ನಾನು ಮೊದಲನೆ ವರ್ಷದ ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗ ೧೯೨೪ನೆಯ ಡಿಸೆಂಬರ್ ತಿಂಗಳ ಉತ್ತಾರಾರ್ಧದಲ್ಲಿ ಬೆಳಗಾಂನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯುತ್ತದೆಂದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆಯ ಅನಂತರ ಆಗತಾನೆ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಮಹಾತ್ಮಾ ಗಾಂಧಿಯವರು ಆ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಾರೆ ಎಂಬ ವಾರ್ತೆ ನಮ್ಮನ್ನೆಲ್ಲ ಆಕರ್ಷಿಸಿತು. ಭರತಖಂಡದ ಬದುಕನ್ನೆಲ್ಲ ತುಂಬಿಕೊಂಡಿದ್ದರು ಗಾಂಧೀಜಿ. ಅವರಿಗೆ ಶಿಕ್ಷೆಯಾಗಿದ್ದು, ಶಸ್ತ್ರ ಚಿಕಿತ್ಸೆಯಾಗಿದ್ದು ಸೆರೆಯ ಅವಧಿ ಮುಗಿಯುವ ಮುನ್ನವೆ ಅವರು ಬಿಡುಗಡೆ ಹೊಂದಿ ಹೊರಗೆ ಬಂದದ್ದು ಎಲ್ಲವೂ ಪತ್ರಿಕೆಗಳಲ್ಲಿ ದಿನವೂ ಅನೇಕ ತಿಂಗಳುಗಳಿಂದ ದಪ್ಪಕ್ಷರದ ಮೊದಲನೆಯ ಪುಟದ ವಾರ್ತೆಗಳಾಗಿ, ಜನತೆಯ ಹೃದಯ ಸಮುದ್ರ ಕಡೆದಂತಾಗಿ, ದೇಶದ ಬದುಕು ವಿಕ್ಷುಬ್ಧವಾಗಿತ್ತು. ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಕ್ರಿಸ್‌ಮಸ್ ರಜವೂ ಪ್ರಾರಂಭವಾಗುತ್ತಿತ್ತಾದ್ದರಿಂದ ನಾವು ಕೆಲವರು ವಿದ್ಯಾರ್ಥಿ ಮಿತ್ರರು ಬೆಳಗಾವಿಗೆ ಹೋಗಲು ನಿಶ್ಚಯಿಸಿದೆವು.

