ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ಸವ್ಯ ಸಾಚಿತ್ವದ ಆ ಕಾಲದಲ್ಲಿಯೆ ರಚಿತವಾಗಿ, ಇಂಗ್ಲೀಷಿನ ಛಾಯಾನುವಾದದಂತಿರುವ “ಸಿಂಹಗಡ”ದಲ್ಲಿ ಎಂಟೆಂಟು ಪಂಕ್ಷಿಯ ಇಪ್ಪತ್ತು ಪದ್ಯಗಳಿವೆ. ಪ್ರಾಸಪೀಡೆಯಿಂದ ಬಿಡುಗಡೆ ಪಡೆದಿದೆ, ಇಂಗ್ಲೀಷನ್ ಕವನದಂತಿಲ್ಲದೆ!

ಸಿಂಹಗಡ

.
ಮೂಡಣ ದೆಸೆಯೊಳು  ಹಿಮಕರ ಮೂಡಿದ-
ನೋಡಿತು ತಿಮಿರವು ಧರೆಯಿಂದ;
ಹಿಮಕರ ರಾಜಿತ ಧತ್ರಿಯ ವೈಭವ
ನಲಿದುದು ಕಾನನ ಗಿರಿಗಳಲಿ,
ಭೀಕರ ಮೌನತೆಯಲ್ಲಿಯು! ಬೀಸಿತು
ಮಂದಾನಿಲ ತಾ ಮುಲು ಮೆಲನೆ;
ದುರ್ಗದೊಳಾಲಿಸೆ ರವವೊಂದಿಲ್ಲವು,
ರಾತ್ರಿಯು ನಲಿದುದು ಶಾಂತಿಯಲಿ.

.
ಐನೂರತಿಬಲ ಮಾವಳಿ ಸೈನ್ಯವು
ಸಿಂಹಗಡದ ಮೈದಾನದಲಿ
ತಾನಾಜಿಂಬುವ ಸೇನಾಧಿಪತಿಯ
ಹಿಂಬಾಲಿಸುದುದು ಉಲ್ಲಸದಿ.
ಬಂದರು; ಮಾತಾಡರು! ರವ ಮಾಡರು!
ಮಾನವನಾಂತುವು ಕೈದುಗಳೆ!
ಪರಮ ರಹಸ್ಯದ ಕನಸೊಳು ತೋರುವ
ಮಾಯಾವಿಗಳೊ ? ಮರಾಠೆಯರೊ?

.       
ಶೈಶಿರ ನಿಶೆ ತಾ ಶೀತಳವಾದುದು,
ಹಿಮದಂತಾದುವು ಪೌಳಿಗಳು;
ನೀರವಮಾದುದು ಪ್ರಕೃತಿಯು; ಗಾಳಿಯು
ಚಳಿಯನೆ ಸೂಸಿತು ಬಿಸುಸುಯ್ದು-
ನೂಲೇಣಿಯ ಹಿಡಿಯುತ ಕರದೋಳು ತಾ-
ನಾಜಿಯು ಕೋಟೆಯನೇರಿದನು.
ಕಡಿದಾಗಿದ್ದುವು ಕೋಟೆಯ ಗೋಡೆಗಳ-
ಳಾದರು ಧೈರ್ಯದೊಳಡರಿದನು.

.

ಮಾವಳಿಗಳು ಕಂಪಿಸಿದರು ಚಳಿಯಲಿ;
ವದನವು ತೊರಿತು ಧೀರತೆಯ.
ಹೃದಯದೊಳುರಿದುವು ಧೈರ್ಯಸ್ಥೈರಗಳ-
ಳೆಲ್ಲರೊಳಿದ್ದನು ತಾನಾಜಿ!
ಮೃತ್ಯುವ ಮನದಿಂ ಗರ್ವದಿಯೊದೆದರು,
ನೆರೆ ನೆನೆದರು ಜಯವನಿತೆಯನು;

ವಿಜಯ ಸುವಾರ್ತೆಯ ತಿಳಿಸೆ ಶಿವಾಜಿಗೆ
ಮಾವಳಿಗಳು ಮೇಲಾಡಿದರು.

.       
ಕರಲಾಘವದಿಂ ಪದ ಚಮತ್ಕೃತಿಯಿಂ-
ದಡರಿದನಾಗಲೆ ತಾನಾಜಿ.
ಕಡೆಯಲಿ ಉನ್ನತ ಪೌಳಿಯ ದಾಂಟುತ
ಬಿಗಿದನು ಆ ನೂಲೇಣಿಯನು.
ಸಂತೋಷವು ಮಾಳಿಗಳ ವದನವ
ಬೆಳಗಿತು, ಹೃದಯವ ತುಂಬಿಸಿತು:
ತಾನಾಜಿಯ ಕೈಸನ್ನೆಯ ಕಾಯುತ
ನಿಂತು ಭಟರಾವೇಶದಲಿ.

