೧೯೨೬ನೆಯ ಜುಲೈ ೨೫ನೆಯ ಭಾನುವಾರದ ದಿನಚರಿ:        

“ನಮ್ಮ ಲೋಟಸ್ ಲೀಪ್ ಯೂನಿಯನ್ನಿನಲ್ಲಿ ಒಂದು ಚರ್ಚೆ ಏರ್ಪಾಡಾಗಿತ್ತು. ಶ್ರೀ ಕಸ್ತೂರಿ ಅಧ್ಯಕ್ಷತಗೆ ವಹಿಸಿದ್ದರು.  ಸ್ವಾಮಿ ಸಿದ್ದೇಶ್ವರಾನಂದರೂ ಆಗಮಿಸಿದ್ದರು.*

[ಇಷ್ಟು ಸಂಕ್ಷೇಪವಾಗಿ ನಿರ್ಭಾವಾಗಿ ಉದಾಸವಾಗಿ ಉಲ್ಲೇಖಗೊಂಡಿರುವ ಮೇಲಿನ ದಿನಚರಿಯಲ್ಲಿ ಒಕ್ಕಣಿಸಿರುವ ಆ ಘಟನೆ ನಿಜವಾಗಿಯೂ ನನ್ನ ಜೀವಿತದ ಒಂದು ಮಹತ್ ಸಂಧಿಕಾಲವನ್ನು ಹತ್ತಿರಹತ್ತಿರಕ್ಕೆ ಬರಸೆಳೆಯುತ್ತಿದ್ದ ಸುದೈವ ಹಸ್ತಸದೃಶವಾಗಿದೆ.  ಪದ್ಮಪತ್ರ ಸಂಘದ ಕಾರ್ಯಕ್ರಮಗಳೆಲ್ಲ  ನಡೆಯುತ್ತಿದ್ದುದು ಮನ್ನಾರ ಕೃಷ್ಣಶೆಟ್ಟಿ ಹಾಸ್ಟೆಲಿನಲ್ಲಿ., ಈ ಚರ್ಚೆ ಅದರ ಉಪ್ಪರಿಗೆಯ ಒಂದು ಹೆಗ್ಗೋಟಡಿಯಲ್ಲಿ ನಡೆಯಿತು. ಶ್ರೀ ಕಸ್ತೂರಿಯವರನ್ನೇನೊ ನಾವು ಅಧ್ಯಕ್ಷತೆ ವಹಿಸಲು ಕೇಳಿಕೊಂಡಿದ್ದೆವು.  ಆದರೆ ಸ್ವಾಮಿ ಸಿದ್ದೇರ್ಶವರಾನಂದರೂ ಅನಾಹೂತರಾಗಿದ್ದರೂ ಬಂದಿದ್ದರು.  ಸಾಮಾನ್ಯವಾಗಿ ನಾವು ಆಹ್ವಾನವಿಲ್ಲದೆ ಅಂತಹ ಸಭೆಗಳಿಗೆ ಹೋಗುವುದಿಲ್ಲ-ಅದೇನು ಸಾರ್ವಜನಿಕ ಸಭೆ ಆಗಿರಲಿಲ್ಲ. ಹಾಗೆ ಹೋಗುವುದು ನಮ್ಮ ಪ್ರತಿಷ್ಠೆಗೆ ಕುಂದು ಎಂದು ಭಾವಿಸುತ್ತೇವೆ. ಆದರೆ ಸ್ವಾಮಿ ಸಿದ್ದೇರ್ಶವರಾನಂದರು- ನಾನು ಮುಂದೆ ಚೆನ್ನಾಗಿ ಅರಿತಂತೆ -ಅಹಂಕಾರ ಗಿಹಂಕಾರ, ಪ್ರತಿಷ್ಟೆ ಗಿತಿಷ್ಟೇಗಳನ್ನೆಲ್ಲ ದಾಟಿ ಮೀರಿ ನಿಂತಿದ್ದರು! ಅವರು ಸಿಂಹಾಸನಾಧೀಶರೊಡನೆಯೂ ಗ್ರಾಮೀಣ ದರಿದ್ರ ಸಾಮಾನ್ಯರೊಡನೆಯು ಏಕರೀತಿಯಾದ ಗೌರವ ವಿಶ್ವಾಸಗಳಿಂದ ವರ್ತಿಸುತ್ತಿದ್ದರು.  ಸ್ವತಃ ತಾವೇ ರಾಜಮನೆತನಕ್ಕೆ ಸೇರಿದವರಾಗಿದ್ದರೂ ಅವರನ್ನು ನೋಡಿದವರಾರೂ ಹಾಗೆಂದು ಊಹಿಸಲು ಸಾಧ್ಯವಗುತ್ತಿರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯನೆಂಬಂತೆ ತಮ್ಮ ವ್ಯಕ್ತಿತ್ವವನ್ನೆಲ್ಲ ಅಳಿಸಿಕೊಂಡಿದ್ದರವರು! ಮುಂದೆ, ಮೂವತ್ತು ನಾಲ್ಕು ವರ್ಷಗಳ ತರುವಾಯ ಅವರು ಫ್ರಾನ್ಸ ದೇಶದಲ್ಲಿ ಇಪ್ಪತ್ತು ವರ್ಷ ಶ್ರೀರಾಮಕೃಷ್ಣ ವಿವೇಕಾನಂದ ಸಂಸ್ಥೆಗೆ ಸೇವೆ ಸಲ್ಲಿಸಿದ ಅನಂತರ, ೧೯೫೭ರಲ್ಲಿ ಮಹಾಸಮಾಧಿನ್ನೈದಿದ ಮೂರು ವರ್ಷಗಳ ಮೇಲೆ ೧೯೬೦ರಲ್ಲಿ ಅವರನ್ನು ನೆನೆದು ನಾನು ‘ಕೃತಜ್ಞತೆ’ ಎಂಬ ಕವನವನ್ನು ರಚಿಸಿದೆ  ಅದರಲ್ಲಿ ಅವರನ್ನು ಕುರಿತು ಹೀಗೇ ಹಾಡಿದ್ದೇನೆ.

