೧೯೨೪ನೆಯ ಜೂನ್ ಕೊನೆಯಲ್ಲಿ ನಾನು, ಎಂಟ್ರೆನ್ಸ್ಗೆಐಚ್ಛಿಕವಾಗಿ ತೆಗೆದುಕೊಂಡಿದ್ದ ವಿಜ್ಞಾನ ವಿಷಯಗಳಾದ ಗಣಿತ, ರಸಾಯನಶಾಸ್ತ್ರ, ಭೌತಶಾಸ್ತ್ರಗಳನ್ನು ತ್ಯಜಿಸಿ, ಕಲಾ ವಿಷಯಗಳಾದ ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ತತ್ವಮನಃಶಾಸ್ತ್ರಗಳನ್ನು ತೆಗೆದುಕೊಂಡು ಮಹಾರಾಜಾ ಕಾಲೇಜಿಗೆ ಸೇರಿದೆ. ಕಾಲೇಜಿಗೆ ಸೇರಿದ ಪ್ರಾರಂಭದಲ್ಲಿ, ಅಂದರೆ ಜುಲೈತಿಂಗಳ ಉತ್ತರಾರ್ಧದಲ್ಲಿಯೊ ಅಥವಾ ಆಗಸ್ಟ್ ಪೂರ್ವಾರ್ಧದಲ್ಲಿಯೊ ಒಂದು ಸ್ಮರಣೀಯವಾದ ಸ್ವಾರಸ್ಯ ಸಂಗತಿ ನಡೆಯಿತು. ಕಾಲೇಜಿನ ಯೂನಿಯನ್ನಿನಲ್ಲಿ ಪ್ರೊಫೆಸರ್ ವಿ.ಎಲ್.ಡಿಸೋಜರವರ ಚೊಚ್ಚಲು ಭಾಷಣ ಏರ್ಪಾಡಾಗಿತ್ತು.

ಶ್ರೀ ಡಿಸೋಜ ಅವರು ಆಗತಾನೆ ತಮ್ಮ ಅಧ್ಯಯನವನ್ನು ಇಂಗ್ಲೆಂಡಿನಲ್ಲಿ ಪೂರೈಸಿ ಮೈಸೂರಿಗೆ ಹಿಂತಿರುಗಿ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಯಲ್ಲಿ ನಿಂತಿದ್ದರು. ಅವರ ಅಂದಿನ ಭಾಷಣದ ವಿಷಯ-ಇಂಗ್ಲೆಂಡಿನಲ್ಲಿ ತಮಗಾದ ಅನುಭವಗಳನ್ನು ಕುರಿತದ್ದಾಗಿತ್ತು.

ಯುವಕರೂ ಉತ್ಸಾಹಿಗಳೂ ವಾಗ್ಮಿಗಳೂ ವಿನೋದಪ್ರೀಯರೂ ಭಾಷಣದ ಮಧ್ಯೆ ಮಧ್ಯೆ ಹಾಸ್ಯದ ಚಟಾಕಿಗಳನ್ನು ಹಾರಿಸಿ ವಿದ್ಯಾರ್ಥಿಗಳನ್ನು ನಗೆಗಡಲಿನಲ್ಲಿ ಮುಳುಗಿಸಿ ತೇಲಿಸುವಷ್ಟು ಸಮರ್ಥರೆಂದು ಹೆಸರುವಾಸಿಯಾಗಿದ್ದವರೂ ಆಗಿದ್ದ ಅವರ ಭಾಷಣಕ್ಕೆ ಸಭಾಂಗಣದ ಅಂಗಳವೂ ಗ್ಯಾಲರಿಯೂ ಕಿಕ್ಕಿರಿದು ತುಂಬಿತ್ತು. ಹೊಸದಾಗಿ ಕಾಲೇಜು ಮೆಟ್ಟಿಲು ಹತ್ತಿದ್ದ ನನ್ನತಂಹ ತರುಣರ ಉತ್ಸಾಹಕ್ಕಂತೂ ಎಲ್ಲೆ ಇರಲಿಲ್ಲ.

ಭಾಷಣದ ಉದ್ದಕ್ಕೂ ನಗೆ ಕೈಚಪ್ಪಾಳೆ ಸಂತೋಷ ಘೋಷಣಗಳು ತುಂಬಿದ್ದುವು. ಭಾಷಣ ಮುಕ್ತಾಯವಾದ ಮೇಲೆ ಕಾರ್ಯದರ್ಶಿ ‘ಯಾರಾದರೂ ಏನಾದರೂ ಪ್ರಶ್ನೆ ಕೇಳುವುದಿದ್ದರೆ ಕೇಳಬಹುದು’ ಎಂದು ಸಭೆಗೆ ತಿಳಿಸಿದರು.

ಹೆಚ್ಚಾಗಿ ಯಾರು ಪ್ರಶ್ನೆ ಕೇಳಲಿಲ್ಲ. ಒಂದಿಬ್ಬರು ಏನನ್ನೊ ಪ್ರಶ್ನೆ ಹಾಕಿದರು.ಅವಕ್ಕೆಲ್ಲಾ ಭಾಷಣಕಾರರು ನಗೆ ಚಿಮ್ಮಿಸುವ ಉತ್ತರಗಳನ್ನೆ ಕೊಡುತ್ತಿದ್ದರು. ನಾನು ಎದ್ದು ನಿಂತೆ:‘What position does Mysore hold in the mind of the British Public?’ ಎಂದು ಕೇಳಿದೆ.

‘Cipher!’ ಎಂಬ ಉತ್ತರ ಬಾಣದಂತೆರಗಿತು!

ಇಡೀ ಸಭೆಗೆ ಸಭೆಯ ‘ಘೇ ಉಘೇ ಉಘೇ’ ಎಂಬಂತೆ ನಗೆಯ ಕೈ ಚೆಪ್ಪಾಳೆಯ ಉತ್ಕಂಠ ಕೋಲಾಹಲದ ತುಮುಲ ಶಬ್ದಘೋಷ ಯೂನಿಯನ್‌ ಭವನದ ಗೋಡೆಗಳೆಲ್ಲ ವಿಕಂಪಿಸಿ ಅನುರಣಿತವಾಗುವಂತೆ ಕಿವಿಗಳಿಗೆ ಅಪ್ಪಳಿಸಿಬಿಟ್ಟಿತು!

ಪ್ರಶ್ನೆ ಕೇಳಿ ಇನ್ನೂ ನಿಂತೇ ಇದ್ದ ನನಗೆ ತೇಜೋಭಂಗವಾಗಿ ಕಿಕ್ಕಿರಿದ ಸಭೆಯ ಸಾವಿರಾರು ಕಣ್ಣುಗಳ ಕುಹಕನೋಟದಿಂದ ಆದಷ್ಟು ಶೀಘ್ರ ತಪ್ಪಿಸಿಕೊಳ್ಳಲೆಂಬಂತೆ ದೊಪ್ಪನೆ ಕುಳಿತು ಹುದುಗಿ ಹುದುಗಿಬಿಟ್ಟೆ!

ಸಮಾರಂಭ ಅಲ್ಲಿಗೇ ಮುಕ್ತಾಯವಾಯಿತು.

