ದೀಪಾವಳಿಯ ಸಂಜೆ

ರಂಜಿಪುದು, ರಂಜಿಪುದು ದೀಪಾವಳಿಯ ಸಂಜೆ!
ಕಂಜಸಖನಸ್ತಮಯನಾದನೀ ಧಾರಿಣಿಯ-
ನಂಜಿಸುವ ಕಾರಿರುಳು ಮುಗುಗಿದುದು: ತಳತಳಿಪ
ಪೊಂಜುಗಳು ಮರೆಯುತಿವೆ ಹೊಲಗಳಲ್ಲಿ ಸೊಬಗಿನಿಂ!

ಎಲ್ಲಿಯುಂ ಕೇಳುತಿವೆ ಹಬ್ಬದಾ ಕೂಗುಗಳು;
ಎಲ್ಲಿಯುಂ ತೊರುತಿವೆ ಸಂತಸದ ದೀಪಗಳು;
ಸಲ್ಲಲಿತ ಧರೆಯು ಸುರುಪುರವಾಗಿ ಮೆರೆಯುತಿದೆ:
ಉಲ್ಲಸದಿ ನರರೆಲ್ಲ ಸುರರಾಗಿ ತೋರುವರು!

ರಮಣೀಯವಾದ ಈ ಉತ್ಸವಂ ಕವಿವರಂ-
ಗಮರತ್ವದಾನಂ, ಶರಧಿಯನೆ ತೋರ್ಪುದೈ!
ವಿಮಲ ದೀಪಾವಳಿಯ , ವೈಭವದ ಹಾವಳಿಯೆ,
ಆನಂದದರಾಮದಾ ಗಿಳಿಯೆ, ಮಂಗಳಂ!

ಏನೆಂದು ಬಣ್ಣಿಪೆನು ನಿನ್ನ ಸಂತೋಷವಂ?
ಮಾನವರ ಜೀವಕೆ ನೀನೇ ಸಂಜೀವನಂ!
೧೪-೪-೧೯೨೫

ಅದೇ ಏಪ್ರೀಲ್ ತಿಂಗಳಲ್ಲಿ ೧೬-೪-೧೯೨೫ರಲ್ಲಿ ಬರೆದ ಶಿರ್ಷಿಕೆಯಿಲ್ಲದ ಈ ಕವನ ಒಂದು ತೆರನಾದ ವಚನಛಂದಸ್ಸಿನಲ್ಲಿ ಬರೆದಂತಿದೆ, ಉಲಿಯುತ್ತಿದ್ದ ಕೋಗಿಲೆಗೆ,

ಆರನನೀ ಪರಿ ಕರಿಯುತಿರುವೆ,ಕೋಗಿಲೆ?
ಅರಳಿ ಮೆರೆವ ಅರಳಿಮರದ
ಮರೆಯುಳವಿತು ರಮಣಿಯಂತೆ
ಸಾರಿ ಸಾರಿ ಕೂಗಿ ಕೂಗಿ
ಅರನೀ ಪರಿ ಕರಿಯುತ್ತಿರುವೆ ಕೋಗಿಲೆ?

ನದಿಯ ಮರಳ ದಡದೋಳಾಡಿ
ನದಿಯ ನರ್ತನವನೆ ನೋಡಿ
ಹಸುರು ಹುಲ್ಲ ಮೇಲೆ ಓಡಿ
ಹಸುರ ಗೀತಗಳನೆ ಪಾಡಿ
ಒಲುಮೆಯಿಂದ ನಿನ್ನ ಕರೆದ
ಲಲಿತ ಬಾಲನ ನೀ ಕರೆವೆಯಾ?

ಅಂದು ಅಡವಿಗಳಲಿ ಅಲೆದು
ಮನೆಯ ಕಡೆಗೆ ಹೋಗುವಾಗ
ದಾರಿಯೆಡೆಯೊಳಿರುವ ಮರದ
ಮೇಲೆ ಕುಳಿತು ನೀನು ಪಾಡೆ
ನಿನ್ನನಣಕಿಸಿದ ತರುಣನ
ಇಂದು ಒಲುಮೆಯಿಂದ ಕರೆವೆಯಾ?
೧೬-೦೪-೧೯೨೫

ಚಿಣ್ಣ ಮುದ್ದಿನ ಹಕ್ಕಿ           

ನಿನ್ನ ದೇವಸ್ಥಾನವೆಲ್ಲಿದೆ,
ಚಿಣ್ಣ ಮುದ್ದಿನ ಹಕ್ಕಿಯೆ?
ಮೆರೆವ ಶಿಖರದ ಮೇಲೆ ಇರುವುದೆ?
ತೊರೆಯ ತಡಿಯೊಳಗಿರುವುದೆ?
ಅಥವಾ ಪೂಗಳು ನಲಿದು ಬೆಳೆಯುವ
ಪೃಥಿವಿಯೆಡೆಯೊಳಗಿರುವುದೆ ?
ಚಿಣ್ಣ ಮುದ್ದಿನ ಹಕ್ಕಿ”ಕೂ ಹೂ!”
ಎನ್ನುತೊಲುಮೆಯ ತೋರಿತು!

ಕೆಲಸಗಾರರು ತೊಳಲಿ ಬಳಲುವ
ಹೊಗಳೆಡೆಯೊಳಗರುವುದೇ?
ರಮಣಿಯರು ಪೂಗಳುನು ಕೊಯ್ಯುವ
ವಿಮಲ ಬನದೊಳಗಿರುವುದೆ?
ಚಿಣ್ಣ ಮುದ್ದಿನ ಹಕ್ಕಿ “ಕೂ ಹೂ!”
ಎನ್ನು ತೊಲುಮೆಯ ತೋರಿತು!

ತುಂಗೆಯ ಪರಮ ತೀರ್ಥದೊಳಿದೆಯೆ?
ಗಂಗೆಯಾ ಜಲದೊಳಿದೆಯೆ?
ರಂಗನಾಥನ ದೇವನಿಲಯದ
ಮಂಗಳಾರತಿಯೊಳಿದೆಯೆ?
ಚಿಣ್ಣ ಮುದ್ದಿನ ಹಕ್ಕಿ “ಕೂ ಹೂ!”
ಎನ್ನುತೊಲುಮೆಯ ತೋರತು

ಅತ್ತಲಿರುವುದೇ? ಇತ್ತಲಿರುವುದೆ?
ಸುತ್ತಮುತ್ತಲು ಇರುವುದೆ ?
ಉತ್ತಮಾತ್ಮನ ದಿವ್ಯ ನಿಲಯವು
ಚಿತ್ತ ಪುರಿಯೊಳಗಿರುವುದೆ?
ಚಿಣ್ಣ ಮುದ್ದಿನ ಹಕ್ಕಿ “ಕೂ ಹೂ! ”
ಎನ್ನುತೊಲಮೆಯ ತೋರಿತು.