.       
ಏಣಿಯನೇರಲು ಕುರುಹನು ತೋರಲು
ಮುನ್ನೂರುನುಪಮ ಸೈನಿಕರು
ಕೋಟೆಯನೇರಿದರುಳಿದವರೆಲ್ಲರ
ನಾಯಕನಾದನು ಸೂರ್ಯಾಜಿ.
ಸಮಯಕ್ಕೊದಗಲು ಇನ್ನೂರಾಳ್ಗಳು
ಹಿಂದೆಯೆ ನಿಂತರು ಮೌನದಲಿ.
ಅದೂ ಪಹರಿಯು ಕಂಡನು! ಹಾ! ಕಂಡನು
ಹಲ್ಲಾ ಹತ್ತುವ ಸೈನಿಕರ!

.
ಕಂಡನು; ಮುಂದಡಿಯಿಟ್ಟನು: ಹಾ! ತಾ-
ನಾಜಿಯ ಬಾಣದಿ ಉರುಳಿದನು;
ಉರುಳಿದ ಪಹರಿಯ ಸೊಂಟದ ಖಡುಗವು
ಖಣಿಖಿಣಿಲೆಂದುದು ಒರೆಯೊಳಗೆ.
ಉಳಿದಾ ಪ್ರಹರಿಗಳೆಲ್ಲರೂ ನುಗ್ಗಿದ-
ರೆಲ್ಲರು ಬಿದ್ದರು ಮೃತರಾಗಿ.
ತಾನಾಜಿಯ ಶರ ಕೊಂದುದು! ತಿಂದುದು!
ಮಾವಳಿಗಳು ಮೇಲೇರಿದರು!

.
ಕ್ಷತ್ರಿಯ ಸೈನಿಕರಿದನಾಲಿಸಿ, ರಣ-
ರಂಗಕೆ ಧರಿಸುತ ಶಸ್ತ್ರಗಳ,
ಜಯಜಯವೆನ್ನುತ ಝಳಪಿಸಿ ಖಡ್ಗವ
ಮಾವಳಿಗಳನಾವರಿಸಿದರು.
ಧೈರ್ಯದಿ ಹೊಡೆದರು, ಶೌರ್ಯದಿ ಕಡಿದರು
ಮಾವಳಿ ಭಟರಾವೇಶದಲಿ:
ರಿಪುಗಳ ಪಂಜುಗಳೆಸೆಯಲು, ಸಿಗಿದರು:
ಭೀಕರಮಾದುದು ರಣರಂಗ!

.       
ರಜಪೂತರು ಕಡಿದಾಡುತ ಮಡಿದರು,
ಕೆಲವರನೆಸೆದರು ಕಂದಕಕೆ:
ಕಾಲಾಂತಕನಂದದಿ ತಾಜಾಜಿಯು
ಕೊಂದನು ಲೀಲೆಯೊಳರಿಭಟರ.
ಕಿರಿದಾದರು ಮಾವಳಿಗಳ ಸಂಖ್ಯೆಯು
ಧೈರ್ಯದಿ ಶೌರ್ಯದಿ ಕಾದಿದರು;
ಸರಿದರು ಹಿಂದಕೆ ನಿಲಲಾರದೆ ರಜ-
ಪೂತರು, ಕೋಟೆಯ ರಕ್ಷಕರು.

೧೦.     
ಇನ್ನೂರನುಚರರಧಿಪತಿ ಸೂರಿಯ-
ನಾಲಿಸಿದನು ರಣ ಸಂದಣಿಯ;
ಹೃದಯದೊಳುರಿಯಿತು ರಣದಾವೇಶವು,
ಕದನವ ಕೂಡಲು ಹಲುಬಿದನು:
“ಏಳಿರಿ, ವೀರರೆ, ರಣದೌತಣಕೆ”
ಎನ್ನತಲೇರಿದನೇಣಿಯನು;
ಯೋಧರು ಮುಂಬರಿದೇಣಿಯ ನಡುರುತ
ಜಯ ಹಾಕಾರವ ಮಾಡಿದರು!

೧೧.     
“ಕಾದಿರಿ, ವೀರರೆ ! ರಾಜ ಶಿವಾಜಿಯ
ನೆಚ್ಚಿನ ಮೆಚ್ಚಿನ ಘಾಟಿಗಳೆ!
ಶಿವನಿಹನೆಮ್ಮೊಳು! ಧೈರ್ಯವ ತಾಳಿರಿ!
ಕೂಗಿರಿ” ಹರ ಮಹದೇವ್” ಎನುತ!
ಈ ಪರಿ ದನಿಗೈದನು ತಾನಾಜಿಯು
ಮುಂಬರಿದಸಿಯನು ಝಳಪಿಸುತ;
ಸಾಯುವರೊರಲಿದರುಳಿದವರಳಿದರು
ಖಣಿಖಿಠಿಲೆಂದುವು ಕೈದುಗಳು.

