ಸಂತೆಪೇಟೆಯ ಆನಂದಮಂದಿರದ ಹೋಟೆಲಿನ ಉಪ್ಪರಿಗೆಯ ಮೇಲಿದ್ದ ಬಾಡಿಗೆಯ ನನ್ನ ಕೊಠಡಿ ನಮ್ಮ ಲೋಟಸ್ ಲೀಫ್ ಯೂನಿಯನ್ನಿನ ಸದಸ್ಯ ಸಂಖ್ಯೆ ಹೆಚ್ಚುತ್ತಾ ಹೋದ ಹಾಗೆಲ್ಲ ಸಭೆ ಸಮಾರಂಭಗಳನ್ನು ನಡೆಸಲು ಸಾಲದಾಯಿತು. ಶಿವರಾಂ ಪೇಟೆಯ ತುತ್ತ ತುದಿಯಲ್ಲಿದ್ದ ಮನ್ನಾರ್ ಕೃಷ್ಣಶೆಟ್ಟಿ ಆರ್ಯವೈಶ್ಯ ಹಾಸ್ಟಲಿಗೆ ಅದನ್ನು ವರ್ಗಾಯಿಸಿದೆವು. ಕಾರಣ, ಪದ್ಮಪತ್ರಸಂಘದ ಹೆಚ್ಚಿದ್ದ ಸದಸ್ಯರಲ್ಲಿ ಅನೇಕರು ಆರ್ಯವೈಶ್ಯ ಹಾಸ್ಟಲಿನ ವಿದ್ಯಾರ್ಥಿವರ್ಗದವರಾಗಿದ್ದರು. ನೆನಪಿರುವ ಹೆಸರುಗಳಲ್ಲಿ ಇವು ಕೆಲವು: ಕನಕಶೆಟ್ಟಿ, ರಾಮಯ್ಯಶೆಟ್ಟಿ, ರಾಮಚಂದ್ರಶೆಟ್ಟಿ, ಕೃಷ್ಣಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಕೃಷ್ಣಮೂರ್ತಿ ಮೊದಲಾದವರು ಆ ವಿದ್ಯಾರ್ಥಿನಿಲಯದ ನಿವಾಸಿಗಳಲ್ಲದಿದ್ದರೂ ಅದರ ಹತ್ತಿರದ ಸಂಪರ್ಕದವರಾಗಿದ್ದರು. ಬಹುಶಃ ಆ ವರ್ಗಾವಣೆ ೧೯೨೪ನೆಯ ವರ್ಷದ ಉತ್ತರಾರ್ಧದಲ್ಲಿ, ನಾವು ಬೆಳಗಾಂ ಕಾಂಗ್ರೆಸ್ ಅಧಿವೇಶನಕ್ಕೆ ಹೋಗುವ ಮುನ್ನವೆ, ಆಗಿದ್ದಿರಬೇಕೆಂದು ನನ್ನ ನೆನಪು.