ಪರಮ ಯೋಗಿಗಳಿರುವ ಕಾಡಿನ
ಮೆರೆವ ಸೊಬಗಿನೊಳಿರುವುದೇ?
ನಿನ್ನ ಹೃದಯರಾಮದೊಳಗಿಹ
ಉನ್ನತಾತ್ಮನೊಳಿರುವುದೇ?
ಚಿಣ್ಣ ಮುದ್ದಿನ ಹಕ್ಕಿ “ಕೂ ಹೂ!”
ಎನ್ನುತಾಗಲೇ ಹಾರಿತು.
೨೪-೪-೧೯೨೫

ಇದೊಂದು ಸ್ವಾರಸ್ಯದ ವಿಷಯ. ೧೯೨೪-೨೫ರಲ್ಲಿ ನನ್ನದೊಂದು ಹಸ್ತಪ್ರತಿಯಲ್ಲಿ ‘ಕರ್ಣಾಟಕ ರಾಷ್ಟ್ರಗೀತೆ’ ಎಂಬ ಕವನವಿದೆ.  ಅದು ನನ್ನ ‘ಜಯ ಹೇ ಕರ್ಣಾಟಕ ಮಾತೆ’ ಎಂಬ ನಾಡಗೀತೆಯ ಪ್ರಪಿತಾಮಹನೊ ಪ್ರಪ್ರಪಿತಾಮಹನೊ ಆಗಿರಬೇಕು. ಠಾಕೂರರ ‘ಜನಗಣಮನ’ ದಂತೆ ನಮ್ಮ ಕನ್ನಡ ನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣಸ್ಥಿತಿಯಂತಿದೆ ಅದು. ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ) ಕಡೆಗೆ ‘ಕೊಳಲು’ ಕವನ ಸಂಗ್ರಹ ಅಚ್ಚಾದಾಗ ಒಂದು ಸ್ಥಿಮಿತಕ್ಕೆ ನಿಂತಿತು. ಮತ್ತೇ ೧೯೭೦-೭೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅದನ್ನು  ನಾಡಗೀತೆಯನ್ನಾಗಿ ಅಧಿಕೃತವಾಗಿ ಸ್ವೀರಿಸಿದಾಗ ಮೂರು  ನಿಮಿಷಗಳಲ್ಲಿ ಅದನ್ನು ಹಾಡಿ ಮುಗಿಸುವಂತೆ ಸಂಗ್ರಹಿಸಿಕೊಳ್ಳಲಾಯಿತು.  ೪೭ ವರ್ಷಗಳ ಅನಂತರ ೧೯೨೭ನೆಯ ಜುಲೈ ತಿಂಗಳಲ್ಲಿ ಇಂದು (ನಾನೀಗ ಇದನ್ನು ಬರೆಯುತ್ತಿರುವುದು ೨೭-೭-೧೯೨೭) ನಾಡಿಗೆ ‘ಕರ್ಣಾಟಕ’ ಎಂಬ ಹೆಸರಿಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದೆ. ಬಹುಶಃ ಪರಿಷತ್ತು ಅಂಗೀಕರಿಸಿರುವ ನಾಡಗೀತೆಯನ್ನು ಸರಕಾರವೂ ಒಪ್ಪುತ್ತದೆಂದು ಹಾರೈಸುತ್ತೇನೆ. ಭಾವ ಮತ್ತು ಭಾಷೆ ಎರಡರ ದೃಷ್ಟಿಯಿಂದಲೂ ಕವಿಯ ವಿಕಾಸವನ್ನು ಗುರುತಿಸಲು ನೆರವಾಗುತ್ತದೆಂದು ಅದರ ಪೂರ್ತಿ ಪಾಠವನ್ನು, ಯಾವುದನ್ನೂ ತಿದ್ದಲು ಹೋಗದೆ, ಅದರ ಎಲ್ಲ ನ್ಯೂನತೆ ದೋಷಗಳೊಡನೆ ಇಲ್ಲಿ ಕೊಡುತ್ತೇನೆ. ಹೈದರ, ಟಿಪ್ಪು,ಶಿವಾಜಿ, ತುಕಾರಾಮ , ಪಂಪ ಪುಲಿಕೇಶಿ, ಕೆಂಪೆಗೌಡ ಅರ್ಥವಾಗದಗ ‘ಮಾ ರಾಮ’ – ಈ ಎಲ್ಲ ಹೆಸರುಗಳು ಕಲಬೆರಕೆಯ ವಿಚಿತ್ರಪಾಕವಿರುವುದನ್ನು ಓದುಗರು ದರಸ್ಮಿತರಾಗಿ ಗಮನಿಸಬಹುದು!

ಕರ್ನಾಟ ರಾಷ್ಟ್ರಗೀತೆ

ಭುವನ ವಿನುತ ವರ ಪಾವನತರ ಭಾರತ ಜನನಿಯ ತನುಜಾತೆ,
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ಣಾಟಕ ಮಾತೆ!


ಪ್ರಕೃತಿ ವಿರಾಜಿತೆ, ರಮ್ಯ ತರಂಗಿಣಿ ವನ ಪರಿಶೋಭಿತ ಕಾಯೆ,
ಸುಕೃತ ಮನಸ್ಕರ ಹರುಷ ಪ್ರದಾಯಕಿ, ಮೇಘ ವಿಭೂಷಿತೆ, ತಾಯೆ,

ಭಾರತೀಯ ತೊಡೆಯೆ ತವ ಪೀಠ;
ಆರಾಜಿಪ ನಭವೆ ಕಿರೀಟ;

ಧಾರಿಣಿದೇವಿಯ ಕರೆವ ಅರಣ್ಯಗಳಲಾಪವೆ ತೆವ ಪಾಠ!
ದಿವಿಜರ ಕರೆವ ಮಹಾ ಶುಭಕರ ಭಾರತ ಜನನಿಯ ತನುಜಾತೆ
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ಣಾಟಕ ಮಾತೆ!