ಮಾನ್ಯರಲ್ಲಿ ಪರಮ ಮಾನ್ಯ;
ಸಾಮಾನ್ಯರಲ್ಲಿ ಸಾಮಾನ್ಯ;
ನಿಮ್ಮ ಕೃಪೆಯಾಳಾದೆ ಧನ್ಯ:
ನಿಮ್ಮ
ನೆನೆವುದೆನಗೆ ಪೂಜನ!

‘ಕೃತಜ್ಞತೆ’ ಎಂಬ ಕವನ ‘ಕುಟೀಚಕ’ ಕವನ ಸಂಗ್ರಹದಲ್ಲಿದೆ. ಆದರೆ ಇಂದು ಆ ಘಟನೆಯನ್ನು ಕುರಿತು ಆಲೋಚಿಸುತ್ತಿರುವ ನನಗೆ ಬೇರೊಂದು ಅರ್ಥವು ಹೊಳೆಯುತ್ತಿದೆ.  ಅವರು ಅನೇಕ ವರ್ಷಗಳ ತರುವಾಯ, ನಾನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ , ಫ್ರಾನ್ಸಿನಿಂದ ಬಂದ ಒಂದು ಕಾಗದದಲ್ಲಿ ಅಲ್ಲಿಯ ಒಬ್ಬ ತತ್ವಜ್ಞ ಲೇಖಕನ ವಿಚಾರವಾಗಿ ತಿಳಿಸುತ್ತಾ ಮೈಸೂರಿನಲ್ಲಿ ಶ್ರೀ ರಾಮಕೃಷ್ಣಾಶ್ರಮ ಪುಟ್ಟಪ್ಪನನ್ನು ಕಂಡುಹಿಡಿದು ಬೆಳಕಿಗೆ ತಂದಂತೆ ಫ್ರಾನ್ಸಿನಲ್ಲಿರುವ ಶ್ರೀ ರಾಮಕೃಷ್ಣ ವೇದಾಂತ ಕೇಂದ್ರವು ಆ ಲೇಖಕನನ್ನು ಕಂಡುಹಿಡಿದಿದೆ! ಎಂದು ಬರೆದಿದ್ದರು. ‘ಕಂಡು ಹಿಡಿದು ಬೆಳಕಿತೆ ತರುವುದು’ ಎಂಬುವಕ್ಕೆ ಲೌಕಿಕವಾಗಿ ಅರ್ಥವಿರುವಂತೆ, ಅದಕ್ಕಿಂತಲೂ ತಲಸ್ಪರ್ಶಿಯಾಗಿ, ಆಧ್ಯಾತ್ಮಿಕವಾಗಿಯೂ  ಅರ್ಥವಿರುತ್ತದೆ.  ಬಹುಶಃ ಆ ಆಧ್ಯಾತ್ಮಿಕ ಅರ್ಥವೇ ಹೆಚ್ಚು ಸಾರ್ಥಕವಾದದ್ದು ಎಂದು ಹೇಳಬಹುದು.  ಹಾಗೆ ಕಂಡು ಹಿಡಿದು ಬೆಳಕಿಗೆ ತರುವ ಭಗವತ್ ಕೃಪೆಯ ಲೀಲೋಪಾಂಗವಾಗಿತ್ತಲ್ಲವೆ ಚಚಾಕೂಟದಲ್ಲಿ ಪ್ರಧಾನ ಭಾಗವಹಿಸಿದ ನಾನು ಸ್ವಾಮೀಜಿಯ ಮೆಚ್ಚುಗೆಗೂ ಗೌರವಕ್ಕೂ ವಿಶೇಷವಾಗಿ ಪಾತ್ರನಾಗಿದ್ದೆ.  ಆಗಿನ ವಾಡಿಕೆಯಂತೆ ಚರ್ಚೆಯೆಲ್ಲ ಇಂಗ್ಲೀಷಿನಲ್ಲಿಯೆ ನಡೆದಿತ್ತು. ನಾನೇ ಪ್ರ ಪ್ರಥಮ ವಾದಿ ಪಕ್ಷದ ಭಾಷಣಕಾರನಾಗಿದ್ದೆ. ಕಾರ್ಯಕ್ರಮ ಪ್ರಾರಂಭವಾದದ್ದೂ ನನ್ನ ‘ಕರ್ಣಾಟಕ ರಾಷ್ಟ್ರಗೀತೆ’ಯಿಂದಲೆ. ಅದನ್ನೂ ನಾನೆ ತುಂಬು ಕಂಠದಿಂದ ಹಾಡಿ ಸಭೆಯನ್ನು ಹರ್ಷೊಲ್ಲಾಸಕ್ಕೆ ಹೊಡೆದೆಬ್ಬಿಸಿದ್ದೆ! ಭಾಷಣದ ಪ್ರಾರಂಭದಲ್ಲಿ ನೆನಪಿನಿಂದಲೇ ಸ್ವಾಮಿ ವಿವೇಕಾನಂದರ ಭಾಷಣ ಭಾಗಗಳನ್ನು ನಿರರ್ಗಳವಾಗಿ ಅಸ್ಖಲಿತವಾಣಿಯಿಂದ ಉದಾಹರಿಸುತತಾ ನನ್ನ ವಾದವನ್ನು ಸಮರ್ಪಕವಾಗಿ ಸಮರ್ಥಿಸಿದ್ದೆ.  ನಾನು ತಮಗೆ ಸೇರಿದವನು ಎಂಬ ವಿಚಾರದಲ್ಲಿ ಅಂದು ಸ್ವಾಮಿ ಸಿದ್ದೇಶ್ವರಾನಂದರಿಗೆ ನಿಶ್ಚಿತ ಸಾಕ್ಷಿ ದೊರೆಯಿತೆಂದು ತೋರುತ್ತದೆ. ಹಾಗಲ್ಲದಿದ್ದರೆ, ಮುಂದೆ ಎರಡು ಮೂರು ತಿಂಗಳೊಳಗಾಗಿ ಯಾವುದು ನಡೆಯಿತೋ ಅದು ನಡೆಯಲು ಸಾಧ್ಯವಿರುತ್ತಿರಲಿಲ್ಲ!]

