‘‘ಶ್ರೀಕೃಷ್ಣವೇಣು’’ ಎಂಬ ಶೀರ್ಷಿಕೆಯಲ್ಲಿ ಎಂಟು ಪದ್ಯಗಳಿವೆ. ಅವುಗಳಲ್ಲಿ ನಾಲ್ಕನ್ನು ಇಲ್ಲಿ ಕೊಟ್ಟಿದೆ:

ತಂಬೆಲರು ಮಧುವನಗಳಿಂ ಬರಲು ಮಧುವುಂಡ
ದುಂಬಿಗಳು ಝೇಂಕರಿಸಲಡವಿಗಳಲಿ
ಕೆಂಬಿಸಿಲ ನಭ ಮೆರೆಯೆ| ಅಂಬರವ ಗಾನದಿಂ
ತುಂಬಿಸುವ ವೇಣು ನಿನ್ನದೈ ಕೃಷ್ಣಾ.

ಗೋಪಾಲಕರು ಬಂದು| ಗೋಪಾಲನಂ ಕರೆಯೆ
ಗೋಪರೊಡಗೂಡಿ ನಂದಗೋಕುಲದಿ
ಗೋಪಿಯರ ಹೃದಯಗಳ| ಗೋಪ್ಯದಿಂ ಸೆರೆಗೈವ
ಗೋಪಾಲವೇಣು ನಿನ್ನದೈ ಕೃಷ್ಣಾ.

ಕಾಳ ರಕ್ಕಸರೆದೆಯ್ತ್ಯ ಸೀಳಿ ಕೆಡಹುವ ವೇಣು
ಗೋಳಿಡುವ ನರರ ಸಂತ್ಯೆಪ ವೇಣು;
ಬಾಲೆಯರ ಮನಗಳಂ| ಲೀಲೆಯಿಂದಲಿ ಸೆಳೆವ
ಲೀಲೆಯಾ ವೇಣು ನಿನ್ನದೈ ಕೃಷ್ಣಾ.

ಭಕ್ತ ಜನಗಳಿಗೊಲಿದು| ಮುಕ್ತಿಯಿಯುವ ವೇಣು
ಭಕ್ತಿಯಿಂದಾಲಿಪರ ಹೃದಯವೇಣು;
ಭಕ್ತಿರಸವನೆ ಕೊಡುವ| ಭಕ್ತವತ್ಸಲ ವೇಣು;
ಶಕ್ತಿಯಾ ವೇಣು ನಿನ್ನದೈ ಕೃಷ್ಣಾ.

ಮುಂದೆ ಪರಾಕಾಷ್ಠೆಗೇರಿದ ಕವಿಯ ಪ್ರಕೃತಿಪ್ರೇಮ ‘‘ಮಲೆನಾಡ ವೈಭವ’’ ಎಂಬ ಶೀರ್ಷಿಕೆಯ ಕವನದಲ್ಲಿ ತಿಪ್ಪತಿಪ್ಪ ಹೆಜ್ಜೆಯಿಡುತ್ತಾ ಅಭಿವ್ಯಕ್ತಗೊಂಡಿರುವುದನ್ನು ಕಾಣಬಹುದು. ಹನ್ನೆರಡು ಪಂಕ್ತಿಗಳ ಹದಿನಾಲ್ಕು ಸೀಸಪದ್ಯಗಳಲ್ಲಿ ಮಲೆನಾಡಿನ ಚೆಲುವು, ವಿಶೇಷವಾಗಿ ಕಣ್ಣನ್ನು ಮೋಹಿಸುವ ಬಾಹ್ಯಸೌಂದರ್ಯ, ವರ್ಣಿತವಾಗಿದೆ. ಛಂದಸ್ಸಿನಲ್ಲಿ ನಾನಾ ಪ್ರಯೋಗಗಳನ್ನು ನಡೆಸುತ್ತಿದ್ದ ಪ್ರಾರಂಭಕಾಲಕ್ಕೆ ‘‘ಮಲೆನಾಡ ವೈಭವ’’ ಒಂದು ಕುರುಹಾಗಿದೆ. ಮಾದರಿಗೆ ಒಂದೆರಡು ಇಡೀ ಸೀಸಪದ್ಯಗಳನ್ನು ಕೊಟ್ಟು ಉಳಿದವುಗಳಲ್ಲಿ ಕೆಲವು ಪಂಕ್ತಿಗಳನ್ನು ಮಾತ್ರ ಕೊಡಲಾಗುತ್ತದೆ. ಮೊದಲ ನಾಲ್ಕು, ಎರಡನೆಯ ನಾಲ್ಕು, ಮೂರನೆಯ ನಾಲ್ಕು ಪಂಕ್ತಿಗಳಲ್ಲಿ ದ್ವಿತೀಯಾಕ್ಷರ ಪ್ರಾಸಗಳಿರುವುದನ್ನು ಗಮನಿಸಬಹುದು:

ಮಲೆನಾಡ ವೈಭವ

ಶ್ರೀದೇವ ಸೌಂದರ್ಯ ರೂಪಿನಿಂ ಬಂದಿಹನೆ,
ಭೂದೇವಿ, ಚುಂಬಿಸಲ್ ನಿನ್ನುರವನು?
ಮಾಧುರ್ಯ ಸುರಸತಿಯೆ ಗಗನದಿಂದಿಳಿದಿಹಳೆ
ಸೋದರಿಯನಾದರಿಸೆ ಮೋದದಿಂದ?
ಅಹ ಎಷ್ಟು ರಮಣೀಯಮಾಗಿರ್ಪುದೀ ಧರಣಿ
ಬಹು ವಿಧದಿ ನಲಿವ ಸೌಂದರ್ಯದಿಂದ?
ಅಹ ಎಷ್ಟು ತೇಜದಿಂ ಬೆಳಗುತಿಹುದೀ ಗಗನ
ಮಹಿಮೆಯಂ ದೇಸಿಯಂ ಪೊರಮಾಡುವ ಕೀರ್ತಿಯಂ
ಜಗವು ಪಡೆವಂದದಲಿ ಕೋರಕಿತ ತಿರುಗಳಿಂ
ಗಗನವಂ ಚುಂಬಿಸುವ ವರ ಗಿರಿ ಶಿಖರಗಳಿಂ
ನಗುನಗುತ ಮೆರೆವುದೀ ಮಲೆನಾಡ ವೈಭವಂ!