೧೨.     
ಹಿಂದಕೆ ಮುಂದಕೆ ಯೋಧರು ನುಗ್ಗಿದ-
ರಿರಿದರು ಹಾಯ್ದರು ಯುಕುತಿಯಲಿ!
ಪ್ರಳಯ ಭಯಂಕರಮಾದುದು ಧೀರರ
ಘೋರ ಕಠಾರಿಯ ತಾಡನವು೧
ತಾನಾಜಿಯೆ ರಣರಂಗದ ಜೀವವು
ಧೈರ್ಯವು ಬಲವಾವೇಶಗಳು !
ತಾನಾಜಿಯೆ ಮಾವಳಿಗಳ ಹೃದಯವು

ಸಂತಸಮುಲ್ಲಸ ಕೀರ್ತಿಗಳು!

೧೩.     
ನುಗ್ಗುವ ಸುಭಟರ ಮಧ್ಯದಿ, ಉದಯಿಪ
ಉಗ್ರ ದಿನೇಶನ ಕಾಂತಿಯನು
ಹೋಲುವ ಕದನ ಭಯಂಕರ ಬಂದನು
ಧೀರನು ವೀರ ಉದಯಭಾನು!
ಭೀಮಾಕಾರನು ದೋರ್ಬಲಶಾಲಿಯು
ಕದನದೊಳನುಪಮ ಕೇಸರಿಯು.
ಬೆದರೆದೆ, ಹಿಂಝರಿಯದೆ ತಾನಾಜಿಯು
ಧೈರ್ಯದಾಳಾತನಿಗಿದಿರಾದ!

೧೪.     
ನೋಡಿರಿ! ನೋಡಿರಿ: ವೀರರ ಕದನವ!
ನೋಡಿರಿ ಥಳಿಸುವ ಖಡುಗಗಳ!
ಸಾಹಸ ಲಳಿ ಲಾಘವಗಳ ! ಕೇಳಿರಿ
ಖಣಿ ಖಿಣಿಲೆನ್ನುವ ಢಾಲುಗಳ!
ಬಿಂಕದೊಳಿರಿವರು! ಸಾಧಿಸಿ ತಿವಿವರು!
ಹರಿದುದು ಶೋಣಿತ ವಾಹಿನಿಯು!
ಉದಯನು ತಿವಿಯಲು ಅರಿಯ ಗುರಾಣಿಯು
ಠಳ ಠಳವೆಂದುದು ಚೂರಾಗಿ

೧೫.     
ಹಿಂದಕೆ ಚಿಮ್ಮಿದನಾ ತಾನಾಜಿಯು
ಬಾಹು ಗುರಾಣಿಯನೊದಗಿಸಿತು!
ಈರ್ವರು ತಿವಿದರು, ನೆಗೆದರು, ಹಾಯ್ದರು!
ಮಡಿದರು ನೆನೆಯುತಲೀಶ್ವರನ!
ಹಿಂದಕೆ ಹಿಂದಕೆ ಮಾವಳಿ ಸೈನ್ಯವು
ಸರಿದುದು; ಕರೆದನು ಸೂರ್ಯಾಜಿ:
ಎಲ್ಲರೊಳದು ದನಿಯಾಗುಗ ತುಂಬಿತು
ಹಿಮಕರ ಶೋಬಿತ ಗಗನವನು!

೧೬.     
“ಛಿ! ಸುಡು! ಭೀತಿಯೊಲೋಡುವ ಹೇಡಿಯೆ!
ಸ್ವಾಮಿಯನಗಲುವ ಪಾತಕಿಯ!
ಹಿಂಜರಿದುಳಿವುದೇ ? ಛೀ: ಸುಡು ಬಾಳನು!
ನೋಡಿರಿ ಖಂಡಪೆನೇಣಿಯನು!
ಕಾದುತಲುಳೀಯಿರಿ ಯಾ ನೆಗೆದಳಿಯಿರಿ,
ಕೀರ್ತಿಯು ಬರಲೇಕಪಕ್ತೀರಿ?”
ಈ ಪರಿ ನುಡಿಯುತಲಾ ಸೂರ್ಯಾಜಿಯು
ತುಂಡಿಸಿದನು ನೂಲೇಣಿಯನು!

೧೭.     
ಧೈರ್ಯವನಾಂತರು ಮಾವಳಿ ಪಟುಭಟ-
ಲಿಸಲಾ ವೀರೋಕ್ತಿಗಳು:
“ಹರ ಮಹದೇವ್! ಹರ ಮದೇವ!”
ಎನ್ನುತ ಸಾಗಿದರುರುಬೆಯಲಿ:
ದೂರದ ಗಿರಿ ಕಾನನಗಳ ಮೊರೆದುವು
“ಹರ ಹರ ” ಎಂದೆನುತ;
ನೀರವರ ನಿಶೇ ತಾ ಮರುದನಿಗೈದಿತು
ಹರ ಮಹದೇವ್ ದೇವೆನುತ.