ರೈಲು ಪ್ರಯಾಣವೂ ಒಂದು ಸಾಹಸವೇ ಆಗಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸುವ ಕಾಂಗ್ರೆಸ್ ಅಧಿವೇಶನಕ್ಕೆ ಹೊರಟ ಅಕ್ಷರಶಃ ಲಕ್ಷಾಂತರ ಜನರ ನೂಕುನುಗ್ಗಲು ಉಸಿರುಕಟ್ಟಿಸುತ್ತಿತ್ತು. ಚಳಿಗಾಲವಾಗಿದ್ದರೂ ಕಾಂಪಾರ್ಟುಮೆಂಟಿನ ಒಳಗೆ ಕುದಿಯುವ ಸೆಕೆ! ಪ್ರತಿಯೊಂದು ನಿಲ್ದಾಣದಲ್ಲಿಯೂ ಆಗಲೆ ಕಿಕ್ಕಿರಿದಿದ್ದ ಗಾಡಿಗೆ ಹತ್ತಲು ಪ್ರಯತ್ನಿಸುವವರ ಮತ್ತು ಮೊದಲೇ ಹತ್ತಿ ನಿಲ್ಲಲು ಕೂಡ ಜಾಗವಿಲ್ಲದೆ ಜೋತುಬಿದ್ದವರ ನಡುವೆ ಜಗಳ, ಬೈಗುಳ, ಗುದ್ದಾಟ, ಆ ಕಿಕ್ಕಿರಿಕೆ, ನುಗ್ಗಾಟ, ಕೆಟ್ಟ ಉಸಿರಿನ ಬೆವರಿನ ಕೊಳಕುವಾಸನೆ ಇವುಗಳನ್ನು ತಡೆಯಲಾರದೆ, ರೈಲನ್ನು ಹೊರಡಲು ಬಿಡದಂತೆ ಸರಪಣಿ ಎಳೆದದ್ದೂ ಎಳೆದದ್ದೆ! ನಮ್ಮ ಗುಂಪಿನವರೆ ಮೂರು ನಾಲ್ಕು ಸಲ ಹಾಗೆ ಮಾಡಬೇಕಾಯ್ತು. ಕಡೆಗೆ ಗಾರ್ಡು-ಸ್ಟೇಷನ್ ಮಾಸ್ಟರು ಬಂದು ಕೇಳಿಕೊಂಡ ಮೇಲೆಯೇ, ದಾಕ್ಷಿಣ್ಯಕ್ಕೆ, ಸರಪಣಿ ಎಳೆಯುವುದನ್ನು ನಿಲ್ಲಿಸಿದೆವು. ಹೂಜಿಗಳಲ್ಲಿ ರೈಲುತುಂಬಿಗೆಗಳಲ್ಲಿ ಇದ್ದ ನೀರೆಲ್ಲ ಖಾಲಿಯಾಗಿ ದಗೆಗೆ ಮೂರ್ಛೆ ಹೋಗುವುದೊಂದು ಬಾಕಿ! ಅಂತೂ ಹೋಗಿ ಇಳಿದೆವು ಬೆಳಗಾವಿ ಸ್ಟೇಷನ್ನಿನಲ್ಲಿ: ಭೂಪಾಳಂ ಚಂದ್ರಶೇಖರಯ್ಯ, ಎಸ್.ವಿ.ಕನಕಶೆಟ್ಟಿ, ರಾಮಚಂದ್ರಶೆಟ್ಟಿ, ನಾನು, ಇನ್ನೂಕೆಲವರ-ಹೆಸರು ನೆನಪಿಗೆ ಬಾರದು.