ಜನನಿಯ ಜೋಗುಳ ವೇದ ಪುರಾಣಗಾಗಮ ಸ್ಮೃತಶ್ರುತಿಗಳ ಘೋಷ;
ಹೇ ಕರ್ಣಾಟಕ, ತವ ಜಯಘೊಷವೆ ಮಾತೆಯ ಚಿರ ಆವೇಶ;

ಹಚ್ಚನೆ ಶೈಲನಿಕರ ಸಾಲೇ
ಪಚ್ಚೆಯ ನವ ಕಂಠೀಮಾಲೆ;

ಅಚ್ಚರಿಯಿಯುವ ಅನಿಲಾಂದೋಳಿತ ನವ ವನ ನರ್ತನ ಲೀಲೆ!
ಕಪಿಲಪತಂಜಲ ಗೌತಮನುತ ಭಾರತ ಜನನಿಯ ತನುಜಾತೆ
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ನಾಟಕ ಮಾತೆ!


ಶಂಕರ ರಾಮಾನುಜ ಮಾಧವ ಮಾ ತತ್ವಜ್ಞರ ವರ ಮಾತೆ,
ಹೈದರ ಟಿಪ್ಪು ಶಿವಾಜಿ ಸುಭಟರ ಪಡೆದ ರಣರಾಮನ ಸೀತೆ,

ವಿನುತ ವಿರಕ್ತ ತುಕಾರಾಮ
ಕನಕ ಪುರಂದರ ಮಾರಾಮ

ರನ್ನ ಷಡಕ್ಷರಿ ಪೊನ್ನ ಲಕುಮಿಪತಿ ಕವಿಕೋಕಿಲರಾರಾಮ!
ಕವಿಗಳ ಮನವನ ಕೋಕಿಲ ವರ ಭಾರತ ಜನನಿಯ ತನುಜಾತೆ
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ನಾಟಕ ಮಾತೆ!


ಪುಲುಕೇಶೀಯದು ಕಂಠೀರವ ಕೆಂಪೇನೃಪಶೇಖರ ಭೂಮಿ;
ಸಂಪದ ಅಭ್ಯುದಯಂಗಳ ಪಾಲಿಪ ದಿವ್ಯ ವಿಹಾರದ ಭೂಮಿ!

ಕೃಷ್ಣ ಶರಾವತಿ ವರ ತುಂಗಾ
ಕಪಿನಿ ಕಾವೇರಿಗಳ ತರಂಗ
ಶುಭ್ರಪ್ರಕೃತಿ ವಿರಾಜಿತ ನೀಲಾದ್ರಿಯ ದಿವಿಜ ನಿವಾಸಿತ ರಂಗ!
ಜನರ ನಯನಗಳ ಮೋಹಿಪ ವರ ಭಾಋತ ಜನನಿಯ ತನುಜಾತೆ
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ನಾಟಕ ಮಾತೆ!


ಸರ್ವ ಜನಾಂಗದ ಶಾಂತಿನಿಕೇತನ, ಸರ್ವ ಮತಗಳಾರಮ,
ಅಂಬರ  ಚುಂಬಿತ ಶೈಲಾರಾಜಿತ ಪರಮ ಋಷಿಗಳಾರಾಮ!

ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಬೌದ್ಧರುದ್ಯಾನ

ಹಿಂದೂಸ್ಥಾನದ ಗಾಯಕ ವೈಣಿಕ ಕೋವಿದರ ಮಹಾಸ್ಥಾನ!
ಭುವನವಿನುತ ವರ ಪಾವನ ತರ ಭಾರತ ಜನನಿಯ ತನುಜಾತೆ
ಜಯಹೇ! ಜಯಹೇ! ಜಯಹೇ! ಜಯಜಯಜಯ ಕರ್ನಾಟಕ ಮಾತೆ!

ಜೂನ್ ತಿಂಗಳಲ್ಲಿ ಒಂದು ಹಳ್ಳೀಯ ಸಂಜೆಯನ್ನು ಕುರಿತು ವರ್ಣನೆಯ ಕವನವಿದು. ಮುಂಗಾರು ಪ್ರಾರಂಭವಾಗಿ ಎಲ್ಲ ಹಸುರಾಗಿರುತ್ತವೆ.  ಒಮ್ಮೊಮ್ಮೆ ಸಂಜೆಯಲ್ಲಿ ಮೋಡಸರಿದು ಇಳಿಬಿಸಿಲು ಹಸುರ ಮೇಲೆ ಬಿದ್ದ ಮಲೆಗಳೆಲ್ಲ ಮೋಹಕವಾಗುತ್ತವೆ. ಅಂತಹ ಒಂದು ಸಂದರ್ಭವಿರಬೇಕು ಈ ಸಂಜೆ.  ನಾನಿನ್ನೂ ಬೇಸಗೆ ರಜಾಕ್ಕೆ ಹೋದವನು ಊರಲ್ಲಿಯೆ ಇರುತ್ತಿದ್ದೆ. ಜೂನ್ ೨೪ ರಂದು ಕಾಲೇಜು ತೆರೆಯುವವರೆಗೂ. ಇಂತಹ ಸೌಂಧರ್ಯವಿದೆ, ಆದರೆ ಯಾರೂ ಲಕ್ಷಿಸುತ್ತಿಲ್ಲವಲ್ಲಾ ಎಂದು ಕೊರಗುವ ಕವನ, ಕೊನೆಗೆ ಕವಿಯನ್ನೂ ತರಾಟೆಗೆ ತೆಗೆದುಕೊಳ್ಳುತ್ತದೆ, ಸೌಂದರ್ಯ ಸವಿಯುವುದನ್ನು ಬಿಟ್ಟು, ಅದನ್ನು ಯಾರೂ ಲಕ್ಷಿಸುತ್ತಿಲ್ಲವಲ್ಲಾ ಎಂದು ಕವನದ ರಚನೆಯಲ್ಲಿ ತೊಡಗಿ, ತಾನು ಅದನ್ನು ಅಲಕ್ಷಿಸುತ್ತಿದ್ದಾನೆ ಎಂದು!