೧೮.     
“ಹರ ಮಹದೇವ್ ! ಹರ ಮಹದೇವ್!”
ಜಯರವ ರಿಪುಗಳ ಬೆದರಿಸಿತು;
ಕಾದಿರಾವೇಶದಿ ಮಾವಳಿಗಳು
ರಜಪೂತರ ಬಲ ಕ್ಷೀಣಿಸಿತು.
ಭಯದ ಕಾಯವು ಕಂಪಿಸಲರಿಗಳು
ನಡುಗುತಲೆಡವುತಲೊಡಿದರು;
ಕೆಲವರು ಪೌಳಿಯ ನೆಗೆಯುತಲಳಿದರು,
ಕೈದಿಗಳಾದರು ಉಳಿದವರು.

೧೯.     
“ಗುಡಿಗಳ ದಹಿಸಿರಿ!” ಎಂದನು ಸೂರಿಯ;
ವಹ್ನಿಯು ಭುಗಿಲೆಂದಡರಿದುದು!
ರಾಯಗಡದೊಳು ಶಿವಾಜಿಯು ನಿಂತೀ
ಜ್ವಾಲೆಯ ಕಂಡನು ವಿಸ್ಮಯದಿ;
ಹರ ಹರ ಮಹದೇವೆಂಬುದ ಕೇಳದೆ,
ಅರಿಯದೆ ಗೆಳೆಯನ ಮರಣವನು,
ಕೈದುಗಳಾರ್ಭಟವನು ಆಲೈಸದೆ
ನೋಡುತ ಹರುಷದಿ ಬಿಸುಸಯ್ದು!

೨೦.     
ಬೆಳಗಾಗುತಲಾ ದೂತರು ಬಂದರು,
ತಂದರು ಮರಣದ ವಾರ್ತೆಯನು,
“ಹೇ ಶಿವಭೂಪನೆ ದುರ್ಗವು ಕೈವಶ-
ವಾದುದು; ಮಡಿದನು ತಾನಾಜಿ!”
ಶೋಕವನರಿಯದ ಶಿವರಾಯನು ತಾ
ಕಂಬನಿಗರೆಯುತಲಿಂದತೆಂದ:
“ಸಿಂಹದ ಗುಹೆ ಕೈವಶವಾದುದು ಹಾ
ಸಿಂಹವೇ ಹೋದೆಯ, ಹೇ ಗೆಳೆಯ!”

೧೯೨೪-೨೫ರ ಕಾಲದಲ್ಲಿ ಮೊದಲನೆಯ ವರ್ಷದ ಬಿ.ಎ.ತರಗತಿಯಲ್ಲಿದ್ದಾಗ ನಾನು ಬರೆದ ಕೆಲವು ಇಂಗ್ಲೀಷ ಕವನಗಳಲ್ಲಿ ಅಂದಿನ ಕವಿಯ ಚಿಂತನ ಭಾವನಗಳು, ಆಶೆ ಅದರ್ಶಗಳ, ಹೋರಾಟ ಜಯಾಪಜಯಗಳ ಅರಿವು ಮಿತ್ರ ಸಹೃದಯರಿಗೆ ಸಂತೋಷದ ವಿಷಯಗಳಾಗಬಹುದೆಂದು ಅವುಗಳನ್ನಿಲ್ಲಿ ಕೊಡುತ್ತಿದ್ದೇನೆ.

The Midday Sky

Like the light from a mother’s loving eye
Gleams peacefully the October sky.
The thin white clouds that slowly sail
Suggest a Being within the veil.
O Heart, what secret flowery chain
Unknown to mind that tries invain
To know eluding mysteries
Binds the too yonder dreamy skies?
Is it the sky, or but the gleam
Of some dim joy- encircled dream?
The speak- like eagles soaring high
Do tantalize the poetic eye:
Some hazy memories they bring
From far- off lands where I did sing
Suck kindred songs to some sweet heart
Ere we reluctant did depart;
Fond memories of a lyric sung?
Sad symphonies of a death- knell rung!
24-10-1925.