ಅಧಿವೇಶನದ ಜಾಗಕ್ಕೆ ಸ್ವಲ್ಪ ದೂರವಾಗಿದ್ದ ಬೆಳಗಾವಿಯ ಊರಿನಲ್ಲಿ ಮಿತ್ರರೊಬ್ಬರ ಬಂಧುಗಳ ಮನೆಯಲ್ಲಿಯೆ ನಾವೆಲ್ಲ ಇಳಿದುಕೊಳ್ಳುವಂತೆ ಏರ್ಪಾಡಾಗಿತ್ತು. ಅಲ್ಲಿ ಸ್ನಾನಗೀನ ಮುಗಿಸುತ್ತಿದ್ದೆವು; ಊಟಗೀಟಕ್ಕೆಲ್ಲ ಅಧಿವೇಶನದ ಮಹಾಬೃಹತ್ ಭೋಜನ ಶಾಲೆಗೆ ಹೋಗುತ್ತಿದ್ದೆವು. ಅಧಿವೇಶನದ ಭಾಷಣದ ವೇದಿಕೆಯ ಸುವಿಸ್ತೃತವಾದ ಪ್ರಧಾನ ಮಂಟಪದಷ್ಟೆ ಭವ್ಯವಾಗಿತ್ತು ಆ ಭೋಜನ ಶಾಲೆ. ನನಗಂತೂ ಈ ಊಟ ತಿಂಡಿಯ ಔತಣವನ್ನು ಕಂಡು ಬೆರಗು ಬಡಿದಿತ್ತು. ಕೇಳಿದಷ್ಟು ಸಿಹಿ, ಕೇಳಿದಷ್ಟು ಹಾಲು, ತುಪ್ಪ, ಚಪಾತಿ, ಶ್ರೀಖಂಡ ಮತ್ತು ಏನೇನೊ ನಾನಾ ಪ್ರಾಂತಗಳ ತರತರದ ಭಕ್ಷ್ಯಭೋಜ್ಯಗಳು: ನನ್ನ ಗ್ರಾಮೀಣತೆ ತತ್ತರಿಸಿತ್ತು! ನಾನಾ ಪ್ರಾಂತಗಳ ನಾನಾ ರೀತಿಯ ಜನರ ಪರಿಚಯ ಅಧಿವೇಶನದ ಮುಖ್ಯಸ್ಥಾನದಲ್ಲಿ ಆಗುವುದಕ್ಕಿಂತಲೂ ಅತಿಶಯವಾಗಿ ಈ ಭೋಜನಶಾಲೆಯಲ್ಲಿ ನಮಗೆ ಅತಿನಿಕಟವಾಗಿ ಲಭಿಸಿತು. ನಮ್ಮ ಎದುರು ಪಂಕ್ತಿಯಲ್ಲಿಯೆ ಕುಳಿತು ಉಣ್ಣುತ್ತಿದ್ದ ಉತ್ತರದ ಕಡೆಯ ಜನರ ಭೀಮಾಕಾರ, ಭೀಮೋದರ, ಭೀಮಾಭಿರುಚಿ, ಭೋಜನದಲ್ಲಿ ಅವರಿಗಿದ್ದ ಭೀಮೋತ್ಸಾಹ ಇವುಗಳನ್ನೆಲ್ಲ ಬೆಕ್ಕಸ ಬೆರಗಾಗಿ ನೋಡುತ್ತಿದ್ದೆವು ನಾವು! ನಾವು ಆ ಬಲಿಷ್ಠವಾಗಿರುತ್ತಿದ್ದ ಚಪಾತಿಗಳಲ್ಲಿ ಒಂದನ್ನೆ ತಿಂದು, ಹೊಟ್ಟೆ ತುಂಬಿಹೋಗಿ, ಮುಂದೆ ಅದಕ್ಕಿಂತಲೂ ರುಚಿ ರುಚಿಯಾಗಿರುತ್ತಿದ್ದ ಉಣಿಸುಗಳನ್ನು ತಿನ್ನಲಾರದೆ ಎದುರಿಗಿದ್ದವರನ್ನು ಕರುಬಿನಿಂದ ನೋಡುತ್ತಿದ್ದರೆ, ಅವರು ಒಂದಲ್ಲ ಎರಡಲ್ಲ ಏಳೆಂಟು ಚಪಾತಿಗಳನ್ನೂ ಲೀಲಾಜಾಲವಾಗಿ ತಿಂದು, ಹಾಲು ತುಪ್ಪ ಶ್ರೀಖಂಡಗಳನ್ನು ಯಥೇಚ್ಛವಾಗಿ ಸೇವಿಸಿ, ಮತ್ತೂ ತರತರದ ಅನ್ನ ಪಾಯಸಾದಿಗಳನ್ನು ಬಡಿಸಿಕೊಂಡು ತಿನ್ನುತ್ತಿದ್ದರು! ಮತ್ತೆ, ಅವರೇನು ಊಟಕ್ಕೆ ಹೆಚ್ಚು ದುಡ್ಡ ಕೊಡುತ್ತಿರಲಿಲ್ಲ. ನಾವು ಕೊಟ್ಟಷ್ಟೆ, ಒಂದೆ ರೂಪಾಯಿ! ಬಡಕಲಾಗಿದ್ದು ತಿನ್ನಲಾರದ ಸಣಕಲು ಹೊಟ್ಟೆಯ ನಮಗೆ ಆಗುತ್ತಿದ್ದ ನಷ್ಟವನ್ನು ನೆನೆದಾಗ ನಮಗೆ ಲಭಿಸುತ್ತಿದ್ದ ಲಾಭ ಬರಿಯ ಹೊಟ್ಟೆಯ ಕಿಚ್ಚು! ಪರಿಣಾಮ: ಅವರಿಗೆ ತಿಳಿಯದಿದ್ದ ಕನ್ನಡದಲ್ಲಿ ನಾವು ಅವರ ಲೋಭ ಬುದ್ಧಿಯನ್ನೂ ಹೊಟ್ಟೆಬಾಕತನವನ್ನೂ ಗಜವರಾಹ ಗಾತ್ರವನ್ನೂ ಖಂಡಿಸುತ್ತಾ ಟೀಕಿಸುತ್ತಾ ಲೇವಡಿ ಮಾಡಿ ನಗುತ್ತಾ ಪ್ರತೀಕಾರವೆಸಗಿದೆವೆಂದು ಭಾವಿಸಿ ತೃಪ್ತರಾಗುವುದೆಷ್ಟೊ ಅಷ್ಟೆ!

ಆ ಅಧಿವೇಶನದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸುಪ್ರಸಿದ್ಧರಾಗಿದ್ದ ಅನೇಕ ವ್ಯಕ್ತಿಗಳು ನೆರೆದಿದ್ದರು. ಆದರೆ ನಮಗಿದ್ದುದು ಮುಖ್ಯವಾಗಿ ಒಂದೇ ಲಕ್ಷ್ಯ: ಗಾಂಧೀಜಿಯ ದರ್ಶನ! ಆದರೆ ಅದೇನು ಸುಲಭ ಸಾಧ್ಯವಾಗಿತ್ತೇ? ಆ ಜನಜಂಗುಳಿಯ ನೂಕುನುಗ್ಗಲಲ್ಲಿ? ಅಧಿವೇಶನದ ವೇದಿಕೆಯ ಮೇಲೆ ಅವರನ್ನೇನೋ ನೋಡಬಹುದಾಗಿತ್ತು. ಆದರೆ ಅದು ನಾವು ಕೊಂಡಿದ್ದ ಟಿಕೆಟ್ಟಿನ ಸ್ಥಳಕ್ಕೆ ಬಹುಬಹುದೂರವಾಗಿತ್ತು. ಅಲ್ಲಿಂದ ಗಾಂಧೀಜಿ ಸಣ್ಣದೊಂದು ಪುತ್ತಲಿಯ ಗೊಂಬೆಯಷ್ಟೆ ಆಕಾರದಲ್ಲಿ ಕಾಣಿಸುತ್ತಿದ್ದರು. ಅದಕ್ಕಾಗಿ ನಾವು ಅವರು ಅಧಿವೇಶನಕ್ಕೆ ಬರುವ ಹೊತ್ತನ್ನೂ ಅವರು ಪ್ರವೇಶಿಸುವ ಮಹಾದ್ವಾರವನ್ನೂ ಪತ್ತೆಹಚ್ಚಿ ಬಿಸಿಲಿನಲ್ಲಿ ಕಾದೆವು.