ಹಳ್ಳಿಯ ಸಂಜೆ
(ಜೂನ್)

ನಾನಾ ವರ್ಣವಿಲಾಸದಿ ನಲಿಯುವ
ಅಡವಿಯ ಅವಿರಳ ತಳೀರಿನೊಳು
ಮರ‍್ಮರ ನಾದವ ಮಾಡುತ ನಲಿವಿಂ
ಮುಂಗಾರಾನಿಲ ಸುಳಿಯುವನು.

ಮುಂಗಾರಾನಿಲ ಸುಳಿವನು ನಲಿವನು
ಮುಕುತಿಯ ಪಡೆದಾತ್ಮನ ತೆರದಿ;
ಸಕಲರೊಳಾತನು ಚಲಿಸುವನಾದರು
ಕೆಲರಾತನ ಅನುಭವಿಸುವರು.

ನವ ಪಸುರಿಂ ಪರಿಶೋಭಿತ ಬಯಲೊಳು
ಬಳಸಿಹ ಸೊಬಗನು ಲೆಕ್ಕಿಸದೆ
ಕುಣಿಯುತ ಕೂಗುತ ಬೀಳುತ ಏಳುತ
ಬಾಲಕರಾಡುವರಾಟಗಳ!

ಮೇಘ ಕಳಂಕಿತ ನೀಲ ಗಗನದಲಿ
ಸಂಜೆಯ ರವಿತಾ ರಂಜಿಪನು;
ಸೂರ್ಯ ಪ್ರದೀಪಿತ ಪ್ರಕೃತಿಯು ತರುವುದು
ಹೃದಯದಿ ಹರುಷ ತರಂಗಗಳ.

ಬಿಡುಗೆ ಹೊಂದಿದ ಮುಂಗಾರಾನಿಲ
ತನ್ನಾಟದಿ ತಾ ಮುಳುಗಿಹನು.
ಬಯಲಾಟದಿ ಮನ ಸಿಲುಕಿದ ಬಾಲರು
ಮರೆತಿಹರಾಡುವ ಧರಣಿಯನೆ!

ನಭದೊಳು ರಂಜಿಪ ರವಿ ಸೆರೆಯಾಗಿಹ
ತನ್ನ ಪಡುವಲ ವೈಭವಕೆ;
ಇನ್ನೀ ಮನಮೋಹಿಪ ಹಳ್ಳಿಯೆ ನವ
ಸೌಂಧರ್ಯವ ನೋಡುವರಾರು?

ಯಾರಿಗು ತಿಳಿಯದೆ ತರುಗಳ ನೆರಳಲಿ
ನಾನೂ ರಾಮು ಕುಳಿತಿಹೆವು.
ಪಕ್ಕದೊಳಾಡುತ ಟೈಗರು ನಿಂತಿದೆ;
ರಾಮುವು ನಾಯಿಯ ನೋಡುವನು.

ನಾನು ಸೊಬಗನು ಲಕ್ಷಿಸರೆಂಬುವ
ಕವಿತೆಯ ರಚಿಸುವೆ ಮನದೊಳಗೆ:
ಇಂತಿರಲೀ ಮನಮೋಹಿಪ ಸಂಜೆಯ
ಸೌಂದರ್ಯವ ಲಕ್ಷಿಪರಾರು?

ಈ ಕಾಲದಲ್ಲಿ ನಾನು ಓದುತ್ತಿದ್ದ ಇಂಗ್ಲೀಷ ಕವನಗಳಲ್ಲಿ ಯಾವುದಾದರೂ ಭಾಷಾಂತರ ಸಾಧ್ಯವೆಂದು ತೋರಿದರೆ ಅನುವಾದಿಸುವ ಪ್ರಯತ್ನ ಮಾಡುತ್ತಿದ್ದೆ. ಫ್ರಾನ್ಸಿನ ಕಾರ್ನಫೋರ್ಡ ‘In France’ ಎಂಬ ಕವನವನ್ನು ‘ನಡುವಗಲು’ ಎಂದೂ ಡಬ್ಲೂ.ಎಸ್.ಲ್ಯಾಂಡರ ನ ಒಂದು ಕವನವನ್ನು ‘ಓಡುವ ಸುಖಗಳು’ ಎಂದೂ ಅನುವಾದಿಸಿದ್ದೇನೆ. ಮೂಲಗಳ ಚಿಂತನಾಂಶ ಭಾವಾಂಶಗಳನ್ನು ತುಸು ಮಟ್ಟಿಗೆ ಪ್ರತಿಬಿಂಬಿಸುತ್ತವೆಯಾದರೂ ರೂಪಾಂಶದ ನ್ಯೂನತೆಯಿಂದ ಮೂಲಕ್ಕೆ ನ್ಯಾಯವೊದಗಿಲ್ಲ ಎಂದು ನನ್ನ ಭಾವನೆ.

ನಡುವಗಲು       

ಗಿರಿಗಳ ಪರಿಶೋಭಿಪ ತುಗಳೆ ಧರೆ
ಗಿಳಿದಿಹ ದಿವಿಜೆಯರಾದೊಡೆಯು
ಅವುಗಳ ನೋಡಲು ನಾನು ಭಾನೂ
ಹೊರತಿನ್ನಾರು ಇಲ್ಲಿಲ್ಲ!

ನೆರಳೊಳು ಕುಳಿತಿಹ ಗೋಪನು ನೋಡುವೆ
ನವನಾ ಹೆಣೆಯುವ ಬುಟ್ಟಿಯನು;
ಅವನಾ ನಾಯಿಯಾ ತುರುಗಳ ಕಾಯುವು
ದಗಲದ ತೆರೆದಲಿ ಹಗಲೆಲ್ಲ!

ತೃಪ್ತಿ ವಿರಾಮವ ಹೊಂದಿದ ತುರುಗಳು
ಮೇಯುವ ಧರೆಯನೆ ನೋಡುವುವು;
ಮೆಲ್ಲುತ ಹುಲ್ಲನು ಮೆಲ್ಲನೆ ನಡೆವುದು
ತರತರ ಬಣ್ಣದ ತುರು ಮಂದೆ!