‘ಬ್ರಿಟಿಷ್‌ ಸಾರ್ವಜನಿಕರ ಮನಸ್ಸಿನಲ್ಲಿ ಮೈಸೂರಿಗಿರುವ ಸ್ಥಾನವೇನು?’ ಎಂದು ನಾನು ಕೇಳಿದ್ದ ಪ್ರಶ್ನೆಗೆ ಶ್ರೀ ಡಿಸೋಜ ಅವರು ‘ಸೊನ್ನೆ!’ ಎಂದು ಕೊಟ್ಟಿದ್ದ ಉತ್ತರ ನೂರಕ್ಕೆ ನೂರು ಪಾಲೂ ಸತ್ಯವಾಗಿತ್ತು. ಆದರೆ ನನ್ನ ಸ್ವದೇಶ ಭಕ್ತಿಯ ತಾರುಣ್ಯಕ್ಕೆ ಆ ಉತ್ತರ ಅವಮಾನಕರವೂ ಅವಹೇಳನ ಸ್ವರೂಪದ್ದೂ ಆಗಿ ತೋರಿತು. ನಮ್ಮ ಮೈಸೂರು ಅಷ್ಟೊಂದು ಯಃಕಶ್ಚಿತ ವಸ್ತುವಾಯಿತಲ್ಲಾ ಎಂದು ಮನಸ್ಸಿಗೆ ಖೇದವಾಯಿತು. ನಮ್ಮ ನಾಡಿನ ಕೀರ್ತಿ ಸರ್ವವ್ಯಾಪಕವಾಗುವಂತೆ ನಾವು ಮಾಡಲೇಬೇಕೆಂದು ಒಂದು ಬಾಲಿಶ ಮಹಾತ್ವಾಕಾಂಕ್ಷೆ ಹೃದಯದಲ್ಲಿ ಹೆಡೆಯೆತ್ತಿತು. ಆಗ ನನ್ನ ಮನಸ್ಸಿನಲ್ಲಿ ನಾವು ಏನನ್ನೆ ಸಾಧಿಸಿದರೂ ಅದು ‘ಜಗತ್‌ಪ್ರಸಿದ್ಧ’ ವಾಗುವಂತಾಗಬೇಕು ಎಂಬ ಕೀರ್ತಿಲೋಭವಿತ್ತು. ಅದಕ್ಕಾಗಿ ಏನನ್ನೋ ಮಾಡಲು ಹೃದಯ ಹಾತೊರೆಯುತ್ತಿತ್ತು. ಏನನ್ನು ಮಾಡುವುದೋ ಅದಕ್ಕೆ ಗೊತ್ತಿರಲಿಲ್ಲ. ಅಂತೂ ಏನನ್ನಾದರೂ ಮಾಡಬೇಕು! ಎಷ್ಟೋ ವರ್ಷಗಳ ತರುವಾಯ ಆ ಕೀರ್ತಿಲೋಭವನ್ನು ‘ಕೀರ್ತಿಶನಿ’ ಎಂದು ಅಭಿಶಪಿಸಿ, ನಾವು ಮಾಡುವ ಕೆಲಸದ ಬೆಲೆ ತನಗೆ ತಾನೆಯೆ ಸಿದ್ಧವಾಗಬೇಕೆಲ್ಲದೆ ಅವರೂ ಇವರೂ ಹತ್ತಿರದವರಾಗಲಿ ಸುದೂರದವರಾಗಲಿ ಕೊಡುವ ಸ್ತುತಿಯಲ್ಲ ಎಂಬುದನ್ನು ಗುರುಕೃಪೆಯಿಂದ ಸಾಕ್ಷಾತ್ಕರಿಸಿ ಕೊಂಡ ನನಗೆ ಅಂದು ಪ್ರೊ. ಡಿಸೋಜರ ‘Cipher!’ ಅನ್ನು ಸಹಿಸಲಾಗಲಿಲ್ಲ.

ಯಾವ ಸ್ನೇಹಿತರೊಡನೆಯೂ ನನ್ನ ನಿರ್ಧಾರವನ್ನು ಹೇಳದೆ ಸಂತೆಪೇಟೆಯ ಆನಂದ ಮಂದಿರದ ನನ್ನ ಗಲೀಜಿ ಕೊಟಡಿಗೆ ಬಂದೆ. ‘Cipher!’ ಎಂಬ ಶೀರ್ಷಿಕೆ ಕೊಟ್ಟು ಒಂದು ತಕ್ಕಮಟ್ಟಿನ ದೀರ್ಘಲೇಖನ ಬರೆದೆ, ಇಂಗ್ಲಿಷಿನಲ್ಲಿ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲವಷ್ಟೆ! ಅದು ತುಂಬ ಭಾವತಿರೇಕ ಪ್ರಧಾನವಾಗಿತ್ತು. ಭಾಷೆಯೂ ಕಾವ್ಯಭಾಷೆಯ ಉಜ್ವಲ ರೀತಿಯದ್ದಾಗಿತ್ತು. ಆ ಲೇಖನದಲ್ಲಿ ಮಧ್ಯೆ ಮಧ್ಯೆ ಇಂಗ್ಲಿಷ್‌ ಕವಿತೆಯ ಉದ್ಧರಣೆಗಳನ್ನೂ ಸೇರಿಸಿದೆ. ಆ ಇಂಗ್ಲಿಷ್‌ ಕವಿತೆ ಬೇರೆ ಯಾವ ಮಹಾ ಕವಿಯದ್ದೂ ಆಗಿರಲಿಲ್ಲ, ನಾನೆ ಬರೆದದ್ದಾಗಿತ್ತು. ಆ ಸಂದರ್ಭಕ್ಕೆ ಕೆಲದಿನಗಳ ಹಿಂದೆ, ಅಂದರೆ ೧೭-೭-೧೯೨೪ ರಲ್ಲಿ, ‘Maharaja’s College’ ಎಂಬ ಶೀರ್ಷಿಕೆಯಲ್ಲಿ ನಾನು ಒಂದು ಸುಧೀರ್ಘ ಕವನವನ್ನು ಬರೆದಿದ್ದೆ. ಆ ಕವನದಿಂದಲೆ ಅಲ್ಲಲ್ಲಿ ಕೆಲವು ಪಂಕ್ತಿಗಳನ್ನು ತೆಗೆದು ಉದ್ಧರಿಸಿದ್ದೆ. ಮುಂದಿನ ಕಥೆಯನ್ನು ಹೇಳುವುದಕ್ಕೆ ಮೊದಲು ಆ ಕವನವನ್ನಿಲ್ಲಿ ಕೊಡುತ್ತೇನೆ. ಅದರಲ್ಲಿ ಸುಮಾರು ೧೭೫ ಪಂಕ್ತಿಗಳಿವೆ. ಅದು ಮೊತ್ತದಲ್ಲಿ ಪ್ರಾಸರಹಿತವಾಗಿದ್ದರೂ ಅಲ್ಲಲ್ಲಿ ಸ್ವಾಭಾವಿಕವಾಗಿಯೆ ಪ್ರಾಸಬದ್ಧವಾಗುವುದನ್ನು ತಿರಸ್ಕರಿಸಿಲ್ಲ. ನನ್ನ ಆ Cipher ಲೇಖನದಲ್ಲಿ ಪ್ರತಿಪಾದಿತವಾಗಿದ್ದ
‘ನಾವು ಅನಾಮಧೇಯರಾಗಿರಬಾರದು. ಲೋಕದಲ್ಲಿ ನಾವೂ ಪ್ರತಿಷ್ಠಿತ ಜನಾಂಗವಾಗಬೇಕು. (Chiper) ಸೊನ್ನೆಗಳಾಗಿರಬಾರದು. ಅದಕ್ಕಾಗಿ ಸಾಹಿಸಿಗಳಾಗಬೇಕು, ದುಡಿಯಬೇಕು, ಎದ್ದುನಿಂತು. ಜಗನ್ನಯನ ಕೇಂದ್ರಗಳಾಗಬೇಕು’ ಎಂಬ ಭಾವನೆ ತುಸುಮಟ್ಟಿಗೆ ‘Maharaja’s College’ ಕವನದಲ್ಲಿಯೂ ಮಿಂಚುತ್ತದೆ.