ಕಾದೆವು ಎಂದರೆ ಎರಡು ಅರ್ಥದಲ್ಲಿಯೂ: ಬಹಳ ಹೊತ್ತು ಕಾದೆವು ಎಂಬುದು ಗೌಣಾರ್ಥ. ಆದರೆ ಬಿಸಿಲಿನಲ್ಲಿ ಕಾದೆವು ಎಂದರೆ, ಕಾದು ಕೆಂಪಾದೆವು! ಅಕ್ಷರಶಃ ಮುಖಕ್ಕೆ ರಕ್ತವೇರಿ ಕೆಂಪಾದದ್ದು ಮಾತ್ರವೆ ಅಲ್ಲ. ಬಟ್ಟೆ ಬರೆ ಎಲ್ಲವೂ ಕೆಂಪು ಬಣ್ಣಕ್ಕೆ ತಿರುಗಿದುವು. ಮೈಸೂರಿನಿಂದ ಹೊರಡುವಾಗ ಬೆಳ್ಳಗೆ ಮಡಿಮಾಡಿದ್ದ ಖಾದಿ ಉಡುಪು ಧರಿಸಿ, ದಿನವೂ ಸ್ನಾನಮಾಡಿದ ಮೇಲೆ ಬಟ್ಟೆ ಬದಲಾಯಿಸುವುದಕ್ಕಾಗಿ ಒಂದೆರಡು ಜೊತೆ ಪಂಚೆ ಷರ್ಟುಗಳನ್ನು ಬೆಳ್ಳಗೆ ಬೆಣ್ಣೆಮಡಿ ಮಾಡಿಸಿಕೊಂಡು ಒಯ್ದಿದ್ದೆವು. ಬೆಳಗಾವಿ ತಲುಪುವಷ್ಟರಲ್ಲಿ ನಮ್ಮ ಉಡುಪು ಮುಸುರೆ ತಿಕ್ಕಿದಂತಾಗಿತ್ತು. ರೈಲಿನ ಪ್ರಯಾಣದಲ್ಲಿ ಎಂಜನ್ನಿನ ಹೊಗೆಯ ಹುಡಿ ಕೂತು ನೂಕುನುಗ್ಗಲಿನ ಬೆವರು ಹತ್ತಿ ಹಾಗಾಗುವದರಲ್ಲಿ ಅಚ್ಚರಿಯಿಲ್ಲ ಎಂದುಕೊಂಡೆವು. ಮರುದಿನ ಬೆಳಿಗ್ಗೆ ಮಿಂದು, ಉಟ್ಟ ಬಟ್ಟೆಗಳನ್ನೆಲ್ಲ ಚೆನ್ನಾಗಿ ಒಗೆದು ಹರಡಿ, ಮೈಸೂರಿನಿಂದ ತಂದಿದ್ದ ಬಿಳಿಮಡಿಯ ಬಟ್ಟೆ ಧರಿಸಿ, ಸ್ವದೇಶೀ ವಸ್ತ್ರದ ಶ್ವೇತಾಂಬರದಿಂದ ಶೋಭಿಸುತ್ತಾ ಅಧಿವೇಶನಕ್ಕೆ ಹೋದೆವು.

ಅಧಿವೇಶನದ ವಲಯವನ್ನು ಸಮೀಪಿಸುತ್ತಿರುವಾಗಲೆ ಒಂದು ಧೂಳೀಧೂಸರವಾದ ಆಕಾಶಮಂಡಲ ಕಾಣಿಸುವುದರ ಜೊತೆಗೆ ಜನಸ್ತೋಮದ ಚಲನವಲನದಿಂದ ಹೊಮ್ಮಿದ ತುಮುಲ ಶಬ್ದಮಂಡಲವೂ ಕರ್ಣಗೋಚರವಾಯಿತು. ತುಸು ಹೊತ್ತು ನನ್ನ ಮಿತ್ರರೊಬ್ಬರು ಇದ್ದಕ್ಕಿದ್ದಂತೆ ಸಂನ್ಯಾಸಿಯಾದಂತೆ ಕಾವಿಧಾರಿಯಾಗಿದ್ದಾರೆ! ಅಚ್ಚರಿಯಿಂದ ನೋಡುತ್ತೇನೆ: ಮತ್ತೂ ಒಬ್ಬರು ಹಾಗೆಯೆ ಬಣ್ಣ ಬದಲಾಯಿಸಿದ್ದಾರೆ! ನೋಡಿಕೊಳ್ಳುತ್ತೇನೆ: ನನ್ನ ಉಡುಪೂ ಕೆಮ್ಮಣ್ಣು ಬಣ್ಣಕ್ಕೆ ತಿರುಗಿದೆ! ಕಡೆಗೆ ಗೊತ್ತಾಯಿತು, ಅಲ್ಲಿನ ಮಣ್ಣಿನ ಬಣ್ಣವೇ ಕೆಂಪು ಎಂದು; ಅಲ್ಲಿ ಬಿಳಿಬಟ್ಟೆ ಹಾಕಿಕೊಂಡು ಶುಚಿಯಾಗಿ ಕಾಣುವುದೇ ಅಸಾಧ್ಯ ಎಂದು. ಒಂದೆರಡು ದಿನವೇನೋ ಬೆಳ್ಳಗೆ ಮಡಿಯಾಗಿರಲು ಪ್ರಯತ್ನಪಟ್ಟೆವು. ಏನೇನೋ ಪ್ರಯೋಜನವಾಗಲಿಲ್ಲ. ಶುಚಿತ್ವವನ್ನೇ ಕೈಬಿಟ್ಟೆವು, ಮೈಸೂರಿಗೆ ಮತ್ತೆ ಬರುವವರೆಗೆ!