ಎತ್ತಲುಂ ದಟ್ಟಮೆನೆ ಬೆಳೆದಿರ್ಪ ತಳಿರಿನಿಂ
ಬಿತ್ತರದ ಬೆಟ್ಟಗಳ್ ಕಂಗೊಳಿಪವು;
ಎತ್ತಲುಂ ಸಾಲು ಸಾಲಿಂದೆದ್ದು ವಿಶ್ವಮಂ
ಚಿತ್ತದೊಳ್ ಬಗೆಗೊಳಿಪ ಕಾನನಗಳು
ಹೃದಯದೊಳ್ ಸಂತೋಷಸಾಗರವನುಕ್ಕಿಸುತ
ಅದುಭುತದ ಪಸುರ ಕಡಲಲೆಗಳಂತೆ
ಉದಯಿಸುವ ಮಿಸುನಿ ರವಿ ಹೊಂಬೆಳಕ ಜಳಕದಲಿ
ಮಧುಸ್ನಾನವಂ ಮಾಡಿ ರಂಜಿಸುತಿವೆ!
ಹೇ ಮಹಿಯೆ, ಸೌಂದರ್ಯ ದೇವತೆಯ ನಿಜಸಖಿಯೆ,
ಹೇಮಾಂಬುರಾಗದಿಂ ತಲೆಯ ಮೇಲ್ ಕಂಗೊಳಿಪ
ಹೇಮಂತನಂಬರವೆ, ನಸುನಗುತ ನಲವಿನಂ
ಸ್ವಾಮಿಯಂ ತೋರ್ಪ ನೀವ್ ಪಡೆದಿಹಿರೆ ಸ್ವಾಮಿಯಂ?

ದೃಷ್ಟಿಯೋಡುವವರೆಗೆ ಮರೆಯುವೀ ರಮಣೀಯ
ಸೃಷ್ಟಿವೈಚಿತ್ರಮಂ ನೋಡಿ ನೋಡಿ
ಸೃಷ್ಟಿಕರ್ತನ ಪರಮ ಲೀಲೆಯಂ ನೆನೆನೆದು
ಕಷ್ಟಗಳ ಮರೆತು ಕವಿ ಮೈಮರೆವನು.
ದೇಸಿಯಿಂ ಸೃಷ್ಟಿವೈಚಿತ್ರದಿಂ ಪರಮ ಸಂ
ತೋಷವಂ ಪಡೆಯದಿಹ ನರಜೀವಿಯು
ದೋಷಿ ತಾನಾಗುವಂ ಮೇಣ್ ಜ್ಯೋತಿಯಂ ಬಿಸುಟು
ಮೋಸವಂ ಚಿಂತಿಪಂ ಕಳ್ತಲೆಯೊಳು!
* * *
ಹಸುರಾದ ಚಿಗುರಿನಂಬರವುಟ್ಟು ಮೆರೆಯುತಿದೆ
ವಸುಂಧರೆಯು ವೈಯಾರ ರಮಣಿಯಂತೆ.
* * *
ಬೆಟ್ಟವನ್ನಪ್ಪಿರುವ ಬಿಳಿದಾದ ಫಣಿಯಂತೆ
ಕಟ್ಟಿದ ಸುಧಾಶಿಲೆಯ ಗೋಡೆಯಂತೆ
ಬೆಟ್ಟ ತಾನುಟ್ಟಿರ್ಪ ದಟ್ಟಿಯೋ ಎಂಬಂತೆ
ದಟ್ಟ ಮಾಗಿಯ ಮಂಜು ಮರೆಯುತಿಹುದು.
* * *
ಮಹದೇವನರ್ತನಂ ಸೌಂದರ್ಯರಂಗದೊಳ್
ಬಹುವಿಧದ ಲೀಲೆಯಿಂ ತೋರುತಿದೆ ವಿಶ್ವಮಂ!
* * *
ನಲಿನಲಿದು ಬಹ ತೊರೆಯು ಕಂಗೊಳಿಪ ಶಿಖರದಿಂ
ಪೊಳೆದಿಳಿಯುತಿದೆ ಕಣ್ಗೆ ರಮ್ಯಮಾಗಿ!
* * *
ಸುತ್ತಲುಂ ಪರ್ಬಿರುವ ಮಲೆಗಳಿಂ ಮೆರೆಯುತಿವೆ
ಬತ್ತದಾ ಪೈರುಗಳ್ ದಟ್ಟಮಾಗಿ
* * *