ಆ ಚರ್ಚಾಕೂಟ ನಡೆದ ದಿನವೇ  ೨೫ನೆಯ ಜುಲೈ ೧೯೨೬ರಲ್ಲಿ ಎರಡು ಶಿಶುಗೀತೆಗಳನ್ನು ಬರೆದಿದ್ದೇನೆ: ‘ಗುರು’ ಮತ್ತು ‘ಗೆದ್ದೆನು’!, ಅವೆರಡೂ ‘ನನ್ನ ಮನೆ’ ಮತ್ತು ‘ಮರಿ ವಿಜ್ಞಾನಿ’ ಎಂಬ ಮಕ್ಕಳ ಪದ್ಯ ಸಂಗ್ರಹಗಳಲ್ಲಿ ಅಚ್ಚಾಗಿವೆ.  ಗಮನಿಸಬೇಕಾದುದೆಂದರೆ, ಚರ್ಚಾಕೂಟ ಇತ್ಯಾದಿ ಗುರುಕರ್ಮಗಳ ಜೊತೆಜೊತೆಗೆ ಕವಿಮನಸ್ಸು “ಸಂಪಗೆ ಹೂವನು ಸಂಪಗೆ ಹೂವೆಂದೇತಕೆ ಕರೆವರು ಹೇಳಮ್ಮಾ?” ” ಅವ್ವಾ ಅಪ್ಪನ ನೀನೇಕೆ ಅಪ್ಪಾ ಎನ್ನುವುದಿಲ್ಲವ್ವಾ?” ಎಂಬಂತಹ ಸರಳ ಶಿಶು ಹೃದಯಗಾಮಿಯಾದ ಸ್ತರಗಳಲ್ಲಿಯೂ ಆಟವಾಡುತ್ತಾ ಮುಗ್ದತೆ ವಿದಗ್ದತೆಗಳೆರಡನ್ನೂ ಸಮತೋಲನವಾಗಿ ವಿಹರಿಸುತ್ತಿತ್ತು!

ಇಪ್ಪತ್ತಾರನೆಯ ತಾರಿಖಿನ ದಿನಚರಿ ಖಾಲಿಯಾಗಿದೆ. ಇಪ್ಪತ್ತೇಳನೆಯ ತಾರೀಖಿನಲ್ಲಿ ‘ಮೋಡಣ್ಣನ ತಮ್ಮದ’ ಕೆಲವು ಭಾಗ ಬರೆದೆ ಎಂದಿದೆ.

೧೯೨೬ನೆಯ ಜುಲೈ ೨೮ನೆಯ ಬುಧವಾರದ ದಿನಚರಿ            
“ತತ್ವಶಾಸ್ತ್ರ ಸಂಘದ ಕಾರ್ಯದರ್ಶಿಯಾಗಿ ನಾನು ಆಯ್ಕೆಗೊಂಡೆ (I Was seleted as the Secretary for the Philosophical Association) ‘ಮೋಡಣ್ಣನ ತಮ್ಮ’ದ ಸ್ವಲ್ಪ ಭಾಗ ಬರೆದು  ಅನಂತರ ತಿರುಗಾಡಲು ಹೋದೆ”.

೧೯೨೬ನೆಯ ಜುಲೈ ೨೯ನೆಯ ಗುರುವಾರದ ದಿನಚರಿ:                      
“ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ನನ್ನ ಕೆಲವು ಭಾವಗೀತೆಗಳನ್ನು ಹಾಡಿದೆ.  ಮತ್ತು ಜೈಮಿನಿ ಭಾರತದಿಂದಲೂ ಕೆಲವು ಪದ್ಯಗಳನ್ನು… ಎಚ್.ಎಸ್. ರಾಮಯ್ಯ ಬಂದರು. ಅವರಿಗೆ ನನ್ನ ‘Philosophy of silence’ ಅನ್ನೂ ಮತ್ತು ಮೋಡಣ್ಣನ ತಮ್ಮ ಮಕ್ಕಳ ನಾಟಕವನ್ನೂ ಇತರ ಕನ್ನಡ ಭಾವಗೀತೆಗಳನ್ನೂ ಓದಿದೆ”*