ಆ ಕವನವನ್ನು ಬಿಡುವುಗಂಟೆಯ ಸಮಯದಲ್ಲಿ ಕಾಲೇಜಿನ ಮೊದಲನೆಯ ಬಿ.ಎ.ತರಗತಿಯ ಉಪನ್ಯಾಸಾಂಗಣದ ಪಡುವಣಕ್ಕಿರುವ ಕಟೆಕಟೆಗೆ ಒರಗಿ ನಿಂತು ಬರೆದಿದ್ದೆ. ಆಗ ಜುಲೈ ತಿಂಗಳು, ಮಳೆಗಾಲ, ಮಳೆ ಜಿರ್ರೆಂದು ಹೊಯ್ಯುತಿತ್ತು, ಗಾಳಿಯೂ ರೊಯ್ಯನೆ ಬೀಸುತಿತ್ತು. ಎದುರಿಗಿದ್ದ ಆಠಾರ ಕಛೇರಿ, ಆಟದ ಮೈದಾನ, ಮರಗಳು ಎಲ್ಲ ಮಳೆಪರದೆಯೊಳಗೆ ಮಂಜಾಗಿದ್ದವು.

MAHARAJA’S COLLEGE

Cloudy heavens! and a day
Not of sun-shine but of showers.
And a dull drizzling rain
Upon this wide, wide plain
Adds monotony
To this monotonous scene.
The trees scattered here and there
Stand musing and serene
Like phantoms in the mist.
The winds blow across the bare
Forsaken stony ground,
Chill and grumbling. An poet,
Is this monotony?
Is there no harmony,
Grim beauty in the scence?
If it be melancholy
Is it not sweet and holy?

Calm and majestic rise
These pensive towers aloft
On this speckled dreamy plain
Grave and serene! The breath
That whistles thro’ these halls
Seems tremendously wise
And saturated with lore;
Here is wisdom’s dignity
And heaven’s serenity.

How grave! The very walls
Seem eager to teach us
The spirit of the speeches,
As if they have gained for years
The minds of professors great!
True, they can teach, if only
We listen to their homily.
For years they have stood like this
Listening, thinking, musing;
Not a word have they spoken,

Not a speech have they forsaken.
They have heard great truths form mouths
That drank the sweetest portions
From wisdom’s mightiest oceans:
The mighty Milton to them
Is full familiar,
And lyric Shelley intimate,
And sage-like Words worth too
Is well-known and held so dear,
For he too spoke with walls;
Shakespheare the magician
Thro’ their white stony bosoms
Oft has penetrated his lyre
To bring forth sweetest blossoms;
He fills each fane of love.
The sweet muse of Laksmeesha
And Pampa’s lovely poems
Oft have echoed from these hearts!
Many! Many! My pen fails
To name them all. Poesy
And Science and Philosophy,
Virtue and Love and Beauty
The sacred sense of Duty
All sprout from these great halls.
Heaven’s sweetest grace on thee,
O Fane of Liberty!

Break! Break! Sweet shell of the ocean
Of know ledge and emotion!
Let thy hearts dazzle the earth
With their orient beams!
Break! Break, thou frolic-some Spring
With songs and acclamations
And waving decorations;
Let thy flower-children leap
Dancing, waving, singing
From every bush and tree
With their tipsy coronals
Of various shapes and hues
White and pink and crimson red,
Gray and green and yellow bright;
Ah! Let their dewy fragrance
Sweet and celestial
Fill both you blue heaven and earth,
Alluring angels from heaven
With their soul-stirring songs,
Such as great sages here
When enthroned in skies supreme;
Leap like flames in summer lit
On some dried moor-land wide,
From land to land to allure
Bees that die for spring-time flowers.
Scatter thy golden glory,
O spring-time! Spring-time! Spring-time!
Send forth thy winged angels.
Flower-robed, white-bosomed;
Let them come marching on
In one continuous train
With bag-pipes, vilins, flutes
Amazing all the worlds
With Eternal Harmony!
Let the whole Universe
Tremble with joy to hear
O spring-time, spring-time, spring-time,
Thy frame-quaking harmony,
Sweetest child of the Year!

O Lotus of Liberty,
Shrine of Saraswathy,
I came. a mad-man inspired,
Hoping to meet in thee
A kindred “Idiot Inspired”,
That we both may join and sing
Mad songs to this still mad world,
Each seeking in the other
The love of a soul-bound brother!
But alas! I alone am mad;
All others are wise, too wise
To despise wisdom itself!
Beauty and virtue and love
To them are naught but words
To pursue, to speak, to descant
And in the long run forget!
I hoped,–as others met
At famous Rugby and Eton,
Oxford and Cambridge of Britain
Some kindred spirits great
To exchange their minds and hearts,–
To meet some heart of a Poet
Blossoming, solemn and quiet,
But alas! all seem to move
On the beaten track of life
In this dull world’s deep-cut groove,
Like sheep to pastures driven
In one monotonous chain!
Oh they sail the ocean of life
Like ships adrift on seas
Turbulent, fierce and wild
Without joy, without hope, without bliss,
Causual and drived by gusts
To the vague and far away shores
Unknown, unheared-of, unseen!
O Hope, thou life of life,
Magnet to life’s great course
What sad flower from the crown
Hast fallen withered on their hearts?
Hope, who art beauty and bliss,
Thou who art joy and Liberty
What dark veil of thy garment
Hides the radiance of thy face
From these half-crippled soulds?

Hence! Thou dark monotony
From this sweet fane of lore!
Come, sweet change, come and crown
With tulsi wreaths this fane
Of love and Liberty.
Oh! Kindle the spark of life
In these young and youthful hearts,
For still that fire divine
With which our lives began
Lingers within these souls
Tho’hard and dark and cold
They seem to be to eyes
That skim thro’ deep reality!

O Poesy, sweet dear Poesy,
Descend from heaven upon
This Home of quill and lyre,
And dance on yonder tower!
Oh let thy radiance illume
The dreary cavern of heart
And every bosom know
Its glory dazzling high
And its own Divinity!
Children of Infinity
Ye are Eternity!
೧೭-೭-೧೯೨೪