ಇದು ಪರಮ ಸೌಂಧರ್ಯ ದೇವತೆಗೆ ನಿಜಭವನ,
ಮಿದು ವಿಶ್ವಶಿಲ್ಪಿಯಾಟದ ಭೂಮಿ; ಪರಮ ಕವಿ-
ಗಿದು ಸಕಲಮಂ ತೋರ್ಪ ಶಾಂತಿಯ ನಿಕೇತನಂ:
ಹೃದಯದಾಟದ ರಂಗಮಿದು ನಿಖಿಲ ಜೀವರಿಗೆ!
* * *
ಹೇ ರಮ್ಯ ಗಿರಿಗಳಿರ, ತೊರೆಗಳಿರ, ವನಗಳಿರ,
ಹೇ ರಂಜಿಸುವ ಗಗನ ನೀರದಗಳೆ,
ಧಾರಿಣಿಯ ರಂಜಿಸುವ ತರು ಗುಲ್ಮ ಲತೆಗಳಿರ…
ನೀವೆನ್ನ ಜೊತೆಯಾಟವಾಡಿದಿರಿ ಸಲವಿನಿಂ,
ನೀವೆನ್ನಪ್ಪಿದಿರಿ ಪ್ರೀತಿಯಿಂ:
ನೀವೆನಗೆ ಕವಿತೆಯಂ ಮೌನದಿಂದುಸಿರಿದಿರಿ,
ನೀವೆ ತಂದಿರಿ ಕವಿತೆಯಾವೇಶವ!
* * *
ಒಡನೊಡನೆ ತಲೆದೂಗಿ ಮರುತನೊಡನೊಲಿದಾಡಿ
ಪೊಡವಿಗಾವ್ ತನುಜಾತರೆಂದು ಮೆರೆದು
ಸಡಗರದಿ ನಲಿಯುತಿಹ ಶಿರಗಳಿಂ ಮೆರೆಯುತಿಹ
ಅಡಕೆಯಾ ತೋಟಗಳ್ ಕಂಗೊಳಿಪವು.
* * *
ಸೃಷ್ಟಿ ವೈಚಿತ್ರಮಂ ನೋಡೆ ತಾಂ ಬೆರಗಾಗಿ
ದೃಷ್ಟಿಸದ ಮಾನವಂ ಜಡ ಜೀವಿ ತಾನಹಂ!
* * *
ಎಲೆ ವನಸ್ಥಳಗಳಿರ, ನಿಮ್ಮನಾಂ ಪ್ರೀತಿಸಿದೆ,
ನೊಲುಮೆಯಿಂದ ದೇವನಂ. ನೋಡಲೆಂದು :
ಎಳೆತನದ ಲೀಲೆಯೊಳ್ ಸೊಬಗ ನಾ ಲಕ್ಷಿಸದೆ
ಸುಳಿದಾಡಿದೆನು ಮರೆತು ವೈಭವವನು.
ಶಿಲೆಯಿಂದ ಶಿಲೆಯೆಡೆಗೆ ಹಾರಿದೆನು ಲೀಲೆಯಿಂ
ನಲವಿಂದ ಪಡೆದನಾಂ ಸಂತಸವನು
ತಳಿತಳಿಪ  ಪನಿಗಳಿಂ ನಳನಳಿಪ ತಳೀರನಿಂ
ನಲಿಯುವೀ ನಿಮ್ಮಂದಗಳನು ನೋಡಿ!
ಎಲೆ ವಕ್ರಪಥಗಳೀರ,  ಸರ್ಪಗತಿಯಿಂದೋಡಿ
ನಲವಿಂದನಾವರಿಸಿ ಮೈದಾನದುದರಮಂ!
* * *
ಪಾಡಿರೈ,. ಪಿಕಗಳಿರ, ತಳಿರಿನೋಳ್,
ಮೋಡಗಳ ನಲುಗಿಸುವ ಗಾಯನವನು :
ತೂಗಿರೈ, ಗಿರಿಗಳಿರ, ಹಸುರಾದ ಶಿರಗಳಂ
ಜೋಗುಳವ ಪಾಡುವಂ ಕವಿವರ್ಯನು!…

ಅ ಸಮಯದಲ್ಲಿ ನಾನು ಕೆಲವು ಇಂಗ್ಲೀಷ್ ಭಾವಗೀತೆಗಳನ್ನೂ ಮತ್ತು ರವೀಂದ್ರನಾಥ ಠಾಕೂರರ ಇಂಗ್ಲೀಷಿಗೆ ಭಾಷಾಂತರಗೊಂಡ ಕವನಗಳನ್ನೂ ಕನ್ನಡಕ್ಕೆ ಪರಿವರ್ತಿಸಲು ಪ್ರಯತ್ನಿಸಿದ್ದೆ. ಅವುಗಳನ್ನು ಪ್ರಕಟಿಸಲಿಲ್ಲ. ನನ್ನ ಆಗಿನ ಭಾಷೆಯ ಮಟ್ಟದ ದೃಷ್ಟಿಯಿಂದ ಅವು ಪ್ರಕಟನಯೋಗ್ಯವಾಗಿ ತೋರಿರಲಿಲ್ಲ. ಅವುಗಳಲ್ಲಿ ಕೆಲವನ್ನಿಲ್ಲಿ ನಿದರ್ಶನಕ್ಕಾಗಿ ಕೊಡಬಯಸಿದ್ದೇನೆ., ಭಾಷಾ ಭೂಮಿಕೆಗೆ ಅನ್ವಯವಾಗುವಂತೆ ನನ್ನ ಕವಿತಾಶಕ್ತಿಯ ವಿಕಾಸದ ಹೆಜ್ಜೆಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂಬ ಕಾರಣಕ್ಕಾಗಿ.

ರವೀಂದ್ರರ ‘ಗೀತಾಂಜಲಿ’ಯ ೪೫ನೇಯ ಕನವನವನ್ನು ನಾನು ೭-೧-೧೯೨೫ರಲ್ಲಿಯೇ ಭಾಷಾಂತರಿಸಿದ್ದೆ. ಆದರೆ ಈಗ ‘ಕುಟೀಚಕ’ದಲ್ಲಿ ‘ಬರುತಲಿಹನು’, ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ಅನುವಾದ ಆರುವರ್ಷಗಳ ತರುವಾಯ ೧೪-೮-೨೯೩೧ರಲ್ಲಿ ರಚಿತವಾದದ್ದು. ಭಾಷೆಯ ದೃಷ್ಟಿಯಿಂದ ಎರಡನ್ನೂ ಹೋಲಿಸಿದರೆ ಮೊದಲಿನ ನನ್ನ ಕನ್ನಡ ಭಾಷೆಗೂ ಮತ್ತು ಅಭಿವ್ಯಕ್ತಿಯ ಕೌಶಲ್ಯಕ್ಕೂ ಆರು ವರ್ಷಗಳ  ತರುವಾಯದಕ್ಕೂ ಕಂಡು ಬರುವ ವ್ಯತ್ಯಾಸ ಸ್ವಾರಸ್ಯಕರವಾಗಿದೆ: ಕುಟೀಚಕದಲ್ಲಿ ಅಚ್ಚಾಗಿರುವುದನ್ನು ಓದುಗರ ಬಲ್ಲರು. ಇಲ್ಲಿ ೧೯೨೫ರಲ್ಲಿ ಮಾಡಿದ್ದ ಭಾಷಾಂತರವನ್ನು ಕೊಡುತ್ತೇನೆ. ನನ್ನ ಕವಿತೆಗೆ ದ್ವೀತಿಯಾಕ್ಷರ ಪ್ರಾಸ ಶೃಂಖಲೆಯಿಂದ  ಮೆಲ್ಲಗೆ ಕ್ರಮೇಣ ಪಾರಾಗುತ್ತಿರುವುದನ್ನುಗಮನಿಸಬಹುದು.

ಅವನ ಪಾದರವ ನೀವು ಕೇಳಲಿಲ್ಲವೇ ?
ಬರುವನವನು ಬರುನವನು ಬರುವನೆಂದಿಗೂ!