ಲೋಟಸ್ ಲೀಫ್ ಯೂನಿಯನ್ನಿನ ಆದಿಸದಸ್ಯ ವರ್ಗದವರಾಗಿದ್ದವರಲ್ಲಿ ಕೆಲವರು-ಗೋಪಾಲಕೃಷ್ಣ ಶೆಟ್ಟಿಯೂ ಅವರಲ್ಲಿ ಒಬ್ಬರು-ವಿಜ್ಞಾನ ವಿಷಯಗಳ ಅಭ್ಯಾಸಕ್ಕಾಗಿ ಅನಿವಾರ್ಯವಾಗಿ (ಆಗ ಮೈಸೂರಿನಲ್ಲಿ ವಿಜ್ಞಾನ ಬೋಧೆ ಇರಲಿಲ್ಲ.) ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಹೋಗಿದ್ದರು. ಅವರು ಅಲ್ಲಿಯ ಆರ್ಯವೈಶ್ಯ ವಿದ್ಯಾರ್ಥಿನಿಲಯಕ್ಕೆ ಸೇರಿದ್ದರು. ಆ ವಿದ್ಯಾರ್ಥಿನಿಲಯದಲ್ಲಿಯೆ ಮೊದಲಿಂದಲೂ ಬೆಂಗಳೂರಿನಲ್ಲಿಯೆ ವಿದ್ಯಾಭ್ಯಾಸ ಮಾಡುತ್ತಿದ್ದ ಭೂಪಾಳಂ ಚಂದ್ರಶೇಖರ ಶೆಟ್ಟರೂ ವಿದ್ಯಾರ್ಥಿಗಳಾಗಿದ್ದರು. ಅವರೆಲ್ಲ ಕೂಡಿ ಆರ್ಯವೈಶ್ಯ ಹಾಸ್ಟಲಿನಲ್ಲಿ ಲೋಟಸ್ ಲೀಫ್ ಯೂನಿಯನ್ನಿನ ಒಂದು ಶಾಖೆ ತೆರೆಯುತ್ತೇವೆ ಎಂದೂ ಅದರ ಪ್ರಾರಂಭ ಭಾಷಣಕ್ಕೆ ನಾನು ಒಪ್ಪಿಕೊಳ್ಳಬೇಕೆಂದೂ ಕಾಗದ ಬರೆದರು. ನಾನು ಆಗ ನನಗಿದ್ದ ಉತ್ಸಾಹದ ಭರದಲ್ಲಿ ಒಪ್ಪಿಕೊಂಡೆ. ಹಾಗೆ ಒಪ್ಪಿಕೊಳ್ಳುವುದಕ್ಕೆ ಮತ್ತೊಂದು ಪ್ರೇರಣವೂ ಜೋಡಿಗೊಂಡಿತ್ತು. ಆದೇನೆಂದರೆ, ಆ ಪ್ರಾರಂಭ ಭಾಷಣವನ್ನೂ ಸ್ವಾಮಿ ವಿವೇಕಾನಂದರ ಜನ್ಮೋತ್ಸವವನ್ನೂ ಒಟ್ಟಿಗೆ ಇಟ್ಟುಕೊಂಡದ್ದು. ಆಗ ಸ್ವಾಮಿ ವಿವೇಕಾನಂದರ ಬೆಂಕಿ ಹೊತ್ತುಕೊಂಡು ನನ್ನಾತ್ಮ ಉರಿಯುತ್ತಿತ್ತು! ಜ್ವಾಲಾಮಯವಾಗಿತ್ತು! ಅವರನ್ನು ಕುರಿತು ಮಾತಾಡುವುದೆಂದರೆ, ಅವರನ್ನು ಮೆಚ್ಚುವುದೆಂದರೆ, ಅವರನ್ನು ಹೊಗಳುವುದೆಂದರೆ ನನ್ನ ಜೀವ ಆನಂದಮಯವಾಗುತ್ತಿತ್ತು. ಆ ಅವಕಾಶ ಸಿಕ್ಕುವುದಾದರೆ ನಾನೆಲ್ಲಿಗೆ ಬೇಕಾದರೂ ಕರೆದಲ್ಲಿಗೆ ಹೋಗಲು ಸಿದ್ಧವಾಗಿದ್ದೆ.