ಎಷ್ಟೋ ಸಾರಿ ನಾನು ಕಾಯಿಲೆಬಿದ್ದಾಗ ನನ್ನ ಕಾವ್ಯ ಪ್ರತಿಭೆ ಪರಿಪಕ್ವವಾಗಿ ಪ್ರಕಟವಾಗುವ ಮುನ್ನವೇ,ನನ್ನ ಕವಿ ಜೀವನ ಪ್ರಫುಲ್ಲವಾಗಿ ಸಾರ್ಥಕವಾಗುವ ಮೊದಲೇ ಸತ್ತುಹೋಗಿ ಬಿಡುತ್ತೇನೆಯೋ ಎಂಬ ಚಿಂತೆಗೆ ನನ್ನ ಚೇತನ ಒಳಗಾಗುತ್ತಿತು.  ಸ್ವಾಮಿ ವಿವೇಕಾನಂದರ ನಿರ್ಭಯ ತತ್ವವನ್ನು ಚೆನ್ನಾಗಿ ಹೃದಯಿಸಿದ್ದ ನನಗೆ ಸಾವಿನ ಭೀತಿ ಇರಲಿಲ್ಲ.ಏಕೆಂದರೆ ಸಾವು ಎನ್ನುವುದೇ ಸುಳ್ಳು, ಅದೊಂದು ನಿಷೇದಾತ್ಮಕವಾದ ಭಾವನೆಯೆ ಹೊರತು ಬೇರೆ ಏನೂ ಅಲ್ಲ ಎಂಬುವುದನ್ನು ನನ್ನ ಜೀವ ಮನಗಂಡಿತ್ತು. ಭಗವದ್ಗೀತೆಯೂ ಆ ಭಾವನೆಗೆ ತನ್ನ ಅಮೃತವನ್ನು ಸಿಂಚಿಸಿತ್ತು. ಸಾವು ಎನ್ನುವುದು ದೇಹತ್ಯಾಗವೆ ಹೊರತು ಸೊನ್ನೆಯಾಗುವುದಿಲ್ಲ ಎಂಬುವುದು ನನ್ನ ಬುದ್ಧಿಗೆ ಅಸಂದಿಗ್ಧತವಾಗಿತ್ತು.  ಮೃತ್ಯುವನ್ನೂ ನುಂಗಿ ನೊಣೆಯುವ ಅದ್ವೈತ ಕೆಚ್ಚೂ ನನ್ನಾತ್ಮದ್ಲಿ ಪ್ರಜ್ವಲಿಸಿತ್ತು. ‘Death’[1] (ಮೃತ್ಯು) ಎಂಬ ಕವನದಲ್ಲಿ ಆ ಧೀರ ನಿಲುವು ಪ್ರಕಟವಾಗಿರುವ ರೀತಿ ಅದ್ಭುತವಾಗಿದೆ.

೭-೩-೧೯೨೫ ಮತ್ತು ೧೯-೧೨-೧೯೨೪ರಲ್ಲಿ ಬರೆದಿರುವ ಎರಡು ಸಾನೆಟ್ಟುಗಳಿವೆ.  ‘Ambition'[2] (ಮಹಾತ್ವಾಕಾಂಕ್ಷೆ ಅಥವಾ ಕೀರ್ತಿಶನಿ ಎಂದರೂ ಎನ್ನಬಹುದು). ‘Tagore'[3] (ರವೀಂದ್ರನಾಥರ ವಿಚಾರವಾಗಿ ಅಂದು ಕವಿಗಿದ್ದ ಮಹೋನ್ನತ ಭವನೆ ಮತ್ತು ಮಹಾಗೌರವಗಳು ಅಭಿವ್ಯಕ್ತವಾಗಿವೆ)

ಕತ್ತಲಾಗಿ, ಬೀದಿಯ ಇಕ್ಕೆಲದಲ್ಲಿ ಸಾಲಾಗಿ, ಗೋಲಾಕಾರದ ವಿದ್ಯುದ್ದೀಪಗಳನ್ನು ಹೊತ್ತಿಸಿದ ಮೇಲೆ ನಿಷಾದಭಾಗಿನ ಮಹಾ ಉದ್ಯಾನದ ನಡುವೆ ಹಾದು ಹೋಗುವ ಮಿರ್ಜಾರಸ್ತೆ ಒಂದು ಮಾಯಾಮೋಹಕ ದೃಶ್ಯವಾಗುತ್ತದೆ, ಅಥವಾ ಅಂದು ಆಗುತ್ತಿತ್ತು.  ಅಂದು ಅದು ಬಿಂ ಎನ್ನುವಷ್ಟು ನಿರ್ಜನವೂ ಆಗುತ್ತಿರಲಿಲ್ಲ ಅಥವಾ ಇಂದಿನಂತೆ ಕಿಕ್ಕಿರಿದ ಜನಸಂದಣಿಯಿಂದಲೂ ಅತಿವೇಗವಾಗಿ ಸಂಚರಿಸುತ್ತಾ ಕಿರಿಚಿಕೊಳ್ಳುವ ಮೋಟಾರುವಾಹನಗಳಿಂದಲೂ ತುಂಬಿ ಕಿವಿ ಗಡಚಿಕ್ಕುತ್ತಲೂ ಇರಲಿಲ್ಲ, ಸೌಂಧರ್ಯ ವಿಧ್ವಂಸಕವಾಗಿ.