ಗಳಿಗೆಗಳಿಗೆ ವರುಷ ವರುಷಗಳಲ್ಲಿ ಬರುವನು ;
ದಿನವು ದಿನವು ರಾತ್ರಿ ಹಗಲುತಾನು ಬರುವನು…
ಬರುವನವನು ಬರುವನವನು ಬರುವನೆಂದಿಗೂ!

ವಿವಿಧ ಮನದಿ ಬಹಳ ಗೀತಗಳು ಹಾಡಿದೆ;
ಅವುಗಳಿಂದ ಹೊರಟ ಘೋಷವಿಂತು ನುಡಿಯಿತು :
“ಬರುವನವನು ಬರುವನವನು ರುವನೆಂದಿಗೂ!”

ಬಿಸಿಲ ಕಾಂತಿಯಿಂದ ನಲಿವ ಚೈತ್ರಮಾಸದಾ
ಪೂಗಳಿಂದ ಮೆರೆವ ಕಾಡುದಾರಿಯಿಂದಲಿ
ಬರುವನವನು ಬರುವನವನು ಬರುವನೆಂದಿಗೂ!

ಕಾರು ಸುರಿವ ಭಯವ ತೋರ್ಪ ಕಾಳ ನಿಶೆಯಲ್ಲಿ
ಕುರಿತು ತಾನು ಗುಡುಗಿ ಬರುವ ಮೇಘ ರಥದಲ್ಲಿ
ಬರುವನವನು ಬರುವನವನು ಬರುವನೆಂದಿಗೂ!

ವ್ಯಸನ ವ್ಯಸಗಳಲಿ ಎನ್ನ ಹೃದಯಕಮಲವಾ
ಮೆಲುನಡೆಯಲಿ ತುಳಿವುದವನ ಪುಷ್ಪಪಾದವು!
ಬರುವನವನು ಬರುವನವನು ಬರುವನೆಂದಿಗೂ!

ಅವನ ಮಧುರ ಮಿಸುನಿ ಅಡಿಯ ಪುಷ್ಪಸ್ಪರ್ಶವು
ಎನ್ನ ಹರುಷ ಕೋಟಿಗಳಿಗೆ ಬೆಳಕನೀವುದು.
ಬರುವನವನು ಬರುವನವನು ಬರುವನೆಂದಿಗೂ!

‘The boy stood on the burning deck whence all but he had fled’ ಎಂದು ಪ್ರಾರಂಭವಾಗುವ ‘ಕೆಸೆಬಿಯಂಕ’ ಕಥನಕವನ್ನು ಆಧರಿಸಿ ನನ್ನದು ರಚಿತವಾಗಿದೆ. ಆದರೆ ಅದನ್ನು ಸಂಪೂರ್ಣ ಭಾಷಾಂತರ ಎಂದು ಕರೆಯುವುದಕ್ಕಾಗುವುದಿಲ್ಲ. ಕಥೆಯನ್ನೇನೋ ಅನುಸರಿಸಿದೆ ; ಆದರೆ ಕಥನ ರೀತಿ ಹೆಚ್ಚು ಸ್ವಾತಂತ್ಯ್ರ ವಹಿಸಿದೆ. ಮೂರು ಪಂಕ್ತಿಗೆ ದ್ವೀತಿಯಾಕ್ಷರ ಪ್ರಾಸವಿರುವ ಭಾಮಿನಿ ಷಟ್ಪದಿಯಲ್ಲಿದೆ, ಅಲ್ಲಲ್ಲಿ ಕ್ರಮ ತಪ್ಪಿಯೂ!

            ಕೆಸಬಿಯಂಕ      

ಉರಿವ ಹಡಗಿನ ಮೇಲೆ ನಿಂತಿರೆ
ತರುಣನೊರ್ವನೆ ಧೈರ್ಯದಿಂದಲಿ
ಬಿರು ಭಯಂಕರಮಾದ ವಹ್ನಿಯು ಮುಂದೆ ಸಾಗಿದುದು.
ಶೋಣಿತ ಜ್ವಾಲೆಗಳು ಬಂದುವು
ಕೋಣವಾಹನ ದೂತರಂದದಿ
ಕೋಣವಾಹನ ನುಟ್ಟಿ ಶೋಣಿತ ವಸ್ತ್ರವೆಂಬಂತೆ.

ಬೆಳಗಿದುವು ಮಡಿದ ನರ ರಾಶಿಯ
ಬಳಬಳನೆ ಸೂಸುತ ಕಿಡಿಗಳು
ಝಳಜ್ವಾಲೆಗಳಿರದೆ ಹಾಯ್ದುವು ಮೃತ್ಯುವಟ್ಟಿರುವ
ತೆರೆದ ಬಾಯಿಯ ಕಾಳ ವಕ್ತ್ರದ
ಕರದ ಶೋಣಿತ ಖಡುಗ ಕಾಂತಿಯ
ಇರುಳ ಬಣ್ಣದ ಬಹು ಭಯಂಕರ ಧೂರ್ತ ಪಡೆಯಂತೆ.

ಮನುಜ ರೂಪವ ಧರಿಸಿ ನಿಂದಿಹ
ಅನಲ ಕೋಪವ ಜರೆಯ ಬಂದಿಹ
ವಿನುತ ದೇವನೋ ವಿಶ್ವರೂಪನೋ ತಾನು ಎಂಬಂತೆ
ಒಂದು ಹೆಜ್ಜೆಯ ಹಿಂದೆಕಿಡಲಿ-
ಲ್ಲೊಂದು ಭೀತಿಯ ಕುರುಹು ತೋರದೆ ನಿಂದನಾ ಬಾಲ!

ಹಾರಿ ಬಂದುವು ಮೃತ್ಯುವಂದದಿ
ಭೂರಿ ತಳಿಸುವ ವೆಹ್ನಿ ಕಿಡಿಗಳು :
ಮಾರಿಯೆಂಬುವ ರಕುತ ರಕ್ಕಸಿ ಪಡೆದ ಸುತರಂತೆ
ಚೀರಿ  ಚಿಗಿದುವು ಮೃತ್ಯುವರ್ಣವ
ತೋರಿ ಸುಳಿಗಳು ; ತರುಣನಿರ್ಧನು
ಧೀರನಂದದಿ ಭಯವ ತೋರದೆ ಜರೆದು ಸುಳಿಗಳನು.