ರವಿ ಕವಿ ಇರ್ವರೆ ನೋಡುತಲಿಹರೀ
ಪಚ್ಚೆ ವಿಭೂಷಿತ ಉತ್ಸವವ!
ಗಿರಿಗಳ ಪರಿಶೋಬಿಪ ತರುಗಳೆ ವಸು-
ಧರೆಗಿಳಿದಿಹ ಸುರ ರಮಣಿಯರು!

ಓಡುವ ಸುಖಗಳು

ಶೋಕವ ಮಾಡುವುದೇಕೋ, ಗೆಳೆಯನೆ,
ಲೋಕದ ಜಾರುವ ಸುಖಗಳಿಗೆ ?
ವಿಧಿ ತಾನೀಯದು ಹಲವನು ಎಂದೂ;
ಬಂದವು ಬೇಗನೆ ಓಡುವವು.

ಕಾಮನ ಬಿಲ್ಲನು ಗಗನದಿ ನೋಡುವೆ;
ಹಿಮವನಿಗಳ ಹುಲ್ಲಿನ ಮೇಲೆ
ನೋಡುವೆನವುಗಳನೇತಕೆ ಹೊಳೆವುವು
ಅಳಿವುವು ಎಂಬುದ ನಾ ಕೇಳೆ.

ನಿಲ್ಲುತ ಕೊರಗುತ್ತ ಕೈ ಮುಗಿದವುಗಳ
ವ್ಯರ್ಥದಿ ಹಿಂದಕೆ ನಾ ಕರೆಯೆ:

ಇಲ್ಲೋ? ಅಲ್ಲೋ? ಎಲ್ಲೋ ಒಂದೆಡೆ
ಮತ್ತವು ಹೊಳೆವುವು, ನಾ ಬಲ್ಲೆ!

ಇದೇ ಸಮಯದಲಿ ‘ತವರೂರು’ ಎಂಬ ಪುಟ್ಟ ಕವನ ಒಂದನ್ನು ‘ ಜಯ ಕರ್ನಾಟಕ’ ಮಾಸಪತ್ರಿಕೆಗೆ ಕಳಿಸಿದೆ. ಅದು ಅಲೂರು ವೆಂಕಟರಾಯರ ಸಂಪಾದಕತ್ವದಲ್ಲಿ ಧಾರವಾಡದಿಂದ ಹೊರಡುತ್ತಿದ್ದ ಸುಪ್ರಸಿದ್ಧ ಮಾಸಪತ್ರಿಕೆಯಾಗಿತ್ತು. ಮೈಸೂರಿನಲ್ಲಿಯೆ ಹೊರಡುತ್ತಿದ್ದ ದಿನ ಪತ್ರಿಕೆ ‘ಸಂಪದಭ್ಯುದಯ’ ನನ್ನ ಕೆಲವು ಕವಿತೆಗಳನ್ನು ಪ್ರಕಟಿಸಿತ್ತಾದರೂ ‘ಮಾಸ ಪತ್ರಿಕೆಗಳಿಗೆ ಯಾವುದನ್ನೂ ಅದುವರೆಗೆ ಕಳುಹಿಸಿರಲಿಲ್ಲ ಕನ್ನಡದಲ್ಲಿ.  ಮದರಾಸಿನಿಂದ ಹೊರಡುತ್ತಿದ್ದ ‘ಇಂಡಿಯನ್ ರಿವ್ಯೂ’ ಗೂ ಇಂಗ್ಲೀಷ್ ಕವನಗಳನ್ನು ಕಳುಹಿಸಿದ್ದೇನಾದರೂ ಅವು ಯಾವುವು ಅವುಗಳನ್ನು ಪ್ರಕಟಿಸುವ ಗೋಜಿಗೆ ಹೋಗಿರಲಿಲ್ಲ. ಆದ್ದರಿಂದ ನನ್ನ ‘ತವರೂರು’, ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮವನ್ನು ಹೊತ್ತು ‘ಜಯ ಕರ್ನಾಟಕ’ದಲ್ಲಿ ಪ್ರಕಟವಾದಂದು ನನಗೆ ತುಂಬ ಹಿಗ್ಗಾಗಿತ್ತು.  ಆ ‘ಅಲ್ಪ’ದಿಂದ ಒಂಧು ಒದಗಿದ ಪ್ರೋತ್ಸಾಹ ಅಜ್ಞಾತ ಲೇಖಕನ ಭಾವೋತ್ಸಾಹಕ್ಕೆ ಭೂಮ ಪ್ರಚೋದನೆಯೇ ಆಗಿತ್ತು! ತರುವಾಯ ಆ ಕವನ ‘ಕೊಳಲು’  ಕವನ ಸಂಗ್ರಹದಲ್ಲಿ ಪ್ರಕಟವಾಗಿದೆ. ಅಂದರೆ ೧೯೩೦ರಲ್ಲಿ, ಅದು ರಚಿತವಾಗಿ ಐದು ವರ್ಷಗಳ ಅನಂತರ.

‘ಆಲದ ಮರದಡಿ’ ಎಂಬ ಕವನ ಬಾಲ್ಯದ ಮತ್ತು ಬಾಲಕರ ಮಹಿಮೆ ಮತ್ತು ಆನಂದ ಮತ್ತು ಅಮೃತತ್ವ ಇವುಗಳನ್ನು ಕುರಿತದ್ದು.

ಆಲದ ಮರದಡಿ

ಆಲದ ಮರಡದಡಿ ಕೋಮಲ ತಳಿರೊಳು
ಲೀಲೆಯನಾಡುವ ಬಾಲಕರೇ,
ಕಾಲನು ಚುಂಬಿಪ ಭೂಮಿಯ ಬಲ್ಲಿರೆ,
ಮೇಲಿನ ನೀಲಾಕಾಶವನು?

ಕಾಲವೆ ನಿಮ್ಮೀ ಬಾಲ್ಯದ ಲೀಲೆ!
ಬಾಲರೆ, ನೀವೇ ತಾಯಿಯ ಮಾಲೆ!

ಬೀಸುವ ಮಾರುತ ನಿಮ್ಮನು ಚುಂಬಿಸ-
ನೀಶನೆ ನಿಮ್ಮನು ಚುಂಬಿಪನು.
ನಲಿಯಿರಿ; ನಲಿಯಿರಿ, ಬಾಲರೆ, ನಲಿಯಿರಿ!
ಬಳಲದ ಒಲುಮೆಯೆ ನಿಮ್ಮಾತ್ಮ!