ಮೈಗೆಂಪಾಗಿ ಬಟ್ಟೆಗೆಂಪಾಗಿ ಒಂದು ಮಹಾದ್ವಾರದೆಡೆ ನೂಕು ನುಗ್ಗಲಿನಲ್ಲಿ ನಿಂತು ನೋಡುತ್ತಿದ್ದೆವು, ನೆರೆದ ಜಾತ್ರೆಯ ಜನಜಂಗುಳಿಯ ನಡುವೆ ಆನೆಯೊಂದು ನಡೆದು ಬರುತ್ತಿದ್ದರೆ ಹೇಗೆ ಮೇಲೆದ್ದು ಕಾಣಿಸುವುದೊ ಹಾಗೆ ಜನಸಮುದ್ರದಲ್ಲಿ ತೇಲಿ ಬರುವ ಹಡಗುಗಳಂತೆ ಇಬ್ಬರು ಬೃಹದ್ ವ್ಯಕ್ತಿಗಳು ಬರುತ್ತಿದ್ದುದು ಕಾಣಿಸಿತು. ಗುಸುಗುಸು ಹಬ್ಬಿತು, ಗಾಂಧೀಜಿ ಬರುತ್ತಿದ್ದಾರೆ ಎಂದು. ಕತ್ತು ನಿಕ್ಕುಳಿಸಿ ನೋಡಿದೆ. ಗಾಂಧೀಜಿ ಎಲ್ಲಿ?

ಪಕ್ಕದಲ್ಲಿದ್ದವರು ಹೇಳಿದರು: “ಮೇಲೆದ್ದು ಕಾಣಿಸುತ್ತಾ ಬರುತ್ತಿದ್ದಾರಲ್ಲಾ ಅವರಿಬ್ಬರು ಆಲಿ ಸಹೋದರರು ಕಣ್ರೀ! ಅವರ ಮಧ್ಯೆ ನಡೆದು ಬರುತ್ತಿದ್ದಾರೆ ಗಾಂಧೀಜಿ.”

