“ನೀವು ಹುಟ್ಟಿದ ನಿಮ್ಮ ತಾಯಿಯ ತವರುಮನೆ ನೀವು ಭಾವಿಸಿರುವಷ್ಟು ಸಂಸ್ಕಾರ ಹೀನವಾಗಿ ಗ್ರಾಮ್ಯವಾಗಿ ರೂಕ್ಷವಾಗಿರಲಿಲ್ಲ. ನಿಮ್ಮ ತಾಯಿಯ ತಂದೆಗೆ ತಕ್ಕಮಟ್ಟಿನ ಕಲಾಭಿರುಚಿ ಇತ್ತು. ನಾನೆ ಚಿಕ್ಕವನಾಗಿದ್ದಾಗ ಹಿರಿಕೊಡಿಗೆಯ ಉಪ್ಪರಿಗೆಯ ಮೇಲೆ ನೋಡಿದ್ದೇನೆ, ಅನೇಕ ವಾದ್ಯಗಳಿದ್ದುದನ್ನು: ತಂಬೂರಿ, ತಬಲ, ಪುಂಗಿ, ಜಲತರಂಗದ ಹಾಗೆ ಟಂಟಂ ಹೊಡೆಯುವ ಲೋಹದ ತುಂಡುಗಳನ್ನು ಜೋಡಿಸಿದ್ದ ಮರದ ಹಲಗೆ-ಅದರ ಹೆಸರು ನನಗೆ ಗೊತ್ತಿಲ್ಲ-ಮತ್ತೂ ಏನೇನೊ. ಮನೆಯಲ್ಲಿಯೆ ಕತ್ತಲಾದ ಮೇಲೆ ಚೌಕಿಯ ಕಿರು ಜಗಲಿಯಲ್ಲಿ ತಾಳಮದ್ದಳೆ ಯಕ್ಷಗಾನ ನಡೆಯುತ್ತಿತ್ತು. ಐಗಳು, ಸೇರೆಗಾರರು, ಸ್ವತಃ ನಿಮ್ಮ ಅಜ್ಜ ತಿಮ್ಮನಾಯಕರು ಇತರರು ಸೇರಿ ಪ್ರಸಂಗ ನಡೆಸುತ್ತಿದ್ದರು. ಗೋಡೆಯ ಮೇಲೆ ತಿರುಪತಿಯ ಚಿತ್ರಪಟಗಳು ಶೋಭಿಸುತ್ತಿದ್ದುವು. ಸೊಗಸಾಗಿ ತಲೆಕಟ್ಟಿದ ಕಡಿನಕೋಡು ಮಿಗದ ಕೋಡು ಮುಂತಾದುವು ಮುಂಡಿಗೆಯ ಮೇಲುಭಾಗದಲ್ಲಿ ಮನೋಹರವಾಗಿದ್ದುವು. ತಮ್ಮದೇ ಆದ ರೀತಿಯಲ್ಲಿ ಸಾಹಿತ್ಯ ಸಂಸ್ಕೃತಿಯ ಉಪಾಸಕರಾಗಿದ್ದರು ಅವರು. ಬಗೆಬಗೆಯ ಆಭರಣಗಳನ್ನು ಮಾಡುವ ಅಕ್ಕಸಾಲಿಗರಂತೂ ವರ್ಷಗಟ್ಟಲೆ ಮೂರುಹೊತ್ತೂ ಬಂಗಾರ ಬಡಿಯುತ್ತಿದ್ದುದು ನನ್ನ ನೆನಪಿಗೆ ಬರುತ್ತದೆ.”