ಸರ್ಕಲ್ಲಿನಿಂದ ಮುಂಬರಿದು ಈ ರಸ್ತೆಯ ಪ್ರವೇಶದ್ವಾರದಲ್ಲಿ ನಿಂತು ನೋಡಿದರೆ ಸುಮಾರು ಎರಡು ಮೂರು ಫರ್ಲಾಂಗು ನೇರವಾಗಿರುವ ಟಾರು ರಸ್ತೆಯ ಮೇಲೆ ಇಕ್ಕೆಲದ ದೀಪದಕಂಭಗಳಿಂದ ಬಿದ್ದ ಬೆಳಕು ಕಂಭ ಕಂಭಗಳ ನಡುವೆಯಿರುವ ಕಪ್ಪು ನೆಳಲೂ ಮನಸ್ಸಿಗೆ ಒಂದರ ಮೇಲೊಂದು ಏರುತ್ತಿರುವ ಮೆಟ್ಟಲುಗಳ ಪಂಕ್ತಿಯ ಭ್ರಾಂತಿಯನ್ನುಂಟು ಮಾಡುತ್ತವೆ. ಈ ರಸ್ತೆಯನ್ನೇ  ಕುರಿತು ಇಂತಹ ರಾತ್ರಿಯ ಸಂದರ್ಭವನ್ನೆ ಆಶ್ರಯಿಸಿ ಕನ್ನಡದಲ್ಲಿಯೂ ಒಂದು ಸೀಸಪದ್ಯ ರಚಿತವಾದದ್ದು ಹಸ್ತಪ್ರತಿಯಲ್ಲಿ ಸಿಕ್ಕಿದೆ. ಅಲ್ಲಿಯೂ ‘ಜ್ಯೋತಿಕೃತ ಚಿತ್ರ ಸೋಪಾನ’ ಪಂಕ್ತಿಯ ವರ್ಣನೆ ಬರುತ್ತದೆ. ಕನ್ನಡದ ಸೀಸ ಪದ್ಯ ಇಂಗ್ಲೀಷಿನ ಸಾನೆಟ್ಟಿನ ಮುಂದೆ,ಕುದುರೆಯ ಮುಂದೆ ಹೇಸರಗತ್ತೆಯಂತೆ ತೋರಬಹುದಾದರೂ, ನನ್ನ ಕನ್ನಡ ಕಾವ್ಯಭಾಷೆ ಅಡಿಗಲ್ಲಿನ ಮೇಲೆ ತಯಾರಾಗುತ್ತಿದ್ದಾಗ ಹೇಗಿತ್ತು ಎಂಬುವುದು ಗೊತ್ತಾಗಲಿ ಎಂದೆ ಅದನ್ನಿಲ್ಲಿ ಮುಂದೆ ಕೊಡುತ್ತಿದ್ದೇನೆ:

ಮಿರ್ಜಾ ರಸ್ತೆಯ ನೋಟ
(ಸಾಯಂಕಾಲ ಏಳು ಗಂಟೆ)

ಅರ್ಹ ! ನೋಡಲತಿ ರಮ್ಯಮಾಗಿರ್ಪುದೀ ನೋಟ
ಸೌಂಧರ್ಯ ಶ್ರೀದೇವಿಯಾಲಯದ ತೆರದಿ!
ಪರಬೊಮ್ಮ ಕವಿತೆಗಿದು ಶೃಂಗಾರದುದ್ಯಾನ
ಲಾವಣ್ಯದರಸಂಗೆ ಇದು ನಾಟ್ಯರಂಗ!

ನಳನಳಿಪ ಪಸುರಾದ ವೃಕ್ಷಗಳೆ ತೋರಣಂ,
ಥಳಿಪ ವಿದ್ಯುಜ್ವಾಲೆಗಳೆ ಪವಳ ಮಾಲೆ;
ಭೂದೇವಿಸೌಂಧರ್ಯ ಶ್ರೀಯೊಡನೆ ಬರುವಳೀ
ಜ್ಯೋತಿ ಕೃತ ಚಿತ್ರ ಸೋಪಾನಗಳನಿಳಿದು!

ವೈಕುಂಠಕಿಯಳಾದೀ ಪರಮ ಭೂದೇವಿಯಂ
ಪ್ರೇಮದಿಂ ಕರೆದೊಯ್ಯಲೆಂದು ಶ್ರೀ ಶ್ರೀನಿವಾಸಂ
ಸಂಪ್ರೀತಿಯಿಂದ ತಾನೇ ವಿರಚಿಸಿದ ದೇವಮಾರ್ಗಂ
ಅಹಹ ಇದು ಮಹಿಶೂರ ವೈಭವದ ದಿವ್ಯ ನೋಟಂ!