ಮಹಾತಾಮಸ ಮತ್ತು ಮಹಾರಾಜಸಗಳ ಮಧ್ಯೆ ನಡೆದುಬರುವ ಮಹಾಸಾತ್ವಿಕದಂತೆ ಕಾಣಿಸಿಕೊಂಡರು ಗಾಂಧೀಜಿ. ಮೌಲಾನಾ ಮಹಮ್ಮದಾಲಿ ಮತ್ತು ಮೌಲಾನಾ ಷೌಕತಾಲಿ ಇಬ್ಬರೂ ಪ್ರಾಚೀನ ಪೌರಾಣಿಕ ಅಸುರರಂತೆ ದೈತ್ಯ ಗಾತ್ರರಾಗಿದ್ದರು. ಅಸುರೀ ಸ್ವಭಾವಕ್ಕೆ ತಕ್ಕಂತೆ ಅವರ ಉಡುಪೂ ವಿರಾಜಿಸುತ್ತಿತ್ತು. ಚಂದ್ರ-ನಕ್ಷತ್ರ ಸಂಕೇತದಿಂದ ಶೋಭಿಸುತ್ತಿತ್ತು. ಅವರ ತಲೆಯುಡೆ. ಹೇರೊಡಲನ್ನು ಸುತ್ತಿತ್ತು ನೇಲುತ್ತಾ ಜೋಲುತ್ತಾ ನೆಲ ಗುಡಿಸುವಂತಿದ್ದ ಅವರ ನಿಲುವಂಗಿ. ಅವರ ಹೊಟ್ಟೆಯ ಸುತ್ತಳತೆಯಲ್ಲಿಯೆ ನಾಲ್ಕಾರು ಗಾಂಧಿಗಳು ಆಶ್ರಯ ಪಡೆಯಬಹುದಾಗಿತ್ತೇನೋ!

ತದ್ವಿರುದ್ಧವಾಗಿತ್ತು ಅಣುರೂಪಿ ಗಾಂಧೀಜಿಯ ಆಕೃತಿ, ಅವರಿಬ್ಬರ ನಡುವೆ. ನಮ್ಮ ಗೌರವಸಮಸ್ತವೂ ಸಾಷ್ಟಾಂಗವೆರಗಿತ್ತು ಅವರ ಪದತಲದಲ್ಲಿ: ‘‘ವಂದೇ ಮಾತರಂ! ಭಾರತ ಮಾತಾಕೀ ಜೈ! ಮಹಾತ್ಮಾ ಗಾಂಧೀ ಕೀ ಜೈ!’’ ಮೊದಲಾದ ಘೋಷಗಳು ಕಿವಿ ಬಿರಿಯುವಂತೆ ಗಗನದೇಶವನ್ನೆಲ್ಲ ತುಂಬಿದುವು. ಆ ಉತ್ಸಾಹ ಸಾಗರಕ್ಕೆ ನನ್ನ ಕೀಚು ಕೊರಳೂ ತನ್ನ ದನಿಹನಿಯ ನೈವೇದ್ಯವನ್ನು ನೀಡಿ ಧನ್ಯವಾಗಿತ್ತು!

ಮೂರು ನಾಲ್ಕು ದಿನಗಳ ಅಧಿವೇಶನದಲ್ಲಿ ನಾವು ಪ್ರೇಕ್ಷಕ ಭಾಗಿಗಳಾಗಿದ್ದೆವು. ನನ್ನ ನೆನಪಿನಲ್ಲಿ ಆ ಸ್ವಾರಸ್ಯದ ವಿವರಗಳಾವುವೂ ಇಲ್ಲ. ಆದರೆ ಸ್ವಾತಂತ್ರ್ಯದೀಕ್ಷೆಯನ್ನು ತೊಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮ್ಮಿಕ್ಕುವ ಭಾರತೀಯ ಸಮಷ್ಟಿ ಚೈತನ್ಯದ ಅಗ್ನಿಸ್ಪರ್ಶ ನನ್ನ ಕವಿಚೇತನಕ್ಕೂ ತಗುಲಿತ್ತು. ತತ್ಕಾಲದಲ್ಲಿ ರಚಿಸಿದ ಕೆಲವು ಇಂಗ್ಲಿಷ್ ಕವನಗಳೂ, ತರುವಾಯ ರಚಿತವಾಗಿ ಸುಪ್ರಸಿದ್ಧವಾಗಿರುವ ಕನ್ನಡ ಕವನಗಳೂ ಆ ದೀಕ್ಷೆಗೆ ಸಾಕ್ಷಿ ನಿಂತಿವೆ.