* ಇಲ್ಲಿಗೆ ದಿನಚರಿ ನಿಂತು ಹೋಗಿದೆ. ಆದರೆ ನನ್ನ ಕವನಗಳನ್ನು ಪ್ರತಿಯೆತ್ತಿರುವ ಹಸ್ತಪ್ರತಿಯಲ್ಲಿ ಭಾವಗೀತೆಗಳ ಕೆಳಗೆ ನಮೂದಿಸಿರುವ ತಾರೀಖುಗಳನ್ನು ಗಮನಿಸಿದರೆ, ಆಶ್ರಮಕ್ಕೆ ಮತ್ತೆ ಮತ್ತೆ ಹೋಗಿ, ಸ್ವಾಮಿ ಸಿದ್ದೇಶ್ವರಾನಂದರೊಡನೆ ಮಾಡುತ್ತಿದ್ದ ವಿಚಾರ ವಿನಿಮಯದ ಸ್ಪೂರ್ತಿಯ ಪ್ರಭಾವ ಚೆನ್ನಾಗಿ ಮುದ್ರಿತವಾಗಿರುವುದು ಕಂಡುಬರುತ್ತದೆ. ಪ್ರಾರ್ಥನೆಗಳಲ್ಲಿ, ವೀರಗೀತೆಗಳಲ್ಲಿ, ದೇಶಭಕ್ತಿಯ ಕವನಗಳಲ್ಲಿ ವೇದಾಂತ ಸಂಬಂಧಿಯಾದ ಶಬ್ದ ಪ್ರಯೋಗಗಳು ಹೆಚ್ಚು ಹೆಚ್ಚಾಗಿ ಅಲ್ಲದೆ, ನಾ. ಕಸ್ತೂರಿಯವರು ಆಶ್ರಮಕ್ಕೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ಒಟ್ಟು ಹಾಕಿ ‘ವಿವೇಕಾನಂದ ರೋವರ ಸ್ಕೌಟ್’ ಎಂಬ ದಳವನ್ನು ರಚಿಸಿ, ಅದರ ಚಟುವಟಿಕೆಗಳಲ್ಲಿ ನಾನೂ ಅನಧಿಕೃತವಾಗಿ ಭಾಗವಹಿಸುವಂತೆ ಮಾಡುತ್ತಿದ್ದುದರ ಪ್ರಭಾವವೂ ಕೆಲವು ಕವನಗಳಲ್ಲಿದೆ. ‘ಮೋಡಣ್ಣನ ತಮ್ಮ’ ಎಂಬ ಮಕ್ಕಳ ನಾಟಕದಲ್ಲಿಯೂ ಸ್ವಾಮಿ ವಿವೇಕಾನಂದರ ಭಾಷಣಗಳ ಮತ್ತು ವೇದಾಂತದ ಪ್ರಭಾವ ಎದ್ದು ಕಾಣುತ್ತದೆ. ಆ ನಾಟಕವನ್ನು ಕಸ್ತೂರಿಯವರು ವಿವೇಕಾನಂದರ ರೋವರ‍್ ದಳದವರ ಒಂದು ಸಮಾರಂಭದಲ್ಲಿ ಮಕ್ಕಳ ಕೈಯಿಂದಲೇಆಡಿಸಿ, ಅದು ತುಂಬಾ ಮೆಚ್ಚಿಗೆ ಪಡೆದದ್ದು ನನಗೆ ನೆನಪಿದೆ.  ೫-೬-೧೯೨೬ರಲ್ಲಿ ರಚಿತವಾಗಿರುವ ‘ ಶ್ರೀ ವಿವೇಕಾನಂದ ಬಾಲಚಾರರ ಹಾಡು’ ಆ ರೋವರ‍್ ಸ್ಕೌಟುಗಳ ‘ದಳದ ಗೀತೆ’ಯಾಗಿಯೆ ಹುಟ್ಟಿತ್ತು. ಅದನ್ನೂ ಮತ್ತು ಆ ಕಾಲಮಾನದಲ್ಲಿಯೆ ರಚಿತವಾಗಿ ಇದುವರೆಗೂ ಎಲ್ಲಿಯೂ ಪ್ರಕಟವಾಗದಿದ್ದ ಕೆಲವು ಕವನಗಳನ್ನು ಇಲ್ಲಿ ಕೊಡುತ್ತೇನೆ’:

ಶ್ರೀ

ವಿವೇಕಾನಂದರ ಬಾಲಚಾರರ ಹಾಡು
ಬಾರತೀಯ ಬಾಲಕರು ನಾವುಗಳು ಬನ್ನಿ!
ಭಾರತೀಯ ಸೇವೆಯೆಂಬಾರತಿಯ ತನ್ನಿ!
ಭಾಋತಿಯ ಮೂರುತಿಗೆ ಮಂಗಳಂ ಎನ್ನಿ!
ಮಂಗಳಂ ! ಮಂಗಳಂ! ಮಂಗಳಂ, ಮಾತೆ!

ದಿವ್ಯಯೋಗಿವಯೃ ವಿನುತ ಪುಣ್ಯಮಾತೆಯೆ,
ತ್ಯಾಗಿ ಮೌನಿವೃಂದ ವಂದಿತಮಲ ಮೂರ್ತಿಯೆ,
ನಿನ್ನ ಪೂರ್ವ ಜ್ಯೋತಿಯು
ಪುನಃ ಥಳಿಸಿ ಮೆರೆಯಲಿ,
ನಿನ್ನ ಮರವಾಣಿ ಮತ್ತೆ ಗಗನಕೇರಲಿ!

ಎಲ್ಲಿ ಹೋದರಲ್ಲಿ ನಾವು ನಿನ್ನ ನೆನೆವೆವು!
ನೀನೆ ನಮ್ಮ ದಿವ್ಯಧಾಮ, ಪುಣ್ಯ ಭೂಮಿಯೆ.
ನಿನ್ನ ನದಿಗಳೆಮ್ಮವು,
ನಿನ್ನ ಗಿರಿಗಳೆಮ್ಮವು,
ಪಕ್ಷಿಕೋಟಿಯುಲಿವ ನಿನ್ನ ವನಗಳೆಮ್ಮವು!

ಸರ್ವ ದೇಶಗಳಲ್ಲಿ ನಿನ್ನ ಜ್ಯೋತಿಕೇತನ
ಪ್ರೇಮಕಾಂತಿಯನ್ನು ಬೀರಿ ಬೆಳಗಲೆಂದಿಗೂ,
ನೀನೆ ಭೂಮಿದೇವಿಗೆ
ಶಾಂತರಾತ್ಮವಾಗಿಹೆ;
ನೀನೇ ಸರ್ವ ವಿದ್ಯೆಗಳಿಗೆ ಮೂಲಪೀಠವು!