೧೯೨೫ರಲ್ಲಿ ರಚಿತವಾಗಿರುವ ಅನೇಕ ಭಾವಗೀತೆಗಳಲ್ಲಿ ಶ್ರದ್ದೇ, ಸಂದೇಹ, ಅಬೀಪ್ಸೆ, ಪ್ರಾರ್ಥನೆ, ತಾತ್ವಿಕ ಜಿಜ್ಞಾಸೆ ಇತ್ಯಾದಿ ಧಾರ್ಮಿಕ, ಆಧ್ಯಾತ್ಮಿಕ ಭಾವಗಳು ಪ್ರಕಟವಾಗಿವೆ. ನನ್ನ ಚೇತನ ಆಂದೋಲನಕ್ಕೆ ಒಳಗಾಗಿ ಕಡೆಗೊಂಡಿರುವುದಕ್ಕೆ ಸಾಕ್ಷಿಗಳಾಗಿವೆ ಆ ರಚನೆಗಳು. ಆದರೆ ಅವೆಲ್ಲ ಪ್ರಕಟಣೆಗೆ ಯೋಗ್ಯವಾಗದಷ್ಟು ಭಾವದೃಷ್ಟಿಯಿಂದಿಲ್ಲದಿದ್ದರೂ ಭಾಷಾಭಿವ್ಯಕ್ತಿಯ ದೃಷ್ಟಿಯಿಂದ ಹಸಿ ಹಸಿಯಾಗಿವೆ. ಅವುಗಳಲ್ಲಿ ತುಸುಮಟ್ಟಿಗಾದರೂ ಮೇಲುಮಟ್ಟದವೆಂದು ತೋರುವ ಕೆಲವನ್ನಿಲ್ಲಿ ಕೊಡುತ್ತೇನೆ.

ದೇವನಂ ಕಂಡಿಹೆಯ ನೀನೆಂದು ಕೇಳುವರು
ಏನ ಹೇಳಲಿ ನಾನು, ದೇವದೇವ?
ಕಂಡಿಹೆನುಎಂದುಸುರೆ ಖಂಡಿಪರು ತರ್ಕದಿಂ,
ಕಂಡಿಲ್ಲವೆನಲೆನಗೆ ಮನಬಾರದು.

ಜಗದೀಶ ತಾನಾವ ರೂಪದೊಳು ನೆಲಸಿಹನು
ಎಂದೆನ್ನ ಮಾನವರು ಪ್ರಶ್ನಿಸುವರು;
ಯಾವ ರೂಪಂಗಳನು ಧರಿಸಿರುವೆ ನೀನೆಂದು,
ಜಗದಾದಿ ಕಾರಣನೆ, ನಾನು ಸುರಲಿ?

ಇಹನೆಂದು ನಾನುಸುರೆ ತೋರೆಂದು ಹೇಳುವರು;
ಅಹಹ ನೀನಿರುವ ತಾವನು ಬಲ್ಲರೇ?

ಮಹಿಮೆಯಿಂದಡಗಿಹನು ಗಿರಿ ತರು ಸಮೂಹದಲಿ
ಏಂದುಸುರೆ ನಂಬರೈ ಧರೆಯ ಜನರು.

ಏನು ಮಾಡಲಿ, ದೇವ? ಯಾರು ಬಲ್ಲರು ನಿನ್ನ?
ದೀನನಾಗಿಹ ನಾನು ಬಲ್ಲೆನೆನಲೇ?
ತೋರುತಿಹೆ ನೀನೆನಗೆ ಸಕಲ ಸೌಂಧರ್ಯದಲಿ;
ತೋರುನವನೆನಗೆನಲು ಮನಬಾರದು.

ರವಿಯುದಯ ಕಾಂತಿಯಲಿ ತಳತಳಿಪ ಸುತರಂಗ
ಲೀಲೆಯಿಂ ನಲಿವ ಪದ್ಮಾಕರದೊಳು,
ಪೊಗಳಿಂ ತುಂಬಿ ನೆರೆ ನಳನಳಿಪ ತರುಗಳೋಳು,
ರಾಜಿಸುವ ನೀಲದೊಳು ತೋರುತಿರುವೆ!

ಬಲ್ಲವರೆ ? ನಿನ್ನಡಿಯನರಸುವರು ತರ್ಕದಿಂ !
ಮೆಲ್ಲದೆಯೆ ಮಧುರರುಚಿಯನರಿಯಬಹುದೆ?
ಎಲ್ಲಿರುವೆ ಎಂತಿರುವೆ ಎಂಬುವುದನು ನಾನರಿಯೆ,
ಬಲ್ಲೆ  ನಾನೆಲ್ಲಿಯು ನೀನಿರುವುದ!

ಬಂದೆನ್ನ ಸೇರು

ಕಿತ್ತಳೆಯ ಹಸುರು ಹಳದಿಯಾಗುವ ತೆರದಿ
ಬತ್ತದಾ ಸಸಿಯು ಬಣ್ಣ ತಿರುಗುವ ತೆರದಿ
ಕತ್ತಲೆಯು ಪರಿದೋಡಿ ರವಿ ಬರುವ ತೆರದಿ
ಉತ್ತಮೋತ್ತಮ ನೀನು ಬಂದೆನ್ನ ಸೇರು!