೧೯೨೪ನೆಯ ಇಸವಿ ಜನವರಿ ೨೫ನೆಯ ಸಂಜೆಗೆ ಇಟ್ಟುಕೊಂಡಿದ್ದರು ಆ ಸಂಘದ ಪ್ರಾರಂಭೋತ್ಸವವನ್ನು. ಭೂಪಾಳಂ ಚಂದ್ರಶೇಖರಯ್ಯ, ಗೋಪಾಲ ಕೃಷ್ಣಶೆಟ್ಟಿ ಮೊದಲಾದ ಮಿತ್ರರು ರೈಲ್ವೇ ಸ್ಟೇಷನ್ನಿಗೆ ಬಂದು ನನ್ನನ್ನು ಅವರ ವಿದ್ಯಾರ್ಥಿನಿಲಯಕ್ಕೆ ಕರೆದೊಯ್ದರು. ಸಂಜೆಯ ಕಾರ್ಯಕ್ರಮ ಸ್ವಾಮಿ ಶ್ರೀವಾಸಾನಂದರು ಅಧ್ಯಕ್ಷರಾಗಿದ್ದರು. (ಅವರು ತಮ್ಮ ಪೂರ್ವಾಶ್ರಮದಲ್ಲಿ ಮೈಸೂರು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು, ನಿವೃತ್ತರಾದ ಮೇಲೆ ಸಂನ್ಯಾಸಿಯಾಗಿ ಶ್ರೀರಾಮಕೃಷ್ಣ ಮಹಾಸಂಘಕ್ಕೆ ಸೇರಿದವರಾಗಿದ್ದರು) ನನ್ನ ಭಾಷಣವನ್ನು ನಾನು ಇಂಗ್ಲಿಷಿನಲ್ಲಿ ಬರೆದು ತೆಗೆದುಕೊಂಡು ಹೋಗಿದ್ದೆ. ಸಾಕಷ್ಟು ದೀರ್ಘವಾಗಿಯೆ ಇತ್ತು. ಆದರೂ ಮಿತ್ರರು ಮೆಚ್ಚಿಕೊಂಡರು. ನನಗೀಗ ಅನ್ನಿಸುತ್ತದೆ, ಅದೆಲ್ಲ ಬರಿಯ ಔಪಚಾರಿಕ ಎಂದು. ಅವರ ಪ್ರಶಂಸೆ ಔಪಚಾರಿಕವಾಗಿತ್ತು ಎಂದಲ್ಲ, ಅದು ಹೃತ್ಪೂರ್ವಕವಾಗಿಯೆ ಇತ್ತು. ಆದರೆ ಆಗಿನ ಕಾಲದಲ್ಲಿ ಹಾಗೆ ಇಂಗ್ಲಿಷಿನಲ್ಲಿಯೆ ವ್ಯವಹರಿಸುವುದನ್ನು ಅತ್ಯಂತ ಸ್ವಾಭಾವಿಕತವೆಂದು ಭ್ರಮಿಸಿತ್ತು ಮಂದಿ. ಕನ್ನಡವನ್ನು ಬಳಸುವ ಪ್ರಶ್ನೆಯೆ ಪ್ರಜ್ಞೆಗೆ ಬರುತ್ತಿರಲಿಲ್ಲ. ನನ್ನ ಆ ಭಾಷಣದ ಮಟ್ಟ ಏನೆ ಆಗಿರಲಿ, ಇಂಗ್ಲಿಷಿನಲ್ಲಿ ಭಾಷಣ ಮಾಡಿದುದೇ ಶ್ಲಾಘನೆಯ ವಿಷಯವಾಗಿತ್ತು ಎಂದು ತಿಳಿಯುತ್ತೇನೆ.

ಆದರೆ ಈಗ ನನಗನ್ನಿಸುತ್ತದೆ, ನಮ್ಮ ಬದುಕನ್ನು ನಿಯಂತ್ರಿಸುತ್ತಿರುವ ಈಶ್ವರೇಚ್ಛಾರೂಪದ ವಿಧಿಯ ದೃಷ್ಟಿಯಲ್ಲಿ ಅದೆಲ್ಲ ನಿಮಿತ್ತಮಾತ್ರವಾಗಿತ್ತು, ಗೌಣವಾಗಿತ್ತು. ಮುಖ್ಯವಾಗಿದ್ದುದೇ ಬೇರೆ: ಅದು ನಡೆದದ್ದು ಆ ಸಭೆ ಆ ಭಾಷಣಗಳು ಆ ಪ್ರಾರಂಭೋತ್ಸವ ಸಮಾರಂಭ ಎಲ್ಲ ಪೂರೈಸಿದ ತರುವಾಯವೆ!