ಮತಗಳೆಲ್ಲ ನಿನ್ನ ಹೃದಯ ದೇವನಿಲಯದಿ
ತಮ್ಮ ವಿಷವನುಳಿದು ಬಂದು ಪೂಜೆಗೈಯಲಿ;
ನಿನ್ನ ಪದಕೆ ಪಲ್ಲವಿ
‘ಶಾಂತಿ’ ಎಂಬುದಾಗಲಿ!
ದ್ವೇಷವುಳಿದು ರಾಗ ಉಳೀದು ಶಾಂತಿ ನೆಲೆಸಲಿ!

ದೇಶಕೋಟಿ ಉದಿಸಿ ಬೆಳೆದು ಬೆಳಗಿ ಅಳಿದುವು;
ದೇವಿ ಭಾರತಾಂಬೆ, ನೀನು ನಿತ್ಯಳಾಗಿಹೆ.
ಅಂಗೆ ಆಗಲೆಂದಿಗೂ
ಮುಂದೆ ನಿತ್ಯಪುತ್ರಿಯೆ.
ಸರ್ವ ದೇವಗಣದ ಕೃಪೆಗೆ ಪಾತ್ರಳಾಗಿರೌ!

ತಾಯೆ, ನಿನ್ನ ಸೇವೆಗೈವುದಾತ್ಮ ಮುಕ್ತಿಯು,
ಪಾವನತೆಯೊಳಹುದು ಎಮ್ಮ ಆತ್ಮಶಕ್ತಿಯು,
ಭೀತಿಯಿಲ್ಲದಿರುವುದೇ
ಎಮ್ಮ ದಿವ್ಯ ಪೂಜೆಯು:

ಬ್ರಹ್ಮಚರ‍್ಯವೆಮ್ಮಯೋಗ, ಭಾರತಾಂಬೆಯೆ!
ನಿನ್ನ ನಾನು ಅಮೃತಸದೃಶ ಎಮಗೆ, ದೇವಿಯೆ,
ನಿನ್ನ ನೀಲಗಗನ ಎಮಗೆ ದೇವಗೋಪುರ,
ನಿನ್ನ ಸೂರ್ಯ ಚಂದ್ರರ
ಉದಯ ನಮಗೆ ರಮ್ಯವು.
ನಿನ್ನದೆಂಬುದೆಲ್ಲ ನಮಗೆ ಅತಿ ಪವಿತ್ರವು!

ನಿನ್ನವೀರಪುತ್ರರಾವು ಭಾರತೀಯರು:
ನಿನ್ನ ಸೇವೆಗೈವೆವೆಂದೂ ದೇವಮಾತೆಯೆ.
ನಿನ್ನದೆಮ್ಮ ಕಾಯವು,
ನಿನ್ನದೆಮ್ಮ ಜೀವವು ;
ನಿನ್ನನುಳಿದು ದೇವರಿಲ್ಲ, ಭಾರತಾಂಬೆಯೆ!

ಶ್ರೀ ವಿವೇಕರಮಲ ದಳವ ಬಾಲಚಾರರು,
ದೇವಿ, ನಾವು ನಿನ್ನ ಭಜಿಪ ತರುಣವೀರರು!
ಶ್ರೀ ವಿವೇಕರಂದದಿ
ನಿನ್ನ ಸೇವೆಗೈವೆವು,
ಶ್ರೀವಿವೇಕ ನಮಿತಪಾದೆ ಭಾರತಾಂಬೆಯೆ!
೫-೯-೧೯೨೬

೧೯೨೬ನೆಯ ಅಗಸ್ಟ್ ೫ರಲ್ಲಿ ಬರೆದ ಈ ಹಾಡು ಸ್ವಾಮಿ ವಿವೇಕಾನಂದರ ‘ಅಭೀಃ’ ಸಂದೇಶದಿಂದ ಪ್ರೇರಿತವಾಗಿದೆ.

ಭಯಪಡಬೇಡ- ಇಲ್ಲ ಅಪಾಯ!
ಜಯಿಸಲು ನಿನಗೆ- ಇಹುದು ಉಪಾಯ !||ಪ||

ಈ ಜಗದಾಯ- ದೇವನ ಮಾಯಾ:
ಸೋಜಿಗವರಿಯೆ-ಪೋಪುದು ಗಾಯ!

ಹಾದಿಯು ಕರ್ಮ -ಸಾಧನ ಧರ್ಮ!
ವೇದಗಳೆಲ್ಲಾ- ಭೋಧಿಪ ಮರ್ಮ!

ಮುಕ್ತಿಯೆ ಭುಕ್ತಿ- ಭುಕ್ತಿಯೆ ಮುಕ್ತಿ
ಎಂಬುವ ಯುಕ್ತಿ-ಅರಿಯೆ ವಿರಕ್ತಿ!

ತ್ಯಾಗದಿ ಭೋಗ-ಭೋಗದಿ ತ್ಯಾಗ
ಇದನರಿವುದೆ ತಾ- ನೆಂಬುದು ಯೋಗ!
೫-೮-೧೯೨೬

ಮುರದಿನವೆ ಬರೆದೆ ಮತ್ತೊಂದು ಗೀತವು ‘ಎದ್ದೇಳು’ ಎಂಬ ಕೆಚ್ಚನ್ನು ಕೆರಳಿಸುವ ಮಾತಿನಿಂದಲೇ ಮೊದಲಾಗುತ್ತದೆ.

ಎದ್ದೇಳು ಎದ್ದೇಳೂ!
ಬಿದ್ದಿರುವೆ ಏಕೆ?
ನಿದ್ದೆಯಿಂದೆದ್ದೇಳು
ಮೊದ್ದುತನಕವೇಕೆ? ||ಪ||

ಭಯರಹಿತ ನೀನು!
ಲಯಹಿತ ನೀನು!
ಬುದ್ಧಾತ್ಮನಲ್ಲ,
ಶುದ್ದಾತ್ಮ ನೀನು!