ಮೇಲಿಹ ನೀಲಾಕಾಶವು ನೀವೆ;
ಸೋಲದ ಲಿಲೆಯ ಸುತರೂ ನೀವೇ!

ಸುತ್ತಲು ನಲಿಯುವ ಸುಮಗಳು ನಿಮ್ಮನು
ಮುತ್ತಿಡೆ ಕರೆವುವು ಕೈಬೀಸಿ:
ಗೀತವ ಖಗ ಸಂಕುಲ ಪಾಡಲದುವೆ
ಮಾತೆಯ ಮುದ್ದಿನ ಜೋಗುಳವು!
ಕಡಲ ತರಂಗಾವಳಿಗಳು ನೀವೆ!
ಪೋಡವಿಗೆ ಬ್ರಹ್ಮಾನಂದವು ನೀವೆ!

ಮೃತ್ಯುವನೋದೆಯಿರಿ! ಪಾಪವ ಸದೆಯಿರಿ!
ಸತ್ಯಕೆ ನೀವೇ ವಂಶಿಕರು!
ಪಡೆಯಿರಿ ಅಮೃತಾನಂದವ, ಬಾಲರೆ,
ಕಡೆಯಿರಿ ಸ್ವಾತಂತ್ಯ್ರಾಂಬುಧಿಯ
ಇಹ ಪರದಾನಂದಾಮೃತ ನೀವೇ!
ಮಹಿಯ ಮಹಿಮೆಯಾ ಜ್ಯೋತಿಯು ನೀವೇ!

ನಿಮ್ಮ ಹೃದಯದೊಳಿಹುದು ಅಮೃತಕಲಶ,
ನೀವೇ ಜೀವರ ಜೀವನವು:

ನೀವೇ ಶಾಂತಿಯು ಲೋಕದ ಕ್ಷೋಬೆಗೆ,
ಮರುಭೂಮಿಯ ಪಸರುದ್ಯಾನ!
ಅಚ್ಯುತ ಪದವಿಯೆ ಪದವಿಯು ನಿಮಗೆ!
ಅಚಲಾನಂದವೆ ಸಂಬಳ ನಿಮಗೆ!                ೨೬-೭-೧೯೨೫

ನಾನು ಮೊದಲನೆಯ ವರ್ಷದ ಬಿ.ಎ., ತರಗತಿಯಲ್ಲಿದ್ದಾಗ ಮಹಾರಾಜಾ ಕಾಲೇಜಿನ ಯೂನಿಯನ್ ತನ್ನ ಮಾಸಿಕದಲ್ಲಿ ಪ್ರಕಟಿಸುವ ಸಲುವಾಗಿ ಒಂದು ಇಂಗ್ಲೀಷ್ ಕವನದ ಭಾಷಾಂತರ ಸ್ಪರ್ಧೆ ಏರ್ಪಡಿಸಿತ್ತು. ಕವನದ ಶಿರ್ಷಿಕೆಯಾಗಲಿ, ಅದರ ಕವಿಯಾಗಲಿ ನನಗೆ ನೆನಪಿಲ್ಲ. ನನ್ನ ಭಾಷಾಂತರದ ಶಿರ್ಷಿಕೆ ‘ದೇವದೂತರು’ ಎಂದಿರುವುದರಿಂದ ಬಹುಶಃ ಇಂಗ್ಲೀಷ್ ಶಿರ್ಷಿಕೆ ……………….. ಎಂದೋ ಅಥವಾ ಅದಕ್ಕೆ ಸಂವಾದಿಯಾಗಿಯೋ ಇದ್ದಿರಬೇಕೆಂದು ಊಹಿಸುತ್ತೇನೆ.  ಇಂಗ್ಲೀಷಿನಲ್ಲಿ ನನ್ನ ಕಾವ್ಯ ಭಾಷೆ ತಕ್ಕ ಮಟ್ಟಿಗೆ ಮುಂದುವರಿದಿದ್ದತಾದರೂ ಕನ್ನಡದಲ್ಲಿ ಅದು ಇನ್ನೂ ಪ್ರಯೋಗಾವಸ್ಥೆಯಲ್ಲಿಯೆ ಇದ್ದಿತು. ಹಳೆಯ ಛಂದಸ್ಸು ಪ್ರಾಸಗಳಿಂದ ಅದಿನ್ನೂ ಮುಕ್ತವಾಗಿರಲಿಲ್ಲ.  ನಾನು ನನ್ನ ಭಾಷಾಂತರವನ್ನು ಭಾಮಿನಿ ಷಟ್ಪದಿಯಲ್ಲಿ ದ್ವೀತಿಯಾಕ್ಷರ ಪ್ರಾಸ ಸಹಿತವಾಗಿಯೆ ಮಾಡಿದ್ದೆ! ಭಾಷಾಂತರ ಬರಿಯ ಭಾವಾನುವಾದವಾಗಬಾರದೆಂದು ಆದಷ್ಟು ಮೂಲಕ್ಕೆ ಹತ್ತಿರವಾಗಿರಲಿ ಎಂದು ಪ್ರಯತ್ನಿಸಿದ್ದೆ. ಆದರೆ ಸ್ಪರ್ಧೆಯಲ್ಲಿ ಬಹುಮಾನ ತೀ.ನಂ.ಶ್ರೀಕಂಠಯ್ಯಗೆ ಹೋಯಿತು. ಅವರು ನನಗಿಂತಲೂ ಮುಂದಿನ ತರಗತಿಯಲ್ಲಿದ್ದರು. ಅಲ್ಲದೇ ಅವ ಕನ್ನಡ ಸಾಹಿತ್ಯ ಮತ್ತು ಭಾಷೆಗಳ ಅರಿವು ನನ್ನದಕ್ಕಿಂತಲೂ ಎಷ್ಟೋ ಪಾಲು ಮೇಲಿನದ್ದಾಗಿತ್ತು.  ಅಲ್ಲದೆ ಅವರು ಆಧುನಿಕ ರೀತಿಯ ಛಂದಸ್ಸಿನಲ್ಲಿ ತಮ್ಮ ಅನುವಾದವನ್ನು ನೆರವೇರಿಸಿದ್ದರು. ಹಸ್ತಪ್ರತಿಯೊಂದರಲ್ಲಿ ಮೂಲೆಗುಂಪಾಗಿ ಬಿದ್ದಿದ್ದ ನನ್ನ ಭಾಷಾಂತರವನ್ನು ಈಗ ಪರಿಶೀಲಿಸಿದಾಗ ನನಗನ್ನಿಸುತ್ತದೆ, ಸಂಪ್ರದಾಯದ ಛಂದಸ್ಸು, ದ್ವೀತಿಯಾಕ್ಷರ ಪ್ರಾಸ ಅಪಕ್ವಭಾಷೆ ಇವೆಲ್ಲವುಗಳ ಬಂಧನ ಮತ್ತು ದೌರ್ಬಲ್ಯಗಳಿಗೆ ಒಳಗಾಗಿದ್ದರೂ, ನನ್ನ ಭಾಷಾಂತರ ಇಷ್ಟರಮಟ್ಟಿಗಾದರೂ ಇದ್ದುದೆ ಆಶ್ಚರ್ಯ ಎಂದು!