ಮೆಚ್ಚಿ ನುಡಿಯುತ್ತಿದ್ದ ಪುಟ್ಟಯ್ಯನಾಯಕರ ದನಿ ತುಸು ತಗ್ಗಿ ವಿಷಾದಕ್ಕೆ ತಿರುಗಿ ಮುಂದುವರಿಯಿತು: “ಆ ಕಾರಣವಾಗಿಯೆ ಎಂದು ಹೇಳುತ್ತಾರೆ, ಹಿರಿಕೊಡಿಗೆಯ ಸಂಪತ್ತು ಕ್ಷೀಣಿಸಿ, ಕಡೆಗೆ ದುರ್ಗತಿಗೆ ಇಳಿದದ್ದು. ಅದು ಹೇಗಾದರೂ ಇರಲಿ. ನೀವು ಹುಟ್ಟುವಾಗ ನಿಮ್ಮ ತಾಯಿಯ ತವರಿನಲ್ಲಿ ರಾಮಾಯಣಭಾರತಾದಿಗಳು ಪ್ರಸಂಗ ಯಕ್ಷಗಾನ ತಾಳಮದ್ದಳೆ ಭಾಗವತರಾಟ ಇತ್ಯಾದಿ ರೂಪಗಳಲ್ಲಿ ಹಾಜರಿದ್ದು, ನಿಮ್ಮ ಆಗಮನವನ್ನು ನಿರೀಕ್ಷಿಸುತ್ತಾ, ನಿಮಗೆ ಸುಸ್ವಾಗತ ಬಯಸಿದ್ದುದನ್ನು ನಾನು ಪ್ರತ್ಯಕ್ಷ ಹಾಜರಿದ್ದು ಕಂಡಿದ್ದೇನೆ: ನೀವು ಹುಟ್ಟಿದ್ದು ರಾತ್ರಿ, ಮಧ್ಯರಾತ್ರಿಗೆ ಮುಗ್ಗ. ಆವೊತ್ತು ರಾತ್ರಿ ಗಂಡಸರ ಊಟ ಮುಗಿದಿತ್ತು. ಹೆಂಗಸರು ಊಟಕ್ಕೆ ಸಿದ್ಧವಾಗುತ್ತಿದ್ದರೆಂದು ತೋರುತ್ತದೆ. ಜಗಲಿಯಲ್ಲಿ ‘ಕರ್ಣಾರ್ಜುನರ ಕಾಳಗ’ದ ಪ್ರಸಂಗಕ್ಕೆ ಪೂರ್ವಸಿದ್ಧತೆ ನಡೆದಿತ್ತು. ವಾದ್ಯಗಳನ್ನೆಲ್ಲ ಅವರವರ ಜಾಗದಲ್ಲಿಟ್ಟು, ಭಾಗವಹಿಸುವ ಪಾತ್ರಧಾರಿಗಳೂ ಮಂಡಲಾಕಾರವಾಗಿ ಕುಳಿತಿದ್ದರು. ಸುಸ್ವನಗಳೂ ಅಲ್ಲೊಂದು ಇನ್ನೊಂದು ಪೀಠಿಕಾಪ್ರಾಯವಾಗಿ ಕೇಳತೊಡಗಿದ್ದುವು. ಅಷ್ಟರಲ್ಲಿ ಬೇನೆ ತೊಡಗಿದೆಯಂತೆ ಎಂಬ ವಾರ್ತೆ ಒಳಗಣಿಂದ ಬಂತು. ಸರಿ, ಎಲ್ಲರೂ ಎದ್ದರು, ಕರ್ಣಾರ್ಜುನರು ಆವೊತ್ತು ಕಾಳಗ ಮಾಡಲಿಲ್ಲ. ಹೆರಿಗೆಗೆ ಅವಶ್ಯಕವಾದ ತಟ್ಟಿಕಟ್ಟುವುದೇ ಮೊದಲಾದ ಕಾರ್ಯಗಳಲ್ಲಿ ತೊಡಗಿದರು!….”