‘Cipher’ ಲೇಖನದ ಹಸ್ತಪ್ರತಿ ಸಿದ್ಧಪಡಿಸಿ ‘‘ಕಿಶೋರ ಚಂದ್ರವಾಣಿ’’ ಎಂಬ ಗುಪ್ತನಾಮದ ಮರೆಯಲ್ಲಿ, ಬೆಂಗಳೂರಿನಿಂದ ಹೊರಡುತ್ತಿದ್ದ ದಿನಪತ್ರಿಕೆ Daily Mailಗೆ ಕಳಿಸಿದೆ, ಅದರ ಮರುದಿನವೂ ಅಥವಾ ಮರು ಮರುದಿನವೊ ನಾನು ಬೆಳಿಗ್ಗೆ ಹನ್ನೊಂದು ಗಂಟೆಗೆ ಕಾಲೇಜಿಗೆ ಹೋದವನು ಮೊದಲನೆಯ ಪೀರಿಯಡ್ಡು ಕ್ಲಾಸು ಇರಲಿಲ್ಲವಾದ್ದರಿಂದ ಬಳಿಯಿದ್ದ ಯೂನಿಯನ್ ಕಟ್ಟಡಕ್ಕೆ ಹೋದೆ. ಅದರ ಉಪ್ಪರಿಗೆಯಲ್ಲಿದ್ದ ರೀಡಿಂಗ್ ರೂಮಿನಲ್ಲಿ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಿಕಗಳು ಮತ್ತು ಲೈಬ್ರರಿ ಇದ್ದಿತ್ತಾದ್ದರಿಂದ ಮೆಟ್ಟಲು ಹತ್ತಿ ಮೇಲಕ್ಕೆ ಹೋದೆ. ಹೋಗಿ ನೋಡುತ್ತೇನೆ: ವಿದ್ಯಾರ್ಥಿಗಳು ಕಿಕ್ಕಿರಿದಿದ್ದಾರೆ! ಏನೋ ಗುಜುಗುಜು ಉದ್ವೇಗ ವ್ಯಾಪಿಯಾದಂತಿದೆ! ಅದರಲ್ಲಿಯೂ Daily Mail ಇದ್ದ ಉದ್ದನೆಯ ವಾಲುಮೇಜಿನ ಸುತ್ತ ಅತಿ ಹೆಚ್ಚು ಜನಸಂದಣಿ! ನನಗೂ ಇದೇಕೆ ಹೀಗೆ? ಎಂಬ ಕುತೂಹಲ ಉಕ್ಕಿ ಆ ಮೇಜಿನ ಬಳಿಗೇ ಹೋದೆ. ಹುಡುಗರು ಕುತ್ತಿಗೆ ನಿಕ್ಕುಳಿಸಿ ತುದಿಗಾಲ ಮೇಲೆ ನಿಂತು ಏನನ್ನೋ ನೋಡಲು ಹವಣಿಸುತ್ತಾ ಮುಂದೆ ನಿಂತಿದ್ದವರನ್ನು ನೂಕುತ್ತಿದ್ದರು. ನಾನೂ ನಿಕ್ಕುಳಿಸಲು ಪ್ರಯತ್ನಿಸಿದೆ. ಪ್ರಯೋಜನವಾಗಲಿಲ್ಲ. ಬಳಿಯಿದ್ದವರೊಬ್ಬರನ್ನು ವಿಚಾರಿಸಿದೆ.

“ಮೊನ್ನೆ ಡಿಸೋಜ ಅವರ ಭಾಷಣ ಇತ್ತಲ್ಲಾ ಯೂನಿಯನ್‌ನಲ್ಲಿ ಅವರ ವಿದೇಶದ ಅನುಭವಗಳನ್ನು ಕುರಿತು, ಅದರ ವಿಚಾರವಾಗಿ ‘Cipher’ ಎಂದು ಅಗ್ರ ಲೇಖನ ಬಂದಿದೆ Daily Mailನಲ್ಲಿ.”

“ಅಗ್ರಲೇಖನ (Editorial) ಬಂದರೆ ಯಾಕೆ ಇಷ್ಟೊಂದು ಗಲಾಟೆ ಗಲಿಬಿಲಿ?”

“ಆ ಅಗ್ರಲೇಖನ ಅದರ ಸಂಪಾದಕರೆ ಬರೆದದ್ದಲ್ಲಾರೀ. ನಮ್ಮವರೇ ಯಾವನೋ ಬರೆದದ್ದನ್ನು ಅವನು ಎಡಿಟೋರಿಯಲ್ಲಾಗಿ ಹಾಕಿಬಿಟ್ಟಿದ್ದಾನೆ.”

“ಹಾಕಿದರೆ ಏನಂತೆ?”

“ಮೈಸೂರಿನ ಸ್ಥಾನ ಇಂಗ್ಲೆಂಡಿನಲ್ಲಿ ಸೊನ್ನೆ ಎಂದು ಮೈಸೂರಿನ ಪ್ರಜೆಯಾಗಿ, ಸರಕಾರದ ಅಧಿಕಾರಿಯಾಗಿ, ಅದರಲ್ಲಿಯೂ ವಿಶ್ವವಿದ್ಯಾಲಯದ ಒಬ್ಬ ದೊಡ್ಡ ಪ್ರೊಫೆಸರ್ ಆಗಿ ಹೇಳುವುದು ರಾಜದ್ರೋಹವೆ ಆಗುತ್ತದಂತೆ. ಅರಮನೆಯಲ್ಲೆಲ್ಲ ಅಲ್ಲೋಲ ಕಲ್ಲೋಲವಂತೆ. ಮಹಾರಾಜರೇ ವಿಶ್ವವಿದ್ಯಾನಿಲಯಕ್ಕೆ ವಿವರಣೆ (Explanation) ಕೇಳಲು ಬರೆಸಿಬಿಟ್ಟಿದ್ದಾರಂತೆ! ಪಾಪ, ಪ್ರೊ. ಡಿಸೋಜಗೆ ಏನಾಗುತ್ತದೆಯೋ?” ಎಂದು ಮೊದಲಾಗಿ ಹೇಳಿ ಆ ಅಗ್ರಲೇಖನ ಬರೆದು ಪತ್ರಿಕೆಗೆ ಕಳಿಸಿದವನನ್ನು ಖಂಡಿಸಿ ಬೈದನು.

ಅಪರಾಧ ಮಾಡಿದವನನ್ನು ಹುಡುಕುತ್ತಾ ಮಫ್ತಿಯಲ್ಲಿದ್ದ ಪೋಲಿಸು ಅಧಿಕಾರಿಯನ್ನು ಸಂಧಿಸಿ, ಅವನೊಡನೆ ಸಂವಾದಿಸುತ್ತಿದ್ದು, ಅವನು ಯಾರೆಂದು ಫಕ್ಕನೆ ತಿಳಿದುಕೊಂಡ ಅಪರಾಧಿಯಂತಾಯ್ತು ನನ್ನ ಸ್ಥಿತಿ! ಸಧ್ಯ: ನಾನೇ ಆ ಪ್ರಶ್ನೆಯನ್ನು ಕೇಳಿ ಆ ಉತ್ತರ ಪಡೆದವನು ಎಂದು ಇವರಾರಿಗೂ ನೆನಪಿಲ್ಲವಲ್ಲಾ? ಗೆದ್ದೆ? ಎಂದುಕೊಂಡು ಮುಂದಿನ ಪೀರಿಯಡ್ಡಿಗೆ ಕ್ಲಾಸಿಗೆ ಹೋದೆ.

ಅಲ್ಲಿ ನನ್ನ ಒಬ್ಬಿಬ್ಬರು ಆಪ್ತಸ್ನೇಹಿತರು ತಮ್ಮ ಪಕ್ಕದಲ್ಲಿಯೆ ಬಂದು ಕುಳಿತುಕೊಳ್ಳುವಂತೆ ನನ್ನನ್ನು ಆಹ್ವಾನಿಸಿ ಜಾಗ ಬಿಟ್ಟುಕೊಟ್ಟು ಸರಿದುಕೊಂಡರು. ಸರಿ, ಮತ್ತೆ ಶುರುವಾಯ್ತು ‘‘ಸೊನ್ನೆ’’ಯ ಪ್ರಕರಣ:

ಸ್ವಲ್ಪ ಗುಟ್ಟಾಗಿಯೆ ಎಂಬಂತೆ ನನ್ನನ್ನು ಪಿಸುಮಾತಿನಿಂದ ಪ್ರಶ್ನಿಸಿದರು. ಒಬ್ಬರು: “ನೀವೇ ಅಲ್ಲವೇನ್ರಿ ಆ ಪ್ರಶ್ನೆ ಕೇಳಿದ್ದು? ಅದಕ್ಕೆ ಡಿಸೋಜ ಅಂತಾ ಉತ್ತರ ಕೊಟ್ಟದ್ದು?”