ದೇವದೂತರು    

ಭೂತಪತಿ ತಾನಿಂತು ನುಡಿವನು
ದೂತಗಣವನು ಕುರಿತು “ಕಂಡಿರ
ಭೂತಳದ ನರರಳಲ, ಜನನವೆ ತಾನು ಮೊದಲಾಗೆ?
ಯಾತನೆಯನನುಭವಿಸಿ ಬಹುದಿನ,
ಸೋತು ಮೊರೆಯಿಡುವಂತ ಮಾಡಿದೆ
ಓತು ಹರಡಿರಿ ಪೋಗಿ ನೀವಿಳೆಗೆನ್ನ ಶಾಂತಿಯನು.”

ಹರುಷದಿಂದ ವರಾಲಿಸೇಳುತ
ಹರುಷದಾಜ್ಞೆಯ ಶಿರದಿ ಧರಿಸುತ
ಹರುಷದಿಂ ಧರೆಗಿಳಿಯುವತೈಹರಸಗೆ ಕಾರಿಯವ.
ಶಿರದೊಳಾಜ್ಞೆಯನಾಂತು ಪೊರಡುವ
ಪರಮ ಚರರೊಳಗೆನಿತು ಸೇವಕ-
ರರೆ! ದೇವನ ಪದದೊಳೆರಗುತ ಮೋರೆದೋರುವರೊ?

ಕೆಲರು ಕೊಳುಗುಳದೊಳಗೆ ಸಿಲುಕುತ
ಬಳಲಿ ತಲ್ಲಣಗೊಂಡು ಕಂಗೆ-
ಟ್ಟಲೆಯುತಳಿವರು; ಕೆಲರು ಖೈದಿಗಳಾಗಿ ತೊಳಲುವರು!
ಜಲಜ ಬಾಂಧವ ಮುನ್ನ, ಮೃತ್ಯುವು
ಕೆಲರಜೇಯರನಳೆಯುವುದು ನಿಷ್ಕರುಣ ಪಾಶದಲಿ!

ಇರಲು ಪಾಲಿಸುತೊಡೆಯನಾಜ್ಞೆಯ-
ನುರು ಭಯಂಕರ ಕದನ ರಂಗದ
ಕರಿಯ ಧೂಮವ ದಾಂಟಿ ಬಹ ಜಯಶೀಲ ತಾನಾಗಿ
ಹರುಷವದನದಿ ದಿನದ ತುದಿಯೊಳು
ದೊರೆಯ ಮುಂದೈತಂದು ನಿಲ್ಲುವ
ಚರನು ದುಷ್ಕರ! ಅಹಹ ದುಷ್ಕರ! ಅವನೇ ಕೃತಕೃತ್ಯ!

ಇಲ್ಲಿ ಇನ್ನೊಂದು ವಿಷಯದ ಪ್ರಸ್ತಾಪ ಅಪ್ರಕೃತವಾಗಲಾರದು. ಅದು ತೀ.ನಂ.ಶ್ರೀಕಂಠಯ್ಯಗೆ ಇದ್ದ ಅನುಕೂಲ ಮತ್ತು ನನಗೆ ಇದ್ದ ಅನನುಕೂಲವನ್ನು ಕುರಿತದ್ದು. ಅವರು ನನಗಿಂತ ವಯಸ್ಸಿನಲ್ಲಿ ಒಂದೊ ಎರಡೂ ವರ್ಷ ಕಿರಿಯರಾಗಿದ್ದರೂ ನನಗಿಂತಲೂ ಮೇಲಿನ ತರಗತಿಯಲ್ಲಿ ಓದುತ್ತಿದ್ದರು. ಮಕ್ಕಳಿಗೆ ವಿದ್ಯೆ ಕಲಿಸಬೇಕು ಎಂಬ ಭಾವನೆ ಶೂದ್ರವರ್ಗದಲ್ಲಿ ಆಗತಾನೆ  ಬಹು ಪ್ರಯಾಸದಿಂದ ಮೂಡತೊಡಗಿತು.  ಬ್ರಾಹ್ಮಣರಲ್ಲಿಯದರೊ ಮೀನು ನೀರಿಗೆ ಹೊಂದಿಕೊಳ್ಳುವಂತೆ ವಿದ್ಯಾರ್ಜನೆ  ಮಕ್ಕಳಿಗೆ ಅನಿವಾರ್ಯವಾದ ಸಹಜ ವ್ಯಾಪಾರವಾಗಿತ್ತು ನಾನು ಈ ಹಿಂದೆಯೇ ತಿಳಿಸಿರುವಂತೆ, ನಮ್ಮ ಒಂದೆ ಮನೆಯ ಕಾಡುಹಳ್ಳಿಗಳಿಗೆ ಕ್ರೈಸ್ತ ಮಿಷನರಿಗಳು ಬರದೆ ಇದ್ದಿದ್ದರೆ ನನಗೂ ನನ್ನಂತಹ ನೂರಾರು ಮಕ್ಕಳಿಗೂ ವಿದ್ಯಾಭ್ಯಾಸ ಮೊಲದ ಕೊಂಬಾಗುತ್ತಿತ್ತು.  ಶೂದ್ರರು ತಮ್ಮ ಮಕ್ಕಳಿಗೆ ಓದು ಅನಾವಶ್ಯಕವೆಂದು ತಿಳಿದಿದ್ದರು. ಕೆಲವರು ಪಾಪಕರವೆಂದೂ ಕುಲನಾಶನ  ಮಾಡುವಂಥಾದ್ದೆಂದೂ ನಂಬಿದ್ದರು. ಆ ಅವಿವೇಕದ ಅಗ್ನಿಗೆ ಹಾರುವರೂ ತುಪ್ಪ ಹೊಯ್ಯುತ್ತಿದ್ದುದ್ದೇನು ಅಪೂರ್ವವಾಗಿರಲಿಲ್ಲ. ಹೀಗಾಗಿ ಹಾರುವರ ಮಕ್ಕಳು ತುಂಬ ಚಿಕ್ಕವರಾಗಿರುವಾಗಲೇ ಓದು ಬರೆಹ ಕಲಿಯಲು ಶುರು ಮಾಡುತ್ತಿದ್ದರು. ಶೂದ್ರರ ಮಕ್ಕಳೀಗೆ ಉಡಿದಾರ ಹಾಕಿ, ಲಂಗೋಟಿ ಕಟ್ಟುವುದನ್ನು ಕಲಿಸುವುದರಲ್ಲಿಯೆ ಏಳೆಂಟು ವರ್ಷಗಳಾಗುತ್ತಿತ್ತು. ಇನ್ನು ಬತ್ತಲೆ ಬಿಡಿಸಿ ಐಗಳ ಮಠಕ್ಕೆ ಸೇರಿಸುವುದರಲ್ಲಿ, ದನ ಕಾಯುವ ಅಥವಾ ಉಳುವ ಅಥವಾ ಮತ್ತಾವುದಾದರೂ ಕೆಲಸಕ್ಕೆ ಬರುವ ಕೆಲಸದಲ್ಲಿ (ಓದು ಕೆಲಸಕ್ಕೆ ಬಾರದ ಕೆಲಸವಲ್ಲವೆ?) ತೊಡಗುವ ವಯಸ್ಸಾಗುತ್ತಿ‌ತ್ತು.  ಸರಿ, ಇನ್ನು ದುರ್ವಿದ್ಯದೆಗಲ್ಲದೆ ವಿದ್ದೆಗೆಲ್ಲಿ ಅವಕಾಶ?  ಆದ್ದರಿಂದಲೇ ಹಳ್ಳಿಗಾಡಿನ ಶೂದ್ರರ ಮಕ್ಕಳು ಕಾಲೇಜು ಮೆಟ್ಟಲು ಹತ್ತುವುದರಲ್ಲಿಯೆ ಬ್ರಾಹ್ಮಣರು ಮಕ್ಕಳು ಡಿಗ್ರಿ ಪಾಸು ಮಾಡಿ ಅಮಲ್ದಾರರೂ ಆಗಿ ಬಿಡುತ್ತಿದ್ದರು!

ಮತ್ತೊಂದು, ಇಲ್ಲಿಗೆ ಹೆಚ್ಚು ಪ್ರಕೃತವಾದ ವಿಷಯ. ಶ್ರೀಕಂಠಯ್ಯ ಅಂದು  ಕರ್ನಾಟಕದಲ್ಲಿ (ಭಾರತದಲ್ಲಿ ಎಂತೊ ಅಂತೆ). ವಿಶೇಷವಾಗಿ ಬೆಂಗಳೂರು ಮೈಸೂರು ಮಂಗಳೂರು ಧಾರವಾಡ ಮುಂತಾದ ಸಂಸ್ಕೃತ ಮತ್ತು ನಾಗರಿಕತೆಯ ಮುಂಚೂಣಿಯ ಕೇಂದ್ರಗಳಲ್ಲಿ, ಪ್ರಾರಂಭವಾಗಿ ಪ್ರವಹಿಸತೊಡಗಿದ್ದ ಕನ್ನಡ ಸಾಹಿತ್ಯದ ನವೋದಯದ ಹೊನಲಿನಲ್ಲಿ ಹೊಕ್ಕು ಸಂಬಂಧ ಸಂಪಾದಿಸಿ ಬರುತ್ತಿದ್ದವರಾಗಿದ್ದರು.  ನಾನು ಅಂತಹ ಒಂದು ಪ್ರವಾಹದ ಉದಯವನ್ನೇ ಅರಿಯದೆ, ಅದರೊಡನೆ ಯಾವ ಸಂಪರ್ಕವೂ ಇಲ್ಲದೆ, ಆದರಿಂದ ಯಾವ ಪ್ರೋತ್ಸಾಹ ಪ್ರಚೋದನೆಗಳನ್ನೂ ಪಡೆಯದೇ, ಸ್ವತಂತ್ರವಾಗಿ ಏಕಾಂಗಿಯಾಗಿ ಅದರಿಂದ ತುಸು ದೂರದಲ್ಲಿ ಸಮದೂರವಾಗಿಯೆ ಬರುತ್ತಿದ್ದ ಆಗತಾನೆ ಕಾಲೇಜಿಗೆ ಸೇರಿದ ಮೇಲೆ ಅದರ ಕಂತಿಯ ಪರಿವೇಷದ ಅಂಚಿನ ಬಿಸುವನ್ನು ಮಾತ್ರ ಅನುಭವಿಸತೊಡಗಿದ್ದನಷ್ಟೇ! ಆ ವಿಚಾರದಲ್ಲಿ ನನಗೆ ಅದುವರೆಗೆ ಆದರ್ಶವಾಗಲಿ ಮಾರ್ಗದರ್ಶನವಾಗಲಿ ಲಭಿಸಿಯೂ ಇರಲಿಲ್ಲ. ನಾನು ಕನ್ನಡದಲ್ಲಿಯೂ ಬರೆಯತೊಡಗಿ, ಕಾಲೇಜಿಗೆ ಸೇರಿದ ಮೇಲೆಯೇ, ಅಲ್ಲಿ ಕರ್ನಾಟಕ ಸಂಘದ ಸಂಪರ್ಕದ ಪ್ರಭಾವದಿಂದ ಕನ್ನಡದ ನವೋದಯದ ಸುಳಿಗೆ ಸಿಕ್ಕಿ, ಕ್ರಮೇಣ, ಇಂಗ್ಲೀಷಿನಲ್ಲಿ ಬರೆಯುವುದನ್ನು ತ್ಯಜಿಸಿಬಿಟ್ಟೆ.