ದಾಸ ನೀನಲ್ಲ!
ಈಶಣೊ ನೀನು!
ಮೂಷಿಕವು ಅಲ್ಲ,
ಕೇಸರಿಯೊ ನೀನು

ಪಾಪ ನಿನಗಲ್ಲ!
ಪುಣ್ಯ ನಿನಗಲ್ಲ!
ಎಲ್ಲವನು ಮೀರ
ಬಲ್ಲ ನೀ ಧೀರ!
೬-೮-೧೯೨೬

ಆ ಕಾಲದ ಕವಿತೆಗಳೆಲ್ಲ ಇತರರನ್ನು ಕುರಿತವುಗಳಲ್ಲ. ಅವು ನನ್ನ ಚೇತನ ತನಗೆ ತಾನೇ ಹೇಳಿಕೊಂಡವು. ನನ್ನಾತ್ಮದಲ್ಲಿ ಜರುಗುತ್ತಿದ್ದ ಹೋರಾಟ ಒಳತೋಟಿಗಳಿಗೆ ನನ್ನ ಅಂತರಾತ್ಮನ ಪ್ರತಿಕ್ರಿಯೆಗಳು: ಸೋತಾಗ ಹೆದರಬೇಡ ಏಳು ಎಂದು ಧೈಯೃ ಹೇಳುತ್ತದೆ; ಅಪಾಯವನ್ನು ದಾಟಲು ಉಪಾಯವಿದೆ ಎಂದು ಬೆನ್ನು ತಟ್ಟಿ ಹುರಿದುಂಬಿಸುತ್ತದೆ; ತಾಯಿ ಇದ್ದಾಳೆ, ಕೈ ಹಿಡಿದು ನಡೆಸುತ್ತಾಳೆ, ಹೃತ್ಪೂರ್ವಕವಾಗಿ ಪ್ರಾರ್ಥಿಸು ಎಂದು ಉಪದೇಶಿಸುತ್ತದೆ. ಸಂದೇಹ ಬೇಡ ಶ್ರದ್ದೆಯಿರಲಿ ಎಂದು ಆದೇಶ ನೀಡುತ್ತದೆ; ನಿನಗೆ ಕೇಡಿಲ್ಲ, ನೀನು ತಾಯಿಯ ಮಡಿಲಲ್ಲಿ ಮಲಗಿರುವ ಮಗು, ನಿನ್ನ ಪಾಪಗೀಪಗಳೆಲ್ಲ ನೀನು ಕಾಣುತ್ತಿರುವ ಕೆಟ್ಟ ಕನಸುಗಳು, ನೀನು ಬೆಚ್ಚಿ ಕುಮುಟಿದಾಗ ತಾಯಿ ಎಚ್ಚರಿಸುತ್ತಾಳೆ, ಆಗ ಅವಳ ಮಡಿಲಲ್ಲಿಯೆ ಮಲಗಿರುವ ನೀನು ನಗುತ್ತಿಯೆ! ಇತ್ಯಾದಿ, ಇತ್ಯಾದಿ:

ಕೋರಿಕೆ ಇದು ಮಧುರವು, ಹೇ ದೇವ, ||ಪ||
ತೋರುವೆ ನಿನ್ನಾದರ್ಶನವೆಂಬ       ||ಅ||

ಗೂಢಾರ್ಥವ ನಾನರಿಯಲು ಆರದೆ
ಮೂಢನು ನಾನಾಗಿರಬಹುದು;
ವಿದ್ಯೆಯನರಿಯದ ವಿದ್ಯೆಯಲೆಂದಿಗು
ಬಿದ್ದಿರಬಹುದಾದರೂ ನಾನು…

ಮಾಯಾತೀತಾನಂದವ ಹೊಂದಲು
ಬಾಯ ಬರಿದೆ ನಾ ಬಿಡಬಹುದು;
ಜನುಮ ಜನುಮಗಳ ತಳೆಯುತ ಕಳೆಯುತ
ಅನುಮಾನಿಪುದಾದರು ನಾನು…

ಸಿದ್ಧರ ಗುರುಗಳ ಋಷಿಗಳ ನುಡಿಯೊಳು
ಬುದ್ಧಿಯು ಸಂಶಯವಿಡಬಹುದು;
ದೂರವೊ ಮಾಯೆಯೋ ಮುಕ್ತಿಯ ಶಾಂತಿಯು?
ಕೋರಿಕೆ ಕೊನೆಯಸಮಾಧಾನ!
೬-೮-೧೯೨೬

ಬೇಡದೆಯೆ ಕೊಡುವವನು ನೀನು, ಆದ್ದರಿಂದ ನಾನು ಬೇಡುವುದು ನಾಚಿಕೆಗೇಡಿನ ಕೆಲಸ ಎಂದುಕೊಂಡೇ ಬೇಡುವ ಒಂದು ರೀತಿಯದು ಈ ಕೆಳಗಿನಕವಿತೆ:

ಬೇಡಲು ನಿನ್ನನು ನಾಚಿಕೆ ಎನಗೆ:
ಬೇಡುವುದೇನನು, ತಿಳಿದಿರೆ ನಿನಗೆ? ||ಪ||

ಬೇಡವು ನಿನ್ನನು ಕಾಡು ಕುಸುಮಗಳು
ನೀಡೆಂದನಿಲೋದಕಗಳನು;
ಬೇಡವು ನಿನ್ನನನು ವಿಪಿನ ವಿಹಂಗಮ
ಗಾಡಿ ವಾಣಿಗಳ ನೀಡೆಂದು…

ಪಡೆದರೆ ಬೇಡಿಯೆ ಸೂರ್ಯನು ಕಾಂತಿಯ,
ಬೆಡಗಿನ ನಭ ಸಿರಿತಾರೆಗಳ?
‘ಕೊಡು ಕೊಡು’ ಎಂದರೆ ಗಾವಿಲನಾಗುವೆ,
ಪಡೆಯಲು ದಾಸ್ಯವು ಬಲು ಹೀನ…