ಪ್ರಶ್ನೆ ಕೇಳಿದ್ದು ನಾನೇ ಎಂಬುದು ಆ ಮಿತ್ರನಿಗೆ ಚೆನ್ನಾಗಿ ಗೊತ್ತಿತ್ತು. ಏಕೆಂದರೆ ಸಭೆ ಮುಗಿದ ತರುವಾಯ ನಾವು ಮೂರು ನಾಲ್ಕು ಸ್ನೇಹಿತರು ಆ ವಿಚಾರವಾಗಿಯೆ ಮಾತನಾಡುತ್ತಾ ಹೋಗಿದ್ದೆವು. ಆದ್ದರಿಂದ ಒಪ್ಪಿಕೊಂಡೆ.

“ಮತ್ತೆ, ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ, ನೀವೇ ಇರಬೇಕು ಆ ಆರ್ಟಿಕಲ್ (Article) ಬರೆದೋರು ಎಂದು?”

“ಅಲ್ಲರೀ, ನಾನು ಪ್ರಶ್ನೆ ಕೇಳಿ ಅವರು ಆ ಉತ್ತರ ಕೊಟ್ಟ ಮಾತ್ರಕ್ಕೆ ಆರ್ಟಿಕಲ್ ನಾನೇ ಬರೆದದ್ದು ಅಂತಾ ಹೇಗಾಗ್ತದೆ?”

“ಮತ್ತೆ ಯಾರು ಬರೆಯಬೇಕು?”

“ಯಾರು ಬರೆದರೊ ಯಾರಿಗೆ ಗೊತ್ತು?”

ಈಚೆ ಪಕ್ಕದಲ್ಲಿದ್ದ ಇನ್ನೊಬ್ಬ ಸ್ನೇಹಿತ ಅರ್ಥಪೂರ್ಣವೆಂಬಂತೆ ನಗುತ್ತಾ ನನ್ನ ಕಣ್ಣನ್ನೆ ಇಂಗಿತವಾಗಿ ನೋಡುತ್ತಾ “ನಿಜ ಹೇಳ್ರಿ! ಆ ಇಂಗ್ಲಿಷ್ ಬರೆಯೋಕಾಗ್ಲಿ ಆ ಪೊಯಮ್‌ನ (Poem) ಕೋಟ್ ಮಾಡೋಕಾಗ್ಲಿ ಬೇರೆ ಯಾರಿಗೆ ಸಾಧ್ಯ?” ಎಂದು ನನ್ನ ಗುಟ್ಟಿನ ಮರ್ಮಕ್ಕೇ ಕೈಹಾಕಿಬಿಟ್ಟನು.

ಎಲ್ಲಿ ಪತ್ತೆಯಾಗಿಬಿಡುತ್ತದೋ ಎಂದು ನಾನು ಹೆದರಿ, ಸ್ವಲ್ಪ ರೇಗಿದಂತೆ ನಟಿಸುತ್ತಾ “ಏನು ಈ ಕಾಲೇಜಿನಲ್ಲಿ ನಾನೊಬ್ಬನೆ ಅಂತಾ ಮಾಡಿರೇನು ಇಂಗ್ಲಿಷ್ ಬರೆಯೋನು? ಸೆಕೆಂಡ್ ಇಯರ್, ಥರ್ಡ್‌ಇಯರ್, ಎಂ.ಎ. ಓದೋರೆಲ್ಲಾ ಮಂಕರು ಅಂತಾ ತಿಳಿದಿರೋ ಏನು? ಎಂದು ಅವರ ಬಾಯಿ ಮುಚ್ಚಿಸಿ, ಅಷ್ಟರಲ್ಲಿಯೆ ಪ್ರವೇಶಿಸಿದ್ದ ಅಧ್ಯಾಪಕರತ್ತ ಗಮನವಿಡುವಂತೆ ಬೇರೆಯ ಕಡೆಗೆ ತಿರುಗಿಬಿಟ್ಟೆ.

ಆ ದಿನದಂತೆ ಮರುದಿನವೂ ಅದರ ಮರುದಿನವೂ ‘‘ಸೊನ್ನೆ’’ಯ ಆಂದೋಳನವೆ ಕಾಲೇಜಿನ ಮಾತಾಗಿತ್ತು, ವಿದ್ಯಾರ್ಥಿಗಳಲ್ಲಿ ಮತ್ತು ಅಧ್ಯಾಪಕವರ್ಗದಲ್ಲಿಯೂ, ವಿದ್ಯಾರ್ಥಿಗಳಲ್ಲಿ ಸ್ವಲ್ಪ ಸ್ವಾರಸ್ಯದ ಮತ್ತು ವಿನೋದದ ಪ್ರಸಂಗವಾಗಿ, ಅಧ್ಯಾಪಕರಲ್ಲಿ ಖೇದದ ಮತ್ತು ವಿಷಾದದ ಸಂಗತಿಯಾಗಿ!

ಆಗ ಯೂನಿಯನ್ನಿನ ಅಧ್ಯಕ್ಷರಾಗಿದ್ದವರು ಪ್ರೊ. ಬಿ.ಎಂ.ಶ್ರೀಕಂಠಯ್ಯನವರು: ಇಂಗ್ಲಿಷಿನಲ್ಲಲ್ಲದೆ ಕನ್ನಡದಲ್ಲಿ ಮಾತನಾಡಲಾಗಲಿ ಭಾಷಣ ಮಾಡಲಾಗಲಿ ಎಂದಿಗೂ ಒಪ್ಪದಿರುತ್ತಿದ್ದ ಮಡಿವಂತಿಕೆಯ ಕಾಲವಾಗಿತ್ತು ಆಗ ಅವರದು! ಜೊತೆಗೆ ಅವರ ರಾಜಭಕ್ತಿಗೂ ರಾಜನಿಷ್ಠೆಗೂ ಮೇರೆಯಿರಲಿಲ್ಲ! ಮೈಸೂರಿಗಿದ್ದ ಸ್ಥಾನ ‘‘ಸೊನ್ನೆ’’ ಎಂಬ ಹೇಳಿಕೆಯಂತೂ ರಾಜನಿಂದೆಗೇ ಸಮಾನವಾಗಿ, ರಾಜದ್ರೋಹವೇ ಆಗಿತ್ತು ಅವರ ದೃಷ್ಟಿಯಲ್ಲಿ! ತಮ್ಮಂತಹ ರಾಜಸೇವಾಸಕ್ತರು ಅಧ್ಯಕ್ಷರಾಗಿದ್ದ ಯೂನಿಯನ್ ಏರ್ಪಡಿಸಿದ್ದ ಭಾಷಣದಲ್ಲಿ ಇಂತಹ ರಾಜನಿಂದಾ ಸದೃಶವಾದ ವ್ಯಾಪಾರ ನಡೆದದ್ದು ಅವರಿಗೆ ವೈಯಕ್ತಿಕ ಆಘಾತವಾದಂತಿತ್ತು. ಯಾರು ಲೇಖನ ಕಳಿಸಿದವರು? ಎಂದು ಪತ್ತೆಹಚ್ಚಲು ಪ್ರಯತ್ನಪಟ್ಟುದೆಲ್ಲ ವ್ಯರ್ಥವಾಯಿತು. ‘‘ಕಿಶೋರಚಂದ್ರ ವಾಣಿ’’ ಎಂಬ ಹೆಸರು ಕಾಲೇಜಿನ ಯಾವ ಹಾಜರಿ ರಿಜಿಸ್ಟರಿನಲ್ಲಿಯೂ ದೊರೆಯಲಿಲ್ಲ!