ತಂದೆಯಪ್ಪಣೆಯಿಲ್ಲದಾ ಸುತ-
ನೊಂದು ಹೆಜ್ಜೆಯ ತೆಗೆಯಲೊಲ್ಲನು;
ತಂದೆಯಾದರೂ ಹಡಗಿನಡಿಯಲಿ ಮಡಿದು ಬಿದ್ದಿಹನು.
ಮುಂದೆ ಬರಲಾ ವಹ್ನಿಯಲೆಗಳು.
“ಬೆಂದು ಪೋಪೆನು! ನನ್ನ ಕಾರ್ಯವು
ಸಂದುದೇನ್ಯೆ, ತಂದೆ, ಎಲ್ಲಿ ಹೆ?” ಎಂದು ಕೂಗಿದನು.

ತೊರೆದು ಕಂದನ ಮೇಲಣಾಸೆಯ
ಜರೆದು ಯೊದ್ಧರ ಕವಚ ಖಡುಗವ
ಮರೆತು ಕದನವ, ಸಕಲ ಕೀರ್ತಿಯ, ಮರೆತು ಸಾಗರವ,
ಸಂತನಪ್ಪದೆ ಮರಣ ಕಾಲದಿ,
ಸತಿಯ ಸಂತೈಸದೆಯೆ ಮಡಿದನು
ಏತನು ಎಂಬುದ ತಾನು ಬಲ್ಲನೇ ವೀರಬಾಲಕನು?

“ತಂದೆಯೇ ಮಾತಾಡು ಆಡ್ಯೆ!
ಬೆಂದು ಪೋಪೆನು ವಹ್ನಿ ಸುಳಿಗಳ
ಲಿಂದು ನನ್ನಯ ಕಾರ್ಯ ಸಂದುದೆ?” ಎಂದು ಕೂಗಿದನು.
ಡಮ್ ಡಮೆಂಬ ತುಪಾಕಿ ಶಬ್ದಗ
ಳಮಮ ಸಿಡಿದುವು ;ಪಾವಕ ಸುಳಿಗ
ಳಮಿತ ರೌದ್ರವ ತೋರಿ ಬಂದುವು ಸುತ್ತಿ ಬಾಲಕನ!

ಬಸಜಮಿತ್ರನ ನಗುವ ಪಾವಕ
ನುಸುರು ಪಣೆಯಂ ತಾಗಿ ತರುಣನ
ಕುಸುಮ ವೇಣಿಗಳೊಳಗೆ ನಲಿಯಿತೆ ಶರಧಿ ಮೊರೆಯಿಡಲು.
ಅಸಮವೀರನು ಭಯವ ತೋರದೆ
ನಸುನಗುತ್ತ ತಾನಿರ್ಧನಲ್ಲಿಯೆ :
ಕೆಸಬಿಯಂಕನು ಶೂರತನವೆಂಬುದರ ನಿಜಸುತನು!

“ಇಲ್ಲಿಯೇ ಇರಬೇಕು, ತಂದೆಯೆ?
ಇಲ್ಲಿಯೇ ನಾನಿರ್ದು ಮಡಿದೊಡ-
ಮುಲ್ಲಸಂ ನಿನಗಹುದೆ, ತಂದೆಯೆ?” ಎಂದನಾ ಬಾಲ.
ಚಿತ್ತದಿಂದವನಿಂತು ಚೀರಲು
ಸುತ್ತಲೆರಗುವ ದೂತರಂದದಿ
ಮುತ್ತಿ ಬಂದುವು ವಹ್ನಿಯಲೆಗಳು ಮೇಲೆ ಮೇಲ್ವಾಯ್ದು.

ಹಡಗು ಪಟಗಳ ಹತ್ತಿ ವಹ್ನಿಯು
ಬಿಡದೆ ಭೀಕರವಾಗಿ ನಲಿಯು
ತ್ತಡರಿದುದು ಭುಗಿಭುಗಿಲು ಭುಗಿಲೆಂದೊಡನೆ ಕೇತನವ.
ವೀರನಾಗಿಹ ಕೆಸಬಿಯಂಕನ
ಧೀರತನವಂ ನೋಡಿ ವಹ್ನಿಯೆ
ಚಾರನಾದನು ನೀಲನಭದೊಳು ಪಿಡಿದು ಬಾವುಟವು!

ಬಹು ಭಯಂಕರವಾದ ರವವೊಂ
ದಹಹ ತುಂಬಿತು ಗಗನ ತಳವ
ನ್ನಹಹ ಬಾಲಕನ್ನೆಲ್ಲಿ? ಕೇಳಿರಿ ವಹ್ನಿ ಮಾರುತರ!
ಹಡಗು ಕೇತನ ಪಟಗಳೊಂದಿಗೆ
ಪೊಡವಿ ಬಾಲಕ ವರ ಶಿಖಾಮಣಿ
ಮಡಿದರ್ನೊವನೆ ಕೆಸಬಿಯಂಕನು ಧೀರ ಬಾಲಕನು!
೧೬-೧೨-೧೯೨೪

ಭೈರನ್ ಕವಿಯ There’s a joy the world can give like that it takes away ಎಂದು ಪ್ರಾರಂಭವಾಗುವ ಕವನದ ಸ್ವತಂತ್ರಾನುವಾದವಾಗಿದೆ. ‘ಮುದಿತನ’ ಎಂಬ ಶೀರ್ಷಿಕೆಯ ಕವನ, ದ್ವಿತೀಯಾಕ್ಷರ ಪ್ರಾಸವನ್ನು ಮಾನ್ಯ ಮಾಡುವ ಭಾಮಿನೀ ಷಟ್ಪದಿಯಲ್ಲಿ..

ಮುದಿತನ

ಕಾಲ ಕೊಡುವಾ ಸಂತಸಂಗಳ ಕಾಲ ಕೋಂಬುವ ಸುಖವು ಮೀರಿದೆ ;
ಬಾಲತನದಾನಂದವಿರುವುದೆ ಮುದುಕನಾದವಗೆ?
ಲೀಲೆಯೆಂಬುವ ಕುಸುಮಶೋಭಿತ ಬಾಲಹೃದಯರಾಮವಳಿಯಲು
ಬಾಳಿನಲಿ ನೆಲಸುವುವು ವ್ಯಸನಗಳೆಂಬ ಗೂಬೆಗಳು!

