೆ, ಬಾ ಬೇಗ ಸಂತೋಷದಿ.
ಬಾಲಾರ್ಕ ಮೇಲೇರಿ ಧಾರಿಣಿಯ ಬೆಳಗಿಹನು,
ಬಾಲಕನೆ, ನಡೆ ಬೇಗ ಹೂದೋಟಕೆ!

ಅಲ್ಲಿಹುದು ಆನಂದ, ಅಲ್ಲಿಹುದು ಸೌಂದರ್ಯ;
ನಿಲ್ಲದಿರ್ ನಡೆ ಬೇಗ ತಡಮಾಡದೆ.
ಉಲ್ಲಸಂ ತೇಲುತಿದೆ ಸಲ್ಲಲಿತ ಗಾಳಿಯಲಿ,
ಎಲ್ಲಿಯುಂ ಉಕ್ಕುತಿಹುದಾನಂದವು!

ಗಿರಿಯಿಂದ ಗಿರಿಯೆಡೆಗೆ ಹರಿವಂತೆ ತೋರುತಿದೆ
ಹರುಷದಿಂ ಕೋಕಿಲ ನಿನಾದ ತೊರೆಯು;
ಪರಿಪರಿಯಲಾಲಿಸೀ ಪರದ ಸಂತೋಷಮಂ,
ಪರಮ ಸಂತೋಷವಂ ಪಡೆ, ಬಾಲನೆ!

ಕೋಕಿಲೆಯು ಕೂಗುತಿದೆ!ವೈಶಾಖ ವೈಣಿಕಂ
ನಾಕ ಸಂಗೀತವಂ ಪಾಡುತಿಹನು.
ಏಕಾಂಗಿಯಾಗಲೆದು,ಬಾಲಕನೆ, ಕವಿಯಂತೆ
ಕೋಕಿಲ ನಿನಾದದೊಳೆ ಪಡೆ ನಾಕವಂ!
೯-೮-೧೯೨೪

‘ಪುಷ್ಪಗೀತೆ’ ಯೆಂಬ ಹೆಸರಿನ ಹಸ್ತಪ್ರತಿಯಲ್ಲಿರುವ ಕೊಟ್ಟ ಕೊನೆಯ ಕವನ ಒಂದು ಸಾನೆಟ್ ಪ್ರಯತ್ನ. ಅದರ ಶೀರ್ಷಿಕೆ ‘ಲಕ್ಷ್ಮೀಶ’. ೧೦-೮-೧೯೨೪ ಎಂದು ತಾರೀಖು ಹಾಕಿದೆ. ಕಾವ್ಯದ್ರಷ್ಟಿಯಿಂದ ನೋಡಿದರೆ ಅದು ಬರಿಯ ಅಭ್ಯಾಸ ಮಾತ್ರರೂಪದ್ದು. ಆದರೆ ಕವಿ ಲಕ್ಷ್ಮೀಶನು ನನ್ನ ಮೇಲೆ ಬೀರಿದ ಭಾಷೆಯ ಮತ್ತು ಅಲಂಕಾರಗಳ ಪ್ರಭಾವಕ್ಕೆ ಅದು ಒಂದು ನಿದರ್ಶನವಾಗುತ್ತದೆ. ಕುಮಾರವ್ಯಾಸ, ರನ್ನ, ಪಂಪಾದಿಗಳನ್ನು ಅರಿಯುವುದಕ್ಕೆ ಮುನ್ನ ನನ್ನ ಪ್ರಶಂಸೆಯನ್ನೆಲ್ಲ ಸೂರೆಗೊಂಡು ಹ್ರದಯ ಸಿಂಹಾಸನವೇರಿದ್ದ ಕನ್ನಡ ಕವಿ ಎಂದರೆ ಲಕ್ಷ್ಮೀಶನೊಬ್ವನೆ!

ಲಕ್ಷ್ಮೀಶ

ಕವಿಚೂತವನ ಚೈತ್ರ,ಕವಿತಾ ಕಡಲ ಭೈತ್ರ,
ಕವಿತಾ ಮಧು ತುಂಬಿಯೆ, ಸುರಚನಾವಲಂಬಿಯೆ,
ನವರಸ ತರಂಗ ನಿಧಿ, ಕವಿತಾವೇಶದ ನದಿ,
ಕವಿತಾನಂದ ವೀಚಿ,ಕವಿತೇಂದುವ ಮರೀಚಿ,
ಕವಿತಾ ರಮಣಿ ನಾಥ, ಕವಿನಾಕ ಪುರುಹೂತ,
ಪವಿತ್ರಾತ್ಮದ್ಯುಮಣಿ…ನಾ ವರಖಮಣಿ,
ಕವಿವರರ ಶಿಖಾಮಣಿಯಾನಂದ ತರಂಗಿಣಿ,
ಕವಿಯಾಗಿಯವತರಿಸು, ಕನ್ನಡವನುದ್ಧರಿಸು!
ಕನ್ನಡಂ ಮದಗಜಂ ಕಲಕಿದ ಸರಸಿನಂತೆ
ಜೊನ್ನಮಿಲ್ಲದ ಕಾಳನಿಶೆಯಂತೆ ತೋರುತಿದೆ,
ಪೊನ್ನ ಸಿರಿ ಪುತ್ರಸಿರಿಯಿಲ್ಲದ ವಿಧವೆಯಂತೆ!
ಲಕ್ಷ್ಮೀಶ ಬಾ ಬೇಗ, ಕವಿತೆಯಿಂ ಕರ್ಣಾಟ
ಲಕ್ಷ್ಮೀಯಂ ಪ್ರಜ್ವಲಿಸು;ಕವಿತೆಯಾವೇಶದಿಂ
ಲಕ್ಷ್ಮೀಶರಾಜ್ಯವಂ ಕರೆಯೊಲಿದು ಧಾರಿಣಿಗೆ!

ಭಾಷೆ, ಭಾವ, ಛಂದಸ್ಸು, ಪ್ರಾಸ ಎಲ್ಲದರಲ್ಲಿಯೂ ಎಂತಹ ಅನಾಹುತವಾಗುತ್ತದೆ, ಅಭ್ಯಾಸದಶೆಯಲ್ಲಿಯೆ ಮಹತ್ತಾದುದನ್ನು ಅನುಕರಿಸಲು ಹೊರಟರೆ, ಎನ್ನುವುದಕ್ಕೆ ಮೇಲಿನ ಕವನ ಒಂದು ಸೊಗಸಾದ ಉದಾಹರಣೆಯಾಗುತ್ತದೆ!