ಆ ಲೇಖನವನ್ನು ಆ ಪತ್ರಿಕೆಯ ಸಂಪಾದಕ (ಅವನು ಆಂಗ್ಲೇಯನೋ ಅಥವಾ ಇಂಡೋ ಆಂಗ್ಲೇಯನೋ ಆಗಿರಬೇಕು.) ಅಗ್ರಲೇಖನವನ್ನಾಗಿ ಪ್ರಕಟಿಸಿ, ಮಧ್ಯೆ ಮಧ್ಯೆ Bravo Lad! Applause! ಎಂಬೆಲ್ಲ ಮೆಚ್ಚುಗೆಯ ಘೋಷಗಳನ್ನೂ ಬ್ರಾಕೆಟ್ಟಿನಲ್ಲಿ ಹಾಕಿ, Cipher ಎಂದು ಉತ್ತರ ಹೇಳಿದ ಪ್ರಾಧ್ಯಾಪಕರನ್ನು ಖಂಡ ತುಂಡವಾಗಿ ಖಂಡಿಸಿ ತರಾಟೆಗೆ ತೆಗೆದುಕೊಳ್ಳುವ ಒಂದು ಸಣ್ಣ ಉಪ-ಅಗ್ರಲೇಖನವನ್ನೂ ಸೇರಿಸಿಬಿಟ್ಟಿದ್ದನು, ಗಾಯಕ್ಕೆ ಹುಳಿ ಹಿಂಡುವಂತೆ! ‘‘ಮೈಸೂರು, ಆ ಪ್ರಾಧ್ಯಾಪಕರು ಹೇಳಿದಂತೆ, Cipher ಅಲ್ಲ, ಕಳೆದ ಪ್ರಪ್ರಥಮ ಪ್ರಪಂಚ ಮಹಾಯುದ್ಧದಲ್ಲಿ ಮೈಸೂರ್ ಲ್ಯಾನ್ಸರ್ಸ್ ಪಡೆ ಮೆಸೋಪಟೋಮಿಯಾ ಫ್ರಾನ್ಸ್ ಮತ್ತು ಜರ್ಮನ್ ರಣರಂಗದಲ್ಲಿ ಶತ್ರುಗಳನ್ನು ಸದೆಬಡಿದು ಲೋಕ ಕೀರ್ತಿಸುವಂತೆ ವಿಜಯಿಗಳಾಗಿ ಬಂದಿದ್ದಾರೆ! ಮೈಸೂರಿನ ಹೆಸರನ್ನು ದಿಗ್ಭಿತ್ತಿಗಳಲ್ಲಿ ಕೆತ್ತಿದ್ದಾರೆ! ಅವರು ಸೆರೆಹಿಡಿದ ಶತ್ರುದಳಗಳ ಕಲರ್ಸ್ (ಎಂದರೆ ಧ್ವಜಗಳು)ಗಳನ್ನು ಯಾರು ಬೇಕಾದರೂ ಹೋಗಿ ನೋಡಬಹುದು ಮೈಸೂರು ಸೈನ್ಯದ ಹೆಡ್‌ಕ್ವಾರ್ಟರ್ಸ್ ಪ್ರದರ್ಶನ ಶಾಲೆಯಲ್ಲಿ!’’ ಎಂದು ಮುಂತಾಗಿ ಆ ಸಂಪಾದಕ (ಅವನೂ ಮಾಜಿ ಸೇನಾಧಿಕಾರಿಯೊ ಸೈನಿಕನೊ ಆಗಿರಬೇಕೆಂದು ತೋರುತ್ತದೆ, ಅವನ ಭಾಷೆ ಮತ್ತು ವೀರಾವೇಶವನ್ನು ಗಮನಿಸಿದರೆ?) ನಾನು ಅಕಾಡೆಮಿಕ್ ಅರ್ಥದಲ್ಲಿ ನಮ್ಮ ಮೈಸೂರಿನ ಕೀರ್ತಿ ಜಗತ್ ಪ್ರಸಿದ್ಧವಾಗಿದೆ ಎಂದು ವಾದಿಸಿ, ಅದು ಯಃಕಶ್ಚಿತ, ಅನಾಮಧೇಯ, ಸೊನ್ನೆ, Cipher ಎಂದ ಪ್ರೊಫೆಸರ್ ಅವರನ್ನು ಖಂಡಿಸಿಬಿಟ್ಟಿದ್ದನು! ಅರಮನೆಯ ಕಡೆಯಿಂದಲೂ ಯಾರು? ಏಕೆ? ಎಂತು? ಎಂದು ತನಿಖೆಯ ರೂಪದ ಪರಿಶೀಲನೆ ಪ್ರಾರಂಭವಾಗಿತ್ತೆಂದು ತೋರುತ್ತದೆ. ಸಂಘದ ಅಧ್ಯಕ್ಷರಾಗಿದ್ದ ‘‘ಬಿ.ಎಂ.ಶ್ರೀ’’ಯವರು ಆ ಪತ್ರಿಕೆಗೆ ಉತ್ತರರೂಪವಾಗಿ ಬರೆದಿದ್ದ ಕಾಗದವನ್ನೂ ಅದರ ಸಂಪಾದಕರು ಕಸದ ಬುಟ್ಟಿಗೆ ಹಾಕಿಬಿಟ್ಟರು! ಅವರಿಗೆ ರಗಳೆಗಿಟ್ಟುಕೊಂಡಿತು.

ಹೀಗೆಯೆ ಮೂರು ನಾಲ್ಕು ದಿನಗಳು ಕಳೆದವು. ಅಷ್ಟರಲ್ಲಿ ನನ್ನ ಇಬ್ಬರು ಮೂವರು ಬಹಳ ಹತ್ತಿರದ ಗೆಳೆಯರಿಗೆ ಲೇಖನ ಬರೆದವನು ನಾನೆ ಎಂಬ ಗುಟ್ಟು ಗೊತ್ತಾಗಿ, ಒಂದು ದಿನ ಅಂಗಲಾಚಿ ಬೇಡಿಕೊಂಡರು: ‘‘ಡಿಸೋಜ ಅವರಿಗೆ ತುಂಬ ಮನಸ್ಸು ನೊಂದು ಕಾತರವಾಗಿದ್ದಾರೆ. ಲೇಖನ ಬರೆದವನು ನಾನೆ ಎಂದು ನೀವೇ ಹೋಗಿ ಹೇಳಿಬಿಡಿ’ ಎಂದರು.

ಅಲ್ಲದೆ ಪ್ರೊ.ಡಿಸೋಜ ಅವರು ಪಾಠ ಹೇಳುತ್ತಿದ್ದ ವಿಷಯವನ್ನೇ ಐಚ್ಛಿಕವಾಗಿ ಆರಿಸಿಕೊಂಡು ಅವರ ಮೆಚ್ಚಿನ ವಿದ್ಯಾರ್ಥಿಯೂ ಆಗಿದ್ದ ಆ ಮಿತ್ರರು ನನ್ನನ್ನು ಅವರ ಕೊಠಡಿಗೆ ಕರೆದೊಯ್ದು ಪರಿಚಯ ಮಾಡಿಸಿದರು.