ನನ್ನನ್ನು ಭೂಪಾಳಂ ಚಂದ್ರಶೇಖರಯ್ಯನವರು ತಮ್ಮ ಕೊಠಡಿಯಲ್ಲಿಯೆ ತಂಗುವಂತೆ ಏರ್ಪಡಿಸಿದ್ದರು. ಅಂದು ರಾತ್ರಿ ಸಮಾರಂಭದ ಕಾರ್ಯಕ್ರಮಗಳೆಲ್ಲ ಮುಗಿದ ಅನಂತರ ನಾನು ಆ ಕೊಠಡಿಯಲ್ಲಿದ್ದ ಅವರ ಮೇಜಿನ ಮೇಲೆ ನನ್ನ ಜೀವನ ನೌಕೆಯ ಕರ್ಣಧಾರ ಸ್ವರೂಪವಾಗಲಿದ್ದ ಒಂದು ಪೂಜ್ಯ ಅನರ್ಘ್ಯ ವಸ್ತುವನ್ನು ಸಂದರ್ಶಿಸಿದೆ: ‘Life of Sri Ramakrishan,’ Compiled from various Authentic Sources. (‘‘ಶ್ರೀ ರಾಮಕೃಷ್ಣ ಜೀವನ ಚರಿತ್ರೆ.’– ಅನೇಕ ಅಧಿಕೃತ ಮೂಲಗಳಿಂದ ಸಂಗ್ರಹಿಸಿದುದು.) ಅದು ಆ ವರ್ಷವೆ ಎಂದರೆ ೧೯೨೫ರಲ್ಲಿಯೆ ಹಿಮಾಲಯದಲ್ಲಿರುವ ಆಲ್ಮೋರದ ಮಯಾವತಿಯ ಅದ್ವೈತ ಆಶ್ರಮದಿಂದ ಸ್ವಾಮಿ ಮಾಧವಾನಂದರ ಹೆಸರಿನಲ್ಲಿ ಪ್ರಕಟಿತವಾಗಿತ್ತು. ಡೆಮಿ ಆಕಾರದ ೭೬೫ ಪುಟಗಳ ಬೃಹದ್ ಗಾತ್ರದ ಹೆಬ್ಬೊತ್ತಗೆ: ನನ್ನ ಪ್ರಜ್ಞೆಗೆ ಅರಿಯದಂತೆಯೆ ದೇವದೇವ ಮಹಾದೇವನ ಪುಸ್ತಕರೂಪಿ ಕೃಪಾಹಸ್ತ ತನ್ನ ಕಂದನನ್ನೆತ್ತಿ ಎದೆಗಪ್ಪಿಕೊಳ್ಳಲು ಕೃಚಾಚಿದಂತಿತ್ತು! ಶ್ರೀ ತಾಯಿಯ ಕರುಣೆ ಮೈದಾಳಿದಂತಿತ್ತು!