ಕಲೆಯ ರವಿಯಲಿ, ನಶೆಯ ಶಶಿಯಲಿ, ಹಳೆತನವ ಹೊಸದರಲಿ, ಸವಿಯಲಿ
ಹುಳಿಯ, ಮೊಸರಲಿ ಶಿಲೆಯ, ಹರಿಯಲಿ ಕೆಡುಕ ಕಾಣುವರು.
ಎಳೆತನದ ಸುಮ ಬಾಡಲೆದೆಯಲಿ ಕೊಳಕುಗೂಡುವುದಲಸ ಬೀಜವು
ಮೊಳಕೆಯಾಗುವುದೊಡನೆ ಮೈದೋರುವುದು ಕಾಠಿಣ್ಯ!

ಹಿಂದಿನಾಲೋಚನೆಗಳೆಲ್ಲವು ಬೆಂದು ಪೋಪವುಲ ಮಂದತನವೈ-
ತೆಂದು ಮನವನು ಮುಸುಗಿ ನೊಂಕುವುದಂಧಕಾರದಲಿ;
ಅಂದು ನೆನದಾ ದಾನಧರ್ಮಗಳೊಂದನೀಯರು: ಬಯಸಿ ಪರರಾ
ನಂದನವನು ಸಿಕ್ಕದಿರಲಳಲುವರು ಪಲ್ಗಿರಿದು!

ಪರರ ಮೊರೆಯನು ಕೇಳಿ ಗೋಳಿಡರರರೆ! ತಮ್ಮದ ತಾವೇ ಸಹಿಸರು:
ಮರಣವೆಂಬುವ ಬೇವಿನೆಣ್ಣೆಯ ಕಹಿಯ ನೆನೆನೆನೆದು
ಭರವಸೆಯ ಕಾಣದಲೆ ಬೆದರುತ ಹೊರಳುವರು ದುಃಖಾಂಬುನಿಧಿಯಲಿ:
ತರುಣತನವೇ ನಾಕವಲ್ಲವೇ? ನರಕ ಮುದಿತನವು!

ಊಟ ರುಚಿಸದು; ಕೂಟ ಸಲ್ಲದು; ಆಟವೆಂಬುದ ಕಂಡರಾಗದು;
‘ಪಾಟಗಳು ಸುಡು’ ಎನ್ನುತಾಇಂಗಿಪರು ಬೇಸರವ.
ಭೇಟೆಯೆಂಬುವ ಹೆಸರ ಕೇಳಿದೊಡೋಟವನೆ ಬಯಸುವರು: ಧಾರಿಣಿ
ಯಾಟರಂಗದಿ ಮುದುಕರಾಟವದೊಂದು ಕಪಿಯಾಟ.

ಜೀವ ನಾವೆಯ ಮುಖಿಯು ಹಾಳಾಗೀ ವಿಧಿಯು ನೂಂಕಿದೆಡೆಗುರುಳುತ
ಕಾವರಿಲ್ಲದೆ ಕಾಳ ಝಂಝೆಯ ವಶಕೆ ಸಿಲುಕುವರು.
ಆವ ಬಂದರಿಗಾಗಿ ಹೊರಟರದಾವ ಬಂದರಿನಿಂದ ಬಂದರ-
ದಾವುದನು ತಿಳೀಯದೆ ತೊಳಲುವರು ಕುರುಡರಂದದಲಿ.

ಮೇಲಿನಾಲಂಕಾರವಳಿವುದು ಜೋಲು ಬೀಳಲು ದೇಹಮಲ್ಲದೆ
ಪಾಳು ಬೀಳ್ವುದು ಹೃದಯದೊಳಗಿನ ಹರುಷದಾರಾಮ:
ತಾಳಲಾರದೆ ತಮ್ಮ ದುಃಖವ, ಗೋಳೀಡುವರನು ಸಲಹಲಾರದೆ
ಹಾಳು ಕೂಳಿನ ಬಾಳ ಹೊರೆವರು ನೊಂಕಿ ದಿನಗಳನು!

ಅಳಿವುವಾಗಲೆ ಬಾಲ್ಯ ಯೌವನಗಳ ಮಹಾ ಕನಸುಗಳು; ಜೀವದ
ಬಲುಮೆಯುಳಿವುದು; ಗುರಿಯು ಸಾಮಾನ್ಯತೆಯುಪ್ಪುವುದು:
ಇಳೆಯ ಧನ ಕನಕಾಭಿಲಾಷೆಯು ಬಳಲಿ ತೊಳಲದ ತೆರದಿ ಚಾಳಿಸು-
ತಳಿಸುವುದು ದೃಢ ಚಿತ್ತವಿಲ್ಲದೆ ವೃದ್ಧ ಹೃದಯಗಳ!

ತರುಣರಾಡಿದೊಡಂದಿನಾಟದ ಪರಿಯ ತೋರುತ, ಗೀತಕೋವಿದ-
ದಿರದೆ ಹಾಡಿದೊಡಂದು ಗಾನವ ಹಾಡಿದಂದದಲಿ,
ತರಣಿ ಬಂದೊಡಮಂದು ಬೆಳಗಿದ ಕಿರಣ ಪ್ರಭೆಯಿಂದೇನನೆಸಗಿದೋ-
ಡರರೆ! ಮುದಿತನ ಪಡೆಯಬಲ್ಲುದೇ ಪೂರ್ವ ಯೌವ್ವನವ ?

ಅಂದಿನುತ್ಸಾಹ ಪಲಾಯನ ಹೊಂದಲೆದೆಯೊಳು ಧೈರ್ಯ ಕುಸುಮವು
ಕುಂದಲಾಶಾಲತೆಯು ಬಿಗಿವುದು ತನುಮನಂಗಳನು ;
ಇಂದು ನಾಳೆಗಳೆಂದು ಕಾಲವು ಸಂದುದಂತಿಮ ಕಾಲವೈತರೆ
ಮುಂದುಗಾಣದೆ ಬಂದ ಪಥನವನೆ ತಿರುಗಿ ನೋಡುವರು.

ನಿಂದು ದುಃಖದಿ ನೋಡಲೀ ಪರಿ ಬಂಧುರದ ವನ ಶಿಖರ ಗಿರಿ ತೋರೆ
ಕಂದರ ಪಸಲೆ ಕಣಿಲೆ ಶಿಲೆ ನಿರ್ಝರಿಗಳಿಂದಿಡಿದ
ಕುಂದದಿಹ ಲಾವಣ್ಯ  ಮೇಣಾನಂದ ಕೊರತೆಗಳಿಂದ ತುಂಬಿದ
ಹಿಂದುಳಿದ ಡೊಂಕಾದ ಹಾದಿಯ ಕಣ್ಗೆ ತೋರುವುದು.