ಆಗಲೇ ನನ್ನ ಹೆಸರಿನ ಪರಿಚಯವಿದ್ದ ಅವರು ನನ್ನನ್ನು ವಿಶ್ವಾಸದಿಂದ ಬರಮಾಡಿಕೊಂಡು ಪಕ್ಕದಲ್ಲಿದ್ದ ಕುರ್ಚಿ ತೋರಿ ಕುಳಿತುಕೊಂಡರು. ಲೇಖನವನ್ನು ‘‘ಕಿಶೋರಚಂದ್ರ ವಾಣಿ’’ಯ ಹೆಸರಿನಲ್ಲಿ ಬರೆದವನು ನಾನೆ ಎಂದು ತಿಳಿದು ಅದರ ಭಾಷೆಯ ಮತ್ತು ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಲೇಖನದಲ್ಲಿ ಉದ್ಧರಿಸಿದ್ದ ಕವನ ಪಂಕ್ತಿಗಳು ನನ್ನ ರಚನೆಗಳೆ ಎಂದು ತಿಳಿದ ಮೇಲೆ ತುಂಬ ಹೊಗಳಿದರು. ಆ ಲೇಖನದಲ್ಲಿ ನಿಂದಾತ್ಮಕವಾದುದು ಏನೂ ಇಲ್ಲ ಎಂಬುದನ್ನೂ ಒಪ್ಪಿದರು. ‘Cipher’ ಎಂದು ತಾವು ಉತ್ತರ ಕೊಟ್ಟುದರಲ್ಲಿ ಯಾವ ತಾತ್ಸಾರ ಭಾವವೂ ಇರಲಿಲ್ಲವೆಂದೂ, ಪ್ರಶ್ನೆ ಕೇಳಿದವರನ್ನು ಅವಮಾನಗೊಳಿಸುವ ಉದ್ದೇಶ ತಮ್ಮದಲ್ಲವೆಂದೂ, ದೀರ್ಘಕಾಲ ಭಾಷಣ ಮಾಡಿದ ಅನಂತರ ಆಯಾಸವಾಗಿತ್ತಾಗಿಯೂ ಮತ್ತು ಭಾಷಣವನ್ನೆಲ್ಲ ಉದ್ದಕ್ಕೂ ಲಘುವಾಗಿ, ವಿನೋದಕರವಾಗಿ, ವಿದ್ಯಾರ್ಥಿಗಳನ್ನು ನಗಿಸಿ ಉಲ್ಲಾಸಗೊಳಿಸುವ ದೃಷ್ಟಿಯಿಂದಲೆ ಮಾಡಿದ್ದು, ತುದಿಯಲ್ಲಿ ಕೇಳಿದ ಪ್ರಶ್ನೆಗಳಿಗೂ ಅದೇ ರೀತಿಯ ಉತ್ತರ ಕೊಟ್ಟುದಾಗಿಯೂ ತಮ್ಮ ನಿಲುವನ್ನು ವಿವರಿಸಿದರು.

“ನನ್ನ ಲೇಖನವನ್ನು ಆತ ಅಗ್ರಲೇಖನವನ್ನಾಗಿ ಪ್ರಕಟಿಸುತ್ತಾನೆಂದು ನಾನು ತಿಳಿದಿರಲಿಲ್ಲ. ಅಲ್ಲದೆ ಮಧ್ಯೆ ಮಧ್ಯೆ ‘‘ಬ್ರೇವೊ, ಲ್ಯಾಡ್!’’, ಎಂದು ಮುಂತಾದ ತನ್ನವೇ ಟೀಕೆ ಟಿಪ್ಪಣಿಗಳನ್ನು ಸೇರಿಸಿ ಭಾಷೆ ಭಾವಗಳಿಗೆ ‘‘ಹುಳಿ’’ ಹಿಂಡಿಬಿಟ್ಟಿದ್ದಾನೆ. ಆ ಲೇಖನದಿಂದ ತಮಗೆ ತೊಂದರೆಯಾಗುತ್ತದೆಂದು ನಾನು ಕನಸಿನಲ್ಲಿಯೂ ಭಾವಿಸಿರಲಿಲ್ಲ ಅಂದಮೇಲೆ ತೊಂದರೆ ತರುವ ಉದ್ದೇಶ ಎಲ್ಲಿ ಬಂತು?…”

“ನನಗೆ ಆಯಾಸವಾಗಿದ್ದರಿಂದ ಚುಟುಕದಲ್ಲಿಯೆ ಮುಗಿಸುವ ಉದ್ದೇಶದಿಂದ ಹಾಗೆ ಹೇಳಿಬಿಟ್ಟೆ. ಭಾಷಣ ಮುಗಿದ ಮೇಲೆ ನೀವು ನನ್ನನ್ನು ವಿಚಾರಿಸಿದ್ದರೆ ಸಾವಧಾನವಾಗಿ ವಿವರಿಸುತ್ತಿದ್ದೆ. ಈಗೇನು ಮಾಡುವುದು? ಆದದ್ದು ಆಗಿಹೋಯಿತು. ಸಂಘದ ಅಧ್ಯಕ್ಷರಾಗಿರುವ ಪ್ರೊ.ಬಿ.ಎಂ.ಶ್ರೀಕಂಠಯ್ಯನವರು ನೊಂದುಕೊಂಡಿದ್ದಾರೆ, ವಿಷಯ ಅರಮನೆಯವರಿಗೂ ಮುಟ್ಟಿ ಸ್ವಲ್ಪ ಗೊಂದಲ ಎಬ್ಬಿಸಿದೆಯಂತೆ! ಅವರಲ್ಲಿಗೆ ನಿಮ್ಮನ್ನು ಕರೆದೊಯ್ದು ಪರಿಚಯಿಸುತ್ತೇನೆ. ಅವರು ಹೇಳುವಂತೆ ಮಾಡಿ, ದಯವಿಟ್ಟು’…. ಎಂದು ಪ್ರೊ.ಡಿಸೋಜ ಅವರು ನನ್ನೊಡನೆ ಬಂದು ಅಲ್ಲಿಯೆ ಪಕ್ಕದಲ್ಲಿದ್ದ ಬಿ.ಎಂ.ಶ್ರೀ ಅವರ ಕೊಠಡಿಗೆ ಪ್ರವೇಶಿಸಿ, ನನ್ನ ಪರಿಚಯ ಹೇಳಿ ವಿಷಯವೆಲ್ಲವನ್ನೂ ವಿವರವಾಗಿ ತಿಳಿಸಿದರು. ಬಿ.ಎಂ.ಶ್ರೀ ನನ್ನನ್ನು ಒಂದು ಕುರ್ಚಿಯಲ್ಲಿ ಕುಳಿತುಕೊಳ್ಳ ಹೇಳಿದರು; ಡಿಸೋಜ ತಮ್ಮ ಕೊಠಡಿಗೆ ಹಿಂತಿರುಗಿದರು.