ನಾನು ಅದುವರೆಗೆ ಸ್ವಾಮಿ ವಿವೇಕಾನಂದರ ಭಾಷಣಗಳಲ್ಲಿ ಅಲ್ಲಲ್ಲಿ ಬರುವ ಶ್ರೀ ರಾಮಕೃಷ್ಣರ ವಿಚಾರ ಓದಿದ್ದೆನಾದರೂ ಅವರ ಜೀವನ ಚರಿತ್ರೆಯನ್ನು ಓದಿರಲಿಲ್ಲ. ವಿವೇಕಾನಂದರ ಗುರುಗಳೆಂದು ಅವರಲ್ಲಿ ಗೌರವವಿದ್ದಿತಾದರೂ ವಿವೇಕಾನಂದರ ಪರವಾಗಿ ನನ್ನಲ್ಲಿದ್ದ ಪೂಜ್ಯಬುದ್ಧಿಯಷ್ಟು ತೀವ್ರವಾಗಿರಲಿಲ್ಲ. ಪರಮಹಂಸರಲ್ಲಿದ್ದ ಆ ಗೌರವ. ಆದರೂ ನನ್ನ ಆಧ್ಯಾತ್ಮಿಕ ಕುತೂಹಲ ಉದ್ದೀಪ್ತವಾಗಿ ಆ ಪುಸ್ತಕವನ್ನು ಎತ್ತಿಕೊಂಡು ಅವರ ಮೇಜಿನ ಮುಂದಿದ್ದ ಅವರ ಕುರ್ಚಿಯ ಮೇಲೆಯೆ ಕುಳಿತು ವಿದ್ಯುದ್ದೀಪದ ಉಜ್ವಲ ಬೆಳಕಿನಲ್ಲಿ ಓದತೊಡಗಿದೆ. ರಾತ್ರಿಯಲ್ಲಿ ಆಗಿನ ಬೆಂಗಳೂರಿನ ನಿರ್ಜನ ನೀರವ ಪ್ರದೇಶವೆನ್ನಬಹುದಾಗಿದ್ದ ಆ ಆರ್ಯವೈಶ್ಯ ವಿದ್ಯಾರ್ಥಿನಿಲಯವು ತುಂಬುದಳಿರು ದಟ್ಟವಾಗಿ ಬೆಳೆದಿದ್ದ ಮಾವಿನಮರಗಳಿಂದ ಸುತ್ತುವರಿದು ರಸ್ತೆಗೆ ದೂರವಾಗಿದ್ದುದರಿಂದ ನಿಃಶಬ್ದ ಪ್ರಶಾಂತವಾಗಿತ್ತು. ಸಮಾರಂಭ ಮುಗಿದ ಮೇಲೆ ಸಭೆಗೆ ಬಂದಿದ್ದ ಅತಿಥಿಗಳೆಲ್ಲ ಹೊರಟುಹೋಗಿದ್ದರು. ಅಲ್ಪಸ್ವಲ್ಪವಾಗಿದ್ದಿರಬಹುದಾದ ನಿಲಯದ ವಿದ್ಯಾರ್ಥಿಗಳ ಸದ್ದು ನನ್ನ ಏಕಾಗ್ರತೆಯ ಕಿವಿಗೆ ತಾಗಿ ಗಮನ ಸೆಳೆಯಲಾರದಾಗಿತ್ತು. ನಾನು ಓದತೊಡಗಿದ್ದೆ, ಧ್ಯಾನಮಗ್ನನೆಂಬಂತೆ!