“ಹಿರಿಕೊಡಿಗೆಗೆ ಈಚೀಚೆಯವರೆಗೆ ರಸ್ತೆಯೆ ಇರಲಿಲ್ಲ. ತಮ್ಮ ತಾಯಿಯವರು ಮಕ್ಕಳೊಂದಿಗೆ ತವರಿಗೆ ಬಂದು ಹೋಗಬೇಕಾದರೆ ಕಾಲು ನಡಿಗೆಯಲ್ಲಿಯೆ ಬಂದು ಹೋಗಬೇಕಿತ್ತು. ಬಾಲೆ-ತೊಟ್ಟಿಲು ಹೊರಲಿಕ್ಕೆ ಒಂದು ಜನ, ಅಂತೂ ಈ ರೀತಿ ತವರಿಗೆ ಬರುವಾಗ ತವರಿಂದ ಹೋಗುವಾಗ ಇಬ್ಬರು ಮೂವರು ಹೊರೆಯಾಳು ಬೇಕಿತ್ತು. ಮಧ್ಯೆ ಮಧ್ಯೆ ನೀರು ಹರಿಯುವ ಹಳ್ಳ ಸಿಕ್ಕಿದರೆ ಅಲ್ಲಿ ಹುಡುಗರನ್ನೆಲ್ಲ ನಿಲ್ಲಿಸಿ, ಬಾಲೆ-ತೊಟ್ಟಿಲನ್ನೂ ಕೆಳಕ್ಕಿಟ್ಟು, ವೀಳ್ಯದೆಲೆಯಲ್ಲಿ ಎರಡು ಅಡಿಕೆ ಇಟ್ಟು, ಮಕ್ಕಳಿಗೂ ತೊಟ್ಟಿಲಿಗೂ ಸುಳಿದು, ಗಂಗೆಗೆ ಹಾಕಿ, ಕೈಯಲ್ಲಿ ನೀರು ತೆಗೆದು ಚಿಮುಕಿಸಿ ಮಕ್ಕಳ ಕಣ್ಣಿಗೊರಸಿ, ಮುಂದೆ ಸಾಗುತ್ತಿದ್ದರು. ಈ ಶಾಸ್ತ್ರ ತಮಗೆ ತಪ್ಪದೆ ನಡೆದಿದೆ. ನೀವು ಎಷ್ಟೋ ನದಿಗಳನ್ನು ದಾಟಿದ್ದರೂ ನಿಮ್ಮ ಮಕ್ಕಳ ಸಲುವಾಗಿ ಗಂಗೆಗೆ ಒಂದು ವೀಳ್ಯವನ್ನೂ ಹಾಕಿರಲಿಕ್ಕಿಲ್ಲ. ಅಂತೂ ಆಗ ಹಿರಿಕೊಡಿಗೆಗೆ ಗಾಡಿ ಹೋಗುತ್ತಿರಲಿಲ್ಲ. ಆ ದೆಸೆಯಿಂದ ನಿಮ್ಮಿಂದಾಗಿ ಗಂಗಾಮಾತೆ ವೀಳ್ಯ ಹಾಕುತ್ತಿದ್ದಳು!”

ಹೌದು, ಅಂತಹ ಒಂದು ಸುಂದರ ದೃಶ್ಯಚಿತ್ರ, ತನ್ನ ಮಂಜುಮಂಜು ಅಸ್ಪಷ್ಟತೆಯಿಂದಲೆ ಸ್ವಪ್ನಸುಂದರತರವಾಗಿ, ನನ್ನ ಚೈತ್ಯಪ್ರಜ್ಞೆಯ ಸುದೂರ ಸ್ಕೃತಿಯಲ್ಲಿ ಇಂದ್ರ ಚಾಪದಂತೆ ಸುರಂಜಿತವಾಗಿ ಹೊಳೆಯುತ್ತಿದೆ. ನಾನೆ ತೊಟ್ಟಿಲಲ್ಲಿ ಬಾಲೆಯಾಗಿದ್ದು ಹಳ್ಳ ದಾಟಿದ ಕಾಲದ್ದಲ್ಲ; ನನ್ನ ಗಂತಿಯರಿಬ್ಬರು-ದಾನಮ್ಮ, ಪುಟ್ಟಮ್ಮ-ಹುಟ್ಟಿದ ಅನಂತರದ ಕಾಲಕ್ಕೆ ಸೇರಿದ್ದು. ಆಗ ನಾನು ಸ್ವಲ್ಪ ದೂರ ನಡೆಯಬಲ್ಲವನಾಗಿದ್ದರೂ ಆರೇಳು ಮೈಲಿ ದೂರವಿದ್ದ ಮಾವನ ಮನೆಗೆ, ಅದರಲ್ಲಿಯೂ ದಟ್ಟಗಾಡು ಬೆಟ್ಟಗುಡ್ಡ ಹಳ್ಳಕೊಳ್ಳಗಳಿಂದ ಭೀಷಣವಾಗಿರುತ್ತಿದ್ದ ಆ ದೂರವನ್ನು ಒಬ್ಬ ಆಳಿನ ಹೆಗಲ ಮೇಲೆಯೆ, ಅವನ ವಸ್ತ್ರ ಸುತ್ತಿದ್ದ ಮಂಡೆಯನ್ನು ಆತು ಕುಳಿತು, ಸವಾರಿ ಮಾಡಿ ಸಾಗುತ್ತಿದ್ದುದು ವಾಡಿಕೆ! ಅದೂ ಒಂದು ಮೋಜಾಗಿರುತ್ತಿತ್ತು, ಆನೆಯ ಮೇಲೆ ಕುಳಿತ ಮಾವಟಿಗನಂತೆ, ಅಥವಾ ಅಂಬಾರಿಯ ಮೇಳೆ ಕುಳತ ಅರಸು ಕುವರನಂತೆ, ತುಸು ಎತ್ತರದಿಂದಲೆ ಆ ಅರಣ್ಯಕ ಮನೋಹರ ಭಯಂಕರ ದೃಶ್ಯವನ್ನು ನಿರಪಾಯಸ್ಥಾನದಿಂದ ಮುಗ್ಧವಿಸ್ಮಿತನಾಗಿ ವೀಕ್ಷಿಸುತ್ತಾ ಸಾಗುತ್ತಿದ್ದುದು! ಬಹುಶಃ ಆಗಲೆ ಇರಬೇಕು, ಸಹ್ಯಾದ್ರಿಯ ಅರಣ್ಯದೇವಿ ನನ್ನ ಕವಿಚೇತನದಲ್ಲಿ ದೈವದತ್ತವಾಗಿದ್ದು ಪ್ರಸ್ತುಪ್ತಸ್ಥಿತಿಯಲ್ಲಿದ್ದ ಸೌಂದರ್ಯಪ್ರಜ್ಞೆಯನ್ನು ಎಚ್ಚರಿಸಿ, ಅದಕ್ಕೆ ನಿಸರ್ಗಪ್ರೇಮ ದೀಕ್ಷೆಯನ್ನಿತ್ತು, ನನ್ನನ್ನು ಪ್ರಕೃತಿ-ಉಪಾಸನೆಗೆ ನಿವೇದಿಸಿದ್ದು!

ನೆನಪಲ್ಲ, ವಾಸ್ತವ: ಕಾಲದೇಶಾತೀತವಾಗಿ ನಿತ್ಯ ವರ್ತಮಾನದಲ್ಲಿ ಇರುವ ಆ ಅನುಭವ: ನಿಬಿಡ ತರುಗುಲ್ಮಪಂಕ್ತಿ, ಗಗನಚುಂಬಿ ವೃಕ್ಷರಾಜಿ, ನಾನಾ ವಿಧ ಪಕ್ಷಿಕಲರವ, ನಯನಗೋಚರವಾಗಿರದಿದ್ದರೂ ಪ್ರಜ್ಞೆಯ ಮೇಲೆ ತಮ್ಮ ಸಾನ್ನಿಧ್ಯದ ಮತ್ತು ಸಂಚಲನೆಯ ನಿಗೂಢ ಮುದ್ರೆಯನ್ನೊತ್ತುವುದರಿಂದಲೆ ಭೀಷ್ಮಭಾವ ಪ್ರಚೋದಿಗಳಾಗಿರುವ ವಿವಿಧ ಮೃಗ ಸಮೂಹ, ಬಂಡೆಯಿಂದ ಜಾರಿ ಉಂಡೆಗಲ್ಲುಗಳ ಬಿದಿರಿನ ಮೆಳೆಯ ಮೇಲೆ ಕುಳಿತಿದ್ದು ನಮ್ಮ ಕೇಕೆಗೆ ಬೆದರಿ ಮೀ ಮೀ ಮೀ ಎಂದುಲಿಹ ಬೀರಿ ಹಾರುವ ಮೀಂಚುಳ್ಳಿ, ನೀರಿಗೆ ಬಾಗಿರುವುದರಿಂದ ಕೊರಳಿನಿಂದ ಇಳಿಬಿದ್ದು ಮಿರುಗಿ ಹೊಳೆಯುವ ಚಿನ್ನದ ಕಟ್ಟಾಣಿಯ ಸರಪಂಕ್ತಿಯಿಂದ ದೇವತೆಯಾಗಿರುವ ಅವ್ವನ ನೆಂಟರ ಮನೆಯ ಹೊಸ ಸೀರೆಯ ತಾಯಿಗಂಪು!-ನೆನಪಲ್ಲ, ವಾಸ್ತವ: ನಿತ್ಯ ವರ್ತಮಾನವಾಗಿರುವ ಆ ಅನುಭವ!….