ಬಿ.ಎಂ.ಶ್ರೀಯವರು ಆಗ ತುಂಬ ಬಿಗುಮಾನದ ವ್ಯಕ್ತಿಯಾಗಿದ್ದರೆಂದು ನನ್ನ ಭಾವನೆ. ವೇಷ ಭೂಷಣ ಮಾತುಕತೆ ಎಲ್ಲದರಲ್ಲಿಯೂ ಭಾರತೀಯತ್ವಕ್ಕಿಂತಲೂ ಆಂಗ್ಲೇಯತ್ವವೆ ಅವರ ವ್ಯಕ್ತಿತ್ವದ ಹೊರಭಂಗಿಯಾಗಿತ್ತು. ಸಾರ್ವಜನಿಕ ವೇದಿಕೆಯಲ್ಲಾಗಲಿ ಕಾಲೇಜಿನ ಸಂಘ ಸಂಸ್ಥೆಗಳಲ್ಲಾಗಲಿ ಕಡೆಗೆ ಕಾಲೇಜು ವಿದ್ಯಾರ್ಥಿಗಳೊಡನೆಯೆ ಆಗಲಿ ಕನ್ನಡದಲ್ಲಿ ಮಾತನಾಡಿ ವ್ಯವಹರಿಸುವುದು ತಮ್ಮ ಅಂತಸ್ತಿಗೆ ತಕ್ಕುದಲ್ಲವೆಂಬಂತೆ ವರ್ತಿಸುತ್ತಿದ್ದರು. ಮುಂದೆ ಕೆಲವು ವರ್ಷಗಳಲ್ಲಿಯೆ ಅವರು ಕನ್ನಡದ ಕಣ್ವರಾದ ಮೇಲೆ ಎಷ್ಟು ತೆರೆದ ಹೃದಯದವರೋ ಎಷ್ಟು ಸರಳ ಮನಸ್ಕರಾದರೋ ಎಷ್ಟು ಸಾಮಾನ್ಯರೊಡನೆ ಸಾಮಾನ್ಯರಾಗಿ ಹೊಕ್ಕುಬಳಸಲು ಕಲಿತರೋ ಅಷ್ಟೂ ತದ್ವಿರುದ್ಧರಾಗಿ ತೋರುತ್ತಿದ್ದರು ಆಗ!

ಅವರೂ ನನ್ನ ಲೇಖನದ ಭಾಷೆ, ಭಾವ, ಅಲ್ಲಿ ಉದ್‌ಧೃತವಾಗಿದ್ದ ಕವನ ಭಾಗಗಳು ಇವುಗಳನ್ನೆಲ್ಲ ಮೆಚ್ಚಿದರು: “ಸರಕಾರದ ಅಧಿಕಾರಿಗಳಾಗಿರುವ ಒಬ್ಬ ಪ್ರಾಧ್ಯಾಪಕರು ಸಂಸ್ಥಾನದ ಹೆಸರಿಗೆ ಅವಹೇಳನವಾಗುವಂತೆ ಮಾತನಾಡಿದ್ದಾರೆ ಎಂಬ ಭಾವನೆ ಬರುವಂತೆ ಮಾಡಿಬಿಟ್ಟಿದ್ದಾನೆ ಆ ಸಂಪಾದಕ. ಅದಕ್ಕೆ ನೀವೆ ಒಂದು ಪತ್ರ ಬರೆಯಬೇಕು ಆತನಿಗೆ.” ಎಂದು ಹೇಳಿ ಕಾಗದ ಲೇಖನಿಗಳನ್ನು ನನ್ನ ಮುಂದಿಟ್ಟರು.

“ಏನು ಬರೆಯಬೇಕೋ ನನಗೆ ತಿಳಿಯುವುದಿಲ್ಲ. ನೀವು ಹೇಳಿದಂತೆ ಬರೆಯುತ್ತೇನೆ” ಎಂದೆ.

ಅವರು ಹೇಳತೊಡಗಿದರು: ನಾನು ಬರೆಯತೊಡಗಿದೆ. ಆದರೆ ಒಂದೆರಡು ವಾಕ್ಯಗಳಲ್ಲಿ ಹೇಳುವುದನ್ನು ನಿಲ್ಲಿಸಿ, ನನ್ನ ಕೈಯಿಂದ ಕಾಗದ ಲೇಖನಿಗಳನ್ನು ವಾಪಸು ತೆಗೆದುಕೊಂಡು ಅವರೇ ಬರೆದರು.

ಅವರು ಬರೆದು ಕೊಟ್ಟದ್ದನ್ನು ನಾನು ಓದಿದೆ. ಕೆಲವು ವಾಕ್ಯಗಳನ್ನು ಹೊಡೆದು ಹಾಕಲು ಹೇಳಿದೆ. ಆ ವಾಕ್ಯಗಳಲ್ಲಿ ನನ್ನ ಲೇಖನವನ್ನುಸಂಪಾದಕರು ಅಗ್ರಲೇಖನವನ್ನಾಗಿ ಮಾಡಿಕೊಂಡದ್ದು ತಪ್ಪು ಎಂಬ ಅಭಿಪ್ರಾಯವೂ, ಅದಕ್ಕಾಗಿ ಅವರ ವರ್ತನೆ ಖಂಡನೀಯ ಎಂಬ ಭಾವನೆಯೂ ಧ್ವನಿಸುವಂತಿತ್ತು.

ಅವರು ಬರೆದು ಕೊಟ್ಟದ್ದಕ್ಕೆ ನಾನು ತೆಪ್ಪಗೆ ರುಜು ಹಾಕುತ್ತೇನೆ ಎಂಬುದು ಅವರ ಭಾವನೆಯಾಗಿತ್ತೆಂದು ತೋರುತ್ತದೆ. ಯಾವಾಗ ನಾನು ಹಾಗೆ ಮಾಡಲು ಒಪ್ಪಲಿಲ್ಲವೋ ಅವರ ಅಭಿಮಾನ ತುಸು ಕೆರಳಿದಂತಾಯ್ತು. ಈಗತಾನೆ ಕಾಲೇಜು ಪ್ರವೇಶಿಸಿರುವ ಈ ಹುಡುಗ ಹಲವು ವರ್ಷಗಳ ಪ್ರಾಧ್ಯಾಪಕನಾಗಿ ವಿಶ್ವವಿದ್ಯಾನಿಲಯದಲ್ಲಿ ಸುಪ್ರತಿಷ್ಠಿತ ಸ್ಥಾನ ಸಂಪಾದನೆ ಮಾಡಿರುವ ತಮಗೆ ಸಲಹೆ ಕೊಡಲು ಬರುತ್ತಿದ್ದಾನಲ್ಲಾ ಎಂದು! ಅವರು ಬರೆದಿದ್ದ ಆ ಪತ್ರವನ್ನು ನನ್ನ ಕೈಯಿಂದ ವಾಪಸು ತೆಗೆದುಕೊಂಡು ‘‘ಹೋಗಲಿ ಬಿಡಿ, ನಾನೇ ಸಂಘದ ಅಧ್ಯಕ್ಷನಾಗಿ ಸಂಪಾದಕನಿಗೆ ಬರೆಯುತ್ತೇನೆ.’’ ಎಂದು ಇಂಗ್ಲಿಷ್‌ನಲ್ಲಿಯೆ ಹೇಳಿದರು. ನಾನು ಎದ್ದು ನಮಸ್ಕಾರ ಹೇಳಿ ಹೊರಗೆ ಬಂದೆ.

ಅವರು ಪತ್ರ ಬರೆದರೋ ಇಲ್ಲವೋ ನಾನರಿಯೆ. ಆದರೆ Daily Mailನಲ್ಲಿ ಅಂಥದೇನೂ ಪ್ರಕಟವಾಗಿದ್ದು ನನ್ನ ಕಣ್ಣಿಗೆ ಬೀಳಿಲಿಲ್ಲ!