ಓದುವುದರಲ್ಲಿ ಮಗ್ನನಾಗಿದ್ದ ನನ್ನ ಏಕಾಗ್ರತೆ ಸಮಾಧಿಯನ್ನರಿತು ಯಾರೊಬ್ಬರೂ ನನ್ನಡೆ ಸುಳಿಯಲಿಲ್ಲ. ಮಾತನಾಡಿಸುವ ಧೈರ್ಯವನ್ನೂ ಮಾಡಲಿಲ್ಲವೆಂದು ತೊರುತ್ತದೆ. ಊಟದ ಸಮಯಕ್ಕೆ ನನ್ನನ್ನು ಕರೆಯಲೂ ಸ್ವಲ್ಪ ಹಿಂದೆಮುಂದೆ ನೋಡಿರಬೇಕೆಂದು ಭಾವಿಸುತ್ತೇನೆ. ನನಗಾಗಿ ಕಾದೂ ಕಾದೂ ಕಡೆಗೆ ಭೂಪಾಳಂ ಚಂದ್ರಶೇಖರಯ್ಯನವರು ತಮಗೆ ಸಹಜವಾಗಿದ್ದ ಕಿರುನಗೆಗೂಡಿ ಬಂದು “ಎಲ್ಲರೂ ಕಾಯುತ್ತಿದ್ದಾರೆ ಬಹಳ ಹೊತ್ತಿನಿಂದ ತಮಗಾಗಿ….” ಎಂದು ಊಟಕ್ಕೆ ಎಬ್ಬಿಸಿದರು. ಊಟ ಮುಗಿಸಿ ಬಂದು ಮತ್ತೆ ಓದತೊಡಗಿದೆ. ರಾತ್ರಿ ಮುಂದೆಮುಂದೆ ಸಾಗಿತ್ತು. ಚಂದ್ರಶೇಖರಯ್ಯ ತಮ್ಮ ಆ ಕೊಠಡಿಯಲ್ಲಿಯೆ ನನಗೊಂದು ತಮಗೊಂದು ಹಾಸಗೆ ಹಾಕಿದ್ದರು. ನಾನು ಓದು ನಿಲ್ಲಿಸಿ ಮಲಗುತ್ತೇನೆಂದು ಸ್ವಲ್ಪಕಾಲ ಕಾದು, ನಾನು ಓದುವುದರಲ್ಲಿ ತನ್ಮಯವಾಗಿದ್ದುದನ್ನು ಅರಿತು, ತಾವು ಮಲಗಿದರು. ರಾತ್ರಿ ಒಂದು ನಿದ್ದೆ ಮುಗಿದು ಎಚ್ಚರವಾದಾಗ ನೋಡುತ್ತಾರೆ, ನಾನು ನಿಷ್ಪಂದನಾಗಿ ಕುಳಿತು ಓದುತ್ತಲೇ ಇದ್ದೇನೆ! ಗಡಿಯಾರ ನೋಡುತ್ತಾರೆ, ಮೂರು ಗಂಟೆ! ಅವರಿಗೆ ನಂಬಲಾಗಲಿಲ್ಲವಂತೆ. ಗಡಿಯಾರ ನಿಂತುಬಿಟ್ಟಿದೆಯೋ ಏನೋ ಎಂದು ನೋಡಿದಾಗ ಅದು ನಡೆಯುತ್ತಿತ್ತು! ಅವರು ಎದ್ದುಬಂದು ನನ್ನ ಬಳಿ ನಿಂತಾಗ ಫಕ್ಕನೆ ಎಚ್ಚೆತ್ತವನಂತೆ ತಲೆಯೆತ್ತಿದೆ. ಅವರು ಸಕರುಣ ಧ್ವನಿಯಿಂದ ಹೇಳಿದರು: “ಪುಟ್ಟಪ್ಪ, ನಿಮಗೆ ಕಾಣಿಕೆಯೊಪ್ಪಿಸುವುದಕ್ಕಾಗಿಯೆ ಈ ಗ್ರಂಥ ತಂದಿದ್ದೇವೆ. ಈಗ ರಾತ್ರಿ ಮೂರು ಗಂಟೆಯಾಗಿದೆ. ಯಾಕೆ ನಿದ್ದೆಗೆಡುತ್ತೀರಿ? ರೈಲು ಪ್ರಯಾಣದಿಂದಲೂ ಭಾಷಣಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದುದರಿಂದಲೂ ದಣಿದಿದ್ದೀರಿ. ಅಲ್ಲದೆ ನಾಳೆ ಬೆಳಿಗ್ಗೆ ಮತ್ತೆ ಮೈಸೂರಿಗೆ ಹೊರಡಬೇಕಾಗಿದೆ. ಮೈಸೂರಿಗೇ ತೆಗೆದುಕೊಂಡು ಹೋಗಿ ನಿಧಾನವಾಗಿ ಓದಬಹುದಲ್ಲಾ?” ಎಂದರು. ಆ ಗ್ರಂಥವನ್ನು ನನಗಾಗಿ ಅವರು ತಂದಿದ್ದರೋ ಅಲ್ಲವೋ ನನಗೆ ಗೊತ್ತಿರಲಿಲ್ಲ. ಆದ್ದರಿಂದ ಅದನ್ನು ನಾನು ಮೈಸೂರಿಗೆ ಹೊರಡುವ ಮುನ್ನವೇ ಓದಿ ಮುಗಿಸಬೇಕೆಂದು ಮನಸ್ಸು ಮಾಡಿದ್ದೆ. ಅದು ನನ್ನದೆ ಆಗುವುದೆಂದು ತಿಳಿದ ಮೇಲೆ ಅವರು ಇಚ್ಛಿಸಿದಂತೆ ದೀಪ ಆರಿಸಿ ಮಲಗಿದೆ.