ಹಿರಿಕೊಡಿಗೆ ಮನೆಯಿಂದ ತವರಿನ ಅಕ್ಕರೆಯನ್ನು ಕಣ್ಣೀರ್ಮಿಡಿದು ಬೀಳ್ಕೊಂಡು, ಸುಮಾರು ಅರ್ಧಫರ್ಲಾಂಗು ದೂರದಲ್ಲಿದ್ದ ಚಾವಡಿಗೆ ಬಂದು, ಆ ಎತ್ತರದಿಂದ ಗದ್ದೆ ಕೋಗಿಗೆ ಮೆಟ್ಟಿಲು ಇಳಿದು, ಅದರ ಅಂಚಿನ ಮೇಲೆ ಹಸುರು ಪೈರಿನ ನಡುವೆ ನಡೆದು, ಅಡಕೆ ತೋಟದ ಪಕ್ಕದ ಕಾಟನ್ನೂ ಹಕ್ಕಲನ್ನೂ ಹಳುವಿನ ನಡುವೆ ಕಲ್ಲು ಕೊರಕಲು ದಾರಿಯಲ್ಲಿ ಏರಿ ಇಳಿದು ಹತ್ತಿ ಹಾರಿ ದಾಟಿ, ಅರಳಿಕಟ್ಟೆ ಸೂರೆದೇವಸ್ಥಾನ (ಸೂರ್ಯ ನಾರಾಯಣನ ಗುಡಿಯನ್ನು ಕರೆಯುತ್ತಿದ್ದ ರೀತಿ) ಗಳನ್ನು ಕಳೆದು, ಕೊಪ್ಪ ತೀರ್ಥಹಳ್ಳಿಯ ರಸ್ತೆಗೆ ಸೇರಿ ಮುಂಬರಿದು, ಮತ್ತೆ ಹಳು ಹಾಡು ಗದ್ದೆಕೋಗು ಹಕ್ಕಲು ಹಳ್ಳಗಳನ್ನು ಉತ್ತರಿಸಿ ಬೈಗಿನ ಹೊತ್ತಿಗೆ ಅವ್ವನು, ಬಹುಶಃ ಕರೆಯಲು ಬಂದಿದ್ದ ಅಪ್ಪಯ್ಯನ ಹಿಂದೆ, ಬಳಲಿ ಕುಪ್ಪಳಿಗೆ ಬರುತ್ತಿದ್ದರು, ಬಾಲೆ-ತೊಟ್ಟಿಲನ್ನೂ ಸಿಕ್ಕವನ್ನೂ ಮಕ್ಕಳನ್ನೂ ಹೊತ್ತ ಹೊರೆಯಾಳುಗಳೊಡನೆ. ಅಲ್ಲಿ ತವರಿನಿಂದ ಹಸುಳೆಯೊಡನೆ ಮನೆಗೆ ಹಿಂತಿರುಗಿ ಬರುವ ತಾಯಂದಿರಿಗೆ ಸಂಪ್ರದಾಯದ ಸ್ವಾಗತ ಕಾದಿರುತ್ತಿತ್ತು.

‘ದಿಷ್ಟಿ ಬೆಳಗುವುದು’ ಎಂದು ಕರೆಯುತ್ತಿದ್ದ ಆ ಮಂಗಳಕಾರ್ಯಕ್ಕೆ ಬೇಕಾದ ಎಲ್ಲ ಪೂರ್ವಸಿದ್ಧತೆಯೂ ನಡೆದಿರುತ್ತಿತ್ತು: ಕೆಂಪು, ಕಪ್ಪು, ಅರಿಸಿನ ಬಣ್ಣಗಳಿಂದ ಶೋಭಿಸುತ್ತಿದ್ದ ಗೋಲಾ ಅಥವಾ ತ್ರಿಕೋನಾಕೃತಿಯ ಅನ್ನದ ಕುಪ್ಪೆಗೆ ಕಕ್ಕಡ (ಎಣ್ಣೆ ಬಟ್ಟೆ ಸುತ್ತಿದ ಪುಂಡಿಕಡ್ಡಿ) ಚುಚ್ಚಿರುತ್ತಿತ್ತು. ಒಂದು ತೆಂಗಿನಕಾಯಿ ಗಾತ್ರದ ಬಿಳುಗಲ್ಲನ್ನು ಮುರುವಿನ ಒಲೆಗೆ ಹಾಕಿರುತ್ತಿದ್ದರು, ಅದು ಚೆನ್ನಾಗಿ ಕಾದು ನಸುಗೆಂಪೇರುವಂತೆ. ಒಂದು ತಂಬಾಳೆಯಲ್ಲಿ ಓಕುಳಿ ತುಂಬಿ ರಂಜಿಸುತ್ತಿತ್ತು. ಆರತಿ ಬೆಳಗಲು ಒಂದು ಬಟ್ಟಲಿನಲ್ಲಿ ಬತ್ತಿ ಹಾಕಿದ ಹಣತೆಯೋ ಅಥವಾ ಸೆಗಣಿ ಉಂಡೆಗೊ ಬಾಳೆ ಹಣ್ಣಿಗೊ ಚುಚ್ಚಿದ ಕಡ್ಡಿ ಬತ್ತಿಯೊ ತಾಯಿ ಮಗುವಿನ ಆಗಮನ ನಿರೀಕ್ಷೆಯಲ್ಲಿರುತ್ತಿತ್ತು. ಹೆಗ್ಗಡಿತಿಯರು ಅದರಲ್ಲಿಯೂ ಬಾಲೆಯ ಮುದ್ದುಮೊಗವನ್ನೀಕ್ಷಿಸುವ ತವಕದಲ್ಲಿ ತಕಪಕಿಸುವ ಉತ್ಸಾಹದಲ್ಲಿರುತ್ತಿದ್ದ ತರುಣಿಯರೂ ಕುಮಾರಿಯರೂ ಮೆಟ್ಟುಂಗಾಲಾಗಿರುತ್ತಿದ್ದರು.