ಹಿಂದೆ ನೋಡಿದೊಡಾಲಿಗಳಿಗೈ ತಂದ ಮಾರ್ಗವು ಗೋಚರಾಗುವು
ದೆಂದಿಗೂ ಕೈಗೊಡದಿರುವಾನಂದವನು ತೋರಿ!
ಮುಂದೆ ನೋಡಲು ವಿಪನಪಥಮೆಸೆವುದು ಭಯಂಕರದಿ!

೧೯೨೫ನೆಯ  ಮಾರ್ಚಿ ತಿಂಗಳು ಮೂರನೆಯ ತಾರಿಖಿನಲ್ಲಿ ರಚಿತವಾದೊಂದು ಸಾನೆಟ್ಟು Music ಎಂಬ ಶಿರ್ಷಿಕೆಯಲ್ಲಿದೆ. ಹಸ್ತಪಪ್ರತಿಯಲ್ಲಿ ಅದರ ರಚನಾ ಸಂದರ್ಭವನ್ನು  ಕುರಿತು ಒಂದು ಟಿಪ್ಪಣಿ ಇಂತಿದೆ,  ಈಗ ಅರ್ಥವಾಗದುದು.

(I was  walking infront of my room on the terrace in the contemplative mood.  And suddenly the thought of Music aroused me. Before this I has tried many a time to compose a sonnet on Music but had failed incessantly. That day also I tried but laughed at my stupidity.  Afterwards. I was thinking about Chandrashekara Setty and Gopala Krishna Setty. And I thought I would go on the 2nd . Bud suddenly came the thought that Gopal’s order may come asking me to stay here till he comes.  And I thought I would wire “Obeyed. Your Enternity>s own voice !” Then I began to compose)

Music :

Joy’s sweet consort, voice of Eternity,
Ecstasy’s, the power is infinite!
The trees, the house and the very lifht
That smiles around me,  and humanity
With all its painted glories melt  in thee
And reel and fade away! The Veena bright,
And the playing spirit pass beyond my sight.
And thou alone survivest in deep estasy!
The Universe becomes a song divine
And I become the song! Eternal Bliss
Dwells there in sweet and tranquil harmony!
Nor sense nor mind that blissful stage can gain:
There blind are Reason’s eyes: and That and This
All mingle; and bliss Kisses agony!
30-03-1925.