ಎಲ್ಲೊ ಮೂಲೆಯಕಾಡಿನೊಳುದಯಿಪ
ಹುಲ್ಲಿನ ಕೊರತೆಯ ಬೇಡದೆಯೆ
ಸಲ್ಲಿಸುವಾತನು ನೀನಹೆ, ದೇವನೆ:
ಒಲ್ಲೆನು ಬೇಡಲು ನಾ ನಿನ್ನ!…
೧೧-೮-೧೯೨೬

ಚೇತನದ ಕೀಳುತನವನ್ನು ಕಿತ್ತೊಗೆದು, ಜೀವನ ವಿಕಾಸ ಪಥದಲ್ಲಿ ಮುಂದುವರೆಯುವಂತೆ ಅನುಗ್ರಹಿಸು ಎಂದು ಪ್ರಾರ್ಥಿಸುತ್ತದೆ  ಕೆಳಗಿನ ಕವನ:

ಕೀಳುತನವನು ದಹಿಸು ಮನದೊಳಿಹ ಎನ್ನ,
ಬಾಳು ಬೆಳಗಲಿ, ದೇವ, ಬೆಳಕಿಣದ ನಿನ್ನ! ||ಪ||

ಹೃದಯವರಳಲಿ ಎನ್ನ, ಉದಯ ಸುಮದಂತೆ;
ಮುದವ ಬೀಳಲಿ ನಿನ್ನ, ಮಂಜು ಹನಿಯಂತೆ,
ಉದಯದೆಲರಂದದಲಿ ಕೃಪೆಯೆಲರು ನಿನ್ನ
ಮೃದುವಾಗಿಚುಂಬಿಸಲಿ ಜೀವನವು ಎನ್ನ…

ಪೊರೆ ಎನ್ನನವಿಕಾಸವೆಂಬ ಸೆರೆಯಿಂದ
ಬರಲೆನಗೆ ಅರಳಿಕೆಯ ಗಂಧಾದಾನಂದ!
ಅರಳದಿರುವುದೆ, ದೇವ, ಸಂಸಾರ ಬಂಧ;
ಅರಳೈತರುವುದೈ ಮುಕುತಿಯಾನಂದ !…
೧೨-೮-೧೯೨೬

ಮನಸ್ಸು ಲೌಕಿಕ ಮತ್ತು ಐಂದ್ರಿಯಗಳಿಂದ ಸಂಪೂರ್ಣವಾಗಿ ಪಾರಾದಾಗ ಉಂಟಾಗುವ ಆ ಶೂನ್ಯವನ್ನು ಆಕ್ರಮಿಸಿ ತುಂಬುತ್ತದೆ ದಿವ್ಯ ಪೂರ್ಣತೆ ಎಂಬ ಭಾವವನ್ನು ಪ್ರತಿಮಿಸುತ್ತದೆ ಈ ಕೆಳಗಿನ ಕೃತಿ:

ಕುರುಡರು ನಿನ್ನನ್ನು ನೋಡುವರು;
ಕಿವುಡರು ನಿನ್ನನ್ನು ಕೇಳುವರು! ||ಪ||

ಅವರ ಕಂಗಳನು- ಭುವಿಯ ವಸ್ತುಗಳು
ಮೋಹಿಸಿ ಬಂಧಿಸಲಿಲ್ಲ;
ಅವರ ಕಿವಿಗಳನು-ಭುವಿಯ ರಾಗಗಳು
ಮೋಹಿಸಿ ಎಳೆತರಲಿಲ್ಲ…

ಅವರು ನಯನಗಳ- ಸೂನ್ಯಮಾಗಿರಿಸೆ
ಅವುಗಳ ತುಂಬವೆ ನೀನು!
ಅವರ ಕರ್ಣಗಳೂ- ರವರಹಿತಮಾಗೆ
ಅವುಗಳುಲಿಯುವೆ ನೀನು!…
೧೩-೮-೧೯೨೬

ಜೀವ ತನ್ನನ್ನು ತಾನು ಸಮರ್ಪಿಸಿಕೊಂಡಾಗಲೇ ದೇವನನ್ನು ಸಂಪೂರ್ಣವಾಗಿ ಪಡೆಯಲು ಸಾಧ್ಯ. ಆಗ ಒಂದು ಅರ್ಥದಲ್ಲಿ ಜೀವ ದೇವನಲ್ಲಿ ಐಕ್ಯವಾಗುತ್ತಾನೆ- ಎಂಬ ಭಾವನೆ ‘ಕಾಣಿಕೆ’ ಎಂಬ ಶಿರ್ಷಿಕೆಯ ಕೆಳಗಣ ಕವನದಲ್ಲಿ ಮೂಡುತ್ತದೆ.

ಕಾಣಿಕೆ

ಕಾಣಿಕೆಯ ಕೊಡಲೇನು ಎನಗಿಲ್ಲ, ದೇವ;
ಕಾಣಿಕೆಯು ಇಹುದೊಂದೆ ಅದು ಎನ್ನಜೀವ!

ನಿನ್ನಡಿಯ ಧೂಳ ಪಣೆಯೊಳು ಧರಿಸಿ ನಾನು
ನಿನ್ನ ಕೇಪೆಯನು ಗೆಲುವೆ, ಹೇ ಕಾಮಧೇನು!

ನಿನ್ನ ನೀ ವಿರಚಿಸಿಹ ಸೃಷ್ಟಿಯೊಳು ನೋಡಿ
ನಿನ್ನ ಪೂಜಿಪೆ ಜಗದ ಸೇವೆಯನು ಮಾಡಿ.

ಅರ್ಪಿಸುವೆ ನಾ ನಿನಗೆ ಕರ್ಮಗಳನೆಲ್ಲ;
ಅರ್ಪಿಸುವೆ ನಾನೆನ್ನ ಧರ್ಮಗಳನ್ನೆಲ್ಲ.