‘ಬಂದರು! ಬಂದರು! ಎಂಬ ಸುದ್ದಿ ಮನೆಯ ಹೆಬ್ಬಾಗಿಲಾಚೆಯಿಂದ ಯಾವನಾದರೊಬ್ಬ ಆಳಿನ ಅಥವಾ ಆಳಿಯ ಬಾಯಿಂದ ತಿಳಿದ ಕೂಡಲೆ ಜಗಲಿಯ ಮುಂದೆ ಅಂಗಳದ ತುಲಸೀಕಟ್ಟೆಯ ಇದಿರಿನ ವರ್ತುಲಾಕಾರದ ಹಾಸುಗಲ್ಲಿನ ಮೇಲೆ ‘ಸ್ವಾಗತ ಸಮಿತಿ’ ನೆರೆಯುತ್ತಿತ್ತು. ಮಗುವಿನೊಡನೆ ತಾಯಿ ತುಲಸೀಕಟ್ಟೆಯ ದೇವರಿಗೆ ಸುತ್ತು ಬಂದು ಮುಂಬರಿದೊಡನೆ ಕಕ್ಕಡ ಉರಿಯುತ್ತಿತ್ತು; ಓಕುಳಿಯಾರತಿ ಬೆಳಗುತ್ತಿತ್ತು; ಕಾದ ಬಿಳುಗಲ್ಲಿನ ಮೇಲೆ ಅಶುಭ ಪರಿಹಾರಾರ್ಥವಾಗಿ ಹಾಕಿದ ಕೂದಲಿನ, ಮೆಣಸಿನಕಾಯಿನ, ಬೆಳ್ಳುಳ್ಳಿಯ, ಇನ್ನೂ ಏನೇನೊ ಮಾಂತ್ರಿಕಪದಾರ್ಥಗಳ ಕನರು  ಕಟುವಾಸನೆ ಏಳುತ್ತಿತ್ತು. ಓಕುಳಿಗೆ ಹಾಕಿದ ಕೆಂಡ ಚುಂಯೆಂದು ಮಗುವಿಗೆ ಬೆದರಿಕೆಯಾಗುವಂತೆ ಸದ್ದು ಮಾಡುತ್ತಿರಲು ಓಕುಳಿ ನೀರು ಸಿಂಚಿತವಾಗಿ ಶಿಶು ಅಳತೊಡಗುತ್ತಿತ್ತು. ಆ ಅಳುವಿನ ಸದ್ದು ಮನೆಗೆ ಕಲ್ಯಾಣಕವರವೆಂದು ಭಾವಿಸಿ ಹಿಗ್ಗಿ, ಕಂದನ ಚೆಂದದ ಹಳೆಗೆ ಮೋಹದ ಕೈಗಳು ಮಸಿಯ ಬೊಟ್ಟನ್ನಿಟ್ಟು ಲಟಿಗೆ ಮುರಿದು, ತಮ್ಮ ಅಕ್ಕರೆಯನ್ನೂ ಶುಭಾಶಯವನ್ನೂ ಸೂಚಿಸುತ್ತಿದ್ದುವು. ಹೀಗೆ ಅಮಂಗಳದ ಪರಿಹಾರವನ್ನು ಮಂಗಳದ ಆಹ್ವಾನವನ್ನು ಒಟ್ಟಿಗೆ ಪಡೆದು ಅವ್ವನೊಡನೆ ನಾನೂ ಮೊತ್ತ ಮೊದಲು ಕುಪ್ಪಳಿ ಮನೆಯನ್ನು ಪ್ರವೇಶಿಸಿರಬೇಕಲ್ಲವೆ?