‘The lights on the Chamundi Hills’ ಎಂಬ ಒಂದು ಅಪ್ರಾಸ ಭಾವಗೀತೆಯ ಹಿನ್ನಲೆಯಲ್ಲಿ ನನ್ನ ಬದುಕಿನ ಮೇಲೆಯೆ ಪ್ರಭಾವ ಬೀರಿದ ಒಂದು ಸ್ವಾರಸ್ಯ ಸಂಗತಿಯಿದೆ. ನನ್ನ ಸ್ಕೂಲಿನ ದಿನಗಳಲ್ಲಿ ಮತ್ತು ಕಾಲೇಜಿನ ಪ್ರಾರಂಭದ ದಿನಗಳಲ್ಲಿ ಸ್ನೇಹಿತರೊಡನೆ ಸಂಜೆ ಸಂಚಾರ ಹೊರಟಾಗಲೆಲ್ಲ ಅರಮನೆಯ ಹೊರವಲಯದ ದೇವಾಲಯಕ್ಕೋ ಕಾರಂಜಿ ಕೆರೆಯ ಕೆಳಗಿನ ದೇವಾಲಯಕ್ಕೋ ಹೋಗಿ, ಪೂಜೆಯಲ್ಲಿ ಭಾಗಗೊಂಡು ಮಂಗಳಾರತಿ ಸ್ವೀಕರಿಸಿ ಸ್ನೇಹಿತರು ಮಾಡುತ್ತಿದ್ದಂತೆಯೆ ಎದುರುಗಡೆ ಒಂದು ಕಲ್ಲಿನ ಪೀಠದ ಮೇಲೆ ಇರುತ್ತಿದ್ದ ಪವಿತ್ರವೆಂದು ಭಾವಿಸಲಾಗದ್ದ ಕಪ್ಪನ್ನು ಹಣೆಗಿಟ್ಟುಕೊಂಡು ಬರುತ್ತಿದ್ದುದು ಒಂದು ತರಹದ ಜಡರೀತಿಯಾಗಿತ್ತು.  ಜಡರೀತಿ ಎಂದು ಏಕೆ ಹೇಳುತ್ತಿದ್ದೇನೆ ಎಂದರೆ ಅದರಲ್ಲಿ ನನಗೆ ನಿಜವಾದ ಭಕ್ತಿ ಭಾವವಿರುತ್ತಿರಲಿಲ್ಲವಾದ್ದರಿಂದ. ಎಲ್ಲರೂ  ಮಾಡುತ್ತಿದ್ದಂತೆ ಮಾಡುವುದರಿಂದ ವಿಶೇಷವಾಗಿ ಇತರರ ಗಮನಕ್ಕೆ ಬಾರದಿರಬಹುದಾಗಿತ್ತು ಎಂಬಕಾರಣಕ್ಕಾಗಿಯೆ. ಒಮ್ಮೆ ಸ್ನೇಹಿತರೊಡನೆ ಚಾಮುಂಡಿ ಬೆಟ್ಟಕ್ಕೆ ಹೋದೆ. ನನಗೆ ಜಗನ್ಮಾತೆಯಲ್ಲಿ ಅಪಾರವಾದಶ್ರದ್ದಾಭಕ್ತಿಗಳಿದ್ದರೂ ಬಾಹ್ಯ ಪೂಜೆಯ ಔಪಚಾರಿಕ ವಿಧಾನಗಳಲ್ಲಿ ಆಸಕ್ತಿ ಇರಲಿಲ್ಲ.  ತಿರಸ್ಕಾರವೂ ಇರಲಿಲ್ಲ.  ಮಂಗಳಾರತಿಯ ಅನಂತರ ಪೂಜಾರಿ ತಟ್ಟೆಯಲ್ಲಿ ಉರಿಯುತ್ತಿದ್ದ ಕರ್ಪೂರವನ್ನೂ ತೀರ್ಥ ವಿನಿಯೋಗ ಮಾಡಲು ಪಂಚ ಪಾತ್ರೆ ಉದ್ದರಣೆಗಳನ್ನೂ ಹಿಡಿದು ಬಂದ. ವರ್ತುಲಕಾರದಲ್ಲಿ ಸಾಲು ನಿಂತಿದ್ದ ನಮಗೆ ಮಂಗಳಾರತಿ ಹಿಡಿಯುತ್ತಾ ಬಂದ, ನನ್ನ ಮಿತ್ರರು ಅವರ ಪದ್ಧತಿಯಂತೆ ತಟ್ಟೆಗೆ ಮೂರು ಕಾಸು ಹಾಕಿ, ತೀರ್ಥ ಪಡೆದು, ಜ್ಯೋತಿಗೆ ನಮಿಸುತ್ತಾ ಬಂದರು. ನನ್ನ ಬಳಿ ಪೂಜಾರಿ ಬಂದಾಗ, ನಾನು ಜೇಬಿನಲ್ಲಿ ಯಾವ ಹಣವನ್ನೂ ತಂದಿರಲಿಲ್ಲವಾದ್ದರಿಂದ, ಆತ ನಿರೀಕ್ಷಿಸಿದ ಮೂರು ಕಾಸು ಹಾಕಲಾರದೆ ಹೋದೆ.  ಆದ್ದರಿಂದ ಅವನು ನನಗೆ ತೀರ್ಥವನ್ನು ಕೊಡಲಾರದೆ ಜ್ಯೋತಿಯನ್ನೂ ತೋರಲಾರದೆ ಮುಂದೆ ಹೋಗಿ ಬಿಟ್ಟ. ನನಗೆ ಅದರಿಂದ ಯಾವ ಭಾವವೂ ಉಂಟಾಗಲಿಲ್ಲ, ಪರವಾಗಿಯಾಗಲಿ, ವಿರುದ್ಧವಾಗಿಯಾಗಲೀ ಭಕ್ತಿಗಾಗಲೀ ಭಕ್ತವತ್ ಕೃಪೆಗಾಗಲಿ ಧಕ್ಕೆಯೊದಗುತ್ತದೆ ಎಂದು ಭಾವನೆಗಳಿಂದ ನನ್ನ ಚೇತನ ಎಂದೋ ವಿಮುಕ್ತವಾಗಿತ್ತು.  ಆದರೆ ನನ್ನ ಮಿತ್ರರಿಗೆ ಮನಸ್ಸು ನೊಂದಿತು. ಅವರಲ್ಲಿ ಒಬ್ಬರು ತಮ್ಮ ಕಿಸೆಯಲ್ಲಿದ್ದ ಮೂರು ಕಾಸನ್ನು ತಟ್ಟೆಗೆ ಹಾಕಿ ಪೂಜಾರಿಗೆ ಹೇಳಿದರು ನನಗೂ ತೀರ್ಥ ಪ್ರಸಾದ ಕೊಡುವುದಕ್ಕೆ. ದಕ್ಷಿಣೆ ಬಿದ್ದೊಡನೆ ಪೂಜಾರಿ ನನ್ನ ಮುಂದೆ ಬಂದು ಕರ್ಪೂರ ಉರಿಯುತ್ತಿದ್ದ ತಟ್ಟೆಯನ್ನು ಎತ್ತಿ ಹಿಡಿದು, ತೀರ್ಥಕೊಡಲು ಬಂದ.  ನಾನು ನಗುನಗುತ್ತಾ ಹೇಳೀದೆ, ಅದನ್ನು ಸ್ವೀಕರಿಸಲು ಕೈಯೆತ್ತದೆ, “ಅಲ್ಲಿ ಕೆಳಗೆ ಕೆರೆಯಲ್ಲಿ ನೀರಿದೆ, ಅವಶ್ಯ ಬಿದ್ದರೆ ಅದನ್ನು ತೆಗೆದುಕೊಳ್ಳುತ್ತೇನೆ… ” ಎಂದು. ಎಲ್ಲರಿಗೂ ಮುಜುಗರವಾಯಿತೆಂದು ತೋರುತ್ತದೆ. ಪೂಜಾರಿ ಹೊರಟು ಹೋದ. ಆದರೆ ನನ್ನ ಮಿತ್ರರಿಗೆ ಅಂತಹ ವಿಚಾರಗಳಲ್ಲಿ ನನ್ನ ನಿರಂಕುಶಮತಿಯ ಪರಿಚಯವಿತ್ತು, ಆದ್ದರಿಂದ ಆ ವಿಚಾರವಾಗಿ ನಾವೆಲ್ಲ ವಿನೋದವಾಗಿಯೇ ಮಾತಾಡುತ್ತಾ ಬಂದೆವು. ಆವೊತ್ತಿನಿಂದ ನಾನು ಯಾವ ದೇವ್ಥಾನಕ್ಕೂ ಪೂಜೆಗಾಗಿ ಹೋಗಿಲ್ಲ. ಕಲಾವೈಭವ ವೀಕ್ಷಣೆಗಾಗಿ ಅಧಿಕಾರ ಸ್ಥಾನಗಳಲ್ಲಿದ್ದಾಗ, ಸಭೆಗಳಲ್ಲಿ ಭಾಗವಹಿಸುವ ಮೊದಲು, ನನ್ನನ್ನ ಅಹ್ವಾನಿಸಿದ ದೊಡ್ಡ ಮನುಷ್ಯರು ಮತ್ತು ನಾಗರಿಕರು ತಮ್ಮ ಊರಿನ ದೈವದ ಕೃಪೆ ನನ್ನ ಮೆಲಾಗಲಿ ಎಂಬ ಬುದ್ಧಿಯಿಂದ ನನ್ನನ್ನು ದೇವಾಲಯಕ್ಕೆ ಕರೆದೊಯ್ದುಂಟು. ನಾನೂ ಸಭ್ಯತೆಗಾಗಿ, ದಾಕ್ಷಿಣ್ಯಕ್ಕಾಗಿ, ನಾಗರಿಕ ಮರ್ಯಾದೆಗಾಗಿ, ಅವರ ಭಾವ ಭಂಗ ಮಾಡುವ ಮನಸ್ಸಿನಿಲ್ಲದೆ ಹೋದದ್ದುಂಟು.