ದೇವಬಲಿಪೀಠದೊಳು ಬಲಿಗೊಡುವೆನೆನ್ನ
ಜೀವವನು, ಪಡೆಯೆ ಹೇ ಪರಮಾತ್ಮ ನಿನ್ನ!

ತನ್ನನೇ ತಾನರ್ಪಿಸಲು ನಿನಗೆನ ಜೀವ
ನಿನ್ನನೇ ಪಡೆಯುವನು ನೀನಾಗಿ, ದೇವ!
೧೯-೮-೧೯೨೬

ಲೋಕದ ಅಘಾತ ಪ್ರಘಾತಗಳಿಗೆ ಹೆದರದೆ ಸೋಲದೆ ದೃಢವಾಗಿ ನಿಲ್ಲುವಂತೆ ಹೃದಯವನ್ನು ಕಠೋರವನ್ನಾಗಿ ಮಾಡಿಕೊಳ್ಳಬೇಕೆಂಬ ಭಾವನೆ ಈ ಕೆಳಗಿನ ಹಾಡಿನಲ್ಲಿದೆ.

ಭಯವೇಕಾತ್ಮಾ? ಧೀರಾತ್ಮಾ!
ಲಯಹಿರತಾತ್ಮಾ, ವೀರಾತ್ಮಾ! || ಪ||

ಒಡೆ, ಒಡೆ, ಭೈರವನಂದದಿ, ಜೀವದ
ಬಣ್ಣದ ಗಾಜಿನ ಗುರುಡೆಗಳ!
ಬಿಡು, ಬಿಡು, ಕರುಣೆಯೆ ವೇಷದ ಕ್ಲೈಬ್ಯವ,
ನುಣ್ಣಗೆ ನುಡಿಗಳ ಕೃತ್ರಿಮವ!…

ಶೂನ್ಯಾಂಬುಧಿಯೊಳು ಧುಮ್ಮಕೈ, ವೀರನೆ,
ನುಂಗುತ ಜೀವೇಶ್ವರರುಗಳ!
ಕಾಳಿಯು ಕುಣಿಯಲು ಹೃದಯ ಮಸಣದಲಿ,
ಜಯ ಹಾಕಾರವ ನೀ ಮಾಡೈ!…
೨೪-೮-೧೯೨೬.

ಆ ಸಮಯದಲ್ಲಿಯೆ ವೇದಾಂತದ ಅಭಯ ಭಾವಾಂಚಿತವಾದ ಕೆಲವು ದೇಶಭಕ್ತಿಯ ವೀರಗೀತೆಗಳೂ ರಚಿತವಾಗಿವೆ. ಅವುಗಳಲ್ಲಿ ಕೆಲವು ಆಗಲೇ ಪ್ರಕಟವಾಗಿ ಪ್ರಸಿದ್ಧವೂ ಆಗಿವೆ. ಇಲ್ಲಿ ಒಂದೆರಡು ಅಪ್ರಕಟಿತಗಳನ್ನು ಕೊಡಲಾಗುತ್ತದೆ.

ಏಳಿರೈ, ಬಾಲರೆ, ದೇಶಸೇವೆ ಗೈಯುವ!
ಕೇಳಿರೈ, ಕೇಳಿರೈ, ತಾಯ ಗೋಳ ರೋದನ!

ಪರಕೀಯರ ಪದತಳದೊಳು
ಹೊರಳಾಡುತ ಅಳುತಿರುವಳು:
ಕಂಡು  ನೀವು ಸಹಿಪರೇ?
ಗಂಡುಗಲಿಗಳಲ್ಲವೇ?

ಅರೆ ಹರಿದಿಹ ಪರವಸನವ
ಧರಿಸುತ ತಾಮ ಒರೆಯಿಡುವಳು:
ಅಮ್ಮನಿರುವ ಗತಿಯನು
ನೋಡಿ ಸುಮ್ಮಿರುವರೇ?

ಧೂಳಾಗಿದೆ ಜನನಿಯ ಮುಖ,
ಹಾಳಾಗಿದೆ ಜನನಿಯ ಸುಖ!
ಏಳಿ! ಏಕೆ ಜಡತನ?
ಏಳಿ ! ಸಾಕು ಬಡತನ!

ವೀರ ಶಿವನ ಮರೆತಿರುವಿರ?
ಧೀರತನವ ತೊರೆದಿರುವಿರ?
ಏಳಿ ಅಮೃತಪುತ್ರರೇ!
ಏಳಿ ಆನಂದಾತ್ಮರೇ!
೨೪-೮-೧೯೨೬.

ಇಲ್ಲಿಗೆ ಈ ವಿಭಾಗವನ್ನು ಮುಗಿಸುತ್ತೇನೆ. ಏಕೆಂದರೆ ೧೯೨೬ನೆಯ ಅಗಸ್ಟ್ ತಿಂಗಳ ಮೊದಲನೆಯ ವಾರದಲ್ಲಿ ನಡೆದ ಒಂದು ಘಟನೆ -ಒಬ್ಬ ಮಹಾನ್ ವ್ಯಕ್ತಿಯ ಸಂದರ್ಶನ, ಸಂಪರ್ಕ ಮತ್ತು ಸಾನಿಧ್ಯ- ನನ್ನ ಮೇಲೆ ತನ್ನ ಮುದ್ರೆಯನ್ನೊತ್ತಿದ್ದ ಪರಿಣಾಮವಾಗಿ ನನ್ನ ತತ್ಕಾಲದ ರಚನೆಗಳಲ್ಲಿಯೂ ತರುವಾಯದ ನನ್ನ  ಮನಸ್ಸಿನ ಮೇಲೆಯೂ ವಿಶೇಷ ಪ್ರಭಾವ ಬೀರಿದುದನ್ನು ಬಿತ್ತರಿಸಲಾಶಿಸುತ್ತೇನೆ.