ತರುಗಳೊಳು ಪಸುರೆಲೆಯು ಪಣ್ಣಾಗುವಂತೆ
ಬಿರಿಮುಗುಳು ತಾನರಳಿ ಪೂವಾಗುವಂತೆ
ಪೆರೆಕಾಂತಿ ದಿನದಿನವು ತಾಂ ಪೆರ್ಚುವಂತೆ
ಪರಮಾತ್ಮನೇ ನೀನು ಬಂದೆನ್ನ ಸೇರು!

ಕೋಕಿಕೆಯ ಕೂಗು ಧರೆಯ ತುಂಬುವ ತೆರದಿ
ಶಾಖೋಪಶಾಖೆಗಳು ಹೂ ಬಿಡುವ ತೆರದಿ
ನಾಕಬಂಧಿ ಧರೆಯ ಚುಂಬಿಸುವ ತೆರದಿ
ಲೋಕರಕ್ಷಕ ನೀನು ಬಂದೆನ್ನ ಸೇರು!

ಮಳೆ ಬಂದು ಗಿರಿಗಳಲಿ ತೊರೆಯಾಗುವಂತೆ
ಜಲ ಹರಿದು ತೊರೆಗಳಲಿ ನದಿಯಾಗುವಂತೆ
ಹೊಳೆ ಹರಿದು ತಾನು ವಾರಿಧಿಯ ಹೋಗುವಂತೆ
ಪ್ರಳಯಕರ್ತನೇ ನಿನ್ನನೆನ್ನಾತ್ಮ ಹೋಗಲಿ.

ಕಡಲ ಜೀವನಂ ಮೇಘವಾಗುವ ತೆರದಿ
ಗುಡುಗಿ ಆ ಮೇಘಗಳು ಮಳೆಗರೆವ ತೆರದಿ
ಸಿಡಿಲೆರಗಿ ಸರಿ ಸುರಿದು ಧರೆ ತಣಿವ ತೆರದಿ
ಪೊಡವೀಶ ನಿನ್ನಿಂದ ನಾ ಬಂದು ನಲಿವೆ!
೭-೧-೧೯೨೫

೧೪-೪-೧೯೨೫ರ ತಾರೀಖು ಹಾಕಿರುವ  ಒಂದು ಕನ್ನಡ ಸಾನೆಟ್ಟು ‘ದೀಪಾವಳಿಯ ಸಂಜೆ’ ನಾನು ಬೇಸಗೆಯ ರಜಾದಲ್ಲಿ ಊರಿನಲ್ಲಿದ್ದಾಗ ಬರೆದದ್ದು, ದಿನವೆಲ್ಲವೂ ಸಂಭ್ರಮದ ಹಬ್ಬ ದೀಪಾವಳೀ. ಸಂಜೆ ಕತ್ತಲಾದ ಮೇಲಂತೂ ಎಲ್ಲೆಲ್ಲಿಯೂ ಗದ್ದೆಗಳಲ್ಲಿಯೂ, ತೋಟಗಳಲ್ಲಿಯೂ ಮನೆಯ ಬಳಿಯು ಗುಡ್ಡಗಾಡಿನ ಅಂಚುಗಳಲ್ಲಿಯೂ “ದೀಪ ದೀಪ ದೀಪೋಳ್ಗಿ! ಎಂದು ಕೇಕೇ ಹಾಕಿ ದಿಪ್ಪುಡಿಕ್ಕುತ್ತಾ, ಪುಂಡಿ ವಾಟೆ ಬಿದಿರುಗಳಲ್ಲಿ ತಯಾರಿಸಿದ ಕಡ್ಡಿ ಕೋಲುಗಳ ತುದಿಯ ಎಣ್ಣೆ ಬತ್ತಿಗಳನ್ನು ಹೊತ್ತಿಸಿ ಉರಿಸುತ್ತಾ  ನೆಲಕ್ಕೆ ಊರುತ್ತಾ ದೊಂದಿಗಳನ್ನು ಬೀಸುತ್ತಾ, ಭೂಮಿಯನ್ನೇ ಸ್ವರ್ಗಗೊಳಿಸುವ ದೃಶ್ಯ ಚೇತೋಹಾರಿಯಾಗಿರುತ್ತದೆ. ಈ ಸಾನೆಟ್ಟು ನನ್ನ ಅಂದಿನ ಪ್ರಯೋಗದ ರೀತಿಯದ್ದಾಗಿದೆ. ತರುವಾಯದ ವರ್ಷಗಳಲ್ಲಿ ನಾನು ರಚಿಸಿದ ಅಂತ್ಯ ಪ್ರಾಸದ ಪಾಶ್ಚಾತ್ಯ ರೀತಿಯದ್ದಲ್ಲ.  ದ್ವೀತಿಯಾಕ್ಷರ ಪ್ರಾಸದಿಂದ ನಿಯಂತ್ರಿತವಾದದ್ದು.

 


[1] Alien Harp PP44

[2] Alien Harp PP-22

[3] Alien Harp. PP-86.