ನಿಜವಾಗಿಯೂ ಅವರು ಆ ಗ್ರಂಥವನ್ನು ನನಗೆ ಉಪಾಯನವಾಗಿ ಕೊಡಲು ತಂದಿದ್ದರೋ ಅಥವಾ ಅದರಲ್ಲಿ ನನಗುಂಟಾದ ಉನ್ಮಾದ ಸದೃಶ ಆಸಕ್ತಿಯನ್ನು ಕಂಡು ಅದನ್ನು ನನಗೇ ಕೊಟ್ಟುಬಿಡಲು ಆ ರೀತಿಯ ಉಪಾಯ ಹೂಡಿದರೋ ತಿಳಿಯದು. ನನಗೆ ಸ್ವಾಮಿ ವಿವೇಕಾನಂದರಲ್ಲಿದ್ದ ಅಪಾರ ಪೂಜ್ಯತೆಯನ್ನು ಆ ನನ್ನ ಮಿತ್ರರೆಲ್ಲ ಚೆನ್ನಾಗಿ ತಿಳಿದಿದ್ದರಿಂದ ಆ ವರ್ಷವೆ ಹೊಸದಾಗಿ ಮೊತ್ತಮೊದಲಾಗಿ ಪ್ರಕಟವಾಗಿದ್ದ ಆ ಗ್ರಂಥವನ್ನು ನನಗೆ, ಲೋಟಸ್ ಲೀಫ್ ಯೂನಿಯನ್ನಿನ ಪ್ರಾರಂಭೋತ್ಸವದ ಮತ್ತು ಸ್ವಾಮಿ ವಿವೇಕಾನಂದರ ಜನ್ಮೋತ್ಸವದ ಆ ದಿವ್ಯಸಂದರ್ಭದಲ್ಲಿ, ಕಾಣಿಕೆಯಾಗಿ ಕೊಡುವುದರ ಔಚಿತ್ಯವನ್ನರಿತು ತಂದಿರಿಸಿದ್ದರೂ ಇರಬಹುದು. ಏನಾದರಾಗಲಿ, ವಿಧಿಯ ಕೃಪೆ ಹೂಡಿದ ಆ ತಂತ್ರದಿಂದ ಮರುದಿನ ನಾನು ಹೊರಡುವ ಮುನ್ನ ಆ ದಿವ್ಯಗ್ರಂಥ ನನ್ನದಾಗಿತ್ತು. ಅದಿನ್ನೂ ನನ್ನ ಬಳಿ ಇದೆ. ಅದರ ಮೊದಲನೆಯ ಖಾಲಿ ಪುಟದಲ್ಲಿ, ಇಂಗ್ಲಿಷಿನಲ್ಲಿ, ‘‘ಪದ್ಮಪತ್ರ ಸಂಘದ ಶಾಖೆ’’ಯ ಮುದ್ರೆಯ ಕೆಳಗೆ ಹೀಗೆ ಬರೆದಿದೆ: ಭೂಪಾಳಂ ಅವರ ಕೈಬರೆಹದಲ್ಲಿ: ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟರ ರುಜುವಿನೊಡನೆ.

THE LOTUS_LEAF UNION. BRANCH
A.V.HOSTEL. SESHADRI ROAD,
BANGLORE

To
Mr.K.V.Puttapa,

On the day of the celebration of the Sixty third Birthday Anniversary of Sri Swami Vivekananda. At the Aryavysya HOSTEL, Seshadri Road, Banglore, on 25th Jan 1925, under the presidency of Sri sreevasananda of Sri Ramakrishna Asram-This book is presented with the best compliments of the Members of The Lotus Leaf Union Branch, Arya Vysya Hostel, Seshadri Road, Banglore.

P.GOPALA KRISHNA SHETTY
Secretary

ಅಂದು ನನ್ನ ಮಿತ್ರರಿಗಾಗಲಿ ನನಗಾಗಲಿ ನಡೆದ ಆ ಘಟನೆಯ ದೈವೀ ಮಹತ್ತಾಗಲಿ ಮತ್ತು ಅದರಿಂದಾಗಲಿರುವ ಪರಿಣಾಮದ ಭೂಮತ್ವವಾಗಲಿ ಸ್ವಲ್ಪವಾದರೂ ಪ್ರಜ್ಞಾ ದಿಗಂತ ಗೋಚರವೂ ಆಗಿರಲಿಲ್ಲವಲ್ಲಾ!