‘‘ಜಲಿಯನ್‌ವಾಲಾ ಬಾಗ್’’ ಮತ್ತು ‘‘ಟು ದೇಶಬಂಧು ದಾಸ್’’ ಎಂಬೆರಡನ್ನು ಇಲ್ಲಿ ಉದಾಹರಿಸುತ್ತೇನೆ:

TO DESHABANDHU DAS

Eternal Spirit, Freedoms’ Champion, Das,
Thy heavenly path be strewn with flowers divine;
Infinite peace and bliss sublime be thine!
Majestic as the great Himalayas

Thou wert: heaven was thy crown; earth’s thorny pass
Thy foot-stool sweet. Here, doth thy glory shine;

There, thou that glory art. Nor bars nor chain,
Nor selfish aim e’er stained thy splendour’s mass.

Death did awaken thee to life more free
And full, now dost thou hold earth’s bosom vast.
The radiance of thy soul descends from heaven
With grace to light and lift humanity!
Wild is the blast, O helmsman, hold the mast
That we may quit the frigate, not be driven.

ಬ್ರಿಟಿಷರ ಆಳ್ವಿಕೆಯಲ್ಲಿ ನಡೆದ ಅತ್ಯಂತ ಕಟುಕ್ರೂರವೂ ಭೀಕರವೂ ಆದ ನರಹತ್ಯೆ ಎಂದರೆ ಜಲಿಯನ್‌ವಾಲಾ ಬಾಗ್‌ನಲ್ಲಿ ಡಯರ್ ಎಂಬೊಬ್ಬ ಅಧಿಕಾರಿ ನಡೆಸಿದ ಕೊಲೆಯ ಘಟನೆ. ಹಬ್ಬದ ಸಂತೋಷದಲ್ಲಿ ಊರಿನ ಹೆಂಗಸರು ಮಕ್ಕಳಾದಿ ನೆರೆದ ಉದ್ಯಾನದ ಏಕಮಾತ್ರ ದ್ವಾರದಲ್ಲಿ ಫಿರಂಗಿಗಳನ್ನಿಟ್ಟು ಗುಂಡಿನ ಸುರಿಮಳೆಗೆರೆದು ಅದನ್ನು ಶ್ಮಶಾನವನ್ನಾಗಿ ಪರಿವರ್ತಿಸಿದ ಘಟನೆ ಸಮಸ್ತ ಭಾರತವನ್ನೂ ಕೆರಳಿಸಿತ್ತು. ಆ ಕ್ರೋಧದಿಂದ ಉದ್ಭವಿಸಿದ ಕವಿಹೃದಯದ ಅಭಿಶಾಪ ಈ ಕವನದಲ್ಲಿ ಮೂರ್ತಿ ಮತ್ತಾಗಿದೆ.

JALLIANWALA—BAGH!

Hell, open wide thy lakes of fire!
Blaze forth thy eternal ire!
Belch hideous torches from the caves
Dismal and dark over the graves
Of heart-less tyrants, hellish knaves
Who lick the blood of human wounds
Like cruel, horried, hellish hounds,
And open fire on guiltless souls
And lynch the noblest men in goals!
Tear them to pieces, O ye Fates,
And scatter them beside the gates
Of Sin and Death! Let hell consume
Them all, in one embrace of gloom:

Let that be their eternal doom!
O Hell, hast thou eternal fire
To annihilate Satanic Dyer?
O lxion, can thy mighty wheel
Torture the hound that did not feel
For babes limb-strewn, shot-down, and gory,
The modern ghastlier Mohammud Ghory?
O Sin and Death, consume the Dog
In your eternal hell-doomed bog!
Heaven, chase him out as thou dids> t chase
Thy Dyer, Satan of ancient days!

Let deadlier weapons on him be used
For all the hellish power he abused!
O heavenly guns, belch Stygian fire
From your entrails on hell-doomed Dyer,
The foe of virtue, friend of vice
Who plucked the children off their eyes;
The source of all un-thought-of crimes,
The demon of all times and climes!
What darker hell and Stygian fire
Reside in thee, O Hell-doomed Dyer?