ಆದರೆ ಮರುದಿನ ೨೬-೧-೧೯೨೫ರ ಬೆಳಿಗ್ಗೆ ವಿದ್ಯಾರ್ಥಿನಿಲಯದ ಎದುರಿಗಿದ್ದ ಮಾವಿನ ಮರದಡಿ ಕುಳಿತು ಬರೆದಿರುವ ಒಂದು ಅಪೂರ್ಣ ಇಂಗ್ಲಿಷ್ ಕವನದಲ್ಲಿ ಆ ಮಹದ್ ಭೂಮದ ಪೂರ್ವಸಂಕೇತ ಈಷತ್ ಪ್ರಕಟವಾದಂತಿದೆ. ಆ ಕವನವನ್ನು ಒಂದು ಎಕ್ಸರ್ ಸೈಜ್ ನೋಟು ಬುಕ್ಕಿನ ಹಾಳೆಯಲ್ಲಿ ಅವಸರವಸರವಾಗಿ ಗೀಚಿ ಬರೆದಿದೆ. ಸುಮಾರು ನಲವತ್ತೆರಡೊ-ಮೂರೊ ಪಂಕ್ತಿಗಳು ಮುಂದುವರಿದು ಅರ್ಧದಲ್ಲಿಯೆ ನಿಂತುಬಿಟ್ಟಿದೆ. ಬಹುಶಃ ರೈಲಿಗೆ ಹೊರಡಬೇಕಾಗಿಯೊ ಏನೊ? ಅದನ್ನು ಒಂದು ಹಸ್ತಪ್ರತಿಯ ನಡುವೆ ಹಾಕಿ ಮರೆತುಬಿಟ್ಟಿದ್ದರಿಂದ ಪೂರೈಸಲೆ ಇಲ್ಲ ಎಂದು ಭಾವಿಸುತ್ತೇನೆ. ಅದು ಹಾಳಾಗದೆ ಉಳಿದು ಈಗ ದೊರತದ್ದೆ ಆಶ್ಚರ್ಯಕರ! ಅದನ್ನು ಓದಿ ನಾನು ಪುಲಕಿತನಾದೆ. ಮುಂದೆ ‘‘ನೆನಪಿನ ದೋಣಿ’ಯಲ್ಲಿ’ ಅಚ್ಚಾಗಿ ಪ್ರಕಟಗೊಳ್ಳಲಿ ಎಂಬ ದೈವೇಚ್ಛೆಯಿಂದಲೆ ಅದು ಉಳಿದುಕೊಂಡಿತೊ ಏನೋ?

Lines written Beneath the Mango Trees In Front of A.V.HOSTEL, Banglore on ೨೬-೧-೧೯೨೫.

How tranquil is this home of peace!
And Oh, glorious is this scene!
While I stand beneath these mango trees
Where flowers blossoming fresh and green
Kiss the Infinite at my heart,
I feel that I am not a part
Of glory absolute, but whole!
That my soul is all beings soul!
The rustle least among the leaves
Stirs all my life and beats in thrills,
For the spirit divine that weaves
The flowery web of life so fills
The flowers of his manifestation
With drops of godly inspiration
That either the sweet chimes of birds
Or the sweet sight of browsing herds
Or aught of beauty and of love
Can show their dazzling primal glory,
Can tell their undiscovered story!
Life shoots like leaves, life blooms like flowers,
Life meekly plays in Natur’s bowers.
Ah! Mango blossoms, who are ye?
Ye are children of Infinite!
Your songs do echo in my bosom,
For ye are poets and I a blossom!

Those tiny birds that leap and sing
Upon the sun-lit branches green
With their inspiring music bring
A glory’s form before unseen.
These tiny sable ants that fill
This dusty trunk-shettered ant-hill
Road merrily this delightful morn
And all the cares of the world scorn.
They too are lit by the same?-[1] light
That fills the eluding infinite.

I hear your songs, sweet creatures dear,
That makes me drop one poetic tear,
For ye are poets and I’m an ant
Climbing the mighty Brahman’s plant!
The city’s bustle is faintly heard
As the chanting of the Eternal Word.
The train’s loud roar, the cycles’ bell,
The glittering coaches’ rattling wheel….

 


[1] ಮೇಲೆ ಪ್ರಶ್ನೆ ಹಾಗಿರುವ ಜಾಗದಲ್ಲಿ ಪದ ಯಾವುದೊ ಗೊತ್ತಾಗುವಂತಿಲ್ಲ